ಹಾನಗಲ್ಲಿನ ಪ್ರಾಚೀನ ದೇವಾಲಯಗಳ ಬೆಳವಣಿಗೆಯ ಹಿನ್ನೆಲೆಯಾಗಿ ಕಲ್ಯಾಣದ ಚಾಲುಕ್ಯರ ಆಗಮನಕ್ಕಿಂತ ಮುಂಚಿನ ದೇವಾಲಯ ವಾಸ್ತುವಿನ ಕುರಿತು ಒಂದೆರಡು ಮಾತುಗಳು ಪ್ರಸ್ತುತವಾಗುತ್ತವೆ. ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಬಾದಾಮಿ, ಮಹಾಕೂಟ, ಐಹೊಳೆ, ಆಲಂಪುರ, ಪಟ್ಟದಕಲ್ಲು, ಮುಂತಾದೆಡೆ ಔತ್ತರೇಯ ಮತ್ತು ದಕ್ಷಿಣಾತ್ಯ ದೇಗುಲ ವಾಸ್ತು ರಚನೆಯಲ್ಲಿ ಹಲವಾರು ಪ್ರಯೋಗಗಳಾದವು. ‘ನಾಗರ’ (ರೇಖಾನಾಗರ), ‘ಪಾಂಸನಾಮತ್ತುದ್ರಾವಿಡಪ್ರಭೇದಗಳು ಸ್ವತಂತ್ರ ಮತ್ತು ಮಿಶ್ರ ರೀತಿಯಲ್ಲಿ ಅಭಿವ್ಯಕ್ತಿ ಕಂಡವು. ಕೂಲಂಕುಷವಾಗಿ ಪರಿಶೀಲಿಸಿದಾಗ, ಕರ್ನಾಟಕದ ವಾಸ್ತುಶಿಲ್ಪಗಳು ೮ನೆಯ ಶತಮಾನಗಳಲ್ಲಿ ರಚಿಸಿದ ಕೆಲವುನಾಗರಮತ್ತುದ್ರಾವಿಡದೇಗುಲಗಳಲ್ಲಿ ಒಂದರ ಲಕ್ಷಣಗಳು ಇನ್ನೊಂದರಲ್ಲಿ ಅರಿತೋ ಅರಿಯದೆಯೋ ನುಸುಳಿರುವುದು ಕಾಣುತ್ತದೆ. ನರಸೊಬ್ಬನು ಐಹೊಳೆಯಲ್ಲಿ ನಿರ್ಮಿಸಿದ ಹುಚ್ಚಪ್ಪಯ್ಯಗುಡಿ ಮೂಲಭೂತವಾಗಿ ರೇಖಾನಗರ ಪ್ರಾಸಾದವಾಗಿದ್ದರೂ, ಅದರ ಗೂಢಮಂಟಪದ ದ್ವಾರಬಂಧದ ಉತ್ತರಾಂಗದಲ್ಲಿ ದ್ರಾವಿಡ ಶಾಲಾ ವಿನ್ಯಾಸ ಒಡೆದು ಕಾಣುತ್ತಿದೆ! ಅದರಂತೆ ಪಟ್ಟದಕಲ್ಲಿನ ಪಾಪನಾಥ ಗುಡಿಯು ಶಿಖರವನ್ನೂ ಒಳಗೊಂಡಂತೆ ರೇಖಾನಾಗರ ಪ್ರಾಸಾದದ ಹಲವು ಲಕ್ಷಣಗಳಿಂದ ಕೂಡಿದ್ದರೂ, ಅದರ ಆದಿಭೂಮಿಯು ಅಂತ್ಯವು ಕೂಟಶಾಲಾಗಳನ್ನೊಳಗೊಂಡ ದಾಕ್ಷಿಣಾತ್ಯ ಮುಚತುಷ್ಕಿಯ ಮೇಲೆನಾಗರಸಂಪ್ರದಾಯದಶುಕನಾಸಚಾಚಿಕೊಂಡಿದೆ. ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ಗುಡಿಗಳಲ್ಲಿಶುಕನಾಸ’, ‘ಕಕ್ಷಾಸನದಂತಹನಾಗರಲಕ್ಷಣಗಳು ದ್ರಾವಿಡ ವಾಸ್ತು ರೂಪದೊಂದಿಗೆ ಮನಮೋಹಕವಾಗಿ ಬೆಸೆದುಕೊಂಡಿರುವುದು ಕಾಣುತ್ತದೆ. ಧರ್ಮಗಳ ಸ್ವರೂಪದಲ್ಲಿ ಉಂಟಾದ ಪರಿವರ್ತನೆಗಳಿಂದ ದೇಗುಲಗಳ ತಲವಿನ್ಯಾಸ ಕೂಡ ಅವಶ್ಯಕತೆಗಳಿಗೆ ತಕ್ಕಂತೆ ಹೊಸ ಹೊಸ ರೂಪಗಳನ್ನು ಕಂಡಿತು. ಉದಾಹರಣೆಗೆ, ಪಾಶುಪತ ಶೈವ ದೇಗುಲಗಳಲ್ಲಿ ಗೂಢಮಂಟಪಕ್ಕೆ ಮೂರು ದಿಕ್ಕುಗಳಲ್ಲಿ ಮೂರು ದ್ವಾರಗಳನ್ನಳವಡಿಸುವ ಕ್ರಮಕ್ಕೆ ಶಿವನ ತತ್ಪುರುಷ, ವಾಮದೇವ, ಅಘೋರ, ಸದ್ಯೋಜಾತ ಎಂಬ ಕಲ್ಪನೆಯಾಗಲಿ, ತ್ರೈಪುರುಷ ಕಲ್ಪನೆಯಾಗಲಿ ಹಾದಿಮಾಡಿದಂತೆ ತೋರುತ್ತದೆ. ಚಲುಕ್ಯೋತ್ತರ ಕಾಲದಲ್ಲಿ ನಾಗರ, ಪಾಂಸನಾ ಮತ್ತು ದ್ರಾವಿಡ ಪ್ರಬೇಧಗಳು ಕರ್ನಾಟಕದಲ್ಲಿ ಮುಂದುವರಿದವಾದರೂ, ಕರ್ನಾಟಕ ವಾಸ್ತುಶಿಲ್ಪಿಗಳ ಛಾಪು ಅವುಗಳ ರೂಪದಲ್ಲಿ ಒಡೆದು ಕಾಣುತ್ತದೆ. ಹಾಗೆಯೇ ಧಾರ್ಮಿಕ ಅವಶ್ಯಕತೆಗಳಿಂದ ರೂಪುಗೊಂಡ ತಲವಿನ್ಯಾಸಗಳು ಚಲುಕ್ಯೋತ್ತರ ಕಾಲದಲ್ಲಿ ಮತ್ತೂ ವಿಕಾಸ ಹೊಂದಿವೆ.

ಕದಂಬರ ರಾಜಧಾನಿಯಾಗಿ ಹಾನಗಲ್ಲು ಸಹಜವಾಗಿಯೇ ಅಂದಿನಮೆಟ್ರೊಪಾಲಿಟನ್ವಾಸ್ತು ಸಂಪ್ರದಾಯಗಳ ಆಗರವಾಯಿತು. ಅಲ್ಲಿ ಉಳಿದುಬಂದಿರುವ ಕದಂಬರ ಕಾಲದ ಕೆಲವೆ ದೇಗುಲಗಳು ಮತ್ತು ಅವುಗಳ ವಿವರಗಳು ಹೇಳಿಕೆಗೆ ಜೀವಂತ ನಿದರ್ಶನವೊದಗಿಸುತ್ತಿವೆ. ಕಲ್ಯಾಣದ ಚಾಲುಕ್ಯ ಮತ್ತು ಹಾನುಗಲ್ಲಿನ ಕದಂಬರ ಕಾಲದ ಹಾನಗಲ್ಲಿನ ಗುಡಿಗಳ ವಾಸ್ತು ವಿವರ ಮತ್ತು ಶಿಲ್ಪಗಳ ವೈಶಿಷ್ಟ್ಯಗಳನ್ನು ಸಂಕ್ಷಿಪ್ತವಾಗಿ ತಿಳಿಸುವುದು ಪ್ರಬಂಧದ ಉದ್ದೇಶ. ಸ್ವತಃ ನೋಡಿ ಅವುಗಳ ಸೌಂದರ್ಯವನ್ನು ಸವಿಯುವುದು ಬಹು ಯೋಗ್ಯವಾದುದು.

ಬಿಲ್ಲೇಶ್ವರ ಗುಡಿ

ಹಾನಗಲ್ಲಿನ ಜೀರ್ಣಗೊಂಡಿರುವ ಕೋಟೆಯಲ್ಲಿ ಭಾಗಶಃ ಹಾಳಾಗಿರುವ ಆದರೆ ಆಕರ್ಶಕವಾಗಿರುವ ಬಿಲ್ಲೇಶ್ವರ ಗುಡಿಯ (ಛಾಯಾಚಿತ್ರ ) ವಿಮಾನ ಮಾತ್ರ ಉಳಿದಿದೆ. ವಿಮಾನದ ಕರ್ಣ ಮತ್ತು ಭದ್ರಗಳಲ್ಲಿ ಹೆಚ್ಚು ಆಳವಿಲ್ಲದ ಕೋಷ್ಠಗಳಿದ್ದು, ಅವುಗಳಿಗೆ ಮೇಲೆ ವೇಸರಕೂಟಗಳಿವೆ. ಸಲಿಲಾಂತರಗಳಲ್ಲಿ ತೋರಣಾನ್ವಿತ ಕೂಟಸ್ತಂಭಗಳಿವೆ. ಗರ್ಭಗೃಹದ ದ್ವಾರಬಂಧವು ಪಂಚಶಾಖಾ ರೀತಿಯದು (ಛಾಯಾಚಿತ್ರ ). ಇದು ಕಲ್ಪದ್ರುಮದಿಂದಾದ ಬಾಹ್ಯಶಾಖೆ, ಬಳ್ಳಿಯ ಸುರುಳಿಗಳೊಳಗೆ ಚಿತ್ರಿಸಿರುವ ವ್ಯಾಳಗಳಿಂದೊಡಗೂಡಿದ ವ್ಯಾಳಶಾಖೆ, ದೇವದಂಪತಿಗಳಿಂದ ಕೂಡಿದ ಮಿಥುನ ಶಾಖೆ, ನಾಗನಾಗಿಣಿಯರಿಂದಾದ ನಾಗಶಾಖೆ ಮತ್ತು ಅಲಂಕಾರಯುತ ರತ್ನಗಳ ಸಾಲು ಇರುವ ರತ್ನಶಾಖೆಗಳನ್ನೊಳಗೊಂಡಿದೆ. ದ್ವಾರಬಂಧದ ಶಾಖೆಗಳಲ್ಲಿ ಸ್ತಂಭಶಾಖೆ ಇರುವುದು ಸಾಮಾನ್ಯ. ಆದರೆ ಇಲ್ಲಿ ಅದು ಇರದಿರುವುದು ವಿಶೇಷವೆನಿಸಿದೆ. ದ್ವಾರಬಂಧದ ಅಡ್ಡತೊಲೆ ಶಿಥಿಲವಾಗಿದ್ದು, ಅದರ ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ಅಡ್ಡತೊಲೆಯ ಉತ್ತರ ಅಥವಾ ತಂತ್ರಕ ಭಾಗದಲ್ಲಿ ಮುತ್ತುಗಳ ಹಾರವಿರುವ ಮಾಲೆಯಿದೆ. ಪೇದ್ಯಾಗಳು ಕಾಮ, ರತಿ, ವಸಂತ ಮುಂತಾದ ದೇವತೆಗಳ ಶಿಲ್ಪಗಳನ್ನೊಳಗೊಂಡಿವೆ (ಛಾಯಾಚಿತ್ರ ). ವಿಮಾನ ಮತ್ತು ದ್ವಾರಬಂಧಗಳೆರಡೂ ೧೧ನೆಯ ಶತಮಾನದ ಉತ್ತರಾರ್ಧದ ಲಕ್ಷಣಗಳನ್ನು ತೋರ್ಪಡಿಸುತ್ತವೆ.

