ಪೀಠಿಕೆ

ಹಾಡುವಳ್ಳಿ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನಿಂದ ಪೂರ್ವಭಿಮುಖವಾಗಿ ೧೭ ಕಿ.ಮೀ. ಅಂತರದಲ್ಲಿದೆ. ಸಂಗೀತಪುರ ಎಂಬುದು ಈ ಊರಿನ ಹಳೆಯ ಹೆಸರು (ರಮೇಶ ಕೆ.ವಿ., ೧೯೬೯, ಪು. ೯೪). ಹಾಡುವಳ್ಳಿಯನ್ನು ಸಂಗೀತಪುರವೆಂದೂ ಶಾಸನಗಳು ಹೆಸರಿಸುತ್ತವೆ. ಹಿಂದೊಮ್ಮೆ ವೈಭವನದ ಉನ್ನತ ಶಿಖರವನ್ನೇರಿದ್ದ ಹಾಡುವಳ್ಳಿ ಇಂದು ಐತಿಹಾಸಿಕ ಪ್ರಸಿದ್ಧಿ ಪಡೆದ ಸುಂದರ ಸ್ಥಳ. ಕ್ರಿ.ಶ. ೧೪ ರಿಂದ ೧೬ನೇ ಶತಮಾನದವರೆಗೆ ಇದು ಸಾಳುವ ಅರಸರ ರಾಜಧಾನಿ.

ಅಂದಿನ ಹಾಡುವಳ್ಳಿ ರಾಜ್ಯ ಇಂದಿನ ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ತುದಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ಹಾಗೂ ಪಶ್ಚಿಮ ಭಾಗಗಳನ್ನೊಳಗೊಂಡಿತ್ತು. ಅಂದರೆ ಇದು ಕುಂದಾಪುರದಿಂದ ಹೊನ್ನಾವರದ ಗಡಿಯವರೆಗೂ ಹಾಡುವಳ್ಳಿ ರಾಜ್ಯದ ಗಡಿಯೆನ್ನಬಹುದು. ನಡುವಣ ಭೈಂದೂರು, ಭಟ್ಕಳ, ಕಾಯ್ಕಿಣಿ ಊರುಗಳು ಹಾಡುವಳ್ಳಿ ರಾಜ್ಯದ ಮುಖ್ಯ ಕೇಂದ್ರ ಸ್ಥಳಗಳಾಗಿದ್ದವು. ಗೇರುಸೊಪ್ಪೆ ಹಾಡುವಳ್ಳಿ ರಾಜ್ಯಕ್ಕೆ ಅಂಟಿಕೊಂಡಿದ್ದ ಇನ್ನೊಂದು ರಾಜ್ಯ. ಗೇರುಸೊಪ್ಪೆ ಹಾಡುವಳ್ಳಿ ರಾಜ್ಯಕ್ಕೆ ಅಂಟಿಕೊಂಡಿದ್ದ ಇನ್ನೊಂದು ರಾಜ್ಯ. ಗೇರುಸೊಪ್ಪೆ ಅರಸರು ಮತ್ತು ಹಾಡುವಳ್ಳಿ ಅರಸು ಮನೆತನದವರೂ ಅಳಿಯ ಸಂತಾನ ಕಟ್ಟನ್ನು ಪಾಲಿಸಿಕೊಂಡು ಬಂದವರು. ಕ್ರಿ.ಶ.೧೪೮೮ರ ಶಾಸನದಲ್ಲಿ ಹಾಡುವಳ್ಳಿ ಜೈನ ಅರಸರು ಸೋಮವಂಶಕ್ಕೆ ಸೇರಿದ್ದು, ಕಾಶ್ಯಪ ಗೋತ್ರದವರಾಗಿದ್ದರು ಎಂದಿದೆ (ಎ.ಕ.V II I, ನಂ. ೧೬೩).

ಸಾಳುವ ಅರಸು ಮನೆತನ (ರಾಜಕೀಯ ಮತ್ತು ಸಾಂಸ್ಕೃತಿಕ ಹಿನ್ನಲೆ)

ಮಹಾಭಾರತದಲ್ಲಿ ಉಲ್ಲೇಖಿಸಲ್ಪಟ್ಟ ಸಾಳುವರ ಜೊತೆ ಸಂಬಂಧ ಹೊಂದಿರಬಹುದಾದ, ಎರಡು ಪ್ರಮುಖ ಶಾಖೆಗಳು ಗೇರುಸೊಪ್ಪೆ ಮತ್ತು ಹಾಡುವಳ್ಳಿಯಿಂದ ಆಳಿದುದನ್ನು ಶಾಸನಗಳು ಸ್ಪಷ್ಟಪಡಿಸುತ್ತವೆ. ವಿಜಯನಗರವನ್ನು ಆಳಿದ ತುಳು ಅರಸುಮನೆತನವು ಈ ಶಾಖೆಗೇ ಸಂಬಂಧಿಸಿದವರಿರಬೇಕು (ಸೂರ್ಯನಾಥ ಕಾಮತ್, ೧೯೯೨, ಪು. ೨೧೧). ಈ ಅರಸು ಮನೆತನದವರು ೧೪ನೇ ಶತಮಾನದಿಂದ ಬೆಳಕಿಗೆ ಬಂದವರೆಂದು ಶಾಸನಗಳು ಸ್ಪಷ್ಟಪಡಿಸುತ್ತವೆ.

ಹೊನ್ನನೆಂಬುವನು ಈ ಅರಸು ಮನೆತನದ ಮೂಲ ವ್ಯಕ್ತಿ. ಈತನು ಹೊಯ್ಸಳ ಚಕ್ರವರ್ತಿ ವೀರಬಲ್ಲಾಳನ ಸೈನಿಕನಾಗಿದ್ದನು. ಹೊನ್ನನು ಹೊಯ್ಸಳರ ಅವನತಿಯ ಲಾಭವನ್ನು ಪಡೆದು ಗೇರುಸೊಪ್ಪೆ ರಾಜ್ಯವನ್ನು ಸ್ಥಾಪಿಸಿದನು. ಈ ಮನೆತನದ ಇನ್ನೊಬ್ಬ ಅರಸು ಹೈವ, ಕಲಿಕಾಲದ ಕರ್ಣ, ಗಂಡುಗಲಿಗಳ ಗಂಡ, ನೃಪಕುಲ ಕಠಾರಿ ಮತ್ತು ಮಹಾಮಂಡಲೇಶ್ವರನೆಂಬ ಬಿರುದುಗಳನ್ನು ಪಡೆದಿದ್ದನು. ಹಾಡುವಳ್ಳಿ, ಭಟ್ಕಳ, ಹೊನ್ನಾವರ, ಗೇರುಸೊಪ್ಪೆ, ಚಂದಾವರ ಮತ್ತು ಗೋಕರ್ಣ ಪ್ರದೇಶಗಳನ್ನು ವಿಜಯನಗರ ಅರಸರ ಸಾಮಂತನಾಗಿ ಹೈವನು ಆಳಿದನು. ಈತನ ನಂತರ ಯಾದವಿ ಕಲಹ. ಈ ಅರಸು ಮನೆತನದಲ್ಲುಂಟಾಗಿ ಇವರ ರಾಜ್ಯ ಎರಡು ಭಾಗವಾಯಿತು. ಇವೇ ಹಾಡುವಳ್ಳಿ ಮತ್ತು ಗೇರುಸೊಪ್ಪೆ. ಹಾಡುವಳ್ಳಿಯಲ್ಲಿ ಹೈವನ ಮಗ ಸಂಗಿರಾಯ ಮತ್ತು ಗೇರುಸೊಪ್ಪೆಯಲ್ಲಿ ಹೈವನ ಅಳಿಯ ಸಂಗಮ ಅರಸರಾದರು (ವಸಂತ ಮಾಧವ, ೧೯೮೬, ಪು. ೪೭) ಹೈವನ ಅಳಿಯ ಸಂಗಮ, ಸಂಗಮನ ಮಗ ಕೇಶವನೆಂದು ಹೇಳಿದರೆ (ನಾಗರಾಜಯ್ಯ ಹಂಪ ಸಂ., ೧೯೭೬) ಇನ್ನೂ ಕೆಲವರು ಎರಡನೆಯ ಮಂಗರಾಜನು ರಾಜನು ತೀರಿದ ಮೇಲೆ ಅಳಿಯ ಕೇಶವನು ಪ್ರಾಪ್ತ ವಯಸ್ಕನಾಗಿಲ್ಲದ ಪ್ರಯುಕ್ತ ಹೈವರಸನ ಮಗನೆಂಬ ರೀತಿಯಲ್ಲಿ ಸಂಗಿರಾಯನೆ ರಾಜ್ಯದ ಆಡಳಿತ ಸೂತ್ರವನ್ನು ವಹಿಸಿಕೊಂಡನೆಂದು ಹೇಳುತ್ತಾರೆ. ಸಂಗಿರಾಯನ ಆಳ್ವಿಕೆಗೆ ಸೇರಿದ ಕಾಯ್ಕಿಣಿಯ ಶಾಸನ ೧೪೨೧ರ ಶಾಸನವು ರಾಜಕೀಯ ದೃಷ್ಟಿಯಿಂದ ಮಹತ್ವದ್ದಾಗಿದೆ (ರಮೇಶ್ ಕೆ.ವಿ., ೧೯೬೯, ಪು. ೯೪).

