ನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆರೆಕಟ್ಟೆಗಳ ಪಾತ್ರ ತುಂಬಾ ಪ್ರಮುಖವಾದುದು. ಕೃಷಿ ಪ್ರಧಾನವಾದ ಭಾರತೀಯ ಸಂಸ್ಕೃತಿಯ ಉಗಮ ಮತ್ತು ವಿಕಾಸಕ್ಕೆ ಕೃಷಿ ತಳಹದಿಯಾಯಿತಲ್ಲದೇ ಮಾನವನ ಜೀವನ ಕ್ರಮವನ್ನೇ ಬದಲಾಯಿಸಿತು. ಕೃಷಿ ಉತ್ಪಾದನೆಗೆ ನೀರಾವರಿಯು ಅನಿವಾರ್ಯ. ಮಳೆಯನ್ನು ಅವಲಂಬಿಸದೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ನೀರಾವರಿ ಸಂಪನ್ಮೂಲಗಳು ಅತ್ಯವಶ್ಯಕ. ಕೃಷಿಗೆ ನೀರನ್ನು ಒದಗಿಸಲು ಮಾನವನು ಅನುಸರಿಸಿದ್ದು ಕೃತಕ ಜಲ ಸಂಗ್ರಾಹಕಗಳಾದ ಕೆರೆಕಟ್ಟೆಗಳನ್ನು. ಪ್ರಾಗಿತಿಹಾಸ ಕಾಲದಿಂದಲೂ ಮಾನವನ ಚಟುವಟಿಕೆಗಳ ಕಾರ್ಯಕ್ಷೇತ್ರವು ನದಿಸರೋವರಗಳ ಸಮೀಪದಲ್ಲಿಯೇ ಕೇಂದ್ರೀಕೃತವಾಗಿತ್ತು. ಕಾಲಕ್ರಮೇಣ ಕೆರೆಕಟ್ಟೆ ಮುಂತಾದ ಜಲಸಂಚಯನವಿದ್ದ ಸ್ಥಳದ ಸುತ್ತಮುತ್ತಲೂ ಕುಟುಂಬಗಳು ತಳವೂರಿ ಗ್ರಾಮಗಳು ರೂಪುಗೊಂಡವು.

ಕೆರೆಗಳಿಂದ ನೀರಾವರಿ ಮಾಡಿಕೊಳ್ಳುವುದು ದ್ರಾವಿಡ ಪದ್ಧತಿ.[1] ಪದ್ಧತಿ ಹಲವಾರು ದೃಷ್ಟಿಯಿಂದ ಶ್ರೇಷ್ಠವಾದದ್ದೆಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.[2] ಕನ್ನಡ ನಾಡಿನಲ್ಲಿ ಕೆರೆ ಕಟ್ಟಿಸುವ ಇತಿಹಾಸ ಕದಂಬರ ಪೂರ್ವದಲ್ಲಿ ನಾಗರಿಂದ ಮೊದಲಾದರೂ,[3] ಕದಂಬ ದೊರೆ ಮಯೂರವರ್ಮನು ನಿರ್ಮಿಸಿದ ಚಂದ್ರವಳ್ಳಿ ಕೆರೆಯು ಕರ್ನಾಟಕದ ಅತ್ಯಂತ ಪ್ರಾಚೀನ ಕೆರೆ ಎನ್ನಲಾಗಿದೆ. ನಂತರ ಗಂಗರು, ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು ಮತ್ತು ವಿಜಯನಗರದ ಮನೆತನಗಳು ವಿಪುಲ ಪ್ರಮಾಣದಲ್ಲಿ ಕೆರೆಕಟ್ಟೆಗಳನ್ನು ಕಟ್ಟಿಸಿದ್ದಾರೆ. ಬಾದಾಮಿ ಚಾಲುಕ್ಯರು ಸಾಮ್ರಾಜ್ಯದ ಎಲ್ಲೆಡೆಗಳಲ್ಲಿಯೂ ಕೆರೆಗಳನ್ನು ನಿರ್ಮಿಸಿದರೆಂದು ಶಾಸನ ಉಲ್ಲೇಖಿಸುತ್ತದೆ.[4] ಕಲ್ಯಾಣದ ಚಾಲುಕ್ಯರ ಕಾಲ (೯೭೩೧೩೩೬)ದಲ್ಲಿ ಮೊದಲಿನಕ್ಕಿಂತಲೂ ಅಧಿಕ ಕೆರೆಗಳು ನಿರ್ಮಾಣಗೊಂಡವು. “ಅವುಗಳ ಪ್ರಮಾಣದಲ್ಲಿ, ಎಲ್ಲೆಲ್ಲಿ ಕೆರೆಗಳನ್ನು ಕಟ್ಟಲು ಸಾಧ್ಯವೋ ಅಲ್ಲೆಲ್ಲಾ ಕೆರೆಗಳನ್ನು ಕಟ್ಟಿ ಬಿಟ್ಟಿದ್ದಾರೆ. ಹೊಸ ಕೆರೆಗಳಿಗೆ ಸ್ಥಳ ಹುಡುಕುವುದು ದುಸ್ತರ[5] ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಕಾರಣವಾಗಿ ಅವರ ಕಾಲವನ್ನುಕೆರೆಗಳ ಸುವರ್ಣಯುಗ[6]ವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಚಾಲುಕ್ಯರ ಮಂಡಲಾಧಿಪತಿಗಳಾಗಿ ಹಾನಗಲ್ಲು ಕದಂಬರು ಆಳ್ವಿಕೆ ಮಾಡುತ್ತಿದ್ದರು. ಪರಿಸರದ ಪ್ರತಿ ಗ್ರಾಮಗಳಲ್ಲಿ ಕೆರೆಗಳಿದ್ದವು. ಕೆಲವು ವೇಳೆ ಹೊಸ ಕೆರೆಗಳನ್ನು ಬೇಸಾಯಕ್ಕೆ ಸಿದ್ಧಗೊಳಿಸುವುದು ಸಾಮಾನ್ಯವಾಗಿತ್ತು. ಪಾನುಂಗಲ್ಲ ಐನೂರು ವಿಭಾಗದಲ್ಲಿನ ಶಾಸನಗಳು ಜಲ ಸಂಗ್ರಹಗಳನ್ನು ನದಿ, ತೊರೆ, ಕೆರೆಕಟ್ಟೆ, ಹಳ್ಳಕೊಳ್ಳ, ಮಡವು, ಡೋಣಿ, ಗುಂಡ, ತಟಾಕ, ತೀರ್ಥ, ಹೊಂಡ, ಕಾಲುವೆ, ಕುಂಟೆ, ಕುಳಿಗಳೆಂದು ಉಲ್ಲೇಖಿಸುತ್ತವೆ.

