ನಾನು ಹಾಡಿನ ನಾಗಮ್ಮನವರನ್ನು ನೋಡಿರಲಿಲ್ಲ. ಬಹಳ ಕೇಳಿದ್ದೆ. ಅವರಿವರು ಹೇಳಿದ್ದ ವಿಷಯವನ್ನು. ಈಗ್ಗೆ ೫೫-೫೬ ವರ್ಷಗಳ ಹಿಂದಿನ ಮಾತು. ನನಗೆ ೧೩-೧೪ ವರ್ಷ ಪ್ರಾಯ. ನಾನು ಲೋವರ್ ಸೆಕೆಂಡರಿಯಲ್ಲಿ ಓದುತ್ತಿದ್ದೆ. ನಮ್ಮ ಪಠ್ಯಪುಸ್ತಕದಲ್ಲಿ ಕುಮಾರವ್ಯಾಸ ಭಾರತದಿಂದ ಆಯ್ದ ಕೆಲವು ಪದ್ಯಗಳನ್ನು ತೀರಿತಿನ್ನೇನು ಅರಿನೃಪನ ಸಂಸಾರ” ಎಂಬ ಶಿರೋನಾಮೆಯಲ್ಲಿ ಸೈಂಧವನವನನ್ನು ಕೊಲ್ಲಲ್ಲು ಅರ್ಜುನನ ಪ್ರತಿಜ್ಞೆ-ಇದನ್ನು ನಂಜುಂಡಯ್ಯನವರೆಂಬ ನಮ್ಮ ಕನ್ನಡ ಪಂಡಿತರು ಬಹು ಸೊಗಸಾಗಿ ಪಾಠ ಮಾಡುತ್ತ “ಭಾರತದ ಪದ್ಯಗಳನ್ನು ಕೇಳುವ ಆಶೆ ಇದ್ದವರು ಹಾಡಿನ ನಾಗಮ್ಮನವರ ವಾಚನವನ್ನು ಕೇಳಬೇಕು” ಎಂದು ಪ್ರಸ್ತಾಪಿಸಿದ್ದರು.

ಒಂದು ಸಂಜೆ ಮೈಸೂರಿನ ದೊಡ್ಡ ಗಡಿಯಾರದ ಹತ್ತಿರದ ‘ರಂಗಾಚಾರ್ಲು ಪುರಭವನ’ದ ಬಳಿ ಬರುತ್ತಿದ್ದಾಗ ತಂಗಾಳಿಯಲ್ಲಿ ಆಕಾಶವಾಣಿಯಿಂದ ಬಿತ್ತಿರಿಸುತ್ತಿದ್ದ ಕಾರ್ಯಕ್ರಮ ಕೇಳಿಬರುತ್ತಿತ್ತು. ಆ ಮಧುರ ಕಂಠದಿಂದ ಇಂಪಾಗಿ ಬರುತ್ತಿದ್ದ ಹಾಡು ಮತ್ತೆ ಯಾವುದು ಅಲ್ಲವೆ ಭಾರತವಾಚನವಾಗಿತ್ತು! ನನ್ನ ಕುತೂಹಲ ಕೆರಳಿತು. ಅಲ್ಲಿಯೇ ಹುಲ್ಲಿನ ಹಾಸಿನ ಮೇಲೆ ಕುಳಿತು, ಕೇಳುತ್ತ ಮೈ ಮರೆತೆ. ತಂಪಾದ ಗಾಳಿಯಲ್ಲಿ ಇಂಪಾದ ವಾಚನ.

ದ್ರೌಪದಿ ದುರ್ಯೋಧನ ರಾಜಸಭೆಯಲ್ಲಿ ದುಷ್ಟ ದುಶ್ಯಾಸನನ ಕೈಯಲ್ಲಿ ಸಿಕ್ಕಿ, ನಿಸ್ಸಾಹಯಕಳಾಗಿ ಆರ್ತನಾದ ಮಾಡುತ್ತ, ಏಕ ಹಸ್ತದಲ್ಲಿ ಅಂಬರವ ಹಿಡಿದು ಏಕ ಹಸ್ತವ ನೋಢಿ ನೆಗಹಿ

ನಾಥರಿಲ್ಲದ ಶಿಶುಗಳಿಗೆ ನೀ

ನಾಥನೈ ಗೋವಿಂದ, ಸಲಹೈ

ಯೂಥಪತಿಗಳು ಬಿಸುಟ ಕರಿಣಿಗೆ ಕೃಪೆಯ ನೀ ಮಾಡೈ |

ನಾಥರಿಲ್ಲೆನಗಿಂದು, ದೀನಾ

ನಾಥ ಬಾಂಧವ ನೀನಲೈ, ವರ

ಮೈಥಿಲೀಪತಿ ಮನ್ನಿಸೆಂದೊರಲಿದಳು ತರಳೆ ||

ಎಂದು ಮೊರೆಯಿಡೆ, ಲೋಕನಾಥ ಮುಕುಂದ ತಾನು ಅದ ಕೇಳದಂತಿರಲು, ಆಖೆ ಮನದೊಳಗರಿದು, ತನಗಿನ್ನೇಕೆ, ಮನದಭಿಮಾನವೆನುತಲಿ, ಲೋಕ ಸುಂದರಿ, ಅಗ್ನಿ ಸಂಭವೆ ದ್ರೌಪದಾದೇವಿ, ಕರವೆರಡ ಮುಗಿದೆತ್ತಿ ಒರಲಿದಳು. ಯಾವ ಕಟುಕನನ್ನಾದರೂ ಮನಕರಗಿಸುವ ಈ ಹೃದಯ ವಿದ್ರಾವಕ ದೃಶ್ಯ ಅಂದಿನ ವಾಚನದಿಂದ ನನ್ನ ಮೈನವಿರೇಳಿಸಿತು. ಕಣ್ಣಿನಲ್ಲಿ ಚಿತ್ರ ಮೂಡಿದಂತೆ ದ್ರೌಪದಿಯ ಪಾತ್ರ ಜೀವಂತವಾಗಿ ಸುಳಿದು ಹೋಯಿತು. ಆಗತಾನೆ ಕವಿ ಕುಮಾರವ್ಯಾಸನನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ನನಗೆ ಈ ಕಾವ್ಯವಾಚನ ಬಹು ಸತ್ವಯುತವಾಗಿ ಕಂಡಿತು. ಇದು ನಾಗಮ್ಮನವರ ವಾಚನದ ವೈಖರಿ. ಅಂದಿನ ರಾತ್ರಿ ನನಗೆ ನಿದ್ರೆ ಬರಲಿಲ್ಲ. ಕಿವಿಯಲ್ಲಿ ವಾಚನದ ಗುಂಗು, ಕಣ್ಣಿನ ಮುಂದೆ ದ್ರೌಪದಿಯ ಚಿತ್ರ, ಆಖೆಯ ಆರ್ತನಾದ! ಅಷ್ಟು ಪರಿಣಾಮಕಾರಿಯಾಗಿತ್ತು ಕಾವ್ಯವಾಚನ.

