ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಸ್ವಾತಂತ್ರ್ಯ ಚಳುವಳಿಯ ಪ್ರೇರಣೆ, ಪ್ರಚಾರಕ್ಕೆ ದಕ್ಷಿಣ ಕನ್ನಡದ ಪತ್ರಿಕೆಗಳು ನೀಡಿದ ಕೊಡುಗೆ ಮಹತ್ವದ್ದು. ಆಧುನಿಕ ಜನಪ್ರಿಯವಾಗುತ್ತಿದ್ದ, ರೇಡಿಯೊ, ಟಿವಿಗಳು ಇಲ್ಲದ ಕಾಲವದು. ದ.ಕ.ದ ವಿದ್ಯಾವಂತರು ಬೇಸಿಗೆಯಲ್ಲಿ ಮಳೆಗಾಲವನ್ನು ನಿರೀಕ್ಷಿಸುವಷ್ಟು ಕುತೂಹಲದಿಂದ ಪತ್ರಿಕೆಗಳನ್ನು, ಅವುಗಳಲ್ಲಿದ್ದ ಸ್ವಾತಂತ್ರ್ಯ ಚಳುವಳಿಯ ಸುದ್ದಿಗಳನ್ನು ಕಾಯುತ್ತಿದ್ದರು. ಮಂಗಳೂರಿನ ಕವಿ, ಪತ್ರಿಕಾ ಸಂಪಾದಕ ಕಡೆಂಗೋಡ್ಲು ಶಂಕರಭಟ್ಟರು ಮದ್ರಾಸ್‌ನಿಂದ ಬರುತ್ತಿದ್ದ ‘ಹಿಂದೂ’ ಪತ್ರಿಕೆಗಾಗಿ ರೈಲ್ವೇ ಸ್ಟೇಶನ್‌ನಲ್ಲಿ ಕಾಯುತ್ತಿದ್ದರಂತೆ!

ಹರ್ಮನ್ ಮೊಗ್ಲಿಂಗ್ ೧೮೪೨ರಲ್ಲಿ ಆರಂಭಿಸಿದ ‘ಕನ್ನಡ ಸಮಾಚಾರ’ ಮತ್ತು ಕನ್ನಡದ ಮೊದಲ ಪತ್ರಿಕೆ. ಮುಂದೆ ಉಡುಪಿ ಮಂಗಳೂರುಗಳಿಂದ ಹಲವಾರು ವಾರ, ಮಾಸಪತ್ರಿಕೆಗಳು ಪ್ರಕಟವಾಗತೊಡಗಿದುವು. “ಹಾಜಿ ಅಬ್ದುಲ್ಲಾ ಸಾಹೇಬರ ಕಾಲದ ಮುಖ್ಯ ಪತ್ರಿಕೆಗಳಿವು – ೧. ಅನಂತರಾವ್ ಅವರ ‘ಕನ್ನಡ ಕೇಸರಿ’ (೧೮೮೫), ೨. ಬೋಳಾರ ವಿಠಲರಾಯರ ‘ಸುವಾಸಿನಿ’ (೧೯೦೦), ೨. ಉಡುಪಿಯ ಕಡೆಕಾರು ರಾಜಗೋಪಾಲ ಕೃಷ್ಣರಾಯರ ‘ಶ್ರೀಕೃಷ್ಣ ಸೂಕ್ತಿ’ (೧೯೦೫), ೪. ಎ. ಎಸ್. ಕಾಮತ್‌ರ(ಶ್ರೀನಿವಾಸ ಕಾಮತ್) ‘ಸ್ವದೇಶಾಭಿಮಾನಿ’ (೧೯೦೭), ೪ – ಎಂ. ಎನ್. ಕಾಮತರ ‘ಬೋಧಿನಿ’ (೧೯೧೫), ‘ಆನಂದ’ (೧೯೧೭), ೫- ಮುಳಿಯ ತಿಮ್ಮಪ್ಪಯ್ಯನವರ ‘ಕನ್ನಡ ಕೋಗಿಲೆ’ (೧೯೧೬), ೬. ಡಿ. ಕೆ. ಭಾರಧ್ವಾಜರ ‘ಕಂಠೀರವ’ (೧೯೧೬), ೭. ಮೊಳಹಳ್ಳಿ ಶಿವರಾಯರ ‘ಸಹಕಾರಿ’(೧೯೧೬), ಲೆ. ಎ, ಬಿ. ಶೆಟ್ಟರ ‘ನವಯುಗ’ (೧೯೨೧), ೯. ಶಿವರಾಮ ಕಾರಂತರ ‘ವಸಂತ’(೧೯೨೩), ೧೦. ಹಿರಿಯಡ್ಕ ರಾಮರಾಯ ಮಲ್ಯರ ‘ಸತ್ಯಾಗ್ರಹಿ’ (೧೯೨೩), ‘ಸ್ವತಂತ್ರ ಭಾರತ’(೧೯೩೫), ೧೧. ಬಾಳ ರಾಘವೇಂದ್ರ ರಾಯರ ‘ದೇಶ ರಂಜನ’(೧೯೩೧), ಬಿ. ಬಾಬುರಾಯ ಪ್ರಭುಗಳ ‘ಸ್ವದೇಶಿ ಪ್ರಚಾರಕ’(೧೯೩೨), ೧೩. ಜಾರಪ್ಪ, ನರಸಪ್ಪರ – ‘ಬಡವರ ಬಂಧು’.

ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಾಸು ಬಂದದ್ದು ೧೯೧೫ರ ಜನವರಿಯಲ್ಲಿ. ಗೋಪಾಲಕೃಷ್ಣ ಗೋಖಲೆಯವರ ಸಲಹೆಯಂತೆ ಗಾಂಧೀಜಿ ಪರಿಸ್ಥಿತಿಯ ಅಧ್ಯಯನಕ್ಕಾಗಿ ಭಾರತ ಸಂಚಾರ ಆರಂಭಿಸಿದರು. ೧೯೨೦ರಲ್ಲಿ ಗಾಂಧೀಜಿ ಮಂಗಳೂರಿಗೆ ಭೇಟಿ ನೀಡುವ ಸುದ್ದಿ ಬಂದಾಗ ದಕ್ಷಿಣ ಕನ್ನಡದಲ್ಲಿ ಸಂಭ್ರಮವಾದ ಸ್ವಾಗತಕ್ಕೆ ಸಿದ್ಧತೆ ಆರಂಭವಾಯಿತು. ಉಡುಪಿಯ ವರ್ತಕ ಧುರೀಣ, ಕಾರ್ಪೊರೇಶನ್ ಬ್ಯಾಂಕಿನ ಅಧ್ಯಕ್ಷ ಹಾಜಿ ಅಬ್ದುಲ್ಲಾ ಸಾಹೇಬರು ಮಹಾತ್ಮಾ ಗಾಂಧೀಜಿ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಗಾಂಧೀಜಿ ೧೯೨೦ರ ಆಗಸ್ಟ್ ೧೯ರಂದು ಮಂಗಳೂರಿಗೆ ಬಂದರು. ಅವರಿಗಿಂತ ಹದಿಮೂರು ವರ್ಷ ಕಿರಿಯರಾಗಿದ್ದ, ಮೂವತ್ತೆಂಟರ ಹರೆಯದ ಹಾಜಿ ಅಬ್ದುಲ್ಲಾ ಸಾಹೇಬರು ರೈಲ್ವೇ ನಿಲ್ದಾಣದಲ್ಲಿ ಗಾಂಧೀಜಿಯವರನ್ನು ಸ್ವಾಗತಿಸಿದರು. ಗಾಂಧೀಜಿ ಸಾರ್ವಜನಿಕ ಸಭೆ ಹಾಗೂ ಮಹಿಳೆಯರ ಸಭೆಗಳಲ್ಲಿ ಅಸಹಕಾರ ಚಳುವಳಿಯ ತನ್ನ ಕಲ್ಪನೆಯನ್ನು ವಿವರಿಸಿದರು. ಮಹಾತ್ಮನ ಸನ್ನಿಧಿಯಲ್ಲಿ ಕುಳಿತು ಅವರ ‘ಸ್ಫಟಿಕದ ಶಲಾಕೆಯಂತ’ ಮಾತುಗಳನ್ನು ಕೇಳುತ್ತ ಅಬ್ದುಲ್ಲಾ ಸಾಹೇಬರು ‘ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ’ ಎಂದು ಸಂತೋಷಪಟ್ಟರು. ನೂರಾರು ಮಹಿಳೆಯರು ತಮ್ಮ ಆಭರಣಗಳನ್ನು ತೆಗೆದು ಅರ್ಪಿಸಿದ್ದನ್ನು ಕಂಡು ಗಾಂಧೀಜಿ ಆನಂದಬಾಷ್ಪ ಸುರಿಸಿದರು.

