. ಹಸ್ತಪ್ರತಿಗಳ ಆಂತರಿಕ ಸಂರಕ್ಷಣೆಯಲ್ಲಿ ಪ್ರಾಚೀನರ ವಿಧಾನ

ಹಸ್ತಪ್ರತಿಗಳ ಆಂತರಿಕ ಸಂರಕ್ಷಣೆಯಲ್ಲಿ ಪ್ರಾಚೀನರ ವಿಧಾನಗಳಲ್ಲಿ ಸಂಪ್ರತಿ ಮುಖ್ಯವಾಗಿತ್ತು. ಮೂಲಪ್ರತಿ ಇದ್ದಂತೆ ಮರುಪ್ರತಿ ಮಾಡುವುದು ಸಂಪ್ರತಿ. “ನಕಲು ಪ್ರತಿಗಳಿಗೆ ಕರ್ನಾಟಕದಲ್ಲಿ ಒಂದು ಪರಂಪರೆಯೇ ಇದೆ. ಹಸ್ತಪ್ರತಿಗಳನ್ನು ತಯಾರು ಮಾಡಿಕೊಡುವ ಓಲೆಕಾರರ ಒಂದು ವೃತ್ತಿನಿರತ ಜನಾಂಗವೇ ಇದ್ದ ಬಗ್ಗೆ ಹಲವು ದಾಖಲೆಗಳಿವೆ. ಪ್ರತಿ ಸುಗ್ಗಿಯ ಸಮಯದಲ್ಲಿ ಎತ್ತುಗಳ ಮೇಲೆ ಹೇರಿಕೊಂಡು, ಗಾಡಿಗಳಲ್ಲಿ ತುಂಬಿಕೊಂಡು ಊರೂರು ಸುತ್ತುತ್ತ ಕೇಳಿದವರ ಮನೆಯಲ್ಲೇ ಉಳಿದುಕೊಂಡು ಅವರಿಗೆ ಬೇಕಾದ ಗ್ರಂಥವನ್ನು ಪ್ರತಿ ಮಾಡಿಕೊಟ್ಟು, ವಿನಿಮಯವಾಗಿ ದವಸ-ಧಾನ್ಯ ಪಡೆದು ಜೀವನ ಸಾಗಿಸುತ್ತಿದ್ದರು”[1]. ಇವರುಗಳಲ್ಲಿ

೧. ವೃತ್ತಿ ಲಿಪಿಕಾರರು
೨. ಹವ್ಯಾಸಿ ಲಿಪಿಕಾರರು
೩. ನಿಯುಕ್ತ ಲಿಪಿಕಾರರು

ಪಠ್ಯ ಸಂರಕ್ಷಣೆಯ ಪ್ರಕ್ರಿಯೆಯಲ್ಲಿ ಈ ಲಿಪಿಕಾರರ ಪಾತ್ರ ಮುಖ್ಯವೆನಿಸಿದೆ. ಕಾವ್ಯಾಸಕ್ತರು ಆಯ್ದ ಕಾವ್ಯಗಳನ್ನು ಪುನಃ ಪುನಃ ಆಸ್ವಾದಿಸಲು ಹಸ್ತಪ್ರತಿಯ ಅನಿವಾರ್ಯವೂ ಆಗಿತ್ತು. ಏಕೆಂದರೆ ಬಾಯಿಯಿಂದ ಕೇಳಿ ಮನನ ಮಾಡಿಕೊಳ್ಳುವ ಕಾಲವೊಂದಿತ್ತು. ಒಬ್ಬ ಹೇಳುವವ ಹತ್ತು ಮಂದಿ ಕೇಳುವವರಿದ್ದರು. ಇದು ಸುಲಭವಾಗಿರಲಿಲ್ಲ. ಕಾವ್ಯವಾಚನ ಮಾಡುವವನು ಎಲ್ಲಾ ಸಂದರ್ಭಗಳಲ್ಲಿ ಸಿಗುತ್ತಿರಲಿಲ್ಲ. ಇದರಿಂದ ನಿರಾಸಕ್ತಿ ಉಂಟಾಗುತ್ತಿತ್ತು. ಇಂತ ನಿರಾಸಕ್ತಿಯು ಹಸ್ತಪ್ರತಿ ಹೋಗಲಾಡಿಸಲು ಸಹಾಯಕವಾಗುತ್ತಿತ್ತು. ಕೆಲವೊಮ್ಮೆ ಹಸ್ತಪ್ರತಿಗಳು ಇದ್ದರೂ, ಅವುಗಳನ್ನು ಓದಲಾಗದೇ ಮತ್ತೊಬ್ಬರ ಸಹಾಯವನ್ನಾದರು ಪಡೆದು ಕಾವ್ಯ ಸ್ವಾದವನ್ನು ಅನುಭವಿಸಲು ಅವಕಾಶವಾಗುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಜ್ಞಾನವಿದ್ದವರು ಶಾಸ್ತ್ರಗಳಲ್ಲಿ ಸ್ವಪ್ರಯೋಜನ ಪಡೆಯಲು ಆನುವಾಗುತ್ತಿದ್ದರೂ ಅನಕ್ಷರಸ್ಥರು ಜ್ಞಾನ ಪಡೆಯಲು ಹವಣಿಸಿ ಹಸ್ತಪ್ರತಿಗಳನ್ನು ನಕಲು ಪ್ರತಿ ಮಾಡಿಸಿಕೊಳ್ಳುತ್ತಿದ್ದರೆಂಬುದರಲ್ಲಿ ಸಂದೇಹವಿಲ್ಲ. ಹೀಗಾಗಿ ಅಕ್ಷರ ಕಲಿತವರಿಗೂ ಅನಕ್ಷರಸ್ಥರಿಗೂ ಲಿಪಿಕಾರರು ಅನಿವಾರ್ಯವಾಗಿದ್ದರು ಎಂಬುದು ಸರ್ವವಿಧಿತ. ನಕಲು ಪ್ರತಿ ಬರೆಯುವವರು ಎರಡು ವಿಧಾನಗಳನ್ನು ಅಳವಡಿಸಿ ಕೊಂಡಿದ್ದರು. ಒಂದು ಕೇಳುತ್ತಾ ಬರೆಯುವುದು ಇನ್ನೊಂದು ನೋಡುತ್ತಾ ಬರೆಯುವುದು.

ಕೇಳುತ್ತಾ ಬರೆಯುವುದು: “ಹಸ್ತಪ್ರತಿಯನ್ನು ಬರೆಯಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿರುತ್ತಿದ್ದ, ಬರೆಪಕಾರನು ಬರೆಯ ತೊಡಗಿದರೆ ಒಬ್ಬನು ಕಾವ್ಯಾಲಿಪಿಯನ್ನು ಮಾಡುತ್ತಿದ್ದ. ಈತ ಅಂದರೆ ಪ್ರತಿಕಾರನು ಪ್ರತಿ ಮಾಡುತ್ತಾ ಹೋಗುತ್ತಿದ್ದ ಇದು ಬರಹದ ಒಂದು ರೀತಿ. “ವಸ್ತುವಿನ ಗುಣದೋಷ ಲೇಖನ ಕರ್ತವಿಂಗೆತ್ತದು”[2]. ಎಂಬುದು ನಿದರ್ಶನವಾಗಿದೆ.

ನೋಡುತ್ತಾ ಬರೆಯುವುದು: ಹಸ್ತಪ್ರತಿಯನ್ನು ಎದುರಿಗೆ ಇಟ್ಟುಕೊಂಡು ಅದನ್ನು ನೋಡುತ್ತ ಬರೆಯುತ್ತಿದ್ದುದು ಇನ್ನೊಂದು ಪದ್ಧತಿ. ಸಾಮಾನ್ಯವಾಗಿ ಎಲ್ಲಾ ಲಿಪಿಕಾರರು ಈ ಪದ್ಧತಿಯನ್ನೇ ಹೆಚ್ಚಾಗಿ ಅನುಸರಿಸಿರುವ ಹಲವಾರು ನಿದರ್ಶನಗಳು ಸಿಗುತ್ತವೆ. ಹಸ್ತಪ್ರತಿಗಳ ಆದಿ ಅಥವಾ ಅಂತ್ಯದಲ್ಲಿರುವ ಭಾಗವಾದ ಪುಷ್ಟಿಕೆಗಳಲ್ಲಿ ಲಿಪಿಕಾರರೆ ಹೇಳಿಕೊಂಡಿರುವುದು ಸಾಮಾನ್ಯ ನಿದರ್ಶನವಾಗಿದೆ.

ಯಾದೃಶಂ ಪುಸ್ತಕಂ| ದೃಷ್ಟಾ| ತಾದೃಶಂ ಲಿಖಿತಾ ಮಯಾ||
ಅಬದ್ಭೋವಾ ಸುಬದ್ದೋ ವಾ| ಮಮದೋಷೋ ವಿದ್ಯತೆ||
ತಪ್ಪಂ ಬರೆದಾತಂ ಜಡ ನಪ್ಪಾತಂ ಬರಿದನೆಂದು ಬಯ್ಯಲ್ವೇಡಿಂ|
ತಪ್ಪಿಲ್ಲ ಶುದ್ಧಮಕ್ಕಂ| ತಪ್ಪಿಲ್ಲದೆ ಪ್ರತಿ ಸಮಾನವಾಗಿಯೆ ಬರೆದಂ||”

ಸಾಮಾನ್ಯವಾಗಿ ಪ್ರತಿಗಳಲ್ಲಿ ಲೋಪದೋಷಗಳು ಆಗುತ್ತಿರುತ್ತವೆ. ಇಂಥ ಲೋಪಕ್ಕೆ ಕೈ ತಪ್ಪು, ಕಣ್ತಪ್ಪು, ಕಿವಿ ತಪ್ಪುಗಳು ಜರುಗುವವೆಂಬ ಅರಿವು ಅವರಗಿದ್ದಿತು. ಹಾಗೂ ಪ್ರತಿ ಇದ್ದಂತೆ ಬರೆದಿರುವನೆಂದು ಹೇಳಿರುವುದು ಕಾರಣವಾಗಿದೆ. ಅದಕ್ಕೆ ಪುಸ್ತಕಂ ದೃಷ್ಟಂ ತಾದೃಶ್ಯ ಲಿಖಿತಂ ಮಯಾ” ಎಂಬ ಶ್ಲೋಕ ಪುಷ್ಠಿ ನೀಡುತ್ತದೆ. ಇದರಂತೆ ಅನೇಕ ಹಸ್ತಪ್ರತಿಗಳ ಪುಷ್ಟಿಕೆಗಳಲ್ಲಿ ಈ ರೀತಿಯ ಹೇಳಿಕೆಯ ನಿದರ್ಶನಗಳಿವೆ.

