ಚಂದ್ರನಾಥ ಮತ್ತು ಇತರ ಮೂರ್ತಿಶಿಲ್ಪಗಳೂ

ಚಂದ್ರನಾಥ ಬಸದಿಯಲ್ಲಿ ಚಂದ್ರನಾಥ ತೀರ್ಥಂಕರ ಮೂರ್ತಿ ಶಿಲ್ಪವಿದೆ. ಚಂದ್ರನಾಥ ೨೪ ತೀರ್ಥಂಕರರಲ್ಲಿ ೮ನೇ ತೀರ್ಥಂಕರ. ಆ ಮೂರ್ತಿಶಿಲ್ಪ ಮಾರ್ಬಲ್ ಶಿಲೆಯಿಂದ ಮಾಡಲ್ಪಟ್ಟಿದೆ. ಇಲ್ಲಿ ಖಡ್ಗಾಸನದಲ್ಲಿ ದೇಹವನ್ನು ದಂಡಿಸಿದಂತಿದ್ದು ಎರಡೂ ಕೈಗಳು ಲೋಲಭಂಗಿ ರೀತಿಯಲ್ಲಿ ಕೆಳಗೆ ಇಳಿಬಿಡಲ್ಪಟ್ಟಿದೆ. ಇದು ಚಂದ್ರನಾಥ ಮೂರ್ತಿಶಿಲ್ಪ ಎಂಬುದಕ್ಕೆ ಲಾಂಛನ ಕಾಣುವುದಿಲ್ಲ. ಆದರೆ ಚಂದ್ರನಾಥ ಬಸದಿ ಚಂದ್ರನಾಥ ತೀರ್ಥಂಕನೆಂದು ಪೂಜಿಸಲಾಗುತ್ತದೆ. ದಪ್ಪ ಮೂಗು, ದೇಹವನ್ನು ದಂಡಿಸಿದಂತೆ ನಿಂತಿರುವುದು ಕೇವಲ ಜ್ಞಾನ ಪಡೆದ ಇಳಿಬಿದ್ದ ಕಿವಿ ಇವು ಈ ಮೂರ್ತಿ ಶಿಲ್ಪದ ವೈಶಿಷ್ಟ್ಯತೆಯಾಗಿದೆ.

ಚಂದ್ರಪ್ರಭ ತೀರ್ಥಂಕರ

ಚಂದ್ರಪ್ರಭ ತೀರ್ಥಂಕರ

ಈ ಮೂರ್ತಿ ಶಿಲ್ಪದ ಮುಂದೆ ಇನ್ನೆರಡು ತೀರ್ಥಂಕರರ ಮೂರ್ತಿಶಿಲ್ಪಗಳಿದ್ದು ಮಾರ್ಬಲ್ ಶಿಲೆಯಿಂದ ರಚಿತವಾಗಿದ್ದು, ಪದ್ಮಾಸನದಲ್ಲಿ ಕುಳಿತಿವೆ. ಗುಂಗುರು ಕೂದಲು, ಕೇವಲ ಜ್ಞಾನ ಪಡೆದ ಇಳಿಬಿದ್ದ ಕಿವಿ, ಪದ್ಮಾಸನದಲ್ಲಿ ಕುಳಿತು ಕಾಲ ಪಾದದ ಮೇಲೆ ಎರಡೂ ಹಸ್ತಗಳನ್ನು ಒಂದರ ಮೇಲೊಂದು ಇಟ್ಟು ತನ್ಮಯತೆಯಿಂದ ಕುಳಿತಿರುವುದು ಈ ಮೂರ್ತಿಶಿಲ್ಪಗಳ ಲಕ್ಷಣಗಳಾಗಿವೆ.

ಚಂದ್ರನಾಥ ದೇವಾಲಯದ ಗರ್ಭಗುಡಿಯಲ್ಲಿ ಖಡ್ಗಾಸನದಲ್ಲಿ ದೇಹ ದಂಡಿಸಿ ನಿಂತಂತೆ ಕಾಣುವ ಇನ್ನೊಂದು ಚಂದ್ರನಾಥ ಮೂರ್ತಿಶಿಲ್ಪವಿದೆ. ಗುಂಗುರು ಕೂದಲು, ಉದ್ದ ಕಿವಿ, ಎರಡೂ ಕೈಗಳು ತೊಡೆಗೆ ತಾಗಿ ವರ್ತುಲಾಕಾರದ ಕಮಲದ ಪೀಠದ ಮೇಲೆ ಧನ್ಯತೆ ಸಾರುವ ಈ ಮೂರ್ತಿಶಿಲ್ಪ ವೈಶಿಷ್ಟ್ಯಪೂರ್ಣವಾಗಿದೆ. ಮಾರ್ಬಲ್ ಶಿಲೆಯಿಂದ ಈ ತೀರ್ಥಂಕರ ಮೂರ್ತಿ ರಚಿತವಾಗಿದೆ. ಇವುಗಳ ಕಾಲ ಕ್ರಿ.ಶ. ಸುಮಾರು ೧೭ನೇ ಶತಮಾನ.

ಚಂದ್ರನಾಥ ತೀರ್ಥಂಕರ

ಚಂದ್ರನಾಥ ತೀರ್ಥಂಕರ

ಚಂದ್ರನಾಥ ಬಸದಿಯ ಭಿತ್ತಿಗೆ ತಾಗಿ ಇನ್ನೊಂದು ತೀರ್ಥಂಕರ ಮೂರ್ತಿ ಕ್ಲೊರೈಟಿಕ್ ಶಿಲೆಯಿಂದ ಮಾಡಲ್ಪಟ್ಟಿದೆ. ಕಮಾನಲಂಕೃತ ತೋರಣದ ಒಳಗೆ ಈ ತೀರ್ಥಂಕರ ಮೂರ್ತಿ ಖಡ್ಗಾಸನದಲ್ಲಿ ನಿಂತಿದೆ. ನಿರಾಭರಣ, ಗುಂಗುರು ಕೂದಲು, ದೇಹವನ್ನು ಸೆಟೆದು ನಿಂತಿರುವುದು, ಕೇವಲ ಜ್ಞಾನ ಪಡೆದ ಇಳಿಬಿದದ ಕಿವಿಗಳು, ಈ ತೀರ್ಥಂಕರ ಮೂರ್ತಿಯ ಲಕ್ಷಣಗಳಾಗಿವೆ. ಬಸದಿಯ ಹೊರಗೆ ಇನ್ನೊಂದು ತೀರ್ಥಂಕರ ಮೂರ್ತಿ ಪದ್ಮಾಸನದಲ್ಲಿದ್ದು ಹೆಚ್ಚಿನ ಭಾಗ ನಶಿಸಿದೆ. ನೇಮಿನಾಥ ಬಸದಿಯಲ್ಲಿನ ನೇಮಿನಾಥ ಮೂರ್ತಿ ಶಿಲ್ಪ ಪದ್ಮಾಸನದಲ್ಲಿದ್ದು ಎಡಬಲಕ್ಕೆ ಬ್ರುಕುಟ ಯಕ್ಷ ಮತ್ತು ಚಾಮುಂಡಿ ಯಕ್ಷಿಯರಿದ್ದಾರೆ. ಸ್ಥಂಭಾಕೃತಿಯ ಪ್ರಭಾವಳಿ ಮಧ್ಯ ನೇಮಿನಾಥ ತೀರ್ಥಂಕರ ಮೂರ್ತಿ ಇದೆ. ಈ ಮೂರ್ತಿಶಿಲ್ಪ ಉಳಿದ ದಿಗಂಬರ ತೀರ್ಥಂಕರ ಮೂರ್ತಿಶಿಲ್ಪಗಳಂತೆ ನಿರಾಭರಣವಾಗಿದೆ.

