ಮಲ್ಪೆ, ಉಡುಪಿ ಬಳಿಯಲ್ಲಿ ಕಡಲ ತೀರದಲ್ಲಿರುವ ಪಟ್ಟಣ. ಇದು ಇತಿಹಾಸದ ಇಳಿತ – ಭರತಗಳನ್ನು ಕಂಡಿದೆ. ಹದಿಮೂರನೆಯ ಶತಮಾನದಲ್ಲಿ ಉಡುಪಿಯ ಮಧ್ವಾಚಾರ್ಯರಿಗೆ ಬಾಲಕೃಷ್ಣನ ಮೂರ್ತಿ ಸಿಕ್ಕಿದ್ದು ಮಲ್ಪೆಯ ಕಡಲತೀರದಲ್ಲಿ.  ದ್ವಾರಕೆಯ ಮೂರ್ತಿ ಮಲ್ಪೆಯ ಕಡಲ ಕಿನಾರೆಗೆ ಬಂದದ್ದು ‘ಕೃಷ್ಣಲೀಲೆ’ಯಲ್ಲದೆ ಮತ್ತೇನು? ಮಲ್ಪೆಯ ಬಳಿ ಕಡಲಲ್ಲಿರುವ ಸೈಂಟ್ ಮೆರೀಸ್ ದ್ವೀಪದ ಸಮುದ್ರರಾಜ ನಿರ್ಮಿತ ಕಲಾಕೃತಿಗಳ (ಬಂಡೆಗಳು). ಖ್ಯಾತಿ ಜಗದಗಲ ಹರಡಿದೆ. ಮಲ್ಪೆ ಕರ್ನಾಟಕದ ಪ್ರಸಿದ್ಧ ಮೀನುಗಾರಿಕಾ ಬಂದರು. ಮಲ್ಪೆಯ ‘ಬಂಗುಡೆ’, ‘ಬೂತಾಯಿ’ಗಳ ರುಚಿ ಕರ್ನಾಟಕದ ಮತ್ಸ್ಯಪ್ರಿಯರಿಗೆಲ್ಲ ಗೊತ್ತು. ಹಾಜಿ ಅಬ್ದುಲ್ಲಾ ಸಾಹೇಬರ ತಂದೆ ಖಾಸಿಮ್ ಬುಡಾನ್ ಸಾಹೇಬರು ಮಲ್ಪೆಯಲ್ಲಿ ವಾಸಿಸುತ್ತಿದ್ದರು.

ಹಾಜಿ ಅಬ್ದುಲ್ಲಾ ಸಾಹೇಬರ ಸೋದರಿಯ ಮೊಮ್ಮಗ ಡಾ. ಎಸನ್. ಎ. ಹುಸೇನ್ ಅವರು ಹೇಳುವಂತೆ, “ಗುಜರಾತ್‌ನ ಜುನಾಗಢ ಪ್ರದೇಶದಿಂದ ವ್ಯಾಪಾರ ವಹಿವಾಟು ಕಾರಣದಿಂದ ದಕ್ಷಿಣ ಕನ್ನಡಕ್ಕೆ ಬಂದು ನೆಲೆಸಿದ ಕುಟುಂಬಕ್ಕೆ ಸೇರಿದವರು ಹಾಜಿ ಅಬ್ದುಲ್ಲಾ “ಪ್ರಜಾವಾಣಿ’ ಮಂಗಳೂರು, ೧೮೧-೨೦೦೬) ಉರ್ದು ಮನೆಮಾತಿನ ಈ ಕುಟುಂಬದವರು ಗಂಧದೆಣ್ಣೆ, ಅಕ್ಕಿ, ಒಣಮೀನು ವ್ಯಾಪಾರ, ರಫ್ತು ಮಾಡುತ್ತಿದ್ದ ಪ್ರಸಿದ್ಧ ವರ್ತಕರಾಗಿದ್ದು. ಖಾಸಿಮ್ ಸಾಹೇಬರು ಬಡವರಿಗೆ ದಿನಕ್ಕೆ ಒಂದು ಮುಡಿ ಅಕ್ಕಿ (ನಲವತ್ತು ಕಿಲೋ) ವಿತರಣೆ ಮಾಡುತ್ತಿದ್ದ ಕೊಡುಗೈ ದಾನಿಯಾಗಿದ್ದರು. ಅವರು ಎಷ್ಟು ಶ್ರೀಮಂತರಾಗಿದ್ದರು ಎಂಬುದನ್ನು ಮಲ್ಪೆಯ ಹಿರಿಯರು ಈಗಲೂ ತುಳುವಿನಲ್ಲಿ ಹೀಗೆ ವರ್ಣಿಸುತ್ತಾರೆ – ‘ನೋಟು ಪೊತ್ತಾದ್ ಚಾ ಮಲ್ಪುನಾತ್ ದೊಡ್ಡು ಅಗಲೆಡ ಇತ್ತ್ಂಡ್‌ಗೆ” (ನೋಟಿನ ಕಟ್ಟಿನಲ್ಲೆ ಬೆಂಕಿ ಉರಿಸಿ ಚಾ ಮಾಡುವಷ್ಟು ಸಂಪತ್ತು ಅವರಲ್ಲಿತ್ತಂತೆ.)

