.೨.೯. ಭಾವನಾತ್ಮಕ ಸಂಬಂಧವನ್ನು ದೂರ ಮಾಡುವುದು

ಹಸ್ತಪ್ರತಿಗಳು ದೈವೀ ಸ್ವರೂಪವೆಂಬ ಭಾವನೆ ನಮ್ಮಲ್ಲಿ ಮೊದಲಿನಿಂದಲೂ ಬೆಳೆದು ಬಂದಿದೆ. ದೇವರ ಜೊತೆ ಜಗುಲಿಯ ಮೇಲೆ ಪೂಜಿಸಲ್ಪಡುವ ಇವುಗಳ ಜೊತೆ ಒಡೆಯನಾದವನು ಭಾವನಾತ್ಮಕ ಸಂಬಂಧವನ್ನು ಹೋಂದಿರುತ್ತಾನೆ. ಈ ಸಂಬಂಧವನ್ನು ದೂರಗೊಳಿಸುವುದು ಅಷ್ಟು ಸುಲಭದ ಕಾರ್ಯವಲ್ಲ ಆದರೂ ಕ್ಷೇತ್ರ ಕಾರ್ಯಕರ್ತನು ಒಡೆಯನಿಗೆ ತಿಳಿ ಹೇಳಿ ಈ ಸಂಬಂಧವನ್ನು ಕ್ರಮೇಣವಾಗಿ ಬಿಡಿಸಿಕೊಳ್ಳಬೇಕಾಗುತ್ತದೆ. ಹಸ್ತಪ್ರತಿಗಳಲ್ಲಿ ಬಂಗಾರ ತಯಾರಿಸುವ ವಿಧಾನ, ನಿಧಿಯಿರುವ ಸ್ಥಳದ ಬಗೆಗೆ ಮಾಹಿತಿ ಇರುತ್ತದೆ ಎಂದು ಭ್ರಮಿಸಿರುತ್ತಾರೆ. ಕೆಲವರಲ್ಲಂತೂ ತಮ್ಮಲ್ಲಿರುವ ಹಸ್ತಪ್ರತಿಗಳನ್ನು ಬೇರೊಬ್ಬರಿಗೆ ಕೊಟ್ಟರೆ ತಮಗೆ ಕೇಡು ಬರುವುದೆಂಬ ನಂಬಿಕೆ ಆಳವಾಗಿ ಬೇರೂರುರಿತ್ತದೆ. ಮತ್ತೆ ಕೆಲವರು “ನಮ್ಮ ಹಿರಿಯರು ಮಾಡಿದ ಆಸ್ತಿ, ಅದನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಧರ್ಮ”ವೆಂದು ಹೇಳುತ್ತಾ, ಅವು ನಾಶವಾದರೂ ಚಿಂತೆಯಿಲ್ಲ ಅವುಗಳನ್ನು ಕೊಡುವುದಿಲ್ಲವೆಂದು ಹಠ ಹಿಡಿಯುತ್ತಾರೆ. ಹಸ್ತಪ್ರತಿಗಳನ್ನು ಗಂಗೆ (ನದಿ, ಹೊಳೆ)ಗೆ ಹಾಕಿದರೆ ಒಳ್ಳೆಯದಾಗುತ್ತದೆಯೆಂಬ ಭಾವನೆ ಇನ್ನೂ ಕೆಲವರಲ್ಲಿರುತ್ತದೆ. ಅದಕ್ಕಾಗಿ ತಮ್ಮ ಸುತ್ತಮುತ್ತಲಿರುವ ಹೊಳೆ, ನದಿಗಳಿಗೆ ಇವುಗಳನ್ನು ಹಾಕಿ ಕೈತೊಳೆದುಕೊಂಡ ನಿದರ್ಶನಗಳು ಸಾಕಷ್ಟು ಸಿಗುತ್ತವೆ. ಹಗರಿಬೊಮ್ಮನಹಳ್ಳಿ ತಾಲೂಕಿನ ತುಂಗಭದ್ರಾ ನದಿ ದಂಡೆಯ ಮೇಲಿರುವ ಬಾಚಿಗೊಂಡನಹಳ್ಳಿ, ತಂಬ್ರಹಳ್ಳಿ, ಮುತ್ಕೂರು ಮುಂತಾದ ಹಳ್ಳಿಗಳಲ್ಲಿ ಕ್ಷೇತ್ರಕಾರ್ಯ ಕೈಗೊಂಡಾಗ, ಬಹಳಷ್ಟು ಜನರು ತಮ್ಮಲ್ಲಿದ್ದ ಹಸ್ತಪ್ರತಿಗಳನ್ನು ಹೊಳೆಗೆ ಹಾಕಿದೆವೆಂದು ಹೇಳಿದರು. ಇದೇ ಪ್ರದೇಶದವನಾದ ಕವಿ ರಾಘವಾಂಕನ ಅಲಭ್ಯ ಕೃತಿ ‘ಹರಿಹರ ಮಹತ್ವ’ದ ಹಸ್ತ ಪ್ರತಿ ಹೀಗೇಯೆ ನೀರು ಪಾಲಾಗಿದ್ದರೆ ಅಚ್ಚರಿ ಪಡಬೇಕಾಗಿಲ್ಲ.

ಇನ್ನೂ ಕೆಲವರು ತಮ್ಮಲ್ಲಿರುವ ಹಸ್ತಪ್ರತಿಗಳು ಅತಿ ಮಹತ್ವವಾದವು, ಅಪರೂಪವಾದವು ಎಂಬ ಭ್ರಮೆಯಲ್ಲಿರುತ್ತಾರೆ. ಜೊತೆಗೆ ಇಂಥವುಗಳನ್ನು ಮನೆಯಲ್ಲಿಟ್ಟುಕೊಳ್ಳುವುದು ಪ್ರತಿಷ್ಠೆಯ ವಿಷಯವೆಂದು ಭಾವಿಸುತ್ತಾರೆ. ಕೆಲವು ಮನೆತನಗಳಲ್ಲಿ ಅಣ್ಣ ತಮ್ಮಂದಿರು ಬೇರೆ ಬೇರೆಯಾಗುವಾಗ ಹಸ್ತಪ್ರತಿಗಳನ್ನು ಪಾಲುಮಾಡಿಕೊಂಡ ಅನೇಕ ಉದಾಹರಣೆಗಳುಂಟು. ಇಂಥ ಹಲವಾರು ಭ್ರಮೆಗಳಿಂದ ಒಡೆಯನನ್ನು ಮುಕ್ತಗೊಳಿಸಿ, ಆತನನ್ನು ವಾಸ್ತವ ನೆಲೆಗೆ ತಂದು ನಿಲ್ಲಿಸುವುದು ಕ್ಷೇತ್ರಕಾರ್ಯಕರ್ತನ ಜವಾಬ್ದಾರಿಯಾಗಿದೆ.

.೨.೧೦. ಹಸ್ತಪ್ರತಿಗಳನ್ನು ಪಡೆದುಕೊಳ್ಳುವ ವಿಧಾನ

ಕೆಲವರಿಗೆ ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಹಸ್ತಪ್ರತಿಗಳನ್ನು ಕೊಡಲು ಮುಂದಾಗುವುದಿಲ್ಲ. ಅಂಥ ಸಂದರ್ಭದಲ್ಲಿ ಹಣವನ್ನು ಕೊಟ್ಟು ಅವುಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಇಂದಿನ ಸಮಾಜದಲ್ಲಿ ಹಣವನ್ನು ಕೊಟ್ಟು ಇವುಗಳನ್ನು ಪಡೆದುಕೊಳ್ಳುವುದು ಸುಲಭವಾದರೂ, ಅದು ಯೋಗ್ಯವಾದ ಮಾರ್ಗವಲ್ಲ. ಏಕೆಂದರೆ ಬಾಯಿಗೆ ಬಂದಷ್ಟು ಹಣ ಕೇಳುವವರೂ ನಮ್ಮಲ್ಲಿದ್ದಾರೆ. ಇದು ಅತಿಯಾಗದಂತೆ ಎಚ್ಚರ ವಹಿಸಬೇಕು. ಹಸ್ತಪ್ರತಿ ಕ್ಷೇತ್ರಕಾರ್ಯದಲ್ಲಿ ಅಪಾರವಾಗಿ ಕೆಲಸ ಮಾಡಿದ ಪ್ರೊ. ಗೌ. ಮ. ಉಮಾಪತಿಶಾಸ್ತ್ರಿಗಳು ಒಬ್ಬ ಶಿಕ್ಷಕನಿಂದ ಹಣಕೊಟ್ಟು ಹಸ್ತಪ್ರತಿಗಳನ್ನು ಖರೀದಿ ಮಾಡಿದ್ದರು. ಆ ಶಿಕ್ಷಕ ಕೆಲವು ದಿನಗಳ ತರುವಾಯ ಕೋರ್ಟಿಗೆ ಹೋಗಿ ಉಮಾಪತಿ ಶಾಸ್ತ್ರಿಗಳಿಂದ ನನಗೆ ಇನ್ನೂ ಹಣ ಬರಬೇಕೆಂದು ದಾವೆ ಹೂಡಿದನಂತೆ. ಕೊನೆಗೆ ಶಾಸ್ತ್ರೀಯವರು ನ್ಯಾಯಾಧೀಶರ ಮುಂದೆ ನಿಜ ಸಂಗತಿಯನ್ನು ಹೇಳಿ ಆ ಕೇಸಿನಿಂದ ಮುಕ್ತರಾದರಂತೆ.

