ಕಾರ್ನಾಡ್ ಸದಾಶಿವರಾಯರು ಮಂಗಳೂರಿನ ಕೋಟ್ಯಾಧೀಶರಾಗಿದ್ದವರು. ಸ್ವಾತಂತ್ರ್ಯ ಚಳುವಾಳಿಗಾಗಿ, ದಾನ-ಧರ್ಮಕ್ಕಾಗಿ ಮುಕ್ತ ಹಸ್ತದಿಂದ ಕೊಡುತ್ತ ಬಂದ ಅವರು ಕೊನೆಗಾಲದಲ್ಲಿ ರಿಕ್ತಹಸ್ತರಾದರು. ಅವರ ಜೀವನದ ಹಿನ್ನೆಲೆಯಲ್ಲಿ ಶಿವರಾಮ ಕಾರಂತರು ಬರೆದ ಕಾದಂಬರಿ. ‘ಔದಾರ್ಯದ ಉರುಳಲ್ಲಿ’(೧೯೪೭). ಈ ಕಾದಂಬರಿಯ ಮೂರನೆಯ ಮುದ್ರಣ ೧೯೮೨ರಲ್ಲಿ ಪ್ರಕಟವಾದಾಗ ಕಾರಂತರು ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ – “ನಾನು ೧೯೨೧ರ ಸುಮಾರಿಗೆ ಅಸಹಕಾರ ಚಳವಳಕ್ಕೆ ಧುಮುಕಿ, ಸ್ವಾತಂತ್ರ್ಯ ಉದಯದ ತನಕ ಸಾಗಿದ ನನ್ನ ಸ್ವಂತ ಬದುಕಿನ ಮತ್ತು ಅದನ್ನು ಸುತ್ತುವರಿದ ಸಾಮಾಜಿಕ ವ್ಯಕ್ತಿ, ಸಂಸ್ಥೆ ರೀತಿ-ನೀತಿಗಳ ಅನುಭವಗಳ ಪ್ರತೀಕ ಇದು. ಆರಂಭದಲ್ಲಿ ನನ್ನ ಜತೆ ಅಲೆದಾಡಿದ ಮೂವರು ಮಿತ್ರರ ನೆನಪು ಅದರಿಂದ ಹುಟ್ಟಿದೆ. ಕುಂದಾಪುರ ತಾಲೂಕಿನಲ್ಲಿ ಮಿಂಚಿ ಮಾಯವಾದ ಅಸಹಕಾರದ ಪ್ರತಿಬಿಂಬ ಅದರಲ್ಲಿದೆ. ನನ್ನ ಹತಾಶ ಕನಸುಗಳೂ ಅದರಲ್ಲಿ ತುಂಬಿವೆ. ಬರಮನ್ನಣೆಗೆ ಪಾತ್ರರಾದ ಕಾರ್ನಾಡು ಸದಾಶಿವರಾಯರ ಬದುಕೂ, ಅವರ ದಮನಕ್ಕೇ ಕಾರಣರಾದ ಮುಂದೆ ರಾಜಕೀಯದಲ್ಲಿ ಮೆರೆದ ವ್ಯಕ್ತಿಗಳ ಚಿತ್ರಣವೂ ಇಲ್ಲಿದೆ. “ಮಂಗಳೂರಿನಿಂದ ಕಾರ್ನಾಡ್ ಸದಾಶಿವ ರಾಯರಂತೆ ಉಡುಪಿಯ ಹಾಜಿ ಅಬ್ದುಲ್ಲಾ ಸಾಹೇಬರೂ ‘ಔದಾರ್ಯದ ಉರುಳಲ್ಲಿ’ ಸಿಲುಕಿದವರು. ಅವರ ಕೊನೆಯ ದಿನಗಳ ಕತೆ, ಜಪಾನಿನ ಅಕಿರಾ ಕುರಸೋವನ ‘ರಶೋಮನ್’ ಚಲನಚಿತ್ರದ ಕತೆಯಂತೆ ನಿಗೂಢಕತೆ, ಉತ್ತರ ಸಿಗದ ಒಗಟಿನ ಕತೆ.

