ಧರ್ಮವು ವಿಶ್ವವ್ಯಾಪಿಯಾಗಿದ್ದು, ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಯಾವುದಾದರೂ ಒಂದು ಧರ್ಮ ಅಂಟಿಕೊಂಡಿರುತ್ತದೆ. ಅಂತೆಯೆ ಭರತ ಖಂಡದಲ್ಲಿ ಅನೇಕ ಧರ್ಮಗಳು ಹುಟ್ಟಿ ಬೆಳೆದು ವಿಶ್ವವ್ಯಾಪಿಯಾಗಿರುವವು. ಒಬ್ಬ ಮನುಷ್ಯ ತನ್ನ ಒಂದು ಧರ್ಮದ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸುತ್ತಾನೆ. ಅಂತಹ ಧರ್ಮಗಳಲ್ಲಿ ಬೌದ್ಧ, ಜೈನ, ವೈದಿಕ, ಶಿಖ್ ಮತ್ತು ಕ್ರೈಸ್ತ ಮೊದಲಾದವುಗಳು ಪ್ರಮುಖವಾದವು. ಎಲ್ಲಾ ಧರ್ಮಗಳು ಕಾಲದಿಂದ ಕಾಲಕ್ಕೆ ಹಿಗ್ಗುತ್ತಾ ಕುಗ್ಗುತ್ತಾ ನಡೆದಿರುತ್ತವೆ. ಹೀಗಾಗಿ ಆಯಾ ಧರ್ಮದ ಅನುಯಾಯಿಗಳು ಒಂದು ವೇದಿಕೆಯನ್ನು ನಿರ್ಮಿಸಿ, ಧರ್ಮಪ್ರಚಾರ ಮಾಡಿದರು. ಹಿನ್ನೆಲೆಯಲ್ಲಿ ಬೌದ್ಧರಿಗೆ ಸ್ತೂಪ, ಜೈನರಿಗೆ ಬಸದಿ, ವೈದಿಕರಿಗೆ ದೇವಸ್ಥಾನ, ಮುಸ್ಲಿಂರಿಗೆ ಮಸೀದಿ, ಶಿಖ್ ರಿಗೆ ಮಂದಿರ ಹಾಗೂ ಕ್ರೈಸ್ತರಿಗೆ ಚರ್ಚುಗಳು ವೇದಿಕೆಗಳಾದವು. ಅವುಗಳ ಮೂಲಕ ಧರ್ಮ ಪ್ರಚಾರ ಕೈಗೊಳ್ಳುತ್ತ ಬಂದಿದ್ದಾರೆ. ಯಾವುದೇ ಒಂದು ಧರ್ಮದ ಬೆಳವಣಿಗೆಯಲ್ಲಿ ಆಯಾ ಧರ್ಮದಲ್ಲಿ ಆರಾಧಿಸುತ್ತಾ ಬಂದ ದೇವರು, ತತ್ವ ಸಿದ್ಧಾಂತಗಳು ಪ್ರಮುಖ ಪಾತ್ರವಹಿಸುತ್ತವೆ.

ಪ್ರತಿಯೊಂದು ಧರ್ಮಕ್ಕೂ ಒಂದೊಂದು ಆರಾಧ್ಯ ದೇವರು ಇರುವುದನ್ನು ಕಾಣುತ್ತೇವೆ. ದೇವರ ಕಾರ್ಯವನ್ನು ಮಂಗಲ ಕಾರ್ಯವೆಂದು ಯಾವಾಗಲೂ ಮಂಗಳವನ್ನೇ ನುಡಿ, ಮಂಗಳವನ್ನೇ ಕೇಳು, ಮಂಗಳವನ್ನೇ ಚಿಂತಿಸು ಎಂದು ಧರ್ಮವು ಹೇಳುತ್ತದೆ. ಹಾಗೆಯೇ ಬೋಧಿಸುತ್ತದೆ. ಧರ್ಮಸಂಕೇತವಾಗಿ, ಬೌದ್ಧರು ಬುದ್ಧನನ್ನು , ಜೈನರು ತೀರ್ಥಂಕರನನ್ನು, ಶೈವರು ಶಿವನನ್ನು, ವೈಷ್ಣವರು ವಿಷ್ಣುವನ್ನು ಪೂಜಿಸುವುದನ್ನು ಕಾಣುತ್ತೇವೆ. ಅಲ್ಲದೆ ವಿಶ್ವದಲ್ಲಿ ಹೆಚ್ಚಾಗಿ ಆಯಾ ಧರ್ಮದ ಆಚಾರ್ಯ ಪುರುಷರನ್ನು ಪೂಜಿಸುವುದು ರೂಡಿಯಲ್ಲಿದೆ. ಆಚಾರ್ಯ ಪುರುಷರ ಮೂರ್ತಿಗೆ ಪೂಜೆ ಸಲ್ಲಿಸಲು ಒಂದು ಕಟ್ಟಡವನ್ನು ನಿರ್ಮಿಸಿ, ಅದಕ್ಕೆ ತಮ್ಮ ತಮ್ಮ ಧರ್ಮದ ಪ್ರಕಾರ ಮಂದಿರ, ಚೈತಾಲಯ, ಬಸದಿ, ದೇವಾಲಯ, ಚರ್ಚು, ಮಸೀದಿ ಎಂತಲೂ ಕರೆಯುವ ವಾಡಿಕೆ ಇದೆ.

ನಮ್ಮ ದೇಶದಲ್ಲಿ ಧರ್ಮಪ್ರಚಾರಕ್ಕೆ ಮೂರ್ತಿ ಪ್ರತಿಷ್ಠಾಪನೆಯ ಇತಿಹಾಸ ಸಾವಿರಾರು ವರ್ಷಗಳ ಹಳೆಯದು. ಪ್ರಾಚೀನ ಸಾಂಸ್ಕೃತಿಕ ನಗರಗಳಾದ ಹರಪ್ಪ, ಮೊಹೆಂಜೋದಾರೊಗಳಲ್ಲಿ ಕೆಲವು ಧಾರ್ಮಿಕ ಕುರುಹುಗಳು ಕಂಡುಬಂದಿವೆ. ಅಲ್ಲಿ ದೊರೆತಿರುವ ಅವಶೇಷಗಳಿಂದ ಲಿಂಗಪೂಜೆ ಪ್ರಚಲಿತದಲ್ಲಿತ್ತೆಂದು ವಿದ್ವಾಂಸರು ಗುರುತಿಸಿದ್ದಾರೆ. ಹಿನ್ನೆಲೆಯಲ್ಲಿ ಲಿಂಗಪೂಜೆ ವಿಸ್ತ್ರತಗೊಂಡು ಕಾಲಾನಂತರ ಅವುಗಳಿಗೆ ಸ್ಥಳಗಳನ್ನು ಗುರುತು ಮಾಡಿ, ಅವು ಬಹಳ ಪವಿತ್ರವೆಂದು ಜನಮನದಲ್ಲಿ ಬೇರೂರಿರಲು ಸಾಧ್ಯತೆ ಇದೆ.

ದ್ರಾವಿಡ, ಆರ್ಯ ಸಂಸ್ಕೃತಿಗಳ ಸಂಗಮದಿಂದ ವೈದಿಕ ಧರ್ಮದಲ್ಲಿ ಅನೇಕ ಪಂಗಡಗಳಾಗಿ ಶೈವ, ವೈಷ್ಣವ, ಶಾಕ್ತೇಯ, ಗಾಣಪತ್ಯ, ಮೊದಲಾದ ಪಂಥಗಳು ಉಗಮಗೊಂಡು ಶೈವ ಧರ್ಮವು ವಿಭಜನೆ ಹೊಂದಿ ಅನೇಕ ಶಾಖೆಗಳಾಯಿತು. ಅವುಗಳಲ್ಲಿ ವೀರಶೈವ ಧರ್ಮವೂ ಒಂದು. ಧರ್ಮದ ಏಳಿಗೆಗಾಗಿ ೧೨ನೆಯ ಶತಮಾನದಲ್ಲಿ ಬಸವಾದಿ ಶರಣರು ಶ್ರಮಿಸಿ ಪವಾಡ ಪುರುಷರೆನಿಸಿದರು. ಇವರು ದೇವರ ಅವತಾರ ಪುರುಷರೆನಿಸಿಕೊಂಡು ಇಂದಿಗೂ ಪೂಜೆಗೊಳ್ಳುತ್ತಿದ್ದಾರೆ. ಬಸವಣ್ಣನವರು ಹಾಕಿಕೊಟ್ಟ ಶರಣ ಧರ್ಮಪೀಠ ಅಥವಾ ಅನುಭವ ಮಂಟಪದ ಮೂಲಕ ತತ್ವಗಳನ್ನು ಪ್ರಚಾರ ಮಾಡಿದರು. ಶರಣರ ತತ್ವಗಳು ಮುಂದೆ ವೀರಶೈವ ಧರ್ಮವಾಗಿ ವಿಸ್ತಾರ ಪಡೆಯಿತು.

ಪ್ರಾಚೀನ ಕಾಲದಲ್ಲಿ ದೇವಸ್ಥಾನಗಳಿಗೆ ಮಠಗಳೆಂದೂ ಕರೆಯಲಾಗಿದೆ. ಮಠವೆಂದು ಕರೆಯಲು ಯಾವ ಅಂಶಗಳು ಕಾರಣ ಎನ್ನುವುದನ್ನು ಪರಿಶೀಲಿಸಿದರೆ, ಲಕುಲೀಶ ಪಾಶುಪತರ ದೇವಸ್ಥಾನಗಳನ್ನು ಗಮನದಲ್ಲಿಟ್ಟುಕೊಂಡು ಶಾಸನ ಮೊದಲಾದ ಆಧಾರಗಳಿಂದ ಸನ್ಯಾಸಿಗಳು ದೇವಸ್ಥಾನಗಳಲ್ಲಿ ವಾಸಿಸುತ್ತ ತಮ್ಮ ತಪೋಕರ್ಮದ ಜೊತೆಗೆ ವಿದ್ಯಾದಾನವನ್ನು ಮಾಡುತ್ತಿದ್ದರು.

