ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು, ಸ್ಥಳೀಯ ಸಂಸ್ಕೃತಿಯ ಸೊಗಡನ್ನು ಮೈಗೂಡಿಸಿಕೊಂಡು ಬೆಳವಣಿಗೆ ಹೊಂದಿದ್ದರೂ, ಮುಖ್ಯವಾಹಿನಿಗೆ ಬಂದು ಮುಟ್ಟಲು ಸಾಧ್ಯವಾಗದೇ ಇರುವ ಪ್ರದೇಶಗಳನ್ನು ಸಂಶೋಧನೆ ಮತ್ತು ಅಧ್ಯಯನದ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದೆ. ಇಂಥ ಅಧ್ಯಯನದ ಫಲಿತಗಳು ಸಮಗ್ರ ಇತಿಹಾಸ ರಚನೆಯಲ್ಲಿ ಆಶಾದಾಯಕವಾಗಿ ಕಾಣುತ್ತಿವೆ.

ನಮ್ಮ ವಿಭಾಗವು ಅಲಕ್ಷಿತ ಕ್ಷೇತ್ರಗಳ ಅಧ್ಯಯನದಲ್ಲಿ ತೊಡಗಿಕೊಂಡಿರುವುದಲ್ಲದೇ ಸ್ಥಳೀಯ ಮಟ್ಟದಲ್ಲಿ ವಿಚಾರ ಸಂಕಿರಣಗಳನ್ನು ಏರ್ಪಡಿಸಿ, ಪರಿಣಿತ ವಿದ್ವಾಂಸರಿಂದ ಮಂಡಿತವಾದ ಲೇಖನಗಳನ್ನು ಪ್ರಕಟಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತ ಬರಲಾಗಿದೆ.

ಇತಿಹಾಸ ಅಧ್ಯಯನ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಂತೆ, ಸ್ಥಳಿಯ ಚರಿತ್ರೆ ವಿಶಿಷ್ಟ ಸ್ಥಾನ ಪಡೆದುಕೊಳ್ಳುತ್ತಿದೆ. ಪ್ರಾದೇಶಿಕ ಅಧ್ಯಯನದಲ್ಲಿ ಬೌಗೋಳಿಕ ಪರಿಸರ, ಮಾನವನ ಬದುಕು, ಅವನ ಸಾಂಸ್ಕೃತಿಕ ಅಭಿವೃದ್ಧಿಯ ನಿಲುವು, ಸಾಮಾಜಿಕ, ಆರ್ಥಿಕ, ಧಾರ್ಮಿಕ ವಿಕಸನ ಹಾಗೂ ನಂಬಿಕೆಸಂಪ್ರದಾಯ ಮೊದಲಾದುವು ಮುಖ್ಯವಾಹಿನಿಯತ್ತ ಮುಖಮಾಡಿ ನಿಲ್ಲುತ್ತವೆ.

ಪುರಾತತ್ವ ಮತ್ತು ಪ್ರಾಚೀನ ಆಕರಗಳನ್ನೇ ಪ್ರಧಾನವಾಗಿಟ್ಟುಕೊಂಡು ಬೆಳವಣಿಗೆ ಕಂಡಿರುವ ಇತಿಹಾಸ ಅಧ್ಯಯನದಲ್ಲಿ, ಆಯಾ ಪರಿಸರದ ಸಂಸ್ಕೃತಿಯ ಸಿರಿಯನ್ನು ಮನದಾಳದಲ್ಲಿಟ್ಟುಕೊಂಡು ನಿರಂತರವಾಗಿ ಮುಂದುವರಿಸಿಕೊಂಡು ಬಂದಿರುವ ಮೌಖಿಕ ಆಕರಗಳು ಮತ್ತು ಅವುಗಳ ಮಹತ್ವವನ್ನು ಗುರುತಿಸುವಲ್ಲಿ ಸ್ಥಳೀಯ ಚರಿತ್ರೆ ಪ್ರಧಾನ ಅಂಶವನ್ನಾಗಿರಿಸಿಕೊಂಡಿದೆ. ಇದರಿಂದ ತೆರೆಮರೆಯಲ್ಲಿದ್ದ ಅನೇಕ ವಿಷಯಗಳು ಸೇರ್ಪಡೆಯಾಗುವ ಮೂಲಕ ವಿಸ್ತೃತ ಬೆಳವಣಿಗೆಗೆ ಸಾಧ್ಯವಾಗಿದೆ.

