.೨. ಉತ್ತರ ಕರ್ನಾಟಕ

ಉತ್ತರ ಕರ್ನಾಟಕದ ಸಂಶೋಧನೆಗಾಗಿ ಮುಂಬೈ ಸರಕಾರ ೧೯೩೮ರಲ್ಲಿ ಕನ್ನಡ ಸಂಶೋಧನ ಸಂಸ್ಥೆಯನ್ನು ಸ್ಥಾಪಿಸಿತು. ಪ್ರಥಮ ನಿರ್ದೇಶಕರಾಗಿದ್ದ ಶ್ರೀ ಆರ್‌. ಎಸ್‌. ಪಂಚಮುಖಿಯವರ ಕಾಲದಿಂದಲೇ ಈ ಸಂಸ್ಥೆ ಹಸ್ತಪ್ರತಿಗಳ ಸಂಗ್ರಹ ಕಾರ್ಯವನ್ನು ಕೈಗೆತ್ತಿಕೊಂಡಿತು. ಜೊತೆಗೆ ಬೇರೆ ಬೇರೆ ಹಸ್ತಪ್ರತಿ ಭಾಂಡಾರಗಳಲ್ಲಿದ್ದ ಅಪೂರ್ವ ಕೃತಿಗಳನ್ನು ನಕಲು ಮಾಡಿಸಿ ಸಂರಕ್ಷಿಸುವ ಕಾರ್ಯವನ್ನು ಮಾಡಿದೆ. ಈವರೆಗೆ ಸುಮಾರು ೩೦೦೦ ಹಸ್ತಪ್ರತಿಗಳು ಸಂಗ್ರಹವಾಗಿದ್ದು, ಪ್ರಾಚೀನ ಹಸ್ತಪ್ರತಿ ವಿರಣಾತ್ಮಕ ಸೂಚಿ ಹೆಸರಿನಲ್ಲಿ ೧೪ ಸಂಪುಟಗಳನ್ನು ಈ ಸಂಸ್ಥೆ ಪ್ರಕಟಿಸಿದೆ. ಕವಿ ಜಿಹ್ವಾಬಂಧನ, ಮದನ ತಿಲಕ, ಸಮಯ ಪರೀಕ್ಷೆ, ಚಾವುಂಡರಾಯ ಪುರಾಣ ಮುಂತಾದ ಕೃತಿಗಳನ್ನು ಪ್ರಕಟಿಸಲಾಗಿದೆ. ೧೯೯೨ರಲ್ಲಿ ಡಾ. ಎಂ. ಎಂ. ಕಲಬುರ್ಗಿಯವರ ಪ್ರಯತ್ನದಿಂದಾಗಿ ಈ ಸಂಸ್ಥೆಯ ಹಸ್ತಪ್ರತಿಗಳನ್ನು ಕನ್ನಡ ಅಧ್ಯಯನ ಪೀಠಕ್ಕೆ ವರ್ಗಾಯಿಸಲಾಗಿದೆ.

ಕರ್ನಾಟಕ ವಿಶ್ವವಿದ್ಯಾಯಲಯದ ಕನ್ನಡ ಅಧ್ಯಯನ ಪೀಠವು ೧೯೬೨ರಲ್ಲಿ ಸಮಗ್ರ ವಚನ ವಾಙ್ಮಯದ ಪರಿವೀಕ್ಷಣೆ, ಪರಿಷ್ಕರಣ, ಪ್ರಕಟನ ಯೋಜನೆಯನ್ನು ಹಾಕಿಕೊಂಡಿತು. ಡಾ. ಆರ್‌. ಸಿ. ಹಿರೇಮಠ ಅವರ ನಿರ್ದೇಶನದಲ್ಲಿ ಈ ಯೋಜನೆಯ ಅಂಗವಾಗಿ ಹಸ್ತಪ್ರತಿ ಸಂಗ್ರಹ, ಸಂಸ್ಕರಣ, ಪ್ರಕಟನ ಕೆಲಸಗಳು ಮುನ್ನಡೆದವು. ೧೯೭೨ ರಿಂದ ೧೯೭೨ ರ ವರೆಗೆ ಹತ್ತು ವರುಷಗಳ ಕಾಲ ಹಸ್ತಪ್ರತಿಗಳ ಸಂಗ್ರಹ ಕಾರ್ಯ ತೀವ್ರಗತಿಯಲ್ಲಿ ನಡೆಯಿತು. ಈ ಅವಧಿಯಲ್ಲಿ ಅಧ್ಯಾಪಕ ವರ್ಗದವರೂ, ಸಹಾಯಕ ಸಂಶೋಧಕರೂ ಶ್ರಮವಹಿಸಿ ಹಸ್ತಪ್ರತಿಗಳನ್ನು ಸಂಗ್ರಹಿಸಿದರು. ವಿಭಾಗದ ಮುಖ್ಯಸ್ಥರಾಗಿ ಡಾ. ಆರ್‌. ಸಿ. ಹಿರೇಮಠ, ಡಾ. ಎಂ. ಎಸ್‌. ಸುಂಕಾಪುರ, ಡಾ. ಎಂ. ಎಂ. ಕಲಬುರ್ಗಿ ಅವರು ಸಲ್ಲಿಸಿದ ಸೇವೆ ವಿಶಿಷ್ಟವಾಗಿದೆ. ಈವರೆಗೆ ಇಲ್ಲಿ ೪೩೬೦ ಕನ್ನಡ, ೫೬೫ ಸಂಸ್ಕೃತ, ೩೫ ಮರಾಠಿ, ೩೮ ತೆಲುಗು, ೬ ತಮಿಳು ಹಸ್ತಪ್ರತಿ ಕಟ್ಟುಗಳು ಸಂಗ್ರಹಿತವಾಗಿವೆ. ಇವುಗಳಲ್ಲಿ ವಚನ ಸಾಹಿತ್ಯಕ್ಕೆ ಸಂಬಂಧಪಟ್ಟ ಕೃತಿಗಳ ಸಂಖ್ಯೆ ದೊಡ್ಡದು. ಹಸ್ತಪ್ರತಿಗಳಲ್ಲದೆ ಕಡತ, ಲೇಖನಸಾಮಗ್ರಿಗಳೂ ಇಲ್ಲಿವೆ. ಈ ಸಂಗ್ರಹದಲ್ಲಿ ಡಾ. ಫ. ಗು. ಹಳಕಟ್ಟಿ ಅವರು ಸಂಗ್ರಹಿಸಿದ್ದ ೧೦೦೦ ಕಟ್ಟುಗಳೂ ಸೇರಿಕೊಂಡಿವೆ. ಡಾ. ಎಂ. ಎಂ. ಕಲಬುರ್ಗಿಯವರು ಮುಖ್ಯಸ್ಥರಾಗಿದ್ದ ಕಾಲದಲ್ಲಿ ಒಂದು ಸಾವಿರ ಕಟ್ಟುಗಳ (ಒಂದೊಂದು ಸಂಪುಟಕ್ಕೆ ೧೦೦ ಕಟ್ಟುಗಳಂತೆ) ಹತ್ತು ವಿವರಣಾತ್ಮಕ ಹಸ್ತಪ್ರತಿ ಸೂಚಿ ಸಂಪುಟಗಳು ಸಿದ್ಧವಾದವು. ಇವುಗಳಲ್ಲಿ ೨, ೩, ೪, ೫, ನೆಯ ಸಂಪುಟಗಳನ್ನು ಹೊರತು ಪಡಿಸಿ ಉಳಿದವುಗಳು ೧೯೯೨ರಲ್ಲಿ ಪ್ರಕಟವಾದವು. ಇವುಗಳಲ್ಲಿ ೧ನೆಯ ಸಂಪುಟದ ಸಂಪಾದಕರು ಡಾ. ಬಿ. ಆರ್‌. ಹಿರೇಮಠ, ೬ ರಿಂದ ೧೦ ಸಂಪುಟಗಳ ಸಂಪಾದಕರು ಡಾ. ವೀರಣ್ಣ ರಾಜೂರ ಅವರು. ಉಳಿದ ಕಟ್ಟುಗಳ ಸೂಚೀಕಾರ್ಯ ಪೂರ್ಣಗೊಂಡಿದ್ದು, ಅವುಗಳು ಪ್ರಕಟವಾಗಬೇಕಿವೆ. ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ, ಸಿದ್ಧರಾಮರ ವಚನಗಳ ಸಮಗ್ರ ಸಂಪುಟಗಳು, ಶಿವಶರಣೆಯರ ವಚನಗಳ ಸಮಗ್ರ ಸಂಪುಟ, ಸಕಲ ಪುರಾತನರ ವಚನಗಳು (ಸಂಪುಟ ೧, ೨, ೩), ಶೂನ್ಯಸಂಪಾದನೆಗಳು, ಹರಿಹರನ ರಗಳೆಗಳ ಸಂಪುಟಗಳು, ಮಲ್ಲಿನಾಥ ಪುರಾಣ, ಧರ್ಮಾಮೃತ ಪುರಾಣ, ಬಸವಣ್ಣನವರ ಟೀಕಿನ ಚನಗಳು ಮೊದಲಾದ ವಚನ ಸಂಪುಟಗಳು, ಕಾವ್ಯಗಳು ಇಲ್ಲಿ ಪ್ರಕಟಗೊಂಡಿವೆ.

