ಇದೀಗ ಶತಮಾನೋತ್ಸವದ ಸಂಭ್ರದಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ ಜನ್ಮ ತಾಳಿದ್ದು ೭,೦೦೦ ಕ್ಕಿಂತಲೂ ಕಡಿಮೆ ಜನಸಂಖ್ಯೆಯಿದ್ದ ಉಡುಪಿ ಎಂಬ ಸಣ್ಣ ಊರಿನಲ್ಲಿ ಆಗ ಅದು ಸೌತ್‌ಕೆನರಾ ಜಿಲ್ಲೆಗೆ ಸೇರಿತ್ತು. ರಾಜ್ಯದಲ್ಲಿ ಹುಟ್ಟಿದ ೭೫ ಬ್ಯಾಂಕುಗಳಲ್ಲಿ ೨೨ ಬ್ಯಾಂಕುಗಳು ಆಗಿನ ಸೌತ್ ಕೆನರಾ ಜಿಲ್ಲೆಯಲ್ಲಿ ಜನ್ಮ ತಾಳಿದವು. ಹೀಗಾಗಿ ಸೌತ್ ಕೆನರಾ ಜಿಲ್ಲೆಯನ್ನು ‘ಬ್ಯಾಂಕುಗಳ ತೊಟ್ಟಿಲು’ ಎಂದು ವರ್ಣಿಸುತ್ತಾರೆ. ಡಾ. ನವೀನಚಂದ್ರ ತಿಂಗಳಾಯರು ‘ದಕ್ಷಿಣ ಕನ್ನಡದ ಬ್ಯಾಂಕುಗಳು’ ಎಂಬ ಲೇಖನದಲ್ಲಿ ಹೀಗೆ ಬರೆದಿದ್ದಾರೆ: ‘ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಬ್ಯಾಂಕುಗಳಿಗೆ ಜನ್ಮ ವಿತ್ತ ಮೂರು ಜಿಲ್ಲೆಗಳೆಂದರೆ ತಮಿಳುನಾಡಿನ ಕೊಯಮತ್ತೂರು, ಕೇರಳದ ತ್ರಿಚೂರು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಕೊಯಮೂತ್ತೂರಿನಲ್ಲಿ ಸುಮಾರು ೩೮ ಬ್ಯಾಂಕುಗಳು ಹುಟ್ಟಿದ್ದವು. ಇವುಗಳಲ್ಲಿ ಹೆಚ್ಚಿನವು ‘ಪರೋಪಕಾರಿ ನಿಧಿಗಳು’. ಇಷ್ಟು ಬ್ಯಾಂಕುಗಳಲ್ಲಿ ಈಗ ಒಂದೇ ಒಂದು ಬ್ಯಾಂಕೂ ಉಳಿದಿಲ್ಲ. ತ್ರಿಚೂರು ಜಿಲ್ಲೆಯಲ್ಲಿ ೩೭ ಬ್ಯಾಂಕುಗಳು ತಲೆ ಎತ್ತಿದುವು. ಇವುಗಳಲ್ಲಿ ಇಂದಿನ ತನಕ ಬಾಳಿ ಬದುಕಿದವು ಕೇವಲ ನಾಲ್ಕು ಬ್ಯಾಂಕುಗಳು. ಆದರೆ ದಕ್ಷಿಣ ಕನ್ನಡದ ಬಸಿರಿನಿಂದ ಬಂದ ೨೨ ಬ್ಯಾಂಕುಗಳಲ್ಲಿ ಐದು ಬ್ಯಾಂಕುಗಳು ಪಂಚ ಪಾಂಡವರಂತೆ ಜಯಶೀಲವಾಗಿವೆ.” ಆ ಐದು ಬ್ಯಾಂಕುಗಳೆಂದರೆ ಕಾರ್ಪೊರೇಶನ್ ಬ್ಯಾಂಕ್, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್. ಇವುಗಳಲ್ಲಿ ೧೨ ಮಾರ್ಚ್ ೧೯೦೬ರಂದು ಉಡುಪಿಯಲ್ಲಿ ಹುಟ್ಟಿದ ಕಾರ್ಪೊರೇಶನ್ ಬ್ಯಾಂಕ್ ಅತ್ಯಂತ ಹಳೆಯದು.

ಬ್ಯಾಂಕಿನ ಸ್ಥಾಪಕಾಧ್ಯಕ್ಷರಾದ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹಾದ್ದೂರ್ ಹಾಗೂ ಅವರ ಸಂಗಡಿಗರು ಉಡುಪಿಯಂಥ ಪುಟ್ಟ ಊರಿನಲ್ಲಿ ಬ್ಯಾಂಕ್ ಸ್ಥಾಪಿಸಲು ನಿರ್ಧರಿಸಿದ್ದು ಏಕೆ? ಎಂಬ ಪ್ರಶ್ನೆ ಏಳುವುದು ಸಹಜ. ಬ್ಯಾಂಕ್ ಒಂದನ್ನು ಆರಂಭಿಸುವ ನಿರ್ಧಾರವನ್ನು ಯಾರೇ ಆಗಲಿ ಇದ್ದಕ್ಕಿದ್ದಂತೆ ಕೈಗೊಳ್ಳುವುದಿಲ್ಲ. ಅದರ ಹಿಂದೆ ಬಲವಾದ ಪ್ರೇರಣೆಗಳು ಇದ್ದಿರಲೇಬೇಕು. ಅವು ಯಾವುವು? ಎಂಬುದನ್ನು ತಿಳಿದುಕೊಳ್ಳಲು ೧೯೦೬ರ ಸೌತ್‌ಕೆನರಾ ಜಿಲ್ಲೆಯ ಭೌಗೋಳಿಕ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅಭ್ಯಾಸ ಮಾಡಬೇಕಾಗುತ್ತದೆ.

ಈಗ ಉಡುಪಿಯಿಂದ ಮಂಗಳೂರಿಗೆ ಒಂದೇ ಗಂಟೆಯಲ್ಲಿ ತಲುಪಬಹುದು. ಐದು ನಿಮಿಷಕ್ಕೊಂದರಂತೆ ಬಸ್ಸುಗಳು ಓಡಾಡುತ್ತವೆ. ರೈಲು ಸಂಪರ್ಕವೂ ಇದೆ. ಆದರೆ ಆ ಕಾಲದಲ್ಲಿ ಉಡುಪಿಯಿಂದ ಮಂಗಳೂರಿಗೆ ಹೋಗಲು ನಾಲ್ಕು ಹೊಳೆಗಳನ್ನು ದೋಣಿಯಲ್ಲಿ ದಾಟಬೇಕಿತ್ತು. ಕರಾವಳಿಯ ಸುಧೀರ್ಘ ಮಳೆಗಾಲದ ದಿನಗಳಲ್ಲಿ ದೋಣಿಯಲ್ಲಿ ಹೊಳೆ ದಾಟುವ ಕಷ್ಟ ಏನೆಂಬುದು ಪ್ರಯಾಣಿಸಿದವರಿಗಷ್ಟೆ ಗೊತ್ತು. ಆದರೂ ಬ್ಯಾಂಕ್ ಸೌಲಭ್ಯ ಬೇಕಾಗಿದ್ದರೆ ಉಡುಪಿಯ ವ್ಯವಹಾರಸ್ಥರು ಮಂಗಳೂರಿಗೆ ಹೋಗಬೇಕಾಗಿತ್ತು. ಇಲ್ಲದಿದ್ದರೆ ೧೫ ದಿನಗಳಿಗೊಮ್ಮೆ ಮಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಬ್ಯಾಂಕ್ ಆಫ್ ಮದರಾಸ್‌ನ ಏಜಂಟರ ಹಾದಿ ಕಾಯಬೇಕಿತ್ತು.