ಇನ್ನು ಕೆಲವು ವರ್ಗದ ಜನರು ಹಸ್ತಪ್ರತಿಗಳಿಗೆ ಪ್ರತಿಯಾಗಿ ಪುಸ್ತಕಗಳನ್ನೊ, ಕೆಲವರು ತಮ್ಮ ಮಗನಿಗೋ, ಮಗಳಿಗೋ ನೌಕರಿ ಕೊಡಿಸಬೇಕೆಂದೂ, ವಧುವರರನ್ನು ಹುಡುಕಿಕೊಡಬೇಕೆಂಬ ಕರಾರನ್ನು ಹಾಕಿದ ಉದಾಹರಣೆಗಳುಂಟು. ಶ್ರೀ. ಬಿ. ಶಿವವಮೂರ್ತಿ ಶಾಸ್ತ್ರಿಗಳು ಒಂದು ಊರಿಗೆ ಹಸ್ತಪ್ರತಿಗಳ ಸಂಗ್ರಹಕ್ಕಾಗಿ ಹೋದಾಗ, ಅಲ್ಲಿನ ಹಸ್ತಪ್ರತಿಗಳ ಒಡೆಯ ತನ್ನ ಮಗಳಿಗೆ ವರನನ್ನು ಹುಡುಕಿಕೊಡಬೇಕೆಂದು ಕೇಳಿಕೊಂಡನಂತೆ. ಅದಕ್ಕಾಗಿ ಶಿವಮೂರ್ತಿಶಾಸ್ತ್ರಿಯವರು ಕೆಲವು ದಿನಗಳ ತರುವಾಯ ವರನನ್ನು ಹುಡುಕಿ ಮದುವೆಗೆ ಏರ್ಪಾಡು ಮಾಡಿದರಂತೆ. ನಮ್ಮ ಅನುಭವಕ್ಕೆ ಬಂದ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಿದರೆ ತಪ್ಪಾಗಲಾರದು. ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ ಪಂಡಿತರೊಬ್ಬರು ನಮ್ಮ ಮಗನಿಗೆ ವಿಶ್ವವಿದ್ಯಾಲಯದಲ್ಲಿ ಎಂ. ಫಿಲ್‌ಅಧ್ಯಯನಕ್ಕೆ ಸೇರಿಕೊಂಡರೆ ಹಸ್ತಪ್ರತಿಗಳನ್ನು ಕೊಡುತ್ತೇನೆಂದು ಹೇಳಿದರು. ನಮ್ಮ ವಿ. ವಿ. ಯಲ್ಲಿ ಎಂ. ಫಿಲ್‌ಕೋರ್ಸ್‌ಇಲ್ಲದ ಕಾರಣ, ಆತನಿಗೆ ಬೇರೆ ವಿ. ವಿ. ಯಲ್ಲಿ ಎಂ. ಫಿಲ್‌ಪ್ರವೇಶ ದೊರಕಿತು. ಕೆಲವು ದಿನಗಳ ತರುವಾಯ ಅವರನ್ನು ಹೋಗಿ ವಿಚಾರಿಸಲಾಗಿ ಆ ಹಸ್ತಪ್ರತಿಗಳು ಬೇರೆ ವಿಶ್ವವಿದ್ಯಾಲಯವನ್ನು ಸೇರಿದ್ದವು. ಇದೇ ತಾಲೂಕಿನ ಬೂದನೂರಿನಲ್ಲಿ ಒಬ್ಬ ರೈತನ ಮನೆಯಲ್ಲಿ ಶರಣ ಲೀಲಾಮೃತ ಕೃತಿಯ ಹಸ್ತಪ್ರತಿಯಿತ್ತು. ಆತ ಇದರ ಮುದ್ರಣ ಪ್ರತಿಯನ್ನು ಕೊಟ್ಟರೆ ನಿಮಗೆ ಹಸ್ತಪ್ರತಿಯನ್ನು ಕೊಡುತ್ತೇನೆ ಎಂದು ಕರಾರು ಮಾಡಿದ ನಾವು ಶರಣಲೀಲಾಮೃತದ ಮುದ್ರಣ ಪ್ರತಿಯನ್ನು ಹುಡುಕಿಕೊಂಡು ಆತನಿಗೆ ತಲುಪಿಸಿ, ಆ ಹಸ್ತಪ್ರತಿಯನ್ನು ಪಡೆಯುವಲ್ಲಿ ತುಂಬ ಶ್ರಮಪಡಬೇಕಾಯಿತು.

ಹೀಗೆ ಹಸ್ತಪ್ರತಿಯನ್ನು ಪಡೆದುಕೊಳ್ಳುವಲ್ಲಿ ನಾನಾ ರೀತಿಯಿಂದ ಒತ್ತಾಯ ಮಾಡಿದರೂ ಕೆಲವರು ಒಪ್ಪದಿದ್ದ ಪಕ್ಷದಲ್ಲಿ, ಮಹತ್ವದ ಹಸ್ತಪ್ರತಿಯಿದ್ದರೆ ಪ್ರತಿಮಾಡಿಕೊಂಡು ಹಿಂತಿರುಗಿಸುವ ಭರವಸೆ ನೀಡಬೇಕು. ಇಷ್ಟಾಗಿಯೂ ಒಪ್ಪದಿದ್ದರೆ ಆ ಊರಿನ ಪ್ರತಿಷ್ಠಿತರಿಂದ, ಅಧಿಕಾರಿಗಳಿಂದ, ಸ್ನೇಹಿತರಿಂದ ಆತನ ಮೇಲೆ ಒತ್ತಡ ತರಬೇಕು. ಒಂದು ರೀತಿಯ ಸಾಮ, ಭೇದ, ದಂಡೋಪಾದಿ ಕ್ರಮದಲ್ಲಿ ಈ ಕಾರ್ಯ ನಡೆಯಬೇಕು. ಮೂಡಬಿದಿರೆಯ ಜೈನ ಮಠದಲ್ಲಿರುವ ಧವಲ, ಜಯಧವಲ ಮಹಾಧವಲ ಹಸ್ತಪ್ರತಿಗಳನ್ನು ಜೈನ ವಿದ್ವಾಂಸರು ಪಡೆದುಕೊಳ್ಳುವಲ್ಲಿ ವಹಿಸಿದ ಶ್ರಮ, ವ್ಯಯಿಸಿದ ಹಣ, ಸಮಯಗಳು ಕ್ಷೇತ್ರಕಾರ್ಯ ಕರ್ತನಿಗೆ ಮಾದರಿಯಾಗಬೇಕು. ಇಷ್ಟಾದರೂ ಹಸ್ತಪ್ರತಿಗಳು ಕೈವಶವಾಗುವುದೇ ಅಸಾಧ್ಯವೆನಿಸಿದಾಗ ಟಿಪ್ಪಣಿ ಮಾಡಿಕೊಳ್ಳುವ, ಮೈಕ್ರೋಫಿಲ್ಮ ಪ್ರತಿ ಮಾಡಿಕೊಳ್ಳುವುದರೊಂದಿಗೆ ಅದರ ಆದ್ಯಂತ ಗರಿಗಳ ಪುಟಗಳ ಫೋಟೋ ತೆಗೆದುಕೊಳ್ಳುವ ಕೆಲಸ ಮಾಡಬೇಕು.

