ಕರ್ನಾಟಕ ವಿಭಿನ್ನ ರೀತಿಯ ಭೌಗೋಳಿಕ ಅಂಶಗಳನ್ನೊಳಗೊಂಡ ಪ್ರದೇಶ. ಇದರಲ್ಲಿ ನಿಸರ್ಗದ ವಿಶೇಷ ಭೌತಿಕ ಲಕ್ಷಣಗಳನ್ನು ಪಡೆದು, ಹಾವೇರಿ ಜಿಲ್ಲೆಯಿಂದ ಪಶ್ಚಿಮಕ್ಕೆ ಸುಮಾರು ೩೫ ಕಿ.ಮೀ. ದೂರದಲ್ಲಿರುವ ತಾಲೂಕು ಆಡಳಿತ ಕೇಂದ್ರಸ್ಥಳವೇ ಹಾನಗಲ್ಲು. ಹಾವೇರಿ ಜಿಲ್ಲೆ ಮತ್ತು ಹಾನಗಲ್ಲಿನ ಸುತ್ತಮುತ್ತಲಿನ ಪ್ರದೇಶವು ಪ್ರಾಗಿತಿಹಾಸ ಕಾಲದಿಂದಲೇ ಜನವಸತಿ ಬೆಳೆದು, ನಂತರ ವಿವಿಧ ರಾಜಮನೆತನಗಳ ಆಳ್ವಿಕೆಯಿಂದ ಇದೊಂದು ಸಾಂಸ್ಕೃತಿಕ ಕೇಂದ್ರವಾಗಿ ನೆಲೆಗೊಳ್ಳಲು ಇಲ್ಲಿನ ಭೌಗೋಲಿಕ ಪರಿಸರವೇ ಪೂರಕ ಅಂಶವಾಗಿ ಕಾಣುತ್ತದೆ.

ಒಟ್ಟು ವಿಸ್ತೀರ್ಣ

ಹಾನಗಲ್ಲು ೧೪೩ ಗ್ರಾಮಗಳನ್ನೊಳಗೊಂಡು, ೭೭೫೨೦ ಹೆಕ್ಟೇರ್ ಅಥವಾ ೪೭೮೬.೮೩ .ಕಿ.ಮೀ. ವಿಸ್ತೀರ್ಣ ಹೊಂದಿದೆ. ಹಾವೇರಿ ಜಿಲ್ಲೆಯಲ್ಲಿ ಬ್ಯಾಡಗಿ, ಹಾನಗಲ್ಲು, ಹಾವೇರಿ, ಹಿರೇಕೆರೂರು, ರಾಣಿಬೆನ್ನೂರು, ಸವಣೂರು, ಮತ್ತು ಶಿಗ್ಗಾಂವ ತಾಲೂಕುಗಳು ಸೇರಿವೆ. ಹಾನಗಲ್ಲು ನಗರ ಅಕ್ಷಾಂಶ ೧೪ ಡಿಗ್ರಿ೪೫ ಡಿಗ್ರಿ ಮತ್ತು ರೇಖಾಂಶ ೭೫ ಡಿಗ್ರಿ೦೫ ಡಿಗ್ರಿ ಮಧ್ಯದಲ್ಲಿದೆ.

