ಹಾಜಿ ಅಬ್ದುಲ್ಲಾ ಸಾಹೇಬರನ್ನು ಕುರಿತು ಒಂದು ಜೀವನ ಚರಿತ್ರೆಯನ್ನು ರಚಿಸಬೇಕೆಂದು ನಾನು ಮತ್ತು ನನ್ನ ಕವಿಮಿತ್ರ, ಕಾರ್ಪೊರೇಶನ್ ಬ್ಯಾಂಕ್ ಮುಖ್ಯ ಪ್ರಬಂಧಕ ಶ್ರೀ ಎಚ್. ಡುಂಡಿರಾಜರು ೨೦೦೧ರಲ್ಲಿ ಮಾಹಿತಿ ಸಂಗ್ರಹಿಸತೊಡಗಿದೆವು. ಹಲವರನ್ನು ಸಂದರ್ಶಿಸಿದಾಗ ಹಾಜಿ ಅಬ್ದುಲ್ಲಾ ಸಾಹೇಬರು ದಂತಕಥೆಗಳ ನಾಯಕನಾಗಿ, ದುರಂತವನ್ನು ಕಂಡ ದಾನಶೂರನಾಗಿ ಸಮಾಜದ ಸಮೂಹ ಸ್ಮೃತಿಯಲ್ಲಿ ಇರುವುದು ನಮಗೆ ಕಂಡುಬಂತು. ಅವರ ಕುರಿತು ಅಧಿಕೃತ ದಾಖಲೆಗಳಿಗಿಂತಲೂ ಜಾಸ್ತಿ ಐತಿಹ್ಯಗಳು ಸಿಗುತ್ತವೆ. ನಾವು ಕ್ಷೇತ್ರ ಕಾರ್ಯ ಸಂಶೋಧನೆ ಆರಂಭಿಸಿದಾಗ ಅಬ್ದುಲ್ಲಾ ಸಾಹೇಬರು ಜನಿಸಿ ೧೧೯ ವರ್ಷಗಳು, ನಿಧನರಾಗಿ ೬೬ ವರ್ಷಗಳು ಕಳೆದು ಹೋಗಿದ್ದುವು. ಅವರ ನಿಕಟವರ್ತಿಗಳ ನೆನಪುಗಳನ್ನು ದಾಖಲಿಸುವ, ಔದಾರ್ಯದ ಉರುಳಲ್ಲಿ ಸಿಲುಕಿದ ಅವರ ಸಮಗ್ರ ಜೀವನ ಚರಿತ್ರೆಯನ್ನು ಬರೆಯುವ ಅವಕಾಶವನ್ನು ನಾವು ಕಳೆದುಕೊಂಡಿದ್ದೇವೆ.

ಉಡುಪಿಯ ಕವಿ ಮುದ್ದಣ ರಸ್ತೆಯಲ್ಲಿರುವ ಸರಕರಿ ಆಸ್ಪತ್ರೆಗೆ (ಈಗಿನ ಮಹಿಳಾ ಆಸ್ಪತ್ರೆ) ಸ್ಥಳದಾನ ಮಾಡಿದವರು ಹಾಜಿ ಅಬ್ದುಲ್ಲಾ ಸಾಹೇಬರು. ಈ ಆಸ್ಪತ್ರೆ ಅಬ್ದುಲ್ಲಾ ಸಾಹೇಬರ ಅಜ್ಜ ಬುಡಾನ್ ಸಾಹೇಬರ ಹೆಸರಿನಲ್ಲಿದೆ. ಉಡುಪಿಯ ವಿ.ಜೆ.ಯು ಕ್ಲಬ್, ಅಂಜುಮಾನ್ ಉರ್ದು ಶಾಲೆ, ಅಂಜುಮಾನ್ ಅತಿಥಿ ಗೃಹಗಳು ಸ್ಥಳದಾನಕ್ಕಾಗಿ ಅಬ್ದುಲ್ಲಾ ಸಾಹೇಬರಿಗೆ ಋಣಿಯಾಗಿವೆ.

ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ, ಬನಾರಸ್ ಹಿಂದೂ ಕಾಲೇಜಿಗೆ ಹಾಜಿ ಅಬ್ದುಲ್ಲಾ ಸಾಹೇಬರು ದಾನ ನೀಡಿದ್ದರು. ೧೯೧೭ರಲ್ಲಿ ಮಂಗಳೂರಿನ ಮಹಿಳಾ ಆಸ್ಪತ್ರೆಗೆ ಅವರು ಆ ಕಾಲದ ದೊಡ್ಡ ಮೊತ್ತ ರೂ, ೫೦೧ ನೀಡಿದ್ದರು. ಡಾ. ಶಿವರಾಮ ಕಾರಂತರಲ್ಲಿ ನಾನು ಅಬ್ದುಲ್ಲಾ ಸಾಹೇಬರು ಕುರಿತು ವಿಚಾರಿಸಿದಾಗ ಅವರು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿರುವ (ಈಗಿನ ವಿ.ವಿ. ಕಾಲೇಜು) ಒಂದು ದತ್ತಿನಿಧಿ ಬಹುಮಾನವನ್ನು ನೆನಪಿಸಿಕೊಂಡರು. ೧೯೦೧ ರಲ್ಲಿ ತನ್ನ ತಂದೆ ಖಾಸಿಮ್ ಸಾಹೇಬರ ‘ಸ್ಮಾರಕ ದತ್ತಿನಿಧಿ’ಯೊಂದನ್ನು ಅಬ್ದುಲ್ಲಾ ಸಾಹೇಬರು ಸ್ಥಾಪಿಸಿದರು. ಬ್ರಿಟಿಷ್ ಸರಕಾರದ ತಹಶೀಲ್ದಾರ್ ರೂ. ೨೫೦ ತಿಂಗಳ ಸಂಬಳ ಪಡೆಯುತ್ತಿದ್ದ ಆ ಕಾಲದಲ್ಲಿ ಅವರು ದತ್ತಿನಿಧಿಗೆ ನೀಡಿದ ಹಣ ಒಂದು ಸಾವಿರ ರೂಪಾಯಿಗಳು! ಸಂಸ್ಕೃತ ಮತ್ತು ಇಂಗ್ಲಿಷ್‌ನಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಈ ದತ್ತಿನಿಧಿ ಬಹುಮಾನ ಮೀಸಲಾಗಿತ್ತು. ಅದರ ಬಡ್ಡಿಯಿಂದ ವಿದ್ಯಾರ್ಥಿಗಳಿಗೆ ಹೊರಲು ಕಷ್ಟವಾಗುವಷ್ಟು ಪುಸ್ತಕಗಳು ಬಹುಮಾನದ ರೂಪದಲ್ಲಿ ಸಿಗುತ್ತಿದ್ದುವಂತೆ! ಮೊದಲ ಮಹಾಯುದ್ಧದ ಬೆಲೆ ಏರಿಕೆಯ ದಿನಗಳಲ್ಲಿ (೧೯೧೪-೧೮). ಬಡವರು ಕಂಗಾಲಾದಾಗ ಅಬ್ದುಲ್ಲಾ ಸಾಹೇಬರು ರಂಗೂವಿನಿಂದ ಅಕ್ಕಿ ತರಿಸಿ ರೂಪಾಯಿಗೆ ಮೂರು ಸೇರಿನಂತೆ ವಿತರಿಸಿದರು.

ಸ್ಥಾಪಕಾಧ್ಯಕ್ಷರು ಉಡುಪಿಯ ಹೃದಯ ಭಾಗದಲ್ಲಿ ಕಟ್ಟಿಸಿದ ಆಸ್ಪತ್ರೆ

ಕಾರ್ಪೊರೇಶನ್ ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದು ನಿವೃತ್ತರಾದ ನಸೀಬ್ ಸಾಹೇಬರು (ಜನನ – ೧೯೧೫) ತಿಳಿಸಿರುವಂತೆ, “ಅಬ್ದುಲ್ಲಾ ಸಾಹೇಬರು ದಾನ- ಧರ್ಮಗಳಿಗೆ ಪ್ರಸಿದ್ಧರಾಗಿದ್ದರು. ಹಬ್ಬಗಳಂದು ತನ್ನ ಮನೆಯಲ್ಲಿ ಸಾವಿರಾರು ಜನರಿಗೆ ಊಟ ಹಾಕುತ್ತಿದ್ದರು. ಪ್ರತಿದಿನ ಒಂದು ಮುಡಿ ಅಕ್ಕಿ ದಾನ ಮಾಡುತ್ತಿದ್ದರು. ಮದುವೆ ಖರ್ಚಿಗೆ, ರೋಗಿಗಳ ಶುಶ್ರೂಷೆಗೆ ಸಹಾಯ ಕೇಳಿದವರಿಗೆ ಕನಿಷ್ಠ ೫೦ ರೂಪಾಯಿ ದಾನ ನೀಡುತ್ತಿದ್ದರು. ಇದು ಆ ಕಾಲದಲ್ಲಿ ದೊಡ್ಡ ಮೊತ್ತವಾಗಿತ್ತು. ನಾನು ಮೆಟ್ರಿಕ್‌ವರೆಗೆ  ಕಲಿಯಲು ಆರ್ಥಿಕ ಸಹಾಯ ನೀಡಿದವರು ಅಬ್ದುಲ್ಲಾ ಸಾಹೇಬರು. ಉಡುಪಿ ಲಕ್ಷ ದೀಪೋತ್ಸವಕ್ಕೆ ಮತ್ತು ಪರ್ಯಾಯಕ್ಕೆ ಅವರು ತುಪ್ಪ ಮತ್ತಿತರ ವಸ್ತುಗಳನ್ನು ದಾನವಾಗಿ ಕಳುಹಿಸುತ್ತಿದ್ದರು.”

