ಚಿತ್ರಕಲೆ ತುಂಬಾ ಪ್ರಾಚೀನವಾದುದು. ಆದಿಮಾನವ ಶಿಲಾಯುಗದಲ್ಲಿಯೇ ಕಲ್ಲುಬಂಡೆಗಳ ಮೇಲೆ, ಶಿಲಾ ಗುಹೆಗಳಲ್ಲಿ ಚಿತ್ರವನ್ನು ಬಿಡಿಸುತ್ತಿದ್ದುದಕ್ಕೆ ಸಾಕಷ್ಟು ಕಡೆ ಸಾಕ್ಷ್ಯಾಧಾರಗಳು ದೊರೆತಿವೆ. ಈ ಕಲೆಯೇ ಕ್ರಮೇಣ ಬೆಳೆಯುತ್ತಾ ಬಂದು, ಬೇರೆ- ಬೇರೆ ಮಾಧ್ಯಮಗಳಲ್ಲೂ ತನ್ನ ನೆಲೆಯನ್ನು ಕಂಡುಕೊಂಡಿದೆ. ನೆಲದ ಮೇಲೆ ಪುಡಿಯಲ್ಲಿ ಎಳೆ ಬಿಟ್ಟರೆ ರಂಗೋಲಿಯಾಗುತ್ತದೆ; ಗೋಡೆಯ ಮೇಲೆ ಚಿತ್ರಿಸಿದರೆ ಹಸೆ-ಚಿತ್ತಾರವಾಗುತ್ತದೆ; ದೇಹದ ಮೇಲೆ ಚುಚ್ಚಿ ಚಿತ್ರಿಸಿದರೆ ಹಚ್ಚೆಯಾಗುತ್ತದೆ.

ರಂಗೋಲಿ, ನೆಲದ ಮೇಲಾದ್ದರಿಂದ ಬಿಳಿ ಹಾಗೂ ಬಣ್ಣದ ಪುಡಿಗಳನ್ನು ಬಳಸಲಾಗುತ್ತದೆ; ಹಸೆ ಚಿತ್ತಾರ ಗೋಡೆಯ ಮೇಲಾದ್ದರಿಂದ ದಪ್ಪ ದ್ರಾವಣವನ್ನು ಚಿತ್ರ ರಚಿಸಲು ಬಳಸಲಾಗುತ್ತದೆ; ಹಚ್ಚೆಯಲ್ಲಿ ಗಿಡಮೂಲಿಕೆಯ (ಹಸಿರು ಬಣ್ಣದ) ತೆಳ್ಳಗಿನ ದ್ರವವನ್ನೇ ಬಳಸಲಾಗುವುದು. ನೆಲದ ಮೇಲಿನ ರಂಗೋಲಿ ತಾತ್ಕಾಲಿಕವಾದುದು; ಗೋಡೆಯ ಮೇಲಿನ ಹಸೆ ಕೆಲವು ಕಾಲ ಉಳಿಯುವಂತಹುದು. ಮಲೆನಾಡಿನಲ್ಲಿ ಈ ಮೂರು ಕಲಾ ಪ್ರಕಾರಗಳಿವೆ. ಪ್ರಸ್ತುತ ಪ್ರಬಂಧದಲ್ಲಿ ‘ಹಸೆ-ಚಿತ್ತಾರ’ ಕುರಿತು ವಿವೇಚಿಸಲಾಗಿದೆ.

ಹಸೆ ಚಿತ್ತಾರವನ್ನು ಮನೆಯ ಗೋಡೆಯ ಮೇಲೆ, ದೇವರ ಜಾಗದಲ್ಲಿ ಮದು-ಮಕ್ಕಳು ಕೂಡುವ ಸ್ಥಳದ ಹಿಂದಿನ ಗೋಡೆಯ ಮೇಲೆ, ಹೆಬ್ಬಾಗಿಲು ಚೌಕಟ್ಟುಗಳ ಮೇಲೆ, ಹೊಸ್ತಿಲಿನ ಮೇಲೆ, ನೀರಿನ ಹಂಡೆ- ಮಡಕೆಗಳ ಮೇಲೆ, ಭೂಮಿ ಹುಣ್ಣಿಮೆಯ ಪೂಜೆಗೆ ಬಳಸುವ ಬುಟ್ಟಿಯ ಮೇಲೆ ಮತ್ತು ಪಣತದ ಮೇಲೆ ಬಿಡಿಸಲಾಗುತ್ತದೆ. ಮೂಲತಃ ಇದು ಹೆಣ್ಣು ಮಕ್ಕಳ ಕಲೆಯಾಗಿದೆ. ಮಲೆನಾಡಿನಲ್ಲಿ ಈ ಕಲೆ ಹೆಚ್ಚಾಗಿ ದೀವರಲ್ಲಿ, ಕೆಲಮಟ್ಟಿಗೆ ಮಡಿವಾಳರು, ಹರಿಜನರು ಮತ್ತು ಹವ್ಯಕರಲ್ಲಿ  ಕಂಡುಬರುತ್ತದೆ.

