... ಜಗಲಿ ಮೇಲಿರಿಸುವುದು/ಸರಸ್ವತಿ ಪೂಜೆ

ಪ್ರಾಚೀನರು ಹಸ್ತಪ್ರತಿ ಸಂರಕ್ಷಿಸುವ ಉಪಾಯಗಳಲ್ಲಿ ದೈವಿಭಾವನೆಯೂ ಒಂದು. ಅವುಗಳನ್ನು ಜಗಲಿ ಮೇಲೆ ಇಟ್ಟು ಪ್ರತಿ ವರ್ಷ ಆಯುಧ ಪೂಜೆಯ ಮುನ್ನಾ ದಿನ ಸರಸ್ವತಿ ಪೂಜೆ ಮಾಡುತ್ತಿದ್ದರು. ಈ ಪೂಜೆ ಮೂಲತಃ ಹಸ್ತಪ್ರತಿ ಸಂರಕ್ಷಣೆಯ ಉದ್ದೇಶದಿಂದಲೇ ಹುಟ್ಟಿಕೊಂಡಿದ್ದು. ಈ ಧಾರ್ಮಿಕ ವಿಧಿಗಾಗಿ ಎಲ್ಲ ಓಲೆಗರಿ ಕಟ್ಟುಗಳನ್ನು ಧೂಳು ತೆಗೆದು ಸ್ವಚ್ಛ ಮಾಡಿ ಸ್ಫುಟವಾಗಿ ಓದಲು ತೈಲ, ಮಸಿಲೇಪನ ಮಾಡಿ ಇಡುತ್ತಿದ್ದರು ಆದರೆ ಇದೇ ಹಸ್ತಪ್ರತಿಗಳಿಗೆ ಮುಳುವಾಗಿರುವುದೂ ಉಂಟು. ಪೂಜೆಯ ಬ್ರಾಂತಿಯಿಂದ ತೈಲ, ಜಲಗಳನ್ನು ಹಾಕಿ ಹಾಗೇ ಕಟ್ಟಿ ಗರಿಗಳೆಲ್ಲ ಹಾಳಾಗಿರುವ ಹಸ್ತಪ್ರತಿಗಳು ಅನೇಕ ಇವೆ.”[1] ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ದೇವಾಲಯಗಳ ಜಗಲಿ ಕಟ್ಟೆಯಲ್ಲಿ ತಾಳೆಗರಿಯ ಕಟ್ಟುಗಳು ಅಲಂಕರಿಸಿರುವ ನಿದರ್ಶನಗಳಿವೆ. ರೈತರು ತಮ್ಮ ತಮ್ಮ ಮುಂದಿನ ವರ್ಷದ ಮಳೆಬೆಳೆಯನ್ನು ನಿರ್ಧರಿಸಲು ಇದು ಸಹಾಯಕವಾಗುತ್ತದೆಯಂತೆ. ರೈತರು ತಮ್ಮ ವೃತ್ತಿ ಆರಂಭಿಸುವ ಮೊದಲು ಗುಡಿಯಲ್ಲಿರುವ ಹಸ್ತಪ್ರತಿಯಲ್ಲಿನ ವಿಷಯ ತಿಳಿಯಲು ಭಯ ಭಕ್ತಿಗಳಿಂದ ಹಸ್ತಪ್ರತಿಯನ್ನು ಧೂಳು ತೆಗೆದು, ಸ್ವಚ್ಛಗೊಳಿಸಿ ಪೂಜಾರಿಯು ನೆರೆದ ಜನರಿಗೆ ಒಂದೇ ಒಂದು ಗರಿಯಿಂದ ಓದಿ ವರ್ಷದ ಮಳೆ ಬೆಳೆ ಕುರಿತು ಜ್ಯೋತಿಷ್ಯದಂತೆ ಹೇಳುತ್ತಾನೆ. ಹೀಗಾಗಿ ಪ್ರತಿವರ್ಷವೂ ಈ ನೆಪದಲ್ಲಿ ಹಸ್ತಪ್ರತಿಯು ಸ್ವಚ್ಛಗೊಂಡು ಸಂರಕ್ಷಿತಗೊಂಡಿವೆ. ಕೂಡ್ಲಿಗಿ ತಾಲೂಕಿನ ಕುಮತಿ ಎಂಬ ಗ್ರಾಮದಲ್ಲಿರುವ ಲಿಂಗಾಯತ ಕುಟುಂಬದವರ ಪ್ರತಿಯೊಂದು ಮನೆಯಲ್ಲೂ ರೇವಣಸಿದ್ದೇಶ್ವರ ಚರಿತ್ರೆಯ ತಾಳೆಕಟ್ಟುಗಳು ಇವೆ. ಶ್ರೀ ರೇವಣ ಸಿದ್ದೇಶ್ವರ ಜಾತ್ರೆಯ ದಿನ ಆ ಎಲ್ಲಾ ಹಸ್ತಪ್ರತಿಗಳನ್ನು ಆಯಾ ಮನೆಗಳಲ್ಲಿ ಸ್ವಚ್ಚಗೊಳಿಸಿ ಪೂಜೆ ಮಾಡುತ್ತಾರೆ.

... ಇತರೆ

ಉತ್ತರ ಭಾರತದ ಕೆಲವು ಕಡೆ ಮರಳಿನಲ್ಲಿ ಹಸ್ತಪ್ರತಿಗಳನ್ನು ಹೂಳುತ್ತಾರಂತೆ ಇದನ್ನು ನಿಧಿಯಂತೆ ಜೋಪಾನವಾಗಿ ಜತನವಾಗಿರಿಸಿರುತ್ತಾರಂತೆ. ಸಂರಕ್ಷಣೆಯ ವಿಧಾನಗಳಲ್ಲಿ ಇದೂ ಒಂದು. ಈ ವಿಧಾನದಲ್ಲಿ ಸಂರಕ್ಷಣೆಗಿಂತ ಅಪಾಯಗಳೇ ಹೆಚ್ಚು. ಕಾರಣ ಅತಿಯಾದ ಮಳೆಯಿಂದಾಗಿ ಮರಳು ತೇವಾಂಶ(ಜೋಗ) ಹಿಡಿದು ಹಸ್ತಪ್ರತಿಗಳು ನಾಶವಾಗುವುದು ಹೆಚ್ಚು. ಈ ವಿಧಾನದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ಹಸ್ತಪ್ರತಿ ತಯಾರಿಸುವ ಪ್ರಕ್ರಿಯೆಯಲ್ಲಿ ತಾಳೆಗರಿಗಳನ್ನು ಮೂರು ತಿಂಗಳ ಕಾಲದವರೆಗೆ ಭೂಮಿಯಲ್ಲಿ ಹೂಳುತ್ತಾರೆ. ಏಕೆಂದರೆ ತಾಳೆ ಪ್ರತಿ ಒರಟಾಗಿರುತ್ತವೆ. ಒರಟಾಗಿದ್ದರೆ ದೀರ್ಘಕಾಲ ಬಾಳಿಕೆ ಬರಲಾರವು. ಆದ್ದರಿಂದ ಗರಿಗಳನ್ನು ಬರೋಡ ಓರಿಯಂಟಲ್‌ ಸಂಸ್ಥೆಯ ಡೈರೆಕ್ಟರ್ ಬಿ.ಭಟ್ಟಾಚಾರ್ಯ ಅವರು ತಾಳೆ ಓಲೆಗಳನ್ನು ಬರಹಕ್ಕೆ ಹದಗೊಳಿಸುವ ಕ್ರಮವನ್ನು ಕುರಿತು ತಾಳೆಗಿಡದಿಂದ ಕತ್ತರಿಸಿ ತಂದ ಎಲೆಗಳನ್ನು ಏಳು ದಿನಗಳವರೆಗೆ ಒಣಗಿಸಿ ಅನಂತರ ಮೂರು ತಿಂಗಳವರೆಗಾದರೂ ನೆಲದಲ್ಲಿ ಹೂಳಿಡಬೇಕು. ಆ ಮೇಲೆ ಅಡುಗೆಮನೆ ಅಟ್ಟದಲ್ಲಿಟ್ಟು ಹೊಗೆಯಿಂದ ಹದಗೊಳ್ಳುವಂತೆ ಮಾಡಿ ಉಪಯೋಗಿಸುವ ಸಂಗತಿಯನ್ನು ಹೇಳುತ್ತಾರೆ”[2]

ಹೀಗೆ ಪ್ರಾಚೀನರು ಹಸ್ತಪ್ರತಿ ಸಂರಕ್ಷಣೆಯ ಅನೇಕ ವಿಧಾನಗಳನ್ನು ಸ್ವ-ಅನುಭವದಿಂದ ಕಂಡುಕೊಂಡು ಅವನ್ನು ಪ್ರಯೋಗಿಸಿ ಸಫಲ-ವಿಫಲತೆಗಳೆರಡನ್ನು ಕಂಡಿದ್ದಾರೆ. ಸುಮಾರು ೫೦೦-೬೦೦ ವರ್ಷಗಳ ಹಳೆಯದಾದ ಇವು ಇಂದಿಗೂ ನಾಡಿನಲ್ಲೆಲ್ಲಾ ಲಭ್ಯವಾಗುತ್ತಿವೆಂದರೆ ಅವರ ಸಂರಕ್ಷಣೆಯ ವಿಧಾನಗಳಲ್ಲಿ ವಿಫಲತೆಗಳಿಗಿಂತ ಸಫಲತೆಯನ್ನು ಪಡೆದಿದ್ದಾರೆಂಬುದು ಗಮನಿಸುವಂಥದ್ದು. ಇಂದು ವೈಜ್ಞಾನಿಕತೆ ಹಿಂದಿಗಿಂತಲೂ ಇಂದು ಮುಂದುವರಿದಿದೆ. ಆದರೂ ಹಳೆಪದ್ದತಿಯಲ್ಲಿಯೇ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದೇವೆ ಅಷ್ಟೇ.

