ಕಡೆಗೋಲು ಕೃಷ್ಣನ ಉಡುಪಿ, ಕಾರ್ಪೊರೇಶನ್ ಬ್ಯಾಂಕಿನ ಹುಟ್ಟೂರು. ಉಡುಪಿ ಇತಿಹಾಸದಲ್ಲಿ ಹೊಸ ತಿರುವು ಆರಂಭವಾದದ್ದು ಹದಿಮೂರನೆಯ ಶತಮಾನದಲ್ಲಿ, ಶ್ರೀ ಮಧ್ವಾಚಾರ್ಯರ ಕಾಲದಲ್ಲಿ. ಮಧ್ವಾಚಾರ್ಯರು ತತ್ವಜ್ಞಾನಿ ಮಾತ್ರವಲ್ಲದೆ, ‘ಮಹಾಭಾರತ ತಾತ್ಪರ್ಯ ನಿರ್ಣಯ’ದಂಥ ಗ್ರಂಥವನ್ನು ಬರೆದ ಸಂಶೋಧಕರಾಗಿದ್ದರು. ಉಡುಪಿಯಿಂದ ಹಿಮಾಲಯದವರೆಗೆ ಪ್ರವಾಸ ಮಾಡಿದ್ದ ಮಧ್ವಾಚಾರ್ಯರಿಂದಾಗಿ ಉಡುಪಿ ನಾಡಿನ ಉದ್ದಗಲದಲ್ಲಿ ಖ್ಯಾತಿ ಪಡೆಯಿತು.

ಉಡುಪಿಯ ಪರಂಪರೆಗೆ ಮತ್ತೆ ಹೊಸ ಆಯಾಮ ನೀಡಿದವರು ಸೋದೆಮಠದ ಶ್ರೀ ವಾದಿರಾಜ ಸ್ವಾಮಿಗಳು (೧೪೮೦ – ೧೬೦೦). ಮಧ್ವಾಚಾರ್ಯರ ಕಾಲದಿಂದ ಎರಡು ತಿಂಗಳಿಗೊಮ್ಮೆ ನಡೆಯುತ್ತಿದ್ದ ‘ಪರ್ಯಾಯ’ವನ್ನು (ಅಷ್ಟಮಠದ ಯತಿಗಳಲ್ಲಿ ಅನುಕ್ರಮವಾಗಿ ಕೃಷ್ಣಪೂಜೆಯ ಅಧಿಕಾರ ಬದಲಾವಣೆ) ಎರಡು ವರ್ಷಗಳಿಗೊಮ್ಮೆ ನಡೆಯುವಂತೆ ಮಾಡಿದವರು ಇವರು. ಸಂಸ್ಕೃತ ಕವಿ, ಕನ್ನಡ ವಾಗ್ಗೇಯಕಾರ, ಕೀರ್ತನಕಾರರಾಗಿದ್ದ ಶ್ರೀ ವಾದಿರಾಜರ ಕಾಲದಲ್ಲಿ ಉಡುಪಿ ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆಯಿತು. ಆ ಕಾಲದಲ್ಲಿ ಕನಕದಾಸರು. ಪುರಂದರದಾಸರು ಉಡುಪಿಯ ರಥಬೀದಿಯಲ್ಲಿ ಹಾಡಿದರು, ಕುಣಿದರು. ‘ಕನಕನ ಕಿಂಡಿ’ ಜಾತಿ ವ್ಯವಸ್ಥೆಯ ಅಂಚಿನಲ್ಲಿರುವವರ ನೆಲೆಯಿಂದ ನೋಡಿದಾಗ ಪವಾಡವಾಗಿ ಕಾಣಿಸುತ್ತದೆ. ವ್ಯವಸ್ಥೆ ಒಳಗಿನಿಂದ ನೋಡಿದಾಗ ಇದು ಉಡುಪಿಯ ಮಡಿವಂತರಿಗೆ ಹೊಸ ಬೆಳಕು ನೀಡಲು ಶ್ರೀ ವಾದಿರಾಜ ಸ್ವಾಮಿಗಳು ಹೂಡಿದ ತಂತ್ರವಾಗಿತ್ತು ಅನ್ನಿಸುತ್ತದೆ. ‘ತೀರ್ಥಪ್ರಬಂಧ’ ಬರೆದ ಶ್ರೀ ವಾದಿರಾಜ ಸ್ವಾಮಿಗಳು ಅಖಿಲ ಭಾರತ ಪರ್ಯಟನೆ ಮಾಡಿದ್ದರು.

ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಆಳ್ವಿಕೆಯಲ್ಲಿದ್ದ (೧೭೬೩-೧೭೯೯) ಕರ್ನಾಟಕದ ಕರಾವಳಿ ೧೭೯೯ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ವಶವಾಯಿತು. ಹತ್ತೊಂಬತ್ತನೆಯ ಶತಮಾನದ ದಕ್ಷಿಣ ಕನ್ನಡ ಜಿಲ್ಲೆ (ಮಂಗಳೂರು, ಉಡುಪಿ) ಕಂಪೆನಿ ಮತ್ತು ಬ್ರಿಟಿಷ್ ಸರಕಾರವನ್ನು ಪ್ರೀತಿ ಮತ್ತು ದ್ವೇಷದಿಂದ ಕಂಡಿತು; ಅದರ ಸಿಹಿ ಕಹಿಯನ್ನು ಅನುಭವಿಸಿತು.

ಡಾ| ಫ್ರಾನ್ಸಿಸ್ ಬುಖಾನನ್ ೧೮೦೦ರಲ್ಲಿ ಕ್ಷೇತ್ರಕಾರ್ಯ ಮಾಡಿ ಸಂಗ್ರಹಿಸಿದ ಮಾಹಿತಿಗಳು ‘Journey from Madras through the countries of Mysore, Canara and Malabar’ (೧೮೦೧) ಎಂಬ ವರದಿಯಲ್ಲಿ ಲಭ್ಯವಿದೆ. ಕಾರ್ಕಳದಿಂದ ಬೈಲೂರು ಹಿರಿಯಡ್ಕ ಮಾರ್ಗವಾಗಿ ಉಡುಪಿಗೆ ಬರುವಾಗ ತಾನು ನೋಡಿದ ತೆಂಗಿನ ತೋಟಗಳು, ಭತ್ತದ ಗದ್ದೆಗಳು ಹಾಗೂ ರಸ್ತೆ ಬದಿಯ ಸಾಲುಮರಗಳನ್ನು ಬುಖಾನನ್ ವಿವರಿಸಿದ್ದಾನೆ. ಮಧ್ವಾಚಾರ್ಯರು ಹಾಗೂ ಅವರ ಬೋಧನೆಗಳು, ಕೃಷ್ಣ ಮಠದ ಪರ್ಯಾಯ ವ್ಯವಸ್ಥೆ, ತುಳು ಬ್ರಾಹ್ಮಣ ಸಮಾಜದ ಮೂಲ,  ‘ಗ್ರಾಮಪದ್ದತಿ’ಯಲ್ಲಿರುವ ತುಳು ಬ್ರಾಹ್ಮಣ ಸಮಾಜದ ಇತಿಹಾಸ, ಸಮಾಜದ ಇತರ ವರ್ಗಗಳು – ಇಂಥ ವಿವರಗಳು ಬುಖಾನನ್ ವರದಿಯಲ್ಲಿ ದಾಖಲಾಗಿವೆ. ಹತ್ತೊಂಬತ್ತನೆಯ ಶತಮಾನದ ಮೊದಲ ದಶಕಗಳ ಅವಧಿಯಲ್ಲಿ ಕರ್ನಲ್ ಮೆಕೆಂಜಿ ಸಂಗ್ರಹಿಸಿದ ‘ಕೈಫಿಯತ್ತು’ಗಳಲ್ಲಿ ಉಡುಪಿಯ ಅಷ್ಟಮಠಗಳು ಮತ್ತು ಕಾಪು, ಕುಂಜಾರು, ಕುಂಭಾಸಿ, ಕೊಲ್ಲೂರು, ಪೆರಡೂರು,  ಬಸರೂರು, ಬಾರ್ಕೂರು, ಯಲ್ಲೂರು ದೇವಸ್ಥಾನಗಳ ಕೈಫಿಯತ್ತು (ಸಮಾಚಾರ) ದಾಖಲಾಗಿದೆ. ೧೮೩೪ರಲ್ಲಿ ದಕ್ಷಿಣಕನ್ನಡಕ್ಕೆ ಜರ್ಮನಿ ಮಿಷನರಿಗಳು ಆಗಮಿಸಿದರು.

