ವಾಸ್ತುಕಲೆ

ವಾಸ್ತುಕಲೆ ಎಂದರೆ ವಾಸ್ತುಕೃತಿಯ ಕಲೆ, ವಾಸ್ತುಕೃತಿ ಎಂಬ ಶಬ್ದ ಇಲ್ಲಿ ಕಟ್ಟಡ ಪದಕ್ಕೆ ಸಮವಾಗುತ್ತದೆ. ಮನುಷ್ಯನ ಇರುವಿಕೆಗಾಗಿ ಕಟ್ಟುವುದು ಕಟ್ಟಡ. ಇರುವಿಕೆಯ ಕಟ್ಟಡವಿರಬಹುದು ಅಥವಾ ದೇವರನ್ನು ಇಡುವುದಕೋಸ್ಕರ ಮಾಡಿಕ ಕಟ್ಟಡವಿರಬಹುದು. ಇವೆರಡೂ ವಾಸ್ತು ಕಟ್ಟಡವೇ ಆಗಿದೆ. ವಾಸ್ತು ಎಂದರೆ ಕಟ್ಟಡ ಹೀಗೇ ಇರಬೇಕೆಂದಿದೆ. ಇದು ಅವರವರ ನಂಬಿಕೆಗೂ ಅನುಗಣವಾಗಿರುತ್ತದೆ. ದೇವಾಲಯ ಎಂದರೆ ದೇವರ ಆಲಯ ದೇವರ ಇರುವಿಕೆಗಾಗಿ ಪೂಜೆಗಾಗಿ ಕಟ್ಟಲ್ಪಟ್ಟ ಮಂದಿರ ಎಂದರ್ಥ. ದೇವರ ಮೂರ್ತಿ ಇಡುವ ಕಟ್ಟಡವೇ ಆಗಲಿ ಅಥವಾ ದೇವಾಲಯದ ಸಂಕೇತವಾಗಿ ಮಂದಿರ ನಿರ್ಮಾಣವೇ ಅಥವಾ ಮನುಷ್ಯನ ಇರುವಿಕೆಗಾಗಿ ಕಟ್ಟಿದ ಕಟ್ಟಡವೇ ಆದರೂ ಇವೆಲ್ಲವೂ ವಾಸ್ತುಕೃತಿಯ ಕಲೆಯೇ ಆಗಿದೆ. ಮಾನಸಾರ ಗ್ರಂಥದಲ್ಲಿ ವಾಸ್ತುಶಿಲ್ಪ ಎಂದರೆ ಕಟ್ಟಡ ನಿರ್ಮಾಣ, ಶಿಲ್ಪವೆಂದರೆ ಮೂರ್ತಿ ರಚನೆ ಎಂದಿದೆ (ತಿಪ್ಪೇರುದ್ರಸ್ವಾಮಿ ಎಚ್., ೧೯೮೫, ಪು. ೫೨೬).

ವೇದಕಾಲದಲ್ಲಿ ವೈದಿಕರು ಅಗ್ನಿರೂಪದಲ್ಲಿ ದೇವರನ್ನು ಪೂಜಿಸುತ್ತಿದ್ದರು. ದೇಹೋ ದೇವಾಲಯ ಪ್ರೋಕ್ಷಾಃ ವೇದೋಕ್ತಯಂತೆ ಧ್ಯಾನದಲ್ಲಿ ನಿರತರಾಗುತ್ತಿದ್ದರು. ಭಾರತದಲ್ಲಿ ಮೊದಲು ಪೂಜಾಗೃಹ ನಿರ್ಮಿಸಿದ ಕೀರ್ತಿ ಬೌದ್ಧರಿಗೆ ಸಲ್ಲುತ್ತದೆ. ಅಂದರೆ ಬೌದ್ಧ ಸ್ತೂಪಗಳೇ ಮೊದಲು ಪೂಜ್ಯ ವಸ್ತುಗಳಾದವು. ಪೂಜಿಸುವ ಸ್ತೂಪಗಳೇ ಮುಂದೆ ಚೈತ್ಯಾಲಯಗಳಾಗಿ ನಂತರ ಸ್ವಲ್ಪ ಬದಲಾವಣೆ ಮಾಡಿ ದೇವಾಲಯ ಜಿನಾಲಯ ನಿರ್ಮಿಸಿರಬೇಕು. ಕ್ರಿ.ಶ. ೨ – ೩ನೇ ಶತಮಾನದಲ್ಲಿ ಮೊಟ್ಟಮೊದಲಿಗೆ ಜೈನರು ತಮ್ಮದೇ ಆದ ಪೂಜಾಲಯ ನಿರ್ಮಿಸಿದರು. ವೇದಿಕೆಯ ಮೇಲೆ ಜಿನನ ಪಾದಗಳನ್ನಿಟ್ಟು ದೀಪ ಹಚ್ಚುತ್ತಿದ್ದರು (ಶ್ರೀನಿವಾಸನ್ ಕೆ.ಆರ್., ೧೯೭೫, ಪು.೧೬).

ತೀರ್ಥಂಕರರಿಗಾಗಿ ಕಟ್ಟಿದ ದೇವಾಲಯಗಳನ್ನು ಅಥವಾ ಜಿನಾಲಯವನ್ನು ಬಸದಿ ಎಂದು ಕರೆಯಲಾಗುತ್ತದೆ. ದೇವರ ಇರುವಿಕೆಗಾಗಿ ಕಟ್ಟಿದ ದೇವಾಲಯಗಳಂತೆ, ಜಿನಮುನಿಗಳ ಇರುವಿಕೆಗಾಗಿ ಕಟ್ಟಿದ ಮಂದಿರ ಜಿನಾಲಯ. ಇಲ್ಲಿ ಜಿನಮುನಿ ಅಂದರೆ ತೀರ್ಥಂಕರರು; ಜೈನರು ಸೃಷ್ಟಿಕರ್ತ ದೇವರನ್ನು ಒಪ್ಪುವುದಿಲ್ಲ. ಜೈನರು ತೀರ್ಥಂಕರರನ್ನು ಪೂಜಿಸುತ್ತಾರೆ. ಏಕೆಂದರೆ ಇವರು ಆದರ್ಶ ಮಾವನರು, ಪೂಜನೀಯರು. ಈ ದಿವ್ಯದತ್ತವಾದ ಕಲ್ಪನೆ ಸಮಾಜದ ಮೇಲೆ ಪ್ರಭಾವ ಬೀರಿದ್ದರಿಂದ ಇದೇ ಜಿನಾಲಯದ ಅಥವಾ ಬಸದಿಗಳ ರಚನೆಗೆ ಕಾರಣವಾಗಿರಬೇಕು. ಜಿನಾಲಯ ಜಿನಮುನಿಗಳಿಗಾಗಿ ಕಟ್ಟಿದ ವಸತಿ ಗೃಹ. ಸಂಸ್ಕೃತದ ಈ ವಸತಿ ಶಬ್ದ ವಸದಿಯಾಗಿ ಕಾಲಕ್ರಮೇಣ ಬಸದಿ ರೂಪ ಪಡೆಯಿತು. (ಶೆಟ್ಟಿ ಎಸ್.ಡಿ., ೧೯೯೯, ಪು.೩). ಕ್ರಿ.ಶ. ಪೂರ್ವದಿಂದಲೂ ಅವಶ್ಯಕ ನಿರುಕ್ತಿ ( ಗಾಂತೆ ೪೩೫) ಜಂಬುದ್ವೀಪ ಪಣ್ಣತ್ತಿ (೨ – ೩೩೩) ಗ್ರಂಥಗಳಲ್ಲಿ ತೀರ್ಥಂಕರರು ನಿರ್ವಾಣ ಹೊಂದಿದ ಬಳಿಕ ಸ್ತೂಪ, ಚೈತ್ಯ, ಜಿನಗೃಹಗಳನ್ನು ನಿರ್ಮಾಣ ಮಾಡುತ್ತಿದ್ದರು (ಹೀರಾಲಾಲ ಜೈನ, ೧೯೭೧, ಪು. ೩೭೧). ಭರತ ಚಕ್ರವರ್ತಿಯು ಅವರ ನೆನಪಿಗಾಗಿ ಕೈಲಾಸ ಪರ್ವತದ ಮೇಲೆ ಒಂದು ಚೈತ್ಯವನ್ನು ಸಿಂಹ ನಿಷದ್ಯ ಆಯತನ ನಿರ್ಮಾಣ ಮಾಡಿದ ಕುರಿತು ಉಲ್ಲೇಖವಿದೆ (ಹೀರಾಲಾಲ ಜೈನ, ೧೯೭೧, ಪು. ೩೭೯).

ಕರ್ನಾಟಕದಲ್ಲಿ ಬಸದಿ ಪದ ಪ್ರಯೋಗ ಮೊದಲು ಕ್ರಿ.ಶ. ೮ನೇ ಶತಮಾನದ ಶ್ರವಣಬೆಳಗೊಳದ ಶಾಸನದಲ್ಲಿ ದಾಖಲಿಸಿದೆ (ಎ.ಕ.೨. ನಂ. ೧೪೦). ನಂತರ ಕ್ರಿ.ಶ. ೮ – ೯ನೇ ಶತಮಾನದ ಸಂಪಿಗೆ ಮರದ ಶಾಸನದಲ್ಲಿ ಬಸದಿ ಶಬ್ದವಿದೆ (ಎ.ಕ. ೩, ಗುಂಪೇ. ೯೨). ಸ್ತೂಪದಿಂದ ಆರಂಭವಾಗಿ ಜನಿಮಂದಿರ ಜಿನಾಲಯವಾಗಿ ರೂಪ ಪಡೆಯಿತು. ಜೈನಧರ್ಮ ಉತ್ತರ ಭಾರತದಿಂದ ದಕ್ಷಿಣಕ್ಕೆ ಬರುವಾಗ ವೈವಿಧ್ಯತೆಯ ಲಕ್ಷಣಗಳನ್ನು ಒಟ್ಟುಗೂಡಿಸಿಕೊಂಡಿದ್ದವು. ಉದಾ. ತೀರ್ಥಂಕರರ ಮೂರ್ತಿ ನಿರ್ವಾಣ ಚೈತ್ಯಾಲಯ ರಚನೆ, ಯಕ್ಷ ಯಕ್ಷಿಯರು, ಬ್ರಹ್ಮಮೂರ್ತಿ, ನಾಗಶಿಲ್ಪ ರಚನೆ ಇವೆಲ್ಲವೂ ಉತ್ತರ ಭಾರತದಲ್ಲಿ ಬೆಳದೆ ಸಂಪ್ರದಾಯಗಳೇ ಆಗಿದ್ದವು. ಆದರೂ ಈ ಸಂಪ್ರದಾಯ ಕನ್ನಡ ನಾಡಿಗೆ ಬಂದ ನಂತರ ಕನ್ನಡ ನಾಡಿನ ಪ್ರಾದೇಶಿಕತೆಗೆ ಅನುಗುಣವಾಗಿ ಇಲ್ಲಿಯ ಸಂಪ್ರದಾಯ ಅಳವಡಿಸಿಕೊಂಡು ವಾಸ್ತುಶೈಲಿಯ ದೃಷ್ಟಿಯಿಂದ ಮಹತ್ವದ ಕೊಡುಗೆ ನೀಡಿದೆ. ವಾಸ್ತುಶಿಲ್ಪ ಕಲಾ ಪ್ರಕಾರಗಳು ಅಭಿವ್ಯಕ್ತಗೊಳ್ಳುವಾಗ ಆಯಾಯ ಕಾಲದ ಆಯಾಯ ಪ್ರದೇಶದ ವಾಸ್ತುಶಿಲ್ಪ ಶೈಲಿಯಲ್ಲಿ ಮೂಡಿಕೊಂಡಿರುತ್ತದೆ (ಶ್ರೀನಿವಾಸ ಪಾಡಿಗಾರ, ಜಿನತಿಲಕ, ಡಿಸೆಂಬರ್ ೨೦೦೪, ಜನವರಿ ೨೦೦೫, ಪು. ೧೧೪).