ಧರ್ಮ, ಶಿಕ್ಷಣ, ಸಂಸ್ಕೃತಿಗಳ ಅಭಿವೃದ್ಧಿಯಲ್ಲಿ ಮಠ ಮಾನ್ಯಗಳ ಕೊಡುಗೆ ಹಿರಿದಾದುದು. ಹಲವಾರು ಮಠಗಳಲ್ಲಿ ಪ್ರಾಚೀನ ಕಾಲದಿಂದಲೂ ಹಸ್ತಪ್ರತಿ ಸಂಪತ್ತು ಬೆಳೆಯುತ್ತ ಬಂದಿದೆ. ಮಠಾಧಿಪತಿಗಳು ಭಕ್ತರ ಮನೆಗೆ ಬಿನ್ನಕ್ಕೆ ಹೋದಾಘ ಜಗುಲಿಯ ಮೇಲೆ ಪೂಜೆಗೊಳ್ಳುತ್ತಿದ್ದ ಹಸ್ತಪ್ರತಿಗಳನ್ನು ತಂದು ಮಠದಲ್ಲಿ ಸಂರಕ್ಷಣೆ ಮಾಡುತ್ತ ಬಂದಿರುವುದು. ಸ್ವತಃ ಭಕ್ತಾದಿಗಳೇ ಮನಃಪೂರ್ವಕವಾಗಿ ತಮ್ಮಲ್ಲಿದ್ದ ಹಸ್ತಪ್ರತಿಗಳನ್ನು ಮಠಕ್ಕೆ ಒಪ್ಪಿಸಿದುದನ್ನು ಚರಿತ್ರೆಯುದ್ದಕ್ಕೂ ಕಾಣುತ್ತೇವೆ. ಅಂಥವುಗಳಲ್ಲಿ ಉತ್ತರ ಕರ್ನಾಟಕದ ಮೂರು ಮಠಗಳು ಹಸ್ತಪ್ರತಿ ಸಂಗ್ರಹದಲ್ಲಿ ಗಮನಾರ್ಹವಾದ ಸಾಧನೆಯನ್ನು ಮಾಡಿವೆ. ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಮಠದಲ್ಲಿ ಸುಮಾರು ೬೦೦ ತಾಳೆಯೋಲೆ – ಕಾಗದ ಪ್ರತಿಗಳ ಸಂಗ್ರಹವಿದೆ. ಡಾ. ಸಿದ್ಧಲಿಂಗಮಹಾಸ್ವಾಮಿಗಳ ಶೈಕ್ಷಣಿಕ ಆಸಕ್ತಿ, ಡಾ. ಎಂ. ಎಂ. ಕಲಬುರ್ಗಿಯವರ ನಿರ್ದೇಶನದಿಂದಾಗಿ ಹಲವಾರು ವೀರಶಯವ ಅಪ್ರಕಟಿತ ಪ್ರಾಚೀನ ಸಾಹಿತ್ಯವನ್ನು ಪ್ರಕಟಿಸುತ್ತಿರುವುದು ಈ ಮಠದ ವಿಶೇಷತೆಯಾಗಿದೆ. ಇಲ್ಲಿರುವ ೪೩೩ ಕಟ್ಟುಗಳ ವಿವರಗಳನ್ನು ಶ್ರೀ ಎಸ್‌. ಶಿವಣ್ಣವರು “ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಹಸ್ತಪ್ರತಿ ಸೂಚಿ” ಹೆಸರಿನಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ವೀರಶೈವ ಅಪ್ರಕಟಿತ ಗ್ರಂಥ ಸೂಚಿ (೧೯೮೨), ವೀರಶೈವ ಹಸ್ತಪ್ರತಿ  ಪುಷ್ಟಿಕೆಗಳು (೧೯೯೪). ಸಿರುಮಣಶಾಂತದೇವರ ವಚನ ಸಂಕಲನ ಮುಂತಾದ ೧೫೦ ಕೃತಿಗಳನ್ನು ಪ್ರಕಟಿಸಿದುದು ಈ ಮಠದ ವೈಶಿಷ್ಟ್ಯವಾಗಿದೆ.

ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರುಸಾವಿರ ಮಠ ಈ ಭಾಗದ ಮತ್ತೊಂದು ಮಹತ್ವದ ಮಠ. ಒಂದು ಕಾಲದಲ್ಲಿ ಈ ಮಠದ ಆಶ್ರಯದಲ್ಲಿದ್ದ ಓಲೆ ಮಠದಲ್ಲಿ ಅಪಾರ ಸಂಖ್ಯೆಯ ಹಸ್ತಪ್ರತಿಗಳಿದ್ದುವೆಂದು ತಿಳಿದುಬರುತ್ತದೆ. ವೇದ, ಆಗಮ, ಉಪನಿಷತ್ತು, ಪುರಾಣ, ಚರಿತ್ರೆ, ಕಾವ್ಯ, ನಾಟಕ, ವ್ಯಾಕರಣ, ಛಂದಸ್ಸು, ವೀರಶಯವಾಗಮಾದಿ ವೇದಾಂತ ಧರ್ಮಶಾಸ್ತ್ರಗಳು, ಶತಕ, ರಗಳೆ, ತ್ರಿಪದಿ, ಕಂದ, ಗದ್ಯ, ವಚನ ವಾಙ್ಮಯ ಕುರಿತಾದ ಹಸ್ತಪ್ರತಿಗಳು ಇಲ್ಲಿವೆ. ೬೫೮ ಕಟ್ಟುಗಳ ಹಸ್ತಪ್ರತಿ ಸೂಚಿ ಸಂಪುಟವನ್ನು ಶ್ರೀ ಕೆಳದಿ ಗುಂಡಾಜೋಯಿಸ್‌ಅವರು ೧೯೮೯ ರಲ್ಲಿ ಸಿದ್ಧಪಡಿಸಿ ಪ್ರಕಟಿಸಿದ್ದಾರೆ. ಬೆಳಗಾವಿಯ ಶ್ರೀ ನಾಗನೂರು ರುದ್ರಾಕ್ಷಿ ಮಠವು ಇತ್ತೀಚೆಗೆ ಹಸ್ತಪ್ರತಿಗಳ ಸಂಗ್ರಹ ಕಾರ್ಯವನ್ನು ವ್ಯಾಪಕವಾಗಿ ಕೈಕೊಂಡಿದೆ. ಈ ಮಠದ ಇಂದಿನ ಅಧ್ಯಕ್ಷರಾದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳ ಪ್ರೋತ್ಸಾಹದಿಂದಾಗಿ ಮುನ್ನೂರಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಸಂಗ್ರಹಿಸಲಗಿದೆ. ಬೆಳಗಾವಿ ಪ್ರದೇಶದಲ್ಲಿರುವ ಹಸ್ತಪ್ರತಿಗಳ ಪರಿವೀಕ್ಷಣೆ, ಸಂಗ್ರಹ ಕಾರ್ಯವನ್ನು ಈ ಮಠ ಕೈಕೊಂಡಿದ್ದು ಸ್ವಾಗತಾರ್ಹವಾದುದು. ಡಾ. ಎಸ್‌. ಆರ್‌. ಗುಂಜಾಳ ಅವರ ನಿರ್ದೇಶನದಲ್ಲಿ ಹಸ್ತಪ್ರತಿ ಭಾಂಡಾರ, ವೀರಶಯವ ಸಂಶೋಧನ ಗ್ರಂಥಾಲಯ, ಪ್ರಕಟನ ಕಾರ್ಯಗಳು ಮುನ್ನಡೆದಿವೆ. ೧೯೯೮ರಲ್ಲಿ ಡಾ. ಪಂಡಿತ, ಕೆ. ರಾಠೋಡ ಅವರು ಸಿದ್ಧಪಡಿಸಿದ ನಾಗನೂರು ರುದ್ರಾಕ್ಷಿ ಮಠದ ಹಸ್ತಪ್ರತಿ ಸೂಚಿ ಸಂಪುಟವನ್ನು ಪ್ರಕಟಿಸಲಾಗಿದೆ.

ಹೀಗೆ ಉತ್ತರ ಕರ್ನಾಟಕದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ, ಗದಗ, ಹುಬ್ಬಳ್ಳಿ, ಬೆಳಗಾವಿಯ ವೀರಶೈವ ಮಠಗಳು ಹಸ್ತಪ್ರತಿ ಸಂಗ್ರಹ ಕಾರ್ಯವನ್ನು ಕೈಕೊಂಡು ಸಾವಿರಾರು ಹಸ್ತಪ್ರತಿಗಳನ್ನು ಸಂಗ್ರಹಿಸಿವೆ. ಇಷ್ಟಾದರೂ ಬೆಳಗಾವಿ, ಬಿಜಾಪುರ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಸ್ತಪ್ರತಿಗಳ ಸರ್ವೇಕ್ಷಣೆ, ಸಂಗ್ರಹಕಾರ್ಯಕ್ಕಾಗಿ ಕ್ಷೇತ್ರಕಾರ್ಯ ಕೈಕೊಳ್ಳುವುದು ಅವಶ್ವಯವಿದೆ.

.೩. ಹೈದ್ರಾಬಾದ್ಕರ್ನಾಟಕ

ಬೀದರ, ಗುಲಬರ್ಗಾ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳು ಹೈದ್ರಾಬಾದ್‌ಕರ್ನಾಟಕದ ವ್ಯಾಪ್ತಿಗೆ ಬರುವಂಥವುಗಳು. ಹಿಂದುಳಿದ ಪ್ರದೇಶವೆಂದು ಗುರುತಿಸಲ್ಪಡುವ ಈ ಜಿಲ್ಲೆಗಳಲ್ಲಿ ಹಸ್ತಪ್ರತಿಗಳ ಸರ್ವೇಕ್ಷಣೆ, ಸಂಗ್ರಹ ಕಾರ್ಯವೂ ತುಂಬಾ ಹಿಂದೆ ಬಿದ್ದಿದೆ. ೧೯೭೦ಕ್ಕಿಂತ ಪೂರ್ವದಲ್ಲಿ ಗುಲಬರ್ಗಾ ವಿಶ್ವಿವದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯು ಅಸ್ತಿತ್ವಕ್ಕೆ ಬಂದರೂ, ಹಸ್ತಪ್ರತಿಗಳ ಸಂಗ್ರಹಕಾರ್ಯ ಪ್ರಾರಂಭವಾದುದು ೧೯೮೫ರಲ್ಲಿ. ಸುಮಾರು ೨೦೦೦ ಹಸ್ತಪ್ರತಿಗಳನ್ನು ಈ ಸಂಸ್ಥೆ ಸಂಗ್ರಹಿಸಿದ್ದು, ಇವುಗಳ ಸೂಚಿ ಸಂಪುಟ ಪ್ರಕಟವಾಗಬೇಕಿದೆ. ಜೊತೆಗೆ ಈ ಭಾಗದಲ್ಲಿರುವ ಹಸ್ತಪ್ರತಿಗಳ ಸಂಗ್ರಹಕ್ಕಾಗಿ ವ್ಯಾಪಕ ಕ್ಷೇತ್ರಕಾರ್ಯವನ್ನು ಕೈಕೊಳ್ಳಬೇಕಾಗಿದೆ.