೧೧೧೯ರ ಕದಂಬ ತೈಲಪದೇವನ ಶಾಸನದಲ್ಲಿ ಬಿಲ್ಲೇಶ್ವರ ದೇವರ ಉಲ್ಲೇಖವಿದೆ.[1]ಆಗ ದೇವಾಲಯ ಆಗಲೇ ಅಸ್ತಿತ್ವದಲ್ಲಿತ್ತೆಂಬುದು ಸ್ಪಷ್ಟ. ಇದು ಕಾಳಾಮುಖರ ಪ್ರಮುಖ ದೇಗುಲವಾಗಿತ್ತೆಂದೂ ಇದಕ್ಕೆ ಪ್ರತಿಬದ್ಧವಾಗಿ ಮೂಲಸ್ಥಾನ ದೇವರ ಹಾಗೂ ಇನ್ನಿತರ ಶೈವ ದೇಗುಲಗಳು ಹಾನಗಲ್ಲಿನಲ್ಲಿ ಇದ್ದವೆಂದೂ ಶಾಸನದಿಂದ ವ್ಯಕ್ತವಾಗುತ್ತದೆ. ದೇವರಾಸಿಪಂಡಿತನ ಉಲ್ಲೇಖವಿರುವುದರಿಂದ ಬಿಲ್ಲೇಶ್ವರವು ಕಾಳಾಮುಖ ಶೈವ ಸಂಪ್ರದಾಯದ ದೇಗುಲವಾಗಿತ್ತೆಂದೂ ಸ್ಪಷ್ಟವಿದೆ.

ಶಾಸ್ತ್ರೀಕುಂಡದ ಸಮೀಪದ ಗುಡಿಯ ದ್ವಾರಬಂಧ

ಹಾನಗಲ್ಲಿನ ಶಾಸ್ತ್ರೀಕುಂಡದ ಸಮೀಪದಲ್ಲಿರುವ ದೇಗುಲದ ದ್ವಾರಬಂಧವು ಗಮನಾರ್ಹವಾದುದು. ಈಗಿರುವ ಗುಡಿ ವಿಜಯನಗರೋತ್ತರ ಕಾಲದ್ದಾಗಿದ್ದರೂ, ಕಲ್ಯಾಣದ ಚಾಲುಕ್ಯರ ಕಾಲದ ಯಾವುದೋ ದೊಡ್ಡ ದೇಗುಲದ ಗದ್ವಾರಬಂಧವು ಇಲ್ಲಿ ಬಳಕೆಯಾಗಿದೆ. ದ್ವಾರಬಂಧದ ಮೂಲ ಅಡ್ಡತೊಲೆ ಈಗ ಇಲ್ಲ. ಷಟ್ಯಾಖಾ ಪ್ರಕಾರದ ದ್ವಾರಬಂಧದಲ್ಲಿ ಕಲ್ಪದ್ರುವವನ್ನೊಳಗೊಂಡ ಬಾಹ್ಯಶಾಖೆ, ಪದ್ಮರೂಪದ ಖಲ್ವ, ವ್ಯಾಳಶಾಖೆ (ಬಲಭಾಗದಲ್ಲಿ ಶಾಖೆಯ ಪ್ರಾರಂಭದಲ್ಲಿ ನಾಗಿಣಿಯರಿದ್ದಾರೆ), ಸ್ತಂಭಶಾಖೆ (ಇದು ಮೂರು ಹಂತಗಳಲ್ಲಿ ಲಂಬಪಟ್ಟಿಕೆಗಳನ್ನೊಳಗೊಂಡಿದ್ದು, ಮೇಲ್ಭಾಗದಲ್ಲಿ ಘಟಪಲ್ಲವವಿದೆ), ಬಳ್ಳಿಯ ಸುರುಳಿಗಳಲ್ಲಿರುವ ಮನುಷ್ಯರನ್ನೊಳಗೊಂಡ ಮಾನುಷಶಾಖೆ ಮತ್ತು ರತ್ನಶಾಖೆಗಳಿಂದೊಡಗೂಡಿದೆ. ಬಿಲ್ಲೇಶ್ವರದ ಗುಡಿಯ ದ್ವಾರಬಂಧವನ್ನು ಸಾಕಷ್ಟು ಹೋಲುವುದರಿಂದ ಇದರ ಕಾಲವೂ ೧೧ನೆಯ ಶತಮಾನವಿರಬಹುದು.

ತಾರಕೇಶ್ವರ ದೇವಾಲಯ

ಹಾನಗಲ್ಲಿನಲ್ಲಿರುವ ದೇವಾಲಯಗಳಲ್ಲಿ ತಾರಕೇಶ್ವರ ದೇಗುಲ ಅತಿ ದೊಡ್ಡದು (ಛಾಯಾಚಿತ್ರ ). ಅಷ್ಟೆ ಅಲ್ಲ ಇಡೀ ಚಾಲುಕ್ಯ ಪ್ರದೇಶದಲ್ಲಿ ಉಳಿದುಬಂದಿರುವ ಅತಿ ಉದ್ದದ (೫೦ ಮೀಟರ್) ದೇಗುಲವಾಗಿದೆ. ಕೆಲವು ದೃಷ್ಟಿಕೋನಗಳಿಂದ ಹಾನಗಲ್ಲು ಕದಂಬರಾಳಿದ ಪ್ರದೇಶದಲ್ಲಿಯೇ ಇದು ವೈಶಿಷ್ಟ್ಯಪೂರ್ಣವಾದುದು. ಬೃಹತ್ ದೇವಾಲಯಕ್ಕೆ ಗರ್ಭಗೃಹ, ಅಂತರಾಳ, ಮೂರು ದಿಕ್ಕುಗಳಿಂದ ಪ್ರವೇಶವಿರುವ ಗೂಢಮಂಟಪ, ಅದರ ಮೂರೂ  ಪ್ರವೇಶಗಳಿಗೆ ವಿಶಾಲ ಮುಖಮಂಟಪಗಳು, ಪೂರ್ವ ಮುಖಮಂಟಪಕ್ಕೆ ಹೊಂದಿಕೊಂಡು ಇಬ್ಬದಿಗಳಿಂದ ಪ್ರವೇಶವಿರುವ ಬಹು ವಿಶಾಲವಾದ ತೆರೆದ ರಂಗಮಂಟಪ ಮತ್ತು ರಂಗಮಂಟಪಕ್ಕೆ ಮುಂದುಗಡೆ (ಪೂರ್ವದಿಕ್ಕಿನಲ್ಲಿ) ಹೊಂದಿಕೊಂಡಿರುವ ಅರ್ಧ ತೆರೆದಿರುವ ನಂದಿಮಂಟಪ ಇವೆ. ಬೃಹತ್ ಮೂಲ ಪ್ರಾಸಾದಕ್ಕೆ (ವಿಮಾನಕ್ಕೆ) ನಾಲ್ಕು ಭೂಮಿಗಳಿವೆ. ಆದುದರಿಂದ ಇದು ಕರ್ನಾಟಕದಲ್ಲಿ ಚಾಲುಕ್ಯ ಶೈಲಿಯ ಚುತುರ್ಭೂಮಿ ದ್ರಾವಿಡ ಪ್ರಾಸಾದ (ಛಾಯಾಚಿತ್ರ ).