೧೮೫೭ರ ಅನಂತರ ಮಂಗಳೂರಿನಲ್ಲಿ ಪಡುವಣ ಗಾಳಿ ಬೀಸತೊಡಗಿತು. ಮಂಗಳೂರಿನಲ್ಲಿ ಕಲೆಕ್ಟರ್ ಆಫೀಸು (ಜಿಲ್ಲಾಧಿಕಾರಿ ಕಚೇರಿ) ಆರಂಭವಾದದ್ದು ೧೮೬೫ರಲ್ಲಿ. ಅದೇ ವರ್ಷ ಮಂಗಳೂರಿನ ಸರಕಾರಿ ಕಾಲೇಜು (ಈಗಿನ ವಿಶ್ವವಿದ್ಯಾನಿಲಯ ಕಾಲೇಜು) ಆರಂಭವಾಯಿತು. ೧೮೬೬ರಲ್ಲಿ ಮಂಗಳೂರು ಮುನಿಸಿಪಾಲಿಟಿ ಕಾರ್ಯಾರಂಭ ಮಾಡಿತು. ಸಂತ ಎಲೋಶಿಯಸ್ ಕಾಲೇಜಿನ (೧೮೮೦) ಸ್ಥಾಪನೆ ಮಂಗಳೂರಿನ ಶೈಕ್ಷಣಿಕ ಪ್ರಗತಿಯ ಮಹತ್ವದ ಹೆಜ್ಜೆಯಾಯಿತು. ೧೮೮೭ ರಲ್ಲಿ ‘ಕೃಷ್ಣ-ಭೀಮ’ ಎಂಬ ಎರಡು ಹಡಗುಗಳು ಮಂಗಳೂರಿನಿಂದ ಮುಂಬಯಿಗೆ ತಿರುಗಾಟ ಆರಂಭಿಸಿದುವು. ಬಾಸೆಲ್ ಮಿಷನ್‌ನವರಿಂದಾಗಿ ಮಂಗಳೂರು ಕೈಗಾರಿಕೆ, ಮುದ್ರಣರಂಗಗಳಲ್ಲಿ ಮುಂದುವರಿಯಿತು. ೧೯೦೭ರಲ್ಲಿ ಮಂಗಳೂರು ರೈಲು ಸಂಪರ್ಕ ಪಡೆಯಿತು.

ಹತ್ತೊಂಬತ್ತನೆಯ ಶತಮಾನದ ಉಡುಪಿ, ಮಂಗಳೂರಿಗೆ ಹೋಲಿಸಿದಾಗ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿತ್ತು. ಬಾಸೆಲ್ ಮಿಶನ್‌ನವರು ೧೮೫೮ರಲ್ಲಿ ಉಡುಪಿಯಲ್ಲಿ ಕ್ರಿಶ್ಚಿಯನ್ ಹೈಸ್ಕೂಲನ್ನು ಆರಂಭಿಸಿದರು. ೧೮೯೦ರಲ್ಲಿ ಬೋರ್ಡ್ ಮಿಡ್ಲ್ ಸ್ಕೂಲ್ ೧೯೧೮ ರಲ್ಲಿ ಬೋರ್ಡ್ (ಸರಕಾರಿ) ಹೈಸ್ಕೂಲು ಸ್ಥಾಪನೆಗೊಂಡುವು. ಉಡುಪಿಯ ಪ್ರಾಚೀನ ಸಂಸ್ಕೃತ ಶಾಲೆ ಅನಂತೇಶ್ವರ ದೇವಸ್ಥಾನದ ಜಗಲಿಯಲ್ಲಿತ್ತು. ಸಂಸ್ಕೃತ ಮಹಾಪಾಠ ಶಾಲೆಯ ಸ್ಥಾಪನೆ (೧೯೦೪) ಉಡುಪಿಯ ಶೈಕ್ಷಣಿಕ ಇತಿಹಾಸದ ಮಹತ್ವ ಮುನ್ನಡೆಯಾಯಿತು. ಸೋದೆ ಮಠದ ಶ್ರೀ ವಿಶ್ವೇಂದ್ರ ತೀರ್ಥರು ೧೯೪೩ರಲ್ಲಿ ಇನ್ನಂಜೆಯಲ್ಲಿ ಸ್ಥಾಪಿಸಿದ ಎಸ್.ವಿ.ಎಚ್. ಹೈಸ್ಕೂಲ್ ಉಡುಪಿ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಆರಂಭಗೊಂಡ ಮೊದಲ ಹೈಸ್ಕೂಲ್.

೧೮೯೪ ರಲ್ಲಿ ಮದ್ರಾಸು ಸರಕಾರ ಪ್ರಕಟಿಸಿದ ‘ಸೌತ್ ಕೆನರಾ’ ಗ್ಯಾಸೆಟಿಯರ್ ಅಧಿಕೃತ ದಾಖಲೆಗಳನ್ನು ನೀಡುವ ಐತಿಹಾಸಿಕ ಮಹತ್ವದ ಗ್ರಂಥ. ಈ ಗ್ರಂಥವನ್ನು ಕರ್ನಾಟಕ ಸರ್ಕಾರದ ಗ್ಯಾಸೆಟಿಯರ್ ಇಲಾಖೆ ೨೦೦೩ರಲ್ಲಿ ಪುನರ್ ಮುದ್ರಿಸಿದೆ. ೧೮೯೧ ರಲ್ಲಿ ಮಂಗಳೂರು ತಾಲೂಕಿನ ಜನಸಂಖ್ಯೆ ೨,೭೮,೯೦೮. ಪುರುಷರು ೧,೩೭,೧೬೬. ಮಹಿಳೆಯರು – ೧,೪೧,೭೪೨. ಹಿಂದುಗಳು ೨,೦೧,೨೮೭, ಕ್ರಿಶ್ಚಿಯನ್ನರು ೪೧,೬೪೫. ಮುಸ್ಲಿಮರು – ೩೦೬೭೦, ಜೈನರು ೫೨೪೨. ಮಂಗಳೂರು ನಗರದ ಜನಸಂಖ್ಯೆ ೪೦೯೨೨. ಹಿಂದುಗಳು ೨೩೩೯೮. ಕ್ರಿಶ್ಚಿಯನ್ನರು ೯೮೪೫, ಮುಸ್ಲಿಮರು ೭೫೮೫.

ಈಗಿನ ಉಡುಪಿ ಜಿಲ್ಲೆಯ (ಅಂದರೆ ಉಡುಪಿ, ಕುಂದಾಪುರ ತಾಲೂಕುಗಳ) ೧೮೯೧ರ ಜನಸಂಖ್ಯೆ – ೩೭೩೯೮೫, ಪುರುಷರು- ೧೭೩೭೯೯. ಮಹಿಳೆಯರು – ೨೦೦೧೬೬. ಹಿಂದುಗಳು – ೩೩೮೮೪೬. ಕ್ರಿಶ್ಚಿಯನ್ನರು – ೨೦೩೧೪, ಮುಸ್ಲಿಮರು – ೧೨೨೪೭. ಜೈನರು – ೨೫೭೮. ಪುರುಷರಲ್ಲಿ ನೂರರಲ್ಲಿ ಹತ್ತು ಮಂದಿ, ಮಹಿಳೆಯರಲ್ಲಿ ನೂರಕ್ಕೆ ಒಬ್ಬರು ಅಕ್ಷರಸ್ಥರಾಗಿದ್ದರು. ಕನ್ನಡಿಗರು ೧೬೪೩೮೧, ತುಳುವರು – ೧೨೬೭೦೦. ಕೊಂಕಣಿಗರು – ೫೧೩೦೭. ಮರಾಠಿಗರು – ೧೬೩೧೯. ಹಿಂದುಸ್ತಾನಿ – ೬೫೧೧. ಉಡುಪಿ ತಾಲ್ಲೂಕಿನಲ್ಲಿ ತುಳು ಮನೆ ಮಾತಿನವರು ಬಹು ಸಂಖ್ಯಾಕರಾಗಿದ್ದರು. ಉಡುಪಿ ಜಿಲ್ಲೆಯಲ್ಲಿ ೨೦೪೫ ಗಾಡಿಗಳಿದ್ದುವು.

ಉಡುಪಿ ಜಿಲ್ಲೆಯಲ್ಲಿ ೧೮೯೧ರಲ್ಲಿದ್ದ ಧನಿ – ಒಕ್ಕಲುಗಳ ಸಂಖ್ಯೆ ೨,೦೬೬೩೧. ಕೃಷಿ ಕಾರ್ಮಿಕರು – ೧೦೭೮೮. ಕಾರ್ಮಿಕರು – ೭೫೩೧೬, ವ್ಯಾಪಾರಿಗಳು – ೨೮೯೮೯, ಕುಶಲಕರ್ಮಿಗಳು – ೨೩೨೪೯, ನೆಯ್ಗೆಯವರು -೧೦೨೩, ಇತರ ವೃತ್ತಿಯವರು – ೧೭,೯೮೪. ಉಡುಪಿ ತಾಲೂಕಿನ ತಹಶೀಲ್ದಾರರ ಆಗಿನ ಸಂಬಳ ರೂ. ೨೨೫.

೧೮೯೧ ರಲ್ಲಿ ಉಡುಪಿ ೭೨೭೨ ಜನಸಂಖ್ಯೆಯ ಪುಟ್ಟ ಪಟ್ಟಣವಾಗಿತ್ತು. ಉಡುಪಿಯಲ್ಲಿ ೫೯೧೬ ಹಿಂದುಗಳು, ೭೮೧ ಕ್ರಿಶ್ಚಿಯನ್ನರು, ೫೭೪ ಮುಸ್ಲಿಮರು ವಾಸಿಸುತ್ತಿದ್ದರು. ಕಾರ್ಕಳ ಪೇಟೆಯಲ್ಲಿ ೪೧೧೫, ಕುಂದಾಪುರದಲ್ಲಿ ೩೬೧೭, ಬಾರ್ಕೂರಿನಲ್ಲಿ ೯೫೧, ಕಲ್ಯಾಣಪುರದಲ್ಲಿ ೫೫೮೨, ಮಲ್ಪೆಯಲ್ಲಿ ೩೧೨೫ ಜನಸಂಖ್ಯೆ ಇತ್ತು.