ಪ್ರಾರಂಭದ ಹಂತದಲ್ಲಿ ಬಸದಿಯ ಕಟ್ಟಡಗಳು ಗರ್ಭಗೃಹ ಹೊಂದಿದ್ದು ಕಾಲಕ್ರಮೇಣ ಸುಕನಾಸಿ, ಮಂಟಪ, ಮುಖಮಂಟಪಗಳ ರಚನೆ ಆಯಿತು. ಬಸದಿಯ ಮುಂದೆ ವಾಸ್ತುವಿನ ಅಂಗವಾಗಿ ಮಾನಸ್ತಂಬ, ಬ್ರಹ್ಮಸ್ತಂಬಗಳು ನಿರ್ಮಾಣವಾದವು. ಮಾನಸ್ತಂಬದ ಮೇಲೆ ಚಿಕ್ಕ ಮಂಟಪಗಳು ಖಡ್ಗಾಸನದಲ್ಲಿ ಜಿನಬಿಂಬವಿದ್ದರೆ, ಬ್ರಹ್ಮಸ್ತಂಬದಲ್ಲಿ ಕುಳಿತ ಬ್ರಹ್ಮನ ಮೂರ್ತಿ ಇರುತ್ತದೆ. ಇದು ಕರ್ನಾಟಕದಲ್ಲೇ ಜೈನ ವಾಸ್ತು ವಿಶೇಷತೆ.

ಕರ್ನಾಟಕದಲ್ಲಿ ಜೈನರ ಸೇವೆ ಮರೆಯುವಂತಿಲ್ಲ. ಕರ್ನಾಟಕದ ಎಲ್ಲಾ ಪ್ರಮುಖವಾದ ಅರಸು ಮನೆತನಗಳು ಕದಂಬರು, ಗಂಗರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು ಜೈನಧರ್ಮವನ್ನು ಪೋಷಿಸಿದ್ದಾರೆ. ವಿಜಯನಗರ ಕಾಲದಲ್ಲಿ ಸಾಮ್ರಾಜ್ಯ ಕಟ್ಟಲು ನೆರವಾದ ವೀರರಲ್ಲಿ ಜೈನರು ಪ್ರಮುಖರೆಂಬುದನ್ನು ಮರೆಯಲಾಗದು. ಕರ್ನಾಟಕದ ವಿವಿಧ ಭಾಗಗಳಲ್ಲಿ ಆಳಿದ ಹಲವು ಜಿನ ಸಾಮಂತರು ಜೈನರಾಗಿದ್ದಾರೆ. ಸಾಂಸ್ಕೃತಿಕವಾಗಿ ಕರ್ನಾಟಕದ ವಾಸ್ತುಶಿಲ್ಪವನ್ನು ಶ್ರೀಮಂತಗೊಳಿಸಿದ ಶ್ರವಣಬೆಳಗೊಳ (ಹಾಸನ ಜಿಲ್ಲೆ), ಹುಂಚ (ಶಿವಮೊಗ್ಗ ಜಿಲ್ಲೆ), ಗೇರುಸೊಪ್ಪೆ, ಬೀಳಗಿ, ಹಾಡುವಳ್ಳಿ (ಉತ್ತರಕನ್ನಡ ಜಿಲ್ಲೆ), ಮೂಡಬಿದಿರೆ, ಕಾರ್ಕಳ, ವೇಣೂರು (ಮಂಗಳೂರು ಜಿಲ್ಲೆ), ಇವು ಇಂದಿಗೂ ಜೈನ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ ಒಂದಾದ ಹಾಡುವಳ್ಳಿ ಗ್ರಾಮವನ್ನು ಸೀಮಿತವಾಗಿರಿಸಿಕೊಂಡು ಇಲ್ಲಿನ ಬಸದಿಗಳ ವಾಸ್ತುಕಲೆಯ ವಿಶೇಷತೆಗಳನ್ನು ಅರಿಯುವ ಪ್ರಯತ್ನ ಇದಾಗಿದೆ.

ಚಂದ್ರಗಿರಿ ಬೆಟ್ಟದ ಚಂದ್ರನಾಥ ಬಸದಿ

ಚಂದ್ರಗಿರಿ ಬೆಟ್ಟದ ಚಂದ್ರನಾಥ ಬಸದಿ ಪೂರ್ವಾಭಿಮುಖವಾಗಿದ್ದು ಹಾಡುವಳ್ಳಿ ಗ್ರಾಮದಿಂದ ೨ ಕಿ.ಮೀ.ಅಂತರದಲ್ಲಿದೆ. ಈ ಬಸದಿಯ ಉದ್ದಗಲ ೧೭.೨೦x೭.೬೫ ಮೀ ಇದೆ. ಚಂದ್ರನಾಥ ಬಸದಿಯ ಒಳಭಾಗ ಗರ್ಭಗೃಹ ಮಂಟಪೊ ಮುಖಮಂಟಪವನ್ನೊಳಗೊಂಡಿದೆ. ದೇವಾಲಯ ದೇವರ ಶರೀರವೆಂದರೆ ಗರ್ಭಗೃಹದಲ್ಲಿರುವ ಮೂರ್ತಿ ಆತ್ಮ, ಸಮಾನ (ಶ್ರೀನಿವಾಸ ಅಯ್ಯಂಗಾರ, ೧೯೭೮, ಪು. ೭೯). ಗರ್ಭಗೃಹ ಪ್ರದಕ್ಷಿಣಾಪಥವನ್ನೊಳಗೊಂಡಿದೆ. ಗರ್ಭಗೃಹದ ಲಲಾಟಬಿಂಬದಲ್ಲಿ ಯಾವುದೇ ಕೆತ್ತನೆಗಳಿಲ್ಲದೆ ಮೂಲಸ್ವರೂಪದಲ್ಲಿರುವುದೇ ಇದರ ವಿಶೇಷತೆ. ಗರ್ಭಗೃಹದ ಗುಣ ಶಾಂತ, ಏಕಾಂತ. ಪ್ರಸ್ತುತ ಈ ಗರ್ಭಗೃಹದಲ್ಲಿ ಯಾವುದೇ ಮೂರ್ತಿಯಿಲ್ಲ

ಪ್ರತಿ ಗರ್ಭಗೃಹದ ಮುಂದೆ ಅಂತರಾಳ ಅಥವಾ ಅರ್ಧಮಂಟಪವಿರಬೇಕು. ಇಲ್ಲಿ ಅರ್ಧಮಂಟಪವಿಲ್ಲದೇ ಉಪಮಂಟಪವಿದೆ. ಇದರ ಮುಂದಿನ ಭಾಗ ಸಭಾಮಂಟಪ ಅಂದರೆ

ಚಂದ್ರಗಿರಿ ಬೆಟ್ಟದ ಚಂದ್ರನಾಥ ಬಸದಿಯ ತಳವಿನ್ಯಾಸ

ಚಂದ್ರಗಿರಿ ಬೆಟ್ಟದ ಚಂದ್ರನಾಥ ಬಸದಿಯ ತಳವಿನ್ಯಾಸ

04_376_HJS-KUH

ಚಂದ್ರಗಿರಿ ಬೆಟ್ಟದ ಚಂದ್ರನಾಥ ಬಸದಿಯ ಮುಂಭಾಗದ ನೋಟ

 

ಸಭೆ ನಡೆಯುವ ಸ್ಥಳ. ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಸ್ಥಳ ಎಂದು ಹೇಳಬಹುದು. ಉಪಮಂಟಪದ ಮತ್ತು ಸಭಾಮಂಟಪದಲ್ಲಿನ ನಾಲ್ಕು ಸ್ತಂಭಗಳು ಒಂದೇ ಮಾದರಿಯಲ್ಲಿವೆ ಈ ಸ್ತಂಭಗಳು ಪೀಠದ ಮೇಲೆ ಚೌರಸದ ಮೇಲೆ ಲತಾ ಸುರುಳಿಯಿಂದ ಮೇಲೇರುತ್ತಾ, ಬೋದಿಗೆಗಳನ್ನೊಳಗೊಂಡಿದೆ. ಉಪಮಂಟಪ ಮತ್ತು ಸಭಾಮಂಟಪದ ಮೇಲ್ಛಾವಣೆ ಪದ್ಮವನ್ನೊಳಗೊಂಡಿದ್ದು, ಪಲ್ಮಾಲಂಕೃತದಲ್ಲಿ ವೈವಿಧ್ಯತೆ ಇದೆ. ಸಭಾಮಂಟಪದ ಬಾಗಿಲುವಾಡದ ಲಲಾಟಬಿಂಬದಲ್ಲಿ ನಿಂತ ತೀರ್ಥಂಕರರ ಬಿಂಬವಿದ್ದು ಬಾಗಿಲುವಾಡದ ದ್ವಾರದಲ್ಲಿ ದ್ವಾರಪಾಲಕರಿದ್ದಾರೆ. ಸಭಾಮಂಟಪದ ಮುಂದಿನ ಭಾಗವೇ ಮುಖಮಂಟಪ. ಇದರ ಉದ್ದಗಲ ೧೪.೭೫x೫.೩ ಕಿ.ಮೀ. ಮುಖಮಂಟಪದಿಂದ ಸಭಾಮಂಟಪಕ್ಕೆ ಹೋಗುವ ದ್ವಾರದ ಲಾಲಾಟ ಬಿಂಬದಲ್ಲಿ ಪಲ್ಯಂಕಾಸನದಲ್ಲಿ ಕುಳಿತ ತೀರ್ಥಂಕರರ ಬಿಂಬವಿದೆ. ದ್ವಾರದ ಎಡಬಲಕ್ಕೆ ಚೌರಿ ಹಿಡಿದ ಉಬ್ಬುಶಿಲ್ಪವಿದೆ. ಭಿತ್ತಿಯ ಬಲಭಾಗದಲ್ಲಿ ಖಡ್ಗಾಸನದಲ್ಲಿ ದೇಹ ದಂಡಿಸಿ ನಿಂತಿರುವ ತೀರ್ಥಂಕರನ ಉಬ್ಬುಶಿಲ್ಪವಿದೆ. ಮುಖಮಂಟಪದಲ್ಲಿನ ನಾಲ್ಕು ಸ್ತಂಭಗಳು ಸಭಾಮಂಟಪದ ಸ್ಥಂಬದ ಮಾದರಿಯಲ್ಲೇ ಇದ್ದು, ಬೋದಿಗೆಯಲ್ಲಿ ಕೆತ್ತನೆಯ ಸೌಂದರ್ಯತೆಯಲ್ಲಿ ವೈವಿಧ್ಯತೆ ಇದೆ. ಮುಖಮಂಟಪದ ಮತ್ತು ಸಭಾಮಂಟಪಕ್ಕೆ ಹೋಗುವಾಗ ಎಡಬಲಕ್ಕೆ ಕಟಾಂಜನ ಪದ್ಮಾಲಂಕೃತವಾಗಿದೆ.