ಮೂಲ ಪ್ರಾಸಾದದ ಅಧಿಷ್ಠಾನವು ಖುರಕ, ಪದ್ಮ, ಕುಮುದು, ಕಪೋತ, ಮಕರಪಟ್ಟಿಕೆ ಮತ್ತು ವೇದಿಯಿಂದಾಗಿದೆ. ಗೋಡೆಯ ಭದ್ರಗಳು ಎತ್ತರವಾದ ಖಟ್ಟಕಗಳಿಂದಾಗಿದ್ದು, ವೇಸರ ಮಾದರಿಯ ವಿಮಾನಗಳನ್ನು ಹೊತ್ತಿವೆ. ಕರ್ಣಗಳಲ್ಲಿ ವಿಮಾನಗಳಿರುವ ಕೋಷ್ಠಪಂಜರಗಳಿವೆ. ಪ್ರತಿರಥಗಳಲ್ಲಿ ಭದ್ರಕ ಪ್ರಕಾರದ ಸ್ತಂಭಗಳಿವೆ. ಸಲಿಲಾಂತರಗಳಲ್ಲಿ ಕೂಟಸ್ತಂಭಗಳು ದ್ರಾವಿಡ, ನಾಗರ (ಛಾಯಾಚಿತ್ರ ) ಮತ್ತು ಭೂಮಿಜ ಶಿಖರಗಳ ವಿವಿಧ ಮಾದರಿಗಳನ್ನು ಹೊತ್ತಿವೆ. ಕೂಟಸ್ತಂಭಗಳಿಗೆ ಮೇಲ್ಗಡೆ ಅಲಂಕಾರಯುತ ತೋರಣಗಳಿವೆ. ಕಪಿಲಿಯ ಗೋಡೆಯಲ್ಲಿ ಪ್ರಧಾನ ಅರೆಗಂಬವಿದ್ದು, ಅದರ ಪಾರ್ಶ್ವಗಳಲ್ಲಿ ತೋರಣಗಳಡಿಯಲ್ಲಿ ಕೂಟಸ್ತಂಭಗಳಿವೆ. ಹಾರದ ವಿವರಗಳು ಗೋಡೆಯ ಮುಂಚಾಚು ಹಿಂಚಾಚುಗಳನ್ನು ಅನುಸರಿಸಿವೆ. ಇದೆ ವಿನ್ಯಾಸದ ಮುಂದುವರಿಕೆಯನ್ನು ಉಳಿದ ಮೂರೂ ಭೂಮಿಗಳಲ್ಲೂ ಕಾಣಬಹುದು. ನಾಲ್ಕನೆಯ ಭೂಮಿಯ ತರುವಾಯ ವೇದಿಕಾ ರಚನೆಯಿದ್ದು, ಗ್ರೀವದ ಮೇಲ್ಗಡೆ ಘಂಟಾ ಭಾಗವಿದೆ. ಇದರ ಮೇಲ್ಗಡೆ ಮೂಲತಃ ಕಲಶವಿದ್ದಿರಬೇಕು. ಈಗ ಗಾರೆಯಿಂದ ರಚಿಸಿದ ಗುಮ್ಮಟದ ಮೇಲೆ ಕಳಶ ಗೋಚರಿಸುತ್ತಿದೆ. ಶಿಖರದ ಪೂರ್ವ ಮುಖದಿಂದ ಮೂರನೆಯ ಭೂಮಿಯಷ್ಟು ಎತ್ತರವಿರುವ ಶುಕನಾಸ ಮುಂಚಾಚಿದೆ. ಇದರ ಮೇಲ್ಗಡೆ (ಕೆಲವು ಹೊಯ್ಸಳ ದೇವಾಲಯಗಳಲ್ಲಿರುವಂತೆ) ಸಿಂಹದೊಂದಿಗೆ ಸೆಣಸುವ ಯೋಧನ ದುಂಡುಶಿಲ್ಪವಿದೆ (ಛಾಯಾಚಿತ್ರ ).

ಮೂಲಪ್ರಾಸಾದಕ್ಕಿರುವಂತೆ ಗೂಢಮಂಟಪದ ಗೋಡೆಗೂ ಕೋಷ್ಠಪಂಜರಗಳಿರುವ ಕರ್ಣಗಳಿವೆ. ಪ್ರತಿರಥ ಮತ್ತು ಪ್ರತಿ ಕರ್ಣಗಳನ್ನು ಭದ್ರಕ ಪ್ರಕಾರದ ಕುಡ್ಯಸ್ತಂಭಗಳಿಂದ ಸೂಚಿಸಿದೆ. ಪಾರ್ಶ್ವಚತುಷ್ಕಿ ಮಂಟಪಗಳಿಗೆ ವೇದಿಕಾ ಆಸನಪಟ್ಟಕಕ್ಷಾಸನ ಪ್ರಕಾರದ ಗೋಡೆಯನ್ನು ರೂಪಿಸಿದೆ. ರಂಗಮಂಟಪದ ಮುಖಮಂಟಪಗಳಿಗೂ ಇದೆ ವ್ಯವಸ್ಥೆ ಮಾಡಿದೆ. ಕುಳ್ಳಗಾಗಿರುವ ಚಿತ್ರಖಂಡ ಕಂಬಗಳು ವೃತ್ತಾಕಾರದ ಲಶುನಭಾಗವನ್ನು, ಚೌಕದ ಕೆಳಗೆ ಅಲಂಕೃತ ಪಟ್ಟಿಯನ್ನು ಒಳಗೊಂಡಿದೆ. ಇವು ಬಂಕಾಪುರದ ಗೂಢಮಂಟಪದ ಕಂಬಗಳನ್ನು ಹೋಲುತ್ತವೆ. ಗೂಢಮಂಟಪದ ಪೂರ್ವ ಗೋಡೆಯಲ್ಲಿ ಅತ್ಯುತ್ತಮ ರೀತಿಯ ದೇಗುಲ ಮಾದರಿಗಳನ್ನು ಪ್ರದರ್ಶಿಸುತ್ತವೆ. ಇವುಗಳಲ್ಲಿ ಅನೇಕಾಂಡ (ಶೇಖರೀ) ಮಾದರಿಯ ಶಿಖರಗಳಿರುವ ದೇಗುಲ ಮಾದರಿಗಳು ಗಮನಾರ್ಹವಾಗಿವೆ (ಛಾಯಾಚಿತ್ರ ). ಗೂಢಮಂಟಪದ ಮೂರೂ ಪ್ರವೇಶಗಳಿಗಿರುವ ದ್ವಾರಬಂಧಗಳು ಬಹಳ ಅಲಂಕಾರಪೂರಿತವಾಗಿವೆ. ಅವುಗಳ ಲಲಾಟಬಿಂಬಗಳು ಬೇರೆ ಬೇರೆ ದೇವತೆಗಳನ್ನೊಳಗೊಂಡಿವೆ. ಪೂರ್ವದ ದ್ವಾರಬಂಧದ ಲಲಾಟದಲ್ಲಿ ಗಜಲಕ್ಷ್ಮಿ, ದಕ್ಷಿಣದ ದ್ವಾರಬಂಧದ ಲಲಾಟದಲ್ಲಿ ನೃತ್ಯ ಗಣೇಶ ಮತ್ತು ಉತ್ತರದ ದ್ವಾರಬಂಧದ ಲಲಾಟದಲ್ಲಿ ಸರಸ್ವತಿ ಚಿತ್ರಗಳಿವೆ. ಗೂಢಮಂಟಪದೊಳಗೆ ಸಾಮಾನ್ಯವಾಗಿ ಇರುವಂತೆ ನಾಲ್ಕು ಕಂಬಗಳಿವೆ. ಇವುಗಳ ಚೌಕ ಪೀಠದ ಮೂಲೆಗಳಲ್ಲಿ ನಾಗರ ಶಿಖರಗಳನ್ನು ಹೊತ್ತಿರುವ ಕಂಬಗಳು ಮತ್ತು ಮುಖಗಳಲ್ಲಿ ಚಾಮುಂಡಿ, ಗಣೇಶ, ಸರಸ್ವತಿ, ವೀರಭದ್ರ, ಭೈರವ, ಭೈರವಿ, ಸ್ಥಾನಕ ವಿಷ್ಣು, ಸೂರ್ಯ, ಪಾರ್ವತಿ, ಉಗ್ರನರಸಿಂಹ ಮುಂತಾದ ದೇವತೆಗಳ ಉಬ್ಬು ಶಿಲ್ಪಗಳನ್ನು ಮಕರತೋರಣದ ಕೆಳಗೆ ರೂಪಿಸಿದ್ದಾರೆ. ಗೂಢಮಂಟಪದ ಒಳಗಡೆ ಗೋಡೆಗಳಲ್ಲಿ ಎಂಟು ದೇವಕೋಷ್ಠಗಳಿದ್ದು, ಅವುಗಳ ಲಲಾಟಬಿಂಬಗಳಲ್ಲಿ ನಾಲ್ಕು ಗಣೇಶ, ಎರಡು ಸರಸ್ವತಿ ಮತ್ತು ಒಂದು ಲಕ್ಷ್ಮಿಯ ಕೆತ್ತನೆಗಳಿವೆ. ದೇವಕೋಷ್ಠಕಗಳಲ್ಲಿ ಈಗ ಎರಡು ವಿಷ್ಣು ವಿಗ್ರಹಗಳು, ಎರಡು ಕುಮಾರ ವಿಗ್ರಹಗಳು, ಒಂದು ಬ್ರಹ್ಮನ ವಿಗ್ರಹ, ಒಂದು ಸೂರ್ಯ ವಿಗ್ರಹ ಇವೆ. ಉಳಿದೆರಡರಲ್ಲಿ ವಿಗ್ರಹಗಳಿಲ್ಲ. ಅಂತರಾಳವನ್ನು ಗೂಢಮಂಟಪದಿಂದ ಬೇರ್ಪಡಿಸಲು ಇಕ್ಕೆಲಗಳಲ್ಲಿ ಶಿಲಾಪರದೆಗಳಿದ್ದು, ಮೇಲ್ಗಡೆ ತ್ರಿಮೂರ್ತಿ ತೋರಣವಿದೆ. ದೊಡ್ಡಪ್ರಮಾಣದಲ್ಲಿರುವ ಗರ್ಭಗೃಹ ದ್ವಾರಬಂಧದ ಲಲಾಟಬಿಂಬದಲ್ಲಿ ಗಣೇಶನ ಶಿಲ್ಪ ಹಾಗೂ ಗರ್ಭಗೃಹದಲ್ಲಿ ಲಿಂಗವಿದೆ.

