ಪ್ರಾಚೀನ ಕರ್ನಾಟಕದ ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ ಮೊದಲಾದ ಸಾಂಸ್ಕೃತಿಕ ಸಂಗತಿಗಳನ್ನು ತಿಳಿದುಕೊಳ್ಳವಲ್ಲಿ ನಮಗೆ ಹಲವಾರು ಆಕರ (source)ಗಳು ಸಹಾಯಕಾರಿಯಾಗುತ್ತವೆ. ಅವುಗಳಲ್ಲಿ ಭಾಷಾ ಸಾಮಗ್ರಿಗಳು ಪ್ರಧಾನವಾಗಿದ್ದು, ಅವುಗಳಲ್ಲಿಯೇ ಹಸ್ತಪ್ರತಿಗಳು ಪ್ರಮುಖವಾಗಿ ಪರಿಗಣಿಸಲ್ಪಟ್ಟಿವೆ. ಇಂಗ್ಲಿಷಿನ Manuscriptology ಎಂಬುದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ “ಹಸ್ತಪ್ರತಿಶಾಸ್ತ್ರ” ಎಂಬ ಪದವು ಬಳಗೆಗೊಂಡಿದೆ. ೧೯೭೪ರಲ್ಲಿ ಮಂಡ್ಯದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಆರ್‌. ಸಿ. ಹಿರೇಮಠ ಅವರು “ಹಸ್ತಪ್ರತಿಗಳ ಸಂಗ್ರಹ, ಅವುಗಳ ಸೂಚೀಕರಣ ಮೊದಲಾದವುಗಳನ್ನೊಳಗೊಂಡ Manuscriptology ಎಂಬ ಹೊಸ ಶಾಸ್ತ್ರವೇ ಬಳಕೆಗೆ ತಂದರು. ಇತ್ತೀಚೆಗೆ ಇದೊಂದು ಅಧ್ಯಯನ ಶಿಸ್ತಾಗಿ (academic discipline) ರೂಪಗೊಂಡಿದೆ.

. ಪ್ರವೇಶ

ಸಾಮಾನ್ಯವಾಗಿ ಹಸ್ತಪ್ರತಿಯೆಂದರೆ ಕೈಯಿಂದ ರೂಪ ಪಡೆದ ಬರವಣಿಗೆಯೆಂದು ಕರೆಯುತ್ತೇವೆ. ಈ ಅರ್ಥದಲ್ಲಿ ಕೈಯಿಂದ ಬರೆದ ಪ್ರಾಚೀನ ಕಾಲದ ಗ್ರಂಥ, ದಾಖಲೆ, ಶಾಸನಗಳಲ್ಲದೇ ಮುದ್ರಣಕ್ಕಾಗಿ ಸಿದ್ಧಪಡಿಸುವ ಇಂದಿನ ಯಾವುದೇ ಬರವಣಿಗೆಗಳು ಹಸ್ತಪ್ರತಿಗಳಾಗಿವೆ. ಇವುಗಳಲ್ಲಿ ಪ್ರಾಚೀನ ಕಾಲದ ಗ್ರಂಥಗಳು ಮಾತ್ರ ಹಸ್ತಪ್ರತಿಯೆನಿಸಿಕೊಳ್ಳುತ್ತವೆ. ‘ಹಸ್ತಪ್ರತಿ’ ಪದ ಪರಿಚಯವಾಗುವ ಮೊದಲು ಓಲೆಕಟ್ಟು, ಹೊತ್ತಿಗೆ, ಗ್ರಂಥ, ಶಾಸ್ತ್ರ, ನೀಲಿ ಹೊತ್ತಿಗೆ ಎಂಬ ಪದಗಳು ರೂಢಿಯಲ್ಲಿದ್ದವು. ಕನ್ನಡದ ಪ್ರಾಚೀನ ಗ್ರಂಥಗಳಲ್ಲಿಯೂ ಇವುಗಳಿಗೆ ಪೊತ್ತಗೆ, ಕವಳಿಗೆ, ಪುಸ್ತಕ, ಕಟ್ಟು, ವಹಿ, ಗ್ರಂಥ ಎಂದು ಕರೆಯಲಾಗಿದೆ. “ಮೃದುವಾದ ಸಮತಲದ ಪಪಿರಸ್‌, ಹದಮಾಡಿದ ಚರ್ಮ ಮತ್ತು ಕಾಗದ ಇತ್ಯಾದಿ ಸಾಮಗ್ರಿಗಳ ಮೇಲೆ ವರ್ಣವನ್ನು ಉಪಯೋಗಿಸಿಕೊಂಡು ಕುಂಚ, ಲೇಖನಿ ಅಥವಾ ಗಲಗಿನಿಂದ ಬರೆಯಲಾದವುಗಳನ್ನು ಹಸ್ತಪ್ರತಿಗಳೆಂದು” ಬ್ರಿಟಾನಿಯಾ ವಿಶ್ವಕೋಶವು ವಿವರಿಸುತ್ತದೆ.

ಹಸ್ತಪ್ರತಿಗಳು ತಾಳೆಗರಿ, ಕೋರಿಕಾಗದ, ಕಾಗದ, ಕಡತಗಳ ರೂಪದಲ್ಲಿ ಸಿಗುತ್ತವೆ. ಈಗ ಉಪಲಬ್ಧವಾಗಿರುವ ಹಸ್ತಪ್ರತಿಗಳ ಸಂಖ್ಯಾ ಪ್ರಮಾಣವನ್ನು ಅವಲಂಬಿಸಿ ಹೇಳುವುದಾದರೆ ತಾಳೆಗರಿಗಳ ಸಂಖ್ಯೆ ಶೇಕಡಾ ೭೫ರಷ್ಟಿದ್ದರೆ, ಕಾಗದ, ಪ್ರತಿಗಳ ಸಂಖ್ಯೆ ಶೇಕಡಾ ೨೫ರಷ್ಟು ಸಿಗುತ್ತವೆ. ತಾಳೆಗರಿಯ ಮೇಲೆ ಬರೆಯಲು ಕಂಠವನ್ನೂ, ಕಾಗದದ ಮೇಲೆ ಬರೆಯಲು ಲಾಳದ ಕಡ್ಡಿ, ಬಿದಿರಿನ ಗಲಗು, ನವಿಲುಗರಿ ಕಡ್ಡಿ ಮುಂತಾದವುಗಳನ್ನು ಲೇಖನ ಸಾಮಗ್ರಿಗಳನ್ನಾಗಿ ಬಳಸುತ್ತಿದ್ದರು.

ಈಗ ಲಭ್ಯವಾಗಿರುವ ಹಸ್ತಪ್ರತಿಗಳಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಾಂಡಾರದಲ್ಲಿರುವ ನಾಮಲಿಂಗಾನುಶಾಸನ ಟೀಕೆಯ ಹಸ್ತಪ್ರತಿಯೇ ಪ್ರಾಚೀನವಾದುದು. “ಸ್ವಸ್ತಿಶ್ರೀ ವಿಜಯಾಭ್ಯುದಯದ ಶಾಲಿವಾಹನ ಶಕವರುಷ ೧೦೫೩ನೆಯ ಸೌಮ್ಯ ಸಂವತ್ಸರದ ಮಾಘ ಬಹುಳ ಏಕಾದಶಿ ಗುರುವಾರದಲ್ಲು” ಅಂದರೆ ಕ್ರಿ.ಶ. ೧೧೩೦ರಲ್ಲಿ ಈ ಕೃತಿ ಪ್ರತಿಗೊಂಡಿದೆ. ಇದೇ ಭಾಂಡಾರದ ರನ್ನನ ಗದಾಯುದ್ಧದ ಹಸ್ತಪ್ರತಿಯು ೧೩೪೨ರಲ್ಲಿ ಪ್ರತಿಗೊಂಡಿದ್ದು, ಕಾವ್ಯ ಪ್ರಕಾರಗಳಲ್ಲಿ ಅತ್ಯಂತ ಹಳೆಯದೆನಿಸಿದೆ. ೧೫೫೩ರಲ್ಲಿ ಪ್ರತಿಗೊಂಡ ನಾಗವರ್ಮನ ವರ್ಧಮಾನ ಪುರಾಣವು ಪ್ರಾಚೀನವಾದ ಕಾಗದದ ಪ್ರತಿಯೆನಿಸಿದೆ. “ಆನಂದ ಸಂವತ್ಸರದ ಮಾರ್ಗಶಿರ ಶುದ್ಧ ೫ ಬುಧವಾರ ಬೆಳಗುಳದ ಸ್ಥಾನಿಕ ಚೆನ್ನಪ್ಪಯ್ಯನ ಮಗ ಕವಿ ಪಂಚಬಾಣನು ಕವಿತ್ವವ ಹೇಳಿ ತನ್ನ ಸ್ವಹಸ್ತದಲ್ಲಿ ಬರೆದ ಪುಸ್ತಕಕ್ಕೆ ಮಂಗಳ ಮಹಾ ಶ್ರೀಶ್ರೀಶ್ರೀ” ಎಂಬ ಉಲ್ಲೇಖವಿದೆ. ಆದ್ದರಿಂದ ಕ್ರಿ.ಶ. ೧೬೧೪ರಲ್ಲಿ ಲಿಪಿಸಲ್ಪಟ್ಟ ಭುಜಬಲ ಚರಿತೆ ಈಗಿನ ಮಟ್ಟಿಗೆ ಪ್ರಾಚೀನತಮ ಕವಿ ಹಸ್ತಾಕ್ಷರ ಪ್ರತಿಯೆಂದು ತಿಳಿದು ಬರುತ್ತದೆ.