ಚಂದ್ರಗಿರಿ ಬೆಟ್ಟದ ಚಂದ್ರನಾಥ ಬಸದಿಯ ಸಭಾಮಂಟಪ

ಚಂದ್ರಗಿರಿ ಬೆಟ್ಟದ ಚಂದ್ರನಾಥ ಬಸದಿಯ ಸಭಾಮಂಟಪ

 ಚಂದ್ರನಾಥ ಬಸದಿಯ ಹೊರಭಾಗ ಅಧಿಷ್ಠಾನ, ಹೊರಪ್ರದಕ್ಷಿಣಾ ಪಥ, ಅದರ ಸುತ್ತಲೂ ಸ್ತಂಬಗಳು ಚೌಕಾಕಾರ, ಅಷ್ಟಕೋನ ಚೌಕಾರವಾಗಿ ಮೇಲೇರುತ್ತ ತೊಲೆಭಾರವನ್ನು ಹೊತ್ತಿವೆ. ಅಧಿಷ್ಠಾನದ ಎತ್ತರ ೮೫ ಸೆ.ಮೀ ಮೇಲೆ ಇನ್ನೊಂದು ಅಧಿಷ್ಠಾನವಿದ್ದು ಮಂಚಬಂಧ ಮಾದರಿಯಲ್ಲಿದೆ. ಈ ಅಧಿಷ್ಠಾನದ ಭಿತ್ತಿಯ ಸುತ್ತಲೂ ೨೪ ಕೂಡ್ಯ ಸ್ತಂಬಗಳಿದ್ದು ಪ್ರತಿ ಕೂಡ್ಯಸ್ತಂಬದ ಮುಂಭಾಗದಲ್ಲಿ ಮೇಲೆ ಖಡ್ಗಾಸನದಲ್ಲಿ ನಿಂತ ತೀರ್ಥಂಕರರ ಬಿಂಬವಿದೆ. ಲಂಬಾಕಾರದಲ್ಲಿ ಸಿಸ್ಟ್‌ಕಲ್ಲನ್ನು ಭಿತ್ತಿಗೆ ಹಾಕಲಾಗಿದೆ. ಮೇಲಿನ ಕಪೋತ ಇಳಿಜಾರಾಗಿದ್ದು, ಮುಖಮಂಟಪದ ಕಪೋತದ ಮೇಲೆ ಎಡಬಲಕ್ಕೆ ಎರಡು ಕೋತಿಗಳು ಮಲಗಿ ಕೆಳಗೆ ಇಣುಕಿ ನೋಡುವ ದೃಶ್ಯವಿದೆ. ಚಂದ್ರನಾಥ ಬಸದಿಯ ಮೇಲ್ಭಾಗದಲ್ಲೂ ಆಯತಕಾರದ ಕಟ್ಟಡವಿದ್ದು ಗರ್ಭಗೃಹ, ಮಂಟಪವನ್ನೊಳಗೊಂಡಿದೆ. ಗರ್ಭಗೃಹದಲ್ಲಿ ಯಾವುದೇ ಮೂರ್ತಿಶಿಲ್ಪಗಳಿಲ್ಲ. ಮೇಲ್ಛಾವಣಿ ಸಿಸ್ಟ್‌ಕಲ್ಲಿನಿಂದ ವಿಸ್ತೃತವಾಗಿ ಹಾಸಲಾಗಿದೆ. ಈ ಬಸದಿ ಭಟ್ಕಳದಲ್ಲಿನ ಜಟಪ್ಪ ನಾಯಕ ಬಸದಿಯನ್ನು ಹೋಲುತ್ತದೆ.

ಚಂದ್ರನಾಥ ಬಸದಿ

ಈ ಬಸದಿ ಹಾಡುವಳ್ಳಿ ಗ್ರಾಮದಲ್ಲಿ ಪೂರ್ವಾಭಿಮುಖವಾಗಿದೆ. ಈ ಬಸದಿಯ ಉದ್ದ ಅಗಲ ೧೮.೫೫x೫.೪೦ ಮೀ. ಇದೆ. ಬಸದಿಯ ಒಳಭಾಗದಲ್ಲಿ ಗರ್ಭಗೃಹ, ಸಭಾಮಂಟಪ,

ಚಂದ್ರನಾಥ ದೇವ ಬಸದಿಯ ತಳವಿನ್ಯಾಸ

ಚಂದ್ರನಾಥ ದೇವ ಬಸದಿಯ ತಳವಿನ್ಯಾಸ

ಹೊರಾಂಗಣ ಮಂಟಪವನ್ನೊಳಗೊಂಡಿದೆ. ಗರ್ಭಗೃಹದಲ್ಲಿ ಚಂದ್ರನಾಥನ ಮೂರ್ತಿಶಿಲ್ಪವಿದೆ. ಸಭಾಮಂಟಪದಲ್ಲಿ ನಾಲ್ಕು ಸ್ತಂಭಗಳಿದ್ದು, ಸಭಾಮಂಟಪದ ಭುವನೇಶ್ವರಿ ಹೊರಾವರಣ ಮಂಟಪದಲ್ಲಿ ಮೇಲ್ಛಾವಣಿಯಲ್ಲಿ, ಮೂರು ಪದ್ಮಗಳಲ್ಲಿ ವೈವಿಧ್ಯತೆ ಇದೆ. ಸಭಾಮಂಟಪಕ್ಕೆ ಹೋಗುವ ಎಡಬಲದಲ್ಲಿ ಭಿತ್ತಿಯ ಮೇಲೆ ಹೂವಿನ ಕೆತ್ತನೆಗಳಿವೆ. ದ್ವಾರದ ಮೇಲೆ ನಾಗಾಲಂಕೃತ ತೋರಣವಿದೆ. ಸಭಾಮಂಟಪ, ಹೊರಮಂಟಪದ ಸ್ಥಂಬಗಳಲ್ಲೂ ವೈವಿಧ್ಯತೆ ಇದೆ.

೧.ಪೀಠದ ಮೇಲೆ ಚೌಕಾಕಾರ, ವೃತ್ತಾಕಾರ, ಸೂಕ್ಷ್ಮಮಣಿ ಸರದ ಕೆತ್ತನೆ, ಮೇಲೆ ವರ್ತುಲಾಕಾರವಾಗಿ ಮೇಲೇರುತ್ತ ಬೋಧಿಗೆಯನ್ನೊಳಗೊಂಡಿದೆ.

ಚಂದ್ರನಾಥದೇವ ಬಸದಿಯ ಹೊರಮಂಟಪ

ಚಂದ್ರನಾಥದೇವ ಬಸದಿಯ ಹೊರಮಂಟಪ

 

೨. ಪೀಠದ ಮೇಲೆ ಚೌಕಾಕಾರ, ೧೬.೩೨ ಕೋನ ಮೇಲೇರುತ್ತಾ ಚೌಕಾಕಾರವಾಗಿ ಮೇಲೆ ತೊಲೆಯನ್ನು ಹೊತ್ತಿದೆ.

೩. ಪೀಠದ ಮೆಲೆ ಚೌಕಾಕಾರ, ಅಷ್ಟಕೋನದ ಮೆಲೆ ಅಮೂಲಕ ಮೇಲೆ ಬೋಧಿಗೆಯಿದೆ.

೪. ಚೌಕಾಕಾರದ ಪೀಠ, ಚೌರಸ, ಅಷ್ಟ ಮತ್ತು ಚೌಕಾಕಾರ ಬೋಧಿಗೆ ತೊಲೆ ಹೊತ್ತಿದೆ.

ಚಂದ್ರನಾಥ ಬಸದಿಯ ಹೊರಭಾಗ ಅಧಿಷ್ಠಾನ, ಪ್ರದಕ್ಷಿಣಾ ಪಥವನ್ನೊಳಗೊಂಡಿದೆ. ಅಧಿಷ್ಠಾನದ ಸುತ್ತಲೂ ಉತ್ತರಕ್ಕೆ ಆರು, ದಕ್ಷಿಣಕ್ಕೆ ಆರು, ಪಶ್ಚಿಮಕ್ಕೆ ನಾಲ್ಕು ಮತ್ತು ಪೂರ್ವಕ್ಕೆ ನಾಲ್ಕು ಸ್ತಂಭಗಳಿವೆ. ಈ ಸ್ತಂಭಗಳು ಇಳಿಜಾರಾದ ಮಾಡಿನ ಭಾರವನ್ನು ಹೊತ್ತಿವೆ. ಮಾಡನ್ನು ಸಿಸ್ಟ್‌ಕಲ್ಲಿನಿಂದ ವಿಸ್ತೃತವಾಗಿ ಹಾಸಲಾಗಿದೆ. ಇಲ್ಲಿಯ ಹವಾಮಾನ ಕರಾವಳಿ ಭಾಗವಾದದ್ದರಿಂದ ಹೆಚ್ಚಿನ ಮಳೆ ಬೀಳುವ ಕಾರಣ, ರಕ್ಷಣೆಗಾಗಿ ಈ ರೀತಿಯ ಇಳಿಜಾರದ ಮಾಡು ರಚಿಸುವ ಸಾಧ್ಯತೆ ಇದೆ. ಇಳಿಜಾರಾದ ಮಾಡು ಈ ಭಾಗದ ವಾಸ್ತು ಲಕ್ಷಣಗಳಾಗಿದೆ. ಭಿತ್ತಿಯಲ್ಲಿ ಯಾವುದೇ ಅಲಂಕಾರಕ್ಕೆ ಪ್ರಾಧಾನ್ಯತೆ ನೀಡಿಲ್ಲ.

ಒಟ್ಟಾರೆ ದೀರ್ಘ ಆಯತಕಾರದ ತಳವಿನ್ಯಾಸ, ವಿಸ್ತೃತವಾಗಿ ಸಿಸ್ಟ್‌ಕಲ್ಲಿನ ಇಳಿಜಾರಾದ ಮಾಡು, ಸ್ತಂಭಗಳಲ್ಲಿ, ಮೇಲ್ಛಾವಣಿಯ ಪದ್ಮಾಲಂಕೃತಗಳಲ್ಲಿ ವೈವಿಧ್ಯತೆ ಇವು ಈ ಬಸದಿಯ ವೈಶಿಷ್ಟ್ಯವಾಗಿದೆ.

ಚಂದ್ರನಾಥಸ್ವಾಮಿ ಬಸದಿ

ಪ್ರಸ್ತುತ ಚಂದ್ರನಾಥ ಬಸದಿ ಲ್ಯಾಟರೈಟ್ (ಜಂಬಿಟ್ಟಿಗೆ) ಕಲ್ಲಿನಿಂದ ಆವೃತವಾಗಿದೆ. ಇದು ಚವ್ವೀಶ ತೀರ್ಥಂಕರ ಬಸದಿಯ ಆವರಣದ ಮುಂಭಾಗದಲ್ಲಿ ಇದೆ. ಈ ಬಸದಿಯ ಉದ್ದಗಲ ೧೧.೭೦x೫.೭೦ ಮೀ. ಇದ್ದು ಪೂರ್ವಾಭಿಮುಖವಾಗಿದೆ. ಬಸದಿಯು ಗರ್ಭಗೃಹ ಮತ್ತು ಉಪಮಂಟಪವನ್ನೊಳಗೊಂಡಿದೆ. ಬಸದಿಯ ಒಳಗೆ ಚಂದ್ರನಾಥನ ಎಡಕ್ಕೆ ನೇಮಿನಾಥ ಮೂರ್ತಿಶಿಲ್ಪವಿದೆ. ಚಂದ್ರನಾಥ ಮತ್ತು ಇಲ್ಲಿನ ಇನ್ನೆರಡು ತೀರ್ಥಂಕರ ಮೂರ್ತಿಗಳು ಮಾರ್ಬಲ್ ಕಲ್ಲಿನಿಂದ ಮಾಡಲ್ಪಟ್ಟಿದ್ದು ಇದು ವಿಜಯನಗರೋತ್ತರ ಕಾಲದ್ದಾಗಿದೆ. ಈ ಎರಡು ತೀರ್ಥಂಕರ ಮೂರ್ತಿಗಳು ಭಿತ್ತಿಗೆ ತಾಗಿ ಇಡಲ್ಪಟ್ಟಿದೆ. ಭಿತ್ತಿ ಮತ್ತು ಮಂಟಪದಲ್ಲಿ ಯಾವುದೇ ಕೆತ್ತನೆಗಳಿಲ್ಲ. ಇದೇ ಆವರಣದಲ್ಲಿ ಈ ಬಸದಿಯ ಮುಂದೆ ವಾಸ್ತುವಿನ ಭಾಗವಾಗಿ ಮಾನಸ್ತಂಬವಿದೆ.