೧೮೬೮ರಲ್ಲಿ ಮಂಗಳೂರಿನಲ್ಲಿ ಆರಂಭವಾಗಿದ್ದ ಬ್ಯಾಂಕ್ ಆಫ್ ಮದರಾಸ್‌ನ ಶಾಖೆಯೊಂದನ್ನು ಬಿಟ್ಟರೆ ಆಗ ಬರೇ ಸೌತ್ ಕೆನರಾ ಜಿಲ್ಲೆಯಲ್ಲಿ ಬೇರಾವುದೇ ಬ್ಯಾಂಕುಗಳಿರಲಿಲ್ಲ. ಬ್ಯಾಂಕ್ ಆಫ್ ಮದರಾಸ್ ದೊಡ್ಡ ಮಟ್ಟದ ಆಂಗ್ಲ ವ್ಯವಹಾರಸ್ಥರಿಗಷ್ಟೇ ಸೂಕ್ತವಾಗಿತ್ತು. ಅದು ವಿಧಿಸುತ್ತಿದ್ದ ಬಡ್ಡಿದರ ಸಾಮಾನ್ಯರಿಗೆ ಭರಿಸಲು ಸಾಧ್ಯವಾಗುತ್ತಿರಲಿಲ್ಲ. ಬ್ಯಾಂಕ್ ಆಫ್ ಮದ್ರಾಸ್ ದೊಡ್ಡ  ಪ್ರಮಾಣದಲ್ಲಿ ಮಾತ್ರ ಸಾಲ ನೀಡುತ್ತಿದ್ದುದರಿಂದ ಸಣ್ಣ ಪುಟ್ಟ ವ್ಯಾಪರ ಮಾಡುತ್ತಿದ್ದವರು ಖಾಸಗಿಯಾಗಿ ಸಾಲ ನೀಡುತ್ತಿದ್ದ ಶ್ರೀಮಂತ ಲೇವಾದೇವಿದಾರರ ಕಪಿಮುಷ್ಠಿಯಲ್ಲಿ ಸಿಲುಕಿಕೊಳ್ಳುವುದು ಅನಿವಾರ್ಯವಾಗಿತ್ತು. ಜಿಲ್ಲೆಯಲ್ಲಿ ಗೇರು ಕಾರ್ಖಾನೆ, ಹಂಚು ತಯಾರಿ, ಕಾಫಿ ಸಂಸ್ಕರಣೆ, ತೆಂಗು, ಅಡಿಕೆ, ಒಣ ಮೀನು ವ್ಯಾಪಾರ ಮುಂತಾದ ವಾಣಿಜ್ಯ ವ್ಯವಹಾರಗಳಿಗೆ ಉತ್ತಮ ಅವಕಾಶವಿತ್ತು. ಆದರೆ ಅವುಗಳನ್ನು ನಡೆಸಲು ಯೋಗ್ಯ ಬಡ್ಡಿದರದಲ್ಲಿ ಸಾಲ ಹಾಗೂ ಇನ್ನಿತರ ಬ್ಯಾಂಕಿಂಗ್ ಸೌಲಭ್ಯ ನೀಡುವ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಉಡುಪಿಯಲ್ಲಿ ನಮ್ಮದೇ ಆದ ಒಂದು ಒಳ್ಳೆಯ ಬ್ಯಾಂಕ್ ಇರಬೇಕೆಂದು ಕೆಲವು ಸ್ಥಳೀಯ ವರ್ತಕರು ಯೋಚಿಸುತ್ತಿದ್ದರು.

ಆಗ ಬಾಲಗಂಗಾಧರ ತಿಲಕರ ಸ್ವದೇಶಿ ಆಂದೋಲನ ಮಹಾರಾಷ್ಟ್ರದಲ್ಲಿ ಜನಪ್ರಿಯವಾಗಿ ಅದರ ಪ್ರಭಾವ ಕರಾವಳಿ ಜಿಲ್ಲೆಯಲ್ಲೂ ವ್ಯಾಪಿಸುತ್ತಿತ್ತು. ಆಂಗ್ಲ ವ್ಯವಹಾರಸ್ಥರಿಗಾಗಿದ್ದ ಈಸ್ಟ್ ಇಂಡಿಯಾ ಕಂಪೆನಿಯಾ ‘ಬ್ಯಾಂಕ್ ಆಫ್ ಮದರಾಸ್’ ಅನ್ನು ಬಿಟ್ಟು ಬೇರೊಂದು ಬ್ಯಾಂಕ್ ಸ್ಥಾಪಿಸಿಕೊಳ್ಳಲು ತಿಲಕರ ಸ್ವದೇಶಿ ಮಂತ್ರವೂ ಹಾಜಿ ಅಬ್ದುಲ್ಲಾ ಹಾಗೂ ಅವರ ಸಂಗಡಿಗರಿಗೆ ಪ್ರೇರಣೆ ನೀಡಿತು. ೧೯೦೬ ಫೆಬ್ರವರಿ ೧೯ರಂದು ಅಬ್ದುಲ್ಲಾ ಎಚ್. ಕಾಸಿಂ ಎಂಬ ಹೆಸರಿನಲ್ಲಿ ಹಾಜಿ ಅಬ್ದುಲ್ಲಾ ಅವರು ನೀಡಿದ ಸಾರ್ವಜನಿಕ ಪ್ರಕಟಣೆಯಲ್ಲ – “ಕಾರ್ಪೊರೇಶನ್ನಿನ ಪ್ರಾಥಮಿಕ ಉದ್ದೇಶ ಜಾತಿ ಮತದ ಭೇದವಿಲ್ಲದೆ ಎಲ್ಲಾ ವರ್ಗದ ಜನರಲ್ಲಿ ಉಳಿತಾಯದ ಅಭ್ಯಾಸವನ್ನು ಬೆಳೆಸುವುದು. ಇದ್ದು ಶುದ್ವಾದ ಮತ್ತು ಸರಳವಾದ ‘ಸ್ವದೇಶಿ ತತ್ವ”. ಪ್ರತಿಯೊಬ್ಬ ದೇಶಪ್ರೇಮಿಯೂ ಈ ಉದ್ದೇಶವನ್ನು ಈಡೇರಿಸಲು ಮುಂದೆ ಬಂದು ಸಹಕರಿಸುವರೆಂದು ನಿರೀಕ್ಷಿಸಲಾಗಿದೆ” ಎಂದು ಹೇಳಿರುವುದನ್ನು ಗಮನಿಸಿದಾಗ ಬ್ಯಾಂಕಿನ ಸ್ಥಾಪನೆಯ ಹಿಂದೆ ಸ್ವದೇಶಿ ಚಳವಳಿಯ ಪ್ರಭಾವವೂ ಇತ್ತೆಂಬುದು ಸ್ಪಷ್ಟವಾಗುತ್ತದೆ.

