ಮಾನವನ ಬೌದ್ಧಿಕತೆ ವಿಕಾಸವಾದಂತೆಲ್ಲಾ ಭಾಷೆಯಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸಿದ್ದಾನೆ. ಕ್ರಮೇಣ ಮೌಖಿಕ ಪರಂಪರೆಯನ್ನು ಬರವಣಿಗೆ ರೂಪದಲ್ಲಿ ವ್ಯಕ್ತಪಡಿಸಲು ಪ್ರಯತ್ನಸಿದ್ದಾನೆ. ಅಂದಿನ ಕಾಲದ ಆರಂಭದ ಬರವಣಿಗೆಯ ಮಾಧ್ಯಮಗಳೆಂದರೆ ಮಣ್ಣು, ಶಿಲೆ, ಲೋಹ ಮರಗಳಾಗಿದ್ದವು. ಈ ಮಾಧ್ಯಮಗಳಲ್ಲಿ ಬರವಣೆಗೆಗೆ ಹೆಚ್ಚು ಶ್ರಮ ಮತ್ತು ಸಮಯ ಬೇಕಾಗುತ್ತಿತ್ತು. ಹಾಗಾಗಿ ಭೂಜ್ವ ಪತ್ರ ತಾಳೆಗರಿ, ಬಟ್ಟೆ ಮುಂತಾದವುಗಳ ಮೇಲೆ ದೀರ್ಘ ಸಾಹಿತ್ಯಾದಿ ಗ್ರಂಥಗಳನ್ನು ಬರೆಯತೊಡಗಿದರು. ಇವುಗಳು ಹಸ್ತಪ್ರತಿಗಳಾಗಿ ನಮಗೆ ಲಭ್ಯವಾಗುತ್ತಿವೆ. ಇವೂ ಸಹ ಒಂದು ರೀತಿಯ ಐತಿಹಾಸಿಕ ಸಾಮಗ್ರಿಗಳೇ. ಹೀಗಾಗಿ ಶಿಲಾಶಾಸನಗಳಂತೆ ಇವುಗಳನ್ನು ಸ್ಮಾರಕಗಳೆಂದೂ ಸಂರಕ್ಷಿಸುತ್ತಾ ಬರಲಾಗಿದೆ. ಆದರೆ ಹಸ್ತಪ್ರತಿಗಳು ಇತರ ಐತಿಹಾಸಿಕ ವಸ್ತು(ಸ್ಮಾರಕ)ಗಳಂತೆ ಸಾರ್ವಜನಿಕವಾಗಿ ಗೋಚರ ವಾಗುವಂತಹವಲ್ಲ. ಬದಲಾಗಿ ರಹಸ್ಯವಾಗಿ ಖಾಸಗಿ ಒಡೆತನದಲ್ಲಿರುವ ಸ್ವತ್ತುಗಳು. ಇವು ಇತರ ಸ್ಮಾರಕಗಳಂತೆ ಶಾಶ್ವತವಾಗಿ ಉಳಿಯುವಂಥವು. ಅಲ್ಲ. ಕಾಲಗರ್ಭದಲ್ಲಿ ಮರೆಯಾಗುವ ಬಹುಬೇಗ ನಾಶವಾಗುವ ಅಲ್ಪಾಯುಷಿಗಳು.

ಹಸ್ತಪ್ರತಿ ಎಂದರೆ ಕೈಯಿಂದ ರೂಪ ಪಡೆದ ಬರವಣಿಗೆಯೆಂದು ಸಾಮಾನ್ಯ ಅರ್ಥ. ಪ್ರಾಚೀನರು ಯಾವುದೇ ಬರವಣಿಗೆಯನ್ನು ಕೈಬರಹದ ಮೂಲಕವೇ ಸಿದ್ಧಪಡಿಸುತ್ತಿದ್ದರು. ಗ್ರಂಥ, ದಾಖಲೆ, ಶಾಸನಗಳಲ್ಲದೆ ಅಚ್ಚಿಗಾಗಿ ಸಿದ್ಧಪಡಿಸುವ ಇಂದಿನ ಯಾವುದೇ ಬರವಣಿಗೆ (Press Copy) ಗಳು ಹಸ್ತಪ್ರತಿಗಳೇ ಆಗಿವೆ. ಈ ನಾಲ್ಕರಲ್ಲಿ ಪ್ರಾಚೀನ ಕಾಲದ ಗ್ರಂಥಗಳು ಮಾತ್ರ ಹಸ್ತಪ್ರತಿ ಎನಿಸಿಕೊಳ್ಳುತ್ತವೆ. ಮಿಕ್ಕವುಗಳನ್ನು ಕ್ರಮವಾಗಿ, ದಾಖಲು, ಪ್ರತಿ, ಶಾಸನಪ್ರತಿ, ಮುದ್ರಾಪ್ರತಿ ಎಂದು ಕರೆಯಬಹುದು. ಹಸ್ತಪ್ರತಿ ಎಂಬುದು ಬಹುಪ್ರತಿರೂಪದಲ್ಲಿ ಸಿಗುತ್ತದೆ ಮತ್ತು ಸಾಮಾನ್ಯೀಕೃತ ಬರವಣಿಗೆಯಾಗಿರುತ್ತದೆ. ದಾಖಲೆ ಮತ್ತು ಶಾಸನಗಳು ಏಕಪ್ರತಿ ರೂಪದಲ್ಲಿ ಸಿಗುತ್ತವೆ ಮತ್ತು ಘಟನೆಯ ನಿರ್ದಿಷ್ಟ ನಿರೂಪಣೆಯಾಗಿರುತ್ತವೆ. “ಹಸ್ತಪ್ರತಿಗಳನ್ನು ಲ್ಯಾಟೀನಿನ Manus ಕೈ ಮತ್ತು Scriptumಬರವಣಿಗೆಯ ಪದಗಳು ಸಂಯುಕ್ತ ರೂಪವಾದ Manuscripts (ಕೈ ಬರವಣಿಗೆ) ಎಂಬುದನ್ನು ಇಂಗ್ಲಿಷ್‌ ಭಾಷೆ Manuscripts ಎಂದು ತದ್ಭವೀಕರಿಸಿಕೊಂಡಿದೆ.

೧೯೭೪ ರಲ್ಲಿ ಮಂಡ್ಯದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಆರ್.ಸಿ.ಹಿರೇಮಠ ಅವರು ಹಸ್ತಪ್ರತಿಗಳ ಸಂಗ್ರಹ, ಅವುಗಳ ಸೂಚೀಕರಣ ಮೊದಲಾದವುಗಳನ್ನೊಳಗೊಂಡ Manuscriptology ಎಂಬ ಹೊಸ ಶಾಸ್ತ್ರವೇ ಬೆಳೆದು ಬರಬೇಕಾಗಿದೆ ಎಂದು ಹೇಳುವುದರ ಮೂಲಕ ಈ ಎರಡೂ ಪದಗಳನ್ನು ಮೊದಲ ಸಲ ಬೆಳಕಿಗೆ ತಂದರು. ಇತ್ತೀಚಿಗೆ ಇದೊಂದು ಅಧ್ಯಯನ ಶಿಸ್ತಾಗಿ (Academic discipline) ರೂಪುಗೊಂಡಿದೆ.

“ಹಸ್ತಪ್ರತಿ ಪದ ಪರಿಚಯವಾಗುವ ಮೊದಲು ಓಲೆಕಟ್ಟು, ಹೊತ್ತಿಗೆ, ಗ್ರಂಥ, ಶಾಸ್ತ್ರ, ನೀಲಿ ಹೊತ್ತಿಗೆ ಎಂಬ ಪದಗಳು ರೂಢಿಯಲ್ಲಿದ್ದವು. ಪ್ರಾಚೀನ ಕನ್ನಡ ಗ್ರಂಥಗಳಲ್ಲಿಯೂ ಇವುಗಳಿಗೆ ಪೊತ್ತಗೆ, ಕವಳಿಗೆ, ಪುಸ್ತಕ ಕಟ್ಟು, ವಹಿ, ಗ್ರಂಥ ಎಂದು ಕರೆಯಲಾಗುತ್ತಿದೆ”[1]

ಇಂಥ ಪ್ರಾಚೀನ ಬರವಣಿಗೆಯ ಅಮೂಲ್ಯ ಸಾಧನಗಳಾದ ಹಸ್ತಪ್ರತಿಗಳ ಸಿದ್ದತೆ ಮತ್ತು ಬರವಣಿಗೆ ಅಷ್ಟು ಸುಲಭ ಸಾಧ್ಯವಾಗುತ್ತಿರಲಿಲ್ಲ. ಇದು ಹೆಚ್ಚು ಶ್ರಮವನ್ನು ಬಯಸುತ್ತದೆ. ಹಸ್ತಪ್ರತಿ ತಯಾರಕರು ಹಾಗೂ ಲಿಪಿಕಾರರು ಇವುಗಳನ್ನು ತಯಾರಿಸಲು ತಿಂಗಳಾನುಗಟ್ಟಲೆ ಶ್ರಮಪಡುತ್ತಿದ್ದರು. ಡಾ.ವೀರೇಶಬಡಿಗೇರ ಅವರು ಹೇಳುವಂತೆ “ದೇಹ ಮತ್ತು ಮನಸ್ಸುಗಳ ಏಕಾಗ್ರತೆಯಿಂದ ನಡೆಯುವ ಬರವಣಿಗೆಯನ್ನು ಇಂದು ನಾಗರೀಕತೆ ಬರಡಾಗಿಸುತ್ತಿದೆ. ಕನ್ನಡ ಲಿಪಿ, ಲಿಪಿಗಾರರ ಪರಂಪರೆಗಳಂತಹ ಸಾಂಸ್ಕೃತಿಕ ಭಿನ್ನತೆಗಳನ್ನು ಇಂದು ಉಪೇಕ್ಷಿಸಲಾಗುತ್ತಿದೆ. ಇಂದು ಸಾಹಿತ್ಯ ಸಂಸ್ಕೃತಿ ಆಳುವವರೊಂದಿಗೆ ಅನುಸಂಧಾನಗೊಳ್ಳುತ್ತಿದೆ. ವ್ಯಕ್ತಿ ಪ್ರತಿಷ್ಠೆ ಮತ್ತು ಸಾಹಿತ್ಯಿಕ ರಾಜಕಾರಣ ತಾಂಡವಾಡುತ್ತಿದೆ. ಓದು ಬರಹ ಅಭ್ಯಾಸ ಆಸ್ವಾದ ಸಂವಹನದಂತಹ ಬಹುಮುಖಿ ಮಜಲುಗಳಲ್ಲಿ ಸಂಸ್ಕೃತಿ ನಿಷ್ಟವಾಗಿ ವ್ಯವಹರಿಸುತ್ತಿದ್ದು ತಿಳುವಳಿಕೆ ಯಾಂತ್ರೀಕೃತ ಸಾಹಿತ್ಯ ಸಂಸ್ಕೃತಿಗಳ ಏಕಸೂತ್ರೀಕರಣದಿಂದಾಗಿ ತನ್ನ ಬಹುಸಾಧ್ಯತೆಗಳನ್ನು ಕಳೆದುಕೊಳ್ಳುತ್ತಿದೆ. ಇಂಥ ವಿನಾಶಕಾರಿ ಜ್ಞಾನ ಮಾದರಿಗಳು ಉಸಿರುಗಟ್ಟಿ ಸಾಯದಂತೆ ಸಂರಕ್ಷಿಸಿಕೊಳ್ಳುವ ಜರೂರು ಇದೆ. ಅದಕ್ಕೆ ಆಧುನಿಕ ವಿದ್ಯಮಾನಗಳೊಡನೆ ಪ್ರತಿಸ್ಪರ್ಧಿಯಾಗಿ ನಿಲ್ಲುವ ತಾಕತ್ತನ್ನು ನಾವಿಂದು ತುಂಬ ಬೇಕಾಗಿದೆ. ಉಪಯುಕ್ತಗೊಳಿಸಬೇಕಿದೆ” ಎನ್ನುವುದು ವಾಸ್ತವ ಸಂಗತಿಯಾಗಿದೆ. ಇಂದಿನ ಆಧುನಿಕ ಶಿಕ್ಷಣ, ವೈಜ್ಞಾನಿಕ ಬದಲಾವಣೆಯಿಂದಾಗಿ ಇಂಥ ಹಸ್ತಪ್ರತಿಗಳನ್ನು ಕೀಳುಭಾವನೆಯಿಂದ ಮೂಲೆಗುಂಪು ಮಾಡಿರುವುದನ್ನು ನಾವು ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ಹಲವಾರು ಕಡೆ ನೋಡಿದ್ದೇವೆ, ಕೇಳಿದ್ದೇವೆ.