ಇವರ ಹಾಡುಗಳನ್ನು  ೧೯೧೦-೧೧ರ ಅವಧಿಯಲ್ಲಿ H.M.V. ಕಂಪನಿಯವರು ಧ್ವನಿ ಮುದ್ರಿಸಿಕೊಂಡರು. ಕುಮಾರವ್ಯಾಸ ಭಾರತದ ‘ದ್ರೌಪದಿ ಅಕ್ಷಯ ವಸ್ತ್ರ ಪ್ರಧಾನ’ದ ಧ್ವನಿ ಮುದ್ರಿಕೆಯಲ್ಲಿ ಅವರ ವಾಚನದ ಕೊನೆಯಲ್ಲಿ ‘ಹದಿನಾಲ್ಕು ವರ್ಷದ ಬಾಲೆ ನಾಗಮ್ಮ’ ಎಂದು ಘೋಷಿಸಿಕೊಂಡಿದ್ದಾರೆ. ನಾಗಮ್ಮ ಹಾಡಿನ ನಾಗಮ್ಮನಾಗಿ ವಿಜೃಂಭಿಸಿದ್ದು ಒಂದು ಸೋಜಿಗದ ಸಂಗತಿ. ಅವರನ್ನು ಕುರಿತು ಸರಿಯಾದ ಐತಿಹಾಸಿಕ ದಾಖಲೆಗಳಿಲ್ಲದಿರುವುದು ಬಹು ವಿಶಾದದ ಸಂಗತಿ. ಕೇವಲ ಹೇಳಿದ್ದು, ಕೇಳಿದ್ದು, ಕೆಲ ಹಿರಿಯರು ಕಂಡಿದ್ದನ್ನು ಅವಲಂಬಿಸಿ ಅವರ ಜೀವನವನ್ನು ಚಿತ್ರಿಸಿಕೊಳ್ಳಬೇಕಾಗಿದೆ.

ಇವರ ಹಿರಿಯರಲ್ಲಿ ಪುಟ್ಟಾಜೋಯಿಸ್‌ ಎಂಬುವರು ಪ್ರಮುಖರು. ಇವರು ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ವಿದ್ಯಾಖಾತೆಯ ಸಚಿವರಾಗಿದ್ದರು. ಪುಟ್ಟಾಜೋಯಿಸರ ಮನೆ ಮೊದಲು ಕೋಟೆಯ ಒಳಗೆ ತ್ರಿನೇಶ್ವರನ ದೇವಸ್ಥಾನದ ಪಕ್ಕದಲ್ಲಿ ಇದ್ದದ್ದು-ನಂತರ ಹೊಸ ಅರಮನೆ ಕಟ್ಟುವ ಸಂಧರ್ಭದಲ್ಲಿ ಶಿವರಾಂಪೇಟೆಯ ತೊಟ್ಟಿ ಮನಗೆಗೆ ಸ್ಥಳಾಂತರವಾಯಿತು. ಇವರ ಬಂಧುಗಳು ಹೇಮಚಂದ್ರ ಎಂಬುವರು ಈಗಲೂ ಮೈಸೂರಿನಲ್ಲಿದ್ದಾರೆ. ಅವರ ತಂದೆಯವರ ಮುತ್ತಾತನೆ ಪುಟ್ಟಾ ಜೋಯಿಸರು. ಹೇಮಚಂದ್ರರ ತಂದೆ ಎಂ.ವಿ. ಸೂರ್ಯನಾರಾಯಣ ಜೋಯಿಸ್‌ (ಎಂ.ವಿ. ನಾರಾಯಣರಾವ್‌) ಅವರನ್ನು LLB ಓದಿಸಿದ್ದು,ಲ ಅಡ್ವೊಕೇಟ್‌ ಮಾಡಿದ್ದು. ಈ ಕೀರ್ತಿ ಶಂಕರಪ್ಪನವರಿಗೆ ಸೇರುತ್ತದೆ. ಅವರು ಸೂರ್ಯನಾರಾಯಣ ಜೋಯಿಸರ ಸೋದರ ಮಾವ. ಅವರೇ ನಾಗಮ್ಮನವರ ತಂದೆ. ಇವರು ಅಡ್ವೋಕೇಟ್‌ ರಾಮಣ್ಣನವರಲ್ಲಿ ಗುಮಾಸ್ತರಾಗಿಕ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಶಂಕರಪ್ಪನವರು ಅರಮನೆಯ ಸಂಪರ್ಕವನ್ನು ಹೊಂದಿದ್ದು ಮಗಳ ಪ್ರತಿಭೆಯನ್ನು ಗುರುತಿಸಿ ಅಲ್ಲಿಯ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು. ಹೀಗಾಗಿ ನಾಗಮ್ಮನವರ ಕಾರ್ಯಕ್ಷೇತ್ರ ಮೈಸೂರು ನಗರವಾಯಿತು. ಹೇಮಚಂದ್ರರ ಸೋದರತ್ತೆ ತಿಮ್ಮಮ್ಮ ನಾಗಮ್ಮನವರಿಗೆ ಬಹಳ ಆತ್ಮೀಯರು. ಅವರ ಕಲಾ ಜೀವನದ ಕಷ್ಟ ಸುಖವನ್ನು ಹಂಚಿಕೊಂಡವರು. ಜೊತೆಯಾಗಿ ಹಾಡುತ್ತಿದ್ದರು.

