ನಂಬಿಕೆ ಮತ್ತು ಆಚರಣೆಗಳು ಸಂಸ್ಕೃತಿಯ ಒಂದು ಭಾಗ. ಮನುಕುಲಕ್ಕೆ ಬಹುಮುಖ್ಯವಾದ ಸಂಸ್ಕೃತಿ ಬಹಳ ವ್ಯಾಪಕ ಅರ್ಥವನ್ನು ಒಳಗೊಂಡಿದೆ. ನ್ಯಾಯ, ನೀತಿ, ಸತ್ಯ, ಧರ್ಮ, ಪ್ರಾಮಾಣಿಕತೆ ಇವೆಲ್ಲವನ್ನು ಒಳಗೊಂಡಿರುವುದೇ ಸಂಸ್ಕೃತಿ. ಸಂಸ್ಕೃತಿಯಲ್ಲಿ ಸಂಗೀತ, ಸಾಹಿತ್ಯ, ಕಲೆ, ನಂಬಿಕೆ, ಸಂಪ್ರದಾಯ, ಜಾತ್ರೆ, ಉತ್ಸವ ಮೊದಲಾದವುಗಳು ಸಮಾವೇಶಗೊಂಡಿರುತ್ತವೆ. ಒಂದು ಜನಾಂಗದ ಸಂಸ್ಕೃತಿಯನ್ನು ತಿಳಿದುಕೊಳ್ಳುವಲ್ಲಿ ಎಲ್ಲ ಕ್ಷೇತ್ರಗಳು ನಿರ್ಧರಿತ ಅಂಶಗಳಾಗಿವೆ. ಸಂಸ್ಕೃತಿಯು ಎಂದೂ ನಿಂತ ನೀರಾಗುವುದಿಲ್ಲ. ನಿರಂತರ ಬೆಳವಣಿಗೆಯೇ ಸಂಸ್ಕೃತಿಯ ವಿಶೇಷತೆ. ಭಾರತೀಯ ಸಂಸ್ಕೃತಿ ಸಂಪದ್ಭರಿತ ಮತ್ತು ಶ್ರೀಮಂತಿಕೆಯಿಂದ ಕೂಡಿದೆ. ಉಚ್ಚ ಸಂಸ್ಕೃತಿಯ ಜೊತೆಗೆ ಉಪ ಸಂಸ್ಕೃತಿಗಳು ಇಲ್ಲಿವೆ. ಶಾಸ್ತ್ರೀಯ ಕಲೆ, ಸಂಗೀತದ ಜೊತೆಗೆ ಜಾನಪದ ಕಲೆ, ಸಂಗೀತಗಳು ಹೇರಳವಾಗಿವೆ. ಆದರೆ ಈಗ ಜಾನಪದ ಕಲೆಗಳು ನಶಿಸತೊಡಗಿವೆ. ಮನುಷ್ಯ ಅಕ್ಷರ ಬಲ್ಲವನಾಗುತ್ತಿದ್ದಂತೆಯೇ ಪರಂಪರಾಗತ ಕಲೆ, ಸಂಗೀತ, ನಂಬಿಕೆ, ಆಚರಣೆ, ಉತ್ಸವ ಇತ್ಯಾದಿ ಚಟುವಟಿಕೆಗಳು ದೂರಾಗುವ ಅಪಾಯ ನಡೆದಿದೆ. ಹಿನ್ನೆಲೆಯಲ್ಲಿ ಅವುಗಳ ಕುರಿತ ಅಧ್ಯಯನಕ್ಕೂ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಹಾವೇರಿ ಜಿಲ್ಲೆಯ ಹಾನಗಲ್ಲು ಪರಿಸರದಲ್ಲಿ ಪ್ರಾಚೀನ ಕಾಲದಿಂದಲೂ ಮುಂದುವರೆದುಕೊಂಡು ಬಂದಿರುವ ವಿಶಿಷ್ಟ ನಂಬಿಕೆ, ಸಂಪ್ರದಾಯ, ಆಚರಣೆ ಹಾಗೂ ಉತ್ಸವಗಳು ಪ್ರಾಮುಖಳ್ಯತೆಯನ್ನು ಪಡೆದುಕೊಂಡಿವೆ.

ನಾಡಹಬ್ಬ

ಋತುಗಳು ಬದಲಾದಂತೆ ಧಾರ್ಮಿಕ ಉತ್ಸವಗಳನ್ನು ಆಚರಿಸುವುದು ಭಾರತದಲ್ಲಿ ಬೆಳೆದುಬಂದ ಸಂಪ್ರದಾಯ. ನವರಾತ್ರಿ ಹಾಗೂ ದುರ್ಗಾಪೂಜೆಯನ್ನು ಭಾರತದ ಎಲ್ಲಾ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಆಚರಣೆಗಳಲ್ಲಿ ವಿವಿಧತೆ ಇದ್ದರೂ ಉತ್ಸವ ಕಾಲ ಮಾತ್ರ ಒಂದೇ ಆಗಿದೆ. ಶರದೃತುವಿನ ಆಶ್ವಿಜ ಮಾಸ ಮಳೆಯ ಆರ್ಭಟ ನಿಂತು ಜನರೆಲ್ಲ ಹರ್ಷದಿಂದ ಇರುವಾಗ, ಹಬ್ಬದ ಆಚರಣೆ ನಡೆಯುತ್ತದೆ. ಹಸಿರು ಹೊಲ, ಸೂಸುತ್ತಿರುವ ತಂಗಾಳಿ, ಹೊಳೆಯುವ ಸೂರ್ಯ, ಮಳೆಗಾಲದಲ್ಲಿ ಮಣ್ಣಾಗಿದ್ದ ಪ್ರಕೃತಿಗೆ ಹಾಗೂ ಮಾನವನಿಗೆ ಚೈತನ್ಯವನ್ನುಂಟುಮಾಡುವ ಸಂದರ್ಭದಲ್ಲಿ ಅನಿಷ್ಟಗಳನ್ನು ದೂರ ಮಾಡಿ ಅಭಿಷ್ಠಗಳನ್ನು ಪೂರೈಸುವ ದೇವಿ ದುರ್ಗಿಗೆ ಭಕ್ತಿಯ ಪೂಜೆಯನ್ನು ಅರ್ಪಿಸಲಾಗುತ್ತದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಮಹಾರಾಷ್ಟ್ರದಲ್ಲಿ ಗಣೇಶ ಉತ್ಸವವು ಜನ ಜಾಗೃತಿಗೆ ಕಾರಣವಾಗಿ ರಾಷ್ಟ್ರೀಯ ಹಬ್ಬವಾಗಿರುಂತೆ, ಬಂಗಾಳದಲ್ಲಿ ನವರಾತ್ರಿ ಸಂದರ್ಭದಲ್ಲಿ ದುರ್ಗಾ ಪೂಜೆ, ರಾಮಲೀಲಾ ಮಹೋತ್ಸವವನ್ನು ಆಚರಿಸುವ ಸಂಪ್ರದಾಯವಿದೆ. ರಾಮಾಯಣದ ಅನೇಕ ದೃಶ್ಯಗಳನ್ನು ಅಭಿನಯಿಸುವ ಮೂಲಕ ವಿಜಯ ದಶಮಿ ದಿನ ರಾವಣನ ಆಕೃತಿಯ ದಹನ ಮಾಡುತ್ತಾರೆ.

