ಈವರೆಗೆ ಪ್ರಾಚ್ಯವಸ್ತು ಆಕರಗಳಿಂದ ಹಾಡುವಳ್ಳಿಯ ಜೈನಧರ್ಮದ ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿಯಲಾಗಿದೆ. ೧೩ – ೧೪ನೇ ಶತಮಾನದಲ್ಲಿ ಹಾಡುವಳ್ಳಿಯಲ್ಲಿ ಮೊಳಕೆ ಬಿಟ್ಟು ವಿಜಯನಗರೋತ್ತರ ಕಾಲದವರೆಗೆ ಎಲ್ಲಾ ಜನರಿಗೆ ಆಶ್ರಯ ನೀಡುವುದರ ಜೊತೆಗೆ, ಜೈನಧರ್ಮ ಸಮನ್ವಯ ದೃಷ್ಟಿಯನ್ನು ಸಾಧಿಸಿತು. ಧರ್ಮವು ಸಂಸ್ಕೃತಿಯ ಜೀವಾಳ. ರಾಜತ್ವ ಮತ್ತು ಧರ್ಮ ಎರಡೂ ಕೂಡಿದಾಗಲೇ ಚರಿತ್ರೆಯಲ್ಲಿ ಪ್ರಬಲ ಶಕ್ತಿಗಳಾಗುತ್ತವೆ. ರಾಜಕೀಯ ವ್ಯವಸ್ಥೆಯನ್ನು ರೂಪಿಸುವವನೇ ರಾಜ. ಇವೆರಡೂ ಸಾಮಾಜಿಕ ನೈತಿಕತೆಯನ್ನು ರೂಪಿಸುತ್ತದೆ. ಅಂದರೆ ಇವರೆರಡೂ ಒಂದಕ್ಕೊಂದು ಪೂರಕವಾಗಿರುತ್ತವೆ. ಇವೆರಡರಲ್ಲಿ ಕೊರತೆಯಾದರೆ, ಬೇರೊಂದು ಧರ್ಮಕ್ಕೆ ಎಡೆ ಹಾಕಿದಂತಾಗುತ್ತದೆ.

ಹಾಡುವಳ್ಳಿಯ ರಾಜಕೀಯ ಚರಿತ್ರೆಯನ್ನು ನೋಡಿದರೆ ಆದಿ ೧೪ನೇ ಶತಮಾನದಿಂದ ೧೬ನೇ ಶತಮಾನದವರೆಗೂ ಹಾಡುವಳ್ಳಿಯ ಮಹಾಮಂಡಳೇಶ್ವರರು ತುಳುನಾಡಿನ ಇತಿಹಾಸದಲ್ಲಿ ಪ್ರಮುಖ ಪಾತ್ರವನ್ನೇ ವಹಿಸಿದ್ದಾರೆ. ವಿಜಯನಗರದ ಪ್ರಭುತ್ವವನ್ನು ಒಪ್ಪಿಕೊಂಡಿದ್ದರಿಂದ ವಿಜಯನಗರದ ಉದಾರನೀತಿ ಸ್ವತಂತ್ರವಾಗಿ ಕೆಲಸ ನಿರ್ವಹಿಸುವಂತಾಯಿತು. ಹಾಡುವಳ್ಳಿಯ ರಾಜಕೀಯ ಚರಿತ್ರೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಚೆನ್ನಾಭೈರಾದೇವಿಯ ಕಾಲ ಒಂದು ಪರ್ವಕಾಲ. ಚೆನ್ನಾಭೈರಾದೇವಿ ನಾಲ್ಕು ದಶಕಗಳವರೆಗೆ ರಾಣಿಯಾಗಿ ಮೆರೆದಿದ್ದಲ್ಲದೆ ಇವಳ ವ್ಯಾಪಾರ, ಆಡಳಿತ ಮತ ಸಹಿಷ್ಣುತೆ ನೀತಿಗಳ ಕುರಿತು ಶಾಸನಗಳಷ್ಟೇ ಅಲ್ಲ ಪೋರ್ಚುಗೀಸ್ ದಾಖಲೆಗಳೂ ಬೆಳಕನ್ನು ಚೆಲ್ಲಿವೆ. ಏಕೆಂದರೆ ೧೬೦ ವರ್ಷಗಳವರೆಗೆ ಹಾಡುವಳ್ಳಿ ಗೇರುಸೊಪ್ಪೆ ಮನೆತನ ಕಾದಾಡಿಕೊಂಡಿದ್ದು, ೧೬೦ ವರ್ಷಗಳ ನಂತರ ಒಂದಾದವು. ಇಲ್ಲಿನ ಅರಸರುಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಎಷ್ಟೇ ವಿರೋಧದ ಭಾವನೆಗಳಿದ್ದರೂ ಧಾರ್ಮಿಕ ಕಾರ್ಯಗಳನ್ನು ಮಾಡುವಾಗ ವಿರೋಧ ಭಾವನೆ ಇರಲಿಲ್ಲವೆಂಬುದಕ್ಕೆ ಇಲ್ಲಿನ ಸಾಂಸ್ಕೃತಿಕ ಕುರುಹುಗಳೇ ಸಾಕ್ಷಿಯಾಗಿವೆ.

