ಹಾನಗಲ್ಲು ಹಾವೇರಿ ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಂದು. ಇದು ಜಿಲ್ಲಾ ಕೇಂದ್ರದಿಂದ ೩೫ ಕಿ.ಮೀ. ದೂರದಲ್ಲಿದೆ. ಊರಿಗೆ ಹಿಂದೆ ಪಾಂತಿಪುರ, ಪಂಕ್ತಿಪುರ, ವೈರಾಟಪುರ, ವಿರಾಟಪುರ, ವಿರಾಟಕೋಟೆ, ಪಾನುಂಗಲ್ಲು ಮತ್ತು ಹಾನುಗಲ್ಲು ಎಂಬ ಹೆಸರುಗಳಿದ್ದ ಬಗ್ಗೆ ಮಾಹಿತಿಗಳಿವೆ.

[1]ಇಲ್ಲಿಯ ನಿಸರ್ಗದತ್ತ ಹಸಿರು ಪರ್ವತ ಶ್ರೇಣಿಗಳು, ನದಿ, ಕಣಿವೆ, ವಿಶಾಲ ಬಯಲು, ಫಲವತ್ತಾದ ಭೂಮಿ ಮೊದಲಾದ ನಿಸರ್ಗದತ್ತ ಅನುಕೂಲಗಳಿಂದ ಪರಿಸರ ಪ್ರಾಚೀನ ಕಾಲದಿಂದಲೂ ಜನ ಸಮುದಾಯ ನೆಲೆನಿಲ್ಲಲು ಸಹಕಾರಿಯಾಗಿದೆ. ಇತಿಹಾಸ ಕಾಲದಲ್ಲಿ ಸಾತವಾಹನರಿಂದ ಮೊದಲ್ಗೊಂಡು ಕೆಳದಿಯವರೆಗೆ ಅನೇಕ ರಾಜಸತ್ತೆಗಳು ಪ್ರದೇಶವನ್ನು ಆಳಿವೆ. ವಿಶೇಷವಾಗಿ ಹಾನಗಲ್ಲನ್ನು ಕದಂಬರು ರಾಜಧಾನಿಯನ್ನಾಗಿ ಮಾಡಿಕೊಂಡು ೧೧ನೆಯ ಶತಮಾನದಿಂದ ೧೩ನೆಯ ಶತಮಾನದವರೆಗೆ ಆಳಿದರು. ಇವರ ಕಾಲದಲ್ಲಿ ನಿರ್ಮಾಣವಾದ ದೇವಾಲಯ ಹಾಗೂ ಅಸಂಖ್ಯಾತ ಮೂರ್ತಿಶಿಲ್ಪಗಳು ಮನೋಗ್ನವಾಗಿವೆ. ಅಲ್ಲದೆ ಇದೇ ಕಾಲಘಟ್ಟದಲ್ಲಿ ಮೊದಲಿದ್ದ ಅಪೂರ್ವ ಕೋಟೆಯನ್ನು ಜೀರ್ಣೋದ್ಧಾರಗೊಳಿಸಿ ವಿಸ್ತರಿಸಲಾಯಿತು.

ಕೋಟೆಯ ಸ್ವರೂಪ

ಪ್ರಾಚೀನ ಕರ್ನಾಟಕದ ರಾಜಕೀಯದಲ್ಲಿ ಕದಂಬರಿಗೆ ಮಹತ್ವದ ಸ್ಥಾನವಿರುವಂತೆ ಕೋಟೆ ನಿರ್ಮಾಣದಲ್ಲೂ ಇವರ ಕಾಲ ಒಂದು ಮಹತ್ವದ ಘಟ್ಟ. ಧರ್ಮಾ ನದಿಯ ದಡದಲ್ಲಿ ಇವರು ನಿರ್ಮಿಸಿದ ಮಣ್ಣಿನ ಕೋಟೆ ಪ್ರಥಮದರ್ಜೆಯದು. ಬಸವಕಲ್ಯಾಣ ಕೋಟೆಯ ಹೊರಗೆ ಮೂರು ಸುತ್ತಿನ ಕಂದಕವಿದ್ದು, ಇದಕ್ಕೆ ನದಿ ಮತ್ತು ಕೆರೆಯಿಂದ ನೀರನ್ನು ಒದಗಿಸುತ್ತಿದ್ದರು. ಲಕ್ಷಣಗಳನ್ನು ಹಾನಗಲ್ಲು ಕೋಟೆಯಲ್ಲೂ ಕಾಣಬಹುದು. ಆದ್ದರಿಂದ ಹಾನಗಲ್ಲು ಮತ್ತು ಬಸವಕಲ್ಯಾಣ ಕೋಟೆಗಳು ಸ್ಥಲದುರ್ಗದ ಪ್ರತಿನಿಧಿಗಳಾಗಿವೆ. ಸ್ಥಲದುರ್ಗದ ಸುತ್ತ ಕಂದಕವಿರುವ ವಿಷಯ ಸಾಮಾನ್ಯ ಎಲ್ಲಾ ಕವಿಗಳ ವರ್ಣನೆಯಲ್ಲಿ ಬಂದಿದೆ. ಬನವಾಸಿಯನ್ನು ಸ್ಥಲದುರ್ಗವೆಂದು ಐಹೊಳೆ ಶಾಸನದಲ್ಲಿ ಉಲ್ಲೇಖಿಸಿದೆ.[2] ಬನವಾಸಿ ಕೋಟೆಯ ಸುತ್ತಲೂ ದಟ್ಟವಾದ ಅರಣ್ಯವಿದ್ದಿರಬಹುದೆಂದು ನಾವು ಊಹಿಸಬಹುದು. ವರದಾ ನದಿಯ ಉಪನದಿಯಾದ ಧರ್ಮಾ ನದಿಯ ಎಡದಂಡೆಯ ಮೇಲಿರುವ ಮಣ್ಣಿನ ರಚನೆಯನ್ನು ಹೊಂದಿದ ಹಾನಗಲ್ಲು ಕೋಟೆ, ನಾಲ್ಕು ಸುತ್ತುಗಳನ್ನು ಹೊಂದಿದೆ. ರಾಜಧಾನಿ ಮತ್ತು ಕೋಟೆಯ ನಿರ್ಮಾಣದಲ್ಲಿ ಸ್ಥಳದ ಆಯ್ಕೆ ಬಹುಮುಖ್ಯವಾದ ವಿಷಯ. ನೈಸರ್ಗಿಕ ರಕ್ಷಣೆಯ ದೃಷ್ಟಿಯಿಂದ ನದಿಯ ದಡಗಳು ಹೆಚ್ಚು ಉಪಯುಕ್ತ. ಅದರಲ್ಲೂ ನದಿಯೂ ತೀರ್ವವಾಗಿ ತಿರುವು ಪಡೆದುಕೊಂಡು ಸ್ವಲ್ಪಮಟ್ಟಿಗೆ ವೇಗವಾಗಿ ಹರಿಯುವ ಸ್ಥಳ ಕೋಟೆಯ ನಿರ್ಮಾಣಕ್ಕೆ ಸೂಕ್ತ ಪ್ರದೇಶವೆಂದೇ ಭಾವಿಸಲಾಗಿದೆ. ಸದಾ ತುಂಬಿ ಹರಿಯುವ ನದಿ, ಕೋಟೆಗೆ ನಿಸರ್ಗದತ್ತ ಕಂದಕವಾಗಿ ಒಂದು ಪಾರ್ಶ್ವಕ್ಕೆ ರಕ್ಷಣೆ ನೀಡುವುದು. ಉಳಿದೆಡೆ ಕೋಟೆಯ ಸುತ್ತ ಕಂದಕವನ್ನು ತೋಡಿ ಅದಕ್ಕೆ ಕಾಲುವೆ ಮೂಲಕ ನೀರನ್ನು ಹರಿಸುವುದು ಸುಲಭದ ಕೆಲಸ. ವೇಗವಾಗಿ ಹರಿಯುವ ನೀರು ತಿರುವಿನಲ್ಲಿ ಸುಲಭವಾಗಿ ಕಾಲುವೆಯ ಮೂಲಕ ಕಂದಕವನ್ನು ತುಂಬುತ್ತದೆ. ಮಳೆಗಾಲದಲ್ಲಿ ನದಿ ಉಕ್ಕಿ ಹರಿಯುವಾಗ, ಪಾರ್ಶ್ವದ ಕೋಟೆ ಗೋಡೆಗೆ ಅಲ್ಪಸ್ವಲ್ಪ ಹಾನಿಯುಂಟಾದರೂ, ಅದನ್ನು ಸುಲಭವಾಗಿ ದುರಸ್ಥಿ ಮಾಡಬಹುದು. ಹಿನ್ನೆಲೆಯಲ್ಲಿ ಹಾನಗಲ್ಲು ಕೋಟೆ ನಿರ್ಮಾಣವನ್ನು ಗಮನಿಸಿದಾಗ, ಮಲೆನಾಡು ಮತ್ತು ಅರೆಮಲೆನಾಡು ಪ್ರದೇಶಗಳಲ್ಲಿ ಮಣ್ಣಿನ ಕೋಟೆಗಳನ್ನೆ ಹೆಚ್ಚಾಗಿ ನಿರ್ಮಿಸಲು ಕಾರಣಗಳೇನಿರಬಹುದು? ಪರಿಸರದಲ್ಲಿ ಕೋಟೆ ನಿರ್ಮಾಣಕ್ಕೆ ಕಲ್ಲುಗಳ ಕೊರತೆ ಇರಬಹುದೆ? ಅಥವಾ ರಕ್ಷಣೆಗಾಗಿ ದುರ್ಗದಲ್ಲಿ ಮರಗಿಡಗಳನ್ನು ಬೆಳೆಸಲು ಸಹಕಾರಿಯಾಗುತ್ತಿತ್ತೆ ಇತ್ಯಾದಿ ಹಲವು ಪ್ರಶ್ನೆಗಳು ಕಾಡುತ್ತಿವೆ. ಇದಕ್ಕೆ ಉತ್ತರವನ್ನು ಹುಡುಕಬೇಕಿದೆ.

ಹಾನಗಲ್ಲು ಕೋಟೆಯು ಮಣ್ಣಿನಿಂದ ಮಾಡಿದ ರಚನೆ. ಇದನ್ನುಅಭಿಲಷಿತಾರ್ಥ ಚಿಂತಾಮಣಿಹಾಗೂಶಿವತತ್ವರತ್ನಾಕರಇತ್ಯಾದಿ ಕೃತಿಗಳಲ್ಲಿ ದುರ್ಗಪ್ರಬೇಧಗಳನ್ನು ಉಲ್ಲೇಖಿಸುವಾಗ, ದುರ್ಗವನ್ನುಮೃತ್ತಿಕಾದುರ್ಗವೆಂದು ಉಲ್ಲೇಖಿಸಲಾಗಿದೆ. ಸುತ್ತಲೂ ಕಂದಕವಿದ್ದು, ಪ್ರಧಾನವಾಗಿ ಮಣ್ಣಿನಿಂದಲೆ ರಚಿಸಿದ ಕೋಟೆಯನ್ನು ಮೃತ್ತಿಕಾಮಯ ದುರ್ಗವೆಂದು ಅರ್ಥೈಸಬಹುದು.