ಪ್ರಸ್ತುತ ಜಾಗತೀಕರಣದಿಂದ ಸಾಂಸ್ಕೃತಿಕ ಸಂಪತ್ತು ನಶಿಸುತ್ತಿರುವ ಸಂದರ್ಭದಲ್ಲಿ ಮೌಖಿಕ ಆಕರಗಳು ಮರೆಯಾಗುವ ಆತಂಕವೂ ಇದೆ. ದೃಷ್ಟಿಯಿಂದ ಸ್ಥಳೀಯ ಮಟ್ಟದಲ್ಲಿ ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡು ಪ್ರಾಚೀನ ಅವಶೇಷಗಳ ಮಹತ್ವ, ಇತಿಹಾಸ ಪ್ರಜ್ಞೆ ಮತ್ತು ಜಾಗೃತಿಯನ್ನು ಮೂಡಿಸುವ ಮೂಲಕ ಪರಿಸರದಲ್ಲಿ ಇದುವರೆಗೂ ನಡೆದ ಅಧ್ಯಯನಗಳನ್ನು ಮುಖ್ಯವಾಗಿಟ್ಟುಕೊಂಡು, ಲಭ್ಯವಿರುವ ಆಕರಗಳನ್ನು ಸಂಯೋಜಿಸಿ ವಿಚಾರ ಸಂಕಿರಣದಲ್ಲಿ ಮಂಡಿಸಲಾಗುವುದು. ಅಲ್ಲಿ ಚರ್ಚಿತವಾದ ಪ್ರತಿಕ್ರಿಯೆಗಳನ್ನು ಅಳವಡಿಸಿ, ವಿಮರ್ಶೆವಿಶ್ಲೇಷಣೆಯ ಮೂಲಕ ಸಿದ್ಧಪಡಿಸಿದ ಲೇಖನಗಳನ್ನು ಪ್ರಕಟಿಸಿ ಓದುಗರಿಗೆ ತಲುಪಿಸುವ ಪ್ರಮುಖ ಯೋಜನೆ ಇದಾಗಿದೆ. ಹಿನ್ನೆಲೆಯಲ್ಲಿ ಈಗ ರೂಪ ತಳೆದಿರುವುದೇ ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆಹಾನಗಲ್ಲು ಗ್ರಂಥ.

ಮಲೆನಾಡು ಸೆರಗಿಗೆ ಹೊಂದಿಕೊಂಡಿರುವ ಹಾನಗಲ್ಲು ಪ್ರಾಚೀನ ಕಾಲದಿಂದಲೂ ಶ್ರೀಮಂತ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಬಯಲುಸೀಮೆ ಮತ್ತು ಮಲೆನಾಡು ಪ್ರದೇಶಗಳ ಕೊಂಡಿಯಾಗಿರುವ ಇದು ಪ್ರಮುಖ ವ್ಯಾಪಾರ ಕೇಂದ್ರವೂ ಹೌದು. ಪ್ರಾಗಿತಿಹಾಸ ಕಾಲದಿಂದಲೂ ಪರಿಸರದಲ್ಲಿ ಉತ್ಪಾದನೆಯಾಗುತ್ತಿದ್ದ ಕಬ್ಬಿಣದ ಉಪಕರಣಗಳು ಮತ್ತು ಆನಂತರ ಸಾಂಬಾರ ಪದಾರ್ಥಗಳು ದೇಶವಿದೇಶಗಳಲ್ಲಿ ಬಹು ಬೇಡಿಕೆಯನ್ನು ಪಡೆದಿದ್ದವು. ಕಾರಣ ರೋಮ್ ದೇಶದೊಂದಿಗೆ ನಿರಂತರ ಸಂಪರ್ಕ ಪಡೆಯಲು ಸಾಧ್ಯವಾಯಿತು. ಇದಕ್ಕೆ ಪೂರಕವೆಂಬಂತೆ ದೇಶದ ನಾಣ್ಯಗಳು ಹಾನಗಲ್ಲು ಸಮೀಪ ಅಕ್ಕಿಆಲೂರಿನಲ್ಲಿ ದೊರೆತಿವೆ. ವ್ಯಾಪಾರದ ಮೂಲಕವೇ ಹಾನಗಲ್ಲು ನಗರ ನಿರಂತರ ಬೆಳವಣಿಗೆ ಕಂಡಿರುವುದು ಗಮನಾರ್ಹ.