ಹಾನಗಲ್ಲು ಪರಿಪೂರ್ಣ ಮಲೆನಾಡು ಭಾಗವಾಗಿರದೆ, ಅರೆ ಮಲೆನಾಡು ಪ್ರದೇಶ. ಇಲ್ಲಿ ಸುಮಾರು ೮೦೦ ಮಿ.ಮೀ.ನಿಂದ ೧೬೦೦ ಮಿ.ಮೀ.ನಷ್ಟು ಮಳೆ ಬೀಳುತ್ತದೆ. ಭೌಗೋಳಿಕವಾಗಿ ಗುಡ್ಡಕಾಡುಗಳಿಂದ ಕೂಡಿದ ಸಮತಟ್ಟಲ್ಲದ ಇಳಿಜಾರು ಪ್ರದೇಶವಾಗಿದ್ದರಿಂದ ಮಳೆಯ ನೀರಿನ ಪರ್ಯಾಯ ವ್ಯವಸ್ಥೆಯಾಗಿ ಕೆರೆಕಟ್ಟೆಗಳ ನಿರ್ಮಾಣಕಾರ್ಯ ಅವಶ್ಯವಾಗಿತ್ತು. “ಮಳೆಯನ್ನೇ ನೆಚ್ಚಿಕೊಂಡು ಬೇಸಾಯಕ್ಕೆ ತೊಡಗುವುದಕ್ಕಿಂತ ಕೆರೆಕಟ್ಟೆಗಳನ್ನು ನಿರ್ಮಿಸಿಕೊಂಡು ಬೇಸಾಯಕ್ಕೆ ತೊಡಗುವುದು ಉತ್ತಮ.”[7] ಹಾನಗಲ್ಲು ಪರಿಸರವು ಕೆರೆಕಟ್ಟೆ ನಿರ್ಮಾಣಕ್ಕೆ ಯೋಗ್ಯವಾದ ಭೌಗೋಳಿಕ ಲಕ್ಷಣಗಳನ್ನು ಒದಗಿಸಿದೆ. ಸುಮಾರು ದೂರದ ಗುಡ್ಡಕಾಡುಗಳ ಸಾಲಿನಿಂದ ಹರಿದು ಬರುವ ನೀರಿನ ಕಣಿವೆಗಳಿಗೆ ಅಡ್ಡಲಾಗಿ ಜಲ ಸಂಗ್ರಹಣಾ ಕೆರೆಕಟ್ಟೆಗಳನ್ನು ನಿರ್ಮಿಸಲು ಯೋಗ್ಯವಾಗಿದೆ. ಪ್ರದೇಶದ ಕೆರೆಕಟ್ಟೆಗಳು ಮಳೆ ಆಶ್ರಿತವಾಗಿದ್ದರಿಂದ ನದಿಯ ನೀರಿನ ಆಶ್ರಯ ಪಡೆಯಲು ಮೂರು ಯೋಜನಗಳಷ್ಟು ದೂರದಲ್ಲಿಧರ್ಮಾನದಿಹರಿದಿದೆ. ಕೆರೆಕಟ್ಟೆ ಏರಿಯ ನಿರ್ಮಾಣಕ್ಕೆ ಯೋಗ್ಯವಾದ ಮಣ್ಣು, ಒರಟಾದ ಗುಂಡು ಶಿಲೆ, ಕೆರೆಯ ಮುಂಭಾಗದಲ್ಲಿ ಫಲವತ್ತಾದ ಆಯಕಟ್ಟಿನ ಭೂಮಿ, ಆಳವಾದ ಮತ್ತು ವಿಶಾಲವಾದ ನೀರಿನ ಹರಿವು ಎಲ್ಲ ಅನುಕೂಲತೆಗಳಿಂದಾಗಿ ಬಹುಸಂಖ್ಯೆಯಲ್ಲಿ ಕೆರೆಕಟ್ಟೆಗಳು ನಿರ್ಮಾಣಗೊಳ್ಳಲು ಸಾಧ್ಯವಾಯಿತು. ಕಾರಣವಾಗಿಕೆರೆಯ ಜಿಲ್ಲೆಎಂಬ ಖ್ಯಾತಿಯು ಹಾವೇರಿ ಜಿಲ್ಲೆಗೆ ದೊರೆತರೆ, ‘ಕೆರೆಯ ತಾಲೂಕುಎಂಬ ಸ್ಥಾನ ಹಾನಗಲ್ಲಿಗೆ ದೊರೆಯುತ್ತದೆ. ಇಲ್ಲಿ ೪೪೫ ಸಣ್ಣ ಕೆರೆಗಳು, ೧೧೨ ದೊಡ್ಡ ಕೆರೆಗಳು, ಒಟ್ಟು ೫೫೭ ಕೆರೆಗಳು ಮತ್ತು ೫೨೦ಕ್ಕೂ ಹೆಚ್ಚು ನೀರಾವರಿ ಬಾವಿಗಳಿವೆ. ಅವುಗಳಲ್ಲಿ ಬಹುಪಾಲು ಕೆರೆಕಟ್ಟೆಗಳು ವಿಜಯನಗರ ಕಾಲದಲ್ಲಿ (೧೩೩೬೧೫೬೫) ನಿರ್ಮಾಣಗೊಂಡಿವೆ.