ಮೇಲ್ಮೈ ಲಕ್ಷಣ

ಹಾವೇರಿ ಜಿಲ್ಲೆಯ ಮೇಲ್ಮೈ ಲಕ್ಷಣದಲ್ಲಿ ಪೂರ್ವ ಭಾಗ ಸ್ವಲ್ಪ ಸಮತಟ್ಟಾಗಿ ಕಪ್ಪು ಮತ್ತು ಕೆಂಪು ಮಣ್ಣಿನಿಂದ ಕೂಡಿದೆ. ಪಶ್ಚಿಮ ಭಾಗದ ಹಾನಗಲ್ಲು ತಾಲೂಕು ಉಬ್ಬು, ತಗ್ಗುಗಳಿಂದ, ಚಿಕ್ಕಪುಟ್ಟ ಗುಡ್ಡಗಳಿಂದ ಆವೃತವಾಗಿದೆ. ಹಾನಗಲ್ಲು, ಹಿರೇಕೆರೂರು, ಶಿಗ್ಗಾಂವ ತಾಲೂಕುಗಳು ಹೆಚ್ಚಾಗಿ ಕೆಂಪು ಮತ್ತು ಕೆಂಪು ಮರಳು ಮಿಶ್ರಿತ ಮಣ್ಣಿನ ಪ್ರದೇಶಗಳಾಗಿವೆ. ಸವಣೂರಿನ ಪಶ್ಚಿಮ ಭಾಗ ಮತ್ತು ರಾಣಿಬೆನ್ನೂರು ತಾಲೂಕುಗಳು ಕಪ್ಪು ಜೇಡಿಯ ಮಣ್ಣು ಮತ್ತು ಮರಳು ಮಿಶ್ರಿತ ಕೆಂಪು ಮಣ್ಣಿನಿಂದ ಆವೃತವಾಗಿವೆ. ಹಾನಗಲ್ಲು ತಾಲೂಕು ಒಟ್ಟಾರೆ ಶೇ.೮೦ರಷ್ಟು ಕೆಂಪು ಮತ್ತು ಶೇ.೨೦ರಷ್ಟು ಮಧ್ಯಮ ಕಪ್ಪು ಮಣ್ಣಿನಿಂದ ಕೂಡಿದೆ.

ಬೆಟ್ಟಗುಡ್ಡ

ಹಾವೇರಿ ಜಿಲ್ಲೆಯನ್ನು ಅರೆಮಲೆನಾಡು ಪ್ರದೇಶವೆಂದು ಕರೆಯುವುದುಂಟು. ಪಶ್ಚಿಮ ಭಾಗದಲ್ಲಿ ಹರಡಿರುವ ಗುಡ್ಡಗಳು ಉತ್ಕರ್ಶಿತ ಅಗ್ನಿ ಶಿಲೆ, ಅಲ್ಲಲ್ಲಿ ಜಂಬಟ್ಟಿಗೆ ಕಲ್ಲುಗಳಿಂದ ಕೂಡಿವೆ. ದುಂಡಸಿ ಮತ್ತು ಹಾನಗಲ್ಲಿನ ಬಳಿ ಕಡಿದಾದ ಎರಡು ಸಣ್ಣ ಗುಡ್ಡಗಳಿದ್ದು, ಕ್ರಮವಾಗಿ ೭೩೨ ಮೀ. ಮತ್ತು ೮೩೨ ಮೀ. ಎತ್ತರವಾಗಿವೆ. ರಾಣಿಬೆನ್ನೂರ ಹತ್ತಿರದ ಐರಣಿಗುಡ್ಡ, ಬ್ಯಾಡಗಿ ಪೂರ್ವದ ದೇವರಗುಡ್ಡ, ಆಡೂರಿನ ಪೂರ್ವ ಮತ್ತು ಪಶ್ಚಿಮ ಭಾಗ, ಬಾಳಂಬೀಡದಿಂದ ಅಕ್ಕಿಆಲೂರುವರೆಗಿನ ಗುಡ್ಡ ಮತ್ತು ಬಂಕಾಪುರದ ಕಿರುಗುಡ್ಡಗಳು ಗಮನ ಸೆಳೆಯುತ್ತವೆ. ಹಾನಗಲ್ಲು ತಾಲೂಕಿನ ಪಶ್ಚಿಮ ಭಾಗ ಕುರುಚಲು ಗುಡ್ಡಗಳಿಂದ ಕೂಡಿದೆ.

