ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆಹಾನಗಲ್ಲು ಎಂಬ ವಿಚಾರ ಸಂಕಿರಣದಲ್ಲಿ ಕರ್ನಾಟಕ ದೇವಾಲಯ ಕೋಶ : ವಿಜಾಪುರ ಜಿಲ್ಲೆ ಮತ್ತು ಧಾರವಾಡ ಜಿಲ್ಲೆ ಎಂಬ ಎರಡು ಪುಸ್ತಕಗಳು ಬಿಡುಗಡೆಗೊಂಡಿರುವುದು ಸಂತಸದ ಸಂಗತಿ. ದೇವಾಲಯ ಕೋಶಗಳ ವಿಶೇಷತೆ, ಇದುವರೆಗೂ ಅಧ್ಯಯನಕ್ಕೆ ಒಳಪಡದಿರುವ ಅನೇಕ ದೇವಾಲಯಗಳು ಇದರಲ್ಲಿ ಸೇರ್ಪಡೆಗೊಂಡಿರುವುದು. ಕೋಶಗಳಲ್ಲಿ ಉಲ್ಲೇಖಿತವಾದ ದೇವಾಲಯಗಳು ಸೂಕ್ಷ್ಮ ಮತ್ತು ವಿಸ್ತೃತ ಅಧ್ಯಯನ ಮಾಡುವವರಿಗೆ ಪ್ರಮುಖ ಆಕರಗಳಾಗುತ್ತವೆ. ಶ್ರೀಸಾಮಾನ್ಯನಿಗೂ ತನ್ನ ಪರಿಸರದಲ್ಲಿರುವ ಪ್ರಾಚೀನ ದೇವಾಲಯಗಳ ಇತಿಹಾಸ ಮತ್ತು ಕಲಾವಂತಿಕೆಯನ್ನು ಅರಿಯಲು ಇಂಥ ಗ್ರಂಥಗಳು ಮಾದರಿಯ ಪೀಠಿಕೆಯಾಗುತ್ತವೆ. ಪ್ರಕಾರದ ಉಪಯುಕ್ತ ಮೌಲ್ಯ ಕೃತಿಗಳನ್ನು ರಚಿಸಿ ಸಮಾಜಕ್ಕೆ ಕೊಡುತ್ತಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಮತ್ತು ಪರಿಶ್ರಮ, ಶ್ರದ್ಧೆ, ಆಳ ಹಾಗೂ ವ್ಯಾಪಕ ಅಧ್ಯಯನ ಮಾಡಿ ಗ್ರಂಥಗಳನ್ನು ರಚಿಸಿದ ಲೇಖಕರಿಗೆ ನಮ್ಮೆಲ್ಲರ ಹೃತ್ಪೂರ್ವಕ ಅಭಿನಂದನೆಗಳು.

ಸಂದರ್ಭದಲ್ಲಿ ದೇವಾಲಯದ ವಾಸ್ತು ವಿನ್ಯಾಸದ ಬಗ್ಗೆ ಒಂದೆರಡು ಮಾತುಗಳು. ವಾಸ್ತು ವಿನ್ಯಾಸದಲ್ಲಿ ನಾನಾ ಪ್ರಕಾರಗಳಿವೆ. ಅದರಲ್ಲಿ ಒಂದಕ್ಕೊಂದು ಪೂರಕವಾದ ಎರಡು ಅಭೇದ ಅಂಶಗಳು : ತಳವಿನ್ಯಾಸ ಮತ್ತು ಊರ್ಧ್ವ ವಿನ್ಯಾಸ. ಇವೆರಡರ ಆಧಾರದ ಮೇಲೆ ದೇವಾಲಯ ಮಾದರಿಗಳನ್ನು ವರ್ಗೀಕರಿಸಲಾಗಿದೆ. ತಳ ವಿನ್ಯಾಸ ದೃಷ್ಟಿಯಿಂದ ಒಂದು ಗರ್ಭಗೃಹದ ದೇವಾಲಯವು ಸಾಮಾನ್ಯ. ಎರಡರಿಂದ ಐದು ಗರ್ಭಗೃಹಗಳಿರುವ ದೇವಾಲಯಗಳು ಅಪರೂಪ. ಶಿವ ಮತ್ತು ಸೂರ್ಯ ಇಲ್ಲವೆ ಬ್ರಹ್ಮ, ವಿಷ್ಣು, ಮಹೇಶ್ವರ ಇಲ್ಲವೆ ಆಯ್ದ ತೀರ್ಥಂಕರರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ಕ್ರಮವಾಗಿ ಎರಡು, ಮೂರು ಹಾಗೂ ಐದು ಗರ್ಭಗೃಹಗಳುಳ್ಳ ದೇವಾಲಯಗಳು ನಿರ್ಮಾಣವಾದವು. ಲಕ್ಕುಂಡಿಯ ಕಾಶಿವಿಶ್ವೇಶ್ವರ, ಬಾದಾಮಿಯ ಜಂಬುಲಿಂಗೇಶ್ವರ, ಹೂಲಿಯ ಪಂಚಲಿಂಗೇಶ್ವರ (ಮೂಲತಃ ಬಸದಿ) ಹಾಗೂ ಹುಂಚದ ಪಂಚಕೂಟ ಬಸದಿ ಮಾದರಿಯ ದೇವಾಲಯಗಳಿಗೆ ಉತ್ತಮ ನಿದರ್ಶನ. ಎರಡನೆಯದನ್ನು ಚಾಲುಕ್ಯ ವಿನಯಾದಿತ್ಯ, ತನ್ನ ತಾಯಿಯ ಹೆಸರಿನಲ್ಲಿ ನಿರ್ಮಿಸಿದನು. ಮುಂದೆ ಪ್ರಕಾರದ ದೇವಾಲಯಗಳು ಕರ್ನಾಟಕದಾದ್ಯಂತ ಅಲ್ಲಲ್ಲಿ ನಿರ್ಮಾಣವಾದವು. ತೀರ ಅಪರೂಪವಾಗಿ ನಾಲ್ಕು ಗರ್ಭಗೃಹಗಳುಳ್ಳ ದೇವಾಲಯಗಳೂ ಇವೆ. ಉದಾ: ದೊಡ್ಡಗದ್ದವಳ್ಳಿಯ ಮಹಾಲಕ್ಷ್ಮಿ ಹಾಗೂ ಸಿರಿವಾಳ (ಶಹಪುರ ತಾಲೂಕು, ಕಲ್ಬುರ್ಗಿ ಜಿಲ್ಲೆ) ಸಿದ್ಧಲಿಂಗೇಶ್ವರ ದೇವಾಲಯಗಳು. ಷಟ್ಕೂಟ ದೇವಾಲಯವು ಅತಿ ಅಪರೂಪ. ಸಿಂದಗಿ ತಾಲೂಕಿನ (ವಿಜಾಪುರ ಜಿಲ್ಲೆ) ಯಂಕಂಚಿಯಲ್ಲಿ ಏಳು ಗರ್ಭಗೃಹಗಳುಳ್ಳ ದೇವಾಲಯವೊಂದಿದೆ. ಇಂಥ ಅಪರೂಪದ ದೇವಾಲಯ ಈಗ ತಿಳಿದಿರುವಂತೆ ಕರ್ನಾಟಕದಲ್ಲಿ ಇದೊಂದೆ. ಕುಕ್ಕನೂರಿನ ಒಂಬತ್ತು ಗರ್ಭಗೃಹಗಳುಳ್ಳ ನವಲಿಂಗೇಶ್ವರ ದೇವಾಲಯ ಅಸಾಮಾನ್ಯ. ಹೆಸರೇ ಸೂಚಿಸುವಂತೆ ಪ್ರತಿಯೊಂದರಲ್ಲಿಯೂ ಶಿವಲಿಂಗಗಳಿವೆ. ಮಾದರಿಯ ದೇವಾಲಯಗಳನ್ನು ಏಕ, ದ್ವಿ, ಚತುಷ್, ಪಂಚ, ಸಪ್ತ ಮತ್ತು ನವಕೂಟ ದೇವಾಲಯಗಳೆಂದು ವಿಂಗಡಿಸಲಾಗಿದೆ. ಮಾದರಿಯ ದೇವಾಲಯಗಳಲ್ಲಿ ನಾಲ್ಕರಿಂದ ಅರವತ್ನಾಲ್ಕು ಕಂಬಗಳುಳ್ಳ ಸಭಾ ಮಂಟಪ, ಒಂದರಿಂದ ನಾಲ್ಕು ಮುಖಮಂಟಪಗಳು ಇರಬಹುದು. ಮಧ್ಯದಲ್ಲಿ ಒಂದು ಗರ್ಭಗೃಹವಿದ್ದು, ನಾಲ್ಕೂ ಬದಿಯಲ್ಲಿ ಒಂದೊಂದು ಮುಖಮಂಟಪವಿರುವ ದೇವಾಲಯವೂ ಅಲ್ಲೊಂದು ಇಲ್ಲೊಂದು ಇವೆ. ಉದಾ: ಉಣಕಲ್ಲಿನ ೧೧ನೆಯ ಶತಮಾನದ ಚಂದ್ರಮೌಳೇಶ್ವರ ದೇವಾಲಯ, ೧೪ನೆಯ ಶತಮಾನದ ಗೇರುಸೊಪ್ಪೆಯ ಚತುರ್ಮುಖ ಬಸದಿ. ಪ್ರಕಾರದ ದೇವಾಲಯ ಮಾದರಿಯನ್ನು ಸರ್ವತೋಭದ್ರ ಎಂದು ವಾಸ್ತು ಗ್ರಂಥಗಳಲ್ಲಿ ಹೆಸರಿಸಿದೆ.

ನರಗುಂದ ತಾಲೂಕಿನ (ಗದಗ ಜಿಲ್ಲೆ) ಕೊಣ್ಣೂರು ಗ್ರಾಮದಲ್ಲಿರುವ ಪರಮೇಶ್ವರ ದೇವಾಲಯವನ್ನು ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷನ ದಂಡನಾಯಕ ಬಂಕೆಯ ಅರಸ ಕಟ್ಟಿಸಿದ್ದು, ಸುಮಾರು ಕ್ರಿ.. ೮೫೦ರಲ್ಲಿ ನಿರ್ಮಾಣವಾದ ಇದು ಮೂಲತಃ ಜೈನ ಬಸದಿ. ಇದಕ್ಕೆ ಬಂಕೆಯ ಅರಸ ತನ್ನ ಸ್ವಾಮಿ (ಚರ್ಕವರ್ತಿ)ಯಿಂದ ದಾನದತ್ತಿಗಳನ್ನು ಕೊಡಿಸಿದನು. ಎಲ್ಲಾ ವಿಷಯಗಳನ್ನು ಒಂದು ತಾಮ್ರಪಟ ಶಾಸನದಲ್ಲಿ ಬರೆಯಿಸಲಾಗಿತ್ತು. ಶಾಸನದ ಎಲ್ಲ ವಿಷಯಗಳನ್ನು ಪೂರ್ಣವಾಗಿ ಯಥಾವತ್ತಾಗಿ ದೇವಾಲಯದಲ್ಲಿರುವ ೧೧ನೆಯ ಶತಮಾನದ ಶಿಲಾಶಾಸನದಲ್ಲಿದೆ. ತಾಮ್ರ ಶಾಸನವು ಈಗ ಇಲ್ಲದಾಗಿದೆ. ದೇವಾಲಯ ನೋಡುವುದಕ್ಕೆ ಸಾಧಾರಣವಾಗಿದ್ದರೂ, ೧೨೧೩ನೆಯ ಶತಮಾನದ ಹೊಯ್ಸಳ ವಾಸ್ತುಶಿಲ್ಪದ ಒಂದು ವಿಶಿಷ್ಟ ಲಕ್ಷಣವಾದ ಗರ್ಭಗೃಹವು ನಕ್ಷತ್ರಾಕಾರ ತಳವಿನ್ಯಾಸದಲ್ಲಿರುವುದು ಕುತೂಹಲಕಾರಿ. ನಕ್ಷತ್ರಾಕಾರ ವಾಸ್ತುವಿನ್ಯಾಸವು ಹೊಯ್ಸಳರ ಕೊಡುಗೆಯೆಂದು ೧೯೬೮ರವರೆಗೂ ತಿಳಿಯಲಾಗಿತ್ತು. ಕೊಡುಗೆ ಕೊಣ್ಣೂರಿನ ಬಸದಿಯ ಶ್ರೇಷ್ಠ ವಾಸ್ತು ಶಿಲ್ಪಿಯದು. ಅದು ಬೆಳೆಯುತ್ತ ಪ್ರದೇಶಕ್ಕೆ ಹತ್ತಿರದಲ್ಲಿರುವ ಸವಡಿಯ (೧೦ನೆಯ ಶತಮಾನದ ಆದಿ ಭಾಗ) ಬ್ರಹ್ಮೇಶ್ವರ (ತ್ರೈಪುರುಷ = ಬ್ರಹ್ಮ, ಶಿವಲಿಂಗ, ವಿಷ್ಣು) ದೇವಾಲಯದಲ್ಲಿ ಕಾಣಿಸಿಕೊಳ್ಳುವುದು. ಇದರ ಗರ್ಭಗೃಹವು ಕೂಡಾ ನಕ್ಷತ್ರಾಕಾರ ವಿನ್ಯಾಸದಲ್ಲಿದೆ. ನಂತರ ನಿರ್ಮಾಣವಾದ, ಭಾರತದಲ್ಲಿಯೇ ವಿಶಿಷ್ಟ ಮಾದರಿಯದೆಂಬ ಹೆಗ್ಗಳಿಕೆಗೆ ಪಾತ್ರವಾದ ಡಂಬಳದ ದೊಡಬಸವಣ್ಣ ದೇವಾಲಯದ ಗರ್ಭಗೃಹವೂ ಇದೆ ವಿನ್ಯಾಸದಲ್ಲಿದೆ. ಅತ್ಯಂತ ವಿಸ್ಮಯಕಾರಿ ಅಂಶವೆಂದರೆ ಇದರ ಸಭಾಮಂಟಪವೂ ನಕ್ಷತ್ರಾಕೃತಿ ತಳವಿನ್ಯಾಸದಲ್ಲಿರುವುದು. ಗರ್ಭಗೃಹ ಮತ್ತು ಸಭಾಮಂಟಪ ನಕ್ಷತ್ರಾಕಾರದಲ್ಲಿರುವ ಏಕೈಕ ದೇವಾಲಯ ಇದಾಗಿದೆ. ಕ್ರಿ. . ೧೧ನೆಯ ಶತಮಾನದ ಆದಿ ಭಾಗದಲ್ಲಿ ಹೊಯ್ಸಳ ವಾಸ್ತು ಕಲೆಯಲ್ಲಿ ಕೆಲಸ ಮಾಡಿದ ಕೆಲವು ಶಿಲ್ಪಿಗಳು ಲಕ್ಕುಂಡಿಬಳ್ಳಿಗಾವೆ ಪ್ರದೇಶದವರು. ಇದರಿಂದ ಒಂದು ಪರಿಸರದ ವಿಶಿಷ್ಟ ನಿರ್ಮಿತಿ ಮತ್ತೊಂದೆಡೆಗೆ ಪ್ರಸರಣವಾಗಿರುವುದನ್ನು ದೇವಾಲಯಗಳ ಸೂಕ್ಷ್ಮ ಅಧ್ಯಯನಗಳಿಂದ ತಿಳಿದುಕೊಳ್ಳಬಹುದಾಗಿದೆ. ರೋಣ ತಾಲೂಕಿನ (ಗದಗ ಜಿಲ್ಲೆ) ನರೆಗಲ್ಲಿನಲ್ಲಿರುವ ವಿಷ್ಣುದೇವಾಲಯದ ಸಭಾಮಂಟಪದೊಳಗಿನ ಎರಡೂ ಬದಿಗಳಲ್ಲಿ ಆಯತಾಕಾರದ ಗರ್ಭಗೃಹವಿದ್ದು, ಒಂದೊಂದರೊಳಗೆ ತೀರ್ಥಂಕರ ಮೂರ್ತಿಗಳಿದ್ದ ೧೨ ಕುಳಿಗಳುಳ್ಳ ಉದ್ದನೆಯ ಪೀಠವಿದೆ. ಒಂದು ಮಾದರಿ ೯ನೆಯ ಶತಮಾನದ ಕೊನೆಯ ಭಾಗದಿಂದ ೧೬ನೆಯ ಶತಮಾನದ ಕೊನೆಯವರೆಗೆ ವಿಶೇಷವಾದ ಬೆಳವಣಿಗೆ ಕಂಡಿತು.