ತಾಲೂಕಿನ ೧೧೨ ದೊಡ್ಡ ಕೆರೆಗಳಲ್ಲಿ ತಿಳವಳ್ಳಿಯ ಹಿರೇಕೆರೆ, ನರೇಗಲ್ಲಿನ ಹಿರೇಕೆರೆ ಮತ್ತು ಹಾನಗಲ್ಲಿನ ಆನೆಕೆರೆಗಳು ಕ್ರಮವಾಗಿ ೮೬೨, ೬೦೨ ಮತ್ತು ೫೩೭ ಎಕರೆಗಳಿಗೆ ನೀರು ಒದಗಿಸುತ್ತಿರುವ ಬೃಹತ್ ಪ್ರಮಾಣದ ಕೆರೆಗಳಾಗಿವೆ.

ಹಾನಗಲ್ಲು ನಗರಕ್ಕೆ ಸೇರಿದ ದೊಡ್ಡ ಕೆರೆಗಳು, ಚಿಕ್ಕ ಕೆರೆಗಳು, ಅತಿ ಚಿಕ್ಕ ಕೆರೆಗಳು ಮತ್ತು ಕುರುಬರ ಬಾವಿ, ಕಲ್ಲಬಾವಿ, ಕಂಚಗಾರ ಬಾವಿ ಮುಂತಾದ ೧೨ ನೀರಾವರಿ ಬಾವಿಗಳಿವೆ. ಕುರುಬರ ಬಾವಿ ದೊಡ್ಡ ಪ್ರಮಾಣದ ಬಾವಿಯಾಗಿದ್ದು, ೧೬ ಎಕರೆ ಭೂಮಿಗೆ ನೀರು ಒದಗಿಸುತ್ತದೆ. ಎಲ್ಲ ಜಲ ಮೂಲಗಳಿಂದಾಗಿ ಹಾನಗಲ್ಲು ವಿಪುಲ ಜಲ ಸಮೃದ್ಧಿಯನ್ನು ಹೊಂದಲು ಸಾಧ್ಯವಾಗಿದೆ. ಕೆರೆಕಟ್ಟೆಗಳಿಂದ ೪೦೩ ಹೆಕ್ಟೇರ್, ನಾಲೆಗಳಿಂದ ೧೭೨ ಹೆಕ್ಟೇರ್ ಮತ್ತು ಬಾವಿಗಳಿಂದ ೧೫೦ ಹೆಕ್ಟೇರ್, ಒಟ್ಟು ೭೨೫ ಹೆಕ್ಟೇರ್ ಆಯಕಟ್ಟು ಪ್ರದೇಶ ನೀರಾವರಿಗೊಳಪಟ್ಟಿದೆ. ಹಾನಗಲ್ಲಿನ ಜನ ಸಂಚಯನಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಕೆರೆಗಳ ವಿವರ ರೀತಿ ಇದೆ.

ಕ್ರ.ಸಂ.

ಕೆರೆ ಹೆಸರು

ರಚನಾ ವಿಧಾನ

ತೂಬುಗಳ ಸಂಖ್ಯೆ

ನೀರು ನಿಲ್ಲುವ ಕ್ಷೇತ್ರ (ಹೆಕ್ಟೇರ್)

ನೀರು ನಿಲ್ಲುವ ಪ್ರಮಾಣ (MCFTಗಳಲ್ಲಿ)

ನೀರಾವರಿ ಕ್ಷೇತ್ರ (ಹೆಕ್ಟೇರ್ ಗಳಲ್ಲಿ)

ವಿವರಣೆ

೦೧. ಆನೆಕೆರೆ ಒರಟು ಕಲ್ಲು ಗೋಡೆ ೪೮,೨೮ ೪೩.೨೨ ೭೦.೫೩ ಗ್ರಾಮದ ದಕ್ಷಿಣಕ್ಕೆ
. ನಾಗಹೊಳ್ಳಿ ಕೆರೆ ಒರಟು ಕಲ್ಲು ಗೋಡೆ ೧೦.೭೧ ೨೬.೪೦ ೧೦೬.೯೩ ಉತ್ತರಕ್ಕೆ
. ಅಚ್ಚ ಕೆರೆ ಒರಟು ಕಲ್ಲು ಗೋಡೆ ೧೨.೬೪ ೧೨೭.೦೦ ೬೯.೩೬ ಪೂರ್ವಕ್ಕೆ
. ಕಂಬಳಕ ಕೆರೆ ಒರಟು ಕಲ್ಲು ಗೋಡೆ .೧೮ ೧೦.೧೦ ೫೩.೪೬ ಪಶ್ಚಿಮಕ್ಕೆ

 

ಧರ್ಮಾನದಿ

ಹಾನಗಲ್ಲು ಪ್ರದೇಶದಲ್ಲಿ ಕೆರೆ ನೀರಾವರಿಯಿಂದ ಕೃಷಿ ನಿರಂತರವಾಗಿ ಸಾಗಿಬರಲು ಕಾರಣ ಧರ್ಮಾನದಿಯ ಕಾಲುವೆ ವ್ಯೂಹ. ವರದಾನದಿಯ ಉಪ ನದಿಯಾದ ಧರ್ಮಾನದಿ ಉತ್ತರ ಕನ್ನಡ ಜಿಲ್ಲೆಯಿಂದ ಪಶ್ಚಿಮಾಭಿಮುಖವಾಗಿ ಹರಿದುಕೊಲ್ಲರಡ್ಡಿಎಂಬಲ್ಲಿ ಹಾನಗಲ್ಲು ತಾಲೂಕನ್ನು ಪ್ರವೇಶಿಸುತ್ತದೆ. ಮುಂದುವರೆದುಕೂಡಲಎಂಬ ಗ್ರಾಮದ ಬಳಿ ವರದಾನದಿಯನ್ನು ಸೇರುತ್ತದೆ. ನದಿಗೆ ಹಾನಗಲ್ಲು ತಾಲೂಕಿನಶೃಂಗೇರಿಎಂಬಲ್ಲಿ ಕಲ್ಲುಟ್ಟಡದ ಆಣೆಕಟ್ಟನ್ನು ಕಟ್ಟಲಾಗಿದೆ. ಪ್ರಾಯಶ ಇದನ್ನು ವಿಜಯನಗರ ಕಾಲದಲ್ಲಿ ನಿರ್ಮಿಸಲಾಗಿದೆ.[8] ಮುಂದೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನಯಮಗಳ್ಳಿಗ್ರಾಮದ ಬಳಿ ಮಣ್ಣಿನ ಆಣೆಕಟ್ಟನ್ನು ೧೯೫೭ರಲ್ಲಿ ಕಟ್ಟಿ, ಇನ್ನೊಂದು ಜಲಾಶಯ ನಿರ್ಮಿಸಲಾಗಿದೆ.[9]