ಹಾಡುವಳ್ಳಿಯ ಬಸದಿಗಳು, ಮೂರ್ತಿಶಿಲ್ಪಗಳು ಕಲಾ ಸೌಂದರ್ಯದ ದೃಷ್ಟಿಯನ್ನು ಬಿಂಬಿಸಿದೆ. ತೀರ್ಥಂಕರ ಯಕ್ಷ ಯಕ್ಷಿಯರು, ವಿದ್ಯಾ ದೇವತೆಗಳು, ಕಟಾಂಜನದ ಮಾದರಿ, ಕಟಾಂಜನದಲ್ಲಿನ ಜಿಂಕೆ, ಮೂರ್ತಿಶಿಲ್ಪಗಳಲ್ಲಿನ ಆಯುಧಗಳು, ಚಾಮರಧಾರಿಣಿ ಇವೆಲ್ಲವು ಇಲ್ಲಿನ ಕಲಾ ಸೌಂದರ್ಯಕ್ಕೆ ಉತ್ತಮ ನಿದರ್ಶನಗಳಾಗಿವೆ.

ಯಕ್ಷಯಕ್ಷಿಯರು

ಪೂರ್ಣಕುಂಭ, ವೃಕ್ಷಪೂಜೆ, ನಾಗಾರಾಧನೆಯಂತ ಯಕ್ಷ ಯಕ್ಷಿಯರು ಬೌದ್ಧ, ಜೈನ ಮತ್ತು ಹಿಂದೂ ಧರ್ಮದಲ್ಲಿ ವೈಶಿಷ್ಟ್ಯಪೂರ್ಣ ಸ್ಥಾನ ಪಡೆದಿದ್ದಾರೆ. ಈ ಯಕ್ಷರು ಯಾರು?. ಇವರು ದೇವತಾ ಯೋನಿಯಲ್ಲಿ ಸೇರಿದವರು. ಯಕ್ಷ ರಕ್ಷ ಗಂಧರ್ವ ಕಿನ್ನರರ ಸಾಲಿನಲ್ಲಿ ಮೊದಲನೆಯವರು. ಪುರಾಣಯುಗ ಕಲ್ಪನೆಯಲ್ಲಿ ಕೈಲಾಸ ಪರ್ವತದಲ್ಲಿ ವಾಸಿಸುವರು ಕುಬೇರನ ಅನುಚರರು ನಿಧಿ ಕಾಪಾಡುವವರು ಎಂದಿದೆ (ರಾಮಚಂದ್ರರಾವ್ ಎಸ್. ಕೆ., ೧೯೭೫, ಪು. ೨೩). ಆದರೆ ಜೈನಧರ್ಮಕ್ಕೆ ಸೀಮಿತವಾದಂತೆ ಯಕ್ಷ ಯಕ್ಷಿಯರು ಇಹಲೋಕ ಸೌಖ್ಯ ನೀಡುವವರು ಎಂದು ಪೂಜಿಸಲಾಗುತ್ತಿದೆ. ತೀರ್ಥಂಕರರು ಮುಕ್ತಿ ಮಾರ್ಗದರ್ಶಕರೆಂದು ಪೂಜಿಸಿದರೆ ಯಕ್ಷ ಯಕ್ಷಿಯರನ್ನು ಇಹಲೋಕ ಸೌಖ್ಯಕ್ಕಾಗಿ ಪೂಜಿಸುತ್ತಾರೆ. ಜೈನಮೂರ್ತಿ ಶಿಲ್ಪದಲ್ಲಿ ಕಂಡುಬಂದಂತೆ ಯಕ್ಷ ಯಕ್ಷಿಯರು ತೀರ್ಥಂಕರರ ಸಹಚರರು. ತೀರ್ಥಂಕರರ ಮೂರ್ತಿ ಶಿಲ್ಪಗಳು ನಿರಾಭರಣವಾಗಿದ್ದರೆ ಯಕ್ಷ ಯಕ್ಷಿಯರ ಶಿಲ್ಪಗಳು ಆಭರಣ ಭೂಷಿತರು. ಜೈನಮೂರ್ತಿ ಶಿಲ್ಪದಲ್ಲಿ ತೀರ್ಥಂಕರರು ನಿರಾಭರಣರಾಗಿರುವುದರಿಂದ, ಇಲ್ಲಿನ ಕಲಾಸೌಂದರ್ಯ ನೋಡಬೇಕೆಂದಲ್ಲಿ ಯಕ್ಷಯಕ್ಷಿಯರೆ ಪಾತ್ರವೇ ಹೆಚ್ಚಿನದಾಗಿರುತ್ತದೆ.

ಸಾಮಾನ್ಯವಾಗಿ ಯಕ್ಷರು ಎರಡು ಕೈಗಳನ್ನು ಹೊಂದಿದ್ದು, ಒಂದು ಕೈ ಅಭಯ ಮುದ್ರೆ ಇನ್ನೊಂದು ಕೈನಲ್ಲಿ ಬೀಜಫಲ ಹಿಡಿದಿರುತ್ತದೆ. ಸಾಮಾನ್ಯವಾಗಿ ಯಕ್ಷಿಯರು ನಾಲ್ಕು ಕೈಗಳನ್ನು ಹೊಂದಿದ್ದು, ಅಂಕುಶ, ಖಡ್ಗ, ಧನಸ್ಸು, ಖೇಟಿಕ, ಚಕ್ರಗಳನ್ನು ಹಿಡಿದಿರುತ್ತಾರೆ (ವಸಂತ ಲಕ್ಷ್ಮಿ ಕೆ., ೨೦೦೬, ಪು. ೧೨೧). ಹಿಂದೂ ದೇವಾಲಯಗಳಲ್ಲಿ ಉಪದೇವತೆ ಅಥವಾ ಸಹಚರರಿದ್ದಂತೆ ಜೈನ ಪರಂಪರೆಯಲ್ಲಿ ಯಕ್ಷ ಯಕ್ಷಿಯರ ಕಿರೀಟಮುಕುಟದಲ್ಲಿ ಕಾಣುವ ಜಿನಬಿಂಬ ಇದಕ್ಕೆ ಉತ್ತಮ ನಿದರ್ಶನ. ಜೈನ ಪರಂಪರೆಯಲ್ಲಿ ತ್ರಿಕಾಲ ತೀರ್ಥಂಕರರನ್ನು ಕುರಿತು ಮೇಲೆ ಪ್ರಸ್ತಾಪಿಸಲಾಗಿದೆ. ತ್ರಿಕಾಲದಲ್ಲಿ ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷತ್‌ಕಾಲ ಹೀಗೆ ಪ್ರತಿಯೊಂದು ಕಾಲಕ್ಕೂ ೨೪ ತೀರ್ಥಂಕರರಂತೆ ಒಟ್ಟು ೭೨ ತೀರ್ಥಂಕರರಿಗೆ ೭೧ ಯಕ್ಷ ಯಕ್ಷಿಯರು ಇರುತ್ತಾರೆ (ಶೆಟ್ಟಿ ಎಸ್.ಡಿ., ೨೦೦೨, ಪು. ೩೩೯), ಆದರೆ ಜೈನ ಕೇಂದ್ರ ಸ್ಥಳಗಳಲ್ಲಿ ವರ್ತಮಾನ ಕಾಲದ ೨೪ ತೀರ್ಥಂಕರರು ಪೂಜೆಗೊಳ್ಳುತ್ತಿರುವುದರಿಂದ ೨೪ ತೀರ್ಥಂಕರರ ಯಕ್ಷ ಯಕ್ಷಿಯರಿಗೂ ತೀರ್ಥಂಕರರ ಜೊತೆಯಲ್ಲಿ ಪೂಜೆಗೊಳ್ಳುತ್ತಿರುವುದು ಇದೊಂದು ವಿಶೇಷತೆಯೇ ಸರಿ.

