ಹಾಜಿ ಅಬ್ದುಲ್ಲಾ ಸಾಹೇಬರು ಬ್ರಿಟಿಷರ ಆಡಳಿತದ ಕಾಲದ ಲೋಕಲ್ ಬೋರ್ಡ್, ತಾಲೂಕು ಬೋರ್ಡ್ ಮತ್ತು ವಿಧಾನಸಭೆಯಲ್ಲಿ ಜನಪ್ರತಿನಿಧಿಯಾಗಿ ಕೆಲಸ ಮಾಡಿದರು. ೧೯೦೪ರಲ್ಲಿ ಅವರು ಉಡುಪಿ ಲೋಕಲ್ ಬೋರ್ಡ್‌ನ ಸದಸ್ಯರಾದರು.

ಮಂಗಳೂರಿನ ದಲಿತರ ಶೈಕ್ಷಣಿಕ, ಸಾಮಾಜಿಕ ಕೆಲಸಗಳನ್ನು ಆರಂಭಿಸಿದವರು ಕುದ್ಮಲ್‌ರಂಗರಾಯರು (೧೮೫೯-೧೯೨೮). ಕಾಸರಗೋಡು ತಾಲೂಕಿನ ಕುದ್ಮಲ್‌ನಿಂದ ಹೊಟ್ಟೆಪಾಡಿಗಾಗಿ ಮಂಗಳೂರಿಗೆ ಬಂದು ವಕೀಲರಾಗಿದ್ದ ರಂಗರಾಯರು ವಕೀಲ ವೃತ್ತಿ ತ್ಯಜಿಸಿ ದಲಿತರ ಸೇವೆ ಆರಂಭಿಸಿದರು. ೧೮೯೨ರಲ್ಲಿ ಮಂಗಳೂರಿನ ಉರ್ವದ ಹತ್ತಿರದ ಚಿಲಿಂಬಿಯಲ್ಲಿ, ಮುಳಿಹುಲ್ಲಿನ ಮನೆಯೊಂದರಲ್ಲಿ ಕುದ್ಮಲ್ ಅವರ ದಲಿತರ ಶಾಲೆ ಆರಂಭವಾಯಿತು. ಸವರ್ಣೀಯರ ವಿರೋಧವನ್ನು, ಬಹಿಷ್ಕಾರವನ್ನು ಲೆಕ್ಕಿಸದೆ ಕುದ್ಮಲ್ ರಂಗರಾಯರು ಕಂಕನಾಡಿ, ಬೋಳೂರುಗಳಲ್ಲಿ ದಲಿತರಿಗಾಗಿ ಶಾಲೆಗಳನ್ನು ಸ್ಥಾಪಿಸಿದರು. ಮಂಗಳೂರಿನ ಶೇಡಿಗುಡ್ಡೆಯಲ್ಲಿ ದಲಿತರ ಶಾಲೆ, ವೃತ್ತಿಪರ ಶಿಕ್ಷಣ ತರಬೇತಿ ಶಾಲೆ, ದಲಿತರ ಹೆಣ್ಣು ಮಕ್ಕಳ ವಿದ್ಯಾರ್ಥಿನಿ ನಿಲಯ ಆರಂಭಿಸಿದ ರಂಗರಾಯರು ಅಲೆಮಾರಿಗಳಾಗಿದ್ದ ಹತ್ತು ಕೊರಗರ ಕುಟುಂಬಗಳಿಗೆ ಆಶ್ರಯ ನೀಡಿದರು. ಅವರು ‘ಡಿಪ್ರೆಸ್ಡ್ ಕ್ಲಾಸಸ್ ಮಿಷನ್’(ಡಿ.ಸಿ,ಎಂ.) ಕೊಡಿಯಾಲ್ ಬೈಲ್‌ನಲ್ಲಿ ಸ್ಥಾಪನೆಯಾದದ್ದು ೧೮೯೭ರಲ್ಲಿ. ಅವರ ಪ್ರಯತ್ನದಿಂದ ತಲಪಾಡಿ, ಉಳ್ಳಾಲ, ಪುತ್ತೂರು, ಮೂಲ್ಕಿ, ಉಡುಪಿಯಲ್ಲಿ ದಲಿತರ ಶಾಲೆಗಳು ಆರಂಭಗೊಂಡವು. “ಕುದ್ಮಲ್ ರಂಗರಾಯರು ದಲಿತರ ಸೇವೆಯಲ್ಲಿ ನನ್ನ ಗುರು” – ಎಂದಿದ್ದರು ಗಾಂಧೀಜಿ. ರಂಗರಾಯರು ಮುಂದೆ ಸಂನ್ಯಾಸ ಸ್ವೀಕರಿಸಿ ಸ್ವಾಮಿ ಈಶ್ವರಾನಂದರಾದರು.