ಗೇರುಸೊಪ್ಪೆ ಸಾಳುವರು, ಹಾಡುವಳ್ಳಿ ಸಾಳುವರು ಈ ಎರಡೂ ಮನೆತನಗಳು ಕರಾವಳಿಗುಂಟ ರಾಜ್ಯಭಾರ ಮಾಡಿದವು. ಇವುಗಳ ಮಧ್ಯದ ಸಂಬಂಧದ ಕೊಂಡಿಯನ್ನು ಸಂಶೋಧನೆಯಿಂದ ಹುಡುಕಿ ಬೆಸೆಯಬೇಕಾಗಿದೆ (ಸೀತಾರಾಮ ಜಾಗೀರ್‌ದಾರ್, ೧೯೯೪, ಪು. ೧೦೭). ಹಾಡುವಳ್ಳಿಯ ‘ಸಾಳುವ ಮಂಗಿರಾಯ’ ಸಂಗಮ ಮನೆತನದ ಕುಮಾರ ಕಂಪಣ ದೇವನಿಗೆ ‘ಮಧುರಾ ವಿಜಯ ಕಾವ್ಯ’ದ ಪ್ರಕಾರ ಮಧುರಾ (ದಕ್ಷಿಣ ಮಧುರೈ) ನಗರವನ್ನು ಗೆಲ್ಲುವಲ್ಲಿ ಸಹಾಯ ಮಾಡಿದ್ದನೆಂದು ಪಿ. ಗುರುರಾಜಭಟ್ಟರ ಅಭಿಪ್ರಾಯವಾಗಿದೆ. (ಕರ್ನಾಟಕ ವಿಷಯ ವಿಶ್ವಕೋಶ, ೧೯೭೯ಎ). ಸಾಳುವ ಮಂಗಿರಾಯ ಒಂದನೇ ಬುಕ್ಕರಾಯನ ಮಗ ಕಂಪಣ್ಣನಿಗೆ ಯುದ್ಧದಲ್ಲಿ ಸಹಾಯಕನಾಗಿದ್ದನು. ಕಂಪಣ್ಣ ದೊರೆ ಸ್ವರ್ಗಸ್ಥನಾದಾಗ ಆತನ ಪುತ್ರ ಕುಮಾರ ನಂಜಣ್ಣ ಗುಂಡ್ಲುಪೇಟೆ ತಾಲ್ಲೂಕಿನ ಕುಡುಗನಾದ ಮಡೆಹಳ್ಳಿಯನ್ನು (ರಾಮನಾಥಪುರವಾಗಿಸಿ)ಧರ್ಮದತ್ತಿ ಹಾಕಿಕೊಡುತ್ತಾನೆ. ಈ ಘಟನೆ ಪರಿಶೀಲಿಸಿದರೆ ಮಂಗಿದೇವ ಕ್ರಿ.ಶ.೧೩೭೪ರ ಎಡಬಲದಲ್ಲಿ ಬದುಕಿದ್ದನು (ಸೀತಾರಾಮ ಜಾಗೀರ್‌ದಾರ್, ೧೯೯೪, ಪು. ೧೦೭).

ಹಾಡುವಳ್ಳಿ ಸಾಳುವ ಅರಸು ಮನೆತನಕ್ಕೆ ಸೇರಿದ ಪ್ರಾಚೀನ ಶಾಸನ ಕ್ರಿ.ಶ ೧೪೦೮ರ ಭಟ್ಕಳ ಶಾಸನ, ಹಾಡುವಳ್ಳಿ ಮನೆತನದ ಪರಿಚಿತ ದೊರೆ ೧೪ನೇ ಶತಮಾನದ ಕೊನೆಗಾಲದಲ್ಲಿ ಆಳುತ್ತಿದ್ದ ಹೈವ ಭೂಪ. ಈತನಿಗೆ ಸಾಳುವೇಂದ್ರನೆಂಬ ಹೆಸರೂ ಇತ್ತು. ಆತನ ರಾಣಿ ಭೈರಾದೇವಿ ಇವನ ಉತ್ತರಾಧಿಕಾರಿ. ಇವನ ಮಗನಾದ ಮಲ್ಲಿರಾಯ, ಮಲ್ಲಿರಾಯನ ಅಕಾಲಿಕ ಮರಣದಿಂದಾಗಿ ಆತನ ಸೋದರ ಸಂಗಿರಾಯ ಪಟ್ಟಕ್ಕೆ ಬಂದನು (ಕ.ಇ., ಸಂ. I, ೧೯೩೯ – ೪೦, ನಂ. ೩೯). ಪರಾಕ್ರಮಶಾಲಿಯಾದ ಈ ರಾಜ ತನ್ನ ವರಿಷ್ಠರಾದ ವಿಜಯನಗರದ ಸಾಮ್ರಾಟರ ಅಧೀನತ್ವವನ್ನು ಧಿಕ್ಕರಿಸಲು ಯತ್ನಿಸಿ ಅನೇಕ ಯುದ್ಧಗಳನ್ನು ನಡೆಸಿದನು (ಸೂರ್ಯನಾಥ ಕಾಮತ್, ೧೯೯೨, ಪು. ೨೪೪). ಕ್ರಿ.ಶ. ೧೪೨೩ರ ಶಾಸನವೊಂದು ಹಾಡುವಳ್ಳಿ ದೊರೆ ಸಂಗಿಭೂಪನು ನಗಿರೆಯ ಹೈದ ಭೂಪನ ಮತ್ತು ವೇಣುಪುರ ಭೈರವರಾಣಿಯ ಮಗನೆಂದಿದೆ. (ಕ.ಇ., ಸಂ. I, ನಂ.೪೯) ಇನ್ನೊಂದು ಶಾಸನದಲ್ಲಿ ನಗಿರೆಯ ಹೈವರಸ ಒಡೆಯನ ಮಗನೆಂಬುದನ್ನು ಸ್ಪಷ್ಟಪಡಿಸಿದೆ (ಕ.ಇ.,ಸಂ. I, ನಂ. ೪೦). ಸಂಗಿರಾಯನು ಕಲಿಗಳ ಮುಖದ ಕೈಕಟಕ ಸೂರೇಕಾರ, ಹುಸಿವರಶೂಲ, ಕಡಿತಲೆಯ ಮಲ್ಲ, ವೈರಿ ಮಂಡಲೀಕರ ಗಂಡ, ಮತ್ತು ಏಕಾಂಗವೀರ ಬಿರುದುಗಳನ್ನು ಪಡೆದಿದ್ದನು (ಕ.ಇ.,ಸಂ. I,ನಂ.೪೦). ಈ ಬಿರುದುಗಳನ್ನು ಸಂಗಿರಾಯನು ಸ್ವತಂತ್ರ ದೊರೆಯೆಂಬುದನ್ನು ಸ್ಪಷ್ಟಪಡಿಸುತ್ತದೆ. ಜೀವಂಧರ ಷಟ್ಪದಿಯನ್ನು ಬರೆದ ಕನ್ನಡ ಕವಿ ಕೋಟೇಶ್ವರ ಇವನ ಆಸ್ಥಾನದಲ್ಲಿದ್ದ. ಸಂಗೀತಪುರದ ಹೈವಭೂಪನ ಮಗ ತನ್ನ ಆಶ್ರಯದಾತನೆಂದು ಈ ಕವಿ ಹೇಳಿದ್ದಾನೆ (ಸೂರ್ಯನಾಥ ಕಾಮತ್, ೧೯೯೨, ಪು. ೨೧೧). ಈ ಕವಿಯ ಕಾಲ ಕ್ರಿ.ಶ. ೧೪೪೦.

ಕ್ರಿ.ಶ. ೧೪೧೫ರಲ್ಲಿ ವಿಜಯನಗರ ಸಾಮ್ರಾಟರ ವಿರುದ್ಧ ದಂಗೆಯೆದ್ದು ಹೋರಾಡಿದ ವಿಷಯವನ್ನು ಮೇಲೆ ಪ್ರಸ್ತಾಪಿಸಿದೆ. ಈ ದಂಗೆಯನ್ನು ಅಡಗಿಸುವ ಸಲುವಾಗಿ ಬಾರಕೂರು ರಾಜ್ಯವನ್ನಾಳುತ್ತಿದ್ದ ಮಹಾಪ್ರಧಾನ ಶಂಕರದೇವ ಒಡೆಯನು ಮಾಡಿದ ಯುದ್ಧದಲ್ಲಿ ಸಂಗಿರಾಯನ ಭಟನಾದ ಮಾಬುನಾಯಕನು ವೀರ ಸ್ವರ್ಗವೇರಿದನು (ಕ.ಇ.,ಸಂ. I, ನಂ.೪೦). ಈ ವಿಷಯ ಕಾಯ್ಕಿಣಿ ಶಾಸನದಲ್ಲಿದಎ. ಈ ಶಾಸನಗಳ ಹೊರತಾಗಿ ಕ್ರಿ.ಶ. ೧೪೨೩, ೧೪೩೦ರ ಶಾಸನಗಳು ಸಂಗಿರಾಯ ಒಡೆಯನ ಆಳ್ವಿಕೆ ಕುರಿತು ಪ್ರಸ್ತುತಪಡಿಸುತ್ತವೆ (ಕ.ಇ.,ಸಂ. I,ನಂ.೪೪, ೪೫).

