ಪಾಂಡವ್ರು ಕೌರವ್ರು ಪಂಥಕೆ ಪಗಡೆಯಾಡಿ
ಪಾಂಡವ್ರು ಸೋತೆ ನಿಲುವಾರು
ಪಂಚಪಾಂಡವ್ರು ನವವಾಸಕ್ಹೋಗುವಾಗೆ
ಸತಿಹೋಗಿ ಸೆರಗ ಹಿಡಿದಾಳು
ಸತಿಹೋಗಿ ಸೆರಗ ಏನೆಮದೆ ಹಿಡಿದಾಳು
ನಾ ಬತ್ತೆ ಬಿಲ್ಲ ನೆಳಲಡ್ಡೆ
ನೀನು ಬಪ್ಪುಕೆ ಸತಿಯೆ ಹೊಟ್ಟಿಗಾರು ತಿಂಗಳು
ಹೆತ್ತರಿನ್ನೆಲ್ಲೆ ಸಲುಗಿ ಸೌಭದ್ರಿ
ಹನ್ನೆರಡು ವರ್ಷ ವನವಾಸ ಗೈದಿಕು ಬತ್ತೆ
ನೀನಿರು ಅಣ್ಣಯ್ನ ಅರಮನಿಲೆ
ಅತತಿಯ ಮರನಡಿ ಹೆತ್ತು ತೊಟ್ಟಿಲ ಕಟ್ಟಿ
ಅಲ್ಲೆ ಕಾನೆಲಿ ಮುರಿದ್ಹಾಸಿ ಸ್ವಾಮಿ ಕೇಳಿ
ಅಲ್ಲೆ ಸೂತುಕನೆ ಕಳಕಂಬೊ ಸ್ವಾಮಿ ಕೇಳಿ
ಅಲ್ಲೆ ಪುತ್ರಯ್ನ ಸಲಗುವೋ
ನಾಡರ ಕೇರೀಲ್ ಹಾಲುಂಟು
ಬೇಡಿ ತಂದ್ ಹಾಲ್ ಕುಡಿಸುವೆ ಸ್ವಾಮಿ ಕೇಳಿ
ಅಲ್ಲೆ ಪುತ್ರನ ಸಲುಗುವೆ
ನಾ ಬತ್ತೆ ಬಿಲ್ಲ ನಳಲಡ್ಡೆ

ನಿ ಹೋಗುಕೆ ತಂಗಿ ಆರು ತಿಂಗಳ ಬಸಿರಿ
ಬಾ ತಂಗಿ ನನ್ನ ಜೊತೆಯಲ್ಲಿ
ಹೆತ್ತೆಮ್ಮ ಹಾಲುಂಟು ಹತ್ತಿ ಹಾಸುಗೆಯುಂಟು
ಬಾ ತಂಗಿ ನನ್ನ ಜೊತೆಯಲ್ಲಿ
ಇಷ್ಟೆಂಬ ಮಾತ ಮಾತ ಕೇಂಡಳ ಸೌಬದ್ರಿ
ಬಂದಳಣ್ಣಯ್ಯ ಅರಮನಿಗಿ

ಕಂಡೂಗಿ ಬಯಲಲ್ಲಿ ಕಂಡಿರಿಚೋಚಿಗ
ಗಂಡನ ತಂಗಿ ಬರುವಾಳೆ ಅಂಬುದನೋಡಿ
ತೊಂಡಿ ಚಪ್ಪರಕೂ ನಡೆದಾಳು ಅತ್ತಿಗೆ
ಕಾಯಿ ಬಚ್ಚಿ ಎಲ್ಲಿಯ ಕ್ಯೋದಾಳೆ ಅವಳೀಗ
ಕುಂಬಾರ ಕೇರೀಗೆ ನಡೆದಾಳು ಅತ್ತಿಗೆ
ಒಂದ್ ಮಡಕೀಲು ಎರಡು ಅರೆ ಮಾಡು ಕುಂಬಾರಣ್ಣ
ಹೇಳಿದ ಕಿರಿಯ ಕೊಡುವೆನು ಕುಂಬಾರಣ್ಣ
ಗಂಡನತಂಗಿ ಬಯಕಿಗೆ