ನಾಡಿನ ಜನಜೀವನದ ಮೇಲೆ ಧರ್ಮದ ಪ್ರಭಾವ ಬಹು ಮುಖ್ಯ. ಜೀವನದಲ್ಲಿ ನಡೆದು ಬಂದ ಆಚರಣೆ, ಸಂಪ್ರದಾಯ ಧರ್ಮದ ರೂಪ ಪಡೆಯುತ್ತದೆ. ಸಂಸ್ಕೃತಿ ಎಂಬುದು ಧರ್ಮದ ತಳಹದಿಯಲ್ಲಿ ನಿಂತಿದೆ. ಸಾಂಸ್ಕೃತಿಕ ಇತಿಹಾಸ ರೂಪಿಸುವಾಗ ಸನಾತನ ಧರ್ಮವಾಗಿ ಜೈನಧರ್ಮದ ಪಾತ್ರ ಬಹುದೊಡ್ಡದು. ಜೈನಧರ್ಮದಲ್ಲಿ ಶ್ವೇತಾಂಬರ, ದಿಗಂಬರ, ಯಾಪನೀಯ ಪಂಥಗಳೆಂದು ಬೇಧಗಳಿದ್ದರೂ, ಹಾಡುವಳ್ಳಿಯಲ್ಲಿ ನಡೆದುಬಂದಿರುವುದು ದಿಗಂಬರ ಜೈನಪಂಥ. ಇಲ್ಲಿನ ಜೈನಧರ್ಮ ಹೇಗೆ ಉದಯಿಸಿತ್ತು? ಯಾವ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಗೆ ಬಂದಿತೆಂದು ಇಲ್ಲಿ ಸ್ಮಾರಕಗಳು ಮಾಹಿತಿಯನ್ನು ನೀಡುತ್ತವೆ. ಕರ್ನಾಟಕದ ಹಿನ್ನೆಲೆಯಲ್ಲಿ ಹಾಡುವಳ್ಳಿಯಲ್ಲಿ ಜೈನಧರ್ಮದ ಪ್ರಸ್ತಾವನೆಯನ್ನು ಹಿಂದೆ ಮಾಡಲಾಗಿದೆ. ಬಸದಿ ಮತ್ತು ಮಠಗಳ ಪಾತ್ರ ಧರ್ಮದ ಅಡಿಗಲ್ಲಾಗಿದೆ. ಸಾಮಾಜಿಕ ಕೇಂದ್ರವಾಗಿ ಬಸದಿ ಮತ್ತು ಮಠಗಳ ಪಾತ್ರ ಬಲು ದೊಡ್ಡದು. ಹಾಡುವಳ್ಳಿಯಲ್ಲಿ ಅಕಲಂಕ ಮಠ ಇತ್ತೆಂಬುದನ್ನು, ಅಲ್ಲಿನ ಮುನಿ ಪರಂಪರೆಯನ್ನು ಬೀಳಗಿಯ ಎರಡು ಶಾಸನಗಳು ಸಾಬೀತುಪಡಿಸಿದೆ.