ವಿಜಯನಗರ ಕಾಲ

ವಿಜಯನಗರ ಸಾಮ್ರಾಜ್ಯದ ವೈಭವದ ದಿನಗಳಲ್ಲಿ ಹಂಪಿಯಲ್ಲಿ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿತ್ತು. ಅಂದು ವಿಜಯ ನಗರಕ್ಕೆ ಭೇಟಿ ನೀಡಿದ ಅರಬ ಮತ್ತು ಪೋರ್ಚುಗೀಸ್ ಪ್ರವಾಸಿಗರು ಕಂಡು ಉಲ್ಲೇಖಿಸಿದ ಹಬ್ಬದ ವೈಭವವನ್ನು ಓದಿದಾಗ, ಕಲ್ಪನೆಯ ಚಿತ್ರ ಕಣ್ಣ ಮುಂದೆ ಸುಳಿಯುತ್ತದೆ. ವಿಜಯ ನಗರದ ಅರಸರು ವಿಜೃಂಭಣೆಯಿಂದ ಆಚರಿಸುತ್ತಿದ್ದ ನವರಾತ್ರಿ ಉತ್ಸವ ಧಾರ್ಮಿಕ, ಸಾಂಸ್ಕೃತಿಕ ಪುಸರುಜ್ಜೀವನದ ಸಂಕೇತವಾಗಿತ್ತು. ಉತ್ಸವ ಪ್ರಜೆಗಳ ಧರ್ಮನಿಷ್ಠೆ ಹಾಗೂ ಕಲಾಭಿಮಾನಗಳ ದ್ಯೋತಕವಾಗಿತ್ತು. ಸುಖ ಸಮೃದ್ಧಿಯ ನಾಡಾದ ವಿಜಯ ನಗರದ ದಸರಾ ಉತ್ಸವಕ್ಕೆ ರಾಜ್ಯದ ಎಲ್ಲಾ ಸಾಮಂತರು, ಸರ್ದಾರರು ಹಂಪಿಯ ಮಹಾನವಮಿ ದಿಬ್ಬದಲ್ಲಿ ಬಂದು ಸೇರುತ್ತಿದ್ದರು. ಗಾಯನ, ನೃತ್ಯ, ಮಲ್ಲಯುದ್ಧಗಳಿಗೆ ಪ್ರೋತ್ಸಾಹ ನೀಡಿ ಪ್ರತಿಭಾವಂತರನ್ನು ಗುರುತಿಸುವ ಸಂಪ್ರದಾಯವಿತ್ತು.

ವಿಜಯದ ಸಂಕೇತ

ದುಷ್ಟ ಶಕ್ತಿಯ ಸಂಹಾರದ ಸಂಕೇತವಾಗಿ ವಿಜಯೋತ್ಸವ ಎಲ್ಲಾ ಕಡೆ ನವರಾತ್ರಿಯಾಗಿ ವಿಸ್ತ್ರತಗೊಂಡಿದೆ. ಉತ್ಸವದಲ್ಲಿ ಶ್ರೀ ರಾಮಚಂದ್ರನು ರಾವಣನ ಸಂಹಾರದ ಸಂಕೇತವಾಗಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಅಲ್ಲದೆ ಮುಖ್ಯವಾಗಿ ಬಂಗಾಳ ಹಾಗೂ ಇತರೆಡೆಗಳಲ್ಲಿ ಜಗನ್ಮಾತೆ ದುರ್ಗಿಯು ಮಹಿಷಾಸುರನನ್ನು ಸಂಹರಿಸಿದ ದ್ಯೋತಕವಾಗಿ ಹಬ್ಬವನ್ನು ಆಚರಿಸುತ್ತಾರೆ. ರಾವಣ ಮತ್ತು ಮಹಿಷಾಸುರ ದುಷ್ಟ ಶಕ್ತಿಯ ಪ್ರತೀಕ. ಅವರ ಅಟ್ಟಹಾಸ ಮಣಿಸಲು ರಾತ್ರಿಗಳ ಸಮಯ ಬೇಕಾಯಿತು. ಅದರ ನೆನಪೆನವರಾತ್ರಿ“. ೧೦ನೆಯದು ವಿಜಯದ ದಿನವಿಜಯದಶಮಿಯಾಯಿತು“. ನವರಾತ್ರಿ ಹಬ್ಬವನ್ನು ದಸರಾ ಎಂದು ಕರೆದು ವಿಜಯದ ಸಂಕೇತದಲ್ಲಿ ದೇವಿಯನ್ನು ಚಿತ್ರಿಸಲಾಗಿದೆ. ದಶಭುಜಗಳೊಡನೆ ಒಂದೊಂದು ಕೈಯಲ್ಲಿ ಆಯುಧ ಹಿಡಿದು ಸಿಂಹದ ಮೇಲೆ ಕುಳಿತಿರುವುದು ಸರ್ವೇಸಾಮಾನ್ಯ. ದೃಶ್ಯ ಒಂದು ದಿನಕ್ಕೆ ಒಂದೊಂದು ಆಯುಧ ೧೦ನೆಯ ದಿನಕ್ಕೆ ಶಿವನ ಪ್ರಸಾದವಾದ ತ್ರಿಶೂಲದ ವಿವರಣೆ ಇದೆ. ದೇವಸ್ಥಾನದಲ್ಲಿ ದೇವಿಯನ್ನು ಅಲಂಕರಿಸಿದರೆ, ಮನೆ ಮನೆಗಳಲ್ಲಿ ಗೊಂಬೆ ಅಲಂಕರಿಸುವುದು ದಕ್ಷಿಣ ಭಾರತದಲ್ಲಿ ವಿಶೇಷವಾಗಿದೆ.

ಆಯುಧ ಪೂಜೆ

ಮಹಾನವಮಿಯ ಆಯುಧ ಪೂಜೆಯ ದಿನದಂದು ಕ್ಷತ್ರಿಯರು ಶಸ್ತ್ರಗಳನ್ನು ಪೂಜಿಸಿದರೆ, ರೈತರು ಕೃಷಿ ಉಪಕರಣಗಳನ್ನು ಪೂಜಿಸುತ್ತಾರೆ. ಯಂತ್ರೋಪಕರಣ, ವಾಹನಗಳನ್ನು ಶುಚಿಗೊಳಿಸಿ ಅವುಗಳಿಗೆ ಪೂಜಿಸುವ ಸಂಪ್ರದಾಯ ನಮ್ಮಲ್ಲಿ ಬೆಳೆದು ಬಂದಿದೆ. ಅಂದು ಸೀಮೋಲ್ಲಂಘನ ಮಾಡಿ, ಪರಸ್ಪರರಲ್ಲಿ ಬನ್ನಿ ವಿನಿಮಯ ಮಾಡುವ ಪರಿಪಾಠ ವಿಜಯ ನಗರ ಕಾಲದಿಂದಲೂ ರೂಢಿಯಲ್ಲಿದೆ.