ಇಂಥ ಮನಸ್ಸುಗಳ ನಿರ್ಲಕ್ಷ್ಯದಿಂದಾಗಿ ಮೂಲೆಗುಂಪಾಗಿರುವ ಹಸ್ತಪ್ರತಿಗಳಲ್ಲಿ ಏನಿದೆಯೆಂಬುದನ್ನಾದರೂ ಒಮ್ಮೆ ನೋಡಿದರೆ ನಾಡಿನ ಸಂಸ್ಕೃತಿಯನ್ನು ಅರಿಯಬಹುದಾಗಿತ್ತು. ಏಕೆಂದರೆ ಹಸ್ತಪ್ರತಿಗಳು ಹಲವು ವಿಷಯ ಸಂಪತ್ತುಗಳ ಆಗರವಾಗಿದೆ. ಸಾಹಿತ್ಯ, ಸಂಗೀತ, ಶಾಸ್ತ್ರ, ಛಂದಸ್ಸು, ಇತಿಹಾಸ, ಜ್ಯೋತಿಷ್ಯ ರಟ್ಟಮತಗಳಿಂದ ಹಿಡಿದು ಮಾಟ, ಮಂತ್ರ, ಶಿಲ್ಪಶಾಸ್ತ್ರ, ಜಲಶಿಲ್ಪದವರೆಗೂ ತನ್ನ ತಕ್ಕೆಯಲ್ಲಿ ಅಡಗಿಸಿಕೊಂಡಿದೆ. ಇಂಥ ಹಲವಾರು ವಿಷಯಗಳಿಂದ ಕನ್ನಡ ಸಾಹಿತ್ಯ ಸಂಸ್ಕೃತಿಯು ಶ್ರೀಮಂತಗೊಂಡಿದೆ. ಸೂಕ್ಷ್ಮಮತಿಗಳಿಗೆ ಇಲ್ಲಿ ಒಂದು ಮಾತನ್ನು ಹೇಳಲು ಬಯಸುವೆ. ಜಗತ್ತು ಇಂದು ಕ್ಷಣಕ್ಷಣಕ್ಕೂ ಬದಲಾಗುತ್ತಿರುವಾಗ ಆ ಹಳೇಕಾಲದ ಹಸ್ತಪ್ರತಿಗಳನ್ನು ತಿಳಿದುಕೊಳ್ಳುವುದರಲ್ಲಿ ಅರ್ಥವಿಲ್ಲವೆಂದು ಕೀಳಿಕರಿಸುತ್ತಿದ್ದವರು ಇಂದು ಮತ್ತೇ ಹಸ್ತಪ್ರತಿಗಳ ಕಡೆ ಮುಖ ಮಾಡುತ್ತಿದ್ದಾರೆ. ಅಂದರೆ ಜ್ಯೋತಿಷಿಗಳ ಬಳಿ ಹಿಂದೂ ಮುಂದು ನೋಡದೇ ಹೋಗುತ್ತಾರೆ. ಹಳೇ ಕಾಲದ ತಾಳೆಗರಿಗಳ ಹಸ್ತಪ್ರತಿಗಳಿಂದ ಜ್ಯೋತಿಷ್ಯ ಹೇಳಿದರಂತೂ ಎಷ್ಟೂ ಹಣ ಬೇಕಾದರೂ ಕೊಡುತ್ತಾರೆ. ಜ್ಯೋತಿಷಿಗಳೂ ಅಷ್ಟೇ ಪಾಪುಲರ್ ಆಗಿ ಬೆಳೆಯುತ್ತಿದ್ದಾರೆಂಬುದನ್ನು ನಾವು ಮಾಧ್ಯಮಗಳಲ್ಲಿ ನಿತ್ಯ ಗಮನಿಸುತ್ತಿದ್ದೇವೆ. ಹಸ್ತಪ್ರತಿಗಳಿಂದ ಉಪಯೋಗ ಪಡೆದು ಅದನ್ನು ಕುರಿತು ಕೀಳುಭಾವನೆ ತಾಳುವುದಾದರೂ ಏಕೆ ಎಂಬ ಜಿಜ್ಞಾಸೆ ಮೂಡುತ್ತದೆ. ಇಂಥವುಗಳ ಮಧ್ಯೆಯೂ ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದೆ. ಏಕೆಂದರೆ “ಕೃತಿಯ ಸೃಷ್ಟಿ ಮತ್ತು ಪ್ರತಿಯ ಉತ್ಪಾದನೆಗಳಷ್ಟೇ ಅವುಗಳ ಪ್ರಸರಣ ಮತ್ತು ಸಂರಕ್ಷಣಗಳು ಮುಖ್ಯವಾದವು. ದೇವಾಲಯವನ್ನು ನಿರ್ಮಿಸಿದವನಿಗಿಂತ ಅದನ್ನು ರಕ್ಷಿಸಿದವನು ಪುಣ್ಯಶಾಲಿ ಎಂದೂ ಹಸ್ತಪ್ರತಿಗಳ ಸಂಗ್ರಹ ಮತ್ತು ಸಂರಕ್ಷಣೆಯ ಕಾರ್ಯಗಳು ಪಿತೃ ಋಣದಷ್ಟು ಪವಿತ್ರವಾದುದು ಎಂದು ಭಾವಿಸಿ ಕೆಲಸ ಮಾಡಿದ್ದೇ ಆದರೆ ಅದು ಎಂದೆಂದಿಗೂ ಪುಣ್ಯ ಕಾರ್ಯವೆನ್ನಿಸುವುದರಲ್ಲಿ ಸಂದೇಹವಿಲ್ಲ”[2]. ಒಂದರ್ಥದಲ್ಲಿ ಗತಿಸಿ ಹೋದ ಕವಿಯನ್ನು ಇವರು ಕೃತಿರೂಪದಲ್ಲಿ ಬದುಕಿಸಿದ ಪುಣ್ಯಭಾಜನರೆನಿಸುತ್ತಾರೆ. ಹೀಗೆ ಕೃತಿ ಪ್ರಸರಣಕ್ಕೆ ಮತ್ತು ಸಂಕರಕ್ಷಣೆಗೆ ಲಿಪಿಕಾರರು, ಅಭ್ಯಾಸಿಗಳು, ಮೋಕ್ಷಾಪೇಕ್ಷಿಗರು, ಧರ್ಮಾಧಿಕಾರಿಗಳು, ಧರ್ಮಾಭಿಮಾನಿಗಳು, ವ್ಯಕ್ತಿಗಳು ಕಾರಣಕರ್ತರಾಗಿದ್ದರೆಂಬುದರಲ್ಲಿ ಸಂಶಯವಿಲ್ಲ.