ಸಂಶೋಧನೆಯಲ್ಲಿ ಇಂದು ಕ್ಷೇತ್ರಕಾರ್ಯ (Field work)ವು ಪ್ರಮುಖವಾಗಿ ಪರಿಗಣಿಸಲ್ಪಟ್ಟಿದೆ. ಯಾವುದೇ ಸಂಶೋಧನೆಯು ಕ್ಷೇತ್ರಕಾರ್ಯವಿಲ್ಲದೆ ಪರಿಪೂರ್ಣ ವಾಗಲಾರದು. ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಶಿಸ್ತುಗೊಳಪಟ್ಟು ಬೆಳೆದು ಬಂದ ಇದು ಯಾವುದೇ ಒಂದು ಅಧ್ಯಯನ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಕಲೆ, ವಿಜ್ಞಾನ, ಸಮಾಜ ವಿಜ್ಞಾನ ಮುಂತಾದ ವಲಯಗಳಲ್ಲಿ ಇಂದು ವಸ್ತುನಿಷ್ಠತೆ, ನಿಖರತೆ ಪ್ರಾಪ್ತವಾಗುವುದು ಕ್ಷೇತ್ರಕಾರ್ಯದ ಮುಖಾಂತರ ಎಂಬುದನ್ನು ನಾವು ಮರೆಯಬಾರದು. ಸಾಹಿತ್ಯ ಕ್ಷೇತ್ರದ ಮಟ್ಟಿಗೆ ಹೇಳುವುದಾದರೆ ಜಾನಪದ, ಭಾಷೆ ಹಸ್ತಪ್ರತಿ, ಶಾಸನ ಮೊದಲಾದವುಗಳ ಪರಿಪೂರ್ಣ ಅಧ್ಯಯನ ಮಾಡಬೇಕಾದರೆ ವ್ಯವಸ್ಥಿತ ಕ್ಷೇತ್ರಕಾರ್ಯ ಕೈಕೊಳ್ಳಬೇಕಾಗುತ್ತದೆ. ಕ್ಷೇತ್ರಕಾರ್ಯವು ಕ್ರಮವಾಗಿ ಸಂಗ್ರಹ (collection), ಸಂದರ್ಶನ (Interview), ನಿರೀಕ್ಷಣೆ (observation) ಎಂಬ ಮೂರು ರೂಪಗಳಲ್ಲಿ ವಿಸ್ತಾರಗೊಂಡಿದೆ. ಇವುಗಳಲ್ಲಿ ಹಸ್ತಪ್ರತಿ ಕ್ಷೇತ್ರಕಾರ್ಯವು ಪ್ರಧಾನವಾಗಿ ಸಂಗ್ರಹ ವರ್ಗಕ್ಕೆ ಸೇರುತ್ತಿದ್ದು, ಪರೋಕ್ಷವಾಗಿ ಸಂದರ್ಶನ ಮತ್ತು ನಿರೀಕ್ಷಣೆಗಳನ್ನು ಒಳಗೊಳ್ಳುತ್ತದೆ.

. ಹಸ್ತಪ್ರತಿ ಕ್ಷೇತ್ರಕಾರ್ಯ ಅಧ್ಯಯನ

ಹಸ್ತಪ್ರತಿ ಕ್ಷೇತ್ರಕಾರ್ಯದ ಬಗೆಗೆ ಮಾಹಿತಿ ನೀಡುವ ಗ್ರಂಥಗಳು ಕನ್ನಡದಲ್ಲಿ ಇಲ್ಲಿಯವರೆಗೂ ಪ್ರಕಟವಾಗಿಲ್ಲ. ಆದರೆ ಲೇಖನ ರೂಪದ ಬರಹಗಳಲ್ಲಿ ಕೆಲವು ವಿದ್ವಾಂಸರು ತಮ್ಮ ಕ್ಷೇತ್ರಕಾರ್ಯದಲ್ಲಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ೧೯೨೪ರಲ್ಲಿ ಮೈಸೂರು ಸ್ಟಾರ್‌ಪತ್ರಿಕೆಯಲ್ಲಿ ದುಮ್ಮೂರು ಗುರುಪಾದಪ್ಪ ಮುಪ್ಪಿನ-ರೆ- ರೇವಣಸಿದ್ದಪ್ಪನವರು “ವೀರಶೈವ ಮತಗ್ರಂಥ ಪರಿಶೋಧನಾ” ಎಂಬ ಲೇಖನವನ್ನು ಬರೆದು ಪ್ರಕಟಿಸಿದ್ದಾರೆ. ಇದರಲ್ಲಿ ಲೇಖಕರು ಹಸ್ತಪ್ರತಿಗಳ ಸಂಗ್ರಹ ಕಾರ್ಯದಲ್ಲಾದ ಓಡಾಟ ಮತ್ತು ಅನುಭವಗಳನ್ನು ದಾಖಲಿಸಿದ್ದಾರೆ. ಒಂದರ್ಥದಲ್ಲಿ ಇದು ಹಸ್ತಪ್ರತಿ ಬಗೆಗೆ ಮಾಹಿತಿ ನೀಡುವ ಮೊದಲ ಲೇಖನವೆಂದು ಹೇಳಿದರೆ ತಪ್ಪಾಗಲಾರದು. ೧೯೮೨ರಲ್ಲಿ ಪ್ರಕಟವಾದ ಡಾ. ಫ. ಗು. ಹಳಕಟ್ಟಿಯವರ ಜನ್ಮ ಶತಮಾನೋತ್ಸವ ಸಂಸ್ಮರಣ ಸಂಪುಟ “ಮಣಿಹ”ದಲ್ಲಿ ವಿದ್ವಾನ್‌ಕೆ. ವೆಂಕಟಾರಾಚಾರ್ಯ, ಪ್ರೊ. ಗೌ.ಮ. ಉಮಾಪತಿಶಾಸ್ತ್ರಿ, ಪ್ರೊ. ಬಿ.ಬಿ. ಮಹೀಶವಾಡಿ, ಶ್ರೀ. ಜಿ. ಅಶ್ವತ್ಥನಾರಾಯಣ ಮೊದಲಾದ ವಿದ್ವಾಂಸರು ತಮ್ಮ ಹಸ್ತಪ್ರತಿಗಳ ಸಂಗ್ರಹ, ಶೋಧನಾ ಕಾರ್ಯದಲ್ಲಾದ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಹಸ್ತಪ್ರತಿಶಾಸ್ತ್ರ ಕುರಿತ ತಮ್ಮ ಗ್ರಂಥಗಳಲ್ಲಿ ಎಚ್‌. ದೇವೀರಪ್ಪ, ಬಿ. ಎಸ್‌. ಸಣ್ಣಯ್ಯ, ಎಂ. ಎಂ. ಕಲಬುರ್ಗಿಯವರು ಕ್ಷೇತ್ರಕಾರ್ಯದ ವಿಧಾನ ಸಾಧನೆಗಳ ಬಗೆಗೆ ಚರ್ಚಿಸಿದ್ದಾರೆ. ಹಸ್ತಪ್ರತಿ ಕ್ಷೇತ್ರಕಾರ್ಯದ ಬಗೆಗೆ ತಾತ್ವಿಕ ಚೌಕಟ್ಟಿನಲ್ಲಿ ಉದಾಹರಣೆ, ನಿದರ್ಶನಗಳೊಂದಿಗೆ ವಿವರವಾದ ಲೇಖನವನ್ನು ಮೊದಲು ಬರೆದವರು ಡಾ. ಎಂ. ಎಂ. ಕಲಬುರ್ಗಿಯವರು. ೧೯೮೩ರಲ್ಲಿ ಪ್ರಕಟವಾದ “ಹಸ್ತಪ್ರತಿ ಕ್ಷೇತ್ರಕಾರ್ಯ: ವಿಧಾನ, ಸಾಧನೆ” (ಕರ್ನಾಟಕ ಭಾರತಿ ೧೬ – ೧,೨) ಎಂಬ ಲೇಖನದಲ್ಲಿ ಅವರೇ ಹೇಳುವಂತೆ “ಕ್ಷೇತ್ರಕಾರ್ಯಕರ್ತ, ಹಸ್ತಪ್ರತಿ, ಹಸ್ತಪ್ರತಿಗಳ ಒಡೆಯ – ಈ ಮೂರು ಘಟಕಗಳನ್ನೊಳಗೊಂಡಿದೆ ಹಸ್ತಪ್ರತಿ ಕ್ಷೇತ್ರಕಾರ್ಯ, ಅದು ‘ಒಡೆಯ’ ನಿಂದ ‘ಹಸ್ತಪ್ರತಿ’ಯನ್ನು ‘ಕ್ಷೇತ್ರಕಾರ್ಯಕರ್ತ’ ದೊರಕಿಸಿಕೊಳ್ಳುವ ಕ್ರಿಯೆ. ಈ ತ್ರಿಕೋಣದಲ್ಲಿ ಹಸ್ತಪ್ರತಿ ಶಿರೋಕೇಂದ್ರವಾಗಿದ್ದು, ಅದನ್ನು ಒಂದು ಕೇಂದ್ರದಿಂದ ಒಡೆಯ ಉಳಿಸಿಕೊಳ್ಳುವ, ಇನ್ನೊಂದು ಕೇಂದ್ರದಿಂದ ಕ್ಷೇತ್ರಕಾರ್ಯಕರ್ತ ಪಡೆಯುವ ಪ್ರಯತ್ನ ನಡೆಸುತ್ತಾರೆ.” ಈ ಹಿನ್ನೆಲೆಯಲ್ಲಿ ಹಸ್ತಪ್ರತಿ ಕ್ಷೇತ್ರಕಾರ್ಯದ ವಿಧಾನ – ಸಾಧನೆಗಳ ಬಗೆಗೆ ಸ್ಥೂಲವಾಗಿ ವಿವೇಚಿಸಬಹುದು.

