ಒಂದು ಪ್ರದೇಶದ ಸಮಗ್ರ ಅಧ್ಯಯನ ಕೈಗೊಳ್ಳುವುದರ ಮೂಲಕ ಪ್ರದೇಶದ ಸತ್ಯನಿಷ್ಠ ಹಾಗೂ ಪೂರ್ಣರೂಪದ ಚರಿತ್ರೆಯನ್ನು ಕಟ್ಟಲು ಸಾಧ್ಯವಿದೆ. ಆದರೆ ಇಲ್ಲಿಯವರೆಗೆ ಇತಿಹಾಸ ರಚನಾಕಾರರು ಲಿಖಿತ ಪರಂಪರೆಯನ್ನೇ ಅವಲಂಬಿಸಿ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ. ಇದರಿಂದಾಗಿ ಬಹುಸಂಖ್ಯಾತ ಜನಸಮುದಾಯಗಳ ಭಾವನೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರಿಂದ ಇತಿಹಾಸದಲ್ಲಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಕೊರತೆಯನ್ನು ತುಂಬಲು ಇಂದು ಮೌಖಿಕ ಪರಂಪರೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದು ಸಂತಸದ ಸಂಗತಿ. ಮೌಖಿಕ ಪರಂಪರೆಯ ಸಾಮಗ್ರಿಗಳಲ್ಲಿ ಕಾಲ್ಪನಿಕತೆ ಸೇರಿಕೊಂಡಿರಬಹುದು. ಹೆಸರುಗಳು ವ್ಯತ್ಯಾಸಗೊಂಡಿರಬಹುದು. ಆದರೆ ಬಹುಜನರ ನೋವುನಲಿವುಗಳು, ಆಸೆಆಕಾಂಕ್ಷೆಗಳು ಬೇರೆ ಬೇರೆ ರೂಪಗಳಲ್ಲಿ ದಾಖಲಾಗಿ ಪ್ರಸರಿಸುತ್ತಾ ಇಂತಹ ಕಂಠಸ್ಥ ಪರಂಪರೆಯಾಗಿದೆ ಎನ್ನುವುದನ್ನು ಮರೆಯಲಾಗದು.

[1]

ಜನಪದರಲ್ಲಿ ಪುರಾಣ, ಕಥೆ, ಕಾವ್ಯ, ಐತಿಹ್ಯಗಳುಂಟು. ಅವುಗಳನ್ನೇ ಅವರು ಇತಿಹಾಸವೆಂದು ತಿಳಿದುಕೊಂಡಿದ್ದಾರೆ. ಮತ್ತು ಅದನ್ನೆ ಅವರು ನಿರೂಪಿಸುತ್ತಾರೆ. ‘ಇತಿಹಾಸ ಸಂಶೋಧಕರಂತೆ ಜಾನಪದ ನಿರೂಪಕರಿಗೆ ದಾಖಲೆಗಳು ಬೇಕಾಗಿಲ್ಲ. ಅವರು ನಿರೂಪಿಸುವುದನ್ನೇ ಸತ್ಯವೆಂದು ನಂಬಿ ಅದನ್ನೆ ಪ್ರತಿಪಾದಿಸುತ್ತಾರೆ. ಪ್ರತಿಯೊಂದು ಪ್ರದೇಶದ ಮೌಖಿಕ ಪರಂಪರೆಯಲ್ಲಿರುವ ಪುರಾಣ, ಕಥೆ, ಕಾವ್ಯದ ಅಧ್ಯಯನಕ್ಕೆ ತೊಡಗಿದಾಗ, ಪ್ರದೇಶದ ಚರಿತ್ರೆಯ ಇನ್ನೊಂದು ಮುಖದ ಪರಿಚಯವಾಗುತ್ತದೆ.’[2] ಅಲ್ಲದೆ ಇತಿಹಾಸ ರಚನಾಕಾರರನಿಗೆ ಪರಂಪರೆ ತೋರದ ಅದೆಷ್ಟೋ ಸಂಗತಿಗಳನ್ನು ಮೌಖಿಕ ಸಾಹಿತ್ಯ ತೋರಿಸುತ್ತದೆ. ಹೀಗಾಗಿ ಮೌಖಿಕ ಸಾಹಿತ್ಯವನ್ನು ಬಳಸಿಕೊಳ್ಳುವುದರ ಮೂಲಕ ಇತಿಹಾಸವನ್ನು ಇನ್ನೂ ಸತ್ಯದ ನಿಖರತೆಯತ್ತ ಹೊರಳಿಸಲಿಕ್ಕೆ ಸಾಧ್ಯವಾಗುತ್ತದೆ ಅಥವಾ ಕಳಚಿಹೋದ ಇತಿಹಾಸದ ಕೊಂಡಿಯಾಗಿ ಜನಪದ ಸಾಹಿತ್ಯವನ್ನು ಬಳಸಿಕೊಳ್ಳಲು ಸಹಾಯಕವಾಗುತ್ತದೆ. ಕುಮ್ಮಟದುರ್ಗದಂತಹ ಪಾಳೆಯಗಾರರ ಹಾಗೂ ಕಿತ್ತೂರಿನಂತಹ ಸಂಸ್ಥಾನಗಳ ಇತಿಹಾಸ ರಚನಾ ಸಂದರ್ಭಗಳಲ್ಲಂತೂ ಬಹುಪಾಲು ಮೌಖಿಕ ಆಕರಗಳೇ ಆಧಾರವಾಗಿವೆಯೆಂಬುದನ್ನು ಇಲ್ಲಿ ಗಮನಿಸಬೇಕು. ಅದೇ ರೀತಿ ಹಾನಗಲ್ಲು ಪರಿಸರದಲ್ಲಿ ಸಂಗೊಳ್ಳಿ ರಾಯಣ್ಣನ ನಂತರದಲ್ಲಿ ಕಂಡುಬರುವ ಕನ್ನೇಶ್ವರರಾಮ ಪ್ರಾಯಶಃ ನಾಡಿನ ಜನರ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟಗಾರನಾಗಿ ಹೋರಾಡಿದ ಅನೇಕ ಘಟನೆಗಳನ್ನು ಮೌಖಿಕ ಸಾಹಿತ್ಯ ಒಳಗೊಂಡಿದೆ. ಮೌಖಿಕ ಆಕರಗಳ ಸಂಗ್ರಹ ಹಾಗೂ ಅಧ್ಯಯನ ಇನ್ನೂ ಆಗಬೇಕಾಗಿದೆ.

ಹಾನಗಲ್ಲನ್ನು ಕುರಿತ ಜನಪದ ಸಾಹಿತ್ಯ ಸಮೃದ್ಧಿಯಿಂದ ಕೂಡಿದೆ. ಅದನ್ನು ಅಧ್ಯಯನಕ್ಕೆ ಅಳವಡಿಸಿ ವಿಶ್ಲೇಷಿಸಿದಾಗ, ಕಳಚಿಹೋದ ಐತಿಹಾಸಿಕ ಕೊಂಡಿಗಳು ಸಿಗುತ್ತವೆ. ಅಲ್ಲದೆ ಹಾನಗಲ್ಲಿನ ಇನ್ನೊಂದು ಚರಿತ್ರೆಯೂ (ಮೌಖಿಕ ಚರಿತ್ರೆ) ದೊರೆಯುತ್ತದೆ. ನಿಟ್ಟಿನಲ್ಲಿ ಜನಪದ ಗೀತ ಸಾಹಿತ್ಯ, ಕಥೆ, ಪುರಾಣ ಹಾಗೂ ಐತಿಹ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳನ್ನು ನಿಟ್ಟಿನಲ್ಲಿ ಕೆಲವು ದೃಷ್ಟಾಂತಗಳ ಮೂಲಕ ವಿಶ್ಲೇಷಿಸಲಾಗಿದೆ.

ಮೂಲತಃ ಹಾನಗಲ್ಲಿನಲ್ಲಿರುವ ದ್ಯಾಮವ್ವನನ್ನು ಕುರಿತಂತೆ, ಕಳ್ಳರು ಅವಳ ಮೈ ಮೇಲೆ ತೊಡಿಸಿರುವ ಆಭರಣಗಳ ಆಸೆಯಿಂದ ಅವಳನ್ನೇ ಕಳವು ಮಾಡಿಕೊಂಡು ಹೋಗಿ, ಆಭರಣಗಳನ್ನೆಲ್ಲಾ ತೆಗೆದುಕೊಂಡು, ದ್ಯಾಮವ್ವನನ್ನು ಶಿರಸಿಯ ಕೆರೆಯಲ್ಲಿ ಚೆಲ್ಲಿ ಹೋದರಂತೆ. ಆಗ ದ್ಯಾಮವ್ವ ದೇವತೆಯು ಶಿರಸಿಯಲ್ಲಿರುವ ನಾಡಗೇರ ಮನೆತನದವರ ಕನಸಿನಲ್ಲಿ ಬಂದು, “ನಾನು ಕೆರೆಯಲ್ಲಿದ್ದೇನೆ ತೆಗೆದುಕೊಂಡು ಹೋಗಿರೆಂದುತಿಳಿಸಿದಳಂತೆ. ಆಗ ಕೆರೆಯ ನೀರು ಖಾಲಿ ಮಾಡಿ ನೋಡಿದಾಗ, ಅಲ್ಲಿ ದ್ಯಾಮವ್ವಳಿದ್ದಳಂತೆ. ಆಗ ಅವಳನ್ನು ತಂದು ಮಾರಿಕಾಂಬ ಎಂಬ ಹೆಸರಿನಿಂದ ಶಿರಸಿಯಲ್ಲಿ ಪ್ರತಿಷ್ಠಾಪನೆ ಮಾಡಿದರು ಎಂಬ ಕಥೆಯುಂಟು. ಮುಂದೆ ಹಾನಗಲ್ಲಿನಲ್ಲಿ ಗ್ರಾಮದೇವತೆಯು ಇಲ್ಲದ್ದರಿಂದ ಮತ್ತೊಬ್ಬ ದ್ಯಾಮವ್ವನನ್ನು ಅಲ್ಲಿ ಪ್ರತಿಷ್ಠಾಪನೆ ಮಾಡಿ ಆರಾಧಿಸಲು ಪ್ರಾರಂಭಿಸಿದರು. ಅಲ್ಲದೆ ಮೂಲ ದ್ಯಾಮವ್ವನ ನೆನಪಿಗೋಸ್ಕರ ಆನೆಕೆರೆ ದಂಡೆಯ ಮೇಲೆ ಶಿರಸಿಯ ಮಾರಿಕಾಂಬ ಪಾದಗಟ್ಟಿ ಕಟ್ಟಿ ಪೂಜೆಗೆ ಒಳಪಡಿಸಿದರು. ಹೀಗಾಗಿ ಶಿರಸಿಯ ಮಾರಿಕಾಂಬೆ ಮತ್ತು ಹಾನಗಲ್ಲಿನ ದ್ಯಾಮವ್ವ ಅಕ್ಕತಂಗಿಯರೆಂದು ಜನ ತಿಳಿದಿದ್ದಾರೆ. ಜನಪದ ಲಾವಣಿಯೊಂದು ಸಹ ಅದನ್ನೆ ಖಚಿತಪಡಿಸುತ್ತದೆ.  

            “ಮಾಯಕಾರ್ತಿ ಮಾಯಮಾರಿಗಳಿಬ್ಬರೂ
ಹಾನಗಲ್ಲ ಶಿರಸಿ ಅಮ್ಮನವರುss
ಜಾತ್ರೆಗೊಂದ ಉಡಿಯನು ಕಳಹುವರು
ಜತ್ತಿಯಲ್ಲಿ ಅಕ್ಕತಂಗಿಯರಿವರೂss
ಪ್ರೀತಿಯಲಿ ಬಹುಕಾಲ ನಡೆದವರೂ

ಮೌಖಿಕ ಪುರಾಣ ಒಂದರಲ್ಲಿ ಹಾನಗಲ್ಲಿನ ದ್ಯಾಮವ್ವ ಶ್ರೀ ಬಾಲಗೌರಿ ಎಂಬ ಹೆಸರಿನ ಒಬ್ಬ ಬ್ರಾಹ್ಮಣ ಕನ್ಯೆ. ತಂದೆತಾಯಿಗಳಿಗೆ ಒಬ್ಬಳೆ ಮುದ್ದಿನ ಮಗಳು. ಅವರಿಗೆ ಗಂಡು ಮಕ್ಕಳಿರಲಿಲ್ಲ. ಸುಂದರನಾದ ಮಾದಿಗರಕರಿಯನೆಂಬ ಹುಡುಗನೊಬ್ಬ ಮನೆ ಬಿಟ್ಟು ಬಂದು, ನಾನು ಬ್ರಾಹ್ಮಣ, ನನ್ನ ಹೆಸರು ಕರಿಯಂಭಟ್ಟನೆಂದು ನಂಬಿಸಿ ಬ್ರಾಹ್ಮಣರ ಮನೆಯನ್ನು ಸೇರಿಕೊಂಡ ಮತ್ತು ಮಾದರ ಹುಡುಗನೆಂಬ ಸಂಶಯ ಬರದಂತೆ ನಡೆದುಕೊಂಡ. ಹುಡುಗನ ನಡತೆಯನ್ನು ಮೆಚ್ಚಿ ಹುಡುಗಿ ಆತನನ್ನು ಪ್ರೀತಿಸಿ ವಿವಾಹವಾದಳು. ದಿನಗಳು ಕಳೆದ ಮೇಲೆ ಅವರಿಗೆ ಮಕ್ಕಳಾದವು. ಮಗು ತನ್ನ ತಂದೆಯ ಜೊತೆ ಆತನ ವೃತ್ತಿ ಮಾಡುವಲ್ಲಿಗೆ (ಚಪ್ಪಲಿ ಅಂಗಡಿಗೆ) ಹೋಗಿ ಬರುತ್ತಿತ್ತು. ಮಗು ಒಮ್ಮೆ ಹಿತ್ತಲಲ್ಲಿಯ ಬಾಳೆ ಎಲೆ ತೆಗೆದುಕೊಂಡು ಅದರಿಂದ ಚಪ್ಪಲಿಯನ್ನು ಹೊಲಿಯುತ್ತಿದ್ದುದನ್ನು ತಾಯಿ ನೋಡಿ ಗ್ರಹಿಸಿ, ಗಂಡ ಮಾದರವನೆಂದು ಅರ್ಥೈಸಿ, ಮಗುವನ್ನು ಕೊಲ್ಲಲು ಮುಂದಾದಳು. ಆಗ ಮಗು ತಪ್ಪಿಸಿಕೊಂಡು ಓಣಿಯಲ್ಲಿ ಓಡಿಹೋಯಿತು. ಬೆನ್ನಟ್ಟಿದ ತಾಯಿ ಕಲ್ಲು ಒಗೆದಳು. ಮಗುವಿನ ತಲೆಗೆ ತಾಗಿ ಮಗು ಬಿದ್ದು ಮತ್ತೆ ಎದ್ದು ತಪ್ಪಿಸಿಕೊಂಡಿತು. ಆಗ ತಾಯಿಯ ಕಣ್ಣು ಪತಿಯ ಮೇಲೆ ಹೋಯಿತು. ಆತನನ್ನು ಹುಡುಕುತ್ತಾ ಹೊರಟಳು. ದಾರಿಯಲ್ಲಿ ಸಿಕ್ಕ ಗಂಡನನ್ನು ಅಟ್ಟಿಸಿಕೊಂಡು ಹೋದಳು. ಆತನೂ ತಪ್ಪಿಸಿಕೊಂಡ. ಆಗ ಅವಳು ತಾನು ನಾಯಿ ಮುಟ್ಟಿದ ಗಡಿಗೆ ಎಂಬುದನ್ನು ಅರಿತುಕೊಂಡು ಬೆಂಕಿಗೆ ಆಹುತಿಯಾಗಿ ದೇಹ ತ್ಯಾಗ ಮಾಡಿದಳು. ಬೆಂಕಿಗೆ ಆಹುತಿಯಾಗುವುದಕ್ಕಿಂತ ಪೂರ್ವದಲ್ಲಿ ಅವಳು ಗಂಡನಿಗೆಮುಂದಿನ ಜನ್ಮದಲ್ಲಿ ನಾನು ಮಾರಿಯಾಗಿ ಹುಟ್ಟುತ್ತೇನೆ, ನೀನು ಗೌಡರ ಮನೆಯ ಪಟ್ಟದ ಕೋಣವಾಗಿ ಹುಟ್ಟು, ಸರಿ ಮಧ್ಯರಾತ್ರಿ ನಿನ್ನ ಬಲಿ ತೆಗೆದುಕೊಳ್ಳುತ್ತೇನೆಎಂದು ಹೇಳಿ ಸತ್ತಳಂತೆ. ಅದರಂತೆ ಮುಂದಿನ ಜನ್ಮದಲ್ಲಿ ಅವಳು ದ್ಯಾಮವ್ವಳಾಗಿ ಆತ ಗೌಡರ ಮನೆಯ ಪಟ್ಟದ ಕೋಣವಾಗಿ ಹುಟ್ಟಿ ಬಂದರು. ಕೋಣ ವಯಸ್ಸಿಗೆ ಬಂದ ನಂತರ ದ್ಯಾಮವ್ವ ಕೋಣವನ್ನು ಮಧ್ಯರಾತ್ರಿ ಬಲಿ ತೆಗೆದುಕೊಂಡಳು. ಇದಕ್ಕೂ ಮೊದಲು ಮತ್ತು ನಂತರ ಮಕ್ಕಳ ರೂಪದ ಆಡು, ಕುರಿ, ಕೋಳಿಗಳನ್ನು ಬಲಿ ತೆಗೆದುಕೊಂಡಳು.

