‘ಶಾಸನ ಶಿಲ್ಪ’ ಎಂಬ ಶಬ್ದ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿಲ್ಲ. ಅಂದರೆ ಕನ್ನಡ, ತಮಿಳು ಅಥವಾ ತೆಲುಗು ಶಾಸನ ಶಿಲ್ಪವಿರಬಹುದು. ಇದು ಒಂದೇ ಭಾಷೆಗೂ ಸೀಮಿತವಾಗಿಲ್ಲ, ಇದರ ವ್ಯಾಪ್ತಿ ದೊಡ್ಡದು. ‘ಶಾಸನ ಶಿಲ್ಪ’ ಎಂದರೆ ಶಾಸನವನ್ನೊಳಗೊಂಡ ಶಿಲ್ಪ ಎಂದರ್ಥ. ಶಾಸನ ಎಂದರೆ ಬರಹ, ಶಿಲ್ಪ ಅಂದರೆ ಮೂರ್ತಿ, ಪರ್ಯಾಯವಾಗಿ ವಿಗ್ರಹ ಅಂತಲೂ ಕರೆಯುತ್ತಾರೆ. ಶಾಸನ ಶಿಲ್ಪ ಅಂದರೆ ಬರಹವನ್ನೊಳಗೊಂಡ ಕಲ್ಲಿನ ಮೇಲಿನ ಉಬ್ಬು ಚಿತ್ರಣ. ಆದರೆ ಶಾಸನ ಶಿಲ್ಪವೇ ಬೇರೆ ಮೂರ್ತಿ ಶಿಲ್ಪವೇ ಬೇರೆ. ‘ಮೂರ್ತಿ ಶಿಲ್ಪ’ ಎಂದರೆ ಒಂದು ಮಾಧ್ಯಮದ ಮೂಲಕ ಉದ್ದ, ಅಗಲ ಮತ್ತು ದಪ್ಪವನ್ನು ತೋರಿಸುವ ಆಕೃತಿ ಎನ್ನಿಸಬಹುದು. ಈ ಆಕೃತಿ ಕಲ್ಲಿನದಾಗಿರಬಹುದು, ಮರದ ಕೆತ್ತನೆ ಇರಬಹುದು ಅಥವಾ ಕಂಚಿನ ಪ್ರತಿಮೆ ಇರಬಹುದು. ವಿಗ್ರಹ ಕಂಚಿನ ಪ್ರತಿಮೆಯದಾದರೂ ಕೆಲವೊಮ್ಮೆ ಪೀಠ ಭಾಗದಲ್ಲಿ ಶಾಸನವಿದ್ದರೆ ಅದೂ ಶಾಸನ ಶಿಲ್ಪವೇ. ಆದರೆ ಮೂರ್ತಿ ಶಿಲ್ಪಕ್ಕೆ ತನ್ನದೇ ಆದ ಕಟ್ಟಳೆಗಳು ಇರುತ್ತವೆ. ಪುರಾಣ, ಧರ್ಮಶಾಸ್ತ್ರಗಳು ಶಿಲ್ಪಶಾಸ್ತ್ರ ಗ್ರಂಥಗಳು ಮೂರ್ತಿ ಹೀಗೆ ಇರಬೇಕೆಂಬುದನ್ನು ಪ್ರತಿಪಾದಿಸುತ್ತವೆ. ಆದರೆ ಶಾಸನ ಶಿಲ್ಪದಲ್ಲಿ ನಡೆದು ಬಂದ ಜನರ ನಂಬಿಕೆ ಆಚರಣೆಗಳೇ ಇಲ್ಲಿ ಪ್ರಧಾನವಾಗಿರುತ್ತದೆ. ಅಂದರೆ ಶಾಸ್ತ್ರಬದ್ಧವನ್ನೊಳಗೊಂಡ ಚೌಕಟ್ಟು ಶಾಸನ ಶಿಲ್ಪದಲ್ಲಿ ಕಂಡುಬರುವುದಿಲ್ಲ. ಶಾಸನ ಶಿಲ್ಪದ ಅಧ್ಯಯನ ಅಂದರೆ ಶಾಸನಗಳ ಮೇಲಿರುವ ಉಬ್ಬುಶಿಲ್ಪಗಳ ಅಧ್ಯಯನವೇ ಆಗಿದೆ (ಪರಮಶಿವಮೂರ್ತಿ ಡಿ.ವಿ., ೧೯೯೯, ಪು.೭).

ನಾವು ಒಂದು ಮೂರ್ತಿ ಶಿಲ್ಪವನ್ನು ನೋಡುವಾಗ ನಮ್ಮ ಮನಸ್ಸಿನಲ್ಲಿ ಮೂಡುವ ಭಾವನೆಗಳೇ ಬೇರೆ ಬೇರೆಯಾಗಿರುತ್ತದೆ. ಅದೇ ರೀತಿ ಶಾಸನ ಶಿಲ್ಪ ನೋಡಿದಾಗ ಮನಸ್ಸಿನಲ್ಲಿ ಮೂಡುವ ಕಲ್ಪನೆಗಳೇ ಬೇರೆಯಾಗಿರುತ್ತದೆ. ಅಂದರೆ ಧಾರ್ಮಿಕ ಹಿನ್ನೆಲೆಯಿಂದ ನಿರ್ಮಿಸಿದ ಮೂರ್ತಿ ಶಿಲ್ಪವಾದರೆ ಹೆಚ್ಚಿನ ಮಟ್ಟಿಗೆ ನಮ್ಮ ಭಾವನೆಗಳೂ ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗುತ್ತದೆ. ದೇವಾಲಯದ ಒಳಗಿನ ಮೂರ್ತಿ ಶಿಲ್ಪವನ್ನು ನೋಡಿದಾಗ ಧಾರ್ಮಿಕ ಭಾವನೆಗಳು ಮೂಡುತ್ತದೆ. ಆದರೆ ದೇವಾಲಯದ ಶಿಖರದಲ್ಲೋ, ಅಧಿಷ್ಠಾನದಲ್ಲೋ ಹೆಣ್ಣಿನ ಅಥವಾ ಕಾಮಕ್ರೀಡೆಯಲ್ಲಿ ತೊಡಗಿದ ಮೂರ್ತಿಶಿಲ್ಪ ನೋಡಿದಾಗತ ಅಥವಾ ರತಿ ಮನ್ಮಥರನ್ನು ನೋಡಿದಾಗ ನಮ್ಮ ಮನಸ್ಸಿನಲ್ಲಿ ಮೂಡುವ ಭಾವನೆಗಳೇ ಬೇರೆ ಬೇರೆಯಾಗಿರುತ್ತದೆ. ಮನಸ್ಸಿನಲ್ಲಿ ಮೂಡುವ ಭಾವನೆ ಏನೇ ಇರಲಿ, ಇವು ಅಂದಿನ ಸಮಾಜದ ಮತ್ತು ಸ್ಮಾರಕ ಶಿಲ್ಪದ ಮೂಲಕ ಮೂಡಿದ ಅಂದಿನ ಸಂಸ್ಕೃತಿಯ ಪ್ರತಿಬಿಂಬ.

ಶಾಸನ ಶಿಲ್ಪದಲ್ಲಿ ಮತ್ತು ಸ್ಮಾರಕ ಶಿಲ್ಪಗಳಲ್ಲಿ ಅಂದಿನ ನಂಬಿಕೆ ಆಚರಣೆಗಳೇ ಪ್ರತಿಬಿಂಬಿತವಾಗಿರುತ್ತದೆ. ಬರಹದಿಂದ ಕೂಡಿದ ಉಬ್ಬುಶಿಲ್ಪ ಶಾಸನ ಶಿಲ್ಪ. ಬರೇ ಶಿಲ್ಪವಾದಲ್ಲಿ ಉದಾ. ಮಹಾಸತಿಕಲ್ಲು, ವೀರಗಲ್ಲುಗಳಲ್ಲಿ ಶಾಸನಗಳಿಲ್ಲದಿದ್ದರೆ ಇವು ಸ್ಮಾರಕ ಶಿಲ್ಪಗಳು. ಅಂದರೆ ಸ್ಮರಣೆಯ ಶಿಲ್ಪವೆಂದಾಗುತ್ತದೆ.