ಸಂಗಿರಾಯನ ತಂದೆ ನಗಿರೆ ರಾಜ್ಯದ ಒಡೆಯನೂ ಆದ ಹೈವರಸನು ಕ್ರಿ.ಶ. ೧೩೯೮ರಲ್ಲಿ ಚೌಟರ ದಂಗೆಯನ್ನು ಅಡಗಿಸುವಲ್ಲಿ ಮಹಾಪ್ರಧಾನ ದಂಡಪ್ಪನಾಯಕನಿಗೆ ನೆರವಾಗಿದ್ದನು (ರಮೇಶ ಕೆ.ವಿ., ೧೯೬೯, ಪು.೯೪). ಹೈವರಸನ ಕಾಲದಲ್ಲಿ ಹಾಡುವಳ್ಳಿ ಮತ್ತು ನಗಿರೆ ಅರಸು ಮನೆತನದವರು ವಿವಾಹ ಸಂಬಂಧ ಬೆಳೆಸಿದ್ದರಾದರೂ ಸಂಗೀರಾಯ ಒಡೆಯ ಮತ್ತು ನಗಿರೆಯ ಕೇಶವರಾಜ ಒಡೆಯನಿಗೆ ಪರಸ್ಪರ ವಿರೋಧತನವಿತ್ತು. ಕೇಶವರಾಜ ಪ್ರಾಪ್ತವಯಸ್ಕನಾಗಿರದ ಕಾರಣ ಹೈವರಸನ ಮಗನೆಂಬ ರೀತಿಯಲ್ಲಿ ನಗಿರೆ ಮನೆತನದ ಸಂಬಂಧಿಯಾದ ಸಂಗಿರಾಯನೇ ನಗಿರೆ ರಾಜ್ಯದ ಆಡಳಿತವನ್ನು ಮಾಡುತ್ತಿದ್ದನು (ಕ.ಇ., ಸಂ. I, ನಂ. ೪೧). ಕ್ರಿ.ಶ. ೧೪೧೭ರ ಈ ಶಾಸನ ಸಂಗಿರಾಯನನ್ನು ನಗರಿಯ ದೊರೆಯೆಂದು ವರ್ಣಿಸುತ್ತದೆ. ಆದರೆ ಕೇಶವರಾಜನು ವಯಸ್ಸಿಗೆ ಬಂದ ನಂತರವೂ ನಗಿರೆಯ ಸಿಂಹಾಸನವನ್ನು ಬಿಟ್ಟು ಕೊಡಲು ಸಂಗಿರಾಯನು ಅಡ್ಡಿ ಮಾಡಿರಬೇಕು. ಆಥವಾ ಹಾಡುವಳ್ಳಿ ಮತ್ತು ಗೇರುಸೊಪ್ಪೆಯನ್ನು ಒಂದುಗೂಡಿಸಲು ಪ್ರಯತ್ನಿಸಿರಬೇಕು. ಆದರೆ ಕೇಶವದೇವ ಒಡೆಯ ಕ್ರಿ.ಶ. ೧೪೨೨ರಲ್ಲಿ ಸಂಗಿರಾಯ ಒಡೆಯನನ್ನು ಹೊಡೆದೋಡಿಸಿ ತಾನೇ ನಗಿರೆಯ ರಾಜನಾದನು. ಅಲ್ಲದೇ ಕೇಶವದೇವ ಒಡೆಯನು ಕ್ರಿ.ಶ. ೧೪೨೨ – ೨೩ರಲ್ಲಿ ಹಾಡುವಳ್ಳಿ ರಾಜ್ಯದ ಮೇಲೂ ದಂಡೆತ್ತಿ ಹೋದನು. ಈ ಯುದ್ಧದಲ್ಲಿ ಕೇಶವದೇವ ಒಡೆಯನಿಗೆ ಆತನ ಅಳಿಯ ಸಂಗಮನು ನೆರವಾದನು (ಕ.ಇ., ಸಂ. I, ನಂ. ೪೨, ೪೪, ೪೫). ಶಾಸನಗಳ ಆಧಾರದಲ್ಲಿ ಹೇಳುವುದಾದಲ್ಲಿ ಕೇಶವರಾಯನ ಆಳ್ವಿಕೆಯ ಕೊನೆಯ ವರ್ಷ ಕ್ರಿ.ಶ. ೧೪೨೫ (ಕ. ಇ, ಸಂ. I, ನಂ. ೪೭).

ಕೇಶವದೇವ ಒಡೆಯನಂತೆ ಆತನ ಅಳಿಯ ಸಂಗಿರಾಯ ಒಡೆಯನು ಹಾಡುವಳ್ಳಿ ಸಂಗಿರಾಯ ಒಡೆಯನೊಡನೆ ವಿರೋಧ ಬೆಳೆಸಿದ್ದನು. ಈ ವಿರೋಧವೇ ಕ್ರಿ.ಶ. ೧೪೩೦ರಲ್ಲಿ ಯುದ್ಧವಾಗಿ ಪರಿಣಾಮ ಬೀರಿತು (ಕ.ಇ. ಸಂ. I, ನಂ. ೫೦). ಇಲ್ಲಿಯವರೆಗೆ ನಗಿರೆಯ ಸಂಗಿರಾಯ ಬೆಂಬಲಿಗನಾಗಿದ್ದ ಆಸಕಳಿಯ ಭೈರವದೇವ ಒಡೆಯನು ಯುದ್ಧ ಪ್ರಾರಂಭವಾಗುತ್ತಿದ್ದಂತೆ ಹಾಡುವಳ್ಳಿಯ ಸಂಗಿರಾಯನು ಪಕ್ಷಪಾತಿಯಾದನು. ಇದರಿಂದ ಕುಪಿತಗೊಂಡ ನಗಿರೆಯ ಸಂಗೀರಾಯನು ಹೊನ್ನಾವರ ರಾಜ್ಯದ ಅಂದಿನ ರಾಜ್ಯಪಾಲನಾದ ಲಖಂಣ ಒಡೆಯನ ಸಹಕಾರವನ್ನು ಬೇಡಿದನು. ನಗಿರೆಯ ಸಂಗಿರಾಯ ಹೊನ್ನಾವರ ರಾಜ್ಯದ ರಾಜ್ಯಪಾಲನಾದ ಲಖಂಣ ಒಡೆಯನ ಸಹಕಾರದೊಂದಿಗೆ ಹಾಡುವಳ್ಳಿಯ ಮೇಲೆ ದಂಡೆತ್ತಿ ಬಂದ ವಿವರವನ್ನು ಕಾಯ್ಕಿಣಿ ಶಾಸನವು ಸ್ಪಷ್ಟೀಕರಿಸುತ್ತದೆ (ಕ.ಇ., ಸಂ. I, ನಂ. ೫೦). ಈ ಯುದ್ಧಗಳ ಪರಿಣಾಮದಿಂದ ಎರಡು ತುಂಡರಸುರಗಳ ವೈಯಕ್ತಿಕ ದ್ವೇಷದಿಂದ ಸಾವು – ನೋವುಗಳಾಗುತ್ತಿದ್ದವೇ ವಿನಃ ಈ ಯುದ್ಧಗಳಿಂದ ಜಯಾಪಜಯಗಳ ನಿರ್ಧಾರವಾಗುತ್ತಿರಲಲ್ಲ ಅಥವಾ ಗಡಿ ಪ್ರದೇಶಗಳ ಕೆಲವು ಗ್ರಾಮಗಳು ಒಬ್ಬರ ಕೈ ಬಿಟ್ಟು ಇನ್ನೊಬ್ಬರ ಕೈ ಸೇರುತ್ತಿದ್ದಿರಬಹುದು (ರಮೇಶ ಕೆ.ವಿ. ೧೯೬೯, ಪು. ೯೬).