ಚವ್ವೀಶ ತೀರ್ಥಂಕರರು

ಚವ್ವೀಶ ತೀರ್ಥಂಕರರು

ಜೈನ ಕೇಂದ್ರ ಹಾಡುವಳ್ಳಿ ಗ್ರಾಮದಲ್ಲಿನ ಹರಿಪೀಠದ ಚವ್ವೀಶ್ ತೀರ್ಥಂಕರರ ಜೊತೆ ೨೪ ಯಕ್ಷ ಯಕ್ಷಿಯರೂ ಬಿಂಬಿತವಾಗಿದ್ದಾರೆ. ಗೋಮುಖ – ಚಕ್ರೇಶ್ವರಿ, ಮಹಾಯಕ್ಷ – ರೋಹಿಣಿ, ತ್ರಿಮುಖ – ಪ್ರಜ್ಞಪ್ತಿ, ಯಕ್ಷೇಶ್ವರ – ವಜ್ರಶ್ರಂಖಲಾ ತುಂಬರು – ಪುರುಷದತ್ತೊ, ಕುಸುಮ ಮನೋವೇಗಾ, ವರನಂದಿ – ಕಾಳಿ, ವಿಜಯ – ಜ್ವಾಲಾಮಾಲಿನಿ, ಅಜಿತ – ಮಹಾಕಾಳಿ, ಬ್ರಹ್ಮ – ಮಾನವಿ, ಈಶ್ವರ – ಗೌರಿ, ಕುಮಾರ – ಗಂಧಾರಿ, ಷಣ್ಮುಖ – ವೈರೋಟಿ, ಪಾಟಲ – ಅನಂತಮತಿ, ಕಿನ್ನರ – ಮಾನಸಿ, ಕಿಂಪುರುಷ – ಮಹಾಮಾನಸಿ, ಗಂಧರ್ವ – ವಿಜಯ, ರವೇಂದ್ರ – ಅಜಿತ, ಕುಬೇರ, ಅಪರಾಜಿತ – ವರುಣ, ಭ್ರಕುಟಿ – ಚಾಮುಂಡ, ಸರ್ಪಾನ – ಕುಷ್ಮಾಂಡಿನಿ, ಧರಣೇಂದ್ರ – ಪದ್ಮಾವತಿ, ಮಾತಂಗ – ಸಿದ್ದಾಯಿಕ, ಈ ಯಕ್ಷ ಯಕ್ಷಿಯರು ತೀರ್ಥಂಕರರ ಜೊತೆಗೆ ಇದ್ದರೂ ಸರ್ವಾಭರಣಭೂಷಿತರಾಗಿ ಆಯುಧಗಳನ್ನು ಹಿಡಿದು ೨೪ ತೀರ್ಥಂಕರರು ಎಡಬಲ ಭಾಗದಲ್ಲಿ ಬಿಂಬಿತವಾಗಿದ್ದಾರೆ. ಯಕ್ಷ ಯಕ್ಷಿಯರ ಮೈಬಣ್ಣ, ಆಯುಧಗಳು ಪಣ್ಣತ್ತಿ ಪ್ರತಿಷ್ಠಾಸಾರ, ಅಭಿಧಾನ ಚಿಂತಾಮಣಿ ಮತ್ತು ಅಪರಾಜಿತ ಪ್ರಚ್ಛಾ ಗ್ರಂಥಗಳಲ್ಲಿ ಉಲ್ಲೇಖವಾಗಿವೆ (ನಾಗರಾಜಯ್ಯ ಹಂಪ, ೧೯೭೬, ಪು. ೯೫ – ೯೬). ತ್ರಿಕಾಲ, ತೀರ್ಥಂಕರರು ಒಂದೆಡೆಯಲ್ಲಿ ಸಿಗುತ್ತವೆಯಾದರೂ ಯಕ್ಷ ಯಕ್ಷಿಯರ ಶಿಲ್ಪ ತೀರ್ಥಂಕರರ ಜೊತೆಗೆ ಇರಬೇಕೆಂಬ ನಿಯಮವೇನಿಲ್ಲ. ಕೆಲವೊಮ್ಮೆ ಸ್ವತಂತ್ರವಾಗಿಯೂ ಬಸದಿಗಳಲ್ಲಿ ನೋಡಬಹುದು. ಉದಾ. ಹಾಡುವಳ್ಳಿಯಲ್ಲಿ ಜ್ವಾಲಾಮಾಲಿನಿ ಚಂದ್ರನಾಥ ತೀರ್ಥಂಕರರ ಜೊತೆ ಪೂಜೆಗೊಳ್ಳುತ್ತದೆ. ಪದ್ಮಾವತಿ ಯಕ್ಷಿ, ಬ್ರಹ್ಮಯಕ್ಷ ಸ್ವತಂತ್ರ ದುಂಡು ಶಿಲ್ಪಗಳೇ ಇವೆ. ತೀರ್ಥಂಕರರು ಜೈನಧರ್ಮದ ಮೂಲಪುರುಷರಾದರೆ ಪೂಜೆ ತೀರ್ಥಂಕರರಿಗೆ ಮಾತ್ರ ಸೀಮಿತವಲ್ಲ. ಅಂದರೆ ಧರ್ಮವೆಂಬುದು ಹಿರಿಯ ಚೇತನಗಳಿಗಾಗಿ ಮಾತ್ರ ಮೀಸಲಾಗಿಲ್ಲ (ಚಿದಾನಂದಮೂರ್ತಿ ಎಂ., ೨೦೦೮, ಪು.೧೦). ಜನಸಾಮಾನ್ಯರಿಗಾಗಿ ಮಾತ್ರ ದೇವತಾ ಪೂಜೆ ಆರಂಭವಾಯಿತು. ತೀರ್ಥಂಕರರಿಗೆಕ ಪೂಜೆ ಸಲ್ಲಿಸುವಾಗ ಅಕ್ಕಪಕ್ಕದ ಶಾಸನ ದೇವತೆಗಳಿಗೂ ಪೂಜೆ ಸಲ್ಲಿಸಲು ಆರಂಭವಾಗಿ ನಂತರ ಶಾಸನ ದೇವತೆಗಳಿಗೆ ಸ್ವತಂತ್ರವಾಗಿ ಪೂಜೆ ಸಲ್ಲಲು ಪ್ರಾರಂಭವಾಯಿತು. ಇದೇ ಯಕ್ಷ ಆರಾಧನೆ (ದೇಸಾಯಿ ಪಿ.ಬಿ., ೧೯೫೪, ಪು.೩೨). ಕರ್ನಾಟಕದಲ್ಲಿ ಯಕ್ಷಿ ಆರಾಧನೆ ಕ್ರಿ.ಶ.ಲ ೮ನೇ ಶತಮಾನದಿಂದ ಆರಂಭವಾಯಿತೆಂದು ಹೇಳಬಹುದು. ಕ್ರಿ.ಶ. ೯ನೇ ಶತಮಾನದಲ್ಲಿ ತೀರ್ಥಂಕರರ ಎಡಭಾಗದಲ್ಲಿ ಯಕ್ಷಿ, ಬಲಭಾಗದಲ್ಲಿ ಯಕ್ಷನನ್ನು ಪೂಜೆ ಮಾಡುವ ಪದ್ಧತಿ ಆರಂಭವಾಯಿತು (ತಿವಾರಿ ಎಸ್., ೧೯೮೩, ಪು. ೨೫೩). ಒಟ್ಟಾರೆ ೨೪ ತೀರ್ಥಂಕರರ ಜೊತೆಯಲ್ಲೇ ಯಕ್ಷ ಯಕ್ಷಿಯರಿಗೆ ಪೂಜೆ ಸಲ್ಲುತ್ತಾದರೂ ತುಳುನಾಡಿನಲ್ಲಿ ಆದಿನಾಥ, ಚಂದ್ರನಾಥ, ನೇಮಿನಾಥ, ಪಾರ್ಶ್ವನಾಥ ಮತ್ತು ಮಹಾವೀರ ಬಸದಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಇವರ ಯಕ್ಷಿಯರಾದ ಚಕ್ರೇಶ್ವರಿ, ಜ್ವಾಲಾಮಾಲಿನಿ, ಕೂಷ್ಮಾಂಡಿನಿ ಅಥವಾ ಅಂಬಿಕಾ, ಪದ್ಮಾವತಿ ಮೂರ್ತಿ ಶಿಲ್ಪಗಳು ಹೆಚ್ಚು ಕಾಣಸಿಗುತ್ತವೆ (ಶೆಟ್ಟಿ ಎಸ್.ಡಿ., ೨೦೦೨, ಪು. ೩೪೬). ಜೈನಕೇಂದ್ರವಾದ ಹಾಡುವಳ್ಳಿ ಅಂದು ತುಳುನಾಡಿಗೆ ಸೇರಿದುದರಿಂದ ಇಲ್ಲಿಯೂ ಯಕ್ಷಿ ಆರಾಧನೆ ಇತ್ತೆಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಹಾಡುವಳ್ಳಿ ಗ್ರಾಮದಲ್ಲಿನ ಯಕ್ಷ ಯಕ್ಷಿಯರ ಮೂರ್ತಿ ವೈಶಿಷ್ಟ್ಯತೆಯನ್ನು ಹೇಳಲಾಗಿದೆ.