ಶಾಸನ ಶಿಲ್ಪ ಅಥವಾ ಮೂರ್ತಿಶಿಲ್ಪ ಅಥವಾ ವಿಗ್ರಹದ ಕಲೆಯು ಶಿಲ್ಪಿಯ ಅಥವಾ ಕಲಾಕಾರನ ಕಲೆಯನ್ನು ಬಿಂಬಿಸುತ್ತವೆ. ಶಾಸನ ಕಲೆ ಎಂಬುದು ವಸ್ತುವಿನ ನಿರ್ಮಾಣವನ್ನು ಅವಲಂಬಿಸಿದೆ. ಅಂದರೆ ಕಲ್ಲಿನಲ್ಲಿ ನಿರ್ಮಿತವಾಗುವ ಕಲಾ ಸೌಂದರ್ಯ, ಬಿಳುಚು ಕಲ್ಲಿನಿಂದ ಆಗಲಿಕ್ಕಿಲ್ಲ. ಹೀಗಾಗಿ ಕಲಾ ಸೌಂದರ್ಯ ಎಂಬುದು ಶಿಲ್ಪಿಯ ಸಾಮರ್ಥ್ಯದೊಂದಿಗೆ ಯಾವ ಕಲ್ಲೆಂಬುದು ಇಲ್ಲಿ ಪ್ರಾಧಾನ್ಯತೆ ಪಡೆಯುತ್ತದೆ. ಶಾಸನದಲ್ಲಿ ಶಿಲ್ಪಕಲೆ ಮೂಡಲು ಕಾರಣ ಅಕ್ಷರದಿಂದ ತಿಳಿಯದ ವಿಷಯವನ್ನು ಕಲೆಯಿಂದ ತಿಳಿಯಬಹುದಾಗಿದೆ. ಶಾಸನದಲ್ಲಿ ಉಬ್ಬುಶಿಲ್ಪ ಮೂಡಲು ಇದೂ ಒಂದು ಕಾರಣವಾದರೆ ಇನ್ನೊಂದು ಕಾರಣ ಜನಪದರ ನಂಬಿಕೆಗಳೇ ಕಾರಣವಿರಬಹುದು. ಶಾಸನ ಶಿಲ್ಪದ ನಿರ್ಮಾಣ ಮಾಡುವಾಗ ಕಲಾಕಾರ ಅಥವಾ ಶಿಲ್ಪಿ ಶಿಲೆ, ಮರ, ಲೋಹವನ್ನು ಮಾಧ್ಯಮವನ್ನಾಗಿ ಬಳಸುತ್ತಾನೆ. ಅಂದರೆ ಶಿಲ್ಪಿಯ ಸಾಮರ್ಥ್ಯಕ್ಕೆ ತಕ್ಕಂತೆ ಸ್ಮಾರಕಶಿಲ್ಪ ಅಥವಾ ಶಾಸನಶಿಲ್ಪ ನಿರ್ಮಾಣಗೊಳ್ಳುತ್ತವೆ. ಹೆಚ್ಚಿನ ಮಟ್ಟಿಗೆ ಶಾಸನ ಶಿಲ್ಪದಲ್ಲಿ ಶಿಲೆಯೇ ಮಾಧ್ಯಮವಾಗಿ ಬಳಕೆಯಾಗಿದೆ ಎನ್ನಬಹುದು.

ಶಾಸನಗಳಲ್ಲಿ ವೈವಿಧ್ಯತೆ ಕಂಡಂತೆ ಶಾಸನ ಶಿಲ್ಪದಲ್ಲೂ ಕಾಲದ ದೃಷ್ಟಿಯಿಂದ ಪ್ರಾದೇಶಿಕವಾಗಿ, ಅರಸು ಮನೆತನ, ವಿಷಯ ಮತ್ತು ವಸ್ತುವಿನ ದೃಷ್ಟಿಯಿಂದ ವರ್ಗೀಕರಣ ಮಾಡಬಹುದು. ಆದರೆ ಪ್ರಸ್ತುತ ಅಧ್ಯಯನ ಹಾಡುವಳ್ಳಿ ಸಾಳುವರಿಗೆ ಸೀಮಿತವಾಗಿರುವುದರಿಂದ ಕಾಲದ, ಪ್ರಾದೇಶಿಕ, ವಂಶಾವಳಿ ವರ್ಗೀಕರಣ ಪ್ರಸ್ತುತ ಅಧ್ಯಯನದ ಹೊರತಾಗಿದೆ. ಅಂದರೆ ವಸ್ತು ಮತ್ತು ವಿಷಯ ವೈವಿಧ್ಯತೆ ಮಾತ್ರ ಈ ಅಧ್ಯಯನಕ್ಕೆ ಒಳಪಡುತ್ತದೆ.

ವಸ್ತುದೃಷ್ಟಿಯಿಂದ, ತಾಮ್ರಶಾಸನ, ಕಂಚುವಿಗ್ರಹ, ಶಿಲಾ ಮಾಧ್ಯಮ ಇಲ್ಲಿ ಬಳಕೆಯಾಗಿದೆ. ವಸ್ತುವಿನ ದೃಷ್ಟಿಯಿಂದ ಹೆಚ್ಚು ವಿಷಯ ಬಳಕೆಯಾಗದಿದ್ದರೂ ಇದೊಂದು ವಸ್ತುಭೇದ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ಶಾಸನಗಳಲ್ಲಿ ವಿಷಯ ವೈವಿಧ್ಯತೆ ಕಾಣುವಂತೆ, ಶಾಸನ ಶಿಲ್ಪದಲ್ಲೂ ವೈವಿಧ್ಯತೆಗಳಿವೆ. ಆದರೆ ಇವು ತಿಳಿಸುವ ವಿಷಯ ಆಧಾರಿತವಾಗಿರುತ್ತವೆ. ಪ್ರಸ್ತುತ ವಿಷಯ ಅಧ್ಯಯನ ಹಾಡುವಳ್ಳಿಗೆ ಸಂಬಂಧಿಸಿದೆ. ಇಲ್ಲಿ ಹೆಚ್ಚಿನ ಮಟ್ಟಿಗೆ ಸಿಕ್ಕಿರುವ ಜೈನದಾನ ಶಾಸನಗಳೇ ಆಗಿವೆ. ಇಲ್ಲಿ ದೊರೆತ ಶಾಸನ ಶಿಲ್ಪ ಮತ್ತು ಸ್ಮಾರಕ ಶಿಲ್ಪಗಳನ್ನು ಈ ರೀತಿಯಾಗಿ ವಿಂಗಡಿಸಬಹುದು.

೧. ಜೈನದಾನ ಶಾಸನಗಳು

೨. ನಿಷಿಧಿ ಗಲ್ಲುಗಳು

೩. ವೀರಗಲ್ಲುಗಳು

೪. ಮಹಾಸತಿಕಲ್ಲುಗಳು

ಜೈನದಾನ ಶಾಸನಗಳು, ನಿಷಿದಿಗಲ್ಲುಗಳು, ವೀರಗಲ್ಲುಗಳು, ಮಹಾಸತಿಕಲ್ಲುಗಳ ಶಾಸನ ಶಿಲ್ಪಗಳ ವೈಶಿಷ್ಟ್ಯತೆ ಮತ್ತು ಶಾಸನಗಳು ಯಾವ ರೀತಿಯಲ್ಲಿ ಪೂರಕ ಮಾಹಿತಿ ಒದಗಿಸಿವೆ ಎಂಬುದರ ಅಧ್ಯಯನವನ್ನು ಇಲ್ಲಿ ಮಾಡಲಾಗಿದೆ. ಶಾಸನ ಶಿಲ್ಪಗಳ ಪ್ರಸ್ತಾವನೆಯ ಜೊತೆ ಹಾಡುವಳ್ಳಿ ಸಾಳುವರ ಕಾಲಕ್ಕೆ ಸೇರಿದ ಕೆಲವು ಪ್ರಮುಖ ಶಾಸನಗಳ ಪಾಠ ಮತ್ತು ಸಾರಾಂಶವನ್ನು ಪೂರಕ ಮಾಹಿತಿಗಾಗಿ ಏಳನೇ ಅಧ್ಯಾಯದಲ್ಲಿ ನೀಡಲಾಗಿದೆ.