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದ ಉಡುಪಿಯಲ್ಲಿ ಮಕರ ಸಂಕ್ರಮಣ ಜಾತ್ರೆ, ಪರ್ಯಾಯ ಇವೆಲ್ಲ ಇದ್ದುವು. ಆದರೆ ಕಾಫಿ, ಹೊಟೇಲ್, ಛತ್ರ, ವಿದ್ಯುತ್, ಆಧುನಿಕ ಶೌಚಾಲಯ, ಫೋನ್, ಬಸ್ಸು, ಕಾರು, ಕಾಲೇಜು, ಸಿನಿಮಾ ಥಿಯೇಟರ್ – ಯಾವುದೂ ಇರಲಿಲ್ಲ. ‘ಕಾರ್ಪೊರೇಶನ್ ಬ್ಯಾಂಕ್’ನ ಇತಿಹಾಸ ಬರೆದಿರುವ ಹಿರಿಯ ಅಂಕಣಕಾರ ಎಂ.ವಿ.ಕಾಮತರು ‘ಆ ದಿನಗಳು’ ಎಂಬ ಲೇಖನದಲ್ಲಿ ಉಡುಪಿಯ ತನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ – “ಇಷ್ಟು ಹೇಳಿದ ಮೇಲೆ ನನ್ನ ಕಥೆ ಶುರುವಾದದ್ದು ನಾನು ಹುಟ್ಟಿದ ವರ್ಷವಾದ ೧೯೨೧ರಲ್ಲಿ ಎಂದು ಧಾರಾಳ ಒಪ್ಪಿಕೊಳ್ಳಬಹುದು. ಆಗ ಸುತ್ತಮುತ್ತ ಆಸ್ಪತ್ರೆಗಳು ಇರಲಿಲ್ಲ. ಹೆರಿಗೆ ಬಗ್ಗೆ ಸಲಹೆ ನೀಡಲು ಪ್ರಸವ ವಿಜ್ಞಾನ ತಜ್ಞರಿರಲಿಲ್ಲ. ತಾಯಿ ನನ್ನನ್ನು ಹೆತ್ತದ್ದು ಒಬ್ಬಳು ಸೂಲಗಿತ್ತಿಯ ಸಹಾಯದಿಂದ ಹೆರಿಗೆ ಕೆಲಸದಲ್ಲಿ ಇಂದಿನ ಎಂ.ಡಿ.ಗಳಿಗಿಂತ ಆಕೆಗೆ ಹೆಚ್ಚು ಅನುಭವವಿತ್ತು. ಅವಳು ಒಂದು ಸಂಸ್ಥೆಯೇ ಆಗಿದ್ದಳು. ಅನಂತರ ಆಕೆಯ ಮಗಳೂ ಅಷ್ಟೇ ಪ್ರಖ್ಯಾತಿ ಪಡೆದಳು. ಉಡುಪಿಯಲ್ಲಿ ‘ಸೂಲಗಿತ್ತಿ ಕಮಲ’ ಎಂದರೆ ಗಣನೀಯ ವ್ಯಕ್ತಿಯಾಗಿದ್ದಳು.” (ಅಡ್ಡನಡ್ಕ ಕೃಷ್ಣಭಟ್ (ಸಂ.) – ೧೯೭೭).

ಕಾಲ್ನಡಿಗೆ, ಎತ್ತಿನ ಗಾಡಿ, ಜಟ್ಕಾಬಂಡಿ, ಸೈಕಲ್, ದೋಣಿ, ಪಲ್ಲಕ್ಕಿ – ಹೀಗೆ ಪ್ರಯಾಣ ವೈವಿಧ್ಯಪೂರ್ಣವಾಗಿತ್ತು. ಉಡುಪಿಯ ಪರ್ಯಾಯದ ಸ್ವಾಮಿಗಳು ಪಲ್ಲಕ್ಕಿಯಲ್ಲಿ ಕುಳಿತು ಪರ್ಯಾಯದ ಮೆರವಣಿಗೆಯಲ್ಲಿ ಬರುತ್ತಿದ್ದರು. ಮದುಮಗನ ದಿಬ್ಬಣಕ್ಕೂ ಪಲ್ಲಕ್ಕಿ ಬಳಕೆಯಾಗುತ್ತಿತ್ತು. ‘ಸುಬ್ಬಯ್ಯ ಶೆಟ್ಟರ ವಿಲೇವಾರಿ’ ಎಂಬ ಮಾತು ಈಗಲೂ ಬಳಕೆಯಲ್ಲಿದೆ. ಸುಬ್ಬಯ್ಯ ಶೆಟ್ಟರೂ ಮಂಗಳೂರಿನಿಂದ ಉಡುಪಿಗೆ ಕರಾವಳಿ ಮಾರ್ಗದಲ್ಲಿ ಜಟ್ಕಾಗಾಡಿಗಳ ಓಡಾಟ ನಿರ್ವಹಿಸುತ್ತಿದ್ದರು. ಹೊಳೆ ಎದುರಾದಾಗ ಜಟ್ಕಾದಿಂದ ಇಳಿದು ದೋಣಿ ದಾಟಿದಾಗ ಇನ್ನೊಂದು ಜಟ್ಕಾ ಸಿದ್ಧವಾಗಿರುತ್ತಿತ್ತು. ಅಧಿಕಾರಿಗಳು, ವ್ಯಾಪಾರಿಗಳು ಕ್ಲಪ್ತಕಾಲಕ್ಕೆ  ಮಂಗಳೂರು ಸೇರುವುದು ಸಾಧ್ಯವಿತ್ತು. ‘ಸುಬ್ಬಣ್ಣ ಶೆಟ್ರ ವಿಲೇವಾರಿ’ ಎಂದರೆ ಸಮಯ ಪರಿಪಾಲನೆ ಎಂದು ಅರ್ಥ. ಪರಿಸರ ಮಾಲಿನ್ಯ ಮಾಡದ ಸೈಕಲ್ ಬ್ರಿಟಿಷರ ಕಾಲದಲ್ಲಿ ಬಳಕೆಗೆ ಬಂದ ಅದ್ಭುತವಾಹನ ಯಕ್ಷಗಾನ ಮೇಳಗಳ ಕಲಾವಿದರು ತಮ್ಮ  ವೇಷಭೂಷಣಗಳ ಪೆಟ್ಟಿಗೆಗಳನ್ನು ಹೊತ್ತುಕೊಂಡು ಊರಿಂದೂರಿಗೆ ಪ್ರಯಾಣ ಮಾಡುತ್ತಿದ್ದರು. ಹಿರಿಯಡ್ಕ ಗೋಪಾಲರಾಯರು ತನ್ನ ಬಾಲ್ಯದಲ್ಲಿ ಹಿರಿಯಡ್ಕದಿಂದ ಉಡುಪಿಗೆ ಕಾಲ್ನಡಿಗೆಯಲ್ಲಿ ಬಂದು, ಉಡುಪಿಯ ಆಸುಪಾಸಿನಲ್ಲಿ ಚೆಂಡೆ ಕೇಳುತ್ತಿದ್ದಲ್ಲಿಗೆ ಹೋಗಿ ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ನೋಡಿ, ಬೆಳಿಗ್ಗೆ ಊರಿಗೆ ವಾಪಾಸು ಹೋಗುತ್ತಿದ್ದರಂತೆ. ಅವರ ಆತ್ಮಕತೆ ಯಕ್ಷಗಾನ ಇತಿಹಾಸದ ಒಂದು ಸಾಂಸ್ಕೃತಿಕ ದಾಖಲೆ.