ಹತ್ತನೆಯ ತೀರ್ಥಂಕರನಾದ ಶೀತನಾಥನ ಯಕ್ಷನ ಹೆಸರು ಬ್ರಹ್ಮ. ಹೆಚ್ಚಿನ ಮಟ್ಟಿಗೆ ಬ್ರಹ್ಮಯಕ್ಷನ ಮೂರ್ತಿಗಳನ್ನು ಬಸದಿಯ ಮುಂದೆ ಇರುವ ಕಂಬಗಳ ಮೇಲೆ ಕಾಣಬಹುದು. ಸುಖಾಸನ ಮುದ್ರೆಯಲ್ಲಿದ್ದಾಗ ದ್ವಿಬಾಹುವಾಗಿದ್ದ ಒಂದು ಕೈಯಲ್ಲಿ ವಜ್ರಾಯುಧವನ್ನು ಇನ್ನೊಂದು ಕೈಲಿ ಬಹುಬೀಜ ಫಲವನ್ನು ಹಿಡಿದಿರುತ್ತಾನೆ. ಕೆಲವೊಮ್ಮೆ ಬ್ರಹ್ಮ ಕುದುರೆಯ ಮೇಲೆ ಕುಳಿತಿದ್ದು ಕುದುರೆ ಕೆನೆಯುವ ಸ್ಥಿತಿಯಲ್ಲಿರುತ್ತದೆ. ಇವು ಬ್ರಹ್ಮಮೂರ್ತಿ ಶಿಲ್ಪದ ಸಾಮಾನ್ಯ ಲಕ್ಷಣಗಳಾಗಿವೆ. ಜೈನ ಪರಂಪರೆಯಲ್ಲಿ ಬ್ರಹ್ಮ ಯಕ್ಷ ಕ್ರೇತ್ರ ರಕ್ಷಕನೆಂಬ ನಂಬಿಕೆ ಇದೆ.

ಬ್ರಹ್ಮಯಕ್ಷ

ಬ್ರಹ್ಮಯಕ್ಷ

ಪ್ರಸ್ತುತ ಹಾಡುವಳ್ಳಿ ಗ್ರಾಮಕ್ಕೆ ಸಂಬಂಧಿಸಿದಂತೆ ಮೂರು ಬ್ರಹ್ಮ ಯಕ್ಷ ಶಿಲ್ಪಗಳು ಕಂಡುಬಂದಿವೆ. ಇವುಗಳಲ್ಲಿ ಒಂದು ಲೋಹದ ಮೂರ್ತಿಯಾದರೆ ಇನ್ನೆರಡು ಬ್ರಹ್ಮ ಯಕ್ಷ ಮೂರ್ತಿಗಳು ಶಿಲೆಯದ್ದಾಗಿದೆ. ವಸ್ತುವಿನ ವೈವಿಧ್ಯತೆ ಇದ್ದಂತೆ ಮೂರ್ತಿಶಿಲ್ಪದಲ್ಲೂ ಕುಳಿತ ಭಂಗಿಯಲ್ಲಿ ವೈವಿಧ್ಯತೆ ಇದೆ. ಶಿಲೆಯಿಂದ ಮಾಡಿದ ಬ್ರಹ್ಮ ಯಕ್ಷ ಕುದುರೆಯ ಮೇಲೆ ಕುಳಿತು ಮುಖವನ್ನು ಬಲಕ್ಕೆ ಹೊರಳಿಸಿದಂತಿದೆ. ಬಲಗೈಯಲ್ಲಿ ವಜ್ರಾಯುಧ ಎಡಗೈಲಿ ಬಹುಬೀಜ ಫಲ ಹಿಡಿದಿದ್ದಾನೆ. ಇಲ್ಲಿ ಬ್ರಹ್ಮ ಯಕ್ಷ ಕಿರೀಟ ಕರ್ಣಕುಂಡಲ, ಅಗಲವಾದ ಕಂಠಹಾರ, ಕಾಲ್ಗಡಗ ಧರಿಸಿದ್ದನ್ನು ಕಲಾತ್ಮಕವಾಗಿ ತೋರಿಸಲಾಗಿದೆ. ಕುದುರೆಯ ಮುಂಭಾಗದ ಎರಡೂ ಕಾಲ್ಗಳು ಕೆನೆಯುವ ಭಂಗಿಯಲ್ಲಿದೆ. ಕೆಳಗಡೆ ಹುಲಿಯ ಶಿಲ್ಪವಿದೆ. ಪ್ರಭಾವಳಿ ಕೀರ್ತಿಮುಖ ಮತ್ತು ಹೂಗಳಿಂದ ಅಲಂಕೃತವಾಗಿದೆ. ಬ್ರಹ್ಮ ಯಕ್ಷನ ಕುಳಿತ ಕುದುರೆಯ ಬೆನ್ನಭಾಗ ವಸ್ತ್ರಾಭರಣದಿಂದ ಅಲಂಕೃತವಾಗಿದೆ.