“ಕಷ್ಟೇನ ಲಿಖಿತಂ ಮಯಾ ಯತ್ನೇನ ಪರಿಪಾಲಯೆತ್‌” ಎಂದು ಲಿಪಿಕಾರರು ಹಸ್ತಪ್ರತಿ ಪುಷ್ಟಿಕೆಗಳಲ್ಲಿ ವಿನಮ್ರವಾಗಿ ಹೇಳಿರುವುದುಂಟು. ಕಷ್ಟಪಟ್ಟು ಬರೆದಿದ್ದೇನೆ ಪ್ರಯತ್ನ ಪೂರ್ವಕ ರಕ್ಷಿಸಿ ಎಂದು ಸಮಸ್ತ ಲಿಪಿಕಾರರ ಪರವಾಗಿ ಹೇಳಿರುವುದುಂಟು. ಹೀಗೆ ಹೇಳಿರುವುದರ ಹಿಂದೆ ತಮ್ಮ ದೈಹಿಕ ಮತ್ತು ಮಾನಸಿಕ ಶ್ರಮದ ಫಲದ ರೂಪಗಳಾದ ಹಸ್ತಪ್ರತಿಗಳನ್ನು ಮುಂದಿನ ತಲೆಮಾರಿನವರೆಗೆ ಉಳಿಸುವುದೇ ಆಗಿದೆ. ಏಕೆಂದರೆ ಇಂದಿನ ಮುದ್ರಣ ಮಾಧ್ಯಮದಷ್ಟು ಸಲೀಸಾಗಿ ಪುಸ್ತಕಗಳನ್ನು ರಚಿಸುವುದು ಅಷ್ಟು ಸುಲಭವಾಗಿರಲಿಲ್ಲ. ಸದೃಢ ದೇಹ ಮತ್ತು ಮನಸ್ಸುಗಳು ಈ ಕಾರ್ಯಕ್ಕೆ ಬೇಕಾಗುತ್ತಿತ್ತು. ಇವುಗಳಲ್ಲಿ ನೈಪುಣ್ಯತೆ ಪ್ರಧಾನ ಪಾತ್ರವನ್ನು ವಹಿಸುತ್ತಿತ್ತು. ಕಂಠದಿಂದ ಓಲೆಗರಿಗಳ ಮೇಲೆ ಲಿಪಿಗಳನ್ನು ಮೂಡಿಸುವುದೆಂದರೆ ಸಾಹಸದ ಕೆಲಸವೇ ಸರಿ. ಓಲೆಗರಿಗಳನ್ನು ತೊಡೆಯ ಮೇಲೆ ಇಟ್ಟುಕೊಂಡು ಅದಕ್ಕೆ ಭದ್ರತೆ ಮತ್ತೆ ಹಿಡಿತಕ್ಕಾಗಿ ಆ ಓಲೆಗರಿಯ ಕೆಳಗೆ ಹಲಗೆಯಂತಹ ಘನಾಕೃತಿಯ ಫಲಕ (ಹಲಗೆಗಳನ್ನು) ಬಳಸುತ್ತಿದ್ದರು. ಇದರ ಮೇಲೆ ಓಲೆಗರಿಗಳನ್ನಿಟ್ಟು ಕಂಠದಿಂದ ಲಿಪಿಗಳನ್ನು ಕೊರೆಯುತ್ತಿದ್ದರು. ಹಾಗೆ ಕೊರೆಯುತ್ತಿರುವ ಸಂದರ್ಭದಲ್ಲಿ ಸ್ವಲ್ಪ ಆಯ ತಪ್ಪಿದರೂ ಲಿಪಿಕಾರನಿಗೆ ಹಾಗೂ ಓಲೆಗರಿಗಳಿಗೆ ಏಕಕಾಲದಲ್ಲಿ ಅಪಾಯ ತಪ್ಪಿದ್ದಲ್ಲ. ಏಕೆಂದರೆ ಕಂಠವು ಈಗಿನ ಭರ್ಚಿಯಾಕಾರದ ಕಬ್ಬಿಣದಾಗಿದ್ದು, ಅದರ ಮೂತಿಯು ಚೂಪಾಗಿರುತ್ತಿತ್ತು. ಹಾಗಾಗಿ ಲಿಪಿಕಾರ ಒಂದು ಆಯಕಟ್ಟಿನಲ್ಲಿ ಬರೆಯುತ್ತಿದ್ದ. ಅದೂ ಅಪ್ಪಿತಪ್ಪಿ ಜಾರಿದರೆ ನೇರವಾಗಿ ತೊಡೆಗೆ ಚುಚ್ಚಿ ನೋವುಂಟು ಮಾಡುವ ಅಪಾಯವೇ ಹೆಚ್ಚು. ಪ್ರತಿಯಲ್ಲಿ ಅಕ್ಷರ ಸ್ವಾಲಿತ್ಯವಾದರೆ ಅವುಗಳನ್ನು ಅಳಿಸಿ ಹಾಕಿ ಮತ್ತೇ ಹೊಸ ಅಕ್ಷರ ಕೊರೆಯಲು ಬರುತ್ತಿರಲಿಲ್ಲ. ಗರಿಗಳ ಮೇಲೆ ಅಕ್ಷರಗಳನ್ನೂ ಎರಡು ಬದಿಯಲ್ಲಿ ಅಂದರೆ ಒಂದೇ ಗರಿಯ ಹಿಂದು ಮುಂದೆ ಕೊರೆಯಲಾಗುತ್ತಿತ್ತು. ಕಂಠವನ್ನು ಒತ್ತಿ ಬರೆದರೆ ಗರಿ ಮುರಿದು ಹಾಳಾಗುವುದು ಮತ್ತು ಹಿಂದಿನ ಪುಟದ ಅಕ್ಷರಗಳೂ ನಾಶವಾಗುತ್ತಿದ್ದವು. ಹೀಗಾಗಿ ಲಿಪಿಕಾರ ಏಕಕಾಲದಲ್ಲಿ ತನ್ನ ರಕ್ಷಣೆಯನ್ನೂ ಹಸ್ತಪ್ರತಿಯ ಅಂದವೂ ಕೆಡದಂತೆ ರಚಿಸಬೇಕಾಗಿತ್ತು. ಇಂಥ ಶ್ರಮದ ಸೃಷ್ಟಿಯಾದ ಪ್ರಾಚೀನ ಹಸ್ತಪ್ರತಿಗಳು ನಾಡಿನಲೆಲ್ಲಾ ಪ್ರಸರಿಸಿ ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತಿದ್ದವು. ಇಂದು ಅನೇಕ ಕಾರಣಗಳಿಂದ ಅವು ಮೂಲೆಗುಂಪಾಗಿ ಕೊಳೆಯುತ್ತಾ ಬಿದ್ದಿವೆ. ಇಂಥವುಗಳನ್ನು ನಮ್ಮ ಪ್ರಾಚೀನರ ದಾಖಲೆಗಳೆಂದು ಅಷ್ಟು ಇಷ್ಟು ಸಂಗ್ರಹಿಸಿ ಒಂದು ಮೂಲೆಯಲ್ಲಿ ಹಾಕಿ ಕೂಡಿಟ್ಟಿದ್ದೇವೆ. ಅವುಗಳು ನಮ್ಮ ಸಂಸ್ಕೃತಿಯ ಆಕರಗಳು ಎಂದೂ ತಿಳಿದಿದ್ದೂ ಅವನ್ನು ಸಂರಕ್ಷಿಸುವ ಕೆಲಸದಲ್ಲಿ ನಾವು ಹಿಂದೆ ಉಳಿದಿದ್ದೇವೆ. ವಿದೇಶಿ ಮ್ಯೂಸಿಯಂಗಳಲ್ಲಿ ಕನ್ನಡದ ಸಾವಿರಾರು ಪ್ರತಿಗಳು ಸುರಕ್ಷಿತವಾಗಿ ಸಂರಕ್ಷಣೆಗೊಂಡಿವೆ ಎಂದರೆ ಅವುಗಳ ಮಹತ್ವವನ್ನು ಮತ್ತಷ್ಟು ಅರಿಯಬಹುದಾಗಿದೆ.

ಹಸ್ತಪ್ರತಿ ಸಂರಕ್ಷಣ ವಿಧಾನದಲ್ಲಿ ಹಸ್ತಪ್ರತಿಗಳ ಬಾಹ್ಯಸಂರಕ್ಷಣೆ, ಆಂತರಿಕ ಸಂರಕ್ಷಣೆ ಎಂದು ವಿಂಗಡಿಸಬಹುದು. ಇದನ್ನು ಸ್ಥೂಲವಾಗಿ ಪ್ರತಿ-ಕೃತಿಗಳ ಸಂರಕ್ಷಣೆಯೆಂದೂ ಕರೆಯಬಹುದು.

. ಹಸ್ತಪ್ರತಿಗಳ ಬಾಹ್ಯ ಸಂರಕ್ಷಣೆ

ಬಾಹ್ಯ ಸಂರಕ್ಷಣೆಯೆಂದರೆ ಹಸ್ತಪ್ರತಿ ಕಟ್ಟುಗಳ ರಕ್ಷಣೆ. ಪ್ರತಿಯಲ್ಲಿ ಹಲವಾರು ಪತ್ರಗಳಿದ್ದು ಅವು ಸರಿಯಾಗಿ ವ್ಯವಸ್ಥಿತವಾಗಿ ಇರುವಂತೆ ಮತ್ತು ಕೈಯಿಂದ ಅಥವಾ ಬೇರೆ ಕಾರಣಾಂತರಗಳಿಂದ ಕೆಳಗೆ ಜಾರಿ ಬಿದ್ದರೂ ಪ್ರತಿಗಳ ರಕ್ಷಣೆಯಾಗಿ ರಕ್ಷಾಕವಚಗಳನ್ನು ಅಳವಡಿಸುವುದು, ಧೂಳು ಕ್ರಿಮಿಕೀಟಗಳು ಆಕ್ರಮಿಸದಂತೆ ನೋಡಿಕೊಳ್ಳುವುದು. ಮಳೆ ಗಾಳಿಗಳಿಂದ ರಕ್ಷಿಸುವ ಇಂತಹ ಹತ್ತು ಹಲವು ಕಾರ್ಯಗಳು ಹಸ್ತಪ್ರತಿಗಳ ಬಾಹ್ಯ ಸಂರಕ್ಷಣೆಯೆನಿಸಿಕೊಳ್ಳುತ್ತವೆ. ಇವುಗಳ ಈ ಕಾರ್ಯದಲ್ಲಿ ‘ಪಾರಂಪರಿಕ ವಿಧಾನ’ ಹಾಗೂ ‘ಆಧುನಿಕ ವಿಧಾನ’ಗಳೆಂದು ವಿಭಾಗಿಸಬಹುದು.

.. ಹಸ್ತಪ್ರತಿಗಳ ಬಾಹ್ಯ ಸಂರಕ್ಷಣೆಯಲ್ಲಿ ಪಾರಂಪರಿಕರ ವಿಧಾನ

ನಮ್ಮ ಪ್ರಾಚೀನರಿಗೆ ಹಸ್ತಪ್ರತಿ ರಚನೆಯ ಹಿಂದಿನ ಶ್ರಮದ ಅಗಾಧ ಅರಿವಿತ್ತು. ಅವುಗಳ ಕುರಿತು ಅಪಾರ ಗೌರವ ಭಕ್ತಿ ಭಾವ ಇದ್ದುದರಿಂದಲೇ ಅವುಗಳು ಹಾಳಾಗದಂತೆ ನೋಡಿಕೊಳ್ಳುತ್ತಿದ್ದರು. ಈ ಕುರಿತು ಲಿಪಿಕಾರರೇ ಹಲವಾರು ಗ್ರಂಥಗಳಲ್ಲಿ ಭಿನ್ನವಿಸಿಕೊಂಡಿರುವುದು ಕಂಡುಬರುತ್ತವೆ.

ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ
ಅಥವಾ ಪುನರಾಯಾತಂ ಜೀರ್ಣಂ ಭಷ್ಯಾಚ ಖಂಡಶಃ ||
ತೈಲಾದ್ರಕ್ಷೆಜ್ಜಲಾದ್ರಕ್ಷೇತ್ರಕ್ಷೇಚ್ಥಿಲ ಬಂದನಾತ್
ಮೂರ್ಖ ಹಸ್ತೇ ನದಾತಮ್ಯಾಮೇನಂ ವದತಿ ಪುಸ್ತಕಂ ||

ಎಂದು ಹೇಳಿಕೊಂಡಿರುವ ಪರಿ ಬಾಹ್ಯವಾಗಿ ಹಸ್ತಪ್ರತಿಗಳಿಗೆ ಒದಗುವ ಅಪಾಯವನ್ನು ಮುನ್ನೆಚ್ಚರಿಕೆಯಾಗಿ ಅರಿತು ಹೇಳಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹಸ್ತಪ್ರತಿಗಳಿಗೆ ಬಾಹ್ಯವಾಗಿ ಕಾಡುವ ಜಿರಲೆ, ಕೀಟ, ಎಣ್ಣೆ, ಜಲ, ಅಗ್ನಿ, ಗಾಳಿ, ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಪರಿಚಲನವಾಗುವಾಗ ಆಗುವ ತೊಂದರೆ, ಮೂರ್ಖರ ಅವಜ್ಞೆಗೆ ಕಾರಣವಾಗಿ ನಾಶವಾಗಬಹುದು ಎಂಬಂತಹ ಅನೇಕ ಕಾರಣಗಳು ಈ ಸಾಲಿಗೆ ಸೇರುತ್ತವೆ. ಪುಸ್ತಕ ವನಿತೆ ವಿತ್ತ’ ಈ ಮೂರು ಇತರರ ಕೈಗೆ ಸೇರಿದರೆ ಅವು ಮರಳಿ ಬಂದರೆ ಜೀರ್ಣವಾಗಿರುತ್ತವೆ. ಭ್ರಷ್ಟವಾಗಿರುತ್ತವೆ. ಇಲ್ಲವೆ ಅರ್ಧಂಬರ್ಧವಾಗಿರುತ್ತವೆ. ಎಣ್ಣೆ ನೀರು ಸೋಂಕದ ಹಾಗೆ ಪುಸ್ತಕವನ್ನು ರಕ್ಷಿಸಬೇಕು. ಅವುಗಳನ್ನು ಸಡಿಲವಾಗಿ ಕಟ್ಟಬಾರದು ಮೂರ್ಖರ ಕೈಗೆ ಅದನ್ನು ಕೊಡಬಾರದೆಂದು ಪುಸ್ತಕ ಹೇಳುತ್ತದೆ”.[3]