ಕನ್ನಡ ಕನ್ನಡಿಗ ಕರ್ನಾಟಕ ಸಂಸ್ಕೃತಿಯ ಶೋಧ ಮತ್ತು ಪ್ರಸಾರಕ್ಕಾಗಿ ಹಂಪಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಕನ್ನಡ ವಿಶ್ವಿವಿದ್ಯಾಲಯವು ಪ್ರಾಚೀನ ಆಕರ ಸಾಮಗ್ರಿಗಳನ್ನು ಸಂಗ್ರಹಿಸುವ ಕಾರ್ಯವನ್ನು ನಿರಂತರವಾಗಿ ಕೈಕೊಂಡು ಬರುತ್ತಲಿದೆ. ಅಂಥವುಗಳಲ್ಲಿ ಹಸ್ತಪ್ರತಿಗಳು ಮುಖ್ಯವಾದವುಗಳು. ೧೯೯೬ರಲ್ಲಿ ಅಸ್ತಿತ್ವಕ್ಕೆ ಬಂದ ಹಸ್ತಪ್ರತಿಶಾಸ್ತ್ರ ವಿಭಾಗವು ಹಸ್ತಪ್ರತಿಗಳ ಸರ್ವೇಕ್ಷಣೆ, ಸಂಗ್ರಹ, ಸೂಚೀರಚನೆ, ಸಂಪಾದನೆ, ಅಧ್ಯಯನ ವಿಚಾರ ಸಂಕಿರಣ ಮುಂತಾದ ಯೋಜನೆಗಳನ್ನು ಹಾಕಿಕೊಂಡಿದೆ. ಇದರನ್ವಯ ಈಗಾಗಲೇ ಒಂದು ಸಾವಿರ ಹಸ್ತಪ್ರತಿಗಳನ್ನು ಸಂಗ್ರಹಿಸಿ ಭಾಂಡರದಲ್ಲಿ ಸಂರಕ್ಷಿಸವಾಗುತ್ತಿದೆ. “ಬಳ್ಳಾರಿ ಜಿಲ್ಲೆಯ ಹಸ್ತಪ್ರತಿಗಳ ಸರ್ವೇಕ್ಷಣೆ ಹಾಗೂ ಸಂಗ್ರಹ” ಯೋಜನೆಯನ್ವಯ ವಿಭಾಗದ ಅಧ್ಯಾಪಕರಾದ ಡಾ. ಎಫ್‌. ಟಿ. ಹಳ್ಳಿಕೇರಿ, ಡಾ. ವೀರೇಶ ಬಡಿಗೇರ, ಡಾ. ಕೆ. ರವೀಂದ್ರನಾಥ್‌, ಶ್ರೀ ಎಸ್‌. ಆರ್‌. ಚೆನ್ನವೀರಪ್ಪ ಅವರು ವ್ಯಾಪಕ ಕ್ಷೇತ್ರಕಾರ್ಯ ಕೈಕೊಂಡು ಹತ್ತು ಹಲವು ಹಳ್ಳಿಗಳನ್ನು ಸಂದರ್ಶಿಸಿ ಹಸ್ತಪ್ರತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಕುಲಪತಿಗಳಾದ ಡಾ. ಎಂ. ಎಂ. ಕಲಬುರ್ಗಿಯವರ ಮಾರ್ಗದರ್ಶನ, ವಿಭಾಗದ ಮುಖ್ಯಸ್ಥರಾದ ಪ್ರೊ. ಎ. ವಿ. ನಾವಡ ಅವರ ನೇತೃತ್ವದಲ್ಲಿ ಕೊಪ್ಪಳ, ರಾಯಚೂರು, ಗುಲಬರ್ಗಾ, ಬೀದರ ಜಿಲ್ಲೆಗಳಲ್ಲಿಯೂ ಹಸ್ತಪ್ರತಿ ಕ್ಷೇತ್ರಕಾರ್ಯ ಕೈಕೊಳ್ಳುವ ಯೋಜನೆಯನ್ನು ರೂಪಿಸಲಾಗಿದೆ.

ಈಗ ಸಂಗ್ರಹಿಸಿದ ಹಸ್ತಪ್ರತಿಗಳು ಕನ್ನಡ, ಸಂಸ್ಕೃತ, ತೆಲುಗು, ತಮಿಳು ಲಿಪಿಯನ್ನೊಳಗೊಂಡಿವೆ. ನಡುಗನ್ನಡ ಸಾಹಿತ್ಯದ ಹಲವಾರು ಕೃತಿಗಳು ಇಲ್ಲಿ ಸೇರ್ಪಡೆಗೊಂಡಿದ್ದು ವಿವಿಧ ಛಂದಸ್ಸಿನಲ್ಲಿ ರಚನೆಗೊಂಡಿವೆ. ವಿಶೇಷವಾಗಿ ಅಮರಕೋಶ, ಬಸವಪುರಾಣ. ಶಬರಶಂಕರ ವಿಳಾಸ, ಉದ್ಧರಣೆ ಪಟಲಗಳು ಕಡತಗಳೂ ಲಭ್ಯವಿವೆ. ಈ ಸಂಗ್ರಹದಿಂದಾಗಿ ಬಳ್ಳಾರಿ ಜಿಲ್ಲೆಯ ಲಿಪಿಕಾರರ ವಿವರಗಳು ದೊರಕಿದಂತಾಗಿವೆ. ಈ ಭಾಂಡಾರದ ೧ರಿಂದ ೪೦೦ ಕಟ್ಟುಗಳಲ್ಲಿ ಅಡಕವಾಗಿರುವ ೨೭೩ ಕನ್ನಡ ಕೃತಿಗಳ ವಿವರಗಳನ್ನು “ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಸೂಚಿ ಸಂಪುಟ-೧ ಎಂಬ ಹೆಸರಿನಡಿಯಲ್ಲಿ ಪ್ರಕಟಿಸಲಾಗಿದೆ. ಈ ಸಂಪುಟದ ಸಂಪಾದಕರು ಡಾ. ಎಫ್‌. ಟಿ. ಹಳ್ಳಿಕೇರಿ ಹಾಗೂ ಡಾ. ಕೆ. ರವೀಂದ್ರನಾಥ್‌ಅವರು. ಇಷ್ಟರಲ್ಲಿಯೇ ಡಾ. ವೀರೇಶ ಬಡಿಗೇರ ಹಾಗೂ ಎಸ್‌. ಆರ್‌. ಚೆನ್ನವೀರಪ್ಪ ಅವರು ಸಿದ್ಧಪಡಿಸಿದ ಸಂಪುಟ-೨ (೪೦೧ ರಿಂದ ೮೦೦ ಕಟ್ಟುಗಳು) ಪ್ರಕಟವಾಗಲಿದೆ. ಹೀಗೆ ಯೋಜನಾಬದ್ಧವಾದ ಕಾರ್ಯದ ಮೂಲಕ ಈ ವಿಭಾಗದ ಹಸ್ತಪ್ರತಿ ಕ್ಷೇತ್ರಕಾರ್ಯವನ್ನು ವ್ಯಾಪಕವಾಗಿ, ತ್ವರಿತವಾಗಿ ಕೈಕೊಂಡಿದೆ. ಹೈದ್ರಾಬಾದ್‌ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಸಮಗ್ರವಾದ ಹಸ್ತಪ್ರತಿ ಕ್ಷೆತ್ರಕಾರ್ಯ ಪೂರೈಸಿದರೆ ಹಲವಾರು ಅಪ್ರಕಟಿತ ಕೃತಿಗಳು ಲಭ್ಯವಾಗುವ ನಿರೀಕ್ಷೆಯಿದೆ.