ಶಿವರಾಮ ಕಾರಂತರ ಕಾದಂಬರಿಗಳಲ್ಲಿ ದೋಣಿಯಲ್ಲಿ ಮದುವೆ ದಿಬ್ಬಣದವರ ಪ್ರಯಾಣದ ವರ್ಣನೆಗಳಿವೆ. ‘ದೋಣಿ, ಹರಿಗೋಲುಗಳಲ್ಲಿ ‘(೧೯೫೦) ಎಂಬ ಲೇಖನದಲ್ಲಿ ಕಾರಂತರು ತನ್ನ ದೋಣಿ ವಿಹಾರದ ನೆನಪುಗಳನ್ನು ಬರೆದಿದ್ದಾರೆ – “ನಾನು ಎಳೆಯವನಾಗಿದ್ದಾಗ ಒಂದು ರಾತ್ರಿ ಕಲ್ಯಾಣಪುರದಲ್ಲಿ ಹೊಳೆಯಲ್ಲಿ ದೋಣಿಯ ಮೇಲೆ ಕುಳಿತುಕೊಂಡೆ. ಬೆಳಿಗ್ಗೆ ಎದ್ದುದು ನಮ್ಮೂರಿನ ಕಡವು – ಮಣೂರಿನಲ್ಲಿ. ಎಂಟು ಗಂಟೆಗಳಲ್ಲಿ ಹೋದುದು ಹತ್ತೇ ಮೈಲು. ಸಾಮಾನ್ಯ ದೋಣಿಯಲ್ಲಿ ಕುಳಿತರೆ ತಾಸಿಗೆ ಎರಡು ಮೈಲು ಹೋಗಬಹುದು. ಅವಸರವಿದ್ದ ಪ್ರಾಣಿಗೆ ಅದು ಹೇಳಿಸಿದ ಕ್ರಮವಲ್ಲ. ಆತ ತಂತಿಯಲ್ಲೋ, ವಾಯರ್‌ಲೆಸ್ಸಿನಲ್ಲೋ ಪ್ರಯಾಣ ಬೆಳೆಸಬಹುದು. ನಿಮಗೆ ವಿರಾಮವಿದ್ದುದಾದರೆ ನಿಮಿಷ ನಿಮಿಷಕ್ಕೂ ಸುಖ ಉಂಡು ಹೋಗಬಹುದಾದ ಪಯಾಣ ದೋಣಿಯದು. ಆ ದಿನ ನಾನು ದೋಣಿಯಲ್ಲಿ ಚಾಪೆ ಹಾಸಿ, ನಿದ್ದೆ ಬರುವಾಗ ಒರಗುವುದಕ್ಕೆ ದಿಂಬಿಟ್ಟುಕೊಂಡು, ದೋಣಿಯ ಬಾನಿಗೆ ಒರಗಿ ಕುಳಿತುಕೊಂಡೆ. ಅದು ತೊಳೆ ದೋಣಿಯಲ್ಲ, ಜಿಲ್ಲೆಯಿಂದ ಒತ್ತುವ ದೋಣಿ. ಮಾಡು, ಮುಚ್ಚುಮರೆಗಳಿರಲಿಲ್ಲ. ಅದಕ್ಕೇನೆ ರಾತ್ರಿಯ ಪ್ರಯಾಣ ಆರಿಸಿದ್ದು. ನೀಲ ಬಾನಿಗಿಂತ ದೊಡ್ಡ ಮಾಡ್ಯಾವುದು? – ಒಂದಲ್ಲ, ಎರಡಲ್ಲ ಸಾವಿರಾರು ಚುಕ್ಕೆಗಳು ಮೇಲಿಂದ ಮಿನುಗುತ್ತಿರುತ್ತವೆ. ಸಾಲದುದಕ್ಕೆ – ತಿಂಗಳು ಮಾಮಾ ಮೂಡಣದಲ್ಲಿ ತಲೆಯೆತ್ತಿ ಮೇಲಕ್ಕೆ ಬಂದನೇ ಬಂದ. ಅವನ ಬೆಳಗಿನ ನಗು ನದಿಯ ಅಲೆಯಲ್ಲಿ ಮಿನುಗತೊಡಗಿತು. ಸಾವಿರ ಜನರು ಒಮ್ಮೆಗೇ ಹಲ್ಲು ಕಿರಿದು, ನಿಷ್ಕಪಟವಾಗಿ ನಕ್ಕ ಹಾಗೆ ನದಿಗೆ ನದಿಯೇ ನಗತೊಡಗಿತು. ಆಗ ದೋಣಿ ದಡ ಬಿಟ್ಟು ಹೊರಟಿತು. ಇಕ್ಕಡೆಯ ತೆಂಗಿನ ತೋಟಗಳು ತೂಕಡಿಸುತ್ತ, ನಿದ್ದೆ ಮಾಡುತ್ತ ನಿಂತಿದ್ದವು. ದೋಣಿಯ ಜಲ್ಲು ನೀರನ್ನು ಹೊಕ್ಕು ಮೇಲೇಳುವಾಗ ಅದರ ಉರಿಯೇ ಬೇರೆ. ಆ ಪುಟ್ಟ ದೋಣಿ ನೀರನ್ನು ಸೀಳಿಕೊಂಡು ಮೀನಿನ ಹಾಗೆ ಓಡುವಾಗ ಅದರ ಉರಿಯೇ ಬೇರೆ.  ಆ ಪುಟ್ಟ ದೋಣಿ ನೀರನ್ನು ಸೀಳಿಕೊಂಡು ಮೀನಿನ ಹಾಗೆ ಓಡುವಾಗ ಅದರ ಲಾಸ್ಯವೇ ಬೇರೆ. ತಂಪಾದ ಹವೆ, ಸೊಂಪಾದ ನೋಟ, ಬಾನು ನೀರುಗಳ ಅನುಪಮ ಮೇಳವದು. ಬಾನನ್ನು ನೋಡುತ್ತ ಕುಳಿತರೆ ಒಂದೊಂದೇ ನಕ್ಷತ್ರ ಸಿಡಿದು ಬಾಳುವುದೂ ಕಾಣುತ್ತದೆ. ನಕ್ಷತ್ರವಲ್ಲ, ನ್ಯಾಯವಾಗಿ ಉಲ್ಕೆಗಳು. ಆ ವಿಷಯವಾಗಿ ಅಜ್ಜಿಯ ಕತೆ ಬೇರೆಯೇ ಹೇಳುತ್ತದೆ. ಸ್ವರ್ಗವನ್ನೇರಿದ ಆತ್ಮಗಳು ನಕ್ಷತ್ರಗಳಾಗಿದ್ದು ತಮ್ಮ ಪುಣ್ಯ ಖರ್ಚಾಗುತ್ತಲೆ, ಕೆಳಕ್ಕೆ ಬಿದ್ದು ನರಕಕ್ಕೆ ಹೋಗುತ್ತವೆ ಎಂದು. ಆ ಒಂದು ರಾತ್ರಿ ನಾನು ಹತ್ತಿಪ್ಪತ್ತು ಜೀವರುಗಳ ಪುಣ್ಯ ಖರ್ಚಾಗಿ ಅವರು ಭೂಮಿಗೆ ಬಿದ್ದುದನ್ನು ನೋಡಿದೆ. ಆದರೆ ನನ್ನ ಪುಣ್ಯ ಖರ್ಚಾಗಿ ಕಂಡದ್ದು ನಾನು ದೋಣಿಯಿಂದ ಇಳಿಯಬೇಕಾಗಿ ಬಂದಾಗ ಮಾತ್ರ. ನಿದ್ದೆ ಬರಲಿ, ಬಾರದಿರಲಿ, ಮನಸ್ಸಿಗೆ ದೊರೆಯುವ ಜಲಯಾನದ ಶಾಂತಿ ಚಿರಸ್ಮರಣೀಯವಾದದ್ದು” (ಶಿವರಾಮ ಕಾರಂತ, ೧೯೭೨)

ಹತ್ತೊಂಬತ್ತನೆಯ ಶತಮಾನದ, ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಉಡುಪಿಯ ಸುತ್ತ ಮುತ್ತ ಕಿತ್ತು ತಿನ್ನುವ ಬಡತನವಿತ್ತು. ಉಡುಪಿಯ ಪಾ.ವೆಂ. ಆಚಾರ್ಯರು (೧೯೧೫-೧೯೯೨) ತನ್ನ ಆತ್ಮಕತೆಯಲ್ಲಿ, ತಾನು ಬಾಲ್ಯದಲ್ಲಿ ಕೃಷ್ಣಮಠದ ಭೋಜನಶಾಲೆಯಲ್ಲಿ ಧರ್ಮಾರ್ಥದ ಊಟ ಮಾಡುತ್ತಿದ್ದಾಗ ಅನುಭವಿಸುತ್ತಿದ್ದ ಅವಮಾನವನ್ನು ನೆನಪಿಸಿಕೊಂಡಿದ್ದಾರೆ. ಶಿವರಾಮ ಕಾರಂತರ ಅಣ್ಣ ಕೋ.ಲ. ಕಾರಂತರ ಆತ್ಮಕತೆಯಲ್ಲಿ ಅವರ ಹಿರಿಯರ ಬಡತನದ ಪ್ರಸ್ತಾವವಿದೆ. ಕಾರಂತರ ತಾಯಿ ಶೃಂಗೇರಿಯಲ್ಲಿ ನವರಾತ್ರಿ ಸಂದರ್ಭದಲ್ಲಿ ನೀಡುತ್ತಿದ್ದ ಸೀರೆದಾನ ಪಡೆಯಲಿಕ್ಕಾಗಿ, ತನ್ನ ಗೆಳತಿಯರೊಡನೆ ಶೃಂಗೇರಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರಂತೆ. ಬೆಳೆ ಹಾಳಾದ ವರ್ಷ ಧನಿಗಳಿಗೆ ಗೇಣಿ ಕೊಡಲಾರದೆ ತರತರದ ಕಾಟ ಅನುಭವಿಸುತ್ತಿದ್ದರು. ಉಡುಪಿಯ ಮಠವೊಂದರ ಉಗ್ರಾಣಿ ಪುತ್ತಿಗೆಯ ಸಮೀಪವಿದ್ದ ನಮ್ಮ ಹಿರಿಯರ ಕೂಟದ ಗುಂಡಿ ಮಠಕ್ಕೆ ಗೇಣಿ ವಸೂಲಿಗೆಂದು ಬರುತ್ತಿದ್ದುದು ನನ್ನ ಬಾಲ್ಯದ ನೆನಪುಗಳಲ್ಲೊಂದು.