ಹಾನಗಲ್ಲಿನ ನಾಡ ಹಬ್ಬವನ್ನು ೧೯೩೭ರಿಂದ ವಿಜೃಂಭಣೆಯಿಂದ ಆಚರಿಸುವ ಸಂಪ್ರದಾಯ ಪ್ರಾರಂಭವಾಯಿತು. ಅದು ಇಂದಿಗೆ ೬೭ನೆಯ ವರ್ಷದಲ್ಲಿ ಪಾದಾರ್ಪಣೆ ಮಾಡಿದೆ. ಸ್ತ್ರೀಯೊಬ್ಬಳು ಮದುವೆಯಾಗಿ ಬಲಗಾಲನಿಟ್ಟು ಗಂಡನ ಮನೆ ಪ್ರವೇಶಿಸಿ, ತನ್ನ ಮನೆಯ ಶ್ರೇಯೋಭಿವೃದ್ಧಿ ಮತ್ತು ಸರ್ವಾಂಗೀಣ ಬೆಳವಣಿಗೆಗೆ ಹಗಲಿರುಳು ಶ್ರಮವಹಿಸಿ ಬಾಳು ಬೆಳಗುವಂತೆ, ಇಲ್ಲಿಯ ನಾಡಹಬ್ಬ ಹಾನಗಲ್ಲು ಜನತೆಯ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗಿದೆ. ಜೊತೆಗೆ ಅನೇಕ ನಾಟಕ, ಸಂಗೀತ, ನೃತ್ಯ ಮತ್ತು ಸಾಹಿತಿಗಳನ್ನು ಪೋಷಿಸಿ, ಗೌರವಿಸಿ ಇಡೀ ಕರ್ನಾಟಕಕ್ಕೆ ಮಾದರಿಯಾಗಿದೆ. ಸುಮಾರು ೬೭ ವರ್ಷ ತುಂಬಿದ ನಾಡಹಬ್ಬವು ತನ್ನ ಮೂಲ ಸ್ವರೂಪವನ್ನು ಬದಲಿಸಿದೆ. ಇಲ್ಲಿಯ ನಾಡಹಬ್ಬ ಪ್ರಾರಂಭವಾದುದು ಒಂದು ಅಭೂತಪೂರ್ವ ಕ್ಷಣವೆಂದೇ ಹೇಳಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ನಾಡಿನ ಜನಜಾಗೃತಿಯ ಅವಶ್ಯಕತೆ ಇರುವ ದಿನಗಳಲ್ಲಿ ಸಾಹಿತ್ಯಾಸಕ್ತಿಯ ಕ್ರಿಯಾಶೀಲ ಗೆಳೆಯರು ೧೯೩೬ರಲ್ಲಿ ವಸಂತ ಸಾಹಿತ್ಯೋತ್ಸವ ನಾಡಹಬ್ಬಕ್ಕೆ ನಾಂದಿಯಾದುದು ಬಿ.ಎಂ.ಶ್ರೀ. ಅವರ ಮಾತುಗಳ ಪ್ರೇರಣೆಯಿಂದ. ೧೯೩೭ರಲ್ಲಿ ದಿ.ಕೃಷ್ಣ ಚಿಮ್ಮಲಗಿ ಹಾಗೂ ಗೆಳೆಯರ ಬಳಗ ಸಾಂಸ್ಕೃತಿಕ ಬದುಕಿನ ವೇದಿಕೆಯನ್ನು ಹಾನಗಲ್ಲು ನಗರದ ಮಧ್ಯದಲ್ಲಿರುವ ವಿಠೋಬಾ ದೇವಸ್ಥಾನದಲ್ಲಿ ಪ್ರಾರಂಭಿಸಿತು. ದಿ.ಅನಂತ ಭಟ್ಟ ಕುಂದಪುರ ಮಾಸ್ತರರ ಮಾರ್ಗದರ್ಶನ, ಎಂ.ಕೆ. ನರಸಿಂಹಯ್ಯ ಅವರ ಅಧ್ಯಕ್ಷತೆಯಲ್ಲಿ ನಾಡ ಪೂಜೆ ನೆರವೇರಿಸಲಾಯಿತು. ಇದನ್ನು ಅವಿಚ್ಛಿನ್ನವಾಗಿ ಇಲ್ಲಿಯವರೆಗೂ ಮುಂದುವರೆಸಿಕೊಂಡು ಬಂದಿದ್ದು ದಿ.ತಮ್ಮಣ್ಣ ದೇಸಾಯಿ, ದಿ.ಶ್ರೀಮಾರ್ತಂಡರಾವ ಕುಲಕರ್ಣಿ ಹಾಗೂ ಇಂದಿನ ಯುವ ತರುಣರು ಮೊದಲ್ಗೊಂಡಂತೆ ಅನೇಕರು ಕಾರಣರಾಗಿದ್ದಾರೆ. ಅಲ್ಲದೆ ಸಮಸ್ತ ಹಾನಗಲ್ಲು ನಾಗರಿಕರು ನಾಡಹಬ್ಬವನ್ನು ವಿಜಯ ನಗರದ ಕಾಲದಂತೆ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತ ಬಂದಿದ್ದಾರೆ. ಪ್ರತಿ ವರ್ಷವು ನಾಡಹಬ್ಬದ ಮೊದಲನೆಯ ದಿನ ತಾರಕೇಶ್ವರ ದೇವಸ್ಥಾನದಿಂದ ನಾಡದೇವಿಯ ಮೆರವಣಿಗೆ ಪ್ರಾರಂಭವಾಗುವುದು. ಕಾರ್ಯಕ್ರಮದ ಸನ್ನಿಧಾನವನ್ನು ವಿರಕ್ತಮಠದ ಶ್ರೀಗುರು ವಹಿಸುವರು. ಇತ್ತೀಚಿನ ವರ್ಷಗಳಲ್ಲಿ ಪ್ರತಿವರ್ಷ ತಪ್ಪದೆ ವಿರಕ್ತಮಠದ ಶ್ರೀಗಳು ಹಾಗೂ ಮೂರುಸಾವಿರಮಠದ ೧೦೦೮ ಗಂಗಾಧರ ರಾಜಯೋಗಿಂದ್ರರು ಸನ್ನಿಧಾನವನ್ನು ವಹಿಸುತ್ತ ಬಂದಿದ್ದಾರೆ. ಹಾನಗಲ್ಲು ತಾಲೂಕಿನ ತಹಶಿಲ್ದಾರರ ಅಧ್ಯಕ್ಷತೆಯಲ್ಲಿ ಮೆರವಣಿಗೆಗೆ ಚಾಲನೆ ನೀಡುವರು. ಮೆರವಣಿಗೆಯಲ್ಲಿ ಹಾನಗಲ್ಲು ಸಮಸ್ತ ನಾಗರಿಕರು, ವಿವಿಧ ವಾದ್ಯಗೋಷ್ಠಿಗಳೊಂದಿಗೆ ಗ್ರಾಮಕೇಂದ್ರಕ್ಕೆ ಆಗಮಿಸಿ, ದೇವಿಯ ಪ್ರತಿಷ್ಠಾಪನೆಯನ್ನು ಮಾಡುತ್ತಾರೆ. ದಿನಗಳವರೆಗೆ ಪ್ರತಿದಿನ ಸಾಯಂಕಾಲ ನಡೆಯುವ ಕಾರ್ಯಕ್ರಮದಲ್ಲಿ ಭಾಷಣ, ನಾಟಕ, ಸಂಗೀತ ಮತ್ತು ನೃತ್ಯ ಮೊದಲಾದವು ಪ್ರದರ್ಶನಗೊಳ್ಳುತ್ತವೆ. ವಿಜಯ ದಶಮಿ ದಿನ ಸೀಮೋಲ್ಲಂಘನದ ನಂತರ ತಾರಕೇಶ್ವರ ಗುಡಿಯಿಂದ ಊರಿನ ಓಣಿಗಳ ಮೂಲಕ ಬಂದ ಪಲ್ಲಕ್ಕಿಯ ಜೊತೆಗೆ ಸಮಸ್ತ ನಾಗರಿಕರು ಹವಳಿ ಹನುಮಂತ, ನಂತರ ಮಲ್ಲಿಗಾರದ ಸಿದ್ಧರಾಮೇಶ್ವರ ದೇವರ ದರ್ಶನ ಮಾಡಿ ಬನ್ನಿ ಮುಡಿಯುವರು. ಎಲ್ಲರೂ ಬನ್ನಿಯನ್ನು ತಮ್ಮ ತಮ್ಮಲ್ಲಿಯೇ ಪ್ರೀತಿ, ವಿಶ್ವಾಸದ ದ್ಯೋತಕವಾಗಿ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ರೀತಿಯಾಗಿ ಪ್ರಾಚೀನ ಕಾಲದ ನಾಡಹಬ್ಬದ ಉತ್ಸವ ಮತ್ತು ಸಂಪ್ರದಾಯವನ್ನು ಹಾನಗಲ್ಲು ನಾಗರಿಕರು ಉಳಿಸಿ ಬೆಳೆಸುತ್ತ ಬಂದಿದ್ದಾರೆ.