ಮಧ್ಯದಲ್ಲಿ ಕುಳಿತಿರುವವರು ಹಾಜಿ ಅಬ್ದುಲ್ಲಾ ಸಾಹೇಬರು (೧೯೩೧)

ಎಂ.ವಿ. ಕಾಮತರು ತನ್ನ ‘ಕಾರ್ಪೊರೇಶನ್ ಬ್ಯಾಂಕ್ – ಎ ಕಾರ್ಪೊರೇಟ್ ಜರ್ನಿ’ ಗ್ರಂಥದಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರ ಕೊನೆಯ ದಿನಗಳ ಕುರಿತು ಹೀಗೆ ಬರೆದಿದ್ದಾರೆ. “ಹಾಜಿ ಅಬ್ದುಲ್ಲಾ ಸಾಹೇಬರ ಕೆನರಾ ಬ್ಯಾಂಕಿಂಗ್ “ಹಾಜಿ ಅಬ್ದುಲ್ಲಾ ಸಾಹೇಬರ ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ ಲಿ.ನ ಆರಂಭಕಾಲದಿಂದ ೧೯೨೯ ರವರೆಗೆ ಅದರ ಅಧ್ಯಕ್ಷರಾಗಿದ್ದರು. ೧೯೨೯ ರಲ್ಲಿ ಅವರು ಅಧಿಕಾರ ತ್ಯಜಿಸಬೇಕಾಯಿತು. ಮುಂದೆ ಕಷ್ಟದ ದಿನಗಳು ಅವರನ್ನು ಸುತ್ತುವರಿದುವು. ಅವರು ಸಾಲದಲ್ಲಿ ಮುಳುಗಿಹೋದರು. ಅವರು ಆರ್ಥಿಕ ಸಮಸ್ಯೆಗೆ ಕಾರಣವೇನು ಎಂಬ ಪ್ರಶ್ನೆಗೆ ವಿವರಣಗೆಳು ಲಭ್ಯವಿಲ್ಲ. ಅವರ ಖಾಸಗಿ ಸಂಸ್ಥೆಯ ಉದ್ಯೋಗಿಗಳು ದುರುದ್ದೇಶದ ಬಗ್ಗೆ ಅಸ್ಪಷ್ಟ ಸೂಚನೆಗಳು ಸಿಗುತ್ತವೆ. ಆದರೆ ಅದನ್ನು ನಾವು ಗಂಭೀರವಾಗಿ ಪರಿಗಣಿಸಬೇಕೆಂದಿಲ್ಲ. ಹಾಜಿ ಅಬ್ದುಲ್ಲಾ ಅವರ ಔದಾರ್ಯ ಅವರ ವಿವೇಕವನ್ನು ಮೀರಿತು ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಅವರು ಬ್ಯಾಂಕಿನಿಂದ ‘ಓವರ್‌ಡ್ರಾಫ್ಟ್’ ನಡೆದಿದ್ದರು. ಒಂದು ಹಂತದಲ್ಲಿ ಅವರು ಬ್ಯಾಂಕಿಗೆ ದೊಡ್ಡ ಮೊತ್ತ ಕೊಡಲು ಬಾಕಿ ಇತ್ತು. ಅವರಿಗೆ ‘ಓವರ್‌ಡ್ರಾಫ್ಟ್’ ಸೌಲಭ್ಯವನ್ನು ನಿರಾಕರಿಸುವುದು ಬ್ಯಾಂಕಿನ ಆಡಳಿತ ವರ್ಗಕ್ಕೆ ಸಾಧ್ಯವಿರಲಿಲ್ಲ. ಯಾಕೆಂದರೆ ಅವರು ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿದ್ದರು. ಅವರ ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಪ್ರಶ್ನಾತೀತವಾಗಿತ್ತು. ಹಾಜಿ ಅಬ್ದುಲ್ಲಾ ಅವರನ್ನು ಆರ್ಥಿಕ ದುಸ್ಥಿತಿಯಿಂದ ಮೇಲೆತ್ತುವುದು ಸಾಧ್ಯವಿಲ್ಲವೆಂದು ೧೯೩೫ ರ ಆರಂಭದಲ್ಲಿ ಸ್ಪಷ್ಟವಾಯಿತು. ಏನಾದರೊಂದು ಇತ್ಯರ್ಥಕ್ಕೆ ಬರುವುದು ಅನಿವಾರ್ಯವಾಗಿತ್ತು. ಕಠಿಣ ನಿರ್ಧಾರದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಬ್ಯಾಂಕಿನ ಅಧಿಕಾರಿಗಳು ಗೊಂದಲಕ್ಕೀಡಾದರು. ಒಂದೆಡೆ, ಅವರಿಗೆ ಹಾಜಿ ಅಬ್ದುಲ್ಲಾ ಅವರ ಕುರಿತು ಪೂಜ್ಯಭಾವವಿತ್ತು. ಇನ್ನೊಂದೆಡೆ, ಖಾಸಗಿ ಹಿತಾಸಕ್ತಿಗಳನ್ನು ಬದಿಗಿಟ್ಟು, ಬ್ಯಾಂಕಿನ ಆರ್ಥಿಕ ಸ್ಥಿತಿಯನ್ನು ರಕ್ಷಿಸಬೇಕಿತ್ತು. ಬ್ಯಾಂಕಿನ ಅಧಿಕಾರಿಗಳು ಹಾಗೂ ಹಾಜಿ ಅಬ್ದುಲ್ಲಾ ಸಾಹೇಬರ ನಡುವೆ ನಡೆದ ಮಾತುಕತೆಗಳ ದಾಖಲೆಗಳು ಲಭ್ಯವಿಲ್ಲ. ಆದರೆ ಅವು ಸಂತೋಷದಾಯಕವಾಗಿರಲಿಲ್ಲ ಎಂಬುದು ಸ್ಪಷ್ಟ. ಮಾತುಕತೆ ಎರಡು ಕಡೆಯವರಿಗೂ ನೋವನ್ನುಂಟು ಮಾಡಿರಬೇಕು. ಆದರೆ ಮಾತುಕತೆ ಆಗಲೇಬೇಕಿತ್ತು.