ಖಾಸಿಮ್ ಬುಡಾನ್ ಸಾಹೇಬ್ – ಬಾನುಬೀಬಿ ದಂಪತಿಗಳ ಮಗನಾಗಿ ಅಬ್ದುಲ್ಲಾ ಸಾಹೇಬರು ಜನಿಸಿದ್ದು ೧೮೮೨ರಲ್ಲಿ. ಇವರ ಸೋದರರ ಬಗ್ಗೆ ಮಾಹಿತಿಗಳು ಲಭ್ಯವಿಲ್ಲ. ಲತೀಫಾ ಬೇಬಿ, ಫಾತಿಮಾ ಬೀಬಿ ಇವರ ಸೋದರಿಯರು. ಲತೀಫಾ ಅವರು ಕಾರ್ಕಳದ ಪ್ರಸಿದ್ಧ ಭೂಮಾಲಿಕ ಕುಟುಂಬದ ಅಂಡಾರ್ ಸೈಯದ್ ಅಬ್ಬಾಸ್ ಸಾಹೇಬರನ್ನು ಮದುವೆಯಾದರು. ಉಡುಪಿಯ ಆ ಕಾಲದ ‘ಸುಬೋಧಿನಿ’ ಪತ್ರಿಕೆ ಖಾಸಿಮ್ ಸಾಹೇಬರ ಮನೆಯ ಸಮಾರಂಭವೊಂದನ್ನು ಹೀಗೆ ವರ್ಣಿಸಿತ್ತು – “ಅಬ್ದುಲ್ಲಾ ಸಾಹೇಬರ ತಂದೆಯವರಾದ ಖಾಸಿಮ್ ಸಾಹೇಬರು ತನ್ನ ಹಿರಿಯ ಮಗನ ‘ಖತ್ನಾ’ ಸಮಾರಂಭಕ್ಕೆ ಊರೆಲ್ಲಾ ಕರೆ ಕಳುಹಿಸಿ ದೊಡ್ಡ ಔತಣ ಏರ್ಪಡಿಸಿದ್ದು ಮಾತ್ರವಲ್ಲ. ಶಾಖಾಹಾರಿ ಬ್ರಾಹ್ಮಣರಿಗಾಗಿ ಅದೇ ಚಪ್ಪರದಲ್ಲಿ ಪ್ರತ್ಯೇಕ ಭೋಜನವನ್ನು ಏರ್ಪಡಿಸಿ, ಆಮೇಲೆ ದಕ್ಷಿಣೆಯನ್ನು ವಿತರಿಸಿದರು. ಇದು ಉಡುಪಿ ಪರ್ಯಾಯದಂತಿತ್ತು.”

ಖಾಸಿಮ್ ಸಾಹೇಬರ ಎಚ್.ಬಿ. ಕಂಪನಿಯ ಕಛೇರಿ ಉಡುಪಿಯಲ್ಲಿತ್ತು. ಮಲ್ಪೆಯಿಂದ ಉಡುಪಿಗೆ ಅವರು ತನ್ನ ಮಗ ಅಬ್ದುಲ್ಲನೊಂದಿಗೆ ಕುದುರೆ ಸಾರೋಟಿನಲ್ಲಿ ಬರುತ್ತಿದ್ದರು. ೧೯೦೧ರ ಅಕ್ಟೋಬರ್‌ನಲ್ಲಿ ಅಬ್ದುಲ್ಲಾ ಸಾಹೇಬರು ತನ್ನ ತಂದೆ ಖಾಸಿಮ್ ಸಾಹೇಬರ ಸ್ಮಾರಕ ದತ್ತಿನಿಧಿ ಬಹುಮಾನವೊಂದನ್ನು ಆರಂಭಿಸಿದರು. ಅಂದರೆ ೧೯೦೧ರ ಅಕ್ಟೋಬರ್‌ಗಿಂತ ಮುನ್ನ ಹಾಜಿ ಖಾಸಿಮ್ ಸಾಹೇಬರು ನಿಧನರಾದರು. ಆಗ ಅಬ್ದುಲ್ಲಾ ಸಾಹೇಬರಿಗೆ ಹತ್ತೊಂಬತ್ತರ ಹರೆಯ.