ಬ್ರಹ್ಮಯಕ್ಷ

ಬ್ರಹ್ಮಯಕ್ಷ

ಇನ್ನೊಂದು ಬ್ರಹ್ಮ ಯಕ್ಷ ಕುದುರೆಯ ಮೇಲೆ ನೇರವಾಗಿ ಕುಳಿತಿದ್ದು ಬ್ರಹ್ಮ ಯಕ್ಷನಿಗೆ ಎರಡು ಕೈಗಳಿವೆ. ಬಲಗೈಲಿ ವಜ್ರಾಯುಧ ಎಡಗೈಲಿ ಬೀಜಫಲ ಹಿಡಿದಿದೆ. ತಲೆಗೆ ಕರಂಡ ಮಕುಟ, ಕುಂಡಲ, ಅಗಲವಾದ ಕಂಠಹಾರ ಕೈಬಳೆ ಕಾಲ್ಗಡಗ ಧರಿಸಿರುವುದು ಜೀ ಮೂರ್ತಿಶಿಲ್ಪದ ಲಕ್ಷಣಗಳಾಗಿವೆ. ಹಾಡುವಳ್ಳಿ ಗ್ರಾಮಕ್ಕೆ ಸೇರಿದ ಲೋಹ ಶಿಲ್ಪ ಇನ್ನೊಂದು ಬ್ರಹ್ಮ ಯಕ್ಷ ವಿಗ್ರಹ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿದ್ದು ಈ ವಿಗ್ರಹದ ಲಕ್ಷಣವನ್ನು ಲೋಹಶಿಲ್ಪದ ಅಧ್ಯಾಯದಲ್ಲಿ ವಿವರಿಸಲಾಗಿದೆ.

ಪದ್ಮಾವತಿ : ಜೈನ ಗೃಹಸ್ಥ ಧರ್ಮದಲ್ಲಿ ಲೌಕಿಕ ಮತ್ತು ಪರಲೌಕಿಕ ಎಂಬ ಎರಡು ವಿಧವಿದೆ. ಮೊದಲನೆಯದು ರೂಢಿಯಲ್ಲಿರುವುದು, ಎರಡನೆಯದು ಗ್ರಂಥಸ್ಥವಾದುದು (ಶೆಟ್ಟಿ ಎಸ್.ಡಿ. ೨೦೦೨, ಪು. ೨೪೫ – ೪೬). ಜ್ವಾಲಾಮಾಲಿನಿ ಪದ್ಮಾವತಿ ಪೂಜೆ ಸಮಾಜದಲ್ಲಿ ಲೌಕಿಕ ಸುಖ – ಸಂತೋಷಗಳನ್ನು ಅನುಗ್ರಹಿಸುವುದರಿಂದ ಜನಸಾಮಾನ್ಯರಿಗೆ ಪ್ರಿಯ ದೇವತೆಗಳಾದರು. ಇದೇ ಕಾರಣದಿಂದಲೇ ಇವರ ತೀರ್ಥಂಕರರಾದ ಚಂದ್ರನಾಥ ಮತ್ತು ಪಾರ್ಶ್ವನಾಥ ಬಸದಿಯು ಹೆಚ್ಚಾಗಿರಲು ಸಾಧ್ಯ (ಸುಂದರ ಅ., ೧೯೭೫, ಪು.೧೯೦ – ೯೧).

ಪದ್ಮಾವತಿ ಯಕ್ಷಿ

ಪದ್ಮಾವತಿ ಯಕ್ಷಿ

ಪ್ರಸ್ತುತ ಹಾಡುವಳ್ಳಿಗೆ ಸಂಬಂಧಿಸಿದಂತೆರ ಎರಡು ಮೂರ್ತಿಶಿಲ್ಪಗಳು ಮತ್ತು ಒಂದು ಪದ್ಮಾವತಿಯ ಕಂಚಿನ ಪ್ರತಿಮೆ ದೊರಕಿದೆ. ಒಂದು ಪದ್ಮಾವತಿ ಮೂರ್ತಿಶಿಲ್ಪ ಚವ್ವೀಶ ತೀರ್ಥಂಕರ ಮುಂಬದಿಯಲ್ಲಿದೆ. ಮಧ್ಯಕಾಲೀನಕ್ಕೆ ಸೇರಿದ ಈ ಮೂರ್ತಿಶಿಲ್ಪ ಪೀಠದ ಮೇಲೆ ಸುಖಾಸನದಲ್ಲಿದೆ. ಇಲ್ಲಿ ಪದ್ಮಾವತಿ ಚತುರ್ಭುಜಳಾಗಿದ್ದು ಬಲಗೈಗಳಲ್ಲಲಿ ಅಂಕುಶ ಇನ್ನೊಂದು ಬಲಗೈ ಅಭಯ ಮುದ್ರೆಯಲ್ಲಿದೆ. ಎಡಗೈಗಳಲ್ಲಿ ನಾಗಪಾಶ ಮತ್ತು ಬೀಜಪುರವಿದೆ. ಈ ಪ್ರತ್ಯೇಕ ಶಿಲ್ಪ ಚವ್ವೀಶ ತೀರ್ಥಂಕರ ಬಸದಿಯಲ್ಲಿದೆ. ಪ್ರಭಾವಳಿಯ ಮೇಲ್ಭಾಗ ಕೀರ್ತಿಮುಖದಿಂದ ಅಲಂಕೃತವಾಗಿದೆ. ವರ್ತುಲಾಕಾರದ ಕಿವಿಯೋಲೆ ಕರ್ಣಕುಂಡಲ, ಕಿರೀಟ, ಕೈಬಳೆ, ಕಂಠಹಾರ, ಕಾಲ್ಗಡಗ ಧರಿಸಿರುವುದು ಮೂರ್ತಿ ಶಿಲ್ಪದ ವೈಶಿಷ್ಟ್ಯತೆಯಾಗಿದೆ.

ಪದ್ಮಾವತಿ ಯಕ್ಷಿ

ಪದ್ಮಾವತಿ ಯಕ್ಷಿ

ಪೂರ್ವ ಮಧ್ಯಕಾಲೀನ ಯುಗಕ್ಕೆ ಸೇರಿದ ಇನ್ನೊಂದು ಪದ್ಮಾವತಿ ಯಕ್ಷಿ ಕಮಲಪೀಠದ ಮೇಲೆ ಸುಖಾಸನದಲ್ಲಿ ಕುಳಿತಿದೆ. ಇಲ್ಲಿ ಪದ್ಮಾವತಿ ಚತುರ್ಭುಜೆಯಾಗಿದ್ದು ಬಲಗೈಲಿ ಅಂಕುಶ, ಇನ್ನೊಂದು ಬಲಗೈ ಹಸ್ತಭಾಗ ಮುರಿದಿದೆ. ಎಡಗೈಗಳಲ್ಲಿ ನಾಗಪಾಶ ಮತ್ತು ಬೀಜಫಲ ಹಿಡಿದಿದ್ದಾಳೆ. ಕಿರೀಟ ಮಕುಟ ವರ್ತುಲಾಕಾರದ ಕಿವಿ ಓಲೆ, ಅಗಲವಾದ ಕಂಠಹಾರ, ಕಟಿಬಂಧ, ವೈಜಯಂತಿ ಹಾರ, ಕಾಲಭಾಗಕ್ಕೆ ವಸ್ತ್ರಧಾರಣ ಕೆತ್ತನೆ ಆದಿ ಮಧ್ಯಕಾಲೀನ ಯುಗದ ಸೌಂದರ್ಯದ ಪರಿಕಾಷ್ಠತೆಗೆ ಇದೊಂದು ಉತ್ತಮ ನಿದರ್ಶನ. ಕಿರೀಟದ ಪ್ರಭಾ ಮಂಡಲದ ಬಲಭಾಗ ಮುರಿದಿದೆ. ಪ್ರಭಾವಳಿ ಸುತ್ತಲೂ ಹೂವು ಮತ್ತು ನಾಗಾಲಂಕೃತ ತೋರಣವಿದೆ.