ಕೋಟೆ ನಿರ್ಮಾಣಕ್ಕೆ ಕಂದಕದಿಂದ ತೆಗೆದ ಮಣ್ಣು ಹಾಗೂ ಜಂಬಿಟ್ಟಿಗೆಯನ್ನು ಬಳಸಲಾಗಿದೆ. ಅಲ್ಲದೆ ಕೋಟೆ ಗೋಡೆ ಭದ್ರವಾಗಿರಲು ಅದಕ್ಕೆ ರಬ್ಬರ, ಮರದ ದಿನ್ನೆ ಇತ್ಯಾದಿಗಳನ್ನು ಬಳಸಿರುವ ಸಾಧ್ಯತೆ ಇದೆ ಎಂಬ ಡಾ. ಎಸ್. ರಾಜಶೇಖರ ಅವರ ಅಭಿಪ್ರಾಯವನ್ನು ತಳ್ಳಿಹಾಕುವಂತಿಲ್ಲ. ಸಂದರ್ಭದಲ್ಲಿ ಮಣ್ಣು ಜಾರದ ರೀತಿಯಲ್ಲಿ ಎಚ್ಚರಿಕೆ ವಹಿಸಿರುವುದು ಇಂದಿಗೂ ಉಳಿದಿರುವ ಹಾನಗಲ್ಲು ಕೋಟೆ ಸಾಕ್ಷಿಯಾಗಿದೆ. ಇದು ಕೆಳಗೆ ವಿಸ್ತಾರವಾಗಿದ್ದು, ಮೇಲಕ್ಕೆ ಬಂದಂತೆ ಕೃಶವಾಗಿ ಊರ್ಧ್ವಚಯದಂತೆ ಅಥವಾ ಎಲ್ಲೆಡೆ ಒಂದೆ ವಿಧವಾಗಿರುವುದು. ಆನೆ, ದನಗಳಿಂದ ತುಳಿಸಿ ಹದಮಾಡಿದ ಮಣ್ಣನ್ನು ಇದಕ್ಕೆ ಉಪಯೋಗಿಸಿರಬೇಕು. ಕೋಟೆಯ ಮೇಲೆ ರಥ ಹೋಗಿ ಬರುವಷ್ಟು ವಿಸ್ತಾರವಾದ ಸ್ಥಳಾವಕಾಶವಿದೆ. ಇದರ ಮೇಲೆ ಇದ್ದಿರಬಹುದಾದ ಅಟ್ಟಾಲಕ ಮತ್ತು ಕೋಟೆ ತೆನೆ ರಚನೆಗಳು ಇಂದು ಗೋಚರಿಸುವುದಿಲ್ಲ.

ಹಾನಗಲ್ಲನ್ನು ಪ್ರವೇಶಿಸುವಾಗ ಸಿಗುವ ಮೊದಲನೆಯ ಕೋಟೆ ಅಥವಾ ಹೊರಕೋಟೆ ಬಹಳ ವಿಶಾಲವಾಗಿದೆ. ಇದು ಸಂಪೂರ್ಣ ನಗರವನ್ನಲ್ಲದೆ ಇನ್ನೂ ಹೆಚ್ಚಿನ ಪ್ರದೇಶವನ್ನೂ ಸುತ್ತುವರಿದಿದೆ. ಇದರ ಆಗ್ನೇಯಕ್ಕೆ ಧರ್ಮಾ ನದಿ, ಈಶಾನ್ಯಕ್ಕೆ ಅಚ್ಚಕೆರೆ, ವಾಯುವ್ಯಕ್ಕೆ ಕಂಬಳ ಕೆರೆ ಹಾಗೂ ನೈರುತ್ಯಕ್ಕೆ ಆನೆಕೆರೆಗಳಿವೆ. ಕೋಟೆಯ ಸುತ್ತ ನದಿ ಮತ್ತು ಮೂರು ಕೆರೆಗಳಿವೆ. ಇವುಗಳಲ್ಲಿ ಆನೆಕೆರೆ ಬಹಳ ದೊಡ್ಡದು. ಶಾಸನದಲ್ಲಿ ಇದನ್ನು ಅತ್ತಿಕೆರೆ ಎಂದು ಕರೆಯಲಾಗಿದೆ.[3] ಕದಂಬ ಅರಸರು ತಮ್ಮ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದರೆಂಬ ಪ್ರತೀತಿ ಇದೆ. ಆನೆಕೆರೆ ಮತ್ತು ಅಚ್ಚಕೆರೆಯಿಂದ ನೀರು ಕಂದಕಕ್ಕೆ ಬರುತ್ತದೆ. ಕೋಟೆಯ ವಾಯುವ್ಯ ದಿಕ್ಕಿನಲ್ಲಿ ಮತ್ತು ನದಿಯ ದಂಡೆಯ ಮೇಲೆ ದಕ್ಷಿಣ ದಿಕ್ಕಿನಲ್ಲಿ ಒಂದೊಂದು ದಿಡ್ಡಿ ಬಾಗಿಲುಗಳಿವೆ. ಪಶ್ಚಿಮ ದಿಕ್ಕಿಗೆ ಹಾಗೂ ಅಚ್ಚಕೆರೆ ಕಡೆಗೆ ಈಶಾನ್ಯ ದಿಕ್ಕಿನಲ್ಲಿ ಪ್ರವೇಶ ದ್ವಾರಗಳಿವೆ. ಮೊದಲನೆಯ ಕೋಟೆ ಮತ್ತು ಎರಡನೆಯ ಕೋಟೆಯ ನಡುವೆ ಹೆಚ್ಚು ಅಂತರವಿಲ್ಲ. ಇವೆರಡೂ ಕೋಟೆಗಳ ಮಧ್ಯದಲ್ಲಿ ಹೊಲ,ತೋಟ, ಗದ್ದೆಗಳಿವೆ.

ಎರಡನೆಯ ಕೋಟೆ ಇಡೀ ನಗರವನ್ನು ಮತ್ತು ಮೂರನೆಯ ಕೋಟೆಯ ಪೂರ್ವ, ಉತ್ತರ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಮಾತ್ರ ಸುತ್ತುವರಿದಿದೆ. ಕೋಟೆಗೆ ಪಶ್ಚಿಮ ಮತ್ತು ಈಶಾನ್ಯ ದಿಕ್ಕುಗಳಲ್ಲಿ ಒಂದೊಂದು ಪ್ರವೇಶ ಬಾಗಿಲುಗಳಿವೆ. ಈಶಾನ್ಯ ಬಾಗಿಲಿರುವ ಸ್ಥಳದಲ್ಲಿ ಕೋಟೆ ಗೋಡೆಯನ್ನು ಹಿಂದಕ್ಕೆ ಸರಿಸಿ ಕಟ್ಟಲಾಗಿದೆ. ಇದರಿಂದ ಬಾಗಿಲು ವೈರಿಯ ಕಣ್ಣಿಗೆ ಬೇಗ ಕಾಣುವುದಿಲ್ಲ. ಕೋಟೆಯೊಳಗೆ ಪಶ್ಚಿಮ ಭಾಗದಲ್ಲಿ ಪ್ರಸ್ತುತ ನಗರವಿದೆ. ಈಶಾನ್ಯ ಭಾಗದಲ್ಲಿ ಶಾಸ್ತ್ರಿಕೆರೆ ಮತ್ತು ಅದರ ದಕ್ಷಿಣಕ್ಕೆ ಮೂರನೆಯ ಕೋಟೆ ಇದೆ. ನಗರ ಮಧ್ಯದಲ್ಲಿ ತಾರಕೇಶ್ವರ ಹಾಗೂ ಅದರ ಪಕ್ಕದಲ್ಲಿ ರೇಖಾನಾಗರ ಶೈಲಿಯಲ್ಲಿ ಕಟ್ಟಿದ ಗಣೇಶ ದೇವಾಲಯಗಳಿವೆ. ಮೂರನೆಯ ಕೋಟೆ, ನಾಲ್ಕನೆಯ ಕೋಟೆಯನ್ನು ಪೂರ್ವ, ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಿಂದ ಆವರಿಸಿದೆ. ಇದು ಸಹ ಮಣ್ಣಿನ ಕೋಟೆ. ಆದರೆ ಕೋಟೆಯ ಮಧ್ಯದಲ್ಲಿ ಇಟ್ಟಿಗೆಯ ಗೋಡೆಯನ್ನು ಕಟ್ಟಿ, ಅದನ್ನು ಮಣ್ಣಿನಿಂದ ಮುಚ್ಚಲಾಗಿದೆ. ಕೋಟೆಯ ವಾಯುವ್ಯ ದಿಕ್ಕಿನಲ್ಲಿ, ಒಳಕೋಟೆಯನ್ನು ಸೇರುವ ಸ್ಥಳದಲ್ಲಿ ಪ್ರವೇಶ ಬಾಗಿಲವಿದೆ. ಪಶ್ಚಿಮ ಮತ್ತು ಪೂರ್ವ ದಿಕ್ಕುಗಳಲ್ಲೂ ಒಂದೊಂದು ಬಾಗಿಲುಗಳಿವೆ. ಇದರ ಸುತ್ತಲಿನ ಆಳವಾದ ಕಂದಕಕ್ಕೆ ಆನೆಕೆರೆ ಮತ್ತು ಶಾಸ್ತ್ರಿಕೆರೆಯಿಂದ ನೀರು ಬರುತ್ತದೆ. ಕೋಟೆಯೊಳಗೆ ಪಟ್ಟಣದ ಅವಶೇಷಗಳಿವೆ. ಪ್ರಾಯಶಃ ಬೆಳೆಯುತ್ತಿರುವ ನಗರ ಮತ್ತು ಉಳುಮೆಯಿಂದಾಗಿ ಅವಶೇಷಗಳು ನಾಶ ಹೊಂದಿವೆ. ಆದರೂ ಆಗಿನ ಕಾಲದ ಭಗ್ನಾವಸ್ಥೆಯಲ್ಲಿರುವ ದೇವಾಲಯ ಮತ್ತು ಇಟ್ಟಿಗೆಯಿಂದ ಕಟ್ಟಿದ ವೃತ್ತಾಕಾರದ ಬಾವಿಗಳು ಗೋಚರಿಸುತ್ತವೆ. ಇಲ್ಲಿ ಶಾತವಾಹನ ಕಾಲದ ಮಣ್ಣಿನ ಮಡಕೆಯ ಅವಶೇಷಗಳು ಸಿಗುತ್ತವೆ ಎಂದು ಡಾ. ಸಿ.ಎಸ್. ಪಾಟೀಲರ ಕರ್ನಾಟಕದ ಕೋಟೆಗಳು ಎಂಬ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಒಂದು ಭಾಗದಲ್ಲಿ ಗಚ್ಚಿನ ಕೋಣೆ, ಕೀಚಕನ ಗರಡಿಮನೆ, ವಿರಾಟರಾಜನ ಅರಮನೆ ಇದ್ದವೆಂದು ಪ್ರತೀತಿ ಇದೆ.