.೨.೧೧. ಶ್ರದ್ಧೆ, ನಿಷ್ಠೆ, ಸಮಾಧಾನ ಪ್ರವೃತ್ತಿ

ಹಸ್ತಪ್ರತಿಗಳನ್ನು ಪರಿಶೀಲಿಸುವಲ್ಲಿ ಎಳ್ಳಷ್ಟೂ ಅವಸರ ಮಾಡಬಾರದು. ಕಣ್ತಪ್ಪಿನಿಂದಾಗಿ ಹಲವಾರು ಮಹತ್ವದ ಕೃತಿಗಳೂ ಮರೆಯಾಗಿ ಹೋಗುವ ಸಾಧ್ಯತೆಗಳಿರುತ್ತವೆ. ಇಂಥ ಸಂದರ್ಭದಲ್ಲಿ ಕ್ಷೇತ್ರಕಾರ್ಯಕರ್ತ ಶ್ರದ್ಧೆ, ನಿಷ್ಠೆ, ಸಮಾಧಾನ ಪ್ರವೃತ್ತಿಯನ್ನು ಬೆಳೆಸಿಕೊಂಡಿರಬೇಕಾಗುತ್ತದೆ. ಹಸ್ತಪ್ರತಿ ಕಟ್ಟುಗಳ ಮೇಲೆ ಈ ಹಿಂದೆ ಯಾರೋ ಬರೆದ ತಲೆಬರಹವನ್ನು ನೋಡಿ ಇದು ಈ ಪ್ರತಿ ಎಂದು ತೀರ್ಮಾನಕ್ಕೆ ಬರುವುದು ತಪ್ಪಾಗುತ್ತದೆ. ಇದಕ್ಕೆ ಬಿ. ಎಸ್‌. ಸಣ್ಣಯ್ಯನವರ ಅನುಭವಕ್ಕೆ ಬಂದ ಒಂದು ಸಂಗತಿಯನ್ನು ಇಲ್ಲಿ ಉದಾಹರಿಸಬಹುದು. ಅವರ ಮಾತುಗಳಲ್ಲೇ ಹೇಳುವುದಾದರೆ “ಡಿ. ಎಲ್‌. ನರಸಿಂಹಾಚಾರ್‌ಅವರು ಕಂಡು ಹಿಡಿದ ವಡ್ಡಾರಾಧನೆ ಕೃತಿಯ ಅನಂತರ ದೊರೆತ ಮಹತ್ವದ ಶೋಧನೆಯ ಕೃತಿಯೆಂದರೆ ೨ನೇ ನಾಗವರ್ಮನ ‘ವರ್ಧಮಾನ ಪುರಾಣ’. ಇದನ್ನು ಕಂಡು ಹಿಡಿದಿದ್ದು ಬಹುರೋಚಕ ಸನ್ನಿವೇಶದಲ್ಲಿ. ಮೊದಲೇ ಬಹಳ ಜನ ಮೂಡಬಿದರೆಯ ಜೈನಧರ್ಮ ಶಾಲೆಯಲ್ಲಿದ್ದ ಹಸ್ತಪ್ರತಿಗಳನ್ನು ಪರಿಶೀಲಿಸಿದ್ದರು. ಆದರೆ ನಾನು ಹೋದಾಗ್ಗೆ ವರ್ಧಮಾನ ಪುರಾಣ ದೊರೆತದ್ದು ಹಸ್ತಪ್ರತಿಗಳ ಕೂಲಂಕಷ ಪರಿಶೀಲನೆಯಿಂದ. ೧೯೭೦ರಲ್ಲಿ ಅಲ್ಲಿ ದೊರೆಯುವ ಮುಖ್ಯ ಹಸ್ತಪ್ರತಿಗಳ ಮೈಕ್ರೊ ಫಿಲ್ಮಂಗಾಗಿ ಛಾಯಾ ಚಿತ್ರಗ್ರಾಹಕರ ಜೊತೆಯಲ್ಲಿ ಹೋಗಿದ್ದೆನು. ಇದಕ್ಕಾಗಿ ಹಸ್ತಪ್ರತಿಗಳ ಪರಿಶೀಲನೆ ಮಾಡಿ ಮುಖ್ಯವಾದುವನ್ನು ಆರಿಸಬೇಕಾದುದು ನನ್ನ ಕರ್ತವ್ಯವಾಗಿದ್ದಿತು. ಒಂದು ತಿಂಗಳ ವಾಸ್ತವ್ಯದಲ್ಲಿ ಹಸ್ತಪ್ರತಿಗಳೆಲ್ಲವನ್ನೂ ಪರಿಶೀಲಿಸುವ, ಮುಖ್ಯವಾದುವನ್ನು ಮೈಕ್ರೊಫಿಲ್ಮ ಮಾಡಿಸುವ ಕೆಲಸದಲ್ಲಿ ನಿರತನಾಗಿದ್ದ ನನಗೆ ಕೊನೆಯಲ್ಲಿ ಮಹಡಿಯ ಮೇಲೆ ಕೆಲವು ಕಟ್ಟುಗಳಿವೆ ಎಂದು ತಿಳಿದು ಬಂದಿತು. ಮೇಲ್ವಿಚಾರಕರಿಗೆ ಇವನ್ನು ನೋಡಬೇಕೆಂಬ ನನ್ನ ಅಭಿಲಾಷೆಯನ್ನು ತಿಳಿಸಿದಾಗ “ಅಲ್ಲಿ ಎಲ್ಲ ಹಿಂದೆಯೇ ನೋಡಿಯಾಗಿದೆ, ಯಾವ ಉತ್ತಮ, ಕೃತಿಗಳೂ ಇಲ್ಲ” ಎಂಬ ಉತ್ತರ ಬಂತು. ಇದರಿಂದ ಸಮಾಧಾನಗೊಳ್ಳದ ನಾನು ಅವುಗಳನ್ನು ನೋಡಿಯೇ ತೀರಬೇಕೆಂಬ ಹಠದೊಡನೆ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದೆನು. ಎಲ್ಲ ಕಟ್ಟುಗಳನ್ನೂ ಬಿಚ್ಚಿ, ನೋಡುತ್ತಿರುವಾಗ್ಗೆ ಅಗ್ಗಳನ ‘ಚಂದ್ರಪ್ರಭ ಪುರಾಣ’ ಎಂಬ ತಲೆಬರಹವುಳ್ಳ ಕಾಗದದ ಬಿಡಿಹಾಳೆಗಳ ಕಟ್ಟೊಂದು ದೊರೆಯಿತು. ಯಾವತ್ತೂ ತಲೆಬರಹ ನೋಡಿ ಮುಂದುವರಿಯದ ನಾನು ಅದನ್ನು ಬಿಚ್ಚಿ ಹಾಳೆಗಳನ್ನು ತಿರುವುತ್ತಾ ಆಶ್ವಾಸಾಂತ್ಯಗಳನ್ನು ನೋಡುತ್ತ ಹೋದಂತೆ ಒಂದು ಹಾಳೆಯಲ್ಲಿ ನಾಗವರ್ಮನ ವರ್ಧಮಾನ ಪುರಾಣದ ಒಂದು ಆಶ್ವಾಸಾಂತ್ಯದ ಬರಹ ಕಣ್ಣಿಗೆ ಬಿದ್ದಿತು. ಈ ಹಸ್ತಪ್ರತಿಯ ಪ್ರಾಮುಖ್ಯವರಿದಿದ್ದ ನನಗೆ ರೋಮಾಂಚನವಾಯಿತು. ಆ ಇಡೀ ಹಸ್ತಪ್ರತಿಯ ಹಾಳೆಗಳನ್ನೆಲ್ಲಾ ಪರಿಶೀಲಿಸಿ ವರ್ಧಮಾನ ಪುರಾಣಕ್ಕೆ ಸಂಬಂಧಿಸಿದುವನ್ನು ಕ್ರಮವಾಗಿ ಜೋಡಿಸಿ ಮೈಕ್ರೋಫಿಲ್ಮಂ ಮಾಡಿಸಿ ತಂದೆನು. ಅದನ್ನು ಕಂಡುಹಿಡಿದ ಯಶಸ್ವಿಗೆ ಪಾತ್ರನಾದೆನು. ಆ ಕಟ್ಟಿನಲ್ಲಿ ಅಗ್ಗಳನ ಚಂದ್ರಪ್ರಭ ಪುರಾಣ, ಆಚಣ್ಣನ ವರ್ಧಮಾನ ಪುರಾಣ ಮತ್ತು ನಾಗವರ್ಮನ ವರ್ಧಮಾನ ಪುರಾಣ ಈ ಮೂರು ಕೃತಿಗಳ ಒಂದೇ ಆಕಾರದ ಮತ್ತು ಬರಹದ ಹಾಳೆಗಳು ಅಸ್ತವ್ಯಸ್ತವಾಗಿ ಸೇರಿಕೊಂಡಿದ್ದವು. ಹೀಗೆ ಹಸ್ತಪ್ರತಿಯನ್ನು ಒಳತೆರೆದು ಕೂಲಂಕಷ ಪರಿಶೀಲನೆ ನಡೆಸದಿದ್ದಲ್ಲಿ ಈ ಕೃತಿ ನಮಗೆ ದೊರೆಯುತ್ತಿತ್ತೋ ಇಲ್ಲವೋ ಹೇಳುವುದು ಕಷ್ಟವಾಗಿದೆ.” ಆದ್ದರಿಂದ ಕ್ಷೇತ್ರಕಾರ್ಯಕರ್ತ ಶ್ರದ್ಧೆ, ನಿಷ್ಠೆ, ಸಮಾಧಾನಗಳಿಂದ ಹಸ್ತಪ್ರತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿಬೇಕು. ಆಂದಾಗ ಮಾತ್ರ ಅಪೂರ್ವವಾದ ಕೃತಿಗಳು ದೊರೆತು ಸಾಹಿತ್ಯಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿರುತ್ತವೆ.

ಫ. ಗು. ಹಳಕಟ್ಟಿಯವರು “ವಿಜಾಪುರ ಜಿಲ್ಲೆಯಲ್ಲಿದ್ದಾಗ ನಾನು ಹೋದ ಗ್ರಾಮಗಳಲ್ಲಿ ಅವುಗಳ (ವಚನಗಳ) ವಿಷಯವಾಗಿ ನಾನು ಶೋಧ ಮಾಡುತ್ತಿದ್ದು, ನನಗೆ ದೊರೆತ ವಚನಗಳಲ್ಲಿ ನನಗೆ ಮಹತ್ವವೆಂದು ಕಂಡ ವಚನಗಳನ್ನಷ್ಟೇ ನಾನು ಬರೆದುಕೊಳ್ಳುತ್ತ ಬಂದೆನು” ಎಂಬ ಮಾತಿನಿಂದಲೂ, ಆರ್. ನರಸಿಂಹಾಚಾರ್‌ಅವರು “ಹಿಂದೆ ಮದ್ರಾಸ್‌ಪ್ರಾಚ್ಯಕೋಶಾಲಯ ಮುಂತಾದ ಸ್ಥಳಗಳಲ್ಲಿ ಪುಸ್ತಕಗಳನ್ನು ಪರಿಶೀಲಿಸಿದಾಗ ಪ್ರಥಮ ಸಂಪುಟಕ್ಕೆ ಬೇಕಾದ ವಿಷಯಗಳನ್ನು ಮಾತ್ರ ವಿಸ್ತಾರವಾಗಿ ಗುರುತು ಹಾಕಿಕೊಂಡು, ಅವಶ್ಯಕತೆ ಬಿದ್ದಾಗ ಪುನಃ ಹೋಗಿ ನೋಡಬಹುದೆಂಬ ಭಾವನೆಯಿಂದ ಮಿಕ್ಕ ವಿಷಯಗಳನ್ನು ಬಹಳ ಸಂಗ್ರಹವಾಗಿ ಗುರುತು ಹಾಕಿದ್ದೆನು. ಮತ್ತೊಂದಾವೃತ್ತಿ ಹೋಗಿ ನೋಡಿದಾಗ ಹಿಂದೆ ನೋಡಿದ್ದ ಪುಸ್ತಕಗಳಲ್ಲಿ ಹಲವು ನನ್ನ ದುರಾದೃಷ್ಟದಿಂದ ಹುಳುಗಳ ಬಾಯಿಗೆ ತುತ್ತಾಗಿ ನಾಶವಾಗಿ ಹೋಗಿದ್ದವು. ಹೀಗೆ ನಷ್ಟವಾದ ಪುಸ್ತಕಗಳ ಪ್ರತ್ಯಂತರಗಳು ಬೇರೆ ಕಡೆ ಎಷ್ಟು ಹುಡುಕಿದರೂ ದೊರೆಯದೆ ಹೋದವೆಂದೂ” ಹೇಳಿದ ಮಾತುಗಳಿಂದ ಕ್ಷೇತ್ರಕಾರ್ಯದಲ್ಲಿ ಇವರು ತೋರಿದ ಅವಸರ, ಉದಾಸೀನತೆ ಕಾರಣವಾಗಿ ಕನ್ನಡ ಸಾಹಿತ್ಯಕ್ಕಾದ ನಷ್ಟವನ್ನು ಊಹಿಸಿಕೊಳ್ಳಬಹುದು.