ಜೈನದಾನ ಶಾಸನಗಳು

ಜೈನಧರ್ಮ ಕರ್ನಾಟಕದಲ್ಲಿ ಪ್ರಾಚೀನ, ಅದರಲ್ಲೂ ಹೆಚ್ಚಾಗಿ ಜನಪ್ರಿಯ ಧರ್ಮ, ‘ಜೀವಿಸು ಜೀವಿಸಗೊಡು’ ಇದು ಜೈನಧರ್ಮದ ತತ್ವ. ಜೈನ ಗೃಹಸ್ಥರ ಷಟ್ಕರ್ಮಗಳಲ್ಲಿ ದಾನ ಪ್ರಮುಖವಾಗಿದೆ. ಆಹಾರ, ಅಭಯ, ಶಾಸ್ತ್ರ, ಭೈಷಜ ಹೀಗೆ ನಾಲ್ಕು ಪ್ರಕಾರದ ದಾನಗಳನ್ನು ಮಾಡಬೇಕೆಂದು ಜೈನಶಾಸ್ತ್ರ ಗ್ರಂಥಗಳು ವಿವರಿಸುತ್ತವೆ. ಪ್ರತಿಯೊಬ್ಬ ಜೈನ ಶ್ರಾವಕನೂ ತನ್ನ ಪಾತ್ರಕ್ಕೆ ಅನುಸಾರವಾಗಿ ಆಗಮ, ದ್ರವ್ಯ, ಕಾಲ, ದೇಶಕ್ಕೆ ಅನುಗುಣವಾಗಿ ಆಹಾರಾದಿ ದಾನಗಳನ್ನು ಮಾಡಬೇಕೆಂದಿದೆ (ಶಾಸ್ತ್ರೀಚಂದ್ರರಾಜೇಂದ್ರ, ೧೯೫೩, ಪು. ೮೪ – ೮೫). ಹಸಿದವರಿಗೆ ಅನ್ನ, ಸಂಕಟ ಬಂದವರಿಗೆ ಆಶ್ರಯ, ರೋಗಿಗಳಿಗೆ ಔಷಧಿ, ಅಭ್ಯಾಸಿಗಳಿಗೆ ಶಾಸ್ತ್ರಗ್ರಂಥ ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುವ ನಂಬಿಕೆ ಇದೆ. (ಶಾಸ್ತ್ರೀ ಶಾಂತಿರಾಜ ಎ. (ಸಂ.), ೧೯೮೮, ಪು.೨೦). ಇಂದಿಗೂ ಈ ವ್ಯವಸ್ಥೆಯನ್ನು ಧರ್ಮಸ್ಥಳದಲ್ಲಿ ಮತ್ತು ಶ್ರವಣಬೆಳಗೊಳದಲ್ಲಿ ಕಾಣಬಹುದು. ದಾನಂ ಗೆಯ್ದು ತಪಕ್ಕಿ ಪಾಯ್ದು ಮರಣಂ ಕಾಣ್ಪುದೇ….. (ಶಾಸ್ತ್ರೀ ಶಾಂತಿರಾಜ ಎ. (ಸಂ.), ಪು.೮, ಪದ್ಯ ೧೬). ಇದೇ ಜೈನರ ಆದರ್ಶ. ಮೇಲೆ ದಾನ ವೈವಿಧ್ಯತೆ ಹೇಳಲಾಗಿದೆ. ಕೊಡುವ ದಾನ ಏನೇ ಇರಲಿ ‘ಕಾಲಂ ಕರ್ಚಿ’ ಗೌರವವಾಗಿ ಕೊಡುವುದು ಜೈನ ಪರಂಪರೆಯಲ್ಲಿ ನಡೆದು ಬಂದ ದಾರಿ. ಈ ದಾನದಲ್ಲಿ ಮೂರು ವಿಧವಿದೆ.

೧. ಬಸದಿ ತೀರ್ಥಂಕರರ ಸೇವಾಕಾರ್ಯಗಳಿಗೆ ನೀಡುವ ದಾನ

೨. ವ್ಯಕ್ತಿಗಳಿಗೆ ನೀಡುವ ದಾನ

೩. ವಿದ್ಯಾ ಕೇಂದ್ರಗಳಿಗೆ ನೀಡುವ ದಾನ.

ಪ್ರಸ್ತುತ ಹಾಡುವಳ್ಳಿಯ ಸಾಳುವ ಅರಸರ ಕಾಲಕ್ಕೆ ಸೇರಿದ ಹಲವಾರು ಶಾಸನಗಳು ಬಸದಿ ತೀರ್ಥಂಕರರ ಸೇವಾ ಕಾರ್ಯಗಳಿಗೆ, ವ್ಯಕ್ತಿಗಳಿಗೆ ನೀಡಿದ ದಾನಗಳಾಗಿವೆ. ದಾನದ ಚಿತ್ರಣ ಈ ಕೆಳಗಿನ ಶಾಸನಗಳಲ್ಲಿ ದಾಖಲಿಸಿದೆ.

ಹಾಡುವಳ್ಳಿ ದೇವರಸ ಒಡೆಯನ ಕಾಲಕ್ಕೆ ಸೇರಿದ ಕ್ರಿ.ಶ. ೧೫೩೫ನೇ ಶಾಸನ ೧೨ ಮುಡಿಗದ್ದೆಯನ್ನು ದೇವರ ಪೂಜೆಗಾಗಿ ಉಪ್ಪಗುಂದದ ನರಸಿಂಹ ತೀರ್ಥ ಶ್ರೀಪಾದಂಗಳ ಶಿಷ್ಯ ರಾಮಚಂದ್ರ ಶ್ರೀಪಾದಂಗಳಿಗೆ ದಾನ ಮಾಡಿದ್ದನ್ನು ದಾಖಲಿಸಿದೆ (ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ.ಸಂ. ೬೭). ಕ್ರಿ.ಶ. ೧೫೪೨ರಲ್ಲಿ ಶಾಸನದಲ್ಲಿ ನೇಮಿಚಂದ್ರ ದೇವನು ಹಣಕೊಟ್ಟು ಭೂಮಿಕೊಂಡು ತೀರ್ಥಂಕರನಿಗೆ ಹಾಲಧಾರೆಗೆ ಬಿಟ್ಟನು ಎಂದಿದೆ. (ಕ.ಇ. Iನಂ. ೭೪). ಕ್ರಿ.ಶ. ೧೫೫೦ರ ಶಾಸನ ಜೋಗಣ ಸೇನಬೋವಿನ ಮಗ ದೇವಳಪ್ಪ ಸೇನಬೋವನು ೧೧ ೧/೨ ವರಹಗಳನ್ನು ಹಾಲುಧಾರೆಗಾಗಿ ಮೂಡಬಟ್ಕಳಲು ಚವ್ವೀಸ್ ತೀರ್ಥಂಕರ ಬಸದಿಗೆ ದಾನ ಮಾಡಿದನು (ಕ.ಇ. I,ನಂ. ೭೪). ಕ್ರಿ.ಶ. ೧೫೫೬ರ ಶಾಸನ ಅರಮನೆಗೆ ಹರವರಿಗೆಯಾಗಿ ಬಂದ ನರಿಗೆೞೆಯನ್ನು ರಾಮಚಂದ್ರತೀರ್ಥ ಪಾದಂಗಳಿಗೆ ಧಾರೆ ಎಂದು ಕೊಟ್ಟಿದ್ದನ್ನು ದಾಖಲಿಸಿದೆ (ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ.ಸಂ. ೬೮). ಇದೇ ಕಾಲಕ್ಕೆ ಸೇರಿದ ಇನ್ನೊಂದು ಶಾಸನ ತೋರಣ ಸೆಟ್ಟಿಯ ವೀರ ನಾಯಕರ ಮಗ ನಾರಣ ನಾಯಕನು ಭಟ್ಕಳದಲ್ಲಿ ಚಿಮನಕ್ಕಳಿಯೊಳಗೆ ತಾವೇ ಕಟ್ಟಿಸಿದ ಶ್ರೀವರ್ಧಮಾನ ತೀರ್ಥಂಕರ ಬಸದಿಯಲ್ಲಿ ಅಂಗರಂಗ ನೈವೇದ್ಯಕ್ಕಾಗಿ ಆಹಾರ ದಾನ, ಹಾಲುಧಾರೆಗೆ ಬಟ್ಟೆ ದಾನವನ್ನು ದಾಖಲಿಸುತ್ತದೆ (ಕ.ಇ. I, ನಂ.೧೭). ಚೆನ್ನಭೈರಾದೇವಿ ಕಾಲಕ್ಕೆ ಸೇರಿದ ಕ್ರಿ.ಶ. ೧೫೫೬ರ ಶಾಸನದಲ್ಲಿ ಭಟ್ಕಳ ಸೀಮೆಯೊಳಗಿನ ಹರೆಹುಲ್ಲು ಹೆಬ್ಬಾಲನಾ ತಲಗೆೞೆ ಗ್ರಾಮದ ಭೂಮಿಗಳ ಮೇಲಿನ ತೆರಿಗೆಯನ್ನು ಮಾಡಿ ಅದರ ಆದಾಯದಿಂದ ಮಠದ ದೇವರ ಪೂಜೆ ಸರಿಯಾಗಿ ನಡೆಯುವಂತೆ ಧಾರೆ ಎರದು ಕೊಟ್ಟ ವಿಷಯವಿದೆ (ಎರಿಇಎ ೧೯೭೧ – ೭೨, ಎಪಿಎಕ್ಸ್‌ – ಎ). ಕ್ರಿ.ಶ. ೧೫೫೬ರ ಇನ್ನೊಂದು ಶಾಸನ ಉಪ್ಪಗುಂದದ ಶ್ರೀಮತ್ ಆಳಂದವಾಳ ನರಸಿಂಹತೀರ್ಥ ಶ್ರೀಪಾದರ ಶಿಷ್ಯ ರಾಮಚಂದ್ರ ಶ್ರೀಪಾದರಿಗೆ ಅರಸು ಹೆಗ್ಗಡೆ ವಂಶದ ಯೆಕ್ಕು ಹೆಗ್ಗಡೆ, ತಿಮ್ಮನಾಯಕ ಅರಸು, ಯೆಲ್ಲಪ್ಪನಾಯಕ ಮತ್ತು ಕರಿಯ ಹೆಗ್ಗಡೆ ಕೂಡಿಕೊಂಡು ದಾನ ಮಾಡಿದ್ದನ್ನು ದಾಖಲಿಸುತ್ತದೆ. (ನರಸಿಂಹಮೂರ್ತಿಪಿ.ಎನ್., ೨೦೦೭, ಶಾಸನ ಸಂಖ್ಯೆ. ೬೯).