ನಾಗಶಿಲ್ಪ

ಭಾರತದಲ್ಲಿ ಅದರಲ್ಲೂ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ನಾಗಪೂಜೆ ಕಲ್ಪನೆ ಎಲ್ಲಡೆ ಹರಡಿವೆ. ಇದು ವೇದ ಪುರಾಣವಲ್ಲದೇ ಕ್ರೈಸ್ತ ಪುರಾಣಗಳಲ್ಲಿ ಆದಿದಂಪತಿಗಳಿಗೆ ಆದಿಮ ಪಾಪ ಕಟ್ಟಲು ಕಾರಣವಾದ ಸರ್ಪದ ಉಲ್ಲೇಖವಿದೆ (ರಾಮಚಂದ್ರರಾವ್ ಎಸ್.ಕೆ., ೧೯೭೫, ಪು. ೧೯) ಹಾವಿನ ಹುತ್ತಕ್ಕೆ ಹಾಲೆರೆಯುವುದು, ನಾಗಬಂಧ ಮಾಡಿಸುವುದು, ನಾಗಮಂಡಲ ನಡೆಸುವುದು ನಾಗಾರಾಧನೆ ಇಂದಿಗೂ ತುಳುನಾಡಿನಲ್ಲಿ ಹೆಚ್ಚು ಪ್ರಚಲಿತವಿದೆ. ಇಂದಿಗೂ ಸುಬ್ರಹ್ಮಣ್ಯ, ಬಳ್ಳಮಂಜೆ, ಕಾಡುಕುಕ್ಕಿ, ಕುಡುಪ, ಮಂಜೇಶ್ವರ, ವಿಟ್ಲ, ಕಟ್ಯಂಗೆರೆ ಕ್ಷೇತ್ರಗಳು ನಾಗಪೂಜೆಗೆ ಮೀಸಲಾದವು (ರಾಮಚಂದ್ರರಾವ್ ಎಸ್.ಕೆ., ೧೯೭೫, ಪು. ೧೯). ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗ ಪ್ರತಿಷ್ಠಾಪನೆ, ಶೇಷ ಸೇವೆ ಇಂದಿಗೂ ಪ್ರಚಲಿತದಲ್ಲಿದೆ. ಶಿಲ್ಪದಲ್ಲಿ ಹಾವನ್ನು ದೇವತಾ ಕಲ್ಪನೆಗೆ ಅಳವಡಿಸಿಕೊಂಡಿರುವುದು ಸೈಂಧವ ಸಂಸ್ಕೃತಿಯ ಕಾಲದಿಂದಲೂ ನಡೆದುಬಂದಿದೆ (ರಾಮಚಂದ್ರರಾವ್ ಎಸ್.ಕೆ. ೧೯೭೫, ಪು. ೨೦). ಶಿವನಿಗೆ ಹಾವು ಆಭರಣ, ವಿಷ್ಣು ಪವಡಿಸಿರುವುದು ಹಾವಿನ ಮೇಲೆ. ಗಣೇಶ ಹಾವನ್ನು ಯಜ್ಞೋಪವಿತವಾಗಿ ಅಥವಾ ಹೊಟ್ಟೆಗೆ ಧರಿಸಿರುವುದನ್ನು ನಾವು ಶಿಲ್ಪದಲ್ಲಿ ಕಾಣಬಹುದು. ಬೌದ್ಧ ಧರ್ಮದಲ್ಲಿ ಮೂರ್ತಿಲಿಂಗ ಬುದ್ಧನ ಮೂರ್ತಿ, ಅದೇ ರೀತಿ ಜೈನ ಧರ್ಮದಲ್ಲಿ ಪಾರ್ಶ್ವನಾಥ ಮತ್ತು ಸುಪಾರ್ಶ್ವನಾಥ ತೀರ್ಥಂಕರ; ಮೂರ್ತಿ ಶಿಲ್ಪದಲ್ಲಿ ತಲೆಯ ಮೆಲೆ ಹಾವಿನ ಕೊಡೆಯನ್ನು ಕಾಣುತ್ತೇವೆ. ಅದೇ ರೀತಿ ಪ್ರಭಾವಳಿಯಲ್ಲಿ ನಾಗಾಲಂಕೃತ ತೋರಣವನ್ನು ನೋಡುತ್ತೇವೆ. ಹೀಗೆ ಯಾವ ಪಂಥದಲ್ಲೂ ನಾಗದೇವತೆಗೆ ಸ್ಥಾನ ಇಲ್ಲವೆಂದಿಲ್ಲ. ನಾಗಪಾಶ, ನಾಗಶಾಪ ಎಂದರೆ ಬಿಡಿಸಲಾಗದ ಕಟ್ಟು ಎಂಬುದು ಇಂದಿಗೂ ಜನಸಾಮಾನ್ಯರಲ್ಲಿ ಮನಸ್ಸಿನಲ್ಲಿ ಬೇರೂರಿದೆ.

ನಾಗಶಿಲ್ಪ

ನಾಗಶಿಲ್ಪ

ಇಂದಿನಿಂದಲೂ ನಾಗಶಿಲ್ಪ ಮತ್ತು ನಾಗಪೂಜೆಗಾಗಿ ಮಂದಿರಗಳನ್ನು ನಿರ್ಮಿಸುತ್ತಿದ್ದರು. ಇವುಗಳ ಉಪಾಸಕರನ್ನು ಇತಿಹಾಸವೇತ್ತರು ಮೂಲತಃ ಅನಾರ್ಯರೆಂದು ಕರೆಯುತ್ತಾರೆ. ಜೈನರು ಹಿಂಸಾತ್ಮಕ ಪೂಜಾ ವಿಧಾನಗಳನ್ನು ನಿಷೇಧಿಸಿದರು. ಆದರೆ ಪ್ರಮುಖ ಯಕ್ಷ ನಾಗಾದಿದೇವತೆಗಳನ್ನು ತೀರ್ಥಂಕರರ ರಕ್ಷಕ ರೂಪದಲ್ಲಿ ಸ್ವೀಕಾರ ಮಾಡಿ ದೇವಾಲಯಗಳಲ್ಲಿ ನಾಗನಿಗೆ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆ. (ಹೀರಾಲಾಲ ಜೈನ (ಲೇ), ಮಿರ್ಜಿ ಅಣ್ಣಾರಾಯ (ಅನು), ೧೯೮೧, ಪು ೬). ನಾಗದೇವತೆಗೆ ಮಹತ್ವದ ಸ್ಥಾನವನ್ನು ಕಲ್ಪಿಸಿಕೊಟ್ಟವುಗಳಲ್ಲಿ ಜೈನ ಕೇಂದ್ರ ಹಾಡುವಳ್ಳಿ ಗ್ರಾಮವೂ ಒಂದಾಗಿದೆ.