ತಾರಕೇಶ್ವರ ದೇಗುಲದ ಮುಖ್ಯ ಗಮನೀಯ ಭಾಗವೆಂದರೆ, ವಿಶಾಲ ರಂಗಮಂಟಪದ ಒಳಭಾಗ. ಇದರಲ್ಲಿರುವ ಸುಮಾರು ೨೦ ಅಡಿ ಸಾಗಿರುವ ಬೃಹತ್ ಕರೋಟಕ ವಿತಾನವು ಅತ್ಯಾಕರ್ಷಕವಾದುದು. ಶಾಲಾದಲ್ಲಿರುವ ಹೆಚ್ಚು ಅಂತರದಲ್ಲಿರುವ ನಾಲ್ಕು ಕಂಬಗಳು, “ಶ್ರೀಕಾರಪ್ರಕಾರವಾಗಿದ್ದು, ಅಲಂಕಾರಯುತವೂ ಹೊಳಪುಳ್ಳವೂ ಆಗಿವೆ. ಇವು ಮೇಲಿರುವ ಕ್ಷಿಪ್ತೋತ್ಕ್ಷಿಪ್ತ ಅಲಂಕಾರಪೂರಿತ ವಿತಾನವಾಗಿದ್ದು, ಕರ್ನಾಟಕದಲ್ಲಿಯೇ ಅತಿ ದೊಡ್ಡದೆನಿಸುವಸಭಾಪದ್ಮ ಮಂದಾರಕರೀತಿಯ ವಿತಾನವೆನಿಸಿದೆ. ವಿಶಾಲ ವಿತಾನದ ಭಾರವನ್ನು ತಡೆಯಲು ಮುಖ್ಯ ಕಂಬಗಳ ಜೋಡಿಗಳ ನಡುವಣ ಅವಕಾಶದಲ್ಲಿ ತೊಲೆಗಳಿಗೆ ಆಧಾರವೊದಗಿಸುವ ತೆಳುವಾದ ಜೋಡುಗಂಬಗಳನ್ನು ನಿಲ್ಲಿಸಲಾಗಿದೆ. ತೊಲೆಗಳ ಮುಖಗಳಲ್ಲಿ ಅಷ್ಟದಿಕ್ಪಾಲಕರ ಶಿಲ್ಪಗಳಿವೆ. ಗುಮ್ಮಟಾಕಾರದ ವಿತಾನವು ತಳಭಾಗದಲ್ಲಿ ಗಜತಾಲು ಸಾಲಿನೊಂದಿಗೆ ಆರಂಭವಾಗಿದ್ದು, ಅದರ ಮೇಲ್ಗಡೆ ಕಿರಿದಾಗುತ್ತ ಸಾಗುವ ಐದು ಕೋಲಗಳ ಸಾಲುಗಳಿವೆ. ವಿತಾನದ ಮಧ್ಯದಿಂದ ದೊಡ್ಡ ಐದು ಅಡಿಯಷ್ಟು ವಿಶಾಲ ಲಂಬನಪದಕವಿದೆ. ಇದರ ಮೊದಲೆರಡು ಸಾಲುಗಳು ಉತ್ಕ್ಷಿಪ್ತಲೂಮಾಗಳಿಂದಾಗಿವೆ. ಇದಾದ ಮೇಲೆ ಕಿರು ಕೋಲಾಗಳಿಂದೊಡಗೂಡಿದ ದೊಡ್ಡ ಗಾತ್ರದ ಪದ್ಮಕೇಶರವು ಕೆಳಗಿಳಿದಿದೆ. ಆಸನಪಟ್ಟದ ಮೇಲಿರುವ ಕುಳ್ಳ ಕಂಬಗಳು ಗೂಢಮಂಟಪದ ಕಂಬಗಳಂತಿದ್ದರೂ, ಅಲಂಕಾರ ಕಡಿಮೆ. ರಂಗಮಂಟಪದಲ್ಲಿರುವ ೨೮ ಸ್ವತಂತ್ರ ಕಂಬಗಳು ಹಾಗೂ ಅಂಚಿನ ವೇದಿ ಆಸನದ ಮೇಲಿರುವ ೨೮ ಕಿರುಗಂಬಗಳು ಸೇರಿ ಒಟ್ಟು ೫೬ ಕಂಬಗಳಿವೆ. ರಂಗಮಂಟಪವು ದಕ್ಷಿಣೋತ್ತರವಾಗಿ ಸುಮಾರು ೬೪ ಅಡಿ ಉದ್ದವಿದೆ. ಪೂರ್ವ ಮುಖಮಂಟಪದಲ್ಲಿ ಪದ್ಮನಾಭ ಪ್ರಕಾರದ ಮಧ್ಯ ವಿತಾನವಿದೆ. ರಂಗಮಂಟಪದ ಹೊರಭಾಗವು ಬಂಕಾಪುರ, ಕುಂದಗೋಳ ಮುಂತಾದೆಡೆ ಇರುವ ದೇಗುಲಗಳ ರಂಗಮಂಟಪದ ಸ್ವರೂಪವನ್ನು ನೆನಪಿಸುತ್ತದೆ. ರಂಗಮಂಟಪದ ಚಾವಣಿಯ ಹೊರನೋಟವೂ ಉಲ್ಲೇಖನೀಯ. ಇದು ಫಾಂಸಾಕಾರವನ್ನು ಹೋಲುವ ಸಂವರಣ ಪ್ರಕಾರದ ಶಿಖರವನ್ನು ಹೊತ್ತಿದೆ. ವಿಶಾಲ ರಂಗಮಂಟಪಗಳಿದ್ದಾಗ ರೀತಿಯ ಶಿಖರಗಳನ್ನು ರಚಿಸಲಾಗಿರುತ್ತದೆ. ಕರ್ನಾಟಕದಲ್ಲಿ ಇದು ಅಪರೂಪ.

ತಾರಕೇಶ್ವರ ದೇವಾಲಯದಲ್ಲಿ ಕುಸುರಿನ ಶಿಲ್ಪಾಲಂಕಾರಕ್ಕೆ ಪ್ರಾಧಾನ್ಯ ನೀಡಲಾಗಿದೆಯಾದರೂ, ಕೆಲವು ಕಥಾನಿರೂಪಕ ಶಿಲ್ಪಗಳೂ ಇವೆ. ಇವುಗಳನ್ನು ಗೂಢಮಂಟಪದ ಮೂರು ಪ್ರವೇಶಗಳಲ್ಲಿರುವ ಮುಖಮಂಟಪಗಳ ಕಕ್ಷಾಸನ ಹೊರಮೈಯಲ್ಲಿ ಕಾಣಬಹುದು, ಪೂರ್ವ ಮುಖಮಂಟಪದ ಪೂರ್ವಭಾಗದ ಕಕ್ಷಾಸನದಿಂದ ಪ್ರಾರಂಭವಾಗಿರುವ ಕೃಷ್ಣಚರಿತದ (ಕಾಲಿಯಾದಮನ, ಯಮಳಾರ್ಜುನಭಂಗ, ಶಕಟಭಂಗ ಇತ್ಯಾದಿ) ಘಟನೆಗಳ ನಿರೂಪಣೆ ಪ್ರದಕ್ಷಿಣಾ ರೀತಿಯಲ್ಲಿ ದಕ್ಷಿಣ ಭಾಗದಲ್ಲಿ ಮುಂದುವರಿದಿದೆ (ಛಾಯಾಚಿತ್ರ ೧೦). ತದನಂತರ ದಕ್ಷಿಣ ಮುಖಮಂಟಪದಲ್ಲಿ ರಾಮಾಯಣದ ಕೆಲವು ಘಟನೆಗಳ ನಿರೂಪಣೆ ಕಾಣುತ್ತದೆ. ಕಥಾನಿರೂಪಣೆ ಶಿಲ್ಪಗಳಲ್ಲಿ ಅನುಸರಿಸಿದ ತಂತ್ರ ಗಮನಾರ್ಹವಗಿದ್ದು, ಅಧ್ಯಯನ ಯೋಗ್ಯವಾಗಿದೆ.

ಹಾನಗಲ್ಲು ಕದಂಬ ವೀರ ಸೋಯಿದೇವನ ೧೧೭೯ರ ಶಾಸನದಲ್ಲಿ ದೇಗುಲವನ್ನು ಅಮರೇಶ್ವರ ದೇವಾಲಯವೆಂದು ಕರೆದಿದೆ.[2] ಆದರೆ ಶಾಸನ ದೇಗುಲದ ಪ್ರತಿಷ್ಠಾಪನೆಯನ್ನು ಉಲ್ಲೇಖಿಸುವುದಿಲ್ಲ. ಮೋರೇಸ್ ಅವರು ಪ್ರಕಟಿಸಿರುವ ಶಾಸನದ ಓದನ್ನು ಪರಿಷ್ಕರಿಸುವ ಅವಶ್ಯಕತೆಯಿದೆ. ಇದಕ್ಕಿಂತ ಮುಂಚಿನ ೧೧೧೨ನೆಯ ಶತಮಾನದ ಶಾಸನದಲ್ಲಿ ಆಗಲೇ ತಾರಕೇಶ್ವರ ದೇವಾಲಯಕ್ಕೆ ನೀಡಿದ ದತ್ತಿಯ ಉಲ್ಲೇಖವಿದೆ.[3] ಅದರ ಬೃಹತ್ ಗಾತ್ರ, ಅಲಂಕಾರ ಮುಂತಾದವು ಇದೊಂದು ರಾಜಪ್ರೋತ್ಸಾಹದಿಂದ ರಚಿತ ದೇಗುಲವೆಂಬುದನ್ನು ಸೂಚಿಸುತ್ತವೆ. ಕೇವಲ ಕಂಬಗಳ ರೂಪ ವಿವರವನ್ನು ಸರಿಸಿದರೆ, ವಿಮಾನ (ಮೂಲಪ್ರಾಸಾದ) ಮತ್ತು ಅದರ ಗೂಢಮಂಟಪಗಳು ರಂಗಮಂಟಪಕ್ಕಿಂತ ಮುಂಚೆ ರಚಿತವಾದವೆಂದು ಭಾವಿಸಬೇಕಾಗುತ್ತದೆ. ಆದರೆ ಇವೆರಡೂ ಪೂರ್ವಯೋಜಿತ ಒಂದೇ ವಿನ್ಯಾಸದ ಅಂಗಗಳಂತೆ ಗೋಚರಿಸುವುದರಿಂದ ರಂಗಮಂಟಪವು ನಂತರದ್ದೆಂದು ಹೇಳುವುದು ಸಮಂಜಸವಾಗದು. ಆದುದರಿಂದ ಇದು ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲದಲ್ಲಿ ಕದಂಬ ತೈಲಪನ ಆಳ್ವಿಕೆಯಲ್ಲಿ (೧೨ನೆಯ ಶತಮಾನದ ಮೊದಲ ಎರಡು ದಶಕಗಳಲ್ಲಿ) ರಚಿತವಾಯಿತೆಂದು ಭಾವಿಸುವುದು ಉಚಿತ.  