ನಾಗಮ್ಮನವರು ಮೈಸೂರಿನ ಶಿವರಾಮಪೇಟೆಯಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ೧೪.೧೦.೧೮೯೬ರಂದು ಜನ್ಮ ತಾಳಿದರು. ತಂದೆ ಶಂಕರಪ್ಪ, ತಾಯಿ ವೆಂಕಟಲಕ್ಷ್ಮಮ್ಮನವರ ಮುದ್ದಿನ ಮಗಳಾಗಿ ಬೆಳೆದರು. ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ಅಜ್ಜಿ ಮುತ್ತಮ್ಮನವರ ಆರೈಕೆಯಲ್ಲಿ ಬೆಳೆದರು. ಅವರ ತಂದೆ, ಶಂಕರಪ್ಪನವರನ್ನು ತೊಟ್ಟಿಯ ಮನೆಯವರಾದ್ದರಿಂದ ‘ತೊಟ್ಟಿಯಪ್ಪ’ ಎಂದೂ, ನಾಗಮ್ಮನವರನ್ನು ‘ನಾಗು’ ಎಂದು ಪ್ರೀತಿಯಿಂದ ಕರೆಯುತ್ತಿರು. ಅವರ ಮಲತಾಯಿ ವೆಂಕಮ್ಮ ಸಹ ನಾಗಮ್ಮನನ್ನು ಬಹು ಅಕ್ಕರೆಯಿಂದ ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದರು.

ಚಿಕ್ಕವಯಸ್ಸಿನಲ್ಲೇ ಆಕೆಗೆ ಒಳ್ಳೆ ಶಾರೀರ ಸಂಪತ್ತು. ಹಾಡುಗಳನ್ನು ಹೇಳುವುದರಲ್ಲಿ ಕೇಳುವುದರಲ್ಲಿ ಆಸಕ್ತಿ ಬೆಳೆಯಿತು. ಆಗಿನ ಕಾಲಕ್ಕೆ ತಕ್ಕಷ್ಟು ವಿದ್ಯಾಭ್ಯಾಸವಾಯಿತು. ಒಳ್ಳೆಯ ನೆನಪಿನ ಶಕ್ತಿಯಿಂದ ಕೇಳಿದ್ದನ್ನು ಹೇಳುವ, ಅನುಕರಿಸುವ ಶಕ್ತಿಯನ್ನು ಬೆಳೆಸಿಕೊಂಡರು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಸ್ವಭಾವದಲ್ಲಿ ಹಟದ ಪ್ರವೃತ್ತಿಯಿಂದ ಏನನ್ನಾದರೂ ಕಲಿಯುವ ಛಲ, ಸಾಧಿಸಿ ಸಿದ್ಧಿಸುವ ಬಯಕೆ ಹೆಚ್ಚಾಯಿತು. ಇದರಿಂದ ಅವರ ಕಲಾಜೀವನಕ್ಕೆ ಅನುಕೂಲ ವಾತಾವರಣ ಉಂಟಾಯಿತು.

ಇವರ ಮನೆಯ ಹತ್ತಿರದಲ್ಲೇ ಶಿವರಾಮಪೇಟೆಯ ಅಂದಿನ ಪ್ರಖ್ಯಾತ ರತ್ನಾವಳಿ ಥಿಯೇಟರ್ ಇದ್ದು ಹೆಸರಾಂತ ನಟ, ನಟಿಯರು ಮತ್ತು ಸಂಗೀತಗಾರರನ್ನು ನೋಡುವ, ಅವರ ಹಾಡುಗಳನ್ನು ಕೇಳುವ ಸುಯೋಗ ದೊರಕಿತು. ತುಂಬ ವಿನಯಶೀಲೆಯಾದ ಈಕೆ ಚಿಕ್ಕವಯಸ್ಸಿನಲ್ಲೇ ತನ್ನ ತುಂಬುಕಂಠದಿಂದ ಸುಶ್ರಾವ್ಯವಾಗಿ ಹಾಡಿ ಜನಮನವನ್ನು ರಂಜಿಸುವಮತಾಗಿ ಕಲಾಭಿಮಾನಿಗಳಿಂದ ಆಕರ್ಷಿತಳಾದಳು.

ಇವರ ಕುಟುಂಬಕ್ಕೆ ವಂಶಪಾರಂಪರ್ಯವಾಗಿ ಮೈಸೂರು ರಜಮನೆತನದ ಮರ್ಯಾದೆಯಿದ್ದು ಅರಮನೆಯಲ್ಲಿ ಹಬ್ಬ, ಹರಿದಿನ, ಉತ್ಸವ, ಸಭೆ, ಸಮಾರಂಭಗಳಿಗೆ ಹೋಗುವ ಪರಿಪಾಟವಿತ್ತು. ಅರಮನೆಯ ಆಮಂತ್ರಣಗಳಿಗೆ ಅಜ್ಜಿ ಮುತ್ತಮ್ಮನವರ ಜೊತೆ ಬಾಲೆ ನಾಗಮ್ಮನೂ ಹೋಗಿ ತನ್ನ ವಿನಯಶೀಲ ನಡೆನುಡಿಗಳಿಂದ, ಸುಶ್ರಾವ್ಯವಾಗಿ ಹಾಡುಗಳನ್ನೂ, ಸ್ತೋತ್ರ ಶ್ಲೋಕಗಳನ್ನೂ ಹಾಡುವುದರ ಮೂಲಕ ರಾಣೀವಾಸದ ಹಿರಿಯರಿಗೆ ಬಲು ಅಚ್ಚುಮೆಚ್ಚಿನವಳಾದಳು. ಈ ಸಂದರ್ಭದಲ್ಲೇ ಆಕೆಗೆ ಆಸ್ಥಾನದ ಹಿರಿಯ ವಿದ್ವಾಂಸರ ಪರಿಚಯ ಮತ್ತು ಮಾರ್ಗದರ್ಶನದ ಸದವಕಾಶ ಸಿಕ್ಕಿತು.