ಧರ್ಮಾನದಿಯ ಜಲಾನಯನ ಪ್ರದೇಶ ೯೮ .ಕಿ.ಮೀ. ಆಗಿದ್ದು, ಇದರಿಂದ ವಾರ್ಷಿಕ ೬೪.೨೦ ದಶಲಕ್ಷ ಘನಮೀಟರ್ ನೀರಿನ ಇಳುವರಿ ಇದೆ. ಮನ್ಣಿನ ಆಣೆಕಟ್ಟೆಯ ಒಟ್ಟು ಎತ್ತರ ೨೪.೧೨ ಮೀಟರ್, ಉದ್ದ .೪೪೮ ಮೀಟರ್ ಹಾಗೂ ಜಲಾಶಯದ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ ೨೩ ದಶಲಕ್ಷ ಘನ ಮೀಟರ್ ಆಗಿದೆ.[10] ಜಲಾಶಯದಿಂದ ಹಾನಗಲ್ಲು ತಾಲ್ಲೂಕಿನಲ್ಲಿ .೩೪೨ ಹೆಕ್ಟೇರ್ (೧೮೩೮೨ ಎಕರೆ) ಅಚ್ಚುಕಟ್ಟು ಪ್ರದೇಶ ನೀರಾವರಿಗೊಳಪಟ್ಟಿದೆ. ಇದರ ಎಡದಂಡೆ ಕಾಲುವೆ .ಕಿ.ಮೀ. ಉದ್ದವಾಗಿದೆ. ಸುಮಾರು ೧೮ನೆಯ ಶತಮಾನದಲ್ಲಿ ಧರ್ಮಾನದಿಯ ಕಾಲುವೆಯು ಶಿತಿಲಗೊಂಡಾಗ, ಹಜರತ್ ಮಹಮ್ಮದ್ ಹಬೀಬ್ ಶ್ರೀ ಹರೀಬ ಸಾಹೇಬರು ಕಾಲುವೆಯ ಜೀರ್ಣೋದ್ಧಾರಕ್ಕಾಗಿ ಗಿರಿಯಪ್ಪ ನಾಯಕರಿಗೆ ಭೂದಾನ ಮಾಡಿ ತಮ್ಮ ಸಾಮಾಜಿಕ ಕಳಕಳಿ ತೋರಿಸಿದ್ದನ್ನು ಶಾಸನ ಉಲ್ಲೇಖಿಸುತ್ತದೆ.[11]

ಜಡ್ತಿ ಕಾಲುವೆ

ಉತ್ತರ ಕನ್ನಡ ಜಿಲ್ಲೆಯ ಗುಡ್ಡ ಸಾಲುಗಳಪಾಳಎಂಬಲ್ಲಿ ಹುಟ್ಟಿ ನಿಸರ್ಗದತ್ತವಾಗಿ ಹರಿದು ಬರುವ ಕಾಲುವೆ ಹಾನಗಲ್ಲ ಕೆರೆಗಳ ಮೂಲ ಜೀವ ಜಲವಾಗಿದೆ. ಕಾಲುವೆಯನ್ನು ಕೆರೆಗಳತ್ತ ತಿರುಗಿಸಲಾಗಿದೆ. ಇದು ತನ್ನ ಪ್ರವಾಹ ಪಥದಲ್ಲಿ ಯಾದಗಿರಿ ಕೊಪ್ಪದ ಕೆರೆ, ಹಿರೇಕರಣಗಿ ಕೆರೆ, ಹುಣಸೆಟ್ಟಿ ಕೊಪ್ಪದ ಕೆರೆ, ಅರೆಗೊಪ್ಪ ಕೆರೆ, ಚಿಕ್ಕೇರಿಹೊಸಳ್ಳಿ ಕೆರೆ, ಆನೆಕೆರೆ, ಶಾಸ್ತ್ರಿಹೊಂಡ, ಅಚ್ಚಗೆರೆ, ಕೋಟೆಕೊಳ್ಳ ಹೀಗೆ ತಾಲ್ಲೂಕಿನ ೯೭ ಕೆರೆಕಟ್ಟೆಗಳಿಗೆ ನೀರು ಸರಬರಾಜು ಮಾಡುತ್ತ ಸಾಗಿಅರಳೇಶ್ವರಎಂಬಲ್ಲಿ ಧರ್ಮಾನದಿಯನ್ನು ಸೇರುತ್ತದೆ. ರೀತಿಯ ಕೆರೆಕಟ್ಟೆಗಳ ಜೋಡಣೆಯು ಮಹತ್ವದ ತಾಂತ್ರಿಕತೆಯಾಗಿದ್ದು ಕೆರೆ ಮತ್ತು ಕೋಟೆಕೊಳ್ಳ ಒಣಗದ ಹಾಗೆ ನಿರಂತರ ಜಲ ಸಂಗ್ರಹವನ್ನು ಕಾಯ್ದುಕೊಳ್ಳಲು ಸಾಧ್ಯವಾಗಿತ್ತು.