ಉಡುಪಿಯ ಅನುಪ್‌ರಾಮ್ ನಾನಾಲಾಲ್ ಪಂಡ್ಯಾ (೧೯೨೨-೧೯೯೫) ನನಗೆ ನೀಡಿದ ಸಂದರ್ಶನದಲ್ಲಿ ಅಬ್ದುಲ್ಲಾ ಸಾಹೇಬರ ಜನೋಪಕಾರಿ ವ್ಯಕ್ತಿತ್ವವನ್ನು ನೆನಪಿಸಿಕೊಂಡರು – “ಒಕ್ಕಲುಗಳಿಗೆ ಗೇಣಿ ಕೊಡಲು ಅಸಾಧ್ಯವಾದಾಗ ಸಾಹೇಬರು ಗೇಣಿ ಮಾಫಿ ಮಾಡುತ್ತಿದ್ದರು. ಬೆಳೆ ಹಾಳಾದರೆ ಒಕ್ಕಲುಗಳಿಗೆ ಖರ್ಚಿಗೆ ಹಣವನ್ನು ತಾನೇ ಕೊಡುತ್ತಿದ್ದರು. ಕಡ ಕೊಡುವಾಗ ಅವರು ಲೆಕ್ಕ ಬರೆದಿಡುತ್ತಿರಲಿಲ್ಲ. ಕವಾಟು ತೋರಿಸಿ ‘ಅಲ್ಲಿಂದ ಹಣ ತೆಗೆದುಕೊ’ ಎನ್ನುತ್ತಿದ್ದರಂತೆ. ಈ ಸಲಿಗೆಯನ್ನು ದುರುಪಯೋಗಪಡಿಸಿದವರೂ ಇದ್ದರು.”

ಕು.ಶಿ. ಹರಿದಾಸ ಭಟ್ಟರು ಬರೆದಿರುವಂತೆ, “ಅವರು ಸುಕೋಮಲ ವ್ಯಕ್ತಿತ್ವ, ಪ್ರಿಯಭಾಷೆ, ಮಾರ್ದವಗಳು ಜನಜನಿತವಷ್ಟೆ. ಒಮ್ಮೆ ಅವರ ದನಗಳನ್ನು ಹಟ್ಟಿಗೆ ಅಟ್ಟುವ ಆಳು ಯಾವುದೋ ಒಂದು ದನಕ್ಕೆ ಕೋಲಿಂದ ತಿವಿದನಂತೆ. ಇದನ್ನು ಮಹಡಿಯಿಂದ ನೋಡಿದ ಅಬ್ದುಲ್ಲಾ ಸಾಹೇಬರು ಆತನನ್ನು ಒಳಗೆ ಕರೆದು ಗದರಿಸಲಿಲ್ಲ. ‘ನೋಡು ಅದು ಪಾಪದ ಪ್ರಾಣಿ. ಅಕದ್ಕೆ ಬಾಯಿ ಬರುತ್ತದೆಯೇ? ಹೊಡೆದರೆ ತಿಳಿಯುತ್ತದೆಯೆ? ಸ್ವಲ್ಪ ನಟನೆ, ಕರುಣೆ ಬೇಕು’ ಎಂದು ಮೃದುಭಾಷಿತದಲ್ಲೇ ಹೇಳಿದರಂತೆ.” (ಮುರಳೀಧರ ಉಪಾಧ್ಯ, ಎಚ್.ಡುಂಡಿರಾಜ್ (ಸಂ.), ೨೦೦೧).

