ಹಾಗಲಕಾಯಿ ರುಚಿ ಕಹಿಯಾದರೂ ಆರೋಗ್ಯಕ್ಕೆ ಒಳ್ಳೆಯದು. ವಿಶೇಷ ಔಷಧೀಯ ಗುಣಗಳನ್ನು ಹೊಂದಿದೆ.

ಪೌಷ್ಟಿಕ ಗುಣಗಳು: ಹಾಗಲಕಾಯಿ ಪೌಷ್ಟಿಕ ತರಕಾರಿ. ಕಾಯಿಗಳಲ್ಲಿ ಗಣನೀಯ ಪ್ರಮಾಣದ ಶರ್ಕರ ಪಿಷ್ಟ, ಪ್ರೊಟೀನ್, ಜೀವಸತ್ವಗಳು ಹಾಗೂ ಖನಿಜ ಪದಾರ್ಥಗಳಿರುತ್ತವೆ.

೧೦೦ ಗ್ರಾಂ ಹಾಗಲಕಾಯಿಯಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ ೯೨.೪ ಗ್ರಾಂ
ಥಯಮಿನ್ ೦.೦೭ ಮಿ.ಗ್ರಾಂ
ಕ್ಯಾಲ್ಸಿಯಂ ೨೦ ಮಿ.ಗ್ರಾಂ
ಪ್ರೊಟೀನ್ ೧.೬ ಗ್ರಾಂ
ಕೊಬ್ಬು ೦.೨ ಗ್ರಾಂ
ಒಟ್ಟು ಖನಿಜ ಪದಾರ್ಥ ೦.೮ ಗ್ರಾಂ
ರಂಜಕ – ೭೦ ಮಿ.ಗ್ರಾಂ
ಶರ್ಕರಪಿಷ್ಟ – ೪.೨ ಗ್ರಾಂ
’ಸಿ’ ಜೀವಸತ್ವ ೮೮ ಮಿ.ಗ್ರಾಂ
ಕಬ್ಬಿಣ – ೧.೮ ಮಿ.ಗ್ರಾಂ  
ಪೊಟ್ಯಾಷ್ – ೧೫೨ ಮಿ.ಗ್ರಾಂ
ರೈಬೊಫ್ಲೇವಿನ – ೦.೦೯ ಮಿ.ಗ್ರಾಂ

ಔಷಧೀಯ ಗುಣಗಳು : ಹಾಗಲ ಕಾಯಿಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ. ಆಯುರ್ವೇದ ವೈದ್ಯದಲ್ಲಿ ಹಲವಾರು ಕಾಯಿಲೆಗಳಿಗೆ ಇದನ್ನು ನಿರ್ದೇಶಿಸುವುದುಂಟು. ಸಕ್ಕರೆ ಕಾಯಿಲೆಯಿಂದ ನರಳುತ್ತಿರುವವರು ಇದನ್ನು ಹೆಚ್ಚಾಗಿ ಬಳಸಬೇಕು. ಇದರ ಬಳಕೆಯಿಂದ ರೋಗ ನಿರೋಧಕ ಸಾಮರ್ಥ್ಯ ಉಂಟಾಗುತ್ತದೆ. ಹಾಗಲಕಾಯಿಗಳ ರಸ ಮತ್ತು ನಿಂಬೆ ಹಣ್ಣಿನ ರಸಗಳನ್ನು ಬೆರೆಸಿ ಸೇವಿಸಿದರೆ ರಕ್ತ ಶುದ್ಧಗೊಳ್ಳುವುದು. ಇದು ಚರ್ಮದ ಕಾಯಿಲೆಗಳಿಗೂ ಒಳ್ಳೆಯದು. ಇದರಲ್ಲಿ ಜಂತುನಾಶಕ ಗುಣಗಳಿವೆ. ಇದು ಪೂತಿ ನಾಶಕವೂ ಹೌದು, ಜವರ ಪೀಡಿತರಿಗೆ ಇದನ್ನು ಸೇವಿಸಲು ಕೊಟ್ಟರೆ ನಾಲಿಗೆಯ ರುಚಿ ಸುಧಾರಿಸುತ್ತದೆ. ಇದು ಜೀರ್ಣಕಾರಕ; ಮಲಬದ್ಧತೆಗೆ ಒಳ್ಳೆಯದು. ಮೂಲವ್ಯಾಧಿಯಿಂದ ನರಳುತ್ತಿರುವವರು ಇದನ್ನು ಹೆಚ್ಚಾಗಿ ಸೇವಿಸಬೇಕು. ಇದರ ರಸವನ್ನು ಮೊಡವೆಗಳಿಗೆ ಹಚ್ಚಿದರೆ ಉಪಶಮನ ಸಿಗುತ್ತದೆ.