.೨.೧೨. ಅಪರೂಪದ ಹಸ್ತಪ್ರತಿಗಳ ಶೋಧ

ಕ್ಷೇತ್ರಕಾರ್ಯಕರ್ತ ಅಪರೂಪದ ಅನುಪಲಬ್ಧ ಹಸ್ತಪ್ರತಿಗಳ ಶೋಧದತ್ತ ಸದಾ ಪ್ರವೃತ್ತನಾಗಿರಬೇಕು. ಹರಿವಂಶ, ಶೂದ್ರಕ, ರಘುವಂಶ ಪುರಾಣ, ಭುವನೈಕ ರಾಮಭ್ಯುದಯ ಮುಂತಾದ ಅನುಪಲಬ್ಧ ಹಸ್ತಪ್ರತಿಗಳನ್ನು ನಿರಂತರ ಬೆನ್ನಟ್ಟಿ ನಡೆಯಬೇಕು. ರಾಘವಾಂಕನ ‘ಹರಿಹರ ಮಹತ್ವ’ ಕೃತಿಯು ಇಂದಿಗೂ ಸಿಕ್ಕಿಲ್ಲ. ಹರಿಹರ ರಾಘವಾಂಕರ ಕಾರ್ಯಕ್ಷೇತ್ರವಾದ ಹಂಪಿಯ ಸುತ್ತಮುತ್ತಲ ಪ್ರದೇಶದಲ್ಲಿ ಹರಿಹರ ಮಹತ್ವ ಕೃತಿಯ ಶೋಧನೆ ತೀವ್ರಗತಿಯಲ್ಲಿ ನಡೆಯಬೇಕಾಗಿದೆ. ಕವಿರಾಜಮಾರ್ಗ ಹಸ್ತಪ್ರತಿಯ ಸುಳುಹು ಹಿಡಿದು ಬೀದರ ಜಿಲ್ಲೆಯಲ್ಲಿ ಅದನ್ನು ಪತ್ತೆ ಹಚ್ಚಲು ಡಾ.ಎಂ.ಎಂ. ಕಲಬರ್ಗಿಯವರು ಹತ್ತು ವರುಷ ನಿರಂತರ ಪ್ರಯತ್ನ ಮಾಡಬೇಕಾಯಿತು. ಧಾರವಾಡ ಪ್ರದೇಶದಲ್ಲಿ ‘ಗಂಧಹಸ್ತಿ ಮಹಾಭಾಷ್ಯ’ ಹಸ್ತಪ್ರತಿಯಿದೆಂಬ ವದಂತಿಯನ್ನು ಹಿಂಬಾಲಿಸುವ ಪ್ರಯತ್ನ ಇಂದು ನಡೆಯಬೇಕಾಗಿದೆ.

ಕೆಲವೆಡೆ ಹಸ್ತಪ್ರತಿಗಳು ಎಂದೋ ಹಾಳಾಗಿ ಹೋಗಿ, ಅವುಗಳಲ್ಲಿರುವ ಪದ್ಯಗಳನ್ನು ಮೌಖಿಕ ಪರಂಪರೆಯಲ್ಲಿ ಜನರು ಉಳಿಸಿಕೊಂಡು ಬಂದಿರುತ್ತಾರೆ. ಇಂಥ ಮೌಖಿಕ ರೂಪದಲ್ಲಿರುವ ಕೃತಿಗಳ ಧ್ವನಿಮುದ್ರಣವನ್ನು ಮಾಡಿಕೊಳ್ಳಬೇಕು. ರಾಘವಾಂಕನ ಅನುಪಲಬ್ಧ ಶರಭ ಚಾರಿತ್ರದ ಬಿಡಿ ಪದ್ಯಗಳನ್ನು ಬಳ್ಳಾರಿ ಜಿಲ್ಲೆಯಲ್ಲಿ ಹಾಡುವರೆಂಬ ವದಂತಿಯಿದೆ. ಇಂಥವುಗಳನ್ನು ಸಂರಕ್ಷಿಸುವುದು ಕ್ಷೇತ್ರಕಾರ್ಯಕರ್ತನ ಕೆಲಸವಾಗಿದೆ.

.೨.೧೩. ಹಸ್ತಪ್ರತಿಗಳ  ಪರಿಸರ ಶೋಧ

ಹಸ್ತಪ್ರತಿಗಳ ಸರ್ವೇಕ್ಷಣೆ, ಸಂಗ್ರಹಕಾರ್ಯದ ಜೊತೆಗೆ ಅವುಗಳ ಪರಿಸರವನ್ನು ಕುರಿತು ವಿವೇಚಿಸುವುದು ಕ್ಷೇತ್ರಕಾರ್ಯಕರ್ತನ ಜವಾಬ್ದಾರಿಯಾಗಿದೆ. ಡಾ.ಎಂ.ಎಂ. ಕಲಬರ್ಗಿಯವರು ಅಭಿಪ್ರಾಯಪಡುವಂತೆ” ಹಸ್ತಪ್ರತಿ ಕ್ಷೇತ್ರಕಾರ್ಯವೆಂದರೆ ಪಠ್ಯವನ್ನು ಸಂಗ್ರಹಿಸುವುದಾಗಿರುವಂತೆ, ಅದರ ಪರಿಸರವನ್ನು ಸಂಗ್ರಹಿಸುವುದೂ ಆಗಿದೆ. ಇವುಗಳನ್ನು ಪಠ್ಯಶೋಧ, ಪರಿಸರ ಶೋಧ ಎಂದು ಕರೆಯಬಹುದು. ಈವರೆಗೆ ಕೇವಲ ಪಠ್ಯಶೋಧ ಮತ್ತು ಒಡೆಯುವ ವಿಳಾಸದ ದಾಖಲೆಗಳಿಗೆ ಮಾತ್ರ ಮೀಸಲಾಗಿರುವ ಕ್ಷೇತ್ರಕಾರ್ಯ ಇನ್ನು ಮೇಲೆ ‘ಪರಿಸರ ಶೋಧ’ ವನ್ನೂ ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ. ಏಕೆಂದರೆ ಯಾವುದೇ ಹಸ್ತಪ್ರತಿ ತನ್ನ ಪರಿಸರದ ಉಪೇಕ್ಷೇಗೆ ಗುರಿಯಾಗಿರಬಹುದು. ಇಲ್ಲವೆ ತನ್ನ ಪರಿಸರದಲ್ಲಿ ತುಂಬ ಪ್ರಭಾವಾಶಾಲಿಯಾಗಿ ವ್ಯವಹರಿಸುತ್ತಿರಬಹುದು. ಈ ಆವರಣವನ್ನು  ಅಂದರೆ ಅದರ ಉಗಮ, ಆಗಮ ಆ ಮನೆತನ, ಆ ಪರಿಸರದೊಂದಿಗೆ ಹೊಂದಿದ ಸಂಬಂಧ, ಗಳಿಸಿದ ಪ್ರತಿಷ್ಠೆ ಇತ್ಯಾದಿಗಳನ್ನು ಸಂಗ್ರಹಿಸಬೇಕಾಗುತ್ತದೆ” ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದು. ಹಸ್ತಪ್ರತಿಯನ್ನು ಸ್ನಾನ ಮಾಡಿಯೇ ಮುಟ್ಟುವ, ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಂಥ, ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಿಚ್ಚಿ ಓದುವ, ಮಳೆ ಬರಲೆಂದು ಐರಾವತ ನೋಂಪಿ, ವಿರಾಟಪರ್ವ, ರೇವಣಸಾಂಗತ್ಯಗಳಂಥ ಜನಪ್ರಿಯ ಕಾವ್ಯಗಳನ್ನು ಓದಿಸುವ ಪರಿಪಾಠ ಇಂದಿಗೂ ಕೆಲವು ಪ್ರದೇಶಗಳಲ್ಲಿದೆ. ಗ್ರಂಥದಿಂದ ರೋಗ ನಿವಾರಣೆ ಮಾಡುವ, ಜ್ಞಾನ ಸಿಂಧುವನ್ನು ವೃದ್ಧರಿಗೆ ಮಾತ್ರ ಓದಲು ಹೇಳುವ, ಹಸ್ತಪ್ರತಿಯನ್ನು ಜ್ಯೋತಿಷ್ಯ ಶಕುನ ಶಾಸ್ತ್ರಗಳಂತೆ ರೋಮಾಂಚಕ, ಭಾವನಾತ್ಮಕ ಸಂಬಂಧಗಳು ಕೆಲವು ಹಸ್ತಪ್ರತಿಗಳ ಸುತ್ತ ಬೆಳೆದಿರುತ್ತವೆ. ಹಳ್ಳಿಯಿಂದ ದಿಲ್ಲಿಯವರೆಗೆ ಪ್ರಚಾರ ಪಡೆದ ಹಾರನಹಳ್ಳಿ ಕೋಡಿಮಠದ ಗ್ರಂಥ, ಬೀಗ ಬಂಧನದಲ್ಲಿರುವ ಹೊಕ್ರಾಣಿ ಗ್ರಾಮದ ವಚನ ಗ್ರಂಥಗಳು ‘ಪರಿಸರ ಶೋಧ’ಕ್ಕೆ ಒಳ್ಳೆಯ ನಿದರ್ಶನಗಳಾಗಿವೆ. ಡಾ. ಎಂ. ಎಂ. ಕಲಬುರ್ಗಿಯವರ ಮಾರ್ಗದರ್ಶನ, ಡಾ. ಬಸವಲಿಂಗ ಸೊಪ್ಪಿಮಠ ಅವರ ಸತತ ಪ್ರಯತ್ನದಿಂದಾಗಿ ಬೀಗಮುದ್ರೆಯಲ್ಲಿದ್ದ “ಕೊಡೇಕಲ್ಲು ಸಾಹಿತ್ಯ” ವನ್ನು ಇತ್ತೀಚೆಗೆ ಪ್ರಕಟಿಸಿರುವುದು ಒಂದು ಸಾಹಸದ ಕೆಲಸವಾಗಿದೆ. ಹೀಗೆ ಕೆಲವು ಹಸ್ತಪ್ರತಿಗಳ ಸುತ್ತ ಇಂಥ ಭಾವ ಪರಿವೇಷ ಬೆಳೆದುಕೊಂಡು ಬಂದಿರುತ್ತದೆ. ಆದ್ದರಿಂದ ಯಾವುದೇ ಹಸ್ತಪ್ರತಿಯನ್ನು ಅದರ ಸುತ್ತ ಹೆಣೆದಿರುವ ಭಾವಕೋಶದೊಂದಿಗೆ ಸಂಗ್ರಹಿಸಬೇಕು.