ಕಾರ್ಪೊರೇಶನ್ ಬ್ಯಾಂಕಿನ ಅಧಿಕಾರಿಯಾಗಿದ್ದು ನಿವೃತ್ತರಾದ ಉಡುಪಿ ಸದಾನಂದ ಶೇಟ್ ಅವರು ತಿಳಿಸಿರುವಂತೆ, “ಉಡುಪಿ ಊರೆಲ್ಲೆ ಆಗಿನ ಕಾಲದಲ್ಲಿ ಅಬ್ದುಲ್ಲ ಸಾಹೇಬರು ಅತ್ಯಂತ ಶ್ರೀಮಂತರು. ಸಾವಿರಾರು ಮುಡಿ ಅಕ್ಕಿ ಉತ್ಪನ್ನ ಪಡೆಯುವ ಗದ್ದೆ ಹೊಲಗಳ ಒಡೆಯರು. ಅಬ್ದುಲ್ಲಾ ಸಾಹೇಬರು ಉಡುಪಿ ಪೇಟೆಯಲ್ಲಿ ಕೆಲವು ಸಾರಿ ನಡೆದುಕೊಂಡು ಬರುವಾಗೈ ಸಮಸ್ತ ಜನರು ಅವರಿಗೆ ನಮಸ್ಕಾರ ಹಾಕುತ್ತಿದ್ದರು. ಪ್ರತಿ ನಮಸ್ಕಾರ ಹಾಕಿ ಅವರ ಕೈ ಸೋಲುತ್ತಿತ್ತಂತೆ.

ದಿ| ಅಬ್ದುಲ್ಲಾ ಸಾಹೇಬರು ಉಡುಪಿ ಶ್ರೀ ಕೃಷ್ಣದೇವರ ಅನನ್ಯ ಭಕ್ತರು. ಕೆಲವು ಸಾರಿ ಶ್ರೀ ಅಬ್ದುಲ್ಲಾ ಸಾಹೇಬರು ಉಡುಪಿಯ ರಥಬೀದಿಗೆ ಬಂದಾಗೈ. ಸಾಯಂಕಾಲದ ಸಮಯದಲ್ಲಿ ಎಲ್ಲಾ ಕಡೆ ತಿರುಗಿ ನೋಡಿ ಅವರ ಸಮಾಜದ ಯಾರೂ ಹತ್ತಿರ ಇಲ್ಲವಂದು ತಿಳಿದ ಮೇಲೆ ಶ್ರೀ ಕೃಷ್ಣ ದೇವರಿಗೆ ನಮಸ್ಕಾರ ಮಾಡಿ, ಕಾಣಿಕೆಯನ್ನು ಡಬ್ಬಿಯೊಳಗೆ ಹಾಕಿ ಹೋಗುತ್ತಿದ್ದರಂತೆ. ಅಂದಿನ ಕಾಲದಲ್ಲಿ ಶ್ರೀ ಕೃಷ್ಣಮಠದಲ್ಲಿ ಆದಾಯ ಕಮ್ಮಿ ಇರುತ್ತಿತ್ತು. ಕೆಲವು ಸಾರಿ ಅವರು ಸ್ವತಃ ಬಂದು ಶ್ರೀ ದೇವರ ಡಬ್ಬಿಯಲ್ಲಿ ಸಾಕಷ್ಟು ಹಣ ಸುರುವುತ್ತಿದ್ದರಂತೆ. ಯಾಕೆಂದರೆ ಶ್ರೀ ದೇವರ ಸೇವೆ ನಿರಂತರ ನಡೆಯಬೇಕು, ಚ್ಯುತಿ ಬರಬಾರದು ಎಂದು ಅವರ ಆಶಯವಾಗಿತ್ತು. ಪರ್ಯಾಯ ಕಾಲದಲ್ಲಿ ಎಣ್ಣೆಯನ್ನು, ಊಟಕ್ಕೆ ಚ್ಯುತಿ ಬಾರದಂತೆ ಅಕ್ಕಿ ಸಾಂಬಾರು ಪಾದಾರ್ಥಗಳನ್ನು ಕಳುಹಿಸುವ ಪರಿಪಾಠ ಇದ್ದಿತ್ತಂತೆ.