ಚಿತ್ತಾರ ರಚನೆಯ ಬಣ್ಣಗಳಿಗಾಗಿ, ನಿಸರ್ಗದತ್ತ ವಸ್ತುಗಳನ್ನೇ ಬಳಸಲಾಗುವುದು. ಕೆಂಪು ಬಣ್ಣಕ್ಕಾಗಿ ಕೆಮ್ಮಣ್ಣು, ಬಿಳಿ ಬಣ್ಣಕ್ಕಾಗಿ– ಅಕ್ಕಿಹಿಟ್ಟು (ಅಕ್ಕಿಯನ್ನು ಹುರಿದು ನೆನೆಸಿ, ರುಬ್ಬಿ ಮಾಡಿದ ಹಿಟ್ಟು) ಕಪ್ಪು ಬಣ್ಣಕ್ಕಾಗಿ-ಮಸಿಕೆಂಡ(ಇದ್ದಲು), ಗುಡ್ಡೇಗೇರು ಕಾಯಿ, ಹಳದಿ ಬಣ್ಣಕ್ಕಾಗಿ ಗುರಗೆ, ಅರಿಶಿಣ ಮುಂತಾದ ಸುಲಭವಾಗಿ ದೊರೆಯುವ ನೈಸರ್ಗಿಕ ವಸ್ತುಗಳನ್ನೇ ಬಳಸುತ್ತಾರೆ. ಕುಂಚಕ್ಕಾಗಿ- ಹುಲುಕಡ್ಡಿ, ಪುಂಡಿನಾರುಗಳನ್ನು ಬಳಸುತ್ತಾರೆ. ಹಣ್ಣಡಿಕೆ ಸಿಪ್ಪೆ ಮತ್ತು ಕೇದಿಗೆ ಗರಿಗಳನ್ನು ಬಳಸುತ್ತಿದ್ದ ವಿವರ ಹವ್ಯಕರ ಹಾಡುಗಳಲ್ಲಿ ದೊರೆಯುತ್ತದೆ. ಮದುವೆ ಮತ್ತು ಶುಭ ಸಮಾರಂಭಗಳು, ಭೂಮಿ ಹುಣ್ಣಿಮೆ, ಆರಿದ್ರಾಮಳೆ, ಮಿರಗಿ ಮಳೆ, ಗೌರಿಪೂಜೆ, ಚೌತಿಹಬ್ಬ, ಬಲೀಂದ್ರನ ಪೂಜೆ ಇನ್ನಿತರ ಹಬ್ಬಗಳ ಸಂದರ್ಭದಲ್ಲಿಯೂ ಹಸೆ-ಚಿತ್ತಾರ ಬರೆಯಲಾಗುತ್ತದೆ.

ಹಸೆ ಚಿತ್ರದ ಮೂಲ ರಚನೆಗಳು

ಚಿತ್ರ ರಚನೆ: ಹಸೆ ಚಿತ್ರಗಳನ್ನು ನೋಡಿದಾಗ ರಚನೆ ಸಂಕೀರ್ಣವೆನಿಸುತ್ತದೆ. ಆದರೆ ಈ ಚಿತ್ರಗಳು ನಿರ್ಮಿತವಾಗಿರುವುದು ಮೂಲತಃ ಚೌಕ, ವೃತ್ತ, ಅಡ್ಡಗೆರೆ ಮತ್ತು ಉದ್ದಗೆರೆಗಳಿಂದ ಎಂಬುದು ತಿಳಿದಾಗ ಆಶ್ಚರ್ಯವಾಗದಿರದು. ಈ ಮೂರು ರಚನೆಗಳನ್ನೇ ಮತ್ತೆ- ಮತ್ತೆ ಬಳಸಿ ನಾನಾ ಬಗೆಯ ಚಿತ್ರಗಳನ್ನು ವಿನ್ಯಾಸಗೊಳಿಸಲಾಗುತ್ತದೆ.