ಊರ್ಧ್ವ ವಿನ್ಯಾಸದ ಆಧಾರದ ಮೇಲೆ ವಿಜಾಪುರಧಾರವಾಡ ಪ್ರದೇಶದಲ್ಲಿ ಮೂಲಭೂತ ಐದು ಮಾದರಿಗಳನ್ನು ಕಾಣಬಹುದು. ಅವು ದ್ರಾವಿಡ ವಿಮಾನ, ರೇಖಾನಾಗರ, ವೇಸರ, ಫಾಂಸನ (ಕದಂಬನಾಗರ) ಮತ್ತು ಮಂಟಪ. ಇವೆಲ್ಲ ಮಾದರಿಗಳನ್ನು ಬಾದಾಮಿಪಟ್ಟದಕಲ್ಲುಐಹೊಳೆಯಲ್ಲಿ ಕಾಣಬಹುದು. ಉದಾ: ಕ್ರಮವಾಗಿ ಪಟ್ಟದಕಲ್ಲಿನ ಸಂಗಮೇಶ್ವರ, ಗಳಗನಾಥ, ವಿರೂಪಾಕ್ಷ, ಐಹೊಳೆಯ ಮಲ್ಲಿಕಾರ್ಜುನ ಮತ್ತು ಲಾಡ್ ಖಾನ್. ಹಾನಗಲ್ಲಿನ ಗಣೇಶ ದೇವಾಲಯವು ಒಂದು ವಿಶಿಷ್ಟ ಅನೇಕಾಂಡ ರೇಖಾನಾಗರ ಮಾದರಿ. ಮಂಡ್ಯ ಜಿಲ್ಲೆಯ ಕಂಬದ ಹಳ್ಳಿಯ ದ್ವಿಕೂಟ ಮತ್ತು ತ್ರಿಕೂಟ ಮಾದರಿಯ ಎರಡು ದೇವಾಲಯಗಳು ಒಂದರ ಪಕ್ಕದಲ್ಲೊಂದು ಇರುವ ಒಂದು ಸಂಕೀರ್ಣ. ಗರ್ಭಗುಡಿಯ ಮೇಲಿನ ಕಟ್ಟಡ (ಶಿಖರ) ಸ್ವರೂಪದ ಮೇಲೆ ಗುರುತಿಸಲಾಗುತ್ತದೆ. ದ್ರಾವಿಡ ವಿಮಾನ ಮಾದರಿಯ ತ್ರಿಕೂಟ ದೇವಾಲಯದ ಶಿಖರ(ಸ್ತೂಪಿ)ಗಳು ವೈಶಿಷ್ಟ್ಯಪೂರ್ಣವಾಗಿವೆ. ಒಂದರದು ಚೌಕೋನವಾಗಿದ್ದರೆ, ಇನ್ನೊಂದರದ್ದು ವೃತ್ತಾಕಾರ, ಮತ್ತೊಂದರದ್ದು ಅಷ್ಟಕೋನ. ಇಂಥ ಹಲವಾರು ದೇವಾಲಯಗಳ ಮಾದರಿಗಳನ್ನು ಕಾಣಬಹುದು.

ಯಾವುದೇ ಒಂದು ಕಲೆ ವಿಕಾಸ ಹಂತ ತಲುಪುವುದಕ್ಕೆ ಅನೇಕ ಘಟ್ಟಗಳಲ್ಲಿ ಪರಿವರ್ತನೆಯಾಗುತ್ತ ಬರುತ್ತದೆ. ಹಂತಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಅದರ ಪರಿಪೂರ್ಣ ಇತಿಹಾಸ ನಿರ್ಮಿಸಲು ಹಾಗೂ ಶಿಲ್ಪಿ ಕಲ್ಪನಾ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಮೆಚ್ಚಿಕೊಳ್ಳಲು ಸಾಧ್ಯ.

ಹೀಗೆ ಪ್ರತಿ ಜಿಲ್ಲೆಯ ದೇವಾಲಯಗಳ ಪ್ರಧಾನ ವಿಷಯಗಳನ್ನು ಕ್ರೊಢಿಕರಿಸಿರುವ ಇಂಥ ಕೋಶಗಳು ಮಹತ್ವದ್ದಾಗಿರುತ್ತವೆ. ಇವುಗಳನ್ನು ಅಧ್ಯಯನ ಮಾಡುವಾಗ, ದೇವಾಲಯಗಳ ಸೂಕ್ಷ್ಮ ವಿವರಣೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ದೇವಾಲಯಗಳ ವಾಸ್ತು ಕಲೆಯು, ನೋಡುವುದಕ್ಕೆ ಸಾಧಾರಣವಾಗಿ ಕಾಣಬಹುದು. ಕೆಲವುದರಲ್ಲಿ ಅಲಂಕರಣ ಇಲ್ಲದಿರಬಹುದು ಅಥವಾ ಹಾಳಾಗಿರಬಹುದು. ಆದರೂ ವಾಸ್ತು ವಿನ್ಯಾಸದಲ್ಲಿಯೇ ಶಿಲ್ಪಯ ಪ್ರತಿಭೆ ಅಡಗಿರುತ್ತದೆ. ಸೂಕ್ಷ್ಮ ದೃಷ್ಟಿಯಿಂದ ಇದನ್ನು ಗ್ರಹಿಸಲು ಸಾಧ್ಯ.

ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ

ಅಲ್ಲಲ್ಲಿ ಐತಿಹಾಸಿಕ ಗ್ರಾಮೀಣ ಪರಿಸರದಲ್ಲಿ ವಿಚಾರ ಸಂಕಿರಣಗಳನ್ನು ಏರ್ಪಡಿಸಿ, ಆಯಾ ಕ್ಷೇತ್ರಗಳಲ್ಲಿಯ ಪರಿಣಿತ ವಿದ್ವಾಂಸರೊಡನೆ ಚರ್ಚಿಸುವುದು ತುಂಬಾ ಉಪಯುಕ್ತ. ಅವರು ಇದುವರೆಗೆ ನಡೆದ ಅಧ್ಯಯನಗಳನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರಕಾರ್ಯದ ಮೂಲಕ ಸಂಶೋಧನೆಯಲ್ಲಿ ಕಂಡುಬಂದ ಅಮೂಲ್ಯ ವಿಷಯಗಳನ್ನು ಸಭೆಯ ಮುಂದೆ ಇಡುತ್ತಾರೆ. ಇದರಿಂದ ಮೊದಲು ಪರಿಸರದಲ್ಲಿ ಏನು ಅಧ್ಯಯನವಾಗಿದೆ; ಈಗಿನ ಹೊಸ ಸಂಶೋಧನೆಗಳೇನು ಮತ್ತು ಮುಂದೇನು ಮಾಡಬೇಕೆಂಬ ಹೊಸ ವಿಚಾರಗಳು ಸ್ಪಷ್ಟವಾಗುತ್ತವೆ. ಸ್ಥಳಿಯರಿಗೆ ತಮ್ಮ ತಮ್ಮ ಪ್ರದೇಶಗಳ ಸ್ಫೂರ್ತಿದಾಯಕ ವಸ್ತುನಿಷ್ಠ ಇತಿಹಾಸ ಮತ್ತು ಸಂಸ್ಕೃತಿಯು ಗೊತ್ತಾಗುತ್ತದೆ. ಅಭಿಮಾನದಿಂದ ಅವುಗಳನ್ನು ಉಳಿಸಿಕೊಂಡು ರಕ್ಷಿಸಿಕೊಳ್ಳುವ ರಾಷ್ಟ್ರೀಯ ಕಾರ್ಯದಲ್ಲಿ ಉತ್ಸಾಹದಿಂದ ನೆರವಾಗುತ್ತಾರೆ. ಇಂಥ ಸತತ ಪ್ರಯತ್ನಗಳಿಂದ ನಮ್ಮ ದೇಶದ ಇತಿಹಾಸದ ಪುನರ್ರಚನೆಯು ಹೆಚ್ಚು ಹೆಚ್ಚು ವಸ್ತುನಿಷ್ಠ ಹಾಗೂ ಅರ್ಥಪೂರ್ಣವಾಗುತ್ತ ಹೋಗುತ್ತದೆ.

ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಲ್ಲಿ ಅನೇಕ ಕ್ಷೇತ್ರಗಳ ಇತಿಹಾಸ ಈಗಾಗಲೇ ತಕ್ಕಮಟ್ಟಿಗೆ ಪುನರ್ರಚಿಸಲಾಗುತ್ತಿದೆ. ಹೀಗಿರುವಾಗ ಪ್ರಸ್ತುತ ಅಧ್ಯಯನದ ಅವಶ್ಯಕತೆಯನ್ನು ಪರಿಶೀಲಿಸಬೇಕಾಗುವುದು. ನಾನು ಸುಮಾರು ೪೫ ವರ್ಷಗಳ ಕಾಲ ಪುರಾತತ್ವ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದೇನೆ. ಅದರಲ್ಲೂ ಪ್ರಾದೇಶಿಕ ಪುರಾತತ್ವ ಅನ್ವೇಷಣೆ ನನ್ನ ಕಾರ್ಯಕ್ಷೇತ್ರ. ನನ್ನ ಅನುಭವಕ್ಕೆ ಬಂದಂತೆ, ಭಾರತದಲ್ಲಿ ಪುರಾತತ್ವ ಸಂಪತ್ತಿನಲ್ಲಿ ಶೇ.೧೫ ರಿಂದ ೨೦ ಭಾಗ ಮಾತ್ರ ಬೆಳಕಿಗೆ ಬಂದಿದೆ. ಇನ್ನೂ ಶೇ.೮೦ರಷ್ಟನ್ನು ಶೋಧಿಸಿ ಅಧ್ಯಯನ ಮಾಡಬೇಕಾಗಿದೆ. ಆದ್ದರಿಂದ ಇದುವರೆಗೂ ತಿಳಿದಿರುವ ನಮ್ಮ ದೇಶದ ಇತಿಹಾಸದಲ್ಲಿ ಲೋಪದೋಷಗಳಿವೆ. ಆದ್ದರಿಂದ ಅದು ಅಪೂರ್ಣವಾಗಿದೆಯೆಂಬುದು ಸ್ಪಷ್ಟವಾಗುತ್ತದೆ. ಕೇವಲ ಪುರಾತತ್ವ ಮಾತ್ರವಲ್ಲ ಸಾಹಿತ್ಯ ಮತ್ತು ಅಧಿಕೃತ ದಾಖಲೆಗಳ, ಮೌಖಿಕ ಇತಿಹಾಸ ಅಧ್ಯಯನ ಕ್ಷೇತ್ರಗಳಲ್ಲಿಯೂ ಪರಿಸ್ಥಿತಿ ಹೀಗೆಯೇ ಇದೆ. ಮುಖ್ಯವಾಗಿ ತಾಡವೋಲೆ ಗ್ರಂಥಗಳ ಅಧ್ಯಯನವೂ ಇದೇ ಪ್ರಮಾಣದಲ್ಲಿದೆ. ಇವುಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುವುದರಿಂದ ಸ್ಥಳೀಯ ಇತಿಹಾಸದ ಮೇಲೆ ಹೆಚ್ಚಿನ ಬೆಳಕು ಚೆಲ್ಲಲು ಸಾಧ್ಯವಾಗುತ್ತದೆ. ಬಿಲ್ಹಣನವಿಕ್ರಮಾಂಕ ವಿಜಯ’, ಲಿಂಗಣ್ಣ ಕವಿಯಕೆಳದಿ ನೃಪವಿಜಯಕ್ರಮವಾಗಿ ಕಲ್ಯಾಣ ಚಾಲುಕ್ಯ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯ ಮತ್ತು ಕೆಳದಿ ನಾಯಕರ ಇತಿಹಾಸಕ್ಕೆ ಅಮೂಲ್ಯ ಆಕರಗಳೆಂಬುದು ಇತಿಹಾಸಕಾರರಿಗೆ ತಿಳಿದ ವಿಷಯ.