ಸಲ್ಲೇಖನವೆಂಬುದು ಬಯಸುವ ಆದರ್ಶ ಮರಣ. ರಾಜನೇ ಅದನ್ನು ವಿರೋಧಿಸಿದಾಗ್ಯೂ ಫಲ ನೀಡುವುದಿಲ್ಲ. ಇದಕ್ಕೆ ಉದಾ. ಗರುರಾಯ ಒಡೆಯನ ಮಗ ಚೆನ್ನರಾಜ, ಚತುಃಸಂಘದ ಸನ್ನಿಧಿಯಲ್ಲಿ ಸಲ್ಲೇಖನಾ ವೃತ ಸ್ವೀಕರಿಸುತ್ತಾನೆ. ಧರ್ಮೊ ರಕ್ಷತಿ ರಕ್ಷಿತಃ ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಜೈನಧರ್ಮದಲ್ಲಿ ಇದೊಂದು ವೃತಾಚರಣೆಯಾಗಿದೆ. ಜೈನಧರ್ಮದಲ್ಲಿ ದಾನಕ್ಕೆ ಮಹತ್ವಸ ಸ್ಥಾನವಿದೆ. ಆಹಾರ, ಅಭಯ, ಶಾಸ್ತ್ರ, ಬೈಷಜ ಈ ನಾಲ್ಕು ಪ್ರಕಾರದ ದಾನಗಳನ್ನು ಮಾಡುವ ವ್ಯವಸ್ಥೆ ಇತ್ತೆಂಬುದಕ್ಕೆ ಇಲ್ಲಿನ ದಾನ ಶಾಸನಗಳು ಸಾಕ್ಷಿಯಾಗಿವೆ. ಇಂದಿಗೂ ಧರ್ಮಸ್ಥಳದಲ್ಲಿ ನಡೆದುಬಂದಿರುವ ಸಂಪ್ರದಾಯವನ್ನು ಕಾಣಬಹುದು. ಧರ್ಮಸ್ಥಳದ ಮಂಜುನಾಥ ಶೈವ ಪಂಥಕ್ಕೆ ಸೇರಿದೆ. ಇದರ ಹೊಣೆ ಹೊತ್ತವರು ಜೈನರು. ಯಾವುದೇ ಜಾತಿ ಬೇಧವಿಲ್ಲದ ಧರ್ಮದ ಹೆಸರಿನಲ್ಲಿ ದಾನ ಪ್ರವೃತ್ತಿಯನ್ನು ನಡೆಸಿಕೊಂಡು ಬರುತ್ತಿರುವುದನ್ನು ಇಲ್ಲಿ ಕಾಣಬಹುದು. ಧರ್ಮದಿಂದ ಧರ್ಮಕ್ಷಯ, ತನ್ಮೂಲಕ ಮೋಕ್ಷ ಪ್ರಾಪ್ತಿ ಎಂಬುದು ಜೈನರ ನಂಬಿಕೆ. ಧರ್ಮದ ಹೆಸರಿನಲ್ಲಿ ಯಕ್ಷ ಯಕ್ಷಿಯರ ಆರಾಧನೆ, ನಂದೀಶ್ವರ ದ್ವೀಪದ ಕಲ್ಪನೆ, ನಾಗಾರಾಧನೆ ಇತ್ತೆಂಬ ಬಗ್ಗೆ ವಿವರವಾಗಿ ಮೂರ್ತಿಶಿಲ್ಪ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

ವಾಸ್ತುಕಲೆ ಅಧ್ಯಾಯದಲ್ಲಿ ವಾಸ್ತುಕೃತಿಯಾದ ಬಸದಿಗಳ ಕುರಿತು ವೈಶಿಷ್ಟ್ಯತೆಗಳನ್ನು ಹೇಳಲಾಗಿದೆ. ಚವ್ವೀಶ ತೀರ್ಥಂಕರ ಬಸದಿ, ನೇಮಿನಾಥ ಬಸದಿ, ಪಾರ್ಶ್ವನಾಥ ಬಸದಿ, ಚಂದ್ರನಾಥ, ಮಹಾವೀರ ಬಸದಿಗಳನ್ನು ತುಲನಾತ್ಮಕವಾಗಿ ನೋಡಿದಲ್ಲಿ ಚಂದ್ರನಾಥ ಬಸದಿಗಳು ಹೆಚ್ಚಿವೆ. ಇದಕ್ಕೆ ಕಾರಣ ಜ್ವಾಲಮಾಲಿನಿ ಪರೋಕ್ಷ ಕಾರಣವಾಗಿರಬಹುದು. ಜ್ವಾಲಮಾಲಿನಿ ಬಸದಿ ಇಲ್ಲಿರದಿದ್ದರೂ ಚಂದ್ರನಾಥನ ಯಕ್ಷಿ ಜ್ವಾಲಮಾಲಿನಿಯಾಗಿರುವುದರಿಂದ ಚಂದ್ರನಾಥ ತೀರ್ಥಂಕರರ ಜೊತೆಗೆ ಯಕ್ಷಿ ಪೂಜೆ ನಡೆಯುತ್ತದೆ. ಇಲ್ಲಿ ಮೂರು ಚಂದ್ರನಾಥ ಬಸದಿಗಳಿವೆ. ವಿದ್ಯಾದಿ ದೇವತೆಗಳಿಗೆ ಪ್ರತ್ಯೇಕ ಬಸದಿಗಳಿಲ್ಲದಿದ್ದರೂ ಚವ್ವೀಶ ತೀರ್ಥಂಕರ ಬಸದಿಯಲ್ಲಿ ಶ್ರುತಸ್ಕಂದ ಮತ್ತು ಸಂಸ್ಕೃತಿಯ ಪ್ರತ್ಯೇಕ ದುಂಡು ಶಿಲ್ಪವಿರುವುದರಿಂದ ವಿದ್ಯಾದೇವತೆಯನ್ನು ಈ ಬಸದಿಯಲ್ಲೇ ಪೂಜಿಸುತ್ತಿದ್ದರೆಂಬುದು ಸ್ಪಷ್ಟವಾಗಿದೆ.