ಹಾನಗಲ್ಲು ನಗರದ ಜಾತ್ರೆಗಳು

ಮಾನವ ತನ್ನ ಬೆಳವಣಿಗೆಯ ಆರಂಭದ ದಿನಗಳಲ್ಲಿ ನಡೆಸುತ್ತಿದ್ದ ಆಚರಣೆ ಪದ್ಧತಿಗಳೆಲ್ಲ ಧಾರ್ಮಿಕ ಭಾವನೆಯ ಪ್ರೇರಕ ಹಿನ್ನೆಲೆಯಾಗಿತ್ತು. ಜನತೆಯ ಬದುಕಿನ ಭಾಗವಾಗಿ ನಡೆಯುವ ಪ್ರತಿ ಆಚರಣೆಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕಾಣುತ್ತೇವೆ. ಮಾನವನ ಮನಸ್ಸು ಪಕ್ವಗೊಂಡಂತೆಲ್ಲಾ ಧರ್ಮದ ಬಗೆಗಿನ ಭಾವನೆಗಳು ನಾನಾ ರೀತಿಯಾಗಿ ರೂಪಗೊಂಡವು. ಪ್ರಕೃತಿಯಲ್ಲಿ ಕಾಣಿಸಿಕೊಳ್ಳುವ ಮಳೆ, ಗುಡುಗು, ಮಿಂಚು ಇತ್ಯಾದಿಗಳಲ್ಲಿ ತನ್ನದೆ ಆದ ನಿಲುವು ತಾಳಿದ. ಇವುಗಳ ಆರ್ಭಟಗಳೆಲೆಲ್ಲ ಬೆಳಕಿನಲ್ಲಿ ಕಾಣದ ಶಕ್ತಿಯ ಕೈವಾಡವಿದೆ ಎಂದು ಭಾವಿಸಿದ. ಅಂತಹ ಅಗೋಚರ ಶಕ್ತಿಯನ್ನು ಆರಾಧಿಸುತ್ತಾ ಬಂದ. ಕಲ್ಲು, ಮರ, ಮಣ್ಣುಗಳಲ್ಲಿ ದೈವತ್ವದ ಅಂಶಗಳನ್ನು ಕಂಡುಕೊಳ್ಳುತ್ತಾ ಅಂದಿನಿಂದ ಇಂದಿನ ವರೆಗೂ ಮನುಷ್ಯ ತಿಳಿದೊ ತಿಳಿಯದೆಯೊ ಹಲವಾರು ಆಚರಣೆಗಳನ್ನು ರೂಢಿಸಿಕೊಂಡು ಬಂದಿದ್ದಾನೆ.

ಪ್ರತಿನಿತ್ಯವು ನಿಸರ್ಗದ ಮಡಿಲಲ್ಲಿ ನಿರಂತರವಾಗಿ ಶ್ರಮವಹಿಸಿ ದುಡಿಯುವ ಜನತೆ, ಬದುಕಿನಿಂದ ಸ್ವಲ್ಪ ವಿರಾಮ ಪಡೆದು ನೆಮ್ಮದಿಯ ಉಸಿರು ಬಿಡಲು ಹಬ್ಬ, ಹರಿದಿನ, ಉತ್ಸವ ಜಾತ್ರೆ ಮೊದಲಾದ ಸಾಮಾಜಿಕ ಆಚರಣೆಗಳನ್ನು ಕಂಡುಕೊಂಡರು. ಆಚರಣೆಗಳೆಲ್ಲ ಹುಟ್ಟಿಕೊಂಡಿದ್ದು ಸಂತೋಷದ ಜೀವನ ನಡೆಸಬೇಕೆಂಬ ಉದ್ದೇಶದಿಂದ. ವಿಧಿಗಳೆಲ್ಲ ಜಾನಪದದ ಭಾಗವೇ ಆಗಿರುವುದರಿಂದ ಇವುಗಳಲ್ಲಿ ವೈಯಕ್ತಿಕ ಕಾಳಜಿಗಿಂತ ಸಮಷ್ಠಿಯ ಹಿತಾಸಕ್ತಿಯ ಕಡೆಗೆ ಹೆಚ್ಚು ಒಲವು ಮೂಡಿತು. ಇಂತಹ ಉದ್ದೇಶವನ್ನು ಬಿಂಬಿಸುವ ಹಲವು ಆಚರಣೆಗಳಲ್ಲಿ ಜಾತ್ರೆಗಳು ತುಂಬಾ ಪ್ರಮುಖ ಪಾತ್ರವಹಿಸುತ್ತವೆ. ಜಾತ್ರೆಗಳು ನಮ್ಮ ನಾಡಿನಲ್ಲಿ ಜರುಗುವ ಸ್ಥಳದ ಹೆಸರಿನಿಂದ ಅಥವಾ ಅಲ್ಲಿಯ ದೈವದ ಹೆಸರಿನಿಂದ ಜನಪ್ರಿಯವಾಗಿದೆ. ಜಾತ್ರೆಗಳಿಂದ ಪರಸ್ಪರ ಸ್ನೇಹ ಸಹಕಾರ ಬೆಳೆಯುತ್ತವೆ. ಜಾತ್ರೆ ನಡೆಯುವ ದಿನವನ್ನು ಊರಿನ ಪ್ರಮುಖರೆ ನಿರ್ಧರಿಸುವರು. ಪ್ರತಿ ಗ್ರಾಮಗಳಲ್ಲಿ ನಡೆಯುವಂತೆ, ಹಾನಗಲ್ಲು ನಗರದಲ್ಲಿ ತಾರಕೇಶ್ವರ, ಗ್ರಾಮದೇವತೆ, ರಾಮಲಿಂಗೇಶ್ವರ ಜಾತ್ರೆಗಳನ್ನು ವಿಜೃಂಭಣೆಯಿಂದ ಆಚರಿಸುತ್ತ ಬರಲಾಗಿದೆ.