೧೯೦೬ ಫೆಬ್ರವರಿ ೧೧ ಹಾಗೂ ೧೮ರಂದು ಅಂದಿನ ಉಡುಪಿಯ ಪುರ ಪ್ರಮುಖರ ನಡೆಸಿದ ಸಭೆಯಲ್ಲಿ ‘ದಿ ಕೆನರಾ ಬ್ಯಾಕಿಂಗ್ ಕಾರ್ಪೊರೇಶನ್ (ಉಡಿಪಿ) ಲಿಮಿಟೆಡ್’ ಎಂಬ ಹೆಸರಿನಲ್ಲಿ ಸಂಸ್ಥೆಯೊಂದನ್ನು ಸ್ಥಾಪಿಸಲು ನಿರ್ಧರಿಸಿದ್ದಾಗಿ ಅದೇ ಪ್ರಕಟಣೆ ಯಲ್ಲಿ ತಿಳಿಸಲಾಗಿತ್ತು. ಆಗ ಪ್ರಚಲಿತವಾಗಿದ್ದ ನಿಧಿ ಮಾದರಿಯಲ್ಲಿ ಆರಂಭವಾದ ‘ದಿ ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್(ಉಡಿಪಿ) ಲಿಮಿಟೆಡ್ ಎಂಬ ಸಂಸ್ಥೆ ಮುಂದೆ ಕಾರ್ಪೊರೇಶನ್ ಬ್ಯಾಂಕ್ ಎಂಬ ಹೆಸರಿನಲ್ಲಿ ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದೆನಿಸಿಕೊಳ್ಳುತ್ತವೆ ಎಂದು ಯಾರೂ ಊಹಿಸಿರಲಾರರು. ಬ್ಯಾಂಕಿನ ಮೊದಲ ಶೇರುದಾರರು ಹಾಜಿ ಅಬ್ದುಲ್ಲಾ ಅವರೇ. ಮೊದಲ ಠೇವಣಿಯಾಗಿ ಬ್ಯಾಂಕಿನ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಶ್ರೀ ಬಿ. ನಾರಾಯಣರಾಯರು ೧೩.೧೦.೧೯೦೬ ರಂದು ರೂ. ೧೦೦ನ್ನು ನೀಡಿದರೆ, ೫ ಎಪ್ರಿಲ್ ೧೯೦೬ ರಂದು ರೂ. ೧೦೦ ಸಾಲ ಪಡೆಯುವ ಮೂಲಕ ಜನಾಬ್ ಶಿದ್ದಿ ಬಾಪು ಸಾಹೇಬ್ ಅನ್ನುವವರು ಕಾರ್ಪೊರೇಶನ್ ಬ್ಯಾಂಕಿನ ಪ್ರಥಮ ಸಾಲಗಾರರಾಗಿ ಇತಿಹಾಸದಲ್ಲಿ ದಾಖಲಾಗಿದ್ದಾರೆ.

ಜಾತಿ ವ್ಯವಸ್ಥೆ ಪ್ರಬಲವಾಗಿದ್ದ ಅಂದಿನ ದಿನಗಳಲ್ಲಿ ಬ್ಯಾಂಕನ್ನು ಹುಟ್ಟು ಹಾಕಿದ ೧೨ ಮಂದಿ ನಿರ್ದೇಶಕರಲ್ಲಿ ಅಧ್ಯಕ್ಷರೂ ಸೇರಿದಂತೆ ಇಬ್ಬರು ಮುಸ್ಲಿಮರಾಗಿದ್ದರೆ ಉಳಿದ ೧೦ ಮಂದಿ ಹಿಂದುಗಳಾಗಿದ್ದರು. ಆರಂಭದಿಂದಲೆ ಈ ರೀತಿಯಾದ ‘ಕಾಸ್ಮೋಪಾಲಿಟನ್ ಸ್ವರೂಪವನ್ನು ಪಡೆದುಕೊಂಡದ್ದು ಕಾರ್ಪೊರೇಶನ್ ಬ್ಯಾಂಕಿನ ವೈಶಿಷ್ಟ್ಯ ಅನ್ನಬಹುದು. ಬ್ಯಾಂಕಿನ ಬೆಳ್ಳಿಹಬ್ಬದ ಸ್ಮರಣ ಸಂಖ್ಯೆಯಲ್ಲಿ ೧೯೦೮ರಲ್ಲಿ ಬ್ಯಾಂಕಿನ ಶೇರುದಾರರಲ್ಲಿ ಯಾವ ಯಾವ ಜಾತಿಯವರು ಎಷ್ಟು ಶೇರು ಹೊಂದಿದ್ದರು ಎಂಬ ಪಟ್ಟಿ ಪ್ರಕಟವಾಗಿದ್ದು, ಅದನ್ನು ನೋಡಿದರೆ ಪ್ರಾರಂಭದಿಂದಲೂ ಬ್ಯಾಂಕು ಜಾತಿ, ಮತ ಎಂಬ ಭೇದ ಭಾವ ತೋರದೆ ಸರ್ವರಿಗೂ ಮುಕ್ತವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.

‘ಹನಿಗೂಡಿ ಹಳ್ಳ – ತೆಗೆಗೂಡಿ ಕಣಜ’ ಎಂಬ ಗಾದೆ ಮಾತು ಕಾರ್ಪೊರೇಶನ್ ಬ್ಯಾಂಕಿಗೆ ಚೆನ್ನಾಗಿ ಒಪ್ಪುತ್ತದೆ. ೧೯೦೬ರಲ್ಲಿ ಬ್ಯಾಂಕು ಆರಂಭವಾದಾಗ ಇದ್ದ ಬಂಡವಾಳ ರೂ. ೫೦೦೦/- ಮೊದಲ ದಿನದ ಅಂತ್ಯದಲ್ಲಿ ಬ್ಯಾಂಕಿನ ಸಂಪನ್ಮೂಲ ೩೮ ರೂಪಾಯಿ ೧೩ ಆಣೆ ಮತ್ತು ಎರಡು ಪೈ ಹೀಗೆ ಆರಂಭವಾದ ‘ದಿ ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್(ಉಡುಪಿ) ಲಿಮಿಟೆಡ್ ಎಂಬ ಸಂಸ್ಥೆ ಈಗ ಅಂದರೆ ೩೧.೧೨.೨೦೦೫ರಲ್ಲಿ ಕಾರ್ಪೊರೇಶನ್ ಬ್ಯಾಂಕ್ ಎಂಬ ಹೆಸರಿನಲ್ಲಿ ೫೧,೬೭೬ ಕೋಟಿ ರೂಪಾಯಿಗಳ ಒಟ್ಟು ವ್ಯವಹಾರವನ್ನು ನಡೆಸುತ್ತಿದೆ. ದೇಶದಾದ್ಯಂತ ೮೦೨ ಶಾಖೆಗಳು, ೭೭ ವಿಸ್ತರಣಾ ಕೌಂಟರ್‌ಗಳು ಹಾಗೂ ೮೩೭ ಎ.ಟಿ.ಎಂ. ಗಳನ್ನು ಹೊಂದಿದೆ. ೧೧,೦೦೦ಕ್ಕೂ ಹೆಚ್ಚು ಉದ್ಯೋಗಿಗಳು ಇಂದು ಕಾರ್ಪೊರೇಶನ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರೆಲ್ಲರೂ ನೂರು ವರ್ಷಗಳ ಹಿಂದೆ ಬ್ಯಾಂಕನ್ನು ಸ್ಥಾಪಿಸಿದ ಹಾಜಿ ಅಬ್ದುಲ್ಲಾ ಹಾಗೂ ಅವರ ಸಂಗಡಿಗರನ್ನು ಕೃತಜ್ಞತೆಯಿಂದ ಹಾಗೂ ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಿದ್ದಾರೆ.