ಒಟ್ಟಾರೆ ಇಲ್ಲಿನ ಬಸದಿಗಳನ್ನು ನೋಡಿದರೆ, ಎರಡು ಪ್ರಕಾರದ ಬಸದಿಗಳನ್ನು ನಾವು ಗುರುತಿಸಬಹುದು. ೧. ದೀರ್ಘ ಆಯತಾಕಾರ ಬಸದಿಯಲ್ಲಿನ ಪ್ರದಕ್ಷಿಣಾ ಪಥವನ್ನೊಳಗೊಮಡ ಚತುರಸ್ರ ಗರ್ಭಗೃಹ ೨. ದೀರ್ಘ ಆಯತಾಕಾರದ ಬಸದಿಯಲ್ಲಿನ ಪ್ರದಕ್ಷಿಣಾ ಪಥವನ್ನೊಳಗೊಂಡ ಆಯತಾಕಾರದ ಗರ್ಭಗೃಹ. ಒಳಪ್ರದಕ್ಷಿಣಾ ಪಥ ಮತ್ತು ಹೊರ ಪ್ರದಕ್ಷಿಣಾ ಪಥವಿರುವುದು ಇಲ್ಲಿನ ಇನ್ನೊಂದು ವಿಶೇಷತೆಯಾಗಿದೆ. ಹೆಚ್ಚಿನ ಮಟ್ಟಿಗೆ ಎಲ್ಲ ದೇವಾಲಯಗಳಲ್ಲಿ ಗರ್ಭಗುಡಿಯಿದ್ದಾಗ ಗರ್ಭಗುಡಿಯ ಮುಂದೆ ಅಂತರಾಳವಿರುತ್ತದೆ. ಆದರೆ ಇಲ್ಲಿ ಅಂತರಾಳ ಇರದೆ ಪ್ರದಕ್ಷಿಣಾಪಥವನ್ನೊಳಗೊಂಡ ಗರ್ಭಗುಡಿಯ ಮುಂದೆ ಅಂತರಾಳದ ಬದಲು ಉಪಮಂಟಪವಿದೆ. ಹೆಚ್ಚು ಜನರು ಇಲ್ಲಿ ನಿಂತು ಗರ್ಭಗೃಹದಲ್ಲಿನ ಪೂಜೆ ನೋಡಲು ಅನುಕೂಲವಾಗುವುದೆಂಬ ಭಾವನೆ ಇರಲು ಸಾಕು. ಹೊರಾವರಣದಲ್ಲಿ ಭಿತ್ತಿ ಇರದೆ ಸ್ತಂಭಗಳು ಮೇಲ್ಛಾವಣಿಯ ಭಾರ ಹೊತ್ತಿವೆ. ಇಲ್ಲಿನ ಇಳಿಜಾರಾದ ಮಾಡು ಇರುವ ಉದ್ದೇಶ ಹೆಚ್ಚಿನ ಮಳೆ ಮತ್ತು ಹವಾಮಾನಕ್ಕೆ ತಕ್ಕಂತೆ ರಕ್ಷಣೆ ಮಾಡಿದಂತಿದೆ.