.೪. ಕರಾವಳಿ ಕರ್ನಾಟಕ

ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಹಸ್ತಪ್ರತಿಗಳ ಪರಿವೀಕ್ಷಣೆ, ಸಂಗ್ರಹಕಾರ್ಯ ಅಷ್ಟೊಂದು ವ್ಯಾಪಕವಾಗಿ ನಡೆದಿಲ್ಲವಾದರೂ, ಕೆಲವು ಧಾರ್ಮಿಕ ಕೇಂದ್ರಗಳು, ಸಾರ್ವಜನಿಕ ಸಂಸ್ಥೆಗಳು ಈ ಕಾರ್ಯವನ್ನು ಸತತವಾಗಿ ಮುನ್ನಡೆಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ. ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ಶೈಕ್ಷಣಿಕ ಕ್ಷೇತ್ರದ ಮೇಲಿನ ಪ್ರೀತಿ, ಗೌರವದಿಂದಾಗಿ ಧರ್ಮಸ್ಥಳದಲ್ಲಿ ೧೯೮೮ರಲ್ಲಿ ಅಸ್ತಿತ್ವಕ್ಕೆ ಬಂದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನವು ಮೂರು ಸಾವಿರ ಹಸ್ತಪ್ರತಿಗಳನ್ನು ಸಂಗ್ರಹಿಸಿದೆ. ಪ್ರತಿಷ್ಠಾನದ ನಿರ್ದೇಶಕರಾದ ಪ್ರೊ. ಗೌ. ಮ. ಉಪಾಪತಿಶಾಸ್ತ್ರಿಗಳು ಹಸ್ತಪ್ರತಿ ಸಂಗ್ರಹ ಕಾರ್ಯದಲ್ಲಿ ವಿಶೇಷ ಅನುಭವ ಹೊಂದಿದವರು. ಇವರಿಗೆ ನೆರವಾಗುತ್ತಿರುವವರು. ಪ್ರೊ. ಎಸ್‌. ಡಿ. ಶೆಟ್ಟಿ ಹಾಗೂ ಶ್ರೀ ಎಸ್‌. ಆರ್‌. ವಿಘ್ನರಾಜ ಅವರು. ಇಲ್ಲಿಯ ಹಸ್ತಪ್ರತಿಗಳನ್ನು ವಿನೂತನ ಮಾದರಿಯಲ್ಲಿ ಸಂಸ್ಕರಿಸಿ ಸಂರಕ್ಷಿಸಲಾಗುತ್ತಿದೆ. ಯಕ್ಷಗಾನ ಹಸ್ತಪ್ರತಿಗಳ ವಿವರಣ ಸೂಚಿ (೧೯೯೩), ತುಳು ಲಿಪಿ ಹಸ್ತಪ್ರತಿಗಳ ಸೂಚಿ (೧೯೯೭), ಕನ್ನಡ ಹಸ್ತಪ್ರತಿ ಸೂಚಿ ಭಾಗ – ೧ (೨೦೦೦) ಎಂಬ ಮೂರು ಸೂಚಿ ಸಂಪುಟಗಳನ್ನು ಈ ಸಂಸ್ಥೆ ಪ್ರಕಟಿಸಿದೆ.

ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗವು ೧೯೮೨ರಲ್ಲಿ ಹಸ್ತಪ್ರತಿಗಳ ಸಂಗ್ರಹ ಕಾರ್ಯವನ್ನು ಕೈಕೊಂಡು ಸುಮಾರು ೪೦೦ ಹಸ್ತಪ್ರತಿಗಳನ್ನು ಸಂಗ್ರಹಿಸಿದೆ. ಕನ್ನಡ, ಸಂಸ್ಕೃತ, ತುಳು ಭಾಷೆಯ ಹಸ್ತಪ್ರತಿಗಳು ಇಲ್ಲಿವೆ. ಇವುಗಳ ವಿವರಣಾತ್ಮಕ ಸೂಚಿಯನ್ನು ಸಿದ್ಧಪಡಿಸಬೇಕಾಗಿದೆ. ಈ ಭಾಗದ ಮತ್ತೊಂದು ಮಹತ್ವದ ಸಾರ್ವಜನಿಕ ಸಂಸ್ಥೆ ‘ಕೆಳದಿ ವಸ್ತು ಸಂಗ್ರಹಾಲಯ’ ಶ್ರೀ ಕೆಳದಿ ಗುಂಡಾಜೋಯಿಸರು ಈ ಸಂಸ್ಥೆಯನ್ನು ೧೯೬೦ರಲ್ಲಿ ಅಸ್ತಿತ್ವಕ್ಕೆ ತಂದ ನಂತರ ಸುಮಾರು ೧೬೦೦ ರಷ್ಟು ಹಸ್ತಪ್ರತಿ ಕಟ್ಟುಗಳನ್ನು ಸಂಗ್ರಹಿಸಲಾಗಿದೆ. ಕನ್ನಡ, ಸಂಸ್ಕೃತ, ತೆಲುಗು ಭಾಷೆಯ ಕೃತಿಗಳಾಗಿರುವ ಇವು ಕನ್ನಡ, ದೇವನಾಗರಿ, ತೆಲುಗು, ತಿಗಳಾರಿ ಲಿಪಿಯಲ್ಲಿ ಬರೆಯಲ್ಪಟ್ಟಿವೆ. ವರ್ಣನಾತ್ಮಕ ಹಸ್ತಪ್ರತಿ ಸೂಚಿ ಹೆಸರಿನ ಒಂದು ಸಂಪುಟವನ್ನು ಈ ಸಂಸ್ಥೆ ಪ್ರಕಟಿಸಿದೆ. ಶ್ರವಣಬೆಳ್ಗೊಳದ ಶ್ರೀ ಜೈನಮಠದಲ್ಲಿಯೂ ಪ್ರಾಚೀನ ಹಸ್ತಪ್ರತಿಗಳಿದ್ದು, ಅವುಗಳ ಪ್ರಯೋಜನವನ್ನು ಸಾಕಷ್ಟು ವಿದ್ವಾಂಸರು ಪಡೆದುಕೊಂಡಿದ್ದಾರೆ. ಕೆ. ಭುಜಬಲಶಾಸ್ತ್ರಿ ಹಾಗೂ ದೇವಕುಮಾರ ಶಾಸ್ತ್ರಿಗಳು ಇಲ್ಲಿಯ ಹಸ್ತಪ್ರತಿಗಳ ಸೂಚಿಯನ್ನು ತಯಾರಿಸಿ ಪ್ರಕಟಿಸಿದ್ದಾರೆ. ಶ್ರೀ ಬಿ. ಎಸ್‌. ಸಣ್ಣಯ್ಯನವರು ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ (೧೯೯೭), ಪ್ರಾಕೃತ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ (೧೯೯೮) ಸಂಪುಟಗಳನ್ನು ಪ್ರಕಟಿಸಿದ್ದಾರೆ.

.೫. ಹೊರನಾಡು

ಕರ್ನಾಟಕೇತರ ರಾಜ್ಯಗಳಲ್ಲಿ ಹಸ್ತಪ್ರತಿಗಳ ಸಂಗ್ರಹ ಕಾರ್ಯ ನಡೆದಿರುವುದು ಗಮನಾರ್ಹವಾಗಿದೆ. ಮದ್ರಾಸಿನ ಗರ್ವನಮೆಂಟ್‌ಓರಿಯಂಟಲ್‌ಮ್ಯಾನುಸ್ಕ್ರಿಪ್ಟ್ಸ್‌ಲೈಬ್ರರಿ, ಹೈದ್ರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯ, ಬಿಹಾರ (ಆರಾ)ದ ದೇವಕುಮಾರ ಓರಿಯಂಟಲ್‌ಇನ್‌ಸ್ಟಿಟ್ಯೂಟ್‌, ಕೊಲ್ಲಾಪುರದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಜೈನ ಕೇಂದ್ರದ ಹಸ್ತಪ್ರತಿಗಳ ಸುಚಿಯನ್ನು ಡಾ. ಎಂ. ಎಂ. ಕಲಬುರ್ಗಿ, ಡಾ. ಬಿ. ಆರ್‌. ಹಿರೇಮಠ, ಡಾ. ಎಸ್‌. ವಿ. ಅಯ್ಯನಗೌಡರ ಅವರ ಸಂಪಾದಕತ್ವದಲ್ಲಿ ಸಿದ್ಧಪಡಿಸಿ ಪ್ರಕಟಿಸಲಾಗಿದೆ. ೧೯೯೧ರಲ್ಲಿ ಡಾ. ಎಂ. ಎಂ. ಕಲಬುರ್ಗಿಯವರು ನೆರೆಯ ರಾಜ್ಯಗಳ ಕನ್ನಡ ಹಸ್ತಪ್ರತಿಗಳ ಸಂಗ್ರಹ ಯೋಜನೆಯೊಂದನ್ನು ಹಾಕಿಕೊಂಡು ಹಲವಾರು ಹಸ್ತಪ್ರತಿಗಳನ್ನು ಸಂಗ್ರಹಿಸಿದ್ದಾರೆ. ಅವುಗಳ ಸೂಚಿ ಸಂಪುಟಗಳು ಪ್ರಕಟವಾಗಬೇಕಿವೆ. ಡಾ. ವಿ. ಶಿವಾನಂದ ಅವರು ‘ಉತ್ತರ ಭಾರತದ ಕನ್ನಡ ಹಸ್ತಪ್ರತಿ ಮತ್ತು ಇತರ ದಾಖಲಾತಿಗಳ ಸೂಚಿ’ಯೊಂದನ್ನು ಬನಾರಸ್‌ಹಿಂದೂ ವಿಶ್ವವಿದ್ಯಾನಿಲಯದ ಕನ್ನಡ ಪೀಠದಿಂದ ಪ್ರಕಟಿಸಿದ್ದಾರೆ. ಹೈದ್ರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಸುಮಾರು ೩೦೦ ಕನ್ನಡ ಹಸ್ತಪ್ರತಿಗಳಿದ್ದು, ಅವುಗಳ ಸೂಚಿ ಸಂಪುಟವೂ ಪ್ರಕಟವಾಗಿದೆ.