.. ಬಾಹ್ಯ ಸಂರಕ್ಷಣೆಯಲ್ಲಿ ಆಧುನಿಕ ಪದ್ಧತಿ

ಪ್ರಾಚೀನರು ಹಸ್ತಪ್ರತಿಗಳನ್ನು ‘ಸಂಪತ್ತು’ ಎಂದೇ ಭಾವಿಸಿ ಅವುಗಳನ್ನು ರಕ್ಷಿಸಿಕೊಂಡು ಬಂದರು. ಆದರೆ ಶತಮಾನಗಳ ಇತಿಹಾಸವುಳ್ಳ ಹಸ್ತಪ್ರತಿಗಳನ್ನು ಸಂರಕ್ಷಿಸಿಕೊಂಡು ಬಂದವರು ಜೀವಂತವಾಗಿ ಉಳಿದಿಲ್ಲ. ಆದರೆ ಹಸ್ತಪ್ರತಿ ಪರಂಪರೆಯುಳ್ಳ ತಲೆಮಾರು ಮಾತ್ರ ಬೆರಳೆಣಿಕೆಯಷ್ಟು ಉಳಿದಿದೆ. ಈ ತಲೆಮಾರಿನವರು ವರ್ಷಕ್ಕೊಮ್ಮೆಯೋ ಅವುಗಳನ್ನು ತೆರೆದು ಸ್ವಚ್ಚವಾದರೂ ಮಾಡುತ್ತಿದ್ದರು. ಸದ್ಯ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದಾಗಿ ಇದೂ ಕೂಡ ಮಾಯವಾಗುತ್ತಿದೆ. ಹೀಗಿದ್ದಾಗ ಹಸ್ತಪ್ರತಿಗಳಿಗೆ ಸಂರಕ್ಷಣೆಯಾದರೂ ಹೇಗೆ ಆದೀತು ಮತ್ತು ಸಹಜವಾಗಿಯೇ ಕ್ರಿಮಿ, ಕೀಟಗಳ ಪಾಲಾಗಿ ಅನೇಕ ಕಡೆ ವಿನಾಶದ ಅಂಚಿನಲ್ಲಿ ಉಳಿದಿವೆ. ಕ್ಷೇತ್ರಕಾರ್ಯ ಮಾಡಿ ಸಂಗ್ರಹಿಸಿದಂತಹ ಹಸ್ತಪ್ರತಿಗಳನ್ನು ಮೊದಲು ಸ್ವಚ್ಛಗೊಳಿಸುವುದು ಮುಖ್ಯವಾಗಿರುತ್ತದೆ. ಸ್ವಚ್ಛ ಮಾಡುವುದು ಅಷ್ಟು ಸರಳವಾದ ಕೆಲವಿಲ್ಲವೆಂದು ಭಾವಿಸುವೆ. ಏಕೆಂದರೆ ನಾವು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಹಸ್ತಪ್ರತಿ ಗಂಟುಗಳನ್ನು ಬಿಚ್ಚಿದಾಗ ಚೇಳು, ಜರಿ, ಕಟ್ಟಿರುವೆ ಮುಂತಾದವುಗಳು ಇರುವುದನ್ನು ಗಮನಿಸಿದ್ದೇವೆ. ಉಪ್ಪುಂಗಗಳಂತಹವುಗಳನ್ನು ಹಾವೆಂದು ಭಾವಿಸಿ ಬೆಚ್ಚಿ ಬಿದ್ದಿದೂ ಇದೆ. ಶತಮಾನಗಳಿಂದ ಆವರಿಸಿದ ಧೂಳು ದೇಹಕ್ಕೆ ಪ್ರವೇಶಿಸಿ ಆರೋಗ್ಯ ಹಾಳುಮಾಡಿಕೊಂಡಿದ್ದೂ ಆಗಿದೆ. ಹಸ್ತಪ್ರತಿಗಳಲ್ಲಿ ವಾಸಕಂಡಿರುವ ಧೂಳು, ಕ್ರಿಮಿಕೀಟಗಳು ಅನೇಕ ಬಗೆಯ ವಿಷಯುಕ್ತ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತಿರುತ್ತವೆ. ಆದ್ದರಿಂದ ಹಸ್ತಪ್ರತಿ ಸಂರಕ್ಷಣೆಯಲ್ಲಿ ತೊಡಗುವವರು ಮೊದಲು ತಮ್ಮ ದೇಹದ ರಕ್ಷಣೆ ಮಾಡಿಕೊಳ್ಳುವುದು ಮುಖ್ಯವಾಗಿದೆ. ಗ್ಲೌಸ್‌, ಮಾಸ್ಕ್‌ನ್ನು ಖಡ್ಡಾಯವಾಗಿ ಬಳಸಬೇಕು. ನಂತರ ಸೋಪಿನಿಂದ ಸ್ನಾನ ಮಾಡಬೇಕು. ಇಲ್ಲದಿದ್ದರೆ ಮೈಯೆಲ್ಲ ತುರಿಕೆ ಉಂಟಾಗಲು ಶುರುವಾಗುತ್ತದೆ. ಅಲರ್ಜಿಯೂ ಆಗುತ್ತದೆ.

ಸಂಗ್ರಹಿಸಿದ ಹಸ್ತಪ್ರತಿಗಳನ್ನು ಕೊಠಡಿಯಲ್ಲಿ ಮೊದಲು ಇಡಬೇಕು. ಇಲ್ಲಿ ಸ್ವಚ್ಚತಾ ಕಾರ್ಯವನ್ನು ಆರಂಭಿಸಬೇಕು. ವ್ಯಾಕುಮ್‌ಕ್ಲೀನರ್ ನಿಂದ ಧೂಳನ್ನು ಹೋಗಲಾಡಿಸಬೇಕು. ಈ ಉಪಕರಣ ಲಭ್ಯವಿಲ್ಲದಿದ್ದಲ್ಲಿ ಹಸ್ತಪ್ರತಿಗಳ ಗಂಟಿಗೆ ಕಟ್ಟಿರುವ ವಸ್ತ್ರವನ್ನು ಬಿಚ್ಚಬೇಕು. ಹಸ್ತಪ್ರತಿಗಳಿಗೆ ಗೆದ್ದಲು, ಹುಳ ಹುಪ್ಪಡಿ, ಮಣ್ಣು ಚೇಳು ಮುಂತಾದವು ಇರದ ಹಾಗೆ ಜಾಡಿಸಬೇಕು. ಹೀಗೆ ಜಾಡಿಸಿದವುಗಳನ್ನು ಆ ಕ್ಷಣವೇ ಬೇರೆ ಕೊಠಡಿಯಲ್ಲಿ ಇಡಬೇಕು. ಏಕೆಂದರೆ ಜಾಡಿಸಿದ ಹಸ್ತಪ್ರತಿಗಳನ್ನು ಅದರ ಪಕ್ಕದಲ್ಲೇ ಇಡುತ್ತಾ ಹೋದರೆ ಮತ್ತೆ ಜಿರಲೆ, ಜೇಡ, ಗೆದ್ದಲು ಹುಳಗಳು ಮತ್ತೆ ಸೇರುವ ಅಪಾಯವಿದೆ. ಈ ರೀತಿ ಸ್ವಚ್ಚ ಮಾಡಿದ ಹಸ್ತಪ್ರತಿಗಳಿಂದಾದ ಕಸವನ್ನು ಸುಟ್ಟು ಹಾಕಬೇಕು. ಇದರಿಂದ ಕ್ರಿಮಿಕೀಟಗಳು ಹರಡುವುದಿಲ್ಲ. ಸ್ವಚ್ಚ ಮಾಡಿ ಇನ್ನೊಂದು ಕೊಠಡಿಯಲ್ಲಿ ಇರಿಸಲಾಗಿದ್ದ ಹಸ್ತಪ್ರತಿಗಳನ್ನು ಪ್ರಧೂಮ್ನ ಉಪಚಾರ ಮಾಡಬೇಕು (Fumigation Treatment). “ರಾಸಾಯನಿಕ ವಸ್ತುಗಳ ಹಬೆ ಅಥವಾ ಧೂಪದಿಂದ ಹಸ್ತಪ್ರತಿಗಳಿಗೆ ಬಂದ ಕ್ರಿಮಿಕೀಟಗಳು ಬೂಷ್ಟು ಮೊದಲಾದವುಗಳನ್ನು ನಾಶ ಮಾಡಬಹುದು. ಹೊರಗಿನಿಂದ ಬಂದ ಹಸ್ತಪ್ರತಿಗಳನ್ನು ಇದಕ್ಕೆ ಅವುಗಳಲ್ಲಿರಬಹುದಾದ ಹುಳುಗಳೂ ಅವುಗಳ ಮೊಟ್ಟೆಗಳೂ ಸಹ ನಾಶವಾಗುತ್ತದೆ”.[3] ಹಸ್ತಪ್ರತಿಯ ಒಂದೊಂದು ಕಟ್ಟುಗಳನ್ನು ಕೈಗೆತ್ತಿಕೊಂಡು ಅದನ್ನು ಬಿಚ್ಚಿ ಪ್ರತಿಯೊಂದು ಗರಿಗಳನ್ನು ಕಾಟನ್‌ಬಟ್ಟೆಯಿಂದ ನಯವಾಗಿ ಒರೆಸಬೇಕು. ಹೀಗೆ ಸ್ವಚ್ಚ ಮಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಏಕೆಂದರೆ ಒತ್ತಡ ಹಾಕಿ ಒರೆಸಿದರೆ ಗರಿಗಳು ಮುರಿದು ಹೋಗುವ ಸಂಭವ ಹೆಚ್ಚು.