ದೇವಸ್ಥಾನಗಳಲ್ಲಿಯ ಸನ್ಯಾಸಿಗಳನ್ನು ಪೂಜ್ಯ ಭಾವನೆಯಿಂದ ನೋಡಿರುವುದಲ್ಲದೇ ಅವರ ಕಾಲುಗಳನ್ನು ತೊಳೆದು ಅನೇಕ ವಸ್ತುಗಳನ್ನು ದಾನ ಕೊಡುತ್ತಿದ್ದರು. ಇಂತಹ ಗೌರವಯುತವಾದ ಸನ್ಯಾಸಿಗಳಿರುವ ಸ್ಥಾನವೇ ದೇವಸ್ಥಾನವೆಂದಮೇಲೆ ಮಠಗಳ ಹೆಸರನ್ನು ಹೇಳುವಾಗ ಸನ್ಯಾಸಿಗಳು ಇರುವ ದೇವಸ್ಥಾನಗಳಿಗೆ ಮಠವೆಂದು ಕರೆಯುತ್ತೇವೆ. ಮುಳುಗುಂದದ ನಗರೇಶ್ವರ ಮಠ, ವಿಕ್ರಮಪುರದ ಸ್ವಯಂಭು ನಗರೇಶ್ವರ ದೇವರ ಮಠ ಮೊದಲಾದವು ದೇವಸ್ಥಾನಕ್ಕೆ ಸಂಬಂಧಿಸಿದ ಮುನಿಗಳ ವಾಸಸ್ಥಳಗಳಾಗಿವೆ. ಅಂದರೆ ಅನೇಕ ಕಡೆ ದೇವಸ್ಥಾನಗಳು ಮಠದ ಅಂಗವಾಗಿ ಕಾಣಿಸಿಕೊಳ್ಳುವುದುಂಟು. ಬಾವಿ ಮಠದ ಶ್ರೀ ಕಲಿದೇವಸ್ವಾಮಿ ದೇವರು. ಇಲ್ಲಿಯು ಕೂಡ ಮಠವು ಯಾವುದೋ ದೇವಸ್ಥಾನದ ಅಂಗವಾಗಿದ್ದು, ಜನರ ಬಾಯಲ್ಲಿ ಕ್ರಮೇಣ ಬೇರೊಂದು ಹೆಸರು ಸೇರ್ಪಡೆಯಾಗಿರಬಹುದು. ಉದಾ: ಬಳ್ಳಿಗಾವಿಯ ಕೋಡಿಯ ಮಠದ ನಿಜವಾದ ಹೆಸರು ಕೇದಾರೇಶ್ವರ ಮಠ. ಅದು ಕೇದಾರೇಶ್ವರ ದೇವಸ್ಥಾನ ಇದ್ದುದರಿಂದ ಕೋಡಿ ಮಠವೆಂದು ಕರೆದಿರಬಹುದು. ಪ್ರಾಚೀನ ಕರ್ನಾಟಕದಲ್ಲಿ ಪ್ರಸಿದ್ಧ ಶೈವಮಠ ಇದಾಗಿತ್ತು. ಕೇದಾರೇಶ್ವರ ದೇವಸ್ಥಾನವು ಕೇದಾರ ಪರ್ವತದಂತೆ ಪ್ರಸಿದ್ಧವಾಗಿತ್ತೆಂದೂ, ಅಲ್ಲಿ ತಪಸ್ಸು ಮಾಡುತ್ತಿದ್ದ ದಿವ್ಯ ತಪೋಧನರು ಕೇದಾರ ಪರ್ವತದ ತಪಸ್ವಿಗಳಿಗೆ ಸಮಾನರೆಂದೂ, ಮಠವನ್ನು ಹಲವು ಸ್ಥಾನಾಪತಿಗಳು ಬೆಳಗಿದರೆಂದೂ ಶಾಸನ ತಿಳಿಸುತ್ತದೆ. ಹೀಗಾಗಿ ದೇವಸ್ಥಾನ ಮತ್ತು ಮಠ ಭಿನ್ನವಲ್ಲವೆಂಬ ವಿಷಯ ವ್ಯಕ್ತವಾಗುತ್ತದೆ. ಆದರೆ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಅದರ ಅಂಗವಾಗಿ ಮಠವಿತ್ತು. ಮಠಕ್ಕೆ ಪ್ರತ್ಯೇಕ ಅಸ್ತಿತ್ವವಿರಲಿಲ್ಲ. ಆದ್ದರಿಂದ ಒಂದು ರೀತಿಯಲ್ಲಿ ಅವೆರಡು ಅಭಿನ್ನ. ಸನ್ಯಾಸಿಗಳು ವಾಸಿಸುತ್ತಿದ್ದುದು ಮಠದಲ್ಲಿ. ಮಠವು ದೇವಸ್ಥಾನಕ್ಕೆ ಹೊಂದಿಕೊಂಡಂತೆ ಅಥವಾ ಮಠದ ಅಧೀನದಲ್ಲಿ ಹಲವಾರು ದೇವಸ್ಥಾನಗಳಿದ್ದವು. ಎಲ್ಲಾ ಅಂಶಗಳನ್ನು ಗಮನಿಸಿದರೆ ಮಠವು, ದೇವಸ್ಥಾನದಿಂದ ಭಿನ್ನವಲ್ಲವೆಂದು ತಿಳಿಯುತ್ತದೆ.

ಏಳನೆಯ ಶತಮಾನದ ನಂತರ ಲಾಕುಳ ಶೈವ ಧರ್ಮದ ಪ್ರಚಾರ ಹೆಚ್ಚಾಯಿತು. ಮಠಕ್ಕೆ ಸಂಬಂಧಿಸಿದ ಒಬ್ಬ ಸನ್ಯಾಸಿ ದೇವಸ್ಥಾನದಲ್ಲಿದ್ದು, ಆಡಳಿತ ಮೇಲ್ವಿಚಾರಕನಾಗಿ, ತಪಸ್ವಿಯಾಗಿ, ವಿದ್ಯಾದಾನ ಮಾಡುತ್ತಿದ್ದನು. ತನ್ನ  ಜೊತೆಗಿದ್ದ ಪರಿಚಾರಕರ ವರ್ಗಕ್ಕೆ ಸ್ಥಾನಾಪತಿಯಾಗಿದ್ದು, ಅವರಿಗೆ ಆಜ್ಞೆಯನ್ನು ಮಾಡುತ್ತಿದ್ದನು. ದೇವಸ್ಥಾನಕ್ಕೆ ಸಂಬಂಧಿಸಿದ ಭೂಮಿಯನ್ನು ನೋಡಿಕೊಳ್ಳುವುದಲ್ಲದೇ, ದೇವಸ್ಥಾನದ ಪರವಾಗಿ ಭೂಮಿ ರೂಪದ, ಧನರೂಪದ ದತ್ತಿಗಳನ್ನು ಸ್ವೀಕರಿಸುವುದು, ದೇವಸ್ಥಾನದ ಆಸ್ತಿಯನ್ನು ಹೆಚ್ಚಿಸುವುದು, ಭೂಮಿಯನ್ನು ರೈತರಿಗೆ ಗೇಣಿಯಾಗಿ ಕೊಡುವುದು ಒಟ್ಟಿನಲ್ಲಿ ದೇವಸ್ಥಾನದ ಐಶ್ವರ್ಯದ ಮೇಲ್ವಿಚಾರಣೆ ಮಾಡುವತ್ತ ಬ್ರಹ್ಮಚಾರಿ ವೃತವನ್ನು ಪಾಲಿಸಿಕೊಂಡು ಬಂದಿದ್ದನು. ಆದರೆ ಕೆಲವೊಂದು ಸನ್ಯಾಸಿಗಳು ಭ್ರಷ್ಟರಾದಾಗ, ಭಕ್ತರಿಂದ ಪಡೆದ ಹಣವನ್ನು ಸುಕ್ಕು ಜೆಡೆಗಳ ಸಂದುಗಳಲ್ಲಿ ಮುಚ್ಚಿಟ್ಟು ಮಿಂಡಿದತ್ತುಗಳಿಗೆ ಕೊಡುತ್ತಿದ್ದ ತುಡುಗುಣಿ ಗೊರವರೆಂದು ಶಾಸನಗಳು ಹೇಳುತ್ತವೆ. ಪ್ರಾಚೀನ ಕಾಲದ ಮಠಗಳಲ್ಲಿ ವಾಸಿಸುವ ಸ್ವಾಮಿಗಳು ಇಂತಹ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಉದಾಹರಣೆಗಳು ಸಿಗುತ್ತವೆ.

ಮಠ ಎಂಬ ಪದಕ್ಕೆ ಸನ್ಯಾಸಿ, ಗುರು, ಯತಿಗಳು ವಾಸಿಸುವ ಸ್ಥಳವೆಂಬ ಅರ್ಥವಿದೆ. ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಳಕೆಯಲ್ಲಿರುವ ವೀರಶೈವ ಸಂಪ್ರದಾಯದಲ್ಲಿ ಗುರುಗಳು, ಸನ್ಯಾಸಿಗಳು, ಯತಿಗಳು ಜನರ ಮೇಲೆ ಪ್ರಭಾವ ಬೀರಿ ಅನೇಕ ಪವಾಡಗಳನ್ನು ಮೆರೆದು ಐಕ್ಯ ಹೊಂದಿದ ಮೇಲೆ ಇವರ ಗದ್ದುಗೆಯನ್ನು ನಿರ್ಮಿಸಿ, ಅದಕ್ಕೆ ಪೂಜೆ ಪುನಸ್ಕಾರಗಳು ನಡೆಯುತ್ತಿರುವುದನ್ನು ನೋಡುತ್ತೇವೆ. ಇದೆ ರೀತಿ ಇತರೆ ಧರ್ಮಗಳಲ್ಲಿಯೂ ಆಯಾ ಧರ್ಮದ ಗುರುಗಳು, ಯತಿಗಳು, ಸನ್ಯಾಸಿಗಳು ಐಕ್ಯ ಹೊಂದಿದ ಮೇಲೆ ಅವರಿಗೆ ಗದ್ದುಗೆಗಳನ್ನು ಇಲ್ಲವೆ ಕಟ್ಟಡಗಳನ್ನು ನಿರ್ಮಿಸಿ, ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸುವುದನ್ನು ನೋಡುತ್ತೇವೆ.

ವೀರಶೈವ ಧರ್ಮದ ಪರಂಪರೆಯು ೧೨ನೆಯ ಶತಮಾನದಿಂದ ಬೆಳೆದುಬಂದಿರುವ ಗುರು ಪರಂಪರೆಯನ್ನು ನೋಡಿದಾಗ, ಅಲ್ಲಮಪ್ರಭು ಜಾತಿ ನಿರಪೇಕ್ಷ ಪೀಠವನ್ನೇರಿದ. ಪೀಠ ಪರಂಪರೆ ಮುಂದುವರೆಯದೆ ಚನ್ನಬಸವಣ್ಣ, ಸಿದ್ಧರಾಮರಲ್ಲಿಗೆ ನಿಂತು ಹೋಯಿತು. ಆನಂತರ ಮೂರ್ನಾಲ್ಕು ಶತಮಾನಗಳ ನಂತರ ಯತಿಶ್ರೇಷ್ಠ ಶ್ರೀ ತೋಂಟದ ಸಿದ್ಧಲಿಂಗ, ಅಲ್ಲಮಪ್ರಭು ಸಂಪ್ರದಾಯವನ್ನು ಮತ್ತೆ ಪ್ರಾರಂಭ ಮಾಡಿದರು. ಹೀಗಾಗಿ ಅವರನ್ನು ವೀರಶೈವ ಕಾವ್ಯಗಳು ದ್ವಿತೀಯ ಅಲ್ಲಮ, ತೋಂಟದ ಅಲ್ಲಮನೆಂದು ಕರೆಯುತ್ತವೆ. ೭೦೧ ಶಿಷ್ಯರನ್ನು ಹೊಂದಿದ್ದ ಇವರು ಬೋಳಬಸವೇಶ್ವರನಿಗೆ ಪಟ್ಟಗಟ್ಟಿದರು. ನಂತರ ಸಂಪಾದನೆಯ ಹರತಾಳ ಚನ್ನನಂಜೆದೇವ, ಪರ್ವತೇಂದ್ರ ಗುರುಶಾಂತದೇವ ಹೀಗೆ ವಿರಕ್ತ ಪೀಠವು ಬೆಳೆದುಬಂದು ಕಾಲಾನಂತರ ಅನೇಕ ಕವಲುಗಳಾಗಿ ಹೋಯಿತು. ನಂತರ ಭೇದಗಳಾಗಿ ಹರಿದು ನೂರೊಂದು ವಿರಕ್ತರು ಒಂದೊಂದು ಕಡೆಗೆ ಹೋಗಿ ಧರ್ಮ ಪ್ರಚಾರ ಮಾಡಿದರು. ಅಂತಹ ವಿರಕ್ತರಲ್ಲಿ ಒಬ್ಬರಾದಂತಹ ಹಳ್ಳಿ ರಾಜೋಟ ಸ್ವಾಮಿಗಳು ಹಾನಗಲ್ಲು ಕ್ಷೇತ್ರಕ್ಕೆ ಬಂದು, ಅದರಲ್ಲೂ ತಿಳವಳ್ಳಿಯನ್ನು ಆಯ್ದುಕೊಂಡು ವೀರಶೈವ ಧರ್ಮವನ್ನು ಪ್ರಪ್ರಥಮವಾಗಿ ಭಾಗದಲ್ಲಿ ಪ್ರಚಾರ ಮಾಡಲು ಪ್ರಾರಂಭಿಸಿದರು.