ಇವರ ಬಹುವಿಖ್ಯಾತ ವಿದ್ವಾಂಸರಾಗಿದ್ದ ಆಸ್ಥಾನ ವಿದ್ವಾನ್‌ ಕರಿಬಸವಪ್ಪ ಶಾಸ್ತ್ರಿಗಳು ಮತ್ತು ಅಭಿನವ ಕಾಳಿದಾಸ ಖ್ಯಾತಿಯ ಆಸ್ಥಾನ ಕವಿ ಬಸವಪ್ಪ ಶಾಸ್ತ್ರಿಗಳ ಗಮನವನ್ನು ಸೆಳೆದರು. ಅಭಿಜಾತ ಕವಿಗಳಾದ ಬಸವಪ್ಪ ಶಾಸ್ತ್ರಿಗಳು ಆಗಿನ ಕಾಲದ ಶ್ರೇಷ್ಠಮಟ್ಟದ ಗಮಕ ವಿದ್ವಾಂಸರೆಂದು ಪರಿಗಣಿಸಲ್ಪಟ್ಟಿದ್ದರು. ಅವರ ವಾಚನವನ್ನು ಕೇಳಿದ ಹಸುಕರುಗಳು ಕೂಡ ಅದರಲ್ಲಿ ತಲ್ಲೀನಗೊಂಡು ಮೈಮನವನ್ನೇ ಮರೆಯುತ್ತಿದ್ದುವೆಂದು ಜನರು ಆಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಅವರ ಕಾವ್ಯವಾಚನ ಒಂದು ಪವಾಡದಂತೆ ಜನಜನಿತವಾಗಿತ್ತು. ಅವರು ಚಾಮರಾಜ ಒಡೆಯರಿಗೆ ವಿದ್ಯಾಗುರುಗಳಾಗಿದ್ದವರು.

ಅವರ ಕಾವ್ಯವಾಚನಕ್ಕೆ ರಾಜ ಪರಿವಾರದವರು ಮತ್ತು ರಾಣೀವಾಸದವರು ಜಾತಕ ಪಕ್ಷಿಗಳಂತೆ ಕಾದಿರುತ್ತಿದ್ದರು. ಅವರ ಕುಮಾರವ್ಯಾಸ ಭಾರತದ ‘ಕೀಚಕವಧ’ ಪ್ರಸಂಗ ಬಹು ಉನ್ನತ ಮಟ್ಟದ ವಾಚನವಗಿರುತ್ತಿತ್ತು. ಅದನ್ನು ಅರಮನೆಯಲ್ಲಿ ಕೇಳುವ ಅವಕಾಶ ಬಾಲೆ ನಾಗಮ್ಮನದಾಯಿತು.

ಈ ಪ್ರಸಂಗದಲ್ಲಿ ವಿರಾಟ ನಗರದಲ್ಲಿ ಅಜ್ಞಾತವಾಸದಲ್ಲಿದ್ದ ಪಾಂಡವರರಸಿ ದ್ರೌಪದಿಯ ದುಃಸ್ಥಿತಿ ಕಣ್ಣಿಗೆ ಕಟ್ಟಿದಂತೆ ಬಸವಪ್ಪ ಶಾಸ್ತ್ರಿಗಳ ವಾಚನದಿಂದ ವೇದ್ಯವಾಯಿತು. ಅಂದು ಸಭೆಯಲ್ಲಿದ್ದವರೆಲ್ಲಾ ಕಣ್ಣೀರುಗರೆದರು. ಬಾಲೆನಾಗಮ್ಮನಿಗೂ ಅನಿರ್ವಚನೀಯವಾದ ಅಗೋಚರ ಅನುಭವವಾಗಿ ತಾನೂ ಕಾವ್ಯವಚನ ಮಾಡಬೇಕೆಂಬ ಪ್ರಜ್ಞೆ ಮೂಡಿತು. ಅದೇ ಗಮಕಕಲೆಗೆ, ಬಸವಪ್ಪಶಾಸ್ತ್ರಿಗಳಲ್ಲಿ ಶಿಷ್ಯತ್ವಕ್ಕೆ, ನಾಗಮ್ಮನವರಿಗೆ ನಾಂದಿಯ ಆಯಿತು. ಬಹು ಅಲ್ಪ ಕಾಲದಲ್ಲೇ ಗುರುವಿಗೆ ತಕ್ಕ ಶಿಷ್ಯರಾದರು. ಬಸಪ್ಪ ಶಾಸ್ತ್ರಿಗಳಿಗೆ ಶಬ್ದ ವ್ಯುತ್ಪತ್ತಿ, ಕನ್ನಡದಲ್ಲಿ ಬಹು ಸಹಜವಾಗಿ ಅವರ ಪದ ಸಂಪತ್ತಿ ವಿಫುಲವಾಗಿತ್ತು. ಹುಟ್ಟು ಕವಿಗಳಾದ ಬಸವಪ್ಪ ಶಸ್ತ್ರಿಗಳು ತಾವು ಬರೆದ ಕವಿತೆಗಳನ್ನು ತಮ್ಮ ಮಾವನಾದ ಕರಿಬಸವಪ್ಪಶಾಸ್ತ್ರಿಗಳಿಗೆ ತೋರಿಸುತ್ತಿದ್ದರು. ಅವರು ಯಾವುದಾದರೂ ಪದ ಪ್ರಯೋಗ ಸರಿಯಾಗಿ ತೋರದಿದ್ದರೆ ‘ಏನೋ, ಬಸವಪ್ಪ? ಈ ಪದ ಇಲ್ಲಿ ಸರಿಯಾಗಿ ತೋರೋಲ್ವೋ, ಬದಲಾಯಿಸು’ ಎಂದರೆ ಬಸವಪ್ಪ ಶಾಸ್ತ್ರಿಗಳು “ಈ ಪದ ಸರಿಯೈತ, ಈ ಪದ ಸರಿಯೈತ” ಎಂದು ಪಂಖಾನುಪುಂಖವಾಗಿ ಬಾಣಗಳ ಮಳೆಗರೆದಂತೆ ನೂರಾರು ಪದ ಪ್ರಯೋಗಗಳನ್ನು ಕ್ಷಣದಲ್ಲಿ ಮಾಡಿತೋರಿಸುತ್ತಿದ್ದರಂತೆ ಈಗ ಕರಿಬಸವಪ್ಪ ಶಾಸ್ತ್ರಿಗಳ ಸರದಿ. ಅಲಂಕಾರ, ಛಂದಸ್ಸು, ವ್ಯಾಕರಣ ಇತ್ಯಾದಿ ಶಾಸ್ತ್ರ ಪರಿಣತರಾದ ಕರಿಬಸವಪ್ಪನವರು ಧ್ವನಿ ಛಂದಸ್ಸಿಗೆ ಹೊಂದಿಕೊಳ್ಳುವ ಸರಿಯೆನಿಸುವ ಪದವನ್ನು ಆಯ್ಕೆ ಮಾಡಬೇಕು. ಇಂತಹವರ ಶಿಷ್ಯೆ, ನಾಗಮ್ಮನವರೆಂಧರೆ ಕೇಳಬೇಕೆ? ಆಕೆಯೂ ಆಶುಕವಿತ್ವ ಪಟು!

