ಅಪ್ಪಯ್ಯ ಮಾಡಿಸಿಕೊಟ್ಟ ಹತ್ತು ತೂಕದ ಚಿನ್ನ
ಮಾವಯ್ಯ ಮಾಡಿಸಿದ ಮಣಿಸರು ಹ್ಯಾಕಂಡು
ಆಡೂ ಚಪ್ಪರಕೆ ನಡಿದಾಳು ಕುಂತಿದೇವಿ
ಆರೂ ಗೆಣತಿಯರನೆ ಕರೆದಾಳು ಕುಂತಿದೇವಿ
ಒಂಭೈನೂರ ಚಂಡು ಗೆಲಿದಾಳು
ಒಂಭೈನೂರ‍್ ಚಂಡು ಗೆಲ್ಲುವಂಥ ಸಮಯದಲ್ಲಿ
ಸೂರ್ಯದೇವ್ರು ದೃಷ್ಟಿ ಇಡುವಾರು 
ಸೂರ್ಯದೇವ್ರ ದೃಷ್ಟಿ ಇಡುವಂಥ ಸಮಯದಲ್ಲಿ
ಆರೂ ಗೆಣತಿಯರನೆ ಕರೆದಳೆ
ಆರು ಗೆಣಗಿಯರನೆ ಏಎಂದೆ ಕರೆದಾಳೆ
ಹೋಯ್ ಹೇಳುತಾಯಮ್ಮಗ ವಸಗಿಯ
ಅಷ್ಟೊಂದು ಮಾತ ಕೇಂಡರು ಗೆಣತಿಯರು
ಹೋದರು ತಾಯಮ್ಮನ ಅರಮನೆಗೆ
ಎಂದೂ ಬಾರದ ಗೆಣತಿಯರೆ ಇಂದೇಕೆ ಬಂದಿರಿ
ಬಂದಕಾರವಣ ಅರುಹಿರಿ
ಎಂದು ನಾವ್ ಬರಲಿಲ್ಲ ಎಂತೂ ನಾವ್ ಬರಲಿಲ್ಲ
ಕುಂತಿ ಮೈನೆರೆದು ತಿರುಗೀಳು
ಹತ್ತುತಿಂಗಳು ಬಾಳಿ ಅಡೂಕ್ಹೋದಳು ಬಾಲಿ
ಕುಂತಿ ನನಕುಲಕು ಹಳುತಂದೆ ಎನ್ನತ್ಹೇಳಿ
ಕಡಗಣ್ಣಲ್ಹನಿಯ ಸೆಡಿದಾಳೆ
ಜಲಗಾರನ ಕರೆಸಿಹಿತ್ಲ ಬಾಮಿ ತೋಡಿ
ಕುಂತೀನ ಅಲ್ಲಿ ಬರ ಹೇಳೀ
ಕುಂತೀನ ಅಲ್ಲಿ ಬರಹೇಳಿ ತಾಯಮ್ಮ
ಇಲ್ಮೀಯೆ ಕುಂತಿ ಹನಿ ನೀರ
ಈನೀರ ಮೀಯುಕೆ ಕಪ್ಪಿದಂಡ್ಹೊಯ್ವದೆ
ಇಲ್ ಮಿಂದು ಮಡಿಯು ಒಗಿಲಾರೆ
ಇಲ್ ಮಿಂದು ಮಡಿಯ ಒಗಿಲಾರೆ ತಾಯಮ್ಮ
ನಾಹೋಪೆ ಹರಿವ ಜಲಧಿಗೆ
ಜಲಗಾರನ ಕರೆಸಿ ಹಿತ್ತಲ ಕೆರಿಯ ತೋಡಿ
ಇಲ್ಲಿ ನೀರ ಮೀಯುಕೆ ವಳ್ಳಿದಂಡ್ ಹೊಯ್ವದೆ
ಇಲ್ ಮಿಂದು ಮಡಿಯ ಒಗಿಲಾರೆ ತಾಯಮ್ಮ
ನಾ ಹೋಪೆ ಹರಿವ ಜಲಧಿಗೆ

ಅಷ್ಟೊಂದು ಮಾತ ಕೇಂಡಳೆ ತಾಯಮ್ಮ
ಎಳ್ಜನ ಬೋಯಿಯರನ ಬರಹೇಳಿ ಕುಂತಿಯ ತಾಯಿ
ಬಿಟ್ ಬನ್ನಿ ಕುಂತಿ ಜಲಧಿಗೆ
ಅಷ್ಟೊಂದು ಮಾತ ಕೇಳ್ದಳೇ ಕುಂತಿ ದೇವಿ
ದಂಡುಗಿ ಮೇಲೆ ಏರಿಕೂತ್ಲೆ ಕುಂತಿದೇವಿ
ಏಳ್ಜನ ಬೊಯಿಯರ ಹೊಗಲೇರಿ ಕುಂತಿಯ ದೇವಿ
ಬಿಟ್ಟೀರೆ ಹರಿವ ಜಲದೀಯೆ ಕುಂತಿಯ ದೇವಿಯ