ಕ್ರಿ.ಶ. ೧೫೬೨ರ ಶಾಸನ ರಾಮ ಹೆಗ್ಗಡೆ ಮತ್ತು ಲಿಂಗಪ್ಪ ಹೆಗ್ಗಡೆ ವಹಿಸಿದ್ದ ಕೆಲಸವನ್ನು ಸರಿಯಾಗಿ ಮಾಡದಿದ್ದರ ಪ್ರಯುಕ್ತ ವಿಚಾರಿಸಿ ಭೂಮಿಯನ್ನು ಶ್ರೀ ರಾಮಚಂದ್ರ ತೀರ್ಥ ಶ್ರೀಪಾದಂಗಳವರಿಗೆ ವಶಕ್ಕೆ ಕೊಟ್ಟಿದ್ದನ್ನು ಉಲ್ಲೇಖಿಸಿದೆ (ನರಸಿಂಹಮೂರ್ತಿ ಪಿ.ಎನ್., ೨೦೦೭, ನಂ. ೭೩). ಗೇರುಸೊಪ್ಪೆಯ ತಾಮ್ರ ಶಾಸನ ಕ್ರಿ.ಶ. ೧೫೧೨ರ ಚೆನ್ನಾಭೈರಾದೇವಿ ಕಾಲಕ್ಕೆ ಸೇರಿದೆ. ಭಟ್ಕಳದಲ್ಲಿ ಸೆಟ್ಟಿಕಾರರು ಕಟ್ಟಿಸಿದ್ದ ಹಿರಿಯ ಬಸ್ತಿಯ ಶ್ರೀಪಾರ್ಶ್ವನಾಥಸ್ವಾಮಿಕಯ ಶ್ರುತ ಭಂಡಾರಕ್ಕೆ ಚೆನ್ನಾಭೈರಾದೇವಿ ದಾನ ಬಿಟ್ಟ ಭೂಮಿಯ ವಿವರವನ್ನು ತಿಳಿಸುತ್ತದೆ. (ಮಂಜುವಾಣಿ, ಜೂನ್ ೧೯೮೯, ಪು. ೨೯ – ೩೦). ತಾಮ್ರಶಾಸನದ ಹೊರತಾಗಿ ಹೆಚ್ಚಾಗಿ ದಾನ ಶಾಸನಗಳ ಮೇಲೆ ಜಿನಶಿಲ್ಪವು ಬಿಂಬಿತವಾಗಿರುತ್ತದೆ.

ಹಾಡುವಳ್ಳಿ ಸಾಳುವ ಅರಸರಿಗೆ ಸಂಬಂಧಿಸಿದ ಲಭ್ಯವಾದ ಶಾಸನಗಳಲ್ಲಿ ಇಂದರಗಸನ ಕಾಲದ ಕ್ರಿ.ಶ. ೧೪೪೯ರ ಕಾಲದ ಶಾಸನ ಬೈಂದೂರು ಬಸದಿಯ ಪಾಶ್ವನಾಥ ತೀರ್ಥಂಕರರಿಗೆ ೧೩ ಮುಡಗದ್ದೆಯನ್ನು ಭೂದಾನ ಮಾಡಿದರೆಂದಿದೆ (ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾಸನ ಸಂಖ್ಯೆ ೧೧). ಕ್ರಿ.ಶ. ೧೪೮೪ರಲ್ಲಿ ಸಾಳ್ವೆಂದ್ರ ರಾಜನು ಚಂದ್ರನಾಥ ಮಾಲಾಘಂಟೆ ನೀಡಿದನು (ಕ.ಇ. I.ನಂ.೬೫). ಕ್ರಿ.ಶ. ೧೪೭೪ರಲ್ಲಿ ಸಾಳುವ ಇದರಗಸನು ಕಾಲದಲ್ಲಿ ೨೩೦ ಗದ್ಯಾಣ ಹೊಂನು ಎರಡು ಹಣ ಉತ್ಪತ್ತಿಯ ಭೂಸ್ವಾಸ್ಥೆಯನ್ನು ರಾಜಾ ತಿಮ್ಮಪ್ಪನಿಗೆ ಮಾಡಿದನು (ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ ಸಂ. ೪೯). ಕ್ರಿ.ಶ. ೧೫೨೮ರಲ್ಲಿ ಹಲವಾರು ಜನರಿಗೆ ಮಾಡಿದ ಅಕ್ಕಿ ಮತ್ತು ಹಿರಣ್ಯ ದಾನಗಳನ್ನು ದಾಖಲಿಸಿದೆ. ಈ ದಾನವನ್ನು ಶಾಂತಿಕಾ ದೇವಿಯ ಪೂಝಾ ವಿನಿಯೋಗಗಳಿಗೆ ಮಾಡಲಾಗಿದೆ (ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ ಸಂ. ೬೫). ಇಂತಹ ದಾನ ಶಾಸನಶಿಲ್ಪಗಳ ಮೇಲ್ಭಾಗದಲ್ಲಿ ಶಿಲ್ಪಗಳ ರಚನೆ ಇರುತ್ತದೆ. ಅವುಗಳ ಸಾಮಾನ್ಯ ಲಕ್ಷಣಗಳನ್ನು ಕೆಳಗೆ ನೀಡಲಾಗಿದೆ.

ದಾನಶಾಸನ ಶಿಲ್ಪಕ್ಕೆ ಸಂಬಂಧಿಸಿದಂತೆ, ಜೈನದಾನ ಶಾಸನ ಶಿಲ್ಪದಲ್ಲಿ ಶಾಸನದ ಮೇಲ್ಗಡೆ ಸಾಮಾನ್ಯವಾಗಿ ತೀರ್ಥಂಕರನು ಖಡ್ಗಾಸನ ಅಥವಾ ಪಲ್ಯಂಕಾಸನದಲ್ಲಿ ಧ್ಯಾನಸ್ಥನಾದ ಚಿತ್ರಣವಿರುತ್ತದೆ. ಎಡ ಬಲಗಳಲ್ಲಿ ಸೂರ್ಯ, ಚಂದ್ರ, ತೀರ್ಥಂಕರನ ತಲೆ ಮೇಲೆ ಜೈನ ಪ್ರಭಾವ ತೋರಿಸುವ ಮುಕ್ಕೊಡೆ ಅದರ ಎರಡೂ ಬದಿಗೆ ಚಾಮರಗಳು, ಫಲಕಗಳು ಇರುತ್ತವೆ.

ದಾನ ಶಾಸನಶಿಲ್ಪ

ದಾನ ಶಾಸನಶಿಲ್ಪ

ಹಾಡುವಳ್ಳಿಯ ಚಂದ್ರಗಿರಿ ಬೆಟ್ಟದ ಮೇಲೆ ಬಸದಿಯ ಎದುರುಗಡೆ ಶಾಸನ ಶಿಲ್ಪವಿದೆ. ಶಾಸನದ ಮೇಲ್ಭಾಗದಲ್ಲಿ ಪಟ್ಟಿಕೆಯ ತೀರ್ಥಂಕರ ಪಲ್ಯಂಕಾಸನದಲ್ಲಿ ದೇಹವನ್ನು ದಂಡಿಸಿದಂತೆ ದ್ಯಾನಸ್ಥನಾಗಿ ಕುಳಿತಿದ್ದಾನೆ. ತೀರ್ಥಂಕರನ ತಲೆಯ ಮೇಲೆ ಮುಕ್ಕೊಡೆ ಇದೆ. ಎಡಕ್ಕೆ ಹಸು ನಿಂತಿದೆ. ಬಲಭಾಗದಲ್ಲಿ ಯತಿ ಪದ್ಮಾಸನದಲ್ಲಿ ಕುಳಿತಿದ್ದು ತೀರ್ಥಂಕರನ ಕಡೆ ಮುಖ ಮಾಡಿ ಉಪದೇಶ ನೀಡುವಂತಿದೆ. ಶಾಸನದ ಮೇಲ್ಭಾಗ ಕಮಾನಿನಿಂದ ಅಲಂಕೃತವಾಗಿದೆ. ಆದರೆ ಪ್ರಸ್ತುತ ಈ ಶಾಸನ ಹಾಳಾಗಿದೆ.

ದಾನ ಶಾಸನಶಿಲ್ಪ

ದಾನ ಶಾಸನಶಿಲ್ಪ

ಒಟ್ಟಾರೆ ಮೇಲಿನ ದಾನ ಶಾಸನಗಳ ವಿಷಯದಿಂದ ಜೈನರು ಮಾಡಿದ ದಾನಗಳು ಬಸದಿ ಮತ್ತು ತೀರ್ಥಂಕರಿಗೆ ಮಾಡಿದ ಸೇವಾ ಕಾರ್ಯಗಳಲ್ಲದೇ ಶ್ರೇಷ್ಠ ವ್ಯಕ್ತಿಗಳಿಗೆ ಇತರೆ ಪಂಥದವರಿಗೂ ನೀಡಿದ ದಾನದ ಕುರಿತು ಶಾಸನಗಳಲ್ಲಿ ದಾಖಲಿಸಿದೆ. ಜೈನರ ಜೀವಿಸು – ಜೀವಿಸಗೊಡು ಎಂಬ ತತ್ವಕ್ಕೆ ಈ ದಾನ ಶಾಸನಗಳು ಪುಷ್ಟಿ ನೀಡಿವೆ.