23_44_HG-KUH

ಗಣೇಶದೇಗುಲ

ತಾರಕೇಶ್ವರ ದೇವಾಲಯದ ಸಂಕೀರ್ಣದ ಭಾಗವೆನ್ನುವಂತೆ ದಕ್ಷಿಣಾಭಿಮುಖವಾಗಿ ಚಿಕ್ಕ ಗಣೇಶ ದೇಗುಲ ನಿಂತಿದೆ (ಛಾಯಾಚಿತ್ರ ೧೧). ಇದುನಾಗರಶೈಲಿಯ ದೇವಾಲಯವೆಂಬುದು ವೈಶಿಷ್ಟ್ಯವಾಗಿದೆ. ನಾಗರ ಶೈಲಿಯ ಅನೇಕ ಪ್ರಭೇದ ಮಾದರಿಗಳು ಕರ್ನಾಟಕದ ಕಲ್ಯಾಣ ಚಾಲುಕ್ಯರಹೊಯ್ಸಳರ ದೇವಾಲಯಗಳ ಗೋಡೆಗಳಲ್ಲಿ ಯಥಾವತ್ತಾಗಿ ಕಂಡುಬರುತ್ತವೆ. ಆದರೆ ಕಾಲದ ಸ್ವತಂತ್ರ ನಾಗರ ದೇಗುಲಗಳು ಅಪರೂಪ. ಬೆಳಗಾವಿಯ ಸಮೀಪ ಹತ್ತರಗಿಯಲ್ಲಿರುವ ಶಿಖರೇಶ್ವರ ಗುಡಿ, ಬಾಗಲಕೋಟೆಯ ಸಮೀಪ ಶಿರೂರಿನಲ್ಲಿರು ಸಿದ್ಧೇಶ್ವರ ಗುಡಿ, ಬೀದರಿನ ಉಮಾಪುರದಲ್ಲಿರುವ ಶಿವ ದೇವಾಲಯಗಳುನಾಗರಸಂಪ್ರದಾಯದ ದೇಗುಲಗಳಿಗೆ ಕೆಲವು ಉದಾಹರಣೆಗಳು. ಹಾನಗಲ್ಲಿನ ಗಣೇಶ ಇವೆಲ್ಲವುಗಳಿಗಿಂತ ಭಿನ್ನವಾಗಿದೆ. ಇದನ್ನು ಶೇಖರೀ ನಾಗರ ಪ್ರಾಸಾದವೆಂದು ಗುರುತಿಸಲಾಗುತ್ತದೆ.

ಚಿಕ್ಕ ದೇಗುಲ ಗರ್ಭಗೃಹ, ಅಂತರಾಳ ಮತ್ತು ಒಂಬತ್ತು ಅಂಕಣಗಳುಳ್ಳ ತೆರೆದ ಮಂಟಪವನ್ನು ಹೊಂದಿದೆ. ಮೂಲಪ್ರಾಸಾದದ ಗಾತ್ರ ಸುಮಾರು . ಮೀಟರ್ ಮಾತ್ರ. ಅದು ಪಂಚರಥ ವಿನ್ಯಾಸವನ್ನನುಸರಿಸಿದೆ. ಪ್ರತಿಯೊಂದು ರಥವನ್ನು ಕಂಬವೆಂಬಂತೆ ಕಲ್ಪಸಿ ಅದರ ಮೇಲೆ ನಾಗರ ಶಿಖರವನ್ನಿರಿಸಲಾಗಿದೆ. ಪ್ರತಿಯೊಂದು ಪಾರ್ಶ್ವದ ಮಧ್ಯದ ರಥವು ಹೆಚ್ಚು ಅಗಲವಿದ್ದು, ಅವುಗಳ ಮೇಲೆ ಹೆಚ್ಚು ದೊಡ್ಡ ನಾಗರ ಶಿಖರಗಳನ್ನು ರೂಪಿಸಲಾಗಿದೆ. ಶಿಖರಗಳ ಲತಾ ಭಾಗವನ್ನು ಬಳ್ಳಿಯ ಕೆತ್ತನೆಯಿಂದ ಅಲಂಕರಿಸಿದೆ. ಒಟ್ಟು (ಚಿಕ್ಕದೊಡ್ಡ) ೨೫ ನಾಗರ ಶಿಖರಗಳಿದ್ದು, ಮಧ್ಯದ ಶಿಖರವು ಎಲ್ಲವುಗಳಿಗಿಂತ ದೊಡ್ಡದಾಗಿದೆ. ಎಲ್ಲ ಶಿಖರಗಳಿಗೂ ಚಪ್ಪಟೆಯಾದ ಆಮಲಕಗಳಿವೆ (ಛಾಯಾಚಿತ್ರ ೧೨). ಪರಮಾರ ಭೋಜನು ರಚಿಸಿರುವಸಮರಾಂಗಣ ಸೂತ್ರಧಾರ’ (೧೧ನೆಯ ಶತಮಾನ) ವಾಸ್ತುಗ್ರಂಥವು ಹೆಸರಿಸಿರುವವಿಮಾನ ನಾಗರಪ್ರಕಾರದ ಪ್ರತಿನಿಧಿಯೆಂದು ಕೆಲವು ವಿದ್ವಾಂಸರು ವಿಶ್ಲೇಷಿಸಿದ್ದಾರೆ. ಸಾಮಾನ್ಯವಾಗಿ ವಿದ್ವಾಂಸರು ಇದನ್ನು ಶೇಖರೀ ನಾಗರ ಪ್ರಾಸಾದವೆಂದು ಗುರುತಿಸುತ್ತಾರೆ.

ದೇಗುಲದ ಎಲ್ಲ ವಾಸ್ತು ಭಾಗಗಳುನಾಗರರೀತಿಯಲ್ಲಿಯೇ ರಚಿತವಾಗಿವೆ. ಅಧಿಷ್ಠಾನದಲ್ಲಿ ಕೆಳಗಡೆ ಉಪಪೀಠವಿದ್ದು, ಇದು ಖುರಖ, ಪದ್ಮ, ಕಂಠ ಮತ್ತು ಕಪೋತ ಮಡಿಕೆಗಳಿಂದಾಗಿದೆ. ಉಪಪೀಠ ಮಟ್ಟದಲ್ಲಿ ಮೂಲಪ್ರಾಸಾದದ ಪೂರ್ವದಿಕ್ಕಿನಿಂದ ಪ್ರನಾಳವು ಹೊರಚಾಚಿಕೊಂಡಿದೆ. ಉಪಪೀಠದ ಮೇಲಿರುವ ಪೀಠವು ನಾಗರ ಪ್ರಕಾರದ್ದು, ಇದರಲ್ಲಿ ಕುಂಭ, ಕಲಶ, ಕಪೋತ ಮಡಿಕೆಗಳಿವೆ.

ಮಂಟಪದ ಅಂಚಿನ ಗುಂಟ ಕಕ್ಷಾಸನವಿದ್ದು, ಅದರ ಹೊರ ಮುಖದಲ್ಲಿ ಕಂಬಗಳನ್ನಾಧರಿಸಿರುವ ಸರಳನಾಗರಶಿಖರಗಳ ಸಾಲುಗಳಿವೆ. ಛಾದ್ಯದ ಮೇಲ್ಗಡೆ ನಾಗರ ಶಿಖರಗಳ ಸಾಲಿನಿಂದಾದ ಹಾರವಿದ್ದಿರಬೇಕು. ನುಗ್ಗೆಹಳ್ಳಿಯ (ಹಾಸನ ಜಿಲ್ಲೆ) ಸದಾಶಿವ ದೇವಾಲಯ ಮತ್ತು ತುರುವೇಕೆರೆಯ ಮೂಲೆಶಂಕರ ದೇವಾಲಯಗಳಲ್ಲಿ ಲಕ್ಷಣಗಳು ಕಾಣುತ್ತವೆ. ತೆರೆದ ಮಂಟಪದಲ್ಲಿರುವ ಕಂಬಗಳು ತಾರಕೇಶ್ವರ ದೇವಾಲಯದ ರಂಗಮಂಟಪದ ಕಂಬಗಳಂತೆ ಸರಳವಾಗಿವೆ. ಇವುಗಳ ವಿವರಗಳು ಗಣೇಶ ದೇವಾಲಯವೂ ತಾರಕೇಶ್ವರ ದೇವಾಲಯವೂ ಒಂದೆ ಕಾಲದವೆಂದು ಸೂಚಿಸುತ್ತಿವೆ.

ಅಂತರಾಳವು ತೆರೆದುಕೊಂಡಿದೆ. ಅದರ ವಿತಾನದಲ್ಲಿ ಪದ್ಮವಿದೆ. ಗರ್ಭಗೃಹ ದ್ವಾರಬಂಧವು ಸರಳವಾಗಿದೆ. ಅದರ ಲಲಾಟಬಿಂಬದಲ್ಲಿ ಗಣೇಶ ಶಿಲ್ಪವಿದೆ. ಗರ್ಭಗೃಹದ ವಿತಾನದಲ್ಲಿಯೂ ಪದ್ಮವಿದೆ. ಹಿಂಗೋಡೆಗೆ ಆತುಕೊಂಡು ಚಿಕ್ಕ ಗಣೇಶ ವಿಗ್ರಹವನ್ನಿರಿಸಿದೆ. ಒಟ್ಟಾರೆ ನೋಡಿದಾಗ ವಿಶಿಷ್ಟ ದೇಗುಲವು ಸುಮಾರು ಆರನೆಯ ವಿಕ್ರಮಾದಿತ್ಯನ ಕಾಲದಲ್ಲಿ ರಚಿತವಾಗಿರಬೇಕು.