.೨.೧೪. ಕ್ಷೇತ್ರಕಾರ್ಯದ ಅನಂತರ

ಕ್ಷೇತ್ರಕಾರ್ಯ ಕೈಕೊಂಡ ಅನಂತರ ಶ್ರಮವಹಿಸಿ ಸಂಗ್ರಹಿಸಿದ ಹಸ್ತಪ್ರತಿಗಳೆಲ್ಲವನ್ನು ವ್ಯವಸ್ಥಿತವಾಗಿ ಜೋಡಿಸಬೇಕು. ಜೊತೆಗೆ ಅವುಗಳನ್ನು ತಕ್ಷಣವೇ ಕೂಲಂಕಷವಾಗಿ ಪರಿಶೀಲಿಸಿಕೊಳ್ಳಬೇಕು. ಹುಳು, ನುಸಿ ಮುಟ್ಟದಂತೆ ತಾಳೆಗರಿ ಪ್ರತಿಗಳಿಗೆ ಸಿಟ್ರೆನಲ್‌ಅಯಿಲ್‌ನಂಥ ರಾಸಾಯನಿಕ ಎಣ್ಣೆಯನ್ನು ಲೇಪಿಸಬೇಕು. ಹಸ್ತಪ್ರತಿಗಳ ಒಡೆಯನ ಹೆಸರನ್ನು ತಪ್ಪದೇ ಆ ಕಟ್ಟುಗಳ ಮೇಲೆ ನಮೂದಿಸಬೇಕು. ಏಕೆಂದರೆ ಒಡೆಯನು ಯಾವಾಗಲಾದರೂ ತನ್ನ ಹಸ್ತಪ್ರತಿಗಳನ್ನು ನೋಡಲು ಬಂದಾಗ, ಕಟ್ಟಿನ ಮೇಲಿರುವ ಆತನ ಹೆಸರನ್ನು ನೋಡಿ ಸಂತೋಷಪಡುತ್ತಾನೆ. ಒಡೆಯನು ಅಪೇಕ್ಷೆಪಟ್ಟರೆ ಹಸ್ತಪ್ರತಿಯಲ್ಲಿರುವ ವಿಷಯವನ್ನು ಸಂಕ್ಷಿಪ್ತವಾಗಿ ಬರೆದು ಆತನಿಗೆ ತಲುಪಿಸಬೇಕು.

.೨.೧೫. ದಿನಚರಿ ಬರೆಯುವುದು

ಕ್ಷೇತ್ರಕಾರ್ಯದಲ್ಲಿ ಸಂಗ್ರಹಿಸಿದ, ಸಂದರ್ಶಿಸಿದ ಹಸ್ತಪ್ರತಿಗಳ ಸರಿಯಾದ ವಿವರಗಳನ್ನು, ಮಾಹಿತಿಗಳನ್ನು ದಿನಚರಿಯಲ್ಲಿ ತಪ್ಪದೆ ಬರೆದುಕೊಳ್ಳಬೇಕು. ಹಸ್ತಪ್ರತಿಗಳಿದ್ದ ಬಗೆಗೆ ಮಾಹಿತಿ ನೀಡಿದವರ ಪೂರ್ಣವಿಳಾಸವನ್ನು ದಾಖಲಿಸಬೇಕು. ಏಕೆಂದರೆ ಮುಂದಿನ ದಿನಗಳಲ್ಲಿ ಕ್ಷೇತ್ರಕಾರ್ಯ ಕೈಕೊಳ್ಳುವಾಗ ಇವರ ಸಹಾಯ ಪಡೆದುಕೊಳ್ಳಬಹುದು. ಹಸ್ತಪ್ರತಿಗಳನ್ನು ನೀಡಿದ ಒಡೆಯನ ಪೂರ್ಣ ವಿವರಗಳನ್ನು ಒಂದು ಕಡೆ ಬರೆದಿಡಬೇಕು. ಅಲ್ಲದೆ ಕ್ಷೇತ್ರಕಾರ್ಯದಲ್ಲಿ ಕೆಲವು ಖಾಸಗೀ ಅನುಭವಗಳಾಗಬಹುದು. ಅಂಥ ಅನುಭವಗಳನ್ನು ದಿನಚರಿಯಲ್ಲಿ ದಾಖಲಿಸುವುದು ತುಂಬಾ ಮುಖ್ಯ. ಮುಂದಿನ ಕ್ಷೇತ್ರಕಾರ್ಯಕರ್ತರಿಗೆ ಉಪಯುಕ್ತವಾಗಬಹುದು. ಕೈಪಿಡಿಯಂತೆ ಅದು ಮಾರ್ಗದರ್ಶನ ನೀಡಬಹುದು.

.೨.೧೬. ಕೃತಜ್ಞತಾಭಾವ

ಕ್ಷೇತ್ರಕಾರ್ಯದಲ್ಲಿ ಸಹಾಯ ಸಹಕಾರ ನೀಡಿದ ವ್ಯಕ್ತಿಗಳನ್ನು, ಸಂಘಸಂಸ್ಥೆಗಳನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುವುದು ಕ್ಷೇತ್ರಕಾರ್ಯಕರ್ತನ ಕೆಲಸವಾಗಿದೆ. ಅವರಿಲ್ಲದೆ ಹೋಗಿದ್ದರೆ ತನ್ನ ಕಾರ್ಯ ಯಶಸ್ವಿಯಾಗುತ್ತಿರಲಿಲ್ಲ ಎಂಬ ಭಾವ ಕ್ಷೇತ್ರಕಾರ್ಯಕರ್ತನಲ್ಲಿ ಮೂಡಬೇಕು. ಹಸ್ತಪ್ರತಿ ಒಡೆಯನಾಗಿ, ಹಸ್ತಪ್ರತಿಗಳನ್ನು ಕೊಡಿಸುವಲ್ಲಿ ಮಹತ್ವದ ಪಾತ್ರವಹಿಸಿದ ವ್ಯಕ್ತಿಗಳಿಗೆ ಪತ್ರದ ಮುಖಾಂತರ ಕೃತಜ್ಞತೆಯನ್ನು ಸಲ್ಲಿಸಬೇಕು. ಅಲ್ಲದೆ ಹಸ್ತಪ್ರತಿ ಒಡೆಯನಿಗೆ ಮಾತ್ರ ಅಭಿನಂದನ ಪತ್ರವನ್ನು ಕಳುಹಿಸಬಹುದು. ಇಂಥ ಒಂದು ಪರಿಪಾಠವನ್ನು ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ಹಾಕಿಕೊಂಡಿದೆ. ಅದರ ಮಾದರಿ ಹೀಗಿದೆ:

ಕನ್ನಡ ವಿಶ್ವವಿದ್ಯಾಲಯ ಹಂಪಿ
ವಿದ್ಯಾರಣ್ಯ – ೫೮೩ ೨೭೬

ಅಭಿನಂದನ ಪತ್ರ

ಶ್ರೀಮತಿ/ಶ್ರೀ …………………………….ಅವರು ತಮ್ಮ ವಶದಲ್ಲಿದ್ದ ತಾಳೆಗರಿ/ಕಾಗದಪ್ರತಿಗಳನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಕೊಡುಗೆಯಾಗಿ ನೀಡಿದ್ದಕ್ಕಾಗಿ, ಕೃತಜ್ಞತಾಪೂರ್ವಕವಾಗಿ ಈ ಅಭಿನಂದನ ಪತ್ರವನ್ನು ಕೊಡಲಾಗುತ್ತಿದೆ.