ಅಬ್ದುಲ್ಲಾ ಸಾಹೇಬರು ಉಡುಪಿಯಲ್ಲೆ ಹೈಸ್ಕೂಲು ಶಿಕ್ಷಣ ಪಡೆದರು. ಅವರಿಗೆ ಕನ್ನಡ, ತುಳು, ಇಂಗ್ಲಿಷ್ ಭಾಷಿಗಳು ಗೊತ್ತಿದ್ದುವು. ಕೊಂಕಣಿ ಅರ್ಥವಾಗುತ್ತಿತ್ತು. ವಹಾಬ್ ದೊಡ್ಡ ಮನೆ ಅವರು ಬರೆದಿರುವಂತೆ, “ತಲೆಯ ಮೇಲೆ ಕೆಂಪಗಿನ ಟರ್ಕಿ ಪೇಜ್ ಟೊಪ್ಪಿ ಆಗಿನ ಕಾಲದ ಮುಸ್ಲಿಮ್ ಹುಡುಗರ ಆದರ್ಶ. ಟರ್ಕಿ ದೇಶದ ಕ್ರಾಂತಿಕಾರಿ ನಾಯಕ ‘ಅತಾಟರ್ಕ್’ ಎಂದು ಪ್ರಸಿದ್ಧನಾದ ಮುಸ್ತಾಫಾ ಕಮೊಲ್‌ನಿಂದ ಅನುಕರಿಸಿದ್ದು. ಹೆಚ್ಚು ಎತ್ತರವೂ ಅಲ್ಲ. ಕುಳ್ಳನೂ ಅಲ್ಲದ ಸೌಮ್ಯ ಸ್ವಭಾವದ, ಶ್ರೀಮಂತಿಕೆಯ ಗತ್ತು ತೋರದ ಅಬ್ದುಲ್ಲಾ ಸಾಹೇಬರು ಜನಸಾಮಾನ್ಯರಲ್ಲಿ ಒಬ್ಬನಂತೆ ಮೆರೆದವರು” (ಮುರಳೀಧರ ಉಪಾಧ್ಯ, ಎಚ್. ಡುಂಡಿರಾಜ್(ಸಂ) – ಹಾಜಿ ಅಬ್ದುಲ್ಲಾ ಸಾಹೇಬ್, ೨೦೦೧)

ಯುವಕ ಅಬ್ದುಲ್ಲಾ ಸಾಹೇಬರು ತನ್ನ ತಂದೆಯವರ ಅಕ್ಕಿ, ಗಂಧದೆಣ್ಣೆ, ಒಣಮೀನು ವ್ಯಾಪಾರವನ್ನು ಮುಂದುವರಿಸಿದರು. ಒಣಮೀನಿನ ರಫ್ತು ವ್ಯಾಪಾರದಲ್ಲಿ ಮಲ್ಪೆಯ ಶ್ರೀ ಮುತ್ತಪ್ಪ ಸಾಹುಕಾರರು ಅಬ್ದುಲ್ಲಾ ಸಾಹೇಬರ ಪಾಲುದಾರರಾಗಿದ್ದರು. (ದಿ| ಮುತ್ತಪ್ಪ ಸಾಹುಕಾರರು ಉಡುಪಿಯ ಮಾಜಿ ಎಂ.ಎಲ್.ಎ., ಕೊಡುಗೈದಾನಿ ಶ್ರೀ ಮಧ್ವರಾಜರ ತಂದೆ.) ಅಬ್ದುಲ್ಲಾ ಸಾಹೇಬರ ಎಚ್.ಬಿ.ಕಂಪನಿಗೆ ಇಡೀ ಮದ್ರಾಸ್ ರಾಜ್ಯದ ‘ನಿಮ್‌ಕೊ” ಬೆಂಕಿಪೆಟ್ಟಿಗೆ ಕಂಪೆನಿಯ ಏಜೆನ್ಸಿ ಸಿಕ್ಕಿತ್ತು. ಕಾಫಿಪುಡಿ ವ್ಯಾಪಾರ ಆರಂಭಿಸಿದ ಅಬ್ದುಲ್ಲಾ ಸಾಹೇಬರು ಉಡುಪಿಯವರಿಗೆ ಕಾಫಿಯ ರುಚಿ ಕಲಿಸಿದರು. ಮುಂದೆ ನಿಧಾನವಾಗಿ ಉಡುಪಿಯ ರಥಬೀದಿಯಲ್ಲಿ ಶಿವಳ್ಳಿ ಬ್ರಾಹ್ಮಣರ ಕಾಫಿ ಹೋಟೇಲುಗಳು ಆರಂಭವಾದುವು. ಎಚ್.ಪಿ. ಕಂಪೆನಿ ಅರೇಬಿಯಾದಿಂದ ಖರ್ಜೂರವನ್ನು ಆಮದು ಮಾಡುತ್ತಿತ್ತು. ಉಡುಪಿ ಜಿಲ್ಲೆಯ ಜಾತ್ರೆಯ ಅಂಗಡಿಗಳಲ್ಲಿ ವಿದೇಶಿ ಹಣ್ಣು ಖರ್ಜೂರ ವಿಶೇಷ ಆಕರ್ಷಣೆ ಗಳಿಸಿತ್ತು.