ಕೋಟೆಯಲ್ಲಿರುವ ಜೈನ ದೇಗುಲ

ಹಾನಗಲ್ಲಿನ ಇನ್ನೊಂದು ಸುಂದರ ದೇಗುಲವೆಂದರೆ, ಕೋಟೆಯಲ್ಲಿರುವ ಜೈನ ದೇಗುಲ (ಛಾಯಾಚಿತ್ರ ೧೩). ಕೋಟೆಯಲ್ಲಿರುವ ಹಾಳಾದ ಗುಡಿಗಳಲ್ಲಿ ಇದು ಹೆಚ್ಚು ಉತ್ತಮ ಸ್ಥಿತಿಯಲ್ಲಿದೆ. ಮೂಲಪ್ರಾಸಾದದ ಶಿಖರ ಈಗಿಲ್ಲ. ಆದರೆ ಅದರ ಏರುನೋಟವು ಕೆಲವು ಅಪೂರ್ವ ಲಕ್ಷಣಗಳನ್ನು ಬಿತ್ತರಿಸುತ್ತದೆ. ಅಧಿಷ್ಠಾನವು ಕಪೋತಬಂಧ ರೀತಿಯದು. ಅದರ ಕರ್ಣಕದ ಮೇಲೆ ಮತ್ತು ಕೆಳಗೆ ಅಲಂಕಾರಪೂರಿತ ಪಟ್ಟಿಕೆಗಳಿವೆ. ಗೋಡೆಯ ಕರ್ಣಗಳಿಗೆ ಕೋಷ್ಠಪಂಜರಗಳಿಲ್ಲ. ಭದ್ರಕ್ಕೆ ಎರಡು ಉಪಭದ್ರಗಳಿವೆ. ಅಗಲವಾದ ಸುಭದ್ರದ ಮುಖದಲ್ಲಿ ದೊಡ್ಡ, ಅಲಂಕಾರಪೂರ್ಣ, ಆಕರ್ಷಕ, ಭೂಮಿಗಳಿಂದಾದ, ಫಾಂಸಾನಾ ಶಿಖರ ಹೊತ್ತಿರುವ ರಂಗಮಂಟಪದ ಮಾದರಿಯನ್ನು ಶಿಲ್ಪಸಿದೆ (ಛಾಯಾಚಿತ್ರ ೧೪೧೫). ಇದರ ಮೇಲ್ಭಾಗದಲ್ಲಿ ಕುಸುರಿನ ಕೆಲಸದಿಂದ ಕೂಡಿರುವ ಆಕರ್ಷಕ ತೋರಣವಿದೆ. ಕಪಿಲಿಯಲ್ಲಿ ಎತ್ತರವಾದ ಅರೆಗಂಬದ ಬದಲು ಅಗಲವಾದ ಕೂಟಸ್ತಂಭವನ್ನು ತೋರಿಸಿದ್ದು, ಅದರ ಕೂಟವು ರಂಗಮಂಟಪದ ಮಾದರಿಯಲ್ಲಿದೆ. ಗೋಡೆಯ ಮೇಲ್ಭಾಗದಲ್ಲಿ ಮೂರು ಪಟ್ಟಿಗಳಿದ್ದು, ಇವು ವಲ್ಲೀಪಟ್ಟಿಕಾ ಮತ್ತು ನಿಧಿಗಳನ್ನೊಳಗೊಂಡ ತೋರಣದಿಂದಾಗಿವೆ. ಇವು ಮೂಲಪ್ರಾಸಾದದ ಹಾಗೂ ಮಂಟಪದ ಹಿಂಗೋಡೆಯಗುಂಟ ಸಾಗಿವೆ. ಕಪೋತದ ಅಂಚಿನಗುಂಟ ಗಗಾರಪಟ್ಟಿಕೆಯಿದೆ.

ರಂಗಮಂಟಪವು ಪ್ರಮಾಣಬದ್ಧವಾಗಿದ್ದು, ಮಂಚಬಂಧ ಅಧಿಷ್ಠಾನದ ಮೇಲೆ ನಿಂತಿದೆ. ಅಧಿಷ್ಠಾನದ ಕಂಠದಲ್ಲಿ ಸಾಲಾಗಿ ವಜ್ರಗಳ ಅಲಂಕಾರವಿದೆ. ವೇದಿಕಾ ಭಾಗದ ಮೇಲೆ ಈಗ ಕಕ್ಷಾಸನವಿಲ್ಲವಾದರೂ ಮೂಲತಃ ಇದ್ದುದರ ಸ್ಪಷ್ಟ ಸೂಚನೆಗಳಿವೆ. ಕಕ್ಷಾಸನದ ವೇದಿಕೆಯ ಮೇಲಿರುವ ಕುಳ್ಳ ಕಂಬಗಳು ಶ್ರೀಕಾರ ರೀತಿಯವು. ನಾಭಿಗೆ ರಂಗಭೂಮಿಕೆಯಿಲ್ಲ. ಮಧ್ಯಾಂಕಣದಲ್ಲಿರುವ ನಾಲ್ಕೂ ಶ್ರೀಕಾರ ಕಂಬಗಳನ್ನು ಸುಂದರವಾಗಿ ಅಲಂಕರಿಸಿದೆ (ಛಾಯಾಚಿತ್ರ ೧೬). ಮಾಲಾಸ್ಥಾನದಲ್ಲಿ ಕುಶಲತೆಯಿಂದ ಮೂಡಿಸಿರುವ ಎಲೆಗಳ ವಿನ್ಯಾಸ ಮತ್ತು ಮಣಿಬಂಧ ಪಟ್ಟಿಗಳಿವೆ. ಹಿಂಭಾಗದಲ್ಲಿರುವ ಭದ್ರಕ ಕಂಬಗಳೂ ಅಲಂಕಾರಪೂರಿತವಾಗಿವೆ. ಗರ್ಭಗೃಹದ ಲಲಾಟಬಿಂಬದಲ್ಲಿ ಮೂಲತಃ ಜಿನಬಿಂಬವಿತ್ತು, ಅದನ್ನು ಅಳಿಸಿ ಹಾಕಲಾಗಿದೆ. ದೇವಾಲಯದ ಅಲಂಕಾರ ವಿಧಾನ, ಪ್ರೌಢಿಮೆ ಮುಂತಾದವು ಅದನ್ನು ೧೨ನೆಯ ಶತಮಾನದ ಮೊದಲ ಪಾದದ್ದೆಂದು ಸೂಚಿಸುತ್ತವೆ. ಆದರೆ ಶ್ರೀಕಾರ ಕಂಬಗಳ ಕಾಂಡಗಳ ಅಲಂಕಾರವನ್ನು ನೋಡಿದಾಗ, ಕೆಲವು ದಶಕಗಳ ನಂತರ ನಿರ್ಮಾಣವಾಗಿರಬಹುದು ಎನಿಸುತ್ತದೆ.

ದೇಗುಲದ ಶಿಲ್ಪಿಯು ಸೃಜನಶೀಲನಾಗಿದ್ದು, ತನ್ನ ಸಮಕಾಲೀನ ವಾಸ್ತುಶಿಲ್ಪಿಗಳಿಗಿಂತ ಭಿನ್ನವಾದ ಪರಂಪರೆಯನ್ನು ಪ್ರತಿನಿಧಿಸುವಂತಿದೆ. ಇಲ್ಲಿ ಗೋಡೆಯ ಅಲಂಕಾರಿಕ ವಿನ್ಯಾಸಗಳು ಕರ್ನಾಟಕದಲ್ಲಿ ಬೇರೆಡೆ ಕಂಡುಬಂದಿಲ್ಲ.

ಹಾನಗಲ್ಲಿನಲ್ಲಿ ಈಗ ಉಳಿದು ಬಂದಿರುವ ೧೧೧೨ನೆಯ ಶತಮಾನದ ಪ್ರಾಚೀನ ದೇಗುಲಗಳು ಕೆಲವೆ ಆದರೂ ಮೂಲತಃ ಇನ್ನೂ ಅನೇಕ ಸಂಖ್ಯೆಯಲ್ಲಿ ಇದ್ದಿರಬೇಕು. ೧೧೧೯ರ ಶಾಸನದಲ್ಲಿ ಬಿಲ್ಲೇಶ್ವರ, ಮೂಲಸ್ಥಾನ, ಚಿಕ್ಕೇಶ್ವರ, ಕೊಂತೇಶ್ವರ, ಭೈರವ ಹಾಗೂ ನಿಂಬೇಶ್ವರ ದೇವರುಗಳ ಉಲ್ಲೇಖವಿರುವುದರಿಂದ ಹೆಸರಿನ ದೇಗುಲಗಳಿದ್ದವೆಂದು ಗೊತ್ತಾಗುತ್ತದೆ.[4] ಇದಲ್ಲದೆ ಗಡಿಯಂಕಮಲ್ಲನ ಬೀಡಿನ ಸೋಮೇಶ್ವರ ದೇವಾಲಯ, ತಾರಕೇಶ್ವರ ದೇವಾಲಯ, ಅಮರೇಶ್ವರ (?), ತೈಲೇಶ್ವರ ದೇವರ ಉಲ್ಲೇಖಗಳು ಇತರ ಶಾಸನಗಳಲ್ಲಿವೆ.[5] ಅದೇನಿದ್ದರೂ ಇಂದು ನೋಡದೊರೆಯುವ ಕೆಲವೇ ದೇಗುಲಗಳು ಒಂದಿಲ್ಲೊಂದು ರೀತಿಯಿಂದ ವೈಶಿಷ್ಟ್ಯಪೂರ್ಣವಾಗಿವೆ. ತಾರಕೇಶ್ವರ ದೇವಾಲಯವು ಗಾತ್ರ ಮತ್ತು ಅಲಂಕಾರ ವಿನ್ಯಾಸದಲ್ಲಿ ವಿಶಿಷ್ಟವಾಗಿದೆಯಾದರೆ, ಕೋಟೆಯಲ್ಲಿರುವ ಜೈನ ದೇಗುಲ ಗೋಡೆ, ಕಂಬ ಮುಂತಾದವುಗಳ ಅಲಂಕಾರ ಕಲ್ಪನೆಯಲ್ಲಿ ವಿಶಿಷ್ಟವಾಗಿದೆ. ಗಣೇಶ ದೇವಾಲಯ ಇಡೀ ಕರ್ನಾಟಕದಲ್ಲಿ ಉಳಿದುಬಂದಿರುವ ಶೇಖರಿ ಪ್ರಕಾರದ (ಖುಜುರಾಹೋ ದೇವಾಲಯಗಳನ್ನು ನೆನಪಿಸುವ) ಏಕಮೇವ ಉದಾಹರಣೆಯಾಗಿದೆ.

ಪ್ರಬಂಧ ರಚನೆಯ ಕಾರ್ಯದಲ್ಲಿ ನನ್ನ ವಿದ್ಯಾರ್ಥಿ ಮಿತ್ರ ಶ್ರೀ ಚಂದ್ರಶೇಖರ ತಬೋಜಿಯವರು ಸಹಕರಿಸಿದ್ದು, ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ. ಛಾಯಾ ಚಿತ್ರಗಳಿಗಾಗಿ ಗೆರಾರ್ಡ್ ಫೋಕೆಮಾ ಹಾಗೂ ತಲವಿನ್ಯಾಸಗಳಿಗಾಗಿ ಎಂ.. ಧಾಕಿ ಅವರಿಗೆ ಧನ್ಯವಾದಗಳು.