ಉಗಮ ಮತ್ತು ಹಂಚಿಕೆ : ಇದರ ಉಗಮಸ್ಥಳ ಹಳೆಜಗತ್ತಿನ ಉಷ್ಣಪ್ರದೇಶಗಳು. ಜಗತ್ತಿನ ಎಲ್ಲಾ ಕಡೆ ಇದರ ಬೇಸಾಯ ಮತ್ತು ಬಳಕೆಗಳು ಇವೆ. ಭಾರತದಲ್ಲಿ ಇದಕ್ಕೆ ಹೆಚ್ಚಿನ ಆದ್ಯತೆ ಇದೆ.

ಸಸ್ಯ ವರ್ಣನೆ : ಹಾಗಲ ಕುಕುರ್ಬಿಟೇಸೀ ಕುಟುಂಬಕ್ಕೆ ಸೇರಿದ ವಾರ್ಷಿಕ ಬಳ್ಳಿ. ಬಳ್ಳಿಗಳು ಕೃಶವಾಗಿದ್ದು ನುಲಿಬಳ್ಳಿಗಳ ನೆರವಿನಿಂದ ಮೇಲಕ್ಕೆ ಹಬ್ಬಿ ಬೆಳೆಯುತ್ತವೆ. ಎಲೆ ಮತ್ತು ಕಾಯಿಗಳ ಬಣ್ಣ ಹಸುರು. ಎಲೆಗಳು ಹಸ್ತದ ಆಕಾರವಿದ್ದು ಬಹಳಷ್ಟು ಸೀಳಿರುತ್ತವೆ. ಅಂಚುಕಟ್ಟುಗಳಿಂದ ಕೂಡಿರುತ್ತದೆ. ಸಣಕಲಾದ ತೊಟ್ಟಿನ ತುದಿಯಲ್ಲಿ ಎಲೆ ಹರಡಿರುತ್ತದೆ. ನರಗಳು ಸ್ಫುಟ. ಹೂವು ಏಕಲಿಂಗಿಗಳು. ಪುಷ್ಪ ದಳಗಳ ಬಣ್ಣ ಹಳದಿ. ಹೂವು ಗಾತ್ರದಲ್ಲಿ ಸಣ್ಣವು. ಕಾಯಿಗಳು ಉದ್ದನಾಗಿ, ಚೂಪು ಅಥವಾ ಮೊಂಡು ತುದಿಯಿಂದ ಕೂಡಿದ್ದು ದುಂಡಗಿರುತ್ತವೆ. ಎಳೆಯವಿದ್ದಾಗ ಹಸುರು ಅಥವಾ ಬಿಳಿ ಹಸುರು ಬಣ್ಣದ್ದಿರುತ್ತವೆ. ಕಾಯಿಗಳ ಮೇಲೆ ಮೊಡವೆಗಳಂತಹ ಕೂಳೆ ಉಬ್ಬುಗಳಿರುತ್ತವೆ. ಕಾಯಿ ಬಲಿತು ಪಕ್ವಗೊಂಡಂತೆಲ್ಲಾ ಹಳದಿ ಬಣ್ಣಕ್ಕೆ ಮಾರ್ಪಟ್ಟು ಮೆತ್ತಗಾಗುತ್ತವೆ. ತಿರುಳು ಹಳದಿ; ಬೀಜಗಳ ಮೇಲಿನ ಲೋಳೆ ಕೆಂಪು ಬಣ್ಣದ್ದಿರುತ್ತದೆ. ಬೀಜ ಬಲುಗಟ್ಟಿ. ಸಿಪ್ಪೆ ಕಂದು ಹಳದಿ ಬಣ್ಣವಿದ್ದು ಹಲ್ಲುಗಳಂತಹ ಕಚ್ಚುಗಳನ್ನು ಹೊಂದಿರುತ್ತವೆ. ಸಸ್ಯಭಾಗಗಳು, ಹಣ್ಣು, ತಿರುಳು ಹಾಗೂ ಬೀಜಗಳಲ್ಲಿ ಕಹಿವಾಸನೆ ಎದ್ದು ಕಾಣುತ್ತದೆ. ಬೀಜಗಳಲ್ಲಿ ಕೊಬ್ಬಿನ ಅಂಶ ಇರುತ್ತದೆ. ಬೀಜ ಹೆಚ್ಚು ಸಂಖ್ಯೆಯಲ್ಲಿದ್ದು ತಿರುಳಿನಲ್ಲಿ ಲೋಳೆಯೊಂದಿಗೆ ಹುದುಗಿರುತ್ತವೆ.

