ದೇವಾಲಯಗಳನ್ನು ಕಟ್ಟುವ ಉದ್ದೇಶವೇ ಮೂರ್ತಿ ಪೂಜೆಗಾಗಿ. ಮೂರ್ತಿ ಪೂಜೆ ಮಾಡುವ ಉದ್ದೇಶ ಮನಃಶಾಂತಿಗಾಗಿ ಅಥವಾ ಇಷ್ಟಾರ್ಥ ಸಿದ್ಧಿಗಾಗಿ ಎಂದು ಹೇಳಬಹುದು. ಇದು ಅವರವರ ನಂಬಿಕೆಯೂ ಹೌದು. ಧಾರ್ಮಿಕ ಭಾವನೆ ಹುಟ್ಟಿದಾಗಲೇ ಅಲ್ಲಿ ಮೂರ್ತಿಯ ಸಾಕಾರವಾಗುವುದು. ದೇವಾಲಯವನ್ನು ಕಟ್ಟುವ ಉದ್ದೇಶವೇ ಮೂರ್ತಿ ಪೂಜೆಗಾಗಿರುವುದರಿಂದ ದೇವಾಲಯ ವಾಸ್ತುಕಲೆ ಮತ್ತು ಮೂರ್ತಿಶಿಲ್ಪಕಲೆ ಒಂದಕ್ಕೊಂದು ಅವಿನಾಭಾವ ಸಂಬಂಧದಿಂದ ಬೆಳೆದುಬಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಮೂರ್ತಿ ಎಂಬ ಪದವನ್ನು ನಾವು ದೇವತಾ ವಿಗ್ರಹಗಳಿಗೆ ಪರ್ಯಾಯವಾಗಿ ಬಳಸುತ್ತೇವೆ. ಶಿಲ್ಪ ಎಂದರೆ ಒಂದು ವಾಸ್ತವಿಕ ಅಥವಾ ಕಾಲ್ಪನಿಕ ಆಕೃತಿಯನ್ನು ಒಂದು ಮಾಧ್ಯಮದ ಮೂಲಕ ತೋರಿಸುವ ಕಲೆ. ಅಂದರೆ ನಾಲ್ಕು ದಿಕ್ಕುಗಳಿಂದ ನೋಡಬಹುದಾದ ಮಾಧ್ಯಮಿಕ ನಿರ್ಮಾಣವೇ ಮೂರ್ತಿಶಿಲ್ಪ (ಶಿವರಾಮಕಾರಂತ, ೧೯೭೫, ಪು.೧). ಇದರ ಅರ್ಥ ಯಾವ ಬದಿಯಿಂದಲೂ ನಿಂತು ಉದ್ದ ಅಗಲ ದಪ್ಪವನ್ನು ನೋಡುವ ದುಂಡು ಬಿಡಿಶಿಲ್ಪ ಎನ್ನಬಹುದು.

ಮೂರ್ತಿಶಿಲ್ಪ ಪದ ಇದು ದೇವತಾ ಮೂರ್ತಿಶಿಲ್ಪಕ್ಕೆ ಮಾತ್ರ ಸೀಮಿತವಲ್ಲ. ಮಾನವನ ಅಥವಾ ಪ್ರಾಣಿಯ ಆಕಾರದ ದುಂಡುಶಿಲ್ಪ ಇದೂ ಮೂರ್ತಿ ಶಿಲ್ಪವೇ ! ಆದರೂ ಇದಕ್ಕೆ ಪುರಾಣಗಳ ಅಥವಾ ಯಾವುದೇ ಧಾರ್ಮಿಕ ಹಿನ್ನೆಲೆ ಇರುವುದಿಲ್ಲ. ದೇವತಾಮೂರ್ತಿಯನ್ನು ಮಾಡಿದಾಗ ಅದು ಯಾವುದೆ ಪಂಥವಿರಲಿ ಅದಕ್ಕೊಂದು ಧಾರ್ಮಿಕ ಹಿನ್ನೆಲೆ, ತತ್ವ ಇರುತ್ತದೆ. ಮೂರ್ತಿಶಿಲ್ಪ ಮಾಡಬೇಕಾದರೆ ಯಾವ ಮೂರ್ತಿ ಅದು ಹೇಗಿರಬೇಕೆಂಬುದು ಧಾರ್ಮಿಕ ಹಿನ್ನೆಲೆಯೊಂದಿಗೆ ಶಿಲ್ಪಿಯ ಭಾವನೆ ಅಥವಾ ಕಲ್ಪನೆಯನ್ನು ಅವಲಂಬಿಸಿರುತ್ತದೆ. ಮಾಧ್ಯಮ ಯಾವುದೇ ಆಗಿರಬಹುದು ಕಲ್ಲು, ಲೋಹ ಕಾಷ್ಠವಾಗಿರಬಹುದು (ಶಿವರಾಮ ಕಾರಂತ, ೧೯೭೫, ಪು.೨). ವಿಗ್ರಹ ಎಂಬ ಪದ ಪರ್ಯಾಯವಾಗಿ ಮೂರ್ತಿಶಿಲ್ಪಕ್ಕೆ ಬಳಕೆಯಾದರೂ ಶಿಲೆಯಿಂದ ಮಾಡಿದ ಮೂರ್ತಿಗೆ ಶಿಲ್ಪ ಎಂಬ ಪದ ಹೆಚ್ಚು ಬಳಕೆಯಲ್ಲಿದೆ. ವಿಗ್ರಹ ಎಂಬ ಪದ ಲೋಹಮೂರ್ತಿಗಳಿಗೆ ಮಾತ್ರ ಅನ್ವಯವಾಗುತ್ತದೆ.

ಮೂರ್ತಿಶಿಲ್ಪ ರಚನೆ ಮಾಡುವಾಗ ಅದನ್ನು ನಿರ್ಮಿಸುವ ಕಲಾಕಾರ ಆ ಧರ್ಮದವರೇ ಇರಬೇಕೆಂದಿಲ್ಲ. ಯಾವ ಧರ್ಮದವರೇ ಇರಲಿ, ಶಿಲ್ಪಿ ಅಥವಾ ಕಲಾಕಾರ ಕಲಾ ಚಾತುರ್ಯದಿಂದ ಸಕಾರ ನೀಡುತ್ತಾನೆ (ಶ್ರೀನಿವಾಸ ಪಾಡಿಗಾರ ೨೦೦೪ – ೦೫, ಪು.೧೦).ಧಾರ್ಮಿಕ ಹಿನ್ನೆಲೆಯಿಂದ ನೋಡಿದರೆ ಶಾಸ್ತ್ರ ರೀತಿಯಿಂದ ನಿರ್ಮಿಸಿದ ಮೂರ್ತಿ ಶಿಲ್ಪಗಳಿಂದ ಮೋಕ್ಷ ಉಂಟಾಗುವುದೆಂಬ ನಂಬಿಕೆಯಿಂದ ಮೂರ್ತಿಶಿಲ್ಪಕ್ಕೆ ಹೆಚ್ಚು ಮಹತ್ವ ಬಂದಿತು (ಶೆಟ್ಟಿ ಎಸ್.ಡಿ., ೨೦೦೨, ಪು. ೩೩೩). ಇದೇ ಮೂರ್ತಿಶಿಲ್ಪದ ಬೆಳವಣಿಗೆಗೂ ಕಾರಣವಾಯಿತು. ಮೂರ್ತಿಶಿಲ್ಪದಿಂದ ಅಂದಿನ ಸಮಾಜದ ಧಾರ್ಮಿಕ ಪರಂಪರೆಯನ್ನು ನೋಡುವಂತಾಯಿತು.

