ಇಪ್ಪತ್ತನೆಯ ಶತಮಾನದ ಆರಂಭದ ದಶಕದ ಉಡುಪಿಗೆ ಬ್ಯಾಂಕ್ ಒಂದು ಕನಸಾಗಿತ್ತು. ಈಸ್ಟ್ ಇಂಡಿಯಾ ಕಂಪೆನಿ ‘ಬ್ಯಾಂಕ್ ಆಫ್ ಮದ್ರಾಸ್’ನ್ನು ಆರಂಭಿಸಿದ್ದು ೧೮೪೩ರಲ್ಲಿ. ಮೂವತ್ತು ಲಕ್ಷ ರೂಪಾಯಿ ಬಂಡವಾಳದೊಂದಿಗೆ ಈ ಬ್ಯಾಂಕ್ ಆರಂಭವಾಯಿತು. ಈ ಬ್ಯಾಂಕ್‌ನ ಮಂಗಳೂರು ಶಾಖೆ ೧೮೬೮ರಲ್ಲಿ ಆರಂಭಗೊಂಡಿತು. ಉಡುಪಿಯ ವ್ಯಾಪಾರಿಗಳು, ಶ್ರೀಮಂತರು ಮಂಗಳೂರಿಗೆ ಹೋಗಿ ಬರುವುದು ಸುಲಭದ ಕೆಲಸವಾಗಿರಲಿಲ್ಲ. ‘ಜಟ್ಕಾ’ (ಕುದುರೆಗಾಡಿ), ಎತ್ತಿನ ಗಾಡಿಗಳಲ್ಲಿ ಪ್ರಯಾಣಿಸಬೇಕಿತ್ತು. ಕರಾವಳಿ ಮಾರ್ಗದಲ್ಲಿ ನಾಲ್ಕು ಹೊಳೆಗಳನ್ನು ದಾಟಬೇಕಿತ್ತು. ಮದ್ರಾಸ್ ಬ್ಯಾಂಕಿನ ಏಜೆಂಟನೊಬ್ಬ ಹದಿನೈದು ದಿನಕ್ಕೊಮ್ಮೆ ಉಡುಪಿಗೆ ಬಂದು ಹೋಗುತ್ತಿದ್ದ. ಬಡ್ಡಿಯ ದರ ಶೇಕಡ ಹನ್ನೆರಡರಷ್ಟಿತ್ತು. ಆದರೆ ಮದ್ರಾಸ್ ಬ್ಯಾಂಕ್ ಹದಿನೈದರಿಂದ ಹದಿನೆಂಟು ಶೇಕಡ ಬಟ್ಟಿ ವಸೂಲು ಮಾಡುತ್ತಿತ್ತು. ಮದ್ರಾಸ್ ಬ್ಯಾಂಕ್ ಸಾವಿರಗಟ್ಟಲೆ ಸಾಲ ಪಡೆಯುತ್ತಿದ್ದ ಶ್ರೀಮಂತ ವ್ಯಾಪಾರಿಗಳಿಗೆ ಮಾತ್ರ ಸಾಲ ಕೊಡುತ್ತಿತ್ತು. ಸಣ್ಣ ವ್ಯಾಪಾರಿಗಲು ದುಬಾರ ಬಡ್ಡಿ ವಿಧಿಸುತ್ತಿದ್ದ ಲೇವಾದೇವಿಯವರನ್ನು ಆಶ್ರಯಿಸಬೇಕಾಗಿತ್ತು.

ಕಾರ್ಪೊರೇಶನ್ ಬ್ಯಾಂಕಿನ ಸ್ಥಾಪಕರು ‘ಸ್ವದೇಶಿ’ ಮಂತ್ರ ಉಚ್ಚರಿಸಿದ್ದರು. ಇದಕ್ಕೆ ಹಿನ್ನೆಲೆಯಾಗಿದ್ದ ಆ ಕಾಲದ ಸ್ವಾತಂತ್ರ್ಯ ಚಳುವಳಿಯನ್ನು ಗಮನಿಸಬೇಕು. ೧೮೮೫ರಲ್ಲಿ ರಾಷ್ಟ್ರೀಯ ಕಾಂಗ್ರೆಸಿನ ಮೊದಲ ಅಧಿವೇಶನ ನಡೆದಿತ್ತು. ಲೋಕಮಾನ್ಯ ಬಾಲ ಗಂಗಾಧರ ತಿಲಕರು ಕ್ರಾಂತಿಕಾರಿಯಾಗಿದ್ದ ‘ಕೇಸರಿ’ ಪತ್ರಿಕೆಯನ್ನು ೧೮೮೯ರಲ್ಲಿ ಆರಂಭಿಸಿದರು, ಸ್ವದೇಶಿ ಚಳುವಳಿಗೆ, ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದರು. ತಿಲಕರನ್ನು ಬಂಧಿಸಿದ ಬ್ರಿಟಿಷ್ ಸರಕಾರ ಅವರಿಗೆ ಹದಿನೆಂಟು ತಿಂಗಳ ಜೈಲು ಶಿಕ್ಷೆ ವಿಧಿಸಿತು. ೧೮೯೬ರಲ್ಲಿ ಮಹಾರಾಷ್ಟ್ರದ ವಿದ್ಯಾರ್ಥಿಗಳು ಸ್ವದೇಶಿ ಚಳಿವಳಿಯನ್ನು ಮುನ್ನಡೆಸಿದರು. ೧೮೯೯ರಲ್ಲಿ ಗವರ್ನರ್ ಜನರಲ್ ಮತ್ತು ವೈಸ್‌ರಾಯ್ ಆಗಿ ನೇಮಕಗೊಂಡ ಲಾರ್ಡ್ ಕರ್ಜನ್ ೧೯೦೫ರಲ್ಲಿ ಬಂಗಾಳದ ವಿಭಜನೆಯನ್ನು ಘೋಷಿಸಿದ. ಬಂಗಾಳದಲ್ಲಿ ಆರಂಭಗೊಂಡ ವಿಭಜನೆ ವಿರೋಧಿ ಚಳುವಳಿ ಸ್ವದೇಶಿ ಚಳುವಳಿಯಾಗಿ ರೂಪಾಂತರಗೊಂಡಿತು. “ನಮ್ಮ ರಾಷ್ಟ್ರ ಒಂದು ವೃಕ್ಷ. ಇದರ ಮುಖ್ಯ ಭಾಗ ಸ್ವರಾಜ್ಯ. ಕಾಂಡಗಳು ಸ್ವದೇಶಿ ಮತ್ತು ಬಹಿಷ್ಕಾರ.” ಎಂದು ತಿಲಕರು ‘ಕೇಸರಿ’ಯಲ್ಲಿ ಬರೆದರು. ಆಚಾರ್ಯ ಪಿ.ಸಿ.ರೇ ಅವರು ‘ಬೆಂಗಾಲ್ ಕೆಮಿಕಲ್ ಫ್ಯಾಕ್ಟರಿ’ಯನ್ನು ಆರಂಭಿಸಿದರು. ರವೀಂದ್ರನಾಥ ಠಾಗೋರರ ‘ಸ್ವದೇಶಿ ಸ್ಟೋರ್’ ಕಾರ್ಯಾರಂಭ ಮಾಡಿತು. ‘ಟಾಟಾ ಐರನ್ ಅಂಡ್ ಸ್ಟೀಲ್ ಕಂಪೆನಿ’ಗೆ ಅಪಾರ ಜನಬೆಂಬಲ ಸಿಕ್ಕಿತು. ೧೯೦೬ರಲ್ಲಿ ಸ್ಥಾಪನೆಗೊಂಡ ಬಂಗಾಲ್ ನ್ಯಾಷನಲ್ ಕಾಲೇಜಿಗೆ ಪ್ರಿನ್ಸಿಪಾಲರಾಗಿ ಅರವಿಂದ ಘೋಷರ ನೇಮಕವಾಯಿತು. ಬ್ರಿಟಿಷರಿಂದ ನಡೆಯುತ್ತಿದ್ದ ಭಾರತದ ಆರ್ಥಿಕ ಶೋಷಣೆಯ ಕುರಿತು ಸಂಶೋಧನ ಗ್ರಂಥ ಬರೆದಿದ್ದ ದಾದಾಬಾಯ್ ನವರೋಜಿ ಅವರು ೧೯೦೬ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ‘ಸ್ವರಾಜ್ಯ ಕಾಂಗ್ರೆಸ್‌ನ ಗುರಿ’ ಎಂದು ಘೋಷಿಸಿದರು. ಹೌದು. ಉಡುಪಿಯಲ್ಲಿ ಅದೇ ವರ್ಷ (೧೯೦೬) ಕಾರ್ಪೊರೇಶನ್ ಬ್ಯಾಂಕ್ ಆರಂಭಗೊಂಡಿತು.