ಒಂದು ಪ್ರದೇಶದಲ್ಲಿಯ ಪ್ರತಿಯೊಂದು ಭಾಗದ ಇತಿಹಾಸ ಮತ್ತು ಸಂಸ್ಕೃತಿ ಅಧ್ಯಯನದ ಸಮನ್ವಯದಿಂದ ಅದರ ಒಟ್ಟಾರೆ ಇತಿಹಾಸ ತಿಳಿಯುತ್ತದೆ. ಒಂದು ದೇಶದಲ್ಲಿಯ ಇಂಥ ಎಲ್ಲ ಪ್ರದೇಶಗಳ ಇತಿಹಾಸ ಮತ್ತು ಸಂಸ್ಕೃತಿಗಳ ವ್ಯವಸ್ಥಿತ ಸಮಗ್ರ ಸಮನ್ವಯದಲ್ಲಿ ಹೊರಹೊಮ್ಮುವ ಚಿತ್ರವೆ ಅದರ ಇತಿಹಾಸ. ಆದ್ದರಿಂದ ಒಂದು ಪ್ರದೇಶದ/ದೇಶದ ಕೆಲವು ಭಾಗಗಳನ್ನು ಅರಿತುಕೊಂಡರೆ ಸಾಲದು. ಹಿನ್ನೆಲೆಯಲ್ಲಿ ಸ್ಥಳೀಯ ಇತಿಹಾಸ ಬಹಳ ಮಹತ್ವದ್ದಾಗಿ ಕಾಣುತ್ತದೆ. ಪ್ರತಿಯೊಂದು ಸ್ಥಳದ ಮಾಹಿತಿ ಲಭ್ಯವಿದ್ದರೆ, ಯಾವ ಯಾವ ಪ್ರದೇಶಗಳ ಸಂಸ್ಕೃತಿಗಳು ಹೇಗೆ ವಿಶಿಷ್ಟವಾಗಿತ್ತು, ಅವುಗಳ ವಿಕಸನ ಪ್ರಸರಣ ಮುಂತಾದ ಮಹತ್ವದ ಸಂಗತಿಗಳನ್ನು ಸಮನ್ವಯ ಮಾಡಿ ಸಮಗ್ರವಾಗಿ ಆಲೋಚನೆ ಮಾಡಲು ಸಾಧ್ಯವಾಗುತ್ತದೆ. ರೀತಿಯ ಅಧ್ಯಯನಕ್ಕೆ ಸ್ಥಳೀಯ ಇತಿಹಾಸ ಬೆನ್ನೆಲುಬಾಗಿ ನಿಲ್ಲುತ್ತದೆ. ಆದ್ದರಿಂದ ಇತ್ತೀಚೆಗೆ ಸ್ಥಳೀಯ ಇತಿಹಾಸಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ.

ಪುರಾತತ್ವ ಹಾಗೂ ಇತಿಹಾಸ ವಿಷಯಗಳ ಅಧ್ಯಯನಕಾರರು, ಸ್ಥಳೀಯ ಸಂಶೋಧನೆ ಕೈಗೊಳ್ಳುವ ಪೂರ್ವದಲ್ಲಿ ಒಂದು ವ್ಯಾಪಕ ಅಧ್ಯಯನಬದ್ಧ ಒಂದು ಯೋಜನೆಯನ್ನು ಹಾಕಿಕೊಳ್ಳಬೇಕಾಗುತ್ತದೆ. ತತ್ಸಂಬಂಧ ಪೂರ್ವ  ಅಧ್ಯಯನಗಳ ವಿಮರ್ಶೆಯಿಂದ ಕಂಡುಬರುವ ಸಮಸ್ಯೆಗಳನ್ನು, ಛಿದ್ರ ಭಾಗಗಳನ್ನು, ನಿರೀಕ್ಷಿತ ಪುರಾತತ್ವ ಮತ್ತು ಐತಿಹಾಸಿಕ ಅಂಶಗಳನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಅನ್ವೇಷಣೆ, ವಿಶ್ಲೇಷಣೆ, ಅಧ್ಯಯನವನ್ನು ಮುಂದುವರಿಸಬೇಕಾಗುತ್ತದೆ. ಹೀಗೆ ಕ್ರಮಬದ್ಧ ನಿರಂತರ ಪ್ರಯತ್ನಗಳಿಂದ ಕ್ರಮೇಣ ಇಡೀ ಪ್ರಾಂತದ/ದೇಶದ ವಸ್ತುನಿಷ್ಠ ಸಮಗ್ರ ವಿವರಣೆಗಳಿಂದ ಕೂಡಿದ ಇತಿಹಾಸವನ್ನು ತಿಳಿಯಲು ಸಾಧ್ಯವಾಗುತ್ತದೆ.

ನಮ್ಮ ದೇಶದ ಚರಿತ್ರೆಯ ಅಧ್ಯಯನದಲ್ಲಿ ಹಾನಗಲ್ಲು ಪ್ರದೇಶದ ಇತಿಹಾಸವೂ ಒಂದು ಭಾಗ. ಆದ್ದರಿಂದ ಸ್ಥಳೀಯ ಇತಿಹಾಸಕ್ಕೆ ಅದು ತುಂಬಾ ಮಹತ್ವದ್ದು. ಯೋಜನೆಯನ್ನು ಕನ್ನಡ ವಿಶ್ವವಿದ್ಯಾಲಯವು ಹಮ್ಮಿಕೊಂಡು, ಉತ್ಸಾಹದಿಂದ ನಿರ್ವಹಿಸುತ್ತಿರುವುದು ಪ್ರಶಂಸನೀಯ. ಹಾನಗಲ್ಲು ಪ್ರದೇಶವೂ ಸೇರಿದಂತೆ ಡೈನಾಸ್ಟಿಕ್ ಹಿಸ್ಟರಿ ಆಫ್ ಕೆನರೀಜ್ ಡಿಸ್ಟ್ರಿಕ್ಟ್ಸ್ (೧೮೮೧) ಎಂಬ ಗ್ರಂಥವನ್ನು ಬರೆದವರು ಜೆ. ಎಫ್. ಪ್ಲೀಟ್. ಇದು ಕರ್ನಾಟಕ ಉತ್ತರ ಭಾಗ ಇತಿಹಾಸದ ಪ್ರಥಮ ಗ್ರಂಥ. ನಂತರ ಜೆ. ಎಂ. ಮೋರೆಸ್ ಅವರು ಬರೆದ ಕದಂಬ ಕುಲ (೧೯೩೫) ಎಂಬ ಪುಸ್ತಕದಲ್ಲಿಯೂ ಹಾನಗಲ್ಲು ಕದಂಬರ ಬಗ್ಗೆ ವಿಷಯ ಪ್ರಸ್ತಾಪ ಇದೆ. ಹೊಸ ಶೋಧನೆ ಅಧ್ಯಯನಗಳಾಗುತ್ತ ಹೋದ ಹಾಗೆಲ್ಲ ಹಿಂದಿನ ವಿಷಯಗಳ ವಿಮರ್ಶೆ, ತಿದ್ದುಪಡಿ ಹಾಗೂ ಹೊಸ ವಿಷಯಗಳ ಸೇರ್ಪಡೆ ನಿರಂತರ ನಡೆದೆಯಿರುತ್ತವೆ. ಇಂಥ ವಿಚಾರ ಸಂಕಿರಣಗಳಲ್ಲಿ ಇವೆಲ್ಲವುಗಳನ್ನು ಪರಾಮರ್ಶಿಸುವ ಸಂದರ್ಭ ಒದಗುತ್ತದೆ. ಅಲ್ಲದೆ ಇದು ಮುಂದಿನ ಶೋಧನೆ ಮತ್ತು ಅಧ್ಯಯನಕ್ಕೆ ಎಡೆಮಾಡಿಕೊಡುವುದು.

ನಮಗೆ ತಿಳಿದಿರುವ ಹಾಗೆ ಹಾನಗಲ್ಲು ಪ್ರದೇಶದಲ್ಲಿ ಸಾತವಾಹನರಿಂದ ಇತ್ತೀಚಿನವರೆಗೆ, ಅಂದರೆ ಸುಮಾರು ೨೦೦೦ ವರ್ಷಗಳ ವರೆಗಿನ ಇತಿಹಾಸ ಪೂರ್ಣವಾಗಿಯಲ್ಲದಿದ್ದರೂ, ತಕ್ಕ ಮಟ್ಟಿಗೆ ತಿಳಿದು ಬಂದಿದೆ. ಆದರೆ ಸಾತವಾಹನ ಪೂರ್ವ ಕಾಲದಲ್ಲಿ ಭಾಗದಲ್ಲಿ ಜನವಾಸ್ತವ್ಯವಿರಲಿಲ್ಲವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪ್ರಶ್ನೆಗಳಿಗೆ ಉತ್ತರ ಹುಡುಕುವುದಕ್ಕೆ ೨೫೦ ವರ್ಷಗಳ ಹಿಂದೆ ಜಟಿಲವಾಗಿತ್ತು. ಅದರಲ್ಲೂ ನಮ್ಮ ದೇಶಕ್ಕಿಂತ ಪರದೇಶಗಳಲ್ಲಿ ಇದು ಸಾಧ್ಯವೇ ಇರಲಿಲ್ಲ. ಕ್ರಿ.. ೧೬೫೦ರ ಸುಮಾರಿನಲ್ಲಿ ಐರ್ಲೆಂಡಿನ ಜೇಮ್ಸ್ ಉಶರ್ ಎಂಬುವನು ಬೈಬಲ್ಲಿನ ಕೆಲವು ಭಾಗಗಳ ಕೂಲಂಕುಶ ಅಧ್ಯಯನದಲ್ಲಿ ತಾನು ಕಂಡುಕೊಂಡ ಒಂದು ವಿಷಯವನ್ನು ಜನಸಾಮಾನ್ಯರಿಗೆ ತಿಳಿಯ ಹೇಳಿದನು. ವಿಶ್ವಸೃಷ್ಟಿ ಆರಂಭವಾದದ್ದು ಕ್ರಿ.ಪೂ. ೪೦೦೪ರ ಅಕ್ಟೋಬರ್ ತಿಂಗಳಲ್ಲಿ. ಸೃಷ್ಟಿ ಏಳು ದಿನಗಳ ಕಾಲ ಮುಂದುವರೆದಿತ್ತು. ಅನೇಕ ಪ್ರಾಣಿ ಸಂಕುಲಗಳಲ್ಲಿ ಕೊನೆಗೆ ದಿನಾಂಕ ೨೩ರ ರಂದು ಮನುಷ್ಯನ ಸೃಷ್ಟಿ ಬೆಳಿಗ್ಗೆ ಗಂಟೆಗಾಯಿತೆಂದು ಕರಾರುವಾಕ್ಕಾಗಿ ಪ್ರಚುರಪಡಿಸಿದನು. ಇದಕ್ಕೂ ಪೂರ್ವದಲ್ಲಿ ೮ನೆಯ ಶತಮಾನದ ಆಂಗ್ಲ ಇತಿಹಾಸಕಾರ ವೆನೆರಬಲ್ ಬೆಡೆ ಕ್ರಿ.ಪೂ. ೩೯೫೨ರಲ್ಲಿ ವಿಶ್ವವು ಸೃಷ್ಟಿಯಾಯಿತೆಂದು ಹೇಳಿದ್ದನು. ಜನ ಸಮುದಾಯದ ಪಂಚಾಂಗದಲ್ಲಿ ಇವತ್ತಿಗೂ ಕ್ರಿ.ಪೂ. ೩೭೬೧ ಸೃಷ್ಟಿಯ ವರ್ಷವೆಂದು ನಮೂದಿಸಲಾಗಿರುತ್ತದೆ. ಜೇಮ್ಸ್ ಉಶರ್ ಲೆಕ್ಕಾಚಾರ ಮಾತ್ರ ಇಡೀ ಯೂರೋಪ್ ದೇಶದ ಜನರ ಮೇಲೆ ಬಹು ಗಂಭೀರವಾದ ಪ್ರಭಾವವನ್ನು ಬೀರಿತು. ೧೭ನೆಯ ಶತಮಾನದಲ್ಲಿ ಜಾನ್ ಲೈಟ್ ಪುಟ್, ಉಶರ್ ಅವರ ವಿವಿರಣೆಗಳನ್ನು ಯಥಾವತ್ತಾಗಿ ಒಪ್ಪಿಕೊಂಡು ಹೆಚ್ಚು ಸ್ಪಷ್ಟಪಡಿಸಿದನು. ಕ್ರಮೇಣ ಇದೊಂದು ಪಾರಂಪರಿಕ ಧಾರ್ಮಿಕ ನಂಬಿಕೆಯಾಗಿ ಗಟ್ಟಿಯಾಗಿ ಜನರ ಮನಸ್ಸಿನಲ್ಲಿ ಬೇರೂರಿತು. ಕ್ರಿ. . ೧೮೪೨ ಮಾನವ ಮತ್ತು ಅವನ ಸಂಸ್ಕೃತಿಯ ಪ್ರಾಚೀನತೆ ಅಧ್ಯಯನದಲ್ಲಿ ಒಂದು ಮರೆಯಲಾಗದ ಘಟ್ಟ. ಬೂಶರ್ ಪರ್ತ್ ಒಬ್ಬ ಪ್ರೆಂಚ್ ಸಂಶೋಧಕ ಸಾಮ್ ನದಿ ದಂಡೆಯ ಮೇಲಿನ ಲೆ ಅಬೆವಿಲೆ ಎಂಬಲ್ಲಿದಿಲುವಿಯಲ್ಕಾಲದ ಪದರಿನಲ್ಲಿ ಕ್ರಮಬದ್ಧವಾಗಿ ಎರಡು ಬದಿಗಳ ಮೇಲ್ಮೆಯಿಂದ ಚಕ್ಕೆಗಳನ್ನು ಎಬ್ಬಿಸಿದ ನಿರ್ದಿಷ್ಟಾಕಾರದ ಒಂದು ಪ್ಲಿಂಟ್ ತಿರುಳುಗಲ್ಲು ಸಸ್ತನಿಯ ಪ್ರಾಣಿಯ ದವಡೆಯ ಪಳೆಯುಳಿಕೆಯೊಂದಿಗೆ ಶೋಧಿಸಿದನು. ಅನಂತರ ಸ್ವಲ್ಪ ಸಮಯದಲ್ಲೇ ನಿಗದಿತ ಆಕಾರದಲ್ಲಿ ರೂಪಿಸಲ್ಪಟ್ಟ ಇಂಥ ಕಲ್ಲಿನ ಗಟ್ಟಿಗಳು ದಿಲುವಿಯಲ್ ಕಾಲಘಟ್ಟಕ್ಕಿಂತಲೂ ಪೂರ್ವದ ಪ್ರಾಣಿಗಳ ಪಳೆಯುಳಿಕೆಗಳೊಡನೆ ದೊರಕಿದವು. ತಮ್ಮ ಎಲ್ಲ ಶೋಧನೆಗಳ ಆಧರದ ಮೇಲೆ ೧೮೪೭೪೮ರಲ್ಲಿ ಮೂರು ಸಂಪುಟಗಳಲ್ಲಿಕೆಲ್ಟಿಕ್ ಆಂಡ್ ಆಂಟಿ ದಿಲುವಿಯನ್ಎಂಬ ಗ್ರಂಥವನ್ನು ಪ್ರಕಟಿಸಿದನು. ಇವನ ತೀರ್ಮಾನಗಳನ್ನು ಪುಷ್ಟೀಕರಿಸುವಂತೆ ದಿಲುವಿಯನ್ ಪದರಿನಲ್ಲಿಯೇ ಸಸ್ತನಿ ಪ್ರಾಣಿಗಳ, ಮೈತುಂಬ ದಟ್ಟ ಕೂದಲಿದ್ದ ಘೆಂಡಾಮೃಗದ ಪಳೆಯುಳಿಕೆಗಳೊಂದಿಗೆ ಕಲ್ಲಿನ ಉಪಕರಣಗಳು ಶೋಧವಾದವು. ಕ್ರಮೇಣ ನೆಲೆಗಳಲ್ಲಿ ದೊರೆತ ಅವಶೇಷಗಳನ್ನು ಸರ್ಕಾರದ ಸಮಿತಿಯ ಅಳಿದುಹೋದ ಪ್ರಾಣಿಗಳ ತಜ್ಞ ಹ್ಯು ಪಾಲ್ಕ್ನರ್, ಭೂ ವಿಜ್ಞಾನಿ ಜೋಸೆಫ್ ಪ್ರೆಸ್ಟ್ವಿಚ್, ಚಾರ್ಲ್ಸ್ ಲೈಲ್ ಮತ್ತು ಪುರಾತತ್ವಜ್ಞ ಜಾನ್ ಎವಾನ ಎಂಬುವವರು ಕೂಲಂಕುಶವಾಗಿ ಪರಿಶೀಲಿಸಿ ಅಧಿಕೃತವಾಗಿ ಬೂಶರ್ ಪರ್ತ್ ಅವನ ತೀರ್ಮಾನಗಳು ಸರಿಯೆಂದು ಘೋಷಿಸಿದರು. ಇದೊಂದು ನಿಸ್ಸಂದೇಹ ನಿರ್ಣಾಯಕ ಘಟ್ಟ. ಅದುವರೆಗೆ ವಿಶ್ವಸೃಷ್ಟಿ ಸಾವಿರ ವರ್ಷಗಳ ಹಿಂದೆ ನಡೆಯಿತೆಂದು ವಿನಮ್ರವಾಗಿ ನಂಬಿದ್ದ ಜನಸಾಮಾನ್ಯರಿಗಲ್ಲದೆ ವಿದ್ವಾಂಸರಿಗೂ ವಿಸ್ಮಯ ಆತಂಕವನ್ನುಂಟುಮಾಡಿತು. ವಿಷಯ ಕುರಿತು ವಿಸ್ತ್ರತ ಸಂಶೋಧನೆ ಮುಂದುವರೆಯಿತು. ಕ್ರಮೇಣ ಒಂದೊಂದೆ ವಿಷಯವು ಬೆಳಕಿಗೆ ಬಂದು ಮಾನವನ ಹುಟ್ಟಿನ ಪ್ರಾಚೀನತೆ, ವಿಕಸನ, ಜೀವನ ಶೈಲಿ, ಸಾಂಸ್ಕೃತಿಕ ಪ್ರಗತಿ ಮೊದಲಾದವುಗಳನ್ನು ನಿರ್ಧರಿಸಲಾಯಿತು. ಈಗ ಅಧ್ಯಯನವು ವಿಶ್ವದಲ್ಲೆಲ್ಲಾ ಅತ್ಯಂತ ಕೂಲಂಕುಶವಾಗಿ ವೈಜ್ಞಾನಿಕವಾಗಿ ನಡೆಯುತ್ತಿದೆ.