ಗಾಂಧೀಜಿಯವರೊಂದಿಗೆ ಅಬ್ದುಲ್ಲಾ ಸಾಹೇಬರು. ಚಿತ್ರ - ಶ್ರೀ ರಾಘವ ಆಚಾರ್‌

೧೯೨೭ರಲ್ಲಿ ಗಾಂಧೀಜಿ ಖಾದಿ ಪ್ರಚಾರ ಮಾಡಲಿಕ್ಕಾಗಿ ಮತ್ತೊಮ್ಮೆ ದಕ್ಷಿಣ ಕನ್ನಡಕ್ಕೆ ಬಂದರು. ಗಾಂಧೀಜಿಗೆ ಅರ್ಪಿಸಿದ ಒಂದು ಲಕ್ಷ ರೂಪಾಯಿಗಳ ನಿಧಿಯಲ್ಲಿ ಅಬ್ದುಲ್ಲಾ ಸಾಹೇಬರ ಕೊಡುಗೆಯೂ ಇತ್ತು. ನೀಲೇಶ್ವರ, ಕಾಸರಗೋಡು, ಬಂಟವಾಳ, ಕುಂದಾಪುರ, ಕಾರ್ಕಳ, ಉಡುಪಿಗಳಲ್ಲಿ ಗಾಂಧೀಜಿ ಭಾಷಣ ಮಾಡಿದರು. ಗಾಂಧೀಜಿಯ ‘ಗುಪ್ತಭಕ್ತ’ರಾಗಿದ್ದ ಅಬ್ದುಲ್ಲ ಸಾಹೇಬರಿಗೆ ಮತ್ತೊಮ್ಮೆ ಅವರನ್ನು ಭೇಟಿಯಾಗುವ, ಅಭಿನಂದಿಸುವ ಅವಕಾಶ ಸಿಕ್ಕಿತು.

ಮಹಾತ್ಮಾ ಗಾಂಧೀಜಿಯವರು ೧೯೩೪ರಲ್ಲಿ ಫೆಬ್ರವರಿಯಲ್ಲಿ ಮೂರನೆಯ ಬಾರಿ ದಕ್ಷಿಣ ಕನ್ನಡಕ್ಕೆ ಬಂದಾಗ ಅಬ್ದುಲ್ಲಾ ಸಾಹೇಬರು ಆರ್ಥಿಕ ಸಮಸ್ಯೆಗಳಿಂದಾಗಿ ಕೊರಗುತ್ತಿದ್ದರು. ಗಾಂಧೀಜಿ ಹರಿಜನರ ಸಮಸ್ಯೆಯ ಕುರಿತು ಪ್ರಚಾರ ಮಾಡಲು ಬಂದಿದ್ದರು. ಫೆಬ್ರವರಿ ೨೪ ರಂದು ಸಂಪಾಜೆ, ಸುಳ್ಯ, ಪುತ್ತೂರು, ವಿಟ್ಲ, ಕಬಕ, ಕಲ್ಲಡ್ಕ, ಪಾಣೆ ಮಂಗಳೂರು, ಬಂಟ್ವಾಳ, ಅರ್ಕುಳ, ಅಡ್ಯಾರು, ಮಂಗಳೂರುಗಳಿಗೆ ಭೇಟಿ ನೀಡಿದರು. ಫೆಬ್ರವರಿ ೨೫ ಮತ್ತು ೨೬ ರಂದು ಗಾಂಧೀಜಿ ಗುರುಪುರ, ಬಜ್ಪೆ, ಯೆಕ್ಕಾರು, ಕಟೀಲು, ಕಿನ್ನಿಗೋಳಿ, ಮುಲ್ಕಿ, ಪಡುಬಿದ್ರಿ, ಕಟಪಾಡಿ, ಉಡುಪಿ, ಬ್ರಹ್ಮಾವರ, ಕುಂದಾಪುರಗಳಿಗೆ ಬಂದರು. ಫೆಬ್ರವರಿ ೨೭ರಂದು ಗಾಂಧೀಜಿ ಹಡಗಿನ ಮೂಲಕ ಕಾರವಾರಕ್ಕೆ ಪ್ರಯಾಣ ಮಾಡಿದರು.