ಜೈನಧರ್ಮದಲ್ಲಿ ದೇವರ ಬದಲಾಗಿ ತೀರ್ಥಂಕರರನ್ನು ಪೂಜನೀಯರನ್ನಾಗಿ, ಮಾರ್ಗದರ್ಶಕರಾಗಿ ಪೂಜಿಸುತ್ತಾರೆ. ತೀರ್ಥಂಕರರು ಪೂಜನೀಯರು ಅನುಕರಣೀಯರು ಎಂಬ ಭಾವನೆ ಇದೆ. ೨೪ ತೀರ್ಥಂಕರರೂ ಪೂಜನೀಯರೇ. ಹಿಂದೂಧರ್ಮದಲ್ಲಿ ಹಲವಾರು ದೇವತೆಗಳ: ಪೂಜೆ ಇದ್ದಂತೆ ಜೈನಧರ್ಮದಲ್ಲಿ ತ್ರಿಕಾಲ ತೀರ್ಥಂಕರರ ಕಲ್ಪನೆ ಇದೆ. ಧರ್ಮ ಯಾವುದೇ ಇರಲಿ, ಇದು ಸಂಸ್ಕೃತಿಯ ಬೇರಾಗಿದೆ. ತೀರ್ಥಂಕರರ ಕಲ್ಪನೆ ಇದೆ. ಧರ್ಮ ಯಾವುದೆ ಇರಲಿ, ಅದು ಸಂಸ್ಕೃತಿಯ ಬೇರಾಗಿದೆ. ತೀರ್ಥಂಕರರ ಮೂರ್ತಿಗಳು ಎಷ್ಟೇ ಇರಲಿ, ಹೆಸರುಗಳು ಸಾಕಷ್ಟು ಇದ್ದರೂ ‘ಎಕಂ ಸತ್, ವಿಪ್ರಾ ಬಹುಧಾ ವದಂತಿ’ ಸತ್ಯ, ಶಕ್ತಿ ಇಲ್ಲಿ ಒಂದೇ ಎಂಬುದನ್ನು ಪರಿಗಣಿಸಬೇಕು.

ತೀರ್ಥಂಕರರು ಪೂಜನೀಯರಾದರೂ, ಲೌಕಿಕ ಸುಖ ಸಂತೋಷಗಳನ್ನು ಕೊಡುವವರು ಜ್ವಾಲಮಾಲಿನಿ ಪದ್ಮಾವತಿ ಯಕ್ಷಿಯರು ಎಂಬ ಕಲ್ಪನೆ ಇದೆ. ಜ್ವಾಲಮಾಲಿನಿ ಮತ್ತು ಪದ್ಮಾವತಿ ಚಂದ್ರನಾಥ ಮತ್ತು ಪಾರ್ಶ್ವನಾಥನ ಯಕ್ಷಿಯರಾಗಿದ್ದಾರೆ. ತೀರ್ಥಂಕರರ ಜೊತೆ ಜ್ವಾಲಮಾಲಿನಿ ಮತ್ತು ಪದ್ಮಾವತಿ ಯಕ್ಷಿಯರಿಗೂ ಪೂಜೆ ಸಲ್ಲುವಂತಾಯಿತು. ಗೇರುಸೊಪ್ಪೆಯಲ್ಲಿದ್ದಂತೆ ಇಲ್ಲಿ ಪ್ರತ್ಯೇಕವಾಗಿ ಜ್ವಾಲಮಾಲಿನಿ ಶಿಲ್ಪಗಳಿಲ್ಲ. ಆದರೆ ಪದ್ಮಾವತಿಯ ಕಂಚಿನ ಮೂರ್ತಿ ಮತ್ತು ಎರಡು ಮೂರ್ತಿಶಿಲ್ಪಗಳು ಇಲ್ಲಿವೆ. ಹೀಗೆ ಇಲ್ಲಿ ಪದ್ಮಾವತಿ ಯಕ್ಷಿ ಆರಾಧನೆ ಇತ್ತು. ಜ್ವಾಲಮಾಲಿನಿ ಆರಾಧನೆಯೂ ಇತ್ತೆಂಬ ಬಗ್ಗೆ ಇಲ್ಲಿನ ಹೆಚ್ಚಿನ ಚಂದ್ರನಾಥ ಬಸದಿಗಳೇ ಸಾಕ್ಷಿಯಾಗಿವೆ. ಪಾಶ್ವನಾಥ ಮೂರ್ತಿಶಿಲ್ಪ ಮತ್ತು ನಾಗಶಿಲ್ಪಕ್ಕೂ ಇರುವ ಸಂಬಂಧವನ್ನು ವಿವರವಾಗಿ ಮೂರ್ತಿಶಿಲ್ಪದಲ್ಲಿ ಹೇಳಲಾಗಿದೆ. ಆದರೆ ಪಾಶ್ವನಾಥನ ಯಕ್ಷಿ ಪದ್ಮಾವತಿಯನ್ನೇ ನಾಗದೇವತೆಯಾಗಿ ಕಲ್ಪಿಸಿರಲು ಸಾಕು. ಏಕೆಂದರೆ ಪದ್ಮಾವತಿ ಮೂರ್ತಿಶಿಲ್ಪದಲ್ಲಿ ನಾಗಪಾಶವಾಗಿ ಆಯುಧ ಹಿಡಿದಿರುವುದು ಮತ್ತು ಪದ್ಮಾವತಿಯ ತಲೆಯ ಮೇಲಿನ ನಾಗ ಇರುವುದರಿಂದ ಇದು ನಾಗದೇವತೆಯೆಂಬ ನಂಬಿಕೆ ಇದೆ. ಇದೊಂದು ಕುತೂಹಲಕಾರಿ ವಿಷಯ. ಒಟ್ಟಾರೆ ಪಾರ್ಶ್ವನಾಥ ಪದ್ಮಾವತಿ ನಾಗಶಿಲ್ಪಕ್ಕೆ ಮಹತ್ವದ ಸ್ಥಾನವಿತ್ತೆಂಬುದು ಸ್ಪಷ್ಟವಾಗಿದೆ.