ಇಂದಿಗೂ ಹಸ್ತಪ್ರತಿಗಳು ಸುಸ್ಥಿತಿಯಲ್ಲಿ ಲಭ್ಯವಾಗಲು ಅನೇಕ ಕಾರಣಗಳು ಇವೆ. ನಮ್ಮ ಹಿರಿಯರು ಅಂದರೆ ಹಿಂದಿನ ತಲೆಮಾರಿನವರು ಹಸ್ತಪ್ರತಿಗಳನ್ನು ದೈವದ ಕಲ್ಪನೆ ಹಿನ್ನಲೆಯಲ್ಲಿ ಕಂಡವರಾಗಿದ್ದರು. ಇವುಗಳು ‘ಸರಸ್ವತಿಯ’ ರೂಪವೇಂದೇ ಭಾವಿಸಿದ್ದರು. ಹಾಗಾಗಿ ಹಸ್ತಪ್ರತಿಗಳು ಜ್ಞಾನದ ಪ್ರಸರಣೆಯ ಬದಲಾಗಿ ದೈವದ ಪ್ರಸರಣ ಸಾಧನವಾಗಿ ಪರಿವರ್ತಿತಗೊಂಡು ದೇವರ ಜಗಲಿಯಲ್ಲಿ ಅಲಂಕರಿತಗೊಂಡವು. ಈಗಲೂ ಅವುಗಳನ್ನು ದೈವದ ಕಲ್ಪನೆಯಲ್ಲಿ ನೋಡುತ್ತಿರುವ ಮನೋಭಾವದವರು ಅನೇಕರಿದ್ದಾರೆ. ಹಾಗಾಗಿ ಇಂದಿಗೂ ಅದೇ ಮಾದರಿಯಲ್ಲಿ ಪೂಜಿಸಲಾಗುತ್ತಿದೆ. (ನಾನು ಹಸ್ತಪ್ರತಿ ಕ್ಷೇತ್ರಕಾರ್ಯ ಕೈಗೊಂಡಿದ್ದ ಸಂದರ್ಭದಲ್ಲಿ ಅನೇಕ ಕಡೆ ಜಗಲಿಮೇಲಿರುವುದನ್ನು ಗಮನಿಸಿದ್ದೇನೆ) ಈ ಕಾರಣಕ್ಕಾಗಿಯೇ ಪ್ರತಿ ವರ್ಷ ನಮ್ಮಲ್ಲಿ ಸರಸ್ವತಿ ಪೂಜೆಯನ್ನು ಮಾಡುತ್ತ ಬಂದಿದ್ದೇವೆ ಎಂದು ಡಾ.ಎಂ.ಎಂ. ಕಲಬುರ್ಗಿಯವರು ಹೇಳಿರುವುದು ಗಮನಾರ್ಹ. ಇಂಥ ಪೂಜೆ ಮಾಡುವ ನೆಪದಲ್ಲಿ ಎಣ್ಣೆ ನೀರು ಹಾಕಿ ಹಾಕಿ ನಾಶದ ಅಂಚಿಗೆ ತಲುಪುವಂತೆ ಮಾಡುತ್ತಿದ್ದಾರೆಂದರೆ ತಪ್ಪಾಗಲಾರದು. ಎಣ್ಣೆಯಿಂದ ಧೂಳಿನ ಕಣಗಳು ಅಂಟಿಕೊಂಡು ಕ್ರಿಮಿಕೀಟಗಳು ಹುಟ್ಟಿಕೊಳ್ಳಲು ಕಾರಣವಾಗುತ್ತವೆ. ನೀರಿನಿಂದ ಹಸ್ತಪ್ರತಿ ಒದ್ದೆಯಾಗಿ ಒಂದು ತರಹ ಮುದ್ದೆಯಂತಾಗಿ, ಮೆತ್ತಗಾಗಿ ಬೂಸ್ಟ್ ಹಿಡಿದು ಪ್ರತಿಗಳು ಒಂದಕ್ಕೊಂದು ಅಂಟಿಕೊಂಡು ನಾಶವಾಗುವುದರಲ್ಲಿ ಸಂಶಯಪಡಬೇಕಿಲ್ಲ. ಆದರೆ ಪೂಜೆಯ ನೆಪದಲ್ಲಿ ವರ್ಷಕ್ಕೊಮ್ಮೆಯಾದರೂ ಧೂಳು ಕೊಡವಿ ಸ್ವಚ್ಛ ಮಾಡಿ ಹೊಸ ಬಟ್ಟೆ ಕಟ್ಟಿ ಸಂರಕ್ಷಿಸಿಕೊಂಡು ಬಂದಿರುವುದು ಕನ್ನಡ ನಾಡಿಗೆ ಉಪಕಾರ ಮಾಡಿದ್ದಾರೆಂಬುದು ಅಷ್ಟೇ ಸತ್ಯ.

ಹಸ್ತಪ್ರತಿಗಳನ್ನು ಸಡಿಲವಾಗಿ ಕಟ್ಟುವುದರಿಂದ ಗರಿಗಳು ಸಡಿಲಗೊಂಡು ಅಸ್ತವ್ಯಸ್ತವಾಗಿ ಮುರಿದುಹೋಗುವ ಸಂಭವವೇ ಹೆಚ್ಚು. ಇದಕ್ಕಿಂತ ದೊಡ್ಡ ಅಪಾಯವೆಂದರೆ ಸ್ವಿಲ್ವರ್ ಫಿಶ್‌ (ಬೆಳ್ಳಿ ಮೀನು) ಗಳಂತಹ ಹುಳುಗಳು ಸಡಿಲಗೊಂಡ ಗರಿಗಳಲ್ಲಿ ಸೇರಿಕೊಂಡು ಇಡೀ ಕಟ್ಟನ್ನೇ ತಿಂದು ಹಾಕಿ ಬಿಡುತ್ತವೆ. ಅವು ಬಿಡುವ ರಾಸಾಯನಿಕವಾದಂತಹ ದ್ರಾವಣದಿಂದ ಮತ್ತಷ್ಟು ಹುಳುಗಳು ಹುಟ್ಟುತ್ತವೆ. ಅವುಗಳಿಗೆ ಅನಾಯಾಸವಾಗಿ ಮನೆಮಾಡಿ ಕೊಟ್ಟಂತಾಗುತ್ತವೆ. ಸಡಿಲಗೊಂಡ ಗರಿಗಳಲ್ಲಿ ಧೂಳು ಸೇರಿ ನಾಶವಾಗುತ್ತದೆ. ಆದ್ದರಿಂದ ಹಸ್ತಪ್ರತಿ ದಾರದಿಂದ ಬಿಗಿಯಾಗಿ ಕಟ್ಟಬೇಕು.

.. ರಕ್ಷಾ ಕವಚ

ಹಸ್ತಪ್ರತಿ ಕಟ್ಟುಗಳಲ್ಲಿಯ ಗರಿಗಳನ್ನು ಅನುಕ್ರಮವಾಗಿ ಜೋಡಿಸಿ ಅದರ ಮೇಲೆ ಕೆಳಗೆ ಅಂದರೆ ಗರಿಗಳ ಎರಡೂ ಭಾಗದಲ್ಲಿ ಮರದ ಹಲಗೆಗಳನ್ನು (ಫಳಿಗಳನ್ನು) ಇಟ್ಟು ಕಟ್ಟುತ್ತಿದ್ದರು. ಗರಿಗಳು (Folis) ಅಸ್ತವ್ಯಸ್ತವಾಗದಂತೆ ಅದರ ಅಂಚುಗಳು ಮುರಿಯದಂತೆ ಓಲೆಗರಿಯ ಆಕೃತಿಗೆ (ಅಳತೆಗನುಗುಣವಾಗಿ) ಕೊರೆದು ಆ ಫಳಿಗಳ ನಡುವೆ ಎರಡೂ ಬದಿಗೆ ರಂಧ್ರ ಕೊರೆದು ಅದರ ಮೂಲಕ ದಾರ ಪೊಣಿಸಿ ಕಟ್ಟುಗಳನ್ನು ಬಿಗಿಯಾಗಿ ಕಟ್ಟುತ್ತಿದ್ದರು. ದಾರ ಜಗ್ಗುವಿಕೆಯಿಂದ ಗರಿಗೆ ಪೆಟ್ಟು ತಾಗಿ ರಂಧ್ರಗಳು ದಿನದಿಂದ ದಿನಕ್ಕೆ ದೊಡ್ಡದಾಗದಂತಿರಲೆಂಬ ಉದ್ದೇಶದಿಂದ ಅವುಗಳಿಗೆ ಬೆಳ್ಳಿಯ ಉಂಗುರ ಮಾಡಿಸಿ ಹಾಕಿರುವ ಪ್ರತಿಗಳೂ ಇವೆ. ಇಂಥ ಉಂಗುರಗಳನ್ನು ಅಳವಡಿಸಿರುವ ಹಸ್ತಪ್ರತಿಗಳು ವಿರಳವೆಂದೇ ಹೇಳಬಹುದು. “ಕುಮಾರವ್ಯಾಸ ಭಾರತದ ಒಂದು ಪ್ರತಿ ಕನ್ನಡ ಅಧ್ಯಯನ ಸಂಸ್ಥೆ ಮೈಸೂರಿನಲ್ಲಿದೆ. ಇದೊಂದು ಅಪರೂಪದ ದರ್ಶನ”.[4] ಇದರಂತೆ ಬೆಳ್ಳಿಯ ಉಂಗುರದ ಬದಲಾಗಿ ಕಬ್ಬಿಣದ ರಿಂಗುಗಳನ್ನು ಅಳವಡಿಸಿರುವ ಹಸ್ತಪ್ರತಿಗಳೂ ಲಭ್ಯವಾಗಿವೆ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ನಮಗೆ ಅಲ್ಲಲ್ಲಿ ಗೋಚರಿಸಿವೆ. ಕೆಲವೊಮ್ಮೆ ಗರಿ ಸಂಖ್ಯೆ ಬಹಳವಿದ್ದರೆ ಕೈಯಲ್ಲಿ ಎತ್ತಿ ಹಿಡಿದು ಓದುವಾಗ ಗರಿ ಜಾರಬಾರದೆಂದು ರಂಧ್ರದಲ್ಲಿ ದಾರಕ್ಕೆ ಬದಲಾಗಿ ಕಬ್ಬಿಣದ ಅಥವಾ ಮರದ ಕಡ್ಡಿ ಬಳಸುತ್ತಿದ್ದರು. ಇದಕ್ಕೆ ಕಂಬಿಯೆಂದು ಕರೆಯುತ್ತಿದ್ದರು. ಕಾಮನ ಕಾರ್ಮುಕವ ಕತ್ತರಿಸಿ ಪುಸ್ತಕಕೆಸೆವ ಕಂಬಿ ಮಾಡಿ ಎಂಬ ಭಾಸ್ಕರ ಕವಿಯ ಹೇಳಿಕೆಯನ್ನು ಇಲ್ಲಿ ಸೇರಿಸಬಹುದು.”[5]