ಸ್ವದೇಶಾಭಿಮಾನಿ ಪತ್ರಿಕೆಯಲ್ಲಿ ಶ್ರದ್ಧಾಂಜಲಿ (೧೯೩೫)

ಅರಮನೆಯಂಥ ಮನೆಯಲ್ಲಿ ವಾಸ ಮಾಡುತ್ತಿದ್ದ ಕೊಡುಗೈ ದಾನಿಯಾಗಿದ್ದ ಹಾಜಿ ಅಬ್ದುಲ್ಲಾ ಅವರು ದಿವಾಳಿಯಾಗಿದ್ದರು. ತನ್ನ ಜೀವನದಲ್ಲಾದ ಇಳಿತ ಅವರಿಗೆ ಆಘಾತವನ್ನುಂಟು ಮಾಡಿರಬಹುದು. ೧೯೩೫ರ ಆಗಸ್ಟ್ ೧೨ ರಂದು ಬೆಳಿಗ್ಗೆ ಹಾಸಿಗೆಯಲ್ಲಿದ್ದ ಅಬ್ದುಲ್ಲಾ ಸಾಹೇಬರು ಪ್ರಜ್ಞಾಹೀನರಾಗಿದ್ದರು. ಡಾಕ್ಟರುಗಳನ್ನು ಕರೆಸಲಾಯಿತು. ಅವರನ್ನು ಉಳಿಸುವ ಎಲ್ಲ ಪ್ರಯತ್ನಗಳೂ ವಿಫಲವಾದವು. ಅದು ಶ್ರೇಷ್ಠ ಚೇತನವೊಂದರ ದುರಂತವಾಗಿತ್ತು. ಸಾಯುವ ಕಾಲಕ್ಕೆ ಅವರಿಗೆ ೫೩ ವರ್ಷವಾಗಿತ್ತು.” (ಎಂ. ವಿ. ಕಾಮತ್, ೧೯೯೭)