ಒಟ್ಟಾರೆ ಗ್ರಾಮದೇವತೆಗೆ ಸಂಬಂಧಪಟ್ಟ ಪುರಾಣ ಕಥೆಯ ಆಶಯವು ಕೆಳವರ್ಗದವರು ಮೇಲುವರ್ಗದ ಸ್ತ್ರೀಯರ ಜೊತೆಗೆ ಯಾವುದೇ ರೀತಿಯ ದೈಹಿಕ ಸಂಪರ್ಕವನ್ನು ಬಯಸಬಾರದೆಂದೂ ಮತ್ತು ವರ್ಣವ್ಯವಸ್ಥೆ ಪರಿಪಾಲನೆಯಲ್ಲಿದ್ದ ಕಾಲದಲ್ಲಿ ಇಂಥ ಘಟನೆಗಳು ಸಮಾಜದಲ್ಲಿ ಜರುಗಬಾರದೆಂಬ ಕಾರಣಕ್ಕೆ ಇಂಥ ಪುರಾಣಗಳು ಸೃಷ್ಟಿಯಾಗಿರಬೇಕು. ಇನ್ನೊಂದು ರೀತಿಯಲ್ಲಿ, ಇದು ಸ್ತ್ರೀ ಪ್ರಾಧಾನ್ಯತೆಯನ್ನು ಮತ್ತು ದಲಿತರ ದಮನೀಯವಾದ ಬದುಕನ್ನು ಚಿತ್ರಿಸುತ್ತದೆ. ಆದರೆ ಮೂಲತಃ ದ್ಯಾಮವ್ವನ ಆರಾಧನೆಯ ಫಲಸಮೃದ್ಧಿಯ ನೆಲೆ ಸಂಕೇತವನ್ನು ಹಾಗೂ ಗ್ರಾಮ ಮತ್ತು ಸಸ್ಯ ರಕ್ಷಣೆಯ ಅಧಿದೇವತೆಯಾಗಿರುವುದನ್ನು ತಿಳಿಸುತ್ತದೆ.

ಜನಪದ ಲಾವಣಿಯೊಂದರಲ್ಲಿ ಹಾನಗಲ್ಲು ಗ್ರಾಮದೇವತೆಯಾದ ದ್ಯಾಮವ್ವಳು ಹಾನಗಲ್ಲಿನ ಸುತ್ತ ಮುತ್ತಲಿನ ಹನ್ನೊಂದು ಹಳ್ಳಿಗೆ ಸಂಬಂಧಪಟ್ಟವಳು. ಮೊದಲು ಹಳೆಕೋಟೆಯಲ್ಲಿದ್ದಳು. ಈಗ ಹೊಸ ಊರಿನಲ್ಲಿ ಅವಳಿಗೆ ಗುಡಿಕಟ್ಟಿ, ಅಲ್ಲಿ ಪೂಜೆ ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಹಳೆಕೋಟೆಯಲ್ಲಿ ದ್ಯಾಮವ್ವಳಿದ್ದಾಗ ಗಡಿ ದುರುಗವ್ವನನ್ನು ಪೂಜಿಸಿ, ಸೀಮೆ ದಾಟಿಸಿ ಬಿಟ್ಟು ಬಂದಿರುತ್ತಾರೆ. ಹಾನಗಲ್ಲಿನ ಮೂರು ಜನ ಪುಂಡರು ವ್ಯಾಪಾರಕ್ಕೆಂದು ಹೊರಟು, ಗಡಿ ದುರುಗವ್ವಳಿದ್ದಲ್ಲಿಗೆ ಬಂದು, ಎತ್ತುಗಳಿಗೆ ನೀರು ಕುಡಿಸಿ, ದುರುಗವ್ವನ ಸತ್ಯ ಪರೀಕ್ಷಿಸಲು, ಅವಳ ಹತ್ತಿರವಿದ್ದ ಎಲ್ಲಾ ದುಡ್ಡನ್ನು ತೆಗೆದುಕೊಂಡು ಕುರಿ ತಂದು ತಿನ್ನುತ್ತಾರೆ. ದೇವಿಯ ಹಣ ತೆಗೆದುಕೊಂಡು ಕುರಿ ತಿಂದಿದ್ದರಿಂದ ಅವರ ಮನಸ್ಸಿಗೆ ಕಸಿವಿಸಿಯಾಗಿ, ಅವರು ದೇವತೆಗೆ ಒಂದು ಚೀಲ ಉಪ್ಪನ್ನು ತಂದುಕೊಡುತ್ತೇವೆಂದು ಬೇಡಿಕೊಂಡು ವ್ಯಾಪಾರಕ್ಕೆ ಹೋಗುತ್ತಾರೆ. ಅಲ್ಲಿಂದ ಮರಳಿ ಬರುವಾಗ ಆಯಾಸವನ್ನು ಕಳೆಯುವಲ್ಲಿ, ಮಲಗಿದ ಪುಂಡರ ಕನಸಿನಲ್ಲಿ ದೇವತೆಯು ಬಂದು, ತನ್ನ ಕಾಣಿಕೆಯನ್ನು ಕೇಳಿದರೂ ಅವರು ಮನಸ್ಸಿಗೆ ಹಚ್ಚಿಕೊಳ್ಳದೇ ಊರಿಗೆ ಹಿಂತಿರುಗಿ ಬಂದರು. ಆಗ ದುರುಗವ್ವ

            ಹೇಳಿ ಕೇಳಿ ರಾತ್ರಿ ಸಾರಿ ಹೊಕ್ಕಳು ಆರುತಾಸಿನಾಗ
ಮಲಗಿಸಿದ ಆಸಿಗೆಯ ಮ್ಯಾಲ
ಮುರಿದಳು ಕುತ್ತಿಗೆ ಮೂವರಿಗೆss
ಮುತ್ತಿಗೆ ಹಾಕ್ಯಾಳು ಊರಿಗೆ

ಹೀಗೆ ದುರುಗವ್ವ ಸಿಟ್ಟಿನಿಂದ ಮನೆ ಹೊಕ್ಕು ಮೂರು ಜನರನ್ನು ಬಲಿ ತೆಗೆದುಕೊಂಡಳು. ನಂತರ ಓಣಿ ಓಣಿಗೆ ದ್ಯಾಮವ್ವ ಹೊಕ್ಕು ಹೆಂಗಳೆಯರು ಮಕ್ಕಳೆನ್ನದೆ ಬಲಿ ತೆಗೆದುಕೊಳ್ಳುತ್ತಾಳೆ.

            ಮಕ್ಕಳ ಮಾರಿ ನೋಡತ ನಿಂತಾರ ಹೌಹಾರಿ
ನೋಡಿ ಅಳತಾರೋ ಮಕ್ಕಳನ
ಬರಲಿಲ್ಲ ದುರುಗವ್ವಗ ಕರುಣಾss
ಹುಡುಕುತ ಹೊರಟಾಳು ಓಣಿ ಓಣಿಯನ

ಸರಕಾರಿ ವೈದ್ಯರನ್ನು ಕರೆಸಿ ಉಪಚರಿಸಿದರೂ ಫಲ ನೀಡಲಿಲ್ಲ. ಬಹುಪಾಲು ಜನ ಸತ್ತರು. ಒಮ್ಮೊಮ್ಮೆ ಸುಮಾರು ಮೂವತ್ತೆಂಟು ಹೆಣಗಳನ್ನು ಒಂದೇ ತಗ್ಗಿನಲ್ಲಿ ಹಾಕಿ ಮುಚ್ಚುವ ಪ್ರಸಂಗವು ಬಂದು ಹೋಗುತ್ತದೆ. ಸರಿಯಾಗಿ ಹುಗಿಯಲಿಕ್ಕಾಗದಿದ್ದಾಗ ನಾಯಿನರಿಗಳು ಹಡ್ಡಿ ತಿನ್ನುತ್ತವೆ. ಸಾವಿನ ಸಂಖ್ಯೆ ಹೆಚ್ಚಾಗುತ್ತ ಹೋಗುತ್ತದೆ. ಊರಿನ ಜನಸಂಖ್ಯೆ ಬಹುಪಾಲು ಕಡಿಮೆಯಾಗುತ್ತದೆ. ಆಗ ಜನ ಸಾವು ನಿಲ್ಲದಿದ್ದನ್ನು ಕಂಡು ಊರಿಗೆ ಬೆಂಕಿ ಹಚ್ಚುತ್ತಾರೆ. ಮುಂದೆ ಹಕ್ಕಿ ಶಕುನ ಹೇಳುವವ, ಗಡಿ ದುರಗವ್ವನ ದುಡ್ಡು ತೆಗೆದುಕೊಂಡ ಕಥೆ ಹೇಳಿದಾಗ, ಜನ ಅವಳಿಗೆ ಕುರಿ, ಕೋಳಿ ಬಲಿಕೊಡುತ್ತಾರೆ. ಆಗ ದುರುಗವ್ವ ಶಾಂತಳಾಗಿ ಹಾನಗಲ್ಲು ಜನರಿಗೆ ಅಭಯ ಹಸ್ತ ನೀಡುತ್ತಾಳೆ. ದ್ಯಾಮವ್ವನ ಹೇಳಿಕೆಯಂತೆ ನಲವತ್ತು ವರ್ಷಗಳಿಂದ ನಿಂತ ಜಾತ್ರೆ ಮತ್ತೆ ಪ್ರಾರಂಭವಾಗುತ್ತದೆ. ತೇರು ಕಟ್ಟಿ ಅಕ್ಕ ಶಿರಸಿಯ ಮಾರಿಕಾಂಬೆಯನ್ನು ಜಾತ್ರೆಗೆ ಕರೆಸಿ, ಜಾತ್ರೆ ಪ್ರಾರಂಭ ಮಾಡಲಾಯಿತು. ಈಗ ಜಾತ್ರೆಯು ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ ಎಂಬ ಕಥೆಯನ್ನು ಲಾವಣಿಯು ತಿಳಿಸುತ್ತದೆ.

ಗ್ರಾಮದೇವತೆ ಅಥವಾ ಗಡಿ ದೇವತೆಗಳು ಊರನ್ನು ಕಾಯುವ, ಊರಿನ ಜನರನ್ನು ರಕ್ಷಿಸುವ ಬಹು ಮುಖ್ಯವಾದ ಹೊಣೆಯನ್ನು ಹೊತ್ತಿವೆ ಎಂದು ಜನರು ನಂಬಿಕೊಂಡು ಬಂದಿದ್ದಾರೆ. ದೇವತೆಗಳು ತಮ್ಮ ಬೇಡಿಕೆಯನ್ನು ಈಡೇರಿಸದಿದ್ದಾಗ, ರೊಚ್ಚಿಗೆದ್ದು ಪ್ಲೇಗು, ಮಾರಿಯಂತಹ ರೋಗಗಳನ್ನು ಹರಡಿಸಿ ಜನರನ್ನು ಕೊಲ್ಲುವ, ಶಾಂತವಾದಾಗ ಹರಡಿದ ರೋಗಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದವುಗಳೆಂದೆ ಜನ ತಿಳಿದುಕೊಂಡಿದ್ದಾರೆ. ನಂಬಿಕೆಗಳಿಂದ ಹಾನಗಲ್ಲಿನ ಜನರೇನೂ ಭಿನ್ನರಾಗಿಲ್ಲವೆಂಬುದು ಮೇಲಿನ ಲಾವಣಿಯಿಂದ ತಿಳಿದು ಬರುತ್ತದೆ.

ಲಾವಣಿಯು ನಲವತ್ತು ವರ್ಷಗಳವರೆಗೆ ಜಾತ್ರೆಯಾಗದೆ ನಿಂತು, ಮತ್ತೆ ಪ್ರಾರಂಭವಾದ ಇತಿಹಾಸವನ್ನು ತಿಳಿಸುತ್ತದೆ. ಅಲ್ಲದೆ ಲಾವಣಿ ತನ್ನ ಒಡಲಲ್ಲಿ ಕೆಳಗಿನ ಅನೇಕ ಐತಿಹಾಸಿಕ ಸತ್ಯಾಂಶಗಳನ್ನು ಇಟ್ಟುಕೊಂಡಿದೆ. ಗಡಿಮಾರಮ್ಮನಿಂದ ಅಥವಾ ಗ್ರಾಮದೇವತೆ ದ್ಯಾಮವ್ವನಿಂದ ಊರ ಜನರು ಸಾಯಲಿಲ್ಲ. ರೋಗದ ಇನ್ನೊಂದು ರೂಪವನ್ನು ಜನ ದೇವತೆಯೆಂದು ಅಥವಾ ಅವಳ ಕೋಪದ ಜ್ವಾಲೆ ಎಂದು ತಿಳಿದಿದ್ದರು. ಹಾನಗಲ್ಲಿನ ಪ್ಲೇಗು ಎಂಬ ಮಹಾಮಾರಿಯನ್ನು ದೇವತೆ ಹರಡಲಿಲ್ಲ, ವ್ಯಾಪಾರಕ್ಕೆಂದು ಹೋದ ಮೂರು ಜನ ಸ್ನೇಹಿತರು ಮರಳಿ ಊರಿಗೆ ಬರುವಾಗ ಪ್ಲೇಗನ್ನು ಹೊತ್ತುಕೊಂಡು ಬರುತ್ತಾರೆ. ಮುಂದೆ ಅದು ಹಂತ ಹಂತವಾಗಿ ಇಡೀ ಊರಿಗೆ ಹರಡುತ್ತದೆ. ಸಾವು ನೋವುಗಳನ್ನು ತಪ್ಪಿಸಲಿಕ್ಕೆ ಆಡಳಿತ ವರ್ಗದವರಿಂದಲೂ ಆಗದಿದ್ದಾಗ, ಕೊನೆಯ ಅಸ್ತ್ರವಾಗಿ (ಪ್ಲೇಗ್ ರೋಗದ ಮೂಲ ಆಶ್ರಯ ತಾಣವಾದ ಇಲಿಗಳನ್ನು ಕೊಲ್ಲಲಿಕ್ಕೆ) ಊರಿಗೆ ಬೆಂಕಿ ಹಚ್ಚುತ್ತಾರೆ. ಅದರ ಪ್ರಯುಕ್ತವಾಗಿಯೇ ಕೋಟೆಯಲ್ಲಿರುವ ಹಾನಗಲ್ಲು ಊರು ಸುಟ್ಟು ಹೋಗಿರಲಿಕ್ಕೆ ಸಾಧ್ಯವಿದೆ. ಇದನ್ನೂ ಕೋಟೆಯಲ್ಲಿ ಭೂ ಉತ್ಖನನ ಮಾಡುವುದರ ಮೂಲಕ ಇನ್ನೂ ಖಚಿತಪಡಿಸಬಹುದುಪ್ರಾಯಶಃ ಕೋಟೆಯಲ್ಲಿದ್ದ ಊರು ಸುಟ್ಟ ಬಳಿಕ ಕೋಟೆಯ ಹೊರಗಡೆ ಊರನ್ನು ಕಟ್ಟಿ ವಾಸಿಸಲು ಪ್ರಾರಂಭಿಸಿದರು. ಅದೇ ಇಂದಿನ ಹಾನಗಲ್ಲು ಆಗಿದೆ. ಕೋಟೆಯ ಒಳಗಡೆ ಮೂಲ ಊರು ಸಂಪೂರ್ಣವಾಗಿ ಹಾಳಾಗಿ, ಅದು ಈಗ ಕೃಷಿ ಭೂಮಿಯಾಗಿದೆ. ಆದರೂ ಕೋಟೆಯ ಒಳಗಡೆ ನಿಟ್ಟಿನ ಅನೇಕ ಕುರುಹುಗಳನ್ನು ಕಾಣಲು ಸಾಧ್ಯವಿದೆ.

