ಕಲಾ ಸೌಂದರ್ಯ ಒಂದೇ ಮಾಧ್ಯಮಕ್ಕೆ ಸೀಮಿತವಲ್ಲ. ಮಣ್ಣಿನಲ್ಲೂ ಕಲೆಗೆ ಒಂದು ಸ್ಥಾನವಿದೆ. ಕಲೆ ಹಲವಾರು ಮಾಧ್ಯಮಗಳಿಂದ ಅಭಿವ್ಯಕ್ತಗೊಳ್ಳುವ ಸೌಂದರ್ಯ. ಅಂದರೆ ಕಲಾ ಮತ್ತು ಸೌಂದರ್ಯ ಒಂದಕ್ಕೊಂದು ಪೂರಕ. ಕಲಾ ಮತ್ತು ಸೌಂದರ್ಯ ಪ್ರಜ್ಞೆ ಹೊರಬರಬೇಕೆಂದರೆ ಅದಕ್ಕೊಂದು ಮಾಧ್ಯಮ ಅವಶ್ಯಕ. ಆ ಮಾಧ್ಯಮ ನಾವು ದಿನನಿತ್ಯ ನೋಡುವ ಕಲ್ಲು, ತಾಮ್ರ, ಕಂಚು, ಹಿತ್ತಾಳೆ, ಚಿನ್ನ ಯಾವುದೇ ಲೋಹವಾಗಿರಬಹುದು. ಇದಕ್ಕೊಂದು ಆಕೃತಿ ರೂಪ ಇರಬೇಕು. ವಿಗ್ರಹ ಪದವನ್ನು ಪರ್ಯಾಯವಾಗಿ ಮೂರ್ತಿ ಶಿಲ್ಪಕ್ಕೂ ಬಳಸುತ್ತೇವೆ. ಆದರೆ ವಿಗ್ರಹ ಎಂಬ ಪದ ಹೆಚ್ಚಿನ ಮಟ್ಟಿಗೆ ಲೋಹ ಮಾಧ್ಯಮದಿಂದ ತಯಾರಿಸಲ್ಪಡುವ ವಿಗ್ರಹಕ್ಕೆ ಸೀಮಿತವಾಗುತ್ತದೆ ಪ್ರಸ್ತುತ ಈ ವಿಷಯ ಲೋಹ ಮಾಧ್ಯಮದಿಂದ ತಯಾರಾದ ಕಲಾವಸ್ತುಗಳಿಗೆ ಅನ್ವಯಿಸುತ್ತದೆ.

ಸೌಂದರ್ಯ ಮತ್ತು ಕಲೆ ಇವೆರಡೂ ನಮ್ಮ ಮನಸ್ಸಿನ ಮೂಲಕ ಸೃಷ್ಟಿಯಾಗುತ್ತದೆ. ಅಂದರೆ ಇದರಲ್ಲಿ ನಾವು ಕೇಂದ್ರಿಕೃತವಾಗಬೇಕು. ಒಂದು ದೇವರ ಪ್ರತಿಮೆಯಲ್ಲಿ ಕಲೆ ನೋಡಬೇಕೆಂದರೆ ಪ್ರತಿಮೆ ಹೇಗೆ ಇರಬೇಕೆಂಬ ಧಾರ್ಮಿಕ ಕಟ್ಟಳೆ ಇರುತ್ತದೆ. ಧಾರ್ಮಿಕ ಕಟ್ಟಳೆಯಲ್ಲಿ ಮಾಡಿದ ನೋಡುವ ಕಲೆಯ ಸೌಂದರ್ಯ ಮತ್ತು ಭಾವನೆ ಬೇರೆ ಬೇರೆ ಇರುತ್ತದೆ. ನಾವು ಕಲಾಸೌಂದರ್ಯ ನೋಡಬೇಕಾದಲ್ಲಿ ದೇವರ ಪ್ರತಿಮೆಯೇ ಆಗಿರಬೇಕಿಲ್ಲ. ಕಂಚಿನ ಲೋಹವಾದರೂ ಶಿಲ್ಪಿ ತನ್ನ ಕೈಚಳಕದಲ್ಲಿ ಕಲೆಯನ್ನು ಚೆಲ್ಲಬಲ್ಲ. ಇದು ಶಿಲ್ಪಿಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ದೇವರ ಪ್ರತಿಮೆಯಲ್ಲಿ ಕಾಣುವ ಕಲಾ ಸೌಂದರ್ಯ, ಮಾಧ್ಯಮ ಒಂದೇ ಆಗಿ ಭಾವನೆಗಳು ಬೇರೆ ಬೇರೆ ಆದರೂ ಇವೆರಡೂ ಕಲಾ ಸೌಂದರ್ಯವೇ! ನಮ್ಮಲ್ಲಿ ಮೂಡುವ ಈ ಭಾವನೆಗೆ ಕಲಾಕಾರನ ಅಥವಾ ಶಿಲ್ಪಿಯ ಕಲೆಯ ಸೃಷ್ಟಿಯೇ ಕಾರಣ.

ಲೋಹದ ವಿಗ್ರಹಗಳು ಅಂದರೆ ಪಂಚಲೋಹ ಅಥವಾ ಕಂಚಿನ ವಿಗ್ರಹಗಳು ಪ್ರಸ್ತುತ ಅಧ್ಯಯನಕ್ಕೆ ಒಳಪಡುತ್ತದೆ. ಪ್ರತಿಮೆ ನಿರ್ಮಾಣಕ್ಕೆ ಶುದ್ಧ ಹಾಗೂ ಮಿಶ್ರಿತ ಲೋಹಗಳೆರಡನ್ನು ಉಪಯೋಗಿಸುತ್ತಾರೆ. ಎಂಟು ಭಾಗ ತಾಮ್ರ ಒಂದು ಭಾಗ ತವರ ಮಿಶ್ರಣವೇ ಕಂಚು. ಕೆಲವೊಮ್ಮೆ ನಾಲ್ಕು ಅಥವಾ ಐದು ಭಾಗ ತಾಮ್ರಕ್ಕೆ ಒಂದು ಭಾಗ ತವರವನ್ನು ಸೇರಿಸುತ್ತಾರೆ. ಪಂಚಲೋಹದಲ್ಲಿ ತಾಮ್ರ, ತವರ, ಬೆಳ್ಳಿ, ಬಂಗಾರ, ಸತುವನ್ನು ಬೇರೆ ಬೇರೆ ಪ್ರಮಾಣದಲ್ಲಿ ಮಿಶ್ರಣ ಮಾಡಿ ಎರಕ ಹೊಯ್ಯುತ್ತಾರೆ (ಶೆಟ್ಟಿ ಎಸ್.ಡಿ., ೨೦೦೨, ಪು. ೩೪೦). ಇದುವೇ ಪ್ರತಿಮೆ ತಯಾರಿಸುವ ರೀತಿ, ಈ ಪ್ರತಿಮೆಗೆ ಕಲೆಯ ಸಾಕಾರ ನೀಡುವುದು ಶಿಲ್ಪಿಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

ಪ್ರಾಚೀನತೆಯ ದೃಷ್ಟಿಯಿಂದ ನೋಡಿದರೆ ಲೋಹ ಕಲೆ ಅತಿಪ್ರಾಚೀನ. ವೈದಿಕ ಯುಗದಲ್ಲೂ ಲೋಹ ಜ್ಞಾನ ತಿಳಿದಿತ್ತು. ಯಜುರ್ವೇದ ಲೋಹ ಶಿಲ್ಪಿಯನ್ನು ಸೃಷ್ಟಿಕರ್ತನೆಂದು ಉಲ್ಲೇಖಿಸುತ್ತದೆ. ನಲ್ಲೂರು ಉತ್ಖನನದಲ್ಲಿ ದೊರೆತಿದ್ದ ಮಾತೃದೇವತಾ ಲೋಹ ಮೂರ್ತಿ ಲೋಹ ಕಲೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಕರ್ನಾಟಕದಲ್ಲಿ ಕ್ರಿ.ಪೂ. ೧೦೦೦ಕ್ಕೆ ಸೇರಿದೆಯೆಂದು ಹೇಳಲಾದ ಹಳ್ಳೂರು, ತೆಕ್ಕಲುಕೋಟೆಗಳಲ್ಲಿ ಕಂಚಿನ ವಸ್ತುಗಳು ಬಳಕೆಯಲ್ಲಿ ಇತ್ತೆಂಬುದಕ್ಕೆ ಆಧಾರಗಳಿವೆ (ಕೃಷ್ಣಮೂರ್ತಿ ಎಂ.ಎಸ್., ೧೯೯೧, ಪು. ೭೯೫).