ವಿಧಿ-ನಿಷೇಧಗಳು: ಹಸೆ ಚಿತ್ತಾರವನ್ನು ಪೂರ್ವಾಭಿಮುಖವಾಗಿ ಬರೆಯಬೇಕು. ಒಳ್ಳೆಯ ದಿನ ನೋಡಿ ಬಣ್ಣಗಳನ್ನು ತಯಾರಿಸಿಕೊಳ್ಳಬೇಕು. 7,9,11 ಹೀಗೆ ಬೆಸ ಸಂಖ್ಯೆಯಾಗಿರಬೇಕು. ಮದುಮಗನ ತಾಯಿಯಾಗಲಿ, ಮದುಮಗಳ ತಾಯಿಯಾಗಲಿ ಹಸೆ ಬರೆಯಬಾರದು. ಮನೆಯ ಹೆಣ್ಣು ಮಕ್ಕಳು ಅಂದರೆ- ವಧು/ವರರ ಅಕ್ಕ- ತಂಗಿಯರು, ಸೋದರತ್ತೆಯರು ಹಾಡುತ್ತ, ಹಸೆ ಚಿತ್ರ ರಚಿಸಬೇಕು.

ಹಸೆ ಬರೆದವರಿಗೆ ತೇಜ (ಉಡುಗೊರೆ) ಕೊಟ್ಟು ಸನ್ಮಾನಿಸಬೇಕು. ಹಸೆ ಚಿತ್ತಾರವನ್ನು ಮೂರು ವರ್ಷಗಳವರೆಗೆ ಅಳಿಸಬಾರದು. ಮುಂತಾಗಿ, ಹಸೆ-ಚಿತ್ತಾರವನ್ನು ಕುರಿತಂತೆ ವಿಧಿ-ನಿಷೇಧಗಳು ಕಂಡು ಬರುತ್ತವೆ. ಇವು ಹಸೆ-ಚಿತ್ತಾರವನ್ನು ಪವಿತ್ರವೆಂದು, ದೇವರ ಸಂಕೇತವೆಂದು, ಭಾವಿಸಿರುವುದನ್ನು ಮತ್ತು ಚಿತ್ರ ರಚನೆ ಮದುವೆಯ ಆರತಿ-ಅಕ್ಷತೆಗಳ ಹಾಗೆಯೇ ಮನೆ ಹೆಣ್ಣುಮಕ್ಕಳ ಹಕ್ಕು ಎಂಬುದನ್ನು ಪರ್ಯಾಯವಾಗಿ ಸೂಚಿಸುತ್ತವೆ.

ಗೊಂಬೆಸಾಲು, ಸೀತೆಮಡಿ, ಭತ್ತದಸಾಲು, ಕುಚ್ಚುಸಾಲು, ಮದುವೆ ಪಲ್ಲಕ್ಕಿ ದಿಬ್ಬಣ, ಹಕ್ಕಿಗಳು ಮತ್ತು ಎತ್ತುಗಳು ಹೀಗೆ ಜನಪದರು ತಮ್ಮ ಬದುಕಿನಲ್ಲಿ ನಿತ್ಯ ಕಾಣುವ ದೃಶ್ಯಗಳೇ ಹಸೆ ಚಿತ್ತಾರದಲ್ಲಿ ಕಲಾತ್ಮಕವಾಗಿ ಚಿತ್ರಿಸಿರುತ್ತಾರೆ.

ಭೂಮಣ್ಣಿಬುಟ್ಟಿ: ಭೂಮಿ ಹುಣ್ಣಿಮೆಯ ದಿನ ಭೂಮಿ ಫೂಜೆಗಾಗಿ ಪೂಜಾ ಸಲಕರಣೆಗಳನ್ನು ಒಯ್ಯಲು ಹಾಗೂ ಹೊಲಕ್ಕೆ ಚರಗ ಚೆಲ್ಲುವ ಸಲುವಾಗಿ ಬಿದಿರು/ಬೆತ್ತದ ಬುಟ್ಟಿಗಳನ್ನು ಬಳಸುತ್ತಾರೆ. ಈ ಬುಟ್ಟಿಯನ್ನು ಸಗಣಿಯಿಂದ ಸಾರಿಸಿ, ಶುದ್ಧೀಕರಿಸಿ, ಕೆಮ್ಮಣ್ಣು ಬಳಿದು ಅದರ ಕೆಂಬಣ್ಣದ ಹಿನ್ನೆಲೆಯಲ್ಲಿ ಚಿತ್ರ ಬರೆಯುವುದನ್ನು ಕಾಣಬಹುದು. ಭೂಮಣ್ಣಿ ಬುಟ್ಟಿಯ ಮೇಲಿನ ಚಿತ್ರಗಳಲ್ಲಿ ಹೊಲಕ್ಕೆ ಭೂಮಣ್ಣಿ ಬುಟ್ಟಿ ಹೊತ್ತುಕೊಂಡು ಹೋಗುತ್ತಿರುವ ಹೆಣ್ಣುಮಗಳು, ಎತ್ತುಗಳು, ನೇಗಿಲು, ರೈತ, ಬಾಳೆಯಗಿಡ, ಅಡಿಕೆಮರ, ದನಕರುಗಳು, ಗೊಣಬೆ, ಏಣಿ, ಭತ್ತದಸಾಲು ಇತ್ಯಾದಿ ಹೆಸರಿಸಬಹುದು.