ಚಂದ್ರನಾಥ ಬಸದಿಯ ಗರ್ಭಗೃಹ

ಚಂದ್ರನಾಥ ಬಸದಿಯ ಗರ್ಭಗೃಹ

ಪಾಳುಬಿದ್ದ ಪಾಶ್ವನಾರ್ಥ ಬಸದಿ

ಪಾರ್ಶ್ವನಾಥ ಬಸದಿ ಉತ್ತರಾಭಿಮುಖವಾಗಿದ್ದು ಸಿಸ್ಟ್‌ಕಲ್ಲಿನಿಂದ ಆವೃತ್ತವಾಗಿದೆ. ಈ

ಪಾಳುಬಿದ್ದ ಪಾರ್ಶ್ವನಾಥ ಬಸದಿಯ ತಳವಿನ್ಯಾಸ

ಪಾಳುಬಿದ್ದ ಪಾರ್ಶ್ವನಾಥ ಬಸದಿಯ ತಳವಿನ್ಯಾಸ

ಬಸದಿಯ ಉದ್ದಗಲ ೯.೫೫x೬.೨೦ ಮೀ. ಇದೆ. ಹೆಚ್ಚಿನ ಭಾಗ ಪಾಳು ಬಿದ್ದಿದ್ದರಿಂದ ಗರ್ಭಗೃಹದಲ್ಲಿ ಪಾರ್ಶ್ವನಾಥ ಮೂರ್ತಿಯನ್ನು ಸ್ಥಳಾಂತರಿಸಲಾಗಿದೆ. ಪಾರ್ಶ್ವನಾಥ ಬಸದಿಯು ಗರ್ಭಗೃಹ, ಉಪಮಂಟಪ ಪ್ರದಕ್ಷಿಣಾಪಥವನ್ನೊಳಗೊಂಡಿದೆ. ಗರ್ಭಗೃಹದ ಲಾಲಾಟ ಆಲಂಕೃತವಿಲ್ಲದೆ ಮೂಲರೂಪದಲ್ಲಿದೆ. ಉಪಮಂಟಪ ಪ್ರವೇಶಿಸುವಾಗ ಲಲಾಟ ಬಿಂಬದಲ್ಲಿ ಹೂವಿನ ಕೆತ್ತನೆ ಇದೆ. ಗರ್ಭಗೃಹವನ್ನು ಲ್ಯಾಟರೈಟ್ ಕಲ್ಲಿನಿಂದ ಕಟ್ಟಲಾಗಿದೆ. ಹೊರಪ್ರದಕ್ಷಿಣಾ ಪಥದಲ್ಲಿ ಸುತ್ತಲೂ ಹಿಂಭಾಗದಲ್ಲಿ ನಾಲ್ಕು ಸ್ತಂಭಗಳು ಎಡ ಮತ್ತು ಬಲಕ್ಕೆ ಆರು ಸ್ತಂಭಗಳಿವೆ. ಹೊರಾಂಗಣ ಅಧಿಷ್ಠಾನ ಹೊರಪ್ರದಕ್ಷಿಣಾ ಪಥ, ಮೇಲ್ಭಾಗದಲ್ಲಿ ಇಳಿಜಾರಾದ ಸಿಸ್ಟ್‌ಕಲ್ಲಿನ ಮಾಡು ಇಲ್ಲಿನ ವೈಶಿಷ್ಟ್ಯತೆಗಳಾಗಿವೆ.

ಪಾರ್ಶ್ವನಾಥ ಬಸದಿಯ ಪಾರ್ಶ್ವನೋಟ

ಪಾರ್ಶ್ವನಾಥ ಬಸದಿಯ ಪಾರ್ಶ್ವನೋಟ

ಪಾರ್ಶ್ವನಾಥ ಬಸದಿಯ ಮೂರ್ತಿ ಶಿಲ್ಪಕ್ಕೆ ರಕ್ಷಣೆ ಇರದಿದ್ದರಿಂದ ಪಾರ್ಶ್ವನಾಥ ಗೌಡರ ಮನೆಯ ಆವರಣದಲ್ಲಿ ಪ್ರತ್ಯೇಕ ಕಟ್ಟಡ ಕಟ್ಟಿ ಗರ್ಭಗೃಹದಲ್ಲಿ ಇಡಲಾಗಿದೆ. ಈ ಹೊಸ ಕಟ್ಟಡ ಗರ್ಭಗೃಹ, ಮಂಟಪವನ್ನೊಳಗೊಂಡಿದೆ.

ಪಾಳುಬಿದ್ದ ಪಾರ್ಶ್ವನಾಥ ಬಸದಿಯ ಸಾಮಾನ್ಯ ನೋಟ

ಪಾಳುಬಿದ್ದ ಪಾರ್ಶ್ವನಾಥ ಬಸದಿಯ ಸಾಮಾನ್ಯ ನೋಟ

ಪಾಳುಬಿದ್ದ ಚಂದ್ರನಾಥ ಬಸದಿ

ಚಂದ್ರನಾಥ ಬಸದಿಯ ತಳವಿನ್ಯಾಸ

ಚಂದ್ರನಾಥ ಬಸದಿಯ ತಳವಿನ್ಯಾಸ

ಚಂದ್ರನಾಥ ಬಸದಿಯ ಉದ್ದಗಲ ೧೬.೭೫x೫.೨೦ ಮೀ. ಇದ್ದು ಪೂರ್ವಾಭಿಮುಖವಾಗಿದೆ. ಈ ಬಸದಿ ಗರ್ಭಗೃಹ ಪ್ರದಕ್ಷಿಣಾ ಪಥವನ್ನೊಳಗೊಂಡಿದ್ದು ಗರ್ಭಗೃಹದಲ್ಲಿ ಚಂದ್ರನಾಥ ದೇಹದಂಡಿಸಿ ಖಡ್ಗಾಸನದಲ್ಲಿದೆ. ಹೊರ ಪ್ರದಕ್ಷಿಣಾಪಥದ ಅರ್ಧಮಂಟಪದವರೆಗೆ ಲ್ಯಾಟರೈಟ್ ಕಲ್ಲಿನಿಂದ ಮಾಡಲ್ಪಟ್ಟ ಭಿತ್ತಿ ಇದೆ. ಮುಂಭಾಗದ ದೀರ್ಘ ಆಯತಾಕಾರದ ಅಧಿಷ್ಠಾನ ಮಾತ್ರ ಉಳಿದಿದೆ.

ಪಾಳುಬಿದ್ದ ಚಂದ್ರನಾಥ ಬಸದಿಯ ಸಾಮಾನ್ಯ ನೋಟ

ಪಾಳುಬಿದ್ದ ಚಂದ್ರನಾಥ ಬಸದಿಯ ಸಾಮಾನ್ಯ ನೋಟ

ಚಂದ್ರನಾಥ ಬಸದಿಯ ಆವರಣದಲ್ಲೇ ಬಲಭಾಗಕ್ಕೆ ನವೀಕರಿಸಲ್ಪಟ್ಟ ವೀರಮಾಸ್ತಿ ಗುಡಿ ಇದೆ. ಸ್ಥಳೀಯವಾಗಿ ವೀರಮಾಸ್ತಿ ಎಂದು ಕರೆದರೂ ಮಾಸ್ತಿಯ ಸಂಕೇತ ಇಲ್ಲಿಲ್ಲ. ಬಹುಶಃ ವೀರ ಮಹಿಳೆಗಾಗಿ ಕಟ್ಟಿಸಿದ ಗುಡಿ ಇರಬಹುದು. ಈ ಗುಡಿ ಗರ್ಭಗೃಹ, ಮಂಟಪವನ್ನೊಳಗೊಂಡಿದೆ. ಮೇಲ್ಛಾವಣಿ ಕಮಾನಿನ ಆಕಾರದಲ್ಲಿದೆ. ಕಮಾನಿನ ಆಕಾರದಲ್ಲಿದ್ದ ಮೇಲ್ಛಾವಣಿಗೆ ಕಾವಿಕಲೆಯ ಚಿತ್ರಣವಿದೆ. ಮೇಲ್ಛಾವಣಿ ಹೂಗಳಿಂದ ಆವೃತ್ತವಾಗಿದ್ದು ಭಿತ್ತಿಯಲ್ಲಿ ಒಂದು ಭಾಗದಲ್ಲಿ ಖಡ್ಗಾಸನದಲ್ಲಿ ತೀರ್ಥಂಕರ ಬಿಂಬದ ಚಿತ್ರವಿದೆ.

ವೀರಮಾಸ್ತಿ ಗುಡಿಯ ಸಭಾಮಂಟಪದ ಮೇಲ್ಛಾವಣೆಯ ಕಾವಿ ಕಲೆ

ವೀರಮಾಸ್ತಿ ಗುಡಿಯ ಸಭಾಮಂಟಪದ ಮೇಲ್ಛಾವಣೆಯ ಕಾವಿ ಕಲೆ

 

ನೇಮಿನಾಥ ಬಸದಿ

ನೇಮಿನಾಥ ಬಸದಿಯ ತಳವಿನ್ಯಾಸ

ನೇಮಿನಾಥ ಬಸದಿಯ ತಳವಿನ್ಯಾಸ

ಗರ್ಭಗೃಹದಲ್ಲಿ ನೇಮಿನಾಥ ಮತ್ತು ಪಾರ್ಶ್ವನಾಥ

ಗರ್ಭಗೃಹದಲ್ಲಿ ನೇಮಿನಾಥ ಮತ್ತು ಪಾರ್ಶ್ವನಾಥ

 

ಚಂದ್ರನಾಥ ದೇವ ಬಸದಿಯ ಆವರಣದಲ್ಲಿ ಬಲಭಾಗಕ್ಕೆ ನೇಮಿನಾಥ ಬಸದಿ ಇದ್ದು ಉತ್ತರಾಭಿಮುಖವಾಗಿದೆ. ಉದ್ದಗಳ ೮.೭೦ x ೪.೭೦ ಮೀ. ಇದೆ. ಲ್ಯಾಟರೈಟ್ ಕಲ್ಲಿನಿಂದ ಕಟ್ಟಲಾಗಿದೆ. ಈ ಬಸದಿ ಗರ್ಭಗೃಹ, ಪ್ರದಕ್ಷಿಣಾಪಥ ಮತ್ತು ಅರ್ಧಮಂಟಪವನ್ನೊಳಗೊಂಡಿವೆ. ಗರ್ಭಗೃಹ ಚೌಕಾಕಾರವಾಗಿದ್ದು, ಗರ್ಭಗೃಹದ ಹೊರಭಿತ್ತಿಗಳಲ್ಲಿ ದಕ್ಷಿಣ, ಪೂರ್ವ, ಪಶ್ಚಿಮ ದಿಕ್ಕಿಗೆ ಗೂಡುಗಳಿವೆ. ಗರ್ಭಗೃಹ ಚೌಕಾಕಾರವಾಗಿದ್ದು ಮಧ್ಯದಲ್ಲಿ ನೇಮಿನಾಥ, ನೇಮಿನಾಥ ಮೂರ್ತಿಯ ಎಡಭಾಗದಲ್ಲಿ ಪೂರ್ವಾಭಿಮುಖವಾಗಿ ಪಾರ್ಶ್ವನಾಥನ ಮೂರ್ತಿ ಇದೆ. ಹೊರಭಾಗ ಅಧಿಷ್ಠಾನ ಭಿತ್ತಿಯನ್ನು ಒಳಗೊಂಡಿದ್ದು ಮೇಲ್ಛಾವಣಿ ಇಲ್ಲದಾಗಿದೆ.