ಮೂರ್ತಿಪೂಜೆ ಎಂಬುದು ಒಂದೇ ಪಂಥಕ್ಕೆ ಸೀಮಿತವಾಗಿಲ್ಲ. ಅಂದರೆ ಹಿಂದೂ ಮತ್ತು ಜೈನ ಧರ್ಮಗಳಲ್ಲಿ ಮೂರ್ತಿ ಪೂಜೆ ಇದೆ. ಆದರೆ ಒಂದು ಪಂಥದಲ್ಲಿರುವ ದೇವರನ್ನು ಇನ್ನೊಂದು ಧರ್ಮದವರೂ ಪೂಜಿಸಬಾರದೆಂಬ ನಿಯಮವೇನಿಲ್ಲ. ಇದು ಅವರವರ ಮನೋಧರ್ಮಕ್ಕೆ ಬಿಟ್ಟ ವಿಷಯ. ಉದಾ. ಗಣೇಶನನ್ನು ಎಲ್ಲ ಧರ್ಮದವರೂ ಗೌರವಿಸುತ್ತಾರೆ. ಧರ್ಮಸ್ಥಳದ ಮಂಜುನಾಥನಿಗೆ ಎಲ್ಲ ಪಂಥದವರೂ ನಮಿಸುತ್ತಾರೆ, ಗೌರವಿಸುತ್ತಾರೆ. ಆದರೆ ಮೂರ್ತಿಶಿಲ್ಪದಲ್ಲಿ ಶಿಲ್ಪಿ ಅಥವಾ ಕಲಾಕಾರ ಕಲಾಸೌಂದರ್ಯದ ಜೊತೆಗೆ ದೇವಿ ಕಳೆ ನೀಡುವುದು ಇಲ್ಲಿ ಮಹತ್ವದ್ದಾಗಿದೆ. ಇದಕ್ಕೆ ಜೈನ ಮೂರ್ತಿ ಶಿಲ್ಪಗಳು ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ಜೈನ ಮೂರ್ತಿ ಶಿಲ್ಪದ ಪ್ರಸ್ತಾವನೆಯನ್ನು ಇಲ್ಲಿ ಮಾಡಲಾಗಿದೆ.

ಜೈನಮೂರ್ತಿಶಿಲ್ಪದಲ್ಲಿ ಎರಡು ಪ್ರಭೇದಗಳಿವೆ. ೧.ಧ್ರುವಭೇರ : ಅಂದರೆ ಮೂಲವಿಗ್ರಹ ಅಚಲ ಮೂರ್ತಿಗಳಾಗಿವೆ. ೨. ಚಲಭೇರ : ಅಂದರೆ ಲೋಹದ ವಿಗ್ರಹಗಳಿಂದ ಮಾಡಿದ ಸುಲಭವಾಗಿ ಎತ್ತಿ ಇಡಬಲ್ಲ ಮೂರ್ತಿಗಳು ಚಲ ವಿಗ್ರಹಗಳು. ಆದರೆ ಬೌದ್ಧ ಮತ್ತು ಹಿಂದೂ ಮೂರ್ತಿ ಶಿಲ್ಪದಲ್ಲಿ ಈ ಪ್ರಬೇಧದ ಹೊರತಾಗಿ ಶಯನ ಮೂರ್ತಿಗಳಿಗೂ ಅಚಲ ಪ್ರಬೇಧದಲ್ಲಿ ಅವಕಾಶ ಕಲ್ಪಿಸಲಾಗಿದೆ. ಜೈನ ಧರ್ಮದಲ್ಲಿ ಧ್ರುವಭೇರ ಮತ್ತು ಚಲಭೇರ ಎಂದು ಹೇಳಿದರೂ, ಬೌದ್ಧ ಮತ್ತು ಹಿಂದೂ ಧರ್ಮಕ್ಕೆ ತುಲನಾತ್ಮಕ ಅಧ್ಯಯನ ಮಾಡಿ ನೋಡಿದರೆ, ಜೈನಧರ್ಮದಲ್ಲಿ ಪ್ರಬೇಧದ ಜೊತೆಗೆ ಉದ್ದೇಶವೂ ಬೇರೆ ಬೇರೆಯದಾಗಿರುತ್ತದೆ.

ಬೌದ್ಧ ಮತ್ತು ಜೈನ ಧರ್ಮದಲ್ಲಿ ಬುದ್ಧನನ್ನು ಮತ್ತು ತೀರ್ಥಂಕರನನ್ನು ಧರ್ಮಗುರುಗಳೆಂದು ತಮ್ಮ ನಾಯಕರೆಂದು ಗೌರವಿಸುತ್ತಾರೆ, ಪೂಜಿಸುತ್ತಾರೆ, ಜೈನಧರ್ಮದಲ್ಲಿ ಇದ್ದ ೨೪ ತೀರ್ಥಂಕರರಲ್ಲಿ ಆದಿನಾಥ ಮೊದಲನೆ ತೀರ್ಥಂಕರ, ತೀರ್ಥಂಕರ ಎಂಬ ಪದ ಜೈನ ಕಲ್ಪನೆಯಲ್ಲಿ ತೀರ್ಥವೆಂದರೆ ಧರ್ಮ, ಇತರರಿಗೆ ಯಾರು ಧರ್ಮೋಪದೇಶ ಮಾಡುತ್ತಾರೋ ಅವರು ತೀರ್ಥಂಕರರು. ‘ತೀರ್ಥಂಕರೋತಿ ಇತಿ ತೀರ್ಥಂಕರ’ ಕತ್ತಲಿನಿಂದ ಬೆಳಕಿಗೆ ತಂದವರು ಧರ್ಮವೆಂಬ ದೋಣಿಯ ಮೂಲಕ ಮಾರ್ಗದರ್ಶನ ಮಾಡಿದವರು ಎಂದರ್ಥ. ಅಂದರೆ ಜೈನಧರ್ಮದಲ್ಲಿ ತೀರ್ಥಂಕರರನ್ನು ದೇವರೆಂದು ಹೇಳದೇ ಆದರ್ಶ, ಅನುಕರಣ ಯೋಗ್ಯ ಮಾರ್ಗದರ್ಶಕ ವ್ಯಕ್ತಿ ಎಂದು ಭಾವಿಸಲಾಗುತ್ತದೆ. ತೀರ್ಥಂಕರರನ್ನು ಜಿನ ಎಂತಲೂ ಕರೆಯುತ್ತಾರೆ. ಜಿನನಿಂದ ಭೋಧಿತವಾದದ್ದು ಜೈನಧರ್ಮ. ಜಿನ ಎಂದರೆ ಗೆದ್ದವನು, ಸಂಸಾರ ಎಂಬ ನೌಕೆಯಿಂದ ಒಳಗಿನ ರಾಗಭಾವಗಳನ್ನು ಗೆದ್ದವನೇ ಜಿನ, ‘ವೀತರಾಗ’, ‘ಅರಿಹಂತ’ ಎಂತಲೂ ಕರೆಯಲಾಗುತ್ತದೆ (ಶಾಂತಿನಾಥ ದಿಬ್ಬದ, ಜಿನವಾಣಿ, ಡಿಸೆಂಬರ್ ೨೦೦೪, ಜನವರಿ ೨೦೦೫, ಪು. ೩ – ೪). ಕರ್ನಾಟಕದಾದ್ಯಂತ ಹಲವಾರು ಜೈನ ಕೇಂದ್ರಗಳಲ್ಲಿ ಜನಮೂರ್ತಿಶಿಲ್ಪ ಬಸದಿಗಳಲ್ಲಿ ನಿರ್ಮಾಣಗೊಂಡಿವೆ. ಇಂತಹ ವೈಶಿಷ್ಟ್ಯತೆಯನ್ನೊಳಗೊಂಡ ಸಾಂಸ್ಕೃತಿಕ ಕೇಂದ್ರಗಳಲ್ಲಿ ಹಾಡುವಳ್ಳಿ ಗ್ರಾಮವೂ ಒಂದಾಗಿದೆ.