ನಿಷಿಧಿಗಲ್ಲುಗಳು

ಸಮಾಧಿ ಮರಣದ ಪ್ರತೀಕವಾಗಿ ನಿಷಿಧಿಕಲ್ಲನ್ನು ನಿಲ್ಲಿಸುವ ಸಂಪ್ರದಾಯ ಜೈನರ ವಿಶಿಷ್ಟ ಕೊಡುಗೆ. ಈ ಸಂದರ್ಭದಲ್ಲಿ ಮಾಡುವ ವ್ರತವೇ ಸಲ್ಲೇಖನ. ಒಪ್ಪಿ ಅಪ್ಪಿದ ಮರಣ ಸಮಾಧಿ ಸ್ಮರಣೆಗಾಗಿ ನಿಲ್ಲಿಸಿದ ಶಿಲೆ ನಿಷಿಧಿ (ಕೊಪ್ಪ ಎಸ್.ಕೆ., ಪು. ೨೬೨ – ೬೫). ಸಮಾಧಿ ಮರಣ ಹೊಂದಿದ ಜೈನ ಮುನಿಗಳ ಸ್ಮಾರಕವೇ ನಿಷಿಧಿಕಲ್ಲು (ಶ್ರೀನಿವಾಸ ರಿತ್ತಿ (ಸಂ.), ೨೦೦೨, ಪು. ೧೮೩). ನಿಷಿಧಿಯನ್ನು ಸಂಸ್ಕೃತದಲ್ಲಿ ನಿಷಿಧಿಕಾ ಪ್ರಾಕೃತದಲ್ಲಿ ನಿಸೀಹಿಯಾ ಎಂದು ಕರೆಯುತ್ತಾರೆ.

ನಿಷಿಧಿ ಶಿಲೆಯಲ್ಲಿ ಮೂರು ವಿಧವಿದೆ.

೧. ಶಿಲ್ಪ ನಿಷಿಧಿ

೨. ಶಾಸನ ನಿಷಿಧಿ

೩. ನಿಷಿಧಿ

ಕೆಲವು ನಿಷಿಧಿಗಳು ವೀರಗಲ್ಲಿನಂತೆ ಕಾಣುತ್ತವೆ. ಆದರೆ ವಿವರ ನೀಡುವಾಗ ಇದರಲ್ಲಿ ಭಿನ್ನತೆ ಇದೆ. ೨ – ೩ ಅಥವಾ ಹೆಚ್ಚು ಹಂತಗಳಲ್ಲಿ ಅಥವಾ ಪಟ್ಟಿಕೆಗಳಲ್ಲಿ ನಿರೂಪಣೆ ಇರಬಹುದು. ಕೆಳಹಂತದಲ್ಲಿ ಮಧ್ಯದಲ್ಲಿ ದೊಡ್ಡದಾಗಿ ತೋರಿಸಿರುವ ಅಟ್ಟವಣೆಯ ಮೇಲಿರಿಸಿದ ಜಿನಶಾಸನ ಪ್ರತಿನಿಧಿಯಾಗಿ ಗ್ರಂಥ ಅಥವಾ ಪುಸ್ತಕ ಹೊತ್ತ ವ್ಯಾಸಪೀಠ (ಪಂಚ ಪಮೇಷ್ಠಿಗಳ ಸಂಕೇತವಾಗಿ ಇದರ ಮೇಲೆ ಪದ್ಮವನ್ನು ತೋರಿಸುತ್ತಾರೆ.) ಅದರ ಇಕ್ಕೆಲಗಳಲ್ಲಿ ಉಪದೇಶ ನೀಡುವ ಜೈನ ಮುನಿ ಮತ್ತು ಉಪದೇಶ ಪಡೆಯುತ್ತಿರುವ ಜೈನ ಶ್ರಾವಕ/ಶ್ರಾವಕಿ. ಮೇಲಿನ ಹಂತದಲ್ಲಿ ಮಧ್ಯಭಾಗದಲ್ಲಿ ಸಮವಸರಣದಲ್ಲಿರುವ ತೀರ್ಥಂಕರ ಅವರ ಪಾರ್ಶ್ವಗಳಲ್ಲಿ ಸಮಾಧಿ ಮರಣ ನಂತರ ಶಾಶ್ವತವಾಗಿ ಉಪದೇಶ ಪಡೆಯುತ್ತಿರುವ ಭಕ್ತರು ಉಬ್ಬುಶಿಲ್ಪದಲ್ಲಿ ಚಿತ್ರಿತರಾಗಿರುತ್ತಾರೆ. (ಶ್ರೀನಿವಾಸ ಪಾಡಿಗಾರ, ಜಿನ ತಿಲಕ, ಡಿಸೆಂಬರ್ ೨೦೦೪/ಜನವರಿ ೨೦೦೫, ಪು.೧೧೪). ಇಂತಹ ನಿಷಿಧಿ ಕಲ್ಲುಗಳು ಬಸದಿಗಳ ಮುಂದಿನ ಶಿಲಾಫಲಕದಲ್ಲಿ, ಕಂಬಗಳ ಮೇಲೆ ಹೊಲಗಳಲ್ಲಿ ನೆಟ್ಟ ಕಲ್ಲುಗಳಲ್ಲಿ ಬಂಡೆಗಳ ಮೇಲೆ ಕಾಣಿಸುತ್ತದೆ (ಚಿದಾನಂದಮೂರ್ತಿ ಎಂ., ೨೦೦೮, ಪು. ೯೮).

ಪ್ರಸ್ತುತ ಹಾಡುವಳ್ಳಿಯಲ್ಲಿ ಸಾಳುವ ಅರಸರ ಕಾಲಕ್ಕೆ ಸಂಬಂಧಿಸಿದ ಲಭ್ಯವಾದ ಶಾಸನಗಳಲ್ಲಿ ನಾಲ್ಕು ನಿಷಿಧಿ ಕಲ್ಲುಗಳಿವೆ. ಭಟ್ಕಳದಲ್ಲಿ ಮಲ್ಲಿರಾಯ (ಕ.ಇ. I, ನಂ.೩೮). ಹಾಡುವಳ್ಳಿಯಲ್ಲಿ ಭೈರಾದೇವಿ (ಕ.ಇ. I, ನಂ. ೩೯) ಸಲ್ಲೇಖನಾ ವ್ರತ ಆಚರಿಸಿ ಮೋಕ್ಷ ಪಡೆದರೆಂದು ಕ್ರಿ.ಶ. ೧೪೦೮ರ ಶಾಸನ ದಾಖಲಿಸುತ್ತದೆ. ಕ್ರಿ.ಶ. ೧೪೨೩ರ ಶಾಸನ (ಕ.ಇ. I, ನಂ.೪೯). ಹಾಡುವಳ್ಳಿ ಸಂಗಭೂಪನು ಆಳುತ್ತಿರುವಾಗ ಜಯಸೇನ ಮುನೀಶ್ವರನ ಮಗ ಮಾಣಿಕ್ಯಸೇನನು ಸಲ್ಲೇಖನ ವ್ರತ ಆಚರಿಸಿ ೩೩ ದಿನಗಳ ತನಕ ನಿರಹಾರನಾಗಿದ್ದು ಮೋಕ್ಷ ಪಡೆದನೆಂದಿದೆ. ಕ್ರಿ.ಶ. ೧೪೯೦ರ ಶಾಸನ (ಕ.ಇ. I, ನಂ.೬೬). ಹಾಡುವಳ್ಳಿಯ ತನ್ನ ಆಯುಷ್ಯಾಸಾನವನ್ನು ಅರಿತು ಜಿನದೀಕ್ಷಾ ವಿಧಾನಂಕ್ರತ ಸಲ್ಲೇಖನಾ ವೃತ ಮಾಡಿ ಪ್ರಾಣವನ್ನು ತ್ಯಜಿಸನೆಂದು ತಿಳಿಸುತ್ತದೆ. ಹಾಡುವಳ್ಳಿಯಲ್ಲಿ ಶಾಸನ ಶಿಲ್ಪಕ್ಕೆ ಸಂಬಂಧಿಸಿದಂತೆ ನಿಷಿಧಿ ದೊರಕಿದ್ದು ಅದು ಪ್ರಸ್ತುತ ಹಾಳಾಗಿದೆ.