. ಹಸ್ತಪ್ರತಿ ಕ್ಷೇತ್ರಕಾರ್ಯ ವಿಧಾನ

ಹಸ್ತಪ್ರತಿ ಕ್ಷೇತ್ರಕಾರ್ಯವು ಮುಖ್ಯವಾಗಿ ವೈಯಕ್ತಿಕ ನೆಲೆ (Indivisual) ಸಾಂಸ್ಥಿಕ ನೆಲೆ (Institutional)ಯಲ್ಲಿ ನಡೆಯುತ್ತದೆ. ವೈಯಕ್ತಿಕ ನೆಲೆಗಿಂತ ಸಾಂಸ್ಥಿಕ ನೆಲೆಯ ಮೂಲಕ ಕ್ಷೇತ್ರಕಾರ್ಯ ತುಂಬ ಸರಳ ವಿಧಾನವೆನಿಸುತ್ತದೆ. ಫ. ಗು. ಹಳಕಟ್ಟಿ, ಗೌ.ಮ. ಉಮಾಪತಿಶಾಸ್ತ್ರೀ, ಪಂ. ಬಿ. ಶಿವಮೂರ್ತಿಶಾಸ್ತ್ರಿಗಳಂಥ ಹಲವಾರು ಆಸಕ್ತ ವಿದ್ವಾಂಸರು ವೈಯಕ್ತಿ ಶ್ರಮ, ಪ್ರಭಾವಗಳ ಮೂಲಕ ಹಸ್ತಪ್ರತಿ ಕ್ಷೇತ್ರಕಾರ್ಯ ಕೈಗೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಅವರು ತುಂಬ ಕಷ್ಟ, ನಷ್ಟಗಳನ್ನು ಅನುಭವಿಸಿದ್ದಾರೆ. ಒಂದು ಸಂಸ್ಥೆಯ ಹೆಸರಿನ ಮೂಲಕ ಜನರ ಬಳಿ ಸಹಾಯ ಕೇಳುವುದಕ್ಕೂ, ವೈಯಕ್ತಿಕವಾಗಿ ಜನರ ಬಳಿ ನೆರವು ಪಡೆಯುವುದಕ್ಕೂ ತುಂಬಾ ವ್ಯತ್ಯಾಸವಿದೆ. ತಮ್ಮ ವಸ್ತುಗಳನ್ನು ಒಂದು ಸಂಸ್ಥೆಗೆ ಕೊಡುಗೆಯಾಗಿ ನೀಡಿದರೆ, ಅವು ದೀರ್ಘಕಾಲದವರೆಗೂ ಜೋಪಾನವಾಗಿ ಇರುತ್ತವೆಯೆಂಬ ಭಾವನೆ ಜನಸಾಮಾನ್ಯರಲ್ಲಿ ಬೆಳೆದಿರುತ್ತದೆ. ಮಾನವೀಯ ಮೌಲ್ಯಗಳು ಕುಸಿದು ಹೋಗುತ್ತಿರುವ ಇಂದಿನ ಕಾಲದಲ್ಲಿ ಸಾಂಸ್ಥಿಕ ನೆಲೆಯ ಮೂಲಕ ಹಸ್ತಪ್ರತಿಗಳನ್ನು ಸಂಗ್ರಹಿಸುವುದು ತುಂಬ ಸುಲಭದ ಕಾರ್ಯವೆನಿಸುತ್ತದೆ. ಈ ನಿಟ್ಟಿನಲ್ಲಿ ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಧಾರವಾಡದ ಡಾ. ಆರ್‌. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ, ಕನ್ನಡ ಸಂಶೊಧನ ಸಂಸ್ಥೆ, ಬೆಂಗಳೂರಿನ ಬಿ. ಎಂ. ಶ್ರೀ ಪ್ರತಿಷ್ಠಾನ, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ, ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮುಂತಾದ ಸಂಸ್ಥೆಗಳು ಹಲವಾರು ವಿದ್ವಾಂಸರು ಶ್ರದ್ಧೆ, ಶ್ರಮದಿಂದಾಗಿ ಸಾವಿರಾರು ಹಸ್ತಪ್ರತಿಗಳನ್ನು ಸಂಗ್ರಹಿಸಿ, ಸಂರಕ್ಷಿಸುತ್ತಿವೆ.

ಹಸ್ತಪ್ರತಿ ಕ್ಷೇತ್ರಕಾರ್ಯವನ್ನು ಪರೋಕ್ಷ (Non directive) ಹಾಗೂ ಪ್ರತ್ಯಕ್ಷ (directive) ವಾಗಿಯೂ ಕೈಕೊಳ್ಳಬಹುದು.

.೧. ಪರೋಕ್ಷ ಕ್ಷೇತ್ರಕಾರ್ಯ

ಹಸ್ತಪ್ರತಿಗಳು ನಿರ್ದಿಷ್ಟವಾದ ಸ್ಥಳ (ಗ್ರಾಮ, ಮನೆ, ಮಠ, ಮಂದಿರ)ಗಳಲ್ಲಿ ಇದ್ದ ಬಗೆಗೆ ನಮಗೆ ಪೂರ್ಣವಾದ ಮಾಹಿತಿಯಿದ್ದರೆ ಅವುಗಳನ್ನು ಅಂಚೆ ಮೂಲಕ ಅಥವಾ ಅನ್ಯವ್ಯಕ್ತಿಗಳ ಸಹಾಯದಿಂದ ತರಿಸಿಕೊಳ್ಳುವುದು ಪರೋಕ್ಷ ಕ್ಷೇತ್ರಕಾರ್ಯವೆನಿಸುತ್ತದೆ. ಹಸ್ತಪ್ರತಿಗಳ ಒಡೆಯರು ತಿಳುವಳಿಕೆಯುಳ್ಳವರಿದ್ದರೆ, ಹಸ್ತಪ್ರತಿಗಳು ಸಾರ್ವಜನಿಕ ಆಸ್ತಿ ಎಂಬ ಪ್ರಜ್ಞೆಯುಳ್ಳವರಾಗಿದ್ದರೆ ಈ ಕಾರ್ಯ ತುಂಬ ಸುಗಮವಾಗುತ್ತದೆ. ಈ ಪ್ರಜ್ಞೆ ನಮ್ಮಲ್ಲಿ ಎಲ್ಲಿಯವರೆ ಬೆಳೆಯುವುದಿಲ್ಲವೋ ಅಲ್ಲಿಯವರೆಗೆ ಈ ಕಾರ್ಯ ಅಷ್ಟು ಪರಿಣಾಮಕಾರಿಯಾಗುವುದಿಲ್ಲ. ಬಳ್ಳಾರಿ ಜಿಲ್ಲೆಯ ಹಸ್ತಪ್ರತಿಗಳ ಸರ್ವೇಕ್ಷಣೆ, ಸಂಗ್ರಹಕಾರ್ಯ ಕೈಕೊಂಡಾಗ ಇಂಥ ಒಂದು ಪ್ರಯೋಗವನ್ನು ಮಾಡಲಾಯಿತು. ಜಿಲ್ಲೆಯ ಮಠಾಧೀಶರಿಗೆ, ಸಾರ್ವಜನಿಕ ಸಂಸ್ಥೆಗಳಿಗೆ, ಪ್ರತಿಷ್ಠಿತ ವ್ಯಕ್ತಿಗಳಿಗೆ, ಖಾಸಗಿ ವ್ಯಕ್ತಿಗಳಿಗೆ ಪತ್ರದ ಮೂಲಕ ತಿಳಿಸಲಾಯಿತು. ಕೆಲವು ವ್ಯಕ್ತಿಗಳಿಂದ ಮಾತ್ರ ಮಾಹಿತಿ ಲಭಿಸಿತು. ಇನ್ನು ಕೆಲವರು ಅಂಚೆ ಮೂಲಕ ಹಸ್ತಪ್ರತಿಗಳನ್ನು ಕಳಿಸಿದರು. ಆದರೂ ಪರೊಕ್ಷ ಕ್ಷೇತ್ರಕಾರ್ಯದ ಮೂಲಕ ಹಸ್ತಪ್ರತಿಗಳ ಸಂಗ್ರಹ ತ್ವರಿತಗತಿಯಿಂದ ಸಾಗುವುದಿಲ್ಲವೆಂಬುದನ್ನು ಇಲ್ಲಿ ಹೇಳಲೇಬೇಕು. ಭಾರತದಂಥ ಭಾವನಿಷ್ಠ ಸಮಾಜದಲ್ಲಿ ಪ್ರತ್ಯಕ್ಷ ಕ್ಷೇತ್ರಕಾರ್ಯವೇ ಹೆಚ್ಚು ಪರಿಣಾಮಕಾರಿಯಾದುದು.