ಲೋಹ ಕಲಾಕೃತಿಗಳು ಕರ್ನಾಟಕಕ್ಕೆ ಸೀಮಿತವಾದಂತೆ, ಶಾತವಾಹನರ ಕಾಲದಿಂದಲೇ ಪ್ರಾರಂಭವಾದರೂ ಅವು ಕೇವಲ ನಾಣ್ಯಗಳಿಗೆ ಸೀಮಿತವಾಗಿದೆ. ಕಲಾ ಸೌಂದರ್ಯ ತಿಳಿದಿತ್ತೆಂಬುದಕ್ಕೆ ಪೂರ್ವಭಾವಿಯಾಗಿ ಸನ್ನತಿಯ ಶಿಲ್ಪ ಇದಕ್ಕೆ ಪುಷ್ಟಿ ನೀಡುತ್ತದೆ. ನಾಣ್ಯ ಕಲಾಕೃತಿ ಎಲ್ಲ ಜನಾಂಗದವರನ್ನೊಳಗೊಂಡು ಅನ್ವಯವಾಗುತ್ತದೆ. ಮೂಲತಃ ಕದಂಬರು ವೈದಿಕ ಧರ್ಮದವರಾಗಿದ್ದರೂ ವೈದಿಕ ಧರ್ಮದ ಜೊತೆಗೆ ಜೈನಧರ್ಮವು ಬೆಳೆದು ಬಂದಿತು. ತಲಕಾಡಿನ ಗಂಗರ ಕಾಲದ ಲೋಹಶಿಲ್ಪವನ್ನೊಳಗೊಂಡು ಲೋಹ ಪ್ರವರ್ದ್ಧಮಾನಕ್ಕೆ ಬರತೊಡಗಿತು. ಇವರ ಕಾಲದಲ್ಲಿ ಶಿಲಾಮೂರ್ತಿಗಳಿಗೂ ಮಹತ್ವ ಬಂದಿತು. ಶ್ರವಣಬೆಳಗೊಳ ಮಠದಲ್ಲಿನ ಜಿನಮೂರ್ತಿಯ ಪೀಠದ ಮೇಲಿನ ಶಾಸನ ಎರಡನೆ ಗಂಗ ಮಾರಸಿಂಹ ಅಕ್ಕ ಕುಂದಣ ಸೋಮದೇವಿ ಮಾಡಿಸಿದ ವಿಗ್ರಹವೆಂದಿದೆ. ಇದೇ ಕಾಲದ ಇನ್ನೊಂದು ಕಂಚಿನ ಜಿನ ವಿಗ್ರಹ ಕೊಲ್ಕತ್ತಾ ವಸ್ತುಸಂಗ್ರಹಾಲಯದಲ್ಲಿದೆ. ಈ ವಿಗ್ರಹದ ಪೀಠದಲ್ಲಿನ ಶಾಸನ ಜಿನವಲ್ಲಭವ ಪತ್ನಿ ಭಗಿಯಬ್ಬೆ ಈ ಪ್ರತಿಮೆ ಮಾಡಿಸಿದಳೆಂದಿದೆ (ಕೃಷ್ಣಮೂರ್ತಿ ಎಂ.ಎಸ್., ೧೯೯೧, ಪು. ೭೯೫). ಇದೇ ರೀತಿ ಹೊಯ್ಸಳ ವಿಜಯನಗರ ಕಾಲದವರೆಗೂ ಕಂಚಿನ ಮೂರ್ತಿ ಶಿಲ್ಪ ಬೆಳವಣಿಗೆ ಕಂಡಿತು. ಜೈನಪಂಥ ಅದರಲ್ಲೂ ಹೆಚ್ಚಾಗಿ ಹಾಡುವಳ್ಳಿಗೆ ಸೀಮಿತವಾಗಿ ಹೇಳುವುದಾದರೆ, ಮಧ್ಯಕಾಲೀನ ಲೋಹದ ಜಿನಮೂರ್ತಿಗಳು ಇಲ್ಲಿವೆ. ಹಾಡುವಳ್ಳಿಯ ಕೆಲವು ಲೋಹಶಿಲ್ಪಗಳು ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯಲ್ಲಿದ್ದು ಕಂಚಿನ ವಿಗ್ರಹಗಳ ಬೆಳವಣಿಗೆ ತಿಳಿಯಲು ಉತ್ತಮ ಉದಾಹರಣೆಯಾಗಿದೆ.

ಶೈಲಿಯ ದೃಷ್ಟಿಯಿಂದ ಕಂಚಿನ ವಿಗ್ರಹಗಳನ್ನು ಕಲಾಶಿಲ್ಪಕ್ಕೆ ತುಲನಾತ್ಮಕ ಅಧ್ಯಯನ ಮಾಡಿ ನೋಡಿದರೆ, ಕಂಚಿನ ವಿಗ್ರಹಗಳನ್ನು ಶಾಸನಗಳ ಆಧಾರ ಇಲ್ಲದೇ ಗುರುತಿಸುವುದು ಕಷ್ಟ ಸಾಧ್ಯ. ಶಾಸನಗಳಿದ್ದಲ್ಲಿ ಕಾಲ ನಮೂದಿತ ಆಧಾರದಲ್ಲಿ ಅಥವಾ ಲಿಪಿ ಲಕ್ಷಣಗಳಿಂದ ಕಾಲವನ್ನು ಗುರುತಿಸಬಹುದು. ವಿಜಯನಗರ ಕಾಲವನ್ನು ಒಂದು ಸುವರ್ಣಯುಗವೆಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ವಿಜಯನಗರ ಕಾಲದಲ್ಲಿ ಮೂರ್ತಿ ಪೂಜೆಯೊಂದಿಗೆ ಉತ್ಸವಮೂರ್ತಿಯ ವಿಗ್ರಹಗಳಿಗೂ ಪೂಜೆ ಪ್ರಾರಂಭವಾಯಿತು. ಇನ್ನೊಂದು ವಿಶೇಷತೆ ವಿಜಯನಗರ ಕಾಲದಲ್ಲಿ ಉತ್ಸವ ಮೂರ್ತಿಯ ಜೊತೆಗೆ ವ್ಯಕ್ತಿ ವಿಗ್ರಹಗಳು ಲೋಹದಿಂದ ತಯಾರಿಸಲ್ಪಟ್ಟವು. ಉದಾ. ಆಳ್ವಾರರ, ನಾಯನ್ನಾರರ ವಿಗ್ರಹಗಳು ತಯಾರಿಸಲ್ಪಟ್ಟಿವೆ. ತಿರುಪತಿಯ ವೆಂಕಟೇಶ್ವರ ದೇವಾಲಯದಲ್ಲಿ ಕೃಷ್ಣದೇವರಾಯ ಮತ್ತು ಆತನ ಪತ್ನಿಯರ ತಿರುಮಲಾಂಬಿಕೆ ಮತ್ತು ಚಿನ್ನಾದೇವಿ ಪ್ರತಿಮೆಗಳು ಇವೆ. ವಿಜಯನಗರ ಕಾಲದ ಲೋಹಕಲಾ ಸೌಂದರ್ಯಕ್ಕೆ ಇದೊಂದು ಉತ್ತಮ ನಿದರ್ಶನ.

ವಿಜಯನಗರ ಕಾಲದ ಕಂಚಿನ ವಿಗ್ರಹಗಳನ್ನು ಪೂರ್ವ ವಿಜಯನಗರ ಕಾಲದ ವಿಗ್ರಹಗಳಿಗೆ ತುಲನಾತ್ಮಕ ದೃಷ್ಟಿಯಿಂದ ನೋಡಿದರೆ, ವಿಜಯನಗರ ಕಾಲದ ಕಂಚಿನ ವಿಗ್ರಹಗಳಲ್ಲಿ ವಿಶೇಷ ಲಕ್ಷಣಗಳನ್ನು ಕಾಣಬಹುದು. ವಿಜಯನಗರ ಕಾಲದ ಕಂಚಿನ ಶಿಲ್ಪಗಳಲ್ಲಿ ಉದ್ಧವಾದ ಕಿರೀಟ ಅಂದರೆ ಕರಂಡ ಮಕುಟ, ಅಗಲ ದುಂಡಾದ ನೇತ್ರ, ಮೂಗಿನ ಕೋನು ತುದಿ, ಸ್ವಲ್ಪ ಪ್ರಮುಖವಾಗಿ ಕಾಣುವ ಗಲ್ಲ, ಸ್ತ್ರೀವಿಗ್ರಹವಾಗಿದ್ದಲ್ಲಿ ದುಂಡಾದ ಸ್ತನ, ಕೆಳಭಾಗದಲ್ಲಿ ದೇಹ ವಸ್ತ್ರಾಲಂಕಾರ ನೆರಿಗೆಯಾಗಿ ಇಳಿಬಿದ್ದಿರುವುದು ಇವೆಲ್ಲ ಸಾಮಾನ್ಯ ಲಕ್ಷಣಗಳಾಗಿವೆ.

ಈ ಹಿನ್ನೆಲೆಯಲ್ಲಿ ಹಾಡುವಳ್ಳಿಗೆ ಸಂಬಂಧಿಸಿದಂತೆ ಲಭ್ಯವಾದ ಜೈನ ಲೋಹ ಕಲಾವಸ್ತುಗಳ ದಾಖಲಾತಿಯನ್ನು ಇಲ್ಲಿ ಮಾಡಲಾಗಿದೆ. ಪ್ರಸ್ತುತ ಹಾಡುಹಳ್ಳಿಯು ಹೆಚ್ಚಿನ ಲೋಹ ಕಲಾಮೂರ್ತಿಗಳು ಇಲ್ಲದಿದ್ದರೂ ಪ್ರಸ್ತುತ ಹಾಡುವಳ್ಳಿಯದೇ ಆದ ಲೋಹಶಿಲ್ಪಗಳು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿವೆ. ಅಲ್ಲಿನ ವಸ್ತು ಸಂಗ್ರಹಾಲಯಕ್ಕೆ ನಾನು ಭೇಟಿ ನೀಡಿದಾಗ ನನಗೆ ಲಭ್ಯವಾದ ಕಲಾವಸ್ತುಗಳನ್ನು ಪಟ್ಟಿಕೆ ಮಾಡಿ ಹಾಡುವಳ್ಳಿಯ ಲೋಹಶಿಲ್ಪಗಳ ಜೊತೆಗೆ ದಾಖಲಿಸಿದೆ.

ಶ್ರುತಸ್ಕಂದ

ಪ್ರಸ್ತುತ ಎರಡು ಶ್ರುತಸ್ಕಂದ ಯಂತ್ರಗಳನ್ನು ಹಾಡುವಳ್ಳಿಯ ಚವ್ವೀಶ ತೀರ್ಥಂಕರ ಬಸದಿಯಲ್ಲಿ ಪೂಜಿಸಲಾಗುತ್ತಿದೆ. ಜೈನಧರ್ಮದಲ್ಲಿ ಶ್ರುತದೇವಿಯನ್ನು ಸರಸ್ವತಿ ಎಂತಲೂ ಕರೆಯುತ್ತಾರೆ. ಶ್ರುತ ಅಂದರೆ ಜಿನಾಗಮ ಅಥವಾ ಶಾಸ್ತ್ರ ಎಂದಾಗುತ್ತದೆ. ಜೈನ ಮತೀಯರಲ್ಲಿ ಸರಸ್ವತಿಯ ಹೊರತಾಗಿ ಹದಿನೇಳು ಜನ ವಿದ್ಯಾದೇವಿಯರನ್ನು ಆರಾಧಿಸುತ್ತಾರೆ (ನಾಗರಾಜಯ್ಯ ಹಂಪ, ೧೯೭೬, ಪು. ೫೧ – ೭೧). ಪ್ರಜ್ಞಪ್ತಿ, ವಜ್ರಶ್ರಂಖಲಾ, ವಜ್ರಾಂಕುಶ, ಜಂಬುನಾಥ, ಪುರುಷದತ್ತಾ, ಕಾಳಿ, ಮಹಾಕಾಳಿ, ಗೌರಿ, ಗಂಧಾರಿ, ಜ್ವಾಲಮಾಲಿನಿ, ಮಾನವಿ, ವೈರೂಟಿ, ಮಹಾಮಾನನಿ ಹೀಗೆ ಹದಿನೇಳು ಜನ ದೇವಿಯರಲ್ಲಿ ಹದಿಮೂರು ಜನ ಬೇರೆ ಬೇರೆ ತೀರ್ಥಂಕರರ ಯಕ್ಷಿಯರೂ ಆಗಿದ್ದಾರೆಂಬುದು ಕುತೂಹಲಕಾರಿ. ಪ್ರಸ್ತುತ ಹಾಡುವಳ್ಳಿಯಲ್ಲಿ ಜ್ವಾಲಮಾಲಿನಿ ವಿಗ್ರಹವಿಲ್ಲ. ಇದು ಚವ್ವೀಶ ತೀರ್ಥಂಕರ ಬಸದಿಯಲ್ಲಿ ಎರಡು ಶ್ರುತ ಸ್ಕಂದಗಳಿವೆ.