ಪ್ರಾರಂಭದಲ್ಲಿ ಹೊನ್ನಾವರವನ್ನು ಆಳುತ್ತಿದ್ದ ವಿಜಯನಗರ ರಾಜ್ಯಪಾಲರಿಗೂ ನಗಿರೆ ಅರಸರಿಗೂ ಒಳ್ಳೆಯ ಬಾಂಧವ್ಯವಿದ್ದುದರಿಂದ ಹಾಡುವಳ್ಳಿ ಅರಸರ ಮೇಲೆ ಯುದ್ಧ ಸಾರುವಂತಾಯಿತು. ಸಂಗಿರಾಯನು ಕ್ರಿ.ಶ. ೧೪೦೮ ರಿಂದ ಕ್ರಿ.ಶ. ೧೪೪೯ರವರೆಗೆ ಆಳಿರಬೇಕು. ೪೧ ವರ್ಷಗಳ ಕಾಲ ಆಳಿದ ಪರಾಕ್ರಮಶಾಲಿಯಾದ ಈ ದೊರೆ ವಿಜಯನಗರ ಸಾಮ್ರಾಟರ ಅಧೀನತ್ವವನ್ನು ಧಿಕ್ಕರಿಸಲು ಯತ್ನಿಸಿ ಅನೇಕ ಯುದ್ಧಗಳನ್ನು ಮಾಡಿದನು. ಕ್ರಿ,.ಶ. ೧೪೦೮ರ ಶಾಸನದಲ್ಲಿ ಸಂಗಿರಾಯನ ಹಿರಿಯ ಸಹೋದರ ಮಲ್ಲಿರಾಯರ ಮರಣವನ್ನು ಉಲ್ಲೇಖಿಸಿ, ನಂತರ ಸಂಗೀರಾಯ ಪಟ್ಟಕ್ಕೆ ಬಂದನೆಂಬುದನ್ನು ಸ್ಪಷ್ಟೀಕರಿಸಿದೆ. ಶಾಸನದಲ್ಲಿ ಮಲ್ಲಿರಾಯನು ಸಂಗಿರಾಯನ ಕಿರಿಯ ಸಹೋದರ ಅನುಜ ಎಂದಿದೆ. ಆದರೆ ಈ ಶಾಸನ ಮಲ್ಲಿರಾಯನ ಮರಣಾನಂತರ ಸಂಗಿರಾಯನ ಆಳ್ವಿಕೆ ಕುರಿತು ಉಲ್ಲೇಖಿಸಿಲ್ಲ (ಗುರುರಾಜ ಭಟ್ ಪಿ., ೧೯೭೫, ಪು. ೨೧೨).

ಸಂಗಿರಾಯನ ನಂತರ ಸಂಗಿರಾಯನ ಮತ್ತು ಶಂಕರಾಂಬೆಯ ಹಿರಿಯ ಮಗ ಇಂದಗರಸನು ಪಟ್ಟಕ್ಕೆ ಬಂದನು ಕುಂದಾಪುರ ತಾಲ್ಲೂಕಿನ ಬೈಂದೂರ ಶಾಸನವೇ ಇಂದಗರಸನಿಗೆ ಸಂಬಂಧಿಸಿದಂತೆ ಪ್ರಾಚೀನ ಉಲ್ಲೇಖ. ಕ್ರಿ.ಶ. ೧೪೪೯ರ (ಎ.ರಿ.ಇ.ಎ. ೧೯೨೯ – ೩೦, ನಂ.೫೩೭) ಶಾಸನವೊಂದು ಸಾಗರ ತಾ., ಹೊಗೆಕೆರೆಯಲ್ಲಿ ದೊರೆತಿದ್ದು ಇಂದ್ರರಸನು ಅಲ್ಲಿಯ ಪಾರ್ಶ್ವನಾಥ ಬಸದಿಗೆ ದಾನ ನೀಡಿದ್ದನ್ನು ದಾಖಲಿಸಿದೆ (ಎ.ರಿ.ಇ.ಎ. ೧೯೨೯ – ೩೦, ನಂ. ೨೩೭). ಈ ವೇಳೆಗೆ ನಗಿರೆಯ ಸಿಂಹಾಸನಕ್ಕಾಗಿ ಒಳಜಗಳ ಪ್ರಾರಂಭವಾಯಿತು. ಕ್ರಿ.. ೧೪೬೧ರಲ್ಲಿ ನಗಿರೆಯ ಸಿಂಹಾಸನ ಭೈರವದೇವ ಒಡೆಯನ ತಮ್ಮನಾದ ಇಮ್ಮಡಿ ಭೈರವ ದೇವನ ಪಾಲಿಗಾಯಿತು. ಇವನು ಪಟ್ಟಕ್ಕೆ ಬಂದ ನಂತರ ತನ್ನ ತಮ್ಮನಾದ ಅಂಬಿಗರಾಯನನ್ನು ನಗಿರೆ ರಾಜ್ಯದ ದೊರೆಯೆಂದು ಘೋಷಿಸಿದನು. ಅಂಬಿಗರಾಯರಸನನ್ನು ಯುವರಾಜ ಪದವಿಗೇರಿಸಿದುದು ಅಂಬಿಗರಾಯರಸನ ಹಿರಿಯ ಅಣ್ಣ ತಿಪ್ಪರಸನಿಗೆ ಒಪ್ಪಿಗೆಯಾಗಲಿಲ್ಲ. ಈ ಜಗಳವನ್ನು ಉಪಶಮನ ಮಾಡುವುದಕ್ಕೋಸ್ಕರ ತಿಪ್ಪರಸನನ್ನು ಅಥವಾ ಮಲ್ಲಿರಾಯನನ್ನು ಜಂಟಿರಾಯನೆಂದು ಘೋಷಿಸಿದನು. ಆದರೂ ಇವರಿಬ್ಬರಲ್ಲಿ ಪರಸ್ಪರ ವಿರೋಧ ಬೆಳೆಯುತ್ತಲೇ ಬಂದು ಕ್ರಿ.ಶ. ೧೪೭೧ರಲ್ಲಿ ಯುದ್ಧವುಂಟಾಯಿತು. ಈ ಒಳಜಗಳಿದಿಂದ ತನಗೇನಾದರೂ ಲಾಭವಾಗಬಹುದೆಂದು ಹಾಡುವಳ್ಳಿ ಮಹಾಮಂಡಳೇಶ್ವರ ಇಂದಗರಸ ಒಡೆಯನು ಚಿಕ್ಕ ಭೈರವನ ಪಕ್ಷ ಹಿಡಿದನು. ಈ ಯುದ್ಧದಲ್ಲಿ ಮಲ್ಲಿರಾಯ ಭಟನೊಬ್ಬನು ಮೃತಪಟ್ಟ ವಿಷಯವನ್ನು ಕಾಯ್ಕಿಣಿಯಲ್ಲಿನ ವೀರಗಲ್ಲು ಶಾಸನ ತಿಳಿಸುತ್ತದೆ (ಕ.ಇ., ಸಂ. I, ನಂ. ೬೧).