ಲಿಪಿಕಾರರು ಮೂಲ ಪ್ರತಿಯನ್ನ ನೋಡಿ ನಕಲು ಮಾಡಿರುವುದನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ ನಕಲು ಮರುನಕಲು ಕಾರ್ಯವನ್ನು ಮಾಡುತ್ತಿದ್ದರು. ಈ ರೀತಿಯ ನಕಲು-ಮರುನಕಲುಗಳು ಹಸ್ತಪ್ರತಿಗಳ ಸಂಖ್ಯೆಯ ದೃಷ್ಟಿಯಿಂದ ದ್ವಿಗುಣವಾಗುತ್ತಲೇ ಹೋಗುತ್ತಿರುತ್ತವೆ. ಇದರಿಂದಾಗಿ ಪ್ರತಿಯೊಬ್ಬರ ಮನೆಗಳಲ್ಲೂ ಹಸ್ತಪ್ರತಿಗಳು ಇರುತ್ತಿದ್ದವು. ವಾಸ್ತವವಾಗಿ ಹೇಳುವುದಾದರೆ ಇಂದು ಪ್ರತಿ ಮನೆಗಳಲ್ಲಿ ದೂರದರ್ಶನ ಪೆಟ್ಟಿಗೆ (ಟಿ.ವಿ) ಗಳು ಇದ್ದಂತೆ ಇರುತ್ತಿದ್ದವು. ಕಾಲಬದಲಾದಂತೆ ಜನರ ಅಭಿರುಚಿಗಳು ಬದಲಾದಂತೆ ಹಸ್ತಪ್ರತಿಗಳ ಸಂರಕ್ಷಣೆಯ ದೃಷ್ಟಿಕೋನಗಳೂ ಬದಲಾವಣೆ ಗೊಂಡಿರುವಲ್ಲಿ ಆಶ್ಚರ್ಯಪಡಬೇಕಾಗಿಲ್ಲ.

ಹಸ್ತಪ್ರತಿಗಳನ್ನು ನಕಲು ಕಾರ್ಯ ಮಾಡಿದ್ದಾಗಿ ಲಿಪಿಕಾರರೆ ಹೀಗೆ ಹೇಳಿಕೊಂಡಿದ್ದಾರೆ.

“ಜೋಗನಹಳ್ಳಿ ವಿರಕ್ತದೇವರು ತಮ್ಮ ಮನೆಗೆ ಪುಸ್ತಕವಾಗಿರಲೆಂದು ಕಾರ್ಯದ ಮಹಾಂತ ಸ್ವಾಮಿಗಳ ಬಳಿಯಿದ್ದ ಪ್ರತಿಯ ತಂದು ಪ್ರತಿಯಿದ್ದ ಮೇರೆಗೆ ಬರೆದಿರಿಸಿದೆನು”[3].

ಚೆನ್ನಪಟ್ಟಣ ವಳಿತವಾದ ಹೊಂಗನೂರು ನಾರಣೈಯನು ತನ್ನ ಮಗನಿಗೆ ಬರೆದುಕೊಟ್ಟ ಮೂಲ ಪ್ರತಿಯನ್ನು ನೋಡಿ ಬರೆದದ್ದು[4].

“…… ಯಿ ಪ್ರತಿಯಿದ್ದ ಪ್ರಕಾರಕ್ಕೆ ಬರೆದುಯಿದ್ದನು”[5]

“…… ಪ್ರತಿ ಹಾಲು ಮನೆಯ ಕಷ್ಟಯನವರದ್ದು ನೋಡಿ ಬರದು ಅದೆ”[6]

“…….. ಬರದ ಪುಸ್ತಕ ಇಟ್ಟುಕೊಂಡು ಈ ಪ್ರತಿಯನ್ನು ಬರೆದು ಇದ್ದೇನೆ”[7]

“ ಸ್ವದಸ್ತಾರ ಧರ್ಮಣಾಮ ಮಖದುಮ ಪ್ರತಿ ನೋಡ ಬರೆದನು”[8]

“……. ಶ್ರೀ ಅಯಪ್ಪಯ್ಯನವರು’ ಯಿ ಚರಿತವನ್ನು ಶ್ರೀ ಬಸವಲಿಂಗಯ್ಯನವರು ನೋಡಿದ್ದ ವಾಕ್ಯಗಳು ನೆನಪಿಗೆ ಯಥಾ ಶಕ್ತಿಯಿಂದ ಬರದದ್ದೂ ಮಂಗಲಂ ಮಹಾ ||ಪ|| ಶ್ರೀ ಶ್ರೀ ಶ್ರೀ”[9]

ಇಂಥ ಉಕ್ತಿಗಳನ್ನು ಆದರ್ಶ ಲಿಪಿಕಾರರು ಹೇಳಿಕೊಂಡಿರುತ್ತಾರೆ. ಪ್ರತಿಗಳನ್ನು ಸ್ವಪ್ರಯೋಜನ ಪರಪ್ರಯೋಜನಕ್ಕೆ ಪ್ರತಿ ಮಾಡಿಸಿದವರು ಪ್ರತಿ ಮಾಡಿದವರ ಉಲ್ಲೇಖಗಳು ಸಿಗುತ್ತವೆ. ಉದಾಹರಣೆಯಾಗಿ ಹೇಳುವುದಾದರೆ ದಾನ ಚಿಂತಾಮಣಿ ಅತ್ತಿಮಬ್ಬೆ ಪೊನ್ನನ ಶಾಂತಿಪುರಾಣದ ಸಾವಿರ ಪ್ರತಿಗಳನ್ನು ಬರೆಯಿಸಿ ಧಾನ ಮಾಡಿದ್ದು ಉಲ್ಲೇಖನೀಯ ಅಷ್ಟೇ. ಇಂಥ ನೂರಾರು ಉಲ್ಲೇಖಗಳು ಸಿಗುತ್ತವೆ. ಪ್ರಾಚೀನರು ಶಾಸ್ತ್ರ ಗ್ರಂಥಗಳನ್ನು ಬರೆಯಿಸಿ ದಾನ ಮಾಡುವುದು ಅದೊಂದು ಮೋಕ್ಷ ಸಾಧನೆಯೆಂದೇ ಪುಣ್ಯದ ಕಾರ್ಯವೆಂದೇ ಭಾವಿಸಿದ್ದರು. ಅತ್ತಿಮಬ್ಬೆ ಗ್ರಂಥದಾನ ಮಾಡಿರುವುದು ಪರೋಕ್ಷ ವಿನಯವಾಗಿದೆ. ಹಾಗೆ ದಾನ ಪಡೆದವರು ಧಾನವಾಗಿ ಪ್ರತಿಗಳನ್ನು ಭಯ ಭಕ್ತಿಯಿಂದ ಸ್ವೀಕರಿಸಿ ದೈವದ ಕಲ್ಪನೆಯ ಹಿನ್ನಲೆಯಲ್ಲಿ ಪೂಜೆಗೊಳಪಟ್ಟದ್ದುದರಿಂದ ಇಂದಿಗೂ ಜತನವಾಗಿ ಸಂರಕ್ಷಣೆಗೊಳ್ಳುತ್ತಿವೆ.

