ಕರ್ನಾಟಕದ ಸಾಂಸ್ಕೃತಿಕ ಇತಿಹಾಸವನ್ನು ರೂಪಿಸುವಲ್ಲಿ ಜೈನಧರ್ಮದ ಪಾತ್ರ ದೊಡ್ಡದು. ದಕ್ಷಿಣ ಭಾರತದ ಜೈನಧರ್ಮದ ಇತಿಹಾಸವೆಂದರೆ ಕರ್ನಾಟಕದ ಜೈನಧರ್ಮದ ಇತಿಹಾಸವೇ ಆಗಿದೆ. (ಸಾಲೆತೋರ ಬಿ.ವಿ., ೧೯೩೮, ಪು.೨) ಎಂಬ ವಿದ್ವಾಂಸರ ಅಭಿಪ್ರಾಯ ಕರ್ನಾಟಕದ ಜೈನಧರ್ಮದ ಪಾತ್ರವನ್ನು ನಿರೂಪಿಸುತ್ತದೆ. ಕರ್ನಾಟಕದಲ್ಲಿ ಜೈನಧರ್ಮ ಎಂದು ಆರಂಭವಾಯಿತು ಎಂದು ಹೇಳುವುದು ಕಷ್ಟ ಸಾಧ್ಯ. ಉತ್ತರ ಭಾರತದಲ್ಲಿ ೧೨ ವರ್ಷಗಳ ಕಾಲ ಕ್ಷಾಮ ಉಂಟಾದಾಗ ಜೈನಾಚಾರ್ಯ ಭದ್ರಬಾಹು ೧೨೦೦೦ ಮುನಿ ಸಂಘದೊಡನೆ ದಕ್ಷಿಣಕ್ಕೆ ಬರುತ್ತಾನೆ. ಭದ್ರಬಾಹುವಿನೊಡನೆ ಶಿಷ್ಯ ಚಂದ್ರಗುಪ್ತನೂ ಕಳ್ಪಪ್ಪುವಿಗೆ (ಶ್ರವಣಬೆಳಗೊಳ) ಬಂದನು. ಭದ್ರಬಾಹು ಭಟ್ಟಾರಕರು ಕಳ್ಪಪ್ಪುನಾಡನ್ನು ಸಮೀಪಿಸಿದಾಗ ತನ್ನ ಅವಸಾನ ಕಾಲ ಹತ್ತಿರವಾಯಿತೆಂದು ಶಿಷ್ಯ ಚಂದ್ರಗುಪ್ತನೊಡನೆ ಇಲ್ಲಿಯೇ ಉಳಿಯುತ್ತಾರೆ. ಶ್ರವಣಬೆಳಗೊಳಕ್ಕೆ ಬಂದು ನೆಲೆಸಿದಂದಿನಿಂದ ಜೈನಧರ್ಮ ಈ ಪ್ರದೇಶದಲ್ಲಿ ಅಭಿವೃದ್ಧಿಯಾಯಿತು. ಭದ್ರಬಾಹು ಮುನಿಗಳು ಸಮಾಧಿ ಮರಣ ಹೊಂದಿದ ಮೇಲೆ ಚಂದ್ರಗುಪ್ತನು ನಿಷಿಧಿ ಪೂಜಿಸುತ್ತ ಇಲ್ಲಿಯೇ ಇದ್ದನು. ದ್ರವಿಡ ದೇಶಕ್ಕೆ ಹೋಗಿದ್ದ ಮುನಿಸಂಘ ಪುನಹಃ ಬಂದು ಚಂದ್ರಗುಪ್ತನಿಗೆ ಸಂನ್ಯಾಸನ ಕೊಟ್ಟು ಹಿಂದುರಿಗಿತು ಎಂದು ಕ್ರಿ.ಶ. ೬೦೦ರ ಚಿಕ್ಕ ಬೆಟ್ಟದ ಶಾಸನ ಉಲ್ಲೇಖಿಸುತ್ತದೆ (ಎ.ಕ.ಸಂ. II I, ೧೯೭೩, ಪು.೧). ಭದ್ರಬಾಹು ಚಂದ್ರಗುಪ್ತರಿಗೆ ಸಂಬಂಧಿಸಿದಂತೆ ಅನೇಕ ಶಾಸನಗಳು (ಎ.ಕ. – II, ೨೬೧, ೨೬೪., ಎಕ. – II I, ನಂ.೧೪೭) ಉಲ್ಲೇಖಿಸುವುದರ ಜೊತೆಗೆ ಸಾಹಿತ್ಯಿಕ ಕೃತಿಗಳೂ ಭದ್ರಬಾಹು ಕರ್ನಾಟಕಕ್ಕೆ ಮುನಿಸಂಘದೊಡನೆ ಬಂದುದನ್ನು ಸಮರ್ಥಿಸುತ್ತದೆ. ಈ ಹಿನ್ನೆಲೆಯನ್ನು ಗಮನಿಸಿದರೆ ಕ್ರಿ.ಶ. ಪೂ. ೩ನೇ ಶತಮಾನದಲ್ಲಿಯೇ ಕರ್ನಾಟಕದಲ್ಲಿ ಜೈನಧರ್ಮ ಅಸ್ತಿತ್ವದಲ್ಲಿತೆಂಬುದನ್ನು ತಿಳಿಯುತ್ತದೆ. ಶಾಸನಗಳ ಆಧಾರದ ಜೊತೆಗೆ ಶ್ರವಣಬೆಳಗೊಳದ ಚಿಕ್ಕ ಬೆಟ್ಟಕ್ಕೆ ಚಂದ್ರಗಿರಿ ಎಂಬ ಹೆಸರು. ಚಂದ್ರಗಿರಿ ಬೆಟ್ಟದ ಮೇಲಿನ ಚಂದ್ರಗಿರಿ ಬಸದಿ, ಇದರ ಹೆಸರಿನಲ್ಲಿರುವ ಸಾಮ್ಯತೆ, ಅಲ್ಲಿನ ಭದ್ರಬಾಹು ಗುಹೆ ಮತ್ತು ಭದ್ರಬಾಹುವಿನ ಪಾದ ಚಿನ್ಹೆಗಳು ಇವೆಲ್ಲವೂ ಕರ್ನಾಟಕದಲ್ಲಿ ಕ್ರಿ.ಶ.ಪೂ. ೩ನೇ ಶತಮಾನದಲ್ಲಿ ಜೈನಧರ್ಮ ಅಸ್ತಿತ್ವದಲ್ಲಿತ್ತೆಂಬುದನ್ನು ತೋರಿಸುತ್ತದೆ. ಈ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಭದ್ರಬಾಹುವು ಮುನಿ ವೃಂದರೊಡನೆ ಶ್ರವಣಬೆಳಗೊಳಕ್ಕೆ ಬಂದನಂತರ ಜೈನಧರ್ಮ ಹರಡಿ ಅಭಿವೃದ್ಧಿಯಾಯಿತು ಎಂಬುದನ್ನು ಒಪ್ಪಬೇಕಾಗುತ್ತದೆ.