ಹಾಡುವಳ್ಳಯ ನಾಗರಕಲ್ಲುಗಳು

ಹಾಡುವಳ್ಳಯ ನಾಗರಕಲ್ಲುಗಳು

ಪ್ರಸ್ತುತ ಹಾಡುವಳ್ಳಿ ಗ್ರಾಮ ಅಂದು ತುಳುನಾಡಿಗೆ ಸೇರಿತ್ತು. ತುಳುನಾಡಿನ ಭೂತಾರಾಧನೆ ಮತ್ತು ನಾಗರಾಧನೆ ಒಂದು ವಿಶಿಷ್ಟ ಆರಾಧನಾ ಪರಂಪರೆಯಾಗಿ ಬೆಳೆದು ಬಂದಿದೆ. ನಾಗದೇವತೆ ಒಂದು ಮತಕ್ಕೆ ಅಥವಾ ಪಂಗಡಕ್ಕೆ ಸೇರಿಲ್ಲ. ಜನಸಾಮಾನ್ಯರ ಮನದಲ್ಲಿ ನೆಲೆಸಿದೆ. ಶ್ರಾವಣ ಶುದ್ಧ ಪಂಚಮಿಯಂದು ಇಂದಿಗೂ ನಾಗರಪಂಚಮಿ ಎಂತಲೇ ಆಚರಿಸಲಾಗುತ್ತದೆ (ಶೆಟ್ಟಿ ಎಸ್.ಡಿ., ೨೦೦೨, ಪು. ೧೯೪). ಜೈನ ಪುರಾಣದಲ್ಲಿ ಉಕ್ತವಾಗಿರುವಂತೆ ಧರಣೇಂದ್ರ ಪದ್ಮಾವತಿಯರು ನಾಗದಂಪತಿಗಳಾಗಿದ್ದು ಪಾರ್ಶ್ವನಾಥ ತೀರ್ಥಂಕರರ ಯಕ್ಷ ಯಕ್ಷಿಯರೂ ಆಗಿದ್ದಾರೆ. (ನಾಗರಾಜಯ್ಯ ಹಂಪ, ೧೯೭೬, ಪು. ೧೩೮). ಹೀಗಾಗಿ ೨೩ನೇ ತೀರ್ಥಂಕರನಾದ ಯಕ್ಷ ಯಕ್ಷಿಯರಾದ ಧರಣೇಂದ್ರ ಮತ್ತು ಪದ್ಮಾವತಿಯರಿಗೆ ವಿಶೇಷ ಪೂಜೆ ನಡೆಯುತ್ತದೆ.

ಹಾಡುವಳ್ಳಿ ಗ್ರಾಮದ ಕಂಚಿನ ಪದ್ಮಾವತಿಯೊಂದು ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿ ಇದೆ. ಇಲ್ಲಿ ಪದ್ಮಾವತಿಯನ್ನು ನಾಗದೇವತೆಯಾಗಿ ತೋರಿಸಲಾಗಿದೆ. ಪದ್ಮಾವತಿಯ ತಲೆ ಮೇಲೆ ನಾಗದೇವತೆ ಹೆಡೆ ಎತ್ತಿ ರಕ್ಷಣೆ ನೀಡಿದಂತಿದೆ. ಕಲಾಕಾರ ನಾಗದ ಬಾಲವನ್ನು ಪದ್ಮಾವತಿಯ ಬೆನ್ನ ಹಿಂಭಾಗದಲ್ಲಿರುವುದನ್ನು ಕಲತ್ಮಾಕವಾಗಿ ತೋರಿಸಿದ್ದಾನೆ.ಸ ಇದು ಪದ್ಮಾವತಿಯನ್ನೇ ನಾಗದೇವತೆ ಎಂದು ತಿಳಿಯಲು ಸಾಧ್ಯವಿದೆ. ಪದ್ಮಾವತಿಯ ವೈಶಿಷ್ಟ್ಯತೆಯನ್ನು ಲೋಹಶಿಲ್ಪ ಅಧ್ಯಾಯದಲ್ಲಿ ವಿವರಿಸಲಾಗಿದೆ. ಹಾಡುವಳ್ಳಿ ಗ್ರಾಮದ ಮೂರ್ತಿಶಿಲ್ಪ ಪದ್ಮಾವತಿಯ ಎಡಗೈಯಲ್ಲಿ ನಾಗಪಾಶವಿದೆ. ಕೆಲವರು ನಾಗರ ಪಂಚಮಿಯಂದು ನೋಂಪಿ ವೃತ ಕೈಗೊಂಡು ವೃತ ಆಚರಿಸುತ್ತಾರೆ. ಬಸದಿಯ ಹೊರಗಡೆ ಕ್ಷೇತ್ರಪಾಲನ ಸ್ಥಾನವೊಂದಿದ್ದು ಕೆಲವೊಮ್ಮೆ ತೀರ್ಥಂಕರರ ಬಿಂಬದ ಜೊತೆಗೆ ನಾಗಶಿಲ್ಪಗಳೂ ಇರುತ್ತವೆ. ಹಾಡುವಳ್ಳಿಯಲ್ಲಿ ಪ್ರತ್ಯೇಕ ನಾಗಶಿಲ್ಪವೊಂದು ದೊರೆತ್ತಿದ್ದು ಮೂರು ಹೆಡೆಯದಾಗಿದೆ. ಇದು ೧೭ ಮತ್ತು ೧೮ನೇ ಶತಮಾನಕ್ಕೆ ಸೇರಿದ್ದೆಂದು ಹೇಳಬಹುದಾದರೂ ಇಲ್ಲಿ ನಾಗಾರಾಧನೆ ಪ್ರಚಲಿತವೆಂಬುದಕ್ಕೆ ಪುಷ್ಟಿ ನೀಡಿದಂತಾಗಿದೆ. ಚಂದ್ರನಾಥ ಬಸದಿಯ ಹಿಂಭಾಗದಲ್ಲಿ ಏಳೆಂಟು ನಾಗರ ಕಲ್ಲುಗಳಿದ್ದು ಇಂದಿಗೂ ನಾಗದೇವತೆಗೆ ಸ್ಥಾನ ಕಲ್ಪಿಸಲಾಗಿದೆ.