.೨ ಪ್ರತ್ಯಕ್ಷ ಕ್ಷೇತ್ರಕಾರ್ಯ

ಕ್ಷೇತ್ರಕಾರ್ಯಕರ್ತನು ಪ್ರತ್ಯಕ್ಷ ಕ್ಷೆತ್ರಕಾರ್ಯ ಕೈಕೊಂಡಾಗ ವಿಷ್ಟವಾದ ಅನುಭವಗಳನ್ನು ಪಡೆದುಕೊಳ್ಳುತ್ತಾನೆ. ಈ ಕಾರ್ಯದಲ್ಲಿ ಆತ ತೊಡಗಬೇಕಾದರೆ ಕೆಲವು ಅವಶ್ಯವಾದ ಆರ್ಹತೆಗಳನ್ನು ಹೊಂದಿದವನಾಗಿರಬೇಕು. ಹಸ್ತಪ್ರತಿಗಳ ಸೈದ್ಧಾಂತಿಕ ಜ್ಞಾನ, ಪ್ರಾಯೋಗಿಕ ಪರಿಜ್ಞಾನ, ವಿದ್ವಾಂಸರೊಡನೆ ಸತತ ಸಂಪರ್ಕ. ಹಸ್ತಪ್ರತಿ ಒಡೆಯನೊಂದಿಗೆ ಸಮಯೋಚಿತವಾಗಿ ಮಾತನಾಡುವುದು, ಕ್ಷೇತ್ರದ ಬಗೆಗೆ ಮಾಹಿತಿ ಸಂಗ್ರಹ, ಜನಸಂಪರ್ಕವನ್ನು ಮಾಡಿಕೊಳ್ಳುವುದು. ಹಸ್ತಪ್ರತಿಗಳ ಪರೀಶೀಲನೆಯಲ್ಲಿ ಸಮಾಧಾನ ಪ್ರವೃತ್ತಿ,   ಹಸ್ತಪ್ರತಿಗಳ ಪರಿಸರ ಸಂಗ್ರಹ, ಸಲಕರಣೆಗಳನ್ನು ಸಿದ್ಧಮಾಡಿಕೊಳ್ಳುವುದು, ಹಸ್ತಪ್ರತಿಗಳಗಳನ್ನು ಪಡೆದುಕೊಳ್ಳುವ ವಿಧಾನ, ಜಾಣ್ಮೆ ಮುಂತಾದ ಸಂಗತಿಗಳ ಕಡೆಗೆ ಈತ ಹೆಚ್ಚು ತಿಳಿದುಕೊಂಡಿರಬೇಕು.

.೨.೧. ಸೈದ್ಧಾಂತಿಕ ಜ್ಞಾನ

ಮೊದಲೆಯದಾಗಿ ಕ್ಷೇತ್ರಕಾರ್ಯಕರ್ತನಿಗೆ ಹಸ್ತಪ್ರತಿಗಳ ಸೈದ್ಧಾಂತಿಕ ಜ್ಞಾನ ಅವಶ್ಯಬೇಕಾಗುತ್ತದೆ, ಈ ವಿಷಯವನ್ನು ಕುರಿತು ಬಂದ ಗ್ರಂಥ, ಲೇಖನಗಳು, ಅವುಗಳಲ್ಲಿರುವ ಮಾಹಿತಿಯನ್ನು ಸಂಗ್ರಹಿಸಿಕೊಂಡು ಮನನ ಮಾಡಿಕೊಂಡಿರಬೇಕು. ಹಸ್ತಪ್ರತಿ ಸೂಚೀ ಸಂಪುಟ (Manuscript catalouge) ಗಳ ಸಮಗ್ರ ವಿವರಗಳನ್ನು ಆತ ಗಮನಿಸಿರಬೇಕು. ಯಾವ ಯಾವ ಸಂಪುಟದಲ್ಲಿ ಯಾವ ಯಾವ ಕೃತಿಗಳ ವಿವರಗಳಿವೆಯೆಂಬ ತಿಳುವಳಿಕೆಯನ್ನು ಪಡೆದುಕೊಳ್ಳಬೇಕು. ಕನ್ನಡದಲ್ಲಿ ನೂರಕ್ಕೂ ಮೀರಿದ ಹಸ್ತಪ್ರತಿ ಸೂಚಿಗಳು ಗ್ರಂಥರೂಪದಲ್ಲಿ, ಲೇಖನ ರೂಪದಲ್ಲಿ ಪ್ರಕಟವಾಗಿವೆ. ಅಲ್ಲದೆ ಈ  ವಿಷಯವನ್ನು  ಕುರಿತಂತೆ ಹೊರಬಂದ ಎಚ್‌. ದೇವಿರಪ್ಪನವರ ಕನ್ನಡ ಹಸ್ತಪ್ರತಿಗಳ ಇತಿಹಾಸ (೧೯೭೭). ಬಿ. ಎಸ್‌. ಸಣ್ಣಯ್ಯನವರ ಹಸ್ತಪ್ರತಿಶಾಸ್ತ್ರ ಪರಿಚಯ (೧೯೯೨). ಎಂ. ಎಂ. ಕಲಬುರ್ಗಿಯವರ ಕನ್ನಡ ಹಸ್ತಪ್ರತಿಶಾಸ್ತ್ರ (೧೯೯೩) ಮುಂತಾದ ಗ್ರಂಥಗಳನ್ನು ಅವಲೋಕಿಸಿರಬೇಕು.  ಕ್ಷೇತ್ರಕಾರ್ಯಕೈಕೊಂಡ ಸಂದರ್ಭದಲ್ಲಿ ಒಂದು ಹಸ್ತಪ್ರತಿ ಅಭಿಸಿದರೆ ಅದು ಪ್ರಕಟಿತವೋ, ಅಪ್ರಕಟಿತವೋ ಎಂಬುದನ್ನು ತಿಳಿದುಕೊಳ್ಳುವಲ್ಲಿ ಈ ಸೂಚಿಸಂಪುಟಗಳು, ಗ್ರಂಥಗಳು ನೆರವಿಗೆ ಬರುತ್ತವೆ. ಇದರಿಂದ ಲಭಿಸಿದ ಹಸ್ತಪ್ರತಿಯ ಮಹತ್ವವನ್ನು ಗುರುತಿಸಲು ಸಾಧ್ಯವಾಗುತ್ತದೆ. ಹಸ್ತಪ್ರತಿಯ ಸ್ವರೂಪ, ಪ್ರಕಾರ, ಭಾಷೆ, ಬರವಣಿಗೆಯ ರೀತಿ, ಅದರಲ್ಲಿರುವ ವಿಷಯ ಸಂಪತ್ತು, ಮಹತ್ವ ಇತ್ಯಾದಿಗಳನ್ನು ತಿಳಿದುಕೊಳ್ಳಲು ಹಸ್ತಪ್ರತಿಶಾಸ್ತ್ರದ ಸೈದ್ಧಾಂತಿಕ ಜ್ಞಾನ ಅಗತ್ಯವಾಗಿ ಬೇಕಾಗುತ್ತದೆ.

.೨.೨ ಪ್ರಾಯೋಗಿಕ ಪರಿಜ್ಞಾನ

ಹಸ್ತಪ್ರತಿಗಳ ಸೈದ್ಧಾಂತಿಕ ಜ್ಞಾನದ ಜೊತೆಗೆ ಕ್ಷೇತ್ರಕಾರ್ಯಕರ್ತನಿಗೆ ಪ್ರಾಯೋಗಿಕ ಪರಿಜ್ಞಾನವೂ ಇರಬೇಕಾದುದು ಅವಶ್ಯ. ದೈಹಿಕ ಶ್ರಮ, ಆರ್ಥಿಕ ಸಮಸ್ಯೆಗಳನ್ನು ಮೀರಿದ ಅನ್ವಯಿಕ ಪರಿಣತಿಯಿದು. ಡಾ. ಎಂ. ಎಂ. ಕಬುಬುರ್ಗಿಯವರು ಹೇಳುವಂತೆ “ಸೈದ್ಧಾಂತಿಕವಲ್ಲದ ಪ್ರಾಯೋಗಿಕ ಕುರುಡು, ಪ್ರಾಯೋಗಿಕವಲ್ಲದ ಸೈದ್ಧಾಂತಿಕ ಹೆಳವ. ಆದುದರಿಂದ ಕುರುಡನೂ ಅಲ್ಲದ ಹೆಳವನೂ ಅಲ್ಲದ ವೈಕ್ತಿತ್ವ ಕ್ಷೇತ್ರಕಾರ್ಯಕರ್ತ ನದಾಗಿರಬೇಕು.” ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಕ್ಷೇತ್ರಕಾರ್ಯ ನಡೆಸಿ ಕ್ಷೇತ್ರಕಾರ್ಯಕರ್ತ ತನ್ನನ್ನು ಪರೀಕ್ಷಿಸಿಕೊಂಡಿರಬೇಕು. ಇದಕ್ಕೆ ಪ್ರಯೋಗಿಕ ಪರಿಜ್ಞಾನವಿರಬೇಕು.