ನಾಲ್ಕನೆಯದು ಒಳಕೋಟೆ. ಇದು ಸಹ ಮಣ್ಣಿನ ಕೋಟೆ. ಇದಕ್ಕೆ ಉತ್ತರ ದಿಕ್ಕಿನಲ್ಲಿ ಒಂದು ಪ್ರವೇಶ ಬಾಗಿಲಿದ್ದು, ಒಳಗೆ ತೋಟಗಾರಿಕೆ ಇಲಾಖೆಯವರು ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ. ಇಲ್ಲಿ ಕ್ರಿ..ಸು. ೧೩ನೆಯ ಶತಮಾನದ ಶಿವದೇವಾಲಯವಿದೆ. ಇದು ಮೂಲತಃ ಜೈನ ದೇವಾಲಯವಾಗಿತ್ತೆಂಬ ಅಭಿಪ್ರಾಯವಿದೆ.[4]

ಕೋಟೆಯ ಲಕ್ಷಣಗಳು

ಮಣ್ಣಿನ ಕೋಟೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಾನಗಲ್ಲು ಕೋಟೆಯ ಲಕ್ಷಣಗಳನ್ನು ಕೆಳಗಿನಂತೆ ವಿಂಗಡಿಸಬಹುದು.

ಅಳ್ವೇರಿ : ಅಳ್ವೇರಿಯು ಕೋಟೆಯ ಗೋಡೆಯನ್ನು ಸೂಚಿಸುತ್ತದೆ. ಪರಿಷತ್ತಿನ ನಿಘಂಟಿನಲ್ಲಿ ಇದಕ್ಕೆ ಕೋಟೆಯ ಸುತ್ತಣ ಗೋಡೆ, ಕೋಟೆಯ ಎತ್ತರವಾದ ಗೋಡೆ ಎಂದಿದೆ. ಇದಕ್ಕೆಪ್ರಾಕಾರ ವಪ್ರಎಂತಲೂ ಕೆಲವೆಡೆ ಹೇಳಿದೆ. ಬೆಳ್ವೊಲದ ಸುತ್ತ ಪ್ರಾಕಾರವಿದ್ದರೆ, ಕಲ್ಯಾಣದ ಸುತ್ತ ಆಕಾಸದೆತ್ತರದ ವಪ್ರವಿತ್ತು. ಕೆಲವು ಕಾವ್ಯಗಳಲ್ಲಿ ಕೋಟೆಯ ಗೋಡೆಗೆ ಪ್ರಾಕಾರ ಎಂದು ಹೇಳಲಾಗಿದೆ.[5]

ಕೋಟೆಯಲ್ಲಿ ಶತ್ರುವಿಗೆ ಸವಾಲಾಗುವ ಮೊದಲ ಅಂಶವೆಂದರೆ ಅದರ ಎತ್ತರ ಮತ್ತು ಅಗಲ, ನಾಲ್ಕು ಸುತ್ತಿನ ಕೋಟೆಯ ಮೊದಲ ಹೊರಸುತ್ತಿನಲ್ಲಿ ಮೀಟರ್ ಎತ್ತರ ಮತ್ತು ೧೦ ಮೀಟರ್ ಅಗಲವಿದೆ ಎಂಬ ಅಭಿಪ್ರಾಯವನ್ನು ಡಾ. ಸಿ.ಎಸ್. ಪಾಟೀಲರು ವ್ಯಕ್ತಪಡಿಸಿದ್ದಾರೆ.[6] ಇದೆ ಅಭಿಪ್ರಾಯವು ಡಾ. ಚೆನ್ನಕ್ಕ ಪಾವಟೆ ಅವರದಾಗಿದೆ.[7] ವಿದ್ವಾಂಸರು ಯಾವ ಮಾಪನವನ್ನು ಗಮನದಲ್ಲಿಟ್ಟು ಹೇಳಿದ್ದಾರೆಂದು ತಿಳಿಯದು. ಆದರೆ ಈಗ ಉಳಿದಿರುವ ಪ್ರಸ್ತುತ ಕೋಟೆಯ ಅಳತೆಯನ್ನು ನಿಖರವಾಗಿ ಸೂಚಿಸಲು ಸಾಧ್ಯವಿಲ್ಲ.

ಇಡೀ ನಗರವನ್ನು ಸುತ್ತುವರೆದಿರುವ ೨ನೆಯ ಕೋಟೆಯ ಆಳ್ವೇರಿಯು ೧೦ ಮೀಟರ್ ಎತ್ತರ ಹಾಗೂ ೧೫ ಮೀಟರ್ ಅಗಲವಾಗಿದೆ ಎಂದು ಡಾ.ಸಿ.ಎಸ್. ಪಾಟೀಲ ಹಾಗೂ ಡಾ. ಚೆನ್ನಕ್ಕ ಪಾವಟೆ ಅವರ ಹೇಳಿಕೆ ಒಂದಾಗಿದೆ. ಮೂರನೆಯ ಸುತ್ತಿನ ಕೋಟೆ ೨೦ ಮೀಟರ್ ಎತ್ತರ ಮೀಟರ್ ಅಗಲವಿದ್ದರೆ, ನಾಲ್ಕನೆಯ ಸುತ್ತಿನ ಕೋಟೆಯ ಆಳ್ವೇರಿಯು ೨೫ ಮೀಟರ್ ಎತ್ತರ ೨೦ ಮೀಟರ್ ಅಗಲವಾಗಿದೆ. ಆದರೆ ಡಾ. ಸಿ.ಎಸ್. ಪಾಟೀಲರು ೩ನೆಯ ಸುತ್ತಿನ ಕೋಟೆಯ ಅಗಲ ೨೦ ಮೀಟರ ಎಂದು ಉಲ್ಲೇಖಿಸಿದ್ದಾರೆ. ಇದು ಸರಿಯಾದ ಅಳತೆ ಅಲ್ಲವೆಂದು ಹೇಳಬೇಕಾಗುತ್ತದೆ.

ಕೋಟೆ ತೆನೆ

ಕೋಟೆಯ ವರ್ಣನೆಯಲ್ಲಿ ಕಂಡುಬರುವ ತೆನೆ ಎಂಬ ಪದ ಬಳಕೆಯನ್ನು ಕನ್ನಡ ಕಾವ್ಯಗಳಲ್ಲಿ ಕಾಣಬಹುದು. ಪೊಂದನೆ ರಥಾಂಗಮಗೆತ್ತರುಣಂ ತೆನೆಯನೆತ್ತಿನಗಿಸುನಿನಂ,[8] ತೆನೆಗಳ ಪುದಿವು ತರಂಗಗಳಾಗೆ,[9] ಬಟ್ಟದೆನೆ[10] ಎಂಬ ಹರಿಹರನ ಮಾತನ್ನು ಹೊರತುಪಡಿಸಿದರೆ, ಉಳಿದೆಲ್ಲವೂ ಸಾಂಪ್ರದಾಯಕವಾಗಿವೆ. ‘ಬಟ್ಟ ಅಥವಾ ವೃತ್ತಾಕಾರವಾಗಿರುವ ತೆನೆಎಂಬುದು ಚಿದಾನಂದಮೂರ್ತಿ ಅವರ ಅಭಿಪ್ರಾಯ. ಶಿವಮೊಗ್ಗ ಕೋಟೆಯೊಳಗಿನ ಪೋಲೀಸ್ ಠಾಣೆಯಲ್ಲಿರುವ ವೀರಗಲ್ಲಿನಲ್ಲಿ ಕೋಟೆ ಗೋಡೆಯ ಸುತ್ತಲೂ ವೃತ್ತಾಕಾರದ ತೆನೆಗಳಿವೆ. ಕೋಟೆಯ ಪ್ರಾಕಾರದ ತುದಿಯ ಗಾಲಿಯಾಕಾರದ ರಚನೆ ಎಂದು ಇದಕ್ಕೆ ಪರಿಷತ್ತಿನ ನಿಘಂಟಿನಲ್ಲಿ ಅರ್ಥವನ್ನು ಹೇಳಿದೆ. ಎಲೆಬೇತೂರು, ಲಕ್ಷ್ಮೇಶ್ವರ ವೀರಗಲ್ಲು ಶಾಸನಗಳಲ್ಲಿ ತೆನೆ ಅರ್ಧವೃತ್ತಾಕಾರವಾಗಿರುವಂತಿದೆ. ಹಾನಗಲ್ಲಿನ ತಾರಕೇಶ್ವರ ಗುಡಿಯಲ್ಲಿರುವ ವೀರಗಲ್ಲಿನಲ್ಲಿ ಅರ್ಧವೃತ್ತಾಕಾರ ತೆನೆಗಳನ್ನು ಕಾಣಬಹುದು.

ಆಳ್ವೇರಿಯ ಮೇಲೆ ಇಂತಹ ತೆನೆಗಳು  ಸಾಲಾಗಿರುತ್ತಿದ್ದವು.[11] ವೈರಿಗಳು ಬರುವ ಸೂಚನೆ ದೊರೆತಾಕ್ಷಣ ಅಥವಾ ವರ್ಷಾಕಾಲ ಮುಗಿಯುತ್ತಿದ್ದಂತೆ ಇವುಗಳನ್ನು ನವೀಕರಿಸುತ್ತಿದ್ದರು. ‘ಸೈನಿಕರ ಸಾಲಿನಂತೆ ಕೋಟೆಯ ನೂತನ ತೆನೆಗಳೊಪ್ಪಿದವುಎಂಬ ವರ್ಣನೆ ಮೋಹನತರಂಗಿಣಿಯಲ್ಲಿದೆ.[12] ಹಾನಗಲ್ಲು, ಎಲೆಬೇತೂರು ಮತ್ತು ಲಕ್ಷ್ಮೇಶ್ವರ ವೀರಗಲ್ಲುಗಳಲ್ಲಿರುವ ಚಿತ್ರಗಳು ಇದಕ್ಕೆ ಸಾಮೀಪ್ಯವನ್ನು ಹೊಂದಿದ್ದು, ಇಲ್ಲಿ ಸೈನಿಕರು ಕೋಟೆಯ ತೆನೆಗಳ ನಡುವೆ ನಿಂತು ಯುದ್ಧ ಮಾಡುತ್ತಿರುವ ದೃಶ್ಯವನ್ನು ಬಿಡಿಸಲಾಗಿದೆ.[13] ಅವರು ಕೋಟೆ ಗೋಡೆಯ ಮೇಲೆ ನಿಂತು ತೆನೆಗಳ ಮರೆಯಿಂದ ಬಾಣ ಪ್ರಯೋಗ ಮಾಡುತ್ತಿದ್ದರೆಂದು ತೋರುತ್ತದೆ. ಪ್ರಸ್ತುತ ಹಾನಗಲ್ಲು ಕೋಟೆಯಲ್ಲಿ ತೆನೆಗಳು ಕಂಡುಬರುವುದಿಲ್ಲ.