ಮುಳುಕಿ ಮಿಂದಳೆ ಹನಿ ನೀರ ಕುಂತಿದೇವಿ ಮೂರು ಕಲ್ಲು ಮಂತ್ರಿಸಿ ಇಡುವಾಳೆ
ಬೆಳಗಾನ ಉಟ್ಟುಕೊಂಡು ಬೆಳುದು ಮುಸಕ್ಹಾಕ್ಯಂಡು
ಬೆಳಿ ಮುಗುಲೊಳಗೆ ಬರುವಾನೆ ಸೂರ್ಯದೇವ್ರು
ಕೆಟ್ಟ ಬೆರೆಳೆಂದೇ ಕತ್ತರಿಸಿ ಹೆರಗಿಟ್ಟೆ ಮತ್ತೇ ಆ ನೆರಳೆ ನೆರೆದಾವು
ಮತ್ತೇ ಆ ಬೆರಳೆ ನೆರೆದಾವು ಕುಂತಿ ದೇವಿ
ಮುಳುಕಿ ಮಿಂದಾಳೆ ಹನಿ ನೀರ ಕುಂತಿ ದೇವಿ ಮೂರು ಕಲ್ಲು ಮಂತ್ರಿಸಿ ಇಡುವಾಳೆ
ಕರಿದಾನೆ ಉಟ್ಟುಕೊಂಡು ಕರಿದು ಮುಸುಕು ಹ್ಯಾಕಂಡು
ಕರಿ ಮೊಗುಲೊಳಗೆ ಬರುವಾನೆ ಸೂರ್ಯದೇವ್ರು
ಕರಿಮುಗುಳೊಳಗೆ ಬರುವಾನೆ
ಕೆಟ್ಟ ಬೆರಳೆಂದೇ ಕತ್ತರಿಸಿ ಹೆರಗಿಟ್ಟೆ
ಮತ್ತೇ ಆ ಬೆರಳೆ ನೆರೆದಾವು
ಮತ್ತೇ ಆ ಬೆರಳೆ ಬೆರೆದಾವು  ಈ ಮನಿ
ತಾಯಮ್ಮನ ಕೈಯ ಮೊಸರನ್ನ
ತಾಯಮ್ಮನ ಕೈಯ ಮೊಸರನ್ನ ತಿನಕೆಂದು
ಖಾತುರಿ ನನ್ನ ಮನದಲ್ಲು
ತಾಯಮ್ಮನ ಕೈಯ ಕರುಜಿಗಿ ತಿನಕೆಂದು
ಖಾತುರಿ ನನ್ನ ಮನದಲ್ಲು
ಅಷ್ಟೊಂದು ಮಾತ ಹೇಳಿದ ಕುಂತಿದೇವಿ
ದಂಡುಗಿ ಮೇಲೆ ಏರಿ ಕುಂತ್ಲ
ದಂಡುಗಿ ಮೇಲೆ ಏರಿ ಕುಂತ್ಲ  ಕುಂತಿದೇವಿ
ಎಳು ಜನ ಬೋಯಿಯರ ಹಗಲೇರಿ
ಅಗಳ ನೊಡೀರೆ ಬಹು ಭಾರಿ
ಕಟ್ಟಿದ ಮುಡಿಚಂಡಿ ಉಟ್ಟ ಪಟ್ಟೆ ಚಂಡಿ
ಸುಮ್ಮನೆ ಬೋಯಿರೆ ಹೊರಡೇಳಿ

ಅರಿದಿದ್ದ ಪ್ರಾಯದಲ್ಲಿ ಕರ್ಣ ಹುಟ್ಟಿದನೆಂದು
ನಾಚಿಕೆ ಬಂದೋ ಕುಲಕೆಲ್ಲ ಕುಂತಿದೇವಿ
ಬೀಸಿ ಸಮುದ್ರಕೆ ಒಗೆದಾಳು
ಬಿಸಿ ಸಮುದ್ರಕೆ ಒಗೆದು ಏನಂದಾಳ
ಐರಾಮೀನಾಗಿರೂ ಅಂಬಿಗರಣ್ಣ ಹಿಡಿದು ತಪ್ಪ
ಹಾಸಾ ಕಲ್ಲಾಯೀರೋ ಮಡಿವಾಲ ಮಡಿ ಒಗೆವ
ದಾಸನ ಮರವಾಗಿ ಬೆಳಿಮಗನೆ
ದಾಸನ ಮರವಾದರೂ ದೇವ್ರಿಗೆ ಹೂ ಕೊಯ್ವರ
ಕಾಸನ ಮರವಾಗಿ ಬೆಳಿ ಮಗನೆ
ಕಾಸನ ಮರವಾದರೂ ಹೂಟಿಕೊಲ್ ಕಡುವರು
ಹೊದ್ದನ ಮರವಾಗಿ ಬೆಳಿ ಮಗುವೆ