ಹಾನಗಲ್ಲು ನಗರದಲ್ಲಿ ಸಾತವಾಹನಕದಂಬರ ಕಾಲಾವಧಿಯಲ್ಲಿ ನಿರ್ಮಾಣವಾದ ಮಣ್ಣಿನ ಕೋಟೆ, ಕರ್ನಾಟಕದ ಕೋಟೆಗಳ ಅಧ್ಯಯನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಬನವಾಸಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಧಿಕಾರಕ್ಕೆ ಬಂದ ಕದಂಬರಿಗೆ ಹಾನಗಲ್ಲುತಾಳಗುಂದ ಪ್ರಮುಖ ಆಡಳಿತ ಕೇಂದ್ರಗಳಾಗಿದ್ದವು. ಬಾದಾಮಿ ಚಾಲುಕ್ಯರು ಮತ್ತು ರಾಷ್ಟಕೂಟರ ಆಳ್ವಿಕೆಯಲ್ಲಿ ಚಿಕ್ಕಪುಟ್ಟ ಪ್ರದೇಶಗಳ ಅಧಿಕಾರ ವಹಿಸಿಕೊಂಡಿದ್ದ ಕದಂಬ ವಂಶದವರು ಕಲ್ಯಾಣದ ಚಾಲುಕ್ಯರ ವೇಳೆಗೆ ಹಾನಗಲ್ಲನ್ನು ಕೇಂದ್ರವನ್ನಾಗಿ ಮಾಡಿಕೊಂಡು ಮಹಾಮಂಡಳೇಶ್ವರ ಪದವಿಗೇರಿದರು. ಆಗ ಹಾನಗಲ್ಲು ೫೦೦ ಹಳ್ಳಿಗಳನ್ನೊಳಗೊಂಡು ಪಾನುಂಗಲ್ಲ ಐನೂರು ಎಂಬ ಖ್ಯಾತಿಗೆ ಒಳಗಾಯಿತು. ಇದರಲ್ಲಿ ಸುತ್ತಮುತ್ತಲಿನ ಸ್ಥಳಗಳಾದ ಹೊಸನಾಡು೭೦, ಎಡವೊಳಲ್೭೦, ಪಲಂಬಿ೭೦, ಕೊಂಡರಟ್ಟಿ೭೦, ಬಾಗಲ್೭೦, ಎರಡು ಜೊಹಳಿಗೆ೭೦, ಕುಂದುವರ೩೦, ಎಳಂಬಿ೨೦, ನಿಡಗುಂದಿಗೆ೧೨ ಹೀಗೆ ಅನೇಕ ಆಡಳಿತ ಉಪ ವಿಭಾಗಗಳು ಸಮಾವೇಶಗೊಂಡಿದ್ದವು.