.. ಹಸ್ತಪ್ರತಿಗಳ ಆಂತರಿಕ ಸಂರಕ್ಷಣೆಯ ಆಧುನಿಕ ವಿಧಾನಗಳು

ಹಸ್ತಪ್ರತಿಗಳ ಆಂತರಿಕ ಸಂರಕ್ಷಣೆಯೆಂದರೆ ಜ್ಞಾನದ ರಕ್ಷಣೆ. ಪ್ರತಿಯಲ್ಲಿ ದಾಖಲಾದ ಅಕ್ಷರರೂಪದ ಮಾದರಿಗಳನ್ನು ಪ್ರತ್ಯೇಕೀಕರಿಸಿ ಪ್ರತಿಯನ್ನು ಸಂರಕ್ಷಿಸುವುದು. ಪ್ರತ್ಯೇಕಿಸಿ ಎಂದರೆ ಪ್ರತಿಯಿಂದ ಪ್ರತಿ ಮಾಡಿಕೊಳ್ಳುವುದು. ಇದು ನಕಲು ಕಾರ್ಯವನ್ನೇ ಹೋಲುತ್ತದೆ. ಇಂದು ಪ್ರತಿಗಳನ್ನು ಮಾಡಲು ಅನೇಕ ಯಂತ್ರೋಪಕರಣಗಳು ಸಹಾಯ ಮಾಡುತ್ತಿವೆ. ಮೈಕ್ರೋ ಫಿಲಂ, ಕಂಪ್ಯೂಟರ್ ಇತ್ಯಾದಿಗಳು. ಇನ್ನೊಂದು ಮಾದರಿಯೆಂದರೆ ಕೈ ಬರವಣಿಗೆಯಿಂದ ಪ್ರತಿ ತಯಾರಿಸಿಕೊಳ್ಳುವುದು. ಇಂಥ ಪ್ರತಿಗಳು ಮತ್ತೊಂದು ಹಸ್ತಪ್ರತಿಯನ್ನಾಗಿ ಸಿದ್ಧಪಡಿಸಿದಂತಾಗುವುದು. ಆದರೆ ಇದಕ್ಕೆ ಹೆಚ್ಚು ಸಮಯ ಶ್ರಮಬೇಕಾಗುತ್ತದೆ. ಪ್ರಾಚೀನ ಕಾಲದಲ್ಲಿ ಈ ರೀತಿಯ ಪ್ರತಿಯಿಂದ ಪ್ರತಿಗಳ ನಕಲು ಕಾರ್ಯ ಮಾಡುತ್ತಿದ್ದರು. ಈ ತರಹದ ನಕಲು ಪ್ರತಿಗಳು ತಾಳೆಗರಿಯಾಗಲಿ, ಕೋರಿಕಾಗದವೋ ಆಗಿರುತ್ತಿತ್ತು. ಅಂದರೆ ಮೂಲ ಪ್ರತಿಗೆ ಬೇಕಾಗುವ ಶ್ರಮ ಮತ್ತು ಸಮಯ ಅಷ್ಟೇ ನಕಲು ಪ್ರತಿಗಳಿಗೂ ಬೇಕಾಗುತ್ತಿತ್ತು. ಇಂದಿನ ಕಾಲಮಾನದೊಂದಿಗೆ ಹೋಲಿಸಿದಾಗ ಅಂಥ ಸಾವಿರಾರು ಹಸ್ತಪ್ರತಿಗಳನ್ನು ಅಲ್ಪ ಸಮಯ ಹಾಗೂ ಕಡಿಮೆ ವೆಚ್ಚಗಳಿಂದ ನಕಲು ಕಾರ್ಯ ಮಾಡಿ ಮುಗಿಸಬಹುದು. ಡಾ.ವೀರೇಶ ಬಡಿಗೇರರು ಹೇಳುವ ಹಾಗೆ ಅಕ್ಷರವೊಂದನ್ನು ಶೇಖರಿಸಲು ನೂರಾರು ರೂಪಾಯಿಗಳು ಬೇಕಾಗಿದ್ದ ಕಾಲದಿಂದ ಹಿಡಿದು ಕೆಲವೇ ರೂಪಾಯಿಗಳಲ್ಲಿ ಸಹಸ್ರಾರು ಅಕ್ಷರಗಳನ್ನು ಶೇಖರಿಸಬಲ್ಲ ಸಾಧ್ಯತೆಯುಳ್ಳ ಇಂದಿನ ಈ ಶೇಖರಣಾ ಸಾಧನಗಳು ಬೆಳೆದು ಬಂದ ದಾರಿ ಅತ್ಯಂತ ಕುತೂಹಲಕಾರಿಯಾದದ್ದು. ನಿರಂತರವಾಗಿ ಹಿಗ್ಗುತ್ತಿರುವ ಮಾಹಿತಿಯನ್ನು ಅತ್ಯಂತ ಸಮರ್ಪಕವಾಗಿ ಮತ್ತು ದೀರ್ಘಕಾಲದವರೆಗೂ ಕೆಡದಂತೆ ತನ್ನಲ್ಲೆ ಕಾಪಾಡಿಕೊಳ್ಳಬಲ್ಲ ಸಾಧನಕ್ಕಾಗಿ ಮನುಷ್ಯ ನಡೆಸಿದ ಸಂಶೋಧನೆಗಳು ಇಂದು ಅಗಾಧ ಫಲಿತಾಂಶ ನೀಡುತ್ತವೆ”.

ಝೆರಾಕ್ಸ್‌ ಫೋಟೋ ಸ್ಯಾಪ್‌, ಮೈಕ್ರೋಫಿಲಂ, ಕಂಪ್ಯೂಟರ್ ನಂತಹ ಉಪಕರಣಗಳನ್ನು ಹಸ್ತಪ್ರತಿ ಕ್ಷೇತ್ರದಲ್ಲಿ ಒಂದು ಮೈಲುಗಲ್ಲುಗಳಾಗಿ ನಿಂತರಿವೆ ಎಂದರೆ ಅತಿಶಯೋಕ್ತಿಯಾಗಲಾರವು. ಜಗತ್ತಿನ ಬೇರೆ ಬೇರೆ ಹಸ್ತಪ್ರತಿ ಭಂಡಾರಗಳು ಈ ಉಪಕರಣಗಳನ್ನು ಬಳಸಿ ಉಪಯೋಗಪಡಿಸಿಕೊಳ್ಳುತ್ತಿವೆ. ಹೀಗಾಗಿ ನಮ್ಮಲ್ಲಿ ಸಂಗ್ರಹವಾಗದಂತಹ ಹಸ್ತಪ್ರತಿಗಳನ್ನು ಇವುಗಳ ಮೂಲಕ ದಾಖಲಿಸಿಕೊಂಡರೆ ಮೂಲ ಪ್ರತಿಯನ್ನು ದೀರ್ಘಕಾಲದವರೆಗೂ ಸಂರಕ್ಷಿಸಿದಂತಾಗುತ್ತದೆ.

... ಮೈಕ್ರೋಫಿಲಂ

ಹಸ್ತಪ್ರತಿಗಳ ಮೂಲ ಪ್ರತಿಗಳು ಹೇಗಿರುತ್ತವೆಯೋ ಹಾಗೆಯೇ ಮೈಕ್ರೋ ಫಿಲಂ ದಾಖಲಿಸುವ ಕಾರ್ಯ ಮಾಡುತ್ತದೆ. ಅಂದರೆ ಹಸ್ತಪ್ರತಿಯ ಒಂದೊಂದೇ ಗರಿಗಳನ್ನು ಅನುಕ್ರಮವಾಗಿ ಸ್ಕ್ಯಾನ್‌ ಮಾಡುವುದು. ಇದು ಹಸ್ತಪ್ರತಿ ಕ್ಷೇತ್ರಕಾರ್ಯದ ಸಂದರ್ಭದಲ್ಲಿಯೂ ಬಳಸಬಹುದು. ಹಸ್ತಪ್ರತಿ ಇದ್ದಂತವರು ಹೊರಗಡೆ ಕೊಡದೆ ಇರುವಾಗ ಮೈಕ್ರೋಫಿಲಂ ರೂಪದಲ್ಲಿ ಸಂಗ್ರಹಿಸಬಹುದು. ಹಸ್ತಪ್ರತಿ ಭಂಡಾರದಲ್ಲಿರುವ ಏಕೈಕ ಹಸ್ತಪ್ರತಿಗಳನ್ನು ಮೈಕ್ರೋಫಿಲಂ ಮೂಲಕ ಸಿದ್ಧಪಡಿಸಿಕೊಂಡರೆ ಮೂಲ ಪ್ರತಿಯನ್ನು ಯಥಾವತ್ತಾಗಿ ಕಾಪಾಡಬಹುದು. ಒಂದು ವೇಳೆ ಒಂದು ಪ್ರತಿ ಯಾವುದೇ ರೀತಿಯಲ್ಲಿ ಹಾನಿಗೊಳಗಾದರೆ ಮತ್ತೊಂದು ಪ್ರತಿಯಿಂದ ಸಹಾಯವಾಗುತ್ತದೆ. ರಕ್ಷಣಾ ದೃಷ್ಟಿಯಿಂದ ಈ ಎರಡೂ ಪ್ರತಿಗಳು ಬೇರೆ ಬೇರೆ ಸ್ಥಳಗಳಲ್ಲಿಡುವುದು ಉತ್ತಮ.

... ಝೆರಾಕ್ಸ್ಯಂತ್ರ (ನೆರಳಚ್ಚು)

ಇದು ಕೂಡ ಮೈಕ್ರೋಫಿಲಂ ತರಹವೇ ಕಾರ್ಯನಿರ್ವಹಿಸುತ್ತದೆ. ಆದರೆ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಉಪಯೋಗವಾಗಲಾರದು. ಇದು ದೊಡ್ಡ ಯಂತ್ರವಾಗಿರುವುದರಿಂದ ಅನೇಕ ಸಮಸ್ಯೆಗಳು ಕಾಡುತ್ತವೆ.

... ಫೋಟೋಸ್ಯಾಪ್

ಹಸ್ತಪ್ರತಿಗಳಲ್ಲಿನ ಬರಹವನ್ನು ಸಂರಕ್ಷಿಸುವ ವಿಧಾನದಲ್ಲಿ ಫೋಟೋಸ್ಯಾಪ್‌ ಒಂದು. ಇದರ ಮೂಲಕ ಹಸ್ತಪ್ರತಿಗಳ ಪ್ರತಿಯೊಂದು ಪುಟಗಳನ್ನು ಅನುಕ್ರಮವಾಗಿ ಫೋಟೋ ಕ್ಲಿಕ್‌ ಮಾಡುತ್ತಾ ಹೋಗಬೇಕು. ಹಾಗೇ ಕ್ಲಿಕ್‌ ಮಾಡಿದವುಗಳನ್ನು ಫೋಟೋ ಸ್ಟುಡಿಯೋದಲ್ಲಿ ಪ್ರಿಂಟ್‌ ಹಾಕಿಸಬೇಕು. ಒಂದೇ ಪ್ರತಿಯ ನಮಗೆ ಬೇಕಾದಷ್ಟು ಪ್ರಿಂಟ್‌ ಹಾಕಿಸಬಹುದಾಗಿದೆ. ಆ ಎಲ್ಲಾ ಕಾಪಿಗಳನ್ನು ಅಲ್ಬಾಮ್‌ ರೂಪದಲ್ಲಿ ಪುಸ್ತಕವನ್ನಾಗಿ ಸಿದ್ಧಪಡಿಸಿಕೊಳ್ಳಬಹುದು. ಇದಕ್ಕೆ ಹೆಚ್ಚು ಹಣ ಬೇಕಾಗುವುದರಿಂದ ಹೆಚ್ಚು ಉಪಯೋಗಿಸುತ್ತಿಲ್ಲ. ಇಂದು ಫೋಟೋ ಕ್ಯಾಮರಾಗಳು ಹೆಚ್ಚು ಸುಧಾರಿಸಿವೆ. ಡಿಜಿಟಲ್‌ ಕ್ಯಾಮರಾಗಳು ಒಂದೇ ಬಾರಿಗೆ ಸಾವಿರಾರು ಫೋಟೋಗಳನ್ನು ಶೇಖರಿಸಿಕೊಳ್ಳಬಲ್ಲವು ಮತ್ತು ಇಂಥ ಕ್ಯಾಮರಾಗಳಿಂದ ಯು.ಎಸ್‌.ಪಿ ಮೂಲಕ ನೇರವಾಗಿ ಟಿ.ವಿಯಲ್ಲಿ ಸಂಪರ್ಕ ಸಾಧಿಸಿ ಪರದೆಯಲ್ಲಿ ನೋಡಬಹುದು. ಆದರೆ ಫೋಟೋ ಮಾಡುವಾಗ ಅಚಾತುರ್ಯದಿಂದಾಗಿ ಫೋಟೋಗಳಲ್ಲಿ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸಿದೇ ಹೋಗುವ ಸಂಭವವಿದೆ.