ಹವಾಗುಣ : ಈ ಬೆಳೆಯ ಬೇಸಾಯಕ್ಕೆ ಬೆಚ್ಚಗಿನ ಹವಾಗುಣ ಸೂಕ್ತ. ಅಧಿಕ ಬಿಸಿಲು ಹಾಗೂ ದೀರ್ಘ ಅವಧಿಯ ಬೆಳಕುಗಳಿದ್ದರೆ ಅಧಿಕ ಸಂಖ್ಯೆಯಲ್ಲಿ ಗಂಡುಹೂವು ಬಿಡುತ್ತವೆ. ಸುಡು ಬಿಸಿಲು ಹಾಗೂ ತೀರಾ ಚಳಿ ಇದಕ್ಕೆ ಒಪ್ಪುವುದಿಲ್ಲ. ಮುಂಗಾರಿನ ಬೆಳೆಗೆ ಜೂನ್-ಜುಲೈ ಮತ್ತು ಬೇಸಿಗೆ ಬೆಳೆಗೆ ಜನವರಿ-ಫೆಬ್ರುವರಿ ಸರಿಯಾದ ಕಾಲ.

ಭೂಗುಣ : ಹಾಗಲ ಕಾಯಿ ಬೆಳೆಯ ಬೇಸಾಯಕ್ಕೆ ಯಾವ ಮಣ್ಣಿನ ಭೂಮಿಯಾದರೂ ಸರಿಯೇ. ಮರಳು ಮಿಶ್ರಿತ ಗೋಡು ಮಣ್ಣು ಮತ್ತು ರೇವೆಗೋಡು ಮಣ್ಣು ಹೆಚ್ಚು ಸೂಕ್ತವಿರುತ್ತವೆ. ಹುಳಿಯಿಂದ ಕೂಡಿದ ಅಥವಾ ಕ್ಷಾರಯುತವಿರುವ ಮಣ್ಣು ಯೋಗ್ಯವಿರುವುದಿಲ್ಲ. ನೀರು ಬಸಿಯುವುದು ಬಹಳ ಮುಖ್ಯ. ಜೌಗುಪೀಡಿತ ಹಾಗೂ ತಗ್ಗು ಪ್ರದೇಶಗಳು ಸೂಕ್ತವಿರುವುದಿಲ್ಲ.