ಫಲವಂತಿಕೆಯ ಸಂಕೇತಗಳನ್ನೊಳಗೊಂಡ ಚಿತ್ರಸಂಪತ್ತು ಹಸೆ ಚಿತ್ತಾರದಲ್ಲಿದೆ. ಸಂಪ್ರದಾಯದ ಹೆಸರಿನಲ್ಲಿ ಗೌರಮ್ಮನಂತಹ ಕೆಲವರು ಇದನ್ನು ಉಳಿಸಿಕೊಂಡು ಬಂದಿದ್ದರಿಂದ ಕೆಲಮಟ್ಟಿಗಾದರೂ ಈ ಕಲೆ ಜೀವ ಹಿಡಿದುಕೊಂಡಿದೆ. ತಲವಾಟದ ಹುಚ್ಚಪ್ಪ ಮಾಸ್ತರ, ಹಸುವಂತೆ ಈಶ್ವರನಾಯ್ಕ, ಬಂದಗದ್ದೆ ರಾಧಾಕೃಷ್ಣ ಮುಂತಾದವರು ಈ ಕಲೆಯಿಂದ ಆಕರ್ಷಿತರಾಗಿ ಅದರ ಬಳಕೆ-ಪ್ರಚಾರಗಳನ್ನು ಮಾಡಿದ್ದಲ್ಲದೆ, ಕಲಿಕಾಶಿಬಿರಗಳನ್ನು ಏರ್ಪಡಿಸಿದ್ದುಂಟು.  ಇವರಲ್ಲಿ ಈಶ್ವರ ನಾಯ್ಕರ ಹೆಚ್ಚಿನ ಆಸಕ್ತಿ ವಹಿಸಿ, ಈ ಕಲೆಗಾಗಿಯೇ ತಮ್ಮನ್ನು ಸಮರ್ಪಿಸಿಕೊಂಡು ಹೆಚ್ಚಿನ ಸಾಧನೆಯನ್ನು ಮಾಡುತ್ತಿದ್ದಾರೆ. ತಾಯಿ ಮೈಲಮ್ಮಳಿಂದ  ಹಸೆ ಚಿತ್ತಾರಗಳನ್ನು ಕಲಿತ ಈಶ್ವರನಾಯ್ಕರು ರಾಜ್ಯದಲ್ಲಷ್ಟೇ ಅಲ್ಲದೇ ರಾಷ್ಟ್ರಮಟ್ಟದಲ್ಲಿಯೂ ಅನೇಕ ಕಲಾಪ್ರದರ್ಶನಗಳಲ್ಲಿ ಭಾಗವಹಿಸಿ, ಹಸೆ ಚಿತ್ತಾರವನ್ನು ಜನಪ್ರಿಯಗೊಳಿಸಿದ್ದಾರೆ. 1998ರಲ್ಲಿಯೇ ಅವರಿಗೆ ‘ಮಾಸ್ಟರ್ ಆಫ್ ಕ್ರಾಫ್ಟ್ ಮ್ಯಾನ್’ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಜೊತೆಗೆ 2005ರ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.