ಭಾರತದಲ್ಲಿ ಪ್ರಕಾರದ ಸಂಶೋಧನೆ ಆರಂಭವಾದದ್ದು ೧೮೬೩ರಲ್ಲಿ. ರಾಬರ್ಟ್ ಬ್ರೂಸ್ ಪೂಟ್ ಪುರಾತತ್ವಜ್ಞನಿಗೆ ತಮಿಳುನಾಡಿನ ಪಲ್ಲವರಂ (ಕೊರ್ತಲಯರ್ ನದಿ ಪ್ರದೇಶ)ದಲ್ಲಿ ಮಾದರಿಯ ಶಿಲಾಯುಗದ ಅವಶೇಷಗಳನ್ನು ಪ್ರಪ್ರಥಮವಾಗಿ ೩೦ ಮೇ ೧೮೬೩ರಂದು ಶೋಧಿಸಿದನು. ಕ್ರಮೇಣ ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ವಿವಿಧ ಸಾಂಸ್ಕೃತಿಕ ಕಾಲದ ಸುಮಾರು ೪೫೦ ನೆಲೆಗಳನ್ನು ಶೋಧಿಸಿ, ಅಧ್ಯಯನ ಮಾಡಿ ಅನುಕ್ರಮವಾಗಿ ಹಳೆ ಶಿಲಾಯುಗ, ಹೊಸ ಶಿಲಾಯುಗ ಮತ್ತು ಕಬ್ಬಿಣ ಯುಗ ಎಂದು ಇತಿಹಾಸ ಪೂರ್ವದ ಮೂರು ಪ್ರಮುಖ ಸಾಂಸ್ಕೃತಿಕ ಘಟ್ಟಗಳನ್ನು ಗುರುತಿಸಿದನು. ಕರ್ನಾಟಕದಲ್ಲಿ ಅವನು ಶೋಧಿಸಿದ ಅತಿ ಮಹತ್ವದ ನೆಲೆಗಳೆಂದರೆ ನ್ಯಾಮತಿ (ಶಿವಮೊಗ್ಗ ಜಿಲ್ಲೆ), ಲಿಂಗದಹಳ್ಳಿ (ಚಿಕ್ಕಮಗಳೂರು ಜಿಲ್ಲೆ), ಖ್ಯಾಡ್, ಡಾಣಕ್ ಶಿರೂರ (ಬಿಜಾಪುರ ಜಿಲ್ಲೆ) ಹಳೆ ಶಿಲಾಯುಗ, ತಿ.ನರಸಿಪುರ (ಮೈಸೂರು ಜಿಲ್ಲೆ), ಸಂಗನಕಲ್ಲು (ಬಳ್ಳಾರಿ ಜಿಲ್ಲೆ) ನೂತನ ಶಿಲಾಯುಗ ಮತ್ತು ಹಂಪಸಾಗರದಲ್ಲಿ ಆದಿ ಕಬ್ಬಿಣ ಯುಗದ ಬೃಹತ್ ಶಿಲಾಯುಗ ಸಂಸ್ಕೃತಿ. ರೀತಿಯ ಶೋಧಗಳಿಂದ ಮುಂದೆ ಮಾನವನ ದೈಹಿಕ, ಮಾನಸಿಕ, ಸಾಂಸ್ಕೃತಿಕ ವಿಕಾಸಗಳನ್ನು ಗುರುತಿಸುವ ಪ್ರಯತ್ನಗಳು ನಡೆದವು/ಯುತ್ತಲಿದೆ.

ಪ್ರಾಗಿತಿಹಾಸ ಕಾಲವನ್ನು ಅಧ್ಯಯನದ ಅನುಕೂಲತೆಗಾಗಿ ಅವಶೇಷಗಳ ಮಾದರಿಗಳನ್ನು, ಅವುಗಳು ದೊರೆತ ಸಾಂಸ್ಕೃತಿಕ ಸಂದರ್ಭವನ್ನು ಗಮನಿಸಿ, ಆದಿ ಹಳೆ ಶಿಲಾಯುಗದಿಂದ ಆದಿ ಇತಿಹಾಸ ಕಾಲದವರೆಗಿನ ಅವಧಿಯನ್ನು ಆರು ಹಂತಗಳನ್ನಾಗಿ ವಿಂಗಡಿಸಲಾಗಿದೆ. ೨೦೦೩ರ ನಂತರ ಆಫ್ರಿಕಾ ಖಂಡದ ಚಾಡ್ ಸರೋವರ ಪ್ರದೇಶದಲ್ಲಿ ಸಿಕ್ಕ ಒಂದು ತಲೆಬುರುಡೆಯನ್ನು ವಿಶ್ವದ ನಾನಾ ವಿಜ್ಞಾನಿಗಳು ಪರೀಕ್ಷೆಗೆ ಒಳಪಡಿಸಿದ್ದಾರೆ. ಪುರಾತತ್ವಜ್ಞರು, ಮಾನವಶಾಸ್ತ್ರಜ್ಞರು, ಭೂವಿಜ್ಞಾನಿಗಳ ವೈಜ್ಞಾನಿಕ ವಿಶ್ಲೇಷಣೆಯ ಫಲವಾಗಿ ಅದು ಸುಮಾರು ೭೦ ಲಕ್ಷ ವರ್ಷಗಳ ಹಿಂದಿನದೆಂದು ತಿಳಿದುಬಂದಿದೆ. ಇದಕ್ಕೂ ಸ್ವಲ್ಪ ಮುಂಚೆ ಖಂಡದ ಇಥಿಯೋಪಿಯ ಪ್ರದೇಶದಲ್ಲಿ ೨೫೩೦ ಲಕ್ಷ ವರ್ಷಗಳ ಹಿಂದಿನ ಅಂದರೆ ಮನುಷ್ಯನ ಇತಿಹಾಸ ಪುರಾಣಗಳಲ್ಲಿಯ ಉಲ್ಲೇಖಗಳಂತೆ ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗಹೀಗೆ ಲಕ್ಷ ಲಕ್ಷ ವರ್ಷಗಳ ಹಿಂದಿನಿಂದಲೂ ಇರಬಹುದೇ ಎಂಬ ಅನುಮಾನ ಉಂಟಾಗುವುದು ಸಹಜ.

ಎಲ್ಲ ಅಧ್ಯಯನಗಳಿಂದ ಮಾನವನ ಅಲೆಮಾರಿ ಆಹಾರ ಸಂಗ್ರಹಣ ಸಂಸ್ಕೃತಿಯ ಹಂತದಿಂದ ಇಂದಿನವರೆಗಿನ ವಿಕಸನ ಹಂತಗಳನ್ನು ತಿಳಿಯಲು ಸಾಧ್ಯವಾಗಿದೆ. ಮಾನವ ಕುಲದ ಬೆಳವಣಿಗೆಯ ಕಾಲ ಘಟ್ಟವನ್ನು ಒಟ್ಟಾರೆ ಸುಮಾರು ೨೪ ಲಕ್ಷ ವರ್ಷಗಳೆಂದು ಪರಿಗಣಿಸಿದಲ್ಲಿನ ೨೩ ಲಕ್ಷ ೬೧ ಸಾವಿರ ವರ್ಷಗಳ ಸತತ ಪ್ರಯತ್ನದಿಂದ, ಅತ್ಯಂತ ಶ್ರಮದಿಂದ ನಾಗರಿಕತೆ ಹಂತವನ್ನು ತಲುಪಿ ಕೇವಲ ಸಾವಿರ ವರ್ಷಗಳಾಗಿವೆ. ಅಂದರೆ ೨೪ ಲಕ್ಷ ವರ್ಷಗಳನ್ನು ಗಡಿಯಾರದ ೨೪ ಗಂಟೆಗಳಿಗೆ ಅಳವಡಿಸಿದಾಗ, ಗಂಟೆಗೆ ಒಂದೊಂದು ಲಕ್ಷ ವರ್ಷಗಳಾಗುತ್ತವೆ. ನಾಗರಿಕತೆಯ ಹಂತವನ್ನು ಕೇವಲ ೨೦ ನಿಮಿಷಗಳ ಹಿಂದೆ ಮುಟ್ಟಲಾಯಿತೆಂದಾಯಿತು. ನಾಗರಿಕತೆಯ ಹಿಂದೆ ಮನುಷ್ಯನ ಅತಿ ದೀರ್ಘ ಕಾಲದ ನಿರಂತರ ಪ್ರಯತ್ನ ವ್ಯಕ್ತವಾಗುತ್ತದೆ. ಹಿನ್ನೆಲೆಯಲ್ಲಿ ಈಗಿನ ಸಾಧನೆಗಳನ್ನು ವಿಮರ್ಶೆ ಮಾಡುವುದು ತುಂಬಾ ಅವಶ್ಯವೆಂದು ತೋರುತ್ತದೆ. ಸುಮಾರು ೨೦ ವರ್ಷಗಳ ಹಿಂದೆ ಎರಡನೆಯ ಮಹಾಯುದ್ಧದಿಂದ ಜನತೆಯ ಮೇಲೆ ಯಾವ ಪರಿಣಾಮ ಉಂಟಾಯಿತು ಹಾಗೂ ಇದರಿಂದ ಕಲಿತ ಪಾಠವೆನೆಂದು ತಿಳಿಯಲು ಒಂದು ವಿಚಾರ ಸಂಕಿರಣವನ್ನು ನಡೆಸಲಾಯಿತು. ವಿಚಾರ ಸಂಕಿರಣದಲ್ಲಿ ಕಂಡು ಬಂದ ಭೀಕರ ಚಿತ್ರ ಎರಡನೆಯ ಮಹಾಯುದ್ಧ ನಡೆಸುವುದಕ್ಕೆ ಯಾವ ಸಿದ್ಧತೆ ಬೇಕಾಗಿತ್ತೋ ಅದರ ೨೦೦ ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಸಿದ್ಧಮಾಡಲಾಗಿದೆಯೆಂದು ತಿಳಿದುಬಂದುದು.