ಕೋಟೆ ತೆನೆಗಳ ಮಹತ್ವ

ತೆನೆಗಳ ನಿರ್ಮಾಣ ಕೋಟೆಯ ಅಲಂಕರಣೆಗಾಗಿ ಅಲ್ಲ. ಯುದ್ಧದ ಸಮಯದಲ್ಲಿ ರಕ್ಷಣೆಯ ದೃಷ್ಟಿಯಿಂದ ಇವು ಗಮನಾರ್ಹವಾಗಿದ್ದವು. ಎರಡು ತೆನೆಗಳ ಮಧ್ಯೆ ತಲೆಹಾಕಿ ಕೆಳಕ್ಕೆ ಇಣುಕಿ ನೋಡಿ ಅವುಗಳ ಹಿಂದೆ ಕುಳಿತು, ಅಂಬುಗಂಡಿಯಿಂದ ಬಾಣಗಳನ್ನು ಬಿಡಬಹುದಿತ್ತು.[14] ಕೋಟೆಯ ರಕ್ಷಣೆಗೆಂದು ನಿಯುಕ್ತರಾದವರು ತೆನೆಗಳ ಮರೆಯಲ್ಲಿ ನಿಂತು ಬಾಣ ಬಿಡಲು ಇಲ್ಲಿ ಅನುಕೂಲವಿತ್ತು. ಹಾನಗಲ್ಲು ವೀರಗಲ್ಲಿನಲ್ಲಿ ಕೋಟೆಯ ಸಂರಕ್ಷಕರು ತೆನೆಗಳ ನಡುವೆ ನಿಂತು ಯುದ್ಧ ಮಾಡುತ್ತಿರುವ ದೃಶ್ಯವಿದೆ.[15] ದೇಹದ ಅರ್ಧಭಾಗಕ್ಕೆ ಇದರಿಂದ ರಕ್ಷಣೆ ದೊರೆಯುವಂತಿದೆ. ಆದ್ದರಿಂದ ವೈರಿಗಳ ದೃಷ್ಟಿಯಿಂದ ತೆನೆಗಳು ಅಪಾಯಕಾರಿಯಾಗಿದ್ದವು. ಇವುಗಳನ್ನು ಮುರಿದರೆ ಮರೆಯಲ್ಲಿ ನಿಂತವರನ್ನು ನಾಶಮಾಡಲು ಸಾಧ್ಯವಿತ್ತು. ಹೀಗಾಗಿ ಕೋಟೆಯ ಕಾಳಗದಲ್ಲಿ ಕಲ್ಲುಗಳನ್ನು ಕಿತ್ತು ಹಾಕುತ್ತಿದ್ದರು. ಮಾತ್ರವಲ್ಲದೆ ಕೋಟೆಯ ತೆನೆಗಳನ್ನು ಮುರಿದು ಹಾಕುತ್ತಿದ್ದರು.[16] ಲಗ್ಗೆಯಿಟ್ಟ ಯೋಧರು ಕೋಟೆಯನ್ನು ಹತ್ತಿ ತೆನೆಗಳ ಮೇಲೆ ಕಾಲಿಟ್ಟು ನಿಲ್ಲುತ್ತಿದ್ದರು (ಸಾಮ್ಯ ಕೌ.ಲಾ.೩೦). ಕೋಟೆಯನ್ನು ಹತ್ತುವಲ್ಲಿ ತೆನೆಗಳಿಂದ ಸ್ವಲ್ಪ ಮಟ್ಟಿಗೆ ಪ್ರಯೋಜನವಿತ್ತೆಂದು ತಿಳಿಯುವುದು. ತೆನೆಯ ತುದಿಯಲ್ಲಿ ಯೋಧರು ಹತ್ತಿದರೆಂದರೆ ಕೋಟೆಯ ಒಳಗೆ ಗೊಂದಲಮಯ ವಾತಾವರಣ ನಿರ್ಮಾಣವಾಗುತ್ತಿತ್ತು. ಹೀಗಾಗಿ ತೆನೆಗಳು ಕೋಟೆಯ ಸಂರಕ್ಷಕರಿಗೆ ನೆರವಿತ್ತಂತೆ, ಲಗ್ಗೆ ಇಡುವವರಿಗೂ ತಕ್ಕ ಮಟ್ಟಿಗೆ ಉಪಯುಕ್ತವಾಗಿತ್ತೆಂದು ತಿಳಿದುಬರುತ್ತದೆ.

ಧ್ವಜ

ಕೋಟೆಯ ಮೇಲೆ ಧ್ವಜಗಳು ಹಾರಾಡುತ್ತಿದ್ದ ವರ್ಣನೆ ಕಾವ್ಯಗಳಲ್ಲಿದೆ. ಪಂಪಭಾರತದಲ್ಲಿ (ಪಂ.ಭಾ. ೧೦) ಆಕಾಶದವರೆಗೆ ಮೇಲಕ್ಕೆದ್ದು ಅಲುಗಾಡುವ ಭಾವುಟಗಳ ಸಾಲು ಎಂದಿದೆ. ವಿಕಟಾಟ್ಟಾಲಂಗಳೊಳ್ ಕೇತನಾನೀಕಂಗಳ್ ಎಂಬುದು ಆದಿಪುರಾಣದಲ್ಲಿ (.ಪು. ೧೦೪) ಮೂಡಿಬಂದಿದೆ. ವಿಸ್ತ್ರತಾಟ್ಟಾಳ ಮುದ್ಧ ಸಮೀಚೀನ ಪಟಧ್ವಜಂ ಎಂದಿದೆ.[17] ಎಲ್ಲಾ ಕಾವ್ಯ ಪ್ರಯೋಗಗಳನ್ನು ನೋಡಿದರೆ, ಅಟ್ಟಳೆಗಳ ಮೇಲೆ ಧ್ವಜಗಳು ಹಾರುತ್ತಿದ್ದವು ಎಂಬುದು ಖಚಿತ. ಕ್ರಿ.. ೧೦೪೪೪೫ರ ತ್ರೈಳೋಕ್ಯಮಲ್ಲನ ಆಡೂರು ಶಾಸನದಲ್ಲಿ ಬನವಾಸಿ ಪುರವರೇಶ್ವರಂ ಶ್ರೀ ಮನ್ಮಯೂರವರ್ಮದೇವಂ ಪಾನುಂಗಲ್ಲು ಯನ್ನೂರಕ್ಕನಮಸರಸುಗೆಯ್ಯ ಇಲ್ಲಿಂದ ಆರಂಭವಾಗಿ ಶಾಸನದ ೮ನೇ ಸಾಲಿನಲ್ಲಿ ಕೋಟೆಯ ದೀಪಧ್ವಜ ಸಿಂಗರಿದಾರಿಸುವೆ ಎಂದಿದೆ. ಅಂದರೆ ಹಾನಗಲ್ಲು ಕೋಟೆಯ ಮೇಲೆ ಧ್ವಜ ಗಾಳಿಗೆ ಹಾರಾಡುತ್ತಿತ್ತು. ಇದು ರಾಜ್ಯದ ಜನತೆಯ ಆತ್ಮವಿಶ್ವಾಸದ, ಸ್ವಾತಂತ್ರ್ಯದ ಪ್ರತೀಕ. ಆದ್ದರಿಂದ ಯುದ್ಧ ಸನ್ನದ್ಧ ಕೋಟೆಯಲ್ಲಿ ಧ್ವಜಾಳಿ,[18] ಧ್ವಜಕೇತನಗಳು[19] ಇರುತ್ತಿದ್ದವು. ಇವು ಅತ್ಯಂತ ಎತ್ತರದಲ್ಲಿ ಬಹುದೂರದವರೆಗೆ ಕಾಣುವಂತೆ ಹಾರಾಡುತ್ತಿದ್ದವು.

ಅಟ್ಟಳೆಯ ಕಂಬಗಳಿಗೆ ಧ್ವಜ ದಂಡವನ್ನು ಕಟ್ಟುತ್ತಿದ್ದರು. ಯುದ್ಧದ ಮುನ್ನಾ ದಿನ ಕೋಟೆಯ ಮೇಲಿನ ಪವಿತ್ರ ಧ್ವಜವನ್ನು ಪೂಜಿಸುತ್ತಿದ್ದರು. ಯುದ್ಧದ ಅಟ್ಟಳೆಯನ್ನು ಪೂಜಿಸಿ ಪಾಲಿಕೆಯನ್ನು ಎತ್ತಿ ನಿಲ್ಲಿಸುತ್ತಿರಬಹುದು. ಅರ್ಚಿಸಿದಟ್ಟಳೆಯೊಂ ಎತ್ತಿದ ಪತಾಕೆಯೊಳಂ ಎಂಬುದು ಅನಂತಪುರಾಣ (೧೧೧೨)ದಲ್ಲಿ ಪ್ರಸ್ತಾಪವಾಗಿದೆ. ಬೇವಿನ ದಂಡೆಯನ್ನು ಪೂಜೆಯ ಸಂದರ್ಭದಲ್ಲಿ ಧ್ವಜಕ್ಕೆ ಸುತ್ತುತ್ತಿದ್ದಿರಬೇಕು. ಹಾಗಾಗಿ ಸುತ್ತಿದ ಬೇವಿನದಂಡೆ ಎಂದು ಅನಂತಪುರಾಣ(೧೧೮೨)ದಲ್ಲಿ ಸ್ಪಷ್ಟವಾಗಿದೆ. ಯುದ್ಧದಲ್ಲಿ ಲಗ್ಗೆಯಿಟ್ಟವರು ಗೆದ್ದರೆ ತಮ್ಮ ಮಹಾಧ್ವಜವನ್ನು ಎತ್ತಿನಿಲ್ಲಿಸುತ್ತಿದ್ದ ಮಾಹಿತಿ ಶಾಸನವೊಂದರಲ್ಲಿದೆ. ಕೋಟೆಯ ಮೇಲೆ ಸಾಕಷ್ಟು ಅಟ್ಟಳೆಗಳಿರುವುದರಿಂದ ಭಾವುಟಗಳೂ ಅಟ್ಳೆಗೊಂದರಂತೆ ಇದ್ದಿರಬಹುದು. ಯೋಧರು ಧ್ವಜಗಳ ರಕ್ಷಣೆಯನ್ನು ಮಾಡುತ್ತಿದ್ದರು.