ಗೇರುಸೊಪ್ಪೆ ಮತ್ತು ಹಾಡುವಳ್ಳಿಯನ್ನು ಆಳಿದ ಅರಸು ಮನೆತನ ಒಂದೇ ಗೇರುಸೊಪ್ಪೆಯಲ್ಲಿ ವಾದೀಂದ್ರ ವಿಶಾಲ ಕೀರ್ತಿಯ ನಿಷಿಧಿಕಾ ಶೋಧನೆ ಆಗಿದೆ. (ರಘುನಾಥ ಭಟ್ ಎಚ್.ಆರ್., ೧೯೯೪, ಪು. ೧೧೪ – ೧೧೮). ಆದರೆ ಈ ಭಾಗದಲ್ಲಿ ಗೇರುಸೊಪ್ಪೆ – ಜೈನಾಚಾರ್ಯ ಸಮಾಧಿಗಳಿಗೂ ಪ್ರಸಿದ್ಧ ಎಂಬುದು ಈ ಶಾಸನ ಶಿಲ್ಪ ಉದಾಹರಣೆಯಾಗಿದೆ. ಹಾಡುವಳ್ಳಿಯಲ್ಲಿಯೂ ಇಂತಹ ನಿಷಿಧಿ ಸಿಕ್ಕಲ್ಲಿ ಈ ಮಾತಿಗೆ ಇನ್ನಷ್ಟು ಪುಷ್ಠಿ ದೊರೆತಂತಾಗುತ್ತದೆ.

ವೀರಗಲ್ಲುಗಳು

ಯುದ್ಧದಲ್ಲಿ ಹೋರಾಡಿ ಮಡಿದ ನಂತರ ಆತನ ನೆನಪಿಗಾಗಿ ನಿಲ್ಲಿಸುತ್ತಿದ್ದ ಕಲ್ಲುಗಳೇ ವೀರಗಲ್ಲುಗಳು. ಯುದ್ಧದಲ್ಲಿ ಸೋಲುವುದು ಅಥವಾ ಗೆದ್ದು ಬರುವುದು ಎರಡಕ್ಕೂ ಸಮಾನ ಗೌರವವಿದೆ. ಮೃತ್ಯು ಕ್ಷಣಿಕ ದುಃಖ ತಂದರೆ ಮಾನಭಂಗ ದಿನನಿತ್ಯವೂ ದುಃಖವನ್ನು ಉಂಟುಮಾಡುತ್ತದೆ (ಕ.ಇ. I, ನಂ.೮) ಯುದ್ಧದಲ್ಲಿ ಗೆದ್ದರೆ ಇಹಲೋಕ, ಸತ್ತರೆ ಪರಲೋಕದಲ್ಲಿ ಸುಖಿಸಬಹುದು.

            ಜಿತೇನ ಲಭ್ಯತೇ ಲಕ್ಷೀಃ ಮೃತೇನಾಪಿ ಸುರಾಂಗನಾ
            ಕ್ಷಣ ವಿದ್ವಂಸಿನಿ ಕಾಯೇಕಾ ಚಿಂತಾ ಮರಣೇ ರಣೆ

ಯುದ್ಧದಲ್ಲಿ ಹೋರಾಡುವುದರಿಂದ ಆಗುವ ಫಲ ಈ ಶ್ಲೋಕದಲ್ಲಿದೆ. ವೀರನ ಪರಾಕ್ರಮಗಳನ್ನು ಉಲ್ಲೇಖಿಸುವ ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ಮೂರು ಹಂತಗಳಿರುತ್ತವೆ. ಕೆಳಗಿನ ಹಂತದಲ್ಲಿ ಅವನ ಹೋರಾಟದ ಚಿತ್ರ. ಮಧ್ಯದ ಹಂತದಲ್ಲಿ ಆತನನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಿರುವ ದೇವತಾ ಸ್ತ್ರೀಯರು, ಮೇಲಿನ ಪಟ್ಟಿಕೆಯಲ್ಲಿ ಆತನು ಶಿವಸಾನಿಧ್ಯವನ್ನು ಪಡೆದು ಪೂಜೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿ ಚಿತ್ರಿತವಾಗಿರುತ್ತದೆ. ವೀರನು ದೇವಲೋಕ ಸೇರಿದ ಪುರುಷನಾದುದರಿಂದ ವೀರಗಲ್ಲಿಗೆ ಪೂಜೆ ಸಲ್ಲಿಸಲು ದತ್ತಿ ಬಿಟ್ಟಿರುವ ಉದಾಹರಣೆಯೂ ಇದೆ (ಮೈ.ಆ.ರಿ., ೧೯೨೬, ಪು.೫೮)

ವೀರಗಲ್ಲುಗಳಲ್ಲಿ ಶಾಸನ ಶಿಲ್ಪಗಳು ಮತ್ತು ಸ್ಮಾರಕ ಶಿಲ್ಪಗಳು ಎಂದು ಎರಡು ವಿಧವಿದೆ. ಶಿಲ್ಪದ ಜೊತೆ ಶಾಸನ ಇರುವುದು ಶಾಸನೋಕ್ತ ಶಿಲ್ಪ. ಶಾಸನಗಳು ಇಲ್ಲದೇ ಒಂದೇ ವೀರಶಿಲ್ಪವಾದರೆ ಅದು ಸ್ಮಾರಕ ಶಿಲ್ಪ. ತುರುಗೋಳ್, ಪೆಣ್ಬುಯಲ್, ಊರಳಿವು, ಗಡಿಕಾಳಗ ಶಿಲ್ಪ, ಕಳ್ಳರೊಡನೆ ಹೋರಾಟ ನಿರತರ ಶಿಲ್ಪ, ಹಂದಿ ಬೇಟೆ ಶಾಸನ ಶಿಲ್ಪ, ಹುಲಿಬೇಟೆ ಶಾಸನ ಶಿಲ್ಪ, ಹಾವು ಬೇಟೆ, ಆನೆ ಬೇಟೆ, ಮೊಸಳೆ ಹೋರಾಟ ಶಿಲ್ಪ, ಜಿಂಕೆ ಬೇಟೆ ಶಿಲ್ಪ, ನಾಯಿ – ಹಂದಿ ಹೋರಾಟ ಶಿಲ್ಪ, ನಾಯಿ – ಹುಲಿ ಹೋರಾಟ ಶಿಲ್ಪ, ವೀರಸ್ತಂಭ ಶಿಲ್ಪ ಇವೆಲ್ಲ ಸ್ಮಾರಕ ಶಿಲ್ಪಗಳಾಗಿವೆ.