... ದುರಸ್ಥಿ ಕಾರ್ಯ

ಶತಮಾನಗಳಿಂದ ಉಳಿದು ಬಂದಿರುವ ಹಸ್ತಪ್ರತಿಗಳಿಗೆ ಜೀರ್ಣೋದ್ಧಾರ ಮಾಡುವುದು ಮುಖ್ಯವಾಗಿರುತ್ತದೆ. ಇಲ್ಲದಿದ್ದರೆ ಎಲ್ಲೋ ಕೊಳೆಯಬೇಕಾದದು ಮತ್ತೆಲ್ಲೋ ನಾಶವಾಗುವಂತಾಗಬಾರದು. ಏಕೆಂದರೆ ಪಾರಂಪರಿಕವಾಗಿ ಉಳಿದಂತಹ ಹಸ್ತಪ್ರತಿಗಳು ಪೂಜೆಗೊಳಪಟ್ಟು ಕುಂಕುಮ, ವಿಭೂತಿ, ತೀರ್ಥಗಳಿಂದ ರಕ್ಷಾಕವಚವು ಬೂಷ್ಟು ಹಿಡಿದು ನಾಶಗೊಂಡಿರುತ್ತವೆ. ಅಲ್ಲದೇ ಕೊರೆಯುವ ಹುಳುಗಳಿಂದ ನಾಶದ ಅಂಚಿನಲ್ಲಿ ತಲುಪಿರುತ್ತವೆ.ಇಂತಹವುಗಳಿಗೆ ಹಳೆ ಪಳಿಗಳನ್ನು ಕಳಚಿ ಹೊಸದಾಗಿ ಜೋಡಿಸಬೇಕು. ಹೀಗೆ ಜೋಡಿಸುವ ಮರದ ಪಳಿಗಳನ್ನು ಸಿದ್ಧಪಡಿಸುವ ವಿಧಾನವು ಹೀಗಿದೆ.

೧. ಹಸ್ತಪ್ರತಿ ಕಟ್ಟಿನ ಅಳತೆಗನುಗುಣವಾಗಿ ಮರದ ಹಲಗೆಗಳನ್ನು ಕೊರೆಯುವುದು.

೨. ಕೊರೆದ ಹಲಗೆಗಳನ್ನು ಮಷಿನ್‌ ಸಹಾಯದಿಂದ ನಯವಾಗಿ ಪಾಲಿಶ್‌ ಮಾಡುವುದು.

೩ ಹಲಗೆಗಳಿಗೆ ವಿಷಯುಕ್ತ ಆಯಿಲ್‌ (Terminator oil) ಹಾಗೂ ಟೀಕ್‌ವುಡ್‌ ಪೌಡರನ್ನು ಮಿಶ್ರಣ ಮಾಡಿ ಪೆಯಿಂಟಿಂಗ್‌ ಬ್ರಷ್‌ನಿಂದ ನಯವಾಗಿ ಲೇಪಿಸಿ, ನೆರಳಿನಲ್ಲಿ ಒಣಗಿಸಬೇಕು. ಇದರಿಂದಾಗಿ ಹುಳಗಳು ಕ್ರಿಮಿಕೀಟಗಳಿಂದ ರಕ್ಷಣೆಗೊಂಡು ದೀರ್ಘಕಾಲ ಬಾಳಿಕೆ ಬರುತ್ತದೆ. ಜೊತೆಗೆ ಸುಂದರವಾಗಿ ಕಾಣುತ್ತದೆ.

೪. ನೆರಳಿನಲ್ಲಿ ಒಣಗಿದ ಹಲಗೆಗಳನ್ನು ಬಟ್ಟೆಯಿಂದ ನಯವಾಗಿ ಒರೆಸುವುದು (ಸ್ವಚ್ಚ ಮಾಡುವುದು) ಏಕೆಂದರೆ ಬೆರೆಸಿದ ಟೀಕ್‌ವುಡ್‌ ಪೌಡರ್ ಒಣಗಿದ ನಂತರ ಬಣ್ಣವನ್ನು ಉಳಿಸಿಕೊಂಡು ಪುಡಿ ಪುಡಿಯಾಗಿ ಉದರುತ್ತದೆ.

೫. ಪಳಿಗಳಿಗೆ ಎರಡೂ ಬದಿಯಲ್ಲಿ ರಂಧ್ರ ಕೊರೆಯುವುದು. ಇದರ ಮೂಲಕ ದಾರ ಪೋಣಿಸಿ ಬಿಗಿಯಾಗಿ ಕಟ್ಟಲು ಸಹಾಯಕವಾಗುತ್ತದೆ. ಈ ರಂಧ್ರಗಳು ತಾಳೆಗರಿಗಳಿಗೆ ಮಾತ್ರ ಅನ್ವಯಿಸುತ್ತವೆ.

೬. ಹಸ್ತಪ್ರತಿ ಕಟ್ಟುಗಳಿಗೆ ಕಟ್ಟುವ ದಾರವನ್ನು ಒಂದು ದಿನ ಹಳದಿ ಪುಡಿ ಮಿಶ್ರಿತ ನೀರಿನಲ್ಲಿ ನೆನೆಸಬೇಕು. ನೆರಳಿನಲ್ಲಿ ಒಣಗಿದ ನಂತರ (ಕಟ್ಟಬೇಕು) ಉಪಯೋಗಿಸಬೇಕು. ಅಡಿಗೆ ಹಳದಿ ಪುಡಿಯಲ್ಲಿ ನೆನೆಸುವ ಉದ್ದೇಶ ಹಳದಿಯು ಔಷಧೀಯ ಗುಣಗಳನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ.

... ಗರಿಗಳ ದುರಸ್ತಿಕಾರ್ಯ

ಹಸ್ತಪ್ರತಿ ಕಟ್ಟಿನಲ್ಲಿಯ (ಪುಟಗಳನ್ನು) ಗರಿಗಳ (Folis) ನ್ನು ಸಂರಕ್ಷಿಸುವ ಅತಿ ಮುಖ್ಯವಾದ ಕಾರ್ಯವಾಗಿದೆ. ಹಾಗಾಗಿ ಪ್ರತಿಯೊಂದು ಪುಟಗಳನ್ನು ಕಾಟನ್‌ ಬಟ್ಟೆಯಿಂದ ಅಥವಾ ಟಿಷ್ಯು ಪೇಪರ್ ನಿಂದ ನಯವಾಗಿ ಒರೆಸಬೇಕು. ಹೀಗೆ ಮಾಡುವುದರಿಂದ ಗರಿಗಳ ಮೇಲೆ ಆವರಿಸಿದ ಧೂಳು ಸ್ವಚ್ಚ ಮಾಡಿದಂತಾಗುತ್ತದೆ. ನಂತರ ಸಿಟ್ರನೆಲ್‌ ಆಯಿಲ್‌ (ಸುಗಂಧಪೂರಿತ ಲಾವಂಚದ ಹುಲ್ಲಿನ ದ್ರಾವಣ)ನ್ನು ಪೆಯಿಂಟಿಂಗ್‌ ಬ್ರಷ್‌ನಿಂದಾಗಲೀ, ಕಾಟನ್‌ ಬಟ್ಟೆಯಿಂದಾಗಲೀ ನಯವಾಗಿ ಗರಿಗಳ ಮೇಲೆ ಲೇಪಿಸಬೇಕು. ನಂತರ ನೆರಳಿನಲ್ಲಿ ಒಣಗಲು ಬಿಡಬೇಕು. ಸಿಟ್ರನೆಲ್‌ ಆಯಿಲ್‌ ಬಹಳ ಬೇಗ ಒಣಗುವುದರಿಂದಲೂ ಇದರಿಂದ ಗರಿಗಳು ಮೆದುವಾಗಿರುವುದರಿಂದಲೂ ಹಾಗೂ ಸುಗಂಧ ವಾಸನೆ ಇರುವುದರಿಂದಲೂ ಇದರ ಪ್ರಯೋಜನ ಹೆಚ್ಚಾಗಲಿದೆ. ಮಂಕಾದ ಅಕ್ಷರಗಳು ಸ್ಫುಟವಾಗಿ ಕಾಣುತ್ತವೆ. ಅಲ್ಲದೇ ಕ್ರಿಮಿಕೀಟಗಳು ತಾಳೆಗರಿಗೆ ಸೇರದಂತೆ ಮಾಡುವುದರಲ್ಲಿಯೂ ಇದು ಪರಿಣಾಮಕಾರಿಯಾಗಿದೆ. “ಇದೇ ಮಾದರಿಯನ್ನು ಹೋಲುವ ಮತ್ತೆ ಹೆಚ್ಚು ಪರಿಣಾಮಕಾರಿಯಾದ ತೈಲವನ್ನು ಮೈಸೂರಿನ ಒರಿಯೆಂಟಲ್‌ ರೀಸರ್ಚ್ ಲೈಬ್ರರಿಯಲ್ಲಿ ಬಳಸಲಾಗುತ್ತಿದೆ”[4].