ಭತ್ತದ ಸಸಿ ಸಾಲು ಮತ್ತು ಹಕ್ಕಿಗಳು

ಈ ಕಲೆಯ ಉಳಿವು ಮತ್ತು ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಈಶ್ವರನಾಯ್ಕರು ‘ಚಿತ್ತಾರ ಚಾವಡಿಯ’ ಮೂಲಕ ಆಸಕ್ತರಿಗೆ ಈ ಕಲೆಯನ್ನು ಕಲಿಸುತ್ತಿದ್ದಾರೆ. ಸ್ಥಿರ ಚಿತ್ರಗಳಲ್ಲಿ ಚಲನಶಿಲತೆಯನ್ನು ಸೃಷ್ಟಿಸುವುದರ ಮೂಲಕ ಹೆಚ್ಚು ಆಕರ್ಷಕವಾಗುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ವರ್ಲಿ ಚಿತ್ರಕಲೆ ಮಹಾರಾಷ್ಟ್ರದ ಒಂದು ಬುಡಕಟ್ಟಿನದು. ಹಸೆ ಚಿತ್ತಾರಕ್ಕೂ ಇದಕ್ಕೂ ಸಾಕಷ್ಟು ಸಾಮ್ಯಗಳಿವೆ. ವರ್ಲಿ ಬುಡಕಟ್ಟಿನ ಮದುವೆ ಸಂಪ್ರದಾಯ, ಹಬ್ಬ-ಹರಿದಿನಗಳಲ್ಲಿ ಶುಭ ಸಮಾರಂಭಗಳಲ್ಲಿ, ವರ್ಲಿ ಮಹಿಳೆಯರು ಹಾಡು ಹೇಳುತ್ತ ಚಿತ್ರಿಸುವ ಚಿತ್ರಗಳು ಅವರ ಬದುಕಿನ ನಿತ್ಯಜೀವನದ ವಿವರಗಳನ್ನೇ ಒಳಗೊಂಡಿವೆ. ಜೊತೆಗೆ ಸಾಮೂಹಿಕ ಜೀವನದ ಅನೇಕ ಸನ್ನಿವೇಶಗಳು ಆ ಚಿತ್ರಗಳಲ್ಲಿ ಎಡೆ ಪಡೆದಿವೆ. ಹಾಡು-ಕುಣಿತ-ಕುಡಿತಗಳು ವರ್ಲಿಯರಿಗೆ ಪ್ರಿಯವಾದವು. ತರ್ಪನೃತ್ಯ, ಧೋಲ್ ಕುಣಿತ, ಗೌರಿನೃತ್ಯಗಳ ಜನಪ್ರಿಯತೆಯನ್ನು ಅವರ ಚಿತ್ರಕಲೆಯ ಮೂಲಕವೂ ಗ್ರಹಿಸಬಹುದಾಗಿದೆ.

ಮಲೆನಾಡಿನ ಹಸೆ ಚಿತ್ತಾರದೊಂದಿಗೆ, ವರ್ಲಿ ಬುಡಕಟ್ಟು ಚಿತ್ರಕಲೆಯನ್ನು ಹೋಲಿಸಿದಾಗ, ಕೆಲವು ಸಾಮ್ಯಗಳನ್ನು ಗುರುತಿಸಬಹುದಾಗಿದೆ. ಹಸೆಚಿತ್ತಾರ ಮತ್ತು ವರ್ಲಿ ಚಿತ್ರಕಲೆ- ಇವೆರಡೂ ಮೂಲತಃ ಮಹಿಳೆಯರಿಗೆ ಸಂಬಂಧಿಸಿದ ಕಲೆಗಳು. ಎರಡರಲ್ಲಿಯೂ ಮೂಲ ರಚನೆಗಳು ಒಂದೇ ಆಗಿವೆ.

ವೃತ್ತಾಕಾರ ರಚನೆ(ಮೇಲಿನ ಚಿತ್ರ), ವರ್ಲಿ ಕಲೆ ಹಾಗೂ ಶಾಸನಗಳ ಆರಂಭದ ಶುಭ ಸೂಚಕ ಚಿತ್ರ(ಕೆಳ ಚಿತ್ರ)

ಪಕ್ಕದ ಚಿತ್ರದಲ್ಲಿರುವ ಈ ಸಂಕೇತ-ಎರಡೂ ಕಲೆಗಳಲ್ಲಿ ಕಂಡುಬರುತ್ತದೆ. ಇಲ್ಲಿ ಬಿಂದುವೊಂದು ಅಪ್ರದಕ್ಷಿಣೆಯ ರೀತಿಯಲ್ಲಿ ಚಲಿಸಿ, ಒಂದರ ನಂತರ ಮತ್ತೊಂದರಂತೆ ಕೆಲವು ವರ್ತುಲಗಳನ್ನು ನಿರ್ಮಾಣ ಮಾಡುತ್ತದೆ. ವಿಶ್ವ ಶಕ್ತಿಯ ಚಲನೆಯೂ ಅಪ್ರದಕ್ಷಿಣಾಕಾರವಾಗಿದ್ದು, ಈ ಚಿನ್ಹೆಯನ್ನೇ ಎರಡೂ ಸಾಂಪ್ರದಾಯಿಕ ಕಲೆಗಳಲ್ಲಿ ‘ಶುಭ’ ಸಂಕೇತವಾಗಿ ಬಳಸಲಾಗುತ್ತದೆ. ವರ್ಲಿ ಬುಡಕಟ್ಟಿನ ತರ್ಪನೃತ್ಯದ ಚಲನೆಯಲ್ಲಿಯೂ ಈ ಸಂಕೇತವೇ ಕಂಡುಬರುವುದನ್ನು ಗಮನಿಸಬೇಕು. ಈ ಸಂಕೇತ ಸ್ವಸ್ತಿ ಮತ್ತು ಶ್ರೀ(ಸಂಪತ್ತಿನ) ಸೂಚಕವಾಗಿದ್ದು, ಕೆಲವು ಪ್ರಾಚೀನ ಶಿಲಾಶಾಸನಗಳಲ್ಲಿ ಪಠ್ಯದ ಪ್ರಾರಂಭದಲ್ಲಿ, ಇದೇ ಚಿಹ್ನೆಯನ್ನು ಕೆತ್ತಿರುವುದು ಅದರ ಪ್ರಾಚೀನತೆ ಹಾಗೂ ಅದರ ಮಹತ್ವವನ್ನು ತಿಳಿಯಪಡಿಸುತ್ತದೆ.