... ವಿಡಿಯೋಗ್ರಫಿ/ಹ್ಯಾಂಡಿಕ್ಯಾಮ್

ಇದೊಂದು ದೃಶ್ಯಾವಳಿಗಳ ಚಿತ್ರೀಕರಣದ ಸಾಧನ. ವಿಶೇಷವಾಗಿ ಹಸ್ತಪ್ರತಿಗಳನ್ನು ಚಿತ್ರೀಕರಿಸುವ ಅತ್ಯಂತ ಸುಲಭದ ಉಪಕರಣವಾಗಿದೆ. ಇದರಲ್ಲಿ ಸೆರೆಹಿಡಿದಿರುವ ಚಿತ್ರಗಳು ಡಿಜಿಟಲ್‌ ಫೋಟೋ ತರಹನೇ ಮೆಮೋರಿಕಾರ್ಡಿನಲ್ಲಿ ಶೇಖರಣೆ ಗೊಳ್ಳುತ್ತವೆ. ಅತೀ ಚಿಕ್ಕದಾದ ಈ ಮೆಮೋರಿ ಕಾರ್ಡ್‌ವೊಂದಿದ್ದರೆ ಸಾಕು. ಇದನ್ನು ಕಂಪ್ಯೂಟರಿಗೆ ಅಳವಡಿಸಿ ಸೆರೆಹಿಡಿದ ದೃಶ್ಯಾವಳಿಗಳನ್ನು ನೋಡಬಹುದು. ಆದರೆ ಹಸ್ತಪ್ರತಿ ಆಸಕ್ತರು ಇದನ್ನು ಉಪಯೋಗಿಸುವುದು ಗೊತ್ತಿರಬೇಕಾಗುತ್ತದೆ. ಕಂಪ್ಯೂಟರ್, ವಿದ್ಯುತ್‌ಚ್ಛಕ್ತಿ ಬೇಕಾಗುತ್ತದೆ. ಇವುಗಳು ಎಲ್ಲರಲ್ಲೂ ಎಲ್ಲಾ ಸಮಯದಲ್ಲೂ ಇರಲು ಸಾಧ್ಯವಿಲ್ಲ. ಆದರೆ ಹಸ್ತಪ್ರತಿಗಳ ಮೂಲ ಪ್ರತಿಗಳನ್ನು ಸಂರಕ್ಷಿಸಲು ಈ ವಿಧಾನದ ಮೂಲಕ ಸಾಧ್ಯವಿದೆ.

... ಕಂಪ್ಯೂಟರ್

ಇಂದಿನ ವೈಜ್ಞಾನಿಕ ಆವಿಷ್ಕಾರಗಳಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಹೊಸ ಶಕೆಯನ್ನೇ ಸೃಷ್ಟಿಸಿದೆ. ಕಂಪ್ಯೂಟರಿನ ಮೂಲಕ ಏನೂ ಬೇಕಾದರೂ ದಾಖಲೀಕರಿಸಬಹುದು ರಕ್ಷಿಸಬಹುದು ಹಾಗೂ ಮಾನಿಟರ್ ಪರದೆಯ ಮೇಲೆ ನೋಡಬಹುದು ಮತ್ತು ಮಾಹಿತಿಯನ್ನು ಪರಿಚಲನಗೊಳಿಸಬಹುದು. ಇಡೀ ಜಗತ್ತನ್ನೇ ಕ್ಷಣ ಮಾತ್ರದಲ್ಲಿ ಸುತ್ತಾಡಿಕೊಂಡು ಬರಬಹುದು. ಮಾಹಿತಿ ತಂತ್ರಜ್ಞಾನ ಮೂಲಕ (Internet Working) ಇದು ಸಾಧ್ಯವಾಗಿರುತ್ತಿದೆ. ನಮ್ಮ ಕಂಪ್ಯೂಟರಿನ ಮೂಲಕ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದೆ. “ನಮ್ಮ ಹತ್ತಿರ ಅಥವಾ ನಮ್ಮದೇ ಆದ ಹಸ್ತಪ್ರತಿ ಸಂಗ್ರಹದಲ್ಲಿ ಅಪಾರ ಸಂಖ್ಯೆಯ ಅಪೂರ್ವವಾದ ಹಸ್ತಪ್ರತಿಗಳು ಇವೆ ಎಂದುಕೊಳ್ಳೋಣ. ಅವುಗಳ ಸಂರಕ್ಷಣೆ ಮತ್ತು ಸಂಗ್ರಹಣೆ ಅತ್ಯಂತ ಸವಾಲಿನವು. ಪಾರಂಪರಿಕ ವಿಧಾನಗಳು ಅದರ ಅಸ್ತಿತ್ವವನ್ನು ಕಾಪಾಡುವಲ್ಲಿ ಸೋತಿವೆ. ಇದ್ದರೂ ಅವು ಹೆಚ್ಚು ಶ್ರಮ, ವೆಚ್ಚ ಮತ್ತು ವೇಳೆಯನ್ನು ಬಯಸುತ್ತವೆ. ಇಂದು ಕಂಪ್ಯೂಟರ್ ಹೆಚ್ಚಿನ ಶ್ರಮ, ವೆಚ್ಚವಿಲ್ಲದೆ ಕಡಿಮೆ ಖರ್ಚಿನಲ್ಲಿ ಅತ್ಯಧಿಕ ಮಾಹಿತಿಯನ್ನು, ಮಾಹಿತಿಯ ಮಾಧ್ಯಮಗಳನ್ನು ಸಂಗ್ರಹಿಸುವ ಹಲವಾರು ಸಾಧ್ಯತೆಗಳನ್ನು ಹಡೆದಿಟ್ಟಿದೆ”[10]. ಗಣಕಯಂತ್ರಕ್ಕೆ ಅಮೂಲ್ಯವೆನಿಸಿದಂತಹ ಹಸ್ತಪ್ರತಿಗಳನ್ನು ಮೂರು ವಿಧವಾಗಿ ಉಣಬಡಿಸಬಹುದು.

೧. ಸ್ಕ್ಯಾನರ್ ಯಂತ್ರದ ಮೂಲಕ ಸ್ಕ್ಯಾನ್‌ ಮಾಡುವುದು ಅಥವಾ ಡಿಜಿಟಲ್‌ ಕ್ಯಾಮರಾ ಮೂಲಕ ಸೆರೆ ಹಿಡಿಯುವುದು

೨. ಮೈಕ್ರೋಫೋನ್‌ ಮುಖಾಂತರ ಓದಿ ರೆಕಾರ್ಡ್ ಮಾಡುವುದು

೩ ಡಿ ಟಿ.ಪಿ.

ಈ ವಿಧಾನವು ಹಸ್ತಪ್ರತಿಯಲ್ಲಿರುವ ಪಠ್ಯವನ್ನು ಕಂಪ್ಯೂಟರ್ ಕೀಬೋರ್ಡ್ ಮೂಲಕ ಟೈಪಿಸುವುದು. ಹಳೆಗನ್ನಡದಲ್ಲಿರುವ, ಲಿಪಿಯ ಶೈಲಿ ವಿಭಿನ್ನದಲ್ಲಿರುವ ಇಂಥ ಪಠ್ಯವನ್ನು ಟೈಪಿಸಲು ತಜ್ಞತೆ ಬೇಕು. ಇಲ್ಲವೆ ತಜ್ಞರಿದ್ದವರು ಬರೆದು ಕೊಡಬೇಕು. ಇದು ಶ್ರಮ ಮತ್ತು ಹೆಚ್ಚು ಸಮಯವನ್ನು ಬೇಡುವಂಥದ್ದು. ಹಸ್ತಪ್ರತಿಯ ಮೂಲರೂಪ ನಮಗಿಲ್ಲಿ ದೊರಕದು.