ಕೋಟೆ ಕಾಳಗದಲ್ಲಿ ಗೆದ್ದ ನಂತರ ಕೋಟೆಯ ಹಲವೆಡೆ ತಮ್ಮ ಮಹಾಧ್ವಜವನ್ನು ನಿಲ್ಲಿಸುತ್ತಿದ್ದರು. ಯುದ್ಧಕ್ಕೆ ಮುನ್ನ ಪೂಜಿಸಿ ಎತ್ತಿ ಕಟ್ಟಿದ ಶತ್ರು ಪಕ್ಷದ ಧ್ವಜವನ್ನು ಇಳಿಸಿ ಲಗ್ಗೆ ಹಾಕಿದವರು, ತಮ್ಮ ಧ್ವಜವನ್ನು ಗೆಲುವಿನ ಸಂಕೇತವಾಗಿ ನಿಲ್ಲಿಸುತ್ತಿದ್ದರೆಂದು ಕ್ರಿ.. ೯೭೫ರ ಶಾಸನವೊಂದರಲ್ಲಿ ಕಾಣಬಹುದು. ಶಾಸನದಲ್ಲಿ ಕಾದಿಗೆಲ್ಡು ಪಲವೆಡೆಗಳೊಳಂ ಮಹಾಧ್ವಜಮನೆತ್ತಿಸಿ ಎಂದಿದೆ.[20]

ಕೊತ್ತಳಗಳು

ಕೊತ್ತಳವೆಂದರೆ ಕೋಟೆಯ ಮೇಲ್ಭಾಗವೆಂತಲೂ ಕೋಟೆಯ ಮೇಲೆ ಸೈನಿಕರು ನಿಂತು ಕಾದುವ ಎತ್ತರ ಪ್ರದೇಶವೆಂದು ಅರ್ಥ ಕೊಡುತ್ತದೆ. ಕೊತ್ತಳಗಳ ಹೊರಗಿನ ಚಲನ ವಲನವನ್ನು ಸೂಕ್ಷ್ಮವಾಗಿ ಗಮನಿಸುವ ವೀಕ್ಷಣಾ ಕೇಂದ್ರವಾಗಿದ್ದರಿಂದ ಅದರೊಳಗೆ ಅಂಬುಗಂಡಿಯಿದ್ದಿರಬೇಕು. ಅಪಾಯಕಾರಿ ವ್ಯಕ್ತಿಗಳನ್ನು ಕಂಡೊಡನೆ ಕೊತ್ತಳದೊಳಗಿನಿಂದಲೇ ಪ್ರಹರಿಸಿ ಬಿಡುತ್ತಿದ್ದರು. ಅಂಬುಗಂಡಿ ಮತ್ತು ಕೊತ್ತಳ ಬೇರೆ ಬೇರೆ ಅಲ್ಲ. ಕೊತ್ತಳದೊಳಗೆ ಅಂಬುಗಂಡಿ ಇರುತ್ತಿತ್ತು ಎಂಬುದು ಸಾಹಿತ್ಯದಲ್ಲಿ ಉಲ್ಲೇಖಗೊಂಡಿದೆ.

ವಿರಾಜಿಪ ಗೊಂಟುಗೊಂಟಿನೊಳ್ ಬಳಸಿದ ಕೊತ್ತಳಂ[21] ಎಂಬುದು ಹರಿಹರನ ವರ್ಣನೆ. ‘ಗೊಂಟುಎಂಬುದು ಬಹುಶಃ ಕೋಟೆಯ ಗೋಡೆಗಳು ಸಂಧಿಸುವ ಸ್ಥಳ. ಅಂತಹ ಸಂಧಿಸ್ಥಾನಗಳಲ್ಲಿ ಅಟ್ಟಳೆಗಳಿಗಿಂತ ಎತ್ತರವಾಗಿ ಕಟ್ಟಿದ ವೀಕ್ಷಣೆ ಕೇಂದ್ರಗಳೆ ಕೊತ್ತಳಗಳು. ಕೋಟೆಯ ನಾಲ್ಕು ಅಥವಾ ಎಂಟು ದಿಕ್ಕುಗಳಲ್ಲಿಯೂ ಕೊತ್ತಳಗಳಿರುತ್ತಿದ್ದವೆಂದು ಚಿದಾನಂದಮೂರ್ತಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹಾನಗಲ್ಲು ಕೋಟೆಯ ಮೊದಲ ಸುತ್ತಿನ ಹೊರಕೋಟೆಯಲ್ಲಿ ಸುಮಾರು ಕೊತ್ತಳಗಳು ಇದ್ದ ಬಗ್ಗೆ ಗುರುತುಗಳಿವೆ. ಇವುಗಳಲ್ಲಿ ನಾಲ್ಕು ವೃತ್ತಾಕಾರದಲ್ಲಿವೆ. ಒಂದು ಮಾತ್ರ ಆಯತಾಕಾರದಲ್ಲಿದೆ. ಕೊತ್ತಳಗಳು, ಪ್ರಮಾಣ ಮತ್ತು ಆಕಾರದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ.

ಕಂದಕ

ಸ್ಥಲದುರ್ಗದ ಸುತ್ತ ಕಂದಕವಿರುವ ವಿಷಯ ಸಾಮಾನ್ಯವಾಗಿ ಎಲ್ಲಾ ಕವಿಗಳ ವರ್ಣನೆಯಲ್ಲಿ ಬಂದಿದೆ. ಕಂದಕಕ್ಕೆ ಅಗಳು, ನೀರ್ಗಾದಿಗೆ, ಪರಿಖೆ ಎಂಬ ಪದಗಳನ್ನು ಪರ್ಯಾಯವಾಗಿ ಬಳಸಿದೆ. ಕೊಡವ ಭಾಷೆಯಲ್ಲಿ ಕಂದಕಕ್ಕೆಕಡಂಗವೆಂದು ಹೆಸರು. ಕಡಂಗವೆಂದರೆ ಯುದ್ಧ ಸಮಯದಲ್ಲಿ ತೋಡಿಸಲಾದ ಕಂದಕವೆಂದು ಬಿ.ಎಲ್. ರೈಸ್ ಹೇಳಿದ್ದಾರೆ. ಈಗಲೂ ವಿರಾಜಪೇಟೆ ತಾಲೂಕಿನಲ್ಲಿ ಕಡಂಗವೆಂಬ ಒಂದು ಊರಿದೆ. ಎಪಿಗ್ರಾಫಿಯಾ ಕರ್ನಾಟಕದ ಮೊದಲ ಸಂಪುಟದ ೯ನೆಯ ಶಾಸನ ಬಿಳಿಯೂರಿನ ಸಮೀಪದಕಡಂಗದಲ್ಲಿ ದೊರೆತಿದೆ.

ಸಾಮಾನ್ಯವಾಗಿ ಕಂದಕ ಮತ್ತು ಕೋಟೆ ಗೋಡೆಯ ನಡುವೆ ಅನಗತ್ಯ ಸ್ಥಳವಿರುವುದಿಲ್ಲ. ಕಂದಕದ ಅಗಲ ಬುಡಕ್ಕಿಂತ ಮೇಲ್ಭಾಗದಲ್ಲಿ ಯಾವಾಗಲೂ ಹೆಚ್ಚಿರುತ್ತದೆ. ಬನವಾಸಿಯ ಕಂದಕದ ಅಗಲ ಬುಡದಲ್ಲಿ ೧೦ ಮೀಟರ್, ಮೇಲ್ಭಾಗದಲ್ಲಿ ೧೪ ಮೀಟರ್ ಇದೆ. ಕೌಟಿಲ್ಯ ಗೋಡೆ ಮತ್ತು ಕಂದಕದ ಅಳತೆಗಳ ಬಗೆಗೆ ಮಾಹಿತಿ ನೀಡಿದ್ದಾನೆ. ಅತ್ಯಂತ ಹೊರಗಿನದು ೧೪ ದಂಡ, ಮಧ್ಯದಲ್ಲಿರುವುದು ೧೨ ದಂಡ, ಒಳಗಿನದು ೧೦ ದಂಡ ಅಗಲವಿರುತ್ತದೆ. ಎರಡು ಕಂದಕಗಳ ನಡುವೆ ಎರಡು ದಂಡ ಅಗಲದ ಒಂದು ದಂಡ ಇರುತ್ತದೆ. ಅಂದರೆ ಎರಡು ಕಂದಕಗಳ ನಡುವಿನ ಅಂತರ ದಂಡ. ಒಂದು ದಂಡವೆಂದರೆ ಅಡಿ ಅಥವಾ .೮೦ ಮೀಟರ್ ಎಂದು ಶಾಮಶಾಸ್ತ್ರಿ ಅವರ ಅಭಿಪ್ರಾಯವಿದೆ.[22] ಶತ್ರು ಒಂದು ಬಾಣವನ್ನು ಎಲ್ಲಾ ಬಲ ಹಾಕಿ ಪ್ರಯೋಗಿಸಿದರೆ, ೬೦ ಮೀಟರ್ ಹೋಗಬಲ್ಲದು. ಅದು ಗುರಿಯ ಸಮೀಪ ಬಂದಂತೆ ನಿಧಾನವಾಗಿ ವೇಗವನ್ನು ಕಳೆದುಕೊಂಡ ಪರಿಣಾಮ ತೀವ್ರವಾಗಿರುವುದಿಲ್ಲ. ಆದ್ದರಿಂದ ಶತ್ರು ಹೊರಗಿನ ಕಂದಕದ ಅಂಚಿನಲ್ಲಿ ನಿಂತು ಬಿಡುವ ಬಾಣದಲ್ಲಿ ವೇಗದ ಮೊನಚು ಇರುವುದಿಲ್ಲ. ಕಂದಕ ಸಾಕಷ್ಟು ಅಗಲವಿರುವುದರಿಂದ ಅದರಲ್ಲಿ ಮೊಸಳೆಯಂಥ ಅಪಾಯಕಾರಿ ಜಲಚರಗಳು ಇದ್ದು, ದಾಟುವುದು ಸುಲಭವಾಗಿರಲಿಲ್ಲ. ಕಂದಕವನ್ನು ದಾಟಲು ರಸ್ತೆ ಕಿರಿದಾಗಿದ್ದು, ಅದಕ್ಕೆ ಬಲವಾದ ಕಾವಲು ಇರುತ್ತಿತ್ತು. ಒಮ್ಮೆ ಏನಾದರೂ ಗೋಡೆ ಸಮೀಪ ಬಂದರೆ ಅಲ್ಲಿದ್ದ ಮಾರಕವಾದ ಆಯುಧಗಳಿಂದ ಗಾಯಗೊಳ್ಳುತ್ತಿದ್ದರು. ಕೋಟೆಯ ಮೇಲ್ಭಾಗವು ಹೊರಗೆ ಉಬ್ಬಿದಂತಿದ್ದುದರಿಂದ ಹತ್ತುವುದು ಕಠಿಣ ಕೆಲಸವೆ ಆಗಿತ್ತು.

ಭೀಮಾನದಿಯ ದಂಡೆಯ ಮೇಲಿರುವ ಸನ್ನತಿ ಕೋಟೆ ಈಗಾಗಲೆ ಗಮನಿಸಿದಂತೆ ನೈಸರ್ಗಿಕ ರಕ್ಷಣೆಯನ್ನು ಸಹಜವಾಗಿ ಹೊಂದಿದೆ. ದಕ್ಷಿಣದಿಂದ ಪೂರ್ವಕ್ಕೆ ನದಿ ಒಮ್ಮೆಲೆ ತಿರುವು ಪಡೆದುಕೊಂಡ ಸ್ಥಳ ಎತ್ತರವಿರುವುದರಿಂದ ಪ್ರವಾಹದ ಬೆದರಿಕೆ ಇಲ್ಲ.