ಮದುವೆ, ಮುಂಜಿ, ನಾಮಕರಣ, ಹುಟ್ಟಿದ ಹಬ್ಬ, ಹೆಣ್ಣು ಮಕ್ಕಳು ಮೈ ನೆರೆದಾಗ, ಹಬ್ಬ ಹರಿದಿನಗಳು ಎಲ್ಲಾ ಸಂದರ್ಭದಲ್ಲೂ ಸಮಯ ಸನ್ನಿವೇಶಕ್ಕೆ ತಕ್ಕಂತೆ ಕವಿತೆಗಳನ್ನು ಸೃಷ್ಟಿ ಮಾಡುವ ಜಾಣ್ಮೆಯನ್ನೂ ನಾಗಮ್ಮನವರು  ಮೈಗೂಡಿಸಿಕೊಂಡಿದ್ದರು. ಸಂಪ್ರದಾಯದ ಹಾಡುಗಳು, ದೇವರನಾಮಗಳು, ಸ್ತೋತ್ರ ಶ್ಲೋಕಗಳು, ಸ್ವತಃ ಕವಯಿತ್ರಿಯಾಗಿ ಕೀರ್ತನೆಗಳ ಮಟ್ಟದಲ್ಲಿ ಸುಮರು ನೂರಾರು ಹಾಡುಗಳನ್ನು ರಚಿಸಿ ಶಾಸ್ತ್ರೀಯವಾಗಿ ರಾಗ ತಾಳಗಳನ್ನು  ಅಳವಡಿಸಿ ಹಾಡುವುದೇ ಅಲ್ಲದೇ, ಮಹಿಳಾ ಗಮಕಿಯೂ ಆಗಿ ಕಾವ್ಯವಾಚನ ಕಲೆಯನ್ನೂ ತಮ್ಮ ಬತ್ತಳಿಕೆಯಲ್ಲಿ ಸೇರಿಸಿಕೊಂಡರು. ಅರಮನೆಯಲ್ಲಿದ್ದುಇ ಸಂಗೀತವನ್ನು ಕೇಳುವ ಸದವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡರು.

ಕ್ರಮಬದ್ಧವಾದ ತಮ್ಮ ಕೀರ್ತನೆಮಟ್ಟದ ಹಾಡುಗಳ ರಚನೆಗೆ ಅಂದಿನ ಆಸ್ಥಾನ ವಿದ್ವಾಂಸರಾಗಿದ್ದ ಚಿಕ್ಕರಾಮರಾಯರ ನಬೆರವನ್ನು ಪಡೆದು ಹಾಡುತ್ತಿದ್ದರು. ಹೀಗೆ ಶಾಸ್ತ್ರೀಯ ಸಂಗೀತದ ಅನುಭವ ಅವರ ಹಾಡುವಿಕೆಗೆ ಒಂದು ಮೆರಗನ್ನು ಕೊಟ್ಟಿತು.

ಅವರ ಕಾವ್ಯವಾಚನದಲ್ಲಿ ಜನತೆಯನ್ನು  ರಂಜಿಸಿದ್ದು ಜೈಮಿನಿ ಭಾರತದಲ್ಲಿ ‘ಬಭ್ರುವಾಹನ ಕಾಳಗ’, ಕುಮಾರವ್ಯಾಸ ಭಾರತದಲ್ಲಿ ‘ದ್ರೌಪದೀ ಮಾನ ಸಂರಕ್ಷಣೆ’. ಈ ಭಾಗಗಳನ್ನು ಬಹು ಸುಶ್ರಾವ್ಯವಾಗಿ ವಾಚನ ಮಾಡುತ್ತಿದ್ದರು. ಕಾವ್ಯವಾಚನವಲ್ಲದೆ, ಸ್ವತಃ ವ್ಯಾಖ್ಯಾನ ಮಾಡುವುದನ್ನೂ ರೂಢಿಸಿಕೊಂಡರು. ಮೈಸೂರು ನಗರದ ಮೂಲೆ ಮೂಲೆಗಳಲ್ಲಿ, ವರುಣ, ವಾಜಮಂಗಲ, ತಾಂಡವಪುರ ಮತ್ತು ಬೋಗಾದಿ ಗ್ರಾಮಗಳಲ್ಲಿಯೂ ಅವರ ಕಾವ್ಯವಾಚನಗಳು ನಡೆಯುತ್ತಿದ್ದವು.

ಸುಮಾರು ಎಂಟು ವರ್ಷದ ಹುಡುಗಿಯಾಗಿದ್ದಾಗಲೇ ಸಂಬಂಧಿಕ ಹುಡುಗನೊಡನೆ ವಿವಾಹವಾಯಿತು. ನಾಗಮ್ಮನವರು ವಿವಾಹವಾಗಿ ಅವರ ದಾಂಪತ್ಯ ಜೀವನ ಸರಿಸುಮಾರು ಚೆನ್ನಾಗಿಯೇ ನಡೆಯಿತು. ಅವರ ಪತಿ, ನಂಜುಂಡಯ್ಯನವರು ಸರಸಿ, ಹಾಸ್ಯ  ಪ್ರಿಯರು ಮತ್ತು ಒಳ್ಳೆಯ ರಸಿಕರು. ಸ್ವತಃ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದರು. ಮೂಕಿ ಹರಿಶ್ಚಂದ್ರ ಚಲನಚಿತ್ರದಲ್ಲಿ ನಕ್ಷತ್ರಕನ ಪಾತ್ರಧಾರಿಗಳಾಗಿದ್ದರು. ಸರ್ಕಾರಿ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಕಲಾವಿದರಾದ್ದರಿಂದ ನಾಗಮ್ಮನವರ ಜೀವನಕ್ಕೆ ಒತ್ತುಕೊಟ್ಟ ಹಾಗಾಯಿತು. ನಂಜುಂಡಯ್ಯನವರು ಆಗ ಯುವರಾಜರಾಗಿದ್ದ ನರಸಿಂಹರಾಜ ಒಡಯರ ಸಮೀಪವರ್ತಿಗಳಾಗಿದ್ದು ತನ್ನ ಪತ್ನಿಗೆ ಪ್ರೋತ್ಸಾಹ ಕೊಟ್ಟರು. ನಾಗಮ್ಮನವರ ‘ಬಾಲಿಕಾ ಗೀತ ಕುಸುಮಾಂಜಲಿ’ ಪ್ರಕಟಣೆಗೆ ಬೆಂಬಲಿಸಿದರು. ಈ ದಂಪತಿಗಳಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು. ಇವರ ಮಗ, ಎ.ನಾರಾಯಣರಾವ್‌ ಆಕಾಶವಾಣಿ ಕಲಾವಿದರಾಗಿ ಕಾವ್ಯವಾಚನ ಮಾಡುತ್ತಿದ್ದರು. ಇವರು ಸರ್ಕಾರಿ ಮುದ್ರಣಾಲಯದಲ್ಲಿ ನೌಕರಿಯಲ್ಲಿದ್ದರು. ಇವರ ಇಬ್ಬರು ಹೆಣ್ಣು ಮಕ್ಕಳು, ಕಾವೇರಿ ಮತ್ತು ವಿಶಾಲಕ್ಷಮ್ಮ ಸಹ ಹಾಡುತ್ತಿದ್ದರು.