ಕಾಗದ ರೂಪದಲ್ಲಿ ಸಿಗುವ ಕೋರಿಕಾಗದ, ನೀಲಿಕಾಗದದ ಕಟ್ಟುಗಳಿಗೂ ರಕ್ಷಾಕವಚಗಳಾಗಿ ಮರದ ಹಲಗೆಯ ಫಳಿಗಳನ್ನೆ ಜೋಡಿಸಿದ್ದಾರೆ. ಏಕೆಂದರೆ ಈ ಕಾಗದಗಳು ತಾಳೆಗರಿಗಳ ಹಾಗೆ ಬಿಡಿ ಬಿಡಯಾಗಿರುವ ಹಾಳೆಗಳು ಆಕಾರದಲ್ಲಿ ಮಾತ್ರ ಇವು ಸ್ವಲ್ಪ ವ್ಯತ್ಯಾಸವಾಗಿರುತ್ತದೆ. ಸಾಮಾನ್ಯವಾಗಿ ಹಾಳೆಗಳು ದಪ್ಪವಾಗಿರುತ್ತವೆ ಮತ್ತು ತೆಳುವೂ ಆಗಿರುತ್ತವೆ. ದಪ್ಪ ಹಾಳೆಗಳು ಕೋರಿ ಕಾಗದವಾಗಿರುತ್ತದೆ. ಇವು ಒಮ್ಮೆಮ್ಮೆ ಎರಡು ಮೂರು ಕಾಗದಗಳಿಗೆ ಅಂಟು ಹಾಕಿ ಸಿದ್ಧಪಡಿಸಿರುವ ನಿದರ್ಶನಗಳೂ ಇವೆ. ಕಾಗದದ ಪ್ರತಿಗಳಿಗೆ ಕಟ್ಟಲಾಗುವ ಹಲಗೆಗಳಿಗೆ ರಂಧ್ರಗಳು ಇಲ್ಲದಿರುವುದು ವಿಶೇಷ. ಕಾರಣವಿಷ್ಟೇ ಈ ರಂಧ್ರಗಳು ದಾರದ ಒತ್ತಡಕ್ಕೆ ಸಿಕ್ಕು ಬಹುಬೇಗನೆ ದೊಡ್ಡ ರಂಧ್ರಗಳಾಗಿ, ಹರಿದು ಅಕ್ಷರಗಳು ನಾಶವಾಗುವುದಲ್ಲದೆ ಪ್ರತಿಯೂ ನಾಶವಾಗುತ್ತದೆ. ಇದನ್ನು ಬಿಟ್ಟರೆ ಪುಸ್ತಕ ರೂಪದಲ್ಲಿ ದೊರೆಯುವ ಹಸ್ತಪ್ರತಿಗಳ ಸಂಖ್ಯೆ ಅಪಾರ. ಇಂಥ ಪುಸ್ತಕಗಳಿಗೆ ಮೇಲು ಹೊದಿಕೆಗಳಾಗಿ ಬಟ್ಟೆಯನ್ನೇ ಹಾಕಿರುವಗುದಲ್ಲದೆ ಅದನ್ನು ಬಲವಾಗಿ ಸುತ್ತಿ ದಾರದಿಂದ ಬಿಗಿಯಾಗಿ ಕಟ್ಟಿರುತ್ತಾರೆ. (ಇಂದಿನ ಬಟ್ಟೆಯಿಂದ ಮಾಡಿರುವ ಫೈಲ್‌ಗಳನ್ನು ಹೋಲುವಂಥದ್ದು) ಇಂಥವುಗಳನ್ನು ಸುಲಭವಾಗಿ ಕೆಂಪು ಬಟ್ಟೆಗಳನ್ನೇ ಉಪಯೋಗಿಸಿರುವುದು ಹೆಚ್ಚಾಗಿ ಕಾಣಸಿಗುತ್ತವೆ. ಇದರಿಂದ ಯಾವ ಕ್ರಿಮಿಕೀಟಗಳು, ಹುಳುಗಳು ಪ್ರವೇಶ ಮಾಡಲಾರವು ಎಂಬುದು ಪ್ರಾಚೀನರ ನಂಬಿಕೆ.

ಕಬ್ಬಿಣದ ಹಾಳೆಯ ಪಳಿಗಳನ್ನ ಕಾಗದದ ಪ್ರತಿಗಳಿಗೆ ರಕ್ಷಾ ಕವಚವನ್ನಾಗಿ ಬಳಸಿರುವ ನಿದರ್ಶನಗಳುಂಟು. ಇಂಥ ಕವಚವುಳ್ಳ ಹಸ್ತಪ್ರತಿಗಳು ಸಿಗುವುದು ವಿರಳವೆಂದೇ ಭಾವಿಸಬಹುದು. ನಾವು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕ್ಷೇತ್ರಕಾರ್ಯ ಮಾಡುವ ಸಂದರ್ಭದಲ್ಲಿ ಗಮನಿಸಿದ್ದೇವೆ. ಖಾಸಗಿ ಒಡೆತನದಲ್ಲಿರುವವರ ಹತ್ತಿರ ಇಂಥ ಪ್ರತಿಗಳು ಇವೆ. ವಿಶೇಷವೆಂದರೆ ಮಾಟ ಮಂತ್ರ ಹಸ್ತಪ್ರತಿಗಳಿಗೆ ಮಾತ್ರ ಅಳವಡಿಸಿರುವುದು ಗಮನಾರ್ಹ. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದಲ್ಲಿಯೂ ಇಂಥ ಹಸ್ತಪ್ರತಿಗಳಿದ್ದವು. ಅಲ್ಲಿ ನಾವು ಹಸ್ತಪ್ರತಿಗಳನ್ನು ಸ್ವಚ್ಛ ಮಾಡುತ್ತಿರುವ ಸಂದರ್ಭದಲ್ಲಿ ಗಮನಿಸಿದ್ದೇವೆ.

ಅಲ್ಲದೆ ಸುರಳಿಯಾಕಾರದ ಅತ್ಯಂತ ಉದ್ದದ ಹಸ್ತಪ್ರತಿಗಳಿಗೆ ಅಂದರೆ ಉದ್ಧರಣೆ ಪಟಲಗಳಿಗೆ ಬಿದಿರಿನ ಬೊಂಬನ್ನು ಸಾಮಾನ್ಯವಾಗಿ ಬಳಸುತ್ತಿದ್ದರು. ಅಲ್ಲದೆ ವಿಶೇಷವಾಗಿ ಬಿದರಿನ ಬಂಬಿನ ಬದಲಾಗಿ ಕಬ್ಬಿಣದ ತಗಡಿನಿಂದ ಮಾಡಿದ ರಕ್ಷಕವಚ ಸಿಗುತ್ತವೆ. ಇದು ದವಸ ಧಾನ್ಯಗಳನ್ನು ಅಳೆಯುವ ಸೇರಿನಂತಿರುತ್ತದೆ. ಇಂಥದೊಂದು ಗುಲಬರ್ಗಾ ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದಲ್ಲಿದೆ. ಉದ್ಧರಣೆ ಪಟಲಗಳು ವೀರಶೈವ ಧರ್ಮದ ಚರಿತ್ರೆಯನ್ನು, ಸಿದ್ಧಾಂತಗಳನ್ನು ಪ್ರತಿಪಾದಿಸುತ್ತವೆ.

... ಅರಿವೆ ಸುತ್ತುವುದು

ಮೇಲೆ ಹೇಳಲಾಗಿರುವ ಯಾವುದೇ ತರಹದ ಪಳಿಗಳ ರಕ್ಷಾ ಕವಚವುಳ್ಳ ಹಸ್ತಪ್ರತಿಗಳಿಗೆ ಅವುಗಳ ಅಳತೆಗನುಗುಣವಾಗಿ ಕೆಂಪು ಅಥವಾ ನೀಲಿ ಬಣ್ಣದ ಅರಿವೆಯಿಂದ ಸುತ್ತಿರುತ್ತಾರೆ. ರೇಷ್ಮೆ ಅರಿವೆಯನ್ನು ಸುತ್ತಿರುವ ಹಸ್ತಪ್ರತಿಗಳು ಇರುವ ನಿದರ್ಶನಗಳಿವೆ. ರಕ್ಷಾ ಕವಚಗಳು ಗರಿಗಳು ನಾಶವಾಗದಂತೆ ರಕ್ಷಣೆ ಒದಗಿಸಿದರೆ ಅದರ ಮೇಲೆ ಬಿಗಿಯಾಗಿ ಸುತ್ತಲ್ಪಟ್ಟ ಬಟ್ಟೆಯು ಧೂಳು, ಕ್ರಿಮಿಗಳು ಒಳಪ್ರವೇಶ ಮಾಡದಂತೆ ರಕ್ಷಣೆ ಮಾಡುತ್ತದೆ. ಕೆಂಪು-ಹಳದಿ ಬಣ್ಣಗಳಿಂದ ಕ್ರಿಮಿ ಕೀಟಗಳು ಹತ್ತಿರ ಸುಳಿಯಲಾರವು ಎಂಬುದು ನಂಬಿಕೆ. ಈಗಲೂ ಹೆಚ್ಚಾಗಿ ಇಂಥ ಬಣ್ಣದ ಬಟ್ಟೆಗಳನ್ನು ಸುತ್ತುವುದು ರೂಢಿಯಲ್ಲ ಇದೆ. ಮಠ ಮಾನ್ಯಗಳ ಹಸ್ತಪ್ರತಿ ಭಂಡಾರಗಳಲ್ಲಿ, ಮನೆಗಳಲ್ಲಿರುವ ಹಸ್ತಪ್ರತಿಗಳಿಗೆ ಕೆಂಪು,ಹಳದಿ ಬಟ್ಟೆಯಿಂದಲೇ ಕಟ್ಟಿರುವುದನ್ನು ಗಮನಿಸಬಹುದು. ಬಾದಾಮಿಯ ಶ್ರೀ ಶಿವಯೋಗ ಮಂದಿರ, ಗದಗದ ಶ್ರೀ ತೋಂಟದಾರ್ಯ ಮಠ ಅಲ್ಲದೇ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಸಂಸ್ಥೆ ಧಾರವಾಡ ಇಲ್ಲಿ ಎಲ್ಲಾ ಪ್ರತಿಗಳಿಗೂ ನೀಲಿ ಬಟ್ಟೆಯಿಂದ ಸುತ್ತಲಾಗಿದೆ. ಇದು ವಿಶೇಷ. ಆದರೆ ಕೆಂಪು ಅಥವಾ ನೀಲಿ ಬಣ್ಣದ ಅರಿವಿಗೆ ವ್ಯತಿರಿಕ್ತವಾಗಿ ಬಿಳಿಯ ಅರಿವೆಯನ್ನು ಹಸ್ತಪ್ರತಿಗಳಿಗೆ ಕಟ್ಟಿರುವುದನ್ನು ಗಮನಿಸಿದ್ದೇನೆ. ವಿಶೇಷವಾಗಿ ಜೈನ ಹಾಗೂ ಸಂಸ್ಕೃತ ಹಸ್ತಪ್ರತಿಗಳು ಬಿಳಿ ಬಣ್ಣದ ಬಟ್ಟೆಯನ್ನು ಅಲಂಕರಿಸಿಕೊಂಡಿವೆ. ಗುಲಬರ್ಗಾ ಜಿಲ್ಲೆಯ ಆಳಂದ ತಾಲೂಕಿನ ಪಾರ್ಶ್ವನಾಥ ದಿಗಂಬರ ಜೈನ ಮಠ, ಗುಲಬರ್ಗಾ ನಗರದಲ್ಲಿರುವ ಶ್ರೀ ಮೋಹನ ಭಟ್ಟ ಜೋಷಿ ಇವರಲ್ಲಿ ೧೧೮ ಕಟ್ಟುಗಳು, ಚಿತ್ತಾಪುರ ತಾಲ್ಲೂಕಿನ ಹೊಗುಂಟದ ಶ್ರೀ ಗುರುನಾಥ್‌ ಭಟ್‌ ಜೋಶಿಯವರಲ್ಲಿ ೧೧೬ ಕಟ್ಟುಗಳು, ಬಿಳಿಯ ವಸ್ತ್ರದಿಂದ ಕಟ್ಟಿದ ಹಸ್ತಪ್ರತಿಗಳು ಇರುವುದು ಇದಕ್ಕೆ ನಿದರ್ಶನ. ಶ್ರೀ ಗುರುನಾಥಭಟ್‌ ಜೋಶಿಯವರು ಎಲ್ಲಾ ಹಸ್ತಪ್ರತಿಗಳನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ದಾನವಾಗಿ ಕೊಟ್ಟಿದ್ದಾರೆ. (ಸದ್ಯ ಇವುಗಳ ಸಂರಕ್ಷಣಾ ಕಾರ್ಯ ನಡೆಯುತ್ತಿದೆ.)