ಶ್ರುತಸ್ಕಂದ ಫಲಕ

ಶ್ರುತಸ್ಕಂದ ಫಲಕ

ಶ್ರುತಸ್ಕಂದದ ಯಂತ್ರ – ಪೂರ್ತಿ ಜೈನ ಆಗಮ ಪರಂಪರೆಯನ್ನು ಪ್ರತಿನಿಧಿಸುತ್ತದೆ. ದಿಗಂಬರ ಜೈನರಲ್ಲಿ ಶ್ರುತಸ್ಕಂದವನ್ನು ಸರಸ್ವತಿ ಪರಿಕಲ್ಪನೆಯಲ್ಲಿ ಪೂಜಿಸಲಾಗುತ್ತಿದೆ. (ನಾಗರಾಜಯ್ಯ ಹಂಪ, ೨೦೦೯, ಪು. ೫೧). ಉದಾ. ಇದೇ ಅರಸು ಮನೆತನದ ಗೇರುಸೊಪ್ಪೆಯ ಜ್ವಾಲಮಾಲಿನಿ ಬಸದಿಯಲ್ಲಿ ಶ್ರುತಸ್ಕಂದ ಯಂತ್ರವಿದೆ (ಭಟ್‌ಸೂರಿ ಕೆ.ಜಿ., ೧೯೯೬, ಪು.೧೩೫), ಕಂಚು, ಹಿತ್ತಾಳೆ, ತಾಮ್ರದಿಂದ ತಯಾರಿಸಿದ ಉಬ್ಬುಫಲಕದ ಶ್ರುತಸ್ಕಂದದ ಮೇಲೆ ಲೋಕದ ವಿವರ ಮತ್ತು ಶಾಸ್ತ್ರವನ್ನು ಬರೆದಿರುತ್ತಾರೆ. ಉಬ್ಬುಫಲಕದ ಮೇಲೆ ಬರೆದ ಎರಡು ಶ್ರುತಸ್ಕಂದ ಹಾಡುವಳ್ಳಿಯ ಚವ್ವೀಶ ತೀರ್ಥಂಕರರ ಬಸದಿಯಲ್ಲಿ ಶ್ರುತಿದೇವಿಯ ಸಂಕೇತವಾಗಿ ಪೂಜಿಸಲಾಗುತ್ತಿದೆ.

ಶ್ರುತಸ್ಕಂದ ಫಲಕ

ಶ್ರುತಸ್ಕಂದ ಫಲಕ

ಲೋಹದ ಮಾನಸ್ತಂಭ

ಶಿಲಾ ಮಾನಸ್ತಂಭದ ಹೊರತಾಗಿ ಕಂಚಿನ ಮಾನಸ್ತಂಭ ಮಾಡುವ ಪದ್ಧತಿ ಇತ್ತೆಂಬುದನ್ನು ಮೂಲತಃ ಹಾಡುವಳ್ಳಿಯದೇ ಆದ ಈ ಮಾನಸ್ತಂಭ ನಿರೂಪಿಸಿದೆ. ಪ್ರಸ್ತುತ ಈ ಮಾನಸ್ತಂಭ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯ ಮುಂಭಾಗದಲ್ಲಿದೆ (ಪುಸ್ತಕ ದಾಖಲಾತಿ, ಎಂ. ೮೮, ಅಣ್ಣಿಗೇರಿ ಎ.ಎಂ., ೧೯೫೮, ಪು. ೩೨, ರಾಜಶೇಖರ್ ಎಸ್., ಈರಣ್ಣ ಪತ್ತಾರ, ೧೯೮೫, ಪು. ೨೩ – ೨೫). ಮಾನಸ್ತಂಭದ ಪಟದಲ್ಲಿ ಬರೆದ ಶಾಸನದ ಕಾಲ ಕ್ರಿ.ಶ. ೧೪೮೪. ಈ ಶಾಸನ ಹಾಡುವಳ್ಳಿ ಸಂಗೀರಾಯ ಒಡೆಯನು ಚಂದ್ರನಾಥ ಬಸದಿ ಮಾಡಿಸಿ ಕಂಚಿನ ಮಾನಸ್ತಂಭ ನಿಲ್ಲಿಸಿದ್ದನ್ನು ಪ್ರಸ್ತುತ ಪಡಿಸುತ್ತದೆ. (ಕ.ಇ. I, ಶಾ ಸಂ. – ೬೫). ಆದರೆ ಈ ಮಾನಸ್ತಂಭ ಮಧ್ಯಮ ಭಾಗವಾಗಿದ್ದು, ಇದರ ಪೀಠಭಾಗ ಧರ್ಮಸ್ಥಳದ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ (ಶೆಟ್ಟಿ ಎಸ್.ಡಿ., ೨೦೦೨, ಪು. ೩೨೯). ಭಾಗಶಃವಾಗಿದ್ದ ಎರಡೂ ಮಾನಸ್ತಂಭದ ಚಿತ್ರಣ ಇಲ್ಲಿ ನೀಡಲಾಗಿದೆ.

ತ್ರಿಕಾಲ ತೀರ್ಥಂಕರ

ಚತುರ್ವಿಂಶತಿ ತೀರ್ಥಂಕರ ಬಸದಿಯಲ್ಲಿನ ತ್ರಿಕಾಲ ತೀರ್ಥಂಕರ ಮೂರ್ತಿ ದೇಹದಂಡಿಸಿ ಖಡ್ಗಾಸನದಲ್ಲಿ ಇದೆ. ತ್ರಿಕಾಲ ಅಂದರೆ ಮೂರು ಕಾಲ ಎಂದರ್ಥ. ಭೂತಕಾಲ, ವರ್ತಮಾನ ಮತ್ತು ಭವಿಷ್ಯತ್ ಕಾಲ. ಸಾಂಕೇತಿಕವಾಗಿ ೭೧ ತೀರ್ಥಂಕರರ ಬಿಂಬಗಳನ್ನು ಪ್ರಧಾನ ಜಿನನ ಜೊತೆ ತೋರಿಸಲಾಗುತ್ತದೆ. ಇದರಲ್ಲಿ ಭೂತಕಾಲದಲ್ಲಿ ೨೪, ವರ್ತಮಾನ ಕಾಲದಲ್ಲಿ ೨೪ ಮತ್ತು ಭವಿಷತ್‌ಕಾಲದಲ್ಲಿ ೨೪, ಮೂಲ ವಿಗ್ರಹ ಪಾರ್ಶ್ವನಾಥ ಬಿಂಬವನ್ನೊಳಗೊಂಡು ಒಟ್ಟು ೭೨ ತೀರ್ಥಂಕರರಿದ್ದಾರೆ. ಇಲ್ಲಿ ಪ್ರಧಾನವಾಗಿ ದೇಹವನ್ನು ದಂಡಿಸಿ ತಪಸ್ಸಿನಲ್ಲಿ ನಿರತನಾದಂತಿದೆ. ಕಮಠನ ಉಪಸರ್ಗ ತಡೆಯಲು ಧರಣೀಂದ್ರ ಯಕ್ಷನು ಆಗಮಿಸಿ ತೀರ್ಥಂಕರ ತಲೆಯ ಮೇಲೆ ಹೆಡೆ ಬಿಚ್ಚಿ ರಕ್ಷಣೆ ಕೊಟ್ಟಂತಿದೆ. ಪ್ರಭಾವಳಿಯ ಮೇಲ್ತುದಿ ಕೀರ್ತಿಮುಖ ಅಥವಾ ಸಿಂಹಲಲಾಟದಿಂದ ಅಲಂಕೃತವಾಗಿದೆ. ಧಾನ್ಯಸ್ಥ ಮುಖಭಾವ, ಕೇವಲ ಜ್ಞಾನದ ತಲ್ಲೀನತೆಯ ಮುಗುಳ್ನಗು, ಜ್ಞಾನದ ಸಂಕೇತವಾಗಿ ಇಳಿಬಿದ್ದಿರುವ ಕಿವಿ ಈ ಪಾರ್ಶ್ವನಾಥ ವಿಗ್ರಹದ ವೈಶಿಷ್ಟ್ಯತೆಗಳಾಗಿವೆ. ಪಾದಕ್ಕೆ ಸಮಾನಾಂತರವಾಗಿ ಪ್ರಭಾವಳಿಗೆ ತಾಗಿ ಎಡ – ಬಲಕ್ಕೆ ಧರಣೇಂದ್ರ ಯಕ್ಷ, ಪದ್ಮಾವತಿ ಯಕ್ಷಿಯರಿದ್ದಾರೆ.

ತ್ರಿಕಾಲ ತೀರ್ಥಂಕರ

ತ್ರಿಕಾಲ ತೀರ್ಥಂಕರ

ಆದಿನಾಥ : (ಎಂ.೭) (ರಾಜಶೇಖರ ಎಸ್. ಮತ್ತು ಈರಣ್ಣ, ೧೯೮೫, ಪು. ೨೧ – ೨೨. ಅಣ್ಣಿಗೇರಿ ಎ.ಎಂ., ೧೯೫೮, ಪು. ೨೬೭ – ೨೮)