ಎಲ್ಲ ಸಂಗತಿಗಳನ್ನು ವಿಮರ್ಶೆಗೆ ಒಳಪಡಿಸಿದಾಗ, ಪ್ರಸ್ತುತ ಸುಧಾರಿಸಿದ ನಾಗರಿಕತೆಯ ಮನುಷ್ಯನ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಶ್ನೆ ಉದ್ಭವಿಸುತ್ತದೆ. ಹಿಂದಿನ ಜನರು ನೋಡಲಿಕ್ಕೆ ಅಷ್ಟೇನು ಚೆಲುವಾಗಿರದೆ ಅನಾಗರಿಕ ಜೀವನಶೈಲಿಯವರೆಂದು ಇತಿಹಾಸದಿಂದ ತಿಳಿಯಲಾಗಿದೆ. ಆದರೆ ಅವರು ನಾಗರಿಕತೆಯತ್ತ ಮಾನವ ಜನಾಂಗವನ್ನು ಒಯ್ದರು. ಈಗಿನ ಅತಿ ಮುಂದುವರೆದ ಸುಂದರ ಜನಾಂಗ ವಿಶ್ವವನ್ನೆ ವಿನಾಶದತ್ತ ಒಯ್ಯುವಂತೆ ಕಾಣುತ್ತಿದೆ. ಅನಾಗರಿಕರೆಂದು ವರ್ಣಿಸಲಾದ ಅವರ ಮುಂದೆ ಇಂದಿನ ಜನಾಂಗ ನಾಚಿಕೆಯಿಂದ ತಲೆ ತಗ್ಗಿಸಿ ನಿಲ್ಲಬೇಕಾಗುತ್ತದೆ. ಇಂಥ ಹಲವಾರು ವಿಚಾರಗಳನ್ನು ವಿಮರ್ಶೆ ಮಾಡಲು ಮತ್ತು ಮುಂದಿನ ಸವಾಲುಗಳನ್ನು ಎದುರಿಸಲು ಇತಿಹಾಸ ಸಂಶೋಧನೆ ಅತಿ ಮುಖ್ಯವೆಂದು ಕಾಣುತ್ತದೆ.

ಎಲ್ಲ ಅಧ್ಯಯನದ ಹಿನ್ನೆಲೆಯಲ್ಲಿ ಹಾನಗಲ್ಲು ಪರಿಸರದಲ್ಲಿಯ ಸಾತವಾಹನರ ಪೂರ್ವದ ಮತ್ತು ಅನಂತರದ ನಾಗರಿಕತೆ ಮತ್ತು ಜನಜೀವನವನ್ನು ಪರಿಶೀಲಿಸಬೇಕಾಗುತ್ತದೆ. ಇಲ್ಲಿಯ ಕದಂಬ ರಾಜ್ಯ ದಕ್ಷಿಣೋತ್ತರದಲ್ಲಿ ಸಾಗರದಿಂದ ಶಿಗ್ಗಾಂವಿ ತಾಲೂಕಿನವರೆಗೆ, ಪೂರ್ವಪಶ್ಚಿಮದಿಂದ ಶಿರಸಿ, ಯಲ್ಲಾಪುರ ತಾಲೂಕುಗಳವರೆಗೆ ವಿಸ್ತರಿಸಿತ್ತು. ಕ್ರಿ.. ೧೧೬೮ ರಿಂದ ೧೨೦೩ರ ಅವಧಿಯಲ್ಲಿ ವಿಶಾಲವಾಗಿದ್ದ ಕದಂಬ ಸಾಮ್ರಾಜ್ಯಕ್ಕೆ ಬನವಾಸಿ ಹಾಗೂ ಹಾನಗಲ್ಲು ರಾಜಧಾನಿಗಳಾಗಿದ್ದವು. ಪ್ರದೇಶದಲ್ಲಿ ಸಾತವಾಹನ ಪೂರ್ವ ಕಾಲದ ಮಹತ್ವದ ವಿಷಯಗಳು ಬೆಳಕಿಗೆ ಬಂದಿಲ್ಲ. ಇಲ್ಲಿಂದ ಉತ್ತರಕ್ಕೆ ಸುಮಾರು ೧೦೦ ಕಿ.ಮಿ. ದೂರದ ಮಲಪ್ರಭಾ ಮತ್ತು ೪೦ ಕಿ.ಮಿ. ದೂರದ ತುಂಗಭದ್ರೆ ಪರಿಸರದಲ್ಲಿ ಆದಿ ಹಳೆಶಿಲಾಯುಗದಿಂದ ಹಿಡಿದು ಆದಿ ಇತಿಹಾಸ ಕಾಲದವರೆಗಿನ ಅವಶೇಷಗಳ ಹಲವಾರು ನೆಲೆಗಳು ಶೋಧವಾಗಿವೆ. ಅಲ್ಲದೆ ನೈರುತ್ಯಕ್ಕೆ ಕಡಲ ತೀರದ ನೇತ್ರಾವತಿ ಪ್ರದೇಶದಲ್ಲೂ ಆದಿ ಮತ್ತು ಸೂಕ್ಷ್ಮ, ಹೊಸ ಶಿಲಾಯುಗದ ಹಾಗೂ ಆದಿ ಕಬ್ಬಿಣ ಯುಗದ ಬೃಹತ್ ಶಿಲಾಯುಗದ ನೆಲೆಗಳು/ಅವಶೇಷಗಳು ಕಂಡುಬಂದಿವೆ. ಇಲ್ಲಿಯ ನೈಸರ್ಗಿಕ ಪರಿಸರ ಸುತ್ತಮುತ್ತಲಿನ ಪ್ರದೇಶದಲ್ಲಿರುವಂತೆಯೇ ಇದೆ. ಆದ್ದರಿಂದ ಇಲ್ಲಿ ಕೂಲಂಕುಷ ಕ್ಷೇತ್ರಕಾರ್ಯ ಮತ್ತು ಅಧ್ಯಯನ ನಡೆಯಬೇಕಾಗಿದೆ. ಪರಿಸರದಲ್ಲಿ ಸಂಶೋಧನೆ ಕೈಗೊಳ್ಳಲು ಕೆಲವು ತೊಡಕುಗಳುಂಟು. ಕಾರಣ ಇದು ಮಲೆನಾಡು ಪ್ರದೇಶ. ಕಾಡು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮರದ ರೆಂಬೆ, ಕೊಂಬೆ, ಸೊಪ್ಪುಗಳು ಬಿದ್ದು ಮಣ್ಣಾಗುತ್ತವೆ. ಮಣ್ಣಿನಲ್ಲಿ ಪ್ರಾಚೀನ ಅವಶೇಷ/ನೆಲೆಗಳು ಹುದುಗಿ ಹೋಗಿರುವ ಸಾಧ್ಯತೆ ಹೆಚ್ಚು. ಬಯಲು ಸೀಮೆಯಲ್ಲಿ ಹೀಗಾಗುವುದಿಲ್ಲ. ಪ್ರಾಚೀನ ಅವಶೇಷಗಳು ಮೇಲ್ಪದರಿನಲ್ಲಿಯೇ ಸ್ಪಷ್ಟವಾಗಿ ಗೋಚರಿಸುತ್ತವೆ.

ಹಿಂದೆ ಹೊಸನಗರದ ಹತ್ತಿರ ನಿಲಸಕಲ್ ಬ್ಯಾಣದಲ್ಲಿ ನಾನು ಕ್ಷೇತ್ರಕಾರ್ಯ ಮಾಡುತ್ತಿದ್ದೆ. ಬ್ಯಾಣದ ಮಧ್ಯದಲ್ಲಿ ತೀರ್ಥಹಳ್ಳಿಕುಂದಾಪುರ ರಸ್ತೆ ಹಾದು ಹೋಗುತ್ತದೆ. ಆಗ ರಸ್ತೆಯುದ್ದಕ್ಕೂ ಕಾಲುವೆಗಾಗಿ ಗುಂಡಿಯನ್ನು ಅಗೆಯಲಾಗಿತ್ತು. ಕಾಲುವೆಯ ೫೦ ಸೆ.ಮೀ. ಆಳದಲ್ಲಿ ನೂತನ ಶಿಲಾಯುಗ ಸಂಸ್ಕೃತಿಯ ಅಭ್ರಕ ಮಿಶ್ರಣದ ಬೂದು ವರ್ಣದ ಮಣ್ಣಿನ ಪಾತ್ರೆಗಳ ಚೂರುಗಳಿದ್ದವು. ಆದರೆ ಮೇಲ್ಪದರಿನಲ್ಲಿ ಮತ್ತು ನೆಲದ ಮೇಲೆ ಸಂಸ್ಕೃತಿಯ ಯಾವುದೇ ಅವಶೇಷಗಳು ಸ್ವಲ್ಪವೂ ಇರಲಿಲ್ಲ. ನೆಲದ ಮೇಲಿನ ಪರೀಕ್ಷೆಯನ್ನಷ್ಟೆ ಪರಿಗಣಿಸಿದರೆ, ಇಲ್ಲಿ ನೂತನ ಶಿಲಾಯುಗದ ಜನಜೀವನದ ಕುರುಹುಗಳು ಇಲ್ಲವೆಂದೇ ಹೇಳಬೇಕಾಗುತ್ತದೆ. ಆದ್ದರಿಂದ ಪ್ರದೇಶದ ಸಂಶೋಧನೆಗೆ ವಿಭಿನ್ನ ತಂತ್ರವನ್ನು ಬಳಸಬೇಕಾಗುತ್ತದೆ. ಬಯಲು ಸೀಮೆಯ ತಂತ್ರ ಇಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಇತ್ತೀಚೆಗೆ ಹೈ ರೆಸೆಲ್ಯೂಶನ್ ಗ್ರೌಂಡ್ ಸೆನ್ಸಿಂಗ್ ರಡಾರ್ ತಾಂತ್ರಿಕ ವಿಧಾನದಿಂದ ಒಂದು ಪ್ರಾಚೀನ ನಗರದ ನೆಲೆಯನ್ನು ಉತ್ಖನನ ಮಾಡದೆಯೆ ಭೂಮಿಯೊಳಗಿನ ಕೆರೆ, ಕಟ್ಟೆ, ಕಾಲುವೆ, ರಸ್ತೆ, ಬಾವಿ, ಮನೆ, ದೇವಾಲಯ, ಇತರೆ ಕಟ್ಟಡ ಮೊದಲಾದವುಗಳನ್ನು ಸರಿಯಾಗಿ ಗುರುತಿಸಿ ನಕಾಶೆಯನ್ನು ಸಿದ್ಧ ಮಾಡಬಹುದು. ಈಚೆಗೆ ಆಗ್ನೇಯ ರಾಷ್ಟ್ರಗಳಲ್ಲೊಂದಾದ ಕಂಬೋಡಿಯದಲ್ಲಿಯ ಅಂಗ್ಕೋರ್ ಥಾಮಿನ ಬ್ರಹತ್ ದೇವಾಲಯದ ಬಳಿ ತಂತ್ರದಿಂದ ಮುಚ್ಚಿಹೋಗಿದ್ದ, ಮಧ್ಯಯುಗೀನ ಕಾಲದಲ್ಲಿ ಸುಮಾರು ೫೦,೦೦೦ ಜನ ಸಂಖ್ಯೆಯಿದ್ದ ವಿಶಾಲವಾದ ಒಂದು ನಗರದ ನಕಾಶೆಯನ್ನು ಉತ್ಖನನ ಮಾಡದೆಯೇ ಅತ್ಯಂತ ಯಶಸ್ವಿಯಾಗಿ ಸಿದ್ಧಪಡಿಸಲಾಗಿದೆ. ಇಂಥ ನಕಾಶೆಯ ಆಧಾರದ ಮೇಲೆ ನಿರೀಕ್ಷಿತ ಫಲಿತಾಂಶಗಳನ್ನು ನೀಡುವ ನೆಲೆಯ ಭಾಗಗಳನ್ನು ಗುರುತಿಸಿಕೊಂಡು ವ್ಯವಸ್ಥಿತವಾಗಿ ಉತ್ಖನನ ಮಾಡಿ ಹೊರತೆಗೆದ ಸ್ಮಾರಕಗಳನ್ನು ಉಳಿಸಿಕೊಂಡು ಸಂರಕ್ಷಿಸಿಕೊಳ್ಳಬಹುದು. ಇಂಥ ವಿಧಾನಗಳಿಂದ ಕೋಟೆಯೂ ಸೇರಿದಂತೆ ಪ್ರಾಚೀನ ಹಾನಗಲ್ ನೆಲೆಯ ನಕಾಶೆಯನ್ನು ಸಿದ್ಧ ಮಾಡಲು ಸಾಧ್ಯ. ವೈಜ್ಞಾನಿಕ ವಿಧಾನಕ್ಕೆ ಒಂದೇ ಸಲಕ್ಕೆ ಹೆಚ್ಚು ವೆಚ್ಚ ಆಗುವುದೇನೋ ನಿಜ. ಆದರೆ ಇಲ್ಲಿಯ ಸಾಂಸ್ಕೃತಿಕ ವಿವರಗಳನ್ನು ಗಮನಿಸಿದಾಗ, ಹಲವಾರು ವರ್ಷಗಳ ಹಿಂದೆ ಗಣನೀಯ ಪ್ರಮಾಣದಲ್ಲಿ ಕಬ್ಬಿಣದ ಉಪಕರಣಗಳನ್ನು ಸಿದ್ಧಮಾಡಿ ಬಳಸಲಾರಂಭಿಸಲಾಯಿತು. ತತ್ಪರಿಣಾಮವಾಗಿ ಶಿಲಾಯುಗ ಕೊನೆಗೊಂಡು ಕಬ್ಬಿಣ ಯುಗ ಆರಂಭವಾಯಿತು. ಇದನ್ನು ಆದಿ ಕಬ್ಬಿಣ ಯುಗವೆಂದು ಕರೆಯಲಾಗಿದೆ. ಕಬ್ಬಿಣ ತಯಾರಿಸುವ ಪ್ರಕ್ರಿಯೆಯಲ್ಲಿ ಪರಿಸರ ಬಹಳ ಮಹತ್ವದ್ದೆಂಬುದನ್ನು ನಮ್ಮ ಪೂರ್ವಜರು ಬಹಳ ಹಿಂದೆಯೇ ಅರಿತಿದ್ದರು. ಇಲ್ಲಿಗೆ ಹತ್ತಿರದಲ್ಲಿ ಹಿರೇಕೆರೂರು ತಾಲೂಕಿನ ಹಳ್ಳೂರು, ತಡಕನಹಳ್ಳಿ, ಸ್ವಲ್ಪ ದೂರದಲ್ಲಿ ಮಲೆಬೆನ್ನೂರು ತಾಲೂಕಿನ ಕೊಮಾರನಹಳ್ಳಿ ಗ್ರಾಮಗಳಿವೆ. ೧೯೬೫೭೭ ಅವಧಿಯಲ್ಲಿ ಮೂರು ಸ್ಥಳಗಳಲ್ಲಿ ಉತ್ಖನನ ಮಾಡಲಾಯಿತು. ಇದರಿಂದ ಅಪರೂಪದ ಸಂಗತಿಗಳು ಬೆಳಕಿಗೆ ಬಂದವು. ಹಿಂದೆ ಆದಿ ಕಬ್ಬಿಣ ಯುಗದ ಜನಸಮುದಾಯವು ಮಹಾರಾಷ್ಟ್ರದ ವಿದರ್ಭವೂ ಸೇರಿದಂತೆ ದಕ್ಷಿಣ ಭಾರತದ ಹಲವಾರು ಎಡೆಗಳಲ್ಲಿ ಕಂಡುಬಂದಂತೆ ದೊಡ್ಡ ದೊಡ್ಡ ಕಲ್ಮನೆಗಳನ್ನು ಕಲ್ಲು ವೃತ್ತಗಳನ್ನು ನಿರ್ಮಿಸಿ, ಅದರಲ್ಲಿ ಅಸ್ಥಿ ಅವಶೇಷಗಳನಿಟ್ಟು ಶವಸಂಸ್ಕಾರ ಮಾಡಿದ ಕುರುಹುಗಳು ಭೈರವನಪಾದ, ಹಳ್ಳೂರು, ತಡಕನಹಳ್ಳಿ, ನಾಗವಂದ ಮೊದಲಾದೆಡೆಗಳಲ್ಲಿ ಬೆಳಕಿಗೆ ಬಂದಿವೆ. ತಜ್ಞರಿಂದ ಇದನ್ನು ಬೃಹತ್ ಶಿಲಾ ಸಂಸ್ಕೃತಿ ಎಂದು ಕರೆಯಲಾಗಿದೆ. ಬೃಹತ್ ಶಿಲಾ ಸಂಸ್ಕೃತಿಯ ಜನರ ಮುಖ್ಯ ಉದ್ಯೋಗ ಗಣಿಗಾರಿಕೆಯಿಂದ ಕಬ್ಬಿಣ ಅದಿರು ಸಂಗ್ರಹಿಸಿ, ಸಂಸ್ಕರಿಸಿ, ಲೋಹವನ್ನಾಗಿ ಪರಿವರ್ತಿಸುವ ತಂತ್ರಗಾರಿಕೆಯನ್ನು ಇವರು ಬಲ್ಲವರಾಗಿದ್ದರು.