ಹೀಗೆ ಹಸ್ತಪ್ರತಿಗಳ ಕ್ಷೇತ್ರಕಾರ್ಯ ಕರ್ನಾಟಕದ ಒಳಗೆ ಹೊರೆಗೂ ನಡೆದರೂ ಹಲವಾರು ಹಸ್ತಪ್ರತಿಗಳು ಮರೆಯಾಗಿ ಉಳಿದಿವೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಮಠಮಾನ್ಯಗಳು, ಸಾರ್ವಜನಿಕ ಸಂಘ ಸಂಸ್ಥೆಗಳು ಕಾಲಬದ್ಧ ಯೋಜನೆಯನ್ನು ಹಾಕಿಕೊಂಡು ಕ್ಷೇತ್ರಕಾರ್ಯ ಕೈಕೊಳ್ಳಬೇಕು. ಇದಕ್ಕಾಗಿ ಈ ಕ್ಷೇತ್ರದಲ್ಲಿ ಶ್ರದ್ಧೆ, ನಿಷ್ಠೆ, ಆಸಕ್ತಿಯುಳ್ಳ ಯುವಕರು ಮುಂದೆ ಬರಬೇಕಾಗಿದೆ. ಅಂದಾಗ ಮಾತ್ರ ಹಸ್ತಪ್ರತಿಗಳ ಸಂಗ್ರಹ ಕಾರ್ಯ ಭಾಗಶಃ ಪೂರ್ಣಗೊಂಡಂತಾಗುತ್ತದೆ.

. ಹಸ್ತಪ್ರತಿ ಕ್ಷೇತ್ರಕಾರ್ಯ : ವಿದ್ವಾಂಸರ ಅನುಭವಗಳು, ಅಭಿಪ್ರಾಯಗಳು

. ಡಾ. ಜಿ. ವರದರಾಜರಾಯರು

ನನ್ನ ವಿದ್ಯಾರ್ಥಿ ಮಿತ್ರರೊಂದಿಗೆ ಆಗಿದ್ದಾಗ್ಗೆ ಹಸ್ತಪ್ರತಿಗಳ ವಿಚಾರವಾಗಿ ಪ್ರಸ್ತಾಪಿಸುತ್ತಿದ್ದೆ. ಅವರು ರಜಾಕಾಲದಲ್ಲಿ ಊರಿಗೆ ಹೋಗುವಾಗ, ತಮ್ಮ ತಮ್ಮ ಊರಿನಲ್ಲಿ ಹಸ್ತಪ್ರತಿಗಳೇನಾದರೂ ದೊರೆತರೆ ತಪ್ಪದೆ ತರಬೇಕೆಂದು ಜ್ಞಾಪಿಸುತ್ತಿದ್ದೆ. ಆ ಮೇರೆಗೆ ಎಷ್ಟೊ ಜನ ವಿದ್ಯಾರ್ಥಿ ಮಿತ್ರರು ಆಗಿದ್ದಾಗ್ಗೆ ಹಸ್ತಪ್ರತಿಗಳನ್ನು ತಂದುಕೊಡುತ್ತಿದ್ದರು. ಒಮ್ಮೆ, ಒಬ್ಬ ವಿದ್ಯಾರ್ಥಿ ಹಸ್ತಪ್ರತಿಗಳ ಒಂದು ಕಟ್ಟನ್ನೇ ತಂದು, ಅವುಗಳಲ್ಲಿ ಏನಿದೆಯೆಂದು ಕೇಳಿದನು. ಅವುಗಳಲ್ಲಿ ಬಹುಪಾಲು ಯಕ್ಷಗಾನಕ್ಕೆ ಸಂಬಂಧಿಸಿದ ಕಟ್ಟುಗಳಿದ್ದವು. ಕುಮಾರರಾಮನ ವಿಚಾರವಾಗಿ ಸಂಡುರಿನ ಸುತ್ತಮುತ್ತ ಪ್ರಚಲಿತವಿರುವ ಕಥೆಗಳನ್ನು ಬರೆದು ತರಬೇಕೆಂದು ಒಬ್ಬ ವಿದ್ಯಾರ್ಥಿಗೆ ಹೇಳು, ಆತನು ಅದೇ ರೀತಿ ಮಾಡಿದುದಲ್ಲದೆ, ಪಾಂಚಾಳಗಂಗನ ಕುಮಾರರಾಮನ ಸಾಂಗತ್ಯದ ಪ್ರತಿಯೊಂದನ್ನು ತಂದುಕೊಟ್ಟನು. ಆಗ ನನಗೆ ಆದ ಆನಂದ ಹೇಳತೀರದು. ಒಂದು ದಿನ, ನನ್ನಲ್ಲಿ ಶೇಖರವಾಗಿದ್ದ ಹಸ್ತಪ್ರತಿಗಳನ್ನು ಬಿಡುವಾಗಿ ನೋಡುತ್ತಿದ್ದಾಗ, ನನ್ನ ಸಂಗ್ರಹದಲ್ಲಿಯೇ ಪಾಂಚಾಳಗಂಗನು ಬರೆದ ಕೃತಿಯ ಒಂದು ಓಲೆಯ ಪ್ರತಿ ಇರುವುದನ್ನು ಕಂಡು ವಿಸ್ಮಯವಾಯಿತು. ಕುಮಾರರಾಮನನ್ನು ಕುರಿತ ನನ್ನ ಅಧ್ಯಯನ ಮುಗಿಯುವವರೆಗೆ, ಹಸ್ತಪ್ರತಿಗಳಿಗಾಗಿ ತೊಳಲಾಡಿದ ಇಂಥ ಪ್ರಸಂಗಗಳು ಹಲವಾರಿವೆ.

