ಯಾರಮ್ಮ ಮನೆಯಲ್ಲಿ ಯಾರಮ್ಮ ಮಠದಲ್ಲಿ
ಯಾರಮ್ಮ ಬಳೆಯ ಇಡತೀರಿ
ನಾ ಬಳೆ ಇಡುವಾಕೆ ಅತ್ತಿಲ್ಲ ಮಾವಿಲ್ಲ
ಮತ್ತೇ ಕೈ ಹಿಡಿದ ಸಿರಿ ಇಲ್ಲ
ಅಷ್ಟೊಂದು ಮಾತ ಕೇಂಡಾನೆ ಬಳೆಗಾರ
ಬಂದಾನರಮನೆಯ ಒಳಗಾಗಿ     
ನೀ ಬಳೆ ಇಡುವಾಕೆ ಅತ್ಯಾಕೆ ಮಾವ್ಯಾಕೆ
ಮತ್ತೇ ಕೈ ಹಿಡಿದ ಸಿರಿಯಾಕೆ ಎಲೆ ಹೆಣ್ಣೆ ಬೇಕೆಂಬ ಬಳೆಯ ಇಡಿಸುವೆ
ಅಷ್ಟೆಂಬ ಮಾತ ಕೆಂಡಾಳೆ ರುಕ್ಮಿಣಿ
ಕೈ ಎತ್ತಿ ಬಳೆಗಾರ‍್ಗೆ ಕೊಡುವಾಳೆ
ಮುಂದು ಹತ್ತ ನಿಡ ಹಿಂದೆ ಸಡ್ಲನಿಡ
ನಡುಕೈ ಬಳೆಯ ಹದ ಇಡ ಬಳೆಗಾರ
ಬಳೆ ಇಟ್ಟ ಕೂಲಿ ನನಗ್ಹೇಳು
ದುಡ್ಡಿಗೂ ಬಳೆ ಇಡಲಿಲ್ಲ ಅಕ್ಕಿಗೂ ಬಳೆ ಇಡಲಿಲ್ಲ
ಬಳೆ ಇಟ್ಟ ನಿನ್ನ ಗುಣುವಿಗೆ
ಹುಚ್ಚ ಬಳೆಗಾರಣ್ಣ ಹುಚ್ಚು ಮಾತಾಡಬೇಡ
ನಿನ್ನಿಂದ ಚಲುವ ಮನಿ ಪುರುಷ ಕೇಂಡಿರು
ರುಂಡಿಗು ರುಂಡ ಹೊಯ್ಸುವರು
ಅಷ್ಟೆಂಬ ಮಾತ ಹೇಳಿದ ರುಕ್ಮಿಣಿ
ಮೆತ್ಹತ್ತಿ ಮ್ಯಾಲೆ ನಡೆದಾಳು ರುಕ್ಮಿಣಿ
ಪೆಟುಗಿಯ ಬಾಗ್ಲ ತೆಗೆದಾಳು ರುಕ್ಮಿಣಿ
ಚಿನ್ನಾಭರಣಗಳ ತೆಗೆದಾಳ ರುಕ್ಮಿಣಿ
ಮೆತ್ತೀನ ತಗ್ಗ ಇಳಿದಾಳ ರುಕ್ಮಿಣಿ
ಕೈ ಎತ್ತಿ ಬಳೆಗಾರ‍್ಗೆ ಕೊಡುವಾಳು
ಚಿನ್ನ ಹಾಕೂಕೆ ನಿನ್ಹಂಗೆ ಹೆಣ್ಣಲ್ಲ
ಕೇಳಿದ್ವಸ್ತುಗಳ ಕೊಡುಬೇಗ
ಅಷ್ಟೊಂದ ಮಾತ ಕೇಂಡಳೆ ರುಕ್ಮಿಣಿ
ಮೆತ್ಹತ್ತಿ ಮ್ಯಾನೆ ನಡದಾಳು ರುಕ್ಮಿಣಿ
ಪಟ್ಟೆ ಸೀರೆ ತೆಗೆದಾಲು ರುಕ್ಮಿಣಿ
ಕೈ ಎತ್ತಿ ಬಳೆಗಾರ‍್ಗೆ  ಕೊಡುವಾಳು
ಪಟ್ಟೆ ಸೀರೆ ಉಡುವಾಕೆ ನಿನ್ಹಂಗೆ ಹೆಣ್ಣಲ್ಲ
ಕೇಳಿದ್ವಸ್ತುಗಳ ಕೊಡು ಬೇಗ
ಅಷ್ಟೆಂಬ ಮಾತ ಕೇಂಡಾಳೆ ರುಕ್ಮಿಣಿ
ಮೆತ್ಹತ್ತಿ ಮ್ಯಾನೆ ನಡೆದಾಳು ರುಕ್ಮಿಣಿ
ಹಂಡೆ ಪಾತ್ರೆಗಳ ತೆಗೆದಾಳು ರುಕ್ಮಿಣಿ
ಮೆತ್ತೀನ ತಗ್ಗ ಇಳಿದಾಳು ರುಕ್ಮಿಣಿ
ಕೈ ಎತ್ತಿ ಬಳೆಗಾರ‍್ಗೆ ಕೊಡುವಾಳು
ಹಂಡೆ ಪಾತ್ರೆ ಕೊಡುಕೆ ನಮ್ಮಲ್ ಹರ್ಸಾಯ್ ಲಿಲ್ಲ
ಕೇಳಿದ್ವಸ್ತುಗಳ ಕೊಡುಬೇಗ
ಅಷ್ಟೆಂಬ ಮಾತ ಕೇಂಡಾಳೆ ರುಕ್ಮಿಣಿ
ಬಾಗಿಲಿಗೆ ಬೀಗ ಜಡಿದಾಳ ರುಕ್ಮಿಣಿ
ಹ್ವಾದಾಳೆ ಸತಿ ಭಾಮೆಯ ಅರಮನಿಗೆ
ಎಂದ್ ಬರದಿದ್ದ ರುಕ್ಮಿಣಿ ಇಂದೇನುಬಂದೀಯ
ಬಂದ ಕಾರಣವ ಒದುಗ್ಹೇಳು./..
(ಬಳೆಗಾರ ಬಂದ ವಿಷಯ ಹೇಳುತ್ತಾಳೆ)
ಅಷ್ಟೆಂಬ ಮಾತ ಕೇಂಡಳೆ ಸತಿಭಾಮೆ
ಬಂದಳು ರುಕ್ಮಿಣಿಯ ಅರಮನಿಗೆ
ಐದು ಜನಿನೊಳಗೆ ಬಲು ಜಾಣೆ ರುಕ್ಮಿಣಿ      ‘
ನಿನ ಗಂಡನ ಗುರ್ತೆ ನಿನಗಿಲ್ಲ.