೧೯೦೯ರ ಒಂದು ದಿನ ಹಾಜಿ ಅಬ್ದುಲ್ಲಾ ಸಾಹೇಬರು ಮಂಗಳೂರಿನ ಶೇಡಿಗುಡ್ಡೆಯಲ್ಲಿದ್ದ ಕುದ್ಮಲ್‌ರಂಗರಾಯರ ದಲಿತರ ಶಾಲೆಗೆ ಭೇಟಿ ನೀಡಿದರು. ರಂಗರಾಯರು ಕೆಲವು ಮಕ್ಕಳನ್ನು ತೋರಿಸಿ ‘ಮಂಗಳೂರಿನ ಕೇರಿಗಳಲ್ಲಿ ಉಳ್ಳವರು ಉಂಡು ಎಸೆದ ಎಂಜಲೆಲೆ ಹೆಕ್ಕಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಇವರು ಈಗ ಅಕ್ಷರ ಕಲಿಯುತ್ತಿದ್ದಾರೆ’ ಎಂದರು. ಇನ್ನೊಬ್ಬ ವಿದ್ಯಾರ್ಥಿಯನ್ನು ಕರೆದು, “ಮಗೂ, ಮೊನ್ನೆ ಕಲಿಸಿದ ಪಂಜೆಯವರ ಹಾಡು ಬಾಯಿಪಾಠ ಇದೆಯಾ? ಹಾಡು” ಎಂದರು.

ಆ ಅಮಾಯಕ ಬಾಲಕ ಹಾಡಿದ –

“ಉಳ್ಳಯ್ಯಾ, ದಯೆಗೊಳ್ಳಯ್ಯಾ!
“ದಟ್ಟಿದಿಕ್ಕಾ! ಮಾರಿ, ಮುಂಡ, ಮುಂಡಾಳ!
ಹುಟ್ಟುಹೊಲೆಯ! ಪೋಲಾ! ಚಂಡ ಚಂಡಾಳ!
ಬೊಟ್ಟೆ ಬೊಗ್ಗುರೆ!” ಎಂದು ಹೆಸರತ್ತಿ ಕೂಗಿ
ಮುಟ್ಟಲಂಜುತೆ ನಿಲ್ವೆ ದೂರಕ್ಕೆ ಹೋಗಿ!
ಕಣ್ಣು, ಮೂಗು, ಕಿವಿ, ಕೈ ಕಾಲುಗಂಟು
ಅಣ್ಣ, ನಿಮ್ಮಂತೆಯೆ ನಮಗೆಲ್ಲ ಉಂಟು
ಬಣ್ಣ ಕಪ್ಪೆಂದು ನೀ ಬಿಡುವುದೆ ನಂಟು?
ಎಣ್ಣೆಯೋಲ್ ಹಿಡಿವುದೆ ನಮ್ಮ ಮೈ ಅಂಟು?
……………………………………………….”

ಕುದ್ಮಲ್‌ರಂಗರಾಯರ ದಲಿತಸೇವೆಯನ್ನು ಕಂಡು ಪ್ರಭಾವಿತರಾದ ಹಾಜಿ ಅಬ್ದುಲ್ಲಾ ಸಾಹೇಬರು ಉಡುಪಿಯಲ್ಲಿ ದಲಿತರಿಗಾಗಿ ಒಂದು ಶಾಲೆಯನ್ನು ಆರಂಭಿಸಲು ಅವರಲ್ಲಿ ವಿನಂತಿಸಿದರು. ತಾನು ಆ ಶಾಲೆಗೆ ಸ್ಥಳದಾನ, ಕಟ್ಟಡದಾನ ಮಾಡುವುದಾಗಿ ಆಶ್ವಾಸನೆ ನೀಡಿದರು.