ಆ ಕಾಲದ ಉಡುಪಿಯಲ್ಲಿದ್ದ ತಿಲಕರ ಅಭಿಮಾನಿ ಯುವಕವಕೀಲರೊಬ್ಬರು ಸ್ವದೇಶಿ ಬ್ಯಾಂಕೊಂದರ ಸ್ಥಾಪನೆಗೆ ಹಾಜಿ ಅಬ್ದುಲ್ಲಾರಿಗೆ ಪ್ರೇರಣೆ ನೀಡಿರಬಹುದೆಂದು ‘ಕಾರ್ಪೊರೇಶನ್ ಬ್ಯಾಂಕ್’ ಗ್ರಂಥದ ಲೇಖಕ ಶ್ರೀ ಎಂ.ವಿ. ಕಾಮತ್ ಅಭಿಪ್ರಾಯ ಪಟ್ಟಿದ್ದಾರೆ. ಆ ಯುವ ವಕೀಲರ ಹೆಸರು ಎಂ. ವಿಠಲ ಕಾಮತ್. ಹಾಜಿ ಅಬ್ದುಲ್ಲಾ ಮತ್ತು ಕಾಮತ್ ಗೆಳೆಯರಾಗಿದ್ದರು. ಈ ವಿಠಲ ಕಾಮತರು ಮುಂದೆ ಕಾರ್ಪೊರೇಶನ್ ಬ್ಯಾಂಕ್‌ನ ಮೊದಲ ಕಾನೂನು ಸಲಹೆಗಾರರಾಗಿ ನೇಮಕಗೊಂಡರು.

‘ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ ಉಡುಪಿ ಲಿಮಿಟೆಡ್’ನ್ನು ಸ್ಥಾಪಿಸುವ ಕುರಿತು ಹಾಜಿ ಅಬ್ದುಲ್ಲಾ ಖಾಸಿಮ್ ಸಾಹೇಬರು ೧೯೦೬ರ ಫೆಬ್ರವರಿ ೧೯ರಂದು ನೀಡಿದ ಸಾರ್ವಜನಿಕ ಪ್ರಕಟಣೆ ಹೀಗಿತ್ತು-

“ಫೆ. ೧೧ ಮತ್ತು ೧೮ರಂದು ನಡೆದ ಉಡುಪಿಯ ಮುಖ್ಯ ನಾಗರೀಕರ ಸಭೆಯಲ್ಲಿ ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ (ಉಡುಪಿ) ಲಿಮಿಟೆಡ್ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಆ ಸಾರ್ವಜನಿಕರಿಗೆ ಈ ಮೂಲಕ ತಿಳಿಸುತ್ತಿದ್ದೇವೆ.

ಉದ್ದೇಶ: ಒಬ್ಬ ಮನೆಕೆಲಸದವನಿಂದ ಆರಂಭಿಸಿ ಪ್ರತಿಯೊಬ್ಬರಲ್ಲೂ ಮಿತವ್ಯಯವನ್ನು ಪ್ರೋತ್ಸಾಹಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ. ಪ್ರತಿಯೊಬ್ಬರೂ ತಮ್ಮ ಆದಾಯದಿಂದ ಪ್ರತಿ ತಿಂಗಳೂ ಒಂದು ರೂಪಾಯಿ ಅಥವಾ ಹೆಚ್ಚು ಮೊತ್ತವನ್ನು ಮೂರು ಮುಕ್ಕಾಲು ವರ್ಷದವರೆಗೆ ತಮ್ಮ ಪ್ರಯೋಜನಕ್ಕಾಗಿ, ಕಾರ್ಪೊರೇಶನ್ ನಿಧಿಗೆ ಕೊಡುಗೆಯಾಗಿ ನೀಡಬೇಕು. ಈ ಅವಧಿಯಲ್ಲಿ ಅವರಿಗೆ ಸಣ್ಣ ಮೊತ್ತದ ಸಾಲವನ್ನು, ಬೇರೆ ಕಡೆಗಿಂತ ಕಡಿಮೆ ಬಡ್ಡಿದರಲ್ಲಿ ನೀಡಲಾಗುವುದು. ಮೂರು ಮುಕ್ಕಾಲು ವರ್ಷದ ಅಂತ್ಯದಲ್ಲಿ ಅವರು ಪ್ರತಿಯೊಂದು ‘ಶೇರ್’ಗೆ ರೂ. ೫೦ನ್ನು ಪಡೆಯುತ್ತಾರೆ. ಈ ಮೊತ್ತವನ್ನು ಅವರು ದುಬಾರಿ ಬಡ್ಡಿಯಲ್ಲಿ ಸಾಲ ಮಾಡದೆ ಸ್ವತಂತ್ರ ವ್ಯಾಪರ ಮಾಡಲು, ಅಥವಾ ಮದುವೆ ಖರ್ಚಿಗೆ ಬಳಸಬಹುದಾಗಿದೆ.