ಹಾಜಿ ಅಬ್ದುಲ್ಲಾರ ದುರಂತಕ್ಕೆ ಅವರ ಖಾಸಗಿ ವ್ಯಾಪರ ಸಂಸ್ಥೆಯಲ್ಲಿದ್ದ ಒಬ್ಬ ವ್ಯಕ್ತಿಯ ವಿಶ್ವಾಸ ದ್ರೋಹವೂ ಮುಖ್ಯ ಕಾರಣ  ಎಂದು ಶ್ರೀ ನಸೀಬ್‌ಸಾಹೇಬರು ನನಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಕು.ಶಿ. ಹರಿದಾಸ ಭಟ್ಟರ ವಿವರಿಸಿರುವಂತೆ, “ನಂಬಿ ಕೆಟ್ಟವರಿಲ್ಲವೋ” ಎಂದು ಭಗವಂತನ ಬಗ್ಗೆ ಹೇಳಬಹುದೇ ವಿನಾ ಮನುಷ್ಯನ ಬಗ್ಗೆ ಹೇಳುವಂತಿಲ್ಲ, ಎಂಬುದನ್ನು ಅಬ್ದುಲ್ಲಾ ಸಾಹೇಬರ ಜೀವನದ ದಿನಗಳು ಸಾರುತ್ತವೆ. ಅದರಲ್ಲೂ ವ್ಯವಹಾರದಲ್ಲಿರುವ ಮನುಷ್ಯ ಇಷ್ಟೊಂದು ನಿರ್ಬೋಧ (innocent) ನಾಗಬಾರದು ಎಂತಲೂ ಅವರ ಜೀವನದ ಪಾಠ ಹೇಳುತ್ತದೆ. ನಿರ್ಬೋಧತೆಯಂಥ  ಬಾಲಸ್ವಭಾವ ದೈವತ್ವಕ್ಕೆ ತೀರ ಸಮೀಪ ಎನ್ನುತ್ತಾರೆ. ಆದರೆ ಪ್ರಪಂಚ ಒಂದು ನಿಷ್ಠುರವಾದ ಸತ್ಯ; ಅಲ್ಲಿ ಪ್ರತಿಯೊಂದು ವ್ಯವಹಾರಕ್ಕೂ ಅದರದರ ವ್ಯಾವಹಾರಿಕ ಧರ್ಮಕರ್ಮಗಳುಂಟು. ಶ್ರೀಮಂತಿಕೆಯನ್ನು ಬಹು ಲಘುವಾಗಿ ಧರಿಸಿಕೊಂಡು ಅಬ್ದುಲ್ಲಾ ಸಾಹೇಬರು ಎಲ್ಲರೂ ಒಳ್ಳೇಯವರೆಂಬ ತತ್ವದ ಮೇಲೆ ವ್ಯವಹಾರ ನಡೆಸುತ್ತಿದ್ದರು. ಹಾಗೆ ಎಷ್ಟೋ ವರ್ಷ ನಡೆದೂ ನಡೆಯಿತು… ಇಂಥಾ ಕರುಣಾಹೃದಯ ವ್ಯಾಪಾರದ ಪಟ್ಟಿನಲ್ಲಿ ಅದಾವುದೋ ದುರ್ಮುಹೂರ್ತದಲ್ಲಿ ಕಷ್ಟನಷ್ಟಗಳಿಗೀಡಾದದ್ದು ಸ್ವಾಭಾವಿಕ. ನೂರಾರು ಮಂದಿಗೆ ಸಪಾತ್ರ-ಅಪಾತ್ರ ಭೇದವಿಲ್ಲದೆ ದಾನ ನೀಡಿದ ಕೊಡುಗೈ ಬರಿದಾಗಿ ತಾನೇ ಹುಟ್ಟು ಹಾಕಿದ ಬ್ಯಾಂಕಿನ ಕಂತಿನ ದೇಣಿಗೆಗೆ ಅಡಿಗೈ ಆಗುವ ದುರ್ದಿನವೂ ಒದಗಿತು. ನಟಿಸಿ ಸಹಿಸಿ ಜೀವ ಬೇಸತ್ತಾಗ ಬದುಕಿನಿಂದಲೇ ವಿಮುಖವಾಯಿತು. ತಾನು ಯಾವುದನ್ನು ಪುರುಷಾರ್ಥ ಸಾಧನೆಯೆಂದು ಮಾಡಿದೆನೋ ಆ ಮಾರ್ಗದಲ್ಲಿ ಯಃಕಶ್ಚಿತ್ ವಾಣಿಜ್ಯ ವ್ಯಾಪಾರ ಪತ್ರಗಳೇ ಗೆಲ್ಲುವುದಾದರೆ ತಾನು ಸೋಲುವುದು ವಿಶೇಷವಲ್ಲ, ಆದರೆ ಈ ಸೋಲೇ ಬದುಕಿನ ನಿಜವಾದ ಗೆಲವೆಂದು ಕೊನೆ ಗಳಿಗೆಯ ತನಕವೂ ಸಾಧಿಸಿ, ಬಹುಶಃ ಯಾವ ಪಶ್ಚಾತ್ತಾಪವೂ ಇಲ್ಲದೆ ತನ್ನ ಕೈಯಿಂದಲೇ ಅಸುನೀಗಿದ ದೇವತಾ ಮನುಷ್ಯ ಹಾಜಿ ಅಬ್ದುಲ್ಲಾ. ಊರಿನ ಸಮಸ್ತರಿಗೂ ಒಳ್ಳಿತನ್ನೇ ಹಾರೈಸಿ ದಾನಶೂರತ್ವವನ್ನು ಮೆರೆದು ಶ್ರೀಮಂತ ಜೀವನ ನಡೆಸಿದ ಇಂಥ ಉದಾರ ಚರಿತರು ಬಹಳ ಮಂದಿ ಇನ್ನು ಮುಂದೆ ಬರಲಾರರು. “(ಮುರಳೀಧರ ಉಪಾಧ್ಯ, ಎಚ್. ಡುಂಡಿರಾಜ್ (ಸಂ) ೨೦೦೧)