ಕಲ್ಲುಮಠ, ತಿಳುವಳ್ಳಿ

ಕಟ್ಟಿಗೆಹಳ್ಳಿ ಸಿದ್ಧಲಿಂಗ ಮಹಾಸ್ವಾಮಿಗಳು ತಿಳವಳ್ಳಿಯನ್ನು ಪ್ರಮುಖ ಕೇಂದ್ರವನ್ನಾಗಿ ಮಾಡಿಕೊಂಡು ಹಾನಗಲ್ಲು ನಾಡಿನ ಉಪ್ಪಣಸಿ ಹಿರೇಮಾಗಡಿ (ಸೊರಬ ತಾ.) ಮೊದಲಾದ ಕ್ಷೇತ್ರಗಳಲ್ಲಿ ಮುರುಘಾ ಸಮಯದ ಸಂಪ್ರದಾಯಕ್ಕೆ ಸೇರಿದ ಮಠಗಳನ್ನು ಸ್ಥಾಪಿಸಲು ಉತ್ತೇಜನ ಕೊಟ್ಟರು. ಇವರು ತಿಳವಳ್ಳಿಯಲ್ಲಿ (೧೬೨೦೪೦) ಲಿಂಗೈಕ್ಯರಾಗಲು, ಅಲ್ಲಿ ಒಂದು ವಿರಕ್ತ ಮಠ ನಿರ್ಮಾಣವಾಯಿತು. ಅಲ್ಲಿಂದ ಪ್ರಾರಂಭವಾದ ಪೀಠ ಪರಂಪರೆ ನಾಡಿನ ಉದ್ದಗಲಕ್ಕೂ ಹರಡಿತು. ಇಂದಿಗೂ ತಿಲವಳ್ಳಿಯಲ್ಲಿ ರಾಜೋಟ ಸ್ವಾಮಿಗಳ ಗದ್ದುಗೆಗೆ ಪೂಜಾದಿ ಕರ್ಮಗಳು ನಡೆಯುತ್ತವೆ. ಅವರ ನಂತರ ಮಠದ ಪೀಠ ಪರಂಪರೆ ನಡೆಸಿಕೊಂಡು ಹೋದುದರ ಪುರಾವೆಗಳು ಲಭ್ಯವಿಲ್ಲ. ಇತ್ತೀಚೆಗೆ ಚಿತ್ರದುರ್ಗದ ಶ್ರೀಗಳು ಮಠದ ಪೀಠಾಧಿಪತಿಯನ್ನಾಗಿ ತೊಂಡುರಿನ (ಸವಣೂರು ತಾ.) ಚನ್ನಬಸವಪ್ಪಾ ಸ್ವಾಮಿಗಳನ್ನು ನೇಮಿಸಿದ್ದರು. ಆದರೆ ಕೆಲವು ಕಾರಣಗಳಿಂದ ಶ್ರೀಗಳವರು ಮಠವನ್ನು ಬಿಟ್ಟು ಹೋಗಿರುವರು. ಮಠಕ್ಕೆ ಕಲ್ಲು ಮಠ ಎಂದು ಹೆಸರಿದೆ. ಮಠದಲ್ಲಿ ಒಂದು ಕಡೆ ಶಿವಲಿಂಗ, ಇನ್ನೊಂದು ಕಡೆ ಕಟ್ಟಿಗೆಹಳ್ಳಿ ರಾಜೋಟ ಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲುತ್ತದೆ. ಬಹುಶಃ ಕಟ್ಟಿಗೆ ಎನ್ನುವುದರ ಬದುಲು ಗ್ರಾಮಸ್ಥರು ಕಲ್ಲುಮಠವೆಂದು ಕರೆದಿರಬಹುದು.

ಕುಮಾರೇಶ್ವರ ವಿರಕ್ತಮಠ, ಹಾನಗಲ್ಲು

ವಿರಕ್ತ ಮಠವು ಪ್ರಸಿದ್ಧವಾಗಲು ತಪೋನಿಷ್ಠೆಯಲ್ಲಿ ಗಟ್ಟಿಗೊಂಡ ವೈರಾಗ್ಯ ಶಾಲಿಗಳು ವಿರಕ್ತಾಶ್ರಮವನ್ನು ಸ್ವೀಕರಿಸುತ್ತಾ ಬಂದಿರುವುದರಿಂದ. ಮಠದ ಕೀರ್ತಿ ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರನಾಡು ವೀರಶೈವ ಸಮಾಜದಲ್ಲಿಯೂ ವ್ಯಾಪಿಸಿದೆ. ಅಲ್ಲದೆ ಇದು ವಿವಿಧ ಮಠಮಾನ್ಯಗಳ ಮತ್ತು ಸಾಮಾಜಿಕ ಬೆಳವಣಿಗೆಯ ಕೇಂದ್ರಬಿಂದುವಾಗಿ ರೂಪುಗೊಂಡಿದೆ.

ಪಕ್ಕಿರೇಶ್ವರ ಮಹಾಸ್ವಾಮಿಗಳು

ವಿರಕ್ತ ಮಠದ ಪರಂಪರೆಯು ಪಕ್ಕೀರೇಶ್ವರ ಸ್ವಾಮಿಗಳಿಂದ ಆರಂಭವಾಗುತ್ತದೆ. ಸ್ವಾಮಿಗಳು ತಪೋನಿಷ್ಠರು ವೈರಾಗ್ಯಶಾಲಿಗಳು ಆಧ್ಯಾತ್ಮಿಗಳು, ವಾಕ್ ಸಿದ್ಧಿಯನ್ನು ಪಡೆದುಕೊಂಡವರು. ಸಮಾಜದ ನಾಲ್ಕು ಭಾಗದೊಳಗೆ ಪ್ರಸಿದ್ಧರಾದ ವಿರಕ್ತಸ್ವಾಮಿಗಳು ಶ್ರೇಷ್ಠ ಚರ ಮೂರ್ತಿಗಳು. ಅನೇಕ ಭಕ್ತರನ್ನು ಹೊಂದಿದ್ದರಲ್ಲದೆ ಸೊರಬ, ಸಾಗರದ ಮಲೆನಾಡಿನ ಸೀಮೆಯಲ್ಲಿ ಅವರ ಪ್ರಭಾವ ಗಾಢವಾಗಿತ್ತು.

ಕುಮಾರ ಮಹಾಸ್ವಾಮಿಗಳು

ಪಕ್ಕೀರ ಸ್ವಾಮಿಗಳ ತರುವಾಯ ವೀರಕ್ತಮಠ ಪೀಠವನ್ನು ಇಡೀ ಕರ್ನಾಟಕಕ್ಕೆ ಪರಿಚಯ ಮಾಡಿಕೊಟ್ಟು ಪ್ರಸಿದ್ಧಿಯನ್ನು ಪಡೆಯುವಂತೆ ಮಾಡಿದವರು ಕುಮಾರ ಶಿವಯೋಗಿಗಳು. ಇವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಜೋಯಿಸರ ಹಳ್ಳಿಯಲ್ಲಿ ಸಾಲಿಮಠದ ಬಸವಯ್ಯ ನೀಲಮ್ಮ ಎಂಬ ದಂಪತಿಗಳ ಉದರದಲ್ಲಿ ಕ್ರಿ.. ೧೮೬೭ರಲ್ಲಿ ಜನಿಸಿದರು. ಮಗು ಹುಟ್ಟಿದ ಐದಾರು ದಿನಗಳವರೆಗೆ ಮೊಲೆ ಹಾಲನ್ನು ಕುಡಿಯಲಿಲ್ಲವಂತೆ, ಜನರ ಅಪೇಕ್ಷೆಯ ಮೇರೆಗೆ ಹಾಲಯ್ಯನೆಂದು ಕರೆದರಂತೆ. ಆಗ ಹಾಲು ಕುಡಿಯಿತೆಂಬ ಪ್ರತೀತಿ. ಮುಂದೆ ಮಗುವಿಗೆ ಸದಾಶಿವ ಹಾಲಯ್ಯ ಎಂಬ ನಾಮಕರಣವು ರೂಢಿಯಾಯಿತು. ಸದಾಶಿವನ ಮನೆಯಲ್ಲಿ ಬಹಳ ಜನರಿದ್ದುದರಿಂದ ಬಡತನ ಅವರನ್ನು ಕಿತ್ತು ತಿನ್ನುತಿತ್ತು. ಎರಡುಮೂರು ಜನರು ಭಿಕ್ಷೆ ಬೇಡಿದರೂ ಬಡತನದ ದಾಹ ಇಂಗಲಿಲ್ಲ. ಇಂಥ ಸಂದರ್ಭದಲ್ಲಿ ಸದಾಶಿವನ ಜನಕ ತೀರಿಕೊಂಡರು. ಆಗ ಅಜ್ಜನಾದ (೧೦೫ ವರ್ಷದ) ಕೋಟಪ್ಪಯ್ಯರೊಂದಿಗೆ ಭಿಕ್ಷೆಬೇಡಿ ತಂದು, ಶಾಲೆಗೆ ಹೋಗವ ಪರಿಸ್ಥಿತಿ ನಿರ್ಮಾಣವಾಯಿತು.

ಸದಾಶಿವನು ಸಮೀಪದ ಕಜ್ಜರಿ ಗ್ರಾಮಕ್ಕೆ ಬಂದು ಊರ ಪ್ರಮುಖನ ಪರಿಚಯದಿಂದ ಮುಲ್ಕಿ ಶಿಕ್ಷಣವನ್ನು ಮುಗಿಸಿ, ನಂತರ ತಾಯಿಯ ತವರೂರಾದ ಲಿಂಗವಳ್ಳಿಗೆ ಹೋದರು. ಅಲ್ಲಿ ಶಾಲೆಯನ್ನು ಪ್ರಾರಂಭಿಸಿ ಶಿಕ್ಷಕ ವೃತ್ತಿ ಕೈಗೊಂಡರು. ಊರಿನ ಹಿರಿಯರಾದ ಬಸವಪ್ಪಯ್ಯನವರ ಮಾರ್ಗದರ್ಶನದಲ್ಲಿ ವೇದಾಂತ, ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳ ಸಂಪೂರ್ಣ ಅಧ್ಯಯನ ಮಾಡಿ, ನಿಜಗುಣ ಕೈವಲ್ಯ ಪದ್ಧತಿಯ ಬಾಳನ್ನು ಸ್ವೀಕರಿಸಿದರು. ಆದರೆ ತಾಯಿ ಮಗನಿಗೆ ಯೋಗ್ಯ ಕನ್ಯೆಯನ್ನು ಹುಡುಕಿ ಮದುವೆ ಮಾಡುವ ಪ್ರಯತ್ನದಲ್ಲಿದ್ದಾಗ, ಸತ್ಯವಾದ, ಚಿರಂತನವಾದ, ಲೋಕಹಿತಾರ್ಥವಾಗುವುದಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದೇನೆಂದು ಹೇಳಿ, ತಾಯಿಯ ಆಶೀರ್ವಾದ ಪಡೆದು ಸ್ಥಳದಿಂದ ಹೊರಟು ಹೋಗುತ್ತಾರೆ. ಲಿಂಗದಳ್ಳಿ ಬಿಟ್ಟು ಹುಬ್ಬಳ್ಳಿಗೆ ಬಂದು ಆರೋಢರ ಹತ್ತಿರ ವೇದಾಂತ ಕಲಿತರೂ ವೇದಾಂತಿ ಆಗಲಿಲ್ಲ. ಆನಂತರ ಎಮ್ಮಿಗನೂರು ಜಡೆಸಿದ್ಧರ ಹತ್ತಿರ ಬಂದಾಗ, ಜಡೆಸಿದ್ಧರು ಶಿವಯೋಗಿಯನ್ನು ಕಂಡು ಸಾಕ್ಷಾತ್ ಶಿವನ ರೂಪವನ್ನೇ ಕಂಡಂತಾಗಿ ತಮ್ಮ ಅಪಾರ ಶಕ್ತಿಯನ್ನು ಧಾರೆಯೆರೆದರು.