ನಾಗಮ್ಮನವರ ಹಾಡುಗಾರಿಕೆ ಅರಮನೆಯಲ್ಲೆಲ್ಲಾ ಖ್ಯಾತವಾಗಿ ಇವರನ್ನು ಅರಮನೆಯ  ಕಟ್ಟಳೆಯ ಮುತ್ತೈದೆಯನ್ನಾಗಿ ನೇಮಿಸಿಕೊಂಡಿದ್ದರು. ಅಲ್ಲಿಯ ಹಬ್ಬ ಹುಣ್ಣಿಮೆಗಳು ಉತ್ಸವ ಸಮಾರಂಭಗಳು,  ಶುಭಕಾರ್ಯಗಳಲ್ಲಿ ಬೆಳಗಿನ ಎಣ್ಣೆಶಾಸ್ತ್ರದಿಂದ ಹಿಡಿದು ಆರತಿ ಅಕ್ಷತೆಗಳವರೆಗಿನ ಎಲ್ಲಾ ಕಟ್ಟಳೆಯ’ ಸಂಪ್ರದಾಯದ ಹಾಡುಗಳನ್ನು ಹಾಡುವುದು ಮತ್ತು ಆರತಿ ಮಾಡುವುದು ಇವರ ಕಾರ್ಯವಾಗಿತ್ತು. ಸಂದರ್ಭಕ್ಕೆ ತಕ್ಕಂತೆ ಕವಿತೆ ರಚಿಸುತ್ತಿದ್ದ ನಾಗಮ್ಮನವರು ಜಯಚಾಮರಾಜ ಒಡೆಯರು ಹುಟ್ಟಿದಾಕ್ಷಣ ಹಾಡು ರಚಿಸಿ ಹಾಡಿ, ಅಲ್ಲಿದ್ದ ರಾಮಜನೆತನದವರನ್ನೆಲ್ಲಾ ಸಂತೋಷಗೊಳಿಸಿದರು.

ಇವರ ಕಂಠಶ್ರೀಗೆ ಮಾರುಹೋಗಿದ್ದ, ನಾಲ್ವಡಿ ಕೃಷ್ಣರಾಜ ಒಡೆಯರ ತಾಯಿ, ಮಹಾ ಮಾತೃಶ್ರೀ ವಾಣೀ ವಿಲಾಸ ಸನ್ನಿಧಾನಕ್ಕೆ ಬಹು ಅಚ್ಚುಮೆಚ್ಚಿನವರಾಗಿ, ಅವರ ಯಾತ್ರಾ ಪ್ರವಾಸದಲ್ಲಿ ಇವರನ್ನು  ತಮ್ಮ ಪರಿವಾರದೊಡನೆ ಕರೆದೊಯ್ಯುತ್ತಿದ್ದರು. ಒಡೆಯರ ಪತ್ನಿ ಪ್ರತಾಪ ಕುಮಾರಿಯವರೂ ಇವರಿಂದ ಆಕರ್ಷಿತರಾಗಿದ್ದರು. ಹೀಗಾಗಿ ಸನ್ನಿಧಾನದವರ ಸಮಕ್ಷಮದಲ್ಲಿ ಈಕೆಯಿಂದ ಗದುಗಿನ ಭಾರತ, ತೊರವೆ ರಾಮಾಯಣ ಮುಂತಾದ ಕನ್ನಡ ಕಾವ್ಯಗಳ ವಾಚನ ಪಾಂಗಿತವಾಗಿ ನಡೆಯುತ್ತಿತ್ತು.

ಮೈಸೂರಿನ ಪ್ರಸಿದ್ಧ ಸಮಾಜ ಸೇವಕಿಯರಾದ ತಿಮ್ಮಮ್ಮ ಮತ್ತು ಕೆ.ಡಿ. ರುಕ್ಮಿಣಿಯಮ್ಮನವರು ಸ್ಥಾಪಿಸಿದ್ದ ಲಕ್ಷ್ಮೀಪುರಂ ಮಹಿಳಾ ಸಮಾಜದಲ್ಲೂ ನಾಗಮ್ಮನವರ ಕಾವ್ಯವಾಚನ ನಿರಂತರ ನಡೆಯುತ್ತಿತ್ತು. ಅವರು ಮಹಿಳಾ ತರಬೇತಿ ಕಾಲೇಜಿನಲ್ಲಿ ಹಾಡಿನ ಉಪಾಧ್ಯಾಯಿನಿಯೂ ಮತ್ತು ಗಮಕ ಶಿಕ್ಷಕಿಯೂ ಆಗಿದ್ದರು. ಇವರು ಮಹಿಳಾ ಕಾಲೇಜಿನಕ ವಿದ್ಯಾರ್ಥಿನಿ ಮತ್ತು ಶಿಕ್ಷಕಿಯರಿಗಲ್ಲದೆ ಲಕ್ಷ್ಮೀಪುರಂ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರಿಗೂ ಕಾವ್ಯವಾಚನವನ್ನು  ಕಲಿಸುತ್ತಿದ್ದರು. ಸಾವಿತ್ರೀ ಚರಿತ್ರೆ, ನಳದಮಯಂತಿ ಉಪಾಖ್ಯಾನಗಳ ಪಠ್ಯವನ್ನು ಗಮಕ ವಿಧಾನದಲ್ಲಿ ವಾಚನಮಾಡುವುದನ್ನು  ಮಕ್ಕಳಿಗೆ ಕಲಿಸುತ್ತಿದ್ದರು. ಬಹಳ ಚಿಕ್ಕ ವಯಸ್ಸಿನಲ್ಲೇ ಸುಮಾಋಉ ೧೯೧೦-೧೧ರಲ್ಲೇ ಆಕೆಯ ಸಂಪ್ರದಾಯದ ಹಾಡುಗಳು, ಭಾರತದ ರಸ ಘಟ್ಟಗಳು ಧ್ವನಿಮುದ್ರಿಕೆಗೊಂಡು ಅವರ ಕೀರ್ತಿ ಕರ್ನಾಟಕದಲ್ಲೆಲ್ಲಾ ಹರಡಿತ್ತು. ಮಹಿಳಾ ಗಮಕಿ ಎಂದು ಅಂದಿನ ಸಮಾಜದಲ್ಲಿ ಪರಿಗಣಿಸಲ್ಪಟ್ಟಿದ್ದರು. ಕಾವ್ಯವಾಚನವಲ್ಲದೆ ಆಧುನಿಕ ಭಾವಗೀತೆಗಳನ್ನೂ ಭಾವಪೂರಿತವಾಗಿ ಹಾಡಿ ಶ್ರೋತೃಗಳ ಮನಸೂರೆಗೊಂಡಿದ್ದರು.