ಮಂಗಳೂರಿನ ‘ಸ್ವದೇಶಾಭಿಮಾನಿ’ ಪತ್ರಿಕೆ ೧೯೦೯ರ ಅಕ್ಟೋಬರ್ ೮ ರಂದು ಪ್ರಕಟಿಸಿದ ಒಂದು ವರದಿ ಹೀಗಿತ್ತು – “ಈ ಮೊದಲು ನಿಶ್ಚಯಿಸಿರುವ ಪಂಚಮರ ಶಾಲೆಯನ್ನು ಈ ತಾ. ೧ರಲ್ಲಿ ತೆರೆದರು. ಇದಕ್ಕೆ ಉಪಾಧ್ಯಾಯನಾಗಿ ಮಂಗಳೂರಿನಿಂದ ಪುದ್ದು ಎಂಬವನು ಬಂದಿರುತ್ತಾನೆ. ನಮ್ಮ ಖಾನ್ ಸಾಹೇಬ ಮ. ರಾ. ಅಬ್ದುಲ್ಲಾ ಸಾಹೇಬರು ಈ ಶಾಲೆಯ ಬಗ್ಗೆ ತಮ್ಮ ಬಾಬ್ತು ಬನ್ನಂಜೆಯಲ್ಲಿರುವ ಒಂದು ಕಟ್ಟಡವನ್ನೂ, ಅದಕ್ಕೆ ತಾಗಿದ ಒಂದು ಎಕ್ರೆ ಸ್ಥಳವನ್ನೂ ಉಚಿತವಾಗಿ ಕೊಟ್ಟಿರುವರು.”

೧೯೦೯ರಲ್ಲಿ ಬ್ರಿಟಿಷ್ ಸರಕಾರ ಅಬ್ದುಲ್ಲಾ ಸಾಹೇಬರಿಗೆ ‘ಖಾನ್‌ಸಾಹೇಬ್’ ಬಿರುದನ್ನು ನೀಡಿ ಗೌರವಿಸಿತು. ಇಂದಿನ ಉಡುಪಿಯ ಕವಿ ಮುದ್ದಣ ಮಾರ್ಗದಲ್ಲಿ ವಿ.ಜೆ.ಯು. ಕ್ಲಬ್ ಇದೆ. ಅಲ್ಲಿ ೧೯೦೯ರ ಜುಲೈ ೨೫ರಂದು ಹಾಜಿ ಅಬ್ದುಲ್ಲಾ ಸಾಹೇಬರನ್ನು ಅಭಿನಂದಿಸುವ ಸಮಾರಂಭವೊಂದು ನಡೆಯಿತು. ಮಂಗಳೂರಿನ ‘ಸ್ವದೇಶಾಭಿಮಾನಿ’ ಪತ್ರಿಕೆ ತನ್ನ ೩೦ ಜುಲೈ ೧೯೦೯ರ ನಂಬಿಕೆಯಲ್ಲಿ ಈ ಸಮಾರಂಭದ ವರದಿಯನ್ನು ಪ್ರಕಟಿಸಿತು.