ಸದಾಶಿವಯೋಗಿ, ಯಳಂದೂರು ಬಸವಲಿಂಗ ಸ್ವಾಮಿಗಳ ಶಿಷ್ಯರು. ಸ್ವಾಮಿಗಳು ಶಿಷ್ಯನನ್ನು ಕರೆದುಕೊಂಡು ನಾಡಿನಲ್ಲೆಲ್ಲ ಸಂಚರಿಸಿ ಧರ್ಮ ಪ್ರಚಾರ ಮಾಡಿದರು. ಸಂಚಾರದ ವೇಳೆಯಲ್ಲಿ ಬಸವಲಿಂಗ ಸ್ವಾಮಿಗಳು ದೇಹತ್ಯಾಗ ಮಾಡುವ ಪೂರ್ವದಲ್ಲಿ ನಿನ್ನಲ್ಲಿ ಯೋಗಶಕ್ತಿ, ವಿರತಿ, ಕಾರ್ಯದಕ್ಷತೆ ಇರುವುದರಿಂದ ಧೈರ್ಯದಿಂದ ಸಿದ್ಧನಾಗು ಎಂದು ಶಿಷ್ಯನಿಗೆ ಹೇಳಿದರಂತೆ. ಬಸವಲಿಂಗ ಸ್ವಾಮಿಗಳು ದೇಹತ್ಯಾಗ ಮಾಡಿದ ಮೇಲೆ ನಿಜಗುಣರ ತಪೋಭೂಮಿಯಾದ ಶಂಭುಲಿಂಗ ಬೆಟ್ಟಕ್ಕೆ ಬಂದು ತಪಸ್ಸು ಕೈಗೊಂಡು ಸರ್ವಾರ್ಥಸಿದ್ಧಿಹೊಂದಿ ನಾಡಿನ, ಸಮಾಜದ ಸೇವೆಗೆ ಕಂಕಣಬದ್ಧರಾಗಿ ಹೊರಟರು.

ಇವರು ಹೋದಲ್ಲೆಲ್ಲ ಶಿಷ್ಯಕೋಟಿ ಅನಂತವಾಯಿತು. ಅವರು ತುಳಿದ ನೆಲ ಪಾವನ ಕ್ಷೇತ್ರವಾಯಿತು. ಹೀಗೆ ಸಂಚರಿಸುತ್ತಾ ಸೊರಬ ಕ್ಷೇತ್ರಕ್ಕೆ ಬಂದರು. ಭಕ್ತರ ಅಪೇಕ್ಷೆಯಂತೆ ಅಲ್ಲಿಯೇ ಕೆಲ ಕಾಲ ನೆಲೆಸಿದರು. ಹಾನಗಲ್ಲು ವಿರಕ್ತಮಠಾಧಿಪತಿಗಳಾದ ಪಕ್ಕೀರ ಸ್ವಾಮಿಗಳು ತುಂಬಾ ವಯೋವೃದ್ಧರಾಗಿದ್ದರು. ಆಗ ಸಮರ್ಥ ಉತ್ತರಾಧಿಕಾರಿಗಳನ್ನು ಹುಡುಕುತ್ತಿದ್ದ ವೇಳೆಗೆ ಸೊರಬ ಕ್ಷೇತ್ರದಲ್ಲಿ ನೆಲೆಸಿರುವ ಸದಾಶಿವ ಸ್ವಾಮಿಗಳನ್ನು ಭಕ್ತರು ಕರೆತಂದು ಇವರ ಒಪ್ಪಿಗೆ ಇಲ್ಲದಿದ್ದರೂ ಪೀಠಾಧಿಪತಿಯನ್ನಾಗಿ ಮಾಡಿದರು. ಆಗ ಅವರಿಗೆ ಕುಮಾರ ಸ್ವಾಮಿಗಳೆಂದು ನಾಮಕರಣವಾಯಿತು. ಇಲ್ಲಿಂದ ಅವರ ಭವ್ಯ ಜೀವನದ ಸಾಧನೆಗೆ ನಾಂದಿಯಾಯಿತು. ಹಾನಗಲ್ಲಿನಲ್ಲಿ ಪಾಠಶಾಲೆಯನ್ನು ತೆರೆದು, ನಂತರ ವೀರಶೈವ ಮಹಾಸಭೆ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮುಖಾಂತರ ಸಮಾಜದಲ್ಲಿ ಧರ್ಮ ಜಾಗೃತಿಯನ್ನು ಪ್ರಾರಂಭಿಸಿದರು. ನಾಡಿನಲ್ಲೆಲ್ಲ ಸಂಚರಿಸಿ ಅಲ್ಲಲ್ಲಿ ಸಮ್ಮೇಳನ, ಉಚಿತ ಪ್ರಸಾದ ನಿಲಯ, ವಾಚನಾಲಯ, ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿ ಸಮಾಜದಲ್ಲಿ ಹೊಸ ಬೆಳಕನ್ನು ತರಲು ಪ್ರಯತ್ನಿಸಿದರು. ವೀರಶೈವ ಇತಿಹಾಸ, ಧರ್ಮ, ಸಾಹಿತ್ಯ ಹಾಗೂ ಸಂಸ್ಕೃತಿಯ ಅಭಿವೃದ್ಧಿಗಾಗಿ ಮಲಪ್ರಭಾ ನದಿದಂಡೆಯ ಬನ್ನಿಯ ವನದಲ್ಲಿ ಶಿವಯೋಗ ಮಂದಿರವನ್ನು ಸ್ಥಾಪನೆ ಮಾಡಿದರು.

ಶಿವಯೋಗ ಮಂದಿರವು ಬಹು ಸುಂದರ ಸ್ಥಾನವಾಗಿತ್ತು. ಅಲ್ಲಿಯ ವಟುಗಳು ಗೋವುಗಳನ್ನು ಸಾಕಿ, ಬಸ್ಮ ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದರಲ್ಲದೆ, ಪುರಾತನ ಗ್ರಂಥಗಳ ಸಂಶೋಧನೆಯಲ್ಲಿ ತೊಡಗಿದರು. ಶಿವಯೋಗ ಮಂದಿರದಲ್ಲಿ ಅಧ್ಯಯನ ಕೈಗೊಂಡ ಅನೇಕ ಸಂಶೋಧಕರನ್ನು ಕಾಣುತ್ತೇವೆ. ಇವರಿಗೆಲ್ಲ ಚೇತನ ಶಕ್ತಿಯಾಗಿ ನಿಂತವರು ಕುಮಾರ ಸ್ವಾಮಿಗಳು. ಅವರ ಆಶ್ರಯದಲ್ಲಿ ಅಸಂಖ್ಯಾತ ಯತಿ ಗಣ್ಯರು, ಕವಿಕಾವ್ಯ ಕೋವಿದರು, ಸಂಗೀತ ಸುಧಾರಕರು ಬೆಳವಣಿಗೆ ಕಂಡರು. ಇವರ ಸೇವೆ ನಾಡಿನ ಜನತೆಗೆ ಮತ್ತು ವೀರಶೈವ ಧರ್ಮಕ್ಕೆ ಅಪಾರವಾದುದು.

ಮಹೇಶ್ವರ ಮಹಾಸ್ವಾಮಿಗಳು

ಹಾನಗಲ್ಲು ಮಠದ ಪರಮಗುರು ಕುಮಾರ ಸ್ವಾಮಿಗಳ ನಂತರ ಉತ್ತರಾಧಿಕಾರ ಸ್ಥಾನವನ್ನು ಅಲಂಕರಿಸಿದವರು ಮಹೇಶ್ವರ ಸ್ವಾಮಿಗಳು. ಇವರು ಕುಮಾರ ಸ್ವಾಮಿಗಳು ಕಟ್ಟಿ ಬೆಳೆಸಿದ ಗೋಪುರವನ್ನು ಕಾಪಾಡಿಕೊಂಡು ಬಂದರು. ಆದರೆ ಕೆಲವೇ ದಿನಗಳಲ್ಲಿ ಲಿಂಗರೂಪಿಗಳಾದರು.

ಸದಾಶಿವ ಮಹಾಸ್ವಾಮಿಗಳು

ಮಹೇಶ್ವರ ಸ್ವಾಮಿಗಳ ನಂತರ ಹಾನಗಲ್ಲು ವಿರಕ್ತ ಪೀಠಕ್ಕೆ ಯೋಗ್ಯತಾ ಸಂಪನ್ನರನ್ನು ಹುಡುಕುತ್ತಿದ್ದಾಗ, ಶಿವಯೋಗ ಮಂದಿರದಲ್ಲಿದ್ದ ರೇಣುಕಾರಾಧ್ಯರನ್ನು ಕರೆತಂದು ಉತ್ತರಾಧಿಕಾರಿಯನ್ನಾಗಿ ಮಾಡಲು ಶ್ರೀ ಮೂಗಂ ಮೊದಲಾದ ಗಣ್ಯ ಮಹನೀಯರು ಆಸಕ್ತಿ ವಹಿಸಿದರು. ಇವರು ಜಡಮಠದ ಸಿದ್ಧಬಸವ ಮಹಾಸ್ವಾಮಿಗಳಿಂದ ಅಧಿಕಾರವನ್ನು ಪಡೆದು ಕ್ರಿ.. ೧೯೩೬ರಲ್ಲಿ ಶ್ರೀ ಸದಾಶಿವ ಮಹಾಸ್ವಾಮಿಗಳೆಂದು ಅಭಿದಾನ ಹೊಂದಿದರು.