ಚಾಲುಕ್ಯರಿಗೆ ನಿಷ್ಠರಾಗಿದ್ದ ಕದಂಬರು ನಿರಂತರವಾಗಿ ಹೊಯ್ಸಳರ ಧಾಳಿಗೆ ಒಳಗಾಗಬೇಕಾಯಿತು. ಕದಂಬ ರಾಜ್ಯವನ್ನು ಉಳಿಸಲು ಸೈನಿಕರುಸೇನಾಧಿಪತಿಗಳು ಕೋಟೆಕಾಳಗದಲ್ಲಿ ತಮ್ಮನ್ನು ಅರ್ಪಿಸಿಕೊಂಡರು. ಅವರ ನೆನಪಿಗಾಗಿ ರಚನೆಯಾಗಿರುವ ವೀರಗಲ್ಲುಗಳು ಕಥಾನಕ ಭಾಗಗಳನ್ನು ಬಿಚ್ಚಿ ಹೇಳುವಂತಿವೆ. ನಿರಂತರವಾಗಿ ಸ್ವಾಭಿಮಾನದ ಪ್ರತೀಕವೆಂಬಂತೆ ಬಾಳಿ ಬದುಕಿದ ಇಲ್ಲಿಯ ಜನರು ಸ್ವತಂತ್ರ ಭಾರತದ ರಚನೆಗೆ ಬ್ರಿಟಿಷರ ವಿರುದ್ಧ ನಡೆದ ಅನೇಕ ಸಂಘಟನೆ, ಪ್ರತಿಭಟನೆಗಳಲ್ಲಿ ಪಾಲ್ಗಂಡು ದುಡಿದಿದ್ದಾರೆ. ಇಂಥ ಪ್ರಮುಖ ಮತ್ತು ಪೂರ್ಣ ಘಟನಾವಳಿಗಳನ್ನು ಒಳಗೊಂಡಂತೆ ರಚನೆಯಾಗಿರುವು ಹಾನಗಲ್ಲು ಗ್ರಂಥ.

ಇಂಥ ಮಹತ್ತರ ಯೋಜನೆಯನ್ನು ಮುಂದುವರಿಸಿಕೊಂಡು ಬರುವಲ್ಲಿ ಸ್ಫೂರ್ತಿಯ ನೆಲೆಯಾಗಿ ನಿಂತವರು ಅಂದಿನ ಕುಲಪತಿಗಳಾಗಿದ್ದ ಡಾ. ಬಿ. . ವಿವೇಕ ರೈ, ಡಾ. ಕೆ. ವಿ. ನಾರಾಯಣ ಮತ್ತು ಇಂದಿನ ಕುಲಪತಿಗಳಾದ ಡಾ. ಹಿ. ಚಿ. ಬೋರಲಿಂಗಯ್ಯ ಅವರುಗಳು ಹಾಗೆಯೇ ಕುಲಸಚಿವರಾದ  ಶ್ರೀ ವಿ. ಶಂಕರ್, ಪ್ರಸಾರಾಂಗದ ನಿರ್ದೇಶಕರಾದ ಡಾ. ಮಲ್ಲೇಪುರಂ ಜಿ. ವೆಂಕಟೇಶ್, ಅಧ್ಯಯನಾಂಗದ ನಿರ್ದೇಶಕರಾದ ಡಾ. ಪಾಂಡುರಂಗ ಬಾಬು, ಡಾ. ಪ್ರೇಮಕುಮಾರ ಅವರಿಗೆ ಕೃತಜ್ಞತೆಗಳು ಸಲ್ಲುತ್ತವೆ.

ಹಾನಗಲ್ಲಿನಲ್ಲಿ ವಿಚಾರ ಸಂಕಿರಣವನ್ನು ಏರ್ಪಡಿಸಲು ಸ್ಥಳೀಯ ಜನತಾ ಶಿಕ್ಷಣ ಸಂಸ್ಥೆಯ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದ ಮೂಲಕ ಸಹಾಯ ಸಹಕಾರವನ್ನು ನೀಡಿದ ಜನಪ್ರಿಯ ನಾಯಕರಾದ ಸನ್ಮಾನ್ಯ ಶ್ರೀ ಸಿ. ಎಂ. ಉದಾಸಿಯವರನ್ನು ಮರೆಯುವಂತಿಲ್ಲ. ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ . ಎಸ್. ಬಳ್ಳಾರಿ, ಶ್ರೀ ಎಂ. ಬಿ. ಕಲಾಲ್, ಶ್ರೀ ಬಸವರಾಜ ಅಕ್ಕಿವಳ್ಳಿ, ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಸಿ. ಎಸ್. ಬಡಿಗೇರ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ವ್ಹಿ. ಜಿ. ಶಾಂತಪುರಮಠ ಹಾಗೂ ಜನತಾ ಶಿಕ್ಷಣ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಸದಸ್ಯರು, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ವಿಚಾರ ಸಂಕಿರಣದ ಜವಾಬ್ದಾರಿಯನ್ನು ಹೊತ್ತು ಯಶಸ್ವಿಗೊಳಿಸಿದ್ದಾರೆ. ವಿಚಾರ ಸಂಕಿರಣಕ್ಕೆ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯದ ಸಹಯೋಗದೊಂದಿಗೆ ಸಹಕಾರ ನೀಡಿದ ನಿರ್ದೇಶಕರಾದ ಡಾ. ಆರ್. ಗೋಪಾಲ ಮತ್ತು ಸಿಬ್ಬಂದಿ ವರ್ಗಕ್ಕೂ, ಬಳ್ಳಾರಿಯ .ಸಿ.ಸಿ. ಸಿಮೆಂಟ್ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಚಂದ್ರಕಾಂತ ಎಸ್. ಸೋನಾರ ಅವರಿಗೂ ಆಭಾರಿಯಾಗಿದ್ದೇನೆ.