ಅರಣ್ಯ ಸಂಪತ್ತು

ಹಾವೇರಿ ಜಿಲ್ಲೆಯಲ್ಲಿ ನಿಸರ್ಗದತ್ತವಾದ ಅರಣ್ಯ ಸಂಪತ್ತನ್ನು ಹಾನಗಲ್ಲು ಮತ್ತು ಹಿರೇಕೆರೂರು ತಾಲೂಕುಗಳಲ್ಲಿ ಕಾಣುತ್ತೇವೆ. ಎಲೆ ಉದುರುವ ವೃಕ್ಷಗಳು, ಮುಳ್ಳು, ಕುರುಚಲು ಗಿಡಗಳು ಅಲ್ಲಲ್ಲಿ ಹರಡಿವೆ. ದಟ್ಟವಾದ ಕಾಡುಗಳಲ್ಲಿ ತೇಗ, ಶ್ರೀಗಂಧ, ಅಳಲೆ, ಹಲಸು, ಆಲ, ಹತ್ತಿ, ಹೊಳೆನಂದಿ, ಬೀಟೆ, ದಿಂಡಿಲು, ಶಿವನಿ, ಹೊನ್ನೆ, ಮಾವು, ಬೇವು, ಹುಣಸೆ, ಮುತ್ತುಗ, ನೇರಲೆ, ಬಿದಿರು ಹಾಗೂ ಈಚಲು ಮರಗಳು ಅರಣ್ಯ ಪ್ರದೇಶದಲ್ಲಿವೆ.

ಕಾಡು ಪ್ರಾಣಿಗಳಾದ ಕಾಡುಕೋಣ, ಚಿರತೆ, ಕರಡಿ, ಜಿಂಕೆ, ಕಾಡುಹಂದಿ, ಕಾಡುಬೆಕ್ಕು ಮೊದಲಾದವು ಕಂಡುಬರುತ್ತವೆ. ಜಿಲ್ಲೆಯಲ್ಲಿ ಜಿಂಕೆಗಳ ಸಂತತಿ ಕ್ಷೀಣಿಸುತ್ತಿರುವುದನ್ನು ಕಂಡು ಇವುಗಳ ಸಂತತಿಯ ಅಭಿವೃದ್ಧಿಗಾಗಿ ಸರಕಾರವು ರಾಣಿಬೆನ್ನೂರು ಸಮೀಪ(ಐರಣಿಗುಡ್ಡ)ದಲ್ಲಿ ಸುಮಾರು ೧೨೦ .ಕಿ.ಮೀ. ಪ್ರದೇಶದಲ್ಲಿ ಜಿಂಕೆಧಾಮವನ್ನು ನಿರ್ಮಿಸಲಾಗಿದೆ.

ಈಗ ಹಾನಗಲ್ಲು ತಾಲೂಕಿನಲ್ಲಿ ಒಟ್ಟು ೮೪೭ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಮೂಲತಃ ಹಾನಗಲ್ಲು ನಗರದ ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ದಟ್ಟವಾದ ಅರಣ್ಯವಿತ್ತೆಂದು ಸ್ಥಳೀಕರ ಹೇಳಿಕೆ. ಪ್ರಾಚೀನ ಕಾಲದಲ್ಲಿ ದಟ್ಟವಾದ ಅರಣ್ಯವಾಗಿದ್ದ ಈಗಿನ ತಾರಕೇಶ್ವರ ದೇಗುಲ ಹಿಂಭಾಗದ ಚಿಕ್ಕನಕಾವಲವು ಇಂದು ನೆಡು ತೋಪು ಅರಣ್ಯ ಪ್ರದೇಶವಾಗಿ ಮಾರ್ಪಟ್ಟಿದೆ.