‘ಹುಲ್ಲೆಮೊಗದ ಹುಲಿ’ಗಳಾಗಿದ್ದ ಬ್ರಿಟಿಷರು ನಮ್ಮ ರಾಜರುಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದು ಮಾತ್ರವಲ್ಲ, ನಮ್ಮ ದೇವಸ್ಥಾನಗಳ ಆಸ್ತಿಯನ್ನೂ ನುಂಗಿ ನೀರು ಕುಡಿದರು. ಮೊಣ ಕೈಗಂಟಿಗೆ  ಬೆಲ್ಲ ಹಚ್ಚಿ ನೆಕ್ಕಲು ಹೇಳಿದಂತೆ ದೇವಸ್ಥಾನಗಳ ನೈವೇದ್ಯ – ನಂದಾದೀಪಗಳಿಗಾಗಿ ತಸ್ತೀಕು ಮಂಜೂರು ಮಾಡಿದರು. ಈಗ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ  ದೇವಸ್ಥಾನಗಳ ಸಂಖ್ಯೆ ೧೫೦೦ ಕ್ಕಿಂತ ಹೆಚ್ಚು. ಇವುಗಳಲ್ಲಿ ೪೦೦ ಹೆಚ್ಚು ಪ್ರಧಾನ ದೇವಾಲಯಗಳು (ನೋಡಿ – ಮುರುಳೀಧರ ಉಪಾಧ್ಯ ಹಿರಿಯಡಕ, ಡಾ| ಪಿ. ಎನ್. ನರಸಿಂಹಮೂರ್ತಿ, (ಸಂ.) – ‘ದಕ್ಷಿಣ ಕನ್ನಡದ ದೇವಾಲಯಗಳು’ (೨೦೦೦). ಉಡುಪಿಯ ಅಷ್ಟಮಠಗಳವರು ಪರ್ಯಾಯದ ಖರ್ಚಿಗಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ಇತ್ತು. ತಲೆ ಬೋಳಿಸಿಕೊಂಡ, ಕೆಲವು ಸೀರೆ ಉಟ್ಟ ವಿಧವೆಯರು ಕೃಷ್ಣಮಠದ ಭೋಜನಶಾಲೆಯ ಧರ್ಮಾರ್ಥ ಊಟಕ್ಕಾಗಿ ಬರುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಉನ್ನತ ಶಿಕ್ಷಣಕ್ಕಾಗಿ ಮಂಗಳೂರು, ಮದ್ರಾಸುಗಳಿಗೆ ಹೋಗಲಾರದೆ ಉಡುಪಿ ನೂರಾರು ಯುವಕರು ಕನಸುಗಳು ಭಗ್ನಗೊಳ್ಳುತ್ತಿದ್ದುವು. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಅಧ್ಯಾಪಕನಾಗಿದ್ದ ನಂದಳಿಕೆ ಲಕ್ಷ್ಮೀ ನಾರಾಯಣಪ್ಪ (೧೮೭೦-೧೯೦೧) ಆ ಕಾಲದ ಉಡುಪಿಯಲ್ಲಿ ಕನಸು ಕಾಣುತ್ತಿದ್ದ ಕವಿ. ‘ಮುದ್ದಣ’ ಕಾವ್ಯನಾಮದ ಈ ಕವಿಯ ಕನಸುಗಳು ಕ್ಷಯರೋಗದಿಂದಾಗಿ ನನಸಾಗಲಿಲ್ಲ. ಆದರೆ ತನ್ನ ‘ಶ್ರೀ ರಾಮಾಶ್ವಮೇಧ’ ಕಾವ್ಯದಿಂದಾಗಿ ಈತ ಈಗ ಕನ್ನಡ ಸಾಹಿತ್ಯದಲ್ಲಿ ಅಮರ.

ಹತ್ತೊಂಬತ್ತನೆಯ ಶತಮಾನದ ಉಡುಪಿಯಲ್ಲಿ ಜಾತೀಯತೆ, ಅಸ್ಪೃಶ್ಯತೆಯ ಆಚರಣೆ, ವಿಧವೆಯರ ಕೇಶಮುಂಡನ ಇವೆಲ್ಲ ಇದ್ದುವು. ಮೃಷ್ಟಾನ್ನ ಭೋಜನ ಮಾಡಿ ಎಸೆದ ಎಂಜಲೆಲೆಯಲ್ಲಿದ್ದ ಅನ್ನ, ಭಕ್ಷ್ಯಗಳನ್ನು ಸಂಗ್ರಹಿಸಿ ತಿನ್ನುವ ಬಡವರನ್ನು ಸ್ಥಿತಪ್ರಜ್ಞರಾಗಿ ನೋಡುವವರಿದ್ದರು. ಮಹಾತ್ಮಾ ಗಾಂಧೀಜಿ ೧೯೩೪ ರಲ್ಲಿ ಕೃಷ್ಣನ ದರ್ಶನಕ್ಕಾಗಿ ರಥಬೀದಿಗೆ ಬಂದರು. ದಲಿತರಿಗೆ ಕೃಷ್ಣನ ದರ್ಶನಕ್ಕೆ ಅವಕಾಶವಿಲ್ಲ ಎಂದು ಗೊತ್ತಾದಾಗ ‘ಹಾಗಾದರೆ ನಾನೂ ದೇವರ ದರ್ಶನ ಮಾಡುವುದಿಲ್ಲ’ ಎಂದು ವಾಪಾಸು ಹೋದರು. ಉಡುಪಿ ಜಿಲ್ಲೆಯ ಹಲವು ಊರುಗಳಲ್ಲಿದ್ದ ದೇವದಾಸಿ ಪದ್ದತಿಯ ಹಿನ್ನೆಲೆಯಲ್ಲಿ ಶಿವರಾಮ ಕಾರಂತರ ‘ಮೈಮನಗಳ ಸುಳಿಯಲ್ಲಿ’ ಕಾದಂಬರಿಯನ್ನು ಓದಬೇಕು. ಇದೊಂದು ಸಾಂಸ್ಕೃತಿಕ ದಾಖಲೆ. ಶಿವರಾಮ ಕಾರಂತರು ಅಂತರ್ ಜಾತೀಯ ವಿವಾಹ ಮಾಡಿಕೊಂಡಾಗ ಅವರನ್ನು ಗೇಲಿ ಮಾಡಿ ಉಡುಪಿಯ ಪತ್ರಿಕೆಯೊಂದರಲ್ಲಿ ಒಂದು ಲೇಖನ ಪ್ರಕಟವಾಯಿತು. ಕಾರಂತರು ಆ ಲೇಖನ ಬರೆದವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿ ಅವರನ್ನು ಜೈಲಿಗೆ ಕಳಿಸಿದರು. ಬೋಳಾರ ಬಾಬುರಾಯರ ‘ವಾಗ್ದೇವಿ’ (೧೯೦೫) ಕಾದಂಬರಿಯಲ್ಲಿ. ಉಡುಪಿಯ ‘ಸರಸ್ವತಿ ಬಾಯಿ ರಾಜವಾಡೆಯವರ ಕತೆಗಳಲ್ಲಿ ಉಡುಪಿ ಇತಿಹಾಸದ ಅನೇಕ ಕರಾಳ ದೃಶ್ಯಗಳು ಅನಾವರಣಗೊಳ್ಳುತ್ತವೆ. ಇವುಗಳ ಬಗ್ಗೆ ಜಿಜ್ಞಾಸೆ ನಡೆಸಿದಾಗ ಕವಿ ಗೋಪಾಲಕೃಷ್ಣ ಅಡಿಗರು ಉಡುಪಿಯಲ್ಲಿದ್ದಾಗ ಬರೆದ ‘ಪ್ರಾಣಮುಖ್ಯರ ಮುಟ್ಟುಚಟ್ಟುತೊಟ್ಟಿಗಳಲ್ಲಿ ನಿಂತ ನೀರಿನ ವಾಸ ಸುತ್ತಲೆಲ್ಲ’ ಎಂಬ ಸಾಲಿನ ಅರ್ಥ ಹೊಳೆಯುತ್ತದೆ.

ಉಡುಪಿಯಲ್ಲಿ ವೈದಿಕ ಸಂಸ್ಕೃತಿಯ ದೇವತೆಗಳು ಮತ್ತು ತುಳು ಸಂಸ್ಕೃತಿಯ ಭೂತಗಳ ನಡುವೆ, ಹಿಂದೂ, ಮುಸ್ಲಿಂ, ಕ್ರೈಸ್ತರ ನಡುವೆ ಸಮನ್ವಯವಿತ್ತು. ಸೌಹಾರ್ದ ಸಂಬಂಧವಿತ್ತ. ಉಡುಪಿಯಲ್ಲಿ ೧೮೫೮ರಲ್ಲಿ ಆರಂಭಗೊಂಡ ಕ್ರಿಶ್ಚಿಯನ್ ಹೈಸ್ಕೂಲು ಆಧುನಿಕ ಶಿಕ್ಷಣಕ್ಕೆ ನಾಂದಿ ಹಾಡಿತು. ಕಾರ್ಪೊರೇಶನ್ ಬ್ಯಾಂಕಿನ ಸ್ಥಾಪಕ ಅಧ್ಯಕ್ಷ ಹಾಜಿ ಅಬ್ದುಲ್ಲಾ ಸಾಹೇಬರು ಉಡುಪಿಯ ಧರ್ಮ ಸಮನ್ವಯದ ಸಂಕೇತವಾಗಿದ್ದರು.