ಪ್ರಯೋಜನಗಳು: ಕಾರ್ಪೊರೇಶನ್ ನಿಧಿಯ ಸದಸ್ಯರು ಪಡೆಯಬಹುದಾದ ಸವಲತ್ತುಗಳ (೧) ಯಾವುದೇ ಭದ್ರತೆಯಿಲ್ಲದೆ ಅವರು ಪಾವತಿ ಮಾಡಿದಷ್ಟು ಮೊತ್ತದ ಸಾಲ. (೨) ಇಬ್ಬರು ಸದಸ್ಯರ ಭದ್ರತೆಯೊಂದಿಗೆ ಹೆಚ್ಚಿಗೆ ಮೊತ್ತದ ಸಾಲ (೩) ಆಭರಣಗಳನ್ನು ಅಡವಾಗಿಟ್ಟು ಇನ್ನೂ ಹೆಚ್ಚಿನ ಮೊತ್ತದ ಸಾಲ. (ಈ ಸಾಲವನ್ನು) ೬.೨೫%  ಬಡ್ಡಿದರದಲ್ಲಿ ನೀಡಲಾಗುವುದು, ಪ್ರತಿ ಮೂರು ತಿಂಗಳಿಗೊಮ್ಮೆ ಈ ಸಾಲದ ಕಂತನ್ನು ಮರುಪಾವತಿಸಬೇಕು.) ೪) ಸದಸ್ಯರು ‘ಕಾರ್ಪೊರೇಶನ್’ನ ನಿಯಮಗಳ ಪ್ರಕಾರ ‘ಶೇರ್’ಗಳನ್ನು ಹೆಚ್ಚಿಸಲು, ಕಡಿಮೆ ಮಾಡಲು, ವರ್ಗಾಯಿಸಲು, ಮಾರಾಟ ಮಾಡಲು ಅಥವಾ ಹಣ ವಾಪಸು ಪಡೆಯಲು ಅನುಮತಿ ನೀಡಲಾಗುವುದು. (೫) ಅವರ ನಿಧನಾನಂತರ ‘ಶೇರು’ಗಳನ್ನು ಅವರ ವಾರಸುದಾರರಿಗೆ ವರ್ಗಾಯಿಸಲಾಗುವುದು.

ಮೇಲೆ ಪ್ರಸ್ತಾವಿಸಿದ ಪ್ರಯೋಜನಗಳಲ್ಲದೆ ‘ಕಾರ್ಪೊರೇಶನ್’ ರೂ. ೫ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಠೇವಣಿಯಾಗಿ ಪಡೆದು, ೫ ಶೇಕಡಾ ಬಡ್ಡಿಯೊಂದಿಗೆ ಹಿಂತಿರುಗಿಸುತ್ತದೆ. ನಿಧಿಯ ನಿರ್ವಹಣೆಯನ್ನು ಆಡಳಿತ ಮಂಡಳಿಯವರು ಮಾಡುತ್ತಾರೆ. ಆಡಳಿತ ಮಂಡಳಿಯ ಮೂವರು ನಿಧಿಯ ರಕ್ಷಣೆಗೆ ಜವಾಬ್ದಾರರಾಗಿರುತ್ತಾರೆ.

ಜಾತಿ ಮತ್ತು ಧರ್ಮಗಳನ್ನು ಪರಿಗಣಿಸದೆ ಎಲ್ಲ ವರ್ಗಗಳ ಜನರಲ್ಲೂ ಮಿತವ್ಯಯ ಮತ್ತು ಸಹಕಾರವನ್ನು ಬೆಳೆಸುವುದು ಈ ಸಂಸ್ಥೆಯ ಪ್ರಾಥಮಿಕ ಉದ್ದೇಶವಾಗಿದೆ. ಇದು ಶುದ್ಧ ಮತ್ತು ಸ್ವದೇಶಿ ನಿಲುವಾಗಿರುವುದರಿಂದ ದೇಶಪ್ರೇಮಿ ನಾಗರಿಕರೆಲ್ಲರೂ ಈ ಉದ್ದೇಶ ಈಡೇರಲು ಸಹಕರಿಸಬೇಕು. ನಿಧಿಯ ಭದ್ರತೆಯ ಬಗ್ಗೆ ಭರವಸೆ ನೀಡುವ ನಿಯಮಾವಳಿ ಇದೆ.

ಮಾರ್ಚ್ ೧೬, ೧೯೦೬ರಂದು ವ್ಯವಹಾರ ಆರಂಭವಾಗಲಿದೆ. ಸಂಸ್ಥೆ ನೀಡುವ ಸೌಲಭ್ಯಗಳಲ್ಲಿ ಪಾಲ್ಗೊಳ್ಳಬಯಸುವವರು ಆ ತಾರೀಕಿಗಿಂತ ಮುನ್ನ, ತಾವು ಖರೀದಿಸಬಯಸುವ ‘ಶೇರ್’ಗಳ ಸಂಖ್ಯೆಯನ್ನು ಈ ಕೆಳಗೆ ರುಜು ಹಾಕಿದವರಿಗೆ ತಿಳಿಸಬೇಕು ಮತ್ತು ಅವರಿಂದ ಬೇಕಾದ ಯಾವುದೇ ಮಾಹಿತಿಯನ್ನು ಪಡೆಯಬಹುದು.”