ಐತಿಹಾಸಿಕ ದಾಖಲೆಗಳಿಗನುಗುಣವಾಗಿ ೫ನೆಯ ಶತಮಾನದಿಂದಲೇ ಹಾನಗಲ್ಲು ಪ್ರದೇಶ ಪ್ರಸಿದ್ಧಿಗೆ ಬಂದಿತ್ತು. ಅಲ್ಲದೆ ಹಾನಗಲ್ಲಿನ ಕೋಟೆಯ ಪ್ರಸ್ತಾಪವು ಇತಿಹಾಸದಲ್ಲಿ ೧೧ನೆಯ ಶತಮಾನದ ವೇಳೆಗೆ ದೊರೆಯುತ್ತದೆ. ನಾಲ್ಕು ಸುತ್ತಿನ ಮಣ್ಣಿನ ಕೋಟೆ ಅತ್ಯಂತ ದೊಡ್ಡದು ಮತ್ತು ಪ್ರಸಿದ್ಧಿಯನ್ನು ಪಡೆದಿತ್ತು. ಇಂಥ ಬಲಿಷ್ಠ ಕೋಟೆಯನ್ನು ಗೆಲ್ಲುವುದು ಹೊಯ್ಸಳ ವಿಷ್ಣುವರ್ಧನನಿಗೆ ಹೆಮ್ಮೆಯ ವಿಷಯವಾಗಿತ್ತು.[3] ರೀತಿಯ ಐತಿಹಾಸಿಕ ದಾಖಲೆಯಿರುವ ಕೋಟೆಯನ್ನು ಮಹಾಭಾರತದ ಕಾಲದ ವಿರಾಟನ ಕೋಟೆ ಎಂದೇ ಜನ ಕರೆಯುತ್ತಾರೆ. ಹೀಗಾಗಿ ಹಾನಗಲ್ಲು ವಿರಾಟನಗರವಾಗಿತ್ತು (?).

ಅರ್ಜುನ ಜೋಗಿ ಹಾಡಿನಲ್ಲಿ, ಚದುರಂಗ ಕುಸುಮಾಲೆಯರು ಮದುವೆಯಾದ ನಂತರ ೧೨ ವರ್ಷಗಳಾದರೂ ತಮ್ಮ ಪತಿಯಾದ ಅರ್ಜುನನು ಬರದಿರುವುದನ್ನು (ಗಂಡನ ಸುದ್ದಿ ತಮಗಿಲ್ಲವೆಂದು) ರಾಜನಾದ ತಂದೆಗೆ ತಿಳಿಸುತ್ತಾರೆ. ತಮಗೆ ಪತಿಯಿಲ್ಲದಿರುವುದರಿಂದ ಸಮಾಜದ ನಿಂದನೆಗಳಿಂದ ತಮಗಾಗುವ ವೇದನೆಗಳನ್ನು ತಿಳಿಸಿ, ತಂದೆಯಿಂದ ಪ್ರತ್ಯೇಕವಾಗಿರಲು ಅರಮನೆಯನ್ನು ಕಟ್ಟಿಸಿಕೊಂಡು ಅದರ ಉಪ್ಪರಿಗೆಯ ಮೇಲೆ ನಿಂತು ರೀತಿ ಡಂಗುರ ಸಾರುತ್ತಾರೆ.

            “ಉಪ್ಪರಗಿ ಮೇಲ್ಹತ್ತಿ ಡಂಗುರವ ಸಾರ್ಯಾರ
ಅರ್ಜುನನ ಚಿತ್ರ ತದ್ರೂಪ ಹೊಯ್ದವಗ
ಆರೂರುಂಬಳಿ ಕೊಡತೀವೆ[4]

ಜಾಣ ಶಿಲ್ಪಿಯೊಬ್ಬ ಅದನ್ನು ಕೇಳಿ ಅರ್ಜುನನ ಚಿತ್ರ ಬಿಡಿಸಲು ಸಿದ್ಧನಾಗುತ್ತಾನೆ. ಅದಕ್ಕಾಗಿ ಅರ್ಜುನನನ್ನು ನೋಡಲು ಹಾನಗಲ್ಲಿಗೆ ಬರುತ್ತಾನೆ.

            “ಸೆಲ್ಲೆ ಮುಂಡಾಸ ಸುತ್ತಿ ಬತ್ತಲಗುದರಿಯ ಹತ್ತಿ
ಒತ್ತರದಿ ಹಾನಗಲ್ಲ ಪಟ್ಟಣಕ | ನಡೆದಾಗ
ಇಳಿಹೊತ್ತಿಗೆ ಊರ ತಲುಪಿದ[5]

ಹಾನಗಲ್ಲಿಗೆ ಬಂದು ಅರ್ಜುನನನ್ನು ಕಂಡು ಆತನ ಚಿತ್ರವನ್ನು ಬಿಡಿಸಿದ. ಆದರೆ ಇಲ್ಲಿ ಅರ್ಜುನ ೧೨ ವರ್ಷಗಳ ಕಾಲ ಕುಸುಮಾಲೆಯರಿಂದ ಕಣ್ಮರೆಯಾಗಿರುವುದು, ೧೨ ವರ್ಷಗಳ ಕಾಲದ ವನವಾಸವನ್ನು ತಿಳಿಸಿದರೆ, ಶಿಲ್ಪಿಯು ಹಾನಗಲ್ಲಿಗೆ ಬಂದು ಅರ್ಜುನನನ್ನು ಭೇಟಿಯಾಗುವುದು ಅಜ್ಞಾತವಾಸದ ಕೊನೆಯ ದಿನಗಳಲ್ಲಿ ಪಾಂಡವರು ವಿರಾಟನಗರ ಅರಸರ ಆಸ್ಥಾನದಲ್ಲಿದ್ದರೆಂಬುದನ್ನು ಸೂಚಿಸುತ್ತದೆ. ಹೀಗಾಗಿ ಜನಪದ ಕವಿಗೆ ಹಾನಗಲ್ಲು ನಗರ ವಿರಾಟನಗರವೇ ಆಗಿದೆ. ಮಾತನ್ನು ಸಮರ್ಥಿಸಲು ಅನೇಕ ಐತಿಹ್ಯಗಳುಂಟು.

ಐತಿಹ್ಯಗಳು

ಹಾನಗಲ್ಲು ವಿರಾಟನಗರವಾಗಿತ್ತೆಂದು ಅಲ್ಲಿಯ ಜನರು ನಂಬಿದ್ದಾರೆ. ಅಂಶವನ್ನು ಗಟ್ಟಿಗೊಳಿಸಲು ಭೌತಿಕ ಆಧಾರಗಳನ್ನು ಆಧರಿಸಿ ಕಲ್ಪಿತ ಕಥೆಗಳನ್ನು ಹೆಣೆದು ತಾವು ಹೇಳುತ್ತಿರುವುದು ಸತ್ಯವೆಂದು ನಂಬಿ, ಅದನ್ನೆ ಬಿಂಬಿಸುತ್ತಾರೆ. ಇಂಥವುಗಳನ್ನೇ ನಾವು ಐತಿಹ್ಯಗಳೆಂದು ಕರೆಯುತ್ತೇವೆ. ಐತಿಹ್ಯಗಳು ಪ್ರಾಚೀನವಾದ ಚಾರಿತ್ರಿಕ ಘಟನೆಗಳ ಪಳೆಯುಳಿಕೆಗಳು ಎಂಬಂತೆ ತೋರಿದರೂ, ಅವೆಲ್ಲವೂ ಸತ್ಯಾಂಶಗಳಿಂದ ಕೂಡಿದವುಗಳಲ್ಲ. ಅವು ಚಾರಿತ್ರಿಕ, ಪೌರಾಣಿಕ ಹಾಗೂ ಕಾಲ್ಪನಿಕ ಅಂಶಗಳಿಂದ ಕೂಡಿ ಆಕರ್ಷಕವಾಗಿರುತ್ತವೆ. ಅವುಗಳಲ್ಲಿಯ ಚಾರಿತ್ರಿಕ ಹಾಗೂ ಕಲ್ಪಿತ ಅಂಶಗಳನ್ನು ಸೂಕ್ಷ್ಮವಾಗಿ ಬೇರ್ಪಡಿಸಿ ಚಾರಿತ್ರಿಕ ಸತ್ಯವನ್ನು ಗುರುತಿಸುವುದು ಒಂದಾದರೆ, ನಂಬಿಕೊಂಡಿರುವ ಚಾರಿತ್ರಿಕ, ಪೌರಾಣಿಕ ಹಾಗೂ ಕಾಲ್ಪನಿಕತೆಗಳನ್ನೊಳಗೊಂಡ ಐತಿಹ್ಯಗಳೆ ಸತ್ಯ ಇತಿಹಾಸವೆಂದು ನಂಬಿಕೊಂಡಿರುವದು ಮತ್ತೊಂದಾಗಿದೆ. ಹೀಗಾಗಿ ಮೊದಲನೆಯದು ಶಿಷ್ಟ ಇತಿಹಾಸವಾದರೆ, ಎರಡನೆಯದು ಮೌಖಿಕ ಇತಿಹಾಸವಾಗಿದೆ. ನಿಟ್ಟಿನಲ್ಲಿ ಮೌಖಿಕ ದಾಖಲೆಗಳಿಗನುಗುಣವಾಗಿ ಜನಪದರಿಗೆ ಹಾನಗಲ್ಲು ಮೂಲತಃ ಮಹಾಭಾರತದ ವಿರಾಟನಗರವೆ ಆಗಿದೆ. ಅದಕ್ಕೆ ಸಂಬಂಧಿಸಿದಂತೆ ಐತಿಹ್ಯಗಳನ್ನು ಹೇಳುವುದುಂಟು.

. ಬನ್ನಿ ಮುಡಿಯುವ ಕಾರ್ಯ

ಪಾಂಡವರು ಅಜ್ಞಾತವಾಸಕ್ಕಾಗಿ ವಿರಾಟನಗರವನ್ನು ಪ್ರವೇಶಿಸಿದಾಗ, ತಮ್ಮ ಶಸ್ತ್ರಾಸ್ತ್ರಗಳನ್ನು ಮಲ್ಲಿಗಾರ ಗುಡ್ಡದಲ್ಲಿ (ರಾಮೇಶ್ವರ ಗುಡಿಯ ಹತ್ತಿರ) ಬನ್ನಿಯ ಗಿಡದಲ್ಲಿಟ್ಟಿದ್ದರು. ಮುಂದೆ ಅಜ್ಞಾತವಾಸ ಮುಗಿದ ನಂತರ, ವಿಜಯ ದಶಮಿಯ ದಿನ ಬನ್ನಿ ಗಿಡವನ್ನು ಪೂಜಿಸಿ, ಆಯುಧವನ್ನು ತೆಗೆದುಕೊಂಡರಂತೆ. ಅಂದಿನಿಂದ ವಿಜಯದಶಮಿಯಲ್ಲಿ ಊರ ಹೊರಗೆ ಸುಮಾರು ಕಿ.ಮೀ. ಅಂತರದಲ್ಲಿರುವ ಅದೇ ಬನ್ನಿ ಗಿಡವನ್ನು ಪೂಜಿಸಿ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಅಣಿಯಾಗುವ ಪರಿಪಾಠ ಉಳಿದುಕೊಂಡು ಬಂದಿದೆ.

. ಕುಂತಿಯ ದಿಬ್ಬ

ಹಾನಗಲ್ಲಿನ ಪೂರ್ವಕ್ಕೆ ಅಚ್ಚಕೆರೆಯ ಹತ್ತಿರ ಕುಂತಿಯ ದಿಬ್ಬವೆಂಬ ಹೆಸರಿನ ದಿನ್ನೆಯುಂಟು. ದಿಬ್ಬವು ಶಂಖಾಕೃತಿಯಿಂದ ಕೂಡಿದೆ. ಇಲ್ಲಿ ಕುಂತಿಯು ಭತ್ತ ಕುಟ್ಟಿ ಅಕ್ಕಿಯನ್ನು ಕೇರಿ ತೆಗೆದ ಭತ್ತದ ಗೊಳಲಿ (ಖೊಬ್ಬಟ್ಟ) ದಿಬ್ಬವಾಗಿದೆ. ಭೀಮ ಹೆಚ್ಚಿನ ಪ್ರಮಾಣದಲ್ಲಿ ಆಹಾರವನ್ನು ಸೇವಿಸುತ್ತಿದ್ದುದರಿಂದ ಕುಂತಿಯು ಅನಿವಾರ್ಯವಾಗಿ ಹೆಚ್ಚು ಭತ್ತವನ್ನು ಕುಟ್ಟಬೇಕಾಗುತ್ತಿತ್ತು. ಆದ್ದರಿಂದಲೇ ದಿಬ್ಬ ದೊಡ್ಡದಾಗಿದೆ. ನಂತರದಲ್ಲಿ ಸುಟ್ಟ ಗೊಳಲಿಯ ಮೇಲೆ ಮಣ್ಣು ಆವರಿಸಿಕೊಂಡಿದೆ. ದಿಬ್ಬವನ್ನು ಇಂದಿಗೂ ಕುಂತಿಯ ದಿಬ್ಬವೆಂದು ಕರೆಯುತ್ತಾರೆ.

. ಕೀಚಕನ ಗರಡಿ ಮನೆ

ಹಾನಗಲ್ಲು ಕೋಟೆಯೊಳಗೆ ಉತ್ತರಿ ಮಂಟಪವೊಂದಿದೆ. ಅದರ ಹಿಂಬದಿಯಲ್ಲಿರುವ ಹಾಳು ದೇಗುಲಕ್ಕೆ ಭೀಮಸೇನನ ಗುಡಿ ಎಂದು ಕರೆಯುತ್ತಾರೆ. ಪೂರ್ವದಲ್ಲಿ ಅದು ಕೀಚಕನ ಗರಡಿಯ ಮನೆಯಾಗಿತ್ತು. ಕೀಚಕ ದ್ರೌಪದಿಯನ್ನು ಇಚ್ಚೆಪಟ್ಟು ಭೀಮನನ್ನು ಎದುರಿಸಬೇಕಾಯಿತು. ಕೀಚಕನ ಗರಡಿಮನೆಯಲ್ಲಿ ಭೀಮ ಮತ್ತು ಕೀಚಕನ ಮಧ್ಯ ಹೋರಾಟವಾಯಿತು. ನೂರಾನೆಯ ಬಲವುಳ್ಳ ಕೀಚಕನನ್ನು ಭೀಮ ಕೊಂದು ಗರಡಿ ಮನೆಯನ್ನು ಸುಟ್ಟನು. ಮುಂದೆ ಅದೆ ಸ್ಥಳದಲ್ಲಿ ಭೀಮನ ಗುಡಿಯನ್ನು ಕಟ್ಟಿಸಲಾಯಿತು. ಅದು ಇಂದು ಭೀಮನ ಗುಡಿ ಎಂದು ಕರೆಸಿಕೊಳ್ಳುತ್ತಿದೆ.