ಮನುಷ್ಯನ ಚಿತ್ರಗಳನ್ನು ತ್ರಿಕೋನಗಳ ಜೋಡಣೆಯ ಮೂಲಕ ಚಿತ್ರಿಸುವುದು, ಎರಡೂ ಕಲೆಗಳಲ್ಲಿ ಕಂಡು ಬರುತ್ತದೆ. ತ್ರಿಕೋನ ಸ್ತ್ರೀ ಜನನಾಂಗವನ್ನು ಸಂಕೇತಿಸುತ್ತಿದ್ದು, ಫಲವಂತಿಕೆಯ ಚಿಹ್ನೆಯಾಗಿದೆ. ಹರೀಶ್ ಜೋಹರಿ ಎಂಬ ವಿದ್ವಾಂಸರು ತ್ರಿಕೋನದಲ್ಲಿ ಕೆಳಗಿನ ಸಮಾನಾಂತರ ರೇಖೆ ಸ್ಥಿರತೆಯನ್ನು ಸೂಚಿಸುತ್ತಿದ್ದು, ಲಂಬಾಂತರದ ಅಡ್ಡರೇಖೆಗಳು ಚಲನಶೀಲತೆಯನ್ನು ಸೂಚಿಸುತ್ತವೆ. ಇವು ಮೂರೂ ಸೇರಿದಾಗ ತ್ರಿಕೋನ ಸೃಷ್ಟಿ. ಊರ್ಧಮುಖ ತ್ರಿಕೋನ ಪುರುಷಶಕ್ತಿಯನ್ನೂ ಅಧೋಮುಖ ತ್ರಿಕೋನ ಸ್ತ್ರೀ ಶಕ್ತಿಯನ್ನು ಸಂಕೇತಿಸುತ್ತಿದ್ದು, ಎರಡೂ ಸೇರಿದಾಗ ಸಮತೋಲನವಾಗುತ್ತದೆ ಎಂದಿದ್ದಾರೆ.

ಎರಡೂ ಕಲೆಗಳ ಚಿತ್ರದ ವಸ್ತು-ವಿಷಯಗಳನ್ನು ಅವಲೋಕಿಸಿದಾಗ; ಫಲವಂತಿಕೆ, ಸಾಮದಾಯಿಕ ಜೀವನದ ವಿವರಗಳು, ಸುತ್ತಮುತ್ತಲಿನ ಪ್ರಾಣಿ-ಸಸ್ಯ ಪ್ರಪಂಚ ಇವುಗಳೇ ಚಿತ್ರಿತವಾಗಿದ್ದು, ಸಮುದಾಯಗಳ ಲೋಕದೃಷ್ಟಿ ಅವುಗಳಲ್ಲಿ ಅಡಕವಾಗಿದೆ. ಶುಭ ಸಮಾರಂಭಗಳಲ್ಲಿ ಗೋಡೆಯ ಮೇಲೆ ದೇವರ ಸಂಕೇತವಾಗಿ ರಚಿಸುವ ಚಿತ್ರಗಳಲ್ಲಿಯೂ ಸಾಮ್ಯವಿದೆ. ವರ್ಲಿ ಚಿತ್ರಕಲೆಯಲ್ಲಿ ಅಂತಹ ಚಿತ್ರಕ್ಕೆ ದೇವಚೌಕ ಅಥವಾ ಚೌಕಟ್ ಎಂದು ಕರೆಯುತ್ತಾರೆ. ಸುಹಾಸಿನಿಯರು ಮೊದಲು ಗೋಡೆಗೆ ಸಗಣಿ ಬಳಿದು ಸಾರಿತ್ತಾರೆ, ವಯಸ್ಸಾದ ಹೆಂಗಸರು ಹಾಡುತ್ತಾರೆ.