ಕ್ರಿ.ಶ. ೧೫೦೮ರಲ್ಲಿ ಹುಟ್ಟಿದ ಬೈಂದೂರು ಶಾಸನ ಇವರ ಆಳ್ವಿಕೆಗೆ ಸೇರಿದ್ದರಿಂದ ಇಂದಗರಸ ಒಡೆಯನು ಕನಿಷ್ಟ ಪಕ್ಷ ಅರವತ್ತು ವರ್ಷಗಳ ಕಾಲ ರಾಜ್ಯವಾಳಿದನೆಂದು ತಿಳಿಯಬಹುದು (ಎ.ರಿ.ಇ.ಎ., ೧೯೨೯ – ೩೦, ನಂ. ೫೪೧). ಇಂದಗರಸನ ನಂತರ ಆತನ ಮಗ ಎರಡನೇ ಸಂಗಿರಾಯನು ಆಳ್ವಿಕೆಗೆ ಬಂದನು. ಸಾಗರದ ಕ್ರಿ.ಶ. ೧೪೯೧ರ ಶಾಸನವೊಂದು ಈ ಆಧಾರವನ್ನು ತಿಳಿಸುತ್ತದೆ (ಎ.ಕ., ಸಂ.V II I, ಸಾಗರ ನಂ. ೧೬೪). ಇಮ್ಮಡಿ ಸಂಗಿರಾಯನು ಎಷ್ಟು ಕಾಲ ಆಳಿದನೆಂಬುದು ಸ್ಪಷ್ಟವಾಗಿಲ್ಲ. ಸುಮಾರು ಕ್ರಿ.ಶ. ೧೪೭೧ರ ಕಾಲಕ್ಕೆ ಈತನ ಆಳ್ವಿಕೆ ಕೊನೆಗೊಂಡಿರಬೇಕು. ಏಕೆಂದರೆ ಈತನ ಮಗ ಇಂದ್ರದೇವ ಒಡೆಯನು ಅಥವಾ ಇಮ್ಮಡಿ ಸಾಳುವೇಂದ್ರ ಅಥವಾ ಇಮ್ಮಡಿ ಇಂದಗರಸ ಒಡೆಯ ಹಾಡುವಳ್ಳಿ ರಾಜ್ಯವನ್ನಾಳಿದನು (ಕ.ಇ., ಸಂ. I, ೧೯೩೯ – ೪೦ ನಂ.೬೧). ಇಮ್ಮಡಿ ಇಂದಗರಸ ಒಡೆಯನು ಕ್ರಿ.ಶ. ೧೪೭೧ರಿಂದ ೧೫೦೭ರವರೆಗೆ ರಾಜ್ಯಭಾರ ಮಾಡಿದನು. ಕ್ರಿ.ಶ. ೧೫೦೭ರ ಶಾಸನವೊಂದು ಇಮ್ಮಡಿ ಇಂದಗರಸ ಒಡೆಯನು ಹಾಡುವಳ್ಳಿಯ ರಾಜ್ಯವನ್ನಾಳಿದನೆಂಬುದನ್ನು ಪ್ರಸ್ತುತಪಡಿಸುತ್ತದೆ (ಎ.ರಿ.ಇ.ಎ. ೧೯೨೯ – ೩೦, ನಂ.೫೪೧) ಕ್ರಿ.ಶ. ೧೪೮೮ರ ಶಾಸನ ಸಾಳುವೇಂದ್ರನು ಸಂಗಿರಾಯನ ಮಗನೆಂದೂ ಇಂದಗರಸನು ಸಂಗೀತಪುರದ ದೊರೆಯೆಂದು ಹೇಳುತ್ತದೆ (ಎ.ಕ.ಸಂ. V II I, ನಂ. ೧೬೩). ಇಂದಗರಸ ಒಡೆಯನಾಗಿ ಸಂಗೀತಪುರ ಒಡೆಯನು ಸಂಗೀತಪುರ ಪಟ್ಟಣದಿಂದಲೇ ಬಿದಿರುನಾಡಿ ಮತ್ತು ಉಳಿದ ರಾಜ್ಯವನ್ನಾಳುತ್ತಿದ್ದನು. ವೇಣುಪುರ ಅಥವಾ ಬಿದಿರುನಾಡು ಹಾಡುವಳ್ಳಿ ರಾಜ್ಯದ ಭಾಗವಾಗಿತ್ತೆಂಬುದನ್ನು ಶಾಸನದಲ್ಲಿ ಹೇಳಿದೆ (ಎ.ರಿ.ಇ.ಎ. ೧೯೨೯ – ೩೦, ನಂ. ೫೪೦). ಭಟ್ಕಳದ ಹತ್ತಿರ ಶಿರೂರಿನಲ್ಲಿ ಇತ್ತೀಚಿನ ಒಂದು ಶಾಸನ ಇಂದಗರಸ ಒಡೆಯನು ಹೈವೇಂದ್ರ, ಕೊಂಕಣ, ತುಳು, ಕೇರಳ ಮುಂತಾದ ರಾಜ್ಯಗಳನ್ನು ಪ್ರತಿಪಾಲಿಸುತ್ತಿದ್ದನೆಂದಿದೆ. ಅಲ್ಲದೇ ಇದೇ ಶಾಸನದಲ್ಲಿ ಮಯೂರ ವರ್ಮರಾಯರು ಸಂಗಿರಾಯನು ತಮ್ಮ ಹಜಾಜಿ ಮಲ್ಲಿರಾಜ ಒಡೆಯನು ಎಂದು ದಾಖಲಿಸಿರುವುದು ಗಮನಿಸಬೇಕಾದ ಅಂಶ (ಶೆಟ್ಟಿ ಎಸ್.ಡಿ., ೨೦೦೨, ಪು.೨೯). ಇತ್ತೀಚೆಗೆ ಹಾಡುವಳ್ಳಿಯ ಆಕಲಂಕ ಬ್ರಹ್ಮನ ಚಂದ್ರಸುಧಸೇನೆಯೆಂಬ ಕೃತಿಯೊಂದು ಹೊಸದಾಗಿ ಬೆಳಕಿಗೆ ಬಂದಿದ್ದು ದೇವರಸನು ಸಂಗಮೇಶನ ಸುತನೆಂದೂ ಉಲ್ಲೇಖಿಸಿದೆ (ಶೆಟ್ಟಿ ಎಸ್.ಡಿ., ೨೦೦೨, ಪು.೩೦) ಧರ್ಮಸ್ಥಳ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ಇಡಲಾದ ತಾಮ್ರಶಾಸನದಲ್ಲಿ ಸಂಗಿರಾಯನಿಗೆ ದೇವರಾಯ ಮತ್ತು ಗುರುರಾಯರೆಂಬ ಮಕ್ಕಳಿದ್ದರೆಂಬುದನ್ನು ತಿಳಿಸುತ್ತದೆ (ಶೆಟ್ಟಿ ಎಸ್.ಡಿ., ೨೦೦೨, ಪು.೩೦).

ಇಮ್ಮಡಿ ಇಂದಗರಸನ ನಂತರ ಆತನ ಮಗ ಮಹಾಮಂಡಲೇಶ್ವರ ದೇವರಸ ಒಡೆಯನು ಸಂಗೀತಪುರದಿಂದ ಬೈಂದೂರು ಮತ್ತು ಉಳಿದ ರಾಜ್ಯಗಳನ್ನಾಳುತ್ತಿದ್ದನು (ಎ.ರಿ.ಇ.ಎ. ೧೯೨೯ – ೩೦, ನಂ. ೫೩೯). ದೇವರಸ ಒಡೆಯನ ನಂತರ ಗುರುರಾಯ ಒಡೆಯನು ಪಟ್ಟಕ್ಕೆ ಬಂದನು. ಸಂಗೀತಪುರದಿಂದಲೇ ಈತನ ಭಟ್ಕಳ ಮತ್ತು ಉಳಿದ ರಾಜ್ಯಗಳನ್ನಾಳುತ್ತಿದ್ದನು (ಕ.ಇ.ಸಂ. I, ೧೯೩೯ – ೪೦, ನಂ.೭೦). ಗುರುರಾಯ ಒಡೆಯನು ಇಮ್ಮಡಿ ಸಂಗಿರಾಯನ ಮಗನೆಂಬುದನ್ನು ಕ್ರಿ.ಶ. ೧೫೨೭ರ ಶಾಸನವೊಂದು ತಿಳಿಸುತ್ತದೆ (ಕ.ಇ.ಸಂ. I, ನಂ. ೭೦). ಕ್ರಿ.ಶ. ೧೫೩೧ರ ಶಾಸನ ಗುರುರಾಯ ಒಡೆಯನು ವಿಜಯನಗರದ ದೊರೆ ಅಚ್ಯುತರಾಯನ ಮಾಂಡಲೀಕನೆಂದು ತಿಳಿಸುತ್ತದೆ (ಕ.ಇ.ಸಂ. I, ೧೯೩೯ – ೪೦, ನಂ.೭೧). ಗುರುರಾಯ ಒಡೆಯನು ನಗಿರೆ ರಾಜ್ಯದ ಮೇಲೆ ದಂಡೆತ್ತಿ ಹೋಗುವಾಗ, ನಗಿರೆ ರಾಜ್ಯದ ಅಧಿಪತ್ಯವನ್ನು ಇಮ್ಮಡಿ ದೇವರಾಯನು ವಹಿಸಿದ್ದನು. ದಂಡೆತ್ತಿ ನಗಿರೆ ರಾಜ್ಯವನ್ನು ಸಮೀಪಿಸುತ್ತಿದ್ದಂತೆ, ಇಮ್ಮಡಿ ದೇವರಾಯನು ತಿರುಗಿ ಬಿದ್ದುದರಿಂದ ಹಾಡುವಳ್ಳಿಯ ಗುರುರಾಯ ಒಡೆಯನು ಸೋಲನ್ನಪ್ಪಬೇಕಾಯಿತು. ಆದರೆ ಗುರುರಾಯ ಒಡೆಯನ ನೆಚ್ಚಿನ ಭಟನಾದ ಈಶ್ವರದೇವ ನಾಯಕನು ಧೈರ್ಯದಿಂದ ಹೋರಾಡಿ ಗುರುರಾಯ ಒಡೆಯನನ್ನು ಸರ್ವನಾಶದಿಂದ ತಪ್ಪಿಸಿ ತಾನು ಮರಣವನ್ನಪ್ಪಿದನು (ಕ.ಇ.ಸಂ. I, ಭಾಗ ೧, ನಂ.೮)

ಗುರುರಾಯ ಒಡೆಯನ ನಂತರ ಈತನ ಸೋದರಳಿಯ ಸೋದರಿ ಪದ್ಮಾಂಬಿಕೆಯಮಗ ದೇವರಾಯನು ಕ್ರಿ.ಶ. ೧೫೩೦ ರಿಂದ ೧೫೪೦ ವರೆಗೆ ಆಳಿರಬೇಕು (ಕ.ಇ.ಸಂ. I, ೧೯೩೯ – ೪೦, ನಂ. ೮೫). ಈ ದೇವರಾಯನು ಸೋದರಿ ಭೈರಾಂಬೆಯ ಮಗಳ ಪತಿಯೂ ಆದ, ಚೆನ್ನಾದೇವಿ ದೇವರಾಯನ ಉತ್ತರಾಧಿಕಾರಿಣಿ (ಕ.ಇ.ಸಂ. I, ೧೯೩೯ – ೪೦, ನಂ. ೭೫ – ೭೬). ಈ ವೇಳೆಗೆ ಹಾಡುವಳ್ಳಿ ತುಳುನಾಡಿನ ವ್ಯಾಪ್ತಿಗೆ ಒಳಪಟ್ಟಿದ್ದು. ಅಂದು ತುಳುನಾಡಿನಲ್ಲಿ ಜನಪ್ರಿಯವಾಗಿದ್ದ ಅಳಿಯ ಸಂತಾನ ಪದ್ಧತಿಯಂತೆ ಸೋದರಿಯ ಮಕ್ಕಳಿಗೆ ಉತ್ತರಾಧಿಕಾರ ಹೋಗುತ್ತದೆ. ಹಾಡುವಳ್ಳಿಯ ರಾಜ್ಯದಲ್ಲೂ ಉತ್ತರಾಧಿಕಾರ ಬರುವುದು ಹದಿನಾರನೇ ಶತಮಾನದಿಂದ ರೂಢಿಗೆ ಬಂದಿತು (ಸೂರ್ಯನಾಥ ಕಾಮತ್, ೧೯೯೨, ಪು. ೨೧೨). ಅಂದರೆ ಆಸ್ತಿ ಅಥವ ಸಂಪತ್ತಿನ ಹಕ್ಕು ಗಂಡುಮಕ್ಕಳಿಗೆ ಹೋಗುವ ಬದಲು ಹೆಣ್ಣುಮಕ್ಕಳಿಗೆ ಹೋಗುವುದು ಈ ಪದ್ಧತಿಯ ಅರ್ಥ.