ಲಭ್ಯವಾದ ಶಾಸನಗಳಲ್ಲಿ, ಹಾಡುವಳ್ಳಿ ಸಾಳುವ ಅರಸರ ಕಾಲದ ಒಟ್ಟು ಎಂಟು ವೀರಗಲ್ಲು ಶಾಸನಗಳು ದೊರೆತಿವೆ. ಕ್ರಿ.ಶ. ೧೪೧೫ರ ವೀರಗಲ್ಲು ಶಾಸನ (ಕ.ಇ. I. ಸಂ.೧, ಶಾ ಸಂ. ೪೦) ಹಾಡುವಳ್ಳಿ ಸಂಗಿರಾಯನ ಕಾಲಕ್ಕೆ ಸೇರಿದೆ. ಈ ವೀರಗಲ್ಲು ಶಾಸನ ಸಂಗಿರಾಯನೊಂದಿಗೆ ಕಾದಾಡಿ ಲೋಕನಾಯಕನ ಮಗನಾದ ಮಾಬುನಾಯಕನು ಮರಣ ಹೊಂದಿದ ವಿಷಯ ತಿಳಿಸುತ್ತದೆ. ಈ ವೀರಗಲ್ಲನ್ನು ಮಾಡಿದವ ಯಿಸರಚಾರಿ ಎಂದಿದೆ. ಕ್ರಿ.ಶ. ೧೪೨೨ರ ಶಾಸನದಲ್ಲಿ ನಗಿರೆಯ ಕೇಶವದೇವ ಒಡೆಯರ ಮೊಮ್ಮಗ ಕೇಶವ ಒಡೆಯರು ಹಾಡುವಳ್ಳಿಯ ಸಂಗಿರಾಯ ರಾಜ್ಯಕ್ಕೆ ದಂಡೆತ್ತಿ ಬಂದನು. ಈ ಯುದ್ಧದಲ್ಲಿ ತಮ್ಮ ನಾಯಕನ ಮಗ ಸಂಗಣ್ಣನಾಯಕನು ವೀರಮರಣ ಪಡೆದಿದ್ದನ್ನು ದಾಖಲಿಸಿದೆ. ಹಾಡುವಳ್ಳಿಯ ೧೪೨೨ರ ಶಾಸನದ ಪ್ರಕಾರ (ಕ.ಇ. I,ಶಾ.ಸಂ. ೫೨) ಹಾಡುವಳ್ಳಿಯ ಸಂಗಿರಾಯ ಒಡೆಯರು ಬಾರಹಕಂನ್ಯಾಪುರ ಆಳುತ್ತಿದ್ದ ವಿರೂಪಣ್ಣ ಒಡೆಯರನ್ನು ಬೈಂದೂರಿನಲ್ಲಿ ಎದುರಿಸಿದರು. ಈ ಯುದ್ಧದಲ್ಲಿ ಸಂಗಿರಾಯ ಒಡೆಯನ ಬಂಟನಾದ ಕೋಟಿಯಣ್ಣನು ಹೋರಾಡಿ ವೀರಮರಣವನ್ನು ಹೊಂದಿದನು. ಕ್ರಿ.ಶ. ೧೪೨೩ರ ಕೈಕಿಣಿಯ ಶಾಸನದಲ್ಲಿ ಕೇಶವದೇವ ಒಡೆಯ ಮತ್ತು ಸಂಗಿರಾಯನಿಗೆ ನಡೆದ ಯುದ್ಧದಲ್ಲಿ ತಮ್ಮನಾಯ್ಕನು ವೀರಮರಣ ಪಡೆದನೆಂದಿದೆ (ಕ.ಇ. I, ಶಾ ಸಂ. ೪೫). ಇದೇ ಕಾಲದ ಹಾಡುವಳ್ಳಿಯ ಇನ್ನೊಂದು ಶಾಸನ (ಕ.ಇ. I, ಶಾ ಸಂ.೪೨) ನಗಿರೆಯ ಕೇಶವದೇವ ಒಡೆಯರಿಗೂ ಹಾಡುವಳ್ಳಿಯ ಸಂಗಿರಾಯರಿಗೆ ಅಸಿಕೆರೆಯ ತಳಿಪ್ರದೇಶದಲ್ಲಿ ಆದ ಯುದ್ಧದಲ್ಲಿ ಚೌಡನಾಯಕನ ಮಗ ತಮ್ಮ ನಾಯಕನು ವೀರಮರಣ ಪಡೆದನೆಂದಿದೆ. ಕ್ರಿ.ಶ. ೧೪೩೦ರ ಕೈಕಣಿ ವೀರಗಲ್ಲು ಶಾಸನ (ಕ.ಇ. I, ಶಾ ಸಂ. ೫೦) ಕೋಟದ ಗಡಿಯಲ್ಲಿ ನಡೆದ ಭಯಿರದೇವರ ಒಡೆಯ ಬಂಟ ರಾಮನಾಯಕಿತಿ ಮತ್ತು ಜೋಗನಾಯಕನು ವೀರಸ್ವರ್ಗ ಹೊಂದಿದರೆಂದಿದೆ. ಕ್ರಿ.ಶ. ೧೪೬೮ರ ವೀರಗಲ್ಲು ಶಾಸನ ಹಾಡುವಳ್ಳಿ ಸಾಳುವ (ನರಸಿಂಹಮೂರ್ತಿ ಪಿ.ಎನ್., ೨೦೦೭, ಶಾ ಸಂ. ೫೫) ಹೊನ್ನಾದೇವಿ ಕಾಲಕ್ಕೆ ಸೇರಿದೆ. ವೀರನೊಬ್ಬ ಪ್ರಾಣ ತೆತ್ತ ವಿಷಯ ಮತ್ತು ಕಿರಿತಾಯಿ ಬಸವನಾಯಕಿ ಈ ವೀರಗಲ್ಲನ್ನು ಹಾಕಿಸಿದಳೆಂದಿದೆ. ಈ ಎಲ್ಲ ವೀರಗಲ್ಲು ಶಾಸನಗಳು ವೀರರ ಹೆಸರನ್ನು ಮತ್ತು ಯುದ್ಧದಲ್ಲಿ ಮಡಿದವರ ಚಿತ್ರಣ ನೀಡುವುದರಿಂದ ಇವು ಶಾಸನೋಕ್ತ ಶಿಲ್ಪಗಳಾಗಿವೆ. ಈ ಶಾಸನಗಳ ಉಲ್ಲೇಖದ ಜೊತೆ ಶಾಸನ ಶಿಲ್ಪದ ಉದಾಹರಣೆಯೂ ಹಾಡುವಳ್ಳಿಯಲ್ಲಿ ದೊರೆತಿದೆ.

ವೀರಗಲ್ಲು

ವೀರಗಲ್ಲು

ಹಾಡುವಳ್ಳಿ ಶಾಸನ ಶಿಲ್ಪಕ್ಕೆ ಸಂಬಂಧಿಸಿದಂತೆ ಚವ್ವೀಶ ತೀರ್ಥಂಕರ ಬಸದಿಯ ಸಮೀಪದಲ್ಲಿ ಒಂದು ವೀರಗಲ್ಲು ಇದೆ. ಇಲ್ಲಿನ ವೀರಗಲ್ಲಿನಲ್ಲಿ ಐದು ಪಟ್ಟಿಕೆಗಳಿದ್ದು ಪ್ರಸ್ತುತ ಬರಹ ಅಳಿಸಿದೆ. ಮೊದಲ ಎರಡು ಪಟ್ಟಿಕೆಯಲ್ಲಿ ಕೆಳಗಿನಿಂದ ಗುರಾಣಿ ಕತ್ತಿ ಹಿಡಿದು ವೀರಾವೇಶದಿಂದ ಯುದ್ಧದಲ್ಲಿ ನಿರತರಾದಂತೆ ಚಿತ್ರಿತವಾಗಿದೆ. ಮಧ್ಯಪಟ್ಟಿಕೆಯಲ್ಲಿ ವಿಮಾನದಲ್ಲಿ ಕುಳಿತ ಸ್ವರ್ಗಸ್ಥೆಯಾದ ಮಹಿಳೆಯನ್ನು ಹೊತ್ತಯ್ಯುವಂತೆ ಚಿತ್ರಿತವಾಗಿದೆ. ನಾಲ್ಕನೇ ಪಟ್ಟಿಕೆಯಲ್ಲಿ ವಾದ್ಯ ನುಡಿಸುತ್ತಿರುವ, ನೃತ್ಯ ಮಾಡುತ್ತಿರುವ ದೃಶ್ಯವಿದೆ. ಮೇಲ್ಭಾಗದ ಪಟ್ಟಿಕೆಯಲ್ಲಿ ಮಧ್ಯದಲ್ಲಿ ಪ್ರಧಾನ ಮಂಟಪ ಎಡಬಲಕ್ಕೆ ಸಣ್ಣ ಉಪಮಂಟಪಗಳಿವೆ. ಬಲ ಉಪಮಂಟಪದಲ್ಲಿ ಸ್ವರ್ಗಸ್ಥರಾದ ಭಕ್ತ, ಎಡ ಉಪಮಂಟಪದಲ್ಲಿ ಹಸು, ಪ್ರಧಾನ ಮಂಟಪದಲ್ಲಿ ಶಿವಲಿಂಗ ಪೂಜೆ ಮಾಡುತ್ತಿರುವ ದೃಶ್ಯವನ್ನು ಕಲಾಕಾರ ಮನಮುಟ್ಟುವಂತೆ ಚಿತ್ರಿಸಿದ್ದಾನೆ. ಪ್ರಭಾವಳಿಯ ಮೇಲ್ತುದಿ ಕೀರ್ತಿಮುಖ ಮತ್ತು ಪ್ರಭಾವಳಿಯ ಸುತ್ತಲೂ ನಾಗತೋರಣಾಲಂಕೃತವಾಗಿದೆ.

ಮಹಾಸತಿಗಲ್ಲುಗಳು

ಇದನ್ನು ಮಾಸ್ತಿಕಲ್ಲು ಮಹಾಸತಿ ಕಲ್ಲು ಎಂತಲೂ ಕರೆಯುತ್ತಾರೆ. ವೀರಗಲ್ಲು ಗಂಡಿನ ಶೌರ್ಯ, ಹೋರಾಟ, ತ್ಯಾಗದ ಸಂಕೇತವಾಗಿ ಮಾತೃದೇವತಾ ಸ್ಥಾನದಲ್ಲಿ ಜನಪದರದಲ್ಲಿರುವ ನಂಬಿಕೆ, ಪತಿವ್ರತೆಯಾದ ಹೆಣ್ಣು ತನ್ನ ಪತಿ ಸತ್ತಾಗ ಪತಿಯೊಂದಿಗೆ ಸಹಗಮನ ಮಾಡುತ್ತಿದ್ದಳು. ಇವಳ ಸ್ಮರಣೆಗಾಗಿ ನೆಟ್ಟಿದ್ದ ಕಲ್ಲುಗಳೇ ಮಹಾಸತಿಗಲ್ಲುಗಳು

ಮಹಾಸತಿಯಾಗುವ ಪದ್ಧತಿಯಲ್ಲಿ ಎರಡು ವಿಧ. ೧. ಸಹಗಮನ ಅಂದರೆ ಸಹ ಮರಣ ೨. ಅನುಗಮನ – ಗಂಡ ಸತ್ತ ಸುದ್ದಿ ಕೇಳಿ ಚಿತೆ ನಿರ್ಮಿಸಿಕೊಂಡು ಅವನಿಗೆ ಪ್ರಿಯವಾದ ವಸ್ತು ಹಿಡಿದು ಚಿತೆ ಏರುವುದು ಅನುಗಮನ. ಜೈನ ಪರಂಪರೆಯಲ್ಲಿ ಜೈನ ತತ್ವಕ್ಕೆ ವಿರುದ್ಧವಾದರೂ ಗುಂಡುಮಬ್ಬೆ ಚಿತಾಗ್ನಿಯಲ್ಲಿ ಮಡಿದಿರುವುದು ಉಲ್ಲೇಖನೀಯ (ಶಾಮರಾಯ ತ.ಸು., ನಂಜೇಗೌಡ ಎಚ್. (ಸಂ.), ಅಜಿತ ಪುರಾಣ ಸಂಗ್ರಹ – ೧, ವಚನ ೨೨, ಪು.೬). ಇದು ಬಲಿದಾನದ ವ್ಯಕ್ತಿಯ ಮಹತ್ವವನ್ನು ಒಂದು ಸಂದರ್ಭದ ಘಟನಾವಳಿಯನ್ನು ಆಗಿನ ಪರಂಪರೆಯನ್ನು ಬಿಂಬಿಸುತ್ತದೆ.