ಸ್ಕ್ಯಾನರ್: ಈ ವಿಧಾನವು ಹಸ್ತಪ್ರತಿಯ ಮೂಲರೂಪವನ್ನು ಯಥಾವತ್ತಾಗಿ ಹಿಡಿದಿಟ್ಟುಕೊಳ್ಳಲು ಸಹಾಯಕವಾಗುವಂಥದ್ದು. ಇದಕ್ಕೆ ಸ್ಕ್ಯಾನರ್ ಜೊತೆ ಡಿಜಿಟಲ್‌ ಕ್ಯಾಮರಾವನ್ನು ಬಳಸಿಕೊಳ್ಳಬಹುದಾಗಿದೆ. ಹಸ್ತಪ್ರತಿಯೊಂದರ ಪ್ರತಿಪುಟಗಳನ್ನು ಸ್ಕ್ಯಾನರ್ ಮೂಲಕ ಗಣಕೀಕರಿಸಬೇಕು. ಹೀಗೆ ಮಾಡುವಾಗ ಹಸ್ತಪ್ರತಿಯ ಪುಟ ಯಥಾವತ್ತಾಗಿ ಗಣಕ ಪರದೆಯ ಮೇಲೆ ಮೂಡುತ್ತದೆ. ಪ್ರತಿಯೊಂದನ್ನು ಹೀಗೆ ಮೂಡಲು ಫೋಟೋಶಾಫ್‌ ಹಾಗೂ ಫೋಟೋ ಫಿನಿಸ್‌ ಸಾಪ್ಟವೇರ್ ಗಳು ಸಹಾಯ ಮಾಡುತ್ತವೆ. ಗಣಕೀಕರಿಸುವ ಮುನ್ನ ಹಸ್ತಪ್ರತಿಯಲ್ಲಿರುವ ಗರಿಗಳು ಮುರಿದು ಹೋಗಿದ್ದರೆ, ನಾಶಗೊಂಡಿದ್ದರೆ, ಅಕ್ಷರಗಳು ಮಂಕು ಮಂಕಾಗಿದ್ದರೆ ಅದನ್ನು ದುರಸ್ತಿಗೊಳಿಸುವ ಕಾರ್ಯ ಕಂಪ್ಯೂಟರ್ ಮಾಡುತ್ತದೆ. ಹಸ್ತಪ್ರತಿಯೊಂದರ ಪಠ್ಯದಲ್ಲಿ ಮಸಿ ಚಲ್ಲಿದ್ದರೆ ಅನಾವಶ್ಯಕ ಗಲೀಜು, ಚುಕ್ಕೆಗಳಿದ್ದರೆ ಅದನ್ನು ಪದ ಸಂಸ್ಕಾರಗಳ ಸಹಾಯದಿಂದ ಸ್ವಚ್ಛಗೊಳಿಸಬಹುದಾಗಿದೆ. ತ್ರುಟಿತಗೊಂಡ ಪದಗಳನ್ನು ಸರಿಪಡಿಸಲು ಸ್ಟೈಲಸ್‌ ಎನ್ನುವ ಉಪಕರಣ ಹೆಚ್ಚು ಉಪಯುಕ್ತವಾಗಿದೆ. ಸ್ಟೈಲಸ್‌ ಮೂಲಕ ಹೊಸ ಅಕ್ಷರಗಳನ್ನು ಬರೆದು ವಾಕ್ಯವನ್ನು ಪೂರ್ಣಗೊಳಿಸಬಹುದು. ಅಲ್ಲದೇ ಕಂಪ್ಯೂಟರಿಗೆ ಅಳವಡಿಸಿದ ಪಠ್ಯದಲ್ಲಿಯೇ ತ್ರುಟಿತ ಅಕ್ಷರವನ್ನು ಸರ್ಚ್ ಮಾಡಲು ಕಂಪ್ಯೂಟರಿಗೆ ಆಜ್ಞೆ ಕೊಟ್ಟರೆ ನಿರ್ದಿಷ್ಟ ಜಾಗಕ್ಕೆ ಬೇಕಾಗುವ ನಿರ್ದಿಷ್ಟ ಅಕ್ಷರಗಳನ್ನು ಆಯ್ಕೆ ಮಾಡಿಕೊಡುತ್ತದೆ. ಇದಕ್ಕೆ ಸ್ಟೈಲ್‌ ಚೆಕ್ಕರ್ ಎಂದು ಕರೆಯುತ್ತಾರೆ. ಇಮೇಜ್‌ ರೂಪದಲ್ಲಿ ಸ್ಕ್ಯಾನ್‌ ಮಾಡಲಾದ ಹಸ್ತಪ್ರತಿಗಳಲ್ಲಿಯ ಪಠ್ಯಗಳನ್ನು ಟೈಪಿನ ಅಗತ್ಯವಿಲ್ಲದೆ ನಮಗೆ ಬೇಕಾದ ಭಾಷೆಗೆ ಪರಿವರ್ತಿಸಿಕೊಳ್ಳಬಹುದಾಗಿದೆ. ICR (Intelligent character recognition) ಮತ್ತು OCR (Optical characer recognizer ಗಳು ಇದಕ್ಕೆ ಸಹಾಯ ಮಾಡುತ್ತವೆ. ಹಸ್ತಪ್ರತಿಯೊಳಗಡೆ ನಮಗೆ ಬೇಕಾದಲ್ಲಿ ಪ್ಯಾರ ಮಾಡುವ ತೆರಪನ್ನು ಸೂಚಿಸುವ, ಅಕ್ಷರಗಳನ್ನು ಬೋಲ್ಡ್‌ ಮಾಡುವ ಬೇಕಾದ್ದನ್ನು ತೆಗೆದು ಹಾಕುವ ಬೇಕಾದ್ದನ್ನು ಸೇರಿಸುವ ಸಾಧ್ಯತೆಗಳು ಮೈಚಾಚಿದೆ[11].

... ಮೈಕ್ರೊಫೋನ್

ಇದರ ಮೂಲಕ ಹಸ್ತಪ್ರತಿಯಲ್ಲಿರುವ ಸಾಹಿತ್ಯವನ್ನು ಗಟ್ಟಿ ಧ್ವನಿಯಿಂದ ಓದುವುದರ ಮೂಲಕ ಅಕ್ಷರ ರೂಪಗಳನ್ನಾಗಿ ಪರಿವರ್ತಿಸಿಕೊಳ್ಳುತ್ತದೆ. ಇದು ಹಸ್ತಪ್ರತಿಗಳ ಮೂಲರೂಪವನ್ನು ಕಟ್ಟಿಕೊಡಲಾರವು. ಹೀಗೆ ಕಂಪ್ಯೂಟರಿನಲ್ಲಿ ಏನೆಲ್ಲಾ ಮ್ಯಾಜಿಕ್‌ ಮಾಡಿ ಹಸ್ತಪ್ರತಿಗಳಂಥ ಪ್ರಾಚೀನ ಗ್ರಂಥಭಂಡಾರವನ್ನೇ ತುಂಬಿಬಿಡುವಂಥ ಕೆಲಸ ಮಾಡುತ್ತದೆ. Pen drive, DVD, CD Ram ಗಳಲ್ಲಿ ಇವುಗಳನ್ನು ಶೇಖರಿಸಿಕೊಂಡು ಎಲ್ಲಿಬೇಕಾದರೂ ಸಾಗಿಸಬಹುದು. ಎಲ್ಲಿ ಬೇಕಾದರೂ ಬಳಸಬಹುದು.

ಆಧುನಿಕದ ವೈಜ್ಞಾನಿಕದ ತಂತ್ರಜ್ಞಾನ ಕಂಪ್ಯೂಟರ್ ಕ್ರಾಂತಿಯಿಂದ ಕನ್ನಡಕ್ಕೆ ಸ್ಪಷ್ಟತೆ ಚುರುಕುತನ, ವೇಗ, ತಾಂತ್ರಿಕತೆ ಪ್ರಾಪ್ತವಾಗಿದ್ದರೂ ಕನ್ನಡದ ಗುಣಾತ್ಮಕವಾದ ಅನೇಕತೆಯನ್ನೋ ಅದರ ಪಾರಂಪರಿಕ ಪ್ರಜ್ಞೆಯನ್ನು ಅದು ಹೊರಹೊಮ್ಮಿಸದು. ದೇಹ ಮತ್ತು ಮನಸ್ಸುಗಳ ಸಮ್ಮಿಲನದಿಂದಾಗುವ ಜ್ಞಾನದ ಅರ್ಥವನ್ನು ಈ ತಾಂತ್ರಿಕತೆಯು ಕಟ್ಟಿಕೊಡಲಾರದು’. ಆದರೆ ಹಸ್ತಪ್ರತಿಗಳನ್ನು ಸಂರಕ್ಷಿಸುವ ಪರಂಪರೆಯನ್ನು ಗಮನಿಸಬಹುದು. ಆರಂಭದಲ್ಲಿ ಭೂರ್ಜ್ವ ಪತ್ರ ನಂತರ ತಾಳೆಗರಿಗಳು ಕಾಗದಗಳ ಮೇಲೆ ಬರೆಯಲು ಪ್ರಾರಂಭಿಸಿದರು. ಬರವಣಿಗೆಯ ಮಾಧ್ಯಮದ ಬದಲಾವಣೆಯೂ ಆಯಾ ಕಾಲದ ಸಂರಕ್ಷಣೆ ಮತ್ತು ಅವುಗಳ ತಾಳಿಕೆಯ ದೃಷ್ಟಿಕೋನವನ್ನು ಅವಲಂಬಿರುತ್ತದೆ. ಯಾವ ಮಾಧ್ಯಮಗಳು ಸಹ ದೀರ್ಘಕಾಲ ತಾಳಿಕೆ ಬರಲಾರದೆಂಬುದು ಸ್ಪಷ್ಟ. ಕಾಲಾಂತರ ಕಾರಣಾಂತರಗಳಿಂದ ನಾಶವಾಗುವ ಸಾಧ್ಯತೆಯು ಈ ಬದಲಾವಣೆಯಿಂದ ಗೋಚರಿಸುತ್ತದೆ. ಇದೀಗ ಎಲೆಕ್ಟ್ರಾನಿಕ್‌ ಮಾದ್ಯಮವು ಈ ಕಾಲಕ್ಕೆ ಹಸ್ತಪ್ರತಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ ಮುಂದಿನ ತಲೆಮಾರಿನ ಹೊತ್ತಿಗೆ ಇದೂ ಕೂಡ ನಾಶವಾಗುವ ಸಂಭವವಿದೆ. ಡಾ.ಕೆ.ವಿ.ನರಾಯರವರು ಹೇಳುವಂತೆ “ಹಸ್ತಪ್ರತಿಯಲ್ಲಿದ್ದರೆ ಎಲ್ಲಾದರೂ ಒಂದು ಕಡೆ ಇರ್ತದೆ. ಆದರೆ ಕಂಪ್ಯೂಟರ್ ಮೆಮೋರಿಯಲ್ಲಿಟ್ಟಿದ್ದರೆ ಅದು ಎಲ್ಲಿ ಬೇಕಾದರೂ ಲಭ್ಯ ಆಗ್ತದೆ. ಆದರೆ ಯಾವ ಕ್ಷಣದಲ್ಲಾದರೂ ನಾಶ ಆಗಿಬಿಡ್ತದೆ. ಯಾಕೆಂದರೆ ಅದು ಭ್ರಮಾತ್ಮಕ ನೆನಪು ಇದ್ದ ಹಾಗೆ. ನನ್ನ ಮೆದುಳು ಇದ್ದ ಹಾಗೆ, ನನ್ನ ಮೆದುಳಿನಲ್ಲಿ ಅಪಾರವಾದ ಸಾಮಗ್ರಿಗಳು ಸಂಗ್ರಹವಾಗಿದ್ದರೂ ಕೂಡಾ ಯಾವ ಕ್ಷಣದಲ್ಲಾದರೂ ಮಾಯವಾಗಿ ಬಿಡಬಹುದು. ನಾನು ಸತ್ತ ತಕ್ಷಣ ಎಲ್ಲಾವು ಹೊರಟುಹೋಗ್ತದೆ. ಕಂಪ್ಯೂಟರ್ ಮೆಮೋರಿ ಕೂಡಾ ಈ ತರದ್ದೆ. ಸವಲತ್ತುಗಳು ಎಷ್ಟು ಇವೆಯೋ ಅಷ್ಟು ಅಪಾಯಗಳು ಇವೆ. ಈ ಶತಮಾನದಲ್ಲಿ ನಾವಿಂದು ಹಸ್ತಪ್ರತಿಗಳ ಕುರಿತು ಆಲೋಚನೆ ಮಾಡುವಾಗ ಈ ಎಲ್ಲ ಸಂಗತಿಗಳ ಹಿನ್ನಲೆಯಲ್ಲಿ ನಾವು ನಮ್ಮ ಚಿಂತನಾಕ್ರಮವನ್ನು ರೂಪಿಸಬೇಕಾಗಿದೆ” ಎಂಬುದು ಅಷ್ಟೇ ವಾಸ್ತವ ಸಂಗತಿಯಾಗಿದೆ.