ದೇವರಾಯನ ಆಳ್ವಿಕೆಯ ನಂತರ ಚೆನ್ನಾದೇವಿಯ ಆಳ್ವಿಕೆ ಕ್ರಿ.ಶ. ೧೫೪೦ ರಿಂದ ಪ್ರಾರಂಭವಾಗಿರಬೇಕು. ದೇವರಾಯ ಅಥವಾ ಇಮ್ಮಡಿ ದೇವರಸ ಒಡೆಯನು ಚೆನ್ನಾದೇವಿಯ ಚಿಗವ್ವನೆಂದು ಶಾಸನವೊಂದು ಪ್ರಸ್ತುತಪಡಿಸುತ್ತದೆ (ಕ.ಇ.ಸಂ. I, ೧೯೩೯ – ೪೦, ನಂ. ೭೫). ಇವಳ ಆಳ್ವಿಕೆಯ ಕುರಿತು ಪೋರ್ಚುಗೀಸ್ ದಾಖಲೆಗಳೂ ಇವೆ. ಇವಳ ಮನೆತನದವರು ಪೋರ್ಚುಗೀಸರಿಗೆ ಮೊದಲು ಸಲ್ಲಿಸುತ್ತಿದ್ದ ಕಾಣಿಕೆಯನ್ನು ಚೆನ್ನಮ್ಮದೇವಿ ನಿಲ್ಲಿಸಿದಳು ಎಂದು ಗ್ಯಾಸ್ಟರ್ ಕೊರಿಯಾ ತಿಳಿಸಿದ್ದಾನೆ (ಗ್ಯಾಸ್ಪರ್ ಕೊರಿಯಾ, ೧೯೮೯, ನಂ. IV, ನಂ. ೨೫೨). ಇದರಿಂದಾಗಿ ಗೋವೆಯ ಪೋರ್ಚುಗೀಸ್‌ನ ಮಂಡಲಾಧಿಕಾರಿ ಅಲ್ಫಾನೋ ಡಿಸೋಜ ಇವಳ ವ್ಯಾಪಾರ ಕೇಂದ್ರಕ್ಕೆ ೧೨೦೦ ಸೈನಿಕರನ್ನು ತಂದು ಭಟ್ಕಳವನ್ನು ಸುಟ್ಟು ಸೂರೆ ಮಾಡಿದನು (ಡೇವರ್ಸ್ ಎಫ್.ಸಿ.ದಿ. ಪೋರ್ಚುಗೀಸ್ ಇನ್ ಇಂಡಿಯಾ, ನಂ. ೪೬೦ – ೬೧). ಈ ಯುದ್ಧದ ನಂತರ ರಾಣಿ ಪರಂಗಿಗಳಿಗೆ ಕಪ್ಪವನ್ನು ಕೊಡಬೇಕಾಯಿತು. ಕ್ರಿ.ಶ. ೧೫೪೬ಕ್ಕೆ ಸೇರಿದ ಎರಡು ಶಾಸನಗಳು ಈ ರಾಣಿಗೆ ಸೇರಿದ ಕೊನೆಯ ದಾಖಲೆಗಳಾಗಿವೆ (ಕ.ಇ. I,೧೯೩೯ – ೪೦, ನಂ. ೭೫, ೭೬). ಚಿನ್ನಾದೇವಿಯ ನಂತರ ಅವಳ ಸೋದರಿ ಚೆನ್ನಾಭೈರಾದೇವಿ ಪಟ್ಟಕ್ಕೆ ಬಂದಳು. ಪಟ್ಟಕ್ಕೆ ಬಂದ ಆರಂಭದ ದಿನಗಳಲ್ಲಿ ಇವಳ ಸೋದರಮಾವನಾದ ಕೃಷ್ಣದೇವರಸನು ಆಡಳಿತದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದನು. ಕ್ರಿ.ಶ. ೧೫೪೨ರ ಶಾಸನವೊಂದು (ಕ.ಇ. I, ೧೯೩೯ – ೪೦, ನಂ. ೭೫, ೭೬) ಕಾಯ್ಕಿಣಿ ಅರಮನೆಯಲ್ಲಿದ್ದ ಕೃಷ್ಣದೇವರಸು ಹಾಡುವಳ್ಳಿ ದೊರೆಯೆಂದು ಸೂಚಿಸುತ್ತದೆ. ಬಹುಶಃ ಕೃಷ್ಣದೇವರಸನು ಹಾಡುವಳ್ಳಿ ದೊರೆಯಾಗಲು ಕಾರಣ ಚೆನ್ನಭೈರಾದೇವಿ ಚಿಕ್ಕವಳಿದ್ದಿರಬೇಕು. ಕ್ರಿ.ಶ. ೧೫೪೨ರಲ್ಲಿ ಪೋರ್ಚುಗೀಸ್‌ರು ನಡೆಸಿದ ವೀರಕೃತ್ಯಗಳಿಂದ ಬರಿದಾಗಿದ್ದ ಭಟ್ಕಳ ಮತ್ತೆ ಪುನಃ ಚೇತರಿಸಿತು (ಸೌ.ಇ.ಇ. XV II I, ನಂ.೫೨).

ಧರ್ಮಸ್ಥಳದ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿರುವ ಶಾಸನ ಚೆನ್ನಾದೇವಿ ಮತ್ತು ಭೈರಾದೇವಿಯ ಆಳ್ವಿಕೆಯನ್ನು ತಿಳಿಸುತ್ತದೆ. ಇನ್ನೊಂದು ಶಾಸನ, ಚೆನ್ನಾದೇವಿ ಕ್ರಿ.ಶ. ೧೫೪೮ರ ವರೆಗೆ ಆಳ್ವಿಕೆ ಮಾಡಿದ್ದನ್ನು ತಿಳಿಸುತ್ತದೆ (ಮಂಜುವಾಣಿ ಮಾಸಪತ್ರಿಕೆ ಜೂನ್ ೧೯೮೯). ಇವರ ಮಂತ್ರಿಯಾದ ದೇವಿಸೆಟ್ಟಿಯ ಮಗ ಹೊನ್ನಾವರದಲ್ಲಿ ಶಾಂತೀಶ್ವರ ಬಸದಿ ಕಟ್ಟಿಸಿದನೆಂದು ತಿಳಿಸುತ್ತದೆ. ಈ ಶಾಸನ ರಾಜರ ಪರಂಪರೆಯನ್ನು ಹೇಳುವುದಲ್ಲದೆ ಇವರು ಕದಂಬಾನ್ವಯವರೆಂದೂ…. ಮತ್ತು ಶ್ರೀ ಶಂಕರಾಂಭೆ, ಇವರ ಮಕ್ಕಳು ಮಲ್ಲಿಯಾರ, ಸಾಳ್ವೇಂದ್ರದೇವ ಮತ್ತು ಶ್ರೀ ಗುರುರಾಯ ಒಡೆಯರೆಂದು ಶಾಸನ ತಿಳಿಸುತ್ತದೆ. ಇದೇ ಶಾಸನ (ಮಂಜುವಾಣಿ, ಮಾಸಪತ್ರಿಕೆ ಜೂನ್ ೧೯೮೯) ಮಹಾಮಂಡಳೇಶ್ವರ ಭೈರದೇವಿ ಅಮ್ಮನವರ ವರಕುಮಾರಿಯರು ಚೆನ್ನಭೈರಾದೇವಿ ಎಂದು ತಿಳಿಸುತ್ತದೆ.