ತೀರ್ಥಂಕರರ ಶಿಲ್ಪ ವಿಶೇಷತೆ : ೨೪ ತೀರ್ಥಂಕರರಲ್ಲಿ ಶಿಲ್ಪ ವಿಶೇಷತೆಯ ಲಕ್ಷಣಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಾಣಬರುವುದಿಲ್ಲ. ಕಾಲಕ್ಕನುಗುಣವಾಗಿ ತುಲನಾತ್ಮಕವಾಗಿ ನೋಡಿದರೂ ಹೆಚ್ಚಿನ ಬದಲಾವಣೆ ಸಿಗುವುದಿಲ್ಲ. ತೀರ್ಥಂಕರರ ಮೂರ್ತಿಗಳನ್ನು ರಚಿಸುವಾಗ ಅವರವರ ತಪೋಭಂಗಿಯಲ್ಲಿ ಅನುಸರಿಸಿ ಶಿಲ್ಪ ರಚನೆ ಮಾಡಬೇಕೆಂದಿದೆ. ಇದರಂತೆ ವೃಷಭನಾಥ, ನೇಮಿನಾಥ ಮತ್ತು ಮಹಾವೀರರಿಗೆಮಾತ್ರ ಆಸೀನ ಭಂಗಿಯ ಬಿಂಬಗಳನ್ನು ರಚಿಸಬೇಕೆಂದೂ ಉಳಿದ ತೀರ್ಥಂಕರರು ಕಾಯೋತ್ಸರ್ಗದಲ್ಲಿ ಇರಬೇಕೆಂದು ಶಿಲ್ಪಶಾಸ್ತ್ರ ತಿಳಿಸುತ್ತದೆ (ವಸಂತಲಕ್ಷ್ಮಿ ಕೆ., ೨೦೦೦, ಪು. ೧೦೫). ಜೈನ ಪರಂಪರೆಯ ೨೪ ತೀರ್ಥಂಕರರಲ್ಲಿ ೨೧ ತೀರ್ಥಂಕರರು ಕಾಯೋತ್ಸರ್ಗ ಭಂಗಿಯಲ್ಲಿ ನಿರ್ವಾಣ ಹೊಂದಿದ್ದಾರೆ. ಉಳಿದ ಮೂವರು ತೀರ್ಥಂಕರರಾದ ಆದಿನಾಥ, ನೇಮಿನಾಥ ಮತ್ತು ಮಹಾವೀರ ಪದ್ಮಾಸನದಲ್ಲಿ ಕುಳಿತು ನಿರ್ವಾಣ ಹೊಂದಿದ್ದಾರೆ (ಕಲಘಟಗಿ ಟಿ.ಜಿ (ಸಂ.), ೧೯೭೬, ಪು. ೯೦).

ಜೈನ ಶಿಲ್ಪಕಲೆಯನ್ನು ಉಳಿದ ಧರ್ಮಗಳಿಗೆ ತುಲನಾತ್ಮಕ ಅಧ್ಯಯನ ಮಾಡಿ ನೋಡಿದರೆ ಜೈನ ಶಿಲ್ಪಕಲೆ ಹೆಚ್ಚಿನ ಬೆಳವಣಿಗೆ ಕಂಡಿಲ್ಲ. ಉದಾಹರಣೆಗಾಗಿ ತೀರ್ಥಂಕರರ ಮೂರ್ತಿಶಿಲ್ಪದಲ್ಲಿ ಶಿಲ್ಪಕಲೆಯ ದೃಷ್ಟಿಯಿಂದ ಯಾವುದೇ ವ್ಯತ್ಯಾಸವಿಲ್ಲ. ೨೪ ತೀರ್ಥಂಕರರ ಲಕ್ಷಣಗಳೂ ಒಂದೇ ತೆರನಾಗಿ ಕಾಣುವುದರಿಂದ ತೀರ್ಥಂಕರರನ್ನು ಗುರುತಿಸುವಾಗ ಪೀಠಭಾಗದಲ್ಲಿರುವ ಲಾಂಛನದಿಂದ ಗುರುತಿಸಲಾಗುತ್ತದೆ.

ಪಲ್ಯಂಕಾಸನ

ಪಲ್ಯಂಕಾಸನ

೧. ಆಸೀನ – ಪದ್ಮಾಸನ ಅಥವಾ ಪಲ್ಯಂಕಾಸನ ಆಸೀನನಾಗಿದ್ದಾಗ ಎಡಗಾಲ ಮೇಲೆ ಬಲಗಾಲ ಇಟ್ಟು ಪಾದದ ಮೇಲೆ ಹಸ್ತವನ್ನು ಒಂದರ ಮೇಲೊಂದಿಟ್ಟು ಪದ್ಮಾಸನದಲ್ಲಿ ಧ್ಯಾನಸ್ಥನಾದಂತೆ ಕುಳಿತಿರುವುದು ಪಲ್ಯಂಕಾಸನ.

೨. ಸ್ಥಾನಿಕ – ಕಾಯೋತ್ಸರ್ಗ ಅಥವಾ ಖಡ್ಗಾಸನ ಸ್ಥಾನಿಕನಾಗಿದ್ದಾಗ ದೇಹವನ್ನು ದಂಡಿಸಿದಂತೆ ಎರಡೂ ಕೈಗಳನ್ನು ಇಳಿಬಿಟ್ಟು ಸಮಭಂಗಿಯಲ್ಲಿ ನಿಂತಿರುವುದು ಕಾಯೋತ್ಸರ್ಗ ಅಥವಾ ಖಡ್ಗಾಸನ, ಜಿನಮೂರ್ತಿ ಪೂರ್ಣವಾಗಿ ನಗ್ನವಾಗಿರುವುದು ನಿರಾಭರಣ ಗುಂಗುರು ಕೂದಲು, ಕೆಲವೊಮ್ಮೆ ಎದೆಯ ಮೇಲೆ ಶ್ರೀವತ್ಸಕ ಚಿಹ್ನೆ ಇವೆಲ್ಲ ತೀರ್ಥಂಕರರ ಸಾಮಾನ್ಯ ಲಕ್ಷಣಗಳಾಗಿವೆ. ಪಾರ್ಶ್ವನಾಥ ಮತ್ತು ಸುಪಾರ್ಶ್ವನಾಥನಿಗೆ ನಾಗಾತಪತ್ರ ಹಾವಿನಕೊಡೆ ವೃಷಭನ ಸಂಕೇತವಾಗಿ ಜಟಾಮಕುಟ ಅಳವಡಿಸಲಾಗಿರುತ್ತದೆ (ರಾಮಚಂದ್ರರಾವ್ ಎಸ್.ಕೆ., ೧೯೭೫, ಪು. ೩೩೧ – ೩೩೨).