ಕಲಾ ಸೌಂದರ್ಯವೆಂಬುದು ಒಂದೇ ಮಾಧ್ಯಮಕ್ಕೆ ಸೀಮಿತವಾಗಿಲ್ಲ ಎಂಬುದನ್ನು ಲೋಹಶಿಲ್ಪಗಳು ಸಾಬೀತುಪಡಿಸಿವೆ. ಹಾಡುವಳ್ಳಿಗಿಂತಲೂ ಹಾಡುವಳ್ಳಿಯದೇ ಆದ ಲೋಹಶಿಲ್ಪಗಳು ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದ, ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿದೆ. ಹಾಡುವಳ್ಳಿಯಲ್ಲಿ ಬಾಹುಬಲಿ ವಿಗ್ರಹವಿರದಿದ್ದರೂ ಬಾಹುಬಲಿ ಪೂಜೆ ಅಸ್ತಿತ್ವದಲ್ಲಿತ್ತೆಂಬುದಕ್ಕೆ ಈ ಕಂಚಿನ ವಿಗ್ರಹ ಸಾಕ್ಷಿಯಾಗಿದೆ. ಇಲ್ಲಿನ ಕಂಚಿನ ತೀರ್ಥಂಕರ ಮೂರ್ತಿಶಿಲ್ಪದ ಪೀಠಭಾಗದಲ್ಲಿ ಅಥವಾ ಹಿಂಭಾಗದಲ್ಲಿ ತೀರ್ಥಂಕರ ಸಂಖ್ಯೆ ಬರೆದಿರುವುದರಿಂದ ಲಾಂಛನವಿರದಿದ್ದರೂ ಅಂಕೆ ಸಂಕೇತದಿಂದ ಎಷ್ಟನೇ ತೀರ್ಥಂಕರ ಎಂಬುದನ್ನೂ ಸೂಚಿಸಲು ಅನುಕೂಲವಾಗಿದೆ. ಇದೊಂದು ಇಲ್ಲಿನ ವಿಶೇಷತೆಯಾಗಿದೆ. ಲೋಹಕಲೆ ಶಾತವಾಹನ ಕಾಲದಲ್ಲೇ ಆದರೂ, ಲೋಹಶಿಲ್ಪಕಲೆ ಪರಾಕಾಷ್ಠತೆ ತಲುಪಿರುವುದು ವಿಜಯನಗರ ಕಾಲದಲ್ಲಿ. ಇದಕ್ಕೆ ಹಾಡುವಳ್ಳಿಯಲ್ಲಿ ಲೋಹ ಮೂರ್ತಿಗಳು ಶಿಲ್ಪಗಳು ನಿದರ್ಶನಗಳಾಗಿವೆ.

ಇಲ್ಲಿನ ಇನ್ನೊಂದು ವಿಶೇಷತೆ ಕಂಚಿನ ಮಾನಸ್ತಂಭ ರಚನೆ. ಕಂಚಿನ ಮಾನಸ್ತಂಭ ರಚನೆ ಗೇರುಸೊಪ್ಪೆಯಲ್ಲೂ ಇತ್ತೆಂಬುದು ಶಾಸನದ ಉಲ್ಲೇಖನವಿದೆ. ಆದರೆ ಪ್ರಥಮವಾಗಿ ಕಂಚಿನ ಮಾನಸ್ತಂಭ ರಚನೆ ಆಗಿರುವುದು ಹಾಡುವಳ್ಳಿಯಲ್ಲೇ ! ಇದೊಂದು ವಿಶೇಷವಾಗಿ ಗಮನಿಸಬೇಕಾದ ಅಂಶವಾಗಿದೆ.