ತುಳುನಾಡಿನಲ್ಲಿ ಜೈನಧರ್ಮ: ತುಳುನಾಡಿನಲ್ಲಿ ಜೈನಧರ್ಮ ಎಂದು ಅಸ್ತಿತ್ವಕ್ಕೆ ಬಂದಿತೆಂಬುವುದರ ಬಗ್ಗೆ ಅಭಿಪ್ರಾಯಗಳು ಇವೆ. ಭದ್ರಬಾಹು ಭಟ್ಟಾರಕರ ಜೊತೆಗೆ ಉತ್ತರಭಾರತದಿಂದ ದಕ್ಷಿಣಭಾರತಕ್ಕೆ ಆಗಮಿಸಿದ ಜೈನಧರ್ಮ ಶ್ರವಣಬೆಳಗೊಳದಲ್ಲಿ ನೆಲೆ ನಿಂತಿದ್ದು ಅಲ್ಲಿಂದ ಅಭಿವೃದ್ಧಿಯಾಗುತ್ತ ಕಾಲಕ್ರಮೇಣ ಜೈನಧರ್ಮವು ೧೦೦ – ೨೦೦ ವರ್ಷಗಳೊಳಗೆ ಕ್ರಿ.ಶ. ೨ನೇ ಶತಮಾನಕ್ಕೆ ತುಳುನಾಡಿಗೆ ಬಂದಿತೆಂಬುದು ಗೋವಿಂದ ಪೈಗಳ ಅಭಿಪ್ರಾಯವಾಗಿದೆ (ನಾರಾಯಣ ಪಿ.ಕೆ. ಮತ್ತು ಕಯ್ಯಾರ ಕಿಞ್ಞಾಣ ರೈ (ಸಂ.), ೧೯೪೭, ಪು. ೪೧). ಈ ನಿ‌ಟ್ಟಿನಲ್ಲಿ ಸಾಲೆತೋರ, ಶ್ರೀಪಾದ ಶರ್ಮ, ಸೂರ್ಯನಾಥ ಕಾಮತ್, ಗುರುರಾಜ ಭಟ್, ಕೆ.ವಿ. ರಮೇಶ ಮೊದಲಾದ ವಿದ್ವಾಂಸರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿದ್ವಾಂಸರ ಅನಿಸಿಕೆಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ವಿದ್ವಾಂಸರ ಅಭಿಪ್ರಾಯದ ಜೊತೆಗೆ ಪುರಾತತ್ವ ಆಕರಗಳನ್ನು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ.