ಖಡ್ಗಾಸನ

ಖಡ್ಗಾಸನ

ಮೂಲತಃ ಜೈನಧರ್ಮದಲ್ಲಿ ಎರಡು ಶಾಖೆಗಳಿವೆ. ೧. ಶ್ವೇತಾಂಬರ ೨. ದಿಗಂಬರ ಈ ಎರಡೂ ಶಾಖೆಗಳಲ್ಲಿ ಮತ್ತು ಮೂರ್ತಿಶಿಲ್ಪ ಲಕ್ಷಣಗಳಲ್ಲಿ ಕೆಲವು ವೈಚಾರಿಕ ಪ್ರಭೇದಗಳಿವೆ. ಶ್ವೇತಾಂಬರದಲ್ಲಿ ಜಿನ ಮೂರ್ತಿಗೆ ವಸ್ತ್ರ ತೊಡಿಸುತ್ತಾರೆ. ಅಥವಾ ಕಲಾತ್ಮಕವಾಗಿ ಬಟ್ಟೆ ತೊಡಿಸಿದಂತೆ ತೋರಿಸಲಾಗುತ್ತದೆ. ಆದರೆ ದಿಗಂಬರ ಶಾಖೆಯಲ್ಲಿ ಪೂಜಿಸುವ ಜಿನ ನಗ್ನನಾಗಿರುತ್ತಾನೆ. ಉತ್ತರ ಭಾರತದಲ್ಲಿ ದಿಗಂಬರ ಜೈನಧರ್ಮ ಹೆಚ್ಚು ಪ್ರಚಲಿತವಿದೆ. ಹಾಡುವಳ್ಳಿಯನ್ನೊಳಗೊಂಡಂತೆ ಕರ್ನಾಟಕದಲ್ಲಿ ದಿಗಂಬರ ಜೈನಧರ್ಮ ಹೆಚ್ಚು ಪ್ರಚಲಿತದಲ್ಲಿತ್ತು. ದಕ್ಷಿಣ ಭಾರತದ ಜೈನಧರ್ಮದ ಇತಿಹಾಸವೆಂದರೆ ಕರ್ನಾಟಕ ಜೈನಧರ್ಮದ ಇತಿಹಾಸವೇ ಆಗಿದೆ. ೨೪ ತೀರ್ಥಂಕರರ ಹಿನ್ನೆಲೆ ಆಧರಿಸಿ ಎರಡೂ ಶಾಖೆಗಳಲ್ಲಿನ ಪ್ರಭೇದ ತೋರಿಸುವ ದೃಷ್ಟಿಯಿಂದ ೨೪ ತೀರ್ಥಂಕರರ ಯಕ್ಷ ಯಕ್ಷಿಯರ ಹೆಸರಿನ ಪಟ್ಟಿಯನ್ನು ಕೆಳಗೆ ನೀಡಲಾಗಿದೆ (ಜೋಷಿ ಎನ್.ಪಿ., ೧೯೭೯, ಪು. ೩೪).

ಕ್ರ. ಸಂ ತೀರ್ಥಂಕರ ಲಾಂಛನ ವೃಕ್ಷ ದಿಗಂಬರ ಯಕ್ಷಯಕ್ಷಿ ಶ್ವೇತಾಂಬರ ಯಕ್ಷಯಕ್ಷಿ
೧. ಆದಿನಾಥ ವೃಷಭ ವಟ ಗೋಮುಖ
ಚಕ್ರೇಶ್ವರಿ
ಗೋಮುಖ
ಚಕ್ರೇಶ್ವರಿ
೨. ಅಜಿತ ಆನೆ ಶಾಲ ಮಹಾಯಕ್ಷ
ರೋಹಿಣಿ
ಮಹಾಯಕ್ಷ
ಅಜಿತಬಲಾ
೩. ಶಾಂಭವ ಕುದುರೆ ಪ್ರಯಾಲ ತ್ರಿಮುಖ
ಪ್ರಜ್ಞಪ್ತಿ
ತ್ರಿಮುಖ
ದುವಿತಾರಿ
೪. ಅಭಿನಂದನ ಕಪಿ ಪ್ರಿಯಂಗು ಯಕ್ಷೇಶ್ವರ
ವಜ್ರಶಂಖಲಾ
ನಾಯಕ
ನಲಿಕಾ
೫. ಸುಮತಿ ಚಕ್ರವಾಕ ಶಾಲ ತುಂಬುರು
ಪುರುಷದತ್ತೊ
ಅದೇ
ಮಹಾಕಾಳಿ
೬. ಪದ್ಮಪ್ರಭ ಕಮಲ ಛತ್ರ ಕುಸುಮ
ಮನೋವೇಗಾ
ಕುಸುಮ
ಶ್ಯಾಮಾ
೭. ಸಂಪಾರ್ಶ್ವನಾಥ ಸ್ವಸ್ತಿಕ ನಂದ್ಯಾವತ ಶುರೀಷ ವರನಂದಿ
ಕಾಲಿ
ಮಾತಂಗಾ
ಶಾಂತಾ
೮. ಚಂದ್ರಪ್ರಭ ಅರ್ಧಚಂದ್ರ ನಾಗ ವಿಜಯ
ಜ್ವಾಲಮಾಲಿನಿ
ವಿಜಯ
ಭೃಕುಟಿ
೯. ಸುವಿಧಿ
ಪುಷ್ಪದಂತ
ಮೊಸಳೆ ಸಲಿ ಅಜಿತ
ಮಹಾಕಾಲಿ
ಅಜಿತ
ಸುತ್ರಾರಕಾ
೧೦. ಶೀತಲನಾಥ ಶ್ರೀವತ್ಸ
ಸ್ವಸ್ತಿಕ
ಪ್ರಿಯಂಗು ಬ್ರಹ್ಮ
ಮಾನವಿ
ಬ್ರಹ್ಮ
ಅಶೋಕಾ
೧೧. ಶ್ರೇಯಾಂಸನಾಥ ಘೇಂಡಾ
ಗರುಡ
ತಂದುಕ ಈಶ್ವರ
ಗೌರಿ
ಯಕ್ಷೇತಾ
ಮಾನವಿ
೧೨. ವಾಸುಪೂಜ್ಯ ಮಹಿಷ ಪಾಟಲ ಕುಮಾರ
ಗಂಧಾರಿ
ಕುಮಾರ
ಚಂಡಾ
೧೩. ವಿಮಲನಾಥ ವರಾಹ ಜಂಬು ಷಣ್ಮುಖ
ವೈರೋಟಿ
ಷಣ್ಮುಖ
ವಿದಿತಾ
೧೪. ಅನಂತನಾಥ ಶ್ಯೇನಾ
ಅಸ್ಪಲ
ಅಶೋಕ ಪಾಟಲ
ಅನಂತಮತಿ
ಪಾಟಲ
ಅಂಕುಶಾ
೧೫. ಧರ್ಮನಾಥ ವಜ್ರ ಧದಿ
ಪರ್ಣ
ಕಿನ್ನೆರ
ಮಾನಸಿ
ಕಿನ್ನರ
ಕಂದರ್ಪ
೧೬. ಶಾಂತಿನಾಥ ಮಗ ನಂದಿ ಕಿಂಪುರುಷ
ಮಹಾಮಾನಸೀ
ಗರುಡ
ನಿರ್ವಾಣೀ
೧೭. ಕುಂಥುನಾಥ ಹೋತ ಬಿಲಕ ಗಂಧರ್ವ
ವಿಜಯಾ
ಗರುಡ
ಬಾಲಾ
೧೮. ಅರನಾಥ ನಂದ್ಯಾವರ್ತ
ಮೀನ
ಆಮ್ರ ಕವೇದ್ರ
ಅಜಿತ
ಯಕ್ಷೇತ
ಧನ
೧೯. ಮಲ್ಲಿನಾಥ
(ಶ್ವೇ.ಮಹಿಳೆ ದಿ.ಪುರುಷ)
ಕುಂಭ ಅಶೋಕ ಕುಬೇರ
ಅಪರಾಜಿತೆ
ಅದೇ
ಧರಣಪ್ರಿಯಾ
೨೦. ಸುವ್ರತನಾಥ ಆಮೆ ಚಂಪಕಾ
ಬಹುರೂಪಿಣಿ
ವರುಣ ವರುಣ
ನರದತ್ತಿ
೨೧. ನಮಿ/ನೇಮಿನಾಥ ನೀಲಕಮಲ
ಅಶೋಕ
ಬಕುಲ ಭ್ರಕುಟ
ಚಾಮುಂಡ
ಭ್ರಕುಟ
ಗಾಂಧಾರಿ
೨೨. ಅರಿಷ್ಠನೇಮಿ ಶಂಖ ವೇತನ ಸರ್ಪಾನ್ಹ
ಕೂಷ್ಮಾಂಡಿನಿ
ಗೋಮೇಧ
ಅಂಬಿಕಾ
೨೩. ಪಾರ್ಶ್ವನಾಥ ಸರ್ಪ ಧತಕಿ ಧರಣೇಂದ್ರ
ಪದ್ಮಾವತಿ
ಧರಣೇಂದ್ರ
ಪದ್ಮಾವತಿ
೨೪. ಮಹಾವೀರ ಸಿಂಹ ಶಾಲ ಮಾತಂಗ
ಸಿದ್ಧಾಯಿಕಾ
ಮಾತಂಗ
ಸಿದ್ಧಾಯಿಕಾ