ತಳಿಗಳು : ಈ ಬೆಳೆಯಲ್ಲಿ ತಳಿ ಅಭಿವೃದ್ದಿ ಕಾರ್ಯ ಸ್ವಲ್ಪಮಟ್ಟಿಗೆ ನಡೆದಿದೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯಗಳು ಈ ದಿಶೆಯಲ್ಲಿ ಪ್ರಗತಿ ಸಾಧಿಸಿ ಒಳ್ಳೆಯ ತಳಿಗಳನ್ನು ಉತ್ಪಾದಿಸಿವೆ. ಪೂಸಾ ದೋಮೌಸಮಿ, ಅರ್ಕಾಹರಿತ್ ಹಾಗೂ ಕೊಯಮತ್ತೂರ್ ಲಾಂಗ್ ತಳಿಗಳೇ ಈ ಕೊಡುಗೆಗಳು. ಖಾಸಗಿ ಸಂಸ್ಥೆಗಳು ಸಹ ಉತ್ತಮ ತಳಿ/ಮಿಶ್ರ ತಳಿಗಳನ್ನು ಉತ್ಪಾದಿಸಿವೆ.

. ಅರ್ಕಾಹರಿತ್ : ಇದು ಬೆಂಗಳೂರು ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಕೊಡುಗೆ. ಕಾಯಿಗಳ ಬಣ್ಣ ಹಸುರು. ಅವು ಉರುಳೆಯಂತಿರುತ್ತವೆ. ತಿರುಳು ಯಥೇಚ್ಛ; ರಸವತ್ತಾಗಿರುತ್ತದೆ. ಹೆಕ್ಟೇರಿಗೆ ಸುಮಾರು ೧೨.೫ ಟನ್ನುಗಳಷ್ಟು ಅಧಿಕ ಇಳುವರಿ ಕೊಡುವ ತಳಿ ಇದಾಗಿದೆ. ಇದು ಮಳೆಗಾಲ ಮತ್ತು ಬೇಸಿಗೆ ಕಾಲಗಳಲ್ಲಿ ಬೆಳೆಯಲು ಸೂಕ್ತವಿರುವ ತಳಿ. ಬಿತ್ತನೆಯಾದ ಸುಮಾರು ೧೦೦ ರಿಂದ ೧೧೦ ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ.

. ಕೊಯಮತ್ತೂರು ಲಾಂಗ್ : ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿ ಪಡಿಸಿದ ತಳಿ; ಕಾಯಿಗಳು ಬಿಳಿ ಹಸುರು ಬಣ್ಣವಿದ್ದು ಉದ್ದನಾಗಿರುತ್ತವೆ. ಇದೂ ಸಹ ಅಧಿಕ ಇಳುವರಿಯಿಂದ ಕೂಡಿದ ತಳಿಯೇ ಆಗಿದೆ. ಮಳೆಗಾಲಕ್ಕೆ ಸೂಕ್ತವಿರುತ್ತದೆ.