ಚೆನ್ನಭೈರಾದೇವಿ ಕ್ರಿಶ. ೧೫೬೦ರಲ್ಲಿ ವಿಜಯನಗರದ ದೊರೆಗಳ ಆಧಿರಾಜತ್ವವನ್ನು ಮಾನ್ಯ ಮಾಡಿದ್ದಳು ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ಭಾಗಗಳೂ ಇವಳ ರಾಜ್ಯಕ್ಕೆ ಸೇರಿದ್ದವು (ಎ.ರಿ.ಇ.ಎ. ೧೯೨೯ – ೩೦, ನಂ. ೫೪೦). ಹಾಡುವಳ್ಳಿ ಮತ್ತು ಗೇರುಸೊಪ್ಪೆಯನ್ನು ಒಂದುಗೂಡಿಸಿದ ಚೆನ್ನಾಭೈರಾದೇವಿ ಕೆಲವು ವರ್ಷ ಗೇರುಸೊಪ್ಪೆ ಹಾಗು ಭಟ್ಕಳದಲ್ಲಿ ರಾಜಧಾನಿಯನ್ನಾಗಿ ಮಾಡಿ ರಾಜ್ಯಭಾರ ಮಾಡಿದಳು. ಶಾಸನಗಳು ಚೆನ್ನಾಭೈರಾದೇವಿಯನ್ನು ಹೈವ ತುಳು ಕೊಂಕಣಗಳನ್ನಾಳುತ್ತಿರುವ ಮಹಾಮಂಡಳೇಶ್ವರ ಎಂದೇ ಪ್ರಸ್ತುತಪಡಿಸುತ್ತದೆ (ವಸಂತ ಮಾಧವ, ೧೯೮೫, ಪು. ೪೯).

ಮೆಕೆಂಜಿ ಸಂಗ್ರಹದಲ್ಲಿನ (ಮೆಕೆಂಝಿ ಸಂಗ್ರಹ, ಶಾಸನ ನಂ. ೩೦೦, ಪು. ೪೮೩ – ೮೪) ೧೫೭೯ರ ಶಾಸನ ವೀರಮ್ಮನ ಕುಮಾರತಿಯರಾದ ವೀರ ಒಡೆಯರ ಸಂಜಾತೆಯಾದ ಶ್ರೀಮನ್ ಮಹಾಮಂಡಳೇಶ್ವರ ಸಾಳುವ ಕೃಷ್ಣ ದೇವರಸರವರ ಹೆಂಡತಿಯಾದ ಪಟ್ಟಮಹಾದೇವಿಯರೆನಿಸಿದ ಶ್ರೀಮನ್ ಮಹಾಮಂಡಳೇಶ್ವರ ಚೆನ್ನಭೈರಾದೇವಿಯಮ್ಮ ಎಂದು ದಾಖಲಿಸುತ್ತದೆ. ಕ್ರಿ.ಶ. ೧೫೮೭ರ ಶಾಸನ (ಮೆಕೆಂಝಿ ಸಂಗ್ರಹ, ಶಾಸನ ನಂ. ೨೯೮, ಪು. ೪೮೦ – ೮೨) ಶ್ರೀಮದ್ ಮಹಾಮಂಡಳೇಶ್ವರರು ಸಾಳುವ ಇಮ್ಮಡಿ ಚೆನ್ನಭೈರಾದೇವಿಯಮ್ಮನವರಿಗೆ ಸಕಲ ಸಾಮ್ರಾಜ್ಯಾಭ್ಯುದಯಕ್ಕೆ ಕಾರಣವಾಗಿ ಸಿರಿಯ ಮಲ್ಲಣ್ಣ ಒಡೆಯರ ಬೆಳಗೊಳದ ಗೊಮ್ಮಟನಾಥ ಸ್ವಾಮಿಗೆ ಮಹಾಮಸ್ತಾಭಿಷೇಕ ಮಾಡಿಸಿದರೆಂದು ಹೇಳಿದೆ. ಇಮ್ಮಡಿ ಚೆನ್ನಭೈರಾದೇವಿ ಎಂದು ಉಲ್ಲೇಖಿಸಿರುವುದು ಈ ಶಾಸನದ ವಿಶೇಷತೆ.

ವಿಜಯನಗರದ ಚಕ್ರವರ್ತಿ ಸದಾಶಿವರಾಯನಿಗೆ ಇವರ ರೇವುಗಳಾದ ಹೊನ್ನಾವರ, ಭಟ್ಕಳ, ಅರೇಬಿಯಾ ಮತ್ತು ಪರ್ಶಿಯಾ ಕೊಲ್ಲಿಗಳಿಂದ ಕುದುರೆಗಳು ಬರುತ್ತಿದ್ದವು. ಈ ಕಾರಣದಿಂದ ಚೆನ್ನಭೈರಾದೇವಿಯೊಡನೆ ಸದಾಶಿವರಾಯನು ಮೈತ್ರಿಯಿಂದಿದ್ದನು. ಚೆನ್ನಭೈರಾದೇವಿ ಬಿಜಾಪುರದ ಆದಿಲ್‌ಶಾಹಿ ಮನೆತನದೊಡನೆಯೂ ಮೈತ್ರಿಯಿಂದಿದ್ದಳು. ಇವರಿಬ್ಬರೂ ಒಂದಾಗಿ ಕರಾವಳಿಯಲ್ಲಿ ಆಗುತ್ತಿದ್ದ ಲೂಟಿ ಮತ್ತು ಅಕ್ರಮ ವ್ಯವಹಾರವನ್ನು ಮಾಡುತ್ತಿದ್ದ ಪೋರ್ಚುಗೀಸರನ್ನು ಹದ್ದಿನಲ್ಲಿಡುವ ಉದ್ದೇಶದಿಂದ ಕ್ರಿ.ಶ. ೧೫೬೭ರಲ್ಲಿ ಒಪ್ಪಂದ ಮಾಡಿಕೊಂಡರು. ಅಲ್ಲದೆ ಪೋರ್ಚುಗೀಸರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಸ್ತೂರನ್ನು ಮುತ್ತಿಗೆ ಹಾಕಿದರು. ಆದರೆ ಬಸ್ತೂರಿನ ರಕ್ಷಣೆಗೆ ಚೆನ್ನಭೈರಾದೇವಿ ಮೂರು ಸಾವಿರ ಸೈನಿಕರನ್ನು ಅಲ್ಲಿ ಆಳಿಕೊಂಡಿದ್ದ ಸೂರಾಲಿನ ತೋಳಾಂತರ ಅರಸರಿಗೆ ಕಳುಹಿಸಿ ತನ್ನ ವರ್ಚಸ್ಸು ಬೀರಿದಳು. ಚೆನ್ನಭೈರಾದೇವಿ ಕಲ್ಲಿಕೋಟೆ, ಜಾಮೋರಿನೊಡನೆ ಒಪ್ಪಂದ ಮಾಡಿಕೊಂಡಿದ್ದಳು. ಈಕೆಯ ವ್ಯಾಪೊಆರ ಕೆಂಟಿ, ಅರೇಬಿಯಾ, ಪರ್ಶಿಯನ್ ಕೊಲ್ಲಿಯವರೆಗೆ ವಿಸ್ತಾರವಾಗಿತ್ತು (ಮೆಕೆಂಝಿ ಸಂಗ್ರಹ, ಪು. ೪೮೦ – ೮೨).

ಬೀಳಗಿ ಮತ್ತು ಕೆಳದಿ ಅರಸರೊಡನೆ ಚೆನ್ನಭೈರಾದೇವಿಯ ಸಂಪರ್ಕ ಉತ್ತಮವಾಗಿರಲಿಲ್ಲ. ಬೀಳಗಿ ನರಸಿಂಗ ಅಥವಾ ರಂಗರಾಜ ಚೆನ್ನಭೈರಾದೇವಿಯೊಡನೆ ಕದನ ಪ್ರಾರಂಭಿಸಿದನು. ಕ್ರಿ.ಶ. ೧೫೭೩ರಲ್ಲಿ ಅವನು ಗೇರುಸೊಪ್ಪೆ ರಾಜ್ಯವನ್ನು ಆಕ್ರಮಿಸಿ, ಹಳದಿಪುರದವರೆಗೆ ಬಂದನು. ಇದನ್ನು ತಿಳಿದ ರಾಣಿ ತನ್ನ ಚದುರಂಗ ಬಲದಿಂದ ಹಳದಿಪುರದಲ್ಲಿ ಬೀಳಗಿ ಸೈನ್ಯವನ್ನು ಹಿಮ್ಮಟ್ಟಿಸಿದಳು (ಭಟ್‌ಸೂರಿ ಕೆ.ಜಿ., ೧೯೯೬, ಮೆಕೆಂಝಿ ಸಂಗ್ರಹ, ಪು.೫೧).