ಹಾಜಿ ಅಬ್ದುಲ್ಲಾ ಸಾಹೇಬರು ಬಾಡಿಗೆ ರಹಿತವಾಗಿ ನೀಡಿದ್ದ ಅವರ ಸ್ವಂತ ಮನೆಯ ಒಂದು ಕೋಣೆಯಲ್ಲಿ ೧೯೦೬ರ ಮಾರ್ಚ್ ೧೬ರಂದು ‘ಕಾರ್ಪೊರೇಶನ್ ಬ್ಯಾಂಕ್’ ಕಾರ್ಯಾರಂಭ ಮಾಡಿತು. ಆಗ ಅಬ್ದುಲ್ಲಾ ಸಾಹೇಬರು ಕಾರ್ಪೊರೇಟ ಕನಸುಗಳನ್ನು ಕಾಣುತ್ತಿದ್ದ ಇಪ್ಪತ್ತನಾಲ್ಕು ವರ್ಷದ ಯುವಕ. ಬ್ಯಾಂಕಿನ ಮೊದಲ ಆಡಳಿತ ಮಂಡಳಿ ಹೀಗಿತ್ತು –

೧. ಹಾಜಿ ಅಬ್ದುಲ್ಲಾ ಹಾಜಿ ಖಾಸಿಮ್ ಸಾಹೇಬ್(ಅಧ್ಯಕ್ಷ) – ವರ್ತಕ

೨. ಬಿ. ನಾರಾಯಣ ರಾವ್ – ವಕೀಲರು

೩. ಎನ್. ರಾಘವೇಂದ್ರ ರಾವ್(ಉಪಾಧ್ಯಕ್ಷರು) – ಜಮೀನ್ದಾರರು

೪. ಎಸ್. ಆನಂದರಾವ್(ಕಾರ್ಯದರ್ಶಿ) – ನಿವೃತ್ತ ಸಬ್ ಮಾಜಿಸ್ಟ್ರೇಟ್

೫. ಯು. ರಾಮಕೃಷ್ಣ ಶ್ಯಾನುಭೋಗ(ಖಜಾಂಚಿ) – ವರ್ತಕ

೬. ಎನ್. ಶಿವರಾವ್ – ವಕೀಲರು

೭. ಪಿ.ಕಾಳಿಂಗ ರಾವ್ – ಜಮೀನ್ದಾರ

೮. ಎಸ್. ವೆಂಕಟಸುಬ್ಬ ರಾವ್ – ಜಮೀನ್ದಾರ

೯. ಅಂಡಾರ್ ಸೈಯದ್ ಅಬ್ಬಾಸ್ ಸಾಹೇಬ್ – ಜಮೀನ್ದಾರ

೧೦. ಬಿ. ವ್ಯಾಸಚಾರ್ಯ – ಜಮೀನ್ದಾರ

೧೧. ಬಿ. ಸುಬ್ಬಯ್ಯ ಶೆಟ್ಟಿ -ಜಮೀನ್ದಾರ

೧೨. ಕೇಶವ ಉಪೇಂದ್ರ ಕುಡ್ಡ – ವರ್ತಕ

ಅಬ್ದುಲ್ಲಾ ಸಾಹೇಬರ ಸಹಿ

೧೯೦೬ರ ಮೇ ೧೩ರಂದು ನೋಂದಣಿಗಾಗಿ ಕಳುಹಿಸಿದ ಬ್ಯಾಂಕಿನ ಮೆಮೋರಾಂಡಮ್ ಆಫ್ ಎಸೋಸಿಯೇಷನ್’ಗೆ ರುಜು ಹಾಕಿದವರು –

೧. ಹಾಜಿ ಅಬ್ದುಲ್ಲಾ ಹಾಜಿ ಖಾಸಿಮ್ ಸಾಹೇಬ್ (ಅಧ್ಯಕ್ಷರು) – ವರ್ತಕ, ಉಡುಪಿ

೨. ಬಿ. ನಾರಾಯಣ ರಾವ್ (ವಕೀಲ, ಉಡುಪಿ)

೩. ಯು. ರಾಮಕೃಷ್ಣ ಶಾನುಭೋಗ (ವರ್ತಕ, ಉಡುಪಿ)

೪. ಎನ್. ಶಿವರಾವ್ (ವಕೀಲರು, ಉಡುಪಿ)

೫. ಎಸ್. ಆನಂದರಾವ್ (ನಿವೃತ್ತ ಸಬ್ ಮ್ಯಾಜಿಸ್ಟ್ರೇಟ್, ಉಡುಪಿ)

೬. ಕೆ.ಬಿ. ಅನಂತಯ್ಯ (ಸುಪರ್‌ವೈಸರ್ ಆಫ್ ಸ್ಕೂಲ್ಸ್, ಉಡುಪಿ)

೭. ಎನ್. ಆನಂದ ರಾವ್ (ಜಮೀನ್ದಾರರು, ಉಡುಪಿ)

೮. ಬಿ.ವ್ಯಾಸಾಚಾರ್ಯ (ಏಜೆಂಟ್, ಅದಮಾರು ಮಠ, ಉಡುಪಿ)

೯. ಕೇಶವ ಉಪೇಂದ್ರ ಕುಡ್ವ (ವ್ಯಾಪಾರಿ, ಉಡುಪಿ)

೧೦. ಎಸ್. ವೆಂಕಟಸುಬ್ಬಾ ಭಟ್ (ಏಜೆಂಟ್, ಕೃಷ್ಣಾಪುರ ಮಠ, ಉಡುಪಿ)

ಉಡುಪಿಯ ಅಷ್ಟಮಠಗಳಿಗೂ ಹಾಜಿ ಅಬ್ದುಲ್ಲಾ ಸಾಹೇಬರಿಗೂ ಪ್ರೀತಿ – ವಿಶ್ವಾಸ – ನಂಬಿಕೆಗಳ ಸಂಬಂಧವಿತ್ತು. ಈ ಬಗ್ಗೆ ಉಡುಪಿಯಲ್ಲಿ ಹಲವಾರು ದಂತಕತೆಗಳಿವೆ. ಕಾರ್ಪೊರೇಶನ್ ಬ್ಯಾಂಕಿನ ‘ಮೆಮೊರಾಂಡಮ್ ಆಫ್ ಎಸೋಶಿಯೇಷನ್’ಗೆ ಸಹಿ ಹಾಕಿದವರಲ್ಲಿ ಉಡುಪಿಯ ಅದಮಾರು ಮಠ ಹಾಗೂ ಕೃಷ್ಣಾಪುರ ಮಠದ ಏಜೆಂಟರು (ದಿವಾನರು) ಇದ್ದರು ಎಂಬುದು ಗಮನಾರ್ಹ.

ಕಾರ್ಪೊರೇಶನ್ ಬ್ಯಾಂಕಿನ ‘ಬೆಳ್ಳಿ ಹಬ್ಬದ ಸಂಚಿಕೆ’(೧೯೩೧) ಯಲ್ಲಿ ದಾಖಲಾಗಿರುವಂತೆ, “ಕಾರ್ಪೊರೇಶನ್ ಬ್ಯಾಂಕು ಆರಂಭದಿಂದಲೂ ಜಾತ್ಯತೀತವಾಗಿತ್ತು. ಜಾತಿ ಧರ್ಮಗಳನ್ನು ಪರಿಗಣಿಸದೆ ಎಲ್ಲ ವರ್ಗಗಳ ಜನರಿಗೂ ಶೇರುಗಳನ್ನು ನೀಡಲಾಯಿತು.