. ಪೂಸಾದೋಮೌಸಮಿ : ಹೊಸದೆಹಲಿಯಲ್ಲಿನ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಕೊಡುಗೆ. ಇದರ ಕಾಯಿ ಉದ್ದನಾಗಿ, ಹಸುರು ಬಣ್ಣದ್ದಿರುತ್ತದೆ. ಇದು ಬೇಸಿಗೆ ಮತ್ತು ಮಳೆಗಾಲಗಳೆರಡರಲ್ಲೂ ಅಧಿಕ ಇಳುವರಿ ಕೊಡಬಲ್ಲದು.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ೯೦ ರಿಂದ ೧೨೦ ಸೆಂ.ಮೀ. ಅಂತರದಲ್ಲಿ ಕಾಲುವೆಗಳನ್ನು ಮಾಡಿಪೂರ್ಣ ಪ್ರಮಾಣದ ತಿಪ್ಪೆಗೊಬ್ಬರ, ಅರ್ಧಭಾಗ ಸಾರಜನಕ ಮತ್ತು ಪೂರ್ಣ ಪ್ರಮಾಣದ ರಂಜಕಾಂಶಗಳನ್ನು ಕಾಲುವೆಗಳಲ್ಲಿ ಸಮನಾಗಿ ಹರಡಿ ಮಣ್ಣಿನಲ್ಲಿ ಮಿಶ್ರ ಮಾಡಬಏಕು. ದಿಂಡುಗಳ ಒಂದು ಮಗ್ಗುಲು ಇಳಿಜಾರಿನ ಅರ್ಧದಲ್ಲಿ ೯೦ ಸೆಂ.ಮೀ. ಅಂತರದಲ್ಲಿ ಬೀಜವನ್ನು ಊರಬೇಕು. ಅಲ್ಲದೆ ೧೨೦ ಸೆಂ.ಮೀ. ಸಾಲುಗಳಲ್ಲಿ ೯೦ ಸೆಂ.ಮೀ. ಅಗಲ ಇರುವಂತೆ ಮಡಿಗಳನ್ನು ತಯಾರಿಸಿ ಸಹ ಬೀಜ ಬಿತ್ತಬಹುದು. ಎತ್ತರಿಸಿದ ಮಡಿಗಳಾದರೆ ಮಳೆಗಾಲಕ್ಕೆ ಸೂಕ್ತ. ಪ್ರತಿ ಕುಳಿಯಲ್ಲಿ ೩-೪ ಬೀಜ ಊರಿ, ಅವು ಮೊಳೆತ ನಂತರ ಹೆಚ್ಚುವರಿ ಸಸಿಗಳನ್ನು ಕಿತ್ತುಹಾಕಬಹುದು. ಆಗ ಪ್ರತಿ ಕುಳಿಗೆ ಎರಡು ಸಸಿಗಳು ಉಳಿಯುತ್ತವೆ. ಬೀಜ ಸಿಪ್ಪೆ ಬಲು ಗಡುಸಾಗಿರುವ ಕಾರಣ ಬೇಗ ಮೊಳೆಯಲಾರವು. ಬೀಜವನ್ನು ಬಟ್ಟೆ ಚೀಲದಲ್ಲಿ ಗಂಟುಕಟ್ಟಿ ತಣ್ಣೀರಿನಲ್ಲಿ ಸುಮಾರು ೬ ತಾಸುಗಳ ಕಾಲ ನೆನೆಸಿಟ್ಟರೆ ಅವು ಬೇಗ ಮೊಳೆಯುತ್ತವೆ. ಹೆಕ್ಟೇರಿಗೆ ಸುಮಾರು ೮ ಕಿ.ಗ್ರಾಂ. ಬೀಜ ಬೇಕಾಗುತ್ತವೆ.

ಗೊಬ್ಬರ : ಹೆಕ್ಟೇರಿಗೆ ೧೮ ಟನ್ನುಗಳಷ್ಟು ತಿಪ್ಪೆಗೊಬ್ಬರ ಹಾಕಬೇಕಾಗುತ್ತದೆ. ಅದರ ಜೊತೆಗೆ ೬೨.೫ ಕಿ.ಗ್ರಾಂ ಸಾರಜನಕ ಮತ್ತು ೫೦ ಕಿ.ಗ್ರಾಂ ರಂಜಕಾಂಶಗಳನ್ನು ಕೊಡಬೇಕು.

ನೀರಾವರಿ : ಮಳೆಗಾಲದಲ್ಲಿ ಅಷ್ಟೊಂದು ನೀರು ಕೊಡಬೇಕಾಗಿಲ್ಲ. ಆದರೆ ಇತರ ಕಾಲಗಳಲ್ಲಿ ಪ್ರತಿ ೫-೬ ದಿನಗಳಿಗೊಮ್ಮೆ ನೀರು ಕೊಡಬೇಕಾಗುತ್ತದೆ.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಬಿತ್ತನೆಯಾದ ೪ ವಾರಗಳ ನಂತರ ಉಳಿದ ಅರ್ಧಭಾಗ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಟ್ಟು, ಬುಡಗಳಿಗೆ ಮಣ್ಣು ಏರಿಸಬೇಕು. ಬೆಳೆ ಅವಧಿಯಲ್ಲಿ ಒಂದೆರಡು ಸಾರಿ ಕಳೆಗಳನ್ನು ಕಿತ್ತು ತೆಗೆಯಬೇಕು.