ತಾರಕೇಶ್ವರ ಜಾತ್ರೆ

ಹಾನಗಲ್ಲಿನ ತಾರಕೇಶ್ವರ ದೇವಾಲಯ ವಾಸ್ತುಶಿಲ್ಪ ಕಲೆಯಿಂದ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಹಾನಗಲ್ಲಿಗೆ ಬಂದವರು ಸೂಕ್ಷ್ಮ ಕೆತ್ತನೆಯಿಂದ ಕೂಡಿದ ತಾರಕೇಶ್ವರ ದೇವಸ್ಥಾನ ಮತ್ತು ದೇವಾಲಯದಲ್ಲಿನ ರಾಮಾಯಣ, ಮಹಾಭಾರತ, ಕೃಷ್ಣಾವತಾರದ ಚಿತ್ರಗಳನ್ನು ನೋಡಲಿಕ್ಕೇ ಬೇಕು. ಕದಂಬರ ಕಾಲದಲ್ಲಿ ನಿರ್ಮಾಣವಾದ ತಾರಕೇಶ್ವರ ಗುಡಿಯ ಹತ್ತಿರ ಪ್ರಾಥಮಿಕ ಶಾಲೆಗೆ ಹೊಂದಿಕೊಂಡು ಇರುವುದೇ ತೇರಿನ ಮನೆ. ಅದರಲ್ಲಿ ಸುಂದರ ಕಲಾಕೃತಿಯ ಅತ್ಯಂತ ಭವ್ಯವಾದ ಕಟ್ಟಿಗೆಯ ತೇರು ಪ್ರಾಚೀನ ಕಾಲದ್ದು. ಇದರಿಂದ ಹಾನಗಲ್ಲಿನ ಪೂರ್ವಿಕರು ತಾರಕೇಶ್ವರ ಜಾತ್ರೆಯನ್ನು ಪ್ರತಿವರ್ಷವು ಆಚರಿಸುತ್ತಿದ್ದರೆಂದು ಸ್ಪಷ್ಟವಾಗಿ ಹೇಳಬಹುದು. ಗುಡಿಯ ಅರ್ಚಕರು, ಊರಿನ ಹಿರಿಯ ನಾಗರಿಕರು ೧೯೬೦ ತಾರಕೇಶ್ವರನ ಕೊನೆಯ ಜಾತ್ರೆಯೆಂದು ಹೇಳುತ್ತಾರೆ. ಇವರ ಪ್ರಕಾರ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಬರುತ್ತಿದ್ದರು. ಜಾತ್ರೆಯ ಪರಸೆ (ಅಂಗಡಿ)ಗಳು ಗುಡಿಯ ಮುಂಭಾಗದಿಂದ ಸೋಮವಾರ ಪೇಟೆಯಲ್ಲಿರುವ ಬಸವಣ್ಣ ದೇವರ ಗುಡಿಯ ವರೆಗೂ ಇರುತ್ತಿದ್ದವು. ತಾರಕೇಶ್ವರ ದೇವಾಲಯದ ಮುಂಭಾಗ ವಿಶಾಲವಾದ ತೇರು ಬೀದಿಯ ಅಕ್ಕ ಪಕ್ಕದಲ್ಲಿ ಪ್ರಾಚೀನ ಕಾಲದ ಮಂಟಪಗಳ ಅವಶೇಷಗಳು ಹರಡಿವೆ. ಮಂಟಪಗಳನ್ನು ಅಂಗಡಿ ಸಾಲುಗಳಿಗಾಗಿ ನಿರ್ಮಿಸಿರಬಹುದು. ಕಾಲಾನಂತರದಲ್ಲಿ ಜಾತ್ರೆ ನಿಂತು ಹೋಗಿರುವುದಕ್ಕೆ ಕಾರಣ ತಿಳಿದುಬಂದಿಲ್ಲ.

ಗ್ರಾಮದೇವಿಯ ಜಾತ್ರೆ

ಕರ್ನಾಟಕದಲ್ಲಿ ಸವದತ್ತಿಯ ಯಲ್ಲಮ್ಮದೇವಿ, ಶಿರಸಿಯ ಮಾರಿಕಾಂಬಾದೇವಿ ಹಾಗೂ ಚಂದ್ರಗುತ್ತಿಯ ಜಾತ್ರೆಗಳಂತೆ, ಹಾನಗಲ್ಲಿನ ಗ್ರಾಮದೇವಿಯ ಜಾತ್ರೆಯು ಪ್ರಸಿದ್ಧಿಯನ್ನು ಪಡೆದಿದೆ. ಜಾತ್ರೆ ೧೯೮೫ರಲ್ಲಿ ಸಿ.ಎಂ. ಉದಾಸಿಯವರ ಅಧ್ಯಕ್ಷತೆಯಲ್ಲಿ ಪ್ರಥಮಬಾರಿಗೆ ಪ್ರಾರಂಭವಾಯಿತು. ಅವರು ತಮ್ಮ ಗೆಳೆಯರೊಂದಿಗೆ ಸೇರಿ ಜಾತ್ರೆಯ ಸಮಿತಿಯನ್ನು ನಿರ್ಮಾಣ ಮಾಡಿ, ಸಮಸ್ತ ನಾಗರಿಕರಿಂದ ನಾಲ್ಕು ವರ್ಷಗಳಿಗೊಮ್ಮೆ ಜಾತ್ರೆ ನಡೆಯುವಂತೆ ವ್ಯವಸ್ಥೆಗೊಳಿಸಿದರು. ಈಗ ದಿನಗಳ ಕಾಲ ಜಾತ್ರೆ ಮಾಡಲಾಗುತ್ತದೆ. ಜಾತ್ರೆಯಲ್ಲಿ ಮೊದಲನೆಯ ದಿನ ಅಲಂಕೃತ ತೇರಿನಲ್ಲಿ ಗ್ರಾಮದೇವಿಯ ಮೂರ್ತಿಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ, ನಂತರ ಬೆಳಿಗ್ಗೆ ಪಾದಗಟ್ಟೆಯಲ್ಲಿ ಗ್ರಾಮದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ.

ಇನ್ನುಳಿದ ದಿನಗಳವರೆಗೆ ವಿಚಾರಗೋಷ್ಠಿ, ನಾಟಕ, ನೃತ್ಯ, ಸಂಗೀತ, ಯಕ್ಷಗಾನ ಹಾಗೂ ಕುಸ್ತಿ ಸ್ಪರ್ಧೆ ಮುಂತಾದ ಮನರಂಜನೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಜಾತ್ರೆಯಲ್ಲಿ ಅಂಗಡಿಗಳ ಸಾಲು ಬಹುಸಂಖ್ಯೆಯಲ್ಲಿರುತ್ತವೆ. ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.