೧೯೦೧ರ ಅನಂತರ ಅಬ್ದುಲ್ಲಾ ಸಾಹೇಬರು ಉಡುಪಿಯಲ್ಲಿ ಮನೆ ಕಟ್ಟಿಸಿದರು. ಅವರ ಎಚ್.ಬಿ. ಕಂಪೆನಿಯ ಕಛೇರಿ ಇದ್ದ ಸ್ಥಳದಲ್ಲೆ, ಅಂದರೆ ಈಗ ಕಾರ್ಪೊರೇಶನ್ ಬ್ಯಾಂಕ್ ಇರುವಲ್ಲಿ ಅವರ ನೂತನ ನಿಕೇತನ ನಿರ್ಮಾಣಗೊಂಡಿತು. ಅವರು ಗೋಶಾಲೆಯಲ್ಲಿ ಹಲವು ಹೊಸ ತಳಿಯ ದನಗಳಿದ್ದವು. ಅವರು ಸಾಕುತ್ತಿದ್ದ ನವಿಲುಗಳು ‘ತುರ್ಕೆಗಿಳಿ’ ಉಡುಪಿಯಲ್ಲಿ ಮನೆಮಾತಾಗಿದ್ದುವು. ಅವುಗಳನ್ನು ನೋಡಲು ಉಡುಪಿಯ ಹತ್ತಾರು ಮಕ್ಕಳು ಅಬ್ದುಲ್ಲಾ ಸಾಹೇಬರು ಮನೆಗೆ ಬರುತ್ತಿದ್ದರು.

ಸ್ಥಾಪಕ, ಅಧ್ಯಕ್ಷ ಅಬ್ದುಲ್ಲಾ ಸಾಹೇಬರ ಮನೆ - ಬ್ಯಾಂಕಿನ ಆರಂಭ ಕಾಲದ ಕಛೇರಿ

ಅಬ್ದುಲ್ಲಾ ಸಾಹೇಬರ ಸಂಬಂಧದವರಾದ ನಸೀಬ್ ಸಾಹೇಬರು ಕಾರ್ಪೊರೇಶನ್ ಬ್ಯಾಂಕ್‌ನ ಕೆಲವು ದಶಕಗಳ ಕಾಲ  ಸೇವೆ ಸಲ್ಲಿಸಿ ೧೯೭೩ರಲ್ಲಿ ನಿವೃತ್ತರಾದರು. ಅವರು ಒಂದು ಸಂದರ್ಶನದಲ್ಲಿ ಅಬ್ದುಲ್ಲಾ ಸಾಹೇಬರನ್ನು ಹೀಗೆ ನೆನಪಿಸಿಕೊಂಡರು – “ತನ್ನ ತಮ್ಮ – ತಂಗಿಯರ ಬಗ್ಗೆ ಅವರಿಗೆ ತುಂಬ ವಾತ್ಸಲ್ಯ. ಅಬ್ದುಲ್ಲಾ ಸಾಹೇಬರ ಮನೆಯ ಸಮಾರಂಭಗಳಿಗೆ ಅವರ ಸೋದರ-ಸೋದರಿಯರೆಲ್ಲ ಬರುತ್ತಿದ್ದರು. ನಾನು ‘ಥರ್ಡ್ ಫಾರ್ಮ್’ ಓದುತ್ತಿದ್ದ ದಿನಗಳಿಂದ ನನಗೆ ಅವರ ನೆನಪುಗಳಿವೆ. ಆಗ ಅವರು ಆಗಾಗ ದಿಲ್ಲಿ, ಕಾಶ್ಮೀರಕ್ಕೆ ಹೋಗಿಬರುತ್ತಿದ್ದರು. ಅವರು ಯಾವಾಗ ದಿಲ್ಲಿಗೆ ಹೋಗುತ್ತಿದ್ದರೆಂದು ನಮಗೆ ಗೊತ್ತಾಗುತ್ತಿರಲಿಲ್ಲ. ಆದರೆ ಅವರು ಬಂದದ್ದು ಕೂಡಲೇ ಗೊತ್ತಾಗುತ್ತಿತ್ತು. ಅವರು ಬರುವಾಗ ಬುಟ್ಟಿ ತುಂಬ ಸೇಬು ಹಾಗೂ ದಕ್ಷಿಣ ಕನ್ನಡದಲ್ಲಿ ಸಿಗದ ಇತರ ಹಣ್ಣುಗಳನ್ನು ತರುತ್ತಿದ್ದರು. ಆದ್ದರಿಂದ ನಾವು ಅವರು ಬರುವುದನ್ನೇ ಕಾಯುತ್ತಿದ್ದೆವು.