ಬ್ಯಾಂಕು ಈ ಎತ್ತರವನ್ನು ಮುಟ್ಟಲು ಸಾಗಿ ಬಂದ ಹಾದಿಯಲ್ಲಿ ಹೂವಿನ ಹಾಸಿಗೆ ಹಾಸಿರಲಿಲ್ಲ. ಅದು ಕಲ್ಲು ಮುಳ್ಳುಗಳಿಂದ ಕೂಡಿದ ದಾರಿಯಾಗಿತ್ತು. ನೂರು ವರ್ಷಗಳ ಬ್ಯಾಂಕಿನ ಇತಿಹಾಸ ಅತ್ಯಂತ ರೋಚಕವಾಗಿದೆ. ಬ್ಯಾಂಕಿನ ಬೀಜ ಬಿತ್ತಿ, ನೀರೆರೆದು ಪೋಷಿಸಿ ಅದನ್ನು ಈ ಹಂತಕ್ಕೆ ಬೆಳೆಸಿದವರ ಪಟ್ಟಿ ಸಾಕಷ್ಟು ದೊಡ್ಡದು. ಬಹಳಷ್ಟು ಜನರ ಕೊಡುಗೆ ಇತಿಹಾಸದಲ್ಲಿ ದಾಖಲಾಗದೆ ಹೋಗಿರಬಹುದು. ಸ್ಥಾಪಕಾಧ್ಯಕ್ಷರಾದ ಹಾಜಿ ಅಬ್ದುಲ್ಲಾ ಅವರು ಕೊಡುಗೈ ದಾನಿಗಳಾಗಿದ್ದು ಅತ್ಯಂತ ಜನಪ್ರಿಯರಾಗಿದ್ದರು. ಜೀವಿತ ಕಾಲದಲ್ಲೇ ಅವರು ದಂತಕಥೆಯಾಗಿದ್ದರು. ಅವರ ವ್ಯಕ್ತಿತ್ವದ ವರ್ಚಸ್ಸು ಆರಂಭದ ದಿನಗಳಲ್ಲಿ ಬ್ಯಾಂಕಿನ ಬೆಳವಣಿಗೆಗೆ ನೆರವಾಯಿತು. ತಮ್ಮ ಮನೆಯ ಒಂದು ಕೋಣೆಯನ್ನು ಬ್ಯಾಂಕಿನ ಕಚೇರಿಗೆಂದು ಬಿಟ್ಟುಕೊಟ್ಟಿದ್ದ ಹಾಜಿ ಅಬ್ದುಲ್ಲಾ ಅವರು ೧೯೦೬ರಿಂದ ೧೯೨೯ರವರೆಗೆ ಬ್ಯಾಂಕಿನ ಅಧ್ಯಕ್ಷರಾಗಿ ಮಾರ್ಗದರ್ಶನ ನೀಡಿದರು.

ಎರಡು ಮಹಾಯುದ್ಧಗಳು, ಬರಗಾಲ, ಆರ್ಥಿಕ ಕುಸಿತ, ತೀವ್ರವಾದ ಸ್ಪರ್ಧೆ ಮುಂತಾದ ಸವಾಲುಗಳನ್ನು ಎದುರಿಸಲಾಗದೆ ಕಾರ್ಪೊರೇಶನ್ ಬ್ಯಾಂಕಿನ ನಂತರ ಆರಂಭವಾದ ಅದೆಷ್ಟೋ ಬ್ಯಾಂಕುಗಳು, ಸಹಕಾರ ಸಂಘಗಳು ದಿವಾಳಿಯಾದವು. ಕೆಲವು ಬ್ಯಾಂಕುಗಳು ಇತರ ಬ್ಯಾಂಕುಗಳ ಜೊತೆಗೆ ವಿಲೀನಗೊಂಡವು. ಆದರೆ ಕಾರ್ಪೊರೇಶನ್ ಬ್ಯಾಂಕ್ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಾ ನಡೆದದ್ದರಿಂದ ಎಂದೂ ಎಡವಲಿಲ್ಲ. ಆರಂಭದ ದಿನಗಳಲ್ಲಿ ಬ್ಯಾಂಕಿನ ಧೋರಣೆ ತುಂಬಾ ‘ಕನ್ಸರ್ವೇಟಿವ್’ ಅನ್ನಿಸಿದರೂ ಅಂದಿನ ಪರಿಸ್ಥಿತಿಯಲ್ಲಿ ಅದು ಅನಿವಾರ್ಯವಾಗಿತ್ತು. ಅದರಿಂದಾಗಿಯೇ ಕಳೆದ ೧೦೦ ವರ್ಷಗಳಲ್ಲಿ ಸತತವಾಗಿ ಲಾಭ ಗಳಿಸಿದ ಬ್ಯಾಂಕ್ ಎಂಬ ಹೆಗ್ಗಳಿಕೆ ಕಾರ್ಪೊರೇಶನ್ ಬ್ಯಾಂಕಿಗೆ ಪ್ರಾಪ್ತವಾಗಿದೆ.

ಕಾರ್ಪೊರೇಶನ್ ಬ್ಯಾಂಕ್ ೧೯೦೬ರಲ್ಲಿ ಸ್ಥಾಪನೆಗೊಂಡರೂ ಅದರ ಮೊದಲ ಶಾಖೆ ಆರಂಭವಾದದ್ದು ೧೯೨೩ರಲ್ಲಿ. ಜಿಲ್ಲೆಯ ಪ್ರಮುಖ ವ್ಯವಹಾರ ಕೇಂದ್ರಗಳಲ್ಲಿ ಒಂದಾಗಿದ್ದ ಕುಂದಾಪುರದಲ್ಲಿ ೧೮.೫.೨೩ ರಂದು ಶಾಖೆಯನ್ನು ಆರಂಭಿಸುವ ಮೂಲಕ. ಅಂದಿನ ಸೌತ್‌ಕೆನರಾ ಜಿಲ್ಲೆಯಲ್ಲಿ ಬ್ಯಾಂಕೊಂದು ತನ್ನ ಶಾಖೆಯನ್ನು ತೆರೆದದ್ದು ಅದೇ ಪ್ರಥಮ.