ಕದಂಬರು ಮೂಲತಃ ವೈದಿಕ ಮತಾವಲಂಬಿಗಳಾಗಿದ್ದರು. ಜೈನಧರ್ಮಕ್ಕೆ ಪ್ರೋತ್ಸಾಹ ನೀಡಿದ್ದರ ಜೊತೆಗೆ ವೈವಾಹಿಕ ಸಂಬಂಧವನ್ನು ಬೆಳೆಸಿದ್ದರು. ಕ್ರಿ.ಶ. ೮೯೭ರಲ್ಲಿ ಹಿರಣ್ಯಗರ್ಭ ಸಾಂತರಸು ಬನವಾಸಿಯ ಕದಂಬ ಕಾಮದೇವನ ಕುಮಾರಿ ಲಕ್ಷ್ಮೀದೇವಿಯನ್ನು ಮದುವೆಯಾಗಿದ್ದನು (ಸೂರ್ಯನಾಥ ಕಾಮತ್, ೧೯೯೨, ಪು. ೨೨೦). ಗೇರುಸೊಪ್ಪೆಯಲ್ಲಿ ಆಡಳಿತ ನಡೆಸಿದ ಮಹಾಮಂಡಳೇಶ್ವರ ಸಾಳುವರು (ನಾಗರಾಜಯ್ಯ ಹಂಪ, ೧೯೭೬, ಪು.೬) ತಮ್ಮನ್ನು ಕದಂಬಾನ್ವಯರೆಂದು ಹೇಳಿಕೊಂಡಿದ್ದಾರೆ. ಒಟ್ಟಾರೆ ಹೇಳುವದಾದಲ್ಲಿ ಕದಂಬರ ಆಳ್ವಿಕೆ ಆರಂಭವಾಗುವ ಹಂತದಲ್ಲಿ ತುಳುನಾಡಿನಲ್ಲಿ ಜೈನಧರ್ಮವು ನೆಲೆಯಾಗಿತ್ತೆಂದು ಹೇಳಬಹುದು. ಕಾಲಕ್ರಮೇಣ ಜೈನಧರ್ಮದ ಪ್ರಸಾರ ಹೆಚ್ಚಿದಂತೆಲ್ಲ ಜಿನಾಲಯಗಳನ್ನು ನಿರ್ಮಿಸಲಾಯಿತು. ಪ್ರಸ್ತುತ ಈ ಅಧ್ಯಯನ ಹಾಡುವಳ್ಳಿಗೆ ಸೀಮಿತವಾಗಿರುವುದರಿಂದ ಹಾಡುವಳ್ಳಿಯಲ್ಲಿ ಜೈನ ಧರ್ಮ ಎಂದು ಬಂದಿತೆಂದು ತಿಳಿಯುವುದು ಅವಶ್ಯಕ.

ಹಾಡುವಳ್ಳಿಯಲ್ಲಿ ಜೈನಧರ್ಮ ಹೇಗೆ ಉದಯಿಸಿತು ಎಂದು ಹೇಳುವುದು ಕಷ್ಟಸಾಧ್ಯ. ಇದು ಇನ್ನೂ ಶೋಧನೆಯಿಂದ ಕಂಡುಕೊಳ್ಳಬೇಕಾಗಿದೆ. ಜೈನಧರ್ಮ ತುಳುನಾಡಿಗೆ ಹೇಗೆ ಆಗಮಿಸಿತೆಂಬ ಬಗ್ಗೆ ಮೇಲೆ ಪ್ರಸ್ತಾಪಿಸಲಾಗಿದೆ. ಹಾಡುವಳ್ಳಿ ಗ್ರಾಮ ತುಳುನಾಡಿಗೆ ಒಳಪಟ್ಟಿದೆ. ಇದೇ ಅರಸು ಮನೆತನ ಆಳಿದ ಗೇರುಸೊಪ್ಪೆಯ ಸಾಳುವರು ತಮ್ಮನ್ನು ಕದಂಬಾನ್ವಯರೆಂದು ಹೇಳಿಕೊಂಡಿದ್ದಾರೆ (ನಾಗರಾಜಯ್ಯ ಹಂಪ, ೧೯೭೬, ಪು.೬). ಆದರೆ ಹಾಡುವಳ್ಳಿ ಅರಸರು ಕದಂಬಾನ್ವಯರು ಎಂದು ಹೇಳಲು ಯಾವುದೇ ಕುರುಹುಗಳು ದೊರೆತಿಲ್ಲ. ಬೀಳಗಿಯಲ್ಲಿ ದೊರೆತ ಎರಡು ಶಾಸನಗಳು ಹಾಡುವಳ್ಳಿಯ ಆಕಲಂಕ ಮಠವನ್ನು ಉಲ್ಲೇಖಿಸುತ್ತದೆ. ಇಲ್ಲಿ ಗುರುಪರಂಪರೆ ನೀಡುವಾಗ ಪ್ರಾರಂಭಿಕವಾಗಿ ಕುಂದುಕುಂದುಚಾರ್ಯರನ್ನು ಉಲ್ಲೇಖಿಸಿದೆ. ಕುಂದುಕುಂದುಚಾರ್ಯರೇ ತಪ್ಪಸ್ಸಿಗೆ ನಿಂತಿದ್ದರೆಂದು ಹೇಳಲಾಗಿದ್ದ ಕುಂದಾದ್ರಿ ಬೆಟ್ಟವು ಆಗುಂಬೆಯ ಬಳಿಯಿದೆ. ಕುಂದುಚಾರ್ಯರ ಸ್ಮರಣೆಗಾಗಿ ನಿರ್ಮಿಸಿರುವ ಕ್ರಿ.ಶ. ೧ – ೨ನೇ ಶತಮಾನದ ಜೈನಧರ್ಮವು ತುಳುನಾಡಿನಲ್ಲಿ ಇತ್ತೆಂದು ಹೇಳಿದರೂ (ಶೆಟ್ಟಿ ಎಸ್.