ಮಾಸ್ತಿಶಿಲ್ಪದಲ್ಲಿ ಎರಡು ಬಗೆಯಿರುತ್ತದೆ. ೧. ಒಕ್ಕೈ ಮಾಸ್ತಿಕಲ್ಲು – ಕಂಬದಿಂದ ಒಂದು ಕೈ ಹೊರಬಂದು ಎತ್ತಿದರೆ ಅದು ಒಕ್ಕೈ ಮಾಸ್ತಿಕಲ್ಲು. ೨. ಇಕ್ಕೈ ಮಾಸ್ತಿಕಲ್ಲು – ಕಂಬದಿಂದ ಎರಡು ಕೈ ಹೊರಬಂದು ಎತ್ತಿದ್ದರೆ ಅದು ಇಕ್ಕೈ ಮಾಸ್ತಿಕಲ್ಲು. ಒಟ್ಟಾರೆ ಮಹಾಸತಿ ಕಲ್ಲುಗಳ ಸಂಕೇತ ಹೆಚ್ಚಿನ ಮಟ್ಟಿಗೆ ಬಲಗೈ ಎತ್ತಿದ ಕೈ ಇರುತ್ತದೆ. ಮುಂಗೈಗೆ ಬಳೆ, ಅಂಗೈಯಲ್ಲಿ ಸಾಮಾನ್ಯವಾಗಿ ನಿಂಬೆಹಣ್ಣು ಹಿಡಿದಿರುತ್ತದೆ. ಮಹಾಸತಿಯ ಬಲಗೈ ಶುಭದ ಸೌಭಾಗ್ಯದ ಧನ್ಯ ಜೀವನದ ಸಂಕೇತ (ಚಿದಾನಂದಮೂರ್ತಿ, ೨೦೦೮, ಪು. ೩೫೩). ಬಲಗೈ ಹಸ್ತ ತೋರಿಸುವುದು ತಾನು ಸ್ವರ್ಗಕ್ಕೆ ಹೋಗುತ್ತಿರುವ ಸಂಕೇತ. ಕಂಬವನ್ನು ತೋರಿಸುವುದು ಇದು ದೈವತ್ವದ ಪ್ರತೀಕ. ದೈವ ಇರುವ ಸ್ಥಾನ ಅಂದರೆ ಮಹಾಸತಿ ಆದವರು ದೈವತ್ವದ ಹಂತಕ್ಕೆ ಏರಿದ್ದಾಳೆ ಎಂಬುವುದರ ಸಂಕೇತ (ಪರಮಶಿವಮೂರ್ತಿ ಡಿ.ವಿ., ೧೯೯೯, ಪು. ೨೬೫). ಕೆಲವೊಮ್ಮೆ ಮಹಾಸತಿ ಕಲ್ಲುಗಳು ಸೂರ್ಯ, ಚಂದ್ರರ ಕಲಾಕೃತಿಗಳನ್ನು ಒಳಗೊಂಡಿರುತ್ತವೆ. ಇನ್ನೂ ಕೆಲವೊಮ್ಮೆ ಸ್ವಾಭಾವಿಕ ಸತಿ ಶಿಲ್ಪಗಳು ಕುಳಿತ ಸ್ತ್ರೀ – ಪುರುಷ ಅಥವಾ ನಿಂತ ಸ್ತ್ರೀಯಾಗಿ ಮಾತ್ರ ಕೆತ್ತಲ್ಪಟ್ಟಿರುತ್ತವೆ. ವೀರಯೋಧನ ಮಡದಿಯಾದಲ್ಲಿ ವೀರ ಹೋರಾಟದ ಭಂಗಿಯಲ್ಲಿ ಹೊರಟಂತೆ ಅಥವಾ ವೀರಮಹಿಳೆಯ ರೂಪದಲ್ಲಿ ಕೆತ್ತಿರುವುದು, ಮಹಾಸತಿಗಲ್ಲುಗಳ ಸಾಮಾನ್ಯ ಲಕ್ಷಣಗಳಾಗಿವೆ.

ದಕ್ಷಿಣ ಭಾರತದಲ್ಲಿ ಕ್ರಿ.ಶ. ೧೦ನೇ ಶತಮಾನದವರೆಗೆ ಸಹಗಮನ ಪದ್ಧತಿ ಹೆಚ್ಚು ಪ್ರಚಲಿತ ಇರಲಿಲ್ಲ. ಪಶ್ಚಿಮ ಕರಾವಳಿಯಲ್ಲಿ ಅರಬ್ಬಿ ಪರ್ವತ ಸುಲೇಮಾನ್ ಪ್ರವಾಸ ಮಾಡಿ ಹೇಳಿದಂತೆ ವಿರಳವಾಗಿ ರಾಣಿಯರು ತಮ್ಮ ಪತಿಯ ಜೊತೆ ಚಿತೆ ಏರುತ್ತಿದ್ದರು. ಇದರಲ್ಲಿ ಬಲವಂತ ಇರಲಿಲ್ಲ. ಚಿತೆ ಏರುವುದು ಅವರ ಇಷ್ಟವಾಗಿತ್ತು. ಆದರೆ ಕರ್ನಾಟಕದಲ್ಲಿ ಸಹಗಮನಕ್ಕೆ ಸಂಬಂಧಿಸಿದಂತೆ ಪ್ರಾಚೀನ ಉದಾಹರಣೆ ಆರನೇ ಶತಮಾನದ ಕವಡಿ ಶಾಸನ. ಬಹುಶಃ ಕದಂಬ ರವಿವರ್ಮನ ರಾಣಿಯ ಸಹಗಮನ ಸೂಚಿಸುತ್ತಿದ್ದ ಪ್ರಥಮ ದಾಖಲೆಯಾಗಿದೆ (ಎ.ಕ.V II I, ಸೊರಬ, ನಂ. ೫೨೩).

ವೀರಮಹಿಳೆಯ ಶಿಲ್ಪ

ವೀರಮಹಿಳೆಯ ಶಿಲ್ಪ

ಪ್ರಸ್ತುತ ಹಾಡುವಳ್ಳಿ ಮಹಾಸತಿಗಲ್ಲುಗಳಿಗೆ ಸಂಬಂಧಿಸಿದಂತೆ ಇಲ್ಲಿ ಒಂದು ಉದಾಹರಣೆ ಮಾತ್ರ ದೊರೆತಿದೆ. ಇಲ್ಲಿನ ಜನರು ವೀರಮಾಸ್ತಿ ಎಂದು ಪೂಜಿಸುತ್ತಿದ್ದ ಮಾಸ್ತಿಗಲ್ಲೊಂದು ದೊರೆತಿದೆ. ವೀರಮಾಸ್ತಿ ಸಮಾನಾಂತರವಾಗಿ ನಿಂತಿದ್ದು ಈ ಮಹಿಳೆಗೆ ಎರಡು ಕೈಗಳಿವೆ. ಎಡಗೈ ನೇರವಾಗಿ ಕೆಳಗೆ ಇಳಿಬಿಟ್ಟಿದ್ದರೆ, ಬಲಗೈ ತನ್ನ ಬಲ ಸೊಂಟ ಹಿಡಿದಂತಿದೆ. ವೃತ್ತಾಕಾರದ ಕಿವಿಯೋಲೆ, ಅಗಲವಾದ ಕಂಠಹಾರ, ಕೈಬಳೆ, ಕಾಲ್ಗಡಗ ಧರಿಸಿದ್ದು, ನೆರಿಗೆಯ ಒಳಗೊಂಡಂತೆ ಸೀರೆ ಧರಿಸಿದ್ದಾಳೆ. ಪ್ರಭಾವಳಿಯಲ್ಲಿ ಯಾವುದೇ ಕೆತ್ತನೆಗಳಿಲ್ಲ. ಉಡಿಗೆ, ಆಭರಣ, ಮುಖಭಾವ, ನಿಂತ ಭಂಗಿ ನೋಡಿದರೆ ಇವಳೊಬ್ಬ ವೀರ ಮಹಿಳೆಯೆಂಬುದಂತೂ ಸ್ಪಷ್ಟ. ಇಲ್ಲಿ ಶಾಸನ ಇರದಿದ್ದರಿಂದ ಇದೊಂದು ಸ್ಮಾರಕ ಶಿಲ್ಪವಾಗಿದೆ.