ಇಪ್ಪತ್ತನೆಯ ಶತಮಾನದ ಆರಂಭದ ದಶಕದಲ್ಲಿ ಮುನ್ನೋಟದ ಕನಸುಗಳೊಂದಿಗೆ ಉಡುಪಿಯಲ್ಲಿ ಒಂದು ಬ್ಯಾಂಕನ್ನು ಸ್ಥಾಪಿಸಿದ ಹಾಜಿ ಅಬ್ದುಲ್ಲಾ ಸಾಹೇಬರ ಜೀವನಚರಿತ್ರೆಗೆ ಹೊರಳುವ ಮುನ್ನ ಬ್ರಿಟಿಷರ ಆಡಳಿತ ಕಾಲದ ಉಡುಪಿ ಜಿಲ್ಲೆಯ ಆರ್ಥಿಕ ಸ್ಥಿತಿಯನ್ನು ಅವಲೋಕಿಸೋಣ. ಇತಿಹಾಸ ಸಂಶೋಧಕಿ ಡಾ| ಮಾಲತಿ ಕೆ. ಮೂರ್ತಿ ಅವರು ಬರೆದಿರುವಂತೆ “ಕೃಷಿ ಪ್ರಧಾನವಾಗಿದ್ದ ಈ ಜಿಲ್ಲೆಯಲ್ಲಿ ನೀರಿನ ಲಭ್ಯತೆಯನ್ನು ಅನುಸರಿಸಿ, ವರ್ಷಾವಧಿ ಮೂರು ಭತ್ತದ ಬೆಳೆಗಳ ಕೃಷಿ ನಡೆಯುತ್ತಿತ್ತು. (ಎಣಲ್ ಅಥವಾ ಕಾರ್ತಿ, ಸುಗ್ಗಿ ಮತ್ತು ಕೊಳಕೆ) ಬೆಳೆಗಳ ಆವರ್ತ (rotation) ವಿದ್ದಲ್ಲಿ ಉದ್ದು, ಹೆಸರು, ಅವಡೆ, ಹುರುಳಿ ಮುಂತಾದ ಧಾನ್ಯಗಳನ್ನು, ನೆಲಗಡಲೆ, ಮೆಣಸು, ಕಬ್ಬುಗಳನ್ನು ಬೆಳೆಸಲಾಗುತ್ತಿತ್ತು. ತೆಂಗು, ಅಡಿಕೆ, ಕಾಳುಮೆಣಸು, ಮಾವು, ಹಲಸು, ಗೇರು – ಮುಖ್ಯ ತೋಟಗಾರಿಕಾ ಬೆಳೆಗಳಾಗಿದ್ದುವು. ಅರಿಶಿನ, ಶುಂಠಿ, ವಿವಿಧ ತರಕಾರಿಗಳ ಕೃಷಿಗೂ ಜಿಲ್ಲೆಯ ಹವಾಮಾನ ಸೂಕ್ತವಾಗಿತ್ತು.

ಉಡುಪಿ ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆ ಪ್ರಮುಖ ಉದ್ಯೋಗವಾಗಿತ್ತು. ಉಡುಪಿ ಹಾಗೂ ಕುಂದಾಪುರ ತಾಲೂಕುಗಳಿಗೆ ಪ್ರಕೃತಿಯಿತ್ತ ವರವೆಂದರೆ ಅನೇಕ ನದಿಗಳು ಹಾಗೂ ಪಶ್ಚಿಮದ ಗಡಿಯಾಗಿರುವ ಅರಬ್ಬೀ ಸಮುದ್ರ ತೀರ. ಇದು ಜಿಲ್ಲೆಯ ಒಳನಾಡು ಹಾಗೂ ಸಮುದ್ರ ವ್ಯಾಪಾರಕ್ಕೆ ಬಹಳಷ್ಟು ಅನುಕೂಲಕರವಾಗಿದ್ದು ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿದೆ. ಶಿರೂರು, ಬೈಂದೂರು, ನ್ಯಾಕನ ಕಟ್ಟೆ, ಗಂಗೊಳ್ಳಿ, ಹಂಗಾರಕಟ್ಟೆ, ಮಲ್ಪೆ, ಕಾಪು ಮುಂತಾದ ಬಂದರುಗಳು ಹಾಗೂ ನಿಲುಗಡೆಗಳಿಂದ ಇಲ್ಲಿನ ಅಕ್ಕಿ, ತೆಂಗಿನಕಾಯಿ, ಕೊಬ್ಬರಿ, ಅಡಿಕೆ, ಬೆಲ್ಲೆ, ಕಾಚು, ತೆಂಗಿನ ನಾರು, ಕಬ್ಬು, ಮರಮಟ್ಟು, ಗೇರುಬೀಜ, ಹುರಿಹಗ್ಗ, ಶುಂಠಿ, ಎಳ್ಳೆಣ್ಣೆ ಮುಂತಾದ ಜಿಲ್ಲೆಯ ಉತ್ಪನ್ನಗಳನ್ನು ಉತ್ತರದ ಮುಂಬೈ, ಗೋವಾ, ಕಛ್, ಕಾಠೇವಾಡದ ಬಂದರುಗಳಿಗೂ, ದಕ್ಷಿಣದ ಮಂಗಳೂರು, ಕೊಚ್ಚಿ ಹಾಗೂ ಅಮಿನ್‌ದೀವಿಗಳಿಗೂ ರಫ್ತು ಮಾಡಲಾಗುತ್ತಿತ್ತು. ಅಂತೆಯೇ ಗೋವಾದಿಂದ ಸೀಮೆ ಎಣ್ಣೆ, ಕಾಗದ ಮತ್ತು ಉಪ್ಪು, ಮುಂಬೈಯಿಂದ ಪೆಟ್ರೋಲು, ಅರೇಬಿಯಾದಿಂದ ಖರ್ಜೂರ, ಸೂರತ್‌ನಿಂದ ಬಟ್ಟೆ ಮುಂತಾದ ಅನೇಕ ಸರಕುಗಳು ಆಮದಾಗುತ್ತಿದ್ದವು. ಕಂಪೆನಿ ಸರಕಾರ ಮದ್ರಾಸ್ ಮುಖಾಂತರ ಚೀನಕ್ಕೆ ರಫ್ತು ಮಾಡುತ್ತಿದ್ದ ಮೈಸೂರಿನ ಶ್ರೀಗಂಧವನ್ನು ಕುಂದಾಪುರ ಮತ್ತು ತಲಚೇರಿಗಳಲ್ಲಿ ದಾಸ್ತಾನು ಮಾಡಲಾಗುತ್ತಿತ್ತು. ಶ್ರೀಗಂಧದಿಂದ ಗಂಧದೆಣ್ಣೆಯನ್ನು ತೆಗೆಯುವ ಉದ್ಯಮ ಬಾರ್ಕೂರು ಮತ್ತು ಉಡುಪಿ ತಾಲೂಕಿನ ಕೆಲವು ಪ್ರದೇಶಗಳಲ್ಲಿತ್ತು. ಒಳನಾಡು ವ್ಯಾಪಾರಕ್ಕೆ ಘಟ್ಟಗಳ ಸಾಲು ಅಡಚಣೆಯನ್ನೊಡ್ಡಿದರೂ ದಕ್ಷಿಣದಲ್ಲಿ ಕಾರ್ಕಳ ಸೋಮೇಶ್ವರ ಆಗುಂಬೆ ಘಾಟಿ ಮಾರ್ಗವಾಗಿ ಶಿವಮೊಗ್ಗ ಹಾಗೂ ಉತ್ತರದಲ್ಲಿ ಅರಬೈಲು, ದೇವಿ ಮಲೆ ಘಾಟಿ ಮಾರ್ಗಗಳ ಮೂಲಕ ಉತ್ತರ ಕನ್ನಡ ಮತ್ತು ಕೊಲ್ಲೂರು ಮತ್ತು ಹೊಸಂಗಡಿ ಘಾಟಿ ಮಾರ್ಗಗಳ ಮೂಲಕ ಮೈಸೂರಿನೊಂದಿಗೆ ವ್ಯಾಪಾರ ಬಾಂಧವ್ಯ ಸಾಧ್ಯವಾಗಿತ್ತು.