.೨. ಪ್ರೊ. ಗೌ. ಮ. ಉಮಾಪತಿಶಾಸ್ತ್ರಿ

ಈ ಹಸ್ತಪ್ರತಿಗಳನ್ನು ಸಂಗ್ರಹಿಸುವಲ್ಲಿ ನನಗಾದ ಪರಿಶ್ರಮ ಕೆಲವೊಮ್ಮೆ ಮಾನಸಿಕ ವ್ಯಥೆ ಹೇಳತೀರದು. ಒಂದು ಸಲ ಒಬ್ಬ ಕನ್ನಡ ಶಿಕ್ಷಕ ನನಗೆ ಮೈಸೂರು ಅರಮನೆ ಗ್ರಂಥಮಾಲೆಯ ಕೆಲವು ಸಂಸ್ಕೃತ ಪುರಾಣ ಗ್ರಂಥಗಳನ್ನು, ಕೆಲವು ಹಸ್ತಪ್ರತಿಗಳನ್ನು ತಂದುಕೊಟ್ಟ, ಅವನ್ನು ನಾನು ಬೆಲೆಗೆ ಕೊಂಡುಕೊಂಡೆ. ಅವನು ನಮ್ಮ ಮನೆಯಲ್ಲಿ ಉಂಡು, ಪ್ರವಾಸದ ಖರ್ಚಿಗೆಂದು ಮೇಲೆ ಹಣ ಪಡೆದು ಹೋಗುತ್ತಿದ್ದ. ನಾನು ಅವನಿಗೆ ೪೦೦ ರೂಪಾಯಿ ಮಾತ್ರ ಬಾಕಿ ಕೊಡಬೇಕಾಗಿತ್ತು. ಆ ಪುಸ್ತಕಗಳ ಮೇಲೆ ಅವನ ಹೆಸರಿನ ರಬ್ಬರ್‌ಸಿಕ್ಕಾ (Seal) ಇತ್ತು. ಅದಕ್ಕಾಗಿ ಅವನ್ನು ನಾನು ಕೊಂಡ ಬಗ್ಗೆ ಲಿಖಿತದಲ್ಲಿ ಬರೆದು ಕೊಡಲು ಹೇಳಿದೆ. ಅವನು ಇನ್ನೆರಡು ದಿನಗಳಲ್ಲಿ ಬರುವೆನೆಂದು ಹೇಳಿ ಹೋದವನು ನನ್ನ ಮೇಲೆ ಕೇಸು ಹಾಕಿದ. ನೂರಾರು ರೂಪಾಯಿ ನನ್ನಿಂದ ಬರಬೇಕಾಗಿದೆಯೆಂದು ತಕರಾರು ಮಾಡಿದ್ದ. ಕೋರ್ಟಿನಿಂದ ನನಗೆ ಸಮನು ಬಂದಿತು. ನ್ಯಾಯಾಧೀಶರ ಮುಂದೆ ನಿಜ ಸಂಗತಿ ಹೇಳಿದೆ. ೪೦ ರೂಪಾಯಿಗಳನ್ನು ಸರಕಾರಿ ಖಜಾನೆಗೆ ಕಟ್ಟಿದೆ. ಹೀಗೆ ಕೆಲವೊಂದು ಸಲ ಮಠಾಧಿಪತಿಗಳೂ ಹಣದಾಸೆಯಿಂದ ನನ್ನನ್ನು ಸತಾಯಿಸಿದ್ದುಂಟು.

.೩. ಡಾ. ಡಿ. ಎಲ್‌. ನರಸಿಂಹಾಚಾರ್

ಕಾಲಪುರಷನ ಹಾವಳಿಯಿಂದ ತಪ್ಪಿಸಿಕೊಂಡು ಇನ್ನೂ ಅಲ್ಲಲ್ಲಿ ಹುದುಗಿಕೊಂಡಿರಬಹುದಾದ ಪ್ರಾಚೀನ ಗ್ರಂಥಾವಶೇಷಗಳನ್ನು ಸಂರಕ್ಷಿಸುವ ಅತಿ ಪ್ರಮುಖವಾದ ಕಾರ್ಯವನ್ನು ಈಗ ಸರಕಾರವೇ ಮಾಡಬೇಕಾಗಿದೆ. ಪ್ರಾಚೀನ ಶಿಲ್ಪ ಕೃತಿಗಳಿಂದ ದೇವಾಲಯಗಳೇ ಮುಂತಾದವುಗಳ ಸಂರಕ್ಷಣೆಗಾಗಿ ಸರ್ಕಾರ ಕೆಲವು ಕಾಯಿದೆಗಳನ್ನು ರಚಿಸಿ ಜಾರಿಗೆ ತಂದಿರುವ ಹಾಗೆ ಪ್ರಾಚೀನ ಹಸ್ತಪ್ರತಿಗಳು, ಅವು ಎಲ್ಲಿಯೇ ಇರಲಿ ಯಾರಿಗೇ ಸೇರಿರಲಿ, ಅವೆಲ್ಲ ಸರ್ಕಾರದ ಸ್ವತ್ತೆಂದು ಅವುಗಳನ್ನು ಸರ್ಕಾರಕ್ಕೆ ತಂದೊಪ್ಪಿಸಿದವರಿಗೆ ಏನಾದರೂ ಸೂಕ್ತವಾದ ಬಹುಮಾನಗಳನ್ನು ಕೊಡಲಾಗುವುದೆಂದೂ ಘೋಷಣೆಯನ್ನು ಹೊರಡಿಸಿ ಸರ್ಕಾರ ಕಾಯಿದೆಯನ್ನು ಮಾಡಿದರೆ ಹಸ್ತಪ್ರತಿಗಳ ಸಂಗ್ರಹಣೆ ಸುಲಭವಾಗಿ ನಡೆಯಬಹುದೆಂದು ತೋರುತ್ತದೆ.

.೪. ಶ್ರೀ ಬಿ. ಎಸ್‌. ಸಣ್ಣಯ್ಯ

ನಾನು ಪದ್ಮಕವಿಯ ‘ವರ್ಧಮಾನ ಚರಿತೆ’ಯನ್ನು ಸಂಪಾದಿಸುತ್ತಿದ್ದಾಗ ದೊರೆಯುವ ಎಲ್ಲ ಪ್ರತಿಗಳ ಪಾಠಾಂತರಗಳನ್ನು ಗುರುತಿಸುತ್ತಿದ್ದೆನು. ಮೈಕ್ರೊಫಿಲ್ಮ ರೂಪದಲ್ಲಿ ಪದ್ಮಕವಿಯ ಹೆಸರಿನಲ್ಲಿದ್ದ ಒಂದು ಹಸ್ತಪ್ರತಿ ಇದುವರೆಗೂ ಗೊತ್ತಿಲ್ಲದ್ದಿದ್ದ ಜಿನಸೇನ ದೇಶ ವೃತ್ತಿಯ ‘ವರ್ಧಮಾನ ಪುರಾಣ’ವೆಂಬ ಸಾಹಿತ್ಯ ಕೃತಿ ಎಂಬುದು ತಿಳಿದು ಬಂದಿತು. ಮತ್ತೊಂದು ಸಂದರ್ಭದಲ್ಲಿ ಹೊಸಕೃತಿ ದೊರೆತುದೆಂದರೆ ಮೂಡಬಿದರೆಯ ಜೈನಧರ್ಮಶಾಲೆಯಲ್ಲಿಯೇ. ಈ ಪ್ರತಿಯ ತಲೆಬರಹ ಬಂಧುವರ್ಮನ ‘ಜಿನ ಸಂಬೋಧನಂ’ ಎಂದಿದ್ದಿತು. ಇದೇ ರೀತಿಯಲ್ಲಿ ಅದು ಗ್ರಂಥ ಸುಚಿಯಲ್ಲಿಯೂ ಅಚ್ಚಾಗಿದ್ದಿತು. ಆದರೆ ತೆರೆದು ನೋಡಿದಾಗ ಬೇರೆ ಕೃತಿಯಾಗಿರುವುದು ಕಂಡು ಬಂದಿತು. ‘ಜೀವ ಸಂಬೋಧನೆ’ಯ ಪರಿಚಯ ನನಗಿದ್ದುದರಿಂದ ಮೊದಲು ಓದುತ್ತಿದ್ದಂತೆಯೇ ಇದುರವರೆಗೆ ಯಾರಿಗೂ ತಿಳಿಯದಿದ್ದ ಬಂಧುವರ್ಮನ ‘ಸತಿಧರ್ಮಸಾರ’ ವೆಂಬ ಹೊಸ ಸಾಂಗತ್ಯ ಕೃತಿಯೆಂಬುದು ಖಚಿತವಾಯಿತು.