ಡಿ., ೨೦೦೨, ಪು. ೫೧), ಈ ಶಿಲಾಪಾದುಕೆ ಇದೇ ಶತಮಾನದ್ದೆಂದು ಹೇಳುವುದು ಕಷ್ಟ. ಕದಂಬರ ಆಳ್ವಿಕೆ ಆರಂಭವಾಗುವಾಗ ಈ ಹಂತದಲ್ಲಿ ಜೈನಧರ್ಮ ನೆಲೆಸಿತ್ತೆಂಬ ಸಾಧ್ಯತೆಗಳು ಇವೆ. ಕದಂಬರು ಜೈನಧರ್ಮಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಿದ್ದರು ಎಂಬುದು ನಿರ್ವಿವಾದ. ಹಾಡುವಳ್ಳಿ ಗ್ರಾಮ ಅಂದು ತುಳುನಾಡಿಗೆ ಒಳಪಟ್ಟರೂ, ಹಾಡುವಳ್ಳಿ ಗ್ರಾಮದಲ್ಲಿ ನಮಗೆ ಪ್ರಾಚ್ಯವಸ್ತುಗಳ ಆಧಾರ ಸಿಗುವುದು ಪೂರ್ವ ಮಧ್ಯಕಾಲೀನದಿಂದ. ಅಂದರೆ ೧೩ನೇ ಶತಮಾನದಿಂದ ಎಂದು ಹೇಳಬಹುದು. ಶಾಸನಗಳ ಆಧಾರವನ್ನು ತೆಗೆದುಕೊಂಡಲ್ಲಿ ಕ್ರಿ.ಶ. ೧೪೦೮ರ ಶಾಸಜನ ಹಾಡುವಳ್ಳಿಯ ಅರಸರ ಆಳ್ವಿಕೆಯನ್ನು ನಿರೂಪಿಸುವ ಪ್ರಾಚೀನ ದಾಖಲೆಯಾಗಿದೆ (ಕ.ಇ. I, ನಂ.೩೮). ಹಾಡುವಳ್ಳಿಯ ಎರಡು ಕಂಚಿನ ಮೂರ್ತಿಶಿಲ್ಪಗಳು ಆದಿನಾಥ ಮತ್ತು ಬಾಹುಬಲಿ ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿದೆ. ಶೈಲಿಯ ದೃಷ್ಟಿಯಿಂದ ಇದರ ಕಾಲ ಪೂರ್ವ ಮಧ್ಯಕಾಲೀನ. ಒಟ್ಟಿನಲ್ಲಿ ಇಲ್ಲಿನ ಪ್ರಾಚ್ಯವಸ್ತುಗಳ ಆಧಾರದಲ್ಲಿ ಪೂರ್ವಮಧ್ಯಕಾಲೀನದಿಂದ ಜೈನಧರ್ಮ ಪ್ರಚಲಿತದಲ್ಲಿತೆಂದು ಹೇಳಬಹುದು.

ಹಾಡುವಳ್ಳಿಯ ಜೈನಧರ್ಮದ ಸ್ವರೂಪ

ಜೈನಧರ್ಮದಲ್ಲಿ ಎರಡು ಪಂಗಡಗಳಿವೆ. ೧. ಶ್ವೇತಾಂಬರ ೨. ದಿಗಂಬರ, ಶ್ವೇತಾಂಬರ ಪಂಥ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತವಿದ್ದರೂ ಪ್ರಾಚೀನ ಕರ್ನಾಟಕದಲ್ಲಿ ಶ್ವೇತಾಂಬರರು ಇದ್ದರೆಂಬುದಕ್ಕೆ ಶಾಸನಗಳ ಆಧಾರವಿದೆ (ಕೃಷ್ಣಭಟ್ ಹೆರೆಂಜೆ, ಶೆಟ್ಟಿ ಎಸ್.ಡಿ., ೨೦೦೦ ಪು. ೨೫). ದಿಗಂಬರ ಮತ್ತು ಶ್ವೇತಾಂಬರ ಪಂಥಗಳೆರಡು ಸೈದ್ಧಾಂತಿಕ ತತ್ವಗಳ ಸಮನ್ವಯದೊಂದಿಗೆ ಯಾಪನೀಯ ಪಂಥವು ಉದಯಿಸಿತು. ಇದು ಉತ್ತರ ಕರ್ನಾಟಕದ ಬಹುಭಾಗದಲ್ಲಿ ಪ್ರಚಾರ ಪಡೆದಿದೆ. ಒಟ್ಟಾರೆ ಕರ್ನಾಟಕದಲ್ಲಿ ದಿಗಂಬರ, ಶ್ವೇತಾಂಬರ, ಯಾಪನೀಯ ಪಂಥಗಳಿದ್ದರೂ, ಹಾಡುವಳ್ಳಿಯಲ್ಲಿ ಮಾತ್ರ ದಿಗಂಬರ ಪಂಥವೇ ಪ್ರಚಲಿತದಲ್ಲಿತ್ತು. ಇಲ್ಲಿನ ಶಾಸನಗಳು, ಬಸದಿಗಳು ಮತ್ತು ಇಲ್ಲಿನ ಮೂರ್ತಿಶಿಲ್ಪಗಳು ದಿಗಂಬರ ಪಂಥ ಇಲ್ಲಿ ಅಸ್ತಿತ್ವದಲ್ಲಿತ್ತೆಂಬುದರ ಬಗ್ಗೆ ಪ್ರಮುಖ ದಾಖಲೆಗಳಾಗಿವೆ.

