‘ಜೀವಿಸು – ಜೀವಿಸಗೊಡು’ ತತ್ವವನ್ನೊಳಗೊಂಡ ಜೈನಧರ್ಮ ಉತ್ತರ ಭಾರತದಲ್ಲಿ ಜನಿಸಿ ದಕ್ಷಿಣಕ್ಕೆ ಬಂದು ಕನ್ನಡ ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಉಳಿಸಿಕೊಂಡು ಬಂದಿದೆ. ಶ್ರುತಕೇವಲಿನ್ ಭದ್ರಬಾಹು ಮುನಿ ಚಂದ್ರಗುಪ್ತನನ್ನೊಳಗೊಂಡು ಶಿಷ್ಯವೃಂದದೊಡನೆ ಶ್ರವಣಬೆಳಗೊಳ (ಹಾಸನ ಜಿಲ್ಲೆ)ಕ್ಕೆ ಬಂದು ನೆಲೆಸಿದಂದಿನಿಂದ ಜೈನಧರ್ಮ ಈ ಪರಿಸರದಲ್ಲೆಲ್ಲ ಹರಡಿ ಕರ್ನಾಟಕದ ವಾಸ್ತುಮೂರ್ತಿ ಶಿಲ್ಪವನ್ನು ಶ್ರೀಮಂತಗೊಳಿಸಿದೆ. ಶ್ರವಣಬೆಳಗೊಳ, ಹುಂಚ (ಶಿವಮೊಗ್ಗ ಜಿಲ್ಲೆ) ಗೇರುಸೊಪ್ಪೆ – ಬೀಳಗಿ – ಹಾಡುವಳ್ಳಿ (ಉತ್ತರಕನ್ನಡ ಜಿಲ್ಲೆ) ಮೂಡಬಿದಿರೆ, ಕಾರ್ಕಳ, ವೇಣೂರು (ಮಂಗಳೂರು ಜಿಲ್ಲೆ) ಇವು ಇಂದಿಗೂ ಜೈನಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ ಒಂದಾದ ಹಾಡುವಳ್ಳಿ ಗ್ರಾಮವನ್ನು ಆಯ್ದುಕೊಂಡು ಇಲ್ಲಿನ ಶಾಸನಗಳು – ವಾಸ್ತುಶಿಲ್ಪ – ಮೂರ್ತಿಶಿಲ್ಪಗಳ ಕಲಾ ಶ್ರೀಮಂತಿಕೆಯನ್ನು ತೋರಿಸುವುದೇ ಈ ಗ್ರಂಥದ ಉದ್ದೇಶವಾಗಿದೆ.

ನಾನು ಕರ್ನಾಟಕ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ನನ್ನ ಸಂಶೋಧನೆಯ ದೃಷ್ಟಿಯಿಂದ ಗೇರುಸೊಪ್ಪೆ ಮತ್ತು ಹಾಡುವಳ್ಳಿಯ ಜೈನ ಬಸದಿಗಳನ್ನು ನೋಡಿ ಅಂದು ಡಾ. ರಘುನಾಥ ಭಟ್ಟರಲ್ಲಿ ಚರ್ಚಿಸಿದ್ದೆ. ನಾನು ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದ ನಂತರ ೨೦೦೩ – ೦೪ರಲ್ಲಿ ಹಾಡುವಳ್ಳಿ ಕುರಿತು ಯುಜಿಸಿ ಕಿರುಯೋಜನೆಗಾಗಿ ಪ್ರಸ್ತಾವ ಸಲ್ಲಿಸಿದ್ದಾಗ ಅಂದಿನ ಪ್ರಭಾರ ಕುಲಪತಿ ಡಾ. ಕೆ.ವಿ. ನಾರಾಯಣರವರು ಅನುಮತಿ ನೀಡಿದ್ದರು. ಪ್ರಕಟಣೆ ಮಾಡುವಂತೆ ಪ್ರಸ್ತುತ ಮಾನ್ಯ ಕುಲಪತಿಯವರಾದ ಡಾ. ಎ. ಮುರಿಗೆಪ್ಪ ಅವರನ್ನು ವಿನಂತಿಸಿದೆ. ಮಾನ್ಯ ಕುಲಪತಿಯವರು ಒಪ್ಪಿಗೆ ನೀಡಿದ ನಂತರ ಹಾಡುವಳ್ಳಿ ಗ್ರಾಮಕ್ಕೆ ಸೇರಿದ ಕೆಲವೊಂದು ಕಂಚಿನಮೂರ್ತಿಗಳು ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿರುವುದನ್ನು ಮತ್ತು ಹಾಡುವಳ್ಳಿಯ ಸಾಳುವರಿಗೆ ಸೇರಿದ ಕೆಲವೊಂದು ಪ್ರಮುಖ ಶಾಸನಗಳನ್ನು ಒಂದೆಡೆ ಸೇರಿಸಿದರೆ ಒಳ್ಳೆಯದೆಂಬ ಭಾವನೆಯಿಂದ ಈ ಮಾಹಿತಿಯನ್ನು ಒಂದೆಡೆ ಸೇರಿಸಲಾಗಿದೆ.