ಉಡುಪಿಯ ತನ್ನ ಅರಮನೆಯಂಥ ಮನೆಯಲ್ಲಿ ಅವರು ವಾಸಿಸುತ್ತಿದ್ದರು. ಆ ಮನೆಗೆ ಮುಂಬೈಯಿಂದ ತರಿಸಿದ ಮಾರ್ಬಲ್ ಹಾಗೂ ಸಿರಾಮಿಕ್ ಟೈಲ್ಸ್‌ಗಳನ್ನು ಬಳಸಲಾಗಿತ್ತು. ಆಗಿನ ಉಡುಪಿಯಲ್ಲಿ ಅವರ ಮನೆಯಷ್ಟು ಸವಲತ್ತುಗಳಿದ್ದ ಬೇರೆ ಒಂದೇ ಒಂದು ಮನೆಯೂ ಇರಲಿಲ್ಲ. ಆ ಮೆಯಲ್ಲಿ ಅವರು ಮತ್ತು ಅವರ ಹೆಂಡತಿ ಮಾತರ ಇದ್ದರು. ಅವರ ಮನೆಯಲ್ಲಿ ಎಂಟರಿಂದ ಹತ್ತು ಮಂದಿ ಮನೆ ಕೆಲಸದವರಿದ್ದರು. ಅವರು ಮನೆಗೆ ಬರುತ್ತಿದ್ದ ನೆಂಟರನ್ನು ಅತಿಥಿಗಳನ್ನು ಉಪಚರಿಸುತ್ತಿದ್ದರು. “(ಎಂ.ವಿ. ಕಾಮತ್ -Corporation Bank – A Corporate Journey’, 1997). ೧೯೨೮ರಲ್ಲಿ ಅಬ್ದುಲ್ಲಾ ಸಾಹೇಬರು ಕೊಂಡುಕೊಂಡ ಫೋರ್ಡ್‌ಕಾರು ಉಡುಪಿಗೆ ಬಂದ ಮೊದಲ ಕಾರ್ ಆಗಿತ್ತು. ಹಲವು ದಿನಗಳ ಕಾಲ ಆ ಕಾರು ಉಡುಪಿಯಲ್ಲಿ ದೊಡ್ಡ ಸುದ್ದಿಯಾಗಿತ್ತು.

ವಿದೇಶದಿಂದ ತರಿಸಿದ ಸಿರಾಮಿಕ್ ಟೈಲ್ಸ್ಗಳು

ಮಾದರಿ ೧

ಮಾದರಿ ೨

ಮಾದರಿ ೩

ಮಾದರಿ ೪

ಅಬ್ದುಲ್ಲಾ ಸಾಹೇಬರ ಮನೆ ಉಡುಪಿಯ ರಥಬೀದಿಯಿಂದ ಕೂಗಳತೆಯ ದೂರದಲ್ಲಿತ್ತು. ಅಲ್ಲಿಂದ ಬಡಗುಪೇಟೆ ಮಾರ್ಗವಾಗಿ ರಥಬೀದಿಗೆ ಬಂದು ಅಲ್ಲಿ ಸುತ್ತಾಡುವುದೆಂದರೆ ಸಾಹೇಬರಿಗೆ ತುಂಬ ಇಷ್ಟ. ಬಡಗುಪೇಟೆಯ ಜವುಳಿ ವ್ಯಾಪಾರಿ ಶ್ರೀ ನಾನಾಲಾಲ್ ಶೇಟ್, ವರ್ತಕ ಶ್ರೀ ಯು. ರಾಮಪ್ಪ (ಈಗಿನ ಉಡುಪಿಯ ಸಮಾಜ ಸೇವಕ ಶ್ರೀ ಯು. ಆರ್. ಜಯವಂತ, ಮಾಜಿ ಶಾಸಕ ಶ್ರೀ ಯು. ಆರ್. ಸಭಾಪತಿ ಅವರ ತಂದೆ) ಅಬ್ದುಲ್ಲಾ ಸಾಹೇಬರ ಗೆಳೆಯರು. ದಾರಿಯಲ್ಲಿ “ನಾವು ಸಲಾಮ್ ಕೊಡುವುದನ್ನು ಮರೆತರೆ ಅವರೇ ಸಲಾಮ್ ಕೊಡುತ್ತಿದ್ದರು.” ಎನ್ನುತ್ತಾರೆ ನಜೀಬ್ ಸಾಹೇಬರು. ಈಗ ಉಡುಪಿಯ ಸರಕಾರಿ ಮಹಿಳಾ ಆಸ್ಪತ್ರೆ (ಹಾಜಿ ಬುಡಾನ್ ಸ್ಮಾರಕ ಆಸ್ಪತ್ರೆ) ಇರುವ ಜಾಗದಲ್ಲಿ ಅಬ್ದುಲ್ಲಾ ಸಾಹೇಬರು ಟೆನ್ನಿಸ್ ಆಡುತ್ತಿದ್ದರು.

