ಹಾಡಿಗೆ ಹನ್ನೆರಡು ಕವ್ರು ಮಾತಿನಲಿ ಚದುರಂಗ
ಉಂಬಕ್ಕೂತಲ್ಲಿ ಎರಡಂಗ ಮಾಡಿದ ಪಾಪೋ
ಎರ್ಲ ಹೋದರೂ ಬೆನ್ನೆ ಬಿಡದಾದು | ಆಪಾಪೋ
ಕಾವೇರಿಗ್ಹೋಯಿ ಪರಿಹಾರ

ಹಾಡಹೇಳಿ ಹಾಡಹೇಳಿ ಹಾದಿಮೇಲ್ ಚೆಲ್ಲಿದೆ
ಆದ್ರಿ ಮಳಿ ಬಂದು ಚಿಗುರೀದು | ಅಕ್ಕಮ್ಮ
ಹಬ್ಬಕ್ಹೋತವ್ರೆ ಮುಡದ್ಹೋಪು

ಮೂರು ಜನ ನಿಸ್ತ್ರೇರು ಹಾಡ್ ಹೇಳಿ ಬತ್ತು ತೊಳುವಾಗೆ
ಜೋಡೊನಕಿ ಮ್ಯಾನೆ ಗಿಳಿರಾಮ ಕೂಕಂಡ
ಯಾವಕ್ಕನ ಪದವೇ ಕಲಿಯಲಿ

ರಾಣಿ ಹಾಡ್ಹೇಳಿಗೆ ರಾಗವ ಹೇಳಿದ್ಹಾಂಗೆ
ರಾಯರು ಕಿನ್ನರಿಗೆ ಬಡಿದ್ಹಾಂಗೆ | ಕೊಲ್ಲೂರ
ಜೋಡು ಮದ್ದಳಿಗೆ ಬಡಿದ್ಹಾಂಗೆ

ಹಾದಿ ಮೇಲ್ಹೋತವ್ರೆ ಹಾಡೆಂದೆ ಕಾಣಬೇಡಿ
ಹಾಡಲ್ಲ ನನ್ನ ಒಡಲುರಿ

ಹತ್ತು ಸಾವಿರ ಹಡ ಎತ್ತಿನ ಮೇಲ್ ಕಳಿಸಿದಿ
ಮತ್ತೂ ಸಾವಿರ ಕಲ್ತಿದಿ | ಅಕ್ಕಮ್ಮ
ಮತ್ತೂ ಸಾವಿರದ ಕಲ್ಸೂವಿ

ಹಾಡೀನ ದೆನಿ ಕೇಂಡು ಹಾದೀಲಿ ಹೋಪುವ ಬಂದು
ಹಾಡೇಳೆ ತಂಗಿ ದೆನಿ ಶುದ್ಧ | ಕೊಲ್ಲೂರ
ಜೋಡು ಮದ್ದಳೆಯ ಹೊಡೆದಂಗೆ

ಇಲ್ಲಿ ಹೇಳು ಹಾಡೇ ದಿಲ್ಲಿಗೆ ಕೇಳಿರು
ದಿಲ್ಲಿ ಪಂಡಿತರೇ ತಲೆತೂಗಿ | ನಿದ್ರಿಗೈದು
ಯಾವ ಮಾರಾಯ್ನ ಗೈಡೀಲೆ.