ಮೈಸೂರು ಆಕಾಶವಾಣಿಯಲ್ಲಿ, ಭಾರತಿ ಸ್ತ್ರೀ ಸಮಾಜದಲ್ಲಿ ಪ್ರತಿ ಶನಿವಾರ ಕುಮಾರವ್ಯಾಸ ಭಾರತ, ಜೈಮಿನಿ ಭಾರತ ವಾಚನ-ವ್ಯಾಖ್ಯಾನ, ರಾಮೋತ್ಸವದ ಸಂದರ್ಭದಲ್ಲಿ ಕಾರ್ಯಕ್ರಮ, ಆಲಮ್ಮನವರ ಛತ್ರದಲ್ಲೂ ಕಾರ್ಯಕ್ರಮ ಕೊಡುತ್ತಿದ್ದರು. ವೃದ್ಧಾಪ್ಯದಲ್ಲಿ ಶೃಂಗೇರಿಯ ಮಠಾಧಿಕಾರಿ ಶ್ರೀಕಂಠಶಾಸ್ತ್ರಿಗಳ ಮನೆಗೆ ಹೋಗಿ ತಂಗಿದ್ದು ಅವರ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು.

ನಾಗಮ್ಮನವರ ಶಾಂತ ಜೀವನದಲ್ಲಿ ಅಡೆ ತಡೆಗಳು ಶುರುವಾದವು. ಅವರ ಒಬ್ಬ ಮಗ ಅನಂತು, ಬಹು ಮುದ್ದಾಗಿದ್ದವನು. ಇನ್ನೊಬ್ಬ ಮಗ ಚಂದ್ರಶೇಖರ ೧೬ ವರ್ಷ ಬೆಳೆದು ಸತ್ತಾಗ ನಾಗಮ್ಮನವರ ಮನಸ್ಸಿಗೆ ತುಂಬಾ ಆಘಾತವಾಯಿತು. ಪ್ರೀತಿಯಿಂದ ತನ್ನನ್ನು ಪ್ರೋತ್ಸಾಹಿಸಿ ಕೀರ್ತಿ ಕಳಶಕ್ಕೇರಿಸಿದ್ದ ಪತಿಯು ೧೯೫೩ರಲ್ಲಿ ನಿಧನರಾದಾಗ ನಾಗಮ್ಮನವರ ಜೀವನದಲ್ಲಿ ಬರಸಿಡಿಲೆರಗಿದಂತಾಗಿ ಮತ್ತೆ ಚೇತರಿಸಿಕೊಳ್ಳಲಾಗಲಿಲ್ಲ. ಬಾಲ್ಯದಿಂದ ಜನಮನಗೆದ್ದು ಅರಮನೆ, ಗುರುಮನೆ, ಸಭೆ, ಸಮಾರಂಭಗಳಲ್ಲಿ ವಿಜೃಂಭಿಸಿದ್ದ ಹಾಡಿನ ನಾಗಮ್ಮನಿಗೆ ಈ ವೈಧವ್ಯ ಪ್ರಾಪ್ತಿ ಶಾಪವಾಗಿ ಪರಿಣಮಿಸಿತು. ಕಟ್ಟಾ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿದ್ದ ಮಹಿಳೆ ನಾಗಮ್ಮ ಈ ಪೆಟ್ಟಿನಿಂದ ಎಚ್ಚೆತ್ತುಕೊಳ್ಳಲೇ ಇಲ್ಲ. ನೀಲಗಗನದಲ್ಲಿ ಸ್ವಚ್ಛಂದ ಹಾಡುತ್ತಾ ಹಾರುತ್ತಿದ್ದ ಹಕ್ಕಿಗೆ ಬಾಣ ತಗುಲಿದಂತಾಯಿತು ಅವರ ಮನಸ್ಥಿತಿ.

ನಾಗಮ್ಮನವರು ಅರಮನೆಗೆ ಹೋಗಲಾಗದಿದ್ದಾಗ ಅವರ ಕರ್ತವ್ಯದ ಹೊಣೆಯನ್ನು ಅವರ ಸೊಸೆ, ಶ್ರೀಮತಿ ಲಕ್ಷ್ಮೀದೇವಮ್ಮನವರು ತನ್ನ ಮಕ್ಕಳ ನೆರವಿನಿಂಧ ನಿರ್ವಹಸಿದರು. ಬಾಲ್ಯದಲ್ಲಿ ಅವರಲ್ಲಿದ್ದ ಹಟದ ಸ್ವಭಾವ ಕಲಾಜೀವನಕ್ಕೆ ಪೂರಕವಾಗಿದ್ದದ್ದು ಈಗ ಬದಲಾದ ಸನ್ನಿವೇಶದಲ್ಲಿ ಅವರ ವೃದ್ಧಾಪ್ಯದಲ್ಲಿ ಮಾರಕವಾಗಿ ಬಿರುಗಾಳಿಗೆ ಸಿಕ್ಕಿದ ಗಾಳಿಪಟವಾಯಿತು ಅವರ ಜೀವನ. ಒಂದು ರೀತಿಯಲ್ಲಿ ಅವರ ಸಾಮಾಜಿಕ ಚಟುವಟಿಕೆಗಳು ಸ್ಥಗಿತಗೊಂಡಿತು. ಇನ್ನೂ ಹಾಡಬೇಕೆಂಬ ಹುಮ್ಮಸ್ಸು ಇರುವಾಗಲೆ ವಿಧಿ ಅವರನ್ನು  ವಂಚಿಸಿತು.