.೨.೩ ವಿದ್ವಾಂಸರೊಡನೆ ಸತತ ಸಂಪರ್ಕ

ಹಸ್ತಪ್ರತಿ ಶಾಸ್ತ್ರದಲ್ಲಿ ಪರಿಣತಿ ಪಡೆದ ವಿದ್ವಾಂಸರೊಡನೆ ಕ್ಷೇತ್ರಕಾರ್ಯಕರ್ತ ಸತತವಾಗಿ ಸಂಪರ್ಕವಿಟ್ಟುಕೊಂಡಿರುವುದು ಒಳ್ಳೆಯದು. ಇದರಿಂದ ಕರ್ನಾಟಕದ ಒಳಗೆ ಹೊರಗೆ ಯಾವ ಯಾವ ಭಾಗಗಳಲ್ಲಿ ಹಸ್ತಪ್ರತಿಗಳ ಸರ್ವೇಕ್ಷಣೆ, ಸಂಗ್ರಹಕಾರ್ಯ ನಡೆದಿಲ್ಲವೆಂಬುದರ ಬಗೆಗೆ ಮಾಹಿತಿ ಸಿಗಬಹುದು. ಹಾಗೆಯೇ ಅಪೂರ್ವವಾದ ಹಸ್ತಪ್ರತಿಗಳ ಸಂಗ್ರಹದ ಬಗೆಗೆ ಮಾರ್ಗದರ್ಶನ ಸಿಕ್ಕಂತಾಗುತ್ತದೆ. ಇದರಿಂದ ಕ್ಷೇತ್ರಕಾರ್ಯಕರ್ತ ಅಪರೂಪದ ಹಸ್ತಪ್ರತಿಗಳನ್ನು ಶೋಧಿಸಲು ಅವಕಾಶವಾಗುತ್ತದೆ. ಡಾ. ಎಂ. ಎಂ. ಕಲುಬುರ್ಗಿಯವರು ಕವಿರಾಜಮಾರ್ಗ ಹಸ್ತಪ್ರತಿಯ ಸುಳುಹು ಹಿಡಿದು ಬೀದರ ಜಿಲ್ಲೆಯಲ್ಲಿ ಅದನ್ನು ಪತ್ತೆ ಹಚ್ಚಲು ಹತ್ತು ವರುಷ ನಿರಂತರ ಪ್ರಯತ್ನ ಮಾಡಿರುವುದನ್ನು ಇಲ್ಲಿ ಗಮನಿಸಬಹುದು.

.೨.೪. ಪೂರ್ವ ಸಿದ್ಧತೆ

ಕ್ಷೇತ್ರಕಾರ್ಯಕರ್ತ ಹಸ್ತಪ್ರತಿಗಳ ಸಂಗ್ರಹಕಾರ್ಯಕ್ಕೆ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮುನ್ನ ಕೆಲವು ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿರಬೇಕು. ಮುಖ್ಯವಾಗಿ ಆತ ಮಾನಸಿಕವಾಗಿ ಅಸ್ವಸ್ಥನಾಗಿರಬಾರದು. ದೈಹಿಕವಾಗಿ ಆರೋಗ್ಯವಂತನಾಗಿರಬೇಕು. ಈ ಸಂದರ್ಭದಲ್ಲಿ ಸದಾ ಆಸಕ್ತಿಯನ್ನು ಹೊಂದಿರಬೇಕು. ಇಲ್ಲದಿದ್ದರೆ ಒಲ್ಲದ ಗಂಡನಿಗೆ ಮದುವೆ ಮಾಡಿದ ವ್ಯರ್ಥ ಪ್ರಯತ್ನವಾಗುತ್ತದೆ. “ಹಸ್ತಪ್ರತಿಗಳ ಭಾಂಡಾರದ ಅಧಿಕಾರಿಗಳು ಆಗಿಂದಾಗ್ಗೆ ಹಸ್ತಪ್ರತಿಗಳ ಸಂಗ್ರಹಕಾರ್ಯವನ್ನು ನಡೆಸುವುದುಂಟು. ಇಂಥ ಪ್ರಯತ್ನ ಕಾರ್ಯವನ್ನು ಎಷ್ಟು ಶ್ರದ್ಧೆಯಿಂದ ಮಾಡಿದರೂ ಅದಕ್ಕೆ ಇತಿಮಿತಿಗಳಿಲ್ಲ. ಕೇವಲ ಹೊಟ್ಟೆಪಾಡಿಗಾಗಿ ಕೈಗೊಳ್ಳುವ ಉದ್ಯೋಗವೆಂದು ಎಣಿಸದೆ, ಅದೊಂದು ಅಪೂರ್ವವಾದ ಸದಾವಕಾಶವೆಂದು ಮಾಡಿದರೆ ಆಗ ಅದು ಸಂಗ್ರಹಕಾರನಿಗೂ ಸಂಸ್ಥೆಗೂ ಮಹದುಪಕಾರವಾದಂತಾಗುವುದು. ನಾನು ತಿಳಿದಂತೆಯೇ ಕೆಲವರಿಗೆ ಇದರಲ್ಲಿ ಸ್ವತಃ ಒಂದು ಅಪ್ರತಿಮವಾದ ಸಾಮರ್ಥ್ಯವಿರುತ್ತದೆ. ಈ ಕೆಲಸಕ್ಕೆ ಅಂತಹ ಆಸಕ್ತರು ಅತ್ಯಗತ್ಯ” ಎಂದು ಡಾ. ಜಿ. ವರದರಾಜರಾಯರು ಹೇಳಿರುವ ಮಾತು ಈ ಕಾರ್ಯದ ಮಹತಿಗೆ ಹಿಡಿದ ಕೈಗನ್ನಡಿಯಾಗಿದೆ.