ಮಹಾವೀರ ಬಸದಿ

ಚಂದ್ರನಾಥ ದೇವ ಬಸದಿಯ ಆವರಣದಲ್ಲಿ ಎಡಭಾಗಕ್ಕೆ ಮಹಾವೀರ ಬಸದಿ ಇದೆ. ಇದು ದಕ್ಷಿಣಾಭಿಮುಖವಾಗಿದೆ. ಈ ಬಸದಿಯ ಉದ್ದಗಲ ೬.೫೫ x ೩.೮೫ ಮೀ. ಇದೆ. ಈ ಬಸದಿ ಲ್ಯಾಟರೈಟ್ ಕಲ್ಲಿನಿಂದ ಕಟ್ಟಿದೆ. ಮಹಾವೀರ ಬಸದಿಯ ಒಳಭಾಗ ಗರ್ಭಗೃಹ, ಅರ್ಧಮಂಟಪ ಪ್ರದಕ್ಷಣಾಪಥನವನ್ನೊಳಗೊಂಡಿದೆ. ಗರ್ಭಗೃಹದಲ್ಲಿ ಮಹಾವೀರ ಮತ್ತು ಬ್ರಹ್ಮ ಯಕ್ಷನ ಮೂರ್ತಿ ಇದೆ.

ಮಹಾವೀರ ಬಸದಿಯ ಮುಂಭಾಗ

ಮಹಾವೀರ ಬಸದಿಯ ಮುಂಭಾಗ

ಚವ್ವೀಶ ತೀರ್ಥಂಕರ ಬಸದಿ

ಚವ್ವೀಶ ತೀರ್ಥಂಕರ ಬಸದಿಯನ್ನು ಇತ್ತೀಚೆಗೆ ನವೀಕರಿಸಲಾಗಿದೆ. ಈ ಬಸದಿಯು ಉತ್ತರಾಭಿಮುಖವಾಗಿದೆ. ಬಸದಿಯ ಉದ್ದಗಲ ೧೨.೭೫ x ೭.೨೦ ಮೀ. ಇದೆ. ಬಸದಿಯ ಒಳಗಡೆ ೨೪ ತೀರ್ಥಂಕರರ ಬಿಡಿ ಶಿಲ್ಪವನ್ನು ಸಾಲಾಗಿ ಆಯತಾಕಾರದ ಪೀಠದ ಮೇಲೆ ನಿಲ್ಲಿಸಲಾಗಿದೆ. ೨೪ ತೀರ್ಥಂಕರರ ಎಡಬಲಕ್ಕೆ ಯಕ್ಷ ಯಕ್ಷಿಯರೂ ಇದ್ದಾರೆ. ತೀರ್ಥಂಕರರ ಯಕ್ಷಯಕ್ಷಿಯರ ಲಾಂಛನವನ್ನು ಮೂರ್ತಿ ಶಿಲ್ಪದ ಲಕ್ಷಣಗಳಲ್ಲಿ ಹೇಳಲಾಗಿದೆ. ಗರ್ಭಗೃಹದಲ್ಲಿ ಎರಡು ಪದ್ಮಾವತಿ ಮೂರ್ತಿಶಿಲ್ಪಗಳು ಶ್ರುತಸ್ಕಂದ, ಸರಸ್ವತಿಮೂರ್ತಿ ಇದೆ.

ಬಾಗಿಲು ದ್ವಾರದಲ್ಲಿ ದ್ವಾರಪಾಲಕ ಮತ್ತು ಎಡಕ್ಕೆ ಚೌರಿ ಹಿಡಿದ ಚಾಮರಧಾರಿಣಿ ಮೂರ್ತಿ ಕಾಷ್ಟ ಶಿಲ್ಪವಾಗಿದೆ. ಭಿತ್ತಿಯಲ್ಲಿ ಒಂದು ಜಾಲಂದ್ರವಿದೆ. ಪ್ರಸ್ತುತ ದ್ವಾರಬಾಗಿಲು ಮತ್ತು ಬಾಗಿಲು ದ್ವಾರದ ಮೇಲಿನ ಕಾಷ್ಟ ಶಿಲ್ಪಕ್ಕೆ ಬಣ್ಣ ಬಳಿಯಲಾಗಿದೆ. ಪೂರ್ತಿಯಾಗಿ ಈ ಬಸದಿಯನ್ನು ನವೀಕರಿಸಲಾಗಿದೆ.

ಚವ್ವೀಶ ತೀರ್ಥಂಕರ ಬಸದಿ

ಚವ್ವೀಶ ತೀರ್ಥಂಕರ ಬಸದಿ

ಚವ್ವೀಶ ತೀರ್ಥಂಕರ ಬಸದಿ ಭಿತ್ತಿಯ ಜಾಲಾಂದ್ರ

ಚವ್ವೀಶ ತೀರ್ಥಂಕರ ಬಸದಿ ಭಿತ್ತಿಯ ಜಾಲಾಂದ್ರ

ಮಾನಸ್ತಂಭ

ಜೈನ ಬಸದಿಗಳಲ್ಲಿ ವಾಸ್ತುರಚನೆಯ ಅಂಗವಾಗಿ ಮಾನಸ್ತಂಭ, ಬ್ರಹ್ಮಸ್ತಂಭಗಳು ಕಂಡುಬರುತ್ತವೆ. ಮಾನಸ್ತಂಭ ಗರ್ಭಗೃಹಕ್ಕೆ ನೇರವಾಗಿ ಕಟ್ಟಡದ ಮುಂಭಾಗದಲ್ಲಿ ಇರುತ್ತದೆ. ಚಾಲುಕ್ಯ ರಾಷ್ಟಕೂಟರ ಕಾಲದಲ್ಲಿ ಪ್ರಾರಂಭವಾದ ಈ ಪದ್ಧತಿ ವಿಜಯನಗರ ಕಾಲದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯಿತು (ಶೆಟ್ಟಿ ಎಸ್.ಡಿ., ೧೯೯೯, ಪು. ೩೯). ಸಮವಸರಣದ ಮಂಟಪದ ಪ್ರತೀಕವಾಗಿರುವ ಚೈತ್ಯಾಲಯವನ್ನು ಪ್ರವೇಶಿಸುವ ಮೊದಲು ಭಕ್ತನ ಸರ್ವಸೊಕ್ಕುಗಳನ್ನು ಮುರಿದು ಹದಗೊಳಿಸುವುದರಿಂದ ಇಲ್ಲಿನ ಸ್ತಂಭಕ್ಕೆ ಮಾನಸ್ತಂಭವೆಂದು ಹೆಸರು (ಶ್ರೀನಿವಾಸ ಪಾಡಿಗಾರ, ಜಿನತಿಲಕ, ಡಿಸೆಂಬರ್ ೨೦೦೪, ಜನವರಿ ೨೦೦೫, ಪು. ೧೦೯). ಜೈನರ ಪ್ರಾಚೀನ ಗ್ರಂಥಗಳಲ್ಲಿ ತೀರ್ಥಂಕರನ ಸಮವಸರಣ ಸಭಾಮಂಟಪದ ನಾಲ್ಕು ದಿಕ್ಕುಗಳಲ್ಲಿ ಮಾನಸ್ತಂಭವಿರುವುದನ್ನು ಉಲ್ಲೇಖಿಸಲಾಗಿದೆ.

 

ಚವ್ವೀಶ ತೀರ್ಥಂಕರ ಬಸದಿ ಪಾಳುಬಿದ್ದ ಮಾನಸ್ತಂಭ

ಚವ್ವೀಶ ತೀರ್ಥಂಕರ ಬಸದಿ ಪಾಳುಬಿದ್ದ ಮಾನಸ್ತಂಭ

ಚಂದ್ರಗಿರಿ ಬೆಟ್ಟದ ಮಾನಸ್ತಂಭ

ಚಂದ್ರಗಿರಿ ಬೆಟ್ಟದ ಮಾನಸ್ತಂಭ

 

ಮಾನಸ್ತಂಭದ ಎತ್ತರವು ತೀರ್ಥಂಕರನ ಶರೀರಾಕೃತಿಯ ಹನ್ನೆರಡು ಪಟ್ಟು ಎತ್ತರ ಇರಬೇಕು. ಬಸದಿಗಳಲ್ಲಿನ ಮೂಲ ವಿಗ್ರಹದ ಉತ್ತರಕ್ಕೆ ಹೊಂದಿಕೊಂಡು ಮಾನಸ್ತಂಭಗಳು ರಚನೆಗೊಂಡಿರುತ್ತವೆ. ಒಟ್ಟಾರೆ ಸ್ವರೂಪವನ್ನು ಹೇಳಬೇಕೆಂದರೆ “…..ತೀರ್ಥಂಕರನ ಸಮವಸರಣಕ್ಕೆ ಬರುವ ನಾಲ್ಕು ಮಾರ್ಗಗಳ ಮಧ್ಯದಲ್ಲಿ ನಾಲ್ಕು ಮಾನಸ್ತಂಭಗಳು ಸ್ಥಾಪಿತವಾಗಿರುತ್ತವೆ. ಇವು ಆಕಾರದಲ್ಲಿ ಗೋಲ ಮತ್ತು ನಾಲ್ಕು ಗೋಪುರ ದ್ವಾರಗಳು, ಧ್ವಜ ಪತಾಕಿಗಳು ಇರುವ ಒಂದೊಂದು ಕೋಟೆಯಿಂದ ಸುತ್ತುವರಿದಿರುತ್ತವೆ. ಇದರ ನಾಲ್ಕು ಕಡೆಗೆ ಸೋಮ, ಯಮ, ವರುಣ, ಕುಬೇರ, ಇವರ ಕ್ರೀಡಾನಗರಗಳು ಮತ್ತು ವನಖಂಡಗಳು ಇರುತ್ತವೆ. ಇದರ ಮೂಲ ಭಾಗವು ವಜ್ರದ್ವಾರಗಳಿಂದಲೂ ಮಧ್ಯಭಾಗ ಸ್ಫಟಿಕಮಣಿಮಯವಾಗಿ ವೃತ್ತಾಕಾರವಾಗಿದ್ದು, ಮೇಲ್ಭಾಗ ವೈಢೂರ್ಯಮಣಿಯದಾಗಿರುತ್ತದೆ. ನಾಲ್ಕು ದಿಕ್ಕುಗಳಿಗೆ ಚವರಿಘಂಟಿ, ಗೆಜ್ಜೆ, ರತ್ನಹಾರ ಧ್ವಜಗಳಿಂದ ಶೋಭಿಸುತ್ತದೆ. ಶಿಖರದ ನಾಲ್ಕು ದಿಕ್ಕಿನಲ್ಲಿ ಎಂಟು ಪ್ರಾತಿಹಾರ್ಯಗಳಿಂದ ಕೂಡಿದ ನಾಲ್ಕು ಜಿನಪ್ರತಿಮೆಗಳಿರುತ್ತವೆ. ಇಂತಹ ಮಾನಸ್ತಂಬದ ದರ್ಶನ ಮಾತ್ರದಿಂದ ಮದವು ದೂರವಾಗುತ್ತದೆ ಎಂದು ವರ್ಣಿಸಲಾಗಿದೆ (ಹೀರಾಲಾಲ ಜೈನ (ಲೇ.), ಅಣ್ಣಾರಾಯ ಮಿರ್ಜಿ (ಅನು), ೧೯೭೧, ಪು. ೩೬೫ – ೩೬೬).