ರಾಮಲಿಂಗೇಶ್ವರ ಜಾತ್ರೆ

ಹಾನಗಲ್ಲು ನಗರದ ಪೂರ್ವ ದಿಕ್ಕಿನಲ್ಲಿ ಧರ್ಮಾ ನದಿಯ ದಂಡೆಯ ಮೇಲೆ ಪೂರ್ವಾಭಿಮುಖವಾಗಿ ರಾಮಲಿಂಗೇಶ್ವರ ಗುಡಿ ಇದೆ. ಗುಡಿಯ ಎದುರಿಗೆ ಧರ್ಮಾ ನದಿಯು ದಕ್ಷಿಣ ಉತ್ತರ ಅಭಿಮುಖವಾಗಿ ಹರಿದಿದೆ. ರಾಮಲಿಂಗೇಶ್ವರ ಜಾತ್ರೆಯ ಪ್ರಾರಂಭದ ಹಿನ್ನೆಲೆ ಕುರಿತು ರೋಚಕ ಕಥೆಯಿದೆ. ಹಾನಗಲ್ಲು ನಗರದ ದಿ. ನಾಗೇಂದ್ರಪ್ಪ, ಹನುಮಂತಪ್ಪ ಕಲಾಲ ಅವರು ಪ್ರತಿ ದಿನ ಬೆಳಿಗ್ಗೆ ರಾಮಲಿಂಗೇಶ್ವರ ದೇವರಿಗೆ ನದಿಯ ನೀರಿನಿಂದ ಅಭಿಷೇಕ ಮಾಡುತ್ತಿದ್ದರು. ಒಂದು ದಿನ ಪೂಜೆ ಮಾಡುವಾಗ, ರಾಮಲಿಂಗೇಶ್ವರನ ಜಾತ್ರೆ ಮಾಡಬೇಕೆಂಬ ಪ್ರೇರಣೆಯಾಯಿತು. ಪ್ರೇರಣೆಯಿಂದಲೇ ೧೯೬೫ರ ಪೂರ್ವದಲ್ಲಿಯೆ ಊರಿನ ನಾಗರಿಕರೊಂದಿಗೆ ಸಮಾಲೋಚನೆ ಮಾಡಿ ಜಾತ್ರೆಯನ್ನು ಪ್ರಾರಂಭಿಸಿದರು. ಪ್ರತಿವರ್ಷ ಜನೆವರಿ ೧೪ರಿಂದ (ಸಂಕ್ರಮಣ ದಿನ) ಪ್ರಾರಂಭವಾಗಿ ದಿನಗಳವರೆಗೆ ಜಾತ್ರೆಯನ್ನು ಧರ್ಮಾನದಿ ದಂಡೆಯ ಮೇಲೆ ನಡೆಸಲಾಗುವುದು. ಸಂಕ್ರಮಣದ ಮರು ದಿವಸ ರಾಮಲಿಂಗೇಶ್ವರ ಮೂರ್ತಿಯನ್ನು ತೇರಿನಲ್ಲಿಟ್ಟು ಹಾನಗಲ್ಲಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಇನ್ನುಳಿದ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.

ದಿಂಡಿ ಉತ್ಸವ

ಹಾನಗಲ್ಲು ನಗರದಲ್ಲಿ ಪ್ರತಿವರ್ಷ ಎರಡು ದಿಂಡಿ ಉತ್ಸವಗಳು ನಡೆಯುತ್ತವೆ. ಉತ್ಸವದಲ್ಲಿ ಸಮಾಜ ಸಂಘಟನೆ, ಆಧ್ಯಾತ್ಮಿಕ ವಿಚಾರ ಮಂಥನ ಮೊದಲಾದ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ದಿಂಡಿ ಉತ್ಸವವನ್ನು ಪ್ರಾರಂಭದಲ್ಲಿ ಭಾವಸಾರ ಕ್ಷತ್ರಿಯ ಮತ್ತು ನ್ಯಾದಿ ಸಮಾಜದವರು ಕೂಡಿ ಆಚರಿಸುತ್ತಿದ್ದರು. ಇತ್ತೀಚೆಗೆ ಎರಡು ಸಮಾಜದವರು ಬೇರೆ ಬೇರೆ ದಿಂಡಿ ಉತ್ಸವವನ್ನು ಆಚರಿಸುತ್ತಿದ್ದಾರೆ. ಶ್ರಾವಣ ಮಾಸದ ಒಂದು ತಿಂಗಳ ವಿಠ್ಠಲ ಮಂದಿರದಲ್ಲಿ ಜ್ಞಾನೇಶ್ವರಿ ಪಾರಾಯಣ ಹಾಗೂ ವಾಸುದೇವ ಫೀರಾ (ನಗರ ಪ್ರದಕ್ಷಿಣೆ)ಗಳನ್ನು ನಡೆಸುತ್ತಾರೆ.

ನ್ಯಾವಿ ಸಮಾಜದವರು ಕಳೆದ ವರ್ಷದಿಂದಲೂ ಹಾನಗಲ್ಲಿನ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ದಿಂಡಿ ಉತ್ಸವವನ್ನು ಆಚರಿಸುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುವ ದಿಂಡಿ ಉತ್ಸವವನ್ನು ಚೈತ್ರಶುದ್ಧ ದಶಮಿಯಂದು ಪ್ರಾರಂಭಿಸಿ, ದಶಮಿಯ ದಿನದಂದುಪ್ರವೃತ್ತಿ” (ಜ್ಞಾನೇಶ್ವರಿ) ಗ್ರಂಥ ಸ್ಥಾಪನೆಯ ನಂತರ ಭಜನೆ ಕೀರ್ತನೆ ಮಾಡುವರು. ಏಕಾದಶಿಯಂದು ನಾಮಜಪ, ಪ್ರವಚನ, ಕೀರ್ತನ, ಭಜನಾ ಕಾರ್ಯಕ್ರಮ ಹಾಗೂ ದ್ವಾದಶಿಯಂದು ನಗರ ಪ್ರದಕ್ಷಿಣೆ ಮಾಡುತ್ತಾರೆ.

ದತ್ತ ಜಯಂತಿ ಉತ್ಸವ

ಹಾನಗಲ್ಲಿನ ದತ್ತ ಮಂದಿರದಲ್ಲಿ ಪ್ರತಿವರ್ಷ ಕಾರ್ತಿಕ ಬಹುಳ ದಶಮಿಯಿಂದ ದತ್ತ ಜಯಂತಿಯನ್ನು ಆಚರಿಸುತ್ತಾರೆ. ೧೯೯೩ರಲ್ಲಿ ಪಾಲ್ಗುಣ ಬಹುಳ ಸಪ್ತಮಿಯಂದು ದತ್ತನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಜಯಂತಿಯಲ್ಲಿ ತೊಟ್ಟಿಲೋತ್ಸವ, ಸತ್ಯ ನಾರಾಯಣ ಪೂಜೆ ಹಾಗೂ ಮದುಕರಿ ಅಂದರೆ ಜನರು ಶ್ರೀ ಸದ್ಗುರು ದತ್ತ ಸ್ವರೂಪದಲ್ಲಿದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾಎಂದು ಭಜನೆ ಮಾಡುತ್ತಾ ಭಕ್ತಾದಿಗಳ ಮನೆಗೆ ಭವತಿ ಬೇಡಲು ಹೋಗುತ್ತಾರೆ.

ಹನುಮ ಜಯಂತಿ

ಸೋಮವಾರ ಪೇಟೆಯಲ್ಲಿರುವ ಮಾರುತಿ ದೇವಸ್ಥಾನದಲ್ಲಿ ಚೈತ್ರ ಮಾಸದಲ್ಲಿ ಹನುಮ ಜಯಂತಿ, ವೈಶಾಖ ಮಾಸದಲ್ಲಿ ರಾಮನವಮಿ, ಶ್ರಾವಣ ಮಾಸದಲ್ಲಿ ಗೋಕುಲಾಷ್ಟಮಿಗಳನ್ನು ಆಚರಿಸಲಾಗುತ್ತದೆ.