ಉದ್ಯಾವರದಲ್ಲಿ ದೋಣಿಯಿಂದ ಇಳಿಯುತ್ತಿರುವ ಗಾಂಧೀಜಿ

ಕಾರ್ನಾಡ್ ಸದಾಶಿವರಾವ್, ಹಿರಿಯಡ್ಕ ರಾಮರಾಯ ಮಲ್ಯ, ಹಿರಿಯಡ್ಕ ನಾರಾಯಣರಾವ್, ತೋನ್ಸೆ ಮುಕುಂದ ಪೈ, ಕೋಟ ರಾಮಕೃಷ್ಣ ಕಾರಂತ, ಶಿವರಾಮ ಕಾರಂತ, ಡಿ.ಕೆ. ಭಾರದ್ವಜ, ಅಮಾಸೆಬೈಲು ಕೃಷ್ಣರಾವ್ ಕೊಡ್ಗಿ, ಎಂ.ಉಮೇಶ್ ರಾವ್, ಆರ್.ಕೆ. ಪ್ರಭು, ಶೇಕ್ ಯೂಸುಫ್ ಸಾಹೇಬ, ಅಬ್ದುಲ್ ಖಾದರ್ ಅಸ್ಸಾದಿ, ಎಸ್. ಯು. ಪಣಿಯಾಡಿ, ಪೊಳಲಿ ಶೀನಪ್ಪ ಹೆಗ್ಡೆ, ಖಂಡಿಗೆ ಕೃಷ್ಣಭಟ್, ಚರ್ಡಪ್ಪ ಕಾಮತ್, ಪ್ರೊ. ಎಂ. ಎಂ. ರಾಮರಾವ್, ಕಮಲಾದೇವಿ ಚಟ್ಟೋಪಾಧ್ಯಾಯ, ಎ. ಬಿ. ಶೆಟ್ಟಿ, ಎಂ. ಡಿ.ಅಧಿಕಾರಿ, ರಂಗನಾಥ ಪ್ರಭು ಕಾರ್ಕಳ, ಸಾಂತ್ಯಾರು ಅನಂತಪದ್ಮನಾಭ ಭಟ್, ಪಡ್ರೆ ವಿಷ್ಣು ಕಡಂಬಳಿತ್ತಾಯ, ಕೆ.ಕೆ. ಶೆಟ್ಟಿ, ಉಡುಪಿ ಗೋವಿಂದ ರಾವ್, ಬಸ್ರೂರು ಸೂರಪ್ಪ ಶೆಟ್ಟಿ, ಪಾಂಗಾಳ ಮಂಜುನಾಥ ನಾಯಕ್, ಯೋಗೀಶ್ವರ ಹೊಳ್ಳ, ಮಲ್ಪೆ ಶಂಕರನಾರಾಯಣ ಸಾಮಗ, ಹಾಲಠಡಿ ಮಹಾಬಲ ಶೆಟ್ಟಿ, ಡಿ.ಬಿ. ಅಂತಯ್ಯ ಶೆಟ್ಟಿ, ಕೊಳ್ಳೆಬೈಲು ಮಹಾಬಲ ಶೆಟ್ಟಿ, ಹಲ್ಯನಾಡು ಸೂರಪ್ಪಯ್ಯ, ಉಡುಪಿಯ ಅಂಬಾಬಾಯಿ ಪೈ, ಗಿರಿಜಾಬಾಯಿ… ಸ್ವಾತಂತ್ರ್ಯ ಹೋರಾಟಗಾರರ ಈ ಸಹಸ್ರನಾಮಾವಳಿಯಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರ ಹೆಸರೂ ಇದೆ. ಅವರು ಮುಂಚೂಣಿಯಲ್ಲಿದ್ದವರಲ್ಲ, ಹಿನ್ನೆಲೆಯಲ್ಲಿದ್ದವರು; ಹತ್ತಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲ, ರಕ್ಷಣೆ ನೀಡಿದವರು; ಗಾಂಧೀಜಿಯ ಗುಪ್ತಭಕ್ತರಾಗಿದ್ದವರು; ವಿನೋಭಾ ಭಾವೆಯಟವರು ಭೂದಾನ ಯಜ್ಞ ಆರಂಭಿಸುವ ಮೊದಲೆ ಮಹಾದಾನಿಯಾಗಿದ್ದವರು; ಕಾರ್ನಾಡು ಸದಾಶಿವರಾಯರಂತೆ ಔದಾರ್ಯದ ಉರುಳಲ್ಲಿ ಸಿಲುಕಿದವರು.

* * *