ಇಪ್ಪತ್ತನಾಲ್ಕು ತೀರ್ಥಂಕರರಲ್ಲಿ ಆದಿನಾಥ ಮೊದಲನೆಯವ. ಇಲ್ಲಿ ಆದಿನಾಥ ವಿಗ್ರಹ ಪಲ್ಯಂಕಾಸನದಲ್ಲಿ ಧ್ಯಾನಸ್ಥನಾಗಿದ್ದಾನೆ. ಎಡೆಯ ಮೇಲೆ ಶ್ರೀವತ್ಸ್ ಚಿನ್ಹೆ ಇರುವುದು ವಿಶೇಷತೆ. ಜೈನ ಪರಂಪರೆಯಲ್ಲಿ ಮೂರು ಯುಗಗಳಲ್ಲಿ ೨೪ ತೀರ್ಥಂಕರಂತೆ, ಒಟ್ಟು ೭೨ ತೀರ್ಥಂಕರರಲ್ಲಿ ಇಲ್ಲಿ ಪ್ರಧಾನವಾಗಿ ಆದಿನಾಥ ತೀರ್ಥಂಕರನನ್ನು ಬಿಂಬಿಸಲಾಗಿದೆ. ಈ ರೀತಿ ೭೨ ತೀರ್ಥಂಕರರು ಬಿಂಬಿತವಾದಾಗ ತ್ರಿಕಾಲ ತೀರ್ಥಂಕರ ರೆಂತಲೇ ಕರೆಯುತ್ತಾರೆ. ಆದಿನಾಥ ತೀರ್ಥಂಕರನ ಎಡ ಬಲಬದಿಯಲ್ಲಿ ಸುಪಾರ್ಶ್ವನಾಥ ಪಾರ್ಶ್ವನಾಥರನ್ನು ತೋರಿಸಿರುವುದು ಇದೊಂದು ವಿಶೇಷತೆ ಎಂದೇ ಹೇಳಬೇಕು. ಪಾರ್ಶ್ವನಾಥ ಸುಪಾರ್ಶ್ವನಾಥರು ದೇಹವನ್ನು ದಂಡಿಸಿ ಖಡ್ಗಾಸನದಲ್ಲಿದ್ದಂತೆ ಬಿಂಬಿಸಲಾಗಿದೆ. ಪ್ರಭಾವಳಿಯಲ್ಲಿ ಮಕರ ತೋರಣ ಪ್ರಭಾವಳಿ ಮೇಲ್ತುದಿ ಕೀರ್ತಿಮುಖವನ್ನೊಳಗೊಂಡು ಅಲಂಕೃತವಾಗಿದೆ. ಆದಿನಾಥ ತೀರ್ಥಂಕರನ ತಲೆಯ ಮೇಲೆ ಜೈನ ಪ್ರಭಾವವನ್ನು ಬಿಂಬಿಸುವ ಮುಕ್ಕೊಡೆ ಇದೆ.

ಆದಿನಾಥ ತೀರ್ಥಂಕರ

ಆದಿನಾಥ ತೀರ್ಥಂಕರ

ಆದಿನಾಥ ತೀರ್ಥಂಕರನ ಪೀಠದ ಎಡ – ಬಲದಲ್ಲಿ ಹೆಸರೇ ಸೂಚಿಸುವಂತೆ ಗೋಮುಖ ಯಕ್ಷ, ಚಕ್ರೇಶ್ವರಿ ಯಕ್ಷಿ ಅರ್ಧಪಲ್ಯಂಕಾಸನದಲ್ಲಿ ಕುಳಿತಿದ್ದಾರೆ. ಪೀಠಸ್ಥಂಬದ ಮಧ್ಯದಲ್ಲಿ ಸಿಂಹಾಸನವಿದೆ (?). ಗೋಮುಕ ಯಕ್ಷನಿಗೆ ನಾಲ್ಕು ಕೈಗಳಿದ್ದು, ಎರಡು ಕೈಗಳಲ್ಲಿ ಜಪಮಾಲೆ ಪಾಶ ಹಿಡಿದಿದೆ. ಉಳಿದ ಎರಡು ಕೈಗಳಲ್ಲಿ, ಬಲಕ್ಕೆ ಅಭಯ ಮುದ್ರೆಯಲ್ಲಿದ್ದು, ಇನ್ನೊಂದು ಕೈಲಿ ಫಲ ಇದೆ. ಚಕ್ರೇಶ್ವರಿ ಯಕ್ಷಿಯ ಎರಡು ಕೈಗಳಲ್ಲಿ, ಒಂದು ಕೈ ಪಾಶ ಹಿಡಿದಿದೆ. ಇನ್ನೊಂದು ಕೈಯಲ್ಲಿ ಹಿಡಿದ ಆಯುಧ ಅಸ್ಪಷ್ಟ. ಇನ್ನುಳಿದ ಎರಡು ಕೈಗಳಲ್ಲಿ ಫಲ ಹಿಡಿದಿದೆ. ಇವು ಈ ವಿಗ್ರಹದ ಲಕ್ಷಣಗಳಾಗಿವೆ.

ಶಂಭವನಾಥ : (ಎಂ.೨೦) (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು.೫)

ಇಪ್ಪತ್ತನಾಲ್ಕು ತೀರ್ಥಂಕರರಲ್ಲಿ ಶಂಭವನಾಥ ಮೂರನೇ ತೀರ್ಥಂಕರ. ಪೀಠದ ಮೇಲೆ ದೇಹವನ್ನು ದಂಡಿಸಿ ಕಾಯೋತ್ಸರ್ಗದಲ್ಲಿ ಧ್ಯಾನಸ್ಥನಾದಂತಿದೆ. ಶಂಬವನಾಥ ಎಡಬಲಕ್ಕೆ ತ್ರಿಮುಖ ಯಕ್ಷ ಮತ್ತು ಪ್ರಜ್ಞಪ್ತಿ ಯಕ್ಷಿಯರಿದ್ದಾರೆ. ತ್ರಿಮುಖ ಯಕ್ಷ ತ್ರಿಭಂಗಿಯಲ್ಲಿ ನಿಂತಿದ್ದು ಹೆಸರೇ ಸೂಚಿಸುವಂತೆ ಆತನಿಗೆ ಮೂರು ಮುಖಗಳಿವೆ. ಆರು ಕೈಗಳಲ್ಲಿ ಖಡ್ಗ, ತ್ರಿಶೂಲ ಮತ್ತು ಮಸಲ ಆಯುಧಗಳಿವೆ. ಎಡಭಾಗದಲ್ಲಿ ಪ್ರಜ್ಞಪ್ತಿ ಯಕ್ಷಿಣಿಗೆ ಎರಡು ಕೈಗಳಿದ್ದು, ಎಡಗೈಯಲ್ಲಿ ಪದ್ಮ, ಬಲಗೈ ವರದ ಮುದ್ರೆಯಲ್ಲಿದೆ. ಪ್ರಭಾವಳಿಯ ಮೇಲ್ತುದಿ ಕೀರ್ತಿಮುಖದಿಂದ ಅಲಂಕೃತವಾಗಿದ್ದು, ಪ್ರಭಾವಳಿಯ ಸುತ್ತಲೂ ತೂತಿನ ಕುಸುರಿನ ಕೆತ್ತನೆ ಕಾಣಬಹುದು.

ಚಂದ್ರಪ್ರಭ (ಎಂ.೭೪.) (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು.೧೨)

ಚಂದ್ರಪ್ರಭ ಇಪ್ಪತ್ತುನಾಲ್ಕು ತೀರ್ಥಂಕರರಲ್ಲಿ ಎಂಟನೆಯವ. ಚಂದ್ರಪ್ರಭ ತೀರ್ಥಂಕರ ದೇಹವನ್ನು ದಂಡಿಸಿ ಪಲ್ಯಂಕಾಸನದಲ್ಲಿ ಧ್ಯಾನಸ್ಥನಾಗಿದ್ದಾನೆ. ಪೀಠದ ಮೇಲೆ ಅರ್ಧಚಂದ್ರಾಕೃತಿಯ ಲಾಂಛನವಿದೆ.

ಸುಮತಿನಾಥ (ಎಂ.೧೮) (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು.೧೩.)

ಇಪ್ಪತ್ತನಾಲ್ಕು ತೀರ್ಥಂಕರರಲ್ಲಿ ಸುಮತಿನಾಥ ಐದನೇ ತೀರ್ಥಂಕರ. ಸುಮತಿನಾತ ತೀರ್ಥಂಕರ ವರ್ತುಲಾಕಾರದ ಪೀಠದಲ್ಲಿ ಖಡ್ಗಾಸನದಲ್ಲಿ ದೇಹವನ್ನು ದಂಡಿಸಿ ಧ್ಯಾನಸ್ಥನಾಗಿದ್ದಾನೆ. ಪೀಠದ ಹಿಂಭಾಗದಲ್ಲಿನ ಬರಹ ೫ರ ಸಂಖ್ಯೆ, ಐದನೇ ತೀರ್ಥಂಕರನೆಂಬುದನ್ನು ಸೂಚಿಸುತ್ತದೆ. ಪೀಠದ ಮುಂಭಾಗದಲ್ಲಿ ಚಕೋರ ಪಕ್ಷಿಯ ಲಾಂಛನವಿದೆ. ಪೀಠದ ಮುಂಬದಿಯಲ್ಲಿ ಕನ್ನಡ ಶಾಸನವಿದ್ದು, ಅನಬಲಿ ಪದಿಸೆಟ್ಟಿಯಮ್ ಬಗೆಯ ಸುಮತಿನಾಥ ಎಂದಿದೆ.

ಸುಪಾರ್ಶ್ವನಾಥ (ಎಂ. ೯) (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫ ಪು.೬)

ಏಳನೇ ತೀರ್ಥಂಕರನಾದ ಸುಪಾರ್ಶ್ವನಾಥ ವರ್ತುಲಾಕಾರದ ಪೀಠದ ಮೇಲೆ ದೇಹ ದಂಡಿಸಿದಂತೆ ಖಡ್ಗಾಸನದಲ್ಲಿ ಧ್ಯಾನಸ್ಥನಾಗಿದ್ದಾನೆ. ಪೀಠದ ಹಿಂಭಾಗದಲ್ಲಿ ಬರಹ ೭, ಈ ವಿಗ್ರಹ ಏಳನೇ ತೀರ್ಥಂಕರನೆಂಬುದನ್ನು ಸೂಚಿಸುತ್ತದೆ. ಕೆಳಗಿನ ಆಯತಕಾರದ ಪೀಠದ ಮೇಲೆ ಸಂತಮಲ್ಲರಸಿ ಹೆಸರಿದ್ದು ಸ್ವಸ್ತಿಕ ಲಾಂಛನವಿದೆ. ಬಹುಶಃ ಈ ವಿಗ್ರಹವನ್ನು ಮಾಡಿಸಿದವನ ಅಥವ ದಾನ ಮಾಡಿದವನ ಹೆಸರಿರಬೇಕು. ಸುಪಾರ್ಶ್ವನಾಥನ ತಲೆಯ ಮೇಲೆ ನಾಗ ತನ್ನ ಐದು ಹೆಡೆ ಬಿಚ್ಚಿ ರಕ್ಷಣೆ ನೀಡಿದಂತಿದೆ. ಅದರ ಮೇಲೆ ಮುಕ್ಕೊಡೆ ಜೈನ ಪ್ರಭಾವವನ್ನು ತೋರಿಸುತ್ತದೆ. ಪ್ರಭಾವಳಿಯ ಮೇಲ್ತುದಿ ಕೀರ್ತಮುಖ ಅಥವಾ ಸಿಂಹ ಲಲಾಟ ಮತ್ತು ಹೂಗಳಿಂದ ಅಲಂಕೃತವಾಗಿದೆ.