... ಎಲೆಕ್ಟ್ರಾನಿಕ್ದಾಖಲೀಕರಣ

ಹಸ್ತಪ್ರತಿಗಳ ಭೌತಿಕ ಸ್ವರೂಪವನ್ನೊಳಗೊಂಡಂತೆ ಕವಿಯ ನಾಮ/ಉಪನಾಮ, ಕೃತಿನಾಮ/ಉಪನಾಮ, ಕಾಲ, ಬರವಣಿಗೆಯ ಕಾಲ ಬರವಣಿಗೆಯ ವಿಷಯ (ಉದಾ: ಶಾಸ್ತ್ರ, ವೈದ್ಯ, ರಟ್ಟಮತ, ವೀರಶೈವ, ಜೈನ ಇತ್ಯಾದಿ) ಸಮಗ್ರ, ಅಸಮಗ್ರ, ಕಟ್ಟುಗಳ ಅನುಕ್ರಮ ಸಂಖ್ಯೆ, ಆ ಕಟ್ಟಿನಲ್ಲಿರುವ ಕೃತಿಗಳ ಸಂಖ್ಯೆ, ಪುಟ ಗರಿಗಳ ಸಂಖ್ಯೆ, ಗರಿಗಳು ತೃಟಿತವೋ/ಉತ್ತಮವೋ, ಒಟ್ಟು ಹಸ್ತಪ್ರತಿ ಮತ್ತು ಲಿಪಿಗಳ ಶುದ್ಧತೆಯನ್ನು ನಮೂದಿಸಲಾಗಿರುವ ನಮೂನೆಯಲ್ಲಿ ಹಸ್ತಪ್ರತಿ ಕ್ಷೇತ್ರ ಸಂದರ್ಭದಲ್ಲಿ ದಾಖಲಿಸಿದ ಮಾಹಿತಿಯನ್ನು ಇದರ ಮೂಲಕ ಕಂಪ್ಯೂಟರಿಗೆ ದಾಖಲಿಸುವುದು, ಎಲ್ಲಾ ಸಂಘ ಸಂಸ್ಥೆಗಳಲ್ಲಿ ಹಾಗೂ ವೈಯಕ್ತಿಕ ಒಡೆತನದಲ್ಲಿರುವ ಎಲ್ಲಾ ಹಸ್ತಪ್ರತಿಗಳನ್ನು ದಾಖಲಿಸುವುದು ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದ ನ್ಯಾಷನಲ್‌ ಮಿಷನ್‌ ಫಾರ್ ಮ್ಯಾನುಸ್ಕ್ರಿಪ್ಟ್ಸ್‌ ಸಂಸ್ಥೆಯು ಇಡೀ ದೇಶದಲ್ಲಿರುವ ಹಸ್ತಪ್ರತಿಗಳನ್ನು ಒಂದೆಡೆಗೆ ಕಲೆ ಹಾಕಿ ಸಂರಕ್ಷಿಸುವ ಉದ್ದೇಶ ಹೊಂದಿದೆ. ಈ ಸಂಸ್ಥೆಯ ಅನುದಾನದಡಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ಕರ್ನಾಟಕದ ೧೧ ಜಿಲ್ಲೆಗಳಲ್ಲಿ ಮನೆಯಿಂದ ಮನೆಗೆ ಎಂಬಂತೆ ಕ್ಷೇತ್ರಕಾರ್ಯ ಮಾಡಿ ಮಾಹಿತಿ ಸಂಗ್ರಹಿಸಿದೆ ಮತ್ತು ಹಸ್ತಪ್ರತಿಗಳನ್ನು ಸಂಗ್ರಹ ಮಾಡುತ್ತಿದೆ. ಇದೂವರೆಗೂ ಸುಮಾರು ಒಂದು ಲಕ್ಷದ ಅರವತ್ತು ಸಾವಿರ ಕೃತಿಗಳನ್ನು ಗುರ್ತಿಸಿ ದಾಖಲಿಸಿದ ಎಂಬುದು ಹೆಮ್ಮೆಯ ಸಂಗತಿ. ಇನ್ನೂ ಈ ಕಾರ್ಯ ಯಶಸ್ಸುಗೊಂಡು ಪ್ರಗತಿಯಲ್ಲಿದೆ. ಈ ಸ್ವರೂಪವು ಸಂಕ್ಷಿಪ್ತ ಸೂಚೀಕರಣದ ಮಾದರಿಯಲ್ಲಿದೆ. ಇದರಿಂದ ಹಸ್ತಪ್ರತಿಯಲ್ಲಿಯ ಸಂಪೂರ್ಣ ಪಠ್ಯ ಲಭ್ಯವಾಗುವುದಿಲ್ಲ. ಅಧ್ಯಯನಾಸಕ್ತರು ತಮಗೆ ಬೇಕಾದ ಹಸ್ತಪ್ರತಿಗಳನ್ನು ಇದರಿಂದ ವಿಳಾಸ ಪಡೆದು ಬೇಗನೆ ಹುಡುಕಿಕೊಂಡು ಅಧ್ಯಯನ ಮಾಡಬಹುದಾಗಿದೆ. ಇಂಥ ವ್ಯವಸ್ಥೆ ಜಗತ್ತಿನಲ್ಲಿ ತಮ್ಮದೇ ವೆಬ್‌ಗಳ ಮೂಲಕ ಪ್ರಸಾರ ಮಾಡುತ್ತಿವೆ. ಮತ್ತು ಸಂರಕ್ಷಿಸುತ್ತಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ international federation of library Association ಅಂತ ಮಾಡಿದ್ದಾರೆ. ಇದರ ಮುಖ್ಯ ಗುರಿ ನಮ್ಮ ವಿಶ್ವದಾದ್ಯಂತ ಈ ಪುಸ್ತಕ ಸಂಸ್ಕೃತಿ ಏನಿದೆಯಲ್ಲಾ ಅದನ್ನು ಒಂದು ಚೌಕಟ್ಟಿನಲ್ಲಿ ತರಬೇಕು. ೧೯೨೭ರಲ್ಲಿ ಥೈಲ್ಯಾಂಡಿನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದರಲ್ಲಿ ೪೪ ವಿಭಾಗಗಳನ್ನು ಮಾಡಿದ್ದಾರೆ. ಈ ವಿಭಾಗಗಳಲ್ಲಿ Rare Books and manuscript ಅಂತ ಮಾಡಿ, ಹಸ್ತಪ್ರತಿಗಳನ್ನು ಇದರ ಮುಖಾಂತರ ಮುಖ್ಯವಾಹಿನಿಗೆ ತರುವ ಆಲೋಚನೆಯಲ್ಲಿದೆ[12]. ಹೀಗೆ ದಾಖಲಾದವುಗಳನ್ನು ಅಂತರ್ಜಾಲದ ಮೂಲಕ ಪ್ರಸರಣ ಮಾಡಬಹುದು.