ಲೋಹ ತಯಾರಿಸುವ ತಂತ್ರಗಾರಿಕೆ ಅತಿ ಪ್ರಾಚೀನ ಕಾಲದಲ್ಲಿ ದೇಶದಲ್ಲಿ ಬಳಕೆಯಲ್ಲಿದ್ದ ಬಗ್ಗೆ ೧೯೭೦ರ ವರೆಗೆ ತಿಳಿದಿರಲಿಲ್ಲ. ಇದು ಪರದೇಶದಿಂದ ಬಂದದ್ದು, ಅದರಲ್ಲೂ ಕ್ರಿ.ಪೂ. ೧೨೦೦ರಲ್ಲಿ ಹಿಟೈಟ್ ಈಗಿನ ಟರ್ಕಿ ಸಾಮ್ರಾಜ್ಯ ಪತನಾನಂತರ, ಇದು ಇರಾನ್, ಅಫಘಾನಿಸ್ತಾನದ ಮೂಲಕ ಉತ್ತರ, ಕ್ರಮೇಣ ದಕ್ಷಿಣ ಭಾರತದಲ್ಲಿ ಸುಮಾರು ಕ್ರಿ.ಪೂ. ೧೦೦೦೬೦೦ರ ಅವಧಿಯಲ್ಲಿ ಪ್ರಸರಿಸಿತೆಂಬ ದೃಢವಾದ ಅಭಿಪ್ರಾಯ ತಜ್ಞರಲ್ಲಿತ್ತು. ಹಾನಗಲ್ ನೆರೆಹೊರೆ ಪ್ರದೇಶದ ಕೊಮಾರನಹಳ್ಳಿ ಮೊದಲಾದ ನೆಲೆಗಳಲ್ಲಿ ನಡೆದ ಉತ್ಖನನ ಮತ್ತು ವಿಶ್ಲೇಷಣೆಯಿಂದ ಕಬ್ಬಿಣದ ಉಪಕರಣಗಳನ್ನು ಸ್ಥಳೀಯವಾಗಿ ಸಿಗುವ ಅದಿರಿನಿಂದಲೇ ತಯಾರಿಸಲಾಗಿದೆಯೆಂದು ತಿಳಿದುಬಂತು. ಇಲ್ಲಿ ಕಬ್ಬಿಣ ತಯಾರಿಕೆಗೆಲ್ಯಾಮಿನೇಶನ್ ಟೆಕ್ನಿಕ್ಬಳಸಲಾಗಿದೆ. ಅಂದರೆ ಮೊದಲು ತೆಳ್ಳನೆ ತಗಡುಗಳನ್ನು ತಯಾರಿಸಿ, ಅವುಗಳನ್ನು ಒಂದಕ್ಕೊಂದು ಸೇರಿಸಿ, ಅತಿ ಉಷ್ಣತೆಯಲ್ಲಿ ಬಡಿದು ಗಟ್ಟಿಗೊಳಿಸುವುದು.

ಕಬ್ಬಿಣ ಉಪಕರಣಗಳೊಂದಿಗೆ ದೊರೆತ ಮಣ್ಣಿನ ಪಾತ್ರೆಗಳನ್ನು ಪರೀಕ್ಷೆಗೊಳಪಡಿಸಿದಾಗ, ಇವು ಕ್ರಿ.ಪೂ. ೧೫೦೦ ರಿಂದ ಕ್ರಿ.. ೧೦೦೦ ಮಧ್ಯಾವಧಿಯಲ್ಲಿ ತಯಾರಿಸಲಾಗಿದೆಯೆಂದು ಗೊತ್ತಾಗಿದ್ದರಿಂದ ಸುಮಾರು ಸಾವಿರ ವರ್ಷಗಳ ಹಿಂದೆಯೇ ತಂತ್ರಗಾರಿಕೆ ದೇಶದಲ್ಲಿ ಹಾಗೂ ಪ್ರದೇಶದಲ್ಲಿ ಬಳಕೆಯಲ್ಲಿದ್ದುದು ಸ್ಪಷ್ಟವಾಗಿ ಕಂಡುಬಂತು. ಇಲ್ಲಿಯದು ಉತ್ತಮ ಕಬ್ಬಿಣವಾಗಿದ್ದು, ಶೇ. ೯೦ರಷ್ಟು ಉಕ್ಕು ಎಂದು ಕಂಡುಬಂದಿದೆ. ಪ್ರದೇಶದ ಇನ್ನೊಂದು ಗ್ರಾಮ ಕಮ್ಮಾರಗಟ್ಟೆ. ಹೆಸರೇ ಸೂಚಿಸುವಂತೆ ಸ್ಥಳದಲ್ಲಿ ಉತ್ತಮ ಕಬ್ಬಿಣ ತಯಾರಿಸಿದ್ದುದರ ಮತ್ತು ಬೃಹತ್ ಶಿಲಾಯುಗ ಸಂಸ್ಕೃತಿಯ ಸಾಕ್ಷಿಗಳಿವೆ. ಹೆಸರೂ ಕೂಡ ಅಷ್ಟು ಪ್ರಾಚೀನವಿರಬಹುದೇ ಎಂಬ ಕುತೂಹಲಕಾರಿ ಪ್ರಶ್ನೆ ಏಳುತ್ತದೆ.

ಉಕ್ಕು ಎನ್ನುವ ಶಬ್ದ ಜರ್ಮನ್ ಭಾಷೆಯಲ್ಲಿ ವುಡ್ಜ್ ಎಂದಾಗಿದೆಯೆಂದು ಅಭಿಪ್ರಾಯವಿದೆ. ನಮ್ಮ ದೇಶದ ಉತ್ತಮ ಕಬ್ಬಿಣ ಪರದೇಶಗಳಿಗೆ ಕ್ರಿ.ಪೂ. ೧ನೆಯ ಶತಮಾನದಿಂದ ರೋಮ್ ದೇಶದ ವರ್ತಕರು ಕೊಂಡೊಯ್ಯುತ್ತಿದ್ದರು. ಇದಕ್ಕೆ ಆದಿ ಇತಿಹಾಸ ಕಾಲದ ಕೆಲವು ದಾಖಲೆಗಳಿವೆ. ಅವಧಿಯಲ್ಲಿ ರೋಮನ್ನರು ಬಾರತದೊಂದಿಗೆ ನಿಕಟ ವ್ಯಾಪಾರಿ ಸಂಬಂಧವನ್ನು ಹೊಂದಿದ್ದರು. ದೇಶದ ಮಣ್ಣಿನ ಪಾತ್ರೆಗಳು ಇಲ್ಲಿಯ ಚಂದ್ರವಳ್ಳಿ (ಚಿತ್ರದುರ್ಗದ ಹೊರವಲಯದ) ಹಾಗೂ ಅರಿಕಮೇಡು (ಚೆನ್ನೈ ಹತ್ತಿರ, ತಮಿಳುನಾಡು) ಮೊದಲಾದ ಪ್ರಾಚೀನ ನೆಲೆಗಳ ಉತ್ಖನನಗಳಲ್ಲಿ ದೊರೆತಿವೆ. ಅಕ್ಕಿಆಲೂರಿ(ಹಾನಗಲ್ಲು ತಾಲೂಕು)ನಲ್ಲಿ ೧೯೭೭ರಲ್ಲಿ ಕಂಡುಬಂದಿರುವ ೪೫ ಬೆಳ್ಳಿ ನಾಣ್ಯಗಳು ರೋಮ್ ಮತ್ತು ಬೈಜಾಂಟಿಯ ಚಕ್ರಾಧಿಪತ್ಯಗಳಿಗೆ ಸೇರಿದವು. ಕ್ರಿ.ಪೂ ೨೯ ರಿಂದ ಕ್ರಿ.. ೫೨೭ರ ಕಾಲಾವಧಿಯಲ್ಲಿ ಆಳ್ವಿಕೆ ಮಾಡಿದ ಅಗಸ್ಟಸ್ (ಕ್ರಿ.ಪೂ. ೨೯ ಕ್ರಿ.. ೧೪), ಅಂಟೊನಿಯಸ್ ಪಯಸ್ (ಕ್ರಿ.. ೧೩೮೧೬೧), ಎರಡನೆಯ ಥಿಯೊಡೊಸಿಯಸ್ (ಕ್ರಿ.. ೪೦೮೪೫೦), ಮರ್ಸಿಯನ್ (ಕ್ರಿ.. ೪೫೦೪೫೭), ಒಂದನೆಯ ಲಿಯೊ (ಕ್ರಿ.. ೪೫೭೪೭೪), ಜೆನೊ (ಕ್ರಿ.. ೪೭೪೪೯೧), ಅನಸ್ತಸಿಯಸ್ (ಕ್ರಿ.. ೪೯೧೫೧೮) ಮತ್ತು ಜಸ್ಟಿನಸ್ (ಕ್ರಿ.. ೫೧೮೫೨೭) ಎಂಬ ಚಕ್ರವರ್ತಿಗಳಿಗೆ ಸಂಬಂಧಿಸಿದ ನಾಣ್ಯಗಳು. ಇವು ಪ್ರದೇಶಕ್ಕೆ ಬರಲು ಕಾರಣ, ರೋಮ್ ಸಾಮ್ರಾಜ್ಯದ ವ್ಯಾಪಾರ ಸಂಪರ್ಕ ದೊಡ್ಡ ಪ್ರಮಾಣದಲ್ಲಿ ಕರ್ನಾಟಕದೊಂದಿಗೆ ವಿಶೇಷವಾಗಿತ್ತು. ಅಂದಿನ ಸಮೃದ್ಧಿ ಯುಗದಲ್ಲಿ ಬೃಹತ್ ಪ್ರಮಾಣದ ಅನೇಕ ವಾಸ್ತುಶಿಲ್ಪಗಳು ನಿರ್ಮಾಣವಾದವು. ಸಾಂಚಿ, ಬಾರಹುತ್ ಮೊದಲಾದ ಸ್ತೂಪಗಳಲ್ಲಿ ಅಂದಿನ ಶ್ರೀಮಂತ ವರ್ತಕರ ಐಷಾರಾಮ ಜನಜೀವನದ ಚಿತ್ರಣವನ್ನು ಶಿಲ್ಪಗಳಲ್ಲಿ ತೋರಿಸಲಾಗಿದೆ. ರೋಮ್ ಚಕ್ರವರ್ತಿ ಅಗಸ್ಟಸ್ ನು ಇದೇ ರೀತಿ ಇಂಡಿಯಾಕ್ಕೆ ಚಿನ್ನಬೆಳ್ಳಿಯನ್ನು ವ್ಯಾಪಾರದ ಮೂಲಕ ಮಾರಾಟ ಮಾಡಿದರೆ, ಒಂದಾನೊಂದು ಕಾಲಕ್ಕೆ ಅವರ ರಾಜ್ಯವನ್ನು ಹರಾಜು ಹಾಕಬೇಕಾಗಿ ಬರಬಹುದೆಂದು ಸೆನೆಟ್ ಸಭೆಯಲ್ಲಿ ಹೇಳಿದ್ದನಂತೆ. ರೋಮ್ ಸಾಮ್ರಾಜ್ಯಕ್ಕೆ ಮಲೆನಾಡು ಪ್ರದೇಶದಿಂದ ಮಾರಾಟವಾಗುತ್ತಿದ್ದ ವಸ್ತುಗಳಲ್ಲಿ ಸಾಂಬಾರ ಪದಾರ್ಥಗಳು ಮತ್ತು ಕಬ್ಬಿಣ ಪ್ರಮುಖವಾಗಿದ್ದವು. ಹೀಗೆ ರಪ್ತಾದ ವಸ್ತುಗಳು ಅಲೆಗ್ಜಾಂಡ್ರಿಯಾದ ಸೆನರಿಕೋಟೆ ಎಂಬ ರೇವುಪಟ್ಟಣದಲ್ಲಿ ದಾಖಲಾಗುತ್ತಿದ್ದವು.