ಹಾಡುವಳ್ಳಿಯ ಮುನಿ ಪರಂಪರೆ : ಹಾಡುವಳ್ಳಿಯಲ್ಲಿ ಪ್ರಸ್ತುತ ಯಾವ ಮಠವಿಲ್ಲದಿದ್ದರೂ ಅಲ್ಲಿ ಆಕಲಂಕ ಮಠ ಇತ್ತೆಂಬುದರ ಬಗ್ಗೆ ಬೀಳಗಿಯ ಎರಡು ಶಾಸನಗಳು ಉಲ್ಲೇಖಿಸಿವೆ (ರಾಮಭಟ್ಟ ಉಪ್ಪಂಗಳ, ೧೯೮೯, ಪು.೧೬). ಮಧ್ಯಯುಗೀನ ಕಾಲದಲ್ಲಿ ಹಾಡುವಳ್ಳಿಯಲ್ಲಿ ಅಕಳಂಕ ಮಠ ಪ್ರಸಿದ್ಧಿ ಪಡೆದಿತ್ತು. ಮುಂದೆ ಬೀಳಗಿಯಲ್ಲೂ, ಸ್ವಾದಿಯಲ್ಲೂ ಈ ಮಠದ ಶಾಖೆಗಳು ನಿರ್ಮಾಣಗೊಂಡವು. ಕುಂದು ಕುಂದಾಚಾರ್ಯರು, ಅನೇಕ ಗುರುಗಳಾದ ಬಳಿಕ ಚಾರುಕೀರ್ತಿ ಪಂಡಿತದೇವ, I ಶ್ರುತಕೀರ್ತಿ I, I ವಿಜಯಕೀರ್ತಿ II, ಶ್ರುತಕೀರ್ತಿ, II ವಿಜಯಕೀರ್ತಿ ನಂತರ ಅಕಲಂಕ ಚಂದ್ರಪ್ರಭ, ಅಕಲಂಕನ ಪರಂಪರೆಯಲ್ಲಿ II I ವಿಜಯಕೀರ್ತಿ, II ಅಕಲಂಕ, ಭಟ್ಟಾಕಳಂಕ ಈ ಮುನಿವೃಂದದ ಹೆಸರುಗಳು ಶಾಸನದಲ್ಲೇ ಉಲ್ಲೇಖಿತವಾಗಿದೆ. ಒಟ್ಟಾರೆ ಜೈನಧರ್ಮದ ಮುನಿ ಪರಂಪರೆ ಹಾಡುವಳ್ಳಿಯ ಜೀವಾಳ ಆಗಿತ್ತೆಂದು ಹೇಳಬಹುದು.

ಸಲ್ಲೇಖನ ಅಥವಾ ಸಮಾಧಿ ಮರಣ : ಇದು ಜೈನರು ಅಪೇಕ್ಷಿಸುವ ಆದರ್ಶ ಮರಣವಾಗಿದೆ. ವಾಸ್ತವವಾಗಿ ಸಲ್ಲೇಖನವೆಂಬುದು ಸಮಾಧಿ ಮರಣದ ಒಂದು ಪ್ರಬೇಧವಾಗಿದ್ದು ಇದನ್ನು ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ (ಚಿದಾನಂದಮೂರ್ತಿ, ೧೯೬೬, ಪು. ೯೨). ಈ ಸಲ್ಲೇಖನ ವೃತವನ್ನು ಆಚರಿಸುವ ವ್ಯಕ್ತಿ ಅನ್ನಪ್ರಸಾದಿಗಳನ್ನು ಬಿಟ್ಟು, ಎಲ್ಲ ವೈರಸಂಗಗಳನ್ನು ಬಿಟ್ಟು, ಪಂಚ ಪರಮೇಷ್ಠಿಗಳನ್ನ ಧ್ಯಾನಿಸುತ್ತ ಪ್ರಾಣತ್ಯಾಗ ಮಾಡಬೇಕಾಗುತ್ತದೆ.

ಉಪಸರ್ಗ ದುರ್ಬಿಕ್ಷೇ ಕುಜಾಯಾಂ ಚನಿಃ ಪ್ರತಿಕಾರೇ |
ಧರ್ಮಾಯ ತನು ವಿಮೋಚನ ಮಾಹುಃ ಸಲ್ಲೇಖನಾ ಮಾರ್ಯಃ

ಅಂದರೆ ಉಪಸರ್ಗ, ಬವರಗಾಲ, ವೃದ್ಧಾಪ್ಯ, ವಾಸಿಯಾಗದ ರೋಗ, ಉಂಟಾದಾಗ ಧರ್ಮರಕ್ಷಣೆಗಾಗಿ ತ್ಯಾಗ ಮಾಡುವುದನ್ನು ಸಲ್ಲೇಖನಾ ವೃತವೆಂದು ಸುಮಂತ ಭದ್ರಾಚಾರ್ಯರು ತಿಳಿಸಿದ್ದಾರೆ. (ಅಣ್ಣಾರಾಯ ಮಿರ್ಜಿ (ಅನು.), ೧೯೮೧, ಪು. ೫೧೬). ಹಾಡುಹಳ್ಳಿಯಲ್ಲಿ ಮಹಾಮಂಡಳೇಶ್ವರ ಗುರುರಾಯ ಒಡೆಯರ ಕುಮಾರನಾದ ಚೆನ್ನರಾಜನು ತನ್ನ ಆಯುಷ್ಯಾಸಾನವನ್ನು ಅರಿತು ಚುತಃಸಂಘದ ಸನ್ನಿದಿಯಲ್ಲಿ ಸಲ್ಲೇಖನಾ ವ್ರತವನ್ನು ಸ್ವೀಕರಿಸುತ್ತಾನೆ. ಆತನನ್ನು ವೃತದಿಂದ ವಿಮುಖಗೊಳಿಸಲು ರಾಜನು ಸ್ವತಃ ಪ್ರಯತ್ನ ಮಾಡಿದರೂ ಅದು ಫಲ ನೀಡುವುದಿಲ್ಲ. ಇಲ್ಲಿಯ ಶಾಸನ ಚೆನ್ನರಾಜನು ವೀರಶಯ್ಯಾಸ್ಥಿತನಾಗಿ ಪ್ರಾಣ ಬಿಟ್ಟನೆಂದು ಶಾಸನವು ದಾಖಲಿಸುತ್ತದೆ (ಕ.ಇ. I, ನಂ. ೬೬).