ಆಸರೆ ಒದಗಿಸುವುದು : ಹಾಗಲ ಬಳ್ಳಿ ತರಕಾರಿ. ಹಂಬುಗಳು ನುಲಿಬಳ್ಳಿಗಳ ನೆರವಿನಿಂದ ಆಸರೆಗೆ ಸುತ್ತಿ ಮೇಲಕ್ಕೇರುತ್ತವೆ. ನೆಲದ ಮೇಲೆ ಹರಡಲು ಬಿಡದೆ ಚಪ್ಪರದ ಮೇಲೆ ಹಬ್ಬಿಸಿದರೆ ಬಿಟ್ಟ ಕಾಯಿಗಳು ಮಣ್ಣಿನ ತೇವ ತಾಗಿ ಕೊಳೆಯುವುದು ತಪ್ಪುತ್ತದೆ. ಅಂತರ ಬೇಸಾಯ ಮತ್ತು ಸಸ್ಯ ಸಂರಕ್ಷಣೆ ಸುಲಭವಿರುತ್ತವೆ.

ಕೊಯ್ಲು ಮತ್ತು ಇಳುವರಿ : ಕಾಯಿಗಳು ಇನ್ನೂ ಎಳಸಾಗಿರುವಾಗಲೇ ಕಿತ್ತು ತೆಗೆಯುವುದು ಒಳ್ಳೆಯದು. ಮೂರು ನಾಲ್ಕು ದಿನಗಳಿಗೊಮ್ಮೆ ಕಾಯಿಗಳನ್ನು ತೊಟ್ಟು ಸಮೇತ ಬೆಳಗಿನ ಹೊತ್ತು ಬಿಡಿಸಿ ತೆಗೆಯಬೇಕು. ಅರ್ಕಾಹರಿತ್ ನಂತಹ ತಳಿಗಳಲ್ಲಿ ಹೆಕ್ಟೇರಿಗೆ ೧೨.೫ ಟನ್ನುಗಳಷ್ಟು ಇಳುವರಿ ಸಾಧ್ಯ. ಸರಾಸರಿ ಇಳುವರಿ ಹೆಕ್ಟೇರಿಗೆ ೭.೫-೧೦ ಟನ್ನುಗಳಷ್ಟು ಸಿಗುವುದರಲ್ಲಿ ಸಂಶಯವಿಲ್ಲ. ಬೆಳೆಯ ಅವಧಿಯಲ್ಲಿ ಸುಮಾರು ೪-೫ ಕೊಯ್ಲುಗಳಿರುತ್ತವೆ.

ಕೀಟ ಮತ್ತು ರೋಗಗಳು : ಕೀಟಗಳಲ್ಲಿ ಕೆಂಪು ಕಂಬಳದ ದುಂಬಿ ಮತ್ತು ಹಣ್ಣಿನ ನೊಣ ಮುಖ್ಯವಾದುವು. ಅದೇ ರೀತಿ ರೋಗಗಳಲ್ಲಿ ಚಿಬ್ಬುರೋಗ ಮತ್ತು ಬೂದಿರೋಗ ಮುಖ್ಯವಾದುವು. ಇವುಗಳ ಹತೋಟಿ ಕಲ್ಲಂಗಡಿಯಲ್ಲಿ ಇದ್ದಂತೆ. ಬೆಳೆ ಪರಿವರ್ತನೆಯನ್ನು ಅನುಸರಿಸುವುದು ಲಾಭದಾಯಕ.

ಬೀಜೋತ್ಪಾದನೆ : ಹೆಕ್ಟೇರಿಗೆ ೫೦೦-೬೦೦ ಕಿ.ಗ್ರಾಂಗಳಷ್ಟು ಬೀಜ ಸಾಧ್ಯ.

* * *