ಶ್ರೀ ಸಂತೋಷಕುಮಾರ್ ಗುಲ್ವಾಡಿ ಅವರು ಹೇಳುವಂತೆ, ‘ಉಡುಪಿಯಲ್ಲಿದ್ದ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರು ನಡೆದುಕೊಂಡು ಹೋಗುತ್ತಿದ್ದಾಗ ನನ್ನ ಅಜ್ಜಿ ತನ್ನ ಮಗನನ್ನು ಕರೆದು, “ಅಬ್ದುಲ್ಲಾ ಸಾಹೇಬರು ಬಿಸಿಲಲ್ಲಿ ನಡೆಯುತ್ತಿದ್ದಾರೆ. ಓಡಿ ಹೋಗಿ ಅವರಿಗೆ ಕೊಡೆ ಹಿಡಿ” ಅಂದಿದ್ದರು. “(ಮುರುಳೀಧರ ಉಪಾಧ್ಯ, ಎಚ್. ಡುಂಡಿರಾಜ್ (ಸಂ.) ೨೦೦೧) ಅಬ್ದುಲ್ಲಾ ಸಾಹೇಬರ ಪತ್ನಿ ಮಂಗಳೂರಿನ ಕುದ್ರೋಳಿಯವರು. ಈ ದಂಪತಿಗಳಿಗೆ ಮಕ್ಕಳಿರಲಿಲ್ಲ. ಈಗ ಉಡುಪಿಯ ಹಿರಿಯ ನಾಗರಿಕರಲ್ಲೊಬ್ಬರಾಗಿರುವ, ಕಲ್ಪನಾ ಥಿಯೇಟರ್‌ನ ಮ್ಯಾನೇಜರ್ ಆಗಿದ್ದು ನಿವೃತ್ತರಾದ ಪಾಡಿಗಾರು ಶೀನ ಶೆಟ್ಟರು ತನ್ನ ಬಾಲ್ಯದಲ್ಲಿ ತಾಯಿಯ ಜೊತೆ ಅಬ್ದುಲ್ಲಾ ಸಾಹೇಬರ ಮನೆಗೆ ಹೋಗಿದ್ದರಂತೆ. ಅವರು ಅಬ್ದುಲ್ಲಾ ಸಾಹೇಬರ ಮನೆಯ ಒಂದು ದನವನ್ನು ಹದಿನಾರು ರೂಪಾಯಿ ಕೊಟ್ಟುಕೊಂಡು ಕೊಂಡರು. ಅಬ್ದುಲ್ಲಾ ಸಾಹೇಬರ ಹೆಂಡತಿ ‘ಅಮ್ಮ ಇವನಿಗೇನಾದರೂ ತೆಗೆಸಿಕೊಡಿ’ ಎಂದು ನಾಲ್ಕು ರೂಪಾಯಿಯನ್ನು ಶೀನಶೆಟ್ಟರ ತಾಯಿಗೆ ವಾಪಸು ಕೊಟ್ಟರು! ಎಸ್.ಎಸ್.ಎಲ್.ಸಿ. ಪಾಸು ಮಾಡಿದ ಶೀನ ಶೆಟ್ಟರು ಬೀದಿ ತಿರುಗುತ್ತಿದ್ದಾಗ ಅವರನ್ನು ದಾರಿಯಲ್ಲಿ ನಿಲ್ಲಿಸಿ ಮಾತನಾಡಿಸಿದ ಅಬ್ದುಲ್ಲಾ ಸಾಹೇಬರು, “ಏನು ಮಾಡುತ್ತಿದ್ದಿ? ಮನೆಗೆ ಬಾ. ಟೈಪ್‌ರೈಟರ್ ಇದೆ. ಸ್ವಲ್ಪ ಹೊತ್ತು ಕಲಿ”. ಎಂದು ಆಹ್ವಾನಿಸಿದರು. (ಕು.ಶಿ. ಹರಿದಾಸ ಭಟ್, ೧೯೮೫)