ಪ್ರಸ್ತುತ ಹಾಡುವಳ್ಳಿಯಲ್ಲಿ ಇಂಥಹ ಇನ್ನೊಂದು ಶಾಸನವೊಂದು ಸಲ್ಲೇಖನ ವೃತಾಚರಣೆ ಕುರಿತು ಉಲ್ಲೇಖಿಸುತ್ತದೆ. ಕ್ರಿ.ಶ. ೧೪೨೯ರಲ್ಲಿ ಹಾಡುವಳ್ಳಿಯ ಜಯಸೇನನ ಮಗನಾದ ಮಾಣಿಕ್ಯಸೇನ ಎನ್ನುವವನು ಚಿಕ್ಕವಯಸ್ಸಿನಲ್ಲಿಯೇ ವೈರಾಗ್ಯ ಬಂದು ಸಮಾದಿ ವೃತವನ್ನು ಹಿಡಿಯುತ್ತಾನೆ (ಅಣ್ಣಿಗೇರಿ ಎ.ಎಂ. ಮತ್ತು ಮೇವುಂಡಿ ಮಲ್ಲಾರಿ (ಸಂ.), ೧೯೬೧, ಪು. ೧೬೬). ಜನರು ಇದನ್ನು ಆಕ್ಷೇಪಿಸಿದರೂ ಸ್ವತಃ ತಾನೇ ಉಪದೇಶ ಮಾಡಿ ಜನರನ್ನು ಸಮಾಧಾನಪಡಿಸುತ್ತಾನೆ. ೩೩ ದಿನ ಉಪವಾಸವಿದ್ದು ಪ್ರಾಣತ್ಯಾಗ ಮಾಡುತ್ತಾನೆ. ಈ ಕ್ರಿಯೆ ಹಾಡುವಳ್ಳಿಯಲ್ಲಿ ಮಧ್ಯಕಾಲೀನದಲ್ಲಿ ಸಮಾಧಿ ಮರಣ ಅಥವಾ ಸಲ್ಲೇಖನ ವ್ರತ ಆಚರಣೆಯಲ್ಲಿತ್ತು ಎಂಬುದನ್ನು ಪ್ರಸ್ತುತಪಡಿಸುತ್ತದೆ.

ವಂಶ – ಗೋತ್ರ – ಸೂತ್ರ – ಪ್ರವರಗಳು ಇಲ್ಲಿ ರೂಢಿಯಲ್ಲಿತ್ತು. ವಂಶಗಳಲ್ಲಿ ಇಕ್ಷ್ವಾಕು ವಂಶ, ಕುರುವಂಶ, ಹರಿವಂಶ, ಉಗ್ರವಂಶ, ನಾಥವಂಶ ಎಂಬ ಆರು ವಂಶಗಳು ಇಲ್ಲಿ ಮುಖ್ಯವಾಗಿದೆ. ವೃಷಭನಿಂದ ಹಿಡಿದು ವರ್ಧಮಾನನವರೆಗೆ ಆಗಿಹೋದ ೨೪ ತೀರ್ಥಂಕರರು ಈ ಆರು ವಂಶಕ್ಕೆ ಸೇರಿದವರಾಗಿದ್ದಾರೆ. ಆದರೆ ಜೈನರು ಎಲ್ಲ ತೀರ್ಥಂಕರರನ್ನು ಸಮಾನವಾಗಿ ಪೂಜಿಸುತ್ತಾರೆ. ಆದರೂ ಆಯಾವಂಶದಲ್ಲಿ ಜನಿಸಿದ ತೀರ್ಥಂಕರರನ್ನು ತಮ್ಮ ಕುಲದೇವರೆಂದು ಸ್ವೀಕರಿಸುವ ಪದ್ಧತಿಯೂ ಇತ್ತು. ಹಾಡುವಳ್ಳಿಯ ಒಂದು ಶಾಸನ ಹಾಡುವಳ್ಳಿಯ ಜೈನ ಅರಸರು ಸೋಮವಂಶಕ್ಕೆ ಸೇರಿದ್ದು ಕಾಶ್ಯಪಗೋತ್ರದವರಾಗಿದ್ದರು ಎಂದು ಉಲ್ಲೇಖಿಸಿದೆ (ಎ.ಕ. V II I, ನಂ. ೧೬೩). ಆಯಾ ವಂಶದವರನ್ನು ಆಯಾ ವಂಶದ ತೀರ್ಥಂಕರರೆಂದು ಸ್ವೀಕರಿಸಿದ್ದಾರೆ. ಇಲ್ಲಿ ಧರ್ಮನಾಥ ಮತ್‌ಉತ ಮಲ್ಲಿನಾಥ ತೀರ್ಥಂಕರರನ್ನು ಸೋಮವಂಶದವರು ಪೂಜಿಸಬೇಕಿತ್ತು. ಆದರೆ ಹಾಡುವಳ್ಳಿಯಲ್ಲಿ ಚಂದ್ರನಾಥ, ಪಾರ್ಶ್ವನಾಥ, ನೇಮಿನಾಥ, ಜ್ವಾಲಮಾಲಿನಿ, ಪದ್ಮಾವತಿ ಪೂಜೆ ಹೆಚ್ಚಾಗಿ ನಡೆಯುತ್ತಿದ್ದು ಎಲ್ಲ ತೀರ್ಥಂಕರರನ್ನು ಯಾವುದೇ ವಂಶದವರು ಪೂಜಿಸಹುದೆಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.