ದಿನಾಂಕ :                                                                                    ಕುಲಪತಿಗಳು

ಹೀಗೆ ಕ್ಷೇತ್ರಕಾರ್ಯದಲ್ಲಿ ಸಹಾಯ ಸಹಕಾರ ನೀಡಿದ ವ್ಯಕ್ತಿಗಳಿಗೆ ಕೃತಜ್ಞತಾಭಾವದಿಂದಿರಬೇಕು.

ಇದಿಷ್ಟೂ ಹಸ್ತಪ್ರತಿ ಕ್ಷೇತ್ರಕಾರ್ಯ ಕೈಕೊಂಡಾಗ ಅನುಸರಿಸಬೇಕಾದ ಮಾರ್ಗದರ್ಶಕ ಸೂತ್ರಗಳು. ಈ ಸೂತ್ರಗಳನ್ನು ಕ್ಷೇತ್ರಕಾರ್ಯಕರ್ತ ತನ್ನ ವ್ಯಕ್ತಿತ್ವದೊಳಗೆ ಮೈಗೂಡಿಸಿಕೊಂಡಾಗ ಮಾತ್ರ ಕ್ಷೇತ್ರಕಾರ್ಯದಲ್ಲಿ ಯಶಸ್ಸನ್ನು ಸಾಧಿಸಬಹುದು. ಕನ್ನಡ ಹಸ್ತಪ್ರತಿ ಕ್ಷೇತ್ರಕಾರ್ಯದಲ್ಲಾದ ಸಾಧನೆಗಳನ್ನು ಇನ್ನು ಮುಂದೆ ಅವಲೋಕಿಸಬಹುದು.

. ಹಸ್ತಪ್ರತಿ ಕ್ಷೇತ್ರಕಾರ್ಯ ಸಾಧನೆ

ಕನ್ನಡ ಹಸ್ತಪ್ರತಿಗಳ ಸರ್ವೇಕ್ಷಣೆ ಹಾಗೂ ಸಂಗ್ರಹಕ್ಕಾಗಿ ಮೊಟ್ಟ ಮೊದಲು ಕ್ಷೇತ್ರಕಾರ್ಯ ಕೈಕೊಂಡವನು ಬ್ರಿಟಿಷ ಅಧಿಕಾರಿಯಾಗಿದ್ದ ಕರ್ನಲ್‌ಮೆಕಂಝಿ. ೧೭೮೩ರಲ್ಲಿ ಇಂಜಿನೀಯರ್ ಆಗಿ ಭಾರತಕ್ಕೆ ಬಂದ ಈತ ಸರ್ವೇಯರ್ ಜನರಲ್‌(ಪ್ರದೇಶ ವೀಕ್ಷಣೆಯ) ಅಧಿಕಾರಿಯಾಗಿ ನೇಮಕಗೊಂಡನು. ಈ ಹುದ್ದೆಯಲ್ಲಿದ್ದಾಗ ಮೆಕಂಝಿಯು ಕರ್ನಾಟಕದ ವಿವಿಧ ಪ್ರಾಂತಗಳಲ್ಲಿ ಸಂಚರಿಸಬೇಕಾಯಿತು. ತನ್ನ ಕಾರ್ಯದ ಜೊತೆ ಜೊತೆಗೆ ಶಾಸನ, ಹಸ್ತಪ್ರತಿ, ನಾಣ್ಯ, ಶಿಲ್ಪ ಮುಂತಾದ ಚಾರಿತ್ರಿಕ ದಾಖಲೆಗಳನ್ನು ಸಂಗ್ರಹಿಸತೊಡಗಿದ್ದ. ಈ ಕಾರ್ಯಕ್ಕಾಗಿಯೇ ಆತ ಕೆಲವು ಸ್ಥಳೀಯ ವಿದ್ವಾಂಸ (ಕುಲಕರಣಿ, ಶಾಸನಭೋಗ)ರನ್ನು ನೇಮಕಮಾಡಿಕೊಂಡಿದ್ದನು. ೧೮೫೮ರಲ್ಲಿ ಮದ್ರಾಸ್‌ನಲ್ಲಿ ಸ್ಥಾಪಿತವಾದ ಸರ್ಕಾರಿ ಹಸ್ತಪ್ರತಿ ಭಂಡಾರ (Government oriental manuscripts Library)ಕ್ಕೆ ಈತ ಸಂಗ್ರಹಿಸಿದ ಹಸ್ತಪ್ರತಿಗಳು ಸೇರ್ಪಡೆಗೊಂಡವು. ಆದ್ದರಿಂದ ಕನ್ನಡ ಹಸ್ತಪ್ರತಿಗಳ ಸರ್ವೇಕ್ಷಣೆ ಮತ್ತು ಸಂಗ್ರಹ ಕಾರ್ಯಕ್ಕೆ ಸಂಗ್ರಹ ಕಾರ್ಯಕ್ಕೆ ಶ್ರೀಕಾರ ಹಾಕಿದವ ಕರ್ನಲ್‌ಮೆಕಂಝಿಯೆಂಬ ಹೆಗ್ಗಳಿಕೆಗೆ ಪಾತ್ರನಾದನು. ತರುವಾಯ ಈತನ ಕಾರ್ಯವನ್ನು ಸಿ. ಪಿ. ಬ್ರೌನ್‌ಮುಂದುವರಿಸಿದನು. ಮದ್ರಾಸಿನಲ್ಲಿ ಸಂಗ್ರಹಿಸಲಾದ ಕನ್ನಡ ಹಸ್ತಪ್ರತಿಗಳಲ್ಲಿ ಕೆಲ ಭಾಗವನ್ನು ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಧಾರವಾಡದ ಕನ್ನಡ ಸಂಶೋಧನ ಸಂಸ್ಥೆ (KRI)ಗಳಿಗೆ ಹಂಚಿಕೊಡಲಾಯಿತು. ೧೮೮೪ರಲ್ಲಿ ಅಸ್ತಿತ್ವಕ್ಕೆ ಬಂದ ಮೈಸೂರಿನ ಪುರಾತತ್ವ ಇಲಾಖೆಯ ಮುಖ್ಯಸ್ಥರಾದ ಬಿ. ಎಲ್‌. ರೈಸ್‌ಅವರ ನೇತೃತ್ವದಲ್ಲಿ ಹಸ್ತಪ್ರತಿ ಸಂಗ್ರಹಕಾರ್ಯವನ್ನು ಪ್ರಾರಂಭಿಸಲಾಯಿತು. ಇದರಿಂದಾಗಿ ೧೮೯೧ರಲ್ಲಿ ‘ಗೌರ್ನಮೆಂಟ ಓರಿಯಂಟಲ್‌ಲೈಬ್ರರಿ’ ಯೆಂಬ ಹೆಸರಿನೊಂದಿಗೆ ಹಲವಾರು ಸಂಸ್ಕೃತ, ಕನ್ನಡ ಹಾಗೂ ಇತರ ಭಾಷೆಯ ಹಸ್ತಪ್ರತಿಗಳನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಸ್ಥಳಾಂತರಿಸಲಾಯಿತು. ಹೀಗೆ ಕನ್ನಡ ಹಸ್ತಪ್ರತಿಗಳ ಕ್ಷೇತ್ರಕಾರ್ಯ ಮದ್ರಾಸ್‌ನೆಲೆಯಿಂದ ಪ್ರಾರಂಭವಾಗಿ, ಮೈಸೂರಿನ ಮೂಲಕ ಕರ್ನಾಟಕದಾದ್ಯಂತ ವ್ಯಾಪಕವಾಗಿ ಹಬ್ಬಿಕೊಂಡಿತು. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಹೈದ್ರಾಬಾದ್‌ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಹೊರನಾಡಿನ ಭಾಗಗಳಲ್ಲಿ ನಡೆದ ಹಸ್ತಪ್ರತಿ ಕ್ಷೇತ್ರಕಾರ್ಯದ ಸಾಧನೆಗಳನ್ನು ಸ್ಥೂಲವಾಗಿ ವಿವೇಚಿಸಬಹುದು.

.೧. ದಕ್ಷಿಣ ಕರ್ನಾಟಕ

ಕರ್ನಾಟಕದಲ್ಲಿ ಹಸ್ತಪ್ರತಿ  ಕ್ಷೇತ್ರಕಾರ್ಯ  ಪ್ರಾರಂಭವಾದುದು ದಕ್ಷಿಣ ಭಾಗದ ಮೈಸೂರಿನಿಂದ. ಈ ಹಿಂದೆ ಹೇಳಿದಂತೆ ೧೮೮೪ರಲ್ಲಿ ಮೈಸೂರಿನಲ್ಲಿ ಅಸ್ತಿತ್ವಕ್ಕೆ ಬಂದ ಪುರಾತತ್ವಕ್ಕೆ ಇಲಾಖೆಯು ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಪ್ರಕಟಣೆಗಾಗಿ ‘ಓರಿಯಂಟಲ್‌ಲೈಬ್ರರಿ’ ಎಂಬ ಹೆಸರಿನಲ್ಲಿ ಪ್ರತ್ಯೇಕವಾದ ವಿಭಾಗವನ್ನೇ ಸ್ಥಾಪಿಸಿತು. ಎ. ಮಹದೇವಶಾಸ್ತ್ರೀಗಳು ಈ ಲೈಬ್ರರಿಯ ಪ್ರಥಮ ಕ್ಯೂರೇಟರ್‌, ನಂತರದಲ್ಲಿ ಆರ್‌. ರಾಘವೇಂದ್ರಚಾರ್‌‍, ಆರ್‌. ಶಾಮಾಶಾಸ್ತ್ರೀ, ಡಿ. ಶ್ರೀನಿವಾಸಚಾರ್‌, ಎಂ. ಎಸ್‌. ಬಸವಲಿಂಗಯ್ಯ, ಎಚ್‌. ಆರ್‌. ರಂಗಸ್ವಾಮಿ ಅಯ್ಯಂಗಾರ್‌, ಎಚ್‌. ದೇವೀರಪ್ಪನವರು ನಿರ್ದೇಶಕರಾಗಿದ್ದರು. ೧೯೧೬ರಲ್ಲಿ ಪ್ರಾರಂಭವಾದ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಈ ಸಂಸ್ಥೆಯನ್ನು ಒಪ್ಪಿಸಲಾಯಿತು. ೧೯೪೩ರಲ್ಲಿ ಇದರ ಹೆಸರನ್ನು ‘ಪ್ರಾಚ್ಯ ವಿದ್ಯಾಸಂಶೋಧನಾಲಯ’ ವೆಂದು ಬದಲಾವಣೆ ಮಾಡಲಾಯಿತು. ಸದ್ಯ ಇಲ್ಲಿ ಉರ್ದು, ಪರ್ಶಿಯನ್‌, ಸಂಸ್ಕೃತ ಭಾಷೆಯ ಹಸ್ತಪ್ರತಿಗಳೂ ಸೇರಿದಂತೆ ೨೦೭೦೮ ಕಟ್ಟುಗಳಿವೆ.