ಶ್ರೀ ಕೃಷ್ಣಾಪುರ ಸ್ವಾಮಿಗಳವರ ಪರ್ಯಾಯ ಕಾಲ

ಶ್ರೀಪಾದರು ಶ್ರೀಕೃಷ್ಣದೇವರಿಗೆ ಚಿನ್ನದ ಪಾಲಕಿ ಮಾಡಬೇಕೆಂದು ಸಂಕಲ್ಪ ಮಾಡಿದ್ದರಂತೆ. (ಈಗ ಶ್ರೀ ಕೃಷ್ಣದೇವರ ಮಠದಲ್ಲಿ ನಿತ್ಯ ಸೇವೆಗೆ ಇರುವ ಚಿನ್ನದ ಪಾಲಕಿ.) ಹಾಗೆಯೇ ಶ್ರೀಪಾದರು ಮಠದ ದಿವಾರನ್ನು ಅಬ್ದುಲ್ಲಾ ಸಾಹೇಬರಲ್ಲಿ ಕಳುಹಿಸಿ ಶ್ರೀ ದೇವರಿಗೆ ಚಿನ್ನದ ಪಾಲಕಿಯನ್ನು ಮಾಡುವ ಸಂಕಲ್ಪವನ್ನು ನಿವೇದಿಸಿದರು. ಅಬ್ದುಲ್ಲಾ ಸಾಹೇಬರು ತಡ ಮಾಡದೆ ಅವರ ಮನೆಯ ಒಳಗೆ ಹೋಗಿ ಒಂದು ಸೇರು ತುಂಬಾ ಚಿನ್ನದ ಪವನುಗಳನ್ನು ಶ್ರೀ ಕೃಷ್ಣ ದೇವರಿಗೆ ಒಪ್ಪಿಸಿದರಂತೆ. ಈ ವಿಷಯವನ್ನು, ನನ್ನ ಬಾಲ್ಯದಲ್ಲಿ, ನಮ್ಮ ಮನೆಯ ಹತ್ತಿರವೇ ಇದ್ದ ವಿಶ್ವಕರ್ಮ ಶಿಲ್ಪಿ (ಅವರೇ ಶ್ರೀ ಕೃಷ್ಣ ಮಠದ ಪಾಲಕಿಯನ್ನು ಮಾಡಿದವರು)ಯ ದೊಡ್ಡ ತಾಯಿಯವರು ನಮಗೆ ತಿಳಿಸಿದ್ದರು. ಉತ್ಕೃಷ್ಟ ಶೈಲಿಯ ವಿನೂತನ ಕುಸುರಿ ಚಿನ್ನದ ಕೆಲಸದ ಪಾಲಕಿ ಬಹುಶಃ ನಮ್ಮ ದೇಶದಲ್ಲೇ ಅಪರೂಪವೆನಿಸಿರಬಹುದಾದ ಶೈಲಿಯಲ್ಲಿ ಶ್ರೀ ಕೃಷ್ಣದೇವರ ವಿಶೇಷಾನುಗ್ರಹದಿಂದ ನಿರ್ಮಾಣವಾಯಿತು. ಆ ಚಿನ್ನದ ಪಾಲಕಿಯ ದೊಡ್ಡ ದಾನಿಗಳಲ್ಲಿ ಅಬ್ದುಲ್ಲಾ ಸಾಹೇಬರೂ ಒಬ್ಬರು.

ಅಬ್ದುಲ್ಲಾ ಸಾಹೇಬರ ಅತಿಥಿ ಸತ್ಕಾರ ಪ್ರಶಂಸನೀಯ. ಸಾಹೇಬರು ಗೋಕುಲಾಷ್ಟಮಿ, ಗಣೇಶ ಚತುರ್ಥಿ, ದೀಪಾವಳಿ, ನವರಾತ್ರಿ ಇಂತಹ ಹಬ್ಬ ಹರಿದಿನಗಳಲ್ಲಿ ಅವರ ಮನೆಯಲ್ಲೇ ಬ್ರಾಹ್ಮಣ ಅಡುಗೆಯವರನ್ನು ಕರೆಸಿ ಶ್ರೀ ಕೃಷ್ಣ ಮಠ ಮತ್ತು ಇತರ ಹಿಂದೂ ಮತೀಯರ ಮನೆಯಲ್ಲಿ ಏನು ಹಬ್ಬದ ಊಟ ಮಾಡುತ್ತಾರೋ ಅದೇ ರೀತಿಯಲ್ಲಿ ಮಾಡಿಸಿ, ಅವರ ಸಂಬಂಧಿಕರಿಗೆ, ನೆಂಟರಿಷ್ಟರಿಗೆ, ಸ್ನೇಹಿತರಿಗೆ, ಹಬ್ಬದ ಊಟವನ್ನು ಉಣಬಡಿಸುತ್ತಿದ್ದರಂತೆ…

ಹೀಗೆ ಅಪಾರ ದಾನಧರ್ಮ ಜನತಾ ಜನಾರ್ಧನನ ಸೇವೆ ಮಾಡಿ ಕಡೇಕಾಲದಲ್ಲಿ ಅವರ ಕೈ ಬರಿದಾಗುತ್ತಾ ಬಂತು. ಅವರ ಅಂತಿಮ ದಿನಗಳಲ್ಲಿ ಅವರು ತುಂಬಾ ಕಷ್ಟವನ್ನು ಅನುಭವಿಸಿದ್ದರಂತೆ.” (ಪತ್ರ, ೩೦-೭-೨೦೦೫).