ಚೆನ್ನಭೈರಾದೇವಿ ಪೋರ್ಚುಗೀಸರ ಸಂಪರ್ಕದಿಂದ ಹೆಚ್ಚು ಪ್ರಸಿದ್ಧಿಗೆ ಬಂದಳೆಂಬುದು ಪೋರ್ಚುಗೀಸ್ ದಾಖಲೆಗಳಿಂದ ವ್ಯಕ್ತವಾಗುತ್ತದೆ. ಗೋವೆಯಲ್ಲಿ ಪೋರ್ಚುಗೀಸರು ಬಲಶಾಲಿಗಳಾಗಿದ್ದರು. ವಿಜಾಪುರ ಆದಿಲ್‌ಶಾಹಿಗಳು ಮಲೆನಾಡು ಕರಾವಳಿ ತೀರದ ಸಣ್ಣ ಪುಟ್ಟ ರಾಜರುಗಳ ಮೇಲೆ ದಂಡೆತ್ತಿ ಬಂದು ತೊಂದರೆಯನ್ನುಂಟು ಮಾಡುತ್ತಿದ್ದರು. ಅದರಲ್ಲೂ ಹೆಚ್ಚಾಗಿ ಮಲೆನಾಡಿನಲ್ಲಿ ಕೆಳದಿ ರಾಜ್ಯ ತಲೆಎತ್ತಿ ವಿಜಯನಗರ ಅರಸರ ಸಹಾಯದಿಂದ ವಿಸ್ತಾರವಾಗತೊಡಗಿತು. ಕ್ರಿ.ಶ. ೧೫೬೯ – ೭೦ರಲ್ಲಿ ಪೋರ್ಚುಗೀಸರೊಡನೆ ಹೋರಾಡುವ ಸಂದರ್ಭ ಬಂದೊದಗಿತು. ಯುದ್ಧ ನೌಕೆಯಲ್ಲಿದ್ದ ಪೋರ್ಚುಗೀಸರು ಹೊನ್ನಾವರ ಬಂದರಿನಲ್ಲಿ ಇಳಿಯಲು ಯತ್ನಿಸಿದಾಗ ಚೆನ್ನಭೈರಾದೇವಿ ಧೈರ್ಯದಿಂದ ಇವರ ಯತ್ನವನ್ನು ವಿಫಲಗೊಳಿಸಿದಳು. ಅಲ್ಲದೇ ಕ್ರಿ.ಶ. ೧೫೭೦ರಲ್ಲಿ ಬಿಜಾಪುರ ಸುಲ್ತಾನ ಇಬ್ರಾಹಿಂ ಆದಿಲ್‌ಶಾಹಿ ಮತ್ತು ಜಾಮೋರಿನೊಡಗೂಡಿ ಪೋರ್ಚುಗೀಸರನ್ನು ಹೊನ್ನಾವರದಿಂದ ಹೊಡೆದೋಡಿಸುವ ಇರಾದೆಯಿಂದ ಭೀಕರ ಕದನವನ್ನುಂಟು ಮಾಡಿ ಪೋರ್ಚುಗೀಸರಿಗೆ ಅಪಾರ ನಷ್ಟವನ್ನುಂಟು ಮಾಡಿದಳು (ಮೆಕೆಂಝಿ ಸಂಗ್ರಹ, ಪು. ೫೧). ಈ ಯುದ್ಧದ ನಂತರ ಪೋರ್ಚುಗೀಸರು ಚೆನ್ನಭೈರಾದೇವಿಯ ಘನತೆಗೆ ಭಂಗಬಾರದ ರೀತಿಯಲ್ಲಿ ಕರಿಮೆಣಸಿನ ವ್ಯಾಪಾರವನ್ನು ನಡೆಸಿಕೊಂಡು ಬಂದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಗೇರುಸೊಪ್ಪೆ ರಾಣಿಯಾಗಿ ಮೆರೆದಳು. ಪೋರ್ಚುಗೀಸರು ಇವಳನ್ನು ಕರಿಮೆಣಸಿನ ರಾಣಿಯೆಂದೇ ಕರೆಯುತ್ತಿದ್ದರು (ಸೂರ್ಯನಾಥ ಕಾಮತ್, ೧೯೯೨, ಪು.೨೧೩).

ಒಟ್ಟಿನಲ್ಲಿ ಚೆನ್ನಭೈರಾದೇವಿಯ ಕಾಲ ಒಂದು ಪರ್ವಕಾಲವೆಂದು ತಿಳಿಯಬೇಕು. ಏಕೆಂದರೆ ೧೬೦ ವರ್ಷಗಳವರೆಗೆ ಹಾಡುವಳ್ಳಿ ರಾಜಮನೆತನದವರು ಕಾದಾಡಿಕೊಂಡಿದ್ದು ೧೬೦ ವರ್ಷಗಳ ನಂತರ ಚೆನ್ನಭೈರಾದೇವಿಯ ಕಾಲದಲ್ಲಿ ಮತ್ತೊಮ್ಮೆ ಒಂದಾದವು (ಭಟ್‌ಸೂರಿ ಕೆ.ಜಿ., ೧೯೯೬, ಪು.೮). ಶಾಸನಗಳಲ್ಲಿ ಚೆನ್ನಭೈರಾದೇವಿ ನಗಿರೆ, ಹೈವ, ತುಳು, ಕೊಂಕಣ ರಾಜ್ಯಗಳನ್ನಾಳಿದಳು ಎಂದಿದೆ. ಆದರೆ ಚೆನ್ನಭೈರಾದೇವಿ ಹಾಡುವಳ್ಳಿ ಮತ್ತು ಗೇರುಸೊಪ್ಪೆ ರಾಜ್ಯಭಾರ ಮಾಡುತ್ತಿರುವಾಗಲೇ ಪೋರ್ಚುಗೀಸ್ ಮತ್ತು ಕೆಳದಿ ನಾಯಕರ ವಿರುದ್ಧ ಯುದ್ಧ ಮಾಡಿದಳು. ಆಗಿಂದಾಗ್ಗೆ ಆಗುತ್ತಿದ್ದ ಕದನಗಳು ರಾಣಿ ಚೆನ್ನಭೈರಾದೇವಿಯನ್ನು ಸಿಂಹಾಸನದ ಮೇಲಿನಿಂದ ಕೆಳಗಿಳಿಸುವ ಪ್ರಯತ್ನ ಆರಂಭವಾಗಿರಬೇಕು. ಕೆಳದಿ ವೆಂಕಟಪ್ಪ ನಾಯಕನು ದಳವಾಯಿ ಲಿಂಗಣ್ಣನೊಡನೆ ಭಾರೀ ಸೇನೆಯನ್ನು ಕಳುಹಿಸಿ ರಾಣಿ ಚೆನ್ನಭೈರಾದೇವಿಯನ್ನು ಕೈಸೆರೆ ಹಿಡಿದನು. ಹಾವಿನ ಹಳ್ಳಿ, ಕರವೂರು, ಗೇರುಸೊಪ್ಪೆ, ಚಂದ್ರಗಿರಿ, ಗೋವರ್ಧನಗಿರಿ, ವಡ್ಡಿಮೇದಿನ ಮುಂತಾದ ಆಕೆಯ ಆಳ್ವಿಕೆಯ ಒಳಪಟ್ಟಿದ್ದ ಕೋಟೆಗಳನ್ನು ವಶಮಾಡಿಕೊಂಡು ಅವಳು ಬಳಸುತ್ತಿದ್ದ ವಿಚಿತ್ರತರ ವಸ್ತುಗಳು, ವಾಹನಗಳು, ಬಟ್ಟೆಗಳು ಮುಂತಾದ ಸರ್ವಸ್ವವನ್ನು ಸ್ವಾಧೀನ ಮಾಡಿಕೊಳ್ಳಲಾಯಿತು. ರಾಣಿಯ ಸಮಗ್ರ ಸಂಪತ್ತನ್ನು ಕೆಳದಿ ರಾಜ್ಯಕ್ಕೆ ಸೇರಿಸಲಾಯಿತು (ಗುಂಡಾ ಜೋಯಿಸ್, ೧೯೮೬, ಪು. ೧೨೦). ಆನಂತರ ಚೆನ್ನಭೈರಾದೇವಿ ಸೆರೆಮನೆಯಲ್ಲಿ ಅಸುನೀಗಿದಳು. ಚೆನ್ನಭೈರಾದೇವಿಗೆ ಸಂಬಂಧಿಸಿದಂತೆ ಈವರೆಗೆ ದೊರೆತ ಕೊನೆಯ ಶಾಸನ ಕ್ರಿ.ಶ. ೧೫೯೯ರ ಕಾಲಕ್ಕೆ ಸೇರಿದೆ (ಕ.ಇ. ಸಂ. I, ೧೯೩೯ – ೪೦, ನಂ. ೮೫). ಚೆನ್ನಭೈರಾದೇವಿ ಆಡಳಿತ ಕಾಲ ಹೆಚ್ಚು ಅಭಿಮಾನ, ವ್ಯಾಪಾರಾಭಿವೃದ್ಧಿ, ಸಾಹಸ, ಮತಸಹಿಷ್ಣುತೆ, ಆಡಳಿತ ಶಕ್ತಿ ಇವು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿದೆ. ಶಾಸನಗಳ ಜೊತೆಗೆ ಪೋರ್ಚುಗೀಸ್ ದಾಖಲೆಗಳೂ ಕೂಡ ಚೆನ್ನಭೈರಾದೇವಿ ನಡೆಸಿದ ಹಲವಾರು ಯುದ್ಧ, ವ್ಯಾಪಾರ, ಆಡಳಿತ ವಿಷಯಗಳಿಗೆ ಸಂಬಂಧಿಸಿದಂತೆ ಬೆಳಕನ್ನು ಚೆಲ್ಲಿವೆ.

01_376_HJS-KUH