ಜೈನ ಮೂರ್ತಿಶಿಲ್ಪದಲ್ಲಿ ಮೇಲಿನ ೨೪ ತೀರ್ಥಂಕರರ ದಿಗಂಬರ ಮತ್ತು ಶ್ವೇತಾಂಬರ ಯಕ್ಷ ಯಕ್ಷಿಯರ ಪಟ್ಟಿಕೆ ನೋಡಿದರೆ ಯಕ್ಷ ಯಕ್ಷಿಯರ ಹೆಸರಿನಲ್ಲಿ ಭಿನ್ನತೆ ಇರುವುದು ಸ್ಪಷ್ಟ. ಆದರೆ ಕರ್ನಾಟಕದಲ್ಲಿ ದಿಗಂಬರ ಪಂಥವೇ ಹೆಚ್ಚು ಪ್ರಚಲಿತದಲ್ಲಿರುವುದರಿಂದ ದಿಗಂಬರ ಪಂಥದ ಲಕ್ಷಣಗಳನ್ನು ಇಲ್ಲಿನ ತೀರ್ಥಂಕರ ಮೂರ್ತಿಶಿಲ್ಪಗಳಲ್ಲಿ ಅಳವಡಿಸಲಾಗಿದೆ. ಜೈನಧರ್ಮದ ಮೂರ್ತಿಶಿಲ್ಪಗಳಲ್ಲಿ ವಿಶೇಷವಾಗಿ ಒಂದಕ್ಕೆ ಪ್ರಾಧ್ಯಾನ್ಯತೆ ನೀಡದೇ ಎಲ್ಲ ತೀರ್ಥಂಕರರನ್ನು ಒಂದೇ ಶಿಲಾಫಲಕದಲ್ಲಿ ಕಡೆದು ಚತುರ್ವಂಶತಿ ಜಿನ ಪೂಜೆ ಒಟ್ಟಿಗೆ ನಡೆಯುವ ವ್ಯವಸ್ಥೆ ಮಾಡಿರುವುದು ಇದೊಂದು ವಿಶೇಷತೆ. ಹಾಡುವಳ್ಳಿ ಗ್ರಾಮ ಜಿನಕೇಂದ್ರ ಸ್ಥಾನವಾಗಿ ಇದಕ್ಕೊಂದು ಉತ್ತಮ ನಿದರ್ಶನ. ಕೆಲವೊಮ್ಮೆ ಮೂವರು ತೀರ್ಥಂಕರರನ್ನು ಆದಿನಾಥ ಅಥವಾ ವೃಷಭನಾಥ, ಪಾರ್ಶ್ವನಾಥ, ಮಹಾವೀರ ಈ ಮೂರೂ ಮೂರ್ತಿ ಶಿಲ್ಪಗಳನ್ನು; ಬೇರೆ ಬೇರೆ ಗರ್ಭಗೃಹದಲ್ಲಿಟ್ಟು ಪೂಜಿಸಲಾಗುತ್ತದೆ. ಹಾಡುವಳ್ಳಿಯ ಚಂದ್ರನಾಥ ಬಸದಿಯಲ್ಲಿ ಚಂದ್ರನಾಥ ಬಿಂಬವಿದ್ದರೆ, ಎಡಕ್ಕೆ ಗರ್ಭಗುಡಿಯಲ್ಲಿ ಮಹಾವೀರ, ಬಲದ ಗರ್ಭಗುಡಿಯಲ್ಲಿ ನೇಮಿನಾಥ ಮೂರ್ತಿ ಇವೆ. ಕೆಲವೊಮ್ಮೆ ಒಂದೇ ಗರ್ಭಗೃಹದಲ್ಲಿ ನಾಲ್ಕು ಸಮವಾಗಿ ನಾಲ್ವರು ಜಿನರ ಅಥವಾ ಒಬ್ಬ ಜಿನರ ನಾಲ್ಕು ಬಿಂಬಗಳನ್ನು ನಾಲ್ಕು ದಿಕ್ಕುಗಳಿಗೆ ಸಮನಾಗಿಟ್ಟು ಪೂಜಿಸಲಾಗುತ್ತದೆ. ಇದನ್ನು ಸರ್ವತೋಭದ್ರ ಎಂತಲೂ ಕರೆಯುತ್ತಾರೆ. ಸರ್ವತೋಭದ್ರ ಜಿನ ಪ್ರತಿಮೆಯನ್ನಿಟ್ಟು ಪೂಜಿಸುವ ಉದಾಹರಣೆ ಇದೇ. ಸಾಳುವ ಮನೆತನ ಆಳ್ವಿಕೆ ನಡೆಸಿದ ಗೇರುಸೊಪ್ಪೆಯ ಚತುರ್ಮುಖ ಬಸದಿ ಈ ಮಾದರಿಯದು (ಭಟ್‌ಸೂರಿ ಕೆ.ಜಿ., ೧೯೯೬ ಪು. ೧೪ – ೧೬).

