ಕಾರ್ಪೊರೇಶನ್ ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾದ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಖಾಸಿಂ ಸಾಹೇಬ್ ಬಹದ್ದುರ್ ಅವರ ಹೆಸರು ಮಾತ್ರವಲ್ಲ ವ್ಯಕ್ತಿತ್ವವೂ ದೊಡ್ಡದು. ಅವರು ಗತಿಸಿದ ೭೦ ವರ್ಷಗಳ ನಂತರವೂ ಕರಾವಳಿಯ ಹಳೆಯ ತಲೆಮಾರಿನ ಸ್ಮೃತಿಪಟಲದಲ್ಲಿ ಅಬ್ದುಲ್ಲಾ ಸಾಹೇಬರ ವ್ಯಕ್ತಿತ್ವ, ಉದಾರ ಮನೋಭಾವ ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳು ಉಳಿದುಕೊಂಡಿವೆ. ಆದರೆ ಲಿಖಿತರೂಪದಲ್ಲಿ ಅವರ ಬದುಕು ಹಾಗೂ ಸಾಧನೆಗಳ ವಿವರಗಳು ದಾಖಲಾಗಿರುವುದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ.

ಅಬ್ದುಲ್ಲಾ ಸಾಹೇಬರ ಜೀವನ ಹಾಗೂ ಸಾಧನೆಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಿ ಅವುಗಳನ್ನು ಒಂದು ಗ್ರಂಥರೂಪದಲ್ಲಿ ಪ್ರಕಟಿಸುವ ಅಗತ್ಯವನ್ನು ನಮ್ಮ ಬ್ಯಾಂಕು ಬಹಳ ಹಿಂದೆಯೇ ಗುರುತಿಸಿತ್ತು. ಸಾಹಿತಿ ದಿ. ಕು. ಶಿ. ಹರಿದಾಸ ಭಟ್, ಸಂತೋಷ ಕುಮಾರ್ ಗುಲ್ವಾಡಿ ಹಾಗೂ ಇನ್ನೂ ಅನೇಕರು ಆದಷ್ಟು ಶೀಘ್ರದಲ್ಲಿ ಈ ಕೆಲಸ ಆಗಲಿ ಎಂದು ಆಶಿಸಿದ್ದರು. ಬ್ಯಾಂಕು ಶತಮಾನೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬಹುಜನರ ಬಹುದಿನಗಳ ಮಹದಾಸೆಯೊಂದು ಈಡೇರುತ್ತಿರುವುದು ತುಂಬಾ ಸಂತೋಷದ ಸಂಗತಿ.

ಈ ಗ್ರಂಥವನ್ನು ರಚಿಸುವ ರಚಿಸುವ ಜವಾಬ್ದಾರಿಯನ್ನು ಯಾರಿಗೆ ವಹಿಸಬಹುದು ಅಂತ ನಾವು ಯೋಚಿಸಿದಾಗ ನಮಗೆ ಮೊದಲು ನೆನಪಾದವರು ಪ್ರಸಿದ್ಧ ವಿಮರ್ಶಕರೂ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕರೂ ಆದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಅವರು. ೨೦೦೧ರಲ್ಲಿ ಅವರು ಹಾಜಿ ಅಬ್ದುಲ್ಲಾ ಸಾಹೇಬರ ಬಗ್ಗೆ ವಿವಿಧ ಲೇಖಕರು ಬರೆದ ಲೇಖನಗಳನ್ನು ಒಳಗೊಂಡ ಒಂದು ಕಿರು ಹೊತ್ತಗೆಯನ್ನು ಸಂಪಾದಿಸಿ ಪ್ರಕಟಿಸಿದ್ದರು. ಅಬ್ದುಲ್ಲಾ ಸಾಹೇಬರ ಬಗ್ಗೆ ಅಪಾರ ಶ್ರಮ ವಹಿಸಿ ಸಾಕಷ್ಟು ಮಾಹಿತಿ ಸಂಗ್ರಹಿಸಿರುವ ಪ್ರೊ. ಉಪಾಧ್ಯರು ಅವರ ಜೀವನ ಚರಿತ್ರೆಯನ್ನು ದಾಖಲಿಸಲು ಅತ್ಯಂತ ಸಮರ್ಥ ವ್ಯಕ್ತಿ ಎಂಬ ಕಾರಣಕ್ಕಾಗಿ ಈ ಪುಸ್ತಕವನ್ನು ರಚಿಸುವಂತೆ ನಾವು ಅವರನ್ನು ಕೋರಿಕೊಂಡೆವು. ಶ್ರೀಯುತರು ತಮ್ಮ ಇತರ ಕೆಲಸಗಳ ಒತ್ತಡದ ನಡುವೆಯೂ ಕ್ಲಪ್ತ ಸಮಯದಲ್ಲಿ ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ನಮ್ಮ ಸ್ಥಾಪಕಾಧ್ಯಕ್ಷರ ಬಗೆಗಿನ ಈ ಪುಸ್ತಕದಲ್ಲಿ ಆ ಕಾಲದ ಕರಾವಳಿ ಜಿಲ್ಲೆಯ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯ ಚಿತ್ರಣವಿದೆ. ಅಬ್ದುಲ್ಲಾ ಸಾಹೇಬರ ವರ್ಣರಂಜಿತ ವ್ಯಕ್ತಿತ್ವದ ಜೊತೆಗೆ ಅವರೊಂದಿಗೆ ದುಡಿದ ಇತರ ಮಹನೀಯರ ಕೊಡುಗೆಯೂ ದಾಖಲಾಗಿದೆ.