ಸರಸ್ವತಿ ಬಾಯಿ ರಾಜವಾಡೆ (೧೯೧೩-೧೯೯೪) ಕನ್ನಡದ ಪ್ರಸಿದ್ಧ ಕತೆಗಾರ್ತಿ. ಇವರು ಹುಟ್ಟಿಬೆಳೆದದ್ದು ಉಡುಪಿ ತಾಲೂಕಿನ ಕಟ್ಟಿಂಗೇರಿ ಬಳಿಯ ಬಳಂಜಾಲ ಎಂಬ ಹಳ್ಳಿಯಲ್ಲಿ. ಬಾಲಕಿ ಸರಸ್ವತಿಯನ್ನು ದತ್ತುಪುತ್ರಿಯಾಗಿ ಸ್ವೀಕರಿಸಲು ಅಬ್ದುಲ್ಲಾ ಸಾಹೇಬ ದಂಪತಿಗಳು ಬಯಸಿದ್ದರಂತೆ. ಬಹುಶಃ ಈ ಘಟನೆ ೧೯೨೦ರ ವೇಳೆಗೆ ನಡೆದಿರಬೇಕು. ಮುಂದೆ ೧೯೨೮ರಲ್ಲಿ ೧೫ ವರ್ಷ ಪ್ರಾಯದ ಚೆಲುವೆ ಸರಸ್ವತಿಯ ಮದುವೆ ಅವಳಿಗಿಂತ ಮೂವತ್ತೇಳು ವರ್ಷ ಹಿರಿಯರಾಗಿದ್ದ, ತಂಜಾವೂರಿನ ಡೆಪ್ಯೂಟಿ ಕಲೆಕ್ಟರ್ ಸಿ.ಟಿ. ಎ. ರಾಯಶಾಸ್ತ್ರಿ ರಾಜವಾಡೆಯವರೊಂದಿಗೆ ನಡೆಯಿತು. ಸರಸ್ವತಿ ಬಾಯಿ ರಾಜವಾಡೆಯವರು ಕನ್ನಡದ ಮಹತ್ವದ ಲೇಖಕಿ ವೈದೇಹಿಯವರಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿರುವಂತೆ, “ಉಡುಪಿಯ ಒಬ್ಬರು ಮುಸ್ಲಿಮರ ಮನೆಯಲ್ಲಿ ನನ್ನನ್ನು ದತ್ತಕ್ಕೆ ಕೇಳಿದ್ದರಂತೆ. ಅವರು ಅಬ್ದುಲ್ ಸಾಹೇಬರು ಅಂತ. ಭಾರೀ ದೊಡ್ಡ ಶ್ರೀಮಂತರು. ಬಹಳ ಹೆಸರುವಾಸಿ, ಉದಾರಿಗಳು, ದೈವಭಕ್ತರು, ಪರೋಪಕಾರಿ ಬಹಳ ಬಹಳ ಹಿಂದೊಮ್ಮೆ ಉಡುಪಿಯ ಲಕ್ಷ ದೀಪೋತ್ಸವ ನಡೆಯುವಾಗ ಮಳೆ ಬಂದು ಹಣತೆಯೊಳಗಿನಿಂದ ಎಣ್ಣೆಯೆಲ್ಲಾ ಬಳಿದು ಹೋಗಿ ದೀಪ ಆರಿ ಗೌಜಿಯೆದ್ದಾಗ ಈ ಸಾಹೇಬರು ಸ್ವಂತ ಭಂಡಾರದಿಂದಲೇ ಕರ್ಪೂರ ಒದಗಿಸಿ ಲಕ್ಷ ದೀಪ ನಡೆಯುವಂತೆ ಮಾಡಿದರಂತೆ. ಅವರು ದಿನಾ ಬೆಳಿಗ್ಗೆ ಬಂದು ದೇವಸ್ಥಾನದ ಹೊರಗಿನಿಂದಲೇ ಕೃಷ್ಣ ದೇವರಿಗೆ ನಮಸ್ಕಾರ ಮಾಡಿ ಹೋಗುತ್ತಿದ್ದುದನ್ನು ದೊಡ್ಡವಳಾದ ಮೇಲೆ ನಾನು ನೋಡಿದ್ದೇನೆ. ಅವರು ಸತ್ತಾಗ ಇಲ್ಲಿನ ಕಟ್ಟಾ ಮಡಿವಂತ ಬ್ರಾಹ್ಮಣರೂ ಸಹ ತಮ್ಮ ಬಂಧುವೊಬ್ಬ ಸತ್ತರೆ ಹೇಗೊ ಹಾಗೆ ದುಃಖಿಸಿದರು. ಅವರ ಚಟ್ಟಕ್ಕೆ ಕೈ ಕೊಟ್ಟಿದ್ದರು. ದೇವತಾ ಮನುಷ್ಯರಾಗಿದ್ದ ಅವರಿಗೆ ಮಕ್ಕಳಿರಲಿಲ್ಲ. ನಿರ್ಗತಿಕ ಮಗುವಾಗಿದ್ದರೂ ನನ್ನನ್ನು ದತ್ತಕ್ಕೆ ಕೇಳಿದರು. ಕೇಳಿದರೆ ಈ ನನ್ನ ತಾಯಿ ಕೊಡಬೇಕೆ? ಆಕೆ ಒಪ್ಪಲೇ ಇಲ್ಲ. ಕಷ್ಟ ಬರುವಾಗ, ಅವಳು ಮುಖ ಮೈ ಕಾಣದೆ ನನಗೆ ಹೊಡೆಯುವಾಗ ನಾನು ಗೋಳಿನ ಬದಲು ಅವರ ಮನೆಗೆ ದತ್ತಕ್ಕಾದರೂ ಹೋಗಿದ್ದರೆ ಎಷ್ಟು ಒಳ್ಳೆಯದಿತ್ತು ಅಂತ ಎಣಿಸಿದ್ದು ಎಷ್ಟು ಎಷ್ಟು ಸಲವೋ. ಒಮ್ಮೊಮ್ಮೆ ತಾಯಿಗೆ ಹಾಗೆಯೇ ಎದುರುತ್ತರ ಕೊಡುತ್ತಿದ್ದೆ. ಹಾಗೆ ಹೇಳಿ ಇನ್ನೂ ನಾಲ್ಕು ಪೆಟ್ಟು ಜಾಸ್ತಿ ತಿನ್ನುತ್ತಿದ್ದೆ ಅಷ್ಟೆ.” (ವೈದೇಹಿ – ‘ದೇಶಕಾಲ’, ಅಕ್ಟೋಬರ್-ಡಿಸೆಂಬರ್ ೨೦೦೫)