ವಿದ್ಯಾದೇವತೆಗಳ ಶಿಲ್ಪ

ಜೈನ ಪರಂಪರೆಯಲ್ಲಿ ಶ್ರುತದೇವಿಯನ್ನು ಸರಸ್ವತಿ ಎಂದು ಕರೆಯುತ್ತಾರೆ. ಶ್ರುತ ಎಂದರೆ ಜಿನಾಗಮ ಎಂದರ್ಥ. ಆಗಮಗಳನ್ನು ಒಳಗೊಂಡಿದ್ದು ಶ್ರುತಾಗಮ ಕಾಲಾಂತರದಲ್ಲಿ ಶ್ರುತದ ಅಧಿದೇವತೆಯಾಗಿ ಕಲ್ಪಿತವಾಗಿ ಶ್ರುತದೇವಿಯಾಗಿರಬೇಕು (ನಾಗರಾಜಯ್ಯ ಹಂಪ, ೧೯೭೬, ಪು. ೯೫ – ೯೬). ಶ್ರುತಪಂಚಮಿಯ ಪರ್ವದಂದು ಅಂದರೆ ಜೇಷ್ಠಮಾಸದ ಶುದ್ಧ ಪಂಚಮಿಯಂದು ಗ್ರಂಥವನ್ನಿಟ್ಟು ಪೂಜಿಸುತ್ತಾರೆ. ಇದನ್ನೇ ಸರಸ್ವತಿ ಪೂಜೆ ಎಂತಲೂ ತಿಳಿಯಲಾಗಿದೆ. ಜೈನ ಪರಂಪರೆಯಲ್ಲಿ ಸರಸ್ವತಿಯ ಹೊರತಾಗಿ ೧೭ ಜನ ವಿದ್ಯಾದೇವಿಯರನ್ನು ಆರಾಧಿಸುತ್ತಾರೆ. ರೋಹಿಣಿ, ಪ್ರಜ್ಞಪ್ತಿ, ವಜ್ರಶ್ರಂಖಲಾ, ವಜ್ರಾಂಕುಶ, ಜಂಬೂನದಾ, ಪುರುಷ ದತ್ತೊ, ಕಾಲಿ, ಮಹಾಕಾಲಿ, ಗೌರಿ, ಗಾಂಧಾರಿ, ಜ್ವಾಲಾಮಾಲಿನಿ, ಮಾನವಿ, ವೈರೋಟಿ, ಅಚ್ಯುತ ಮಹಾಮಾನಸಿ ಈ ೧೭ ವಿದ್ಯಾದೇವಿಯರಲ್ಲಿ ೧೩ ಜೈನ ತೀರ್ಥಂಕರರ ಯಕ್ಷಿಯರೂ ಆಗಿದ್ದಾರೆ. ಇದೊಂದು ಕುತೂಹಲಕಾರಿ ವಿಷಯ (ನಾಗರಾಜಯ್ಯ ಹಂಪ, ೧೯೭೬೫, ಪು. ೫೧ – ೭೬) ಕೆಲವೊಮ್ಮೆ ಶ್ರುತಸ್ಕಂದವನ್ನು ವಿದ್ಯಾದೇವತೆಯಾಗಿ ಪೂಜಿಸಲಾಗುತ್ತಿದೆ. ಹಾಡುವಳ್ಳಿಯ ಚವ್ವೀಶ ತೀರ್ಥಂಕರರ ಬಸದಿಯಲ್ಲಿ ಕಂಚು – ತಾಮ್ರದಿಂದ ತಯಾರಿಸಿದ ಎರಡು ಶ್ರುತಸ್ಕಂದವಿದೆ. ಸರಸ್ವತಿಯ ಸಂಕೇತವಾಗಿ ಶ್ರುತಸ್ಕಂದವನ್ನೇ ಪೂಜಿಸುವ ಪದ್ಧತಿ ಇಂದಿಗೂ ನಡೆದು ಬಂದಿದೆ. ಉಬ್ಬುಫಲಕದ ಮೇಲೆ ಲೋಕದ ಮತ್ತು ಶಾಸ್ತ್ರದ ವಿವರಣೆಗಳು ಈ ಶ್ರುತಸ್ಕಂದದ ಫಲಕದ ಮೇಲಿರುತ್ತವೆ.

ಚವ್ವೀಶ ತೀರ್ಥಂಕರ ಬಸದಿಯಲ್ಲಿರುವ ಸರಸ್ವತಿ

ಚವ್ವೀಶ ತೀರ್ಥಂಕರ ಬಸದಿಯಲ್ಲಿರುವ ಸರಸ್ವತಿ

ಶ್ರುತಸ್ಕಂದದ ಹೊರತಾಗಿ ಹಾಡುವಳ್ಳಿಯಲ್ಲಿ ಒಂದು ಸರಸ್ವತಿ ದುಂಡುಶಿಲ್ಪ ಪ್ರತ್ಯೇಕವಾಗಿ ಇದೆ. ಈ ಮೂರ್ತಿಶಿಲ್ಪ ಕಮಲ ಪೀಠದಲ್ಲಿ ಕುಳಿತಿದ್ದು ಸುಖಾಸನದಲ್ಲಿ ಇದೆ. ಸರಸ್ವತಿ ಚತುರ್ಭುಜೆಯಾಗಿದ್ದು ಹಿಂದಿನ ಎಡ ಬಲಗೈ ಮುರಿದಿದೆ. ಮುಂದಿನ ಬಲಗೈ ವ್ಯಾಖ್ಯಾನಿಸುವಂತಿದ್ದು ಎಡಗೈಯಲ್ಲಿ ಪುಸ್ತಕ ಹಿಡಿದಿದೆ. ಕಿರೀಟ ಮಕುಟ, ಕಿವಿ, ಅಗಲವಾದ ಕಂಠಹಾರ, ಕಟಿಬಂಧ, ಉಬ್ಬಿದ ಸ್ತನಗಳು, ಕೈತುಂಬ ಬಳೆಗಳು, ಕಾಲ್ಗಡ, ವೈಜಯಂತಿಹಾರ ಇವು ಈ ಮೂರ್ತಿಶಿಲ್ಪದ ಕಲಾ ವೈಶಿಷ್ಟ್ಯತೆಗಳಾಗಿವೆ.

ಜೈನಮೂರ್ತಿ ಶಿಲ್ಪಗಳ ಕೆಲವು ಪ್ರಮುಖ ಆಭರಣ ಮತ್ತು ಆಯುಧಗಳ ಕಲಾಸೌಂದರ್ಯ

ಜೈನಮೂರ್ತಿ ಶಿಲ್ಪಗಳ ಕೆಲವು ಪ್ರಮುಖ ಆಭರಣ ಮತ್ತು ಆಯುಧಗಳ ಕಲಾಸೌಂದರ್ಯ

ಒಟ್ಟಿನಲ್ಲಿ ಜೈನಮೂರ್ತಿ ಶಿಲ್ಪದಲ್ಲಿ ತೀಥಂಕರ ಮೂರ್ತಿಶಿಲ್ಪಗಳಲ್ಲಿ ಹೆಚ್ಚಿನ ವಿಕಸನ ಇಲ್ಲ. ಏಕೆಂದರೆ ತೀರ್ಥಂಕರರೆಲ್ಲರೂ ಪೂಜನೀಯರು, ಆದರೆ ನಿರಾಭರಣರು. ತುಲನಾತ್ಮಕವಾಗಿ ನೋಡಿದರೆ ತ್ರಿಕಾಲ ತೀರ್ಥಂಕರ ಕಲ್ಪನೆಗಳಿದ್ದರೂ ಚಂದ್ರನಾಥ ಮತ್ತು ಪಾರ್ಶ್ವನಾಥ ಮೂರ್ತಿ ಪೂಜೆ ಹೆಚ್ಚು ಪ್ರಾಧಾನ್ಯತೆ ಪಡೆದಿದೆ. ಇದಕ್ಕೆ ಯಕ್ಷಿಯರಾದ ಜ್ವಾಲಮಾಲಿನಿ ಮತ್ತು ಪದ್ಮಾವತಿ ಆರಾಧನೆ ಪರೋಕ್ಷ ಕಾರಣವಾಗಿದೆ. ತೀರ್ಥಂಕರರಲ್ಲಿ ಕಲಾವಿಕಸನ ಕಾಣದಿದ್ದರೂ ಯಕ್ಷ ಯಕ್ಷಿಯರ ವಿದ್ಯಾದಿ ದೇವತೆಗಳ ಆಭರಣ ಮತ್ತು ಆಯುಧಗಳಲ್ಲಿ ವೈವಿಧ್ಯತೆ ಇದೆ. ಈ ವೈವಿಧ್ಯತೆಯಲ್ಲಿ ಕಲಾ ಸೌಂದರ್ಯದ ಸೊಬಗನ್ನು ನೋಡಬಹುದು.