‘ಸ್ವದೇಶಾಭಿಮಾನಿ’ ಕಳೆದ ಸಂಚಿಕೆಯಲ್ಲಿ ಸೂಚಿಸಿದಂತೆ ನಮ್ಮ ಸಾಹುಕರ್ ಮ. ರಾ. ಅಬ್ದುಲ್ಲಾ ಸಾಹೇಬರಿಗೆ ಕೊಡ್ಡಲ್ಪಟ್ಟ ‘ಖಾನ್ ಸಾಹೇಬ್’ ಎಂಬ ಬಿರುದಿನ ಗೌರವಾರ್ಥವಾಗಿ ಈ ತಾ. ೨೫ರಲ್ಲು ಒಂದು ಸಭೆ ಸೇರಿತು. ಈ ಸಭೆಗೆ ಹೆಡ್ ಅಸಿಸ್ಟೆಂಟ್ ಕಲೆಕ್ಟರ್ ದೊರೆಗಳವರು ಮೊದಲಾಗಿ ಈ ಊರಿನ ಎಲ್ಲಾ ಹುದ್ದೆದಾರರೂ, ಕಲ್ಯಾಣಪುರದ ಇಗರ್ಜಿಯ ಗುರುಗಳೂ, ಕೆಲವರು ಸಾಹುಕಾರರೂ ಇತರ ಗೃಹಸ್ಥರೂ ದಯಮಾಡಿದ್ದರು. ಸುಮಾರೂ ಆರು ಗಂಟೆ ಸಮಯಕ್ಕೆ ಸರ್ವರೂ ವಿಕ್ಟೋರಿಯಾ ಕ್ಲಬ್ಬಿನಲ್ಲಿ ಕಲೆತು ಮುಸಲ್ಮಾನ ಕ್ರೈಸ್ತ, ಹಿಂದೂ ಮಹನೀಯರಿಗೆಲ್ಲ ಪ್ರತ್ಯಪ್ರತ್ಯೇಕವಾಗಿ ವಿಲೆವಾರಿ ಮಾಡಿಸಲ್ಪಟ್ಟ ಉಪಾಹಾರಗಳಿಂದ ಚಾ ಕಾಫಿ ಪಾನಕಗಳನ್ನು ತೆಗೆದುಕೊಂಡು ತೃಪ್ತರಾದರು. ಮಧ್ಯ ಮಧ್ಯ ಖಾನ್ ಸಾಹೇಬರ ಪ್ರೋತ್ಸಾಹದಿಂದ ಅಭ್ಯಾಸ ಮಾಡಿರುವ ಬ್ಯಾಂಡಿನವರು ತಮ್ಮ ವಾದ್ಯವನ್ನು ಬಾರಿಸಿ ಕರ್ಣಾನಂದ ಪಡಿಸುತ್ತಿದ್ದರು. ಆದಾದ ನಂತರ ಸರ್ವರು ಪ್ರೈಮರಿ ಶಾಲೆಗೆ ಹೋಗಿ ಅಲ್ಲಿ ವಾದ್ಯ ವಿಶೇಷಗಳಲ್ಲೆಲ್ಲಾ ಪ್ರಖ್ಯಾತಿ ಪಟ್ಟ ಚಂದಯ್ಯ ಶೇರಿಗಾರರು ಬಾರಿಸಿದ ಜಲತರಂಗ ವ ಕ್ಲಾರಟ್ ವಾದ್ಯಗಳನ್ನು ಕೇಳಿ ಅವನ ಹಸ್ತಲಾಘವಕ್ಕೂ, ರಾಗಜ್ಞಾನಕ್ಕೂ ವಿಸ್ಮತರಾದರು. ತರುವಾಯ ಮ| ರಾ| ವಾಸುದೇವ ಪೈ ಬಿ.ಎ. ಬಿ.ಎಲ್. ಇವರು ಸತ್ಯವಿಜಯ ಕಥೆಯ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಿ ತಿಳಿಸಿದರು. ಆಮೇಲೆ ಮರಾಠಿಯಲ್ಲಿ ‘ಸಂಗೀತ ಸತ್ಯ ವಿಜಯ’ ನಾಟಕವನ್ನು ಇಲ್ಲಿನ ನಾಟಕ ಕಂಪೆನಿಯವರು ಬಹು ಸೊಗಸಾಗಿ ಆಡಿ ತೋರಿಸಿದರು.