ಅಪಾರ ಜ್ಞಾನ ಹೊಂದಿದ ಕುಮಾರ ಶಿವಯೋಗಿಗಳು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಗ್ರಾಮದ ಗಂಗಯ್ಯ ಮತ್ತು ಶೀಲಾವತಿ ರಾಚಮ್ಮನವರ ಉದರದಲ್ಲಿ ೧೯೦೬ರಲ್ಲಿ ಜನಿಸಿದರು. ಇವರಿಗೆ ಚಂದ್ರಶೇಖರ ಎಂದು ಹುಟ್ಟು ಹೆಸರಿತ್ತು. ಚಿಕ್ಕಮಗುವಿದ್ದಾಗ ಒಂದು ಘಟನೆ ನಡೆಯಿತು. ಚಂದ್ರಶೇಖರನ ತಲೆಯ ಮೇಲೆ ನಾಗರಹಾವು ಹೆಡೆಯೆತ್ತಿ ಲೀಲಾಜಾಲವಾಗಿ ಆನಂದದಿಂದ ಆಡತೊಡಗಿತ್ತು. ಇದನ್ನು ಕಂಡ ದಂಪತಿಗಳು, ೧೯೦೨ರಲ್ಲಿ ಭಿಕ್ಷಾಟನೆಗಾಗಿಬಂದ ಕುಮಾರಸ್ವಾಮಿಗಳ ಹತ್ತಿರ ಹೇಳಿದಾಕ್ಷಣ ಹೆದರಬೇಡಿ ಪುಣ್ಯ ಪುರುಷನಾಗುತ್ತಾನೆಂದು ಆಶೀರ್ವದಿಸಿದರು. ೧೯೧೫ರಲ್ಲಿ ಕುಮಾರಸ್ವಾಮಿಗಳು, ರೇಣುಕಾಚಾರ್ಯನೆಂದು ಕರೆದು ಅಲ್ಲಿಯ ಮಠದ ಅಧಿಕಾರಿಯನ್ನಾಗಿ ಮಾಡಿದರು. ಸಂಸ್ಕೃತ, ಲಲಿತಕಲೆ, ಸಂಗೀತ ಮೊದಲಾದ ಕ್ಷೇತ್ರಗಳ ಅನುಭವ ಅಮೃತ ನೀಡಿ ಪರಿಪೂರ್ಣ ಪಂಡಿತರನ್ನಾಗಿ ಮಾಡಿದರು. ಅದರ ಪ್ರತಿಫಲದಿಂದ ಸದಾಶಿವ ಸ್ವಾಮಿಗಳು ೭೭ ವರ್ಷಗಳ ಕಾಲ ಜೀವಿಸಿ ಲಿಂಗನಿಷ್ಠೆ, ತ್ರಿಕಾಲ ಪೂಜೆ, ಸಮಾಜ ಕಲ್ಯಾಣ, ವಟುಗಳ ಚಿಂತನೆ ಮೊದಲಾದ ಧ್ಯೇಯಗಳನ್ನು ಮೈಗೂಡಿಸಿಕೊಂಡು ಕಲ್ಯಾಣ ಕಾರ್ಯವನ್ನು ಮುಂದುವರಿಸಿದರು. ಅಲ್ಲದೆ ಕುಮಾರ ಸ್ವಾಮಿಗಳ ಭವ್ಯ ಗದ್ದುಗೆಯನ್ನು ಶಿವಯೋಗ ಮಂದಿರದಲ್ಲಿ ನಿರ್ಮಿಸಿದರು. ೧೯೭೨ರಲ್ಲಿಸುಕುಮಾರಎಂಬ ಧಾರ್ಮಿಕ ಪತ್ರಿಕೆಯನ್ನು ಜಾರಿಗೆ ತಂದರು. ಗೋಶಾಲೆಯಲ್ಲಿ ವಿಭೂತಿ ತಯಾರಿಸುವ ಕಾರ್ಖಾನೆಯನ್ನು ಸ್ಥಾಪಿಸಿದರು. ಬಡ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳನ್ನು ಸ್ಥಾಪಿಸಿ ಉಚಿತ ದಾಸೋಹ ಪ್ರಾರಂಭಿಸಿದರು. ೧೯೮೩ರಲ್ಲಿ ಬಸವನ ಬಾಗೇವಾಡಿಯಲ್ಲಿ ೬೩ ಮಂಟಪಗಳ ಪೂಜೆ ನೆರೆವೇರಿಸುವಲ್ಲಿ ಶಿವನಲ್ಲಿ ಐಕ್ಯರಾದರು.

ಕುಮಾರ ಮಹಾಸ್ವಾಮಿಗಳು

ವಿರಕ್ತಪೀಠ ಪರಂಪರೆಯ ಘನತೆಯನ್ನು ಎತ್ತಿ ಹಿಡಿಯಲು ಸದಾಶಿವ ಸ್ವಾಮಿಗಳ ತರುವಾಯ ಶಿವಕುಮಾರ ಸ್ವಾಮಿಗಳು ಉತ್ತರಾಧಿಕಾರಿಯಾದರು. ಚಿಕ್ಕಮಗಳೂರು ಜಿಲ್ಲೆಯ ಕಡುರು ತಾಲೂಕಿನ ಕಲ್ಕೆರೆಯ ಶಿವಮೂರ್ತಿಯ್ಯ ಮತ್ತು ಗಂಗಮ್ಮ ಎಂಬ ಶರಣ ದಂಪತಿಗಳ ಉದರದಲ್ಲಿ ಜನಿಸಿದರು. ಶಿವಯೋಗಿ ಮಂದಿರದಲ್ಲಿ ಬೆಳೆದ ಕುಮಾರ ಸ್ವಾಮಿಗಳು ಕಿರಿಯ ವಯಸ್ಸಿನಲ್ಲಿಯೇ ಹಿರಿಯ ಮಠದ ಪೀಠವನ್ನು ಅಲಂಕರಿಸಿ ಸಾಮಾಜಿಕ, ಧಾರ್ಮಿಕ ಚಟುವಟಿಕೆಯ ಕೇಂದ್ರವನ್ನಾಗಿ ಮಾಡಿದ್ದಾರೆ. ಅವರ ಮೃದು ವಚನಗಳು ಭಕ್ತ ಸಮೂಹವನ್ನು ಸೆಳೆದರೆ, ಕಾರ್ಯ ಚಟುವಟಿಕೆಗಳು ಕುಮಾರ ಶಿವಯೋಗಿಗಳ ನೆನಪನ್ನು ತರುತ್ತವೆ. ಏಕೆಂದರೆ ಕುಮಾರ ಶಿವಯೋಗಿಗಳು ಲಿಂಗೈಕ್ಯರಾಗುವ ಮೊದಲು ಭಕ್ತರಿಗೆ, ನಾನು ಮತ್ತೊಮ್ಮೆ ಸಮಾಜ ಸೇವೆಗಾಗಿ ಹುಟ್ಟಿ ಬರುತ್ತೇನೆಂದು ಹೇಳಿದ್ದನ್ನು ನೋಡಿದರೆ, ಅವರ ಪ್ರತಿರೂಪವೆ ಇವರು ಎನ್ನಬಹುದು.

ಇವರು ಧರ್ಮ ಜಾಗೃತಿ ಹಾಗೂ ಶಿಕ್ಷಣ ಪ್ರಸಾರಕ್ಕಾಗಿ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿವರ್ಷ ಕುಮಾರ ಶಿವಯೋಗಿಗಳ ಪುಣ್ಯ ತಿಥಿಯ ಸಂದರ್ಭದಲ್ಲಿ ಶಿವಕೀರ್ತನೆ, ಶಿವಭಜನೆ, ಧರ್ಮ ಜಾಗೃತಿಗಾಗಿ ಶಿವಾನುಭವ ಗೋಷ್ಠಿಯನ್ನು ಅವಿರತವಾಗಿ ನಡೆಸುತ್ತಾರೆ. ನಿರಂತರ ಸಮಾಜಸೇವೆ ಮತ್ತು ಧಾರ್ಮಿಕ ಕಾರ್ಯಗಳಿಂದ ಅವರು ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರುಗಳಾಗಿ ಶ್ರೀಮಾನ್ ಮಹಾರಾಜ್ ನಿರಂಜನ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳಾಗಿ ಪೀಠವನ್ನು ಅಲಂಕರಿಸಿದ್ದಾರೆ. ಮುನವಳ್ಳಿ, ಸಿಂದೋಗಿಯ ಶಾಖೆಗಳು ಇವರ ಅಧೀನದಲ್ಲಿದ್ದು, ಅವುಗಳನ್ನು ನೋಡಿಕೊಂಡು ಹೋಗುವ ಜವಾಬ್ದಾರಿಯು ಇವರ ಮೇಲಿದೆ. ಈಗಲೂ ಸಮಾಜ ಸೇವೆ ಧಾರ್ಮಿಕ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

ವಿರಕ್ತಮಠ, ಅಕ್ಕಿ ಆಲೂರು

ಇದು ಹಾನಗಲ್ಲು ವಿರಕ್ತಮಠ ಶಾಖೆಗಳಲ್ಲೊಂದು. ಮೊದಲು ವಿರಕ್ತಮಠದ ಆಡಳಿತಕ್ಕೊಳಪಟ್ಟಿತು. ಒಬ್ಬ ವಟುವನ್ನು ನೇಮಿಸಿದ ನಂತರ ಮಠವು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ.

ಶಿವಲಿಂಗೇಶ್ವರ ವಿರಕ್ತಮಠ, ತುರಬಿಗುಡ್ಡ

ವಿರಕ್ತಮಠವು ಕಟ್ಟಿಗೆಹಳ್ಳಿ ಸಿದ್ಧಲಿಂಗನ ಕಾಲದಲ್ಲಿ ಸ್ಥಾಪನೆಯಾಗಿದೆ ಎಂಬ ಪ್ರತೀತಿ ಇದೆ. ಕಾರಣ ಅವರು ಇದೇ ಪ್ರದೇಶದವರಾಗಿದ್ದು, ಇದು ಅವರ ಪ್ರಭಾವದಿಂದ ಉದ್ಭವಿಸಿರಬಹುದು. ಮಠವು ಮುರುಘಾ ಸಮಯದ ಸಂಪ್ರದಾಯಕ್ಕೆ ಸೇರಿದೆ. ಅವರ ಶಿಷ್ಯರಲ್ಲಿ ಒಬ್ಬರಾದ ಶಿವಲಿಂಗೇಶ್ವರ ಸ್ವಾಮಿಗಳು ಧರ್ಮ ಪ್ರಚಾರದಲ್ಲಿ ತೊಡಗಿದ್ದರೆಂದು ತಿಳಿದುಬರುತ್ತದೆ. ಕಟ್ಟಿಗೆಹಳ್ಳಿ ಸಿದ್ಧಲಿಂಗೇಶ್ವರ ಶಿಷ್ಯರಾದ ಶಿವಲಿಂಗೇಶ್ವರರು ದೇಶ ಸಂಚಾರ ಮಾಡಿ, ತುರಬಿಗುಡ್ಡದಲ್ಲಿ ನೆಲೆನಿಂತು ಜೀವಂತ ಸಮಾಧಿ ಹೊಂದಿದರೆಂದೂ, ತಮ್ಮ ಸಮಾಧಿಯ ಮೇಲೆ ಬಿದಿರ ಮಳೆಯನ್ನು ಹಚ್ಚಲು ಹೇಳಿ, ಅದು ಚಿಗುರಿದರೆ ಹಾಗೆಯೇ ಬಿಡಿ, ಇಲ್ಲದಿದ್ದರೆ ಗದ್ದುಗೆ ಕಟ್ಟಿಸಿ ಎಂದು ಆದೇಶ ಮಾಡಿದ್ದರೆಂದು ಜನ ಹೇಳುತ್ತಾರೆ. ಹಿನ್ನೆಲೆಯಲ್ಲಿ ಅವರ ಸಮಾಧಿಗೆ ಬಿದಿರು ಗದ್ದುಗೆಯನ್ನು ನಿರ್ಮಿಸಿದರು. ಪವಾಡ ಪುರುಷರಾದ ಇವರು ಅನೇಕ ಭಕ್ತಾದಿಗಳನ್ನು ಹೊಂದಿದ್ದರು. ಇವರಲ್ಲಿ ಸುಲಭೇಶ್ವರ ಸ್ವಾಮಿ ಮತ್ತು ಸಾವಳಿಗೇಶ್ವರ ಸ್ವಾಮಿ ಪ್ರಮುಖರು. ಸಾವಳಿಗೇಶ್ವರ ಸ್ವಾಮಿಯನ್ನು ಪೀಠದ ಅಧಿಪತಿಯನ್ನಾಗಿ ನೇಮಿಸಿದರು. ಅವರು ವೀರಶೈವ ಧರ್ಮವನ್ನು ಪ್ರಚಾರ ಮಾಡಿ ಅಲ್ಲಿಯೇ ಐಕ್ಯರಾಗಿದ್ದಾರೆ. ಅವರ ಗದ್ದುಗೆ ಶಿವಲಿಂಗೇಶ್ವರ ಸ್ವಾಮಿಯ ಗದ್ದುಗೆ ಪಕ್ಕದಲ್ಲಿದೆ.