ಸುಪಾರ್ಶ್ವನಾಥನ ಎಡಬಲಕ್ಕೆ ನಂದಿ ಯಕ್ಷ ಮತ್ತು ಕಾಳಿ ಯಕ್ಷಿಯರಿದ್ದಾರೆ. ನಂದಿ ಯಕ್ಷನಿಗೆ ಎರಡು ಕೈಗಳಿದ್ದು, ಕೈಗಳಲ್ಲಿ ತ್ರಿಶೂಲ ಮತ್ತು ಪದ್ಮ ಹಿಡಿದಿದೆ. ಯಕ್ಷನ ಮೇಲ್ಭಾಗಕ್ಕೆ ಯಕ್ಷನ ಮರದ ಲಾಂಛನವಿದೆ. ಕಾಳಿ ಯಕ್ಷಿಗೆ ನಾಲ್ಕು ಕೈಗಳಿದ್ದು, ಅವುಗಳಲ್ಲಿ ಎರಡು ಕೈಗಳು ಅಭಯ ಮತ್ತು ವರದ ಮುದ್ರೆಯಲ್ಲಿದೆ. ಇನ್ನೆರಡು ಕೈಗಳಲ್ಲಿ ಹಿಡಿದ ಆಯುಧ ಅಸ್ಪಷ್ಟವಾಗಿದೆ.

ಸುವಧಿನಾಧ (ಎಂ. ೧೭) (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು. ೬೭)

ಸುವಧಿನಾಥ ಅಥವಾ ಪುಪ್ಪದಂತ ಒಂಬತ್ತನೆಯ ತೀರ್ಥಂಕರ. ಸುವಧಿನಾಥ ದೃಢಕಾಯಸ್ಥನಾಗಿ ದೇಹ ದಂಡಿಸಿ ಖಡ್ಗಾಸನದಲ್ಲಿದ್ದಾನೆ. ಬರಸ ಸಂಖ್ಯೆ.೯ ಮೂರ್ತಿ ಒಂಬತ್ತನೆಯ ತೀರ್ಥಂಕರನೆಂಬುದನ್ನು ಸೂಚಿಸುತ್ತದೆ. ಪೀಠದ ಮುಂಭಾಗದಲ್ಲಿ ಮಕರ ಲಾಂಛನವಿದೆ. ಸುವಧಿನಾಥನ ಎಡಬಲಕ್ಕೆ ಅಜಿತ ಯಕ್ಷ ಮತ್ತು ಮಹಾಕಾಳಿ ಯಕ್ಷಿ ತ್ರಿಭಂಗಿಯಲ್ಲಿ ನಿಂತಿದ್ದಾರೆ. ಅಜಿತ ಯಕ್ಷನಿಗೆ ನಾಲ್ಕು ಕೈಗಳಿದ್ದು ಕೈಗಳಲ್ಲಿ ಪದ್ಮ, ಬಾಣ, ಧನಸ್ಸು ಮತ್ತು ವಜ್ರ ಹಿಡಿದಿದ್ದಾನೆ. ಮಹಾಕಾಳಿ ಯಕ್ಷಿಯ ಕೈಗಳು ಅಭಯ ಮತ್ತು ವರದ ಮುದ್ರೆಯಲ್ಲಿದೆ. ಅಭಯ ಮುದ್ರೆಯ ಜೊತೆ ಅಕ್ಷಮಾಲೆಯೂ ಇದೆ. ತೀರ್ಥಂಕರನ ತಲೆಯ ಮೇಲೆ ಮುಕ್ಕೊಡೆ ಪ್ರಭಾವಳಿ ಮೇಲ್ತುದಿ ಕೀರ್ತಿಮುಖದಿಂದ ಅಲಂಕೃತವಾಗಿದೆ. ಪ್ರಭಾವಳಿ ಎಡಬಲಕ್ಕೆ ಚೌರಿಯನ್ನು ತೋರಿಸಲಾಗಿದೆ.

ಬ್ರಹ್ಮದೇವ (ಎಂ. ೭೬) (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು. ೭೦)

ಜೈನಪರಂಪರೆಯಲ್ಲಿ ಬ್ರಹ್ಮದೇವ ರಕ್ಷಣೆ ನೀಡುವವ ಎಂಬ ನಂಬಿಕೆ ಇದೆ. ಬ್ರಹ್ಮದೇವ ಕುದುರೆಯ ಮೇಲೆ ಕುಳಿತಿದ್ದಾನೆ. ಕುದುರೆ ಆಯಾತಾಕಾರದ ಪೀಠದ ಮೇಲೆ ನಿಂತಿದೆ. ಇಲ್ಲಿ ಬ್ರಹ್ಮದೇವನಿಗೆ ಎರಡು ಕೈಗಳಿದ್ದು, ಬಲಗೈಯಲ್ಲಿ ಹಿಡಿದ ಖಡ್ಗ ಮುರಿದಿದೆ. ಎಡಗೈಯಲ್ಲಿ ಫಲವಿದೆ. ಬ್ರಹ್ಮ ಮಕುಟ, ಹಾರ ಭುಜಬಂಧ ಕೈಬಳೆ, ಕಾಲ್ಬಳೆ ಧರಿಸಿ ಮೊಳಕಾಲವರೆಗೆ ವಸ್ತ್ರ ಧರಿಸಿದಂತಿದೆ. ಕುದುರೆಯ ಮೇಲೆ ಕುಳಿತಿದ್ದರಿಂದ ಎರಡೂ ಕಾಲ್ಗಳು ಕೆಳಗಡೆ ಇಳಿ ಬಿಡಲ್ಪಟ್ಟಿವೆ. ಕುದುರೆಯ ಕಾಲು ಮುರಿದಿದೆ.

ಶೀತಲನಾಥ (ಎಂ. ೧೦) (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು. ೧೨)

ದಾಖಲಾತಿ ಪುಸ್ತಕದಲ್ಲಿ (ಎಂ.೧೦) ಶೀತಲನಾಥ ಎಂದಿದೆ. ಶೀತಲನಾಥ ತೀರ್ಥಂಕರ ಇಪ್ಪತ್ತುನಾಲ್ಕು ತೀರ್ಥಂಕರರಲ್ಲಿ ಹತ್ತನೆಯವನು. ಪೀಠದ ಹಿಂಭಾಗದಲ್ಲಿ ಬರಹ ಸಂಖ್ಯೆ ೧೦ ಎಂದು ನಮೂದಿಸಿರುವುದರಿಂದ ಇದು ಹತ್ತನೆಯ ತೀರ್ಥಂಕರನೆಂಬುದನ್ನು ಸೂಚಿಸುತ್ತದೆ. ಈ ವಿಗ್ರಹ ವೃತ್ತಾಕಾರದ ಪೀಠದ ಮೇಲೆ ದೇಹ ದಂಡಿಸಿ ಖಡ್ಗಾಸನದಲ್ಲಿ ನಿಂತಿದೆ.

ವಾಸುಪೂಜ್ಯ (ಎಂ. ೬೩) (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು.೭)

ವಾಸುಪೂಜ್ಯ ತೀರ್ಥಂಕರ ಇಪ್ಪತ್ತನಾಲ್ಕು ತೀರ್ಥಂಕರರಲ್ಲಿ ಹನ್ನೆರಡನೇ ತೀರ್ಥಂಕರ. ದೇಹ ದಂಡಿಸಿ ಖಡ್ಗಾಸನದಲ್ಲಿದೆ. ಪೀಠದ ಹಿಂಭಾಗದಲ್ಲಿನ ಬರಹ ಸಂಖ್ಯೆ ೧೨ ಅಳಿಸಿದೆ. ಪೀಠದ ಮುಂಭಾಗದಲ್ಲಿ ಲಾಂಛನ ಎತ್ತಿನ ಚಿಹ್ನೆಯಿದೆ. ವಾಸುಪೂಜ್ಯನ ಎಡಬಲಕ್ಕೆ ಕುಮಾರ ಯಕ್ಷ ಮತ್ತು ಗಂಧಾರಿ ಯಕ್ಷಿಯರಿದ್ದಾರೆ. ಯಕ್ಷ ಯಕ್ಷಿಯರಿಗೆ ವಾಹನವೂ ಇದೆ. ಯಕ್ಷ ಹಂಸದ ಮೇಲೆ ನಿಂತಿದ್ದು, ನಾಲ್ಕು ಕೈಗಳಿವೆ. ಎರಡೂ ಕೈಗಳು ಅಭಯ ಮತ್ತು ವರದ ಮುದ್ರೆಯಲ್ಲಿದ್ದು, ಇನ್ನೆರಡು ಕೈಗಳಲ್ಲಿ ಬಾಣ ಮತ್ತು ಧನಸ್ಸು ಹಿಡಿಯಲ್ಪಟ್ಟಿದೆ. ಯಕ್ಷಿಗೆ ನಾಲ್ಕು ಕೈಗಳಿವೆ. ನಾಲ್ಕು ಕೈಗಳಲ್ಲಿ ಒಂದು ಕೈ ವರದ ಮುದ್ರೆಯಲ್ಲಿದ್ದು ಇನ್ನುಳಿದ ಮೂರು ಕೈಗಳಲ್ಲಿ ಎರಡು ಪದ್ಮ ಮತ್ತು ದಂಡವಿದೆ. ಪ್ರಭಾವಳಿಯ ತುದಿ ಕೀರ್ತಿಮುಖದಿಂದ ಅಲಂಕೃತವಾಗಿದ್ದು, ಕೀರ್ತಿಮುಖದ ಕೆಳಗಡೆ ಮುಕ್ಕೊಡೆ ಜೈನ ಪ್ರಭಾವವನ್ನು ಸೂಚಿಸುತ್ತದೆ.