ಉಡುಪಿಯಲ್ಲಿ ೧೬-೩-೧೩೦೬ ರಂದು ಈ ವಿನೂತನ ಸಂಸ್ಥೆ ಕಾರ್ಯಾರಂಭ ಮಾಡಿತು. ಈ ಸಂಸ್ಥೆಗೆ ನಾಗರಿಕ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿತ್ತು. ವ್ಯವಹಾರ ಆರಂಭವಾಗಿ ಒಂಬತ್ತು ತಿಂಗಳೊಳಗೆ ೨೫೮ ಮಂದಿ ಶೇರುದಾರರು ೧೦೧೭ ಶೇರುಗಳನ್ನು ಕೊಂಡರು. ಈ ಬ್ಯಾಂಕು ಎಚ್ಚರದಿಂದ ಆಡಂಬರವಿಲ್ಲದೆ ಕಾರ್ಯಾರಂಭ ಮಾಡಿತು. ಬ್ಯಾಂಕಿನ ಅಧ್ಯಕ್ಷ ಶ್ರೀ ಅಬ್ದುಲ್ಲಾ ಹಾಜಿ ಕಾಸಿಮ್ ಸಾಹೇಬರು ಬಾಡಿಗೆ ಇಲ್ಲದೆ ನೀಡಿದ್ದ ಒಂದು ಕೋಣೆಯಲ್ಲಿ ಬ್ಯಾಂಕಿನ ಕಛೇರಿ ಇತ್ತು. ಆರಂಭದಲ್ಲಿ ಈ ಸಂಸ್ಥೆ ಒಂದು ‘ನಿಧಿ’ಯ ರೂಪದಲ್ಲಿ ವ್ಯವಹಾರ ಮಾಡಿತು. ಪ್ರತಿ ತಿಂಗಳೂ ಒಂದು ರೂಪಾಯಿಯಂತೆ ೪೫ ತಿಂಗಳು ಪಾವತಿ ಮಾಡಿದವರಿಗೆ ೪೬ನೆಯ ತಿಂಗಳ ಅಂತ್ಯದಲ್ಲಿ ರೂ. ೫೦/- ಸಿಗುತ್ತಿತ್ತು. ಈ ರೀತಿ ಬ್ಯಾಂಕಿನ ನಿಧಿಯ ಸದಸ್ಯರಾದವರು ಶೇರುದಾರರು ಪಡೆಯುವ ಎಲ್ಲ ಸೌಲಭ್ಯಗಳನ್ನು ಪಡೆದರು.”

ಮಾರ್ಚ್ ೧೮, ೧೯೦೬ರಂದು ‘ಕಾರ್ಪೊರೇಶನ್ ನಿಧಿ’ಯ ಸದಸ್ಯರಾದ ಮೊದಲಿಗರಲ್ಲಿ ವಿ.ಲಕ್ಷ್ಮಣರಾವ್ ಎಂಬ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿದ್ದರು. ಬ್ಯಾಂಕು ಮೊದಲು ಸಾಲ ನೀಡಿದ್ದು ಜನಾಬ್ ಶಿಡಿ ಬಾಪು ಸಾಹೇಬರಿಗೆ. ಅವರು ೧೯೦೬ ಏಪ್ರಿಲ್ ೫ ರಂದು ನೂರು ರೂ. ಸಾಲ ಪಡೆದರು. ೧೯೦೬, ಅಕ್ಟೋಬರ್ ೧೩ರಂದು ಬಿ. ನಾರಾಯಣರಾಯರು ನೀಡಿದ ನೂರು ರೂಪಾಯಿಗಳು ಬ್ಯಾಂಕಿಗೆ ಬಂದ ಮೊದಲ ಠೇವಣಿಯಾಗಿತ್ತು.

ಕಾರ್ಪೊರೇಶನ್ ಬ್ಯಾಂಕ್ ಸ್ಥಾಪನೆಯಾಗಿ ಎರಡು ವರ್ಷಗಳಲ್ಲಿ – ೧೯೦೮ರಲ್ಲಿ ಬ್ಯಾಂಕಿನಲ್ಲಿ ಶೇರುದಾರರ ಜಾತಿವಾರು ವರ್ಗೀಕರಣ ಆ ಕಾಲ ಆರ್ಥಿಕ ಸ್ಥಿತಿಗತಿ, ಹಾಗೂ ಸಾಮಾಜಿಕ ಅಧ್ಯಯನ ದೃಷ್ಟಿಯಿಂದ ಕುತೂಹಲಕಾರಿಯಾಗಿದೆ – ೧. ಸಾರಸ್ವತರು (೮೫೦ ಮಂದಿ), ೨. ಗೌಡ ಸಾರಸ್ವತರು (೩೭೬ ಮಂದಿ), ೩. ಶಿವಳ್ಳಿ ಬ್ರಾಹ್ಮಣರು (೨೯೯), ೪. ಕೊಂಕಣಿಗರು (೧೦೨) ೫. ದೇವಾಂಗ (೮೭), ೬.ಚಿನ್ನದ ಕೆಲಸದವರು  ೨೬, ೭. ನಾಡವರು (೧೪೫), ೮. ಬಿಲ್ಲವರು – ೨೯, ೯. ಕೋಟಿ ಬ್ರಾಹ್ಮಣರು (೭೯), ೧೦. ಕರ್ನಾಟಕ (೨೦), ೧೧. ಜೈನ (೫೧), ೧೨. ವೈಶ್ಯ (೭೭), ೧೩. ಮುಸ್ಲಿಮರು (೨೫೧), ೧೪. ಕೆಥೊಲಿಕರು (೬೬), ೧೫. ಪ್ರೊಟೆಸ್ಟೆಂಟರು (೩೩), ೧೬. ಫರಾರಿ (೦೩), ೧೭. ವಾನಿ (೩೨), ೧೮.ದರ್ಜಿ (೬), ೧೯. ರಾಜಾಪುರಿ (೮), ೨೦. ಬಳೆಗಾರ (೧೧), ೨೧. ಕಂದಾವರ (೩೦), ಇಲ್ಲಿರುವ ದೇವಾಂಗ, ಬಿಲ್ಲವ, ಅಕ್ಕಸಾಲಿಗ, ದರ್ಜಿ, ರಾಜಾಪುರಿ, ಬಳೆಗಾರ ಹಾಗೂ ಮುಸ್ಲಿಮರ ಸಂಖ್ಯೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅಭಿನಂದನಾರ್ಹ.