ದಾನಗಳು : ಧರ್ಮದಿಂದ ಕರ್ಮಕ್ಷಯ ತನ್ಮೂಲಕ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಜೈನರ ನಂಬಿಕೆ. ಆಹಾರ, ಅಭಯ, ಶಾಸ್ತ್ರ, ಭ್ಯೆಷಜ ಹೀಗೆ ನಾಲ್ಕು ಪ್ರಕಾರದ ದಾನಗಳನ್ನು ಮಾಡಬೇಕೆಂದು ಜೈನಶಾಸ್ತ್ರ ಗ್ರಂಥಗಳು ಹೇಳುತ್ತವೆ (ಶಾಸ್ತ್ರೀ ಚಂದ್ರ ರಾಜೇಂದ್ರ (ಸಂ.), ೧೯೫೩, ಪು. ೬೪). ಈ ಪ್ರಕಾರದ ದಾನ ವ್ಯವಸ್ಥೆ ಇಂದಿಗೂ ಶ್ರವಣಬೆಳಗೊಳ, ಧರ್ಮಸ್ಥಳಗಳಲ್ಲಿ ಕಾಣುತ್ತೇವೆ. ಈ ದಾನವನ್ನು ಮಠವೇ ಮಾಡಬೇಕೆಂದಿಲ್ಲ ಪ್ರತಿಯೊಬ್ಬ ಜೈನ ಶ್ರಾವಕನೂ ತನ್ನ ಶಕ್ತಿಗನುಸಾರವಾಗಿ ಆಗಮ, ದ್ರವ್ಯ, ಕಾಲ ಮತ್ತು ದೇಶಕ್ಕನುಗುಣವಾಗಿ ಆಹಾರಾದಿ ದಾನಗಳನ್ನು ಮಾಡಬೇಕೆಂದಿದೆ (ಶಾಸ್ತ್ರೀ ಚಂದ್ರ ರಾಜೇಂದ್ರ (ಸಂ.), ೧೯೫೩, ಪು. ೬೪). ಸಮ್ಯಕ್‌ದರ್ಶನ, ಜ್ಞಾನ ಚರಿತ್ರೆಗಳನ್ನು ಸಾಧಿಸಬೇಕಾದರೆ ದಾನ ಒಂದು ಸಾಧನವಾಗಿದೆ. ಪ್ರಸ್ತುತ ಹಾಡುವಳ್ಳಿಯಲ್ಲಿ ಯಾವ ಯಾವ ಶಾಸನಗಳ ದಾನದ ವಿಷಯ ಉಲ್ಲೇಖಿಸುತ್ತವೆಯೆಂದು ಶಾಸನ ಶಿಲ್ಪಗಳು ಮತ್ತು ಸ್ಮಾರಕ ಶಿಲ್ಪಗಳ ಅಧ್ಯಾಯದಲ್ಲಿ ಜೈನ ದಾನ ಶಾಸನಗಳಲ್ಲಿ ವಿವರಿಸಲಾಗಿದೆ. ದಾನದ ಮಹತ್ವ ಎಷ್ಟಿತ್ತೆಂದರೆ ದಾನ ಶಾಸನಗಳೂ ಯಾರು ಹಾಳು ಮಾಡಬಾರದೆಂಬ ದೃಷ್ಟಿಯಿಂದ ಶಾಸನದ ಕೊನೆಯ ಭಾಗದಲ್ಲಿ ಶಾಪಾಶಯಗಳನ್ನು ಬರೆಸುತ್ತಿದ್ದರು. ಈ ಧರ್ಮ ದಾನಶಾಸನಗಳು ಹಾಳಾಗಬಾರದೆಂಬುದಷ್ಟೇ ಇದರ ತತ್ವ.

ಜೈನ ಆರಾಧನೆಗಳು : ಜೈನರಲ್ಲಿ ಜಿನ ಪೂಜೆಗೆ ಪ್ರಥಮ ಆಧ್ಯತೆ. ಈ ಉದ್ದೇಶದಿಂದಲೇ ಬಸದಿಯನ್ನು ನಿರ್ಮಿಸುತ್ತಾರೆ. ಜಿನ ಪ್ರತಿಮೆಯ ಜೊತೆಗೆ ಪಂಚಪರಮೇಷ್ಠಿಗಳ ಬಿಂಬ ನವದೇವತೆಗಳ ಪ್ರತಿಮೆ, ಯಕ್ಷ – ಯಕ್ಷಿಯರ ಬಿಂಬಗಳನ್ನು ಇಟ್ಟಿರುತ್ತಾರೆ. ಯಕ್ಷಿಯರಲ್ಲಿ ತುಳುನಾಡಿನಲ್ಲಿ ಪದ್ಮಾವತಿ, ಜ್ವಾಲಮಾಲಿನಿ ಯಕ್ಷಿಯರು ಕಾಣಬರುತ್ತವೆ. ಪ್ರಸ್ತುತ ಹಾಡುವಳ್ಳಿಯಲ್ಲಿ ಚವ್ವೀಶ ತೀರ್ಥಂಕರ, ಚಂದ್ರನಾಥ, ಜ್ವಾಲಮಾಲಿನಿ, ಪದ್ಮಾವತಿಯ ಆರಾಧನೆ ಹೆಚ್ಚಿತ್ತು. ಚೆನ್ನಾಭೈರಾದೇವಿಯು ಕ್ರಿ.ಶ. ೧೫೫೬ರ ಶಾಸನ (ಕ.ಇ. I, ೧೯೩೯ – ೪೦, ನಂ.೧೭), ಬಸದಿಯಲ್ಲಿನ ಅಮೃತಪಡಿ ಸೇವೆ, ಕಾರ್ತಿಕ ಪೂಜೆ, ಶಿವರಾತ್ರಿ ಜಿನದಯಾಷ್ಟಮಿ, ಯುಗಾದಿ, ಶ್ರುತಪಂಚಮಿ, ಶ್ರಾವಣಮಾಸದಲ್ಲಿ ಹಾಲಿನ ಅಭಿಷೇಕ, ಅಷ್ಟಾನ್ಹಿಕ ದಶಲಕ್ಷಣ ಪೂಜೆ, ಹಾಲಧಾರೆ ಮತ್ತು ಕಜ್ಜಾಯ ಸೇವೆ ನಡೆಸಿದ್ದನ್ನು ಶಾಸನದಲ್ಲಿ ದಾಖಲಿಸಿದೆ. ಈ ಎಲ್ಲ ಆರಾಧನೆಗಳು ಮತ್ತು ಸೇವೆಗಳು ಅಂದು ಹಾಡುವಳ್ಳಿಯ ಜೈನಧರ್ಮ ಪ್ರಚಲಿತವಿತ್ತೆಂಬುದನ್ನು ಸಾಬೀತುಪಡಿಸುತ್ತದೆ.