ಶಾಸನ ಶಿಲ್ಪಗಳಿಗೆ ಸಂಬಂಧಿಸಿದಂತೆ ಧಾರ್ಮಿಕ ಕಟ್ಟಳೆ ಇರುವುದಿಲ್ಲ. ಆದರೆ ಕೆಲವೊಂದು ಶಾಸನವನ್ನೊಳಗೊಂಡ ಕಂಚಿನ ಶಿಲ್ಪಗಳು ಧಾರ್ಮಿಕ ಕಟ್ಟಳೆ ಒಳಗೊಂಡಿವೆ. ಆದರೆ ಈ ಶಿಲ್ಪಗಳು ಶಾಸನವನ್ನೊಳಗೊಂಡಾಗ ಶಾಸನಶಿಲ್ಪವೇ ಆದರೂ ಕಂಚಿನ ಪ್ರತಿಮಾ ಭಾಗವನ್ನು ಪ್ರತ್ಯೇಕವಾಗಿ ತೋರಿಸುವ ದೃಷ್ಟಿಯಿಂದ ಮತ್ತು ವಸ್ತುಸಂಗ್ರಹಾಲಯದ ಮೂರ್ತಿಗಳನ್ನು ಒಂದೆಡೆ ಇಡುವ ದೃಷ್ಟಿಯಲ್ಲಿ ಇದನ್ನು ಲೋಹಶಿಲ್ಪ ಕಲೆಯ ಅಧ್ಯಾಯದಲ್ಲೇ ಅಳವಡಿಸಲಾಗಿದೆ.

ಪ್ರಸ್ತುತ ಹಾಡುವಳ್ಳಿಯಲ್ಲಿ ಕಂಚಿನ ಪ್ರತಿಮೆ ತ್ರಿಕಾಲ ತೀರ್ಥಂಕರ ಮತ್ತು ಎರಡು ಶ್ರುತಸ್ಕಂದವಿದೆ. ತ್ರಿಕಾಲ ತೀರ್ಥಂಕರ ಅಂದರೆ ಮೂರು ಕಾಲಗಳಲ್ಲಿ ತೀರ್ಥಂಕರರ ಮತ್ತು ವಿದ್ಯಾದೇವತೆಯ ಪರಿಕಲ್ಪನೆ ಇತ್ತೆಂಬುದು ಸ್ಪಷ್ಟವಾಗಿದೆ. ವಿದ್ಯಾದೇವತೆ ಪರಿಕಲ್ಪನೆ ಇತ್ತೆಂಬ ಬಗ್ಗೆ ಇಲ್ಲಿನ ಪ್ರತ್ಯೇಕ ಸರಸ್ವತಿಯ ದುಂಡು ಶಿಲ್ಪವೂ ಸಾಕ್ಷಿಯಾಗಿದೆ.

ಶಾಸನಶಿಲ್ಪಗಳು ಮತ್ತು ಸ್ಮಾರಕ ಶಿಲ್ಪಗಳ ಅಧ್ಯಾಯದಲ್ಲಿ ಶಾಸನೋಕ್ತ ಶಿಲ್ಪಗಳನ್ನು ಪ್ರತ್ಯೇಕವಾಗಿಯೇ ತೋರಿಸಲಾಗಿದೆ. ಶಾಸನಗಳು ಇರದ ಶಿಲ್ಪಗಳು ಸ್ಮಾರಕ ಶಿಲ್ಪಗಳು. ಅಂದರೆ ಸ್ಮರಣೆಯ ಶಿಲ್ಪಗಳಾಗಿವೆ. ವೀರನ ಅಥವಾ ಸತಿಯ ಸ್ಮರಣೆಗಾಗಿ ನಿಲ್ಲಿಸಿದ ಶಿಲ್ಪಗಳು ಸ್ಮಾರಕ ಶಿಲ್ಪಗಳಾಗಿವೆ. ಇವು ಅಂದಿನ ಕಾಲದ ಸ್ಮಾರಕ ಶಿಲ್ಪಗಳಷ್ಟೇ ಅಲ್ಲ. ಕಲಾ ಸೌಂದರ್ಯದ ಸಾಂಸ್ಕೃತಿಕ ಪ್ರತಿಬಿಂಬಗಳಾಗಿವೆ. ವ್ಯಕ್ತಿ ಸ್ಮರಣೆಗಾಗಿ ಕೆತ್ತಿದ ಈ ಶಿಲ್ಪಗಳು ಮುಂದೆ ಕಂಚಿನ ವ್ಯಕ್ತಿಶಿಲ್ಪಗಳನ್ನು ಮಾಡಲು ಪ್ರೇರಣೆ ನೀಡಿದಂತಾಗಿದೆ.