ಈ ಸಂಸ್ಥೆ ‘ಮೈಸೂರು ಗವರ್ನಮೆಂಟ ಓರಿಯಂಟಲ್‌ಲೈಬ್ರರಿ’  ಯಲ್ಲಿರುವ ಅಚ್ಚಿನ ಮತ್ತು ಕೈಬರಹ ಪುಸ್ತಕಗಳ ಪಟ್ಟಿ (೧೯೨೧) , ಮೈಸೂರು ಗವರ್ನಮೆಂಟ ಓರಿಯಂಟಲ್‌ಲೈಬ್ರರಿ ೧೯೨೨ ರಿಂದ ೧೯೨೯ರವರೆಗಿನ ಅವಧಿಯಲ್ಲಿ ಸಂಗ್ರಹಿಸಿದ ಅಚ್ಚಿನ ಮತ್ತು ಕೈಬರಹ ಕನ್ನಡ ಪುಸ್ತಕಗಳ ಪಟ್ಟಿ (೧೯೩೦), ಮೈಸೂರು ಯುನಿವರ್ಸಿಟಿ  ಓರಿಯಂಟಲ್‌ರೀಸರ್ಚ ಇನಸ್ಟಿಟ್ಯೂಟದಲ್ಲಿ ೧೯೪೧ ರಿಂದ ೧೯೫೪ರ ವರೆಗೆ ಸಂಗ್ರಹಿಸಿರುವ ಕೈಬರಹದ ಪುಸ್ತಕಗಳ ಪಟ್ಟಿ (೧೯೫೫), ಮತ್ತು ಮೈಸೂರು ಪ್ರಾಚ್ಯವಿದ್ಯಾಸಂಸ್ಥೆಯಲ್ಲಿ  ಕೈಬರಹದ ಕನ್ನಡದ ಗ್ರಂಥಗಳ ಅಕಾರದಿ ಸೂಚೀ -೧೮೯೧ -೧೯೫೧ ರ ವರೆಗೆ (೧೯೫೫) ಎಂಬ ನಾಲ್ಕು ಸೂಚಿಗಳನ್ನು ಹೊರತಂದಿದೆ. ಕನ್ನಡ ಹಸ್ತಪ್ರತಿಗಳಿಗೆ ಸಂಬಂಧಿಸಿದಂತೆ ಮೈಸೂರು ಪ್ರಾಚ್ಯವಿದ್ಯಾ ಸಂಶೋಧನಾಲಯದ ಕನ್ನಡ ಹಸ್ತಪ್ರತಿಗಳ ವರ್ಣಾನಾತ್ಮಕ ಸೂಚಿ ಹೆಸರಿನಲ್ಲಿ ನಾಲ್ಕು ಸಂಪುಟಗಳನ್ನು ಪ್ರಕಟಿಸಿದೆ. ಈ ಸಂಪುಟಗಳು ೧೯೫೪ರ ವರೆಗೆ ಸಂಗ್ರಹಿಸಿದ ಕನ್ನಡ ಹಸ್ತಪ್ರತಿಗಳ ಪರಿಚಯವನ್ನೊಳಗೊಂಡಿವೆ. ಶ್ರೀ ಬಿ. ಎಸ್‌. ಸಣ್ಣಯ್ಯನವರು ಈ ಸಂಪುಟಗಳ ಸಂಪಾದಕರಾಗಿದ್ದು , ಇವುಗಳಲ್ಲಿ ಜೈನ, ವೀರಶೈವ, ಬ್ರಾಹ್ಮಣ ಧರ್ಮಗಳಿಗೆ ಸಂಬಂಧಿಸಿದ ಅಪರೂಪ ಕೃತಿಗಳ ಪರಿಚಯವನ್ನು ಕಾಣಬಹುದು.

೧೯೬೬ ಗವರ್ನಮೆಂಟ ಓರಿಯಂಟಲ್‌ರೀಸರ್ಚ ಇನಸ್ಟಿಟ್ಯೂಟನಲ್ಲಿಯೂ ಕನ್ನಡ ಹಸ್ತಪ್ರತಿಗಳನ್ನು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಗೆ ವರ್ಗಾಯಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು ೫೦೦೦ ಹಸ್ತಪ್ರತಿಗಳು ಇಲ್ಲಿ ಸಂಗ್ರಹಿಸಲ್ಪಟ್ಟಿವೆ ಪ್ರತಿವರ್ಷ ಕ್ಷೇತ್ರಕಾರ್ಯ ಕೈಕೊಂಡ ಫಲವಾಗಿ ಅನೇಕ ಹಸ್ತಪ್ರತಿಗಳನ್ನು ಶೋಧಿಸಲಾಯಿತು. ಎರಡನೆಯ ನಾಗವರ್ಮನ ವರ್ಧಮಾನ ಪುರಾಣದ ಶೋಧ ಈ ಸಂಸ್ಥೆಯ ಆಪೂರ್ವ ಸಾಧನೆಯಾಗಿದೆ. ಗವರ್ನಮೆಂಟ ಓರಿಯಂಟಲ್‌ರೀಸರ್ಚ ಇನಸ್ಟಿಟ್ಯೂಟ ಈ ಮೊದಲು ನಾಲ್ಕು ಸೂಚಿ ಸಂಪುಟಗಳನ್ನು ಪ್ರಕಟಿಸಿದ್ದಿತು. ಇವುಗಳ ಮುಂದುವರಿದ ಸಂಪುಟಗಳನ್ನು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿದೆ. ೧೯೫೪ ರಿಂದ ೧೯೭೮ರ ವರೆಗಿನ ಅವಧಿಯಲ್ಲಿ ಸಂಗ್ರಹಿಸಲ್ಪಟ್ಟ ಹಸ್ತಪ್ರತಿಗಳ ಸೂಚಿಯನ್ನು ೫ ಸಂಪುಟ (೫,೬,೭,೮,೯) ಗಳಲ್ಲಿ ಶಾರೀ ಬಿ. ಎಸ್‌. ಸಣ್ಣಯ್ಯನವರು ಸಂಯೋಜಿಸಿ ಸಂಪಾದಿಸಿದ್ದಾರೆ. ಜೊತೆಗೆ ಇವರೇ ಸಿದ್ಧಪಡಿಸಿದ ಕನ್ನಡ ಹಸ್ತಪ್ರತಿಗಳ  ಮೈಕ್ರೋಫಿಲ್ಮ ಸೂಚಿ ಸಂಪುಟವೊಂದನ್ನು ಪ್ರಕಟಿಸಲಾಗಿದೆ. ಆರಾ, ಹೈದ್ರಾಬಾದ್‌, ಬಾಹುಬಲಿ, ಮದ್ರಾಸ್‌, ಕೊಲ್ಲಾಪುರ, ಮೂಡಬಿದಿರೆ, ಬೆಳ್ಗೊಳ, ವರಾಂಗ, ಸಾಲಿಗ್ರಾಮ, ಹೊಂಬುಜ, ಧಾರವಾಡ, ಮೈಸೂರುಗಳಲ್ಲಿರುವ ಮಹತ್ವದ ಕನ್ನಡ ಹಸ್ತಪ್ರತಿಗಳ ವಿವರಗಳನ್ನು ಈ ಸಂಪುಟ ಒಳಗೊಂಡಿದೆ. ಈ ಸಂಸ್ಥೆ ಇಲ್ಲಿಯವರೆಗೆ ಸುಮಾರು ೧೫೦ ಪ್ರಾಚೀನ ಗ್ರಂಥಗಳನ್ನು ಪರಿಷ್ಕರಿಸಿ  ಪ್ರಕಟಿಸಿದೆ. ಎಚ್‌. ದೇವೀರಪ್ಪ. ಎನ್‌. ಬಸವಾರಾಧ್ಯ. ಬಿ. ಎಸ್‌. ಸಣ್ಣಯ್ಯ, ಜಿ. ಜಿ. ಮಂಜುನಾಥನ್‌, ವೈ. ಸಿ. ಭಾನುಮತಿ, ಎಂ. ವಿ. ಮಂಜಪ್ಪಶೆಟ್ಟಿ, ಹ. ಕ. ರಾಜೇಗೌಡ, ಕೆ. ಆರ್‌. ಶೇಷಗಿರಿ, ಮೈಲಹಳ್ಳಿ ರೇವಣ್ಣ, ಎಸ್‌. ಬಸಪ್ಪ. ಎಸ್‌. ಎನ್‌. ಕೃಷ್ಣಜೋಯಿಸ್‌ಮುಂತಾದವರ ಶ್ರದ್ಧೆ, ಶ್ರಮ, ಆಸಕ್ತಿಯಿಂದಾಗಿ ಇಲ್ಲಿಯ ಹಸ್ತಪ್ರತಿ ಭಾಂಡಾರ ಗಮನಾರ್ಹವಾದ ಸಾಧನೆಯನ್ನು ಮಾಡಿದೆ.