24_44_HG-KUH

ಪಾರಿಭಾಷಿಕಪದಗಳು :

ಅಂತರಾಳ ಢಮಂಟಪ ಮತ್ತು ಗರ್ಭಗೃಹದ ನಡುವೆ ಇರುವ ಕೋಣೆ.
ಅಂಡಕ ಚಿಕ್ಕ ಗಾತ್ರದ ನಾಗರ ಶಿಖರ.
ಅಷ್ಟದಿಕ್ಪಾಲಕರು ಎಂಟು ದಿಕ್ಕುಗಳ ದೇವತೆಗಳು: ಇಂದ್ರ (ಪೂರ್ವ), ವರುಣ (ಪಶ್ಚಿಮ), ಕುಬೇರ (ಉತ್ತರ), ಯಮ (ದಕ್ಷಿಣ), ವಾಯು (ವಾಯುವ್ಯ), ಅಗ್ನಿ (ಆಗ್ನೇಯ), ನಿಋತಿ (ನೈರುತ್ಯ), ಈಶಾನ (ಈಶಾನ್ಯ).
ಅಮಲಕ ನೆಲ್ಲಿಕಾಯಿ ಆಕಾರದ ರಚನೆ. ನಾಗರ ಪ್ರಾಸಾದಗಳಲ್ಲಿ ಶಿಖರದ ಕಳಶದ ಕೆಳಗಡೆ ಇರುತ್ತದೆ.
ಅನೇಕಾಂಡಕ ನಾಗರ ರೀತಿ ಅನೇಕ ಶಿಖರಗಳ ಸಮೂಹದಿಂದಾದ ಶಿಖರ.
ಆಸನಪಟ್ಟಕ ಮುಖಮಂಟಪ ಅಥವಾ ರಂಗಮಂಟಪದ ಅಂಚಿನಗುಂಟ ಕುಳಿತುಕೊಳ್ಳಲು ರಚಿಸಿರುವ ಬೆಂಚಿನಂತಹ ಆಸನ.
ಕರ್ಣ ಮೂಲೆ. ಅಧಿಷ್ಠಾನ ಮತ್ತು ಗೋಡೆಯ ಮೂಲೆಯಲ್ಲಿ (ಕೋನದಲ್ಲಿ) ಇರುವ ಮುಂಚಾಚು.
ಕಪಿಲಿ ಮೂಲಪ್ರಾಸಾದ ಮತ್ತು ಮಂಟಪದ ಗೋಡೆಗಳ ನಡುವಿರುವ ಅಂತರಾಳದ ಗೋಡೆ.
ಕಪೋತ ವೃತ್ತದ ಕಾಲುಭಾಗದಂತೆ ಇಳಿಜಾರಾಗಿರುವ, ಅಧಿಷ್ಠಾನದ ಇಲ್ಲವೆ ಗೋಡೆಯ ಮೇಲ್ಗಡೆ ಸಾಗಿರುವ ಚಚ್ಚಾದಂತಹ ಭಾಗ.
ಕರೋಟಕ ಮಂಟಪದಲ್ಲಿ ಮಗುಚಿ ಹಾಕಿರುವ ಬಡರಿಯಂತಿರುವ (ತೆಂಗಿನ ಕರಟದಂತಿರುವ) ದೊಡ್ಡ ಛತ್ತು.
ಕಲಶ ಕಳಸ
ಕಕ್ಷಾಸನ ರಂಗಮಮಟಪ, ಸಭಾಮಂಟಪ ಇಲ್ಲವೆ ಮುಖಮಂಟಪದ ಅಂಚಿನಗುಂಟ ಕುಳಿತುಕೊಳ್ಳಲು ಇರುವ ಬೆನ್ನಿಗೆ ಆನಿಕೆ ಕೊಡುವ ಆಸನ.
ಕಲ್ಪದ್ರುಮ ಬೇಡಿದ್ದನ್ನು ಕೊಡುವ ವೃಕ್ಷ.
ಕುಮುದ ಅಧಿಷ್ಠಾನದ ಮಡಿಕೆಗಳಲ್ಲಿ (ಕುಂಭ) ಮತ್ತು ಕಪೋತದ ನಡುವಿನ ಮಡಿಕೆ.
ಕೂಟ ಚೌಕ ವಿನ್ಯಾಸದ ನಾಲ್ಕೂ ಕಡೆ ಇಳಿಜಾರಾದ ಚಾವಣೆಯುಳ್ಳ ಗುಡಿಸಲಿನಂತೆ ಕಾಣುವ ದೇಗುಲ ಮಾದರಿ.
ಕೂಟಸ್ತಂಭ ಕೂಟವನ್ನು ಹೊತ್ತಿರುವ ಕಿರುಕಂಬ
ಕೋಲ ಛತ್ತಿನ ಅಲಂಕಾರಿಕ ಸಾಲುಗಳು.
ಕೋಷ್ಠ ಗೂಡು.
ಕೋಷ್ಠಪಂಜರ ಜೋಡು ಅರೆಗಂಬಗಳ ಮೇಲೆ ಶಿಖರ ಮಾದರಿಯನ್ನು ಹೊತ್ತಿರುವ ಕೋಷ್ಠದಂತೆ ಕರ್ಣ ಅಥವಾ ಭದ್ರದ ಮುಖದಲ್ಲಿರುವ ಅಲಂಕಾರ.
ಖಲ್ವ ದ್ವಾರಬಂಧದಲ್ಲಿರುವ ಶಾಖೆಗಳಲ್ಲಿ ಹಿಂಚಾಚಿರುವ ಶಾಖಾಪಟ್ಟಿ.
ಗಗಾರಪಟ್ಟಿ ನೇತುಬಿದ್ದಿರುವ ವ್ಯಾಜುಗಳ ಸಾಲಿನಂತಿರುವ ವಿನ್ಯಾಸವುಳ್ಳ ಪಟ್ಟಿ.
ಗರ್ಭಗೃಹ ಗರ್ಭಗುಡಿ
ಗ್ರೀವ ಶಿಖರದ ಕುತ್ತಿಗೆಯಂತಿರುವ ಭಾಗ.
ಗೂಢಮಂಟಪ ಗೋಡೆಗಳಿರುವ ಮಂಟಪ.
ಘಂಟಾ ಮೂಲಪ್ರಾಸಾದದ ಶಿಖರದ ಗ್ರೀವದ ಮೇಲೆ, ಕೆಳಗೆ ಇರುವ ಚೌಕ ಘಂಟಾಕಾರದ ಭಾಗ.
ಚತುರ್ಭೂಜ ನಾಲ್ಕು ತಲಗಳ ರಚನೆಯಿರುವ ಶಿಖರ.
ತಲ ಮಹಡಿ.
ದ್ವಾರಬಂಧ ಬಾಗಿಲುವಾಡ. ಸಾಮಾನ್ಯವಾಗಿ ಶಾಖೆಗಳ ಅಲಂಕಾರದಿಂದ ಕೂಡಿರುತ್ತದೆ.
ದೇವಕೋಷ್ಠ ದೇವತಾ ವಿಗ್ರಹವನ್ನಿರಿಸಲು ಗೋಡೆಯಲ್ಲಿ ಮಾಡಿರುವ ಗೂಡು. ಇದಕ್ಕೆ ದೇಗುಲದಂತೆ ಶಿಖರ ಮುಂತಾದ ಅಲಂಕಾರವಿರುತ್ತದೆ.
ನಾಗರ ಉತ್ತರ ಭಾರತದ ಶೈಲಿಯ ರೇಖಾ ಶಿಖರ. ಇದು ಏಕಾಂಡ (ಲತಿನ, ಒಂದೇ ಶಿಖರವುಳ್ಳ) ಅಥವಾ ಅನೇಕಾಂಡ (ಶೇಖರಿ) ಶಿಖರವಾಗಿರಬಹುದು.
ನಾಗಶಾಖಾ ನಾಗನಾಗಿಣಿ ಜೋಡಿಗಳ ಸಾಲಿನಿಂದಾದ ದ್ವಾರಬಂಧದ ಶಾಖ.
ನಿರಂಧಾರ ಗರ್ಭಗೃಹದ ಸುತ್ತ ಒಳಗಡೆ ಪ್ರದಕ್ಷಿಣೆ ಪಥವಿಲ್ಲದ ಪ್ರಾಸಾದ.
ಪದ್ಮ ಅಧಿಷ್ಠಾನದಲ್ಲಿ ಸಾಮಾನ್ಯವಾಗಿ ಖುರಕದ ಮೇಲೆ ಬರುವ ಮಗುಚಿದ ಪದ್ಮದ ಆಕಾರದ ಮಡಿಕೆ.
ಪದ್ಮನಾಭ ಹೊಕ್ಕಳು ಭಾಗದಲ್ಲಿ ಪದ್ಮ ಪದಕಗಳಿಂದ ಅಲಂಕೃತವಾಗಿರುವ ವಿತಾನದ ಪ್ರಕಾರ.
ಪದ್ಮಶಾಖಾ ಪದ್ಮದ ಪಕಳೆಗಳ ಸಾಲಿನಿಂದಾದ ದ್ವಾರಬಂಧದ ಶಾಖೆ.
ಪ್ರನಾಲ ಗರ್ಭಗೃಹದಲ್ಲಿರುವ ದೇವತೆಯ ವಿಗ್ರಹಕ್ಕೆ ಮಾಡುವ ಅಭಿಷೇಕದ ನೀರು ಹೊರಗೆ ಹರಿದು ಬರಲು ಮಾಡಿರುವ ಹರಿ.
ಪ್ರಾಸಾದ ದೇಗುಲ. ದೇವರ ಅರಮನೆ.
ಪೇದ್ಯಾ ದ್ವಾರಬಂಧದ ತೋಳುಗಳ ಕೆಳಭಾಗ. ಇದರಲ್ಲಿ ಸಾಮಾನ್ಯವಾಗಿ ದ್ವಾರಪಾಲ, ನದಿದೇವತೆ, ಕಾಮ, ರತಿ ಇತ್ಯಾದಿ ಶಿಲ್ಪಗಳಿರುತ್ತವೆ.
ಫಾಂಸನಾ ಕದಂಬನಾಗರ ಎಂದು ಕರೆಯಲಾಗುತ್ತಿದ್ದ ಶಿಖರ. ಒಂದರ ಮೇಲೆ ಒಂದರಂತೆ ಕಿರಿದಾಗುತ್ತ ಸಾಗಿರುವ ನಾಸಿ ಅಲಂಕಾರಯುಕ್ತ ಕಪೋತಗಳುಳ್ಳ ಪಿರೆಮಿಡ್ಡಿನಾಕಾರದ ಶಿಖರ. ಇದರ ಮೇಲೆ ಗ್ರೀವದ ತರುವಾಯ ಚೌಕ  ಘಂಟಾ ಮತ್ತು ಕಲಶ ಇರುತ್ತದೆ.
ಬಾಹ್ಯಶಾಖಾ ದ್ವಾರಬಂಧದ ಹೊರ ಅಂಚಿನ ಶಾಖೆ.
ಭದ್ರ ತಲವಿನ್ಯಾಸ ಮತ್ತು ಲಂಬವಿನ್ಯಾಸದಲ್ಲಿ ಮಧ್ಯದ ಮುಂಚಾಚು.
ಭದ್ರಕ ಪ್ರತಿಯೊಂದು ಮುಖದ ಮಧ್ಯದಲ್ಲಿ ಮುಂಚಾಚುಗಳಿರುವ ಚೌಕ ಕಂಬ.
ಭದ್ರಖಟ್ಟಕ ಮೂಲವಿಮಾನದ (ಪ್ರಾಸಾದದ) ಭದ್ರದಲ್ಲಿರುವ ಕೋಷ್ಠ ರಚನೆ.
ಭೂಮಿ ತಲ ಅಥವಾ ಮಹಡಿ.
ಭೂಮಿಜ ನಾಗರ ಕೂಟಸ್ತಂಭ/ಶಿಖರಿಕಾಗಳನ್ನೊಳಗೊಂಡು ಒಂದರ ಮೇಲೊಂದರಂತೆ ಸಾಲುಗಲಲ್ಲಿ ಭೂಮಿ (ಮಹಡಿಗಳ) ಆಭಾಸ ನೀಡುವ ಅಲಂಕಾರದಿಂದ ರಚಿತ ಶಿಖರವುಳ್ಳ ದೇಗುಲ.
ಮಕರಪಟ್ಟಿಕಾ ಮಕರಗಳ ಸಾಲಿನಿಂದಾದ ಪಟ್ಟಿಕೆ. ದ್ರಾವಿಡ ದೇಗುಲಗಳಲ್ಲಿ ಅಧಿಷ್ಠಾನದ ಕಪೋತ ಮಡಿಕೆಯ ಮೇಲ್ಗಡೆ ಇರುತ್ತದೆ. ಪ್ರಸ್ತರದ ಕಪೋತದ ಮೇಲೂ ಪಟ್ಟಿಕೆ ಇರುತ್ತದೆ.
ಮಂಚಬಂಧ ಮಂಚದಂತೆ ಕಾಣುವ ಅಧಿಷ್ಠಾನ ಪ್ರಕಾರ.
ಮಂಟಪ ಸಾಮಾನ್ಯವಾಗಿ ಕಂಬಗಳಿರುವ ಸಭಾಗೃಹ.
ಮಿಥುನ ಶುಭಸಂಕೇತವೆಂದು ಭಾವಿಸಲಾಗುವ ಗಂಡುಹೆಣ್ಣು ಜೋಡಿ.
ಮಿಥುನಶಾಖಾ ಮಿಥುನಗಳನ್ನು ಅಲಂಕಾರಿಕವಾಗಿ ಬಳಸಿರುವ ದ್ವಾರಬಂಧದ ಶಾಖೆ.
ಮುಖಮಂಟಪ ದೇವಾಲಯದ ಪ್ರವೇಶ ಮಂಟಪ.
ರಂಗಮಂಟಪ ನೃತ್ಯಾದಿಗಳಿಗೆ ಉಪಯುಕ್ತ ಅರೆತೆರೆದ, ಕಂಬಗಳುಳ್ಳ ಮಂಟಪ, ಸಭಾಮಂಟಪ.
ರಥ ಭದ್ರ, ತಲವಿನ್ಯಾಸ ಮತ್ತು ಲಂಬ ವಿನ್ಯಾಸಗಳೆರಡರಲ್ಲೂ ಮುಂಚಾಚಿರುವ ದೇಗುಲದ ಭಾಗ.
ರತ್ನಶಾಖಾ ರತ್ನಗಳ ಸಾಲಿನ ಅಲಂಕಾರವುಳ್ಳ ದ್ವಾರಬಂಧದ ಶಾಖೆ.
ಲಂಬನ ಸಭಾಮಂದಾರಕ ಮತ್ತು ಸಭಾಪದ್ಮ ಮಂದಾರಕ ಪ್ರಕಾರದ ವಿತಾನಗಳಲ್ಲಿ ಇಳಿಬಿದ್ದಿರುವ ಮಧ್ಯ ಪದಕ.
ಲತಾ ಬಳ್ಳಿ
ಲಲಾಟ ದ್ವಾರಬಂಧದ ಹಣೆಯಲ್ಲಿರುವ ಘನ.
ಲಲಾಟಬಿಂಬ ದ್ವಾರಬಂಧದ ಹಣೆಯ ಗನದಲ್ಲಿ ಶಿಲ್ಪಸಿರುವ ದೇವತೆಯ ವಿಗ್ರಹ.
ಲೂಮಾ ಮಧ್ಯದ ಲಂಬನದ ಸುತ್ತ ಇರುವ ಅಲಂಕಾರಿಕ ಉಪಪದಕಗಳು.
ವಿತಾನ ಛತ್ತು
ವಿಮಾನ ಗರ್ಭಗೃಹದ ಪೂರ್ತಿ ರಚನೆ (ಅಧೀಷ್ಠಾನದ ಕೆಳ ಮಡಿಕೆಯಿಂದ ಹಿಡಿದು ಕಲಶದವರೆಗೆ).
ಶಾಖಾ ದ್ವಾರಬಂಧದ ತೋಳುಗಳ (ಸಾಮಾನ್ಯವಾಗಿ ಅಲಂಕೃತ) ಲಂಬ ಪಟ್ಟಿಗಳು.
ಶ್ರೀಕಾರ ಕಂಬದ ಒಂದು ಪ್ರಕಾರ. ವೃತ್ತಾಕಾರದ ಕಾಂಡ ಇತ್ಯಾದಿ ಭಾಗಗಳಿರುತ್ತವೆ.
ಶೇಖರ ಆದಿ ತಲ ಮುಗಿದ ಮೇಲೆ ಗರ್ಭಗೃಹದ ಮೇಲ್ಕಟ್ಟಡ. ಭೂಮಿ (ಮಹಡಿ) ಗಳಿಂದಾಗಿರುತ್ತದೆ.
ಶೇಖರಿ ನಾಗರ ಪ್ರಕಾರದ ಅನೇಕ ಅಂಡಕಗಳಿಂದಾದ (ಲತಿನ ಶಿಖರಗಳಿಂದಾದ) ಶಿಖರ.
ಸಭಾಮಂದಾರಕ ಮಧ್ಯದಲ್ಲಿ ಲಂಬನ ಪದಕವಿರುವ ವಿಶಿಷ್ಟ ವಿತಾನ (ಚತ್ತಿನ) ಪ್ರಕಾರ.
ಸಭಾಪದ್ಮಮಂದಾರಕ ಅನೇಕ ಪದ್ಮಗಳ ಪದಕಗಳಿಂದ ಸುತ್ತುವರಿಯಲ್ಪಟ್ಟ ಮಧ್ಯ ಇಳಿಬಿದ್ದಿರುವ ಪದಕವಿರುವ ವಿತಾನ ಪ್ರಕಾರ.
ಸ್ತಂಭಶಾಖಾ ಕಂಬದ ಪ್ರತಿರೂಪವಾಗಿ ಮಾಡಿರುವ ದ್ವಾರಬಂಧದ ಶಾಖೆ.
ಸಲಿಲಾಂತರ ಗೋಡೆಯ ಭದ್ರಗಳ ಮಧ್ಯಂತರದ ಹಿಂಚಾಚು.
ಶುಕನಾಸ ಶಿಖರದಿಂದ ಮೂಗಿನಂತೆ ಮುಂಚಾಚಿರುವ ಭಾಗ. ಅಂತರಾಳದ ಮೇಲೆ ಬಂದಿರುತ್ತದೆ.
ಸುಭದ್ರ ಭದ್ರದ ಮಧ್ಯದ ಮುಂಚಾಚು.
ಹಾರ ಸಾಮಾನ್ಯ ಕೂಟಶಾಲಗಳ ಸಾಲಿನಿಂದಾದ, ಭೂಮಿಯ (ಮಹಡಿಯ) ಅಂತ್ಯವನ್ನು ಸೂಚಿಸುವ, ಗೋಡೆಯ ಮೇಲ್ಗಡೆ ಅಂಚಿನ ಗುಂಟ ಸಾಗಿರುವ ಕುಂಬಿ. ಮೂಲಪ್ರಾಸಾದದ ಪ್ರತಿ ಭೂಮಿಗೂ ಸುತ್ತಲೂ ಸಾಗಿರುವುದರಿಂದ ಮಾಲೆಯಂತೆ ಕಾಣುತ್ತದೆ.