ಕಾರ್ಪೊರೇಶನ್ ಬ್ಯಾಂಕು ನಿಧಾನವಾಗಿ ‘ಒಂದು ಹೆಜ್ಜೆ ಮುಂದೆ ಇಷ್ಟು ಸಾಕು ನನಗೆ ಎಂಬ ಗಾಂಧೀಜಿಯ ನಂಬಿಕೆಯಂತೆ ಎಚ್ಚರದಿಂದ ಹೆಜ್ಜೆ ಇಡುತ್ತಾ ಮುಂದೆ ಸಾಗಿತು. ೧೯೭೨ರಲ್ಲಿ ಬ್ಯಾಂಕು ೨೦೦೦ ಶೇರುಗಳನ್ನು ವಿತರಿಸಹೊರಟಾಗ ೨೫೦೦ ಶೇರುಗಳಿಗೆ ಬೇಡಿಕೆ ಬಂತು. ೧೯೨೯ ರಿಂದ ಬ್ಯಾಂಕು ತನ್ನ ನೌಕರಿಗೆ ‘ಪ್ರೊವಿಡೆಂಟ್ ಫಂಡ್’ ನೀಡಲಾರಂಭಿಸಿತು. ೧೯೦೬ ರಿಂದ ೧೯೦೯ರ ವರೆಗೆ ಬ್ಯಾಂಕಿನ ಅಧ್ಯಕ್ಷ ಹಾಜಿ ಅಬ್ದುಲ್ಲಾ ಅವರ ಮನೆಯ ಒಂದು ಕೋಣೆಯಲ್ಲಿದ್ದ ಕಾರ್ಪೊರೇಶನ್ ಬ್ಯಾಂಕ್‌ನ ಕಛೇರಿ ೧೯೦೯ರಿಂದ ೧೯೧೪ರವರೆಗೆ ಬಿ. ನಾರಾಯಣರಾಯರ ಮನೆಯ ಉಪ್ಪರಿಗೆಯಲ್ಲಿತ್ತು. ೧೯೧೪ರಲ್ಲಿ ಬ್ಯಾಂಕ್ ಸ್ವಂತ ಕಾರ್ಯಾಲಯಕ್ಕೆ ಸ್ಥಳಾಂತರಗೊಂಡಿತು.

ಕಾರ್ಪೊರೇಶನ್ ಬ್ಯಾಂಕ್ ಆರಂಭಗೊಂಡು ಹದಿನೇಳು ವರ್ಷಗಳ ಅನಂತರ ಮೇ ೧೮, ೧೯೨೩ರಂದು ಅದರ ಕುಂದಾಪುರ ಶಾಖೆ ಆರಂಭಗೊಂಡಿತು. ಅದು ಕರಾವಳಿಯ ಯಾವುದೇ ಬ್ಯಾಂಕಿನ ಮೊದಲ ಶಾಖೆಯಾಗಿತ್ತು. ಬ್ಯಾಂಕಿನ ಕುಂದಾಪುರ ಶಾಖೆಯ ಏಜೆಂಟ್‌ನ ಹುದ್ದೆಗೆ ನೀಡಿದ ಜಾಹೀರಾತಿನಲ್ಲಿ ರೂ.೫೦ ಸಂಬಳ ನೀಡುವುದಾಗಿ, ಎರಡು ಸಾವಿರ ರೂಪಾಯಿ ಭದ್ರತಾ ಠೇವಣಿ ನೀಡಬೇಕೆಂದು ಪ್ರಕಟಿಸಲಾಗಿತ್ತು. ಬ್ಯಾಂಕಿನ ಮಂಗಳೂರು ಶಾಖೆ ಆರಂಭಗೊಂಡದ್ದು ೧೯೨೬ ಆಗಸ್ಟ್ ೧೩ರಂದು. ಈ ಶಾಖೆ ೧೯೩೧ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಾಳಾಂತರಗೊಂಡಿತು. ೧೯೩೨ರಲ್ಲಿ ಮದ್ರಾಸ್‌ನಲ್ಲಿ ಹಾಗೂ ಮಂಗಳೂರು ಬಂದರ್‌ನಲ್ಲಿ ಕಾರ್ಪೊರೇಶನ್ ಬ್ಯಾಂಕಿನ ಎರಡು ಶಾಖೆಗಳು ಆರಂಭಗೊಂಡಿವು. ಕೊಡಗಿನವರ ಬೇಡಿಕೆಯ ಮೇರೆಗೆ ಬ್ಯಾಂಕಿನ ಮಡಿಕೇರಿ ಶಾಖೆ ಆರಂಭಗೊಂಡದ್ದು ೧೯೩೪ರಲ್ಲಿ.

ಮಂಗಳೂರಿನ ರಾವ್ ಬಹದ್ದೂರ್ ಯು. ಆನಂದರಾವ್ ಕಾರ್ಪೊರೇಶನ್ ಬ್ಯಾಂಕಿನ ಪ್ರಥಮ ಕಾರ್ಯದರ್ಶಿಯಾಗಿ ನೇಮಕಗೊಂಡು, ೧೯೧ರವರೆಗೆ ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ‘ಬ್ಯಾಂಕ್ ಆಫ್ ಮದ್ರಾಸ್’ನ ಮಂಗಳೂರು ಶಾಖೆಯಲ್ಲಿ ಅಧಿಕಾರಿಯಾಗಿದ್ದ ಅವರು ನಿವೃತ್ತ ಸಬ್-ಮ್ಯಾಜಿಸ್ಟ್ರೇಟ್ ಆಗಿದ್ದರು.

ಬೈಂದೂರು ನಾರಾಯಣರಾಯರು ಬ್ಯಾಂಕಿನ ಆರಂಭಕಾಲದಿಂದ ಹದಿನೈದು ವರ್ಷಗಳ ಕಾಲ ನಿರ್ದೇಶಕರಾಗಿದ್ದರು. ೧೯೧೨ರಲ್ಲಿ ಅಬ್ದುಲ್ಲಾ  ಸಾಹೇಬರು ಹಜ್ ಯಾತ್ರೆಗೆ ಹೋದಾಗ ಬೈಂದೂರು ನಾರಾಯಣರಾಯರು ಪ್ರಭಾರ ಅಧ್ಯಕ್ಷರಾಗಿದ್ದರು.