ವಿಮಲನಾಥ (ಎಂ.೧೭) (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು.೮)

ವಸ್ತುಸಂಗ್ರಹಾಲಯದಲ್ಲಿ ವಿಮಲನಾಥ ತೀರ್ಥಂಕರರ ಎರಡು ವಿಗ್ರಹಗಳಿವೆ. ವಿಮಲನಾಥ ತೀರ್ಥಂಕರ ಹದಿಮೂರನೆಯ ತೀರ್ಥಂಕರ. ಇಲ್ಲಿ ವಿಮಲನಾಥ ತೀರ್ಥಂಕರ ಖಡ್ಗಾಸನದಲ್ಲಿದ್ದಾನೆ. ಪೀಠದ ಹಿಂಭಾಗದಲ್ಲಿ ಬರಹ ಸಂಖ್ಯೆ ೧೩ ಇದ್ದು, ಇದು ೧೩ನೇ ತೀರ್ಥಂಕರನೆಂಬುದನ್ನು ಸೂಚಿಸುತ್ತದೆ. ಚತುರ್ಮುಖ ಯಕ್ಷ ವೈರೋಟಿ ಯಕ್ಷಿ ವಿಮಲನಾಥ ತೀರ್ಥಂಕರನ ಎಡಬಲದಲ್ಲಿ ಇದ್ದಾರೆ. ಇಲ್ಲಿ ಚರ್ತುಮುಖ ಎಂಬ ಶಬ್ದವೇ ಸೂಚಿಸುವಂತೆ ಯಕ್ಷನಿಗೆ ನಾಲ್ಕು ಮುಖಗಳಿವೆ. ಇಲ್ಲಿ ಯಕ್ಷನಿಗೆ ೧೨ ಕೈಗಳಿವೆ. ಇದು ಕುತೂಹಲಕಾರಿ. ಕೈಗಳಲ್ಲಿ ಹಿಡಿದ ಆಯುಧ ಅಸ್ಪಷ್ಟ. ವೈರೋತಿ ಯಕ್ಷ ಹಾವಿನ ಮೇಲೆ ನಿಂತಿದೆ. ವೈರೋತಿ ಯಕ್ಷಿಗೆ ನಾಲ್ಕು ಕೈಗಳಿದ್ದು ಎರಡು ಕೈಗಳಲ್ಲಿ ಹಾವು ಇನ್ನೆರಡು ಕೈಗಳಲ್ಲಿ ಬಾಣ ಮತ್ತು ಧನಸ್ಸು ಹಿಡಿದಿದೆ. ಪೀಠದ ಮುಂಭಾಗದಲ್ಲಿ ವರಾಹ ಲಾಂಛನವಿದೆ.

ಇನ್ನೊಂದು ವಿಮಲನಾಥ ತೀರ್ಥಂಕರನ ವಿಗ್ರಹ ವರ್ತುಲಾಕಾರದ ಪೀಠದ ಮೇಲೆ ಖಡ್ಗಾಸನದಲ್ಲಿದೆ. ಪೀಠದ ಹಿಂಭಾಗದಲ್ಲಿ ಬರಹ ಸಂಖ್ಯೆ ೧೮ ಇದ್ದು, ಈ ಬರಹ ೧೮ನೇ ತೀರ್ಥಂಕರನೆಂಬುದನ್ನು ಸೂಚಿಸುತ್ತದೆ. ಆದರೆ ಪೀಠದ ಮುಂಭಾಗದಲ್ಲಿ ಚಕೋರ ವರಾಹ ಲಾಂಛನ ಇರುವುದರಿಂದ ಈ ವಿಗ್ರಹ ೧೩ನೇ ತೀರ್ಥಂಕರ ವಿಮಲನಾಥನದೇ ಆಗಿದೆ.

ಪಾರ್ಶ್ವನಾಥ (ಎಂ.೭೩) (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು.೧೩ ಮತ್ತು ೧೪)

ಇಪ್ಪತ್ತಮೂರನೇ ತೀರ್ಥಂಕರನಾದ ಪಾರ್ಶ್ವನಾಥ ಪದ್ಮ ಪೀಠದ ಮೇಲೆ ಧ್ಯಾನಸ್ತನಾಗಿದ್ದಾನೆ. ಏಳು ಹೆಡೆಯ ಸರ್ಪ ಪಾರ್ಶ್ವನಾಥನ ತಲೆಯ ಮೇಲೆ ರಕ್ಷಣೆ ನೀಡುವಂತಿದೆ. ಸರ್ಪದ ಕಣ್ಣನ್ನು ಸ್ಪಷ್ಟವಾಗಿ ಗೋಚರಿಸುವಂತೆ ಕಲಾಕಾರ ಕೆತ್ತಿದ್ದಾನೆ. ಇನ್ನೊಂದು ಪಾರ್ಶ್ವನಾಥ ತೀರ್ಥಂಕರ ವೃತ್ತಕಾರದ ಪೀಠದ ಮೇಲೆ ಖಡ್ಗಾಸನದಲ್ಲಿ ಏಕಾಗ್ರಚಿತ್ತನಾದಂತೆ ತೋರುತ್ತದೆ. ಹಿಂಭಾಗದಲ್ಲಿ ತ್ರುಟಿತ ಸರ್ಪ ಇರುವುದರಿಂದ ಇದನ್ನು ಪಾರ್ಶ್ವನಾಥನೆಂತಲೇ ಗುರುತಿಸಲಾಗಿದೆ.

ಶಾಂತಿನಾಥ (ಎಂ. ೭೭) (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು.೧೩)

ಇಪ್ಪತ್ತನಾಲ್ಕು ತೀರ್ಥಂಕರರಲ್ಲಿ ಶಾಂತಿನಾಥ ಹದಿನಾರನೆಯ ತೀರ್ಥಂಕರ. ಇಲ್ಲಿ ಶಾಂತಿನಾಥ ವರ್ತುಲಾಕಾರದ ಪೀಠದ ಮೇಲೆ ಖಡ್ಗಾಸನದಲ್ಲಿದ್ದಾನೆ. ಪೀಠದ ಹಿಂಭಾಗದಲ್ಲಿ ಬರಹ ಸಂಖ್ಯೆ ೧೬ ಇರುವುದರಿಂದ ಇದು ಹದಿನಾರನೆಯ ತೀರ್ಥಂಕರನೆಂಬುದು ಸ್ಪಷ್ಟ. ಪೀಠದ ಮುಂಭಾಗದಲ್ಲಿ ಚಿಗರೆಯ ಲಾಂಛನವಿದೆ.

ಪದ್ಮಾವತಿ (ಎಂ. ೮೪) (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು. ೧೬ – ೧೭. ಅಣ್ಣಿಗೇರಿ ಎ.ಎಂ., ೧೯೫೮, ಪು. ೨೮ – ೨೯)

ಪದ್ಮಾವತಿ ಇಪ್ಪತ್ತಮೂರನೆಯ ತೀರ್ಥಂಕರನ ಯಕ್ಷಿ ಆಯತಾಕಾರದ ಪೀಠದಲ್ಲಿ ಸುಖಾಸನದಲ್ಲಿ ಕುಳಿತಿದ್ದಾಳೆ. ಪದ್ಮಾವತಿಗೆ ನಾಲ್ಕು ಕೈಗಳಿದ್ದು, ಮೇಲಿನ ಕೈ ಮುರಿದಿದೆ. ಮೇಲಿನ ಎಡಗೈಯಲ್ಲಿ ಪಾಶವಿದೆ. ಬಲಗೈಯಲ್ಲಿ ಹಿಡಿದ ಆಯುಧ ಮುರಿದಿದೆ. ಕೆಳಗಿನ ಎಡಗೈ ಹಸ್ತದಲ್ಲಿ ಫಲ ಹಿಡಿದಿದ್ದು, ಪದ್ಮಾವತಿ ಯಕ್ಷಿ ಮಕುಟ, ಕೈಬಳೆ, ಕಂಠಹಾರ, ವೈಜಯಂತಿಹಾರ, ಕಾಲ್ಬಳೆ, ಬುಜಭಂಧ, ಕುಂಡಲಗಳನ್ನು ಧರಿಸಿದ್ದಾಳೆ. ಸೊಂಟಕ್ಕೆ ಬಂಧವಸ್ತ್ರಗಳನ್ನು ನೆರಿಗೆಯ ಮೂಕ ತೋರಿಸಲಾಗಿದೆ. ಪದ್ಮಾವತಿಯ ಪೀಠದಲ್ಲಿ ಕುಕ್ಕುಟ ಸರ್ಪದ ಲಾಂಛನವಿದೆ. ಶರೀರದ ಹಿಂಬಾಗದಿಂದ ತಲೆಯ ಮೇಲೆ ಸರ್ಪದ ರಕ್ಷಣೆ ನೀಡಿದಂತಿದೆ. ಇವು ಈ ವಿಗ್ರಹದ ವೈಶಿಷ್ಟ್ಯತೆಗಳಾಗಿವೆ.

ಪದ್ಮಾವತಿ

ಪದ್ಮಾವತಿ

ತೀರ್ಥಂಕರ (ಎಂ.೬೬) (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು. ೧೪ ಮತ್ತು ೧೫)

ಇಲ್ಲಿ ತೀರ್ಥಂಕರ ವಿಗ್ರಹ ಖಡ್ಗಾಸನದಲ್ಲಿದೆ. ಅಗಲವಾದ ಸದೃಢ ದೇಹ, ಭುಜ, ದಪ್ಪಮೂಗು ಇವು ಈ ವಿಗ್ರಹದ ವೈಶಿಷ್ಟ್ಯತೆಗಳಾಗಿವೆ.

ತೀರ್ಥಂಕರ ವಿಗ್ರಹ (ಎಂ.೮೨) ಅಂಡಾಕೃತಿ ಪೀಠದ ಮೇಲೆ ಪರ್ಯಂಕಾಸನದಲ್ಲಿದೆ. ತಲೆಯ ಹಿಂಭಾಗ ಅರ್ಧಚಂದ್ರಾಕೃತಿಯಂತೆ ಇವೆ. ಆಯತಾಕಾರದ ಪೀಠದ ಹಿಂಭಾಗದಲ್ಲಿ ಬರಹ ಸಂಖ್ಯೆ ೧೭ ಇದೆ. ಇದು ೧೭ನೇ ತೀರ್ಥಂಕರೆಂಬುದನ್ನು ಸೂಚಿಸುತ್ತದೆ. ಪೀಠದ ಮುಂಭಾಗದಲ್ಲಿನ ಸಂತಮಲ್ಲರಸ ಹೆಸರು ದಾನಿಯಾಗಿರಬಹುದು. ತೀರ್ಥಂಕರ ವಿಗ್ರಹ (ಎಂ.೭೧) ಹೆಚ್ಚಿನ ಭಾಗ ಸವೆದಿದೆ. ತೀರ್ಥಂಕರ ವಿಗ್ರಹ ಪಲ್ಯಂಕಾಸನದಲ್ಲಿ ಧ್ಯಾನಸ್ಥನಾದಂತೆ ತೋರುತ್ತದೆ.