ಕಾರ್ಪೊರೇಶನ್ ಬ್ಯಾಂಕಿನ ಉದ್ಯೋಗದಲ್ಲಿದ್ದು ನಿವೃತ್ತರಾಗಿ ಈಗ ಉಡುಪಿಯಲ್ಲಿ ನೆಲೆಸಿರುವ ಶ್ರೀ ಎಸ್.ವಿ. ನಾಯಕ್ ಅಬ್ದುಲ್ಲಾ ಸಾಹೇಬರ ಕುರಿತು ಭಾವುಕರಾಗಿ ಮಾತನಾಡುತ್ತಾರೆ – “ಒಬ್ಬನ ಶ್ರೀಮಂತಿಕೆಯ ಮಾತು ಬಂದಾಗ, “ಅವನು ನಮ್ಮ ಅಬ್ದುಲ್ಲಾ ಸಾಹೇಬನಿಗಿಂತ, ಹೆಚ್ಚು ಶ್ರೀಮಂತನೋ” ಎಂದು ಕೇಳುತ್ತಿದ್ದರು… ಕಾರ್ಪೊರೇಶನ್ ಬ್ಯಾಂಕಿನ ಕೆಲವು ಉದ್ಯೋಗಿಗಳ ಪಾಲಿಗೆ ಅಬ್ದುಲ್ಲಾ ಸಾಹೇಬರು ಕಾರಣಿಕದ ವ್ಯಕ್ತಿಯಾಗಿದ್ದಾರೆ. ಕಷ್ಟ ಪರಿಹಾರವಾದರೆ ಬ್ಯಾಂಕಿನ ಉಡುಪಿ ಶಾಖೆಯಲ್ಲಿರುವ ಅಬ್ದುಲ್ಲಾ ಸಾಹೇಬರ ಭಾವಚಿತ್ರಕ್ಕೆ ಮಾಲೆ ಹಾಕುತ್ತೇನೆ ಎಂದು ಹರಕೆ ಹೊತ್ತವರೂ ಇದ್ದಾರೆ.”

ಹಾಜಿ ಅಬ್ದುಲ್ಲಾ ಸಾಹೇಬರ ಸೋದರಿ ಲತೀಫಾ ಬೀಬಿ ಅವರ ಮೊಮ್ಮಗ ಡಾ| ಎಸ್.ಎ. ಹುಸೇನ್ ಅಂತಾರಾಷ್ಟ್ರೀಯ ಖ್ಯಾತಿಯ ಪಕ್ಷಿಶಾಸ್ತ್ರಜ್ಞರು.

ಉಡುಪಿಯ ಮುನಿಸಿಪಾಲಿಟಿ ಕಾರ್ಯಾರಂಭ ಮಾಡಿದ್ದು ೧೯೩೫ರಲ್ಲಿ ಅಬ್ದುಲ್ಲಾ ಸಾಹೇಬರು ಅದರ ಪ್ರಥಮ ಅಧ್ಯಕ್ಷರಾಗಿದ್ದರು. ಈಗ ಕರ್ನಾಟಕ ಸರಕಾರದ ಸಚಿವರಾಗಿರುವ ಡಾ|ವಿ. ಎಸ್. ಆಚಾರ್ಯರು ನೀಡಿದ ಸೂಚನೆಯ ಮೇರೆಗೆ, ನಾನು ಮತ್ತು ಶ್ರೀ ಡುಂಡಿರಾಜರು ನಗರಸಭೆಗೆ ಹೋಗಿ ವಿಚಾರಿಸಿದಾಗ ಅಬ್ದುಲ್ಲಾ ಸಾಹೇಬರ ಕುರ್ಚಿ ಕಾಣಸಿಕ್ಕಿತ್ತು. ಮೊದಲ ಅಧ್ಯಕ್ಷರಾಗಿ ಅಬ್ದುಲ್ಲಾ ಸಾಹೇಬರು ಕುಳಿತುಕೊಳ್ಳುತ್ತಿದ್ದ ಕುರ್ಚಿಯಲ್ಲೇ ಈಗಿನ ಅಧ್ಯಕ್ಷರು ಕುಳಿತುಕೊಳ್ಳುತ್ತಾರೆ. ಅಬ್ದುಲ್ಲಾ ಸಾಹೇಬರ ಭಾವಚಿತ್ರ ಉಡುಪಿ ನಗರಸಭೆಯಲ್ಲಿದೆ.