ಸುಲಭೇಶ್ವರ ಸ್ವಾಮಿಗಳ ಗದ್ದುಗೆ ಹತ್ತಿರದ ಮೂಡಿಯಲ್ಲಿದೆ. ಮೂಡಿಯ ಜಾತ್ರಾ ಮಹೋತ್ಸವಕ್ಕೆ ತುರುಬೀಗುಡ್ಡದ ಶಿವಲಿಂಗೇಶ್ವರ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಉತ್ಸವವನ್ನು ಮಾಡುವ ಪರಂಪರೆ ಇಂದಿಗೂ ಬೆಳೆದು ಬಂದಿದೆ. ಶಿವಲಿಂಗೇಶ್ವರ ಸ್ವಾಮಿಗಳ ಪರಂಪರೆ ಪೀಠದಲ್ಲಿ ಮುಂದುವರೆದ ಬಗ್ಗೆ ಮಾಹಿತಿ ದೊರೆಯುವುದಿಲ್ಲ. ಆದರೆ  ೨೦ನೆಯ ಶತಮಾನದ ಆರಂಭದಲ್ಲಿ ನವಲ್ಯಪ್ಪ ಸ್ವಾಮಿಗಳು ಪೀಠಕ್ಕೆ ಅಧಿಪತಿಯಾಗಿದ್ದರು. ಇವರು ಅನೇಕ ಭಕ್ತಾದಿಗಳಿಂದ ದಾನದತ್ತಿಗಳನ್ನು ತೆಗೆದುಕೊಂಡಿರುವ ಮಾಹಿತಿಗಳು ದೊರೆಯುತ್ತವೆ. ತರುವಾಯ ಕ್ರಿ.. ೧೯೫೬ರ ಸುಮಾರಿಗೆ ಚನ್ನವೀರ ಮಹಾಸ್ವಾಮಿಗಳು ವಿರಕ್ತಮಠದ ಅಧಿಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ೨೦೦೩ರಲ್ಲಿ ತಮ್ಮ ಉತ್ತರಾಧಿಕಾರಿಗಳಾಗಿ ಸದಾಶಿವ ಮಹಾಸ್ವಾಮಿಗಳನ್ನು ನೇಮಕ ಮಾಡಿದರು. ಅವರೂ ಕೂಡಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ತಿಪ್ಪಯ್ಯಮಠ, ಕೂಸನೂರು

ಕೂಸನೂರಿನಲ್ಲಿ ತಿಪ್ಪಯ್ಯಸ್ವಾಮಿ ಮಠವಿದೆ. ವೇದಾಂತ ಶಿಖಾಮಣಿ ಎನಿಸಿರುವ ತಿಪ್ಪಯ್ಯಸ್ವಾಮಿ ಇಲ್ಲಿ ನೆಲೆಸಿ, ಭಾಗದ ಜನರಲ್ಲಿ ಸರ್ವ ಸಮಾನತೆಯನ್ನು ಸಾರಿದ್ದಾರೆ. ಇವರು ಕಾಶಿಯ ಕಾಳಿಕಾ ದೇವಿಯ ಜೊತೆ ಮಾತನಾಡಿ ಖಡ್ಗವನ್ನು ಕಾಣಿಕೆಯಾಗಿ ಪಡೆದರೆಂಬ ಪ್ರತೀತಿ. ಇವರ ಗದ್ದುಗೆಯ ಸಮೀಪ ಕಾಳಿಕಾ ಮಂದಿರವಿದೆ. ಇವರ ತರುವಾಯ ಬಸವಪ್ಪ ಸ್ವಾಮಿ ಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಉದ್ರಿ (ಸೊರಬ ತಾ.), ಹುಲಗಡ್ಡಿ, ಕೊಂಡೋಜಿ (ಹಾನಗಲ್ಲು ತಾ.), ಗುಳೇದಗುಡ್ಡ ಮೊದಲಾದ ಊರುಗಳ ಭಕ್ತರು ಮಠಕ್ಕೆ ಕಾಣಿಕೆ ಸಲ್ಲಿಸಿ ಬಡವರ ಸೇವೆಗೆ ಅನುಕೂಲ ಕಲ್ಪಿಸಿದ್ದಾರೆ. ಸ್ವಾಮಿಗಳು ಬಸವ ತತ್ವಗಳನ್ನು ಸಾಕಾರಗೊಳಿಸುವಲ್ಲಿ ಕಾರ್ಯತತ್ಪರರಾಗಿದ್ದಾರೆ.

ಮುರುಘರಾಜೇಂದ್ರ ಮಠ, ಉಪ್ಪುಣಸಿ

ಮಠದ ಇತಿಹಾಸ ಬಹಳ ಹಿಂದಿನದೆಂಬ ನಂಬಿಕೆ. ಊಹಿಸಿದ ಹಾಗೆ ಕಟ್ಟಿಗೆಹಳ್ಳಿ ಸಿದ್ದಲಿಂಗರ ಕಾಲದಲ್ಲಿ ಅವರ ಶಿಷ್ಯರಲ್ಲೊಬ್ಬ ಇಲ್ಲಿಗೆ ಬಂದು ನೆಲೆಸಿರಬೇಕು. ಆದರೆ ಇದರ ಪಾರಂಪರಿಕ ಚರಿತ್ರೆ ದೊರೆತಿಲ್ಲ. ಕಳೆದ ೩೦ ವರ್ಷದಿಂದ ಈಚೆಗೆ ಜಯಬಸವ ಮಹಾಸ್ವಾಮಿ ಬಂದು ನೆಲೆಸಿ, ಮಠದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಮಠದ ನಿರ್ಮಾಣದ ಸಮಕಾಲೀನರಲ್ಲಿ ಕಟ್ಟಿಗೆಹಳ್ಳಿ ಸಿದ್ದಲಿಂಗರ ಇನ್ನೊಬ್ಬ ಶಿಷ್ಯ ಹಿರಿಯ ಮಾಗಡಿಯಲ್ಲಿ (ತಾ. ಸೊರಬ) ಮುರುಘ ಮಠವನ್ನು ಸ್ಥಾಪಿಸಿದರೆಂಬ ಪ್ರತೀತಿ ಇದೆ.

ಗುಬ್ಬಿನಂಜುಂಡೇಶ್ವರ ಮಠ, ಹೊಂಕಣ

ವರದಾ ನದಿಯ ದಂಡೆಯ ಮೇಲಿರುವ ಇದು ಒಬ್ಬ ಪವಾಡ ಪುರುಷನಿಗೆ ಸಂಬಂಧಿಸಿದ ಮಠ. ಇದಕ್ಕೆ ಹೊಂದಿಕೊಂಡಂತೆ ರಾಮಲಿಂಗೇಶ್ವರ ದೇವಸ್ಥಾನವೂ ಇದೆ. ಪವಾಡ ಪುರುಷರಾದ ನಂಜುಂಡೇಶ್ವರ, ಶಿರಾ ತಾಲೂಕಿನ ಗುಬ್ಬಿಯವರು. ದೇಶ ಸಂಚಾರ ಮಾಡುತ್ತಾ ಹೊರಟು ಹಾನಗಲ್ಲು ತಾಲೂಕಿನ ಹೊಂಕಣ ಗ್ರಾಮಕ್ಕೆ ಬರುತ್ತಾರೆ. ಎಣ್ಣೆಗೊಪ್ಪ ಗ್ರಾಮದ (ಸೊರಬ ತಾಲೂಕ) ಮಲ್ಲಿಕಾರ್ಜುನ ಗೌಡ, ಒಬ್ಬ ಭಕ್ತನಿಗೆ ಅನ್ಯಾಯ ಮಾಡಿದ್ದರಿಂದ ವ್ಯಾಜ್ಯವನ್ನು ನಂಜುಂಡೇಶ್ವರರು ಮೈಸೂರು ಅರಸರಲ್ಲಿಗೆ ತೆಗೆದುಕೊಂಡು ಹೋಗುತ್ತಾರೆ. ಮೂರು ದಿನಗಳ ವರೆಗೆ ಬಾಗಿಲಲ್ಲಿ ಕುಳಿತುಕೊಂಡು, ಅರಸನನ್ನು ಭೇಟಿಯಾಗಿ ನ್ಯಾಯ ಕೇಳುತ್ತಾರೆ. ಅರಸು ವಾಡಿಕೆಯಂತೆ ಗೌಡರ ತಪ್ಪಿಲ್ಲ, ಆದ್ದರಿಂದ ನಿಮಗೆ ತೀರ್ಪು ಕೊಡಲು ಬರುವುದಿಲ್ಲ ಎಂದು ಹೇಳುತ್ತಾನೆ. ಇದಕ್ಕೆ ಒಪ್ಪದಿದ್ದಾಗ, ಮಹಾರಾಜ ತಾನು ಕೊಟ್ಟ ತೀರ್ಪಿನ ನ್ಯಾಯಪೀಠದ ಮಹತ್ವವನ್ನು ತೋರಿಸಲು, ನೀವೆ ಬಂದು ನ್ಯಾಯ ಪೀಠದ ಮೇಲೆ ಕುಳಿತುಕೊಳ್ಳಿ ಎಂದು, ಪೀಟದ ಮೇಲೆ ಜೋಳ ಚೆಲ್ಲಿದರಂತೆ. ಜೋಳ ಹರಳಾದವಂತೆ. ಆಗ ನಂಜುಂಡೇಶ್ವರರು ಆಯಿತು ಎಂದು ಹೇಳಿ ಪೀಠದ ಮೇಲೆ ಕುಳಿತಾಗ ಅರಸರಿಗೆ ದಿಗ್ಭ್ರಮೆಯಾಯಿತು. ಆಗ ಗೌಡನಿಗೆ ಕೇವಲ ಒಂದು ದಾಂಬಡಿಬಿಲ್ಲಿ ದಂಡವನ್ನು ಹಾಕಿ, ನಿನ್ನ ಮನೆ ಹಾಳಾಗಲಿ, ನೀನು ದಾರಿಯಲ್ಲಿ ಬಿದ್ದು ಸಾಯಿ ಎಂದು ಶಾಪ ಕೊಡುತ್ತಾರೆ. ಅವರ ಶಾಪದಂತೆ ಘಟನೆ ನಡೆಯಿತೆಂಬ ಪ್ರತೀತಿ ಇದೆ. ಸಮೀಪದ ಮೂಡಿಯಲ್ಲಿ ಚನ್ನವೀರ ಮಹಾಸ್ವಾಮಿಗಳಿಗೆ ಮಠವನ್ನು ಏಕೆ ಕಟ್ಟುವೆ, ನಿನ್ನ ಮಠದ ಕಳಸದ ಮೇಲೆ ಗುಬ್ಬಿ ಕುಳಿತುಕೊಂಡು ನೀರನ್ನು ಕುಡಿಯುತ್ತದೆ ಎಂದಿದ್ದರಂತೆ. ಅಂತೆಯೆ ಇಂದು ವರದಾ ನದಿಗೆ ಬ್ಯಾತನಾಳದ ಸಮೀಪ ಆಣೆಕಟ್ಟೆಯನ್ನು ಕಟ್ಟಲು ಯೋಜನೆಯನ್ನು ಹಾಕಿದ್ದಾರೆ. ನೀವು ಮಠವೇಕೆ ಕಟ್ಟಬಾರದೆಂದು ಕೇಳಿದ್ದಕ್ಕೆ, ಘಟ ಹೋದಮೇಲೆ ಮಠ ಆಗುತ್ತದೆ ಎಂದಿದ್ದರಂತೆ. ಅಂತೆಯೇ ಹಿರೇಹಳ್ಳಿ (ಬ್ಯಾಡಗಿ ತಾಲೂಕ)ಯಲ್ಲಿ ನೀರಿನಲ್ಲಿ ಧ್ಯಾನ ಮಾಡುತ್ತ ಎರಡು ಮೂರು ದಿನಗಳು ಕಳೆದರೂ ಶ್ರೀಗಳು ಹೊರಗೆ ಬರದಿರಲು ಜನರು ಹೋಗಿ ನೋಡಿದರಂತೆ. ಶ್ರೀಗಳು ಧ್ಯಾನಾಸಕ್ತರಾಗಿದ್ದರು. ಜನರು ಹೋಗಿ ಮುಟ್ಟಿದಾಕ್ಷಣ, ಅವರು ಇಹಲೋಕ ತ್ಯಜಿಸಿರುವುದು ತಿಳಿಯಿತು. ಹಿರೇಹಳ್ಳಿಯಿಂದ ಶವವನ್ನು ಹೊಂಕಣಕ್ಕೆ ತಂದರು. ಲಿಂಗೈಕ್ಯರಾದ ಮೇಲೆ ಹೊಂಕಣದಲ್ಲಿ ಅವರ ಹೆಸರಿನ ಮಠ ನಿರ್ಮಾಣವಾಯಿತು. ಇವರ ಪವಾಡಗಳನ್ನು ಕುರಿತು ನಾಟಕಗಳು ರಚನೆಯಾಗಿವೆ. ಅಲ್ಲದೆ ಪ್ರದೇಶದಲ್ಲಿ ಅವುಗಳನ್ನು ಆಡಿ ತೋರಿಸುತ್ತಿದ್ದುದರಿಂದ ಜನಮನದಲ್ಲಿ ಅಚ್ಚಳಿಯದೆ ಉಳಿದಿದೆ. ನಂಜುಂಡೇಶ್ವರ ಶಾಖಾ ಮಠಗಳು ಕರ್ಜಗಿ, ಮೋಟೆಬೆನ್ನೂರ, ಹಿರೇಹಳ್ಳಿಗಳಲ್ಲಿ ನಿರ್ಮಾಣಗೊಂಡಿವೆ.