ಮೊದಲ ದಶಕದಲ್ಲಿ ಬ್ಯಾಂಕಿನ ಪ್ರಗತಿ ಅತ್ಯಂತ ನಿಧಾನ ಗತಿಯಲ್ಲಿತ್ತು. ಆರಂಭದ ‘ನಿಧಿ’ ಮಾದರಿಯಲ್ಲಿ ಸಮಸ್ಯೆಗಳು ಕಾಣಿಸಿಕೊಂಡವು. ಹೀಗಾಗಿ ಸಂಸ್ಥೆಯ ನಿಯಮಾವಳಿಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿ ಬಂಡವಾಳವನ್ನು ಹೆಚ್ಚಿಸುವ ಅಗತ್ಯ ತಲೆದೋರಿತು. ಆಗ ಬ್ಯಾಂಕಿನ ಸ್ಥಾಪಕ ನಿರ್ದೇಶಕರುಗಳಾಗಿದ್ದ ಸುಜೀರ್ ಆನಂದರಾವ್ ಮತ್ತು ಬೈಂದೂರು ನಾರಾಯಣರಾವ್ ಎನ್ನುವವರು ಬ್ಯಾಂಕಿನ ಬಂಡವಾಳವನ್ನು ಏರಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ಜಿಲ್ಲೆಯಾದ್ಯಂತ ಓಡಾಡಿ ಬ್ಯಾಂಕಿಗೆ ಶೇರು ಬಂಡವಾಳವನ್ನು ಸಂಗ್ರಹಿಸಿದರು. ಅವರು ಪಟ್ಟ ಶ್ರಮದಿಂದಾಗಿ ಬ್ಯಾಂಕಿನ ಶೇರು ಬಂಡವಾಳ ೧೫ ಜೂನ್ ೧೯೧೭ ರಂದು ರೂ. ೧೬, ೭೧೫ ಕ್ಕೆ ಏರಿತು. ೧೯೩೦ರಲ್ಲಿ ಬ್ಯಾಂಕು ಬೆಳ್ಳಿಹಬ್ಬವನ್ನು ಆಚರಿಸುವಾಗ ಬಂಡವಾಳ ರೂ. ೨,೨೫,೦೦೦ ಆಗಿತ್ತು.

೧೪ ನವೆಂಬರ್ ೧೯೩೪ ರಂದು ‘ದಿ ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ ಮರ್ಕೆರಾ(ಇಂದಿನ ಮಡಿಕೇರಿ) ದಲ್ಲಿ ತನ್ನ ಶಾಖೆಯನ್ನು ತೆರೆದದ್ದು ಕೂಡಾ ಐತಿಹಾಸಿಕವಾಗಿ ಮಹತ್ವದ ಸಂಗತಿಯಾಗಿದೆ. ಅಲ್ಲಿಯವರೆಗೆ ಕೂರ್ಗ್ (ಇಂದಿನ ಕೊಡಗು) ಜಿಲ್ಲೆಯಲ್ಲಿ ಸಾಕಷ್ಟು ಶ್ರೀಮಂತ ಕಾಫಿ ಬೆಳೆಗಾರರು ಇದ್ದಿದ್ದರೂ, ಬ್ಯಾಂಕಿಂಗ್ ಸೌಲಭ್ಯ ಇರಲಿಲ್ಲ. ಅದಕ್ಕಾಗಿ ವರು ಮಂಗಳೂರು, ಮೈಸೂರು ಅಥವಾ ಬೆಂಗಳೂರಿಗೆ ಹೋಗಬೇಕಾಗಿತ್ತು. ಮಲೇರಿಯಾ ಕಾಯಿಲೆಯ ಭೀತಿಯಿಂದಾಗಿ ಅಲ್ಲಿಗೆ ಕಾಲಿಡಲು ಪರವೂರಿನವರು ಅಂಜುತ್ತಿದ್ದರು. ಆದರೆ ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ ಮರ್ಕೆರಾದಲ್ಲಿ ಶಾಖೆಯನ್ನು ತೆರೆಯುವ ಮೂಲಕ ಕೂರ್ಗ್ ಜಿಲ್ಲೆಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸಿದ ಮೊದಲ ಬ್ಯಾಂಕ್ ಎಂಬ ಕೀರ್ತಿಗೆ ಪಾತ್ರವಾಯಿತು.

‘ದಿ ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ (ಉಡಿಪಿ) ಲಿಮಿಟೆಡ್’ ಎಂಬ ಹೆಸರಿನಲ್ಲಿ ಪ್ರಾರಂಭವಾದ ಸಂಸ್ಥೆಯ ಹೆಸರು ‘ಕಾರ್ಪೊರೇಶನ್ ಬ್ಯಾಂಕ್’ ಎಂದು ಬದಲಾದ ವೃತ್ತಾಂತವೂ ಸ್ವಾರಸ್ಯಕರವಾಗಿದೆ. ಆಗಿನ ಸೌತ್ ಕೆನರಾ ಜಿಲ್ಲೆಯಲ್ಲಿ ಹುಟ್ಟಿದ ‘ಕೆನರಾ ಹಿಂದೂ ಪರ್ಮನೆಂಟ್ ಫಂಡ್’ ನಿಯಮಿತ (ಈಗಿನ ಕೆನರಾ ಬ್ಯಾಂಕ್) ಮತ್ತು ‘ಕೆನರಾ ಇಂಡಸ್ಟ್ರಿಯಲ್ ಎಂಡ್ ಬ್ಯಾಂಕಿಂಗ್ ಸಿಂಡಿಕೇಟ್(ನಿ)’ (ಈಗಿನ ಸಿಂಡಿಕೇಟ್ ಬ್ಯಾಂಕ್)ಗಳ ಹೆಸರಿನಲ್ಲೂ ಕೆನರಾ ಇದ್ದದ್ದು ಜಿಲ್ಲೆಯ ಹೊರಗಿನ ಜನರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ‘ದಿನ ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್(ಉಡಿಪಿ) ಲಿಮಿಟೆಡ್’ ಉಡುಪಿಯಿಂದ ಹೊರಗೂ ಶಾಖೆಗಳನ್ನು ತೆರೆದಿದ್ದರಿಂದ ೧೯೩೯ರಲ್ಲಿ ತನ್ನ ಹೆಸರಲ್ಲಿದ್ದ ‘ಉಡುಪಿ’ಯನ್ನು ಬಿಟ್ಟು ‘ದಿ ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ ಲಿಮಿಟೆಡ್’ ಎಂದು ಹೆಸರು ಬದಲಿಸಿಕೊಂಡಿತು. ಚಿಕ್ಕದಾದ ಹೆಸರುಗಳನ್ನಿಟ್ಟುಕೊಳ್ಳುವುದು. ಹೊಸಕಾಲದ ಫ್ಯಾಶನ್. ವ್ಯವಹಾರದಲ್ಲಿ ಬಳಸುವುದಕ್ಕೂ ಅದು ಸುಲಭ. ಹೀಗಾಗಿ ೧೯೭೨ರಲ್ಲಿ ಎರಡನೆಯ ಸಲ ಬ್ಯಾಂಕು ಹೆಸರು ಬದಲಿಸಿಕೊಂಡು ‘ಕಾರ್ಪೊರೇಶನ್ ಬ್ಯಾಂಕ್ ಲಿಮಿಟೆಡ್ ಎಂದಾಯಿತು. ೧೯೮೦ರ ಏಪ್ರಿಲ್ ೧೫ ರಂದು ಬ್ಯಾಂಕು ರಾಷ್ಟ್ರೀಕರಣಗೊಂಡದ್ದರಿಂದ ಅದರ ಹೆಸರಿನಲ್ಲಿದ್ದ ಲಿಮಿಟೆಡ್ ಹೊರಟುಹೋಗಿ ಇಂದಿನ ‘ಕಾರ್ಪೊರೇಶನ್ ಬ್ಯಾಂಕ್’ ಎಂಬ ಹೆಸರು ಬಂತು.