ಆ ಕಾಲದಲ್ಲಿ ಬ್ಯಾಂಕಿಗೆ ಲೆಕ್ಕ ಪರಿಶೋಧಕರನ್ನು ನೇಮಿಸುವುದು ಕಷ್ಟದ ಕೆಲಸವಾಗಿತ್ತು. ಕಾರ್ಪೊರೇಶನ್ ಬ್ಯಾಂಕಿನ ಆರಂಭದ ವರ್ಷಗಳ ಲೆಕ್ಕ ಪರಿಶೋಧಕರಾಗಿದ್ದವರು – ಡಾ. ಯು. ಆನಂದರಾವ್, ಮಂಗಳೂರು -(೧೯೦೬-೦೮), ಎ.ಎಮ್. ಫೆರ್ನಾಂಡಿಸ್ ಉಡುಪಿ (೧೯೦೯-೧೦), ೩. ಯು. ಶಿವ ರಾವ್, ವಕೀಲರು, ಉಡುಪಿ (೧೯೧೧). ೪. ಕೆ.ವಿ. ಗೋವಿಂದನ್ ನಾಯರ್, ಜಿಲ್ಲಾಧಿಕಾರಿ, ಮಂಗಳೂರು (೧೯೧೨-೧೫). ೫. ಎಂ.ಎನ್. ಕೃಷ್ಣರಾವ್ ಮಂಗಳೂರು(೧೯೧೬-೨೪). ೬. ಪಿ.ವೆಂಕಟಾದ್ರಿ ಅಯ್ಯರ್, ಜಿಲ್ಲಾಧಿಕಾರಿ, ಪಾಲ್ಗಾಟ್ (೧೯೨೫), ೭. ಕಲ್ಮಾಡಿ ಮತ್ತು ಏಕಾಂಬರಮ್, ಮದ್ರಾಸು (೧೯೨೬-೩೦)

ಉಡುಪಿಯಲ್ಲಿ ಕಾರ್ಪೊರೇಶನ್ ಬ್ಯಾಂಕ್ ಸ್ಥಾಪನೆಯಾದ ಮೂವತ್ತ ಮೂರು ದಿನಗಳ ಅನಂತರ ಮಂಗಳೂರಿನಲ್ಲಿ ಕೆನರಾ ಹಿಂದೂ ಪರ್ಮನೆಂಟ್ ಫಂಡ್‌ನ ಉದಯವಾಯಿತು. (೧೯೦೬).; ಮುಂದೆ ಇದು ಕೆನರಾ ಬ್ಯಾಂಕ್ ಎಂಬ ಹೆಸರು ಪಡೆಯಿತು. ೧೯೧೪-೧೮ರ ಮೊದಲ ಮಹಾಯುದ್ಧದ ಕಷ್ಟದ ದಿನಗಳು ಮುಗಿದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಬ್ಯಾಂಕುಗಳು ಸ್ಥಾಪನೆಗೊಂಡವು (೧) ಕೆನರಾ ಎಂಟರ್ ಪ್ರೈಸಸ್(ಲಿ.) ಪುತ್ತೂರು, ೨) ಪಾಂಗಾಳ ನಾಯಕ್ ಬ್ಯಾಂಕ್ ಲಿ. ಉಡುಪಿ (೧೯೨೦) ೩) ಜಯಲಕ್ಷ್ಮೀ ಬ್ಯಾಂಕ್ ಲಿ. ಮಂಗಳೂರು (೧೯೨೩) ೪) ಕರ್ನಾಟಕ ಬ್ಯಾಂಕ್ ಲಿ., ಮಂಗಳೂರು (೧೯೨೪) ೫) ಉಡುಪಿ ಬ್ಯಾಂಕ್ ಲಿ. ಉಡುಪಿ (೧೯೨೫) ೬) ಕೆನರಾ ಇಂಡಸ್ಟ್ರಿಯಲ್ ಆಂಡ್ ಬ್ಯಾಂಕಿಂಗ್ ಸಿಂಡಿಕೇಟ್ ಲಿ. ಉಡುಪಿ (೧೯೨೫) ೭) ಕೆಥೋಲಿಕ್ ಬ್ಯಾಂಕ್ (ಲಿ.) ಮಂಗಳೂರು (೧೯೨೫), ೮) ಮುಲ್ಕಿ ಬ್ಯಾಂಕ್, ಮುಲ್ಕಿ (೧೯೨೯), ೯) ವಿಜಯಾ ಬ್ಯಾಂಕು, ಮಂಗಳೂರು (೧೯೩೧) ೧೦) ಬ್ಯಾಂಕ್ ಆಫ್ ಮಂಗಳೂರು, (೧೯೩೧), ೧೧) ನಗರ್‌ಕರ್ಸ್‌ ಬ್ಯಾಂಕ್, ಮಂಗಳೂರು (೧೯೩೪), ೧೨) ಕುಂದಾಪುರ ಬ್ಯಾಂಕ್ (೧೯೩೨), ೧೩) ಎಗ್ರಿಕಲ್ಚರಲ್ ಎಂಡ್ ಇಂಡಸ್ಟ್ರಿಯಲ್ ಬ್ಯಾಂಕು – ಕುಂದಾಪುರ, (೧೯೩೪), ೧೪) ತುಳುನಾಡು ಬ್ಯಾಂಕ್ ಆಫ್ ಸಪ್ಲೈ ಏಜೆನ್ಸಿ, ಉಡುಪಿ(೧೯೩೩), ೧೫) ಪೈ – ಮನಿ ಬ್ಯಾಂಕ್, ಮಂಗಳೂರು (೧೯೩೪), ೧೬) ಅತ್ತೂರ ಎಂಡ್ ಜವಾಹರ ಬ್ಯಾಂಕ್ ಲಿಮಿಟೆಡ್, ಮಂಗಳೂರು, (೧೯೩೩). ೧೭) ಸದರ್ನ್ ಇಂಡಿಯಾ ಅಪೆಕ್ಸ್ ಬ್ಯಾಂಕ್ ಲಿ. ಉಡುಪಿ(೧೯೪೩), ೧೮) ಮಹಾರಾಷ್ಟ್ರ ಅಪೆಕ್ಸ್ ಲಿ. (೧೯೪೩) ೧೯) ಪ್ರಭಾಕರ ಬ್ಯಾಂಕ್ ಲಿ. ಮೂಡುಬಿದ್ರಿ (೧೯೪೫).