ಹಂಚು ಉದ್ಯಮ ಹುರಿಹಗ್ಗ, ಪಾತ್ರೆ ತಯಾರಿ, ಮೀನೆಣ್ಣೆ ತಯಾರಿ, ಬೆಲ್ಲ ಉತ್ಪಾದನೆ, ಉಪ್ಪು ತಯಾರಿ, ಚಮ್ಮಾರಿಕೆ, ಮರಗೆಲಸ, ತಾಮ್ರ, ಹಿತ್ತಾಳೆ ಕಂಚುಗಳಿಂದ ಮೂರ್ತಿಗಳು ಹಾಗೂ ಉಪಕರಣಗಳ ತಯಾರಿ, ಚಾಪೆ, ಬುಟ್ಟಿ, ಬೆತ್ತ ಹೆಣಿಗೆ, ಚಿನ್ನಾಭರಣ ತಯಾರಿ, ಕಾಡುತ್ಪನ್ನಗಳ ಸಂಗ್ರಹ, ನೇಯ್ಗೆ ಮುಂತಾದ ಅನೇಕ ಸಣ್ಣ ಉದ್ಯಮಗಳು ಜಿಲ್ಲೆಯಲ್ಲಿ ವಿಪುಲ ಉದ್ಯೋಗಾವಕಾಶಗಳಿದ್ದುವು ಎನ್ನುವುದನ್ನು ಸೂಚಿಸುತ್ತವೆ. (೨೦ನೇ ಶತಮಾನದ ಮೊದಲ ದಶಕಗಳಲ್ಲಿ ಕಾರ್ಕಳ ತಾಲೂಕಿನ ಮಾಯಿಪ್ಪಾಡಿಯ ಕೆಲವೊಂದು ಶಾಲಾ ಶಿಕ್ಷಕರು ಹತ್ತಿಯಿಂದ ನೂಲು ತೆಗೆವ ಕೆಲಸವನ್ನು ಲೋಕಲ್‌ಬೋರ್ಡ್ ಶಾಲೆಯಲ್ಲಿ ಕಲಿಸುವ ಉದ್ದೇಶಕ್ಕಾಗಿ ಕಲಿತಿದ್ದರು. ಸಂಸ್ಕರಿಸಿದ ಹತ್ತಿಯನ್ನು ಅವರು ಹುಬ್ಬಳ್ಳಿಯಿಂದ ತರಿಸಿಕೊಂಡು ಬಳಿಕ ಸ್ಥಳೀಯ ನೇಕಾರರಿಗೆ ತಾವು ನೂತ ನೂಲನ್ನು ನೀಡುತ್ತಿದ್ದರಂತೆ.) ಉಡುಪಿಯಲ್ಲೂ ಅನೇಕ ಕೈಮಗ್ಗಗಳಿದ್ದು ಬಾಸೆಲ್ ಮಿಶನ್ನಿನ ಪ್ರವೇಶಾನಂತರ (ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದವರಿಗಾಗಿ ಅದು ನೀಡಿದ ತರಬೇತಿಯಲ್ಲಿ ನೇಯ್ಗೆಯೂ ಒಂದಾಗಿತ್ತು.) ಈ ಉದ್ಯಮವೂ ಬೆಳೆಯಿತು. ಜರ್ಮನಿಯಿಂದ ಬಾಸೆಲ್ ಮಿಶನ್ನಿನವರು ತರಿಸಿದ ಬಣ್ಣಗಳನ್ನು ಇಲ್ಲಿನ ನೂಲಿಗೆ ಬಳಸುವುದನ್ನು ಈ ಜಿಲ್ಲೆಯ ನೇಕಾರರು ಕಲಿತರು. ೧೯೩೫ರ ಸುಮಾರಿಗೆ ಉಡುಪಿಯಲ್ಲಿ ೪೭೧, ಕುಂದಾಪುರದಲ್ಲಿ ೫೩ ಹಾಗೂ  ಕಾರ್ಕಳದಲ್ಲಿ ೫೨ ಮಗ್ಗಗಳಿದ್ದುವು. ಉಡುಪಿ ತಾಲೂಕಿನಲ್ಲಿ ೫ ಮಗ್ಗಗಳಲ್ಲಿ ಕೃತಕ ರೇಶಿಮೆಯನ್ನು ನೇಯುತ್ತಿದ್ದರೆನ್ನಲಾಗಿದೆ. ಉಪ್ಪುಂದ, ಮರವಂತೆ, ಉಪ್ಪಿನಕುದ್ರು, ಕೋಣಿ, ತೋನ್ಸೆ, ಮಲ್ಪೆ ಮುಂತಾದೆಡೆ ಹುರುಹಗ್ಗದ ಉದ್ಯಮ ಬಹಳ ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿ ಈ ಜಿಲ್ಲೆಯಿಂದ ಮುಂಬೈ ಮತ್ತು ಮೈಸೂರಿಗೂ ಹುರಿಹಗ್ಗ ರಫ್ತಾಗುತ್ತಿತ್ತು. ಕಾಚು ಉತ್ಪಾದನೆ ಕುಂದಾಪುರ ತಾಲೂಕಿನ ಪ್ರಮುಖ ಸಣ್ಣ ಉದ್ಯಮವಾಗಿದ್ದರೆ, ಕಾರ್ಕಳದಲ್ಲಿ ಕಲ್ಲಿನ ಉದ್ಯಮ, ತೆಂಗಿನೆಣ್ಣೆ ತಯಾರಿ, ಬೆತ್ತ, ಬುಟ್ಟಿ, ಚಾಪೆಗಳ ಉದ್ಯಮ ಪ್ರಮುಖವಾಗಿತ್ತು. ಈ ಜಿಲ್ಲೆಯಲ್ಲಿ ತಯಾರಾದ ಹಂಚುಗಳು, ಕೊಲಂಬೊ, ಕೊಚ್ಚಿ, ಕಾಥೇವಾಡ, ಕರಾಚಿ, ಮುಂಬೈ, ಕೊಡಗು ಮತ್ತು ಮೈಸೂರುಗಳಿಗೆ ರಫ್ತಾಗುತ್ತಿದ್ದುವು. ಈ ಉದ್ಯಮದ ಬೆಳವಣಿಗೆಯಲ್ಲಿ ಬಾಸೆಲ್ ಮಿಶನ್ನಿನ ಕೊಡುಗೆ ಮಹತ್ವದಾಗಿತ್ತು. ಈ ಜಿಲ್ಲೆಯ ವಿವಿಧೆಡೆ ವಾರದ ಸಂತೆಗಳು ನಡೆಯುತ್ತಿದ್ದು ಆಗ ಸುತ್ತ ಮುತ್ತಣ ಪ್ರದೇಶಗಳ ಮಾರಾಟ ಭರದಿಂದ ನಡೆಯುತ್ತಿತ್ತು. ಇದರ ಜತೆಗೆ ಅನೇಕ ಧರ್ಮಕ್ಷೇತ್ರಗಳ ವರ್ಷಾವಧಿ ಜಾತ್ರೆಗಳೂ ಇಲ್ಲಿನ ಆರ್ಥಿಕ ಚಟುವಟಿಕೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದ್ದವು. ಉದಾ: ಕುಕ್ಕೆ ಸುಬ್ರಹ್ಮಣ್ಯ ಷಷ್ಠಿಯ ಸಂದರ್ಭದಲ್ಲಿ ಜಾನುವಾರು ಜಾತ್ರೆಗೆ ಕುಂದಾಪುರ ಹಾಗೂ ದಕ್ಷಿಣ ಮಾಗಣೆಗಳಿಂದಲೂ ಜಾನುವಾರುಗಳನ್ನು ಖರೀದಿಸಲು ಜನರು ಬರುತ್ತಿದ್ದರು. ೧೮೦೧ರಷ್ಟು ಹಿಂದೆಯೇ ದಶಂಬರದಲ್ಲಿ ನಡೆಯುವ ಈ ಜಾತ್ರೆಗೆ ಸುಮಾರು ೧೦,೦೦೦ ದಷ್ಟು ಜಾನುವಾರುಗಳನ್ನು ಮಾರಾಟಕ್ಕೆ ತಂದಿದ್ದರೆಂಬ ವರದಿ ದೊರೆಯುತ್ತದೆ. ಅಂತೆಯೇ ಧರ್ಮಸ್ಥಳದಲ್ಲಿ ನವೆಂಬರ್ ಕೊನೆಯಲ್ಲಿ, ದಶಂಬರ ಮೊದಲ ವಾರ ನಡೆಯುವ ಜಾತ್ರೆ, ಕಲ್ಯಾಣಪುರ ಇಗರ್ಜಿಯಲ್ಲಿ ನಡೆಯುವ ಸಾಂತ್‌ಮಾರಿ ಹಬ್ಬ – ಇವೆಲ್ಲ ಧಾರ್ಮಿಕ ಹಾಗೂ ವ್ಯಾಪಾರೀ ಮಹತ್ವವನ್ನು ಪಡೆದಿದ್ದುವು. ಎರಡು ವರ್ಷಗಳಿಗೊಮ್ಮೆ ನಡೆಯುವ ಉಡುಪಿ ಪರ್ಯಾಯಕ್ಕೆ ಸುಮಾರು ೧೨೦೦೦ ದಷ್ಟು ಜನರು ಬರುತ್ತಿದ್ದು, ಆ ಸಂದರ್ಭದಲ್ಲಿ ವಿಶೇಷವಾಗಿ ಜವುಳಿ ವ್ಯಾಪಾರ ನಡೆಯುತ್ತಿತ್ತು. ಕೊಲ್ಲೂರು ರಥೋತ್ಸವಕ್ಕೂ ಸುಮಾರು ೧೫೦೦೦ ದಷ್ಟು ಜನರು ಸೇರುತ್ತಿದ್ದರು. ಹಿರಿಯಡ್ಕ, ಸೂರಾಲು, ಕಾಂತಾವರ, ಬಾರ್ಕೂರುಗಳ ವಾರ್ಷಿಕ ರಥೋತ್ಸವಗಳು ಧಾರ್ಮಿಕ ಹಾಗೂ ವ್ಯಾಪಾರೀ ಮಹತ್ವವನ್ನು ಪಡೆದಿದ್ದುವು.