ಮೈಸೂರಿನ ಸಂಸ್ಕೃತ ಮಹಾಪಾಠಶಾಲೆಯು ಮಹತ್ವದ ಹಸ್ತಪ್ರತಿ ಭಾಂಡಾರವನ್ನು ಹೊಂದಿದೆ. ೧೮೭೬ರಲ್ಲಿ ಚಾಮರಾಜ ಒಡೆಯರ ಪೋಷಕನಾಗಿದ್ದ ಕರ್ನಲ್‌  ಬಿ. ಬಿ. ಮ್ಯಾರಿಸನ್‌ಅರಮನೆಗೆ ಸಂಬಂಧಿಸಿದ ಹಸ್ತಪ್ರತಿಗಳನ್ನು ಈ ಮಹಾಪಾಠಶಾಲೆಗೆ ಸ್ಥಳಾಂತರಿಸಿದನು.  ಇಲ್ಲಿ ಸುಮಾರು ೨೦೦೦ ಹಸ್ತಪ್ರತಿಗಳಿದ್ದು, ಅದರಲ್ಲಿ ೨೫೦ ಕನ್ನಡ ಕೃತಿಗಳಿವೆ. ಏಕೋತ್ತರ ಶತಸ್ಥಲ, ಗಣಭಾಷ್ಯ ರತ್ನಮಾಲೆ, ಪ್ರಭುಲಿಂಗ ಲೀಲೆ, ದೀಕ್ಷಾಭೋಧೆ ಮೊದಲಾದ ವಿರಶೈವ ಸಾಹಿತ್ಯಕ್ಕೆ ಸಂಬಂಧಿಸಿದ ಹಸ್ತಪ್ರತಿಗಳಿವೆ. “ದಿ ಲಿಸ್ಟ ಆಫ್‌ದಿ ಆನ್‌ಪ್ರಿಂಟೆಡ್‌ಸಂಸ್ಕೃತ ಆಂಡ್‌ಕನ್ನಡ ಮ್ಯಾನುಸ್ಕ್ರಿಪ್ಟ್ಸ್‌ಇನ್‌ದಿ ಪ್ಯಾಲೇಸ್‌ಸರಸ್ವತಿ ಭಂಡಾರ (ಮಹಾರಾಜಾ ಸಂಸ್ಕೃತ ಕಾಲೇಜು, ಮೈಸೂರು)” ಹೆಸರಿನ ಸೂಚಿಸಂಪುಟವನ್ನು ಈ ಸಂಸ್ಥೆ ಪ್ರಕಟಿಸಿದೆ.

೧೯೯೭೭ ರಲ್ಲಿ ಪ್ರಾರಂಭವಾದ ಮೇಲುಕೋಟೆಯ ದಿ ಸಂಸ್ಕೃತ ರೀಸರ್ಚ ಅಕಾಡೆಮಿಯಲ್ಲಿ ಸುಮಾರು ೮೦೦೦ ಸಂಸ್ಕೃತ ಹಸ್ತಪ್ರತಿಗಳಿವೆ. ಇವುಗಳಲ್ಲಿ ೭೫ ಕನ್ನಡ ಪ್ರತಿಗಳಿವೆ. ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಗಿರಜಾ ಕಲ್ಯಾಣ, ಅನಂತನಾಥ ಪುರಾಣದ ಹಸ್ತಪ್ರತಿಗಳು ಈ ಸಂಗ್ರಹದಲ್ಲಿವೆ.

ಬೆಂಗಳೂರು ಕರ್ನಾಟಕದ ಮತ್ತೊಂದು ಮಹತ್ವದ ಕೇಂದ್ರ. ಬೆಂಗಳುರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ಭಾಂಡಾರದ ಬೆಳವಣಿಗೆಗೆ ಹಗಲಿರುಳು ದುಡಿದವರು ಶ್ರೀ ಎಸ್‌. ಶಿವಣ್ಣನವರು. ೧೯೭೧ರಲ್ಲಿ ಅಸ್ತಿತ್ವಕ್ಕೆ ಬಂದ ಈ ಭಾಂಡಾರದಲ್ಲಿ ಈವರೆಗೆ ಸುಮಾರು ೨೦೦೦ ಕಟ್ಟುಗಳನ್ನು ಸಂಗ್ರಹಿಸಲಾಗಿದೆ. ಇಲ್ಲಿನ ಬಹುಪಾಲು ಹಸ್ತಪ್ರತಿಗಳು ಶ್ರೀ ಬಿ. ಶಿವಮೂರ್ತಿಶಾಸ್ತ್ರಿಗಳ ಸಂಗ್ರಹದಿಂದ ಬಂದಂಥವುಗಳಾಗಿವೆ. ಡಾ. ಜಿ. ಎಸ್‌. ಶಿವರುದ್ರಪ್ಪ, ಡಾ. ಎಂ. ಚಿದಾನಂದಮೂರ್ತಿಯವರ ಪ್ರೋತ್ಸಾಹದಿಂದ ಬೆಳೆದ ಈ ಭಾಂಡಾರದಲ್ಲಿ ಕನ್ನಡ, ತೆಲುಗು, ತಮಿಲು, ಸಂಸ್ಕೃತ, ಪ್ರಾಕೃತ, ಹಿಂದಿ, ಉರ್ದು ಭಾಷೆಯ ಹಸ್ತಪ್ರತಿಗಳಿವೆ. ಜೊತೆಗೆ ಮುದ್ಧಣನ ರಮಾಶ್ವಮೇಧ, ಬಸವಪ್ಪಶಾಸ್ತ್ರಿಗಳ ಶಂಕರ ಶತಕಗಳು ಕವಿಯ ಸ್ವಹಸ್ತಾಕ್ಷರ ಪ್ರತಿಗಳಾಗಿರುವುದು ಒಂದು ವಿಶೇಷ. ೧೯೮೨ರಲ್ಲಿ ಶ್ರೀ ಎಸ್‌. ಶಿವಣ್ಣನವರ ಸಂಪಾದಕತ್ವದಲ್ಲಿ ಒಂದು ವಿವರಣಾತ್ಮಕ ಸೂಚಿ ಸಂಪುಟವನ್ನು ಈ ಸಂಸ್ಥೆ ಪ್ರಕಟಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ಮಹತ್ವದ ಸಂಸ್ಥೆ. ಕರ್ನಾಟಕದ ಏಕೀಕರಣದಲ್ಲಿ ಈ ಸಂಸ್ಥೆಯ ಪಾತ್ರ ಅತ್ಯಂತ ಗಮನಾರ್ಹವಾದುದು. ೧೯೭೫ರ ಸುಮಾರಿಗೆ ಹಸ್ತಪ್ರತಿಗಳ ಸಂಗ್ರಹಕಾರ್ಯಕ್ಕೆ ತೊಡಗಿದ ಪರಿಷತ್ತು ಸುಮಾರು ೬೦೦ ಹಸ್ತಪ್ರತಿಗಳನ್ನು ಸಂಗ್ರಹಿಸಿದೆ. ವಡ್ಡಾರಾಧನೆ, ರಾಮಚಂದ್ರ ಚರಿತಪುರಾಣ, ಭರತೇಶ ವೈಭವ, ಕುಮಾರವ್ಯಾಸ ಭಾರತ ಮುಂತಾದ ಕೃತಿಗಳು ಇಲ್ಲಿವೆ. ಆದಿಪುರಾಣದ ಒಂದು ಹಸ್ತಪ್ರತಿಯಲ್ಲಿ ಆರು ಹೊಸ ಪದ್ಯಗಳಿರುವುದು ಇಲ್ಲಿನ ವಿಶೇಷತೆಯಾಗಿದೆ. ಇತ್ತೀಚೆಗೆ ಈ ಸಂಸ್ಥೆಯ ಹಸ್ತಪ್ರತಿ ಸೂಚಿ ಸಂಪುಟವನ್ನು ಶ್ರೀ ಎಸ್‌. ಶಿವಣ್ಣನವರು ಸಿದ್ಧಪಡಿಸಿದ್ದಾರೆ.

೧೯೭೯ರಲ್ಲಿ ಸ್ಥಾಪನೆಯಾದ ಬಿ. ಎಂ. ಶ್ರೀ ಪ್ರತಿಷ್ಠಾನವು ಸುಮಾರು ೧೦೦೦ ಹಸ್ತಪ್ರತಿಗಳನ್ನು ಸಂಗ್ರಹಿಸಿದೆ. ಶ್ರೀ ಕೆಳದಿ ಗುಂಡಾಜೋಯಿಸ್‌ಮತ್ತು ನಾ ಗೀತಾಚಾರ್ಯರು ಸಂಪಾದಕತ್ವದಲ್ಲಿ ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ ಸಂಪುಟವನ್ನು ಈ ಸಂಸ್ಥೆ ಪ್ರಕಟಿಸಿದೆ. ಅಲ್ಲದೇ ಹಸ್ತಪ್ರತಿಶಾಸ್ತ್ರ ಕುರಿತ ನಾಲ್ಕು ತಿಂಗಳ ತರಬೇತಿಯನ್ನು ಸಹ ಈ ಸಂಸ್ಥೆ ಪ್ರತಿವರ್ಷ ನಡೆಸುತ್ತಲಿರುವುದು ಸ್ತುತ್ಯಾರ್ಹವಾದುದು.