ಗೋಪಾಲ ಕಾವಲಿ

ಹಾನಗಲ್ಲು ನಗರದ ಮಧ್ಯಭಾಗದಲ್ಲಿರುವ ವಿಠ್ಠಲ ಮಂದಿರದಲ್ಲಿ ವರ್ಷಕ್ಕೆ ಬಾರಿ ಗೋಪಾಲ ಕಾವಲಿಯನ್ನು ಆಚರಿಸುತ್ತಾ ಬಂದಿದ್ದಾರೆ. ಶ್ರಾವಣ ಶುದ್ಧದಂದು ಮನೆ ಮನೆಗೆ ತೆರಳುತ್ತಾರೆ. ಹೆಣ್ಣು ಮಕ್ಕಳು ಗೋಪಾಲ ಕಾವಲಿಗೆ ಅರಿಶಿಣ ಕುಂಕುಮದಿಂದ ಪೂಜಿಸಿ ಆರತಿ ಮಾಡಿ ಗಡಿಗೆಯಲ್ಲಿ ಅವಲಕ್ಕಿ ಅಥವಾ ಭತ್ತದ ಅಳ್ಳು ಹಾಕುತ್ತಾರೆ. ನಂತರ ಕಾವಲಿಯನ್ನು ವಿಠ್ಠಲ ದೇವರ ಮೂರ್ತಿಯ ಮೇಲೆ ಕಟ್ಟಿ, ಭಜನೆ, ಕೋಲಾಟ ಮುಂತಾದ ಮನರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಿ, ಕಡಗೋಲದ ಮೂಲಕ ಗೋಪಾಲ ಕಾವಲಿಯನ್ನು ಒಡೆಯುತ್ತಾರೆ. ದೇವರ ಮೇಲೆ ಬಿದ್ದ ಅವಲಕ್ಕಿ, ಮೊಸರನ್ನು ಪ್ರಸಾದ ರೂಪದಲ್ಲಿ ಎಲ್ಲ ಭಕ್ತಾದಿಗಳಿಗೆ ಹಂಚುತ್ತಾರೆ. ಎರಡನೆಯ ಬಾರಿ ಗೋಪಾಲ ಕಾವಲಿಯನ್ನು ಆಶಾಢ ಶುದ್ಧದಲ್ಲಿ ಆಚರಿಸುವ ಸಂಪ್ರದಾಯವಿದೆ. ಇದು ಪ್ರಾಚೀನ ಕಾಲದಿಂದ ಇಂದಿನವರೆಗೂ ಅವಿರತವಾಗಿ ನಡೆದು ಬಂದ ಒಂದು ಸಾಂಸ್ಕೃತಿಕ ಆಚರಣೆಯಾಗಿದೆ.

ರಾಮೋತ್ಸವ

ಹಾನಗಲ್ಲಿನ ರಾಮ ಮಂದಿರದಲ್ಲಿ ೬೯ ವರ್ಷಗಳಿಂದ ರಾಮೋತ್ಸವವನ್ನು ಆಚರಿಸುತ್ತ ಬರಲಾಗಿದೆ. ಯುಗಾದಿಯ ನಂತರ ದಿನಗಳ ವರೆಗೆ ನಡೆಯುವ ಆಚರಣೆಯಲ್ಲಿ ಪ್ರತಿ ದಿನ ಸಂಜೆ ವಿದ್ವಾಂಸರು, ಸ್ವಾಮಿಗಳು, ಉಪನ್ಯಾಸ ಪಾರಾಯಣವನ್ನು ಮಾಡುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ಕಾಕಡಾರತಿ ಮತ್ತು ತೊಟ್ಟಿಲೋತ್ಸವ ನಡೆಸುತ್ತಾರೆ.

ಕುಮಾರೇಶ್ವರ ಜಯಂತಿ

ಜಯಂತಿಯನ್ನು ಸುಮಾರು ೭೪ ವರ್ಷಗಳಿಂದ ಅತ್ಯಂತ ವೈಭವದಿಂದ ಶ್ರದ್ಧೆಭಕ್ತಿಯಿಂದ ಆಚರಿಸಲಾಗುತ್ತದೆ. ಇದು ಪ್ರತಿ ವರ್ಷ ಮಾಘ ಬಹುಳ ಶಷ್ಠಿ ಫೇಬ್ರುವರಿ ತಿಂಗಳಲ್ಲಿ ಮೂರು ದಿನಗಳವರೆಗೆ ನಡೆಯುತ್ತದೆ.

ದನ ಬೆದರಿಸುವ ಕಾರ್ಯಕ್ರಮ

ದೀಪಾವಳಿಯಲ್ಲಿ ದನ ಬೆದರಿಸುವ ಕಾರ್ಯಕ್ರಮವನ್ನು ರಾಷ್ಟ್ರಮಟ್ಟದಲ್ಲಿ ಆಚರಿಸುವ ಪದ್ಧತಿ ರೂಢಿಯಲ್ಲಿದೆ. ಹಾನಗಲ್ಲು ನಗರದಲ್ಲಿ ಪ್ರತಿ ವರ್ಷ ಕಾರ್ಯಕ್ರಮವನ್ನು ಕಮಾಟಗೇರಿ ಓಣಿಯಲ್ಲಿ ಅತ್ಯಂತ ಶಿಸ್ತು ಅಚ್ಚುಕಟ್ಟುತನದಿಂದ ನಡೆಸಲಾಗುತ್ತದೆ. ಮೊದಲು ಇದು ಕುರುಬಗೇರಿಯ ಗೌಳಿ ಓಣಿಯಲ್ಲಿ ನಡೆಯುತ್ತಿತ್ತು. ಕೆಲವು ಶಾಸನಗಳಲ್ಲಿ ಹಾಗೂ ಮಹಾಕಾವ್ಯದಲ್ಲಿ ಇದರ ಪ್ರಸ್ತಾಪವಿದೆ. ಅಲ್ಲದೆ ಗೋಗ್ರಹಣ ಕಾವ್ಯದಲ್ಲಿ ವಿರಾಟನ ಗೋಗೃಹಣದ ಬಗ್ಗೆ ಉಲ್ಲೇಖಿಸಲಾಗಿದೆ. ಇದರಿಂದ ದನ ಬೆದರಿಸುವ ಕಾರ್ಯಕ್ರಮವನ್ನು ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬಂದಿದ್ದು ಸ್ಪಷ್ಟವಾಗುತ್ತದೆ. ದನ ಬೆದರಿಸುವ ಕಾರ್ಯಕ್ರಮಕ್ಕಿಂತ ಪೂರ್ವದಲ್ಲಿ ಬೆಳಿಗ್ಗೆ ಎಲ್ಲರ ಮನೆಯಲ್ಲಿಯೂ ದನಗಳ ಪೂಜೆ, ಹಟ್ಟಿಯ ಪೂಜೆ ಮಾಡುತ್ತಾರೆ. ದೀಪಾವಳಿಯ ವಿಶೇಷ ಪೂಜೆ ಎಂದರೆ ಸಗಣಿಯಿಂದ ಹಟ್ಟಿಯನ್ನು ತಯಾರಿಸಿ ಪಾಂಡವ, ಕೌರವರನ್ನು ಪ್ರತಿಷ್ಠಾಪಿಸಿ, ಅದನ್ನು ಕಬ್ಬು, ಜೋಳದ ತೆನೆಯಿಂದ ಶೃಂಗರಿಸುತ್ತಾರೆ. ಪೂಜೆಯ ಕಾಲದಲ್ಲಿ ದೀಪವನ್ನು ಹಚ್ಚಿ, ಅದು ನಂದದಂತೆ ಮನೆಯ ಹಿರಿಯರು ಲಕ್ಷ್ಯವಿಟ್ಟು ಗಮನಿಸುತ್ತಾರೆ. ಹಟ್ಟಿ ಪೂಜೆಯಾದ ನಂತರ ದನಗಳನ್ನು ಶೃಂಗರಿಸಿ ದನ ಬೆದರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಗೌಳಿಗರಿಂದ ಎಮ್ಮೆಗಳನ್ನು ಬೆದರಿಸುವ ಕಾರ್ಯಕ್ರಮ ನಡೆಯುತ್ತದೆ. ಪ್ರತಿಯೊಬ್ಬ ಗೌಳಿ ಕುರುಬಗೇರಿ ಓಣಿಯಲ್ಲಿರುವ ಕರೆಮ್ಮನ ಗುಡಿಗೆ ಹೋಗಿ ಬರಬೇಕೆಂಬ ಅನಾದಿ ಕಾಲದಿಂದಲೂ ಬಂದ ಒಂದು ಸಂಪ್ರದಾಯ. ಇದನ್ನು ಗೌಳಿಗರು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ. ದೀಪಾವಳಿಯ ಮುಂಜಾನೆ ಗೌಳಿಗರು ಎಮ್ಮೆಗಳನ್ನು ಶೃಂಗರಿಸಿ, ಸಂಜೆ ತಮ್ಮ ತಮ್ಮ ಮನೆಯಿಂದ ಕೈಯಲ್ಲಿ ಕಂಬಳಿಯನ್ನು ಹಿಡಿದು ಕೇಕೆ ಹಾಕುತ್ತಾ ಓಡುತ್ತಾರೆ. ಇವರ ಹಿಂದೆ ಎಮ್ಮೆಗಳು ಸಹ ಹಿಂಬಾಲಿಸುತ್ತವೆ. ಕುರುಬಗೇರಿಗೆ ಬಂದು ಮಾರೆಮ್ಮ ದೇವಿಗೆ ಪೂಜಿಸಿದ ನಂತರ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.