ಹೆಸರು ಬದಲಾದರೂ ಬ್ಯಾಂಕಿನ ಸ್ಥಾಪಕರು ಹೇರಿದ್ದ ಉದಾತ್ತ ಧ್ಯೇಯ ಧೋರಣೆಗಳಲ್ಲಿ ಬದಲಾವಣೆ ಆಗಲಿಲ್ಲ. ಬ್ಯಾಂಕು ಈಗಲೂ ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ತನ್ನ ಸ್ಥಾಪಕರ ಧ್ಯೆಯವಾಕ್ಯವನ್ನು ಉಳಿಸಿಕೊಂಡು ಆ ಆಶಯವನ್ನು ಈಡೇರಿಸುತ್ತಾ ಬಂದಿದೆ. ಬ್ಯಾಂಕಿನ ‘ಲಾಂಛನ’ ಕೂಡಾ ಬದಲಾಗಿಲ್ಲ. ಎಲ್ಲರಿಗೂ ನ್ಯಾಯ ಒದಗಿಸುವುದರ ಸಂಕೇತವಾದ ತಕ್ಕಡಿ, ಬೇಡಿದ್ದನ್ನು ನೀಡುವ ಕಲ್ಪವೃಕ್ಷ, ಕಾಮಧೇನು ಹಾಗೂ ಕೈಗಾರಿಕೆ ಮತ್ತು ಕೃಷಿರಂಗವನ್ನು ಸಂಕೇತಿಸುವ ಚಕ್ರ ಮತ್ತು ತೆನೆಗಳನ್ನು ಹೊಂದಿದ ಬ್ಯಾಂಕಿನ ಲಾಂಛನ ಅತ್ಯಂತ ಅರ್ಥಪೂರ್ಣವಾಗಿದೆ.

೩೦೦ ಕೋಟಿ ರೂ.ಗಳ ಠೇವಣಿ ಗುರಿಯನ್ನು ದಾಟಲು ೭೫ ವರ್ಷಗಳಷ್ಟು ಸಮಯವನ್ನು ತೆಗೆದುಕೊಂಡ ಕಾರ್ಪೊರೇಶನ್ ಬ್ಯಾಂಕ್ ೧೯೮೦ರಲ್ಲಿ ರಾಷ್ಟ್ರೀಕರಣಗೊಂಡ ನಂತರ ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದತೊಡಗಿತು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಧನೆಗಾಗಿ ಹಲವು ಪ್ರಶಸ್ತಿಗಳು ಕಾರ್ಪೊರೇಶನ್ ಬ್ಯಾಂಕಿಗೆ ಹಾಗೂ ಬ್ಯಾಂಕಿನ ಅಧ್ಯಕ್ಷರಾಗಿದ್ದವರಿಗೆ ಲಭಿಸಿದವು. ಗಣಕೀಕರಣ ಹಾಗೂ ಕಾರ್ಯಕ್ರಮ ನಿರ್ವಹಣೆಯ ಆಧುನೀಕರಣದಲ್ಲಿ ಬ್ಯಾಂಕ್ ಮುಂಚೂಣಿಯಲ್ಲಿತ್ತು. ೧೯೯೪-೯೫ರ ಆರ್ಥಿಕ ವರ್ಷದಲ್ಲಿ ಭಾರತೀಯ ಬ್ಯಾಂಕುಗಳ ಸಂಘ (IBA) ನಡೆಸಿದ ಸಮೀಕ್ಷೆಯಲ್ಲಿ ೨೭ ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಲಾಭ ಗಳಿಕೆಗೆ ಸಂಬಂಧಿಸಿದ ಅಂಶಗಳಲ್ಲಿ ಕಾರ್ಪೊರೇಶನ್ ಬ್ಯಾಂಕ್ ಮೊದಲಸ್ಥಾನ ಗಳಿಸುವ ಮೂಲಕ ಇಡೀ ದೇಶದ ಗಮನ ಸೆಳೆಯಿತು. ನಂತರದ ದಿನಗಳಲ್ಲಿ ಇನ್ನೂ ಹಲವು ಹತ್ತು ಪ್ರಶಸ್ತಿಗಳು ಕಾರ್ಪೊರೇಶನ್ ಬ್ಯಾಂಕನ್ನು ಅರಸಿಕೊಂಡು ಬಂದವು. ಕಳೆದ ಐದು ವರ್ಷಗಳಲ್ಲಿ ಕಾರ್ಪೊರೇಶನ್ ಬ್ಯಾಂಕ್ ಗಳಿಸಿದ ಮುಖ್ಯ ಪ್ರಶಸ್ತಿಗಳ ವಿವರ ಹೀಗಿದೆ;

  • ೨೦೦೧-೨೦೦೩ರ ವರೆಗೆ ಸತತವಾಗಿ ಮೂರು ವರ್ಷ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಪ್ರವರ್ತನೆಗೊಂಡ IDRBT ಬ್ಯಾಂಕಿಂಗ್ ತಂತ್ರಜ್ಞಾನದ ಅನುಷ್ಠಾನಕ್ಕಾಗಿ ನೀಡುವ ಪ್ರಶಸ್ತಿ ಕಾರ್ಪೊರೇಶನ್ ಬ್ಯಾಂಕಿಗೆ ಲಭಿಸಿದೆ.
  • ೨೦೦೩ – ಸಿಂಗಪೂರಿನ ‘ದಿ ಏಶಿಯನ್ ಬ್ಯಾಂಕರ್’ ನಡೆಸಿದ ಸಮೀಕ್ಷೆಯಲ್ಲಿ ಕಾರ್ಪೊರೇಶನ್ ಬ್ಯಾಂಕ್ ಭಾರತದ ಅತ್ಯಂತ ಬಲಷ್ಠ ಮತ್ತು ಏಶ್ಯಾದ ಎರಡನೆ ಅತ್ಯಂತ ಬಲಿಷ್ಠ ಬ್ಯಾಂಕ್ ಅನ್ನಿಸಿಕೊಂಡಿದೆ.
  • ೨೦೦೪- ಗೆ ಹಾಂಕಾಂಗಿನ ‘ಫೋರ್ಟ್ ಗ್ಲೋಬಲ್’ ನಡೆಸಿದ ಸಮೀಕ್ಷೆಯಲ್ಲಿ ಒಂದು ಬಿಲಿಯನ್ ಡಾಲರ್ ಒಳಗಿನ ಒಟ್ಟು ವ್ಯವಹಾರವುಳ್ಳ ಏಶ್ಯಾದ ಅತ್ಯುತ್ತಮ ೨೦೦ ಕಂಪೆನಿಗಳಲ್ಲಿ ಒಂದು ಎಂದು ಕಾರ್ಪೊರೇಶನ್ ಬ್ಯಾಂಕ್ ಉಲ್ಲೇಖಗೊಂಡಿದೆ.
  • ೨೦೦೪- ಔಟ್‌ಲುಕ್ ಪತ್ರಿಕೆಯ ಸಮೀಕ್ಷೆಯಲ್ಲಿ ಕಾರ್ಪೊರೇಶನ್ ಬ್ಯಾಂಕ್ ಭಾರತದ ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
  • ೨೦೦೫ – ಬಿಸಿನೆಸ್ ಟುಡೆ’ ಪತ್ರಿಕೆಯ ಸಮೀಕ್ಷೆಯಲ್ಲಿ ಐದು ಹೂಡಿಕೆದಾರ ಸ್ನೇಹಿ ಕಂಪೆನಿಗಳಲ್ಲಿ ಒಂದು ಎಂಬ ಗಮನಾರ್ಹ ಸ್ಥಾನ.

‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ನಾಣ್ಣುಡಿಯಂತೆ ಕಾರ್ಪೊರೇಶನ್ ಬ್ಯಾಂಕ್ ಗಾತ್ರದಲ್ಲಿ ಚಿಕ್ಕದಾದರೂ ಜನಪ್ರಿಯತೆಯಲ್ಲಿ ಹಿಂದೆ ಬಿದ್ದಿಲ್ಲ. ನಾಡಿನ ಅನೇಕ ಗಣ್ಯ ವ್ಯಕ್ತಿಗಳು ಬ್ಯಾಂಕಿಗೆ ಭೇಟಿ ನೀಡುವ ಮೂಲಕ ಕಾರ್ಪೊರೇಶನ್ ಬ್ಯಾಂಕಿನ ಕೀರ್ತಿ ಪತಾಕೆ ಮುಗಿಲೆತ್ತರದಲ್ಲಿ ನಲಿದಾಡುವಂತೆ ಮಾಡಿದ್ದಾರೆ. ೧೯೭೫ರಲ್ಲಿ ಅಂದಿನ ಉಪರಾಷ್ಟ್ರಪತಿ ಮಾನ್ಯ ಬಿ.ಡಿ. ಜತ್ತಿಯವರು ಮಂಗಳೂರಿನ ಬ್ಯಾಂಕಿನ ಆಡಳಿತ ಕಚೇರಿಯನ್ನು ಉದ್ಘಾಟಿಸಿದ್ದರು. ೧೯೯೨ರಲ್ಲಿ ಆಗಿನ ರಾಷ್ಟ್ರಪತಿ ಸನ್ಮಾನ್ಯ ಆರ್. ವೆಂಕಟರಾಮನ್ ಮಂಗಳೂರಿಗೆ ಆಗಮಿಸಿ ಬ್ಯಾಂಕಿನ ೮೫ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿದರು. ಈಗಿನ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಡಾ. ಮನಮೋಹನಸಿಂಗ್ ಅವರು ೧೯೯೩ ವಿತ್ತ ಮಂತ್ರಿಗಳಾಗಿದ್ದಾಗ ಕಾರ್ಪೊರೇಶನ್ ಬ್ಯಾಂಕಿನ ರಥಬೀದಿ ಶಾಖೆಯ ಹೊಸ ಕಟ್ಟಡ ಕಾರ್ಪೊರೇಶನ್ ಬ್ಯಾಂಕ್ ಹೌಸ್ ಉದ್ಘಾಟಿಸಲು ಮಂಗಳೂರಿಗೆ ಆಗಮಿಸಿದ್ದರು.

ಕಾರ್ಪೊರೇಶನ್ ಬ್ಯಾಂಕಿನ ಸಮಾರಂಭಗಳಲ್ಲಿ ಭಾಗವಹಿಸಿದ ಗಣ್ಯರಲ್ಲಿ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಇ.ಎಸ್.ವೆಂಕಟರಾಮಯ್ಯ, ಜಸ್ಟಿಸ್ ಎ.ಎಂ. ಅಹಮದಿ, ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಾ. ಸಿ. ರಂಗರಾಜನ್ ಮಾಜಿ ವಿತ್ತ ರಾಜ್ಯ ಸಚಿವರಾದ ಶ್ರೀ ಬಾಳಾ ಸಾಹೇಬ್ ವಿಖ ಪಾಟೀಲ್, ಮಾಜಿ ವಿತ್ತ ಸಚಿವರಾದ ಶ್ರೀ ಯಶವಂತ ಸಿನ್ಹಾ ಮುಂತಾದವರು ಇದ್ದಾರೆ. ಎಂಬುದನ್ನು ಹೇಳಿಕೊಳ್ಳಲು ಬ್ಯಾಂಕು ಹೆಮ್ಮೆ ಪಡುತ್ತದೆ. ೨೦೦೪ರಲ್ಲಿ ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ನಿಗೋಳಿ ಎಂಬಲ್ಲಿ ಕಾರ್ಪೊರೇಶನ್ ಬ್ಯಾಂಕ್ ೧೫೦೪ ಸ್ವಸಹಾಯ ಗುಂಪುಗಳಿಗೆ ಸಾಲ ನೀಡುವ ಯೋಜನೆಯನ್ನು ಹಮ್ಮಿಕೊಂಡು ಅದನ್ನು ಈಗಿನ ಕೇಂದ್ರ ವಿತ್ತ ಸಚಿವರಾದ ಸನ್ಮಾನ್ಯ ಶ್ರೀ ಪಿ. ಚಿದಂಬರಂ ಉದ್ಘಾಟಿಸಿದರು. ೧೨ ಮಾರ್ಚ್ ೨೦೦೫ರಂದು ಕಾರ್ಪೊರೇಶನ್ ಬ್ಯಾಂಕಿನಲ್ಲಿ ಮಹಾಪ್ರಬಂಧಕರಾಗಿ ಸೇವೆ ಸಲ್ಲಿಸಿ ಈಗ ರಿಸರ್ವ್ ಬ್ಯಾಂಕಿನಲ್ಲಿ ಡೆಪ್ಯೂಟಿ ಗವರ್ನರ್ ಆಗಿರುವ ಶ್ರೀ ವಿಠಲದಾಸ್ ಲೀಲಾಧರ್ ಅವರು ಚಾಲನೆ ನೀಡಿದರು.

೨೦೦೫-೦೬ ಕಾರ್ಪೊರೇಶನ್ ಬ್ಯಾಂಕಿನ ಪಾಲಿಗೆ ಅತ್ಯಂತ ಮಹತ್ವದ ವರ್ಷ. ಬ್ಯಾಂಕಿನ ಈಗಿನ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಾದ ಶ್ರೀ ವಿ.ಕೆ. ಚೋಪ್ರಾ ಅವರ ನಾಯಕತ್ವದಲ್ಲಿ ಬ್ಯಾಂಕು ಅತ್ಯಂತ ಅರ್ಥಪೂರ್ಣವಾಗಿ ಶತಮಾನೋತ್ಸವವನ್ನು ಆಚರಿಸಲು ಸರ್ವ ಸನ್ನದ್ಧವಾಗಿದೆ. ಅವರು ಹೇಳುವಂತೆ ಸಾಂಪ್ರದಾಯಿಕ ಮೌಲ್ಯಗಳು ಮತ್ತು ಪ್ರಯೋಗಶೀಲ ಧೋರಣೆ, ವಾಣಿಜ್ಯ ದೃಷ್ಟಿ ಮತ್ತು ಸಾಮಾಜಿಕ ಕಾಳಜಿ, ತಂತ್ರಜ್ಞಾನ ಮತ್ತು ಆತ್ಮೀಯ ಸೇವೆ – ಇವುಗಳ ನಡುವೆ. ಸರಿಯಾದ ಸಮತೋಲನದಿಂದ ಕಾರ್ಯ ನಿರ್ವಹಿಸುತ್ತಿರುವುದು ಬ್ಯಾಂಕಿನ ಯಶಸ್ಸಿಗೆ ಕಾರಣ.