ಒಂದು ನಿರ್ದಿಷ್ಟ ಪ್ರದೇಶ (ಜಿಲ್ಲೆ, ತಾಲೂಕು)ವನ್ನು ಕ್ಷೇತ್ರಕಾರ್ಯಕ್ಕೆ ಆಯ್ದುಕೊಂಡಾಗ ದಿನಪತ್ರಿಕೆ, ಆಕಾಶವಾಣಿ, ದೂರದರ್ಶನಗಳಂಥ ಸಮೂಹ ಮಾಧ್ಯಮಗಳ ಮುಖಾಂತರ ಹಸ್ತಪ್ರತಿ ಸಂಗ್ರಹ ಕಾರ್ಯದ ಬಗೆಗೆ ಪೂರ್ವಭಾವಿಯಾಗಿ ಪ್ರಕಟಣೆಯನ್ನು ನೀಡಬೇಕು. ಇದರಿಂದ ಆ ಪ್ರದೇಶದ ಜನರು, ಮಠಾಧೀಶರು, ಸಂಘ ಸಂಸ್ಥೆಗಳು ಈ ವಿಷಯದ ಬಗೆಗೆ ಸಿದ್ಧರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ಬಳ್ಳಾರಿ ಜಿಲ್ಲೆಯ ಹಸ್ತಪ್ರತಿಗಳ ಸರ್ವೇಕ್ಷಣೆ, ಸಂಗ್ರಹ ಯೋಜನೆಯನ್ನು ಹಾಕಿಕೊಂಡಾಗ ಒಂದು ಪ್ರಕಟಣೆಯನ್ನು ಹೊರಡಿಸಿತ್ತು. ಅದರ ಸಾರಾಂಶ ಹೀಗಿದೆ: “ನಮ್ಮ ಹಿರಿಯರು ನಮಗಾಗಿ ಬಿಟ್ಟು ಹೋಗಿರುವ ಈ ಆಸ್ತಿ (ಹಸ್ತಪ್ರತಿಗಳು) ಆಧುನಿಕ ಜೀವನ ಪದ್ದತಿಯಿಂದಾಗಿ ಅಲಕ್ಷ್ಯಕ್ಕೆ ಗುರಿಯಾಗುತ್ತ ನಡೆದಿದ್ದು, ಕೆಲವು ದಿನಗಳಲ್ಲಿ ಖಂಡಿತಾ ಹಾಳಾಗುತ್ತವೆ. ಇವುಗಳನ್ನು ರಕ್ಷಿಸುವುದು, ಓದಿ ಪ್ರಕಟಿಸುವುದು ವಿಶ್ವವಿದ್ಯಾಲಯದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಸಿಬ್ಬಂದಿ ವರ್ಗದವರು ತಮ್ಮ ಊರಿಗೆ ಹಸ್ತಪ್ರತಿ ಸಂಗ್ರಹಕ್ಕಾಗಿ ಬರಲಿದ್ದಾರೆ. ದಯವಿಟ್ಟು ತಮ್ಮಲ್ಲಿರುವ ತಾಳೆಪ್ರತಿ, ಕಾಗದಪ್ರತಿ, ಕಡತ ಇತ್ಯಾದಿ ಸಾಮಾಗ್ರಿಗಳನ್ನು ಕಾಣಿಕೆಯಾಗಿ ನೀಡಿ ಸಹಕರಿಸಬೇಕಾಗಿ ವಿನಂತಿ. ತಾವು ಕಾಣಿಕೆಯಾಗಿ ನೀಡಲಿರುವ ಹಸ್ತಪ್ರತಿಗಳನ್ನು ವಿಶ್ವವಿದ್ಯಾಲಯದಲ್ಲಿ ತಮ್ಮ ಹೆಸರಿನೊಂದಿಗೆ ದಾಖಲಿಸಿ ಸಂರಕ್ಷಿಸಲಾಗುವುದಲ್ಲದೆ, ಪರಿಷ್ಕರಿಸಿ ಪ್ರಕಟಿಸಲಾಗುತ್ತದೆ. ಕಾರಣ ಮೇಲೆ ಸೂಚಿಸಿದ ಪ್ರಾಚೀನ ಅವಶೇಷಗಳನ್ನು ನೀಡಿ ಸಹಕರಿಸಬೇಕು” ಎಂದು ವಿನಂತಿಸಲಾಗಿತ್ತು. ಇದರಿಂದ ಕ್ಷೇತ್ರಕಾರ್ಯಕ್ಕೆ ಹೋದಾಗ ತುಂಬ ಅನುಕೂಲವಾಗುತ್ತದೆ. ಇದಕ್ಕೊಂದು ನಿದರ್ಶನವನ್ನು ಇಲ್ಲಿ ಹೇಳಬಹುದು. ಹಗರಿಬೊಮ್ಮನಹಳ್ಳಿ ತಾಲೂಕಿನ ನೆಲ್ಲಕುದುರಿ ಗ್ರಾಮಕ್ಕೆ ನಾವು ಹಸ್ತಪ್ರತಿ ಕ್ಷೇತ್ರಕಾರ್ಯಕ್ಕೆ ಹೋದಾಗ ಅಲ್ಲಿಯ ನಿವೃತ್ತ ಶಿಕ್ಷಕರಾದ ಶ್ರೀ ಕೊಟ್ರಯ್ಯನವರು ಆಕಾಶವಾಣಿಯಲ್ಲಿ ಪ್ರಸಾರವಾದ ನಮ್ಮ ಪ್ರಕಟನೆಯನ್ನು ಕೇಳಿ ಮನೆಯ ಮಕ್ಕಳೊಂದಿಗೆ ಚರ್ಚಿಸಿ ತಮ್ಮಲ್ಲಿರುವ ಹಸ್ತಪ್ರತಿಗಳನ್ನು ವಿ. ವಿ. ಗೆ ಕೂಡಬೇಕೆಂದು ನಿರ್ಧರಿಸಿದ್ದರು. ನಾವು ಹೋದ ಕೂಡಲೇ ತಡಮಾಡದೇ “ನಿಮ್ಮ ದಾರಿಯನ್ನೇ ಕಾಯುತ್ತಿದ್ದೆವು” ಎಂದು ಹೇಳಿ ತಾಳೆಪ್ರತಿಯ ಕಟ್ಟೊಂದನ್ನು ತುಂಬ ಪ್ರೀತಿಯಿಂದ ನೀಡಿದರು. ಆದ್ದರಿಂದ ಪೂರ್ವಭಾವಿಯಾಗಿ ಪ್ರಕಟನೆಯ ಮೂಲಕ ಜನರಿಗೆ ಸೂಚನೆ ನೀಡಿ ಕ್ಷೇತ್ರಕಾರ್ಯ ಕೈಕೊಳ್ಳುವುದು ಹೆಚ್ಚು ಸೂಕ್ತ ಮತ್ತು ಸರಳವೆನಿಸುತ್ತದೆ.

.೨.೫. ಸಲಕರಣೆಗಳ ಸಿದ್ಧತೆ

ಕ್ಷೇತ್ರಕಾರ್ಯದಲ್ಲಿ ಅವಶ್ಯವಾಗಿ ಬೇಕಾಗುವ ಸಲಕರಣೆಗಳಾವುವು ಎಂಬುದನ್ನು ತಾಳ್ಮೆಯಿಂದ ಯೋಚಿಸಿ ಸಿದ್ಧಪಡಿಸಿಕೊಂಡಿರಬೇಕು. ಜೊತೆಗೆ ಅವುಗಳ ಪಟ್ಟಿ (ಯಾದಿ)ಯೊಂದನ್ನು ಮಾಡಿಕೊಂಡಿರಬೇಕು. ಪ್ರತಿಸಲವೂ ಕ್ಷೇತ್ರಕಾರ್ಯಕ್ಕೆ ಹೋಗುವಾಗ ಆ ಪಟ್ಟಿಯನ್ನು ಪರೀಕ್ಷಿಸಿ. ಸಲಕರಣೆಗಳೆಲ್ಲವೂ ಸರಿಯಾಗಿ ಇವೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ಅರ್ಥದಲ್ಲಿ ಪ್ರತಿಯೊಬ್ಬ ಕ್ಷೇತ್ರಕಾರ್ಯಕರ್ತನಲ್ಲಿ ಒಂದು “ಕ್ಷೇತ್ರಕಾರ್ಯ ಚೀಲ” (Field work Kit) ಇರುವುದು ಒಳ್ಳೆಯದು. ಬಳ್ಳಾರಿ ಜಿಲ್ಲೆಯಾದ್ಯಂತ ಹಸ್ತಪ್ರತಿಗಳ ಸರ್ವೇಕ್ಷಣೆ, ಸಂಗ್ರಹ ಕಾರ್ಯ ಕೈಕೊಂಡಾಗ ನಮ್ಮಲ್ಲಿ ಈ ಕೆಳಗಿನ ಸಲಕರಣೆಗಳಿದ್ದವು.

೦೧. ಮಾದರಿಗಾಗಿ ಒಂದೊಂದು ತಾಳೆಪ್ರತಿ ಮತ್ತು ಕಾಗದ ಪ್ರತಿ ಕಟ್ಟುಗಳು
೦೨. ಎರಡು ನೂರು ಪುಟದ ಟಿಪ್ಪಣಿ ಪುಸ್ತಕ (ನೋಟ್‌ಬುಕ್‌)
೦೩. ದಿನಚರಿ ಪುಸ್ತಕ
೦೪. ಪೀನ ಮಸೂರ (ರಾವು ಕನ್ನಡಿ)
೦೫. ಒಂದು ಪೆನ್ನು, ಒಂದು ಪೆನ್ಸಿಲ್ಲು
೦೬. ಎರಡು ಮಧ್ಯಮ ತರಗತಿಯ ಚೀಲಗಳು
೦೭. ಸ್ವೀಕೃತಿ ಪತ್ರಗಳು
೦೮. ಸಣ್ಣ ಪ್ರಮಾಣದ ಟೇಪರೆಕಾರ್ಡರ (ಅಗತ್ಯವಿದ್ದರೆ)
೦೯. ಮೈಕ್ರೋಫಿಲ್ಮಂ (ಅಗತ್ಯವಿದ್ದರೆ)
೧೦. ಒಂದು ಬ್ಲೇಡು
೧೧. ಒಂದು ದಾರದ ಉಂಡೆ

ಹಸ್ತಪ್ರತಿ ಕ್ಷೇತ್ರಕಾರ್ಯಕ್ಕೆ ಆಧುನಿಕ ತಾಂತ್ರಿಕ ಸಲಕರಣೆಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಅನಿವಾರ್ಯವೆನಿಸಿದೆ. ಮೈಕ್ರೋಫಿಲ್ಮಂ ಮತ್ತಿತರ ಆಧುನಿಕ ತಾಂತ್ರಿಕ ಸಲಕರಣೆಗಳನ್ನು ಕೊಂಡೊಯ್ಯುವಾಗ ಅವುಗಳ ಜೊತೆಗಿರುವ ಬಿಡಿಭಾಗಗಳನ್ನು ತಪ್ಪದೇ ಒಯ್ಯಬೇಕು. ಅಲ್ಲದೇ ಅವಶ್ಯ ಬಿದ್ದಾಗ ಅವುಗಳ ಸಣ್ಣ ಪುಟ್ಟ ರಿಪೇರಿ ಮಾಡುವ ತಾಂತ್ರಿಕ ಜ್ಞಾನವೂ ಕ್ಷೇತ್ರಕಾರ್ಯಕರ್ತನಿಗಿರಬೇಕು. ಒಟ್ಟಿನಲ್ಲಿ ಕ್ಷೇತ್ರಕಾರ್ಯಕ್ಕೆ ಹೊರಡುವ ಮುನ್ನ ಹಸ್ತಪ್ರತಿ ಸಂಗ್ರಹಕ್ಕೆ ಬೇಕಾದ ಅಗತ್ಯವಾದ ಸಲಕರಣೆಗಳನ್ನು ಜಾಗೃತೆಯಿಂದ ಸಿದ್ಧಮಾಡಿಕೊಳ್ಳಬೇಕಾದುದು ಮುಖ್ಯವಾಗಿದೆ.