ಈ ಗ್ರಂಥವನ್ನು ಹೊರತರುವಾಗ ನನ್ನ ಸ್ನೇಹಿತರು, ಹಿರಿಯರು ನನ್ನೊಡನೆ ಸಹಕರಿಸಿದ್ದಾರೆ. ಹಾಡುವಳ್ಳಿಯ ಛಾಯಾಚಿತ್ರಕ್ಕಾಗಿ ಛಾಯಾಚಿತ್ರಗಾರರನ್ನು ಕಳುಹಿಸಿಕೊಡುವಂತೆ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿಯವರನ್ನು ವಿನಂತಿಸಿದಾಗ ಶ್ರೀ ಗಣೇಶ ಯಾಜಿ ಅವರನ್ನು ಕಳುಹಿಸಿ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದ್ದಾರೆ. ಅಂದು ಜೈನಪೀಠ ಸಂಚಾಲಕರಾದ ಡಾ. ಸಿ.ಎಸ್. ವಾಸುದೇವನ್‌ರವರನ್ನು ಜೈನಪೀಠದಿಂದ ಈ ಪುಸ್ತಕವನ್ನು ಪ್ರಕಟಿಸುವಂತೆ ಕೇಳಿದಾಗ ಆಡಳಿತಾತ್ಮಕ ಅನುಮೋದನೆಗಾಗಿ ಪತ್ರ ವ್ಯವಹರಿಸಿ ಅನುಮೋದನೆ ದೊರಕಿದೆ. ಡಾ. ಪಿ.ಎನ್. ನರಸಿಂಹಮೂರ್ತಿ, ಡಾ. .ಎಸ್. ವಾಸುದೇವನ್, ಡಾ. ಶ್ರೀನಿವಾಸ ಪಾಡಿಗಾರರವರನ್ನೆಲ್ಲಾ ಸಂಪರ್ಕಿಸಿ ಹಲವು ಸಲ ಚರ್ಚಿಸಿದಾಗ ಮನಃಪೂರ್ವಕವಾಗಿ ನನ್ನೊಡನೆ ಸ್ಪಂದಿಸಿದ್ದಾರೆ. ಪ್ರಸ್ತುತ ಜೈನಪೀಠ ಸಂಚಾಲಕರಾದ ಡಾ. ರವೀಂದ್ರನಾಥರವರು ಈ ಪ್ರಕಟಣೆ ಬೇಗ ಬರುವಂತೆ ನನ್ನೊಡನೆ ಸಹಕರಿಸಿದ್ದಾರೆ.ಸಡ

ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಆರ್.ಎಂ. ಷಡಕ್ಷರಯ್ಯರವರು ವಸ್ತುಸಂಗ್ರಹಾಲಯದ ಕಂಚಿನ ಮೂರ್ತಿಶಿಲ್ಪಗಳ ಛಾಯಾಚಿತ್ರ ತೆಗೆಯಲು ಅನುಮತಿಸಿದ್ದಾರೆ. ಛಾಯಾಚಿತ್ರ ತೆಗೆಯುವಾಗ ಡಾ. ಎಸ್.ಕೆ. ಮೇಲಕಾರ್, ಎಸ್.