ತೀರ್ಥಂಕರರ ಸಾಮಾನ್ಯ ಲಕ್ಷಣಗಳ ಹೊರತಾಗಿ ತುಲನಾತ್ಮಕವಾಗಿ ನೋಡಿದರೆ ಆದನಾಥ, ಪಾರ್ಶ್ವನಾಥ, ಸುಪಾರ್ಶ್ವನಾಥ ತೀರ್ಥಂಕರ ಗುರುತಿಸುವ ಬಗೆಯಲ್ಲಿ ಸ್ವಲ್ಪ ಭಿನ್ನತೆ ಇದೆ. ಆದಿನಾಥ ತೀರ್ಥಂಕರನನ್ನು ಗುರುತಿಸುವಾಗ ಅವರ ಜಟಾಧರದಿಂದ ಅಥವಾ ಭುಜಗಳ ಮೇಲೆ ಬಿದ್ದಿರುವ ಜಟೆಯನ್ನು ನೈಜಕತೆಯಿಂದ ತೋರಿಸಲಾಗುತ್ತದೆ. ಸುಪಾರ್ಶ್ವನಾಥನಿಗೆ ತಲೆಯ ಮೇಲೆ ಐದು ಹೆಡೆ ಪಾರ್ಶ್ವನಾಥನಾದರೆ ಏಳು ಹೆಡೆ ಇರುವುದು ಸಾಮಾನ್ಯ ಲಕ್ಷಣಗಳಾಗಿವೆ. ಆದರೆ ಪ್ರಾಚೀನ ಪಾರ್ಶ್ವನಾಥ ಮೂರ್ತಿಶಿಲ್ಪ ಉದಾ. ಬಾದಾಮಿ ಚಲುಕ್ಯರ ಕಾಲದಲ್ಲಿ ಶಿಲ್ಪಗಳು ಇಲ್ಲಿ ಐದು ಹೆಡೆಯ ಧರಣೇಂದ್ರ ನಾಗನನ್ನು ತೋರಿಸಿರುವುದುಂಟು (ಪಾಡಿಗಾರ ಶ್ರೀನಿವಾಸ, ಜಿನತಿಲಕ, ಡಿಸೆಂಬರ್ ೨೦೦೪, ಜನವರಿ ೨೦೦೫, ಪು. ೧೧೦).

ವಿಕಸನ : ತೀರ್ಥಂಕರ ಮೂರ್ತಿಶಿಲ್ಪಗಳ ಸಾಮಾನ್ಯ ಲಕ್ಷಣಗಳನ್ನು ಬೃಹತ್ಸಂಹಿತೆ ಶಿಲ್ಪಶಾಸ್ತ್ರ ಗ್ರಂಥಗಳೂ ಉಲ್ಲೇಖಿಸಿವೆ. ವರಾಹ ಮಿಹಿರನ ಬೃಹತ್ಸಂಹಿತೆಯಲ್ಲಿ ತೀರ್ಥಂಕರ ಮೂರ್ತಿಶಿಲ್ಪದ ಲಕ್ಷಣವನ್ನು

ಅಜಾನಲಂಬಬಾಹುಃ ಶ್ರೀವತ್ಸಾಂಕಃ ಪ್ರಶಾಂತ ಮೂರ್ತಿಶ್ಚ|
ದಿದ್ಪಾಸ್ಥರುಣೋ ರೂಪವಾಂಶ್ಚ ಕಾರ್ಯಾರ್ಹಂತಾ ದೇವಃ ಎಂದಿದೆ

ಅಂದರೆ ಜಿನಬಿಂಬವು ಅಜಾನುಬಾಹುವಾಗಿ, ದಿಗಂಬರನಾಗಿ, ಶ್ರೀವತ್ಸಾಂಕವುಳ್ಳ ಪ್ರಶಾಂತಮೂರ್ತಿಯಂತಿರಬೇಕು ಎಂದು ತಿಳಿಸುತ್ತದೆ (ತಿವಾರಿ ಎಸ್., ೧೯೮೩. ಪು. ೬). ೨೪ ತೀರ್ಥಂಕರರಿಗೂ ಲಾಂಛನಗಳು ಪೂರ್ಣಗೊಂಡಿದ್ದು ಕ್ರಿ.ಶ. ೮ – ೯ನೇ ಶತಮಾನವಿರಬಹುದು (ತಿವಾರಿ ಎಸ್. ೧೯೮೧, ಪು. ೨೫೧). ಸುಮಾರು ೯ನೇ ಶತಮಾನದವರೆಗೆ ತೀರ್ಥಂಕರನ ಪೀಠದಲ್ಲಿ ಯಕ್ಷ ಯಕ್ಷಿಯರನ್ನು ಕೆತ್ತುವ ಪದ್ಧತಿ ಇರಲಿಲ್ಲ. ೧೦ನೇ ಶತಮಾನದ ಸುಮಾರಿಗೆ ಜಿನಬಿಂಬವನ್ನು ಯಕ್ಷ ಯಕ್ಷಿಯರ ಸಹಿತವಾಗಿ ಅಷ್ಟಪ್ರಾತಿಹಾರ್ಯಗಳುಳ್ಳ ಪೀಠದ ಮೇಲೆಯೇ ನಿರ್ಮಿಸುವ ವಿಕಸನ ನಡೆಯಿತು. ಪ್ರತಿಷಾಸರ ಸಂಗ್ರಹದಲ್ಲಿ ಬಿಳಿ, ಕೆಂಪು, ಕಪ್ಪು, ಹಸಿರು ಬಣ್ಣದ ಶಿಲೆ ಜಿನಬಿಂಬ ನಿರ್ಮಿಸಲು ಉತ್ತಮವಾಗಿದೆ (ಭಟ್ಟಾಚಾರ್ಯ ಬಿ.ಸಿ., ೧೯೨೪, ಪು. ೧೯). ರೂಪಮಂಡನ ಗ್ರಂಥದಲ್ಲಿ ಪದ್ಮಪ್ರಭ ಮತ್ತು ಪುಷ್ಪದಂತರನ್ನು ಬಿಳಿಕಲ್ಲಿನಲ್ಲಿ ನೇಮಿನಾಥನನ್ನು ಕಪ್ಪು ಶಿಲೆಯಲ್ಲಿ ಮಲ್ಲಿನಾಥ ಮತ್ತು ಪಾರ್ಶ್ವನಾಥನನ್ನು ನೀಲಿ ಶಿಲೆಯಲ್ಲಿ ಮಾಡಬೇಕೆಂದಿದೆ (ಶ್ರೀ ಸೂತ್ರಧಾರ, ೧೯೯೨, ಪು. ೬೪). ಈ ಧಾರ್ಮಿಕ ಕಟ್ಟಳೆಗಳನ್ನು ಹೇಳುವ ಉದ್ದೇಶ ಜೈನಪಂಥವನ್ನೊಳಗೊಂಡ ಯಾವುದೇ ಪಂಥಧ ವಿಗ್ರಹಗಳನ್ನು ಮಾಡುವಾಗ ಶಿಲ್ಪಗ್ರಂಥಗಳ ಹಿನ್ನೆಲೆಯಲ್ಲಿ ಮೂರ್ತಿಶಿಲ್ಪಗಳು ರೂಪುಗೊಳ್ಳುತ್ತವೆ.

ಇದಕ್ಕೊಂದು ಧಾರ್ಮಿಕ ಕಟ್ಟಳೆಯನ್ನು ಹಾಕಿದಂತಾಗುತ್ತದೆ. ಜೈನಧರ್ಮದಲ್ಲಿ ತುಲನಾತ್ಮಕ ಅಧ್ಯಯನ ಮಾಡಿ ನೋಡಿದಲ್ಲಿ ಹೆಚ್ಚಿನ ಮಟ್ಟಿಗೆ ಕಪ್ಪು ಶಿಲೆಯ ಜಿನಬಿಂಬಗಳೇ ಕಾಣಸಿಗುತ್ತವೆ. ಇದಕ್ಕೆ ಕಾರಣ ಸ್ಥಳೀಯ ಸಂಪನ್ಮೂಲ ಬಳಸಿಕೊಂಡಿರುವ ಕಾರಣವಿರಬೇಕು. ೧೦ನೇ ಶತಮಾನಕ್ಕಿಂತ ಮೊದಲಿನ ಶಿಲ್ಪಗಳಲ್ಲಿ ನಿರ್ದಿಷ್ಟವಾದ ಸಂಕೇತ ಇರದಿರುವುದರಿಂದ, ಯಕ್ಷ ಯಕ್ಷಿಯರನ್ನು ಹೊಂದದಿರುವುದರಿಂದ ಸ್ಪಷ್ಟವಾಗಿ ಗುರುತಿಸುವುದು ಕಷ್ಟ. ೧೨ನೇ ಶತಮಾನದ ತೀರ್ಥಂಕರ ಶಿಲ್ಪಗಳಲ್ಲಿ ಲಾಂಛನಗಳು, ಯಕ್ಷ ಯಕ್ಷಿಯರು ಇರುವುದರಿಂದ ಖಚಿತವಾಗಿ ತೀರ್ಥಂಕರರ ಮೂರ್ತಿಶಿಲ್ಪವನ್ನು ಗುರುತಿಸಬಹುದು.