ಆ ತರುವಾಯ ಪೈಗಳವರು ಆ ಹೊತ್ತಿನ ಸಭೆಯ ಉದ್ದೇಶವನ್ನು ಸೂಚಿಸಿ ಮ| ರಾ| ಅಬ್ದುಲ್ಲಾ ಸಾಹೇಬರವರ ಪರೋಪಕಾರ ಬುದ್ಧಿಯನ್ನು, ಭೂತದಯೆಯನ್ನು, ಔದಾರ್ಯವನ್ನು ಶ್ಲಾಘಿಸಿ, ಸರಕಾರದವರು ಅವರಿಗೆ ದಯಮಾಡಿದ ಈ ಗೌರವಕ್ಕೆ ತುಂಬಾ ಪಾತ್ರರೆಂತಲೂ ಇದಕ್ಕಾಗಿ ಈ ಶಹರದ ನಿವಾಸಿಕರೆಲ್ಲರೂ ಸಂತೋಷ ಪಡುತ್ತಾರಲ್ಲದೆ ಸಕರಾರಕ್ಕೆ ಕೃತಜ್ಞತೆ ಉಳ್ಳವರಾಗಿದ್ದರೆಂತಲೂ ಇಂಗ್ಲಿಷಿನಲ್ಲಿ ಸೂಚಿಸಿದರು. ಖಾನ್ ಸಾಹೇಬರು ಆಸ್ಪತ್ರೆಯ ಉಪಯೋಗದ ಬಗ್ಗೆ ಒಂದು ಚಲೋ ಕಟ್ಟೋಣವನ್ನು ಧರ್ಮಾರ್ಥವಾಗಿ ಕಟ್ಟಿಸಿಕೊಟ್ಟು ಶಾಶ್ವತವಾದ ವೃತ್ತಿಯನ್ನು ಕಲ್ಪಿಸಿದ್ದೂ, ಒಂದು ಛತ್ರವನ್ನು ಕಟ್ಟಿಸಿಕೊಟ್ಟದ್ದೂ, ಇಲ್ಲಿ ಸ್ಥಾಪಿಸಬೇಕಾಗಿ ನಿಶ್ಚಯಿಸಿರುವ ಹೊಲೆಯರ ಶಾಲೆಗೆ ತಕ್ಕ ಕಟ್ಟೋಣವನ್ನು ಕಟ್ಟಿಸಿಕೊಟ್ಟು ಹೊಲೆಯರ ಮಕ್ಕಳಿಗೆ ಬೇಕಾದ ಬಟ್ಟೆಬರೆಗಳನ್ನು ಕೊಡುವುದಕ್ಕೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದ್ದು ಪ್ರತಿನಿತ್ಯ ಬಡವರಿಗೆ ಅಕ್ಕಿ, ರೊಕ್ಕ, ಅನ್ನ ಮೊದಲಾದವುಗಳ ದಾನ ಮಾಡಿಸುವುದೂ ಇವೇ ಮೊದಲಾದ ಅವರ ಸದ್ಗುಣಗಳನ್ನು ಪ್ರಶಂಸಿಸಿ ಮ| ರಾ| ವಕೀಲ್ ವೆಂಕಟೇಶ ಪ್ರಭು ಬಿ.ಎ. ಇವರೂ ಡಾಕ್ಟರ್ ಮುತಾಯಸರವರೂ, ಖಾನ್ ಸಾಹೇಬರ ಬಂಧುಗಳೊಬ್ಬರೂ ಮಾತನಾಡುವವರಾದರು.

ಇವರೆಲ್ಲರಿಗೆ ಉತ್ತರರೂಪವಾಗಿ ಖಾನ್‌ಸಾಹೇಬರು ವಂದನಪೂರ್ವಕವಾಗಿ ಎದ್ದು ನಿಂತು ತನಗೆ ದಯಾಳು ಸರಕಾರವು ದಯಪಾಲಿಸಿದ ಈ ಬಹುಮಾನಕ್ಕಾಗಿ ಸಂತೋಷ ಪಡುವ ಈ ಶರಹದ ನಿವಾಸಿಕರೆಲ್ಲರಿಗೂ ಈ ದಿವಸ ತೋರ್ಪಡಿಸಿದ ತಮ್ಮ ವಿಶೇಷಾದರಕ್ಕಾಗಿ ಈ ಕ್ಲಬ್ಬಿನ ಮೆಂಬರುಗಳೆಲ್ಲರಿಗೂ ತಾನು ಕೃತಜ್ಞನಾಗಿರುತ್ತೇನೆಂತಲೂ ತಾನು ಈ ವರೆಗೆ ಮಾಡಿದ ಪರೋಪಕಾರ ಕಾರ್ಯಗಳು ಅತ್ಯಲ್ಪವಾಗಿದ್ದಾಗ್ಯೂ ಸಂದರ್ಭ ಒದಗಿದಾಗ ಸರ್ವರಿಗೂ ತನ್ನ ಕೈಲಾದ ಉಪಕಾರವನ್ನು ಮಾಡುವೆರ ಸಿದ್ಧವಾಗಿರುವೆನಾಗಿಯೂ ಈ ದಿವಸ ಈ ಮಹನೀಯರೆಲ್ಲರಿಗೂ ದಯಮಾಡಿ ಸಹನೆಯಿಂದ ಈ ಸಭೆಯನ್ನು ಅಲಂಕರಿಸಿದ್ದಕ್ಕಾಗಿ ತನೂ ಸರ್ವರಿಗೂ ಪುನಃ ಪುನಃ ಮನಃಪೂರ್ವಕವಾಗಿಯೂ ವಂದಿಸುತ್ತೇನೆಂತ ಗಂಭೀರವಾದ ಇಂಗ್ಲಿಷ್‌ವಾಣಿಯಿಂದ ಉತ್ತರ ಕೊಟ್ಟರು.” ಈ ಸನ್ಮಾನ ನಡೆದಾಗ ಅಬ್ದುಲ್ಲಾ ಸಾಹೇಬು ಇಪ್ಪತ್ತೇಳು ವರ್ಷದ ಯುವಕ. ಈ ಸಮಾರಂಭ ಇಂಗ್ಲಿಷಿನಲ್ಲಿ ನಡೆದುದನ್ನೂ, ಅಬ್ದುಲ್ಲಾ ಸಾಹೇಬರು ಇಂಗ್ಲಿಷಿನಲ್ಲಿ ಭಾಷಣ ಮಾಡಿದುದನ್ನೂ ಗಮನಿಸಬೇಕು.