ತೀರ್ಥಂಕರ

ತೀರ್ಥಂಕರ

ತೀರ್ಥಂಕರ (ಎಂ.೬೭) ವಿಗ್ರಹ ವರ್ತುಲಾಕಾರದ ಪೀಠದ ಮೇಲೆ ಖಡ್ಗಾಸನದಲ್ಲಿ ಧ್ಯಾನಸ್ಥನಾಗಿದ್ದಾನೆ. ವಿಗ್ರಹದ ಹೆಚ್ಚಿನ ಬಾಗ ಸವೆದಿದೆ. ಬಲಗೈ ಎಡಗೈಗಿಂತ ಚಿಕ್ಕದಾಗಿದ್ದಂತೆ ತೋರುತ್ತದೆ. ತೀರ್ಥಂಕರ (ಎಂ. ೭೦). ವೃತ್ತಕಾರದ ಪೀಠದ ಮೇಲೆ ಖಡ್ಗಾಸನದಲ್ಲಿದ್ದಾನೆ. ಉಳಿದ ತೀರ್ಥಂಕರರ ಸಾಮಾನ್ಯ ಲಕ್ಷಣಗಳು ಇಲ್ಲಿ ಕಾಣಬರುತ್ತವೆ. ಹೆಚ್ಚಿನ ಭಾಗ ಹಾಳಾಗಿವೆ.

ನಂದೀಶ್ವರ ದ್ವೀಪ : ನಂದೀಶ್ವರ ದ್ವೀಪ ಆಷಾಡ, ಕಾರ್ತಿಕ ಮತ್ತು ಫಾಲ್ಗುಣ ಮಾಸಗಳ ಶುಕ್ಲಪಕ್ಷ ಅಷ್ಟಮಿಯಿಂದ ಹುಣ್ಣಿಮೆಯವರೆಗೆ ದೇವತೆಗಳು ನಂದೀಶ್ವರ ದ್ವೀಪಕ್ಕೆ ಹೋಗಿ ಪೂಜಿಸುತ್ತಾರೆಂಬ ನಂಬಿಕೆ ಜೈನರಲ್ಲಿ ಇದೆ. ಈ ಸ್ಮರಣೆಗಾಗಿ ಶ್ರಾವಕರು ಬಸದಿಗಳಲ್ಲಿ ನಂದೀಶ್ವರ ಬಿಂಬವನ್ನು ಅಥವಾ ಪ್ರತಿಕೃತಿಯನ್ನಿಟ್ಟು ಪೂಜಿಸುತ್ತಾರೆ. ಪ್ರಾಚೀನ ಗ್ರಂಥಗಳಾದ ತ್ರಿಲೋಕ ಪ್ರಜ್ಞಾಪ್ತಿ ತಿಲೋಯಪುಣ್ಣತ್ತಿಗಳಲ್ಲಿ ಮೇಲಿನ ದ್ವೀಪದ ವಿವರಗಳು ಸಿಗುತ್ತವೆ. ಜೈನ ವಾಸ್ತು ಮತ್ತು ಮೂರ್ತಿಶಿಲ್ಪದಲ್ಲಿ ನಂದೀಶ್ವರ ದ್ವೀಪಕ್ಕೆ ವಿಶೇಷ ಸ್ಥಾನವಿದೆ. ನಾಲ್ಕು ದಿಕ್ಕುಗಳಲ್ಲಿ ವಲಯ ಸೀಮೆಗಳ ಮಧ್ಯ ನಾಲ್ಕು ಅಂಜನಗಿರಿ ಪರ್ವತಗಳಿವೆ. ಒಂದೊಂದು ದಿಕ್ಕಿನಲ್ಲಿ ಒಂದು ಅಂಜನಗಿರಿ, ನಾಲ್ಕು ದಧಿ ಮುಖ ಮತ್ತು ಎಂಟು ರತಿಕರ ಈ ಪ್ರಕಾರ ಒಟ್ಟು ಕೂಡಿ ೧೩ ಪರ್ವತಗಳಾದವು. ಅಂದರೆ ನಾಲ್ಕು ದಿಕ್ಕುಗಳಲ್ಲಿ ಒಟ್ಟು ೫೨ ಪರ್ವತಗಳಾಗುತ್ತವೆ. ಇವುಗಳ ಮೇಲೆ ಒಂದೊಂದು ಜಿನಮಂದಿರ ಸ್ಥಾಪಿತ ಆಗಿರುವುದರಿಂದ, ಇದೇ ನಂದೀಶ್ವರ ದ್ವೀಪದ ೫೨ ಜಿನಮಂದಿರಗಳಾಗಿವೆ. ಈ ಪರಿಕಲ್ಪನೆಯಲ್ಲಿ ಇದರ ಪ್ರತಿಕೃತಿ ಮಾಡಿ ಪೂಜಿಸಲಾಗುತ್ತದೆ (ಹೀರಾಲಾಲ ಜೈನ (ಲೇ), ಮಿರ್ಜಿ ಅಣ್ಣಾರಾಯ (ಅನು), ೧೯೭೧, ಪು. ೩೬೨). ಇಂತಹ ನಂದೀಶ್ವರ ದ್ವೀಪದ ಲೋಹ ಪ್ರತಿಕೃತಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿದೆ (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು. ೧೪ ಮತ್ತು ೨೧).

ನಂದೀಶ್ವರ ದ್ವೀಪ

ನಂದೀಶ್ವರ ದ್ವೀಪ

ಇಲ್ಲಿ ನಂದೀಶ್ವರರ ದ್ವೀಪ ಪ್ರತಿಕೃತಿಯಲ್ಲಿ ಹದಿಮೂರು ಜಿನರ ಸಮೂಹ ಮೂರು ಸ್ಥರಗಳಲ್ಲಿ ಇದೆ. ಪೀಠದ ಮೇಲೆ ತಳದ ಮೊದಲ ಸ್ಥಳದಲ್ಲಿ ಎಂಟು ದಿಕ್ಕುಗಳಲ್ಲಿ ಜಿನರು ಪದ್ಮಾಸನದಲ್ಲಿ ಕುಳಿತು ಧ್ಯಾನಸ್ಥರಾಗಿದ್ದು, ಪದ್ಮಾಸನದಲ್ಲಿ ಕುಳಿತು ಎರಡೂ ಕೈ ಹಸ್ತಗಳು ಕಾಲಪಾದದ ಮೇಲೆ ಒಂದರ ಮೇಲೊಂದಿದೆ. ಎರಡನೇ ಸ್ಥರದಲ್ಲಿ ನಾಲ್ಕು ಜಿನ ತೀರ್ಥಂಕರರು ನಾಲ್ಕು ದಿಕ್ಕುಗಳಲ್ಲಿ ಇದೇ ಆಸನದಲ್ಲಿ ಕುಳಿತಿದ್ದಾರೆ. ಮೂರನೇ ತಳದಲ್ಲಿ ವರ್ತುಲಾಕಾರದ ಪೀಠವಿದ್ದು, ಅದರ ಮೇಲಿನ ಜಿನಮೂರ್ತಿಯೂ ಇದೆ (ಪೀಠದಲ್ಲಿನ ಶಾಸನ ನರನಸ್ತೆ ಮಗಪುರೆ ಸ್ತಿಯತೇ ಸಿದ್ಧ ಎಂದಿದೆ). ಇಲ್ಲಿ ಒಟ್ಟು ೧೩ ತೀರ್ಥಂಕರರ ಮೂರ್ತಿಗಳಿದ್ದು ೫೨ ಜಿನಮಂದಿರಗಳ ಪರಿಕಲ್ಪನೆಯಲ್ಲಿ ಇದನ್ನು ಪೂಜಿಸಲಾಗುತ್ತದೆ.

ಬಾಹುಬಲಿ

ಪ್ರಥಮ ತೀರ್ಥಂಕರನಾದ ವೃಷಭ ದೇವನ ಎರಡನೇ ಮಗ ಬಾಹುಬಲಿ. ಬಾಹುಬಲಿಗೆ ಗೋಮ್ಮಟೇಶ್ವರ ಎಂತಲೂ ಕರೆಯುತ್ತಾರೆ. ಗೋಮ್ಮಟನೆಂದರೆ ಚೆಲುವ, ಸುಂದರ, ಮನ್ಮಥ ಕಾಮದೇವ ಎಂಬ ಅರ್ಥವಿದೆ. ಬಿ.ಆರ್. ಗೋಪಾಲರವರು ಬನವಾಸಿ ಸಮೀಪದಲ್ಲಿರುವ ಗುಡ್ನಾಪುರದ ಶಾಸನದ ಆಧಾರದಲ್ಲಿ ಕದಂಬ ರವಿವರ್ಮನ ಕಾಲದ ಶಾಸನ ಗುಡ್ಡತಟಾಕ ಗ್ರಾಮದಲ್ಲಿದ್ದ ಕಾಮ ಜಿನಾಲಯ ಗೋಮ್ಮಟೇಶ್ವರ ಆಲಯವಾಗಿತ್ತೆಂದು ನಿರ್ಧರಿಸಿದ್ದಾರೆ (ಸುಂದರ ಅ., ೧೯೭೫, ಪು. ೧೩೧).

ಕರ್ನಾಟಕದಲ್ಲಿ ದಿಗಂಬರ ಜೈನ ಪರಂಪರೆಯಲ್ಲಿ ಬಾಹುಬಲಿ ಅಥವಾ ಗೊಮ್ಮಟನಿಗೆ ವಿಶೇಷವಾದ ಸ್ಥಾನವಿದೆ. ಜೈನ ಸಂಪ್ರದಾಯದಲ್ಲಿ ಬೇರಾವುದೇ ಜೈನ ವಿಗ್ರಹಗಳು ಪಲ್ಯಂಕಾಸನದಲ್ಲಿ ಅಥವಾ ಖಡ್ಗಾಸನದಲ್ಲಿ ಇರುತ್ತವೆ. ಆದರೆ ಬಾಹುಬಲಿ ವಿಗ್ರಹ ಮಾತ್ರ ಖಡ್ಗಾಸನದಲ್ಲೆ ಇರುತ್ತದೆ. ವಿಗ್ರಹದ ಪಾದದ ಬಳಿ ಹಾವು ಅಥವಾ ಹಾವಿರುವ ಹುತ್ತಗಳ, ಕೈಕಾಲುಗಳ ಸುತ್ತಲೂ ಮಾಧವಿ ಲತೆಗಳು ಇರುತ್ತವೆ. ಇವು ಬಾಹುಬಲಿ ವಿಗ್ರಹದ ಸಾಮಾನ್ಯ ಲಕ್ಷಣಗಳಾಗಿವೆ. ಕರ್ನಾಟಕದಲ್ಲಿ ವಿಶ್ವವಿಖ್ಯಾತವಾದ ಹೆಸರುಗಳಿಸಿದ ಬಾಹುಬಲಿ ಅಥವಾ ಗೊಮ್ಮಟ ಶ್ರವಣಬೆಳಗೊಳದ ಗೋಮ್ಮಟೇಶ್ವರ. ಕರ್ನಾಟಕದ ಅತ್ಯಂತ ಪ್ರಾಚೀನ ಗೊಮ್ಮಟೇಶ್ವರ ವಿಗ್ರಹ ಬಾದಾಮಿ ಚಾಲುಕ್ಯರ ಕಾಲಕ್ಕೆ ಸೇರಿದೆ. ಬಾದಾಮಿ ಜೈನ ಗುಹೆಯ ಈ ಗೊಮ್ಮಟ ಉಬ್ಬುಶಿಲ್ಪವಾಗಿದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಹೆಚ್ಚಾಗಿ ಕರ್ನಾಟಕದಲ್ಲಿ ಇಷ್ಟೊಂದು ವಿಶ್ವವಿಖ್ಯಾತಿಗೊಳ್ಳಲು ಕಾರಣ ಇಲ್ಲಿನ ದಿಗಂಬರ ಜೈನ ಸಂಪ್ರದಾಯವಾಗಿದೆ. ಆದರೆ ಇವೆಲ್ಲವೂ ಶಿಲಾಮೂರ್ತಿಗಳದ್ದಾಗಿದೆ. ಪ್ರಸ್ತುತ ಹಾಡುವಳ್ಳಿ ಗ್ರಾಮಕ್ಕೆ ಸೇರಿದ, ಕರ್ನಾಟಕ ವಿಶ್ವವಿದ್ಯಾಲಯವು ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿ ಇಡಲಾದ ಕಂಚಿನ ಬಾಹುಬಲಿ ವಿಗ್ರಹದ ಲಕ್ಷಣಗಳನ್ನು ಇಲ್ಲಿ ಹೇಳಲಾಗಿದೆ.