ಭಾರತದ ಕಬ್ಬಿಣ ರೋಮ್ ಚಕ್ರಾಧಿಪತ್ಯದಲ್ಲಿ ವಿಶೇಷ ಮನ್ನಣೆ ಪಡೆದಿತ್ತು. ಮಿಲಿಟರಿ ಆಡಳಿತ ಮತ್ತು ಸೈನ್ಯಕ್ಕೆ ಬೇಕಾದ ಉಪಕರಣಗಳ ತಯಾರಿಕೆಗೆ ಭಾರತದ ಉತ್ತಮ ಕಬ್ಬಿಣವನ್ನು ಬಳಸುತ್ತಿದ್ದರು. ಇಲ್ಲಿ ತಯಾರಿಸುತ್ತಿದ್ದ ಉತ್ತಮ ಕಬ್ಬಿಣಕ್ಕೆ ಮೆಹರೌಲಿಯ ಕಬ್ಬಿಣ ಸ್ತಂಭ ಇಂದಿಗೂ ಒಂದು ಉತ್ತಮ ಉದಾಹರಣೆ. ಗುಪ್ತ ವಂಶದ ಎರಡನೆಯ ಚಂದ್ರಗುಪ್ತನ ಕಾಲ (ಕ್ರಿ.. ೩೬೯೪೧೫) ಏಳು ಟನ್ ತೂಕದ ಸ್ತಂಭವನ್ನು ಬಿಲ್ಲೆಗಳನ್ನು ಮಾಡಿ ಒಂದಕ್ಕೊಂದು ಸೇರಿಸಿ ತಯಾರಿಸಲಾಗಿದೆಯಂದೂ, ಎರಕ ಹೊಯ್ದು ಮಾಡಲಾಗಿದೆಯೆಂದೂ ವಿಭಿನ್ನ ಅಭಿಪ್ರಾಯಗಳಿವೆ. ಇದು ಏನೇ ಇರಲಿ, ಇಂದಿಗೂ ಇದು ತುಕ್ಕು ಹಿಡಿದಿಲ್ಲ. ಇದು ಹೇಗೆ ಸಾಧ್ಯ ಎಂಬುದನ್ನು ಇತ್ತೀಚೆಗೆ ಕಾನ್ಪುರದ ಬಾಲಸುಬ್ರಮಣಿಯಮ್ ತಮ್ಮ ಸಂಶೋಧನೆಯ ಮೂಲಕ ಸ್ವಲ್ಪ ಮಟ್ಟಿಗೆ ಬಗೆಹರಿಸಿದ್ದಾರೆ. ಇವರ ಪ್ರಕಾರ ಇದರ ಮೇಲೆ ಸುಮಾರು .೦೦೧ರಷ್ಟು ದಪ್ಪದ ಅತಿ ಸೂಕ್ಷ್ಮ ಲೇಪನವಿದೆ. ಇದರಿಂದ ಸ್ತಂಭಕ್ಕೆ ತುಕ್ಕು ಹಿಡಿಯುವ ಸಾಧ್ಯತೆ ಇಲ್ಲ. ಇದೊಂದು ಅಪೂರ್ವ ತಂತ್ರಗಾರಿಕೆ. ಕೆಲವರು ಸ್ತಂಭವಿರುವ ಪರಿಸರ ಇದಕ್ಕೆ ತುಕ್ಕು ಹಿಡಿಯದಿರುವುದಕ್ಕೆ ಕಾರಣವೆಂದು ಅಭಿಪ್ರಾಯವೂ ಇದೆ. ಆದರೆ ಇದನ್ನು ಪರಿಸರದಲ್ಲಿಯ ಇತರ ಕಬ್ಬಿಣದ/ಉಕ್ಕಿನ ಸರಕುಗಳನ್ನು ನಿರ್ದಿಷ್ಟ ಸಮಯದವರೆಗೆ ಸರಿಯಾಗಿ ಪರಿಶೀಲಿಸಿ ನೋಡಲಾಗಿದೆಯೇ ಎಂಬುದು ಸ್ಪಷ್ಟವಿಲ್ಲ. ಸ್ತಂಭ ಮೊದಲು ಇಲ್ಲಿ ಇರಲಿಲ್ಲ. ಸ್ತಂಭದ ಮೇಲಿನ ಶಾಸನದಲ್ಲಿ ಹೇಳಿದಂತೆ ಇದು ವಿಷ್ಣುಪಾದ ಎಂಬ ಒಂದು ಗುಡ್ಡದ ಮೇಲೆ ವಿಷ್ಣು ದೇವಾಲಯದ ಮುಂದೆ ಇದ್ದ ಗರುಡಗಂಭ/ಧ್ವಜ. ಕಂಬದ ತುದಿಯಲ್ಲಿದ್ದ ಗರುಡನ ಮೂರ್ತಿ ಅಳಿದು ಹೋಗಿದೆ. ವಿಷ್ಣುಪಾದ ಸ್ಥಳವನ್ನು ಇನ್ನೂ ಗುರುತಿಸಿಲ್ಲ. ಅಲ್ಲಿಂದ ಮಧ್ಯಯುಗೀನ ಕಾಲದಲ್ಲಿ ರಾಜನಿಂದ ಮೆಹರೌಲಿಗೆ ತರಿಸಲ್ಪಟ್ಟಿತು. ಮೂಲ ಸ್ಥಳದಲ್ಲಿಯೂ ಮೆಹರೌಲಿಯ ಪರಿಸರವಿದ್ದಿತ್ತೆ ಎಂಬುದನ್ನೂ ಪರಿಶೀಲಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಇದನ್ನು ತರುವ ಹೊತ್ತಿಗಾಗಲೆ ತುಕ್ಕು ಹಿಡಿದಿರಬೇಕಾಗಿತ್ತು. ಇತ್ತೀಚೆಗೆ ಕಂಬಕ್ಕೆ ತುಕ್ಕು ಹಿಡಿಯದ ವೈಜ್ಞಾನಿಕ ಅಂಶವನ್ನು, ಇದನ್ನು ಅಧ್ಯಯನ ಮಾಡುತ್ತಲೇ ಇರುವ ಬಾಲಸುಬ್ರಮಣಿಯಮ್ ಮತ್ತು ಅವರ ಹಿಂದಿನ ವಿದ್ಯಾರ್ಥಿ ಗದಾಧರ ಯು. ಕಂಡುಹಿಡಿದಿದ್ದಾರೆ. ಇವರ ಸಂಶೋಧನೆಯ ಪ್ರಕಾರ ಉದ್ದೇಶ ಪೂರ್ವಕವಾಗಿ ಕಂಬದ ಹೊರಮೈಯಲ್ಲಿ ಲೆಕ್ಕಾಚಾರವಾಗಿ ರಂಜಕದ ಸೇರ್ಪಡೆಯಿದ್ದು, ಇದು ತುಕ್ಕು ಹಿಡಿಯದಂತೆ ಮಾಡಿದೆ. ಸಾಮಾನ್ಯವಾಗಿ ಬಲಿಷ್ಠ ಉಕ್ಕಿನ ತಯಾರಿಕೆಯಲ್ಲಿ ರಂಜಕದ ಅಂಶವನ್ನು ತೆಗೆದು ಇಂಗಾಲ ಮತ್ತು ಮ್ಯಾಂಗನೀಸ್ ಇವನ್ನು ಸೇರಿಸಲಾಗುತ್ತದೆ. ರಂಜಕ ಇದ್ದಲ್ಲಿ ಉಕ್ಕು ಗಟ್ಟಿಯಾಗಿರುವುದಿಲ್ಲ. ಸಂಶೋಧನೆ ಪೂರ್ಣ ಯಶಸ್ವಿಯಾಗಿ ಮಾರುಕಟ್ಟೆಗೆ ಬರುವುದಾದಲ್ಲಿ ಇದು ಇಂದಿನ ಪ್ರಪಂಚಕ್ಕೆ ತುಂಬ ಉಪಯುಕ್ತವೆಂದು ಅಮೆರಿಕದ ಪ್ರಾಧ್ಯಾಪಕ ಮತ್ತು ಇತರ ತಜ್ಞರು ಪ್ರಶಂಸಿಸಿದ್ದಾರೆ. ೧೯ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ (ಲಂಡನ್ ಹತ್ತಿರ) ಒಂದು ನದಿಗೆ ಸೇತುವೆ ಕಟ್ಟಬೇಕಾಗಿತ್ತು. ಇದಕ್ಕೆ ಬೇಕಾಗುವ ಬಲವಾದ ಬೃಹತ್ ಅಡ್ಡ ತೊಲೆಗಳ ತಯಾರಿಕೆಗೆ ಬೇಕಾದ ಕಬ್ಬಿಣಕ್ಕಾಗಿ ಇಡೀ ಯೂರೋಪ್ ಮತ್ತು ಭಾರತದಲ್ಲಿ ಪರಿಶೀಲನೆ ಮಾಡಲಾಯಿತು. ಆಗ ತುಲನಾತ್ಮಕವಾಗಿ ಭಾರತದ ಕಬ್ಬಿಣ ಅತ್ಯಂತ ಉತ್ತಮವಾದದ್ದೆಂದು ತಿಳಿದುಬಂದು ಬ್ರಿಟಿಷರು ನಮ್ಮ ದೇಶದಿಂದ ಕಬ್ಬಿಣವನ್ನು ಆಮದು ಮಾಡಿಕೊಂಡರು. ೧೮೨೪ರಲ್ಲಿ ವೈದ್ಯಕೀಯ ಉಪಕರಣಗಳನ್ನು ಮಾರುವ ಲಂಡನ್ನಿನ ಒಬ್ಬ ವರ್ತಕ ಒಂದು ಪ್ರಚಾರ ಕಾರ್ಡ್ ಮಾಡಿಸಿದ್ದನು. ಅದರಲ್ಲಿ “The instruments are made on Indian steel which is found to be most superior to any known sreel from Europe” ಎಂದಿತ್ತು. ಅಂದರೆ ಕನಿಷ್ಠ ಎರಡೂವರೆ ಸಾವಿರ ವರ್ಷಗಳಿಂದ ಪ್ರಾಚೀನ ಜಗತ್ತಿನಲ್ಲಿಯೇ ಶ್ರೇಷ್ಠ ತಂತ್ರಗಾರಿಕೆಯನ್ನು ಇಲ್ಲಿಯ ಸಾಮಾನ್ಯ ಕಮ್ಮಾರರು ಇತ್ತೀಚಿನವರೆಗೂ ಬೆಳೆಸಿಕೊಂಡು ಬಂದರು. ಇವೆಲ್ಲವನ್ನು ಗಮನಿಸಿದಾಗ, ಪರಿಸರದಲ್ಲಿದ್ದ ಪ್ರಾಚೀನ ಕಮ್ಮಾರರ ಕಾಣಿಕೆ ಬಹುದೊಡ್ಡದು. ಕುರಿತು ಇನ್ನು ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನವಾಗಬೇಕಾಗಿದೆ. ಇದಕ್ಕೆ ಪ್ರದೇಶದಲ್ಲಿ ಅವಕಾಶವಿದೆ. ಡಾ. ರಘುನಾಥ ಭಟ್ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಒಂದೆಡೆಯಲ್ಲಿ ಜಂಬಿಟ್ಟಿಗೆ ಸಮತಟ್ಟಿನ ಭೂಮಿಯಲ್ಲಿ ಸ್ಥಳೀಯವಾಗಿ ಕೊಟ್ಟಾ ಎಂದು ಕರೆಯಲಾದ ಸುಮಾರು ಮಿ. ಆಳದ ಕೆಲವು ಗುಂಡಿಗಳನ್ನು ಕಂಡುಹಿಡಿದಿದ್ದಾರೆ. ಪ್ರಾಯಶಃ ಇವು ವಿಶೇಷವಾಗಿ ಕೇರಳ, ದಕ್ಷಿಣ ಕನ್ನಡದಲ್ಲಿ ಬಹಳಷ್ಟು ಪ್ರಾಚೀನ ನೆಲೆಗಳಲ್ಲಿ ಕಂಡುಬಂದಂತೆ ಆದಿ ಕಬ್ಬಿಣ ಯುಗದ ಬೃಹತ್ ಶಿಲಾ ಸಂಸ್ಕೃತಿಯ ಶವ ಗುಂಡಿಗಳಿರಬಹುದು. ಬನವಾಸಿ ಹತ್ತಿರವಿರುವ ಕಂತ್ರಾಜ್ ಎಂಬ ಸ್ಥಳದಲ್ಲಿ ಸಂಸ್ಕೃತಿಯ ಜನರ ಮಣ್ಣಿನ ಪಾತ್ರೆಗಳ ಅವಶೇಷಗಳು ಸಿಕ್ಕಿವೆ. ಇವೆಲ್ಲವನ್ನು ಗಮನಿಸಿದಾಗ, ಪರಿಸರದ ಸಾಂಸ್ಕೃತಿಕ ಸಂಶೋಧನೆ ಆಗಬೇಕಾಗಿರುವುದು ತುಂಬಾ ಅವಶ್ಯ.