‘ವಿನಾದೈನ್ಯೇನ ಜೀವನಂ, ಅನಾಯಾಸೇನ ಮರಣಂ’ ಎಂಬುದು ನಮ್ಮ ಹಿರಿಯರ ಪ್ರಾರ್ಥನೆ. ದೈನ್ಯದ ಜೀವನ ಬೇಡ ಎಂದು ನಿರ್ಧರಿಸಿದ ಕುಸುಮದಂತೆ ಮೃದು ವ್ಯಕ್ತಿತ್ವದ ಹಾಜಿ ಅಬ್ದುಲ್ಲಾ ಸಾಹೇಬರು ವಜ್ರದಂತೆ ಕಠಿಣವಾದ ನಿರ್ಧಾರ ತೆಗೆದುಕೊಂಡರು. ಹಾಜಿ ಅಬ್ದುಲ್ಲಾರ ಶವಯಾತ್ರೆ ಉಡುಪಿ ಇತಿಹಾಸದಲ್ಲಿ ದಂತಕತೆಯಾಗಿ ಉಳಿದಿದೆ. ಉಡುಪಿಯ ಬೀದಿ, ಬಯಲು, ಕಾಡುಗಳಿಂದ, ಪರ ಊರುಗಳಿಂದ ಓಡೋಡಿ ಬಂದ ಸಾವಿರಾರು ಜನ ಆಗಲಿದ ‘ದಾನಶೂರ ಕರ್ಣ’ನಿಗಾಗಿ ಕಣ್ಣೀರು ಸುರಿಸಿದರು. ‘ಇವನ ನಮ್ಮವ, ಇವ ನಮ್ಮವ’ ಎಂದು ಅಭಿಮಾನಪಟ್ಟರು, ಅಂತಿಮ ನಮನ ಸಲ್ಲಿಸಿದರು.

ಮಂಗಳೂರಿನ ‘ಸ್ವದೇಶಾಭಿಮಾನಿ’ ಪತ್ರಿಕೆ ತನ್ನ ೧೯೩೫ರ ಆಗಸ್ಟ್ ೧೬ರ ಸಂಚಿಕೆಯಲ್ಲಿ ‘ಕಾರ್ಪೊರೇಶನ್ ಬ್ಯಾಂಕಿನ ಜನಕರೂ, ಹಿತೈಷಿಗಳೂ ಕಾಲವಶರಾದರು’ ಎಂದು ಪೂರ್ಣ ಪುಟದ ಶ್ರದ್ಧಾಂಜಲಿ ಲೇಖನ ಪ್ರಕಟಿಸಿತು. ಹಾಜಿ ಅಬ್ದುಲ್ಲಾ ಸಾಹೇಬರು ಸರ್ವಧರ್ಮ ಸಮಭಾವದ, ಸಹಬಾಳ್ವೆಯ ಆದರ್ಶವನ್ನು ಕೊಂಡಾಡಿತು.