. ಧರ್ಮಾನದಿ

ವಿರಾಟನಗರದಲ್ಲಿದ್ದ ಧರ್ಮರಾಜನು ಪ್ರತಿನಿತ್ಯ ಊರಿನ ಪಕ್ಕದಲ್ಲಿ ಹರಿಯುತ್ತಿದ್ದ ನದಿಗೆ ಹೋಗಿ ಸ್ನಾನ ಮಾಡಿ ಬರುತ್ತಿದ್ದುದರಿಂದ ನದಿಗೆ ಧರ್ಮಾನದಿ ಎಂದು ಹೆಸರು ಬಂದಿತು. ಇನ್ನೊಂದು ಹೇಳಿಕೆಯ ಪ್ರಕಾರ, ಧರ್ಮರಾಜನು ಪ್ರತಿದಿನ ನದಿ ದಂಡೆಯ ಆಚೆಗಿರುವ ದೇವಸ್ಥಾನಕ್ಕೆ ದೋಣಿ ಮೂಲಕ ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದ. ಒಮ್ಮೆ ಭೀಮನು ತನ್ನ ಅಣ್ಣ ಪ್ರತಿದಿನ ಎಲ್ಲಿಗೆ ಹೋಗುತ್ತಿರುವನೆಂದು ತಿಳಿಯಲು ಆತನನ್ನು ಹಿಂಬಾಲಿಸಿದ. ಆತ ದೋಣಿಯಲ್ಲಿ ಹೋಗುತ್ತಿರುವುದನ್ನು ಕಂಡು ಭಿಮ, ‘ಧರ್ಮಣ್ಣ ಹೋದ ನದಿಯೊಳಗೆ > ಧರ್ಮಣ್ಣ ಹೋದ ನದಿಎಂದು ಉದ್ಗಾರ ಮಾಡಿದನು. ಮುಂದೆ ಅದೇ ಧರ್ಮಣ್ಣ ನದಿ > ‘ಧರ್ಮಾನದಿಯಾಯಿತು.

. ವಿರಾಟನಗರದ ಗೋಗ್ರಹಣ

ವಿರಾಟರಾಜನ ಆಸ್ಥಾನದಲ್ಲಿ ನಡೆದ ಗೋಗ್ರಹಣ ಅಣುಕುರೂಪವಾಗಿ ಇಂದಿಗೂ ದೀಪಾವಳಿಯಲ್ಲಿ ದನಗಳನ್ನು ಶೃಂಗರಿಸಿ ಬೆದರಿಸುವ ಕಾರ್ಯವನ್ನು ಮಾಡುತ್ತಾರೆ.

. ಪಾಂಡವರ ಮೂರ್ತಿಗಳು

ವಿಭಿನ್ನ ವೇಷಗಳಲ್ಲಿ ಪಾಂಡವರು ಬಂದು ವಿರಾಟನಗರದಲ್ಲಿ ವಾಸ್ತವ್ಯ ಹೂಡಿದರು. ಅಜ್ಞಾತವಾಸ ಮುಗಿಸಿ ತಮ್ಮ ನಿಜರೂಪ ತೋರಿ ತಾವು ಪಾಂಡವರೆಂದು ತೋರಿದಾಗ, ವಿರಾಟ ಅರಸ ತಾನು ಗೊತ್ತಾಗದೆ ಪಾಂಡವರನ್ನು ದುಡಿಸಿಕೊಂಡೆನೆಂದು ದುಃಖಿಸುತ್ತಾನೆ. ಪಾಪಪ್ರಜ್ಞೆಯ ಮುಕ್ತಿಗಾಗಿ ಜಕಣಾಚಾರ್ಯರಿಂದ ಅವರ ಮೂರ್ತಿಗಳನ್ನು ಕೆತ್ತಿಸಿ ಪೂಜಿಸುತ್ತಿದ್ದನಂತೆ. ಮುಂದೆ ಯವನರ ದಾಳಿಯಿಂದ ಮೂರ್ತಿಗಳು ಛಿದ್ರಗೊಂಡು ತಾರಕೇಶ್ವರ ದೇವಸ್ಥಾನದಲ್ಲಿ ಬಿದ್ದಿವೆ.

. ಕುರಬಾವಿ

ಗುರುಶಾಂತಯ್ಯ ಶಾಂತಪೂರಮಠ ಎಂಬುವರ ಹೊಲದಲ್ಲಿರುವ ಬೃಹತ್ ಬಾವಿಯನ್ನು ಪಾಂಡವರು ಕಟ್ಟಿಸಿದ್ದಾರೆ. ಮೂಲತಃ ಪಾಂಡವರು ಕುರುವಂಶದವರಾಗಿರುವದರಿಂದ ಅದಕ್ಕೆಕುರುಬಾವಿಎಂಬ ಹೆಸರಿನಿಂದ ಕರೆಯುತ್ತಾರೆ.

. ಬಂಕಾಪುರದಲ್ಲಿ ಬಕಾಸುರನನ್ನು ಕೊಂದದ್ದು

ಬಂಕಾಪುರದಲ್ಲಿ ಬಕಾಸುರನಿದ್ದನು. ಆತ ಜನರನ್ನು ಪೀಡಿಸಿ ಹಿಡಿದು ತಿನ್ನುತ್ತಿದ್ದ. ತೊಂದರೆಯಿಂದ ತಪ್ಪಿಸಿಕೊಳ್ಳಲು ಆತನಿಗೆ ಪ್ರತಿದಿನ ಬಂಡಿ ಅನ್ನ ಕಳುಹಿಸಲಾಗುತ್ತಿತ್ತು. ಆದರೂ ಆತನ ಹಾವಳಿ ತಪ್ಪಿರಲಿಲ್ಲ. ಒಮ್ಮೆ ಜನರೆಲ್ಲ ಕೂಡಿ ಕುಂದೂರಿನ ಕುಂದಲಮ್ಮನಿಗೆ ಆಪತ್ತಿನಿಂದ ಪಾರಾಗಲು ಬೇಡಿಕೊಂಡರು. ಕುಂದಲಮ್ಮ ದೇವತೆ ಭೀಮನ ನೇತೃತ್ವದಲ್ಲಿ ಹೋಗಿ ಬಕಾಸುರನನ್ನು ಕೊಲ್ಲಲು ಸಾಧ್ಯವೆಂದು ತಿಳಿಸುತ್ತಾಳೆ. ಅದರಂತೆ ಜನ ಭೀಮನ ನೇತೃತ್ವದಲ್ಲಿ ಹೋಗಿ ಬಂಕಾಪುರದಲ್ಲಿದ್ದ ಬಕಾಸುರನನ್ನು ಕೊಂದರಂತೆ. ಆದ್ದರಿಂದಲೇ ಬಕಾಸುರನಪುರಬಂಕಾಪುರವಾಯಿತಂತೆ.

. ತುರಬೇಗುಡ್ಡದಲ್ಲಿ ದನಗಳ ಹೆಜ್ಜೆಗುರುತಗಳು

ವಿರಾಟನಗರದಲ್ಲಿ ಅಜ್ಞಾತವಾಸ ಕಳೆಯುತ್ತಿರುವಾಗ, ಕಿರಿಯರಾದ ನಕುಲಸಹದೇವರು ದನಗಳನ್ನು ಕಾಯುವ ವೃತ್ತಿ ಕೈಕೊಂಡಿದ್ದರು. ದನಗಳನ್ನು ಮೇಯಿಸಲಿಕ್ಕೆ ತುರಬೇಗುಡ್ಡಕ್ಕೆ ಹೋಗುತ್ತಿದ್ದರು. ದನಗಳ, ಆಡುಗಳ ಹೆಜ್ಜೆ ಗುರುತುಗಳು ಅಲ್ಲಿಯ ಶಿವಲಿಂಗ ಮಠದ ಹತ್ತಿರ ಕಲ್ಲುಗಳ ಮೇಲೆ ಮೂಡಿವೆ. ಹೆಜ್ಜೆಗುರುತುಗಳು ಈಗಲೂ ನೋಡಲು ಸಿಗುತ್ತವೆ. ಅವೆಲ್ಲ  ನಕುಲಸಹದೇವರು ದನಗಳನ್ನು ಮೇಯಿಸಲಿಕ್ಕೆ ಬಂದಾಗ ಮೂಡಿದವುಗಳಾಗಿವೆ. ತುರು ಎಂದರೆ ಆಕಳು. ಆಕಳುಗಳನ್ನು ಮೇಯಿಸುವ ಗುಡ್ಡವೆ ತುರುಬೇಗುಡ್ಡವಾಗಿದೆ.

೧೦. ಸ್ಥಳನಾಮ ನಿಷ್ಪತ್ತಿಗಳು

ಹಾನಗಲ್ಲಿನ ದಕ್ಷಿಣಕ್ಕಿರುವ ನೆಲ್ಲಿಕೊಪ್ಪ ಗ್ರಾಮದಲ್ಲಿ ವಿರಾಟನಗರದ ಅರಸರು ಹಾಲುಮೊಸರುಗಳನ್ನು ನೆಲ್ಲಿಗೆಯಲ್ಲಿ (ನೆಲವುಗಳಲ್ಲಿ) ಸಂರಕ್ಷಿಸಿಡುತ್ತಿದ್ದರು. ನೆಲ್ಲಿಕೊಪ್ಪದ ದಕ್ಷಿಣಕ್ಕಿರುವ ದಡ್ಡಿಕೊಪ್ಪದಲ್ಲಿ ದನಗಳನ್ನು ಕಟ್ಟುತ್ತಿದ್ದರು. ದಡ್ಡಿಕೊಪ್ಪದ ದಕ್ಷಿಣಕ್ಕಿರುವ ತುರುಬೇಗುಡ್ಡದಲ್ಲಿ ದನಗಳನ್ನು ಮೇಯಿಸುತ್ತಿದ್ದರು. ತುರುಬೇಗುಡ್ಡದ ಆಗ್ನೇಯಕ್ಕಿರುವ ಹುಲಕಡ್ಡಿಯು ದನಗಳಿಗೆ ಹುಲ್ಲನ್ನು ಬೆಳೆಯುವ ಸ್ಥಳವಾಗಿತ್ತು. ಮುಂದೆ ಅವೆಲ್ಲವು ಕ್ರಮವಾಗಿ ನೆಲ್ಲಿಕೊಪ್ಪ, ದಡ್ಡಿಕೊಪ್ಪ, ತುರುಬೇಗುಡ್ಡ, ಹುಲಕಡ್ಡಿ ಗ್ರಾಮಗಳಾಗಿ ಹೆಸರನ್ನು ಹೊಂದಿವೆ.

ಹೀಗೆ ವಿರಾಟನಗರ ರಾಜ್ಯದ ಕಲ್ಪನೆಯನ್ನು ಗಟ್ಟಿಗೊಳಿಸಲು ಇನ್ನೂ ಇಂತಹ ಅನೇಕ ಐತಿಹ್ಯಗಳುಂಟು. ಐತಿಹ್ಯಗಳು ನಮಗೆ ಕಲ್ಪಿತವಾಗಿ, ಕಂಡರೂ ಹೇಳುವ ನಿರೂಪಕನಿಗೆ ಅವು ನಿಜವಾಗಿರುತ್ತವೆ. ಏಕೆಂದರೆ ನಿರೂಪಿಸುವವನು ತಾನು ನಿಜವನ್ನೆ ಹೇಳುತ್ತಿದ್ದೇನೆಂದು ನಂಬಿರುತ್ತಾನೆ. ಹಾಗಿರುವುದರಿಂದ ಆತನ ಪ್ರಕಾರ ಅವೆಲ್ಲ ಹಿಂದೆ ನಡೆದ ಘಟನೆಗಳೆ ಆಗಿರುತ್ತವೆ. ಹಾಗೆಂದುಕೊಂಡೆ ಆತ ತನ್ನ ಬದುಕನ್ನು ರೂಪಿಸಿಕೊಂಡು ಬದುಕಿರುತ್ತಾನೆ. ಭಾವನೆಗಳು ಮನುಷ್ಯನನ್ನು ರೂಪಿಸುತ್ತವೆ. ಭಾವನೆಗಳಿಗನುಗುಣವಾಗಿ ವ್ಯಕ್ತಿಯ ಸುತ್ತಲಿನ ಪರಿಸರವು ಅದಕ್ಕೆ ತಕ್ಕಂತೆ ನಿರ್ಮಾಣವಾಗುತ್ತದೆ. ಹೀಗಾಗಿ ಹಾನಗಲ್ಲಿನ ಜನ ತಾವು ವಿರಾಟನಗರದವರೆಂಬ ಭಾವನೆಗಳನ್ನಿಟ್ಟುಕೊಂಡಿರುವುದರಿಂದಲೇ ಪ್ರಾಯಶಃ ಹಾನಗಲ್ಲಿನ ಪರಿಸರದಲ್ಲಿ ಬಯಲಾಟಗಳ ಪ್ರಕಾರಗಳಲ್ಲಿ ದೊಡ್ಡಾಟ ಬಹುದೊಡ್ಡ ಪ್ರಚಾರವನ್ನು ಗಿಟ್ಟಿಸಿಕೊಂಡಿತು. ತಾವು ವಿರಾಟನಗರದವರೆಂಬ ಭಾವನೆಯಿಂದ ವೀರರ ಪ್ರಧಾನವಾದ ಆಟಗಳನ್ನು ಪ್ರೋತ್ಸಾಹಿಸಲು ಸಾಧ್ಯ.