ಹಸ್ತಪ್ರತಿಗಳಿಗೆ ಕೆಂಪು ಅಥವಾ ಹಳದಿ ಬಟ್ಟೆಯನ್ನೇ ಏಕೆ ಸುತ್ತಲಾಗಿರುತ್ತದೆಂದು ನಾಡಿನ ಹಸ್ತಪ್ರತಿ ವಿದ್ವಾಂಸರು ಅನೇಕ ವಿಚಾರ ಸಂಕಿರಣಗಳ ಚರ್ಚೆಯಲ್ಲಿ ತಮ್ಮದೇ ಆದ ಅಭಿಪ್ರಾಯಗಳನ್ನು ಪ್ರಸ್ತಾಪಿಸಿದ್ದಾರೆ. ಎಲ್ಲಾ ವಿದ್ವಾಂಸರು ಹೆಚ್ಚು ಕಡಿಮೆ ಪ್ರಾಚೀನರ ನಂಬಿಕೆಯನ್ನೇ ಅವಲಂಬಿಸಿರುವರು. ವೈಜ್ಞಾನಿಕ ದೃಷ್ಟಿಯಿಂದಲೂ ಕ್ರಿಮಿಕೀಟಗಳು ಹತ್ತಿರ ಬರಲಾರದೆಂಬುದನ್ನು ಒಪ್ಪಿಕೊಂಡಿದ್ದಾರೆ. ಈ ವಾದವನ್ನು ಸಂಪೂರ್ಣವಾಗಿ ಒಪ್ಪುವಂತೆಯೂ ಇಲ್ಲ. ಏಕೆಂದರೆ ಕ್ರಿಮಿಕೀಟಗಳಿಗೆ ಮಾನವನ ಹಾಗೆ ಬೌದ್ಧಿಕ ಜ್ಞಾನವಿಲ್ಲವೆನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗಾಗಿ ಬಣ್ಣಗಳನ್ನು ಗುರ್ತಿಸಲು ಹೇಗೆ ಸಾಧ್ಯವೆಂಬುದು ವೈಯಕ್ತಿಕ ಅಭಿಪ್ರಾಯ. ಇಂಥ ಕ್ರಿಮಿ ಕೀಟಗಳು ವಸ್ತುಗಳನ್ನು ದೃಷ್ಟಿಯ ಬದಲಾಗಿ ವಾಸನೆಯ ಮೂಲಕ ಗುರ್ತಿಸುತ್ತದೆ. ಆದರೆ ಪ್ರಾಚೀನರು ಈ ಬಣ್ಣಗಳ ಬಟ್ಟೆಯು ನುಶಿಹುಳು ಮುಂತಾದ ಕ್ರಿಮಿಕೀಟಗಳನ್ನು ದೂರವಿಡುತ್ತದೆ ಎಂದು ಅನುಭವದಿಂದ ಕಂಡುಕೊಂಡಿದ್ದರು. ಬಟ್ಟೆಯ ಒಳಗಡೆ ಕಟ್ಟುಗಳ ಸುತ್ತಲೂ ಒಣಗಿದ ಹೊಂಗೆಯ ಮತ್ತು ಬೇವಿನ ಎಲೆಯ ಪುಡಿಯನ್ನು ಉದುರಿಸುತ್ತಿದ್ದರು ಎಂಬುದು ಎಂ.ವಿ.ಸಿ ಅವರ ಅಭಿಪ್ರಾಯ”[6]  ಬಟ್ಟೆಯಲ್ಲಿ ಇಂಥ ವಸ್ತುಗಳನ್ನು ಇಟ್ಟಿರುವುದನ್ನು ನಾನು ಖುದ್ದಾಗಿ ನೋಡಿ ಸ್ವಚ್ಛಗೊಳಿಸಿರುವೆ. ಹೊಂಗೆ ಹಾಗೂ ಬೇವಿನ ಎಲೆಗಳು ಕಹಿಯಾಗಿರುತ್ತವೆ. ಇದರಂತೆಯೇ ಬೋರೇ ಗಿಡದ ಕಟ್ಟಿಗೆಯೂ ವಿಷಕಾರಿಯಾಗಿರುತ್ತದೆ. (ಉದ್ದೇಶದಿಂದ ನಾವು ಸದ್ಯ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿ ಸಂಪನ್ಮೂಲ ಕೇಂದ್ರದಲ್ಲಿ ಸಂಗ್ರಹಿತಗೊಂಡ ಹಸ್ತಪ್ರತಿಗಳಿಗೆ ಇದರ ಫಲಕಗಳನ್ನು ರಕ್ಷಾಕವಚಗಳನ್ನಾಗಿ ಅಳವಡಿಸುತ್ತಿದ್ದೇವೆ) ಕೆಂಪು ಬಣ್ಣ ಅಪಾಯದ ಸಂಕೇತ. ಕೆಂಪು ಬಟ್ಟೆ ನಿಲ್ಲುವ ಸೂಚನೆಯನ್ನು ಸಂಕೇತಿಸುತ್ತದೆ. ರೈಲು ನಿಲ್ಲಲು ಕೆಂಪು ಬಟ್ಟೆಯನ್ನು ಪ್ರದರ್ಶಿಸುತ್ತಾರೆ. ಆಗ ರೈಲು ನಿಲ್ಲುತ್ತದೆ. ಹಸಿರು ಬಟ್ಟೆ ತೋರಿಸಿದಾಗ ಮುಂದೆ ಚಲಿಸುತ್ತದೆ. ಈ ರೀತಿಯ ಪರಿಜ್ಞಾನ ನಮ್ಮ ಪ್ರಾಚೀನರಿಗೆ ಇದ್ದು ಅವರು ಹಾಗೆ ನಂಬಿರಬಹುದೆಂದು ನನ್ನ ಅಭಿಪ್ರಾಯ.

ವಾಸ್ತವ ಸಂಗತಿಯೆಂದರೆ ಹಸ್ತಪ್ರತಿಗಳಿಗೆ ಯಾವುದೇ ಬಟ್ಟೆಯನ್ನು ಸುತ್ತಿದರೂ ಹುಳುಗಳು ಅದರೊಳಗೆ ಸೇರಲು ಅಸ್ಪದ ಆಗುವುದಿಲ್ಲ. ಆದರೆ ಕೆಲವೊಂದು ಕೊರೆಯುವ ಹುಳುಗಳು ಸುತ್ತಿದ ಬಟ್ಟೆಯನ್ನು ಕೊರೆದು ಒಳ ಸೇರಲು ಸಾಧ್ಯವಿದೆ. ಹಸ್ತಪ್ರತಿಗಳನ್ನು ಕೆಂಪು ಬಟ್ಟೆಯಿಂದ ಸುತ್ತಿ ಕಪಾಟಿನಲ್ಲಿ ಜೋಡಿಸಿದರೆ ಅಂದವಾಗಿ ಕಾಣುತ್ತದೆ ಮತ್ತು ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವುದರಲ್ಲಿ ಸಂಶಯವಿಲ್ಲ.

... ಸಂದೂಕ (ಪೆಟ್ಟಿಗೆ)

ಹಸ್ತಪ್ರತಿಗಳನ್ನು ಸಂರಕ್ಷಿಸುವ ವಿಧಾನಗಳಲ್ಲಿ ಸಂದೂಕ ಒಂದಾಗಿದೆ. ಬಂಗಾರದಂತಹ ದ್ರವ್ಯಗಳಂತೆ ಹಸ್ತಪ್ರತಿಗಳನ್ನು ಸಂಪತ್ತು ಎಂದು ಭಾವಿಸಿ ಒಂದು ಪೀಳಿಗೆಯಿಂಧ ಬಹುಪೀಳಿಗೆಯವರೆಗೆ ಹಸ್ತಪ್ರತಿಗಳನ್ನು ಉಳಿಸುವ ದೂರದೃಷ್ಟಿ ನಮ್ಮ ಪ್ರಾಚೀನರಿಗೆ ಇದ್ದಂತೆ ಕಾಣುತ್ತದೆ. ಹೀಗಾಗಿ ಇವುಗಳನ್ನು ಮಕ್ಕಳಾದಿಯಾಗಿ ಅರಿಯದವರ ಕೈಗಳಿಗೆ ಸಿಗದಂತೆಯೂ, ಕ್ರಿಮಿಕೀಟಗಳಿಂದಲೂ ರಕ್ಷಿಸಲು ಹಲವು ಕ್ರಮಗಳನ್ನು ತಮ್ಮ ಅನುಭವದ ನೆಲೆಯಲ್ಲೇ ಕಂಡುಕೊಂಡಿದ್ದರು. ಇದಕ್ಕಾಗಿ ದುಬಾರಿ ವೆಚ್ಚ ಹಾಗೂ ಶ್ರಮವಾದರೂ ಹಿಂಜರಿಯುತ್ತಿರಲಿಲ್ಲ ಎಂಬುದಕ್ಕೆ ಈ ಪೆಟ್ಟಿಗೆಗಳೇ ನಿದರ್ಶನಗಳಾಗಿ ಉಳಿದಿವೆ.