ವಿಚಾರ ಸಂಕಿರಣದ ದಿವ್ಯ ಸಾನಿಧ್ಯ ವಹಿಸಿದ್ದ ಹುಬ್ಬಳ್ಳಿ ಮೂರುಸಾವಿರ ಮಠದ ಪೂಜ್ಯ ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳಿಗೆ ನಮನಗಳು. ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಎಂ. ಎಂ. ಕಲಬುರ್ಗಿ, ಆಶಯ ಭಾಷಣ ಮಾಡಿದ ಡಾ. . ಸುಂದರ ಮತ್ತು ಗೋಷ್ಠಿಗಳ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಸ್. ರಾಜಶೇಖರ, ಡಾ. ರು. ಮಾ. ಷಡಕ್ಷರಯ್ಯ, ಬಸವರಾಜ ಮಲಶೆಟ್ಟಿ, ಡಾ. ದೇವರಕೊಂಡಾರೆಡ್ಡಿ ಅವರಿಗೂ ಹಾಗೂ ಸಕಾಲದಲ್ಲಿ ಲೇಖನಗಳನ್ನು ಕೊಟ್ಟು ಸಹಕರಿಸಿದ ಎಲ್ಲ ವಿದ್ವಾಂಸರಿಗೂ,

ಪುಸ್ತಕ ಪ್ರಕಟಣೆಯಲ್ಲಿ ಸಹಕರಿಸಿದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ, ಮುಖಪುಟ ತಯಾರಿಸಿದ ಕೆ. ಕೆ. ಮಕಾಳಿ, ಅಕ್ಷರ ಸಂಯೋಜನೆ ಮಾಡಿದ ಇಂಟೈಡ್ ಗ್ರಾಫಿಕ್ಸ್ ಅವರಿಗೂ,

ವಿಚಾರ ಸಂಕಿರಣದ ವ್ಯವಸ್ಥೆ ಮತ್ತು ಪುಸ್ತಕ ಪ್ರಕಟಣೆಯಲ್ಲಿ ಸಹಕರಿಸಿದ ಡಾ. ಗಂಗಾಧರ ದೈವಜ್ಞ, ಡಾ. ವ್ಹಿ. ಎಲ್. ಪಾಟೀಲ, ವಿಭಾಗದ ಸದಸ್ಯರಾದ ಡಾ. ಸಿ. ಮಹದೇವ, ಡಾ. ಸಿ. ಎಸ್. ವಾಸುದೇವನ್, ಡಾ. ರಮೇಶ ನಾಯಕ, ಡಾ. ಎಸ್. ವೈ. ಸೋಮಶೇಖರ ಹಾಗೂ ಶ್ರೀ ಎಚ್. ಬಿ. ನಾಗಯ್ಯ, ಶ್ರೀ ಗುರುಮೂರ್ತಿ, ಶ್ರೀ ಬರಲಿಂಗಪ್ಪ, ಶ್ರೀ ರಮೇಶ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಸಲ್ಲುತ್ತವೆ.

ಡಾ. ವಾಸುದೇವ ಬಡಿಗೇರ