ಮಲೆನಾಡಿನ ಒಂದು ಮೂಲೆಯಲ್ಲಿರುವ ಪ್ರದೇಶದಲ್ಲಿ ವ್ಯಾಪಾರ ಸಮೃದ್ಧಿ ಹೇಗಾಯಿತು. ಬನವಾಸಿ ಕದಂಬರು ಸಾಮ್ರಾಜ್ಯವನ್ನು ಸ್ಥಾಪಿಸಲು ಸ್ಥಳವನ್ನು ಏಕೆ ಆಯ್ಕೆ ಮಾಡಿದರೆಂಬ ಪ್ರಶ್ನೆಗಳೇಳುವುದು ಸಹಜ. ಪಶ್ಚಿಮ ತೀರ ಸಮುದ್ರದಲ್ಲಿ ಹಲವಾರು ಪ್ರಾಚೀನ ಬಂದರುಗಳಿದ್ದವು. ಬಂದರುಗಳ ಮೂಲಕ ಒಳನಾಡಿನ ಪ್ರಮುಖ ವ್ಯಾಪಾರ ಕೇಂದ್ರಗಳೊಡನೆ ರೋಮ್ ಸಾಮ್ರಾಜ್ಯದ ವ್ಯಾಪಾರ ನಡೆಯುತ್ತಿತ್ತು. ಕರಾವಳಿಯ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಎಂಬ ಗ್ರಾಮದಲ್ಲಿರುವ ಶಿವ ದೇವಾಲಯದ ಹತ್ತಿರ ಮಧ್ಯಮ ವರ್ಗದ ಹಡಗುಗಳು ಚಲಿಸಲಾಗುವ, ಸಮುದ್ರಕ್ಕೆ ಹರಿಯುತ್ತಿದ್ದ ಒಂದು ನದಿಯಿತ್ತು. ನೆಲೆಯ ನನ್ನ ಅನ್ವೇಷಣೆಯಲ್ಲಿ ಪ್ರಾಚಿನ ಕಾಲದಲ್ಲಿ ಇಲ್ಲೊಂದು ನಗರವಿದ್ದುದು ತಿಳಿಯಿತು. ಇದನ್ನು ಎರಡು ಭಾಗ ಮಾಡಲಾಗಿದೆ. ಒಂದು ಸಾಮಾನ್ಯರು ವಾಸಮಾಡುವಂಥ ಭಾಗ, ಇನ್ನೊಂದು ಆಡಳಿತಾಧಿಕಾರಿಗಳು ಇರುವ ಭಾಗ. ಹರಪ್ಪ ಸಂಸ್ಕೃತಿಯ ನಗರ ವಿನ್ಯಾಸದಲ್ಲೂ ಇಂಥ ಎರಡು ಭಾಗಗಳನ್ನು ನೋಡುತ್ತೇವೆ. ಎರಡನೆಯ ಭಾಗದಲ್ಲಿ ೨ನೆಯ  ಶತಮಾನದ ಇಟ್ಟಿಗೆ ಕಟ್ಟಡಗಳು, ಬಹುಶಃ ರಕ್ಷಣಾ ಪ್ರಾಕಾರದ ಅವಶೇಷಗಳಿವೆ. ಇಲ್ಲಿಂದ ಉತ್ತರಕ್ಕೆ ಹೊನ್ನಾವರ ತಾಲೂಕಿನ ಶರಾವತಿ ನದಿಯ ನಡುಗಡ್ಡೆಯೊಂದರ ಮೇಲೆ ಹೈಗುಂದವೆಂಬ ಗ್ರಾಮವಿದೆ. ಇಲ್ಲಿ ದೊಡ್ಡ ದೊಡ್ಡ ಇಟ್ಟಿಗೆ ಸೌಧಗಳಿದ್ದ ಕುರುಹುಗಳಿವೆ. ಇಡೀ ದಕ್ಷಿಣ ಭಾರತದಲ್ಲಿಯೇ ಅಪರೂಪದ ಮೀ. ಎತ್ತರದ ಒಂದು ಶಿಲಾ ಯಕ್ಷನ ಹಾಗೂ ೫ನೆಯ ಶತಮಾನದ ಎರಡು ನಿಂತ ಭಂಗಿಯಲ್ಲಿರುವ ಬುದ್ಧನ ಮೂರ್ತಿಗಳಿವೆ. ಎಲ್ಲಿ ವ್ಯಾಪಾರ ಅಭಿವೃದ್ಧಿಯಲ್ಲಿರುತ್ತಿತ್ತೋ ಅಲ್ಲಿ ರಕ್ಷಣೆಗೋಸ್ಕರ ಇಂಥ ಯಕ್ಷನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆಂಬುದು ಸಾಮಾನ್ಯ ತಿಳುವಳಿಕೆ. ಒಳನಾಡು ಪ್ರದೇಶಗಳಿಂದ ಹಟ್ಟಿಯಂಗಡಿ, ಹೊನ್ನಾವರ, ಕಾರವಾರ ಮೊದಲಾದ ಸ್ಥಳಗಳಿಗೆ ಬನವಾಸಿ ಮತ್ತು ಹಾನಗಲ್ಲಿನ ಮಾರ್ಗವಾಗಿ ಸರಕುಗಳು ವಿನಿಮಯವಾಗುತ್ತಿತ್ತು. ಬನವಾಸಿ, ಹಾನಗಲ್ಲು ಪ್ರಮುಖ ವ್ಯಾಪಾರ ಹಿರಿಯ ಹೆದ್ದಾರಿ ಮಾರ್ಗದಲ್ಲಿದ್ದವು. ಹೆದ್ದಾರಿ ಬೆಳಗಾವಿ ಹೊರವಲಯದ ವಡಗಾಂವ್ಮಾಧವಪುರ, ಕೊಲ್ಲಾಪುರ, ಅಲ್ಲಿಂದ ಠಾಣೆ, ಉಜ್ಜಯಿನಿಯ ಮೂಲಕ ಮುಂದೆ ಸಾಗಿತ್ತು. ಎಲ್ಲ ನಗರಗಳು ವ್ಯಾಪಾರಿ ಕೇಂದ್ರ ಮಾರ್ಗಗಳ ಪ್ರಮುಖ ಸ್ಥಳಗಳಾಗಿದ್ದವು.

ಹಾನಗಲ್ಲಿನಲ್ಲಿ ಸಾತವಾಹನರ ಕಾಲದ ಅವಶೇಷಗಳಿವೆ. ಇಲ್ಲಿಯ ಕೋಟೆಯ ತಳ ಹಾಗೂ ಒಳ ಭಾಗಗಳಲ್ಲಿ ಶಾತವಾಹನ ಮತ್ತು ಕದಂಬರ ಕಾಲದ ಇಟ್ಟಿಗೆಯ ಕಟ್ಟಡಗಳಿವೆ. ಕೋಟೆಯನ್ನು ಮೊದಲು ಇಟ್ಟಿಗೆ, ನಂತರ ಜಂಬಿಟ್ಟಿಗೆಯಿಂದ ಕಟ್ಟಿ, ನಂತರ ಮಣ್ಣಿನಿಂದ ದೊಡ್ಡದಾಗಿ ವಿಸ್ತಾರ ಮಾಡಲಾಗಿದೆ. ಮೂಲ ಕೋಟೆ ಒಂದೆ ಇತ್ತು. ಒಂದೊಂದು ಕಾಲಘಟ್ಟದಲ್ಲಿ ಇದು ವಿಸ್ತಾರವಾಗಿದೆ. ಮೊದಲ ಕೋಟೆಯಲ್ಲಿ ಉತ್ಖನನ ಮಾಡಿದರೆ, ಸಾತವಾಹನಕದಂಬ ಕಾಲದ ನಗರದ ಅವಶೇಷಗಳು ಸಿಗುವ ಸಾಧ್ಯತೆ ಇದೆ. ಹಾನಗಲ್ಲಿನಲ್ಲಿಯೇ ಆದಿ ಕದಂಬ ಇಮ್ಮಡಿ ಕೃಷ್ಣವರ್ಮನ ಒಂದು ತಾಮ್ರ ಶಾಸನವೂ ಲಭ್ಯವಾಗಿದೆ. ಇದರಲ್ಲಿ ಹಾನಗಲ್ಲನ್ನು ಪಾಂಕ್ತಿಪುರವೆಂದು ಹೆಸರಿಸಿದೆ. ಪಾಂಕ್ತಿಪುರ ಪಾನುಂಗಲ್ ಹಾನಗಲ್ ಎಂದು ಹೆಸರಿನ ಕಾಲಾನುಕ್ರಮದ ಮಾರ್ಪಾಡುಗಳನ್ನು ಗುರುತಿಸಬಹುದು. ನಗರ ಆದಿ ಕದಂಬರ ಉಪ ರಾಜಧಾನಿಯಾಗಿತ್ತು. ಆದ್ದರಿಂದ ಇಲ್ಲಿಯ ಎರಡು ಸಾವಿರ ವರ್ಷಗಳ ಹಿಂದಿನ ನಗರ ಸ್ವರೂಪವನ್ನು ತಿಳಿದುಕೊಳ್ಳಲು ಉತ್ಖನನ ಮಾಡುವುದು ಅವಶ್ಯವೆಂದು ಕಾಣುತ್ತದೆ. ಅಕ್ಕಿಆಲೂರಿನಲ್ಲಿ ಶತಮಾನಗಳ ವ್ಯಾಪಾರದ ಪ್ರಗತಿಯನ್ನು ತಿಳಿಸುವಂಥ ಅನೇಕ ತಲೆಮಾರಿನ ಚಕ್ರವರ್ತಿಗಳ ನಾಣ್ಯಗಳು ಒಂದೇ ಕಡೆಗೆ ಹೇಗೆ ಸಂಗ್ರಹವಾಯಿತೆಂಬ ಪ್ರಶ್ನೆ ಉದ್ಭವವಾಗುತ್ತದೆ. ಯಾವುದೋ ಒಂದು ವ್ಯಾಪಾರಸ್ಥ ಮನೆತನ ನಾಣ್ಯಗಳನ್ನು ಸಂಗ್ರಹಮಾಡುತ್ತ ಬಂದಿದೆ. ಹೀಗಾಗಿ ಶತಮಾನಗಳ ನಾಣ್ಯಗಳು ಒಂದೇ ಮಡಿಕೆಯಲ್ಲಿ ಸಿಗಲು ಕಾರಣವಾಗಿದೆ. ವ್ಯಾಪಾರ ಸಂಮೃದ್ಧಿಯಾಗಿರುವವರೆಗೆ ಕದಂಬರ ರಾಜ್ಯ ಅಸ್ತಿತ್ವದಲ್ಲಿತ್ತು. ಯಾವಾಗ ವ್ಯಾಪಾರ ಕುಸಿಯಿತೊ ಆಗ ಕದಂಬ ರಾಜ್ಯವು ಅವನತಿಯಾಗಲು ಒಂದು ಮುಖ್ಯ ಕಾರಣ.

ಸಾತವಾಹನರ ಕಾಲದಲ್ಲಿ ನಿರ್ಮಾಣವಾದ ದೇವಾಲಯ, ಸ್ನಾನ ಘಟ್ಟಗಳು ಪರಿಸರದ ಬನವಾಸಿ, ತಾಳಗುಂದ ಮೊದಲಾದೆಡೆಗಳಲ್ಲಿವೆ. ೧೯೭೦೭೯ರಲ್ಲಿ ನಡೆದ ಬನವಾಸಿ ಉತ್ಖನನದಲ್ಲಿ ಗಜಪೃಷ್ಠಾಕಾರದ ಇಟ್ಟಿಗೆಯ ಕಟ್ಟಡಗಳು ಬೆಳಕಿಗೆ ಬಂದಿವೆ. ಕಟ್ಟಡದ ಹಿಂದಿನ ಭಾಗ ಅರ್ಧ ವೃತ್ತಾಕಾರವಾಗಿದ್ದು, ಆನೆಯ ಪೃಷ್ಠದಂತೆ ಕಾಣುತ್ತದೆ. ವಾಸ್ತುಶಾಸ್ತ್ರದಲ್ಲಿ ಇದನ್ನು ಗಜಪೃಷ್ಠಾಕಾರ ಎಂದು ಕರೆಯಲಾಗಿದೆ. ಇದನ್ನು ಸ್ಥಳೀಯ ಶಬ್ದದಲ್ಲಿಯೇ ಕರೆಯಬಹುದಾಗಿತ್ತು. ಆದರೆ ೧ರಿಂದ ೫ನೆಯ ಶತಮಾನದವರೆಗೆ ಸಂಸ್ಕೃತ ಭಾಷೆ ವಿದ್ಯಾವಂತರ ವರ್ಗಗಳಲ್ಲಿ ಹೆಚ್ಚು ಬಳಕೆಯಲ್ಲಿತ್ತು. ಆನಂತರ ಸ್ಥಳಿಯ ಭಾಷೆಗಳ ಬಳಕೆ ಸಾಮಾನ್ಯವಾಗುತ್ತಾ ಬಂತು.

ಇದುವರೆಗೆ ನಾನು ಹಾನಗಲ್ಲು ಪ್ರದೇಶದ, ಬಾದಾಮಿ ಚಾಲುಕ್ಯ ಪೂರ್ವದ, ಆದಿ ಕದಂಬ ಪೂರ್ವದ ವಿಷಯಗಳ ಬಗ್ಗೆ ವಿಶೇಷವಾಗಿ ಪುನರಾವಲೋಕನ ಮಾಡಿದ್ದೇನೆ. ಪ್ರಾಚೀನ ಮಹತ್ವದ ಸಾಂಸ್ಕೃತಿಕ ಹಂತಗಳ ಬಗ್ಗೆ ತೀರ ಕಡಿಮೆ ಸಂಶೋಧನೆ ಮತ್ತು ಅಧ್ಯಯನವಾಗಿದೆ. ಚೆನ್ನಕ್ಕ ಪಾವಟೆಯವರು ಈಚಿನ ವರ್ಷಗಳಲ್ಲಿ ಹಾನಗಲ್ಲು ಪ್ರದೇಶದ ಬಗ್ಗೆಯೇ ಒಂದು ಉತ್ತಮ ಕೃತಿಯನ್ನು ಪ್ರಕಟಿಸಿದ್ದಾರೆ. ಕೇಂದ್ರ ಸರ್ಕಾರದ ಪುರಾತತ್ವ ಸರ್ವೇಕ್ಷಣ ಇಲಾಖೆ ಹಾನಗಲ್ಲು ತಾಲೂಕಿನ ಎಲ್ಲ ಹಳ್ಳಿಗಳಲ್ಲಿಯ ಪುರಾತತ್ವ ಅನ್ವೇಷಣೆ ಕೈಗೊಂಡಿತ್ತು. ಅನ್ವೇಷಣೆಯಲ್ಲಿ ಹೆಚ್ಚಾಗಿ ಇತಿಹಾಸ ಕಾಲದ ಸ್ಮಾರಕಗಳು, ಶಾಸನಗಳು ಇತ್ಯಾದಿ ಬೆಳಕಿಗೆ ಬಂದಿವೆ. ಆದ್ದರಿಂದ ನನ್ನ ಪುನರಾವಲೋಕನದಲ್ಲಿ ಆದಿ ಕದಂಬ ಪೂರ್ವದ ಸಾಂಸ್ಕೃತಿಕ ಘಟ್ಟಗಳ ಬಗ್ಗೆ ಸಂಶೋಧನೆ ಮತ್ತು ಅಧ್ಯಯನದ ಅವಶ್ಯಕತೆ, ಮಹತ್ವ ಮತ್ತು ಉಪಯುಕ್ತತೆಯನ್ನು ವಿಶಾಲ ಭೌಗೋಳಿಕ ವ್ಯಾಪ್ತಿಯಲ್ಲಿ ಉದಾಹರಣೆಗಳೊಂದಿಗೆ ವಿವರಿಸಿದ್ದೇನೆ. ಇದು ಯುವ ಸಂಶೋಧಕರಿಗೆ ಮುಂದಿನ ಅನ್ವೇಶಣೆ ಮತ್ತು ಅಧ್ಯಯನಗಳಿಗೆ ಸ್ಫೂರ್ತಿದಾಯಕ ಮಾರ್ಗಸೂಚಿಯಾಗಬಹುದೆಂದು ನನ್ನ ಆಶಯ.