ಫಲವಂತಿಕೆ ದೇವತೆಯನ್ನು (ಫಲಘಟ್) ಬೇಡಿಕೊಳ್ಳುತ್ತಾರೆ. ನಸುಕಿನಲ್ಲಿಯೇ ಚಿತ್ರರಚನೆ ಪ್ರಾರಂಭಿಸಿ ಸುರ್ಯೋದಯದೊಳಗೆ ಮುಗಿಸಿಬಿಡಬೇಕು. ಈ ಚೌಕ ರಚಿಸದೆ ಮದುವೆ ನಡೆಯುವುದೇ ಇಲ್ಲ. ಕೆಟ್ಟ ಶಕ್ತಿಗಳಿಂದ ವಧು-ವರರನ್ನು ರಕ್ಷಿಸಲು ಮತ್ತು ಫಲವಂತಿಕೆಯನ್ನು ಬಯಸಿ  ಇಂಥ ಚಿತ್ರ ರಚಿಸಲಾಗುತ್ತದೆ. ಚಿತ್ರ ಬಿಡಿಸುವಿಕೆ ಎಲ್ಲವನ್ನೂ ಪವಿತ್ರಭಾವನೆಯಿಂದಲೇ ನಡೆಸಲಾಗುತ್ತದೆ.

ಮಲೆನಾಡಿನಲ್ಲಿ ವಧು-ವರರರು ಕೊಡುವ ಜಾಗದ ಹಿಂದೆ ರಚಿಸುವ ಚಿತ್ರಕ್ಕೆ ‘ಹಸೆ’ ಎಂಬ ಹೆಸರಿದೆ. ದೇವಚೌಕದ ಒಳಗಿರುವ ಚಿತ್ರ ಫಲವಂತಿಕೆಯ, ‘ಲಜ್ಜಾಗೌರಿ’ಯ ಸಂಕೇತವಾಗಿದೆ. ಇಂತಹುದೇ ಚಿತ್ರ ಮಲೆನಾಡಿನಲ್ಲಿ ಪಣತದ(ಧಾನ್ಯ ಸಂಗ್ರಹಗಾರ) ಮೇಲೆ (ಸಂಪತ್ತಿನ ಸಂಕೇತವಾಗಿ) ಚಿತ್ರಿಸಿರುವುದನ್ನು ಗಮನಿಸಬಹುದು. ಕರ್ನಾಟಕದಲ್ಲಿ ಲಜ್ಜಾಗೌರಿಯ ಶಿಲ್ಪಗಳು ಸಾಕಷ್ಟು ಪ್ರಮಾಣದಲ್ಲಿ ದೊರೆತಿವೆ. ವರ್ಲಿ ಚಿತ್ರಕಲೆಯ ‘ಲಗ್ನ ಚೌಕ’ಕ್ಕೂ ‘ಹಸೆ’ಗೂ ಸಾಮ್ಯವಿದೆ. ವರ್ಲಿ ಚಿತ್ರದಲ್ಲಿ ಮೆರವಣಿಗೆ, ವಾಲಗ ನೃತ್ಯ, ಕುದುರೆಗಳಿದ್ದರೆ; ಹಸೆ ಚಿತ್ರದಲ್ಲಿ ಪಲ್ಲಕ್ಕಿ, ವಾಲಗದ ಜನ ಮುಂತಾದವರನ್ನು ಚಿತ್ರಿಸುತ್ತಾರೆ. ಹೀಗೆ ಹಲವು ಸಾಮ್ಯಗಳನ್ನು ಗುರುತಿಸುತ್ತ ಹೋಗಬಹುದು.