ಮಾನಸ್ತಂಭದ ಪೀಠಭಾಗ, ಚತುರಸ್ರ ಪ್ರತಿಯೊಂದು ಕಪೋತವನ್ನೊಳಗೊಂಡಿದೆ. ಪೀಠದ ಮಧ್ಯಭಾಗದಲ್ಲಿ ಮಾನಸ್ತಂಭವನ್ನು ಲಂಬವಾಗಿ ನಿಲ್ಲಿಸಿರುತ್ತಾರೆ. ಸ್ತಂಭದ ಕೆಳಭಾಗ ಚೌಕಾಕಾರ, ಮೇಲೆ ಹೋದಂತೆ ಎಂಟು, ಹನ್ನೆರಡು, ಹದಿನಾಲ್ಕು ಕೋನಗಳನ್ನು ಪಡೆಯುತ್ತ ಮೇಲ್ಮೈಯಲ್ಲಿ ಪಟ್ಟಿಕೆಗಳು, ಮಣಿಸರ, ವರ್ತುಲ, ಕೆತ್ತನೆಗಳನ್ನೊಳಗೊಂಡಿರುತ್ತದೆ. ಸ್ತಂಭದ ತುದಿಗೆ ಆಮಲಕ, ಪದ್ಮ ಪಟ್ಟಿಕೆಗಳಿರುತ್ತವೆ. ಚಜ್ಜದ ಮೇಲೆ ತೆರೆದ ಮಂಟಪವಿದ್ದು ನಾಲ್ಕು ದಿಕ್ಕಿಗೆ ಮುಖ ಮಾಡಿದ ಜಿನಬಿಂಬವಿರುತ್ತದೆ. ಇವು ಹೆಚ್ಚಿನ ಮಟ್ಟಿಗೆ ಮಾನಸ್ತಂಭಗಳಲ್ಲಿ ಕಾಣುವ ವೈಶಿಷ್ಟ್ಯತೆಯಾಗಿದೆ.

 

ಕಂಚಿನ ಮಾನಸ್ತಂಭದ ಮೊದಲ ಭಾಗ (ಮಂಜೂಷಾ ವಸ್ತು ಸಂಗ್ರಹಾಲಯ, ಧರ್ಮಸ್ಥಳ) ಕಂಚಿನ ಮಾನಸ್ತಂಭದ ಎರಡನೆಯ ಭಾಗ (ಕವಿವಿ ಕನ್ನಡ ಸಂಶೋಧನಾ ಸಂಸ್ಥೆ ವಸ್ತುಸಂಗ್ರಹಾಲಯ, ದಾರವಾಡ)

ಕಂಚಿನ ಮಾನಸ್ತಂಭದ ಮೊದಲ ಭಾಗ (ಮಂಜೂಷಾ ವಸ್ತು ಸಂಗ್ರಹಾಲಯ, ಧರ್ಮಸ್ಥಳ)
ಕಂಚಿನ ಮಾನಸ್ತಂಭದ ಎರಡನೆಯ ಭಾಗ (ಕವಿವಿ ಕನ್ನಡ ಸಂಶೋಧನಾ ಸಂಸ್ಥೆ ವಸ್ತುಸಂಗ್ರಹಾಲಯ, ದಾರವಾಡ)

ಪ್ರಸ್ತುತ ಹಾಡುವಳ್ಳಿ ಗ್ರಾಮದಲ್ಲಿ ಒಟ್ಟು ಮೂರು ಮಾನಸ್ತಂಭಗಳಿವೆ. ಎರಡು ಮಾನಸ್ತಂಭ ಹಾಳು ಬಿದ್ದಿವೆ. ಒಂದು ಮಾನಸ್ತಂಭ ಹಾಡುವಳ್ಳಿಯ ಚವ್ವೀಶ ತೀರ್ಥಂಕರರ ಬಸದಿಯ ಆವರಣದಲ್ಲಿದೆ. ಈ ಬಸದಿ ಮುಂಭಾಗದಲ್ಲಿರುವ ಮಾನಸ್ತಂಭದ ಮೇಲ್ಭಾಗ ಮತ್ತು ಆಧಿಷ್ಠಾನ ಹಾಳಾಗಿದೆ. ಇನ್ನೊಂದು ಮಾನಸ್ತಂಭ ಚಂದ್ರನಾಥ ಬಸದಿಯ ಮುಂಭಾಗದಲ್ಲಿದ್ದು ಪ್ರಸ್ತುತ ಈ ಮಾನಸ್ತಂಭದ ಮೇಲ್ಭಾಗದಲ್ಲಿ ಯಾವುದೇ ಜಿನಬಿಂಬವು ಇರುವುದಿಲ್ಲ. ಶಿಲಾಮಾನಸ್ತಂಭದ ಹೊರತಾಗಿ ಕಂಚಿನಿಂದ ಎರಕ ಹೊಯ್ದ ಮಾನಸ್ತಂಭವು ಹಾಡುವಳ್ಳಿಯಲ್ಲಿ ಮೊದಲು ಇತ್ತು. ಕ್ರಿ.ಶ. ೧೪೮೪ರಲ್ಲಿ ಹಾಡುವಳ್ಳಿಯ ಸಂಗಿರಾಯನು ಈ ಮಾನಸ್ತಂಭ ನಿರ್ಮಿಸಿದನು (ಕ.ಇ.೧, ನಂ. ೬೫). ಕಂಚಿನ ಮಾನಸ್ತಂಭದ ಒಂದು ಭಾಗ ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿದೆ. ಇನ್ನೊಂದು ಭಾಗ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ವಸ್ತು ಸಂಗ್ರಹಾಲಯದಲ್ಲಿ ಇವೆ. ಈ ಮಾನಸ್ತಂಭದ ವಿವರಣೆಯನ್ನು ಲೋಹಶಿಲ್ಪ ಅಧ್ಯಾಯದಲ್ಲಿ ಪ್ರಸ್ತಾಪಿಸಲಾಗಿದೆ. ಕ್ರಿ.ಶ. ೧೫೬೦ರ ಗೇರುಸೊಪ್ಪೆಯ ಶಾಸನ ನೇಮಿಜಿನಾಲಯದ ಮುಂದೆ ಅಂಬಣ್ಣ ಸೆಟ್ಟಿ ಎಂಬುವನು ಕಂಚಿನ ಮಾನಸ್ತಂಭ ಮಾಡಿಸಿದನು (ನರಸಿಂಹಾಚಾರ್ ಆರ್., ೧೯೭೩, ಪು. ೩೧೩) ಎಂದು ಉಲ್ಲೇಖಿಸಿವೆ. ಪ್ರಸ್ತುತ ಗೇರುಸೊಪ್ಪೆ ಕಂಚಿನ ಮಾನಸ್ತಂಭ ಈವರೆಗೆ ದೊರೆತಿಲ್ಲ.

ಒಟ್ಟಾರೆ ಇಲ್ಲಿಯ ಬಸದಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇಲ್ಲಿಯ ಬಸದಿಗಳೆಲ್ಲವೂ ವಿಜಯನಗರ ವಿಜಯನಗರೋತ್ತರ ಕಾಲದವು. ಅದರ ಜೊತೆ ಸ್ಥಳೀಯ ಪ್ರಭಾವವನ್ನು ಹೆಚ್ಚಾಗಿ ಬೀರಿ ಹಾಡುವಳ್ಳಿಯ ಸಾಳುವರು ತಮ್ಮದೇ ಆದ ವೈಶಿಷ್ಟ್ಯಪೂರ್ಣ ಕೊಡುಗೆ ನೀಡಿದ್ದಾರೆ. ಹಾಡುವಳ್ಳಿ ಗ್ರಾಮ ತುಳುನಾಡಿಗೆ ಅಂದು ಒಳಪಟ್ಟಿದ್ದರಿಂದ ತುಳುನಾಡಿನ ಶೈಲಿ ಇದೆಂದರೂ ತಪ್ಪಾಗಲಿಕ್ಕಿಲ್ಲ. ಬಸದಿಯ ಇಳಿಜಾರು ಮಾಡು ಇಲ್ಲಿಯ ವೈಶಿಷ್ಟ್ಯತೆ. ಬಸದಿಗೆ ಲ್ಯಾಟರೈಟ್ ಕಲ್ಲು ಮತ್ತು ಸಿಸ್ಟ್‌ಶಿಲೆಯನ್ನು ಬಳಸಲಾಗಿದೆ.ಇಲ್ಲಿಯ ಬಸದಿಗಳು ಪ್ರಧಾನವಾಗಿ ಗರ್ಭಗೃಹ, ಸಭಾಮಂಟಪ, ಮುಖಮಂಟಪ ಒಳಗೊಂಡಿದ್ದು ಹೊರಭಾಗ ಅಧಿಷ್ಠಾನ, ತೆರೆದ ಭಿತ್ತಿಯ ಸುತ್ತ ಸ್ತಂಭಗಳನ್ನೊಳಗೊಂಡಿದೆ. ತಳ ವಿನ್ಯಾಸದ ದೃಷ್ಟಿಯಿಂದ ಬಸದಿಗಳನ್ನು ಎರಡು ಗುಂಪುಗಳಾಗಿ ಕಾಣಬಹುದು. ೧. ಅ. ಆಯತಾಕಾರದ ಗರ್ಭಗೃಹವುಳ್ಳ ಬಸದಿಗಳು. ಉದಾ. ಚಂ‌ದ್ರಗಿರಿ ಬೆಟ್ಟದ ಚಂದ್ರನಾಥ ಬಸದಿ. ಆ. ಆಯತಾಕಾರದ ತಳವಿನ್ಯಾಸ ಚತುರಸ್ರ ಗರ್ಭಗೃಹ. ಉದಾ. ಹಾಡುವಳ್ಳಿ ಗ್ರಾಮದಲ್ಲಿಯ ಚಂದ್ರನಾಥ ಬಸದಿ.

೨. ಈ ಪರಿಸರದ ಹವಾಮಾನಕ್ಕೆ ಅನುಗುಣವಾಗಿ ಮಹಡಿ ಕಟ್ಟಡ ರಚನೆ.

೩. ಹಾಡುವಳ್ಳಿ ಗ್ರಾಮದಲ್ಲಿ ಬಸದಿಗಳನ್ನು ತುಲನಾತ್ಮಕವಾಗಿ ನೋಡಿದರೆ ಇರುವ ಬಸದಿಗಳಲ್ಲಿ ಹೆಚ್ಚಿನವು ಚಂದ್ರನಾಥ ಬಸದಿಗಳೇ ಆಗಿವೆ. ಜ್ವಾಲಮಾಲಿನಿ ಚಂದ್ರನಾಥ ತೀರ್ಥಂಕರನ ಯಕ್ಷಿ.. ಜ್ವಾಲಮಾಲಿನಿ ಲೌಕಿಕ ಸುಖ ಸಂತೋಷಗಳನ್ನು ನೀಡುವುದರಿಂದ ಹೆಚ್ಚು ಜನಪ್ರಿಯವಾಗಿದೆ. ತೀರ್ಥಂಕರರನ್ನು ಯಕ್ಷಿರೊಡನೆ ಪೂಜಿಸಿದರೆ ಅದರ ಪ್ರಭಾವ ಹೆಚ್ಚಿರುವುದೆಂಬ ನಂಬಿಕೆ ಜನಪದರಲ್ಲಿ ಮೂಡಿರಲು ಸಾಕು. ಹೀಗಾಗಿ ಚಂದ್ರನಾಥ ಜ್ವಾಲಮಾಲಿನಿ ಪೂಜೆ ಹೆಚ್ಚು ಜನಪ್ರಿಯವಾಗಲು ಕಾರಣವಾಗಿರಬೇಕು.