ವಸ್ತುಸಂಗ್ರಹಾಲಯದಲ್ಲಿ ಇಡಲಾದ ಕಂಚಿನ ಬಾಹುಬಲಿ (ಎಂ. ೭೮. ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು.೧೯. ಅಣ್ಣಿಗೇರಿ ಎ.ಎಂ. ೧೯೫೮, ಪು.೩೦) ವರ್ತುಲಾಕಾರದ ಪೀಠದ ಮೇಲೆ ಕಾಯೋತ್ಸರ್ಗದಲ್ಲಿ ಏಕಾಗ್ರಚಿತ್ತನಾಗಿದ್ದಾನೆ. ಮಾಧವಿ ಲತಾ ಬಾಹುಬಲಿಯ ಕೈಗಳಿಗೆ ಮತ್ತು ಕಾಲಿಗೆ ಸುತ್ತಿವೆ. ತಲೆಯ ಮೇಲಿನ ಗುಂಗುರು ಕೂದಲು ಅಳಿಸಿದೆ. ಇಳಿಬಿದ್ದಿರುವ ಕಿವಿ, ಎರಡೂ ಕೈಗಳೂ ಕೆಳಗೆ ನೇರವಾಗಿ ಇಳಿಬಿಟ್ಟಿರುವುದು, ಕೈಗೆ ಮತ್ತು ಕಾಲ್ಗಳಿಗೆ ಲತಾಬಳಿ ಸುತ್ತಿರುವುದು ಸುದೃಢ ಕಾಯದೇಹವನ್ನು ದಂಡಿಸಿ ಧ್ಯಾನಸ್ಥನಾದಂತೆ ಕಾಣುವುದು ಈ ವಿಗ್ರಹದ ವೈಶಿಷ್ಟ್ಯತೆಗಳಾಗಿವೆ.

ಬಾಹುಬಲಿ

ಬಾಹುಬಲಿ

ಪೀಠವನ್ನೊಳಗೊಂಡ ಪ್ರಭಾವಳಿ (ಎಂ. ೧೯) (ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು.೧೫)

ಪೀಠದಲ್ಲಿನ ಶಾಸನ ಸಿರಿಯನ ಬಲಿ ನಾರಣ ಸೆಟ್ಟಿಯ ಸನತಸ್ವಾಮಿ ಎಂದಿದೆ. ನೇಮಿನಾಥ ಎಂದಾಗಲೂ ಸನತಸ್ವಾಮಿ ಎಂದಾಗಿದೆ. ಪೀಠದ ಹಿಂಭಾಗದಲ್ಲಿ ಬರಹ ಸಂಖ್ಯೆ ೨೧ ಇದ್ದು, ಇದು ೨೧ನೇ ತೀರ್ಥಂಕರ ನೇಮಿನಾಥನಿಗೆ ಸೇರಿದ್ದೆಂಬುದು ಸ್ಪಷ್ಟ. ಪೀಠ ಪ್ರಭಾವಳಿಯನ್ನೊಳಗೊಂಡಿದ್ದು ತೀರ್ಥಂಕರ ವಿಗ್ರಹವಿಲ್ಲದಾಗಿದೆ.

ಪ್ರಭಾವಳಿ (ಎಂ. ೧೧. ರಾಜಶೇಖರ ಎಸ್. ಮತ್ತು ಈರಣ್ಣ ಕೆ.ಪಿ., ೧೯೮೫, ಪು.೧೫)

ಪ್ರಭಾವಳಿ ಹಿಂಭಾಗದಲ್ಲಿ ಬರಹ ಸಂಖ್ಯೆ ೧೭ ಇದ್ದು, ಇದು ೧೭ನೇ ತೀರ್ಥಂಕರ ಕುಂತುನಾಥ ತೀರ್ಥಂಕರನಿಗೆ ಸೇರಿದ್ದೆಂಬುದು ಸ್ಪಷ್ಟ. ಪ್ರಭಾವಳಿಯ ಕೆಳಗೆ ಎಡಬಲಕ್ಕೆ ಗಂಧರ್ವ ಯಕ್ಷ ಮತ್ತು ವಿಜಯ ಯಕ್ಷಿಯರಿದ್ದಾರೆ. ಪ್ರಭಾವಳಿಗೆ ತಾಗಿ ಇದ್ದ ಗಂಧರ್ವ ಯಕ್ಷನಿಗೆ ನಾಲ್ಕು ಕೈಗಳಿದ್ದು, ಕೈಗಳಲ್ಲಿ ಖಡ್ಗ, ಬಾಣ, ಧನಸ್ಸು, ಖೇಟಕಗಳಿವೆ. ಗಂಧರ್ವ ಯಕ್ಷ ತ್ರಿಭಂಗಿಯಲ್ಲಿದ್ದು ರಥವನ್ನು ಬಿಡುತ್ತಿದ್ದಾನೆ. ವಿಜಯ ಯಕ್ಷಿಯೂ ವರಹದೊಂದಿಗೆ ತ್ರಿಭಂಗಿಯಲ್ಲಿದ್ದಾಳೆ. ಯಕ್ಷಿಗೆ ನಾಲ್ಕು ಕೈಗಳಿದ್ದು, ಖಡ್ಗ, ದಂಡ, ಪದ್ಮ ಮತ್ತು ಫಲವನ್ನು ಹಿಡಿದಿದ್ದಾಳೆ.

ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿ ಇಡಲಾದ ಹಾಡುವಳ್ಳಿ ಲೋಹದ ಕಲಾವಸ್ತುಗಳ ಪಟ್ಟಿ

ಕ್ರ.ಸಂ. ದಾಖಲಾತಿ
ಪುಸ್ತಕದಲ್ಲಿನ ಸಂಖ್ಯೆ
ಕಲಾವಸ್ತುವಿನ ಹೆಸರು ಕಾಲ
೧. ಎಂ.೮೮ ಮಾನಸ್ತಂಬ ಮಧ್ಯಕಾಲೀನ
೨, ಎಂ. ೭ ಆದಿನಾಥ ಪೂರ್ವಮಧ್ಯಕಾಲೀನ
೩. ಎಂ.೨೦ ಶಂಬವನಾಥ ಮಧ್ಯಕಾಲೀನ
೪. ಎಂ.೭೪ ಚಂದ್ರಪ್ರಭ ಪೂರ್ವಮಧ್ಯಕಾಲೀನ
೫. ಎಂ.೧೮ ಸುಮತಿನಾಥ ಮಧ್ಯಕಾಲೀನ
೬. ಎಂ.೯ ಸುಪಾರ್ಶ್ವನಾಥ ಮಧ್ಯಕಾಲೀನ
೭. ಎಂ.೧೭ ಸುವಧಿನಾಥ ಮಧ್ಯಕಾಲೀನ
೮. ಏಂ.೭೬ ಬ್ರಹ್ಮ ಪೂರ್ವಮಧ್ಯಕಾಲೀನ
೯. ಎಂ.೧೦ ಶೀತಲನಾಥ ಪೂರ್ವಮಧ್ಯಕಾಲೀನ
೧೦. ಎಂ.೬೩ ವಾಸುಪೂಜ್ಯ ಮಧ್ಯಕಾಲೀನ
೧೧. ಎಂ.೧೨ ವಿಮಲನಾಥ ಮಧ್ಯಕಾಲೀನ
೧೨. ಎಂ.೧೫ ವಿಮಲನಾಥ ಮಧ್ಯಕಾಲೀನ
೧೩. ಎಂ.೧೬ ಪಾರ್ಶ್ವನಾಥ ಮಧ್ಯಕಾಲೀನ
೧೪. ಎಂ.೭೩ ಪಾರ್ಶ್ವನಾಥ ಮಧ್ಯಕಾಲೀನ
೧೫. ಎಂ.೨೨ ಶಾಂತಿನಾಥ ಮಧ್ಯಕಾಲೀನ
೧೬. ಎಂ.೮೪ ಪದ್ಮಾವತಿ ಮಧ್ಯಕಾಲೀನ
೧೭. ಎಂ.೮೩ ಬಾಹುಬಲಿ ಪೂರ್ವಮಧ್ಯಕಾಲೀನ
೧೮. ಎಂ.೬೬ ತೀರ್ಥಂಕರ ಮಧ್ಯಕಾಲೀನ
೧೯. ಎಂ.೮೨ ತೀರ್ಥಂಕರ ಮಧ್ಯಕಾಲೀನ
೨೦. ಎಂ.೬೭ ತೀರ್ಥಂಕರ ಮಧ್ಯಕಾಲೀನ
೨೧. ಎಂ.೭೦ ತೀರ್ಥಂಕರ ಮಧ್ಯಕಾಲೀನ
೨೨. ಎಂ.೧೯ ಪೀಠಪ್ರಭಾವಳಿ ಮಧ್ಯಕಾಲೀನ
೨೩. ಎಂ.೧೧ ಪೀಠ ಮಧ್ಯಕಾಲೀನ