ಪ್ರಸ್ತುತ ಹಾಡುವಳ್ಳಿ ಗ್ರಾಮದಲ್ಲಿ ಕಾಣಸಿಗುವ ಜೈನಮೂರ್ತಿ ಶಿಲ್ಪಗಳೆಲ್ಲವೂ ಪೂರ್ವ ಮಧ್ಯಕಾಲೀನ, ಮಧ್ಯಕಾಲೀನದವುಗಳೇ ಆಗಿವೆ. ಇದಕ್ಕಿಂತ ಮೊದಲು ಇಲ್ಲಿ ಮೂರ್ತಿಶಿಲ್ಪಗಳಾಗಲೀ, ಶಾಸನಗಳ ಆಧಾರಗಳು ಈವರೆಗೆ ದೊರಕಿಲ್ಲ. ಒಟ್ಟಾರೆ ತೀರ್ಥಂಕರರ ಮೂರ್ತಿಶಿಲ್ಪದಲ್ಲಿ ಕೆಲವೊಂದು ಕಾಲಿಕ ಬದಲಾವಣೆಗಳನ್ನು ಬಿಟ್ಟರೆ, ಹೆಚ್ಚಿನ ವ್ಯತ್ಯಾಸ ಕಾಣಬರದಿದ್ದರೂ, ಹಾಡುವಳ್ಳಿ ಗ್ರಾಮದಲ್ಲಿನ ಜೈನಮೂರ್ತಿಶಿಲ್ಪಗಳು ಕಲಾ ಸೌಂದರ್ಯ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಮಹತ್ವದ್ದಾಗಿದೆ. ಈ ಹಿನ್ನೆಲೆಯನ್ನು ಆಧರಿಸಿ ಇಲ್ಲಿನ ಜೈನ ಮೂರ್ತಿಗಳ ವೈಶಿಷ್ಟ್ಯತೆಯನ್ನು ಹೇಳಲಾಗಿದೆ.

ಸುಪಾರ್ಶ್ವನಾಥಪಾರ್ಶ್ವನಾಥ

ಸುಪಾರ್ಶ್ವನಾಥ ಏಳನೇ ತೀರ್ಥಂಕರ, ಪಾರ್ಶ್ವನಾಥ ೨೩ನೇ ತೀರ್ಥಂಕರ, ಸುಪಾರ್ಶ್ವನಾಥ ಮತ್ತು ಪಾರ್ಶ್ವನಾಥ ತೀರ್ಥಂಕರರು ಬೇರೆ ಬೇರೆ ಆದರೂ ಹೆಸರಿನ ಸಾಮ್ಯತೆಯ ಜೊತೆಗೆ ನಾಗ ಸಾಮ್ಯವೂ ಇದೆ. ಸುಪಾರ್ಶ್ವನಾಥ ಕಾಶಿಯ ರಾಜ ಆಶ್ವಸೇನ ಮತ್ತು ಮಾಯಾದೇವಿಯರ ಮಗ, ಯಾವುದೇ ತೀರ್ಥಂಕರ ಮೂರ್ತಿಯ ತಲೆಯ ಮೇಲೆ ನಾಗವನ್ನು ನೋಡಿದರೆ ಅದು ಪಾರ್ಶ್ವನಾಥ ಎಂದು ಎನಿಸಿಬಿಟ್ಟರೆ ಆಶ್ಚರ್ಯವಿಲ್ಲ (ಶುಭಚಂದ್ರ, ೧೯೨೬, ಪು. ೮೨). ಆದರೆ ಲಾಂಛನವನ್ನು ಗಮನಿಸಿ ಅದು ಪಾರ್ಶ್ವನಾಥನದೋ ಸುಪಾರ್ಶ್ವನಾಥನದೋ ಎಂದು ಹೇಳಬೇಕಾಗುತ್ತದೆ. ನಾಗನಿಗೂ ಸುಪಾರ್ಶ್ವನಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೆ ಸುಪಾರ್ಶ್ವನಾಥನ ಲಾಂಛನ ಸ್ವಸ್ತಿಕ.ಆದರೆ ನಾಗನ ಹೆಡೆಯ ಮೇಲೂ ಸ್ವಸ್ತಿಕವಿರುತ್ತದೆ. ಧರಣೇಂದ್ರ ಯಕ್ಷನ ರೂಪ ವರ್ಣನೆಯಲ್ಲಿ ವಿಕಟ ವಿಸ್ಪುರತ್ ಸ್ವಸ್ತಿಕಂ ಎಂಬ ಮಾತು ನಾಗರಾಜ ರಾಜನಲ್ಲಿ ಸ್ವಸ್ತಿಕವಿರುವುದನ್ನು ಪುಷ್ಟಿ ಕೊಡುತ್ತದೆ. ಧರಣೇಂದ್ರ ಮತ್ತು ಪದ್ಮಾವತಿ ೨೩ನೇ ತೀರ್ಥಂಕರನ ಯಕ್ಷ ಯಕ್ಷಿಯರಾಗಿದ್ದಾರೆ. ಹೀಗಾಗಿ ಸುಪಾರ್ಶ್ವನಾಥನಿಗೂ ನಾಗನಿಗೂ ಸಂಬಂಧ ಇರದೇ ಇದ್ದರೂ ಆತನ ಲಾಂಛನ ಸ್ವಸ್ತಿಕವಾಗಿರುವುದರಿಂದ ನಾಗನ ಸಂಕೇತವಾದ ಸ್ವಸ್ತಿಕ ಸುಪಾರ್ಶ್ವನ ಮೂರ್ತಿ ಶಿಲ್ಪದಲ್ಲಿ ಸ್ಥಾನಗೊಳಿಸಿದೆ.