ದರ್ಗಾ

ಮಠ ಮತ್ತು ದರ್ಗಾಗಳಲ್ಲಿ ಕೆಲವು ಧಾರ್ಮಿಕ ವಿಧಿವಿಧಾನಗಳನ್ನು ಬಿಟ್ಟರೆ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸಾಮ್ಯತೆಯನ್ನು ಕಾಣಬಹುದು. ಮುಸ್ಲಿಂ ಧರ್ಮವು ಭಾರತಕ್ಕೆ ಪಾದಾರ್ಪಣೆ ಮಾಡಿದ್ದು ಉತ್ತರದ ನಾಡಿನಲ್ಲಿ. ಇಸ್ಲಾಂ ದೊರೆಗಳು ಭಾರತದ ಉತ್ತರದಿಂದ ದಕ್ಷಿಣದ ಗುಲ್ಬರ್ಗ, ವಿಜಾಪುರ, ಬೀದರ್ ಮೊದಲಾದ ಸ್ಥಳಗಳನ್ನು ಆಡಳಿತ ಕೇಂದ್ರಗಳನ್ನಾಗಿ ಮಾಡಿಕೊಂಡು ಅರಬ್ ರಾಷ್ಟ್ರದಿಂದ ಧರ್ಮಗುರುಗಳನ್ನು ಕರೆಯಿಸಿ, ಇಸ್ಲಾಂ ಧರ್ಮವು ಹರಡುವಂತೆ ಮಾಡಿದರು. ಧರ್ಮ ಪ್ರಚಾರಕ್ಕೆಂದು ಬಂದ ಮುಸ್ಲಿಂ ಮೌಲ್ವಿಗಳು ಇಡೀ ದೇಶಾದ್ಯಂತ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಿದರು. ಅದು ಹಾನಗಲ್ಲು ನಾಡಿಗೆ ಹೊರತಾಗಿರಲಿಲ್ಲ. ಸಮೀಪದ ಸವಣೂರು, ನವಾಬರ ಆಡಳಿತಕ್ಕೊಳಪಟ್ಟಿದ್ದರಿಂದ ಅನೇಕ ಮೌಲ್ವಿಗಳಿಗೆ ಆಶ್ರಯ ತಾಣವಾಗಿತ್ತು. ಅದರ ಪರಿಣಾಮ ಹಾನಗಲ್ಲು ಪ್ರದೇಶದ ಅನೇಕ ಗ್ರಾಮಗಳಲ್ಲಿ ಮೌಲ್ವಿಗಳು ತಂಗಿ ಪವಾಡಗಳ ಮೂಲಕ ಜನರ ಮನಸ್ಸನ್ನು ತಮ್ಮ ಕಡೆಗೆ ಸೆಳೆಯುವಂತೆ ಮಾಡಿದರು. ಹೀಗಾಗಿ ಹಾನಗಲ್ಲು ಪಟ್ಟಣ, ಅಕ್ಕಿಆಲೂರ, ತಿಳವಳ್ಳಿ, ಆಡೂರ, ಬೆಳಗಾಲಪೇಟೆ, ಶಿರಗೋಡ, ಬೊಮ್ಮನಹಳ್ಳಿ, ಕಲ್ಲಾಪುರ, ನರೇಗಲ್ಲ ಮೊದಲಾದ ಗ್ರಾಮಗಳಲ್ಲಿ ಹೆಚ್ಚಿನ ಜನರು ಮುಸ್ಲಿಂ ಧರ್ಮದ ಕಡೆಗೆ ವಾಲಿ ಧರ್ಮದ ಅನುಯಾಯಿಗಳಾಗಿದ್ದಾರೆ. ಧರ್ಮ ಪ್ರಚಾರಕ್ಕೆಂದು ಬಂದ ಮೌಲ್ವಿಗಳು ಅಲ್ಲಿಯೇ ಮರಣ ಹೊಂದಿದಾಗ, ಅವರಿಗೆ ಕಟ್ಟಿಸಿದ ಗೋರಿಗಳು ದೇವರ ಕಲ್ಪನೆಯಲ್ಲಿ ಪೂಜೆಗೊಳ್ಳುತ್ತಿವೆ. ಅಲ್ಲದೆ ಅವುಗಳ ಚಟುವಟಿಕೆಗಳು ಮಠಗಳಿಂದ ಭಿನ್ನವಾಗಿಲ್ಲ. ಪ್ರತಿ ವರ್ಷವೂ ಉರುಸನ್ನು (ಜಾತ್ರೆ) ಮಾಡುತ್ತ ಗೋರಿಗಳಿಗೆ ಗೌರವ ಸಲ್ಲಿಸುತ್ತಾರೆ. ಅಂತಹ ಪ್ರಸಿದ್ಧ ಉರುಸುಗಳು ಹಾನಗಲ್ಲು ನಾಡಿನಲ್ಲಿ ನಡೆಯುತ್ತವೆ.

ಪೀರಸೈಯದ್ ಸಾಹಾತ್ ಶಾವಲಿ ದರ್ಗಾ

ಹಾನಗಲ್ಲು ಪಟ್ಟಣದ ಪ್ರಸಿದ್ಧ ದರ್ಗಾಗಳಲ್ಲಿ ಇದು ಒಂದು. ಪೀರ ಸೈಯದ್ ಸಾಹಾತ್ ಶಾವಲಿ ಸಮಾಧಿ ಇದೆ. ಅವರು ಮೂಲತಃ ಕಾಶ್ಮೀರಿಯವರು. ತಮ್ಮ ನಾಡಿನಲ್ಲಿ ಶಿಕ್ಷಣ ಮುಗಿಸಿಕೊಂಡು ೧೮ನೆಯ ವಯಸ್ಸಿನಲ್ಲಿ ಮಹತಾಜ್ ಬಾನುವಿನ ಜೊತೆಗೆ ಲಗ್ನವಾಯಿತು. ನಂತರ ಅವರಿಗೆ ವರ್ಷಗಳಲ್ಲಿ ತಾಹಿರ್ ಬಾನು ಎಂಬ ಹೆಣ್ಣು ಮಗು ಜನಿಸಿತು. ಅದು ತಿಂಗಳಲ್ಲಿ ತೀರಿಕೊಂಡಿತು. ನಂತರ ತಮ್ಮ ತಾಯಿಯ ಮರಣದ ನಂತರ ಜೀವನದಲ್ಲಿ ಜಿಗುಪ್ಸೆಗೊಂಡು ಧರ್ಮ ಪ್ರಚಾರಕ್ಕಾಗಿ ಅಜ್ಮೀರಿ ದರ್ಗಾಕ್ಕೆ ಭೇಟಿ ಕೊಟ್ಟರು. ಅಲ್ಲಿಯ ಮೌಲ್ವಿಗಳು ಅವರಿಗೆ ಸುನ್ನಿ, ಹನಪಿ ಪಂಗಡಗಳ ಧಾರ್ಮಿಕ ಪ್ರಚಾರಕ್ಕಾಗಿ ದಕ್ಷಿಣ ಭಾಗಕ್ಕೆ ಹೋಗಲು ತಿಳಿಸಿದರು. ಅಲ್ಲಿಂದ ಹೊರಟು ಹಾನಗಲ್ಲು ನಗರಕ್ಕೆ ಬಂದು, ಅಲ್ಲಿಂದ ಅಕ್ಕಿಆಲೂರಿಗೆ ಹೋಗಿ ಕೆಲವು ತಿಂಗಳುಗಳವರೆಗೆ ಅಲ್ಲಿಯೇ ಇದ್ದು, ಅನೇಕ ಕಾಶ್ಮೀರಿ ವ್ಯಕ್ತಿಗಳನ್ನು ಭೇಟಿಯಾಗುತ್ತಾರೆ. ಅವರ ಅಣ್ಣನಾದ ಹಜರತ್ ಸೈಯದ್ ಯೂಸುಫ್ ಷಾ ಮತ್ತು ಮಕ್ಕಳಾದ ಹಜರತ್ ಪಪೀರ ಸೈಯದ್ ಮುಜಫರ್ ಷಾ ಖಾದ್ರಿಯವರೊಂದಿಗೆ ಇವರನ್ನು ಕರೆದುಕೊಂಡು ಹೋಗಲು ಬರುತ್ತಾರೆ. ಆದರೆ ಅವರ ಅಣ್ಣನ ಜೊತೆಗೆ ಹೋಗದೆ ಮೈಸೂರಿನ ಹತ್ತಿರ ಮಾಬಳ್ಳಿಗೆ ಹೋಗುತ್ತಾರೆ. ಕೆಲವು ದಿನಗಳ ನಂತರ ಮತ್ತೆ ಮರಳಿ ಹಾನಗಲ್ಲಿಗೆ ಬಂದು ಪ್ರಮುಖ ವ್ಯಕ್ತಿಗಳ ಸಹಾಯದಿಂದ ಜೀರ್ಣಾವಸ್ಥೆಗೆ ಬಂದಿದ್ದ ಕೊರಚಗೇರಿ ಮಸೀದಿ ಕೆಡವಿ ಕಟ್ಟಿಸುತ್ತಾರೆ. ೧೯೫೨ರಲ್ಲಿ ನಾಡಿನಾದ್ಯಂತ ಸಂಚರಿಸಿ ಧಾರ್ಮಿಕ ಭಾಷಣ ಮಾಡಿ ಧರ್ಮ ಪ್ರಚಾರ ಮಾಡುತ್ತಾರೆ. ಅದರ ಜೊತೆಗೆಅರಷಾದಪತ್ರಿಕೆಯನ್ನು ಬಿಡುಗಡೆ ಮಾಡುತ್ತಾರೆ. ಅಲ್ಲದೆ ಇವರು ಬರಗಾಲದ ವೇಳೆಯಲ್ಲಿ ಮಳೆ ಬರುವಂತೆ ಮಾಡುವುದು, ಸಂತಾನ ಪ್ರಾಪ್ತಿ, ಮೈಗಂಟಿಕೊಂಡಿದ್ದ ಪಿಶಾಚಿಯನ್ನು ಓಡಿಸುವುದು ಮೊದಲಾದ ಪವಾಡಗಳನ್ನು ಮಾಡಿರುವ ನಿದರ್ಶನಗಳಿವೆ. ಇವರ ಹೆಸರಿನ ಮೇಲೆ ಪ್ರತಿ ವರ್ಷ ಸಫರೆ ತಿಂಗಳಲ್ಲಿ (ಮೊಹರಂ ತಿಂಗಳ ನಂತರ ೨೩ನೆಯ ದಿನಕ್ಕೆ) ಉರುಸು ನಡೆಯುತ್ತದೆ. ಒಂದು ವಾರದವರೆಗೆ ನಡೆಯುವ ಉರುಸುಗಳಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಹಜರತ್ ಸೈಯದ್ ಮರ್ದನೆ ಗೈಬ್ ದರ್ಗಾ