ಆನೆಕೆರೆ

ಹಾನಗಲ್ಲಿನ ದಕ್ಷಿಣ ದಿಕ್ಕಿಗಿರುವ ಮಳೆಯಾಶ್ರಿತವಾದ ದೊಡ್ಡಕೆರೆ, ಜಡ್ತಿ ಕಾಲುವೆಯ ಮೂಲಕ ಹರಿದು ಬರುವ ನೀರನ್ನು ಕೆರೆಗೆ ತಿರುಗಿಸಲಾಗಿದೆ. ಹೆಚ್ಚುವರಿ ನೀರು ಕೋಡಿಯ ಮೂಲಕ ಕೋಟೆಯ ಸುತ್ತಲಿನ ಕಂದಕಕ್ಕೆ ಹರಿದು ಶಾಸ್ತ್ರಿ ಹೊಂಡ ತಲುಪುತ್ತದೆ. ಕೆರೆಯ ಏರಿಯನ್ನು ವರಟಾದ ದುಂಡು ಕಲ್ಲು ಮತ್ತು ದೇವಾಲಯಕ್ಕೆ ಬಳಸಲಾದ ಶಿಲೆಗಳಿಂದ ನಿರ್ಮಿಸಲಾಗಿದೆ. ಕೆರೆಯ ರಕ್ಷಣೆ ಮತ್ತು ದೀರ್ಘಕಾಲ ಬಾಳಿಕೆಯ ದೃಷ್ಟಿಯಿಂದ ಏರಿಯನ್ನು ಅಂಕು ಡೊಂಕಾಗಿ ರಚಿಸಲಾಗಿದೆ. ಇದರಿಂದಾಗಿ ನೀರಿನ ಒತ್ತಡ ಕೆರೆಯ ಏರಿಯಲ್ಲಿ ಹಂಚಿಹೋಗಿ ಏರಿಯು ಸುರಕ್ಷಿತವಾಗಿರುತ್ತದೆ. ಆಕಸ್ಮಿಕವಾಗಿ ಕೆರೆಕಟ್ಟೆ ಒಡೆದರೂ ಏರಿಯ ಸಣ್ಣ ಭಾಗ ಮಾತ್ರವೇ ಒಡೆದು ದುರಸ್ತಿ ಕಾರ್ಯ ಸುಲಭವಾಗುತ್ತಿತ್ತು. ರೀತಿಯ ತಂತ್ರಜ್ಞಾನವನ್ನು ಕೆರೆ ನಿರ್ಮಾಣದಲ್ಲಿ ಬಳಸಲಾಗಿದೆ. ಕೆರೆಯು ೪೮.೨೮ ಹೆಕ್ಟೇರ್ ಗಳಷ್ಟುಆನೆಕೆರೆಎಂಬ ಹೆಸರು ಬಂದಿರಬಹುದಾಗಿದೆ. ಹೊಯ್ಸಳ ದೊರೆ ವಿಷ್ಣುವರ್ಧನ ತನ್ನ ಗಜಪಡೆಯೊಂದಿಗೆ ಕ್ರಿ.. ೧೧೧೮, ೧೧೨೨, ೧೧೩೫, ೧೧೩೫ ಹೀಗೆ ನಾಲ್ಕು ಬಾರಿ ಕೋಟೆಯ ಮೇಲೆ ದಾಳಿ ಮಾಡಿದನು. ನಂತರ ಇಮ್ಮಡಿ ವೀರ ಬಲ್ಲಾಳನು ಪಾನುಂಗಲ್ಲಿನ ದಕ್ಷಿಣ ಭಾಗದಲ್ಲಿರುವಆನೆ ತಟಾಕ ಬಳಿಯಲ್ಲಿ ತನ್ನ ಗಜಪಡೆಯೊಂದಿಗೆ ಬೀಡು ಬಿಟ್ಟು, ಹಾನಗಲ್ಲು ಕೋಟೆಗೆ ಕ್ರಿ.. ೧೧೯೬ರಲ್ಲಿ ಮುತ್ತಿಗೆ ಹಾಕಿದನು.[12] ಕೋಟೆ ಕಾಳಗದಲ್ಲಿ ಸಾಹಣಿಯೊಬ್ಬನು ವೀರ ಮರಣ ಹೊಂದಿದ್ದನ್ನು ಶಾಸನ ತಿಳಿಸುತ್ತದೆ.[13] ಗಜದಳದ ದೃಶ್ಯವಿರುವ ೧೨ನೆಯ ಶತಮಾನದ ವೀರಗಲ್ಲೊಂದು ಕೋಟೆಭಾಗದಲ್ಲಿ ಕಂಡುಬರುತ್ತದೆ. ಇದು ನಾಲ್ಕು ಸುತ್ತಿನ ಅಭೇದ್ಯ ಕೋಟೆಯಾಗಿತ್ತು. ಅದನ್ನು ಭೇದಿಸುವುದು ತುಂಬಾ ವಿಳಂಬವಾದಾಗ, ಕೆರೆಯ ಆಶ್ರಯದಲ್ಲಿ ಬೀಡು ಬಿಡುವುದು ಅನಿವಾರ್ಯವಾಗುತ್ತಿತ್ತು. ಆನೆಕೆರೆಯ ದಂಡೆಯ ಮೇಲೆ ವೈಭವಪೂರ್ಣವಾದಬಿಲ್ಲೇಶ್ವರದೇವಸ್ಥಾನ ಇದ್ದು, ಈಗ ಗರ್ಭಗೃಹವನ್ನು ಹೊರತುಪಡಿಸಿ ಉಳಿದ ಭಾಗ ನಾಶವಾಗಿದೆ. ದೇವಾಲಯವನ್ನುಬಿಲ್ಲಮುನ್ನೂರ್ವರುಎಂಬ ಸಂಘ ಕ್ರಿ.. ೧೧೧೯ರಲ್ಲಿ ನಿರ್ಮಿಸಿದ್ದರಿಂದಬಿಲ್ಲಾಳೇಶ್ವರ ದೇವಸ್ಥಾನಎಂಬ ಹೆಸರು ಬರಲು ಕಾರಣವಾಗಿದೆ.[14] ದೇವಸ್ಥಾನ ನಿರ್ಮಾಣದೊಂದಿಗೆ ತಲೆಯೆತ್ತುತ್ತಲಿದ್ದ ತಟಾಕ ನಿರ್ಮಾಣ ಒಂದು ದೃಷ್ಟಿಯಿಂದ ಧರ್ಮ ಕಾರ್ಯವೆನಿಸಿದರೂ, ಇನ್ನೊಂದು ದೃಷ್ಟಿಯಿಂದ ಸಾರ್ವಜನಿಕ ಕಾರ್ಯವೆನಿಸಿದ್ದವು. ಶಿವನೊಡನೆ ಗಂಗೆಯೆಂಬಂತೆ ದೇವ ಪ್ರತಿಷ್ಠೆಯೊಂದಿಗೆ ತಟಾಕಗಳ ನಿರ್ಮಾಣ ಮಾಡುವುದು ಪ್ರಾಚೀನ ಕರ್ನಾಟಕದ ವಿಶಿಷ್ಟ ಪದ್ಧತಿ ಎನಿಸಿತ್ತು.[15] ಬಿಲ್ಲಾಳೇಶ್ವರ ದೇವಾಲಯ ನಿರ್ಮಾಣದ ಅವಧಿಯಲ್ಲಿಯೇ ಆನೆಕೆರೆ ನಿರ್ಮಾಣವಾಗಿರಬಹುದು.