ಪಾರ್ಶ್ವನಾಥ ಮತ್‌ಉತ ನಾಗನಿಗೆ ಒಂದು ರೀತಿಯಲ್ಲಿ ಅವಿನಾಭಾವ ಸಂಬಂಧವಿದೆ. ಪಾರ್ಶ್ವನಾಥ ಬಾಲ್ಯದಿಂದಲೂ ವೈರಾಗ್ಯ ಪ್ರವೃತ್ತಿಯವನಾಗಿದ್ದನು. ಒಂದು ಕಥೆಯ ಪ್ರಕಾರ ಪಾರ್ಶ್ವನು ಮುಂಚಿನ ಜನ್ಮದಲ್ಲಿ ಮರುಭೂತಿ ಎಂಬ ಹೆಸರಿನಿಂದ ಹುಟ್ಟಿದ್ದನು. ಒಂದು ದಿನ ಗಂಗೆಯ ತಟದಲ್ಲಿ ಪಂಚಾಗ್ನಿಯ ನಡುವೆ ಕುಳಿತು ತಪಸ್ಸು ಮಾಡುತ್ತಿದ್ದನು ಮರುಭೂತಿಯು ಬೆಂಕಿಯ ಉರಿಯಲ್ಲಿ ಸಾಯಬಹುದಾದ ನಾಗನನ್ನು ಕಾಪಾಡಿದನು. ಈ ನಾಗ ದಂಪತಿಗಳು ಧರಣೇಂದ್ರ ಯಕ್ಷ ಮತ್ತು ಪದ್ಮಾವತಿ ಯಕ್ಷಿಯರಾಗಿ ಹುಟ್ಟಿದರು. ಕಮಠನು ಸುಂದರ ಎಂಬ ಹೆಸರಿನಿಂದ ಪಾರ್ಶ್ವನಾಥನ ವೈರಿಯಾಗಿ ಹುಟ್ಟಿದನು. ಪಾರ್ಶ್ವನಾಥನು ಒಮ್ಮೆ ಉಗ್ರ ತಪಸ್ಸು ಮಾಡುತ್ತಿರುವಾಗ ಸಂವರನು ಅವನ ತಪಸ್ಸನ್ನು ಕೆಡಿಸಲೆಂದು ಹಾವಾಗಲು, ಹರಿತವಾದ ಅಸ್ತ್ರಗಳನ್ನು, ವಿಚಿತ್ರಶಸ್ತ್ರಾಸ್ತ್ರ, ಸುಂದರ ಕನ್ಯೆಯರನ್ನು ಅವನ ಮೇಲೆ ಏಳು ದಿನಗಳವರೆಗೆ ಪ್ರಯೋಗಿಸಿದನು. ಮಳೆ ಬರಿಸಿ ಮಳೆ ಪಾರ್ಶ್ವನಾಥನ ಮೂಗಿನವರೆಗೂ ತಲುಪಿತು. ಅಂದು ನಾಗದಂಪತಿಗಳು ಪಾರ್ಶ್ವನಾಥನನ್ನು ಮೇಲೆತ್ತಿ ಹೆಡೆಗಳಿಂದ, ವಜ್ರಕೊಡೆಗಳಿಂದ ರಕ್ಷಿಸಿದರು (ಶ್ರೀನಿವಾಸ ಪಾಡಿಗಾರ, ಜಿನತಿಲಕ ೨೦೦೪-೦೫, ಪು. ೧೧೦). ಹೀಗಾಗಿ ಇಂದಿಗೂ ಪಾರ್ಶ್ವನಾಥನ ಹೆಡೆಯ ಮೇಲೆ ನಾಗನನ್ನು ರಕ್ಷಿಸಿದಂತೆ ತೋರಿಸಲಾಗುತ್ತದೆ. ಪದ್ಮಾವತಿ ನಾಗದೇವತೆ ಎಂಬ ಬಗ್ಗೆ ಪದ್ಮಾವತಿಯ ತಲೆಯ ಮೇಲೂ ರಕ್ಷಣೆ ನೀಡಿದ ನಾಗನ ಹೆಡೆಯನ್ನು ತೋರಿಸಲಾಗುತ್ತದೆ. ಪ್ರಸ್ತುತ ಹಾಡುವಳ್ಳಿ ಗ್ರಾಮಕ್ಕೆ ಸಂಬಂಧಿಸಿದಂತೆ ಸುಪಾರ್ಶ್ವನಾಥ ಮತ್ತು ಪಾರ್ಶ್ವನಾಥರ ವಿಗ್ರಹಗಳೂ ದೊರೆತಿವೆ.

ಪಾರ್ಶ್ವನಾಥ ತೀರ್ಥಂಕರ ಪಲ್ಯಂಕಾಸನದಲ್ಲಿ ಪಾಶ್ವನಾಥ ತೀರ್ಥಂಕರ ಕಾರ್ಯೋತ್ಸಗದಲ್ಲಿ

ಪಾರ್ಶ್ವನಾಥ ತೀರ್ಥಂಕರ ಪಲ್ಯಂಕಾಸನದಲ್ಲಿ; ಪಾಶ್ವನಾಥ ತೀರ್ಥಂಕರ ಕಾರ್ಯೋತ್ಸಗದಲ್ಲಿ

ಪಾರ್ಶ್ವನಾಥ ಬಸದಿಯಲ್ಲಿನ (ಪ್ರಸ್ತುತ ಪಾರ್ಶನಾಥ ಗೌಡರ ಮನೆಯ ಆವರಣದಲ್ಲಿನ) ಪಾರ್ಶ್ವನಾಥ ತೀರ್ಥಂಕರ ಪಲ್ಯಂಕಾಸನದಲ್ಲಿ ಧ್ಯಾನಮುದ್ರೆಯಲ್ಲಿದ್ದಾನೆ. ಏಕಚಿತ್ತವಾಗಿ ನಾಸಿಕದ ತುದಿ ನೀಳವಾದ ಜೋತು ಬಿದ್ದ ಕಿವಿಗಳು, ಗಂಭೀರವಾದ ಏಕಚಿತ್ತ ಮುಖಭಾವ, ಗುಂಗುರು ಕೂದಲು, ವಿಶಾಲ ವಕ್ಷಸ್ಥಳ, ಕಮಲದ ಮೇಲೆ ಪದ್ಮಾಸನದಲ್ಲಿ ಕುಳಿತ ತೀರ್ಥಂಕರನ ಕಾಲುಗಳು ಮೇಲೆ ಒಂದರ ಮೇಲೊಂದು, ತಲೆಯ ಮೇಲೆ ಏಳು ಅಥವಾ ಒಂಬತ್ತು ತಲೆಯ ನಾಗ ಅದರ ಮೇಲೆ ಮುಕ್ಕೊಡೆ ಈ ಮೂರ್ತಿ ಸಿಲ್ಪದ ವೈಶಿಷ್ಟ್ಯತೆಯಾಗಿದೆ. ಪಾರ್ಶ್ವನಾಥನ ಎಡಬಲಕ್ಕೆ ಧರಣೇಂದ್ರ ಯಕ್ಷ ಮತ್ತು ಪದ್ಮಾವತಿ ಯಕ್ಷಿಯರಿದ್ದಾರೆ. ಪ್ರಭಾವಳಿಯ ತುದಿಗೆ ಕೀರ್ತಮುಖವಿದೆ. ಸುತ್ತ ನಾಗತೋರಣಾಲಂಕೃತ ಕೆತ್ತನೆಯಿದೆ. ಇನ್ನೊಂದು ಪಾರ್ಶ್ವನಾಥ ತೀರ್ಥಂಕರ ಕಾರ್ಯೋತ್ಸಗದಲ್ಲಿದ್ದು, ನೇಮಿನಾಥ ಬಸದಿಯಲ್ಲಿ ಇಡಲಾಗಿದೆ.

ಹಾಡುವಳ್ಳಿಗೆ ಸಂಬಂಧಿಸಿದಂತೆ ಇನ್ನೂ ಮೂರು ವಿಗ್ರಹಗಳು ಒಂದು ಸುಪಾರ್ಶ್ವನಾಥ ಇನ್ನೊಂದು ಪಾರ್ಶ್ವನಾಥ ವಿಗ್ರಹ, ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನಾ ಸಂಸ್ಥೆಯಲ್ಲಿದ್ದು, ಅವುಗಳ ವಿವರಣೆಯನ್ನು ಲೋಹಶಿಲ್ಪ ಅಧ್ಯಾಯದಲ್ಲಿ ದಾಖಲಿಸಲಾಗಿದೆ.