ಹೀಗೆ ಸ್ವಚ್ಛ ಮಾಡಿದ ಗರಿಗಳ ಪುಟಗಳನ್ನು ಅನುಕ್ರಮವಾಗಿ ಜೋಡಿಸಿ ಎರಡೂ ಬದಿಯಲ್ಲಿ ರಕ್ಷಾಕವಚವಾಗಿ ಫಳಿಗಳನ್ನು ದಾರದಿಂದ ಬಿಗಿದು ಕಟ್ಟಬೇಕು. ಇದಕ್ಕೂ ಮುನ್ನ ಗರಿಗಳು ರಂಧ್ರಕ್ಕನುಗುಣವಾಗಿ ಎರಡು ಕೊಳವೆಗಳನ್ನು ಎರಡೂ ಬದಿಯ ರಕ್ಷಾಕವಚಕ್ಕೂ ಗರಿಗಳಿಗೂ ಸಮಾನಾಂತರವಾಗಿ ಜೋಡಿಸಿ, ಕೊಳವೆ ರಂಧ್ರಗಳ ಮೂಲಕ ದಾರ ಪೋಣಿಸಿ ಕಟ್ಟಿದರೆ ಗರಿಗಳ ರಂಧ್ರಗಳು ದೊಡ್ಡದಾಗದಂತೆಯೂ ಅಕ್ಷರಗಳು ನಾಶವಾಗದಂತೆ ತಡೆಗಟ್ಟಬಹುದ.

ಇಂಥ ಕೊಳವೆಗಳು ಲೋಹದ್ದಾಗಿರಬಹುದು ಇಲ್ಲವೆ ಪ್ಲಾಸ್ಟಿಕಿನದ್ದಾಗಿರಬಹುದು. ಈ ಎರಡನ್ನೂ ಬಳಸುವುದರಿಂದ ಯಾವ ತೊಂದರೆಯೂ ಆಗುವುದಿಲ್ಲವೆಂದು ಭಾವಿಸುವೆ. (ಸದ್ಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಹಸ್ತಪ್ರತಿ ಸಂಪನ್ಮೂಲ ಕೇಂದ್ರದಲ್ಲಿ ರಕ್ಷಾಕವಚನಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇಂಥ ಕೊಳವೆಗಳನ್ನು ಅಳವಡಿಸುವ ಆಲೋಚನೆಯೂ ಇದೆ.)

ಲ್ಯಾಮಿನೇಷನ್

ಹಸ್ತಪ್ರತಿ ಕಟ್ಟುಗಳಲ್ಲಿ ಹಸ್ತಪ್ರತಿಗಳು ಮುರಿದಿದ್ದರೆ ಅದಕ್ಕೆ ಪ್ರಾಚೀನರು ಅವುಗಳನ್ನು ಒಂದಕ್ಕೊಂದು ಸೇರಿಸಿ ಸೂಜಿ ದಾರದಿಂದ ಹೊಲೆದು ಜೋಡಿಸಿರುವ ಹಲವಾರು ಹಸ್ತಪ್ರತಿಗಳ ನಿದರ್ಶನಗಳಿವೆ. ಇಂಥ ಹಸ್ತಪ್ರತಿಗಳನ್ನು ಪೋಟೋ ಮಾಡಿದ್ದೇವೆ. ಈಗಿನ ಸಂದರ್ಭದಲ್ಲಿ ಹಾಗೆ ಜೋಡಿಸಲು ಸಾಧ್ಯವಿಲ್ಲ. ಮೊದಲೇ ಶಕ್ತಿ ಕಳೆದುಕೊಂಡ ಗರಿಗಳು ಮತ್ತಷ್ಟು ಅಪಾಯಕ್ಕೆ ಸಿಲುಕುವುದು ಹೆಚ್ಚು ಸಂಭವವಿದೆ. “ಇತ್ತೀಚೆಗೆ ಹೆಚ್ಚು ಯಶಸ್ಸುಗಳಿಸಿರುವ ವಿಧಾನವೆಂದರೆ ಲ್ಯಾಮಿನೇಷನ್‌ ರಿಪೇರಿ ಕ್ರಮ. ಭದ್ರಪಡಿಸಬೇಕಾದ ಹಾಳೆಗಳ ಎರಡೂ ಕಡೆಯೂ ಅಸಿಡೇಟ್‌ ತೆಳು ಹಾಳೆಗಳನ್ನು ಹೊದಿಸುತ್ತಾರೆ. ಇದಕ್ಕಾಗಿಯೇ ಒಂದು ಪ್ರೋಟೋ ರೀತಿಯ ಹೈಡ್ರಾಲಿಕ್‌ ಪ್ರೆಸ್ಸೊಂದನ್ನು ನಿರ್ಮಿಸಿದ್ದಾರೆ. ಈ ವಿಧಾನದಲ್ಲಿ ಹೊದಿಸಿದ ತೆಳುಹಾಳೆ ಮೂಲ ಹಾಳೆಯೊಡನೆ ಸೇರಿಕೊಂಡು ದರ ಶಕ್ತಿಯನ್ನು ಹೆಚ್ಚಿಸುತ್ತದೆ. ಯಂತ್ರದ ಮೂಲಕ ಮಾಡುವ ಲ್ಯಾಮಿನೇಷನ್‌ ಅಲ್ಲದೇ ಕೈಯಿಂದಲೂ ಇದನ್ನು ಮಾಡಬಹುದಾಗಿದೆ”[5]. ಈ ಮಾದರಿಯು ಹೆಚ್ಚು ಉಪಯೋಗವಿಲ್ಲವೆಂಬುದು ಇತ್ತೀಚಿನ ವಿದ್ವಾಂಸರ ವಿಚಾರ. ಏಕೆಂದರೆ ಲ್ಯಾಮಿನೇಷನ್‌ ಮಾಡಿದ ಗರಿಗಳು ಕಾಲಾಂತರದಲ್ಲಿ ಅಂಟಿದ ಪ್ಲಾಸ್ಟಿಕ್‌ ಹಾಳೆಗಳು ಕಳಚಿಕೊಳ್ಳುವ ಸಾಧ್ಯತೆಯುಂಟು. ಹೀಗೆ ಕಳಚುವಾಗ ಅಂಟಿನಿಂದಾವೃತವಾಗಿದ್ದವುಗಳು ಅಕ್ಷರಗಳ ಸಮೇತ ಕಿತ್ತುಕೊಂಡು ಬರುವ ಸಾಧ್ಯತೆಯಿದೆ. ಇನ್ನೊಂದು ಅಪಾಯವೆಂದರೆ ಲ್ಯಾಮಿನೇಷನ್‌ನ್ನು ಯಂತ್ರದ ಮೂಲಕ ಶಾಖಕೊಟ್ಟು ಅಂಟಿಸಲಾಗುತ್ತದೆ. ಗರಿಗಳಿಗೆ ಈ ಶಾಖವು ಒತ್ತಡಗೊಂಡು ಬಿರುಸುಗೊಳ್ಳುತ್ತವೆ. ಹಸ್ತಪ್ರತಿಗಳನ್ನು ಬಳಸುವ ಸಂದರ್ಭಗಳಲ್ಲಿ ಮುರಿದು ಹೋಗುವ ಸಂಭವ ಹೆಚ್ಚು.

ಸೆಲೋಟೇಪ್‌ನಿಂದ ಮುರಿದ ಗರಿಗಳನ್ನು ಅಂಟಿಸುವ ವಿಧಾನವೂ ಇದೆ. ಇದನ್ನು ಮುರಿದ ಜಾಗದಲ್ಲಿ ಮಾತ್ರ ಗರಿಯ ಮೇಲಿನ ಹಾಗೂ ತಳಭಾಗದಲ್ಲಿ ಅಂಟಿಸಲಾಗುತ್ತದೆ. ಇದೂ ಸಹ ಅಷ್ಟೂ ಶಾಶ್ವತವಾದುದಲ್ಲವೆಂದೇ ಭಾವಿಸಬೇಕು. ಅಂಟುಗಮ್ಮಿನಿಂದ ಮುರಿದ ಗರಿಗಳನ್ನು ಜೋಡಿಸುವ ವಿಧಾನವೂ ಒಂದು. ಫೆವಿಕ್ವಿಕ್‌ ಡ್ರಾಪ್‌ನಂತಹ ಶಕ್ತಿಯುತ ಗಮ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಸಹಾಯದಿಂದ ಮುರಿದ ಎರಡು ಗರಿಗಳಿಗೆ ಈ ದ್ರವವನ್ನು ಲೇಪಿಸಿ ಜೋಡಿಸಿದರೆ ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ. ಅಲ್ಲದೇ ಗರಿಯನ್ನು ರಿಪೇರಿ ಮಾಡಿದಂತೆಯೂ ಕಾಣುವುದಿಲ್ಲ. ಎಷ್ಟೆಂದರೆ ಗರಿಯೇ ಮುರಿದಿಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಆದರೆ ಈ ದ್ರವವನ್ನು ಉಪಯೋಗಿಸಿ ಜೋಡಿಸುವ ಮೊದಲು ಮುರಿದ ಗರಿಗಳ ಸಮಾನಾಂತರವನ್ನು ಬಹಳ ಎಚ್ಚರಿಕೆಯಿಂದ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಆಯತಪ್ಪಿ ಬೇರೆಡೆ ಅಂಟಿಕೊಂಡರೆ ಮತ್ತೇ ಕಿತ್ತುವುದೇ ಕಷ್ಟ. ಕಾಗದದ ಪ್ರತಿಗಳಿಗೆ ಈ ದ್ರವದ ಅವಶ್ಯಕತೆ ಇಲ್ಲ. ಗಮ್‌ ಒಂದಿದ್ದರೆ ಸಾಕು ಅದನ್ನು ಸುಲಭವಾಗಿ ಅಂಟಿಸಬಹುದು. ಆದರೆ ಅಂಟು ಗುಣಮಟ್ಟದ್ದಾಗಿರಬೇಕು ಟಿಸ್ಯೂ ಚಿಫನ್‌ ಮೊದಲಾದವನ್ನು ಉಪಯೋಗಿಸಿ ಈ ಕಾರ್ಯ ಮಾಡಬಹುದು. “ಕಾಗದ ಪ್ರತಿಗಳು ಕಟ್ಟಿನಲ್ಲಿ ಅಸ್ತವ್ಯಸ್ತಗೊಂಡು ಮಡಚಿರಬಹುದದ ಹಾಳೆಗಳನ್ನು ಬಿಚ್ಚಿ ಒತ್ತು ಕಾಗದದೊಳಗಿಟ್ಟು ಒದ್ದೆಯ ಸ್ಪಂಜಿನ ಸಹಾಯದಿಂದ ತೇವ ಮಾಡಬೇಕು. ಅನಂತರ ಒತ್ತು ಕಾಗದದ ಮಡಿಕೆಯೊಳಗಿಟ್ಟು ಇಸ್ತ್ರಿಪೆಟ್ಟಿಗೆಯ ಸಹಾಯದಿಂದ ತಕ್ಕಷ್ಟು ಶಾಖದಿಂದ ಇಸ್ತ್ರಿ ಮಾಡಬೇಕು. ಆಗ ಅದರ ಮಡಿಕೆಯು ಅಳಿದು ನೇರವಾಗುತ್ತದೆ”. ಕಾಗದದ ಪ್ರತಿಗಳು ನೀರಿನಿಂದ ನೆನದಿರುವಾಗಲೂ ಇದೇ ಮಾದರಿಯನ್ನು ಅನುಸರಿಸುತ್ತಾರೆ. “ಹಸ್ತಪ್ರತಿಗಳು ನೀರಿನಲ್ಲಿ ನೆನೆದಾಗ ಅದರಲ್ಲಿರುವ ನೀರನ್ನು ಸೋರಿಸಿ ಹಾಳೆಗಳನ್ನು ನೆರಳಿನಲ್ಲಿ ಹರಡಿ ಒಣಗಿಸಬೇಕು. ಸಾಕಷ್ಟು ಗಾಳಿ ಬೆಳಕುಗಳಿದ್ದರೆ ಉತ್ತಮ. ಹಾಳೆಗಳು ಒಂದಕ್ಕೊಂದಕ್ಕೆ ಅಂಟಿಕೊಂಡಿದ್ದರೆ ಕಾಗದದ ಚಾಕುವನ್ನು ಉಪಯೋಗಿಸಿ ಜೋಪಾನವಾಗಿ ಬಿಡಿಸಬೇಕು. ಹಾಳೆಗಳನ್ನು ಆಗಾಗ ಮಗುಚಿ ಹಾಕುತ್ತಿರಬೇಕು”.[6] ನಂತರ ಒಂದೊಂದು ಗರಿಗಳನ್ನು ಇಟ್ಟು ಇಸ್ತ್ರಿ ಮಾಡಬೇಕು. ಆಗ ಅದು ಮೊದಲಿನ ಸ್ಥಿತಿಯಂತೆಯೇ ಆಗುತ್ತದೆ.