ಕೋಟೆಯುದ್ಧ ಆರಂಭವಾಯಿತೆಂದರೆ ಮೊದಲು ಕಂದಕವನ್ನು ದಾಟಲು ವ್ಯವಸ್ಥೆ ಮಾಡುತ್ತಿದ್ದರು. ಹುಲ್ಲು ಹೊರೆ, ಕೊರಡು, ಕಲ್ಲುಗುಂಡು, ಮಣ್ಣನ್ನು ಅಗಳಕ್ಕೆ ತುಂಬಿ ನೆಲವನ್ನು ಸರಿ ಮಾಡುತ್ತಿದ್ದ ವಿಷಯ ಚೆನ್ನಬಸವಪುರಾಣದಲ್ಲಿದೆ.[23] ಕೋಟೆಯ ಮೇಲಿನವರು ಪ್ರತಿ ಆಕ್ರಮಣವಾಗಿ ಕೊತ್ತಳದೊಳಗಿನ ಅಂಬುಗಂಡಿಯಿಂದ ಬಾಣದ ಸುರಿಮಳೆ, ಡೆಂಕಣಿ ಅಲ್ಲಲ್ಲಿ ಆಡಿದರೆ, ಕವಣಿಗಲ್ಲು, ಕಾಯ್ದೆಣ್ಣೆ, ಮಳಲು, ಅರಗು, ಸುಣ್ಣ, ಕಲ್ಲು, ಅಂಬಲಿಯನ್ನು ಮೇಲಿಂದ ಸುರಿಯುತ್ತಿದ್ದರು.[24] ಹೀಗಾಗಿ ಕೋಟೆ ಕಾಳಗದಲ್ಲಿ ಕಂದಕ ಬಹಳ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ.

ಹಾನಗಲ್ಲಿನ ಕೋಟೆಯ ದಕ್ಷಿಣ ಮತ್ತು ಪೂರ್ವ ಸ್ವಲ್ಪ ಭಾಗಕ್ಕೆ ನದಿಯು ನೈಸರ್ಗಿಕ ರಕ್ಷಣೆಯನ್ನು ಒದಗಿಸಿದೆ. ಇನ್ನುಳಿದಂತೆ ಸುತ್ತಲು ಕಂದಕವಿದೆ. ಇಲ್ಲಿಯ ಕೋಟೆ ಕಂದಕವನ್ನು ಇಂದಿಗೂ ಕಾಣಬಹುದಾದರೂ, ನಿಖರವಾದ ಅಳತೆ ಸಿಗಲಾರದು.

ವೀರಗಲ್ಲಿನಲ್ಲಿ ನಿರೂಪಿತವಾದ ಹಾನಗಲ್ಲಿನ ಕೋಟೆಯ ಚಿತ್ರಣ

ತಾರಕೇಶ್ವರ ಗುಡಿಯ ಮುಂದಿನ ಮುಖಮಂಟಪದಲ್ಲಿರುವ ವೀರಗಲ್ಲುಗಳು ಕೋಟೆ ಕಾಳಗಕ್ಕೆ ಸಂಬಂಧಿಸಿವೆ. ಇಲ್ಲಿ ಕೋಟೆಯನ್ನು ಕಳೆದುಕೊಂಡವರ ಹೋರಾಟವನ್ನು ನಿರೂಪಿಸಲಾಗಿದೆ. ವೀರಗಲ್ಲು ಶಿಲ್ಪದಲ್ಲಿ ಕೋಟೆಯ ಮೇಲೆ ಆಕ್ರಮಣ ಮಾಡುತ್ತಿದ್ದ ಶತ್ರುಗಳನ್ನು ಸಮರ್ಥವಾಗಿ ಎದುರಿಸಿದಂತೆ ಬಿಡಿಸಲಾಗಿದೆ. ಅನ್ಯಥಾ ಮಾರ್ಗವಿಲ್ಲದೆ ಕದಂಬರ ವೀರರು ಕೋಟೆಯಿಂದ ಹೊರಬಂದು ಯುದ್ಧ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ಇಲ್ಲಿಯ ಯುದ್ಧ ಬಹಳ ಗಲಿಬಿಲಿಯಿಂದ ಆಗುತ್ತಿರುವಂತೆಯೂ, ಎರಡೂ ಕಡೆಯ ವೀರರು ಮುಖಾಮುಖಿ ಹೋರಾಡುತ್ತಿರುವಂತೆಯೂ ತೋರಿಸಲಾಗಿದೆ.

ವಿಷ್ಣುವರ್ಧನನು ಹಾನಗಲ್ಲು ಕೋಟೆಗೆ ಲಗ್ಗೆ ಹಾಕಿದಾಗ, ಕದಂಬರ ಪರವಾಗಿ ಲೆಂಕರಾಯ ಎಂಬುವವನು ಹೋರಾಡುತ್ತಾನೆ. ಶಾಸನಕವಿ ಲೆಂಕರಾಯನು ತೋರಿದ ಪರಾಕ್ರಮವನ್ನು ರೀತಿ ವರ್ಣಿಸಿದ್ದಾನೆ.

            “ಸುರಿವ ಸರಲ್ಗೆ ಪಾಯ್ವ ಚತುರಂಗದಳಕ್ಕಣಿದಾರ್ದ್ದು ನೂಂಕುವಾ
ಸುರತರಮಪ್ಪ ಸಿಂಧುರ ಘಟಾವಳಿಗಳ್ಕದೆ ಕಾದಿ ಬೀರಮ
ಚ್ಚರಿವಡೆ ಮಾಚಗಾವುಂಡನ ಮಗಂ ಕಲಿರಾಯನೆ ಕೀರ್ತಿಯಂ ವಸು
ಧರೆ ಪೊಗಳ್ವನ್ನೆಗಂ ಪಡೆದನಾಹವರಂಗದೊಳುರಣಂಗಶೂದ್ರಕಂ

ಕವಿಯ ವರ್ಣನೆಯಿಂದ ಕೋಟೆಯ ಸಂರಕ್ಷಕರ ಬಾಣಗಳನಲ್ಲದೆ, ಶತ್ರುಗಳ ಮೇಲೆ ಬಿಡುತ್ತಿದ್ದ ಉನ್ಮತ್ತ ಆನೆಗಳನ್ನು ಎದುರಾಳಿಗಳು ಎದುರಿಸಬೇಕಾಗಿತ್ತು ಎಂಬ ಅಂಶ ವ್ಯಕ್ತವಾಗುತ್ತದೆ.[25]

ವೀರಗಲ್ಲಿನಲ್ಲಿ ಕೋಟೆಯ ಪಾರ್ಶ್ವನೋಟವೊಂದು ಕಾಣಸಿಗುತ್ತದೆ. ಕೋಟೆಯ ಒಂದು ಗೋಡೆಯನ್ನು ಬಿಡಿಸಿ, ಅದನ್ನು ವೀರನು ಹೇಗೆ ಆಕ್ರಮಿಸುತ್ತಿದ್ದನೆಂಬುದನ್ನು ಮೂಲಕ ಚಿತ್ರಿಸಲಾಗಿದೆ. ರೀತಿಯ ಶಿಲ್ಪಗಳನ್ನು ಎಲೆಬೇತೂರು ಹಾಗೂ ಲಕ್ಷ್ಮೇಶ್ವರದಲ್ಲಿಯೂ ಕಾಣಬಹುದು.

ಹಾನಗಲ್ಲು ಕೋಟೆಯ ಮೇಲೆ ಲಗ್ಗೆ ಹಾಕಿದಾಗ, ಸ್ವತಃ ವಿಷ್ಣುವರ್ಧನನೆ ತನ್ನ ಕೈಕೆಳಗಿನವರಿಗೆ ಯುದ್ಧ ಮಾಡುವ ವಿಧಾನವನ್ನು ಸೂಚಿಸಿದ್ದನೆಂಬುದಾಗಿ ವೀರಗಲ್ಲಿನಿಂದ ತಿಳಿದುಬರುತ್ತದೆ.[26]

ಕ್ರಿ.. ೧೧೩೦ರ ಮತ್ತೊಂದು ವೀರಗಲ್ಲಿನ ಶಾಸನ ಪಾಠದಿಂದ ಕಾಳಗಾವುಣ್ಡನ ತಮ್ಮನಾದ ಲೆಂಕರಾಯನು ಹಾನಗಲ್ಲು ಕೋಟೆಯಲ್ಲಿ ಶತ್ರು ಪಕ್ಷದವರು ಆನೆ, ಕುದುರೆಗಳನ್ನು ಸಂಹಾರ ಮಾಡುತ್ತಿರುವುದನ್ನು ವಿಷ್ಣುವರ್ಧನನು ಆನೆಯ ಮೇಲೆ ಕುಳಿತು ನೋಡುತ್ತಿದ್ದನೆಂಬುದಾಗಿ ಸ್ಪಷ್ಟವಾಗುತ್ತದೆ.[27]

ತಾರಕೇಶ್ವರ ದೇವಾಲಯದಲ್ಲಿರುವ ವೀರಗಲ್ಲಿನ ಮೂರನೆಯ ಹಂತದ ಕೆಳಪಟ್ಟಿಯಲ್ಲಿ ಕೋಟೆಯ ತೆನೆಗಳನ್ನು ಚಿತ್ರಿಸಲಾಗಿದೆ. ಕೆಳಹಂತದಲ್ಲಿ ಗಜಯುದ್ಧ, ಎರಡನೆಯ ಹಂತದಲ್ಲಿ ಅಶ್ವಯುದ್ಧ, ಮೂರನೆಯ ಹಂತದಲ್ಲಿ ಕೋಟೆಯನ್ನು ಚಿತ್ರಿಸಲಾಗಿದೆ. ಒಳಗಡೆ ಸೈನಿಕರು ಯುದ್ಧ ಸನ್ನದ್ಧರಾಗಿ ಕಾಳಗವನ್ನು ನೋಡುತ್ತಾ ಸಿದ್ಧವಾಗಿದ್ದಾರೆ. ಯುದ್ಧದ ಮಧ್ಯೆ ಒಬ್ಬ ಧ್ವಜವನ್ನು ಹಿಡಿದು ನಿಂತಿದ್ದಾನೆ. ಇವರೆಲ್ಲರೂ ಕೋಟೆಯ ಹೊರಗೆ ಮತ್ತು ಕೋಟೆಯ ತೆನೆಗಳ ಮೇಲೆ ಬಾಣಗಳನ್ನು ಹಿಡಿದುಕೊಂಡು ನಿಂತಿರುವರು.