ಹಾನಗಲ್ಲು ಆನೆಕೆರೆ ಹತ್ತಿರ ನಡೆದ ಕೋಟೆ ಕಾಳಗದಲ್ಲಿ ಬಿಲ್ಲ ಮುನ್ನೂರ್ವರು ಕೋಟೆ ರಕ್ಷಣೆಗಾಗಿ ಹೋರಾಡಿರಬಹುದು. ಅವರು ಬಿಲ್ಲು ವಿದ್ಯೆಯಲ್ಲಿ ಪ್ರವೀಣರಾದ ಮಹಾನ್ ವೀರರಾಗಿದ್ದರು. ಶಾಸನವು ಅವರನ್ನುಜಗತೀತಳ ವಿಖ್ಯಾತ ಭುವನ ಪರಾಕ್ರಮೋನ್ನತರು, ಕಾಡಾನೆ ಮಲ್ಲರು, ಅಡವಿ ಕಂದಪರು, ದೋಟವಿಳಾಸರು, ಮರೆವುಗೆ ಕಾವರು, ಚಲದಂಕರಾಮರು, ಸಾಹಸಶೌರ್ಯರು, ರಣರಂಗಭೀಮರು, ನಡಿದಂತೆ ಗಂಡರು, ಕದನ ಪ್ರಚಂಡರು, ಏಕಾಂಗ ವೀರರು, ಶರಣಾಗತ ವಜ್ರಪಂಜರು, ಬಿಲ್ಲೇಶ್ವರ ದೇವರ ಪಾದಾರಾದಕರಪ್ಪ ಬಿಲ್ಲಮುನ್ನೂರ್ವರುಎಂದು ವರ್ಣಿಸಿದೆ.[16]

ಹಾನಗಲ್ಲಿನ ಮತ್ತೊಂದು ಪ್ರಮುಖ ಕೆರೆಕುದುರೆಕೆರೆ’. ಅಶ್ವಪಡೆ ಬೀಡುಬಿಡುತ್ತಿದ್ದ ಮತ್ತು ಅಶ್ವಗಳನ್ನು ಮೈ ತೊಳೆಯುತ್ತಿದ್ದರೆನ್ನಲಾದ ಕೆರೆ ಊರ ಎಡಗಡೆ ಪಕ್ಕದಲ್ಲಿದೆ. ಇಲ್ಲಿ ಕ್ರಿ.. ೧೧೧೯ರಲ್ಲಿ ನಡೆದ ತುರು ಕಾಳಗದಲ್ಲಿ ಮೊಸಳೆಯ ಬಮ್ಮನೆಂಬ ಬಂಟನೋರ್ವನು ಮರಣ ಹೊಂದಿದ್ದನ್ನು ಶಾಸನ ಉಲ್ಲೇಖಿಸುತ್ತದೆ.[17] ಕೆರೆಯ ಹತ್ತಿರದಲ್ಲಿ ಯುದ್ಧಭೂಮಿ ಇಲ್ಲವೆ ವೈಹಾಳಿಯ ಬಯಲು (ಆನೆಕುದುರೆಗಳಿಗೆ ತರಬೇತು ಕೊಡುತ್ತಿದ್ದ ಸ್ಥಳ)[18] ಇದ್ದಿರಬಹುದು.