“ಕಾಗದದ ಹಾಳೆಗಳು ಸುಟ್ಟು ಹೋದರೆ ಅಲ್ಲಿಗೆ ಅವು ನಾಶವಾದುವೆಂದೇ ಭಾವಿಸುತ್ತೇವೆ. ಆದರೆ ಆ ಭಾವನೆಯು ಸರಿಯಲ್ಲ. ಇವುಗಳನ್ನು ಕದಲಿಸದೆ ಹಾಗೆ ಇನ್‌ಫ್ರಾ-ರೆಡ್‌ ಬೆಳಕಿನಲ್ಲಿಟ್ಟು ಓದಬಹುದಾಗಿದೆ. ಇವುಗಳ ದುರಸ್ತಿ ಅವುಗಳ ಸ್ಥಿತಿಯನ್ನು ಅವಲಂಬಿಸಿದೆ”[7] ಎನ್ನುತ್ತಾರೆ. ಆದರೆ ಸುಟ್ಟ ಹಾಳೆಗಳನ್ನು ಕೈಗೆ ತೆಗೆದುಕೊಂಡರೇನೆ ಬೂದಿಯಾಗಿಬಿಡುತ್ತದೆ. ಅಂಥದರಲ್ಲಿ ಅದನ್ನು ಹೇಗೆ ಉಪಯೋಗಿಸಿಬೇಕೆಂಬುದೇ ಒಂದು ಯಕ್ಷ ಪ್ರಶ್ನೆಯಾಗಿ ಕಾಡುತ್ತದೆ. ಹಸ್ತಪ್ರತಿಗಳ ದುರಸ್ತಿ ಕಾರ್ಯದ ನಂತರ ಹಿಂದೆ ಹೇಳಿದ ಹಾಗೆ ಅನುಕ್ರಮವಾಗಿ ಪುಟಗಳನ್ನು ಜೋಡಿಸಿ, ಸುಸಜ್ಜಿತಗೊಂಡ ರಕ್ಷಾಕವಚಗಳನ್ನು ದಾರದಿಂದ ಬಿಗಿಯಾಗಿ ಕಟ್ಟಿದ ನಂತರ ಹಸ್ತಪ್ರತಿಗಳ ಕ್ರಮಸಂಖ್ಯೆಯ ಬಿಲ್ಲೆಗಳನ್ನು ಪ್ರತಿಯ ಮೇಲ್ಭಾಗದ ಬಲಬದಿಯ ಅಂಚಿಗೆ ಅಂಟಿಸಬೇಕು. ಕೃತಿಯ ಹೆಸರು, ಕೃತಿಕಾರನ ಹೆಸರು, ಹಸ್ತಪ್ರತಿಗಳನ್ನು ದಾನವಾಗಿ ಕೊಟ್ಟವರ ವಿಳಾಸ, ಹಸ್ತಪ್ರತಿಗಳನ್ನು ಸಂಗ್ರಹಿಸುತ್ತಿರುವ ಸಂಸ್ಥೆಯ ವಿಳಾಸವನ್ನೊಳಗೊಂಡ ಮುದ್ರಿತ ಬಿಲ್ಲೆಯನ್ನು ಅಂಟಿಸಬೇಕು. ಇಲ್ಲಿಗೆ ಒಂದು ಹಂತದಲ್ಲಿ ಸುಸಜ್ಜಿತ ಹಸ್ತಪ್ರತಿಗಳು ಸಂರಕ್ಷಣೆಗೊಂಡಂತೆ ಎಂದೇ ಹೇಳಬೇಕು. ಮುಂದಿನ ಕಾರ್ಯವು ಅವುಗಳನ್ನು ದೀರ್ಘಕಾಲದವರೆಗೂ ಉಳಿಯಬೇಕೆಂಬ ಕಾರಣದಿಂದ ಒಂದು ಕಡೆ ಸುಸಜ್ಜಿತವಾಗಿ ನೆಲೆಗೊಳಿಸಬೇಕಾಗುತ್ತದೆ. ಮುದ್ರಿತ ಪುಸ್ತಕಗಳ ಗ್ರಂಥಾಲಯದ ಮಾದರಿಯಂತೆ ಪ್ರತ್ಯೇಕ ಕೊಠಡಿಯಲ್ಲಿ ಹಸ್ತಪ್ರತಿ ಭಂಡಾರ(ಗ್ರಂಥಾಲಯ) ರೂಪವಾಗಿ ನೆಲೆಗೊಳಿಸಬೇಕು.