೪. ವೈವಿಧ್ಯಮಯ ಸ್ತಂಭಗಳ ಮಾದರಿ, ಕಟಾಂಜನದಲ್ಲಿನ ಕಲೆ ಮತ್ತು ಭಿತ್ತಿಗಳ ವಾಸ್ತುಶಿಲ್ಪ ಮೇಲ್ಛಾವಣಿಯ ಫಲಕಗಳಲ್ಲಿ ವೈವಿಧ್ಯತೆ ಇವು ಕಲಾಸೌಂದರ್ಯದ ನಿದರ್ಶನಗಳಾಗಿವೆ.

 

ಹಾಡುವಳ್ಳಿ ಬಸದಿಗಳ ಸ್ತಂಭಗಳ ವೈವಿಧ್ಯತೆ

ಹಾಡುವಳ್ಳಿ ಬಸದಿಗಳ ಸ್ತಂಭಗಳ ವೈವಿಧ್ಯತೆ

ಕಟಾಂಜನ ಚಂದ್ರಗಿರಿ ಬೆಟ್ಟದ ವಾಸ್ತುಶಿಲ್ಪ ಕಲಾ ವೈವಿಧ್ಯತೆ

ಕಟಾಂಜನ ಚಂದ್ರಗಿರಿ ಬೆಟ್ಟದ ವಾಸ್ತುಶಿಲ್ಪ ಕಲಾ ವೈವಿಧ್ಯತೆ

 

೫. ಶಿಲಾ ಮಾನಸ್ತಂಭದ ಹೊರತಾಗಿ ಕಂಚಿನ ಮಾನಸ್ತಂಭ ಮಾಡಿಸಿರುವುದು ಇಲ್ಲಿಯ ಇನ್ನೊಂದು ವೈಶಿಷ್ಟ್ಯತೆಯಾಗಿದೆ.

೬. ನಾಥ ಎಂದರೆ ಒಡೆಯ ಚಂದ್ರಗರಿಯ ಚಂದ್ರನಾಥ, ಹಾಡುವಳ್ಳಿ ಗ್ರಾಮದ ಚಂದ್ರನಾಥ ಇಲ್ಲಿಯ ಹೆಸರುಗಳಲ್ಲೂ ಸಾಮ್ಯತೆ ಇದೆ. ಇಲ್ಲಿನ ಪರಿಸರಕ್ಕೆ ಚಂದ್ರನಾಥ ತೀರ್ಥಂಕರ ಜ್ವಾಲಮಾಲಿನಿ ಯಕ್ಷಿ ಹೆಚ್ಚು ಪ್ರಚಲಿತವಿದೆ.

೭. ಸಾಳುವ ಅರಸು ಮನೆತನದ ಗೇರುಸೊಪ್ಪೆಯಲ್ಲಿ ಚತುರ್ಮುಖ ಬಸದಿಯ ವಿಶೇಷತೆಯಾದರೆ, ಇದೇ ಅರಸು ಮನೆತನದ ಆಳ್ವಿಕೆಗೆ ಒಳಪಟ್ಟ ಹಾಡುವಳ್ಳಿಯಲ್ಲಿ ೨೪ ತೀರ್ಥಂಕರರನ್ನು ಒಂದೆಡೆ ಸೇರಿಸಿ ಬಸದಿಯಲ್ಲಿ ಇಡಲಾಗಿದೆ. ಹಾಡುವಳ್ಳಿಯಲ್ಲಿ ೨೪ ತೀರ್ಥಂಕರರು ಸ್ವತಂತ್ರವಾಗಿಯೂ, ಸಂಕೀರ್ಣ ರೂಪದಲ್ಲಿ ಇರುವುದು ವಿಶೇಷತೆಯಾಗಿದೆ. ಒಂದೇ ಪೀಠದಲ್ಲಿ ಸಾಲಾಗಿ ನಿಂತಿರುವ ೨೪ ತೀರ್ಥಂಕರರು ನಾಲ್ಕು ಬಸದಿಗಳನ್ನು ಬಿಟ್ಟರೆ ಬೇರೆಡೆ ಕಂಡುಬರುವುದಿಲ್ಲ. ೧. ಹಾಡುವಳ್ಳಿ ಹರಿಪೀಠದ ಚವ್ವೀಶ ತೀರ್ಥಂಕರ, ೨. ಮೂಡಬಿದಿರೆ ಗುರುಬಸದಿ ಚವ್ವೀಶ ತೀರ್ಥಂಕರ, ೩. ಮೂಡಬಿದಿರೆ ಶೆಟ್ಟರ ಬಸದಿ ಚವ್ವೀಶ ತೀಥಂಕರ, ೪. ವೇಣೂರು ಶಾಂತೀಶ್ವರ ಬಸದಿ ಚವ್ವೀಶ ತೀರ್ಥಂಕರ, ಈ ನಾಲ್ಕು ಬಸದಿಗಳು ತುಳುನಾಡಿಗೆ ಸೇರಿರುವುದರಿಂದ ಇದು ತುಳುನಾಡಿನ ಸ್ಥಳೀಯ ವೈಶಿಷ್ಟ್ಯತೆ ಎನ್ನಬಹುದು.

೮. ವಾಸ್ತುಶಿಲ್ಪ ವೈವಿಧ್ಯತೆ ಚಂದ್ರನಗರಿ ಬೆಟ್ಟದಲ್ಲಿನ ಚಂದ್ರನಾಥ ಬಸದಿಯಲ್ಲಿನ ಕಲಾ ವೈವಿಧ್ಯತೆ ಹಾಡುವಳ್ಳಿಯಲ್ಲಿನ ಉಳಿದ ಬಸದಿಗಳಲ್ಲಿ ಕಾಣಬರುವುದಿಲ್ಲ.

೯. ಇಪ್ಪತ್ತನಾಲ್ಕು ತೀರ್ಥಂಕರರಲ್ಲಿ ಬೇರೆಬೇರೆ ಕಾಲದಲ್ಲಿ ಎಲ್ಲ ಮೂರ್ತಿಗಳು ದೊರೆಯುತ್ತವಾದರೂ, ಹೆಚ್ಚಿನ ಮಟ್ಟಿಗೆ ಮೊದಲನೇ ತೀರ್ಥಂಕರ ವೃಷಭನಾಥ ಇಪ್ಪತ್ತಮೂರನೇ ತೀರ್ಥಂಕರನಾದ ಪಾರ್ಶ್ವನಾಥ. ಇಪ್ಪತ್ತನಾಲ್ಕನೇ ತೀರ್ಥಂಕರನಾದ ಮಹಾವೀರ ಸ್ವತಂತ್ರವಾಗಿ ಶಿಲ್ಪಿತವಾಗಿರುತ್ತಾರೆ. (ಶ್ರೀನಿವಾಸ ಪಾಡಿಗಾರ, ಜಿನತಿಲಕ, ಡಿಸೆಂಬರ್ ೧೯೭೪, ಜನವರಿ ೧೯೭೫, ಪು. ೧೦೯ – ೧೧೦). ಸಾಳುವರ ಕಾಲದ ಚತುರ್ಮುಖ ಬಸದಿಯಲ್ಲಿ ಗೇರುಸೊಪ್ಪೆಯಲ್ಲಿ ಆದಿನಾಥ, ಅಜಿತನಾಥ, ಶಾಂಭವ ಮತ್ತು ಅಭಿನಂದನಾಥ ಮೂರ್ತಿ ಶಿಲ್ಪಗಳಿವೆ. ಹಾಡುವಳ್ಳಿಯ ಕಂಚಿನ ಆದಿನಾಥನ ಪ್ರತಿಮೆಯೊಂದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿದೆ. ಪಾರ್ಶ್ವನಾಥ, ನೇಮಿನಾಥ ಬಸದಿಗಳಿದ್ದರೂ ಪಾಳುಬಿದ್ದ ಬಸದಿಯು ಸೇರಿದಂತೆ ಚಂದ್ರನಾಥ ಬಸದಿಗಳು ಇಲ್ಲಿ ಹೆಚ್ಚಾಗಿವೆ.

ಒಟ್ಟಾರೆ ಯಾವುದೇ ಧರ್ಮವನ್ನು ಇಲ್ಲಿ ತುಲನಾತ್ಮಕವಾಗಿ ನೋಡಿದರೆ ಇಲ್ಲಿನ ವಾಸ್ತು ವೈವಿಧ್ಯತೆಗೆ ಕಲಾಕಾರನ ಕಲ್ಪನೆ ಮತ್ತು ಆತನ ಕೈಚಳಕವೇ ಆಗಿದೆ. ಜೈನಧರ್ಮ, ಸನಾತನ ಧರ್ಮವಾಗಿ ಬೆಳೆದು ಹಾಡುವಳ್ಳಿಯಲ್ಲಿ ಸ್ಥಳೀಯ ವಾಸ್ತುಕಲೆಯಲ್ಲಿ ಪ್ರಭಾವ ಬೀರಿದ್ದನ್ನು ವೈಶಿಷ್ಟ್ಯಪೂರ್ಣ ಕೊಡುಗೆ ಎಂದು ಹೇಳಬಹುದು.

ಬಸದಿಮಠ ಸಾಮಾಜಿ ಕೇಂದ್ರವಾಗಿ

ಬಸದಿಗಳು ಜೈನ ಧಾರ್ಮಿಕ ಕೇಂದ್ರವಾಗಿ ರೂಪುಗೊಳ್ಳುವುದರ ಜೊತೆಗೆ ಇದಕ್ಕೆ ಸಂಬಂಧಿಸಿದ ಮಠಗಳು ಜೈನಧರ್ಮದ ಕೇಂದ್ರವಾಗಿದ್ದವು. ಹಾಡುವಳ್ಳಿ, ಗೇರುಸೊಪ್ಪೆ ಆಳಿದ ಅರಸು ಸಾಳುವರೇ ಆದರೂ ಇಲ್ಲಿನ ಮಠಗಳು ಬೇರೆ ಬೇರೆಯಾಗಿದ್ದವು. ಉದಾ. ಹಾಡುವಳ್ಳಿಯಲ್ಲಿ ಅಕಲಂಕ ಮಠವಿದ್ದರೆ, ಗೇರುಸೊಪ್ಪೆಯಲ್ಲಿ ಸಮಂತಭದ್ರ ಮಠವಿತ್ತು. ಮಠ ಎಂದರೆ ಮುನಿಗಳ ವಾಸಸ್ಥಾನ ಎಂದರ್ಥ. ಮಠದಲ್ಲಿ ಮುನಿವೃಂದ ಅಥವಾ ಯತಿ ಇದ್ದ ಮೇಲೆ ಅಲ್ಲಿ ಕಲಿಯುವ ಶಿಷ್ಯರು ಅಂದರೆ ಕಲಿಯಲು ವಿದ್ಯಾದಾನ ಮಾಡುವ ಸ್ಥಳ ಎಂಬ ಅರ್ಥವನ್ನು ಕಲ್ಪಿಸಬೇಕಾಗುತ್ತದೆ ಬಸದಿ ಮತ್ತು ಮಠ ಕಾರ್ಯದೃಷ್ಟಿಯಿಂದ ಎರಡೂ ಒಂದಕ್ಕೊಂದು ಪೂರಕವಾಗಿವೆ. ಪ್ರಸ್ತುತ ಹಾಡುವಳ್ಳಿಯಲ್ಲಿ ಯಾವುದೇ ಮಠವಿಲ್ಲದಿದ್ದರೂ ಅಂದು ಅಲ್ಲಿ ಮಠವಿತ್ತೆಂಬ ಬಗ್ಗೆ ಬೀಳಗಿಯ ಎರಡು ಶಾಸನಗಳು ಮಾಹಿತಿ ನೀಡುತ್ತದೆ. ಮಧ್ಯಕಾಲೀನದಲ್ಲಿ ಹಾಡುವಳ್ಳಿಯ ಅಕಲಂಕ ಮಠ ಬಹು ಪ್ರಸಿದ್ಧಿಯಾಗಿತ್ತು. ಹಾಡುವಳ್ಳಿ ಬೀಳಗಿ ಸ್ವಾಧಿ. ಈ ಮೂರು ಅರಸು ಮನೆತನ ಈ ಜೈನ ಮಠದ ಶಿಷ್ಯತ್ವವನ್ನು ಸ್ವೀಕರಿಸಿದ್ದರು. ಮಠದ ಮೂಲಗುರು ಅಕಲಂಕ ಈ ಗುರುಪೀಠಕ್ಕೆ ಸಂಬಂಧಿಸಿದವನು (ಶೆಟ್ಟಿ ಎಸ್.ಡಿ., ೨೦೦೨, ಪು. ೨೪೯). ಬೀಳಗಿಯ ಎರಡು ಶಾಸನಗಳು (ರಾಮಭಟ್ಟ ಉಪ್ಪಂಗಳ, ೧೯೮೦, ಪು.೧೭). ಭಟ್ಟಾಕಳಂಕನ ಬಗ್ಗೆ ಮಾಹಿತಿ ನೀಡುವುದರ ಜೊತೆ ಹಾಡುವಳ್ಳಿಯ ಜೈನಮಠದ ಮೇಲೂ ಬೆಳಕನ್ನು ಚೆಲ್ಲಿದೆ. ಕ್ರಿ.ಶ. ೧೫೯೩ರ ಕಾಲಕ್ಕೆ ಸೇರಿದ ಎರಡು ಶಾಸನಗಳಿಂದ ತಿಳಿದುಬಂದ ಮಾಹಿತಿ ಹೀಗಿದೆ.