ಹಾಜಿ ಅಬ್ದುಲ್ಲಾ ಸಾಹೇಬರ ಕುರ್ಚಿ (೧೯೩೫ ರಲ್ಲಿ ಉಡುಪಿ ಮುನಿಸಿಪಾಲಿಯ ಅಧ್ಯಕ್ಷರಾಗಿದ್ದಾಗ)

ಕು.ಶಿ. ಹರಿದಾಸ ಭಟ್ಟರು ತನ್ನ ಲೇಖನವೊಂದರಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರನ್ನು ‘ಉಡುಪಿಯ ಅಕ್ಬರ’ ಎಂದು ಕರೆದಿದ್ದಾರೆ. ‘ಈಶ್ವರ ಅಲ್ಲಾ ತೇರೇ ನಾಮ್, ಸಬ್‌ಕೋ ಸನ್ಮತಿ ದೇ ಭಗವಾನ್’ ಎಂಬುದು ಅಬ್ದುಲ್ಲಾ ಸಾಹೇಬರ ಪ್ರಾರ್ಥನೆಯಾಗಿತ್ತು.

ಅಬ್ದುಲ್ಲಾ ಸಾಹೇಬರು ನಿಧನರಾಗಿ ೭೦ ವರ್ಷಗಳಾದರೂ ಅವರು ದಂತಕತೆಗಳ ರೂಪದಲ್ಲಿ ಈಗಲೂ ಜೀವಂತವಾಗಿದ್ದಾರೆ ಎಂಬುದಕ್ಕೆ ಈಚೆಗೆ ಇನ್ನೂ ಒಂದು ಪುರಾವೆ ಸಿಕ್ಕಿತು. ನಾನು ಯಾವಾಗಲೂ ಔಷಧಿ ಖರೀದಿಸುವ ಅಂಗಡಿಯ ಕಾಮತರು ಮೊನ್ನೆ -“ಏನ್ ಮಾಷ್ಟ್ರೇ? ಇವತ್ತು ಲೇಟು?” ಅಂತ ಕೇಳಿದರು. ನಾನು ಹಾಜಿ ಅಬ್ದುಲ್ಲಾರ ಜೀವನ ಚರಿತ್ರೆ ಬರೆಯುತಿರುವ ಸಂಗತಿ ಹೇಳಿದೆ. ತಕ್ಷಣ ಕಾಮತರು “ಓಹೋ ಅಬ್ದುಲ್ಲಾ ಸಾಹೇಬರಾ! ಅವರ ವಿಷಯ ನಮ್ಮ ಅಜ್ಜ ಬೆಳುವಾಯಿ ರಾಮ ಕಾಮತರು ಯಾವಾಗಲೂ ಮಾತಾಡುತ್ತಿದ್ದರು ಎಂದು ಈ ಕೆಳಗಿನ ಪ್ರಸಂಗವನ್ನು ಹೇಳಿದರು.

ಆಗ ಉಡುಪಿಯಿಂದ ಮಂಗಳೂರಿಗೆ ವಾಹನದಲಿ ಹೋಗಬೇಕಾದರೆ ಕಾರ್ಕಳ, ಬೆಳುವಾಯಿ, ಮೂಡಬಿದ್ರೆ ಮಾರ್ಗವಾಗಿ ಪ್ರಯಾಣಿಸಬೇಕಿತ್ತು. ಉಡುಪಿಯಲ್ಲಿ ಮೊದಲ ಕಾರನ್ನು ತಂದವರು ಎಂಬ ಕೀರ್ತಿಗೆ ಭಾಜನರಾಗಿದ್ದ ಅಬ್ದುಲ್ಲಾ ಸಾಹೇಬರು ಒಮ್ಮೆ ಮಂಗಳೂರಿಗೆ ಹೋಗುತ್ತಿದ್ದಾಗ ಅವರ ಕಾರು ಬೆಳುವಾಯಿಯಲ್ಲಿ ಹೊಂಡಕ್ಕೆ ಬಿತ್ತು. ಆಗ ಬೆಳುವಾಯಿ ರಾಮ ಕಾಮತರು ಜನರನ್ನು ಒಟ್ಟುಕೂಡಿಸಿ ಕಾರನ್ನು ಮೇಲಕ್ಕೆತ್ತಲು ಸಹಾಯ ಮಾಡಿದರು. ಅಬ್ದುಲ್ಲಾ ಸಾಹೇಬರು ಅವರ ಹೆಸರನ್ನು ಕೇಳಿ ಧನ್ಯವಾದ ಹೇಳಿ ಮುಂದಕ್ಕೆ ಹೋದರು.