ಇವುಗಳ ನಡುವೆ ಸರಿಯಾದ ಸಮತೋಲನದಿಂದ ಕಾರ್ಯ ನಿರ್ವಹಿಸುತ್ತಿರುವುದೆ ಬ್ಯಾಂಕಿನ ಯಶಸ್ಸಿಗೆ ಕಾರಣ.

೧೯೫೬ರಲ್ಲಿ ಬ್ಯಾಂಕು ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿದಾಗ ತನ್ನ ಹುಟ್ಟೂರಾದ ಉಡುಪಿಯ ಮಾದರಿ ಪ್ರಾಥಮಿಕ ಶಾಲೆಗೆ ೭೧೨೪ ಚ. ಅಡಿ ಜಾಗವನ್ನು ದಾನವಾಗಿ ನೀಡಿ ಅದರಲ್ಲಿ ೪೧೩೭ ಚ.ಅ. ವಿಸ್ತೀರ್ಣದ ಕಟ್ಟಡವನ್ನು ಕಟ್ಟಿಸಿ ಕೊಟ್ಟಿತ್ತು. ನಂತರ ದಿನಗಳಲ್ಲಿಯೂ ಬ್ಯಾಂಕು ಸಮಾಜಕ್ಕೆ ಉಪಯುಕ್ತವಾಗುವಂಥ ಹಲವಾರು ಯೋಜನೆಗಳನ್ನು ಸ್ವತಃ ಕೈಗೊಳ್ಳುವ ಮೂಲಕ ಮತ್ತು ಅಂಥ ಚಟುವಟಿಕೆಗಳಿಗೆ ಉದಾರ ದೇಣಿಗೆ ನೀಡುವ ಮೂಲಕ ತನ್ನ ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುತ್ತಾ ಬಂದಿದೆ.

ಶತಮಾನೋತ್ಸವದ ಅಂಗವಾಗಿ ಕಾರ್ಪೊರೇಶನ್ ಬ್ಯಾಂಕ್ ಮಂಗಳೂರಿನಲ್ಲಿ ೨ ಕೋಟಿ ರೂ.ಗಳ ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯ ಬೃಹತ್‌ಗ್ರಂಥಾಲಯವೊಂದನ್ನು ನಿರ್ಮಿಸಿ ಅದನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಅರ್ಪಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ನಾಲ್ಕು ರಾಜ್ಯಗಳಲ್ಲಿ ೧೦೦ ಹಳ್ಳಿಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸುವ ಇನ್ನೊಂದು ಯೋಜನೆಯಂತೆ ಪ್ರಸ್ತುತ ವರ್ಷದಲ್ಲಿ ೨೫ ಹಳ್ಳಿಗಳಲ್ಲಿ ಗ್ರಂಥಾಲಯ ಆರಂಭಗೊಳ್ಳಲಿದೆ. ಶತಮಾನೋತ್ಸವದ ನೆನಪಿನಲ್ಲಿ ೧೦೦ ಮಂದಿ ಪ್ರತಿಭಾವಂತ ಬಡಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ೧೯೯೭ರಲ್ಲಿ ಪ್ರಕಟವಾದ ಬ್ಯಾಂಕಿನ ಇತಿಹಾಸವನ್ನು ದಾಖಲಿಸುವ ಹೊತ್ತಗೆಯ ವಿನೂತನ ಆವೃತ್ತಿ ಸ್ಥಿರಗೊಳಿಸುತ್ತದೆ ಹಾಗೂ ಸ್ಥಾಪಕಾಧ್ಯಕ್ಷರ ಜೀವನ ಚರಿತ್ರೆಯ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತಿದೆ.

ಐದು ವರ್ಷಗಳ ಹಿಂದೆ ಅಂದರೆ ೨೦೦೧ರಲ್ಲಿಯೇ ಕಾರ್ಪೊರೇಶನ್ ಬ್ಯಾಂಕ್ ಶತಮಾನೋತ್ಸವ ವರ್ಷಕ್ಕಾಗಿ ತನ್ನ ಕಾಣ್ಕೆ ಏನೆಂಬುದನ್ನು ನಿರ್ಧರಿಸಿತ್ತು. ‘ಆರ್ಥಿಕ ಮಾನದಂಡಗಳು’ ದಕ್ಷತೆ, ತಂತ್ರಜ್ಞಾನ, ಉತ್ಪನ್ನ ಹಾಗೂ ಸೇವೆಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಸಾಧಿಸಿ ಪ್ರಥಮ ಪ್ರಾಶಸ್ತ್ಯದ ಬ್ಯಾಂಕ್ ಅನ್ನಿಸಿಕೊಳ್ಳುವುದು. ಶತಮಾನೋತ್ಸವ ವರ್ಷದ ಸಂಭ್ರಮದಲ್ಲಿ ಕಾರ್ಪೊರೇಶನ್ ಬ್ಯಾಂಕ್ ತಾನು ಕಂಡ ಕಾಣ್ಕೆಯನ್ನು ಸಾಕ್ಷಾತ್ಕಾರಗೊಳಿಸುವಲ್ಲಿ ಯಶಸ್ವಿಯಾಗಿದೆ. ಶಾಖೆಗಳು ಹಾಗೂ ATMಗಳ ಮೂಲಕ ದೇಶಾದ್ಯಂತ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿದ್ದಲ್ಲದೆ, ವಿದೇಶದಲ್ಲೂ ತನ್ನ ಪ್ರಾತಿನಿಧಿಕ ಕಾರ್ಯಲಯಗಳನ್ನು ಆರಂಭಿಸಲು ಸನ್ನದ್ಧವಾಗಿದೆ.

ಲಕ್ಷಾಂತರ ಗ್ರಾಹಕರ ನಿರಂತರ ಬೆಂಬಲ ದಣಿವರಿಯದ ನೌಕರರ ನಿಷ್ಠೆಯ ದುಡಿಮೆ ಆಡಳಿತ ವರ್ಗದ ಹಾಗೂ ಉನ್ನತ ಅಧಿಕಾರಿಗಳ ಮಾರ್ಗದರ್ಶನದಿಂದ ಕಾರ್ಪೊರೇಶನ್ ಬ್ಯಾಂಕ್ ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಉನ್ನತ ಸ್ಥಾನದಲ್ಲಿ ಶೋಭಿಸುತ್ತಿದೆ.

– ಎಚ್ಡುಂಡಿರಾಜ್

* * *