ಹಾನಗಲ್ಲಿನ ಮತ್ತೊಂದು ದೊಡ್ಡಕೆರೆ ಅಚ್ಚಕೆರೆ. ಇದರ ಏರಿಯನ್ನು ಅಂಕುಡೊಂಕಾಗಿ ಮಣ್ಣು ಮತ್ತು ವರಟು ದುಂಡು ಶಿಲೆಗಳಿಂದ ನಿರ್ಮಿಸಲಾಗಿದೆ. ಕೆರೆಯು ೧೨.೬೪ ಹೆಕ್ಟೇರ್ ಗಳಷ್ಟು ನೀರು ನಿಲ್ಲುವ ಒಳಹರವನ್ನು ಹೊಂದಿದ್ದು, ೧೨೭.೦೦ ಎಂ.ಸಿ.ಎಫ್.ಟಿ. ನೀರು ಸಂಗ್ರಹವಾಗುತ್ತದೆ. ಇದರ ಎರಡು ತೂಬುಗಳು ೬೯.೩೫ ಹೆಕ್ಟೇರ್ ಆಯಕಟ್ಟು ಪ್ರದೇಶಕ್ಕೆ ನೀರು ಒದಗಿಸುತ್ತವೆ. ‘ನಾಗಹೊಳ್ಳಿ ಕೆರೆಯು ನೋಡಲು ನಾಗರ ಹಾವಿನ ಹಾಗೆ ಹೊರಳಿದ್ದರಿಂದನಾಗಹೊಳ್ಳಿ ಕೆರೆಎಂದು ಕರೆದಿರಬಹುದು. ಭಾಗದಲ್ಲಿ ನಾಗಾರಾಧನೆ ಪ್ರಭಾವ ಹೆಚ್ಚಾಗಿರುವುದರಿಂದನಾಗರಎಂಬ ಆದಿ ಪದಗಳನ್ನೊಳಗೊಂಡ ಹೆಸರುಗಳು ಹೆಚ್ಚಾಗಿ (ಉದಾ: ನಾಗರಖಂಡ, ನಾಗರ ವಿಳ್ಯೆ, ನಾಗರ ಹಳ್ಳ, ನಾಗರ ಕೆರೆ) ಕಂಡುಬರುತ್ತವೆ. ಇದು ೧೦.೭೧ ಹೆಕ್ಟೇರ್ ಗಳಷ್ಟು ನೀರು ನಿಲ್ಲುವ ಒಳಹರವನ್ನು ಹೊಂದಿದ್ದು, ೨೬.೪೦ ಎಂ.ಸಿ.ಎಫ್.ಟಿ. ನೀರು ಸಂಗ್ರಹಣ ಸಾಮರ್ಥ್ಯ ಹೊಂದಿದೆ. ಸುಮಾರು ೧೦೬.೯೩ ಹೆಕ್ಟೇರ್ ಆಯಕಟ್ಟು ಪ್ರದೇಶ ಹೊಂದಿದೆ. ಕಂಬಳ ಕೆರೆಯು ದೊಡ್ಡದಾದರೂ ಮೇಲಿನ ಮೂರು ಕೆರೆಗಳಿಗಿಂತ ಚಿಕ್ಕದಾಗಿದ್ದು, .೧೮ ಹೆಕ್ಟೇರ್ ನೀರು ನಿಲ್ಲುವ ಒಳಹರವನ್ನು ಹೊಂದಿದೆ. ಇದು ೧೦.೧೦ ಎಂ.ಸಿ.ಎಫ್.ಟಿ. ನೀರು ಸಂಗ್ರಹಣ ಸಾಮರ್ಥ್ಯ ಹೊಂದಿದ್ದು ೫೩.೪೬ ಹೆಕ್ಟೇರ್ ಆಯಕಟ್ಟು ಪ್ರದೇಶಕ್ಕೆ ನೀರು ಸರಬರಾಜು ಮಾಡುತ್ತದೆ.

ಪ್ರಾಚೀನ ಕಾಲದಲ್ಲಿ ಗ್ರಾಮದ ಸೀಮೆಯನ್ನು ಕೆರೆಕಟ್ಟೆಗಳಿಂದ ನಿರ್ಧರಿಸಲಾಗುತ್ತಿತ್ತು.[19] ಹಾನಗಲ್ಲು ಗ್ರಾಮದ ಅಷ್ಟದಿಕ್ಕಿಗೆಅಷ್ಟ ತಟಾಕಗಳಿದ್ದವೆನ್ನಲಾಗಿದೆ.[20] ಹಾನಗಲ್ಲು ದಕ್ಷಿಣಕ್ಕೆ ಆನೆಕೆರೆ, ಪಶ್ಚಿಮಕ್ಕೆ ಕಂಬಳ ಕೆರೆ, ಉತ್ತರಕ್ಕೆ ನಾಗಹೊಳ್ಳಿ ಕೆರೆ ಮತ್ತು ಪೂರ್ವಕ್ಕೆ ಅಚ್ಚಕೆರೆಗಳು, ಉಪದಿಕ್ಕುಗಳಲ್ಲಿ ಕುದುರೆಕೆರೆ, ಅಕ್ಕತಂಗಿಯರ ಕೆರೆ, ರಾಮನಕಟ್ಟಿ, ಕಳ್ಳಿಕಟ್ಟಿ, ಕೆಂಪುಕಟ್ಟಿ, ತೋಪಿನಕಟ್ಟಿ ಎಂಬ ಚಿಕ್ಕ ಕೆರೆಗಳು, ಮೂರ್ತಿಹೊಂಡ, ಕಂಚಿಗೇರಿ ಹೊಂಡ, ಅಂಬಿಗರ ಹೊಂಡ, ಕುಂಬಾರಗುಂಡಿ, ಮುಲ್ಲಾನಗುಂಡಿ ಎಂಬ ಅತಿ ಚಿಕ್ಕ ಕೆರೆಗಳನ್ನು ಹೊಂದಿದ ಹಾನಗಲ್ಲುಕೆರೆ ಗ್ರಾಮ[21]ವೇ ಆಗಿದೆ. ಇಲ್ಲಿಯವರೆಗೆ ನಾಡಿನ ಗುಡಗೇರಿ ಪರಿಸರದಲ್ಲಿ ೧೪ ಕೆರೆಗಳಿರುವ ವಿಚಾರ ಶಿಗ್ಗಾಂವ ಶಾಸನದಲ್ಲಿ ಉಲ್ಲೇಖಿತವಾದರೆ, ಅದಕ್ಕಿಂತಲೂ ಅಧಿಕ ಅಂದರೆ ೧೬ ಕೆರೆಗಳನ್ನು ಹೊಂದಿರುವ ಪ್ರದೇಶದ ಜಲಸಮೃದ್ಧಿಯನ್ನು ಕಲ್ಪಿಸಬಹುದು.