ಗೌರಿ ಹಬ್ಬ

ಹೆಣ್ಣು ಮಕ್ಕಳು ತಮ್ಮ ಮನೆಗಳಲ್ಲಿ ಗೌರಿ ಹಬ್ಬವನ್ನು ಆಚರಿಸುತ್ತಾರೆ. ಇದು ಸೀಗೆ ಹುಣ್ಣಿಮೆಯಿಂದ ಪ್ರಾರಂಭವಾಗುತ್ತದೆ. ದೀಪಾವಳಿ, ತುಳಸಿ ಲಗ್ನದ ನಂತರ ನಂದಿಯ ಮೇಲೆ ಕುಳಿತುಕೊಂಡ ಶಿವ, ಪಾರ್ವತಿಯ ಮೂರ್ತಿಯನ್ನು ತಯಾರಿಸಿ, ದಿನಗಳ ವರೆಗೆ ಪೂಜಿಸುತ್ತಾರೆ. ಕಾರ್ಯಕ್ರಮದಲ್ಲಿ ಗೌರಿಯನ್ನು ತೊಟ್ಟಿಲಲ್ಲಿ ಹಾಕುವುದು, ಸಕ್ಕರೆ ಆರತಿಯನ್ನು ಬೆಳಗುವುದು, ಕೊನೆಯ ದಿನಗಳಲ್ಲಿಕೋಲ ಗೌರಿ ಕೋಲ’, ‘ಕಂಚಿನ ಗೌರಿ ಕೋಲಎಂಬ ಜಾನಪದ ಹಾಡು, ಭಾವಗೀತೆ, ಭಕ್ತಿಗೀತೆ ಮೊದಲಾದ ಮನೋರಂಜನೆ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

ಇದೆ ರೀತಿಯಾಗಿ ಪ್ರತಿಯೊಂದು ಮನೆ ಮನೆಯಲ್ಲಿ ತುಳಸಿ ಲಗ್ನ, ಮಣ್ಣೆತ್ತಿನ ಮತ್ತು ಗಣಪತಿ ಮೊದಲಾದ ಹಬ್ಬಗಳನ್ನು ಆಚರಿಸುವ ರೂಢಿ ಸಂಪ್ರದಾಯ ಹಾನಗಲ್ಲು ನಗರದಲ್ಲಿ ಬೆಳೆದು ಬಂದಿದೆ. ಗಣಪತಿಯ ಹಬ್ಬದಲ್ಲಿ ಹೆಣ್ಣು ಮಕ್ಕಳು ಘಟ್ಟವನ್ನು ಹಾಕಿರುತ್ತಾರೆ. ಮಣ್ಣಿನ ಮಡಿಕೆಯಲ್ಲಿ ಮಣ್ಣು ತುಂಬಿ ಅದರಲ್ಲಿ ಗೋದಿಕಾಳು ಅಥವಾ ಭತ್ತವನ್ನು ತುಂಬಿಟ್ಟು ವಿಜಯ ದಶಮಿಯವರೆಗೂ ಮೊಳಕೆಯನ್ನು ಬೆಳೆಸುತ್ತಾರೆ. ಇದಕ್ಕೆ ಘಟ್ಟ ಎಂದು ಕರೆಯುತ್ತಾರೆ. ವಿಜಯ ದಶಮಿ ದಿನ ಗಂಡು ಮಕ್ಕಳು ಬನ್ನಿ ಮುಡಿಯಲು ಹೋದರೆ, ಹೆಣ್ಣು ಮಕ್ಕಳು ಘಟ್ಟವನ್ನು ತಲೆಯ ಮೇಲೆ ಹೊತ್ತುಕೊಂಡು ಆನೆಕೆರೆಗೆ ಹೋಗಿ, ಗಂಗಾ ಪೂಜೆ ಮಾಡಿ ತುಂಬಿದ ಆನೆಕೆರೆಯಲ್ಲಿ ಘಟ್ಟ ಬಿಡುತ್ತಾರೆ.

ಮೇಲಿನ ಆಚರಣೆಗಳಲ್ಲದೆ ಪ್ರತಿ ವರ್ಷ ಯುಗಾದಿಯ ನಂತರ ಮೇ ತಿಂಗಳಲ್ಲಿ ಬರುವ ಅಕ್ಷತೃತೀಯ ದಿನದಂದು ಶಂಕರಾಚಾರ್ಯ, ಬಸವ ಮತ್ತು ಶಿವಾಜಿಯ ಜಯಂತಿಗಳನ್ನು ಆಚರಿಸುವುದು ಸಾಮಾನ್ಯವಾಗಿ ನಡೆದು ಬಂದಿದೆ.

ಹಾನಗಲ್ಲು ಬಹು ಸಮಾಜದಿಂದ ಕೂಡಿದ ನಗರ. ಇಲ್ಲಿ ವಾಸವಾಗಿರುವ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರು ತಮ್ಮದೇ ಆದ ನಂಬಿಕೆ, ಸಂಪ್ರದಾಯಗಳಲ್ಲಿ ಅನೇಕ ಹಬ್ಬಗಳನ್ನು ಆಚರಿಸುತ್ತ ಬಂದಿದ್ದಾರೆ.

ಇಂದಿನ ನಗರೀಕರಣ, ಜಾಗತೀಕರಣ ಮತ್ತು ವೈಜ್ಞಾನಿಕ ಯುಗದಲ್ಲಿ ನಂಬಿಕೆ, ಸಂಪ್ರದಾಯಗಳು ಮರೆಯಾಗುತ್ತಿವೆ. ಆದರೂ ಹಾನಗಲ್ಲು ನಗರದ ಜನತೆ ಇವುಗಳ ಆಚರಣೆಯಲ್ಲಿ ಉತ್ಸಾಹವನ್ನು ಕಳೆದುಕೊಂಡಿಲ್ಲ. ಮೂಲಕ ಪರಸ್ಪರ ವಿಶ್ವಾಸ, ಸೌಹಾರ್ದತೆಯನ್ನು ಬೆಳೆಸಿಕೊಂಡು ಬರುವಲ್ಲಿ ನಂಬಿಕೆ, ಸಂಪ್ರದಾಯ ಮತ್ತು ಆಚರಣೆಗಳು ಮಹತ್ವದ ಪಾತ್ರವನ್ನು ವಹಿಸಿವೆ.