ಪತಿ ನಿಧನರಾದ ಮೇಲೆ ಬೇಸರದಿಂಧ ಪ್ರವಾಸ ಕೈಗೊಂಡು ಶಾಂತಿಯನ್ನರಸುತ್ತಾ ಕಾಶಿ, ಶ್ರೀಶೈಲ, ನಂಜನಗೂಡು ಕ್ಷೇತ್ರ ಸ್ಥಳಗಳಲ್ಲಿ ತಿಂಗಳುಗಟ್ಟಲೆ ಏಕಾಂತವಾಸಮಾಡುತ್ತ ತಮ್ಮ ಮನದಳಲನ್ನು ತಮ್ಮ ರಚನೆಗಳ ಮೂಲಕ ಭಗವಂತನಲ್ಲಿ ತೋಡಿಕೊಳ್ಳುತ್ತಿದ್ದರು . ಬದಲಾದ ವೈಯಕ್ತಿಕ ಸ್ಥಿತಿಗತಿಗೆ ಸಮಾಜದ ರೀತಿನೀತಿಗೆ ಅವರ ಮನಸ್ಸು ಒಗ್ಗಲೇ ಇಲ್ಲ. ಎಲ್ಲೂ ಮನಸ್ಸಿಗೆ ನೆಮ್ಮದಿ ದೊರಯಲಿಲ್ಲ.

ನಾಗಮ್ಮನವರ ಜೀವನದ ಅಸ್ತಮಾನಕಾಲ ಅವರನ್ನು ತನ್ನ ಸ್ವಗೃಹಕ್ಕೆ ಎಳೆದುತಂದಿತು. ತನ್ನ ಏಕಮಾತ್ರ ಪುತ್ರನ ಸಮೀಪದಲ್ಲಿ ತನ್ನ ಕಾರ್ಯಕ್ಷೇತ್ರವಾದ ಮೈಸೂರಿನ ಶಿವರಾಮಪೇಟೆಯಲ್ಲಿ ೧೯೬೫ರ ಆಷಾಢ ಬಹುಳ ತದಿಗೆಯ ದಿನ, ತಮ್ಮ ಕೊನೆಯ ಉಸಿರನ್ನೆಳೆದರು.

ಮೂಲೆಗುಂಪಾಗುತ್ತಿದ್ದ ಸಂಪ್ರದಾಯದ ಹಾಡುಗಳನ್ನು ಮತ್ತೆ ಜೀವಂತಗೊಳಿಸಿ, ಮನೆಮನೆಗಳ ಮೂಲೆಯಿಂದ ರಾಝ ಸಭಾಂಗಣಕ್ಕೊಯ್ದು, ತನ್ ಸಿರಿಕಂಠದಿಂದ ಅರಮನೆಯ ಮೂಲೆಮೂಲೆಗಳಲ್ಲಿ ಮಾರ್ದನಿಗೊಳಿಸಿದ ಕೀರ್ತಿ ಹಾಡಿನ ನಾಗಮ್ಮನವರದು. ಬಹಳ ಚಿಕ್ಕವಯಸ್ಸಿನಲ್ಲಿಯೆ ಗ್ರಾಮಾಫೋನ್‌ ಧ್ವನಿ ಮುದ್ರಿಕೆಗಳಿಗೆ ಸಂಪ್ರದಾಯದ ಹಾಡುಗಳ ಮೂಲಕ ಕಂಠದಾನ ಮಾಡಿದ ಪ್ರಥಮ ಮಹಿಳೆ. ಸಾರ್ವಜನಿಕ ಜೀವನದಲ್ಲಿ ಬಹಳಮಟ್ಟಿಗೆ ಗಮಕ ಕಲೆ ಪುರುಷರ ಸೊತ್ತಾಗಿದ್ದ ಕಾಲದಲ್ಲಿ, ಅವರಿಗೆ ಸರಿಸಮರಾಗಿ ಕಾವ್ಯವಾಚನ ಕಲೆಯನ್ನು ಕರಗತಮಾಡಿಕೊಂಡು, ತನ್ನ ಸುಶ್ರಾವ್ಯ ಕಂಠದಿಂದ ವಾಚನ ಮಾಡುತ್ತಿದ್ದ ‘ಮಹಿಳಾ ಗಮಕಿ’ ಎಂಬ ಕೀರ್ತಿಯೂ ಸಹ ‘ಭಾರತದ ೧೪ ವರ್ಷದ ಬಾಲೆ’ ನಾಗಮ್ಮನವರಿಗೆ ಸಲ್ಲುತ್ತದೆ. ಅರಮನೆಯಲ್ಲಿ ಮೊಳಗಿದ ಕಂಠಸಿರಿ ಜನಮನವನ್ನು ಗೆದ್ದು, ಮೈಸೂರಿನ ಹಾಡಿನ ನಾಗಮ್ಮನವಾಗಿ ಮೆರೆದು, ನಾಡು ನುಡಿಗೆ ಸಲ್ಲಿಸಿದ ಸೇವೆ ಅಪಾರವಾದದ್ದು. ಅಂತಹ ಪುತ್ರಿಯನ್ನು ಪಡೆದ ಕನ್ನಡನಾಡು, ನುಡಿ ಧನ್ಯ. ಅವರ ಸ್ಮರಣೆ ಇಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾದದ್ದು.

ಕನ್ನಡಪರ ಸಂಸ್ಥೆಗಳು ಹಾಡಿನ ನಾಗಮ್ಮನವರ ರಚನೆಗಳ ಪುನರ್ಮುದ್ರಣ ಮತ್ತು ಅವರ ಹಾಡುಗಳನ್ನು  ಹಾಡುವವರ ಧ್ವನಿಮುದ್ರಿಕೆಗಳನ್ನು  ತಯಾರಿಸುವುದರ ಮೂಲಕ ಇಂದಿನ ಪೀಳಿಗೆಗೆ ಆ ಮಹಾಕಲಾವಿದೆ ಬಿಟ್ಟು ಹೋದ ಆಸ್ತಿಯನ್ನು ಉಳಿಸಿ ಬೆಳೆಸುವ ಅವಕಾಶ ಮಾಡಿಕೊಟ್ಟ ಹಾಗಾಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸುವುದು ಅಗತ್ಯ.