ತನ್ನ ‘ವಿಕ್ರಮಾರ್ಜುನ ವಿಜಯ’ದ ಕೊನೆಯಲ್ಲಿ ಪಂಪ ಅರ್ಜುನನ ಬದಲು ಕರ್ಣನನ್ನು ಸುತ್ತಿಸುತ್ತಾನೆ –

“ನೆನಯದಿರಣ್ಣ ಭಾರತದೊಳಿಂ ಪೆರರಾರುಮನ್,
ಒಂದೆ ಚಿತ್ತದಿಂ
ನೆನೆವೊಡೆ ಕರ್ಣನಂ ನೆನೆಯ, ಕರ್ಣನೊಳಾರ್ದೊರೆ! ಕರ್ಣನೇರು,
ಕರ್ಣನ ಕಡುಗನ್ನಿ ಕರ್ಣನಳವು, ಅಂಕದ ಕರ್ಣನ ಚಾಗ ಮೆಂದು
ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ”

ಕರ್ಣನ ಹೆಸರಿನ ಬದಲು ಅಬ್ದುಲ್ಲಾ ಸಾಹೇಬರ ಹೆಸರು ಸೇರಿಸಿದರೆ ಇದು ಅವರ ಚರಮಗೀತವಾಗುತ್ತದೆ. ದೊರೆತನ, ಏರು, ನನ್ನಿ, ಅಳವು, ಜಾಗ – ಇವೆಲ್ಲಾ ಅಬ್ದುಲ್ಲಾ ಸಾಹೇಬರ ವ್ಯಕ್ತಿತ್ವವನ್ನು ಹಿಡಿದಿಡುವ ಶಬ್ದಗಳು. ಒಂದೆ ಚಿತ್ತದಿಂ ನೆನವೊಡೆ ಅಬ್ದುಲ್ಲಾ ಸಾಹೇಬರಂ ನೆನೆಯ…”

ಹಾಜಿ ಅಬ್ದುಲ್ಲಾ ಸಾಹೇಬರು ಕಾರ್ಪೊರೇಶನ್ ಬ್ಯಾಂಕ್ ಎಂಬ ನಿರುತರ ಚಿಗುರುವ ಅಶ್ವತ್ಥವನ್ನು ನೆಟ್ಟು ಚಿರಂಜೀವಿಯಾಗಿದ್ದಾರೆ. ಅವರನ್ನು ನೆನಪಿಸಿಕೊಂಡು ಮಲಗಿದಾಗ ಉಡುಪಿಯ ರಥಬೀದಿಯ ಕನಸು – ಶ್ರೀ ಮಧ್ವಾಚಾರ್ಯರು ಅನಂತೇಶ್ವರ ದೇವಸ್ಥಾನದ ಜಗಲಿಯಲ್ಲಿ ಕುಳಿತುಕೊಂಡು ‘ತಂತ್ರಸಾರ’ ಗ್ರಂಥ ಬರೆಸುತ್ತಿದ್ದಾರೆ. ಶ್ರೀ ವಾದಿರಾಜ ಸ್ವಾಮಿಗಳು ಕನಕದಾಸರಿಗೆ ಪವಾಡ ಸಾಧ್ಯವಾಗಲಿ ಎಂದು ಹಾರೈಸುತ್ತಿದ್ದಾರೆ. ಕನಕದಾಸರು ಕುಲಕುಲವೆಂದು ಹೊಡೆದಾಡುವಿರಿ ನಿಮ್ಮ ಕುಲದ ನೆಲೆಯಲೇನಾದರೂ ಬಲ್ಲಿರಾ?’ ಎಂದು ಹಾಡುತ್ತ ಕನಕಗೋಪುರವನ್ನು ನೋಡಿ ಮುಗುಳ್ನಗುತ್ತಿದ್ದಾರೆ. ಎಸ್.ಯು. ಪಣಿಯಾಡಿಯವರು. ರಥಬೀದಿಯ ‘ಅಜ್ಜ’ನಲ್ಲಿಗೆ (ಅನಂತೇಶ್ವರಕ್ಕೆ) ದಲಿತರೊಡನೆ ಹೊರಟಿದ್ದಾರೆ. ಹಾಜಿ ಅಬ್ದುಲ್ಲಾ ಸಾಹೇಬರು ಕಾರ್ಪೊರೇಶನ್ ಬ್ಯಾಂಕಿನ ಂಖಿಒ ನ್ನು ರಾಜಗಾಂಭೀರ್ಯದಿಂದ ನೋಡುತ್ತಿದ್ದಾರೆ. ಪುರಂದರದಾಸರು “ಗಿಳಿಯು ಪಂಜರದೊಳಿಲ್ಲ…” ವಿಷಾದದ ದನಿಯಲ್ಲಿ ಗುಣುಗುಣಿಸುತ್ತಿದ್ದಾರೆ.

* * *