ಪಾಂಡವರು ಅಜ್ಞಾತವಾಸದಲ್ಲಿ ವಿರಾಟರಾಜನ ಮತ್ಸ್ಯಪುರವೆಂಬ ರಾಜಧಾನಿಯಲ್ಲಿ ವಾಸಿಸಿದ್ದರೆಂದು ಮಹಾಭಾರತ ಹೇಳುತ್ತದೆ. ಮತ್ಸ್ಯಪುರವು ಹಾನಗಲ್ಲೆಂದು ಜನರ ಗ್ರಹಿಕೆಯಾಗಿದೆ. ಪಾಂಡವರು ಅಜ್ಞಾತವಾಸ ಮುಗಿಸಿದ ನಂತರ ಉಪಪ್ಲಾವ್ಯ ಎಂಬ ಗ್ರಾಮದಲ್ಲಿ ತಮ್ಮ ರಾಜ್ಯ ಸ್ಥಾಪಿಸಿದರೆಂದು ಮಹಾಭಾರತದಲ್ಲಿ ಉಲ್ಲೇಖವಿದೆ. ಅದು ಈಗ ತುಂಗಭದ್ರಾ ನದಿದಂಡೆಯ ಮೇಲೆ ಸಣ್ಣದೊಂದು ಹಳ್ಳಿಯಾಗಿದೆ. ಇದರ ಬಗ್ಗೆ ಆನೆಗುಂದಿಯಲ್ಲಿ ಪ್ರಮಾಣಗಳು ದೊರೆಯುತ್ತವೆ. ಆನೆಗುಂದಿಗೆದಕ್ಷಿಣದ ಹಸ್ತಿನಾವತಿಎಂದು ಲಿಪಿಗಳು ಹೇಳುತ್ತವೆ. ಆನೆಗುಂದಿ ಎಂಬ ಹೆಸರಾದರೂ ಹಸ್ತಿನಾವತಿ ಎಂಬ ಹೆಸರಿನ ಕನ್ನಡ ಭಾಷಾಂತರವೇ ಆಗಿರುತ್ತದೆ. ಆನೆಗುಂದಿಯಲ್ಲಿ ಪಾಂಡವ ವಂಶದ ಅರಸರು ಬಹುಕಾಲ ಆಳಿದರೆಂದು ತಿಳಿಸುತ್ತಾರೆ. ಆನೆಗುಂದಿ, ಮಧುರೆ, ತಿರುವಕೊಂಡ ಮುಂತಾದ ಕಡೆಗಳಲ್ಲಿ ಆಳಿದ ಅರಸರು ಪಾಂಡವರ ವಂಶದವರೆಂದು ಅವರ ವಂಶಾವಳಿಗಳು ಹೇಳುತ್ತವೆ. ಅಲ್ಲದೆ ವಿರಾಟನ ರಾಜ್ಯಕ್ಕೆ ತ್ರಿಗರ್ತ ದೇಶದ ಸುಶರ್ಮನ ರಾಜ್ಯವು ಹೊಂದಿತ್ತೆಂದು ವಿರಾಟಪರ್ವದಲ್ಲಿ ಉಲ್ಲೇಖವಿದೆ. ‘ತ್ರಿಗರ್ತಎಂದರೆ ಮೂರು ತಗ್ಗುಗಳ ನಡುವಿನ ಸೀಮೆಯೆಂಬ ಅರ್ಥವಿದೆ. ಮೈಸೂರ ರಾಜ್ಯದ ಪೂರ್ವ, ಪಶ್ಚಿಮ, ದಕ್ಷಿಣ ಮೂರು ದಿಕ್ಕುಗಳಲ್ಲಿ ಪೂರ್ವಘಟ್ಟ, ಪಶ್ಚಿಮಘಟ್ಟ (ಸಹ್ಯಾದ್ರಿ), ದಕ್ಷಿಣಘಟ್ಟಗಳಲ್ಲಿ (ನೀಲಗಿರಿ) ಮೂರು ಪರ್ವತಗಳ ನಡುವೆ ತಗ್ಗುನೆಲವಿರುವ ಕಾರಣ ಮೈಸೂರಿನ ಸೀಮೆಯೇ ತ್ರಿಗರ್ತ ಪ್ರದೇಶವಾಗುತ್ತದೆಂದು ಊಹಿಸಬಹುದು. ಇನ್ನುಭಾಗವತ ಪುರಾಣದಲ್ಲಿ ಬಲರಾಮನು ತೀರ್ಥಯಾತ್ರೆ ಮಾಡುವಾಗ, ರಾಮೇಶ್ವರದಿಂದ ತ್ರಿಗರ್ತ ದೇಶದೊಳಗೆ ಹಾದು ಗೋಕರ್ಣಕ್ಕೆ ಹೋದನೆಂಬ ಉಲ್ಲೇಖವಿದೆ. ಕಾರಣಗಳಿಂದ ಮೈಸೂರು ಸೀಮೆ ತ್ರಿಗರ್ತ ದೇಶವೆಂತಲೂ ಆನೆಗುಂದಿ ಉಪಪ್ಲಾವ್ಯವೆಂತಲೂ, ಹಾನಗಲ್ಲು ಮತ್ಸ್ಯಪುರವೆಂತಲೂ ಅನುಮಾನ ಬರುತ್ತದೆ.[6] ಅಲ್ಲದೆ ಪಾಂಡವರು ತಮ್ಮ ೧೨ ವರ್ಷದ ವನವಾಸವನ್ನು ಕಳೆದು ಒಂದು ವರ್ಷದ ಅಜ್ಞಾತವಾಸಕ್ಕೆ ಹಾನಗಲ್ಲಿಗೆ ಬಂದಿದ್ದರೆಂದು ಮೌಖಿಕ ಆಕರಗಳಾದ ಕಾವ್ಯ, ಐತಿಹ್ಯಗಳು ತಿಳಿಸುತ್ತವೆ. ಇವೆಲ್ಲವುಗಳನ್ನು ಸಮರ್ಥಿಸಲು ೧೧೪೫ರ ಶಾಸನವೊಂದರಲ್ಲಿಬಿಣಚೂರು ಗ್ರಾಮಂ ವಿರಾಟನಗರಿ ಪಂಚಶತಾಂತರ್ಗತ[7] ಎಂದು ಉಲ್ಲೇಖಿಸಿರುವುದು ಹಾನಗಲ್ಲು ವಿರಾಟನಗರವಾಗಿತ್ತು ಎಂಬುದನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

ಹಾನಗಲ್ಲು ವಿರಾಟನಗರವಾಗಿತ್ತೆಂದು ಇಂದಿಗೂ ಜನಪದರು ನಂಬಿಕೊಂಡು ಬಂದಿದ್ದಾರೆ. ಇದಕ್ಕೆ ಅವರು ಹೇಳುವ ಮೌಖಿಕ ಸಾಹಿತ್ಯವೇ ಆಕರವಾಗಿದೆ. ಇದು ಅವರ ಇತಿಹಾಸವೂ ಆಗಿದೆ. ಆದರೆ ನಿಜ ಚರಿತ್ರೆಯೆ ಬೇರೆ. ಮೂಲಭೂತವಾಗಿ ಜನಪದರು ಹಾನಗಲ್ಲು ವಿರಾಟನಗರವೆಂದು ನಿರೂಪಿಸಲು ಹೇಳುವ ಅನೇಕ ಕುರುಹುಗಳು ನಂಬಲರ್ಹವಾದವುಗಳಾಗಿವೆ. ಈಗಾಗಲೆ ಮೇಲೆ ಉಲ್ಲೇಖಿಸಿರುವಬನ್ನಿ ಮುಡಿಯುವ ಕಾರ್ಯಕ್ರಮಊರು ಹೊರಗಿನ ಬನ್ನಿಗಿಡದಿಂದಲೇ ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲಿ ನಡೆಯುವಂತೆ, ಕಾರ್ಯಕ್ರಮ ಅಥವಾ ಗಿಡದಿಂದಲೇ ಹಾನಗಲ್ಲಿನ ಕದಂಬರು ಬನ್ನಿ ಮುಡಿಯುವ ಕಾರ್ಯಕ್ರಮ ಪ್ರಾರಂಭಿಸುತ್ತಿರಬಹುದು. ಅದೆ ಕಾರ್ಯವನ್ನು ಇಲ್ಲಿ ಪಾಂಡವರ ಘಟನೆಗೆ ಆರೋಪಿಸುತ್ತಿದ್ದಾರೆ.

ಕುಂತಿಯ ದಿಬ್ಬಐತಿಹ್ಯದಲ್ಲಿ ಕುಂತಿ ಅಜ್ಞಾತವಾಸದಲ್ಲಿದ್ದ ಪಾಂಡವರ ಊಟಕ್ಕಾಗಿ ಭತ್ತಕುಟ್ಟಿ ತೆಗೆದ ಗೊಳಲಿಯ ದಿಬ್ಬ ಎನ್ನಲಾಗುತ್ತದೆ. ವಾಸ್ತವಿಕವಾಗಿ ಕುಂತಿ ಪಾಂಡವರ ಜೊತೆ ವನವಾಸಕ್ಕೆ ಬಂದಿರಲಿಲ್ಲ. ಹೀಗಾಗಿ ಇದು ಬರಿ ಊಹೆ. ಸತ್ಯ ಶೋಧನೆಯ ನೆಲೆಯಿಂದ ಘಟನೆಯನ್ನು ವೀಕ್ಷಿಸಿದಾಗ, ಅದು ಹಾನಗಲ್ಲು ಕದಂಬ ಅರಸರ ಮಣ್ಣಿನ ಕೋಟೆಗೋಡೆಯ ಅಳಿದುಳಿದ ಭಾಗ. ಪ್ರಾಯಶಃ ಕೋಟೆಗೋಡೆಯ ಕಾವಲು ಬುರುಜು, (ರಕ್ಷಣಾ ಗೋಪುರ) ಆಗಿರುವ ಸಾಧ್ಯತೆ ಹೆಚ್ಚಾಗಿದೆ. ಹಾಗಿರುವುದರಿಂದಲೇ ಕುಸಿದ ಬುರುಜು ದಿಬ್ಬವಾಗಿ ಕಾಣುತ್ತದೆ. ಬುರುಜಿನ ಒಳಗೆ ಸುಟ್ಟ ಇಟ್ಟಿಗೆಗಳನ್ನು ಬಳಸಿ ಗೋಡೆ ಕಟ್ಟಿರುವುದರಿಂದ ಜನ ಐತಿಹ್ಯದಲ್ಲಿ ಗೊಳಲಿಯನ್ನು ಸುಟ್ಟು ಮೇಲೆ ಮಣ್ಣು ಹಾಕಿದ್ದಾರೆ ಎಂದು ಹೇಳುತ್ತಾರೆ. (ಒಳಗೆ ಸುಟ್ಟ ಇಟ್ಟಿಗೆಗಳು ಈಗಲೂ ದೊರೆಯುತ್ತವೆ) ಭತ್ತ, ಗೊಳಲಿಯ ಬೃಹತ್ ಗುಂಪಿ ಎಂಬ ಶಬ್ದಗಳು ಹಾನಗಲ್ಲು ಪ್ರದೇಶ ಭತ್ತದ ಖಣಜ ನಾಡಾಗಿರಬಹುದೆಂಬುದನ್ನು ನಿರೂಪಿಸುತ್ತದೆ. ಕೀಚಕನ ಗರಡಿಮನೆ ಇತ್ತು ಎಂದು ತೋರುವ ಐತಿಹ್ಯ ಮತ್ತುಧರ್ಮಾನದಿಹೆಸರಿನ ನಿಷ್ಪತ್ತಿ ಐತಿಹ್ಯಗಳು ಇವು ಊಹೆಯಿಂದ ಕೂಡಿದವುಗಳು. ‘ಪಾಂಡವರ ಮೂರ್ತಿಗಳನ್ನು ಜಕಣಾಚಾರ್ಯ ಕೆತ್ತಿದನೆಂದುತಿಳಿಸುವ ಐತಿಹ್ಯದಲ್ಲಿ ವಿರಾಟನಗರ ಅರಸನ ಕಾಲಕ್ಕೂ ಮತ್ತು ಜಕಣಾಚಾರ್ಯನಿದ್ದನೆಂಬ ಕಾಲಕ್ಕೂ ಸಾಕಷ್ಟು ಅಂತರವಿದೆಯೆಂಬುದನ್ನು ಗಮನಿಸಬೇಕು. ಅಷ್ಟಾಗಿ ಅಲ್ಲಿರುವ ಮೂರ್ತಿಗಳು ದ್ವಾರಪಾಲಕ ಶಿಲ್ಪಗಳಾಗಿವೆ. ಕದಂಬರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ, ಕಲ್ಯಾಣದ ಚಾಲುಕ್ಯರ ಮತ್ತು ಹೊಯ್ಸಳರ ದೇವಸ್ಥಾನಗಳ ಅನೇಕ ಲಕ್ಷಣಗಳನ್ನು ಅಳವಡಿಸಿಕೊಂಡಿದೆ. ಹೀಗಾಗಿ ದೇವಾಲಯವನ್ನು ಹಾಗೂ ಅಲ್ಲಿಯ ಶಿಲ್ಪವನ್ನು ವಿರಾಟನಗರ ಸಾಮ್ರಾಜ್ಯದ ಕಾಲಘಟ್ಟಕ್ಕೆ ಒಯ್ಯಲಾಗದು. ಪಾಂಡವರು ಮೂಲತಃ ಕುರುವಂಶದವರು. ಅವರು ಕಟ್ಟಿಸಿದ ಬಾವಿಕುರುಬಾವಿಎಂಬ ಐತಿಹ್ಯದ ವಾಸ್ತವಿಕತೆಯು, ಅದನ್ನು ಮೂಲತಃ ಕುರುಬ ಜನಾಂಗದವರು ಕಟ್ಟಿಸಿಕೊಂಡಿರುವುದಕ್ಕೊ ಅಥವಾ ಕುರುಬ ಜನಾಂಗದವರ ಬಳಕೆಗಾಗಿ ಕಟ್ಟಿಸಿದ ನಿಮಿತ್ತಕ್ಕೊಕುರುಬರಬಾವಿ’ > ‘ಕುರುಬಾವಿಯಾಗಿದೆ. ಇಂದಿಗೂ ಬಾವಿಯ ಪಕ್ಕದಲ್ಲಿಯೇ ಕುರುಬ ಜನಾಂಗದವರ ಓಣಿ ಇರುವುದನ್ನು ಗಮನಿಸಬಹುದು.

ದೀಪಾಳಿಯಲ್ಲಿ  ದನ ಬೆದರಿಸುವ ಕಾರ್ಯವನ್ನುವಿರಾಟನಗರದ ಗೋಗ್ರಹಣಪ್ರಸಂಗಕ್ಕೆ ತಳಕು ಹಾಕಲಾಗುತ್ತದೆ. ವಿರಾಟನಗರದಲ್ಲಿ ನಡೆದದ್ದು ಗೋಗ್ರಹಣವಾದರೆ, ದನ ಬೆದರಿಸುವ ಕಾರ್ಯ ಜನಪದರ ಆಚರಣೆಯಾಗಿದೆ. ರೈತ ದೀಪಾವಳಿಯ ನಂತರ ಬಿತ್ತನೆ ಕಾರ್ಯಗಳಿಗೆ ಅಣಿಯಾಗಬೇಕಾಗುತ್ತದೆ. ಅದಕ್ಕಾಗಿ ತನ್ನ ಎತ್ತುಗಳನ್ನು ಸಿದ್ಧಗೊಳಿಸಿ, ಪರೀಕ್ಷಿಸಿ ನೋಡುವ ಕ್ರಮ, ಆಚರಣೆಯ ಭಾಗವಾಗಿ ಇಂದು ಮನರಂಜನೆಯ ಆಟವಾಗಿದೆ. ಮನರಂಜನೆಯ ಭಾಗವಾದಾಗ, ಆಟವನ್ನು ಬೇರೆ ಬೇರೆ ಸಮಯದಲ್ಲಿ ರೂಢಿಗೊಳಿಸಿಕೊಂಡು ಆನಂದಿಸುವ ಪರಿಪಾಠ ಪ್ರಾರಂಭವಾಗಿರಬಹುದು. ದೀಪಾವಳಿಯಲ್ಲಿ ಗೌಳಿಗರು ತಮ್ಮ ಎಮ್ಮೆಗಳನ್ನು ಶೃಂಗರಿಸಿ ಮನೆಯಿಂದ ಕಂಬಳಿಯನ್ನು ಹಿಡಿದು ಕೇಕೆ ಹಾಕುತ್ತಾ ಓಡುತ್ತಿದ್ದರೆ, ಅವರನ್ನು ಎಮ್ಮೆಗಳು ಹಿಂಬಾಲಿಸುತ್ತವೆ. ಪ್ರಾಯಶಃ ಇದು ಕಾಡು ಪ್ರಾಣಿಗಳಿಂದ ತಮ್ಮ ಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ಅವುಗಳಿಗೆ ತರಬೇತಿ ಕೊಡುವ ಕ್ರಮವಾಗಿದೆ. ಹೀಗಾಗಿ ಇವು ಗೋಗ್ರಹಣ ಕಥೆ ಹೇಳುವ ವಿರಾಟನಗರಕ್ಕೆ ಸಂಬಂಧಿಸಿದ್ದವುಗಳಲ್ಲ. ಇನ್ನೂಸ್ಥಳನಾಮಗಳ ನಿಷ್ಪತ್ತಿಯನ್ನು ವಿಶ್ಲೇಷಿಸುವುದರ ಮೂಲಕ ವಿರಾಟನಗರಕ್ಕೆ ತಳಕು ಹಾಕುವ ಜನಪದ ಕ್ರಮ ಸ್ವಾರಸ್ಯಯುತವಾದದ್ದು. ಆದರೆ ಇಲ್ಲಿ ವಿಶ್ಲೇಷಿಸಲ್ಪಟ್ಟ ಸ್ಥಳನಾಮಗಳೆಲ್ಲ ಪಾಮರ ನಿಷ್ಪತ್ತಿಗಳಾಗಿ, ಅವುಗಳ ನಿಜ ನಿಷ್ಪತ್ತಿ ಇವುಗಳಿಗಿಂತ ಭಿನ್ನವಾಗಿದೆ.