... ಸುಸಜ್ಜಿತ ಕೊಠಡಿ

ಹಲವಾರು ವರ್ಷಗಳು ಸಂರಕ್ಷಿತಗೊಂಡಿರಬೇಕೆಂಬ ಪ್ರಯತ್ನ ಸಾರ್ಥಕ ಗೊಳಿಸಬೇಕಾದರೆ ಅದಕ್ಕೆ ಪ್ರತ್ಯೇಕವಾಗಿ ಒಂದು ಸುಸಜ್ಜಿತ ಕೊಠಡಿಯನ್ನು ಸ್ಥಾಪಿಸಬೇಕು. ಹಸ್ತಪ್ರತಿಗಳನ್ನು ಇಲ್ಲಿಗೆ ಸಾಗಿಸುವ ಮೊದಲು ಇಡೀ ಕೊಠಡಿಯನ್ನೇ ವೈಜ್ಞಾನಿಕವಾಗಿ ಸುಸಜ್ಜಿತಗೊಳಿಸಬೇಕು. ಹಸ್ತಪ್ರತಿಗಳನ್ನಿಡುವ ಕಟ್ಟಡವನ್ನು ಕಟ್ಟುವಾಗಲೇ ಗೆದ್ದಲಿನಿಂದ ರಕ್ಷಣೆಯನ್ನು ಪಡೆಯುವ ಮುಂಜಾಗರೂಕತೆಯನ್ನು ವಹಿಸಬಹುದು. ಕಟ್ಟಡದ ತಳಭಾಗವನ್ನು ಗೆದ್ದಲಿನಿಂದ ತಡೆಗಟ್ಟುವ ಅನೇಕ ವಿಧದ ವಿಷ ಪದಾರ್ಥಗಳನ್ನು ಉಪಯೋಗಿಸಿದರೂ ಈಚೆಗೆ ‘ಡೈಲ್ಡ್ರೀನ್‌’ ಎಂಬ ವಸ್ತುವನ್ನು ಉಪಯೋಗಿಸುವುದು ಸಾಮಾನ್ಯವಾಗಿದೆ. ಈ ಡೈಲ್ಟ್ರೀನ್‌ ತಯಾರಕರು ತಾವು ಕ್ಲುಪ್ತ ಪ್ರಮಾಣದಲ್ಲಿ ಒದಗುವ ಈ ದ್ರಾವಣದ ಶೇಕಡ ೩೦ ರಷ್ಟು ಭಾಗವನ್ನು ಒಂದು ಗ್ಯಾಲನ್‌ ನೀರಿನೊಡನೆ ಬೆರೆಸಿ ತರುವಾಯ ಆ ದ್ರಾವಣಕ್ಕೆ ೪೦-೧೦೦ ಗ್ಯಾಲನ್‌ ನೀರನ್ನು ಬೆರೆಸಿ ಕಟ್ಟಡದ ನಿವೇಶನದ ತಳಪಾಯಕ್ಕೆ ಸಿಂಪಡಿಸಬೇಕೆಂದು ಸೂಚಿಸಿರುತ್ತಾರೆ. ಈಗಾಗಲೇ ಕಟ್ಟಿದ ಕಟ್ಟಡಗಳಿಗೆ ದ್ರಾವಣವನ್ನು ಹೊರಗಣ ಗೋಡೆಗಳ ಸಂಧುಗಳಲ್ಲಿಯೂ, ನೆಲದಲ್ಲಿರುವ ಗುಳಿಗಳ ಮೂಲಕವೂ ಉಪಯೋಗಿಸದರೆ ಉತ್ತಮ. ಈ ದ್ರಾವಣವನ್ನು ಮರದ ಕಿಟಕಿ ಮತ್ತು ಬಾಗಿಲುಗಳ ಮೇಲೆಯೂ, ಅವು ಜೋಡಣೆಯಾಗಿರುವ ಗೋಡೆಗಳ ಅಂಚಿನ ಮೇಲೆಯೂ ಸಿಂಪಡಿಸಬಹುದು”[8] “ಅಗ್ನಿ ಮೂಶಿಕ ಚೋರೇ ಭ್ಯೋಶಿವೋ ರಕ್ಷಂತು ಪುಸ್ತಕಂ”[9] ಎಂಬ ಸಂದೇಶವುಳ್ಳ ಉಲ್ಲೇಖಗಳು ಹಸ್ತಪ್ರತಿಗಳಲ್ಲಿ ಕಂಡುಬರುತ್ತದೆ. ಬೆಂಕಿ, ಇಲಿ, ಕಳ್ಳಕಾಕರ ಹಾವಳಿಯಿಂದಲೂ ಪುಸ್ತಕಗಳನ್ನು ರಕ್ಷಿಸಬೇಕೆಂಬುದು. ಹಸ್ತಪ್ರತಿ ಸಂಗ್ರಹದ ಕೊಠಡಿಯು ಸುಭದ್ರ ಅಡಿಪಾಯದಿಂದ ಕಟ್ಟಿದ್ದರೆ ಇವುಗಳಿಂದ ರಕ್ಷಿಸಲು ಸಾಧ್ಯವಿದೆ. ಆದಷ್ಟು ಮಟ್ಟಿಗೆ RCC ಕೊಠಡಿಯನ್ನು ನಿರ್ಮಾಣ ಮಾಡಬೇಕೆಂದು ತೋರುತ್ತದೆ. ಇದಕ್ಕೆ ಅಗ್ನಿಯ ಭಯ ಕಡಿಮೆ ಎಂದೇ ಹೇಳಬಹುದು. ಕೊಠಡಿಯು “ಬ್ಯಾಂಕಿನಲ್ಲಿಯ ದ್ರವ್ಯ ಭಂಡಾರದಂತ ಮಹತ್ವದ ವಿಭಾಗವಿದು. ಯಾವಾಗಲೂ ಬೀಗ ಮುದ್ರೆಯಲ್ಲಿದ್ದು, ಅಧಿಕೃತ ಇಬ್ಬರು ಮೂವರು ಮಾತ್ರ ಪ್ರವೇಶ ಮಾಡುವ ಕೇಂದ್ರ ಸ್ಥಾನವಿದು. ತುಂಬ ಮಹತ್ವದ ಇದನ್ನು ರಹಸ್ಯ ಸ್ಥಾನ, ಪವಿತ್ರ ಸ್ಥಾನದಂತೆ ಭಾವಿಸಬೇಕಾಗುತ್ತದೆ.”[10].

ಎಷ್ಟೇ ಸುಸಜ್ಜಿತ ಕೊಠಡಿ ಕಟ್ಟಿದರೂ ಸಹ ಜೇಡ, ಜಿರಲೆಗಳು ಹಾಗೂ ಕೆಲವು ಸಾಂಕ್ರಾಮಿಕ ಕೀಟಗಳು ಮತ್ತೇ ಸೇರಿಕೊಳ್ಳುವ ಸಂಭವವೇ ಹೆಚ್ಚು. ಹೀಗಾಗಿ ಮುಂಜಾಗ್ರತೆಯಾಗಿ ರಾಸಾಯನಿಕ ಕ್ರಿಮಿನಾಶಕಗಳನ್ನು ಸಿಂಪಡಿಸಬೇಕು. ಡೈಲ್ಡ್ರೀನ್‌ಗೆ ಬದಲಾಗಿ ಡಿ.ಟಿ.ಟಿ. ಬೆಂಜಿನ್‌ ಹೆಕ್ಸಾಕ್ಲೋರೈಡ್‌, ಆಲ್ಡ್ರಿನ್‌ ಮತ್ತು ಇತ್ತೀಚಿನವುಗಳಾದ ಎಂಡ್ರಿನ್‌, ಐಸೊಡ್ರಿನ್‌ ಮೊದಲಾದ ಕ್ರಿಮಿನಾಶಕಗಳನ್ನು ಉಪಯೋಗಿಸುವುದು ಅವಶ್ಯಕ. ಹೀಗೆ ಅವುಗಳನ್ನು ಉಪಯೋಗಿಸುವಾಗ ಕೀಟಗಳು ಬರಬಹುದಾದ ಕಡೆಗಳಲ್ಲಿ ಮತ್ತೆ ಅವು ಅಡಗಿಕೊಳ್ಳಬಹುದಾದ ಸ್ಥಳಗಳಲ್ಲಿ ಎಂದರೆ ನೆಲ ಮತ್ತು ಗೋಡೆಯ ಬಿರುಕುಗಳು, ಸಂಧಿಗೊಂದಿಗಳು, ಕಪಾಡುಗಳ ಕೆಳಭಾಗ, ಕಿಟಕಿಯ ಅಂಚು ಪಟ್ಟಿಗಳು ಮೊದಲಾದ ಕಡೆಗಳಲ್ಲಿ ಕುಂಚದಿಂದ ಸವರಬೇಕು ಇಲ್ಲವೆ ಪಿಚಕಾರಿಗಳಿಂದ ಸಿಂಪಡಿಸಬೇಕು. ಹೀಗೆ ಮಾಡುವುದರಿಂದ ಜಿರಲೆ ಬೆಳ್ಳಿಮೀನುಗಳಂಥ ಹುಳುಗಳನ್ನು ತಡೆಗಟ್ಟಬಹುದು. ಅಗತ್ಯ ಬಿದ್ದರೆ ವ್ಯಾಕುಮ್‌ ಕ್ಲೀನರ್ ಬಳಸಿ ಸ್ವಚ್ಚಗೊಳಿಸಬಹುದು.

ಕಪಾಟುಗಳು: ಕೊಠಡಿಯಲ್ಲಿ ಹಸ್ತಪ್ರತಿಗಳ ಸಂಖ್ಯೆ, ಗಾತ್ರಕ್ಕನುಗುಣವಾಗಿ ಒಂದೇ ತೆರವಾದ ಕಪಾಟುಗಳನ್ನು ಜೋಡಿಸಬೇಕು. ಕೆಲವೆಡೆ ಗಾಜುಗಳ ಕಪಾಟುಗಳನ್ನು ಬಳಸುವುದಾದರೂ ಹವೆಯಾಡದೆ ಪ್ರತಿಗಳು ಕೆಡುವ ಕಾರಣ ಬಾಗಿಲುಗಳಿಲ್ಲದ ಕಪಾಟುಗಳನ್ನೇ ಉಪಯೋಗಿಸಬೇಕೆಂದು ತೋರುತ್ತದೆ.

... ಹವಾನಿಯಂತ್ರಣ (Air conditioner)

ಕೀಟಗಳನ್ನು ತಡೆಗಟ್ಟುವಲ್ಲಿ, ಹವಾಮಾನ ವೈಪರೀತ್ಯಗಳಿಂದ ಹಸ್ತಪ್ರತಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಸಂರಕ್ಷಿಸುವ ಕ್ರಮವೆಂದರೆ ಹವಾನಿಯಂತ್ರಣ. ಈ ಕ್ರಮವು ಒಂದು ಕಾಲಕ್ಕೆ ಭೋಗವೆಂದು ಪರಿಗಣಿತವಾಗಿದ್ದಿತು. ಆದರೆ ಗ್ರಂಥ ಮೌಲ್ಯದೊಡನೆ ಇದರ ವೆಚ್ಚವನ್ನು ಹೋಲಿಸಿ ನೋಡಿದಾಗ ಇದು ಅತ್ಯಂತ ಅವಶ್ಯಕ ಕ್ರಮವೆಂದು ಹೇಳಬಹುದು. ಹವಾನಿಯಂತ್ರಣ ಸಾಧ್ಯವಿಲ್ಲದಿದ್ದಾಗ ನೀರನ್ನಾಗಲಿ, ಕ್ಯಾಲ್ಸಿಯಂ ಕ್ಲೋರೈಡನ್ನಾಗಲೀ ಋತುಮಾನಕ್ಕೆ ತಕ್ಕಂತೆ ಉಪಯೋಗಿಸಿ ಹವಾನಿಯಂತ್ರಣವನ್ನು ಸ್ವಲ್ಪಮಟ್ಟಿಗೆ ಸಾಧಿಸಬಹುದು. ಇದರಿಂದ ಗಾಳಿಯ ಶುದ್ಧತೆಯನ್ನು ಕಾಪಾಡಲು ಸಾಧ್ಯವಾಗುವುದಿಲ್ಲ. ಹಸ್ತಪ್ರತಿಗಳು ಹೆಚ್ಚು ಉಷ್ಣತೆಯಾಗಲಿ, ತೇವವಾಗಲಿ ಇದ್ದರೆ ಅವುಗಳಿಗೆ ಜೀರ್ಣಿಸಿಕೊಳ್ಳುವ ಶಕ್ತಿಯು ಕಡಿಮೆಯಾಗುತ್ತದೆ. ಉಷ್ಣತೆ ಹೆಚ್ಚಾದಂತೆ ಗರಿಗಳು ಬಿರುಸುಗೊಂಡು ಮುರುಟಿಕೊಂಡು ಹೋಗುತ್ತವೆ. ಹೀಗೇಯೇ ಶೀತ ಹೆಚ್ಚಾದರೆ ಬೂಷ್ಟು ಆವರಿಸಿಕೊಳ್ಳುತ್ತದೆ. ಬೂಷ್ಟುಗಳು ಬಿಡುವ ರಸಾಯನಿಕ ದ್ರವದಿಂದ ಹಾಳೆಗಳು ಒಂದಕ್ಕೊಂಡು ಅಂಟಿಕೊಳ್ಳುತ್ತವೆ. ಹೀಗಾಗಿ ಉಷ್ಣತೆ ಹಾಗೂ ಶೀತವನ್ನು ಆಯಾ ಹವಮಾನಕ್ಕೆ ತಕ್ಕಂತೆ ಸಮವಾಗಿ ಕಾಯ್ದುಕೊಳ್ಳಬೇಕಾಗುತ್ತದೆ. ಆಧುನಿಕತೆಯ ಈ ಹವಾನಿಯಂತ್ರಣ ಅತ್ಯುಪಯುಕ್ತವಾಗಿದೆ.