ಜೈನ ದಾನಶಾಸನಗಳಲ್ಲಿ ಕೆಲವೊಂದು ಶಾಸನೋಕ್ತ ಉಬ್ಬುಶಿಲ್ಪಗಳಿವೆ. ಇನ್ನು ಕೆಲವು ದಾನಶಾಸನಗಳು ಪ್ರಸ್ತುತ ನೋಡಲು ಸಿಗದಿದ್ದರೂ ಜೈನ ದಾನಶಾಸನಗಳಲ್ಲಿ ಮೇಲ್ಭಾಗಕ್ಕೆ ಹೆಚ್ಚಿನಮಟ್ಟಿಗೆ ಪದ್ಮಾಸನದಲ್ಲಿ ತೀರ್ಥಂಕರ ಬಿಂಬಗಳು ಇರುತ್ತವೆ. ಹಾಡುವಳ್ಳಿಯಲ್ಲಿ ಜೈನದಾದನ ಶಾಸನಗಳು, ನಿಸಿದಿಗಲ್ಲುಗಳು, ಮಹಾಸತಿಕಲ್ಲುಗಳು ಇಲ್ಲಿನ ಸಾಂಸ್ಕೃತಿಕ ವೈಭವವನ್ನು ಸಾರಿ ಹೇಳುವಂತಿದೆ.

ಬಸದಿಗಳು, ಮೂರ್ತಿಶಿಲ್ಪಗಳು, ಲೋಹಶಿಲ್ಪಗಳು, ಶಾಸನಶಿಲ್ಪಗಳು ಮತ್ತು ಸ್ಮಾರಕಶಿಲ್ಪಗಳಿಗೆ ಪೂರಕವಾಗಿ ಶಾಸನಗಳು ಇಲ್ಲಿನ ಜನಜೀವನದ ಮೇಲೆ ಬೆಳಕನ್ನು ಚೆಲ್ಲಿವೆ. ಲಭ್ಯವಾದ ೩೧ ಶಾಸನಗಳಲ್ಲಿ ನಾಲ್ಕು ಶಾಸನಗಳು ನಿಷಿಧಿ ಶಾಸನಗಳಾಗಿವೆ. ಒಂಬತ್ತು ವೀರಗಲ್ಲುಗಳು ಮತ್ತು ಹದಿನೈದು ದಾನ ಶಾಸನಗಳು, ಉಳಿದವು ಇತರೆ ಶಾಸನಗಳಾಗಿವೆ. ರಾಜಕೀಯ ಇತಿಹಾಸವನ್ನು ಕಟ್ಟಲು ಶಾಸನಗಳು ಪ್ರಧಾನ ಆಕರಗಳಾಗಿವೆ. ಇವು ಇತಿಹಾಸದ ಆಕರಗಳಷ್ಟೇ ಅಲ್ಲ. ಅಂದಿನ ಜನಜೀವನದ ಪ್ರತಿಬಿಂಬಗಳಾಗಿವೆ. ಅಂದಿನ ಜೀವನದ ಸಾಂಸ್ಕೃತಿಕ ವೈಭವವನ್ನು ಇಲ್ಲಿನ ಸ್ಮಾರಕಗಳಲ್ಲಿ ಕಾಣಬಹುದು. ಕೆಂದ್ರ ಪುರಾತತ್ವ ಸರ್ವೇಕ್ಷಣಾಲಯದಡಿ ಬರುವ ಒಂದು ಸ್ಮಾರಕ ಬಿಟ್ಟರೆ ಉಳಿದೆಲ್ಲ ಸ್ಮಾರಕಗಳಿಗೆ ರಕ್ಷಣೆ ಸಾಲದು. ಇಂತಹ ಸ್ಮಾರಕಗಳು ಕರ್ನಾಟಕದಲ್ಲಿ ಸಾಕಷ್ಟಿವೆ. ಅಂದಿನ ಪ್ರತಿಬಿಂಬವನ್ನು ಉಳಿಸಲು ಸ್ಮಾರಕವನ್ನು ಅಂದಿನಂತೆಯೇ ರಕ್ಷಿಸುವ ಅವಶ್ಯಕತೆ ಇದೆ. ಈ ಸಂಪತ್ತನ್ನು ಸರ್ಕಾರ ಮಾಡುವುದೆಂದು ಭಾವಿಸದೇ ಸ್ಥಳೀಯವಾಗಿ ರಕ್ಷಿಸಿದಲ್ಲಿ ನಮ್ಮ ಸಂಪತ್ತನ್ನು ನಾವು ರಕ್ಷಿಸಿದಂತಾಗುತ್ತದೆ. ಇದು ಎಲ್ಲರ ಆದ್ಯ ಕರ್ತವ್ಯ.