ಅಷ್ಟೊಂದ ಮಾತ ಹೇಳಿಕೆ ಅವಳೀಗ
ಹೋದಾಳು ಅಚಾರಿ ಅರಮನಿಗೆ ಅತ್ತಿಗೆ
ಆಚಾರಿ ಗಂಡಿನ ಕರೆದಾಳೂ
ಆಚಾರಿ  ಗಂಡಿನ ಏನೆಂದೆ ಕರೆದಾಳು
ಒಂಚು ಚಿಪ್ಪಿನಲಿ ಎರಡು ಅರೆಮಾಡು
ಒಂದು ಅರೆಯಲಿ ಮಾಡೀಳು ಪಾಯಸು ಹೋಳುಗಿ
ಮತ್ತೊಂದು ಅರೆಯಲ್ಲಿ ಹುಳಿಗಂಜಿ ಮಾಡ್ಕೊಂಡು
ಗಂಡನ್ನು ಮೈದುನಿಯ ಕರೆದಾಳೆ
ಗಂಡನಿಗೆ ಬಡಸೀಳು ಹೋಳೂಗಿ ಪಾಯಸ
ಮೈದುನಿಗೆ ಬಡಸೀಳು ಹುಳಿಗಂಜಿ
ಐದು ಜನ ಪಾಂಡವ್ರಿಗೆ ಅಟುಂಡ ತಂಗಿ ನೀಣು
ಇಂಥ ಹೋಳುಗೀಯ ಮೆಲುದೀಯ
ಐದು ಜನ ಪಾಂಡವ್ರಿಗೆ ಅಟ್ಟುಂಡ ತಂಗಿ ನಾನು
ಇಂಥ ಹುಳಿಗಂಜಿ ಮೆಲಲಿಲ್ಲ
ನನ್ನಬ್ಬಿ ಮಗನಾರೆ ನನಗೂ ಅಣ್ಣನಾರೆ
ಮುಟ್ಟಿ ನೋಡ್ ಮೂರ ಬೆರಳಲ್ಲಿ ಅಣ್ಣಯ್ಯ
ತಂಗಿ ಕೊಟ್ಟ ಹುಳಿಗಂಜಿ ಮೇಲದೀನ್ ಅವ್ಳಣ್ಣ
ಚೂರಿ ಹೊರಿಯ ಎಳಿದಾನೆ

ಅವರವರು ಮಾಡಿದ ಪಾಪ ಅವರವ್ರು ಉಣ್ಣಲಿ
ನೀ ಬಾ ಭಾರತದ ಜಗುಲಿಗೆ ಅಣ್ಣಯ್ಯ
ಭಾರತದ ಪುಸ್ತಕನೇ ತೆಗೆದೋದು
ಭಾರತದ ಪುಸ್ತಕನೇ ತೆಗೆದೋದು ಸಮಯದಲ್ಲಿ
ತಂಗಿಗೆ ನಿದ್ದುರಿಯೆ ಕವಿದಾವೋ
ತಂಗಿನೆ ನಿದ್ದುರಿಯೇ ಕವಿದಂಥ ಸಮಯದಲ್ಲಿ
ಹೊಟ್ಟೆಲಿದ್ದ ಶಿಶುವೇ ಹೂಂ ಎಂತು
ಹೊಟ್ಟೇಲಿದ್ದ ಶಿಶುವೇ ಹೌದಂಬ ಸಮಯದಲ್ಲಿ
ಹುಟ್ಟೀರಿ ರಾಜ್ಯ ಉಳಿಸೋದೆ…
ಏಳು ತಲೆಯನು ನಾನು ಏಳೂ ಭುಜದವ ನಾನು
ಏಳೂರಿಗೊಂದೂರು ಉಳಿಸೂವೆ ಮಾವಯ್ಯ
ಮಾಯಿ ಮಾಡಿದ ಪಾಪ ಸಲಿಸೂವೆ
ಇಷ್ಟೆಂಬ ಮಾತ ಕೇಳ್ದನು ಶ್ರೀಕೃಷ್ರಣ
ಚಕ್ರದಲಿ ಶಿಶುವು ತಲೆ ಕಡಿದ