ತೀರ್ಥಂಕರರ ಪೂಜೆ ಮತ್ತು ಇಲ್ಲಿನ ಆರಾಧನೆ ಆಚರಣೆಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಶಾಸನಗಳು ದೊರಕಿಸಿಕೊಡುತ್ತವೆ. ಇಲ್ಲಿನ ಬಸದಿಗಳು, ನಿಸಿದಿಗಲ್ಲು, ಯಕ್ಷ – ಯಕ್ಷಿಯರು, ನಾಗಶಿಲ್ಪ ಈ ಎಲ್ಲ ಸ್ಮಾರಕಗಳು ಹಾಡುವಳ್ಳಿಯಲ್ಲಿ ಜಿನಧರ್ಮ ಗಳಿಸಿದ ಪ್ರಾಧಾನ್ಯತೆಯ ಪ್ರತಿಬಿಂಬಗಳಾಗಿವೆ. ಜೈನರು ಮೂಲತಃ ‘ಜೀವಿಸು – ಜೀವಿಸಗೊಡು’ ತತ್ವದವರು. ಈ ತತ್ವವೇ ಇಲ್ಲಿನ ಜೈನಧರ್ಮದ ಪ್ರಾಧಾನ್ಯತೆಯನ್ನು ಹೆಚ್ಚಿಸಿದೆ. ಹಾಡುವಳ್ಳಿ ಚೆನ್ನಾಭೈರಾದೇವಿಗೆ ಸಂಬಂಧಿಸಿದ ಉಪ್ಪುಂದದ ಶಾಸನವೊಂದು ಇಡೀ ಸೀಮೆಯೊಳಗಿನ ತೆರಿಗೆಯನ್ನು ಮನ್ನ ಮಾಡಿರುವ ವಿಷಯ ಮತ್ತು ಗೋಕರ್ಣದ ಮಹಾಬಲೇಶ್ವರ ದೇವರ ಧರ್ಮಕ್ಕೆ ಬಿಟ್ಟ ವಿಷಯವನ್ನು ತಿಳಿಸುತ್ತದೆ (ನರಸಿಂಹಮೂರ್ತಿ ಪಿ.ಎನ್., ೨೦೦೭, ಪು. ೩೧೨ – ೩೧೫). ಜೈನರ ಉಳಿದ ಧರ್ಮಗಳನ್ನು ಕಡೆಗಣಿಸುತ್ತಿರಲಿಲ್ಲವೆಂಬ ಬಗ್ಗೆ ಇದೊಂದು ನಿದರ್ಶನವಾಗಿದೆ. ಅವರ ರಾಜಕೀಯ ಜೀವನದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಧಾರ್ಮಿಕ ಸೇವೆ ಸಲ್ಲಿಸುವಾಗ ಯಾವುದೇ ವಿರೋಧವಿರಲಿಲ್ಲ. ಹಾಡುವಳ್ಳಿಯಲ್ಲಿ ಜೈನಧರ್ಮ ನಡೆದುಬಂದ ದಾರಿ ಇದು. ಹಾಡುವಳ್ಳಿಯಲ್ಲಿ ಜೈನಧರ್ಮದ ವೈಶಿಷ್ಟ್ಯತೆ ತಿಳಿಯಬೇಕಿದ್ದರೆ ಇಲ್ಲಿನ ಬಸದಿಗಳ ವಾಸ್ತುಕಲೆ, ಮೂರ್ತಿಶಿಲ್ಪ, ಲೋಹಶಿಲ್ಪ, ಮಠಗಳು ಸಾಮಾಜಿಕ ಸಂಸ್ಥೆಯಾಗಿ ಮಾಡಿದ ನಿರ್ವಹಣೆ ಮತ್ತು ಸಾಳುವ ಅರಸರಿಗೆ ಸಂಬಂಧಿಸಿದ ಶಾಸನಗಳನ್ನು ಅಧ್ಯಯನ ಮಾಡುವುದು ಅವಶ್ಯಕ.