ವೈಸರಾಯ್ ಸರ್ ಚಾರ್ಲ್ಸ್ ಹಾರ್ಡಿಂಜ್ ೧೯೧೧ರಲ್ಲಿ ಬಂಗಾಳದ ವಿಭಜನೆಯನ್ನು ರದ್ದುಗೊಳಿಸುವ, ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸುವ ಪ್ರಮುಖ ನಿರ್ಧಾರಗಳನ್ನು ಕೈಕೊಂಡನು. ೧೯೧೧ರ ಡಿಸೆಂಬರ್ ೧೧ರಂದು ಡಿಲ್ಲಿ ದರ್ಬಾರ್ ನಡೆಯಿತು. ಇಂಗ್ಲೆಂಡಿನ ದೊರೆ ೫ನೇ ಜಾರ್ಜ್ ಈ ದರ್ಬಾರಿನಲ್ಲಿ ಭಾಗವಹಿಸಿದ್ದನು. ಅಬ್ದುಲ್ಲಾ ಸಾಹೇಬರಿಗೆ ದಿಲ್ಲಿ ದರ್ಬಾರಿನಲ್ಲಿ ದಿಲ್ಲಿ ದರ್ಬಾರ್ ಪದಕವನ್ನು ನೀಡಿ ಗೌರವಿಸಲಾಯಿತು. ಅಬ್ದುಲ್ಲಾ ಸಾಹೇಬರ ದಿಲ್ಲಿ ಪ್ರವಾಸ, ಅವರು ದಿಲ್ಲಿಯಿಂದ ತಂದ ದರ್ಬಾರ್ ಪದಕ ಉಡುಪಿಯಲ್ಲಿ ದೊಡ್ಡ ಸುದ್ದಿಗಳಾದುವು. ದೆಹಲಿಗೆ ಹೋದ ಅಬ್ದುಲ್ಲಾ ಸಾಹೇಬರು ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷ್ ಸರಕಾರದ ವಿರುದ್ಧ ನಡೆಸುತ್ತಿದ್ದ ಸತ್ಯಾಗ್ರಹದ ರೋಚಕ ಕತೆಗಳನ್ನು ಕೇಳಿದರು.

ಅಬ್ದುಲ್ಲಾ ಸಾಹೇಬರು ೧೯೧೨ರಲ್ಲಿ ಹಜ್‌ಯಾತ್ರೆ ಮಾಡಿದರು. ಸೌದಿ ಅರೇಬಿಯಾದ ಹೆಜಸ್‌ನ ಮುಖ್ಯ ಪಟ್ಟಣ ಮೆಕ್ಕಾ. ಇದು ಮುಹಮ್ಮದ್ ಪೈಗಂಬರರ ಜನ್ಮ ಸ್ಥಳ. ಮುಸ್ಲಿಮರ ಯಾತ್ರಾಸ್ಥಳ. ಹಜ್‌ಯಾತ್ರೆಯಿಂದ ಬರುವಾಗ ಹಾಜಿ ಅಬ್ದುಲ್ಲಾ ಸಾಹೇಬರು ಮಾರಿಷಿಯನ್ ದ್ವೀಪಕ್ಕೆ ಭೇಟಿ ನೀಡಿದರು. ಅಲ್ಲಿನ ಕಬ್ಬಿನ ತಳಿ ಅವರ ಗಮನ ಸೆಳೆಯಿತು. ಅವರು ದಕ್ಷಿಣ ಕನ್ನಡದ ರೈತರಿಗೆ ಮಾರಿಷಿಯಸ್‌ನ ಕಬ್ಬಿನ ತಳಿಯನ್ನು ಪರಿಚಯಿಸಿದರು.