.೨.೬. ಕ್ಷೇತ್ರದ ಬಗೆಗೆ ಮಾಹಿತಿ

ಕ್ಷೇತ್ರಕಾರ್ಯಕ್ಕೆ ಆಯ್ದುಕೊಂಡ ಪ್ರದೇಶದ ಭೌಗೋಳಿಕ ಪರಿಸರ, ಮಾರ್ಗ ವ್ಯವಸ್ಥೆ, ವಾನ ಸೌಕರ್ಯದ ಬಗೆಗೆ ಅವಶ್ಯವಾಗಿ ತಿಳಿದುಕೊಂಡಿರಬೇಕು. ಇಲ್ಲದಿದ್ದರೆ ಕ್ಷೇತ್ರಕಾರ್ಯ ಅಪೂರ್ಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಾಹನ ಸೌಕರ್ಯವಿಲ್ಲದ ಹಳ್ಳಿಗಳಿಗೆ ಹೋಗಿ ಕ್ಷೇತ್ರಕಾರ್ಯ ಕೈಕೊಳ್ಳುವುದು ತುಂಬ ಕಷ್ಟ. ಇಂಥ ಸಂದರ್ಭದಲ್ಲಿ ಸ್ವಂತ ವಾಹನವಿದ್ದರೆ ಹೆಚ್ಚು ಅನುಕೂಲ. ಇದರಿಂದ ನಿಗದಿತ ಸಮಯಕ್ಕೆ ತಲುಪಿ ಹಸ್ತಪ್ರತಿ ಒಡೆಯನನ್ನು ಮನವೊಲಿಸಲು ಸುಲಭವಾಗುತ್ತದೆ. ಭಾರತದಂಥ ಕೃಷಿ ಪ್ರಧಾನ ಸಮಾಜದಲ್ಲಿ ರೈತರು ಹೊಲಗದ್ದೆಗಳಿಗೆ ಕೆಲಸಕ್ಕೆ ಹೋಗುವ ಮುನ್ನವೇ ಅವರನ್ನು ಕಾಣಬೇಕು. ಇಲ್ಲದಿದ್ದರೆ ಅಲ್ಲಿಯವರೆಗೂ ಹೋಗಿ ವ್ಯರ್ಥವಾದಂತಾಗುತ್ತದೆ. ಇಂಥ ಸಂದರ್ಭದಲ್ಲಾದ ಒಂದು ಘಟನೆಯನ್ನು ಉಲ್ಲೇಖಿಸಬಹುದು. ಕೂಡ್ಲಿಗಿ ತಾಲೂಕಿನ ಚಿರತಗುಂಡವೆಂಬ ಕೊನೆಯ ಹಳ್ಳಿಯೊಂದರಲ್ಲಿ ಒಬ್ಬರ ಮನೆಯಲ್ಲಿ ಹಸ್ತಪ್ರತಿಗಳಿದ್ದ ಬಗೆಗೆ ನಮಗೆ ಮಾಹಿತಿ ಸಿಕ್ಕಿತ್ತು. ಆ ಮಾಹಿತಿಯನ್ನಿಟ್ಟುಕೊಂಡು. ನಾವು ಕಾರ್ಯ ಪ್ರವೃತ್ತರಾದೆವು. ಆ ಹಳ್ಳಿಗೆ ಹೋಗಿ ಹಸ್ತಪ್ರತಿ ಒಡೆಯನ ಮನೆಯನ್ನು ಹುಡುಕಿಕೊಂಡು ಹೋದಾಗ ಮಧ್ಯಾಹ್ನ ೧೨ ಗಂಟೆಯಾಗಿತ್ತು. ವಾಹನ ಸೌಲಭ್ಯವಿಲ್ಲದ ಆ ಹಳ್ಳಿ ಕೂಡ್ಲಿಗಿಯಿಂದ ೨೫ ಕಿ. ಮೀ. ಗಳ ಅಂತರದಲ್ಲಿತ್ತು. ಆ ಮನೆಯವರೆಲ್ಲ ಪಕ್ಕದ ಹಳ್ಳಿ (ಐದು ಕಿ. ಮೀ ಅಂತರ)ಯಲ್ಲಿರುವ ತಮ್ಮ ಹೊಲದ ಕೆಲಸಕ್ಕೆ ಹೋಗಿದ್ದರು. ನಾವು ಮತ್ತೆ ಆ ಹೊಲವನ್ನು ಹುಡುಕಿಕೊಂಡು ಹೋದಾಗ ಮನೆಯ ಯಜಮಾನ, ಅಲ್ಲಿಂದ ಸುಮಾರು ನಾಲ್ಕು ಕಿ. ಮೀ. ಗಳ ದೂರದಲ್ಲಿಯ ಗುಡ್ಡದಲ್ಲಿರುವ ಕಲ್ಲುಗಳನ್ನು ಹಾಕಿಕೊಂಡು ಬರಲು ಹೋಗಿದ್ದನು. ಆತ ಬರುವವರೆಗೂ ಕಾಯ್ದು ಸಾಯಂಕಾಲ ೪ ಗಂಟೆಗೆ ಆತನನ್ನು ಮನವೊಲಿಸಿ, ಹಸ್ತಪ್ರತಿಗಳ ಬಗೆಗೆ ತಿಳಿಹೇಳಿ ಅವುಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದವು. ಸ್ವಂತ ವಾಹನ ಸೌಲಭ್ಯವಿದ್ದ ಕಾರಣ ಇವೆಲ್ಲ ಕಾರ್ಯಗಳು ತ್ವರಿತವಾಗಿ ನಡೆದವು. ತುಂಬ ವಿಳಂಬವಾದರೆ ಆ ಕಾರ್ಯದ ಮೇಲಿನ ಆಸಕ್ತಿ ಕಡಿಮೆಯಾಗುವ ಸಾಧ್ಯತೆ ಹೆಚ್ಚು.

ಯಲಬುರ್ಗಾ ತಾಲೂಕಿನ ಬೆದವಟ್ಟಿ ಗ್ರಾಮದ ಮಠವೊಂದರಲ್ಲಿಯ ಹಸ್ತಪ್ರತಿಗಳನ್ನು ಸಂಗ್ರಹಿಸಿಕೊಂಡು ಬರಲು ಬಸ್‌ಮೂಲಕ ಪ್ರಯಾಣ ಕೈಕೊಂಡು, ಕೊಪ್ಪಳದಿಂದ ಕಿನ್ನಾಳಕ್ಕೆ ಹೋದೆವು. ಕಿನ್ನಾಳದಿಂದ ಬೆದವಟ್ಟಿಗೆ ಬಸ್ಸುಗಳ ಸೌಕರ್ಯ ತುಂಬಾ ಕಡಿಮೆ. ಆದ್ದರಿಂದ ಬಸ್ಸು ಬರುವ ದಾರಿಯನ್ನು ಕಾಯ್ದು ಕಾಯ್ದು ಸಾಯಂಕಾಲ ಆರು ಘಂಟೆಯಾಯಿತು. ನಿರಾಶೆಗೊಂಡು ಪ್ರಯಾಣವನ್ನು ಮೊಟಕುಗೊಳಿಸಿ ಮರಳಿ ಬರಬೇಕಾಯಿತು. ಮತ್ತೆ ಕೆಲದಿನಗಳ ನಂತರ ಬೆದವಟ್ಟಿಗೆ ಹೋಗಿ ಹಸ್ತಪ್ರತಿಗಳನ್ನು ಸಂಗ್ರಹಿಸಿಕೊಂಡು ಬರಲಾಯಿತು. ಆದ್ದರಿಂದ ಕ್ಷೇತ್ರಕಾರ್ಯಕ್ಕೆ ಸ್ವಂತ ವಾಹನವಿದ್ದರೆ ಕ್ಷೇತ್ರಕಾರ್ಯ ತುಂಬ ತೀವ್ರಗತಿಯಲ್ಲಿ ನಡೆಯುತ್ತದೆ. ಇದರಿಂದ ದೈಹಿಕ ಶ್ರಮ, ಸಮಯದ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

.೨.೭. ಜನಸಂಪರ್ಕ ಸ್ಥಾಪನೆ

ಕ್ಷೇತ್ರಕಾರ್ಯದಲ್ಲಿ ಜನಸಂಪರ್ಕವನ್ನು ಸ್ಥಾಪಿಸಿಕೊಳ್ಳುವುದು ಅನಿವಾರ್ಯ. ಒಂದು ಗ್ರಾಮಕ್ಕೆ ಹೋದಾಗ ಅಲ್ಲಿಯ ಮುಖಂಡರನ್ನು, ಅಧಿಕಾರಿಗಳನ್ನು ಭೆಟ್ಟಿಯಾಗಿ ತನ್ನ ಪರಿಚಯ. ಕೆಲಸಮಾಡುವ ಸಂಸ್ಥೆ, ತಾನು ಬಂದ ಕೆಲಸದ ಬಗೆಗೆ ಪೂರ್ಣ ವಿವರಗಳನ್ನು ಹೇಳಬೇಕು. ಜೊತೆಗೆ ಕ್ಷೇತ್ರಕಾರ್ಯಕರ್ತ ಜನರಿಗೆ ಪ್ರಿಯವಾಗುವಂತೆ ನಡೆದುಕೊಳ್ಳಬೇಕು. ಆತನ ವೈಯಕ್ತಿಕ ಇಷ್ಟಾನಿಷ್ಟಗಳಿಗೆ ಅಲ್ಲಿ ಅವಕಾಶವಿರುವುದಿಲ್ಲ. ಜನರ ಪರಿಭಾಷೆಯಲ್ಲಿಯೇ ಮಾತನಾಡಲು ಕಲಿತರೆ ಆತನಿಗೆ ಹೆಚ್ಚು ವಿವರಗಳು ಸಿಗುತ್ತವೆ. ಸತತ ಜನಸಂಪರ್ಕದಿಂದಾಗಿ ಹಸ್ತಪ್ರತಿಗಳು ಬೇರೆ ಬೇರೆ ಕಡೆಗಳಿದ್ದ ಬಗೆಗೆ ಸುಳುಹು ಸಿಗುತ್ತದೆ.