ನಕಲು ಕಾರ್ಯ

ನಕಲು ಕಾರ್ಯವೆನ್ನುವುದು ಮೂಲ ಪ್ರತಿಯನ್ನು ನೋಡಿ ಯಥಾವತ್ತಾಗಿ ಬರೆದಿಡುವುದು. ಬರೆದಿದ್ದನ್ನು Book Bonding ಮಾಡಿ ಕೋಶಾಗಾರದಲ್ಲಿ ಇಡುವುದು. ಆಸಕ್ತರಿಗೆ ಅಧ್ಯಯನಕ್ಕಾಗಿ ನಕಲು ಪ್ರತಿಯನ್ನೇ ಅವರಿಗೆ ಒದಗಿಸುವುದು ಸೂಕ್ತ. ಇದರಿಂದ ಮೂಲ ಪ್ರತಿ ಸುರಕ್ಷಿತವಾಗಿಡಲು ಸಾಧ್ಯವಾಗುತ್ತದೆ. ಈ ಕಾರ್ಯವನ್ನು ಒಂದು ಕೃತಿಯ ಏಕೈಕ ಮೂಲ ಪ್ರತಿಗಳಿದ್ದಾಗ ಮಾಡಬಹುದು. ಹಲವು ಪ್ರತಿಗಳು ಲಭ್ಯವಿದ್ದಾಗ ಇದರ ಅವಶ್ಯಕತೆ ಇರಲಾರದು. ನಕಲು ಕಾರ್ಯ ಅಷ್ಟು ಸರಳವಲ್ಲ. ಏಕೆಂದರೆ ಹಸ್ತಪ್ರತಿಗಳನ್ನು, ಅದರಲ್ಲಿರುವ ಹಳೆಗನ್ನಡದ ಪಠ್ಯವನ್ನು, ಲಿಪಿಗಳನ್ನು ಗುರುತಿಸುವಂಥ ಪ್ರೌಡಿಮೆಯನ್ನು ಪಡೆದಿರಬೇಕು. ಇಲ್ಲವೆಂದರೆ ಗ್ರಂಥ ಸಂಪಾದನ ಸಂದರ್ಭದಲ್ಲಿ ಅಡಚಣೆ ಉಂಟಾಗುತ್ತದೆ. ಈ ಕಾರ್ಯದಲ್ಲಿ ಶ್ರಮ ಮತ್ತು ಸಂಯಮ ಅತ್ಯವಶ್ಯಕ. ಜೊತೆಗೆ ಹೆಚ್ಚು ಸಮಯ ಬೇಕಾಗುತ್ತದೆ.

ಸೂಚೀಕರಣ

ಒಂದು ಹಸ್ತಪ್ರತಿಗಳ ವಿವರಗಳನ್ನು ತಿಳಿಸಿಕೊಡುವುದಾಗಿದೆ. ಸಂಗ್ರಹಿಸಿರುವ ಸದ್ಯ ಲಭ್ಯವಿರುವ ಹಸ್ತಪ್ರತಿಗಳ ವಿವರಗಳನ್ನು ತಿಳಿಸುವುದಾಗಿದೆ. ಇದರಲ್ಲಿ ‘ವಿವರಣಾತ್ಮಕ ಸೂಚಿ’ ಸಮಗ್ರ ಸೂಚಿ’ ಎಂದೂ ಮಾಡಲಾಗುತ್ತಿದೆ. ಇನ್ನೊಂದು ಬರೀ ಸೂಚೀ ಎಂದು ಮಾಡಲಾಗುತ್ತಿದೆ. ಈ ಸೂಚಿಯು ಹಸ್ತಪ್ರತಿಗಳು ಲಭ್ಯವಿರುವ ಸ್ಥಳಗಳನ್ನು ಕೃತಿಗಳನ್ನು ಸುಲಭವಾಗಿ ಹುಡುಕುವುದಾಗಿದೆ. ಹಾಗಾಗಿ ಈ ಕಾರ್ಯದಲ್ಲಿ ಕೃತಿ ಕವಿ ನಾಮ, ಕಾಲ, ಹಸ್ತಪ್ರತಿ ನಂಬರು ಇಷ್ಟು ಮಾತ್ರ ಇರುತ್ತದೆ. ಇದನ್ನು ತಯಾರಿಸುವ ಶೀರ್ಷಿಕೆಯನ್ನು ಆಕಾರಾದಿಯಾಗಿ ಹೊಂದಿಸಬಹುದು. ಇಲ್ಲವೇ ಕವಿನಾಮವನ್ನು ಆಕಾರಾದಿಯಾಗಿ ಹೊಂದಿಸಬಹುದು. ಇದು ತೀರ ಸಾಮಾನ್ಯ ಸೂಚಿಯಾಗಿದ್ದು ಕನ್ನಡದಲ್ಲಿ ಬಂದಿರುವ ಸೂಚಿಗಳಲ್ಲಿ ವಿವರಣಾತ್ಮಕ ಸೂಚಿಗಳೇ ಹೆಚ್ಚು. ವಿವರಣಾತ್ಮಕ ಸೂಚಿ ಹಸ್ತಪ್ರತಿಯೊಂದರ ಸಮಗ್ರ ವಿವರವನ್ನು ನೀಡುವ ಕೈಪಿಡಿ ಇದ್ದಂತೆ. ಏಕೆಂದರೆ ಹಸ್ತಪ್ರತಿಯೊಂದರ ಪಠ್ಯವನ್ನು ಆದಿ ಮತ್ತು ಅಂತ್ಯಗಳ ರೂಪದಲ್ಲಿ ಬರೆಯಲಾಗುತ್ತದೆ. ಇನ್ನಿತರ ಸೂಚಿಗಳಲ್ಲಿ ಪಠ್ಯದ ಮಾಹಿತಿ ಇರುವುದಿಲ್ಲ. ವಿವರಣಾತ್ಮಕ ಸೂಚಿಯಲ್ಲಿ ಎರಡು ಭಾಗಗಳನ್ನಾಗಿ ಮಾಡಲಾಗಿದೆ. ಒಂದು ಕೃತಿಪರಿಚಯ, ಇನ್ನೊಂದು ಪ್ರತಿಪರಿಚಯ. ಕೃತಿ ಪರಿಚಯದಲ್ಲಿ ಕೃತಿಯ ಹೆಸರು, ಕೃತಿಯ ಕ್ರಮಸಂಖ್ಯೆ, ಕವಿಯ ಹೆಸರು ಮತ್ತು ಕಾಲ, ಕೃತಿ ಪ್ರಕಾರ, ಕೃತಿಯ ವಸ್ತುವಿಷಯವನ್ನು ಒಳಗೊಂಡಿರುತ್ತದೆ.

“ಪ್ರತಿಪರಿಚಯ ಭಾಗದಲ್ಲಿ ಕೃತಿ ಅಥವಾ ಕಟ್ಟಿನ ಬರವಣಿಗೆ ಮಾಧ್ಯಮವನ್ನು ಹೆಸರಿಸಲಾಗಿದೆ. (ತಾಳೆಪ್ರತಿ, ಕಾಗದ ಪ್ರತಿ) ಅಲ್ಲದೇ ಕಟ್ಟಿನ ಕ್ರಮಸಂಖ್ಯೆಯನ್ನು ಇಲ್ಲಿಯೇ ನಮೂದಿಸಲಾಗಿದೆ. ನಂತರ ಹಸ್ತಪ್ರತಿಗಳ ಸ್ವರೂಪ ಲಿಪಿಗಳ ಸ್ವರೂಪ, ಭಾಷಾಸ್ವರೂಪ, ಪ್ರತಿಯಲ್ಲಿನ ಪಠ್ಯದ (ಆರಂಭ) ಆದಿಯೆಂದು ಕೊನೆಯಲ್ಲಿ ಅಂತ್ಯವೆಂದು ಸ್ಥೂಲವಾಗಿ ವಿಂಗಡಿಸಿಕೊಳ್ಳಲಾಗಿದೆ. ಅಲ್ಲದೇ ವಿಶೇಷ ಎನ್ನುವ ಭಾಗದಲ್ಲಿ ಹಸ್ತಪ್ರತಿಯ ಸಮಗ್ರತೆ, ಗುಣಲಕ್ಷಣ ಚಿತ್ರಗಳ ಬಳಕೆಗಳಂತ ವಿಶೇಷ ನಮೂದುಗಳಿದ್ದರೆ ಅವನ್ನು ಕೊಡಲಾಗಿದೆ. ಕಟ್ಟಿನಲ್ಲಿರುವ ಕೃತಿಗಳು ಎಂಬ ಭಾಗವನ್ನೂ ಕೊಡಲಾಗಿದೆ ಅಂದರೆ ಒಂದೇ ಕಟ್ಟಿನಲ್ಲಿ ಹಲವು ಕೃತಿಗಳಿದ್ದರೆ ಪ್ರಥಮ ಕೃತಿಯ ಕೆಳಭಾಗದಲ್ಲಿ ಅದರೊಳಗಿರುವ ಎಲ್ಲಾ ಕೃತಿಗಳ ಹೆಸರನ್ನು ಸೂಚಿ ಸಂಖ್ಯೆ ಸಮೇತ ಕೊಡಲಾಗಿದೆ.