ಈ ರೀತಿಯಾಗಿ ಎಲ್ಲಾ ಮೂಲಸೌಲಭ್ಯಗಳೊಂದಿಗೆ ಸುಸಜ್ಜಿತವಾದ ಕೊಠಡಿಯಲ್ಲಿ ಹಸ್ತಪ್ರತಿಗಳನ್ನು ವರ್ಗಾಯಿಸಬೇಕಾಗುತ್ತದೆ. ಇವುಗಳನ್ನು ಕಪಾಟುಗಳಲ್ಲಿ ಅನುಕ್ರಮವಾಗಿ ಇಡಬೇಕು. ವರ್ಷಕ್ಕೊಮ್ಮೆಯಾದರೂ ಪ್ರಧೂಪನ ಹಬೆಯನ್ನು ಕೊಡುತ್ತಿರಬೇಕು ಎಂಬುದು ಗಮನಾರ್ಹ ಸಂಗತಿ. ವಾಯು ಶೂನ್ಯವಾದ ಕೊಠಡಿಯಲ್ಲಿ ಅಥವಾ ಕಪಾಟಿನಲ್ಲಿ ಗಮನಾರ್ಹ ಸಂಗತಿ. ವಾಯು ಶೂನ್ಯವಾದ ಕೊಠಡಿಯಲ್ಲಿ ಅಥವಾ ಹಸ್ತಪ್ರತಿಗಳನ್ನಿಟ್ಟು ಟೆರಕ್ಲೋರೈಡ್‌ ಮತ್ತು ಎಥಿಲಿನ್‌ ಡೈಕ್ಲೋರೈಡ್‌ ಮಿಶ್ರಿತ ಕಿಲ್ಲೊಪ್ಟೆರ ದ್ರಾವಣವನ್ನು ಉಪಯೋಗಿಸಬಹುದು. ಕಿಲ್ಲೊಪ್ಟೆರ ಗಾಳಿಗಿಂತ ತೂಕವಾಗಿರುವುದರಿಂದ ಅದನ್ನು ಕಪಾಟಿನ ಮೇಲ್ಭಾಗದ ಅರೆಯಲ್ಲಿ ಅಥವಾ ಪುಸ್ತಕದ ಸಾಲಿನಲ್ಲಿ ಇಡಬೇಕಾಗುತ್ತದೆ. ಉಳಿದವನ್ನು ಕಪಾಟಿನ ಕೆಳಗಣ ಹಂತದಲ್ಲಿಡಬೇಕಾಗುತ್ತದೆ. ಹೀಗೆ ಇಡುವಾಗ ಕಪಾಟಿಗೆ ಅಳವಡಿಸಿದ ಉಕ್ಕಿನ ಬಟ್ಟಲಿನಲ್ಲಿ ರಾಸಾಯನಿಕ ವಸ್ತುವನ್ನು ಹಾಕಿ ಅದು ವಿದ್ಯುಚ್ಛಕ್ತಿ ದೀಪದಿಂದ ಕಾಯುವಂತಿರಬೇಕು. ನವದೆಹಲಿಯಲ್ಲಿರುವ ಭಾರತ ರಾಷ್ಟ್ರೀಯ ಪತ್ರಾಗಾರ ಥೈಮಾಲ್‌ ಪ್ರಧೂಮನವನ್ನೇ ಹೆಚ್ಚಾಗಿ ಬಳಸುತ್ತಿದೆ. ಧರ್ಮಸ್ಥಳದ ಹಸ್ತಪ್ರತಿ ಭಂಡಾರದಲ್ಲಿಯೂ ಪ್ರಧೂಮನವನ್ನೇ ಬಳಸಲಾಗುತ್ತಿದೆ. ಹಸ್ತಪ್ರತಿಗಳನ್ನು ಸಂಗ್ರಹಿಸಿ ಸಂರಕ್ಷಿಸುತ್ತಿರುವ ಅನೇಕ ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಪ್ರಧೂಮನವನ್ನು ಹೆಚ್ಚಾಗಿ ಬಳಸುತ್ತಿರುವುದು ಕಂಡುಬಂದಂತಿಲ್ಲ. ಹೀಗಾಗಿ ಇವರು ತುರ್ತಾಗಿ ಪ್ರಧೂಮನ ಹಾಗೂ ನಿಯಂತ್ರಣವನ್ನು ಅಳವಡಿಸುವುದು ಜರೂರಾಗಿದೆ.

ನ್ಯಾಫ್ತಲಿನ್‌ ಬಿಲ್ಲೆಗಳನ್ನು ಕೋಶಾಗಾರದ ಕಪಾಟುಗಳಲ್ಲಿ ಅಲ್ಲಲ್ಲಿಯೇ ಇಡುವುದು ಸೂಕ್ತ ಇದರ ವಾಸನೆಯಿಂದ ಕ್ರಿಮಿಕೀಟಗಳು ಹತ್ತಿರ ಸುಳಿಯಲಾರವು. ಇದಲ್ಲದೇ “ಪೈರಾತ್ರಮ್‌ ಪುಡಿಯನ್ನು ಉಪಯೋಗಿಸಬಹುದು. ಇದು ಮನುಷ್ಯನಿಗೆ ಅಪಾಯಕಾರಿಯಾದುದರಿಂದ ಬಹಳ ಜಾಗರೂಕತೆಯಿಂದ ಉಪಯೋಗಿಸಬೇಕು. ಸೋಡಿಯಂ ಪ್ಲೋರೈಡನ್ನು ಗೋಧಿಯ ಹಿಟ್ಟುನೊಡನೆ ೧೨:೧೦೦ ಪ್ರಮಾಣದಲ್ಲಿ ಬೆರೆಸಿ ಕಪಾಟುಗಳನ್ನು ಅಥವಾ ಕತ್ತಲೆಯಲ್ಲಿ ಮೂಲೆಗಳಲ್ಲಿಟ್ಟರೆ ಜಿರಲೆಗಳನ್ನು ನಾಶಮಾಡಬಹುದು”[11]. ಕೆಲವೆಡೆ ಪಂಡ್ರಿ ಎಂಬ ಒಂದು ವಿಧವಾದ ಹುಲ್ಲು ಮತ್ತು ಘೋರಬಾಚ್‌ (Ghora Bach:Achorus Calamus) ಇವುಗಳ ಪುಡಿಯನ್ನು ಹಸ್ತಪ್ರತಿಗಳೊಡನೆ ಇಟ್ಟಿದುದು ಕಂಡುಬರುತ್ತದೆ. ಈ ಪುಡಿಯಲ್ಲಿರುವ ಎಣ್ಣೆಯು ಕ್ರಿಮಿಕೀಟಗಳನ್ನು ದೂರವಿಡಲು ಸಹಾಯಕವಾಗುವುದೆಂದು ತೋರುತ್ತದೆ. ಇಡೀ ಕೊಠಡಿಯೇ ರಸಾಯನಿಕ ದ್ರಾವಣದಿಂದ ವಾಸನೆಗೊಂಡಿರುತ್ತದೆ. ಇಡೀ ವೃತ್ತಿಯಲ್ಲಿ ಕೆಲಸ ಮಾಡುವವರಿಗೆ ಈ ವಾಸನೆ ಸಾಮಾನ್ಯವಾಗಿ ಬಿಡುತ್ತದೆ. ಆದರೆ ಹಸ್ತಪ್ರತಿಗಳನ್ನು ಕುತೂಹಲಕ್ಕಾಗಿಯಾದರೂ ನೋಡಲು ಬರುವ ಆಸಕ್ತರಿಗೆ ವಾಸನೆ ಕಿರಿಕಿರಿಯನ್ನುಂಟು ಮಾಡಬಹುದು. ಹೀಗಾಗಿ ಸುಗಂಧಭರಿತ Room sprayer ಮಾರುಕಟ್ಟೆಯಲ್ಲಿ ಲಭ್ಯವಿದೆ. ತಿಂಗಳಿಗೆ ಒಮ್ಮೆಯಾದರೂ ಈ ಸುಗಂಧ ದ್ರಾವಣವನ್ನು ಸಿಂಪಡಿಸುತ್ತಿರಬೇಕು. ಇದರಿಂದ ಮನಸ್ಸಿಗೆ ಹಿತವುಂಟಾಗಿ ಹಸ್ತಪ್ರತಿಗಳ ಕುರಿತು ಆಸಕ್ತಿ ಮೂಡಬಹುದು.