.೨.೮. ಹಸ್ತಪ್ರತಿಗಳ ಒಡೆಯ

ಕ್ಷೇತ್ರಕಾರ್ಯ ಕೈಕೊಳ್ಳುವ ಪೂರ್ವದಲ್ಲಿ ಹಸ್ತಪ್ರತಿಗಳು ಯಾರ ಯಾರ ಒಡೆತನದಲ್ಲಿರುತ್ತವೆಯೆಂಬುದನ್ನು ತಿಳಿದುಕೊಂಡಿರಬೇಕು. ಸಾಮಾನ್ಯವಾಗಿ ಪಂಡಿತರ ಮನೆತನದಲ್ಲಿ, ದೇವಾಲಯ, ಮಠ ಮಂದಿರಗಳಲ್ಲಿ ಇರುತ್ತವೆ. ಜನ ಸಾಮಾನ್ಯರ ಮನೆಯಲ್ಲಿಯೂ ಇರಬಹುದು. ಜೊತೆಗೆ ಆಯಾ ಮತೀಯರಲ್ಲಿ ಆಯಾ ಮತದ ಗ್ರಂಥಗಳು ಅಧಿಕವಾಗಿ ಲಭಿಸುತ್ತವೆಯೆಂಬುದನ್ನು ಗಮನಿಸಿರಬೇಕು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಜೈನ, ವೀರಶೈವ ವ್ಯಕ್ತಿ, ಮಠ, ಮಂದಿರಗಳಲ್ಲಿ ಕನ್ನಡ ಹಸ್ತಪ್ರತಿಗಳು, ಬ್ರಾಹ್ಮಣ ವ್ಯಕ್ತಿಗಳಲ್ಲಿ ಸಂಸ್ಕೃತ ಹಸ್ತಪ್ರತಿಗಳು ಸಿಗುತ್ತವೆ. ಉತ್ತರ ಕರ್ನಾಟಕದಲ್ಲಿ ವೀರಶೈವ ಸಾಹಿತ್ಯ, ಹೈದ್ರಾಬಾದ ಕರ್ನಾಟಕದಲ್ಲಿ ಹರಿದಾಸ ಸಾಹಿತ್ಯ, ಕರಾವಳಿ ಕರ್ನಾಟಕದಲ್ಲಿ ಯಕ್ಷಗಾನ, ಭಾಗವತ ಹಸ್ತಪ್ರತಿಗಳು ಅಧಿಕ ಪ್ರಮಾಣದಲ್ಲಿ ಸಿಗುತ್ತವೆ. ಇಂಥ ವ್ಯವಹಾರಿಕವಾದ ತಿಳುವಳಿಕೆ ಕ್ಷೇತ್ರಕಾರ್ಯಕರ್ತನಿಗೆ ಅವಶ್ಯಕವಾಗಿ ಇರಬೇಕಾಗುತ್ತದೆ.

ಕ್ಷೇತ್ರಕಾರ್ಯಕರ್ತನು ಹಸ್ತಪ್ರತಿ ಒಡೆಯನನ್ನು ಗುರುತಿಸಿ, ಆತನಿಂದ ಹಸ್ತಪ್ರತಿಗಳನ್ನು ಪಡೆದುಕೊಳ್ಳುವಲ್ಲಿಯೇ ನಿಜವಾದ ಸಾರ್ಥಕತೆಯಿರುವುದು. ಆದ್ದರಿಂದ ಕ್ಷೇತ್ರಕಾರ್ಯವೆಂದರೆ ಒಡೆಯನ ವಶದಲ್ಲಿರುವ ಹಸ್ತಪ್ರತಿಗಳನ್ನು ಪಡೆದುಕೊಳ್ಳುವುದಾಗಿದೆ. ಕ್ಷೇತ್ರಕಾರ್ಯಕರ್ತನಿಗೆ ಹಸ್ತಪ್ರತಿ ಒಡೆಯ ಅಪರಿಚಿತ. ಆದ್ದರಿಂದ ಮೊದಲು ಆ ಊರಿನ ಮುಖಂಡರನ್ನಾಗಲಿ, ಪಂಡಿತರನ್ನಾಗಲಿ ಭೇಟಿಯಾಗಿ ತನ್ನ ಬಗೆಗೆ, ತನ್ನ ಕಾರ್ಯಗಳ ಬಗೆಗೆ ವಿವರವಾಗಿ ಹೇಳಬೇಕು. ಆಗ ಅವರು ಹಸ್ತಪ್ರತಿ ಒಡೆಯನನ್ನು ಪರಿಚಯಿಸುತ್ತಾರೆ. ಇದರಿಂದ ಒಡೆಯನಿಗೆ ಧೈರ್ಯ ಬರುತ್ತದೆ. ಮೇಲಾಗಿ ಕಾರ್ಯಕರ್ತ ತನ್ನ ಸಮಯೋಚಿತ ಮಾತು, ನಡೆನುಡಿಗಳಿಂದ ಅವನ ಮನಸ್ಸನ್ನು ಗೆಲ್ಲಬೇಕು. ಅವನಿಗೆ ಹಸ್ತಪ್ರತಿಗಳ ಬಗೆಗೆ ಅವುಗಳನ್ನು ಭಂಡಾರಗಳಲ್ಲಿ ಸಂರಕ್ಷಿಸುವ ವಿಧಾನಗಳ ಬಗೆಗೆ ವಿಶ್ವಾಸ ಬರುವಂತೆ ಹೇಳಬೇಕು ಜೊತೆಗೆ ಹಸ್ತಪ್ರತಿಗಳ ಬಗೆಗೆ ಜನರಲ್ಲಿ ತಿಳುವಳಿಕೆ ಬರುವಂತೆ ಆಯಾ ಗ್ರಾಮದ ಛಾವಡಿಯಲ್ಲೊ, ಶಾಲೆಯಲ್ಲಿಯೋ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವುದು. ಹಸ್ತಪ್ರತಿಗಳ ಸಂರಕ್ಷಣೆಯ ಮಹತ್ವನ್ನು ಜೊತೆಗೆ ಹಸ್ತಪ್ರತಿಗಳ ಬಗೆಗೆ ಪ್ರತಿಬಿಂಬಿಸುವ ವಿಡಿಯೋ ಪ್ರದರ್ಶನ ಇತ್ಯಾದಿಗಳನ್ನು ಏರ್ಪಾಡು ಮಾಡುವುದು. ಕೆಲವರಿಗೆ ಹಸ್ತಪ್ರತಿಗಳು ತಮ್ಮ ಮನೆಯಲ್ಲಿಯೇ ಇದ್ದರೂ ಅವುಗಳ ಸ್ವರೂಪ ಗೊತ್ತಿರುವುದಿಲ್ಲ. ಕ್ಷೇತ್ರಕಾರ್ಯಕರ್ತ ಮಾದರಿಗಾಗಿ ತೆಗೆದುಕೊಂಡು ಬಂದ ತಾಳೆಪ್ರತಿ / ಕಾಗದ ಪ್ರತಿಗಳನ್ನು ತೋರಿಸಿದಾಗ ಅವರಿಗೆ ನಮ್ಮ ಮನೆಯಲ್ಲಿಯೂ ಇಂತಹುಗಳಿವೆ ಎಂಬುದು ಅರಿವಿಗೆ ಬರುತ್ತದೆ. ಆದ್ದರಿಂದ ಮಾದರಿಗಾಗಿ ಎರಡು ಹಸ್ತಪ್ರತಿಗಳನ್ನು ಕ್ಷೇತ್ರಕಾರ್ಯಕ್ಕೆ ಹೋಗುವಾಗ ತೆಗೆದುಕೊಂಡಿರಬೇಕು. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ಬಳ್ಳಾರಿ ಜಿಲ್ಲೆಯ ಆಯ್ದು ಗ್ರಾಮಗಳಲ್ಲಿ ಈ ವಿಷಯವನ್ನು ಕುರಿತು ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿದಾಗ ಸಾರ್ವಜನಿಕರು ಮುಕ್ತವಾಗಿ ಹಸ್ತಪ್ರತಿಗಳನ್ನು ನೀಡಿದ್ದನ್ನು ಇಲ್ಲಿ ನೆನೆಯಬಹುದು.