ಮೈಸೂರು ರಾಜ್ಯವನ್ನು ತ್ರಿಗರ್ತವೆಂದು ಕರೆದಿರುವದು ಆನೆಗುಂದಿ, ಮಧುರೆ, ತಿರುವಕೊಂಡ ಮುಂತಾದ ಕಡೆಗಳಲ್ಲಿ ಆಳಿದ ಅರಸರು ಪಾಂಡವ ವಂಶದವರೆಂದು ಅವರ ವಂಶಾವಳಿ ತಿಳಿಸುತ್ತವೆಂದರೂ, ಊರು ಹಾಗೂ ಅರಸರು ತಮ್ಮ ಪ್ರಾಚೀನತೆಯನ್ನು ಮತ್ತು ಶ್ರೇಷ್ಠತೆಯನ್ನು ಹೆಚ್ಚಿಸಿಕೊಳ್ಳಲಿಕ್ಕೆ ಹೇಳಿದವುಗಳೇ ಆಗಿವೆ. ಅದರಂತೆ ಶಾಸನಗಳಲ್ಲಿ ಶ್ರೀರಾಮದತ್ತಿ ಅಗ್ರಹಾರ ಹಾಗೂ ಹರಿಶ್ಚಂದ್ರದತ್ತಿ ಅಗ್ರಹಾರ ಎಂದು ಕರೆದಿರುವುದುಂಟು. ಅಲ್ಲದೆ ಅರ್ಜುನವಾಡ ಶಾಸನದಲ್ಲಿ ದತ್ತಿ ಬಿಟ್ಟಿರುವುದನ್ನು ಹಳ್ಳಿ ಮಾಂಧಾತ ಚಕ್ರವರ್ತಿ ಬಿಟ್ಟಧರ್ಮ್ಮಂಅದನ್ನುಪೂರ್ವ್ವದತ್ತವೆಂದು ಧಾರಾಪೂರ್ವಕ್ಕಂ ಮಾಡಿಕೊಟ್ಟರು[8] ಎಂಬ ಉಲ್ಲೇಖವುಂಟು. ಇವೆಲ್ಲವುಗಳಲ್ಲಿಯೂ ಪುರಾಣ ವ್ಯಕ್ತಿಗಳಾದ ಶ್ರೀರಾಮ, ಹರಿಶ್ಚಂದ್ರ, ಮಾಂಧಾತರ ಹೆಸರನ್ನು ಬಳಸಿಕೊಳ್ಳುವುದರ ಮೂಲಕ ತಮ್ಮ ಪ್ರಾಚೀನತೆ ಮತ್ತು ಶ್ರೇಷ್ಠತೆಯನ್ನು ಹೆಚ್ಚಿಸಿಕೊಂಡಿರುವುದನ್ನು ಗಮನಿಸಬೇಕು. ಹಿನ್ನೆಲೆಯಲ್ಲಿ ಹಾನಗಲ್ಲಿಗೆ ವಿರಾಟನಗರವೆಂಬ ಶಾಸನದ ಬಳಕೆಯೂ ಬಂದಿರಲಿಕ್ಕೆ ಸಾಕು. ಆನೆಗುಂದಿಯನ್ನು ದಕ್ಷಿಣ ಹಸ್ತಿನಾವತಿ ಎಂದು ಲಿಪಿಗಳು ಹೇಳುತ್ತವೆ ಹೊರತು ಹಸ್ತಿನಾವತಿಯೇ ಆನೆಗುಂದಿಯಲ್ಲ. ಅದರಂತೆದಕ್ಷಿಣಕಾಶಿಎಂಬ ಹೆಸರು ಅನೇಕ ಪ್ರದೇಶಗಳಿಗುಂಟು.* ಇದೆ ರೀತಿ ದಕ್ಷಿಣದಲ್ಲಿ ವಿರಾಟನಗರಕ್ಕೆ ಹೋಲುವ ನಗರ ಇದಾಗಿರುವ ಸಂಭಾವ್ಯತೆಯಿಂದ ಇದನ್ನು ದಕ್ಷಿಣದ ವಿರಾಟನಗರವೆಂದು ಕರೆದಿರಲಿಕ್ಕೆ ಸಾಕು. ಮೂಲ ಭಾರತದಲ್ಲಿ ವಿರಾಟನಗರವು ಹಸ್ತಿನಾವತಿಯಿಂದ ಒಬ್ಬ ಕುದುರೆ ಸವಾರನ ಒಂದು ದಿನದ ದಾರಿ ಎಂದು ಸೂಚಿತವಾಗಿದೆ. ಮತ್ತು ಇತಿಹಾಸ ತಜ್ಞರು ಈಗಾಗಲೇ ರಾಜಸ್ತಾನದಲ್ಲಿರುವ ಬೈರಾಟೆ ಎಂಬುವುದು ವಿರಾಟನಗರವಾಗಿತ್ತೆಂದು ಹೇಳುತ್ತಾರೆ. (ವಿರಾಟ>ಬೈರಾಟ) ಇವೆಲ್ಲ ಕಾರಣಗಳಿಂದ ಹಾನಗಲ್ಲು ವಿರಾಟನಗರವಲ್ಲ. ಅದು ಇತರ ಸ್ಥಳಗಳಂತೆ ದಕ್ಷಿಣದ ವಿರಾಟನಗರವಾಗಿತ್ತೆಂದು ಊಹಿಸಬಹುದಾಗಿದೆ.

ಇನ್ನು ಹಾನಗಲ್ಲು ಪ್ರದೇಶದಲ್ಲಿ ಅನೇಕ ಕೆರೆಹೊಂಡಗಳು ಕಂಡುಬರುತ್ತವೆ. ಕೆರೆಹೊಂಡಗಳಿಂದ ಆವೃತವಾದ ಹಾನಗಲ್ಲು ಪ್ರದೇಶವು ಸದಾ ಹಸುರಿನಿಂದ ಕಂಗೊಳಿಸುತ್ತಿದೆ. ಪ್ರಾಚೀನ ಕಾಲದಲ್ಲಿ ಮಳೆ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸುವ ಮತ್ತು ಬಳಸಿಕೊಳ್ಳುವ ಕ್ರಮ ಹಾನಗಲ್ಲು ಪರಿಸರದಲ್ಲಿತ್ತು. ಇಲ್ಲಿಯ ಯಾದಗಿರಿ ಕೊಪ್ಪದಿಂದ ಪ್ರಾರಂಭವಾದಂತಹ ಒಂದು ಹಳ್ಳ (ಕಾಲುವೆ) ಹುಣಿಶೆಟ್ಟಿಕೊಪ್ಪದ ಕೆರೆಯ ಮೂಲಕ ಹಾಯ್ದು ಆರೆಗೊಪ್ಪಕೆರೆಗೆ ತಲುಪಿ, ನಂತರ ಚಿಕ್ಕೇರಿಹೊಸಳ್ಳಿ ಕೆರೆಗೆ ಬಂದು, ಆನೆಕೆರೆಯನ್ನು ತುಂಬಿಸಿ, ಅಲ್ಲಿಂದ ಕೋಟೆ ಕೊಳ್ಳದ ಮೂಲಕ ಶಾಸ್ತ್ರೀಯ ಹೊಂಡಕ್ಕೆ ಬಂದು, ಅಚ್ಚಕೆರೆಯ ಮೂಲಕ ಧರ್ಮಾನದಿಯನ್ನು ಸೇರುತ್ತದೆ. ಹೀಗೆ ಹರಿದು ಬರುವ ಕಾಲುವೆಗೆ ಜಡೆಕಾಲುವೆ ಎಂಬ ಹೆಸರಿದೆ. ಕಾಲುವೆ ನಗರದ ನಡುವೆ ಹಾಯ್ದು ಹೋಗಿರುವುದರಿಂದ ಇಡೀ ನಗರವನ್ನು ಸುತ್ತಿಕೊಂಡಿರುವಂತೆ ಕಾಣುತ್ತದೆ. ಕೋಟೆಯ ಭದ್ರತೆಗಾಗಿಯೂ ಕಾಲುವೆಯ ನೀರು ಬಳಕೆಯಾಗುತ್ತಿತ್ತು. ಜಡೆಕಾಲುವೆ ಧರ್ಮಾನದಿ ಸೇರುವ ಪೂರ್ವದಲ್ಲಿ ಅನೇಕ ಕೆರೆಗಳನ್ನು ತುಂಬಿಸುತ್ತಾ ಸಾಗುತ್ತದೆ. ಹೀಗೆ ತುಂಬಿದ ಕೆರೆಗಳಲ್ಲಿ ಯಾವ ಕೆರೆಗಳಿಗೂ ಇಲ್ಲದ ಐತಿಹ್ಯಗಳು ಆನೆಕೆರೆಗೆ ಉಂಟು. ಐತಿಹಾಸಿಕ ಮಹತ್ವ ಪಡೆದಿರುವುದರಿಂದಲೇ ಪ್ರಾಯಶಃ ಕೆರೆಯ ಕುರಿತು ಅನೇಕ ಐತಿಹ್ಯಗಳುಂಟಾಗಿವೆ. ಅವುಗಳಲ್ಲಿ,

. ಈಗಿರುವ ಆನೆಕೆರೆಯ ಕೆಳಗಿನ ಪ್ರದೇಶವು ಓರ್ವ ಸೂಳೆಯದಾಗಿತ್ತು. ಇಂದಿಗೂ ಅದನ್ನು ಸೂಳೆಯ ಬೈಲ ಎಂದು ಕರೆಯುತ್ತಾರೆ. ಬೈಲಿನ ನೀರಾವರಿ ಕೃಷಿಗಾಗಿ ಅವಳು ಕೆರೆಯನ್ನು ಕಟ್ಟಿಸಿದಳು. ಕೆರೆಯನ್ನು ಸೂಳೆ ತನಗಾಗಿ ಕಟ್ಟಿಸಿದ್ದರಿಂದ ಜನ ಅದನ್ನುಸೂಳೆಕೆರೆಎಂದು ಕರೆಯುತ್ತಿದ್ದರು. ಮಡಿಮೈಲಿಗೆಗಳನ್ನು ಪಾಲಿಸುವ ಜನರು ಕೆರೆ ಸೂಳೆಯದೆಂಬ ಕಾರಣಕ್ಕೆ ಅದರ ನೀರನ್ನು ಬಳಸಲಿಲ್ಲ. ಸೂಳೆ ತನ್ನ ಪುಣ್ಯಕ್ಕಾಗಿ ಜನ ನೀರನ್ನು ತೆಗೆದುಕೊಂಡು ಹೋಗಬೇಕೆಂದು ಯೋಚಿಸಿ, ಕೊನೆಗೆ ಕೆರೆಯ ದಿಬ್ಬದ ಮೇಲೆ ಕಲ್ಲಿನ ಬೃಹತ್ ಆನೆಯೊಂದನ್ನು ತಂದು ಇಟ್ಟಳು. ಕಲ್ಲಿನ ಆನೆಯನ್ನು ನೋಡಿದ ಜನರು, ಕ್ರಮೇಣ ಸೂಳೆಕೆರೆ ಮರೆತು ಆನೆಕೆರೆ ಎಂದು ಕರೆದು, ಅದರ ನೀರಿನ ಬಳಕೆಯನ್ನು ಮಾಡಿಕೊಂಡರಂತೆ.

. ಚಿಕ್ಕೇರಿ ಹೊಸಳ್ಳಿಯಿಂದ ನೋಡಿದರೆ, ಕೆರೆ ಭೌತಿಕವಾಗಿ ಆನೆಯ ಹಾಗೆ ಕಾಣುತ್ತದೆ. ಕೆರೆಯ ನಡುವೆ ಆನೆಯ ಹೊಟ್ಟೆಯಂತೆ ಅಗಲವಾಗಿಯೂ, ಕೊನೆಯ ಭಾಗ ಆನೆಯ ಬಾಲದಂತೆಯೂ, ಮುಂಭಾಗ ಸೊಂಡಿಲದಂತೆಯೂ ಕಾಣುತ್ತಿದ್ದುದರಿಂದ ಕೆರೆಯನ್ನು ಆನೆಕೆರೆಯೆಂದು ಕರೆಯುವ ವಾಡಿಕೆ ಬಂದಿದೆ.

. ಹಾನಗಲ್ಲು ಕದಂಬ ಅರಸರ ಕಾಲದಲ್ಲಿ ಆನೆಗಳನ್ನು ಕೆರೆಯಲ್ಲಿ ಮೈತೊಳೆಯುತ್ತಿದ್ದರು ಹಾಗೂ ಆನೆಗಳು ಕೆರೆಯಲ್ಲಿ ಜಲಕ್ರೀಡೆಯಾಡುತ್ತಿದ್ದುದರಿಂದ ಆನೆಕೆರೆ ಎಂಬ ಹೆಸರು ಬಂದಿತ್ತೆನ್ನುತ್ತಾರೆ. ಅಲ್ಲದೆ ಹಾನಗಲ್ಲಿನ ಭದ್ರವಾದ ಕೋಟೆ ಕಟ್ಟಲು ಕೆರೆಯ ಮಣ್ಣನ್ನು ಉಪಯೋಗಿಸಲಾಗಿದೆಯಂತೆ. ಮಣ್ಣನ್ನು ಆನೆಗಳ ಮೂಲಕ ತರಲಾಯಿತು. ಹೀಗಾಗಿ ಕೆರೆಗೂ, ಆನೆಗೂ ರೀತಿಯ ಅನೇಕ ನಂಟುಗಳಿರುವುದರಿಂದ ಅದನ್ನು ಆನೆಕೆರೆಯೆಂದು ಕರೆಯಲಾಯಿತೆಂಬ ಮತ್ತೊಂದು ಐತಿಹ್ಯವೂ ಉಂಟು

ಒಟ್ಟಾರೆ ಆನೆಕೆರೆಯು ಜನರ ಮನದಂಗಳದಲ್ಲಿ ಉಳಿದುಕೊಂಡು, ಹೀಗೆ ಅನೇಕ ಐತಿಹ್ಯಗಳನ್ನು ಹೊಂದಿದ ಕೆರೆ ಜನರ ಜೀವನದ ಮೇಲೆ ಮಹತ್ವದ ಪ್ರಭಾವ ಬೀರಿರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಕದಂಬರ ಇತಿಹಾಸ ಕಾಲದಲ್ಲಿ ಆನೆಕೆರೆಯ ಪ್ರಸ್ತಾಪ ಹಾಗೂ ಮಹತ್ವ ಬಹುದೊಡ್ಡದಾಗಿರಲೇ ಬೇಕು. ಕುರಿತ ಅಧ್ಯಯನಕ್ಕೆ ಐತಿಹ್ಯಗಳು ದಾರಿ ಮಾಡಿಕೊಡುತ್ತವೆ.