ಇಲ್ಲಿನ ಆರ್ಥಿಕ ಚಟುವಟಿಕೆಗಳಲ್ಲಿ ಕಂಪೆನಿ ಸರಕಾರದ ಆಡಳಿತ ಹಸ್ತಕ್ಷೇಪ ಅತ್ಯಂತ ಕನಿಷ್ಠದ್ದಾಗಿದ್ದು, ಸುಂಕದ ದರಗಳನ್ನು ಬದಲಾಯಿಸುವ ನಿರ್ಧಾರಗಳ ಹೊರತು, ಜನರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಜನಪರ ಯೋಜನೆಗಳ ಅನುಷ್ಠಾನವಾದದ್ದು ಕಡಿಮೆ ಎಂದೇ ಹೇಳಬಹುದು. ಬ್ರಿಟಿಷ್ ಆಡಳಿತದಲ್ಲಿ ಆರ್ಥಿಕರಂಗಕ್ಕೆ ಪ್ರಯೋಜನಕಾರಿಯಾದ ಕೆಲವು ಪ್ರಯತ್ನ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆದದ್ದು ಖಾಸಗಿ ಪ್ರಯತ್ನದಿಂದ ಎನ್ನುವುದು ಗಮನಾರ್ಹ. ಉಡುಪಿಯಲ್ಲಿ ೧೯೦೬ರಲ್ಲಿ ಆರಂಭವಾದ ದಿ. ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ ಲಿ. (ಮುಂದೆ ಕಾರ್ಪೊರೇಷನ್ ಬ್ಯಾಂಕ್ ಲಿ.), ೧೯೨೦ರಲ್ಲಿ ಆರಂಭವಾದ ಪಾಂಗಾಳ ನಾಯಕ್ ಬ್ಯಾಂಕ್ ಲಿ. (ಕ್ರಮೇಣ ಮುಚ್ಚುಗಡೆ.), ಅದೇ ವರ್ಷ ಆರಂಭವಾದ ಕೆನರಾ ಇಂಡಸ್ಟ್ರಿಯಲ್ ಎಂಡ್ ಬ್ಯಾಂಕಿಂಗ್ ಸಿಂಡಿಕೇಟ್ ಲಿ. (ಮುಂದಿ ಸಿಂಡಿಕೇಟ್ ಬ್ಯಾಂಕ್ ಲಿ.), ೧೯೩೨ರಲ್ಲಿ ಕುಂದಾಪುರದಲ್ಲಿ ಸ್ಥಾಪಿತವಾದ ಕುಂದಾಪುರ ಬ್ಯಾಂಕ್ ಲಿ. (ಕ್ರಮೇಣ ಮುಚ್ಚುಗಡೆ), ೧೯೩೩ರಲ್ಲಿ ಉಡುಪಿಯಲ್ಲಿ ಸ್ಥಾಪಿತವಾದ ತುಳುನಾಡು ಬ್ಯಾಂಕ್ ಎಂಡ್ ಸಪ್ಲೈ ಏಜೆನ್ಸಿ ಲಿ. (ಮುಚ್ಚುಗಡೆ), ೧೯೩೪ರಲ್ಲಿ ಕುಂದಾಪುರ ಎಗ್ರಿಕಲ್ಚರಲ್ ಎಂಡ್ ಇಂಡಸ್ಟ್ರಿಯಲ್ ಬ್ಯಾಂಕ್ (ಕ್ರಮೇಣ ಮುಚ್ಚುಗಡೆ), ೧೯೪೨ರಲ್ಲಿ ಮತ್ತು ೧೯೪೩ರಲ್ಲಿ ಅನುಕ್ರಮವಾಗಿ ಉಡುಪಿಯಲ್ಲಿ ಸ್ಥಾಪಿತವಾದ ಸದರ್ನ್ ಇಂಡಿಯಾ ಅಪೆಕ್ಸ್ ಬ್ಯಾಂಕ್ ಲಿ., ಮತ್ತು ಮಹಾರಾಷ್ಟ್ರ ಎಪೆಕ್ಸ್ ಬ್ಯಾಂಕ್ ಲಿ. (ಮುಂದೆ ಸಿಂಡಿಕೇಟ್ ಬ್ಯಾಂಕ್‌ನೊಂದಿಗೆ ವಿಲೀನ – ಇವೆಲ್ಲ ಬ್ರಿಟಿಷ್ ಆಳ್ವಿಕೆಯಲ್ಲಿ ಈ ಜಿಲ್ಲೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗಿ ಪ್ರಯತ್ನದಿಂದಾದ ಸಾಧನೆಗಳು” (ಸಂ. – ಮುರಳೀಧರ ಉಪಾಧ್ಯ ಹಿರಿಯಡಕ (೨೦೦೪), ‘ಸಂಭ್ರಮ’)

ವ್ಯಾಪಾರೀ ಮಹತ್ವದ ಮಹತ್ವದ ಜಾತ್ರೆಗಳಲ್ಲಿ ಹಿರಿಯಡ್ಕದ ಜಾತ್ರೆಯನ್ನು ಡಾ| ಮಾಲತಿ ಮೂರ್ತಿ ಇಲ್ಲಿ ಉಲ್ಲೇಖಿಸಿದ್ದಾರೆ. ನಾನು ನನ್ನ ಬಾಲ್ಯದ ದಿನಗಳಲ್ಲಿ ನೋಡಿದ ಹಿರಿಯಡಕದ ಹುಣ್ಣಿಮೆ (ಸಿರಿಜಾತ್ರೆ) ನೆನಪಾಗುತ್ತದೆ. ಹಿರಿಯಡ್ಕದ ಸಿರಿಜಾತ್ರೆಯ ಮನಃಶಾಸ್ತ್ರೀಯ ಮಹತ್ವವನ್ನು ಸಮಾಜಶಾಸ್ತ್ರಜ್ಞರು ಈಗಾಗಲೇ ಗುರುತಿಸಿದ್ದಾರೆ. ಸಿರಿಜಾತ್ರೆಯಂದು ಗೊರಬಿನ (ಕೊರಂಬು) ಜಾತ್ರೆಯೂ ನಡೆಯುತ್ತಿತ್ತು. ಎಲೆಯಿಂದ ತಯಾರಿಸಿದ ಗೊರಬು ಕೃಷಿಕಾರ್ಮಿಕರಿಗೆ, ಕಾರ್ಮಿಕರಿಗೆ, ಗೃಹಿಣಿಯರಿಗೆ ‘ತೆಂಕಣಗಾಳಿ’ಯು, ‘ಕೊಂಕಣಸೀಮೆ’ಗೆ ತರುವ ಜಡಿಮಳೆಯಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತಿತ್ತು. ಗೊರಬಿನ ತಯಾರಿ ಸಾವಿರಾರು ಬಡವರಿಗೆ ಉದ್ಯೋಗ ನೀಡುತ್ತಿತ್ತು.

ಹಿರಿಯಡ್ಕದ ಜಾತ್ರೆಗೆ ಹಳ್ಳಿಗಳಿಂದ ನೂರಾರು ಗೊರಬಿನ ಗಾಡಿಗಳು ಬಂದು ನಮ್ಮ ಮನೆಯ ಮುಂದೆ ಸಾಲಾಗಿ ನಿಲ್ಲುತ್ತಿದ್ದುವು. ಆ ಗೊರಬುಗಳನ್ನು ಕೊಳ್ಳಲು ಜಿಲ್ಲೆಯ ಬೇರೆ ಬೇರೆ ಊರುಗಳಿಂದ ವ್ಯಾಪಾರಿಗಳು ಬರುತ್ತಿದ್ದರು. ಸಿರಿ ಜಾತ್ರೆಯ ದೈವಗಳ ಆವೇಶ ನೋಡಿ ಭಯಪಡುತ್ತಿದ್ದ ನಾವು ‘ಈ ವರ್ಷ ಜಾತ್ರೆಗೆ ಎಷ್ಟು ಗೊರವಿನ ಗಾಡಿ ಬಂದಿದೆ?’ ಎಂದು ಲೆಕ್ಕ ಹಾಕುತ್ತಿದ್ದೆವು. ಗೊರಬಿನ ವ್ಯಾಪಾರಿಗಳಂತ ಸಣ್ಣ ಪುಟ್ಟ ವರ್ತಕರ ಹಿತೈಷಿಯಾಗಿ ಕಾರ್ಪೊರೇಶನ್ ಬ್ಯಾಂಕ್‌ನಂಥ ಬ್ಯಾಂಕುಗಳು ಬೆಳೆದುವು.

ಹಾಜಿ, ಅಬ್ದುಲ್ಲಾ ಸಾಹೇಬರು ಕವಿ ಮುದ್ದಣನಿಗಿಂತ ಹನ್ನೆರಡು ವರ್ಷ ಕಿರಿಯರು. ಕತೆಗಾರ, ನಾಟಕಕಾರ ಎಂ.ಎನ್. ಕಾಮತರು (ಮಂಡ್ಕೂರು ನರಸಿಂಗ ಕಾಮತರು) ಹಾಜಿ ಅಬ್ದುಲ್ಲಾ ಸಾಹೇಬರಿಗಿಂತ ಒಂದು ವರ್ಷ ಕಿರಿಯರು. ಹಾಜಿ ಅಬ್ದುಲ್ಲಾ ಸಾಹೇಬರು ಉಡುಪಿಯ ಕತೆಗಾರ ಕೊರಡ್ಕಲ್ ಶ್ರೀನಿವಾಸ ರಾಯರಿಗಿಂತ ಮೂರು ವರ್ಷ, ಉಡುಪಿಯ ಸ್ವಾತಂತ್ರ್ಯ ಹೋರಾಟಗಾರ ಎಸ್.ಯು. ಪಣಿಯಾಡಿಯವರಿಂದ ಹದಿನೈದು ವರ್ಷ, ಡಾ| ಟಿ.ಎಂ. ಎ. ಪೈ. ಅವರಿಗಿಂತ ಹದಿನಾಲ್ಕು ವರ್ಷ, ಡಾ| ಶಿವರಾಮ ಕಾರಂತರಿಗಿಂತ ಇಪ್ಪತ್ತು ವರ್ಷ ಹಿರಿಯರು.

* * *