ಬಿಳಿ ಎಲಿ ಬೆಟ್ಟಡಿಕೆ ಕೈಯಲ್ಲಿ ಮೆಲಸೀರ
ತೊಡಿ ಮ್ಯಾಲೆ ನಿದ್ದುರಿಯ ಗೈಸೀರ‍್ ಕಷ್ಟ ದೇವ್ರು
ತೊಡಿ ತಪ್ಸಿ ಸೂಳಿಯ ಮನಿಗ್ಹೋರ ರುಕ್ಮಿಣಿ ದೇವಿ
ದಡಬಡ ಮಂಚ ಇಳಿದಳ ರುಕ್ಮಿಣಿ ದೇವಿ
ದೋಣಿ ಕಡಿಗಾಗಿ ನಜಡೆದೀಳ
ಕುಲದಲ್ಲಿ ಅಂಬಿಗರಣ್ಣ ಜಾತಿಯಲ್ಲಿ ಮೊಗವೀರ ಗಂಡೆ
ಇಲ್ಲೊಬ್ರೂ ದೋಣಿ ಗಳದಧೀರ
ದೋಣಿಯ ಕಡಿನಲ್ಲಿ ನೂರಾರು ಮಂದಿಯೆ
ಯಾರೆಂದು ಕುರುವ ಹಿಡಿವುದೇ
ರಸಬಳ್ಳಿ ತಿಂದೀರ ರಜ ಕೆಂಪು ಉಗಿದೀರು
ಅವರೇ ಕಾಣ್ ನನ್ನ ಪುರುಷರು
ರಸಬಳ್ಳಿ ತಿಂದವರಿದ್ರ ರಜಕೆಂಪು ಉಗದವರಿದ್ರ
ಅವರೆಲ್ಲ ನಿನ್ನ ಪುರುಷರೇ 

ಮಡದಿ ಬಂದ ಬರ ಅತಿ ದುರ ನೋಡಿದ
ಅಲ್ಲೆ ತನ್ನಕುರುವೇ ಬದಲಿಸಿ ಕೃಷ್ಣ ದೇವ್ರು
ರುಕ್ಮಿಣಿ ಅರಮನೆಗೆ ಬರುವಾರು
ಈರೇಳು ಲೋಕ ತಿರ‍್ಗಿ ಪಾರಿಜಾತವ ತಂದೆ
ಅಡವೀಲಿ ಸತ್ಯಭಾಮೆ ಮನಿಯಿಂದ ಆ ಹೂಗು
ಅರಳಿತ್ತು ರುಕ್ಮಿಣಿ ಮುಡಿಮ್ಯಾಲೆ
ಇಂದ್ರಲೋಕಕ್ಕೆ ಹೋಗಿ ಪಾರಿಜಾತನ ತಂದು
ನಟ್ಟೀರು ಸತ್ಯಭಾಮೆ ವನದಲ್ಲಿ ಆ ಹೂಗು
ಇರುವುದು ರುಕ್ಮಿಣಿ ಮುಡಿಮೇಲೆ

ಅತ್ತಿಯ ಹೂವೆ ಕಂಡೆನೆಂಬವರಿಲ್ಲ
ಶ್ರೀ ಕೃಷ್ಣ ಸ್ವಾಮಿ ಪರಪಂಚೊ ಹೊಯ್ ಬರುವಾಗ
ಅತ್ತಿ ಹೂ ಅಲದೇ ಕೊಡಿಯಾದೋ ಕೃಷ್ಣ ಸ್ವಾಮಿ
ಮಡದಿ ರುಕ್ಮಿಣಿನ ಕರೆದಾರೊ ಏನೆಂದೆ
ಭಾಗ್ಯದ ಹೂಗ ಮುಡಿಬಾರೆ

ಸಕಲಾವತಿ ಊರಲ್ಲೆ ಅತ್ತಿ ಮಕ್ಕಳಿರುವರೆ
ಅಲ್ಲೆಲ್ಲು ರಾಜು ಸುಗುಣವು
ನಿನ್ನೆತ್ತಿ ಮಕ್ಕಳ ಕುರವೇ ನಾನೇನ ಬಲ್ಲೆನು
ಎಸರ‍್ಹೇಳಿರೆ ಅವ್ರು ಕುರು ಬಲ್ಲೆ
ನಕುಲ ಸಹದೇವರು ಭೀಮಲರಜುನರು
ಮತ್ತೊಬ್ಬರ ಹೆಸರು ಮರೆತೀದೆ
ನಾಕು ಜನರ ಹೆಸರು ಒಟ್ಟಾಗಿ ಹೇಳಿದೆ
ಮತ್ತೊಬ್ಬರ ಹೆಸರುಮರೆತೀದೆ
ಅವ್ರಮ್ಮ ನನ್ನಮ್ಮ ಕೂತು ಮಾತಾಡುವಾಗೆ
ಕೊಡ್ತೆನೆಂದು ನುಡದೀರು ಕಾರಣದಿಂದ
ಹೆಸರ್ಹೇಳಲು ಬಾಯಿ ಅಳುಕಿದು.