ಈ ಘಟನೆಯಾಗಿ ನಾಲ್ಕು ವರ್ಷಗಳ ನಂತರ ಬೆಳುವಾಯಿ ರಾಮ ಕಾಮತರು ಬಡತನದಿಂದಾಗಿ ತಮ್ಮ ಊರನ್ನು ಬಿಟ್ಟು ಉಡುಪಿಗೆ ವಲಸೆ ಬಂದರು. ಯಾವುದಾದರೂ ಉದ್ಯೋಗ ಕೈಗೊಂಡು ಜೀವನ ಸಾಗಿಸುವ ಇರಾದೆಯಿಂದ ಉಡುಪಿಗೆ ಬಂದಿದ್ದ ಕಾಮತರಿಗೆ ಅವರ ಬಂಧುಗಳ್ಯಾರೂ ನೆರವು ನೀಡಲಿಲ್ಲ. ದಿಕ್ಕೇ ತೋಚದ ಪರಿಸ್ಥಿತಿಯಲ್ಲಿ ರಾಮ ಕಾಮತರು ಹಾಜಿ ಅಬ್ದುಲ್ಲಾರ ಬಳಿಗೆ ಹೋದರು. ಇವರನ್ನು ನೋಡುತ್ತಲೇ ಅಬ್ದುಲ್ಲಾ ಸಾಹೇಬರು ನಾಲ್ಕು ವರ್ಷಗಳ ಹಿಂದೆ ಬೆಳುವಾಯಿಯಲ್ಲಿ ಕಾರು ಹೊಂಡಕ್ಕೆ ಬಿದ್ದ ಪ್ರಸಂಗವನ್ನು ನೆನಪಿಸಿಕೊಂಡರು. ನನಗೆ ಸಹಾಯ ಮಾಡಿದ ನಿಮ್ಮನ್ನು ಮರೆಯುವುದು ಹೇಗೆ?” ಅನ್ನುತ್ತ ಬಂದ ಕಾರಣವನ್ನು ಕೇಳಿದರು. ಉದ್ಯೋಗ ಶುರು ಮಾಡುವವರೆಗೆ ಅವರ ಊಟಕ್ಕೆಂದು ಎರಡು ಮುಡಿ ಅಕ್ಕಿಯನ್ನು ಕೊಟ್ಟರು. ತಾವು ಕೇಳುವ ಮೊದಲೇ ಸಹಾಯ ಮಾಡಿದ ಅಬ್ದುಲ್ಲಾ ಸಾಹೇಬರೆಂಬ ಕೊಡುಗೈ ದಾನಿಯ ವಿಶಾಲ ಹೃದಯವನ್ನು ಕಂಡು ಬೆಳುವಾಯಿ ರಾಮ ಕಾಮತರು ಮೂಕವಿಸ್ಮಿತರಾಗಿದ್ದರು.

ರಾಮ ಕಾಮತರು ಕೊನೆಯ ಉಸಿರು ಇರುವ ತನಕವೂ ಅಬ್ದುಲ್ಲಾ ಸಾಹೇಬರ ಸಹಾಯವನ್ನು ಕೃತಜ್ಞತೆಯಿಂದ ನೆನಪು ಮಾಡಿಕೊಳ್ಳುತ್ತಿದದರು. ಈಗ ಅವರ ಮೊಮ್ಮಗ ಶ್ರೀ ಗಣಪತಿ ಕಾಮತರ ನೆನಪಿನಲ್ಲೂ ಅಬ್ದುಲ್ಲಾ ಸಾಹೇಬರು ಹೆಸರು ಹಸಿರಾಗಿ ಉಳಿದಿದೆ.

ಹುಡುಕಿದರೆ ಉಡುಪಿಯ ಮನೆ ಮನೆಗಳಲ್ಲೂ ಇಂತ ಘಟನೆಗಳು ಸಿಗಬಹುದು.

* * *