ಬಿ. ಹಿರೇಮಠ ಮತ್ತು ಅಧ್ಯಾಪಕರು ಸಹಕರಿಸಿದ್ದಾರೆ. ಹಾಡುವಳ್ಳಿಯ ಕೇಂದ್ರ ಪುರಾತತ್ವ ಸ್ಮಾರಕದ ಛಾಯಚಿತ್ರ ತೆಗೆಯಲು ಕೇಂದ್ರ ಪುರಾತತ್ವ ಸರ್ವೇಕ್ಷಣಾಲಯದ ಅಧೀಕ್ಷಕ ಪುರಾತತ್ವವಿಧ ಡಾ. ಎಸ್.ವಿ.ಪಿ. ಹಳಕಟ್ಟಿಯವರು ಅನುಮತಿ ನೀಡಿದ್ದಾರೆ ಮತ್ತು ಅವರ ಸಿಬ್ಬಂದಿ ನನ್ನೊಡನೆ ಸಹಕರಿಸಿದ್ದಾರೆ. ನಾನು ಮೈಸೂರಿಗೆ ಹೋದಾಗ ಕರ್ನಾಟಕ ಪ್ರಾಚ್ಯವಸ್ತು ಸಂಗ್ರಹಾಲಯದ ನಿರ್ದೇಶನಾಲಯದ ವಾಚನಾಲಯದಲ್ಲಿ ಪ್ರಕಟಿತ ಮಾಹಿತಿಯನ್ನು ಸಂಗ್ರಹಿಸಲು ಡಾ. ಆರ್. ಗೋಪಾಲ್, ನಿರ್ದೇಶಕರು ಅನುಮತಿಸಿದ್ದಾರೆ. ಸಹಾಯಕ ನಿರ್ದೇಶಕ ಟಿ.ಎಸ್. ಗಂಗಾಧರ, ಸಹೋದ್ಯೋಗಿ ಶ್ರೀ ಪಾಂಡುರಂಗರವರು ಅಕ್ಕರೆಯಿಂದ ಸಹಕಾರ ನೀಡಿದ್ದಾರೆ. ಧಾರವಾಡದ ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿ ಛಾಯಾಚಿತ್ರ ತೆಗೆಯಲು ಡಾ. ಕೆ.ಎಂ. ಸುರೇಶ್ರವರು ಶ್ರೀ ಗಣೇಶ್ ಯಾಜಿಯವರನ್ನು ಕಳುಹಿಸಿ ಉಪಕರಿಸಿದ್ದಾರೆ. ಶಾಸನ ಸಂಗ್ರಹಿಸುವಾಗ ಶ್ರೀ ಪುರುಷೋತ್ತಮ ಆಚಾರ್, ಶ್ರೀ ಕಲವೀರ ಮನ್ವಾಚಾರ್‌ರವರು ಸಹಕರಿಸಿದ್ದಾರೆ. ವಿಭಾಗದ ಸಹೋದ್ಯೋಗಿ ಡಾ. ಡಿ.ವಿ. ಪರಮಶಿವಮೂರ್ತಿ ಇವರೊಡನೆ ವಿಷಯ ಚರ್ಚಿಸಿ ಸಹಕಾರ ಪಡೆಯಲಾಗಿದೆ. ಸಂಶೋಧನಾ ವಿದ್ಯಾರ್ಥಿ ಶ್ರೀ ಗುರುರಾಜರವರು ಶಾಸನ ಪಾಠದ ಕರಡು ತಿದ್ದಿದ್ದಾರೆ. ಶ್ರೀ ಸುರೇಶ್ ಬಡಿಗೇರರವರು ಬಸದಿಗಳ ತಳವಿನ್ಯಾಸ ಮತ್ತು ರೇಖಾಚಿತ್ರಗಳನ್ನು ಮಾಡಿಕೊಟ್ಟಿದ್ದಾರೆ. ಮೂರ್ತಿಶಿಲ್ಪಗಳ ಕಲಾವಿನ್ಯಾಸವನ್ನು ಮತ್ತು ಮುಖಪುಟ ವಿನ್ಯಾಸವನ್ನು ಮಾಡಿಕೊಟ್ಟ ಕಲಾವಿದ ಶ್ರೀ ಕೆ.ಕೆ. ಮಕಾಳಿಯವರು.