ಹಾನಗಲ್ಲು ತಾಲೂಕಿನ ಕೆರೆಕಟ್ಟೆಬಾವಿ ನೀತಾವರಿ ಪ್ರದೇಶ ಹೆಕ್ಟೇರ್ ಗಳಲ್ಲಿ [22]

ಕಾಲುವೆ (ನದಿ) ಕೆರೆ ಬಾವಿ ಕೊಳವೆ ಬಾವಿ ಇತರೇ ಒಟ್ಟು ನೀರಾವರಿ ಪ್ರದೇಶ ಸಾಗುವಳಿ ಯೋಗ್ಯ ಪ್ರದೇಶ ಪ್ರದೇಶ ಅರಣ್ಯ
,೦೭೦ ,೬೭೬ ೬೮ ೨೭೧೦ ,೪೮೯ ೧೯,೦೧೩ ೭೭,೫೨೫ ,೪೭೪

 

ಹಾನಗಲ್ಲು ತಾಲೂಕಿನ ಪ್ರಮುಖ ನೀರಾವರಿ ಬೆಳೆಗಳು ಹೆಕ್ಟೇರ್ ಗಳಲ್ಲಿ[23]

ತೆಂಗು ಮೆಣಸಿನ ಕಾಯಿ ಅಡಿಕೆ ಎಲೆ ಬಳ್ಳಿ ತರಕಾರಿ ಮಾವು ಬಾಳೆ ಇತರೆ ಹಣ್ಣು ಭತ್ತ ರಾಗಿ ಕಬ್ಬು ಹತ್ತಿ
೫೮೩ ೪೩೩೬ ೧೪೮ ೮೭ ೨೦೯ ೨೭೬ ೭೫ ೨೦೯ ೨೬,೫೨೦ ೯೮೫ ೨೧೨೯ ೬೭೨೨

 

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 


[1] ಭೋಜರಾಜ ಪಾಟೀಲ, ನಾಗರಖಂಡ-೭೦ : ಒಂದು ಅಧ್ಯಯನ, ಆನಂದಪುರ – ೧೯೯೫

[2] ಅದೆ

[3] ಅದೆ

[4] ಶೀಲಾಕಾಂತ ಪತ್ತಾರ, ಬಾದಾಮಿ ಸಾಂಸ್ಕೃತಿಕ ಅಧ್ಯಯನ, ಕ.ವಿ.ವಿ. ಹಂಪಿ – ೨೦೦೦

[5] ಇತಿಹಾಸ ದರ್ಶನ, ಸಂ-೭, ಬೆಂಗಳೂರು – ೧೯೯೨, ಪು-೯೦

[6] ವಾಸುದೇವನ್ ಸಿ.ಎಸ್. ಹಂಪಿ ಪರಿಸರದ ಕೆರೆಗಳು, ಕ.ವಿ.ವಿ. ಹಂಪಿ – ೨೦೦೧

[7] ವಾಸುದೇವನ್ ಸಿ.ಎಸ್. ಹಂಪಿ ಪರಿಸರದ ಕೆರೆಗಳು, ಕ.ವಿ.ವಿ. ಹಂಪಿ – ೨೦೦೧

[8] ದೀಕ್ಷಿತ್ ಜಿ.ಎಸ್., ಜಿ.ಆರ್.ಕುಪ್ಪಸ್ವಾಮಿ, ಎಸ್.ಕೆ.ಮೋಹನ್, (ಕ.ಅ) ನೀಲತ್ತಹಳ್ಳಿ ಕಸ್ತೂರಿ, ಕರ್ನಾಟಕದಲ್ಲಿ ಕೆರೆ ನೀರಾವರಿ, ಕ.ವಿ.ವಿ. ಹಂಪಿ – ೨೦೦೦

[9] ಸೂರ್ಯನಾಥ ಕಾಮತ್, (ಮು.ಸಂ), ಭಾರತದ ಗ್ಯಾಸೆಟಿಯರ್, ಧಾರವಾಡ ಜಿಲ್ಲೆ, ಬೆಂಗಳೂರು – ೧೯೯೫

[10] ಅದೆ

[11] ಕಲಬುರ್ಗಿ ಎಂ.ಎಂ., ಧಾರವಾಡ ಜಿಲ್ಲೆಯ ಶಾಸನಸೂಚಿ, ಧಾರವಾಡ – ೧೯೭೫

[12] ಅದೆ

[13] K.I., V, 59, Hanagal, (1196 A.D.)

[14] K.I., V, ೮೦, Hanagal, (1119 A.D.)

[15] ಚನ್ನಕ್ಕ ಎಲಿಗಾರ, ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ, ಧಾರವಾಡ – ೧೯೯೦

[16] ಅದೆ

[17] K.I., V, ೮೦, Hanagal, (1119 A.D.)

[18] ಚಿದಾನಂದಮೂರ್ತಿ ಎಂ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈ.ವಿ.ವಿ., ಮೈಸೂರು – ೧೯೩೧

[19] ದ್ಯಾಮನಗೌಡ್ರು ವ್ಹಿ.ಕೆ., ಡಂಬಳ ಮತ್ತು ಅದರ ಪರಿಸರ (ಮಾಸವಾಡಿ ೧೪೦ ಸಾಂಸ್ಕೃತಿಕ ಅಧ್ಯಯನ, ಅಪ್ರಕಟಿತ ಪಿಎಚ್.ಡಿ. ಪ್ರಬಂಧ) ಕ.ವಿ.ವಿ., ಧಾರವಾಡ – ೨೦೦೦

[20] ಕ್ಷೇತ್ರಕಾರ್ಯ ಸಂದರ್ಭದಲ್ಲಿ ಗ್ರಾಮಸ್ಥರಿಂದ ಮಾಹಿತಿ

[21] ಕೊಟ್ರಯ್ಯ ಸಿ.ಟಿ.ಎಂ., ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆ, ಕ.ವಿ.ವಿ. ಹಂಪಿ – ೨೦೦೧

[22] ಸೂರ್ಯನಾಥ ಕಾಮತ್, (ಮು.ಸಂ), ಭಾರತದ ಗ್ಯಾಸೆಟಿಯರ್, ಧಾರವಾಡ ಜಿಲ್ಲೆ, ಬೆಂಗಳೂರು – ೧೯೯೫

[23] ಅದೆ