ಮೂಲಸಂಘದ ದೇಶಿಗಣದ ಕುಂದುಕುಂದಾಚಾರ್ಯನ ಅನ್ವಯದಲ್ಲಿ ಅನೇಕ ಆಚಾರ್ಯರು ಆದಮೇಲೆ ಚಾರುಕೀರ್ತಿ ಪಂಡಿತ ದೇವರು ಪ್ರಸಿದ್ಧಿಗೆ ಬಂದರು. ಇವರ ಶಿಷ್ಯ ಶ್ರುತಕೀರ್ತಿ, ಶ್ರುತಕೀರ್ತಿಯ ಶಿಷ್ಯ ವಿಜಯಕೀರ್ತಿ ಸಂಗೀತಪುರದ ಇಂದಿನ ಹಾಡುವಳ್ಳಿ ಇಂದ್ರರಾಜನಿಗೆ ಅರಸು ಪದವಿ ಇತ್ತರು. ಈ ಮಠದ ಎರಡನೇ ಶ್ರುತಕೀರ್ತಿ ಸಂಗಿರಾಯನನ್ನು ಸಿಂಹಾಸನದ ಮೇಲೆ ಕೂರಿಸಿದರು. ಎರಡನೇ ವಿಜಯಕೀರ್ತ ಮುನಿಗಳು ಶಿಷ್ಯ ದೇವರಾಯನಿಗೆ ಭಟ್ಟಕಳವೆಂಬ ಪಟ್ಟಣ ಕಟ್ಟಿಸಿದರು. ವಿಜಯಕೀರ್ತಿಯವರಿಗೆ ಅಕಲಂಕ ಮತ್ತು ಚಂದ್ರಪ್ರಭರೆಂಬ ಶಿಷ್ಯರಿದ್ದರು. ಇವರು ಬೀಳಗಿಯ ಘಂಟಣ್ಣೊಡೆಯರ ಮಕ್ಕಳು ತಿಮ್ಮಭೂಪ ಮತ್ತು ಸಿಂಹಭೂಪರಿಗೆ ಗುರುಗಳಾಗಿದ್ದರು. ಅಕಲಂಕರ ಶಿಷ್ಯ ವಿಜಯಕೀರ್ತಿ ಮತ್ತು ಅವನ ಶಿಷ್ಯ ಅಕಳಂಕ ಇವನ ಶಿಷ್ಯ ಖ್ಯಾತ ವ್ಯಾಕರಣಾಕಾರರಾದ ಭಟ್ಟಾಕಳಂಕನಾಗಿದ್ದಾನೆ (ಶೆಟ್ಟಿ ಎಸ್.ಡಿ., ೨೦೦೨,ಪು. ೨೫೩). ಬೀಳಗಿಯ ಶಾಸನಗಳ ಆಧಾರದಲ್ಲಿ ಹೇಳುವುದಾದರೆ ಈ ಮಠದ ಗುರುಪರಂಪರೆ ಹೀಗಿದೆ.

 

25_376_HJS-KUH

 

ಹಾಡುವಳ್ಳಿಯಲ್ಲಿ ಈ ಮುನಿಪರಂಪರೆಗೆ ಸಂಬಂಧಿಸಿದಂತೆ ಶಾಸನಗಳು ಸಿಗಲಿಲ್ಲವಾದರೂ ಗೇರುಸೊಪ್ಪೆಯಲ್ಲಿ ಇದೇ ಅರಸು ಮನೆತನಕ್ಕೆ ಸೇರಿದ ನಿಷಿದಿ ಶೋಧನೆಯಾಗಿರುವುದು ಸ್ತುತ್ಯಾರ್ಹ (ರಘುನಾಥಭಟ್ ಎಚ್.ಆರ್. (ಲೇ.), ಗೋಪಾಲರಾವ್ ಎಚ್.ಎಸ್. (ಸಂ.), ೧೯೯೪, ಪು ೧೧೪ – ೧೧೮). ಗೇರುಸೊಪ್ಪೆಯಲ್ಲಿ ದೊರೆತ ಈ ನಿಷಿದಿ ಶಾಸನದಲ್ಲಿ ಸರ್ಪತೋರಣದ ಕೋಷ್ಟಕದಂತಿರುವ ಚೌಕಟ್ಟಿನಲ್ಲಿ ಪಂಡಿತಾಸನದಲ್ಲಿ ಹಾಗೂ ವ್ಯಾಖ್ಯಾನ ಮುದ್ರೆಯಲ್ಲಿ ಕುಳಿತ ವಾದೀಂದ್ರ, ವಿಶಾಲಕೀರ್ತಿ ಮತ್ತು ರಾಜಠೀವಿಯ ಶಿಷ್ಯರ ಉಬ್ಬು ಶಿಲ್ಪಗಳಿವೆ. ೧೬ನೇ ಶತಮಾನದ ಕನ್ನಡ ಲಿಪಿ ಸಂಸ್ಕೃತ ಭಾಷೆಯ ಈ ಶಾಸನದಲ್ಲಿ ಇಲ್ಲಿನ ಜೈನ ಮುನಿ ಪರಂಪರೆಯನ್ನು ಗೌರವದಿಂದ ದಾಖಲಿಸಿದೆ. ಕುಂದು ಕುಂದಾಚಾರ್ಯ, ವಿದ್ಯಾನಂದ ಅಥವಾ ವಾದಿ ವಿದ್ಯಾನಂದ ಮುನಿ, ದೇವೇಂದ್ರ ಕೀರ್ತಿ ಹಾಗೂ ಭಟ್ಟಾಕಳಂಕರನ್ನು ವಾದೀಂದ್ರ ವಿಶಾಲ ಕೀರ್ತಿಯ ಸ್ತುತಿ ಸಂದರ್ಭದಲ್ಲಿ ಹೆಸರಿಸಿರುವುದು ಸ್ವಾರಸ್ಯಕರವಾಗಿದೆ. ಹೆಸರಿಸಿದ ಈ ಮುನಿಗಳು ಪ್ರಸಿದ್ಧ ಮುನಿಪರಂಪರೆಯಾಗಿರಲು ಸಾಕು ಅಥವಾ ಗುರುಮಠದ ಶಿಷ್ಯತ್ವವನ್ನು ಒಪ್ಪಿಕೊಂಡಿರಬೇಕು. ಹಾಡುವಳ್ಳಿಯ ಗುರುಪರಂಪರೆಗೆ ಸಂಬಂಧಿಸಿದಂತೆ ಪ್ರಾರಂಭಿಕವಾಗಿ ಕುಂದು ಕುಂದಾಚಾರ್ಯ ಮತ್ತು ಕೊನೆಯಲ್ಲಿ ಭಟ್ಟಾಕಳಂಕರ ಹೆಸರು ಉಲ್ಲೇಖಿತವಾಗಿದೆ. ಅಂದರೆ ಗೇರುಸೊಪ್ಪೆ, ಹಾಡುವಳ್ಳಿ ಅರಸು ಮನೆತನ ಒಂದೇ ಆದರೂ ಕುಂದುಕುಂದಾನ್ವಯದ ಬೇರೆ ಬೇರೆ ಶಾಖೆಗಳಾಗಿದ್ದವೆಂಬುದು ಸ್ಪಷ್ಟ ಮತ್ತು ಎರಡೂ ಶಾಖೆಗಳು ಶ್ರವಣಬೆಳಗೋಲದ ಶಾಖಾ ಮಠಗಳಾಗಿದ್ದವು.

ಜೈನಬಸದಿ ಮತ್ತು ಮಠಗಳು ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿದ್ದವು. ಧರ್ಮವು ಸಂಸ್ಕೃತಿಯ ಜೀವಾಳ. ಜನತೆಯ ಜೀವನವನ್ನು ರೂಪಿಸುವಲ್ಲಿ ಬಸದಿ – ಮಠಗಳ ಪಾತ್ರ ಬಹು ದೊಡ್ಡದು. ಲೌಕಿಕ ಅಲೌಕಿಕ ಕಷ್ಟಗಳು ಬಂದಾಗ ಬಸದಿ ಮಠಗಳು ಪರಿಹಾರ ಕೇಂದ್ರವಾಗಿ ಕೆಲಸ ನಿರ್ವಹಿಸುತ್ತಿದ್ದವು. ಬಸದಿಗೆ ಹೋಗಿ ಪ್ರಸಾದವನ್ನು ಕೊಂಡು ಪರಿಹಾರ ಕಂಡುಕೊಳ್ಳುವುದರಿಂದ ಬಸದಿಗಳು ನ್ಯಾಯ ನೀಡುವ ಸ್ಥಾನವಾಗಿಯೂ ಕೆಲಸ ನಿರ್ವಹಿಸಿವೆ ಎಂಬುದು ಸ್ಪಷ್ಟ. ಬಸದಿಯ ಸೇವಾಕಾರ್ಯಗಳಿಗಾಗಿ ಧನರೂಪ ಮತ್ತು ಭೂಮಿರೂಪದಲ್ಲಿ ದಾನಗಳನ್ನು ನೀಡುತ್ತಿದ್ದರು. ಧಾರ್ಮಿಕ ಕಾರ್ಯಗಳು ಸುಸೂತ್ರವಾಗಿ ನಡೆಯಲು ದಾನಗಳನ್ನು ನೀಡಿ ಬಸದಿಗಳು ಸಾಮಾಜಿಕ ಕೇಂದ್ರವಷ್ಟೇ ಅಲ್ಲ ಧಾರ್ಮಿಕ ಕೇಂದ್ರವೂ ಆಗಿ ಹಾಡುವಳ್ಳಿ ಬಸದಿಗಳು ವೈಶಿಷ್ಟ್ಯಪೂರ್ಣ ಕೊಡುಗೆ ನೀಡಿವೆ. ಇದರಂತೆ ಮಠದ ಜೈನ ಮುನಿಗಳು ಅಂದಿನ ಸಮಾಜಕ್ಕೆ ಮಾರ್ಗದರ್ಶಕರಾಗಿ ಜೈನ ಸಂಸ್ಕೃತಿ ಬೆಳೆಯಲು ಅಡಿಗಲ್ಲು ಹಾಕಿದ್ದಾರೆ ಎಂದೆನ್ನಬಹುದು.