ಕೋಟೆಯ ಮಹತ್ವ

ಪ್ರಾಚೀನ ಸಾಹಿತ್ಯ ಕೃತಿಗಳಾದ ಕೌಟಿಲ್ಯನ ಅರ್ಥಶಾಸ್ತ್ರ, ಕಾಮಂದಕನ ನೀತಿಸಾರ, ಶುಕ್ರನ ಶುಕ್ರನೀತಿ, ಮೂರನೆಯ ಸೋಮೇಶ್ವರನ ಮಾನಸೋಲ್ಲಾಸಗಳಲ್ಲಿ ಕೋಟೆಗಳ ಮಹತ್ವವನ್ನು ವಿವರಿಸಲಾಗಿದೆ. ಅದೆ ರೀತಿ ಮಧ್ಯಕಾಲೀನ ಸಾಹಿತ್ಯ ಕೃತಿಗಳಾದ ಜನ್ನನ ಅನಂತನಾಥ ಪುರಾಣ, ನಂಜುಂಡನ ಕುಮಾರರಾಮ ಚರಿತೆ, ಬಸವರಾಜನ ಶಿವತತ್ವರತ್ನಾಕರ, ಮೋಹನತರಂಗಿಣಿ, ಲಿಂಗಣ್ಣ ಕವಿಯ ಕೆಳದಿ ನೃಪವಿಜಯ, ಚಂದ್ರಕವಿಯ ಪಂಪಾಕ್ಷೇತ್ರವರ್ಣನಂ, ಚಾಮರಸನ ಪ್ರಭುಲಿಂಗಲೀಲೆ, ಶೃತಿಕೀರ್ತಿಯ ವಿಜಯಾಂಬುಧಿ ಚರಿತೆ, ಸಿಂಗಿರಾಜನ ಸಿಂಗಿರಾಜ ಪುರಾಣ ಮೊದಲಾದವುಗಳಲ್ಲಿ ಕೋಟೆಯ ವರ್ಣನೆಯನ್ನು ಕಾಣಬಹುದು. ತಂಬೂರಿಯ ವೀರಗಲ್ಲಿನಲ್ಲಿ ಬಿಜ್ಜಳ ಆನೆಯ ಮೇಲೆ ಕುಳಿತು ಸ್ವತಃ ಯುದ್ಧ ಮಾಡುತ್ತಿರುವ ವಿವರವಿದೆ.[28] ಕಳಚುರ್ಯ ಬಿಜ್ಜಳನನ್ನು :

            ಬಂಟಿನ ಮೆಯ್ಗೆಲಿ ತೈಲಂ
ಟೆಂಟಣಿಸುವರಳವೆ ಬಯಲಕಾಳೆಗಮಂ ನೂ
ರೆಂಟಂ ಕಾದಿದನೆಣ್ಬ
ತ್ತೆಂಟಂ ಕೊಂಡಂ ಪ್ರತಾಪದಿಂ ಕೋಟೆಗಳು

ಎಂದಿದೆ.[29] ಅಮಲಬಸವ ಚರಿತೆ, ಭೀಮಕವಿಯ ಬಸವಪುರಾಣ, ಬಾಹುಬಲಿ ಪಂಡಿತನ ಧರ್ಮನಾಥ ಪುರಾಣ ಇತ್ಯಾದಿಗಳಲ್ಲಿ ಹಾಗೂ ಕರ್ನಾಟಕದಾದ್ಯಂತ ದೊರೆತಿರುವ ಶಾಸನಗಳಲ್ಲಿಯೂ ಕೂಡ ಕೋಟೆಗಳ ಮಹತ್ವವನ್ನು ರಸವತ್ತಾಗಿ ವರ್ಣಿಸಲಾಗಿದೆ. ಮನಸ್ಮೃತಿಯ ಪ್ರಕಾರ,

            ಏಕಂ ಶತಂ ಯೋಧಮತಿ ಪ್ರಾಕಾರಸ್ಥೊ ಧನುರ್ಧರಃ
ಶತಂ ದಶಸಹಪ್ರಾಣಿ ತಸ್ಮಾದ್ಧುರ್ಗಂ ವಿಧೀಯತೇ

ಕೋಟೆಯಲ್ಲಿದ್ದ ಬಿಲ್ಲುಗಾರರು ಹೊರಗಿನ ನೂರು ಯೋಧರೊಂದಿಗೆ ಹಾಗೂ ಅದೆ ರೀತಿ ನೂರು ಧನುರ್ಧಾರಿಗಳು, ಹತ್ತು ಸಾವಿರ ಯೋಧರೊಂದಿಗೆ ಯುದ್ಧ ಮಾಡಬಲ್ಲರು. ಆದ್ದರಿಂದ ರಾಜನಿಗೆ ರಕ್ಷಣೆಯ ದೃಷ್ಟಿಯಿಂದ ಕೋಟೆಯು ಅತ್ಯಗತ್ಯ. ಒಟ್ಟಿನಲ್ಲಿ ಸಾಮ್ರಾಜ್ಯದ ಉಳಿವು ಅಳಿವು ಕೋಟೆ, ಅದರಲ್ಲಿ ಸಂಗ್ರಹವಾಗಿರುವ ಆಹಾರ ಸಾಮಗ್ರಿಗಳನ್ನು ಅವಲಂಬಿಸಿತ್ತು. ಇಷ್ಟಾಗಿಯೂ ಅಗ್ನಿ ಪುರಾಣವು ಇದರ ದೋಷಗಳನ್ನು ಗುರುತಿಸಿದೆ. ಸಾಮಾನ್ಯವಾಗಿ ಸುತ್ತಲೂ ಇರುವ ಕಂದಕದಲ್ಲಿ ಕೆಸರು, ಮರಳು ತುಂಬಿಕೊಳ್ಳುವುದರಿಂದ ಅದರಲ್ಲಿ ಹರಿಯುವ ನೀರಿನ ವ್ಯವಸ್ಥೆಯಲ್ಲಿ ವ್ಯತ್ಯಯವುಂಟಾಗಿ ಒಣಗಿ ಹೋಗಬಹುದು. ಅದನ್ನು ತಕ್ಷಣ ಸರಿಪಡಿಸಿ, ಮೊದಲಿನ ಸ್ಥಿತಿಗೆ ತರುವ ಜವಾಬ್ದಾರಿ ಅರಸನ ಮೇಲಿರುತ್ತದೆ.

ಕೋಟೆಯನ್ನು ಗೆದ್ದುದಾದರೆ ಇಡೀ ರಾಜ್ಯವೆ ಸಿಕ್ಕಂತೆ. ಅಂದು ಕೋಟೆಯನ್ನು ಕಟ್ಟಿಸುವುದು ಮತ್ತು ಗೆಲ್ಲುವುದು ಪ್ರತಿಷ್ಠೆಯ ವಿಷಯವಾಗಿತ್ತು. ಹಾನಗಲ್ಲು ಕೋಟೆಯು ಮಹತ್ವದ ಮತ್ತು ಅಭೇದ್ಯವಾದ ಕೋಟೆಯಾಗಿದ್ದು, ವಿಷ್ಣುವರ್ಧನನಿಗೆ ಇದನ್ನು ಗೆಲ್ಲುವುದು ಹೆಮ್ಮೆಯಾಗಿತ್ತು. ತಾನು ಗೆದ್ದ ಕೋಟೆಗಳ ಸಾಲಿನಲ್ಲಿ ಇದನ್ನೂ ಸೇರಿಸಿದ್ದ ವಿಷಯ ಶಾಸನಗಳು ವ್ಯಕ್ತಪಡಿಸುತ್ತವೆ. ವಿಷ್ಣುವರ್ಧನನು ಕ್ರಿ.. ೧೧೧೮ರಲ್ಲಿ ಹಾನಗಲ್ಲು ಕದಂಬರ ರಾಜ್ಯದ ಮೇಲೆ ಆಕ್ರಮಣ ಮಾಡಿದನು. ಕ್ರಿ.. ೧೧೨೨ರಲ್ಲಿ ಕಲ್ಯಾಣ ಚಾಲುಕ್ಯರು ಅವನನ್ನು ಸೋಲಿಸಿದರು. ವಿಷ್ಣುವರ್ಧನನ ಆದೇಶದ ಮೇರೆಗೆ ೧೧೨೫ರಲ್ಲಿ ಬಿದನೂರಿನಮುರವನಹಿಸಕದಂಬರ ದಂಡನಾಯಕ ಮಸಣನ ಮೇಲೆ ದಂಡೆತ್ತಿ ಹೋಗಿ ಹಾನಗಲ್ಲು ಕೋಟೆಯೊಳಗೆ ಆನೆ, ಕುದುರೆ ದಳದ ವಿರುದ್ಧ ಹೋರಾಡಿ ವೀರ ಸ್ವರ್ಗವನ್ನು ಪಡೆದನು. ಅದೆ ವರ್ಷ ವಿಷ್ಣುವರ್ಧನನು ಹಾನಗಲ್ಲು ಕೋಟೆಯನ್ನು ಮುತ್ತಿದಾಗ, ಬಿದನೂರು ರಕ್ಕಸ ಮೊನೆಯಾಳ್ವದೇವ ಆನೆ ಮತ್ತು ಕುದುರೆ ದಳಗಳ ಮೇಲೆ ದಾಳಿ ಮಾಡಿ ತನ್ನ ಬಾಣಗಳು ಮುಗಿದಾಗ, ದೇವಣ್ಣನ ಬತ್ತಳಕೆಯನ್ನು ಪಡೆದು ದಾಳಿಯನ್ನು ಮುಂದುವರಿಸಿ ಯುದ್ಧದಲ್ಲಿ ವೀರಸ್ವರ್ಗವನ್ನು ಪಡೆದನು. ಇಮ್ಮಡಿ ತೈಲನು ಮಾತ್ರ ವಿಷ್ಣುವರ್ಧನನ ದಾಳಿಗಳಿಂದ ತನ್ನ ಪ್ರಾಂತವನ್ನು ರಕ್ಷಿಸಿಕೊಂಡನು.

