ವಿಕಸಿತವಾಗಲಿ ಬಾಳಿನ ಪಂಕದಿ
ನವಜೀವನ ಕಮಲ

ಮೂಡು ದೆಸೆಯೊಳುಷೆಯಾಡಿ ಬರೆ
ಖಗಕುಲ ಕಂಠದ ಒಸಗೆವರೆ
ತುಂಬಲು ಜಗವನು, ನಲಿದು ತಿರೆ
ರಸರೋಮಾಂಚನವಾಗುತಿರೆ-

ಗಿರಿಗಳು ಮುಗಿಲನು ಮುಡಿದು ನಿಲೆ
ತಿರೆ ಹಸಿರುಡೆಯಲಿ ರಾಜಿಸಿರೆ
ಸೃಷ್ಟಿಯು ನೆಯ್ದಿರೆ ಹೊಸಜೀವದ ಬಲೆ
ಚೈತನ್ಯದ ಬೆಳಕಾಡುತಿರೆ-

ಬಯಕೆ ಭೃಂಗಗಳು ಝೇಂಕರಿಸಿ
ಸುಖಮಕರಂದಕೆ ನಿಡುಬಯಸಿ
ಹಾರಾಡಿರೆ, ಹೊಂಬಿಸಿಲನು ಹರಿಯಿಸಿ
ನೇಸರು ಮೆಲ್ಲನೆ ಮೂಡಿಬರೆ-

ಮುಗಿಲಿನ ದುಗುಡವು ಹರಿದ ತೆರ
ನೀಲಾಂಬರವದು ಶೋಭಿಸಿರೆ,
ಸುಂದರ ಸುಮದಳ ದಳಗಳ ಬಿರಿಯಿಸಿ
ಜ್ಯೋತಿರ್ಮೂರ್ತಿಯು ಮೂಡಿಬರೆ-