 

ಗ್ರಂಥಋಣ

  • ಕಲಬುರ್ಗಿ ಎಂ.ಎಂ., ಧಾರವಾಡ ಜಿಲ್ಲೆಯ ಶಾಸನ ಸೂಚಿ, ಧಾರವಾಡ೧೯೭೫
  • ಪ್ರಭಾಕರ ಎಂ.ಎನ್., ಕರ್ನಾಟಕದಲ್ಲಿ ವಿಮಾನ ನಾಗರ ಶೈಲಿ ಹಾನಗಲ್ಲಿನ ಗಣಪತಿ ದೇವಾಲಯ, ಇತಿಹಾಸ ದರ್ಶನ, ಸಂ., ಪು.೬೧, ಬೆಂಗಳೂರು೧೯೯೨
  • Adam Hardy, Indian Temple Architecture From and Transformation, Dehli – 1995
  • Cousens H., The Chalukyan Architecture of the Kanarese Districts, Culcutta – 1926
  • Dhaky M.A., The Indian Temple From in Karnataka Inscriptions and Architecture, New Dehli – 1977
  • Dhaky M.A., Encyclopaedia of Indian Temple Architecture: North India Beginnings of Medieval Idioms, Dehli – 1998
  • George M. Moraes, The Kadamba Kula, New Dehli – 1931
  • Gerard Foekema, Chalukyan Architecture Dehli – 2003
  • Gopal B.R., (ED), Karnataka Inscriptions, Dharwad – 1996
  • Horle J.C., The Art and Architecture of the Indian Subcontinent, Lodon – 1986

Soundara Rajan K.V.,  Indian Temple Styles: The Personality of Hindu Architecture, Dehli – 1972

 


[1] K.I., V, 18

[2] Kadamba Kula, P.445 – 56

[3] ಧಾ.ಜಿ.ಶಾ.ಸೂ., ಹಾನಗಲ್ಲ ತಾ., ಶಾ.ನಂ.೨೯೦

[4] K.I., V, 18

[5] Kadamba Kula, P.445 – 56 ಮತ್ತು ಧಾ.ಜಿ.ಶಾ.ಸೂ., ಹಾನಗಲ್ಲ ತಾ., ಶಾ.ನಂ.೨೯೮