ನಾನು ಹಾಡುವಳ್ಳಿಯ ಹೋದಾಗ ಶೈಲೇಂದ್ರ ಗೌಡರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಸಹಕಾರ ಕೋರಿದಾಗ ಶ್ರೀ ಪದ್ಮ ಪ್ರಸಾದ್ ವರ್ಧಮಾನ ಜೈನರವರನ್ನು ಚಂದ್ರಗಿರಿ ಬೆಟ್ಟಕ್ಕೆ ಹೋಗಲು ನನ್ನೊಡನೆ ಕಳುಹಿಸಿದ್ದಾರೆ. ಡಾ. ಎಸ್.ಡಿ. ಶೆಟ್ಟಿ, ಉಜಿರೆರವರು ಹಾಡುವಳ್ಳಿಗೆ ಸಂಬಂಧಿಸಿದ ಗೇರುಸೊಪ್ಪೆ ತಾಮ್ರಶಾಸನದ ಪ್ರಕಟಿತ ಮಾಹಿತಿಯನ್ನು ಒದಗಿಸಿದ್ದಾರೆ. ಬಟ್ಕಳಕ್ಕೆ ಹೋದಾಗ ಅಲ್ಲಿ ತಹಸೀಲ್ದಾರ ಶ್ರೀಮತಿ ಗಾಯಿತ್ರಿ ಅವರನ್ನು ಭೇಟಿ ಮಾಡಿದಾಗ ತಾಲ್ಲೂಕಿನ ನಕ್ಷೆಯನ್ನು ತೆಗೆದುಕೊಳ್ಳಲು ಅನುಮತಿಸಿದ್ದಾರೆ. ಪ್ರಸಾರಾಂಗದಲ್ಲಿ ಡಿ.ಟಿ.ಪಿ. ಮಾಡುವಾಗ ತಾಂತ್ರಿಕ ಸಮಸ್ಯೆಗಳಿಗೆ ಕೆ.ಎಲ್. ರಾಜಶೇಖರ್, ಬಿ. ಸುಜ್ಞಾನಮೂರ್ತಿ, ಜೆ. ಶಿವಕುಮಾರವರು ಹಾಗೂ ಪ್ರಸಾರಾಂಗದ ನಿರ್ದೇಶಕರವರು ವಿನಯದಿಂದಲೇ ಸ್ಪಂದಿಸಿದ್ದಾರೆ. ಹೀಗೆ ಈ ಗ್ರಂಥ ಪ್ರಕಟಣೆಯ ನನ್ನ ಬಳಗ ದೊಡ್ಡದು. ಈ ಎಲ್ಲಾ ಮಹನೀಯರುಗಳ ಸಹಕಾರವನ್ನು ಹೇಗೆ ಸ್ಮರಿಸಬೇಕೋ ನನಗೆ ತಿಳಿಯದು. ಹಾಡುವಳ್ಳಿಯ ಗತವೈಭವವನ್ನು, ಕಲಾಶ್ರೀಮಂತಿಕೆಯನ್ನು ತೋರಿಸುವಲ್ಲಿ ಉಪಕರಿಸಿದ ಈ ಎಲ್ಲಾ ಮಹನೀಯರುಗಳಿಗೂ ನನ್ನ ಹೃದಯಪೂರ್ವಕ ತುಂಬು ಕೃತಜ್ಞತೆಗಳು.

ಕೆ.ಜಿ. ಭಟ್‌ಸೂರಿ