ಇದನ್ನು ಮಜರೆ ದರ್ಗಾ ಎಂದು ಕರೆಯುತ್ತಾರೆ. ಹಜರತ್ ಸೈಯದ್ ಮರ್ದನೆ ಗೈಬ್ ಅರಬಸ್ಥಾನದಿಂದ ಬಂದವರು. ಸ್ಥಳಕ್ಕೆ ಬರುತ್ತಿದ್ದಾಗ, ದಟ್ಟವಾದ ಅರಣ್ಯದಲ್ಲಿ ಬಾಯಾರಿಕೆಯಾಯಿತು. ಇಲ್ಲಿಗೆ ಸುಮಾರು ೨೩ ಕಿ.ಮೀ. ದೂರದಲ್ಲಿ ದನ ಕಾಯುವ ಹುಡುಗರಿಬ್ಬರನ್ನು ಕರೆದು, ನೀರು ಎಲ್ಲಿ ಸಿಗುತ್ತದೆ ಎಂದು ಕೇಳಿದರು. ಅವರು, ನೀವು ಎಲ್ಲಿಂದ ಬಂದಿರುವಿರೊ ಅಷ್ಟೆ ದೂರದಲ್ಲಿ ಹೋಗಿ ಜಾಗ ಸಿಗುತ್ತದೆ ಎಂದರು. ಅಲ್ಲಿಂದ ದರ್ಗಾ ಇರುವ ಸ್ಥಳಕ್ಕೆ ಬಂದು ನೀರು ಕಾಣದಾಗಿ, ಭರ್ಚಿಯಿಂದ ನೆಲಕ್ಕೆ ತಿವಿದಾಗ ನೀರಿನ ಬುಗ್ಗೆ ಹರಿಯಿತು. ದರ್ಗಾದ ಎಡಭಾಗದ ಮೂಲೆಯಲ್ಲಿ ನೀರಿನ ಬಾವಿ ಇಂದಿಗೂ ಇದೆ. ಅಲ್ಲಿಯ ನೀರನ್ನು ಹೆಣ್ಣು ಮಕ್ಕಳು ಮುಟ್ಟುವ ಹಾಗಿಲ್ಲ. ಮುಟ್ಟಿದರೆ ಹುಳುಗಳಾಗುತ್ತವೆಂಬ ನಂಬಿಕೆ. ದನಗಳಿಗೆ ಉಣ್ಣೆ ಹತ್ತಿದಾಗ ಬಾವಿಯ ನೀರನ್ನು ಚಿಮುಕಿಸಿದರೆ ಹೋಗುತ್ತದೆ ಎಂಬ ನಂಬಿಕೆ ಇಂದಿಗೂ ರೂಢಿಯಲ್ಲಿದೆ. ದರ್ಗಾದ ಉರುಸು ಪ್ರತಿ ವರ್ಷ ರಜವಿ ತಿಂಗಳ ೧೧ರಿಂದ ೧೬ನೆಯ ತಾರೀಖಿನ ಅವಧಿಯೊಳಗೆ ನಡೆಯುತ್ತದೆ. ಗೈಬ್ ಗೋರಿಯ ಪಕ್ಕದಲ್ಲಿ ದೊಡ್ಡ ದೊಡ್ಡ ಗೋರಿಗಳಿವೆ. ಅವು ಅವರ ಶಿಷ್ಯರ ಗೋರಿಗಳಿರಬಹುದು. ಹಾನಗಲ್ಲಿನಲ್ಲಿ ಇನ್ನೊಂದು ಮಕಬೂಲಹ್ಮದ್ ಷಾ ಖಾದ್ರಿಯವರ ಉರುಸು ನಡೆಯುತ್ತದೆ.

ರಾಜೇಭಾಗ ಸವಾರ್ ದರ್ಗಾ

ಹಾನಗಲ್ಲು ನಾಡಿನ ಪ್ರಸಿದ್ಧ ಉರುಸುಗಳಲ್ಲಿ  ಒಂದಾದ ಇದು ಪ್ರತಿವರ್ಷ ತಿಳವಳ್ಳಿಯಲ್ಲಿ ನಡೆಯುತ್ತದೆ. ಅದರಲ್ಲಿ ಸರ್ವ ಧರ್ಮದವರೂ ಪಾಲ್ಗೊಳ್ಳುವುದು ವಿಶೇಷ. ಹರಕೆ ಕೊಟ್ಟು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡು ಬರುತ್ತಾರೆ. ಸವಾರ್ ರು ಅನೇಕ ಪವಾಡಗಳನ್ನು ಮಾಡಿ ಭಾಗದ ಜನರ ಆಸೆ ಆಕಾಂಕ್ಷೆಯನ್ನು  ಈಡೇರಿಸಿದರೆಂಬ ಉದಾಹರಣೆಗಳು ದೊರೆಯುತ್ತವೆ. ಹೀಗಾಗಿ ಸವಾರ್ ದರ್ಗಾ ಭಾಗದ ಜನರ ನಂಬಿಕೆಗಳಿಗೆ ಒಳಗಾಗಿದೆ.

ಇನ್ನೂ ಹಾನಗಲ್ಲಿನಲ್ಲಿ ಮೆಹಬೂಬ ಸುಭಾಹಾನಿ ಉರುಸು, ಶಾಬುಶಾವಲಿ ಉರುಸು, ಶಾಲುದ್ದೀನ್ ಶಾವಲಿ ಉರುಸು, ಶಿರಗೋಡಿನಲ್ಲಿ ಸೈಯದ್ ಚಮನಶಾವಲಿ ಉರುಸು ಮತ್ತು ಮತಂಗಿಯಲ್ಲಿ ಕರಾರ್ ಶಾವಲಿ ಉರುಸು ಮೊದಲಾದವುಗಳು ಪ್ರತಿವರ್ಷ ನಡೆಯುತ್ತವೆ. ಮೌಲ್ವಿಗಳಿಗೆ ಶರಣರೆಂದು ಕರೆಯುತ್ತಾರೆ. ಅಕ್ಕಿಆಲೂರಿನಲ್ಲಿ ಕಾಶ್ಮೀರ, ಅರಬಸ್ಥಾನದಿಂದ ಅನೇಕ ಮೌಲ್ವಿಗಳು ಬಂದು ಧರ್ಮ ಪ್ರಚಾರ ಮಾಡಿ ಮಹಾಪುರುಷರಾಗಿ ದೈವತ್ವಕ್ಕೇರಿದ್ದಾರೆ. ಇವರ ಗೋರಿಗಳಿಗೆ ಪೂಜಾ ವಿಧಿವಿಧಾನಗಳನ್ನು ಅನೇಕ ಭಕ್ತಾದಿಗಳು ನೆರವೇರಿಸುತ್ತಿರುವುದನ್ನು ಕಾಣಬಹುದು. ಕಲ್ಲಾಪುರದಲ್ಲಿ ಹಜರತ್ ಮಹಬೂಬ ಸುಬಾನಿ ದರ್ಗಾ, ಅದೆ ಹೆಸರಿನ ಇನ್ನೊಂದು ದರ್ಗಾ ತಿಳವಳ್ಳಿಯಲ್ಲಿದೆ. ಅಲ್ಲದೆ ತಿಳವಳ್ಳಿ ಮತ್ತು ಶಿರಗೋಡಿನಲ್ಲಿ ಚಮನಕಾವಲಿ ಎಂಬ ಹೆಸರಿನ ದರ್ಗಾಗಳು ಕೂಡಾ ಇವೆ.

ಹೀಗೆ ಹಾನಗಲ್ಲು ನಾಡಿನಲ್ಲಿ ಅನೇಕ ದರ್ಗಾಗಳಲ್ಲಿ ಉರುಸು, ಪೂಜೆಪುನಸ್ಕಾರಗಳು ನಡೆಯುತ್ತವೆ. ಮಠಗಳಿಗೆ ಪರ್ಯಾಯವಾಗಿ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂಧಿಸುತ್ತ, ಅಭಿವೃದ್ಧಿಯತ್ತ ಮುಖಮಾಡಿವೆ.

ಚರ್ಚು

ಹಾನಗಲ್ಲು ನಗರದಲ್ಲಿ ಕ್ರೈಸ್ತ ಧರ್ಮದವರು ವಾಸವಾಗಿರುವುದು ಅಲ್ಪ ಸಂಖ್ಯೆಯಲ್ಲಿ. ಆದರೆ ಅವರ ಕಾರ್ಯ ಸಾಧನೆ ಅಪಾರ. ರೋಶನಿ ಚರ್ಚ(ದೇವಾಲಯ)ನ್ನು ನಿರ್ಮಿಸಿ, ಆಮೂಲಕ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳನ್ನು ಪ್ರಾರಂಭಿಸಿ ಹಿಂದುಳಿದ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ಒದಗಿಸಲಾಗುತ್ತದೆ. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ, ಸಾಮಾಜಿಕ ಸಮಸ್ಯೆಗಳ ನಿವಾರಣೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿ ವರ್ಷವೂ ಡಿಸೆಂಬರ್ ತಿಂಗಳಿನಲ್ಲಿ ಕ್ರಿಸ್ ಮಸ್ ನ್ನು ಬಹು ವಿಜೃಂಭಣೆಯಿಂದ ಆಚರಿಸುತ್ತಾರೆ.

ಹಾನಗಲ್ಲು ಪರಿಸರ ಅನೇಕ ಧರ್ಮಗಳ ತವರೂರು. ಆಯಾ ಧರ್ಮಗಳಿಗೆ ಸಂಬಂಧಿಸಿದ ಮಠ, ದರ್ಗಾ, ಚರ್ಚು ಇತ್ಯಾದಿಗಳು ಸ್ಥಾಪನೆಯಾಗಿ, ಮೂಲಕ ಆಯಾ ಧಾರ್ಮಿಕ ಕಾರ್ಯಗಳ ಜೊತೆಗೆ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸ್ಪಂದಿಸುತ್ತಿವೆ.