೧೯೧೭ರಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರು ಕುಂದಾಪುರ ತಾಲೂಕು ಬೋರ್ಡಿನ ಅಧ್ಯಕ್ಷರಾದರು. ಆಗ ಉಡುಪಿಯಿಂದ ಕುಂದಾಪುರಕ್ಕೆ ಹೋಗಲು ಹಲವು ಹೊಳೆಗಳನ್ನು ದಾಟಬೇಕಿತ್ತು. ಮಹಾಯುದ್ಧದ ಬೆಲೆ ಏರಿಕೆಯ ದಿನಗಳಲ್ಲಿ ಬಡವರು ಅನುಭವಿಸುತ್ತಿದ್ದ ಕಷ್ಟಗಳು, ಶಿಕ್ಷಣ ಸೌಲಭ್ಯವಿಲ್ಲದ ಹಳ್ಳಿಗಳು, ಹೆರಿಗೆ ಆಸ್ಪತ್ರೆಗಳಿಲ್ಲದೆ ನೋವು ಅನುಭವಿಸುತ್ತಿದ್ದ ಮಹಿಳೆಯರು, ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಿದ್ದ ಎಳೆಯ ಮಕ್ಕಳು – ಇಂಥ ಮನ ಕಲಕುವ ದೃಶ್ಯಗಳನ್ನು ಕಂಡು ಅಬ್ದುಲ್ಲಾ ಸಾಹೇಬರ ಮನ ಮಿಡುಕುತ್ತಿತ್ತು. ೧೯೧೮ರಲ್ಲಿ ಅವರು ಉಡುಪಿ ತಾಲೂಕು ಬೋರ್ಡಿನ ಅಧ್ಯಕ್ಷರಾದರು.

ದಕ್ಷಿಣ ಕನ್ನಡ ಜಿಲ್ಲೆ ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್‌ರಾಜ್ಯದ ಭಾಗವಾಗಿತ್ತು. ಹಾಜಿ ಅಬ್ದುಲ್ಲಾ ಸಾಹೇಬರನ್ನು ಸರಕಾರ ೧೯೧೯ರಲ್ಲಿ ಪಶ್ಚಿಮ ಕರಾವಳಿ ಮತ್ತು ನೀಲಗಿರಿಯ ಭೂಮಾಲಕರ ಪ್ರತಿನಿಧಿಯಾಗಿ ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್‌ಗೆ ನೇಮಕ ಮಾಡಿತು. ಮುಂದೆ ೧೯೨೧ರಲ್ಲಿ ಪರಿಷ್ಕೃತ ಕೌನ್ಸಿಲ್‌ನಲ್ಲೂ ಅಬ್ದುಲ್ಲಾ ಸಾಹೇಬರ ನೇಮಕ ಮುಂದುವರಿಯಿತು. ೧೯೧೯ರ ಮದ್ರಾಸ್ ಕಾನೂನಿನಂತೆ ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್‌ನಲ್ಲಿ ೧೩೨ ಮಂದಿ ಸದಸ್ಯರಿದ್ದರು. ಅವರಲ್ಲಿ ಮೂವತ್ತನಾಲ್ಕು ಮಂದಿಯನ್ನು ಗವರ್ನರ್ ನೇಮಿಸುತ್ತಿದ್ದರು. ಉಳಿದವರು ಈ ಚುನಾವಣೆಯಲ್ಲಿ ಆಯ್ಕೆಯಾಗುತ್ತಿದ್ದರು. ಹಾಜಿ ಅಬ್ದುಲ್ಲಾ ಸಾಹೇಬರು ೧೯೨೬ರಲ್ಲಿ ಮದ್ರಾಸ್ ಶಾಸನ ಸಭೆಗೆ ಅವಿರೋಧವಾಗಿ ಆಯ್ಕೆಯಾದರು.

ಮದ್ರಾಸ್ ಸರಕಾರ ೧೯೧೭ರಲ್ಲಿ ಕೃಷಿ-ಕೈಗಾರಿಕಾ ಪ್ರದರ್ಶನವೊಂದನ್ನು ಮಂಗಳೂರಿನಲ್ಲಿ ಏರ್ಪಡಿಸಿತು. “ಹಾಜಿ ಅಬ್ದುಲ್ಲಾ  ಸಾಹೇಬರು ಈ ಪ್ರದರ್ಶನ ಸಮಿತಿಯ ಸದಸ್ಯರಾಗಿದ್ದರು.

* * *