. ಹಸ್ತಪ್ರತಿಗಳ ಆಂತರಿಕ ಸಂರಕ್ಷಣೆ

ಹಸ್ತಪ್ರತಿಗಳ ಸಂರಕ್ಷಣೆಯು ನಮ್ಮ ಪ್ರಯತ್ನಗಳೂ, ಉದ್ದೇಶ ಈಡೇರುವಂತಾಗಬೇಕಾದರೆ ಅವುಗಳ ಅಂತರಿಕ ಸಂರಕ್ಷಣೆಯೇ ಪ್ರಮುಖವಾಗಿದೆ. ಆಂತರಿಕ ಸಂರಕ್ಷಣೆಯಾದರೆ ಕೃತಿಗಳ ಸಂರಕ್ಷಣೆಯೆಂದು ಅರ್ಥೈಸಬಹುದು. ಏಕೆಂದರೆ ಹಸ್ತಪ್ರತಿಯ ಕಟ್ಟುಗಳ ಗರಿಗಳಲ್ಲಿ ಅಡಗಿರುವ ಜ್ಞಾನ ಸಂಪತ್ತನ್ನು ಸಂರಕ್ಷಿಸುವುದು. ಇದರಲ್ಲಿರುವ ಲಿಪಿ ವಿನ್ಯಾಸಗಳಿಂದ ಹಿಡಿದು ಮನುಷ್ಯನ ಬದುಕಿನಲ್ಲಿ ನಡೆಯುತ್ತಿರುವ ವೈವಿಧ್ಯಮಯ ಸಂಗತಿಗಳನ್ನು ಒಳಗೊಂಡಂತೆ ಅದೊಂದು ಸಾಂಸ್ಕೃತಿಕ ಭಂಡಾರವಾಗಿದೆ. ಇಂಥ ಜ್ಞಾನ ಭಂಡಾಋವು ಸಮಾಜಮುಖಿಯಾದಾಗ ಮಾತ್ರ ನಮ್ಮ ಸಂರಕ್ಷಣೆಯ ಉದ್ದೇಶ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಹಸ್ತಪ್ರತಿ ಕಟ್ಟುಗಳ ಸಂರಕ್ಷಣೆಯ ನೆಪದಲ್ಲಿ ಒಂದು ಮೂಲೆಯಲ್ಲಿ ಕೂಡಿ ಹಾಕಿ ಅಜ್ಞಾತವಾಗಿ ಇರಿಸಿದಂತಾಗುತ್ತದೆ. ಮೊದಲೇ ಜೀರ್ಣಸ್ಥಿತಿಯಲ್ಲಿರುವ ಇವುಗಳನ್ನು ಪರಿಚಲನಗೊಳಿಸಿದರೆ ದೀರ್ಘಕಾಲ ಬದುಕಲಾರವು. ಇದರಿಂದಾಗಿ ಇವುಗಳ ಪ್ರತಿಯಂತೆ ಮತ್ತೊಂದು ಪ್ರತಿಗಳನ್ನು ಸಿದ್ಧಪಡಿಸುವುದು ಒಂದು ರೀತಿಯ ನಕಲು ಕಾರ್ಯವೆಂದೇ ಭಾವಿಸಬಹುದು. ಇಂಥ ನಕಲು ಕಾರ್ಯದ ಹಿಂದಿನ ಉದ್ದೇಶ ಮೂಲ ಪ್ರತಿಗಳನ್ನು ಸಂರಕ್ಷಿಸುವುದಾಗಿದೆ. ಹಾಗಾಗಿಯೇ ಪ್ರಾಚೀನ ಕಾಲದಿಂದ ಈ ನಕಲು ಕಾರ್ಯ ಪಾರಂಪರಿಕ ಮಾದರಿಯಾಗಿದೆ. ಈ ನಕಲು ಕಾರ್ಯದಿಂದಾಗಿಯೇ ಇಂದು ನಮಗೆ ಒಂದೇ ಕೃತಿಯ ಹಲವಾರು ಪ್ರತಿಗಳು ಲಭ್ಯವಾಗಲು ನಿದರ್ಶನವಾಗುತ್ತವೆ. ಇಂಥ ನಕಲು ಪ್ರತಿ ಶುದ್ಧ ಪ್ರತಿಗಳೆರಡೂ ಇಂದು ಮೂಲ ಪ್ರತಿಗಳೆಂದೇ ಭಾವಿಸಿ ಸಂರಕ್ಷಿಸಲಾಗುತ್ತಿದೆ. ಹೀಗಾಗಿ ಆಧುನಿಕ ಯುಗದ ವೈಜ್ಞಾನಿಕ ಆವಿಷ್ಕಾರಗಳ ಉಪಯೋಗಗಳನ್ನು ಪಡೆದು ಹಲವಾರು ವಿಧಾನಗಳಲ್ಲಿ ಇಂಥ ಕಾರ್ಯಗಳನ್ನು ಕೈಗೆತ್ತಿಕೊಂಡು ಮುನ್ನಡೆಯುತ್ತಿದೆ. ಕಂಪ್ಯೂಟರಿನಂಥ ಉಪಕರಣದ ಮೂಲಕ “ಇಡೀ ಹಸ್ತಪ್ರತಿ ಭಂಡಾರವನ್ನೇ ಒಂದು ಜೇಬಿನಲ್ಲಿ ಇಟ್ಟುಕೊಂಡು ತಿರುಗುವ ಕಾಲ ಸನ್ನಿಹಿತವಾಗಿದೆ”[12].

ಹಸ್ತಪ್ರತಿಗಳ ಆಂತರಿಕ ಸಂರಕ್ಷಣೆಯ ವಿಧಾನವನ್ನು ಅಧ್ಯಯನ ದೃಷ್ಟಿಯಿಂದ ಎರಡು ಭಾಗಗಳಲ್ಲಿ ವಿಂಗಡಿಸಬಹುದು.

೧) ಹಸ್ತಪ್ರತಿಗಳ ಆಂತರಿಕ ಸಂರಕ್ಷಣೆಯಲ್ಲಿ ಪ್ರಾಚೀನರ ವಿಧಾನ
೨) ಹಸ್ತಪ್ರತಿಗಳ ಆಂತರಿಕ ಸಂರಕ್ಷಣೆಯಲ್ಲಿ ಆಧುನಿಕರ ವಿಧಾನ

[1] ಡಾ. ನಾ. ಗೀತಾಚಾರ್ಯ, ಹಸ್ತಪ್ರತಿ ವಿವೇಚನೆ, ಪುಟ.೨೧

[2] ಡಾ. ಬಿ.ಕೆ. ಹಿರೇಮಠ, ಕನ್ನಡ ಹಸ್ತಪ್ರತಿಗಳು: ಒಂದು ಅಧ್ಯಯನ, ಪುಟ ೨೩೨

[3] ಡಾ. ಬಿ.ಎಸ್‌. ಸಣ್ಣಯ್ಯ, ಹಸ್ತಪ್ರತಿಗಳ ರಕ್ಷಣೆ ಮತ್ತು ಪರಿಚಲನೆ, ಪುಟ.೫೮

[4] ಡಾ. ಬಿ.ಕೆ. ಹಿರೇಮಠ, ಕನ್ನಡ ಹಸ್ತಪ್ರತಿಗಳು: ಒಂದು ಅಧ್ಯಯನ, ಪುಟ.೨೩೧

[5] ಡಾ. ಬಿ.ಎಸ್‌. ಸಣ್ಣಯ್ಯ, ಹಸ್ತಪ್ರತಿಗಳ ರಕ್ಷಣೆ ಮತ್ತು ಪರಿಚಲನೆ, ಪುಟ.೧೩

[6] ಡಾ. ಬಿ.ಎಸ್‌. ಸಣ್ಣಯ್ಯ, ಹಸ್ತಪ್ರತಿಗಳ ರಕ್ಷಣೆ ಮತ್ತು ಪರಿಚಲನೆ, ಪುಟ.೬೧

[7] ಡಾ. ಬಿ.ಎಸ್‌. ಸಣ್ಣಯ್ಯ, ಹಸ್ತಪ್ರತಿಗಳ ರಕ್ಷಣೆ ಮತ್ತು ಪರಿಚಲನೆ, ಪುಟ.೬೩

[8] ಡಾ. ಬಿ.ಎಸ್‌. ಸಣ್ಣಯ್ಯ, ಹಸ್ತಪ್ರತಿಗಳ ರಕ್ಷನೆ ಮತ್ತು ಪರಿಚಲನೆ,ಪುಟ.೫೮

[9] ಡಾ. ಬಿ.ಕೆ. ಹಿರೇಮಠ, ಕನ್ನಡ ಹಸ್ತಪ್ರತಿಗಳು: ಒಂದು ಅಧ್ಯಯನ, ಪುಟ ೨೩೭

[10] ಡಾ. ಎಂ.ಎಂ. ಕಲಬುರ್ಗಿ, ಕನ್ನಡ ಹಸ್ತಪ್ರತಿ ಶಾಸ್ತ್ರ, ಪುಟ.೧೧೦

[11] ಡಾ. ಬಿ.ಎಸ್‌. ಸಣ್ಣಯ್ಯ, ಹಸ್ತಪ್ರತಿಗಳ ರಕ್ಷಣೆ ಮತ್ತು ಪರಿಚಲನೆ, ಪುಟ.೬೦

[12] ಡಾ. ವೀರೇಶ ಬಡಿಗೇರ, ಹಲಗೆ ಬಳಪ, ಪುಟ.೨೮