ಇನ್ನೂ ಸಂಪುಟದ ಕೊನೆಯ ಭಾಗದ ಅನುಬಂಧದಲ್ಲಿ ಕವಿ, ಸ್ಥಳನಾಮ, ಲಿಪಿಕಾರರು, ಬರೆಸಿದವರು, ಹಸ್ತಪ್ರತಿ ನೀಡಿದ ದಾನಿಗಳ ಕುರಿತು ಆಯಾ ಸೂಚಿಗಳ ಕ್ರಮ ಸಂಖ್ಯೆಗಳ ಸಮೇತ ವಿವರಗಳನ್ನು ಕೊಡಲಾಗಿರುತ್ತದೆ”[13] ಇದು ವಿವರಣಾತ್ಮಕ ಸೂಚಿಯ ಮಾದರಿ “ಹಸ್ತಪ್ರತಿ ಸೂಚಿಗಳು ಅಂಗೈಯಲ್ಲಿ ಅರಮನೆ ತೋರಿಸುವ ಸಂಕ್ಷಿಪ್ತ ಸೂಚಿಗಳು. ವ್ಯವಸ್ಥಿತ ನಿರ್ಮಿತಿಯಿಂದಾಗಿ ಸೂಚಿ ಸಾಹಿತ್ಯಕ್ಕೆ ಇಂದು ವಿಜ್ಞಾನದ ಮರ್ಯಾದೆ ಪ್ರಾಪ್ತವಾಗಿದೆ ಎಂಬ ಮಾತು ವಿವರಣಾತ್ಮಕ ಸೂಚಿಯ ಮಹತ್ವವನ್ನು ಹೇಳುತ್ತದೆ.”[14]

ಹಸ್ತಪ್ರತಿ ವಿವಿಧ ಮಾದರಿಯ ಸೂಚಿ ಸಂಪುಟಗಳನ್ನು ಹೊರತರುತ್ತಿದ್ದರೂ, ಇವರ ಉದ್ದೇಶ ಹಸ್ತಪ್ರತಿಗಳ ಸಂರಕ್ಷಣೆಯನ್ನು ಮಾಡುವುದಾಗಿದೆ. ವಿಶ್ವವಿದ್ಯಾಲಯಗಳು, ಸಂಘ ಸಂಸ್ಥೆಗಳು ಮಠಗಳು ಈ ಕಾರ್ಯದಲ್ಲಿ ನಿರತವಾಗಿರುವುದು ಸಂತೋಷದ ಸಂಗತಿ. ಅಲ್ಲದೆ ವಿವಿಧ ಧರ್ಮಗಳ ಹಿನ್ನಲೆಯಲ್ಲಿಯೂ ಸೂಚಿ ಸಂಪುಟಗಳನ್ನು ಹೊರತರುತ್ತಿದ್ದಾರೆ. ಉದಾಹರಣೆಗೆ ಜಿನರತ್ನಕೋಶ, ವೀರಶೈವ ಹಸ್ತಪ್ರತಿಗಳ ಸೂಚಿ ಇತ್ಯಾದಿ ಸೂಚಿಗಳು ಧಾರ್ಮಿಕ ಹಿನ್ನಲೆಯಾಗಿ ಮಾಡಲಾಗಿದೆ. ಮೈಕ್ರೊಫಿಲಂ ಸೂಚಿ ಸಂಪುಟವೆಂತಲೂ ಮಾಡಲಾಗಿದೆ. ಸಾಮಾನ್ಯವಾಗಿ ಹಸ್ತಪ್ರತಿಗಳು ಸಂಗ್ರಹಿಸಿಕೊಂಡವರ ಹೆಸರಿನ ಹಿನ್ನಲೆಯಲ್ಲಿ ಸೂಚಿ ಸಂಪುಟಗಳನ್ನು ಪ್ರಕಟಪಡಿಸುತ್ತಿವೆ. ಉದಾ: ಕನ್ನಡ ವಿಶ್ವವಿದ್ಯಾಲಯದ ಸಮಗ್ರ ಹಸ್ತಪ್ರತಿ ಸೂಚಿ ಸಂಪುಟ, ಧಾರವಾಡದ ಕನ್ನಡ ಅಧ್ಯಯನ ಪೀಠ ವರ್ಣನಾತ್ಮಕ ಸೂಚಿ ಸಂಪುಟಗಳು ಇತ್ಯಾದಿ.

ಹೀಗೆ ಪ್ರಾಚೀನ ಕಾಲದಿಂದಲೂ ಹಸ್ತಪ್ರತಿಗಳನ್ನು ದ್ರವ್ಯಗಳಂತೆ ಸಂರಕ್ಷಿಸಿಕೊಂಡು ಬಂದಿರುವುದನ್ನು ಅನೇಕ ಚರ್ಚೆಗಳ ಮೂಲಕ ಗ್ರಹಿಸಬಹುದು. ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಹಸ್ತಪ್ರತಿ ಹೋಗುತ್ತಿದ್ದಂತೆ ಅಲ್ಲಿ ಮತ್ತೊಂದು ಹಸ್ತಪ್ರತಿ ಸೃಷ್ಟಿಯಾಗುತ್ತಿತ್ತು. ಇದೇ ತೆರವಾಗಿ ಒಂದು ಕೃತಿ ಹಲವಾರು ಕೃತಿಗಳಾಗಿ ಮಾರ್ಪಟ್ಟು ಸಂರಕ್ಷಣೆಗೊಂಡಿವೆ. ಇಂದಿನ ಕಾಲಮಾನದಲ್ಲಿ ಪ್ರಾಚೀನ ಹಸ್ತಪ್ರತಿಗಳನ್ನು ಊರು ಊರುಗಳಿಗೆ ತೆರಳಿ ಕಾಡಿಬೇಡಿ ಸಂಗ್ರಹಿಸಿ ಸಂರಕ್ಷಿಸುವ ಪರಿಸ್ಥಿತಿ ಉಂಟಾಗಿದೆ. ಸಂಗ್ರಹಿಸಿದ ಹಸ್ತಪ್ರತಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ನಾಡಿನ ಹಸ್ತಪ್ರತಿ ತಜ್ಞರು ಹತ್ತು ಹಲವು ವಿಧಾನಗಳನ್ನು ಪ್ರಯೋಗಿಸುತ್ತಿದ್ದಾರೆ ಮತ್ತು ಪ್ರಯತ್ನದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗವು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಈ ಕಾರಣಕ್ಕಾಗಿಯೇ ದೆಹಲಿಯ ನ್ಯಾಷನಲ್‌ ಮಿಷನ್‌ ಫಾರ್ ಮ್ಯಾನ್ಯುಸ್ಕ್ರಿಪ್ಟ್ಸ್‌ ಸಂಸ್ಥೆಯು ವಿಶ್ವವಿದ್ಯಾಲಯದ ಹಸ್ತಪ್ರತಿ ಸಂಪನ್ಮೂಲ ಕೇಂದ್ರವನ್ನು ಹಸ್ತಪ್ರತಿ ಸಂರಕ್ಷಣಾ ಕೇಂದ್ರವಾಗಿ ಘೋಷಿಸಿ ಹೆಚ್ಚಿನ ಅನುದಾನವನ್ನು ನೀಡಲು ಮುಂದಾಗಿರುವುದು ಹೆಮ್ಮೆಯ ಸಂಗತಿ ಎಂಬುದು ನನ್ನ ಭಾವನೆ. ಒಟ್ಟಿನಲ್ಲಿ ಹೇಳುವುದಾದರೆ ಹಸ್ತಪ್ರತಿ ಸಂರಕ್ಷಣೆಯಲ್ಲಿ ಸದೃಢ ದೇಹ ಸದೃಢ ಮನಸ್ಸಿರಬೇಕು ಮತ್ತು ತಾಳ್ಮೆ ಇರಬೇಕಾಗುತ್ತದೆ. ಈ ಗುಣಗಳಿದ್ದಾಗ ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುವ ವಿವಿಧ ವಿಧಾನಗಳು ಆಲೋಚನೆಗೆ ಬಂದು ಕ್ರಿಯಶೀಲರಾಗಬಹುದು.

[1] ಡಾ. ನಾ. ಗೀತಾಚಾರ್ಯ, ಹಸ್ತಪ್ರತಿ ವಿವೇಚನೆ, ಪುಟ.೩೩

[2] ಡಾ. ಬಿ.ಕೆ. ಹಿರೇಮಠ, ಕನ್ನಡ ಹಸ್ತಪ್ರತಿಗಳು: ಒಂದು ಅಧ್ಯಯನ, ಪುಟ.೭೯

[3] ಡಾ. ಬಿ.ಕೆ. ಹಿರೇಮಠ, ಕನ್ನಡ ಹಸ್ತಪ್ರತಿಗಳು: ಒಂದು ಅಧ್ಯಯನ, ಪುಟ.೬೮

[4] ಡಾ. ಎಂ.ಎಂ. ಕಲಬುರ್ಗಿ, ಕನ್ನಡ ಹಸ್ತಪ್ರತಿ ಶಾಸ್ತ್ರ, ಪುಟ.೨೧

[5] ಡಾ. ಬಿ.ಕೆ. ಹಿರೇಮಠ, ಕನ್ನಡ ಹಸ್ತಪ್ರತಿಗಳು: ಒಂದು ಅಧ್ಯಯನ, ಪುಟ.೭೯

[6] ಅದೇ ಪು.

[7] ಅದೇ ಪು.

[8] ಅದೇ ಪು.

[9] ಹಸ್ತಪ್ರತಿ ಸೂಚಿ ಸಂಪುಟ-೪, ಕನ್ನಡ ವಿಶ್ವವಿದ್ಯಾಲಯ, ಹಂಪಿ,. ಪುಟ-೨೦೪

[10] ಡಾ. ವೀರೇಶ ಬಡಿಗೇರ,ಕನ್ನಡ ಹಸ್ತಪ್ರತಿಗಳು ಮತ್ತು ಸಾಫ್ಟ್‌ವೇರ್ ತಂತ್ರಜ್ಞಾನ, ಪು.೫೫

[11] ಅದೇ ಪುಟ-೧೫೬

[12] ಹಸ್ತಪ್ರತಿ ವ್ಯಾಸಂಗ-೪, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ., ಪುಟ.೧೫೫

[13] ಮುನ್ನುಡಿ, ಹಸ್ತಪ್ರತಿ ಸೂಚಿ ಸಂಪುಟ-೪, ಕನ್ನಡ ವಿಶ್ವವಿದ್ಯಾಲಯ, ಹಂಪಿ.,

[14] ಉದೃತ: ಡಾ. ನಾ. ಗೀತಾಚಾರ್ಯ, ಹಸ್ತಪ್ರತಿ ವಿವೇಚನೆ, ಪುಟ.೨೪