ಹಸೆ ಚಿತ್ರದ ಒಂದು ವಿಧ

ಹಸೆ-ಚಿತ್ತಾರಕ್ಕೆ ಹೋಲಿಸಿದಲ್ಲಿ ವರ್ಲಿ ಚಿತ್ರಕಲೆ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದೆ. ವರ್ಲಿ ಚಿತ್ರಕಲಾವಿದರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಾ ಪ್ರದರ್ಶನವೇರ್ಪಡಿಸಿ ತಮ್ಮ ಕಲೆಯನ್ನು ಜನಪ್ರಿಯಗೊಳಿಸಿದ್ದಾರೆ. ಆಧುನಿಕ ಯುಗಕ್ಕೆ ಅನುಸರಿಸಿ ತೈಲಬಣ್ಣ, ಕುಂಚಗಳನ್ನು ಬಳಸಿ ಕಾರ್ಡ್, ಸೀಟುಗಳ ಮೇಲೆ, ಕ್ಯಾನ್ವಾಸ್ಗಳ ಮೇಲೆ, ಭಿನ್ನ ಬಗೆಯ ಲೋಹ, ಗಾಜುಗಳ ಮೇಲೆ ಚಿತ್ರ ರಚಿಸಿ ಮಾರುತ್ತಿದ್ದಾರೆ. ಕಲೆಯಲ್ಲಿ ಚಲನಶೀಲತೆಯನ್ನು ತಂದು ಹೆಚ್ಚು ಜನಪ್ರಿಯವಾಗಿದ್ದಾರೆ. ಇವರಿಗೆ ಸಹಾಯಕವಾಗಿ ಎನ್ ಜಿ ಒ ಗುಂಪುಗಳು, ವಿದೇಶಿ ಪ್ರವಾಸಿಗರು (ಸಂಸ್ಥೆಗಳು) ಕೆಲಸಮಾಡುತ್ತಿವೆ. ಬಹು ಭಾಷೆ ಬಲ್ಲ ವರ್ಲಿ ಕಲಾವಿದರು ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ.

ವರ್ಲಿ ಕಲೆಯ ಜನಪ್ರಿಯತೆಯ ಹಿನ್ನೆಲೆಯಲ್ಲಿ ಮಲೆನಾಡಿನ ಹಸೆ ಚಿತ್ತಾರವನ್ನು ಕುರಿತು ಆಲೋಚಿಸಿದರೆ ಈ ಕಲೆಗೂ ಜಾಗತಿಕ ಮನ್ನಣೆ ಪಡೆಯುವ ಅಂತಃಸ್ಸತ್ವ ಇದೆ. ಸ್ವಲ್ಪ ಪ್ರಯತ್ನಿಸಿದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆಯುವಂತೆ ಮಾಡಬಹುದು. ಇದಕ್ಕೆ ಈ ಕಲೆಯನ್ನು ಬಳಸುತ್ತಿರುವ ಸಮುದಾಯದಲ್ಲಿರುವ ಕಲಾವಿದರು ಆಸಕ್ತಿ ವಹಿಸಬೇಕು. ಮಧ್ಯವರ್ತಿಗಳ ಶೋಷಣೆಯಿಂದ ತಪ್ಪಿಸಿಕೊಳ್ಳಲು ನೇರ ಸಂಪರ್ಕ, ಸಂವಹನಕ್ಕಾಗಿ ಹಿಂದಿ, ಇಂಗ್ಲೀಷ್ ಭಾಷೆಗಳನ್ನು ಕಷ್ಟಪಟ್ಟಾದರೂ ಕಲಿಯಬೇಕು.

ಕಲೆಯ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ಭಿನ್ನಮಾಧ್ಯಮಗಳಲ್ಲಿ (ಮರ, ಕ್ಯಾನ್ವಾಸ್ ಇತ್ಯಾದಿ) ಕಲೆಯನ್ನು ಪ್ರಯೋಗಿಸುವ ಪ್ರಯತ್ನವಾಗಬೇಕು. ಪರಂಪರಾಗತ  ಪ್ರಾದೇಶಿಕ ಕಲೆಗಳನ್ನು ಪ್ರೋತ್ಸಾಹಿಸುವ ಮನೋವೃತ್ತಿಯನ್ನು ಜನತೆ ಹೆಚ್ಚೆಚ್ಚು ಬೆಳೆಸಿಕೊಳ್ಳಬೇಕು. ಪರಂಪರಾಗತ ಪ್ರಾದೇಶಿಕ ಕಲೆಗಳನ್ನು ಪ್ರೋತ್ಸಾಹಿಸುವ ಮನೋವೃತ್ತಿಯನ್ನು ಜನತೆ ಹೆಚ್ಚೆಚ್ಚು ಬೆಳೆಸಿಕೊಳ್ಳಬೇಕು.

(ಲೇಖನಕ್ಕೆ ನೆರವು: ಶ್ರೀ ಈಶ್ವರನಾಯ್ಕ, ಶ್ರೀ ರಾಧಾಕೃಷ್ಣ ಬಂದಗದ್ದೆ ಮತ್ತು ರಾಬಿನ ತ್ರಿಭುವನ್ ಹಾಗೂ ಮೈಕೆ ಫಿಂಕೆನಾರ್)