ಐತಿಹಾಸಿಕವಾಗಿ ತುಂಬ ಮಹತ್ವದ ಈ ಕಿರುಹೊತ್ತಗೆ ನಮ್ಮ ಬ್ಯಾಂಕಿನ ಉದ್ಯೋಗಿಗಳಿಗೆ, ಗ್ರಾಹಕರಿಗೆ ಮಾತ್ರವಲ್ಲದೆ ಚರಿತ್ರೆಯಲ್ಲಿ ಆಸಕ್ತಿ ಹೊಂದಿದ  ಎಲ್ಲರಿಗೂ ಪ್ರಿಯವಾಗುವುದರಲ್ಲಿ ಸಂಶಯವಿಲ್ಲ.

ದಾಖಲೆಗಳ ಕೊರತೆಯಿಂದಾಗಿ ಹಾಜಿ ಅಬ್ದುಲ್ಲಾ ಅವರಂಥ ಮೇರು ವ್ಯಕ್ತಿತ್ವದ ಮಹಾಪುರುಷರ ಜೀವನ – ಸಾಧನೆಗಳ ಬಗ್ಗೆ ಇಲ್ಲಿ ಹೇಳದೆ ಉಳಿದಿರುವ ಸಂಗತಿಗಳು ಅನೇಕ ಇರಬಹುದು. ನಮ್ಮ ಸ್ಥಾಪಕಾಧ್ಯಕ್ಷರು ಬಾಳಿ ಬದುಕಿದ ರೀತಿಯನ್ನು ಬರಹದಲ್ಲಿ ದಾಖಲಿಸುವಲ್ಲಿ ಇದೊಂದು ಚಿಕ್ಕ ಪ್ರಯತ್ನ. ಇದು ಅವರ ಬಗ್ಗೆ ಇನ್ನಷ್ಟು ಸಮಗ್ರವಾದ ಪುಸ್ತಕವನ್ನು ಹೊರತರಲು ಪ್ರೇರಣೆ ನೀಡುವಂತಾಗಲಿ ಎಂಬುದೆ ನಮ್ಮ ಆಶಯ.

ಸಮಯಕ್ಕೆ ಸರಿಯಾಗಿ ಪುಸ್ತಕವನ್ನು ಸಿದ್ದಪಡಿಸಿದ ಲೇಖಕರಾದ ಪ್ರೊ. ಮುರಳೀಧರ ಉಪಾಧ್ಯರಿಗೆ ಕಾರ್ಪೊರೇಶನ್ ಬ್ಯಾಂಕಿನ ಪರವಾಗಿ ಹಾರ್ದಿಕ ಅಭಿವಂದನೆ ಹಾಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ವಿ.ಕೆ. ಚೋಪ್ರಾ
ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು
ಮಂಗಳೂರು
೨೮.೦೨.೨೦೦೬