.೫. ಡಾ. ಎಂ. ಎಂ. ಕಲಬುರ್ಗಿ

ಪುರಾತತ್ವ ಇಲಾಖೆಯ ಮಾದರಿಯಲ್ಲಿ ರಾಜ್ಯ ಪತ್ರಾಗಾರ ಇಲಾಖೆಯನ್ನು ಸ್ಥಾಪಿಸಿದ ಕರ್ನಾಟಕ ಸರಕಾರ ‘ರಾಜ್ಯ ಹಸ್ತಪ್ರತಿ ಇಲಾಖೆ’ಯನ್ನೂ ಸ್ಥಾಪಿಸಿದರೆ ಪ್ರಾಚ್ಯ ಲೇಖನ ಕ್ಷೇತ್ರದ ವರ್ತುಲ ಪೂರ್ಣವಾಗುತ್ತದೆ. ಈ ಪೂರ್ಣತೆಗಾಗಿ ಅಂಥ ಹೊಸ ಇಲಾಖೆಯೊಂದು ಅಸ್ತಿತ್ವಕ್ಕೆ ಬರುವ ದಿಸೆಯಲ್ಲಿ ಎಲ್ಲ ಕನ್ನಡಿಗರು ಪ್ರಯತ್ನಿಸಬೇಕಾಗಿದೆ.

.೬. ಎಚ್‌. ದೇವೀರಪ್ಪ
ಕರ್ನಾಟಕ ಸರಕಾರದವರು ಇಲ್ಲವೆ ಕನ್ನಡ ಸಾಹಿತ್ಯ ಪರಿಷತ್ತು ಗ್ರಂಥಾನ್ವೇಷಣೆಯ ಮತ್ತು ಗ್ರಂಥ ಸಂರಕ್ಷಣೆಯ ಕಾರ್ಯವನ್ನು ಆದಷ್ಟು ಬೇಗನೇ ವಹಿಸಿಕೊಳ್ಳಬೇಕು. ಇದು ಒಂದು ವರ್ಷವಲ್ಲ, ನಾಲ್ಕು ವರ್ಷವಲ್ಲ, ಸತತವಾಗಿ ನಡೆಯಬೇಕಾದ ಮಹಾಮಣಿಯ. ನವಕರ್ನಾಟಕದ ನವರಾಜಧಾನಿಯಲ್ಲಿ ಕನ್ನಡದ ಹಸ್ತಪ್ರತಿ ಭಂಡಾರವು ನವೀನ ರೀತಿಯಲ್ಲಿ ಆರಂಭವಾಗಲಿ.

ಹೆಚ್ಚಿನ ಓದಿಗಾಗಿ

೦೧. ಕನ್ನಡ ಗ್ರಂಥ ಸಂಪಾದನೆ
ಡಾ. ಡಿ. ಎಲ್‌. ನರಸಿಂಹಾಚಾರ್‌,
ಶಾರದಾ ಮಂದಿರ ಮೈಸೂರು, ೧೯೭೦

೦೨. ಗ್ರಂಥ ಸಂರಕ್ಷಣೆ
ಬಿ. ಎಸ್‌. ಸಣ್ಣಯ್ಯ
ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೭೧

೦೩. ಕನ್ನಡ ಗ್ರಂಥಸಂಪಾದನಾ ಶಾಸ್ತ್ರ
ಡಾ. ಎಂ. ಎಂ. ಕಲಬುರ್ಗಿ
ಸಿರಿಗನ್ನಡ ಪ್ರಕಾಶನ, ಧಾರವಾಡ, ೧೯೭೨

೦೪. ಕನ್ನಡ ಹಸ್ತಪ್ರತಿಗಳ ಇತಿಹಾಸ
ಎಚ್‌. ದೇವೀರಪ್ಪ
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೭

೦೫. ಮಣಿಹ (ಫ. ಗು. ಹಳಕಟ್ಟಿ ಸಂಸ್ಮರಣ ಗ್ರಂಥ)
ಸಂ. : ಎಂ. ವಿ. ಸೀತಾರಾಮಯ್ಯ, ಡಾ. ಆರ್‌. ಶೇಷಶಾಸ್ತ್ರಿ
ಬಿ. ಎಂ. ಶ್ರೀ. ಸ್ಮಾರಕ ಪ್ರತಿಷ್ಠಾನ, ಬೆಂಗಳೂರು, ೧೯೮೨

೦೬. ಹಸ್ತಪ್ರತಿ ಶಾಸ್ತ್ರ
ಸಂ. : ಪ್ರೊ. ಎಂ. ವಿ. ಸೀತಾರಾಮಯ್ಯ,
ಡಾ. ಎಂ. ಚಿದಾನಂದಮೂರ್ತಿ
ಬಿ. ಎಂ. ಶ್ರೀ. ಸ್ಮಾರಕ ಪ್ರತಿಷ್ಠಾನ, ಬೆಂಗಳೂರು, ೧೯೮೩

೦೭. ಕರ್ನಾಟಕ ಭಾರತಿ ಸಂ. : ೧೬, ಸಂಲ. : ೧, ೨
(ಫ. ಗು. ಹಳಕಟ್ಟಿ ಜನ್ಮ ಶತಮಾನೋತ್ಸವ ವಿಶೇಷ ಸಂಪುಟ)
ಸಂ. : ಡಾ. ಎಂ. ಬಿ. ಕೊಟ್ರಶೆಟ್ಟಿ,
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೮೩

೦೮. ಹಸ್ತಪ್ರತಿ ಶಾಸ್ತ್ರ ಪರಿಚಯ
ಬಿ. ಎಸ್‌. ಸಣ್ಣಯ್ಯ
ಬಿ. ಎಂ. ಶ್ರೀ. ಸ್ಮಾರಕ ಪ್ರತಿಷ್ಠಾನ, ಬೆಂಗಳೂರು, ೧೯೯೨

೦೯. ಕನ್ನಡ ಹಸ್ತಪ್ರತಿಗಳು : ಒಂದು ಅಧ್ಯಯನ
ಡಾ. ಬಿ. ಕೆ. ಹಿರೇಮಠ
ವೀರಶೈವ ಅಧ್ಯಯನ ಅಕಾಡೆಮಿ
ಕಸಬಾ ಜಂಬಗಿ, ಬಿಜಾಪುರ, ೧೯೯೨

೧೦. ಕನ್ನಡ ಹಸ್ತಪ್ರತಿ ಶಾಸ್ತ್ರ
ಡಾ. ಎಂ. ಎಂ. ಕಲಬುರ್ಗಿ
ಸ್ನೇಹ ಪ್ರಕಾಶನ, ಬೆಂಗಳೂರು, ೧೯೯೩