ಪೆಟ್ಟಿಗೆಗಳನ್ನು ವಿವಿಧ ವಿನ್ಯಾಸಗಳಲ್ಲಿ ತಯಾರಿಸಿರುವುದು ಕಂಡುಬರುತ್ತದೆ. ಹತ್ತು ಕಟ್ಟು ಹಸ್ತಪ್ರತಿಗಳಿಗಿಂತ ಹೆಚ್ಚು ಹಸ್ತಪ್ರತಿಗಳಿದ್ದರೆ ಅವುಗಳನ್ನೆಲ್ಲವನ್ನು ಮರದ ಹಲಗೆಗಳ ಪೆಟಾರಿಯಲ್ಲಿ ಇಟ್ಟು ಭದ್ರಪಡಿಸುತ್ತಿದ್ದರು. ಹಸ್ತಪ್ರತಿಗಳನ್ನು ಇಡುವ ಸಲುವಾಗಿಯೇ ವಿಶೇಷವಾಗಿ ಈ ಪೆಟ್ಟಿಗೆಯನ್ನು ತಯಾರಿಸಲಾಗುತ್ತಿತ್ತು. ಈ ಪೆಟ್ಟಿಗೆಯೊಳಗೆ ಹಸ್ತಪ್ರತಿಗಳನ್ನು ಇಡುವ ಮುನ್ನ ಗ್ರಂಥಗಳನ್ನೆಲ್ಲಾ ಹೊರಗಡೆ ಸ್ವಚ್ಛಗೊಳಿಸಿ ಅದರೊಳಗೆ ಒಂದೊಂದು ಎಲೆ, ತಂಬಾಕು ಪುಡಿ ಕರ್ಪೂರ ಗಂಧಗಳನ್ನು ಇಡುತ್ತಿದ್ದರು. ೨೦೦೬-೦೭ರಲ್ಲಿ ಉತ್ತರ ಕರ್ನಾಟಕದ ೧೧ ಜಿಲ್ಲೆಗಳಲ್ಲಿ ಹಸ್ತಪ್ರತಿ ಕ್ಷೇತ್ರಕಾರ್ಯ ಮಾಡಿದ ಸಂದರ್ಭದಲ್ಲಿ ಇಂಥ ಪೆಟಾರಿಗಳನ್ನು ಪ್ರತ್ಯಕ್ಷವಾಗಿ ನೋಡಿರುವ ಅನುಭವವಿದೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿರುವ ಶ್ರೀ ಮುರುಘಾ ರಾಜೇಂದ್ರ ಮಠದಲ್ಲಿ ದೊಡ್ಡ ಪೆಟಾರಿಯಲ್ಲಿ ಹಸ್ತಪ್ರತಿಗಳಿವೆ. ಇದರಲ್ಲಿರುವ ಹಸ್ತಪ್ರತಿಗಳು ಸರಿ ಸುಮಾರಾಗಿ ಸುಸ್ಥಿತಿಯಲ್ಲಿ ಇವೆ. ಹಸ್ತಪ್ರತಿಗಳು ಕಾಲದ ದೃಷ್ಟಿಯಿಂದ ಶಕ್ತಿ ಕಳೆದುಕೊಂಡಿವೆ ಎಂದೆನಿಸುತ್ತದೆ. ಏಕೆಂದರೆ ತಾಳೆಗರಿಗಳನ್ನು ಬಿಚ್ಚಿ ನೋಡಿದಾಗ ಗಟ್ಟಿಯಾಗಿರುವಂತೆ ಕಾಣುತ್ತಿದ್ದವು. ಆದರೆ ಇಂಥ ಗರಿಗೆಗಳು ಅಪ್ಪಿ ತಪ್ಪಿ ಬಳಸಿದರೆ ಮುರಿದು ಹೋಗುವ ಸಂದರ್ಭದಲ್ಲಿದ್ದವು. ಇದೇ ರೀತಿ ಜೇವರ್ಗಿ ತಾಲೂಕಿನ ಕೊಳ್ಕೂರಿನ ಶ್ರೀ ಬಸವಪ್ರಭು ಇವರ ಬಳಿಯಲ್ಲೂ ಇದೆ. ಆದರೆ ಸುಸ್ಥಿತಿಯಲ್ಲಿಲ್ಲ. ಮಳೆಗೆ ಮನೆ ಬಿದ್ದು ಹಾಳಾಗಿದೆ. ಗುಲಬರ್ಗಾದ ಶ್ರೀ ಹೊನ್ನಕಿರಣಗಿ ಮಠದಲ್ಲಿಯೂ ಇಂಥ ಪೇಟಾರಿ ಇದ್ದು, ಇದು ಚೋರರ ಕೈಗೆ ಸಿಕ್ಕು ನಾಶಗೊಂಡಿದೆ. ಪೆಟಾರಿ ಮೇಲಿನ ಮುಚ್ಚಳ (ಬಾಗಿಲು) ಇಲ್ಲ. ಹೀಗಾಗಿ ಇದರಲ್ಲಿರುವ ಕಾಗದದ ಪ್ರತಿಗಳು ಸಂಪೂರ್ಣವಾಗಿ ನಾಶಗೊಂಡಿವೆ. ಇಂತಹ ಅನೇಕ ನಿದರ್ಶನಗಳು ಸಿಗುತ್ತವೆ. ಇಂಥ ದೊಡ್ಡ ಗಾತ್ರ ಮರದ ಪೇಟಾರಿಯಂತೆಯೇ ಗೋಚರಿಸುವ ಮರದ ಅಲ್ಮಾರ(ಬೀರು) ಗಳಲ್ಲಿಯೂ ಇಟ್ಟಿರುವ ಕೆಲ ನಿದರ್ಶನಗಳಿವೆ. ಮನೆಯ ಗೋಡೆಯಲ್ಲಿ ಅಳವಡಿಸಿರುವ ಅಲ್ಮಾರಗಳಲ್ಲಿಯೂ ಹಸ್ತಪ್ರತಿಗಳನ್ನಿಟ್ಟು ಭದ್ರಪಡಿಸಿರುವುದು ಇದೆ.

ಇನ್ನು ಸಣ್ಣಗಾತ್ರದ ಪೆಟಾರಿಗಳು ಇರುವುದುಂಟು. ಒಂದೇ ಒಂದು ಹಸ್ತಪ್ರತಿ ಕಟ್ಟು ಹಿಡಿಸುವಂತೆ ಪೆಟಾರಿಗಳೂ ಇವೆ. ಅಂದರೆ ಒಂದು ಹಸ್ತಪ್ರತಿ ಕಟ್ಟಿನ ಅಳತೆಗನುಗುಣವಾಗಿ ಮರದ ಪೆಟಾರಿ ತಯಾರಿಸಿ ಆ ಪ್ರತಿಯನ್ನು ಇಟ್ಟು ಭದ್ರಪಡಿಸಲಾಗಿದೆ. ಇಂಥ ಪೆಟಾರಿಯು ಆಳಂದ ತಾಲೂಕಿನ ರೇವಗ್ಗಿ ಗ್ರಾಮದ ದೇಶಗತಿಯವರ ಮನೆಯಲ್ಲಿದೆ. ಕಾಗದ ಪ್ರತಿಯಲ್ಲಿರುವ ಒಂದೇ ಹಸ್ತಪ್ರತಿಗೆ ಕ್ರಮವಾಗಿ ಕೆಂಪು, ಬಿಳಿ, ಹಳದಿ ಬಣ್ಣದ ವಸ್ತ್ರದಿಂದ ಸುತ್ತಿ ಇಟ್ಟಿರುವುದು ವಿಶೇಷ. ಇದೊಂದು ಅಪರೂಪದ ನಿದರ್ಶನ.

ಕೆಲವು ಕಡೆಗಳಲ್ಲಿ ಕಬ್ಬಿಣದ ಪೆಟಾರಿಯಲ್ಲಿ ಹಸ್ತಪ್ರತಿಗಳನ್ನು ಇಟ್ಟಿರುತ್ತಾರೆ. ಇವು ಈಗಿನ ಟ್ರಂಕುವಿನ ಮಾದರಿ. ಸಾಮಾನ್ಯವಾಗಿ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಇಂಥ ಪೆಟಾರಿಗಳಿಂದ ಹೊರತೆಗೆದು ಹಸ್ತಪ್ರತಿಗಳನ್ನು ತೋರಿಸುತ್ತಿದ್ದರು.

ಮೇಲೆ ಹೇಳಿದಂತಹ ಪೆಟ್ಟಿಗೆಗಳನ್ನು ಸಾಮಾನ್ಯವಾಗಿ ರಹಸ್ಯ ಸ್ಥಳಗಳಲ್ಲಿ ಇಡುತ್ತಿದ್ದರು ಎಂಬುದು ವಿಶೇಷ. ಇಂಥ ಪೆಟಾರಿಗಳು ಪ್ರತ್ಯೇಕ ಕೋಣೆಯಲ್ಲೋ ಇಲ್ಲವೇ ದೇವರ ಕೋಣೆಯಲ್ಲೋ ಇಟ್ಟು ಬೀಗ ಜಡಿಯುತ್ತಿದ್ದರು. ಇನ್ನೂ ಮನೆಯ ಗೋಡೆಯ ಸಂದಿನಲ್ಲಿಟ್ಟು ಇದು ಕಾಣದಂತೆ ಗೋಡೆ ತುಂಬಾ ಗಾರೆ ಮಾಡುತ್ತಿದ್ದರು. ಇಂಥ ನಿದರ್ಶನಗಳು ಲಭ್ಯವಿಲ್ಲ. ಆದರೆ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಮಾಹಿತಿದಾರರು ಹೇಳುವಂತೆ “ಒಂದು ಕಬ್ಬಿಣದ ಪೆಟಾರಿಯನ್ನು ಗೋಡೆಯ ಒಳಗಿಟ್ಟು ಪ್ಲಾಸ್ಟಿಂಗ್‌ ಮಾಡಲಾಗಿತ್ತಂತೆ. ಆ ಮನೆ ಹಳೆಯದಾಗಿದ್ದುದರಿಂದ ದುರಸ್ತಿಕಾರ್ಯ ಮಾಡುವಾಗ ಕಬ್ಬಿಣದ ಪೆಟಾರಿಯು ಇತ್ತಂತೆ ಆ ಪೆಟಾರಿಯಲ್ಲಿ ಬೆಳ್ಳಿ ಬಂಗಾರವಿರಬಹುದೆಂದು ಬಹಳ ರಹಸ್ಯವಾಗಿ ಒಡೆದು ನೋಡಿದರೆ ಎಲೆಗಳು ಹಾಗೂ ಕಾಗದದ ಕೈ ಬರಹದ ಬಹಳ ಹಳೇಕಾಲದ ಪುಸ್ತಕಗಳಿದ್ದವು. ದುರಸ್ತಿ ಕಾರ್ಯದಲ್ಲಿ ಅವುಗಳನ್ನು ಎಸೆದು ಬಂದೆವು ಎಂಬಂತಹ ಹೇಳಿಕೆಗಳು ಇದಕ್ಕೆ ಪುಷ್ಟಿ ನೀಡುತ್ತವೆ.

... ಹೊಗೆಗೂಡು

ಹಸ್ತಪ್ರತಿಗಳ ಸಂರಕ್ಷಣೆಯಲ್ಲಿ ಹೊಗೆಗೂಡು ಮಹತ್ವದ ಪಾತ್ರವಹಿಸುತ್ತದೆಂದು ಪ್ರಾಚೀನರು ನಂಬಿದ್ದರು. ಹಾಗಾಗಿ ಬೆತ್ತದ ಬುಟ್ಟಿಗಳನ್ನು ತಯಾರಿಸಿ ಅದರಲ್ಲಿ ಹಸ್ತಪ್ರತಿಗಳನ್ನು ಇಟ್ಟು ಅಡಿಗೆ ಮನೆಯ ಒಲೆಯ ನೇರವಾಗಿಯೋ ಇಲ್ಲ ಸ್ವಲ್ಪ ಆಚೆ ಈಚೆಯಾಗಿಯೋ ಮೇಲಕ್ಕೆ ಎತ್ತರದಲ್ಲಿ ನೇತ್ಹಾಕಿ ಕಟ್ಟುತ್ತಿದ್ದರು. “ಇಂಥ ವ್ಯವಸ್ಥೆ ಮಲೆನಾಡ ಕರಾವಳಿ ಪ್ರದೇಶಗಳಲ್ಲಿ ಬಳಸಿಕೊಳ್ಳುತ್ತ ಬಂದಿದ್ದಾರೆ.”[7]

ಈ ವ್ಯವಸ್ಥೆಯಲ್ಲಿ ಅಡಿಗೆ ಮಾಡುವಾಗ ಒಲೆಯಿಂದ ಹೊರ ಹೊಮ್ಮುವ ಹೊಗೆಯು ನೇರವಾಗಿ ಈ ಬುಟ್ಟಿಗಳಿಗೆ ಬಳಸುತ್ತಿರುತ್ತದೆ. ಹೊಗೆಯಿಂದಾಗಿ ಯಾವ ಕ್ರಿಮಿಕೀಟಗಳು ನುಸುಳುವುದಿಲ್ಲವೆಂದು ನಂಬಿದ್ದರು. ಪ್ರಾಚೀನರು ವೆಚ್ಚಿವಿಲ್ಲದ ಸುಲಭೋಪಾಯದ ವಿಧಾನದ ಪ್ರೇರೆಣಯಿಂದಾಗಿ ಇಂದು ಕೆಲ ಹಸ್ತಪ್ರತಿ ಭಂಡಾರಗಳಲ್ಲಿ ಯಂತ್ರಗಳ ಸಹಾಯದಿಂದ ಪ್ರಧೂಮ್ನ ಉಪಚಾರ ಮಾಡುತ್ತಿದ್ದರು. ಧರ್ಮಸ್ಥಳದ ಹಸ್ತಪ್ರತಿ ಭಂಡಾರದಲ್ಲಿ ಹಸ್ತಪ್ರತಿಗಳನ್ನಿಡುವ ಕಪಾಟುಗಳ ಕೆಳಗೆ ಫ್ಯೂಮಿಗೆಷನ್‌ ಛೇಂಬರ್ ಅಳವಡಿಸಿ ಅದರಲ್ಲಿ ರಾಸಾಯನಿಕ ದ್ರಾವಣ ಹಾಕಿ ಹಬೆಯನ್ನು ಕೊಡಲಾಗುತ್ತಿದೆ.