ಜನಪದ ಕಥೆಗಳು

ಜನಪದ ಕಥೆಗಳನ್ನು ಸಾಮಾನ್ಯವಾಗಿ ಎಲ್ಲಾ ಪ್ರದೇಶ, ಜನಾಂಗ, ಧರ್ಮ, ದೇಶಗಳಲ್ಲಿ ಹೇಳುವುದನ್ನು ಕಾಣುತ್ತೇವೆ. ಜನಪದ ಕಥೆಗಳು ರಮ್ಯತೆಯಿಂದ ಕೂಡಿದ್ದರೂ, ಅದರೊಳಗೆ ಪ್ರದೇಶದ ಅನೇಕ ಸಾಂಸ್ಕೃತಿಕ ಅಂಶಗಳು ಹುದುರಿಕೊಂಡಿರುತ್ತವೆ. ಹೀಗಾಗಿ ಜನಪದ ಕಥೆಗಳು ತಮ್ಮ ಕಾಲಘಟ್ಟದ (ಪ್ರಾಚೀನ) ವಿಷಯವನ್ನು ಹೊತ್ತುಕೊಂಡು ಬಂದಿರುತ್ತವೆಂಬುದು ಸತ್ಯ. ಅಂಥ ಕಥೆಗಳನ್ನು ಹಾನಗಲ್ಲು ಪರಿಸರದಲ್ಲಿ ಅನೇಕ ಜನ ಹೇಳುತ್ತಾರೆ. ಹಾನಗಲ್ಲು ತಾಲೂಕಿನ ಆಲದಕಟ್ಟೆ ಗ್ರಾಮದವರಾದ ಫಕೀರಪ್ಪ ಯಲ್ಲಪ್ಪ ಶ್ರೀಗಿರಿ ಅವರು ಏಕಪತಿವೃತೆಯ ಕಥೆ, ಮಾನವ ಮನೆ ಪಯಣ, ಧರ್ಮಶೇಖರ ರಾಜ, ದಾಸಪ್ಪನ ಕಥೆ, ಮಹಾಕಾಳಿಯ ಶಾಪ, ಅಣ್ಣತಮ್ಮ, ಕವಡಿಭಾವ (ಮಾಂತ್ರಿಕ ಕಥೆ) ಮುಗ್ಗಗಾರನ ಕಥೆ, ಚಿತ್ರಶೇಖರರಾಜಶೇಖರ ಕಥೆ, ಚಕ್ಕುಲಿಯ ಕಥೆ ಮೊದಲಾದವುಗಳನ್ನು ಹೇಳುತ್ತಾರೆ. ಅದೆ ಗ್ರಾಮದ ದಿ.ಆನಂದಪ್ಪ ಫಕೀರಪ್ಪ ಶ್ರೀಗಿರಿ ಅವರು ಪಾಪಾತ್ಮ ರಾಜನ ಕಥೆ, ಬಾಂಬಿ ರಾಕ್ಷಸಿ, ರುದ್ರಶೇಖರ ಮಹಾರಾಜನ ಕಥೆ, ಪುಣ್ಯಾತ್ಮ ರಾಜಪಾಪಾತ್ಮ ರಾಜನ ಕಥೆ, ನಾಗಲೋಕದ ಸುಂದರಿ, ಬಂದೂಕ ಬೇಟೆಗಾರನ ಕಥೆ, ಮುಂಗಲು ಭಾವನ ಕಥೆ, ಬಾಳೆಹಣ್ಣು ತಿಂದು ಬಂದ ಕಥೆ, ಅಜ್ಜಿ ಮೊಮ್ಮಗನ ಕಥೆ, ನೀಲಿಗಿರಿ ನಿಂಬತಕ್ಕನ ಕಥೆ ಇತ್ಯಾದಿಗಳನ್ನು ಹೇಳುತ್ತಾರೆ. ತಿಳಿವಳ್ಳಿ ಗ್ರಾಮದವರಾದ ಗೋಣಿಯಪ್ಪ ಸಿದ್ಧಪ್ಪ ಚವ್ಹಾಣ ಇವರು ಬಂಗಾಲ ಗಿರಿಬಾಬಾ, ರಾಜಹಂಸ ಪರಮಹಂಸ, ಶಿವಲೋಚನಿ ಕೂರ್ಮರಾಜ, ಬಸವಕುಮಾರಲೋಹಿತಕುಮಾರ ಕಥೆ, ಲಕ್ಷಾಪತಿರಾಜನ ಕಥೆ ಇತ್ಯಾದಿಗಳನ್ನು ಹೇಳುತ್ತಾರೆ. ಅದರಂತೆ ನಾಗರಾಜ ತೊಂಬ್ರಿ, ನಾಗರಾಜ ಜೋಗಿ, ಆನಂದಪ್ಪ ಜೋಗಿಮುಂತಾದ ಅನೇಕರು ಕಥೆಗಳನ್ನು ಹೇಳುವುದುಂಟು.

ಗಾದೆಗಳು

ಗಾದೆಗಳು ಅನುಭಾವಿಗಳ ಅನುಭವದಿಂದ ಮೂಡಿ ಬಂದ ಸತ್ರರೂಪದ ವಾಕ್ಯಗಳು. ವೇದ ಸುಳ್ಳಾಗಬಹುದು ಗಾದೆ ಸುಳ್ಳಾಗಲಾರದು ಎಂಬ ಗಾದೆ ಮಾತು ಗಾದೆಗಳ ಸತ್ಯಪ್ರಮಾಣ ನಿಷ್ಠತೆಯನ್ನು ತಿಳಿಸುತ್ತದೆ. ಆಡು ಮುಟ್ಟದ ಗಿಡವಿಲ್ಲ, ಗಾದೆ ಹೇಳದೆ ಇರುವ ವಿಷಯವಿಲ್ಲ ಎಂಬಂತೆ ಗಾದೆಗಳ ವ್ಯಾಪ್ತಿಯೂ ಬಹು ದೊಡ್ಡದು. ಇಂಥ ಗಾದೆಗಳನ್ನು ಬಳಸಿಕೊಳ್ಳುವುದರ ಮೂಲಕ ಪ್ರಾದೇಶಿಕ ಚರಿತ್ರೆ ಅಧ್ಯಯನವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ಹಾನಗಲ್ಲು ಪ್ರದೇಶಕ್ಕೆ ಸಂಬಂಧಪಟ್ಟಂತೆ, “ಹಾನಗಲ್ಲ ಹಾದ್ಯಾಗ ಹಾಯಬಾರದು, ಹಾವೇರ್ಯಾಗ ಸಾಯಬಾರದು, ಶಿಗ್ಗಾವ್ಯಾಗ ಸಿಗಬಾರದುಎಂಬ ಗಾದೆ ಮಾತು ಉಂಟು. ಅದು ಹಾನಗಲ್ಲ, ಹಾವೇರಿ ಹಾಗೂ ಶಿಗ್ಗಾವಿಗಳ ಕುರಿತಾದ ಒಂದು ಅನುಭವವನ್ನು ಹೇಳುವಂತಹದ್ದು, ಹಾನಗಲ್ಲ ಹಾದ್ಯಾಗ ಹಾಯಬಾರದು ಎಂಬ ಮಾತು ಹಾನಗಲ್ಲಿನಲ್ಲಿ ಬಹುಪಾಲು ಜನ ಶ್ರೀಮಂತರು ಹಾಗೂ ಭೂಮಲಿಕರು, ಕೆಲಸವಿಲ್ಲದೆ ಹರಟೆಗಾಗಿ ಕಟ್ಟೆ ಮೇಲೆ ಕುಳಿತು ಹಾದಿಹೋಕರನ್ನು ಟೀಕಿಸುತ್ತಿದ್ದರಂತೆ. ಇನ್ನೊಂದು ವಾದದಂತೆ ಗ್ರಾಮದಲ್ಲಿ ವಿದ್ವತ್  ಪೂರ್ಣ ಜನ ಹೆಚ್ಚಿರುವುದರಿಂದ ಜನರ ಮುಂದೆ ತಿರುಗಾಡಬಾರದು ಎಂಬ ಕಾರಣಗಳಿಂದ ಮೇಲಿನ ನುಡಿ ಹುಟ್ಟಿಕೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಹಾವೇರ್ಯಾಗ ಸಾಯಬಾರದುಎಂಬ ಮಾತು ಹಾವೇರಿಯಲ್ಲಿ ಮೊದಲು ಹೆಣಗಳನ್ನು ಸರಿಯಾಗಿ ಶೃಂಗರಿಸದೆ, ಸಂಪ್ರದಾಯಗಳನ್ನು ವಿಧಿವತ್ತಾಗಿ ಮಾಡದೆ, ಸರಿಯಾಗಿ ಹೂಳುವ ಕ್ರಮವಿಲ್ಲದ್ದರಿಂದ ಅಥವಾ ಅಲ್ಲಿಯ ಸ್ಮಶಾನ ಹಾವೇರಿಯಿಂದ ಬಹುದೂರವಿರುವುದರಿಂದ ಅಥವಾ ಹೆಣಗಳ ದಫನದ ನಂತರ ಸ್ನಾನ ಮಾಡಲಿಕ್ಕೆ ನೀರು ಸಿಗುತ್ತಿರಲಿಲ್ಲವಂತೆ. ಕಾರಣ(ಗಳಿಂದ)ದಿಂದ ಮೇಲಿನ ಮಾತು ಬಂದಿರಬಹುದು.

ಇನ್ನೂಶಿಗ್ಗಾಂವ್ಯಾಗ ಸಿಗಬಾರದುಎಂಬ ಮಾತು ಶಿಗ್ಗಾಂವಿಯಲ್ಲಿ ಸಿಕ್ಕುಬಿಟ್ಟರೆ, ಅಲ್ಲಿಯ ಜನರು ಬಿಡುವುದೆ ಇಲ್ಲವಂತೆ, ಪಂಟಮಾತು ಹಚ್ಚಿಕೊಂಡು ತಮಗೆ ಬೇಕಾದ್ದನ್ನು ಸಾಧಿಸುತ್ತಾರೆ ಎಂಬ ಕಾರಣದಿಂದ ಮೇಲಿನ ಮಾತು ಹುಟ್ಟಿಕೊಂಡಿದೆ.

ಹಾನಗಲ್ಲು ಪರಿಸರದಲ್ಲಿ ಸ್ತ್ರೀಯರು ಬಳಸಿದ ಪ್ರಾಸಬದ್ಧ ಅಶ್ಲೀಲ ಮಾತಿನ ವರಸೆಯೊಂದು ರೀತಿ ಇದೆ. ಅಗಡಿ ಗ್ರಾಮದ ಹೆಣ್ಣು ಮಕ್ಕಳು ಹಾನಗಲ್ಲಿನ ಕನ್ಯಾ ನೋಡಲಿಕ್ಕೆ ಬಂದಾಗ, ಹಾನಗಲ್ಲಿನ ಸ್ತ್ರೀಯರು ವ್ಯಂಗ್ಯವಾಗಿಅಗಡಿ ಬುಗಡ್ಯಾರು ಇಲ್ಯಾದಕ್ಕ ಬಂದರುಎಂದರೆ, ಅದಕ್ಕೆ ಉತ್ತರವಾಗಿ ಅಗಡಿ ಸ್ತ್ರೀಯರುಹಾನಗಲ್ಲ ಹಾದರಗಿತ್ತಿ ನೋಡಲಿಕ್ಕೆ ಬಂದೇವಿಎಂದರಂತೆ. ರೀತಿಯ ಇನ್ನೂ ಎಷ್ಟೋ ಮಾತಿನ ಚಮತ್ಕಾರಿಕ ವರಸೆಗಳು, ನುಡಿಗಟ್ಟುಗಳು ಇದ್ದಿರಬಹುದು. ಅವೆಲ್ಲವುಗಳ ಸಂಗ್ರಹ ಮತ್ತು ವಿಶ್ಲೇಷಣೆಯಿಂದ ಹಾನಗಲ್ಲಿನ ಅನೇಕ ಸಾಂಸ್ಕೃತಿಕ ಅಂಶಗಳನ್ನು ತಿಳಿಯಲಿಕ್ಕೆ ಸಾಧ್ಯವಿದೆ.

ಬಯಲಾಟಗಳು

ಜನಪದರು ತಮ್ಮ ಅಂತರಂಗದ ಅನಿಸಿಕೆಗಳನ್ನು ಹೊರಹಾಕಲು ಕಂಡುಕೊಂಡ ಅನೇಕ ಮಾರ್ಗಗಳಲ್ಲಿ ಬಯಲಾಟ ಮಾರ್ಗವೂ ಒಂದು. ಪ್ರಾಚೀನ ಕಾಲದಿಂದಲೂ ಜನಪದ ಆಟಗಳು ಪ್ರಚಲಿತವಿದ್ದವೆಂಬುದಕ್ಕೆ ಅನೇಕ ಕುರುಹುಗಳುಂಟು. ಬಯಲಾಟದಲ್ಲೂ ಯಕ್ಷಗಾನ, ದೊಡ್ಡಾಟ, ಸಣ್ಣಾಟಗಳೆಂಬ ಪ್ರಬೇಧಗಳುಂಟು. ಯಕ್ಷಗಾನವು ವಿಶೇಷವಾಗಿ ಮಲೆನಾಡಿನಲ್ಲಿ ಪ್ರದರ್ಶನಗೊಂಡರೆ, ದೊಡ್ಡಾಟ ಹಾಗೂ ಸಣ್ಣಾಟಗಳು ಬಯಲುನಾಡಿನಲ್ಲಿ ಪ್ರದರ್ಶನಗೊಳ್ಳುತ್ತ ಬಂದಿವೆ. ಮಲೆನಾಡಿನ ಸೆರಗಿನಲ್ಲಿರುವ ಹಾನಗಲ್ಲು ಪಶ್ಚಿಮಕ್ಕೆ ಮಲೆನಾಡಿನ ಪ್ರದೇಶವನ್ನು, ಪೂರ್ವಕ್ಕೆ ಬಯಲುನಾಡನ್ನು ಹೊಂದಿರುವ ವಿಶಿಷ್ಟ ನೆಲೆ. ಹಾನಗಲ್ಲು ಬಯಲಾಟದ ಪ್ರಕಾರವಾದ ಯಕ್ಷಗಾನ ಪರಿಸರಕ್ಕೆ ಅತ್ಯಂತ ಸಮೀಪದಲ್ಲಿದ್ದರೂ, ಬೆಳವಲ ನಾಡಿನ ಬಯಲಾಟ ಪ್ರಕಾರವಾದ ದೊಡ್ಡಾಟಕ್ಕೆ ಪ್ರಸಿದ್ಧಿಯನ್ನು ಪಡೆದಿತ್ತು. ೧೯ನೆಯ ಶತಮಾನದ ಪ್ರಾರಂಭದ ಭಾಗದಲ್ಲಿ ದೊಡ್ಡಾಟವನ್ನು ಹಾನಗಲ್ಲು ಪರಿಸರದಲ್ಲಿ ಉತ್ಕೃಷ್ಟ ಮಟ್ಟದಲ್ಲಿ ಪ್ರಸಾರಗೊಳಿಸಿ ಉಳಿಸಿ ಬೆಳೆಸಿದ ಕೀರ್ತಿಗೆ ದಿವಂಗತ ಕರಿಯಪ್ಪ ಈಶ್ವರಪ್ಪ ಕಾಟೇಕರ ಕಾರಣಕರ್ತೃವಾಗಿದ್ದಾರೆ. ಇವರು ವೃತ್ತಿಯಿಂದ ಕ್ಷೌರಿಕರಾಗಿದ್ದರೂ ಪ್ರವೃತ್ತಿಯಿಂದ ದೊಡ್ಡಾಟದ ಕಲಾವಿದರಾಗಿ, ಭಾಗವತರಾಗಿ ಅಥವಾ ಆಟದ ಮಾಸ್ತರರಾಗಿ ಪ್ರಸಿದ್ಧಿಯನ್ನು ಪಡೆದವರು. ಬಹುದೊಡ್ಡ ಕಲಾವಿದರಾದ ಇವರು ತಮ್ಮ ಅದ್ಭುತ ನಟನೆಯಿಂದ ಜನರ ಮನಸ್ಸನ್ನು ಸೂರೆಗೊಂಡವರು. ಯಾವುದೆ ಕುಣಿತ, ಸಂಗೀತ, ಮಾತಿನ ವರಸೆ, ಹಾವಭಾವಗಳನ್ನು ಅತ್ಯಂತ ನಿರಾಳವಾಗಿ ಮಾಡಿ ತೋರಿಸುವ ತಾಕತ್ತಿನ ವ್ಯಕ್ತಿಯಾಗಿದ್ದರು. ಆಡುಮುಟ್ಟದ ಗಿಡವಿಲ್ಲವೆಂಬಂತೆ ಕಾಟೇಕರ ಅವರು ದೊಡ್ಡಾಟದಲ್ಲಿ ಮುಟ್ಟದ ವಿಷಯವಿಲ್ಲ ಎಂಬ ಮಟ್ಟದಲ್ಲಿ ಕಲೆಯನ್ನು ಕರತಲಾಮಲಕ ಮಾಡಿಕೊಂಡಿದ್ದರು.