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಂಸ್ಥಾನ ಸ್ವೀಕರಿಸಿದ್ದು ೧೯೩೮ರಲ್ಲಿ ಅವರ ಗುರುಗಳು ಶ್ರೀ ವಿಶ್ವಮಾನ್ಯ ತೀರ್ಥರು. ಶ್ರೀ ವಿಶ್ವಮಾನ್ಯರ ಗುರುಗಳಾದ ಶ್ರೀ ವಿಶ್ವಜ್ಞ ತೀರ್ಥರಿಗೆ ಹಾಜಿ ಅಬ್ದುಲ್ಲಾ ಸಾಹೇಬರ ಬಗ್ಗೆ ತುಂಬ ಅಭಿಮಾನ. ೧೯೦೪ರಲ್ಲಿ ಅವರು ತನ್ನ ಪರ್ಯಾಯ ಆರಂಭಿಸುವ ಮೊದಲೊಂದು ದಿನ ಅಬ್ದುಲ್ಲಾ ಸಾಹೇಬರ ಮನೆಗೆ ಭೇಟಿ ನೀಡಿದರು. ‘ನಿಂತ ನೀರಿನ ವಾಸ ಸುತ್ತಲೆಲ್ಲ’ ತುಂಬಿದ್ದ ಆಗಿನ ಉಡುಪಿಯ ಮಡಿವಂತರು. ಇದನ್ನು ಖಂಡಿಸಿ, ಸಾಕಷ್ಟು ವಾದ- ವಿವಾದಗಳು ನಡೆದವು. (ಮುರಳೀಧರ ಉಪಾಧ್ಯ, ಎಚ್.ಡುಂಡಿರಾಜ್(ಸಂ.) ೨೦೦೧). ಕಾರ್ಪೊರೇಶನ್ ಬ್ಯಾಂಕಿನ ಶತಮಾನೋತ್ಸವದ ಸಂದರ್ಭದಲ್ಲಿ, ಜನವರಿ ೧೪, ೨೦೦೬ರಂದು ಬ್ಯಾಂಕಿನ ಅಧಿಕಾರಿಗಳ ಸಂಘ, ಬ್ಯಾಂಕಿನ ಸ್ಥಾಪಕ ಅಧ್ಯಕ್ಷ ಹಾಜಿ ಅಬ್ದುಲ್ಲಾ ಸಾಹೇಬರ ಸ್ಮರಣೆಯ ಸಮಾರಂಭವೊಂದನ್ನು ಏರ್ಪಡಿಸಿತ್ತು. ಅಂದಿನ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ವಿಶ್ವೇಶತೀರ್ಥರು ಮಠದ ಇತಿಹಾಸದ ಈ ಘಟನೆಯನ್ನು ವಿವರಿಸಿದರು.

* * *