ಪ್ರಾಚೀನರು ಬಿದಿರಿನ/ಬೆತ್ತದ ಬುಟ್ಟಿಗಳಲ್ಲಿ ಇಡುವಾಗ ಹಸ್ತಪ್ರತಿಗಳು ಹೊಗೆಯಿಂದಾಗಿ ಧೂಳು ಆವರಿಸಿಕೊಂಡು ಕಪ್ಪಗಾಗುತ್ತಿದ್ದವು. ಅವುಗಳನ್ನು ವರ್ಷಕ್ಕೊಮ್ಮೆಯೋ ಎರಡು ವರ್ಷಕ್ಕೊಮ್ಮೆಯಾದರೂ ಕೆಳಗೆ ಇಳಿಸಿ ಸ್ವಚ್ಛ ಮಾಡಿ ಮತ್ತೇ ಅದೇ ಸ್ಥಾನದಲ್ಲಿ ಇಡಲಾಗುತ್ತಿತ್ತು. ಈ ಸಂರಕ್ಷಣ ವಿಧಾನದಲ್ಲಿ ಅಪಾಯವೂ ಆಗುವ ಸಂಭವವಿರುತ್ತದೆ. ಒಲೆಗೆ ಹಚ್ಚಿದ ಬೆಂಕಿ ಆಕಸ್ಮಿಕವಾಗಿ ತಗಲಿದರೆ ಪ್ರತಿಗಳು ಸುಟ್ಟು ನಾಶವಾಗಿ ಬಿಡುತ್ತವೆ. ಅಲ್ಲದೆ ಉಷ್ಣತೆ ಹೆಚ್ಚಾದರೆ ಹಾಳೆಗಳು ಒರಟಾಗುತ್ತವೆ. “ಹಿಂದಿನ ಕಾಲದ ವಾಸದ ಕಟ್ಟಡಗಳು (ಈಗಲೂ ಕರಾವಳಿ ಮಲೆನಾಡು ಹಳ್ಳಿಗಳಲ್ಲಿಯವು) ಅನಾಯಾಸವಾಗಿ ಬೆಂಕಿ ವ್ಯಾಪಿಸಬಹುದಾದ ಕಟ್ಟಿಗೆ, ಹುಲ್ಲು ಮುಂತಾದವುಗಳಿಂದ ಅಚ್ಚಾದಿತವಾದವು. ಅಡುಗೆಯೋ ಪೂಜೆಯೋ ಎಂತಹುದೋ ಒಂದು ಗಳಿಗೆಯಲ್ಲಿ ಅಲಕ್ಷ್ಯ ಅಗ್ನಿಗೆ ಆಹ್ವಾನವನ್ನಿತ್ತೆಂತೆ. ಆಗ ವಾಸದ ಕಟ್ಟಡ ಅಲ್ಲಿನ ಹಸ್ತಪ್ರತಿಗಳಿಗೆ ಬಹುಶಃ ಉಳಿಗಾಲವಿರುತ್ತಿರಲಿಲ್ಲ”[8] ಇಂತಹ ತೊಂದರೆಗೆ ಒಳಗಾಗದೆ ಇಂದು ಉಳಿದಿರುವ ಹಸ್ತಪ್ರತಿಗಳು ಸಾಮಾನ್ಯವಾಗಿ ಕಪ್ಪು ಬಣ್ಣದಾಗಿರುವುದನ್ನು ಗಮನಿಸಬಹುದು.

ಇದೇ ಮಾದರಿಯನ್ನು ಹೋಲುವ ಬಟ್ಟೆಯಿಂದ ಸುತ್ತಿದ ಹಸ್ತಪ್ರತಿಗಳ ಗಂಟುಗಳನ್ನು ಅಡಿಗೆ ಮನೆಯ ನಾಗುಂದಿಯ ಮೇಲೆಯೂ ಇಡಲಾಗುತ್ತಿತ೬ತು. ಅಲ್ಲದೆ ಈ ಗಂಟಿಗೆ ಹಗ್ಗದಿಂದ ಮಾಳಿಗೆಗೆ (ಛಾವಣಿ) ಕಟ್ಟಿ ನೇತುಬಿಡುತ್ತಿದ್ದರು. ಬಹುಶಃ ಮಕ್ಕಳಾದಿಯಾಗಿ (ಅಜ್ಞಾನಿಗಳ) ಮೂರ್ಖರ ಕೈಗೆ ಸಿಗಬಾರದೆಂದು ಉದ್ದೇಶವಾಗಿರಲೇಬೇಕು.ಈ ರೀತಿ ನೇತಾಕಿರುವ ಹಸ್ತಪ್ರತಿ ಗಂಟನ್ನು ನಾನು ಮತ್ತು ನನ್ನ ಗೆಳೆಯ ಡಾ. ಈರಣ್ಣ ಹುರಳಿ ಇಬ್ಬರೂ ಸೇರಿ ಕ್ಷೇತ್ರಕಾರ್ಯ ಮಾಡಿದ ಸಂದರ್ಭದಲ್ಲಿ ಗಮನಿಸಿದ್ದೇವೆ. ಈ ಸಂದರ್ಭಕ್ಕೆ ಒಂದು ನದಿರ್ಶನ ಹೇಳುವುದಾದರೆ (ಜಮಖಂಡಿ) ಮುಧೋಳ ತಾಲೂಕಿನ ಹತ್ತಿರ ಇಂಗಳಗಿ ಎಂಬ ಗ್ರಾಮವಿದೆ. ಈ ಗ್ರಾಮದಲ್ಲಿರುವ ಶ್ರೀ ಕಾಡಸಿದ್ದೇಶ್ವರ ಸ್ವಾಮಿಯವರ ಮೂಲಕ ಒಬ್ಬರ ಮನೆಯಲ್ಲಿ ಹಸ್ತಪ್ರತಿಗಳಿರುವುದನ್ನು ಖಚಿತಪಡಿಸಿಕೊಂಡು ಹಸ್ತಪ್ರತಿ ಇರುವ ಒಡೆಯನನ್ನು ಭೇಟಿಯಾಗಿ ಅವುಗಳನ್ನು ನಮಗೆ ತೋರಿಸುವಂತೆ ಪರಿಪರಿಯಾಗಿ ಕೇಳಿದೆವು. ಕೊನೆಗೆ ನಮ್ಮ ಮಾತಿಗೆ ಒಪ್ಪಿ ಹಸ್ತಪ್ರತಿಗಳು ಇರುವ ಜಾಗ ತೋರಿಸಲು ಮಗನನ್ನು ನಮ್ಮ ಜೊತೆ ಕಳುಹಿಸಿದನು. (ಅನೇಕ ಕಷ್ಟಗಳನ್ನು ಎದುರಿಸಿದ್ದರಿಂದ ಆ ಮನೆಯಲ್ಲಿ ನೇತಾಡುತ್ತಿದ್ದ ಹಸ್ತಪ್ರತಿ ಗಂಟೊಂದನ್ನು ಬಿಟ್ಟು ಆ ಮನೆಯನ್ನೇ ಬಿಟ್ಟು ಬೇರೆ ಮನೆ ಕಟ್ಟಿಸಿಕೊಂಡಿದ್ದಾರಂತೆ) ಆ ಹುಡುಗ ನೇತಾಡುತ್ತಿದ್ದ ಗಂಟನ್ನು ಮನೆಯ ಹೊರಗೆ ಬಾಗಿಲಲ್ಲೇ ನಿಂತು ತೋರಿಸಿದ. ನಾವು ಯಾವ ಅಂಜು ಅಳಕು ಇಲ್ಲದೆ ಒಳಗೆ ಪ್ರವೇಶಿಸಿದೆವು. ಗಂಟು ಎತ್ತರದಲ್ಲಿ ನೇತಾಡುತ್ತಿತ್ತು. ನಮ್ಮ ಕೈಗೆ ತಾಕುತ್ತಿರಲಿಲ್ಲ. ಅಲ್ಲಿ ಸಹಾಯಕ್ಕಾಗಿ ಕುರ್ಚಿ, ಏಣಿ ಬೆಂಚು ಏನೂ ಇರಲಿಲ್ಲ. ಆದರೆ ಸುಮ್ಮನೆಯಂತೂ ಬರಲು ಮನಸು ಒಪ್ಪಲಿಲ್ಲ. ಆ ಕ್ಷಣ ನಮಗೆ ಹೊಳೆದಿದ್ದು ಒಬ್ಬನ ಮೇಲೆ ಒಬ್ಬನು ಏರಿ ಗಂಟನ್ನು ಇಳಿಸುವುದೆಂದು ನಿರ್ಧರಿಸಿ ನಾನು ಈರಣ್ಣನವರನ್ನು ನನ್ನ ಹೆಗಲ ಮೇಲೆ ಏರಿಸಿಕೊಂಡೆ. ಅವನು ಆ ಗಂಟನ್ನು ಬಿಚ್ಚಿ ಕೆಳಗಿಳಿಸಿದ. ನಂತರ ಅರಿವೆ ಸುತ್ತಿದ ಗಂಟನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಕೋರಿಕಾಗದದ ಹಸ್ತಪ್ರತಿಗಳಿದ್ದವು. ಅದರಲ್ಲಿ ಸುಕುಮಾರ ಚರಿತ್ರೆ, ಜ್ಯೋತಿಷ್ಯ, ರಟ್ಟಮತ ಶಾಸ್ತ್ರದ ಮೂರು ಕಟ್ಟುಗಳಿದ್ದವು. ಈ ರೀತಿಯ ಮಾನಸಿಕ ಭಯ ಹುಟ್ಟಿಸುವುದರ ಹಿಂದೆ ಸಂರಕ್ಷಣೆಯ ಉಪಾಯವೂ ಇರಬಹುದು. ಇದರಿಂದಾಗಿಯೇ ಅತಿ ಪ್ರಾಚೀನ ಹಸ್ತಪ್ರತಿಗಳು ಇಂದಿಗೂ ಲಭ್ಯವಾಗಲೂ ಇದು ಒಂದು ಕಾರಣವೂ ಆಗಿದೆ.

[1] ಡಾ. ಎಚ್‌.ಟಿ. ಹಳ್ಳಿಕೇರಿ, ಹಸ್ತಪ್ರತಿ ಕ್ಷೇತ್ರ ಕಾರ್ಯ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ., ಪುಟ.೨.

[2] ಡಾ. ಜಿ. ವರದರಾಜರಾವ್‌, ಹಸ್ತಪ್ರತಿ ಶಾಸ್ತ್ರ, ಪುಟ.೬೮

[3] ಡಾ. ಬಿ.ಎಸ್‌. ಸಣ್ಣಯ್ಯ, ಹಸ್ತಪ್ರತಿಗಳ ರಕ್ಷಣೆ ಮತ್ತು ಪರಿಚಲನೆ, ಪುಟ.೬೧

[4] ಡಾ. ಎಂ.ಎಂ. ಕಲಬುರ್ಗಿ, ಕನ್ನಡ ಹಸ್ತಪ್ರತಿ ಶಾಸ್ತ್ರ, ಪುಟ.೩೫

[5] ಅದೇ ಪುಟ

[6] ಡಾ. ಬಿ.ಕೆ. ಹಿರೇಮಠ, ಕನ್ನಡ ಹಸ್ತಪ್ರತಿಗಳು: ಒಂದು ಅಧ್ಯಯನ, ಪುಟ ೨೩೦

[7] ಅದೇ ಪುಟ

[8] ಡಾ. ಬಿ.ಕೆ. ಹಿರೇಮಠ, ಕನ್ನಡ ಹಸ್ತಪ್ರತಿಗಳು: ಒಂದು ಅಧ್ಯಯನ, ಪುಟ ೨೩೭