ಸಹಕಾರಿ ಕಾನೂನು ಅನುಷ್ಠಾನಗೊಂಡದ್ದು ೧೯೦೪ರಲ್ಲಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಚಳುವಳಿಯನ್ನು ಆರಂಭಿಸಿದವರು ಮೊಳಹಳ್ಳ ಶಿವರಾಯರು. ಪುತ್ತೂರಿನ ಪ್ರಸಿದ್ಧ ವಕೀಲರಾಗಿದ್ದ ಮೊಳಹಳ್ಳಿ ಶಿವರಾಯರು ೧೯೦೯ರಲ್ಲಿ ಪುತ್ತೂರಿನಲ್ಲಿ ಪುತ್ತೂರು ಸಹಕಾರಿ ರೂರಲ್ ಕ್ರೆಡಿಟ್ ಸೊಸೈಟಿ’ ಎಂಬ ಸಹಕಾರಿ ಸಂಘವನ್ನು ಸ್ಥಾಪಿಸಿದರು. ಹಾಜಿ ಅಬ್ದುಲ್ಲಾ ಸಾಹೇಬರಿಗೆ ಸಹಕಾರಿ ಚಳುವಳಿಯಲ್ಲೂ ವಿಶೇಷ ಆಸಕ್ತಿ ಇತ್ತು. ಅವರ ಪ್ರೇರಣೆಯಿಂದ ಉಡುಪಿ ಕೋ – ಅಪರೇಟಿವ್ ಸೊಸೈಟಿ ೧೯೧೨ರಲ್ಲಿ ಆರಂಭಗೊಂಡಿತು. ಈಗ ಉಡುಪಿ ಕೋ – ಅಪರೇಟಿವ್ ಟೌನ್ ಬ್ಯಾಂಕ್ ಆಗಿರುವ ಈ ಸಂಸ್ಥೆ ಹಲವು ಶಾಖೆಗಳನ್ನು ಹೊಂದಿದ್ದು, ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲಿದೆ ಈ ಬ್ಯಾಂಕ್ ತನ್ನ ಸ್ಥಾಪಕ ಅಧ್ಯಕ್ಷರನ್ನು ಮರೆತಿಲ್ಲ, ಸೂಕ್ತ ಗೌರವ ಸಲ್ಲಿಸುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್‌ಸಂಚಾರ ಆರಂಭಗೊಂಡದ್ದು ೧೯೧೪ರಲ್ಲಿ. ಆ ವರ್ಷ ನೆಲ್ಲಿಕಾಯಿ ವೆಂಕಟರಾವ್ ಹಾಗೂ ಬೋಳಾರ ವಿಠಲರಾಯರು ಕೆನರಾ ಪಬ್ಲಿಕ್ ಕನ್ವೇಯನ್ಸ್(ಸಿ.ಪಿ.ಸಿ.) ಕಂಪೆನಿ ಲಿಮಿಟೆಡ್‌ನ್ನು ಸ್ಥಾಪಿಸಿದರು. ಉಡುಪಿ – ಕಾರ್ಕಳ ಮೂಡುಬಿದ್ರೆ ಗುರುಪುರ ಮಾರ್ಗವಾಗಿ ಮಂಗಳೂರು ತಲುಪಲು ಐದು ಗಂಟೆ ಬೇಕಾಗುತ್ತಿತ್ತು. ಕಾರ್ಪೊರೇಶನ್ ಬ್ಯಾಂಕಿನ ಸ್ಥಾಪಕರು, ನಿರ್ದೇಶಕರು, ನೌಕರರು ತಮ್ಮ ವ್ಯವಹಾರದ ಸಂಚಾರಕ್ಕಾಗಿ ಎಷ್ಟೆಲ್ಲ ಕಷ್ಟಪಟ್ಟಿರಬಹುದೆಂದು ನಾವು ಕಲ್ಪಿಸಿಕೊಳ್ಳಬಹುದು.

ಹಾಜಿ ಅಬ್ದುಲ್ಲಾ ಸಾಹೇಬರು ೧೯೨೯ರಲ್ಲಿ ಕಾರ್ಪೊರೇಶನ್ ಬ್ಯಾಂಕಿನ ಅಧ್ಯಕ್ಷತೆಗೆ ರಾಜೀನಾಮೆ ನೀಡಿದರು. ಬ್ಯಾಂಕಿನ ಬೆಳ್ಳಿಹಬ್ಬದ ಸಂಚಿಕೆಯಲ್ಲಿ ದಾಖಲಾಗಿರುವಂತೆ, “ವಿಧಾನಸಭೆ ಮತ್ತು ಹಜ್ ಸಮಿತಿಗಳಿಗೆ ಸಂಬಂಧವನ್ನು ಕೆಲಸಗಳ ಒತ್ತಡದಿಂದ ಅವರು ೧೯೨೯ರಲ್ಲಿ ರಾಜೀನಾಮೆ ನೀಡಿದರು.” ಅವರು ಇಪ್ಪತ್ತಮೂರು ವರ್ಷಗಳ ಹಿಂದೆ ನೆಟ್ಟ ಸಸಿ – ಕಾರ್ಪೊರೇಶನ್ ಬ್ಯಾಂಕ್ – ಕಲ್ಪವೃಕ್ಷವಾಗಿ ಬೆಳೆದು ನಿಂತು ಕಂಗೊಳಿಸುತ್ತಿತ್ತು.

ಅಬ್ದುಲ್ಲಾ ಸಾಹೇಬರು ರಾಜೀನಾಮೆ ನೀಡಿದ ಮೇಲೆ ೧೯೨೯ರಿಂದ ೧೯೩೪ರವರೆಗೆ ಕಾರ್ಪೊರೇಶನ್ ಬ್ಯಾಂಕಿನ ಅಧ್ಯಕ್ಷರಾಗಿದ್ದವರು, ಉಡುಪಿಯ ವಕೀಲ ಹಾರಾಡಿ ಕೇಶವ ಪೈ. ಕೇಶವ ಪೈ ಅವರು ಅನಾರೋಗ್ಯದಿಂದ ತನ್ನ ೪೫ನೇ ವಯಸ್ಸಿನಲ್ಲಿ ೧೯೩೪ರಲ್ಲಿ ತೀರಿಕೊಂಡರು.

ಮುಂದೆ ೧೯೩೫ರಿಂದ ೧೯೫೯ರ ಕಾರ್ಪೊರೇಶನ್ ಬ್ಯಾಂಕಿನ ಅಧ್ಯಕ್ಷರಾಗಿದ್ದವರು. ಡಾ| ಯು. ಸುಂದರ ರಾಮ್ ಪೈ. ಇವರ ತಂದೆ ಯು. ಶೇಷಗಿರಿ ಪೈ ಅವರು ೧೯೧೫ರಿಂದ ೧೯೨೨ರವರೆಗೆ ಬ್ಯಾಂಕಿನ ನಿರ್ದೇಶಕರಾಗಿ, ೧೯೨೩ರಿಂದ ೧೯೨೯ರ ವರೆಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

* * *