ದಿ.ಕರಿಯಪ್ಪ ಕಾಟೇಕರ ಅವರು ೧೯೪೦ರಲ್ಲಿತರುಣ ನಾಟಕ (ಬೈಲಾಟ) ಮಂಡಳವನ್ನು ಹುಟ್ಟು ಹಾಕಿ, ಹಾನಗಲ್ಲು ಪರಿಸರದಲ್ಲಿ ದೊಡ್ಡಾಟದ ಚಟುವಟಿಕೆಗಳನ್ನು ಚುರುಕುಗೊಳಿಸಿದರು. ಅನಾನುಭವಿ ಅವಿದ್ಯಾವಂತ ಯುವಕರನ್ನು ಒಗ್ಗೂಡಿಸಿ, ಕಠಿಣ ಪರಿಶ್ರಮ ರಂಗತಾಲೀಮಿನ ಮೂಲಕ ಉತ್ಕೃಷ್ಟ ಮಟ್ಟದ ಆಟ ಪ್ರದರ್ಶಿಸಿ ಜನಮನ ಗೆದ್ದವರು. ಜನರು ಈತನ ದೊಡ್ಡಾಟದ ರುಚಿ ಉಂಡು ಅನುಭವಿಸಿ ಸಂತೋಷಪಟ್ಟು, ಮನಸೋತು ಮತ್ತೆ ಮತ್ತೆ ಹಣಕೊಟ್ಟು ಆಡಿಸಿ ನೋಡಿ ಸಂತೋಷಪಟ್ಟರೆಂಬುದನ್ನು ಅರಿತಾಗ, ಆತನ ಮಾಸ್ತರಿಕೆಯ ಹಿಂದಿನ ಕೌಶಲ್ಯ ಎಂತಹದೆಂಬುದು ಎಲ್ಲರಿಗೂ ಮನವರಿಕೆಯಾಗುತ್ತದೆ. ಮೇಳವನ್ನು ಕಟ್ಟಿಕೊಂಡು ಹಾನಗಲ್ಲಿನ ಪ್ರದೇಶದುದ್ದಕ್ಕೂ ತಿರುಗಿ ಪ್ರದರ್ಶಿಸಿ ಜನಮನದಲ್ಲಿ ಉಳಿದರು. ಕ್ರಿ.. ೧೯೪೦ರಿಂದ ಪ್ರಾರಂಭವಾದ ದೊಡ್ಡಾಟ ಪ್ರದರ್ಶನವು ೧೯೮೩ರ ವರೆಗೆ ಸುದೀರ್ಘ ೪೩ ವರ್ಷಗಳ ಕಾಲ ನಿರಂತರವಾಗಿ ಕಾಟೇಕರವರ ನಿರ್ದೇಶನದಲ್ಲಿ ನಡೆಯಿತು. ಅವಧಿಯಲ್ಲಿ ಕೃಷ್ಣಾರ್ಜುನರ ಕಾಳಗ, ಕರ್ಣಪರ್ವ, ಅರಚಂಡಾಸುರಪ್ರಚಂಡಾಸುರ ಕಾಳಗ, ಭೀಮಾರ್ಜುನ ಕಾಳಗ, ತಾಮ್ರಧ್ವಜನ ಕಾಳಗ, ಸಂಪೂರ್ಣ ರಾಮಾಯಣ, ವಿರಾಟಪರ್ವ, ಸುದನ್ಮ ಬಬ್ರುವಾಹನ ಕಾಳಗ, ರಥಿ ಕಲ್ಯಾಣ, ಷಣ್ಮುಖ ವಿಜಯ, ದ್ರೌಪದಿ ವಸ್ತ್ರಾಪಹರಣ, ಐರಾವಣ ಮೈರಾವಣ, ಸುಗಂಧ ಪುಷ್ಪ ಹರಣ, ಕುರುಕ್ಷೇತ್ರ, ದಕ್ಷಬ್ರಹ್ಮ, ಸತಿ ಅನಸೂಯಾ, ಸುಭದ್ರ ಕಲ್ಯಾಣ, ಇಂದ್ರಜಿತ ಕಾಳಗ ಇತ್ಯಾದಿಗಳನ್ನು ಪ್ರದರ್ಶಿಸಿ ಜನಮನ ಸೂರೆಗೊಂಡರು. ಕರಿಯಪ್ಪ ಕಾಟೇಕರ ಅವರ ಶಿಷ್ಯರಾದ ಪಕ್ಕಿರಪ್ಪ ಕೊಲ್ಲಾಪುರ, ಲಕ್ಷ್ಮಣ ಕಲ್ಯಾಪುರ, ವಿಷ್ಣುರಾವ್ ಪಕಾಳೆ, ಶಿವರಾಮ ಬಂಕಾಪುರ, ಶಿವಪ್ಪ ಜಿಡ್ಡಿ, ಚನ್ನಪ್ಪ ಕಮಾಟ, ನಾಗಪ್ಪ ಗುಲಗಂಜಿ, ಯಲ್ಲಪ್ಪ ಕಿತ್ತೂರು, ಆರ್.ಟಿ.ನಿಂಗೋಜಿ ಮುಂತಾದವರಿಂದ ನಾಟಕಗಳನ್ನೂ ಯಶಸ್ವಿಯಾಗಿ ಪ್ರದರ್ಶಿಸಿ ಜನಮನ ಗೆದ್ದ ಚಿರಸ್ಮರಣೀಯರಾದ ನಾಟಕಕಾರರು.[9] ಕಾಟೇಕರವರು ತಮ್ಮ ಮೇಳದೊಂದಿಗೆ ದೊಡ್ಡಾಟವನ್ನು ಧಾರವಾಡದ ಆಕಾಶವಾಣಿಯ ಮೂಲಕ ಪ್ರದರ್ಶಿಸಿದ್ದಾರೆ. ದೊಡ್ಡಾಟದ ಕಲೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಕರಿಯಪ್ಪ ಕಾಟೇಕರ ಅವರನ್ನು ಜನ ಸಂಗೀತ ವಿದ್ವಾನ್ ಪಂಡಿತರು, ಕಲಾ ಸಾವುಕಾರ, ಬಯಲಾಟ ಕಲೆಯ ಪ್ರವೀಣ, ರೇಡಿಯೋ ಸ್ಟಾರ್ ಎಂಬ ಬಿರುದುಗಳಿಂದ ಕೊಂಡಾಡಿದ್ದಾರೆ. ತರುಣ ನಾಟಕ (ಬಯಲಾಟ) ಮಂಡಳಿಯು ತನ್ನ ೨೫ನೆಯ ವರ್ಷದ ರಜತ ಮಹೋತ್ಸವದಲ್ಲಿ (೧೯೬೫) ‘ಐರಾವಣಮೈರಾವಣಆಟವನ್ನು ಪ್ರದರ್ಶಿಸಿತು. ಅದರ ಕರ್ತೃ ಕರ್ನಾಟಕ ಕವಿಚಂದ್ರ ಪಂಡಿತ ಶ್ರೀಕಂಠಶಾಸ್ತ್ರಿ ನಲವಡಿ ಅವರಿಂದ ಕಾಟೇಕರರಿಗೆನಾಟಕ ರತ್ನಾಕರಪ್ರಶಸ್ತಿಯನ್ನು ನೀಡಲಾಯಿತು. ಅದರಂತೆ ಮುಂದೆ ಗಂಗೂಬಾಯಿ ಹಾನಗಲ್ಲ, ನಾರಾಯಣ ಗಂಗಾಧರ ದೇಶಪಾಂಡೆ ಮುಂತಾದವರಿಂದ ಈತನೊಬ್ಬ ದೊಡ್ಡಾಟದ ಬಹುದೊಡ್ಡ ಕಲಾವಿದ ಎಂಬ ಪ್ರಶಸ್ತಿ ಪತ್ರಗಳನ್ನು ನೀಡಿ ಜನ ಗೌರವಿಸಿದರು. ಆದರೆ ಸರಕಾರ, ಸಂಘಸಂಸ್ಥೆಗಳು ಬಹುದೊಡ್ಡ ಕಲಾವಿದನನ್ನು ಗುರುತಿಸಿ ಸನ್ಮಾನಿಸಿ ಆರ್ಥಿಕವಾಗಿ ಆತನನ್ನು ಸದೃಢನನ್ನಾಗಿ ಮಾಡದೆ ಹೋದದ್ದು ಮಾತ್ರ ದುರಂತ. ತನ್ನ ಕೊನೆಯ ದಿನಗಳಲ್ಲಿ ಆರ್ಥಿಕ ಕೊರತೆಯಿಂದ ಹೀನಾಯವಾದ ಸ್ಥಿತಿಯನ್ನು ಅನುಭವಿಸಿ ಪರಲೋಕ ಯಾತ್ರೆಗೈದು ದೊಡ್ಡಾಟದ ಯುಗವೂ ಮುಗಿದಂತಾಯಿತು.

ಕರಿಯಪ್ಪ ಕಾಟೇಕರ ದೊಡ್ಡಾಟಗಳ ಜೊತೆಗೆ ಸಣ್ಣಾಟಗಳನ್ನೂ ಪ್ರದರ್ಶಿಸಿದ್ದಾರೆಂಬ ಹೇಳಿಕೆಯುಂಟು. ಆದರೆ ಸಂಖ್ಯಾ ಪ್ರಮಾಣ ಅತ್ಯಂತ ಕಡಿಮೆ. ಆತನ ತಮ್ಮ ಫಕ್ಕೀರಪ್ಪ ಕಾಟೇಕರ, ಯಲ್ಲಪ್ಪ ಕಿತ್ತೂರು, ರಾಮಚಂದ್ರ ತೋಟಪ್ಪ ನಿಂಗೋಜಿ ಮುಂತಾದವರುಗಳು ಪಾತ್ರಧಾರಿಗಳಾಗಿ, ಭಾಗವತರಾಗಿ ಕೆಲವು ಸಣ್ಣಾಟಗಳನ್ನು ಪ್ರದರ್ಶಿಸಿದ್ದಾರೆ. ಆದರೆ ಅವ್ಯಾವುವೂ ದೊಡ್ಡಾಟಗಳಷ್ಟು ಜನಮನ ಸೂರೆಗೊಳ್ಳಲಿಲ್ಲ. ವೀರರಸ ಪ್ರಧಾನವಾದ ದೊಡ್ಡಾಟಗಳು ಹಾನಗಲ್ಲಿನ ಜನರ ಮನ ಗೆಲ್ಲಲು ವಿರಾಟನಗರದ ರಾಜಧಾನಿ ಹಾಗೂ ಸ್ವತಂತ್ರ ಸಾಮಂತ ಅರಸರಾದ ಹಾನಗಲ್ಲು ಕದಂಬ ಅರಸರ ಶೌರ್ಯ ಪರಾಕ್ರಮಗಳು ಜನಮನದಲ್ಲಿ ಎಲ್ಲೋ ಅವ್ಯಕ್ತವಾಗಿ ಕುಳಿತಿರುವ ಅವರ ಸ್ಥಿತಿ, ವೀರರಸ ಪ್ರಧಾನ ಆಟಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಟ್ಟಿರಬಹುದಾಗಿದೆ. ಹಿನ್ನೆಲೆಯಲ್ಲಿ ಜನಪದ ರಂಗಭೂಮಿ ಹಾನಗಲ್ಲಿನಲ್ಲಿ ಜನಪ್ರಿಯತೆಗಳಿಸಿಕೊಂಡಿತ್ತು.

ಒಟ್ಟಾರೆ ಸ್ಥಳಿಯ ಚರಿತ್ರೆ ಅಲಕ್ಷಿತರನ್ನು, ದುರ್ಬಲರನ್ನು ಕುರಿತು ವಿಶ್ಲೇಷಿಸುವ ಹಾಗೂ ಸ್ಥಳೀಯ ಸಮುದಾಯಗಳ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಬೌದ್ಧಿಕ ಇತ್ಯಾದಿ ಸಂಗತಿಗಳನ್ನು ಸಂಗ್ರಹಿಸಿಕೊಡುವ ವಿಪುಲ ಕಾರ್ಯವನ್ನು ಮಾಡುತ್ತದೆ. ನಿಟ್ಟಿನಲ್ಲಿ ಹಾನಗಲ್ಲಿನ ಜನಪದ ಜೀವನಕ್ಕೆ ಸಂಬಂಧಿಸಿದ ಮೌಖಿಕ ಚರಿತ್ರೆಯನ್ನು ಕಟ್ಟಲಾಗಿದೆ. ಇನ್ನೂ ಹಾನಗಲ್ಲು ಸುತ್ತಮುತ್ತಲಿನ ಪ್ರದೇಶದಲ್ಲಿ ಜಾನಪದ ಅಧ್ಯಯನ ಅಷ್ಟಾಗಿ ನಡೆದಿಲ್ಲ. ಅದು ಕೆನೆ ನೆಲವಾಗಿಯೇ ಉಳಿದುಕೊಂಡಿದೆಯೆಂಬುದು ಸತ್ಯ. ಪರಿಸರದಲ್ಲಿ ಜಾನಪದ ಅಧ್ಯಯನ ಕೈಗೊಳ್ಳುವವರಿಗೆ ಸಮೃದ್ಧವಾದ ಹಾಗೂ ಮೌಲಿಕವಾದ ಸಾಮಗ್ರಿ ದೊರೆಯಲು ಸಾಧ್ಯವಿದೆ. ಆದ್ದರಿಂದ ಲೇಖನ ಹಾನಗಲ್ಲಿನ ಮೌಖಿಕ ಆಕರಗಳು ಸಂಶೋಧಕರಿಗೆ ಸ್ಫೂರ್ತಿಯಾಗಬಲ್ಲದೆಂದು ಭಾವಿಸಿದ್ದೇನೆ.

 


[1] ವಿವೇಕ ರೈ ಬಿ.ಎ., ಅನ್ವಯಿಕ ಜಾನಪದ, ಪು. ೧೦೪ – ೧೦೫, ಬೆಂಗಳೂರು – ೧೯೯೫

[2] ಬಾಲಸುಬ್ರಮಣ್ಯ, (ಸಂ), ಕುರುಗೋಡು, ಲೇ.ಗಂಗಾಧರ ದೈವಜ್ಞ, ಮೌಖಿಕ ಆಕರಗಳು, ಪು. ೧೩೫, ಹಂಪಿ – ೨೦೦೪

[3] ಚನ್ನಕ್ಕ ಪಾವಟೆ, ಹಾನಗಲ್ಲ ಕದಂಬರು, ಪು. ೨೨೭, ಧಾರವಾಡ – ೧೯೯೮

[4] ಗದ್ದಗಿ ಮಠ ಬಿ.ಎಸ್., ಕನ್ನಡ ಜಾನಪದ ಗೀತೆಗಳು, ಪು.೩೪೨, ಧಾರವಾಡ – ೧೯೬೯

[5] ಅದೆ

[6] ರುದ್ರಪ್ಪ ತಳವಾರ, ಹಾನಗಲ್ಲ : ಒಂದು ಸಾಂಸ್ಕೃತಿಕ ಅಧ್ಯಯನ, ಪು. ೧೦ – ೧೧

[7] K.I., IV, 55, Hulagur, (1245 A.D.)

[8] ಹಿರೇಮಠ ಆರ್.ಸಿ. ಹಾಗೂ ಕಲಬುರ್ಗಿ ಎಂ.ಎಂ., ಕನ್ನಡ ಶಾಸನ ಸಂಪದ, ಪು. ೧೦೩, ಕರ್ನಾಟಕ ಧಾರವಾಡ – ೧೯೯೫

* ಇವೆಲ್ಲವುಗಳ ಬಹುದೂರದ ಕಾಶಿಗೆ ಹೋಗಲು ಅಸಾಧ್ಯವಾಗಿದ್ದರಿಂದ ಕಾಶಿಯನ್ನು ಹತ್ತಿರದಿಂದ ಕಾಣಲು ಸೃಷ್ಟಿಗೊಂಡ ಸ್ಥಳಗಳು.

[9] ಶಾಂತಪುರಮಠ ವ್ಹಿ.ಜಿ., ವಿರಾಟನಗರ, (ಅಪ್ರಕಟಿತ)