ವಿಷ್ಣುವರ್ಧನನು ಕ್ರಿ.. ೧೧೩೧ರಲ್ಲಿ ಹಾನಗಲ್ಲು ಕೋಟೆಯನ್ನು ಪುನಃ ವಶಪಡಿಸಿಕೊಂಡರೂ, ಹೆಚ್ಚು ಕಾಲ ಉಳಿಯಲಿಲ್ಲ. ಮಯೂರವರ್ಮನ ಮಗ ಮಲ್ಲಿಕಾರ್ಜುನ ವಿಷ್ಣುವರ್ಧನನ ದಾಳಿಯನ್ನು ಎದುರಿಸಿ, ಕ್ರಿ.. ೧೧೩೫ರಲ್ಲಿ ಹಾನುಗಲ್ಲು ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡನು. ಕ್ರಿ.. ೧೧೩೬ರಲ್ಲಿ ವಿಷ್ಣುವರ್ಧನ ಹಾನಗಲ್ಲು ಪ್ರದೇಶವನ್ನು ಪುನಃ ವಶಪಡಿಸಿಕೊಂಡನು. ಆದರೆ ಕ್ರಿ.. ೧೧೩೬ರಲ್ಲಿ ಕಲಚುರಿ ಬಿಜ್ಜಳನು ಸ್ವತಃ ಆನೆಯ ಮೇಲೇರಿ ಹಾನಗಲ್ಲು ಕೋಟೆಯನ್ನು ಪೂರ್ವದಿಂದ ಮುತ್ತಿದನು. ಮಹಾಸಾಮಂತ ಮಯ್ದರಸ ಕೋಟೆಯವರೆಗೆ ಬಂದು ಬಿಜ್ಜಳನಿಗೆ ತಡೆಯೊಡ್ಡಿದನು. ಆಗ ಜಾಲಗಾರ ಮಾಚಿಸೆಟ್ಟಿಯ ಮಗ ಕೇತನಾಯಕ ಅನೇಕ ಸೈನಿಕರನ್ನು ಕೊಂದನು. ರಣರಂಗದ ತುಂಬ ಹೆಣಗಳ ರಾಶಿ ಬಿದ್ದಿತು. ನಂತರ ಬಿಜ್ಜಳನ ಕುದುರೆ ದಳದ ಮೇಲೆ ಬಿದ್ದನು. ಆಗ ಬಿಜ್ಜಳನು ಕೇತನಾಯಕನನ್ನು ಎದುರಿಸುವುದು ತನ್ನಿಂದಲ್ಲದೆ ಬೇರೆಯವರಿಂದ ಸಾಧ್ಯವಿಲ್ಲವೆಂದು ಆನೆಯನ್ನು ಅವನತ್ತ ತಿರುಗಿಸಿದನು. ಕೇತನಾಯಕ ದಿಟ್ಟತನದಿಂದ ಹೋರಾಡಿ ಆನೆಯನ್ನು ಹಿಮ್ಮೆಟ್ಟಿಸಿ, ವೀರಸ್ವರ್ಗವನ್ನು ಹೊಂದಿದನು. ವಿವರಗಲನ್ನು ನೀಡುವ ವೀರಗಲ್ಲು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಸಿಕ್ಕಿದೆ. ಕ್ರಿ.. ೧೧೩೮ರಲ್ಲಿ ವಿಷ್ಣುವರ್ಧನ ಮತ್ತೊಮ್ಮೆ ಹಾನಗಲ್ಲು ಕೋಟೆಯನ್ನು ವಶಪಡಿಸಿಕೊಂಡನು. ಪುನಃ ಚಾಲುಕ್ಯ ಜಗದೇಕಮಲ್ಲ, ಕದಂಬ ಮಲ್ಲಿಕಾರ್ಜುನ ವಿಷ್ಣುವರ್ಧನನ ವಿರುದ್ಧ ಕಾದಾಡಿದರು. ವಿಷ್ಣುವರ್ಧನ ೧೧೪೪ರಲ್ಲಿ ಪುನಃ ಹಾನಗಲ್ಲು ಕೋಟೆಯಲ್ಲಿ ಆಳ್ವಿಕೆ ನಡೆಸಿದ.

ಹೊಯ್ಸಳರ ದಾಳಿಯನ್ನು ಎದುರಿಸಲು ಕಾಮದೇವನು ಕೋಟೆಯ ದಕ್ಷಿಣ ಗೋಡೆಯನ್ನು ದುರಸ್ಥಿ ಮಾಡಿಸಿದನು. ವಿಜಯನಗರದ ಅರಸ ಕೃಷ್ಣದೇವರಾಯನು ಹಾನಗಲ್ಲು ಕೋಟೆ ವಶಪಡಿಸಿಕೊಂಡ ವಿಷಯ ೧೫೨೧ರ ಶಾಸನದಿಂದ ತಿಳಿಯುತ್ತದೆ.

ಹಾನಗಲ್ಲು ಕೋಟೆಯ ಹಿನ್ನೆಲೆಯನ್ನು ಗಮನಿಸಿದಾಗ, ಸಹಜವಾಗಿ ಕೆಲವು ಪ್ರಶ್ನೆಗಳುಂಟಾಗುತ್ತವೆ.

. ಹಾನುಗಲ್ಲು ಕೋಟೆಯನ್ನು ಗೆಲ್ಲಲು ಏಕೆ ಪರಿತಪಿಸುತ್ತಿದ್ದರು

. ಇದನ್ನು ಗೆಲ್ಲುವುದರ ಮಹತ್ವವೇನು

. ಗೆದ್ದವರ ಪ್ರತಿಷ್ಠೆ ಏಕೆ ಹೆಚ್ಚುತ್ತಿತ್ತು

ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ಹಾನುಗಲ್ಲು ಆರಂಭದಲ್ಲಿ ಕಲ್ಯಾಣ ಚಾಲುಕ್ಯರು, ಕಲಚುರಿಗಳು, ಹೊಯ್ಸಳರು ನಂತರ ಕೆಳದಿ ಅರಸರು ಮತ್ತು ವಿಜಾಪೂರ ಸುಲ್ತಾನರಿಗೆ ಗಡಿಭಾಗವಾಗಿ ಪರಿಣಮಿಸಿತ್ತು. ಹಾಗಾಗಿ ಇದನ್ನು ಗೆಲ್ಲಲು ಪರಸ್ಪರರು ಹೋರಾಡುತ್ತಿದ್ದುದು ಸಹಜವಾಗಿತ್ತು.

ನಾಲ್ಕು ಸುತ್ತಿನಿಂದ ಕೂಡಿದ ಕೋಟೆ ಬಹಳ ಪ್ರಬಲತರವಾಗಿತ್ತು. ಆರಂಭದ ಮೊದಲ ಸುತ್ತಿನ ಕೋಟೆ ಗೋಡೆಯು ಎತ್ತರದಲ್ಲಿ ಕಡಿಮೆ ಇದ್ದು, ಒಳ ಸುತ್ತುಗಳು ತುಂಬಾ ಎತ್ತರದಲ್ಲಿವೆ. ವೈರಿಪಡೆಯು ಮೊದಲ ಸುತ್ತನ್ನು ಕ್ರಮಿಸಿ ಒಳಬಂದರೆ, ಇಲ್ಲಿಯ ವಿಶಾಲ ಬಯಲಿನಲ್ಲಿ ವೈರಿಪಡೆಯನ್ನು ಒಳನುಗ್ಗದಂತೆ ತಡೆಯಲಾಗುತ್ತಿತ್ತು. ಹಾಗಾಗಿ ವಿಷ್ಣುವರ್ಧನನು ಕೋಟೆ ಗೋಡೆ ಮೇಲೆ ನಿಂತು ಯುದ್ಧದ ಸನ್ನಿವೇಶವನ್ನು ವೀಕ್ಷಿಸಿದ ವಿವರಗಳು ನಮಗೆ ಶಾಸನಗಳಿಂದ ಲಭ್ಯವಾಗುತ್ತವೆ. ಹೊರಸುತ್ತಿನ ಕೋಟೆಗೆ ಮೂರು ಬಾಗಿಲುಗಳಿದ್ದರೆ, ಒಳಸುತ್ತಿನ ೨ನೆಯ ಕೋಟೆಗೆ ಬಾಗಿಲುಗಳಿವೆ. ಮೂರು ಮತ್ತು ನಾಲ್ಕನೆಯ ಸುತ್ತಿನ ಕೋಟೆಗಳಿಗೆ ಒಂದೊಂದು ಬಾಗಿಲುಗಳಿವೆ. ಹಿನ್ನೆಲೆಯಲ್ಲಿ ಕೋಟೆಯನ್ನು ಗೆಲ್ಲುವುದು ಕಷ್ಟತರವಾಗಿತ್ತು. ಆದರೂ ವಿಷ್ಣುವರ್ಧನನು ಐದಾರು ಬಾರಿ ಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು. ಆದರೆ ಪ್ರತಿ ಬಾರಿಯೂ ಗೆದ್ದು ವಶಪಡಿಸಿಕೊಂಡರೂ, ಪುನಃ ತಪ್ಪಿ ಹೋಗುತ್ತಿತ್ತು. ಇದೆ ಕೋಟೆಯ ಮರ್ಮ.

ಕೋಟೆ ಒಳಗೆ ನೀರಿನ ಪೂರೈಕೆ ಹೇರಳವಾಗಿತ್ತು. ಹೊರಗೆ ಶತ್ರುಗಳು ಕೋಟೆಯನ್ನು ವಶಪಡಿಸಿಕೊಂಡರೂ, ಒಳಭಾಗದಲ್ಲಿ ಶಾಸ್ತ್ರಿಕೆರೆಯಿಂದ ನೀರನ್ನು ಪೂರೈಸಲಾಗುತ್ತಿತ್ತು. ಎಲ್ಲ ಸೌಲಭ್ಯಗಳಿಂದ ಕೂಡಿದ್ದ ಹಾನಗಲ್ಲು ಕೋಟೆ, ಕರ್ನಾಟಕದ ಪ್ರಮುಖ ಕೋಟೆಗಳ ಸಾಲಿನಲ್ಲಿ ಒಂದೆನಿಸಿದೆ.

 


[1] ಚೆನ್ನಕ್ಕ ಪಾವಟೆ, ಹಾನಗಲ್ಲ ಕದಂಬರು

[2] ಪ್ರಾಚೀನ ಭಾರತದಲ್ಲಿ ಯುದ್ಧ ಕಲೆ

[3] ಪಾಟೀಲ ಸಿ.ಎಸ್., ಕರ್ನಾಟಕದ ಕೋಟೆಗಳು

[4] ಅದೆ

[5] ಚಂದ್ರಪುರಾಣ, ೧೧ – ೯

[6] ಅದೆ

[7] ಚೆನ್ನಕ್ಕ ಪಾವಟೆ, ಹಾನಗಲ್ಲ ಕದಂಬರು

[8] ಪ್ರಾಚೀನ ಭಾರತದಲ್ಲಿ ಯುದ್ಧ ಕಲೆ

[9] ಚಂದ್ರಪುರಾಣ, ೧ – ೧೧೮

[10] ಅನಂತಪುರಾಣ, ೧ – ೧೦೧

[11] ಗಿರಿಜಾಕಲ್ಯಾಣ, ೨ – ೨೯

[12] ಮೋಹನತರಂಗಿಣಿ, ೩ – ೮ – ೨೦

[13] Willaen Coelho, The Hoysala Vamsa, P.258

[14] ಕ.ಸಾ.ಅ. ಪು.೨೮೭

[15]
[16] ಕರ್ನಾಟಕ ಕೋಟೆಗಳು, ಪು.೧೯೪

[17] ರುದ್ರಭಟ್ಟ, ಜಗನ್ನಾಥ ವಿಜಯಂ, ಆರ್.ಶಾಮಶಾಸ್ತ್ರಿ(ಸಂ), ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು – ೧೯೭೬, ೯೯೪

[18] ಚೆನ್ನಬಸವ ಪುರಾಣ, ೪೨ – ೨೨

[19] ಮೋಹನತರಂಗಿಣಿ, ೨೦ – ೯

[20] ಶಾಸಾಸಂ., ೧೧

[21] ನಂಜುಂಡ ಭಾ.೩.೧೧.೬

[22] ಆರ್.ಶಾಮಶಾಸ್ತ್ರಿ(ಸಂ), ಅರ್ಥಶಾಸ್ತ್ರ, ಪುಟ. ೬೦ – ೬೧, ೧೯೫೬

[23] E.C.V.B.I., 202, (1138 A.D.)

[24] ಚಂದ್ರಪುರಾಣ, ೫ – ೧೦೬

[25] ಗಿರಿಜಾಕಲ್ಯಾಣ, ೨ – ೭೬

[26] M.A.R., 1932 – 30, (1125 A.D.)

[27] E.C.U.B-202, (1130 A.D.)

[28] I.A., VIII, P.241 (634 A.D.)

[29] S.I.I., XX, 31, Aduru, P.33