ಖನಿಜ ಸಂಪನ್ಮೂಲ

ಹಾವೇರಿ ಜಿಲ್ಲೆಯ ಆರ್ಥಿಕರಂಗದ ಮೇಲೆ ಮಹತ್ತರವಾದ ಪ್ರಭಾವ ಬೀರುವ ಮತ್ತು ಲಾಭ ತರಬಹುದಾದ ಮುಖ್ಯ ಖನಿಜಗಳು ಪರಿಸರದಲ್ಲಿ ಹೇರಳವಾಗಿಲ್ಲ. ಹೀಗಾಗಿ ಹಾನಗಲ್ಲು ಮತ್ತು ರಾಣಿಬೆನ್ನೂರು ತಾಲ್ಲೂಕುಗಳನ್ನು ಬಿಟ್ಟರೆ, ಉಳಿದ ಕಡೆಗೆ ಖನಿಜೋತ್ಪತ್ತಿ ಇಲ್ಲ. ಪ್ರದೇಶದಲ್ಲಿ ಪದರುಶಿಲೆ, ಬೆಣಚುಕಲ್ಲು, ಪ್ರಾಚೀನ ಅಗ್ನಿಶಿಲೆ, ಕಣಶಿಲೆ, ಡಾಲರೈಟ್ ದಿಂಡು, ಚೆರ್ಟ್, ಕ್ವಾರ್ಟ್ಸ್, ಹಾಲುಗಲ್ಲು, ಹರಳುಗಲ್ಲು, ಕ್ಯಾಲ್ಸಿಡೋನಿಯಂತಹ ಶಿಲೆಗಳು ಕಾಣಸಿಗುತ್ತವೆ. ಇಂತಹ ಶಿಲೆಗಳನ್ನು ಬಳಸಿಕೊಂಡು ಶಿಲಾಯುಗದ ಮಾನವ ಶಿಲಾ ಉಪಕರಣಗಳನ್ನು ತಯಾರಿಸಿಕೊಂಡಿರುವುದನ್ನು ಉದಾಹರಿಸಬಹುದು.

ಜಲಸಂಪನ್ಮೂಲ

ಜಿಲ್ಲೆಯ ನದಿ, ಕೆರೆ ಹಾಗೂ ಸಣ್ಣಪುಟ್ಟ ಹಳ್ಳಗಳೇ ಜಲಸಂಪನ್ಮೂಲಗಳಾಗಿವೆ. ತುಂಗಭದ್ರಾ, ವರದಾ, ಕುಮದ್ವತಿ, ಧರ್ಮಾ ನದಿಗಳ ಬಯಲು ಪ್ರದೇಶಗಳಲ್ಲಿ ವಾಸಮಾಡುವ ಜನರ ಬದುಕಿನ ಮೇಲೆ ಮಹತ್ತರ ಪ್ರಭಾವ ಬೀರಿವೆ. ಪ್ರಾಚೀನ ಕಾಲದಿಂದಲೇ ಪ್ರಮುಖ ನಾಗರೀಕತೆಗಳು ನದಿ ತೀರ ಪ್ರದೇಶಗಳಲ್ಲಿ ಬೆಳೆದುಬಂದಿರುವುದನ್ನು ಸ್ಮರಿಸಬಹುದು.

ತುಂಗಭದ್ರಾ ನದಿ

ಶಿವಮೊಗ್ಗ ಜಿಲ್ಲೆಯ ಕೂಡಲ ಎಂಬಲ್ಲಿ ತುಂಗ ಮತ್ತು ಭದ್ರಾ ಎಂಬ ಎರಡು ನದಿಗಳು ಸಂಗಮಗೊಂಡು, ಪ್ರಸ್ತುತ ಜಿಲ್ಲೆಯ ಹೊಳೆ ಅನ್ವೇರಿಯಲ್ಲಿ ಪ್ರವೇಶಿಸುತ್ತದೆ. ಚಿಕ್ಕ ಅರಳಿಹಳ್ಳ, ಚಂದಾಪುರ ಹಳ್ಳಗಳು ಹರಿಯುತ್ತ ತುಂಗಭದ್ರಾ ನದಿಯನ್ನು ಕೂಡುತ್ತವೆ.

ವರದಾ ನದಿ

ತುಂಗಭದ್ರೆಯ ಉಪನದಿಯಾಗಿರುವ ಇದು ಹಾನಗಲ್ಲು, ಸವಣೂರು ಮತ್ತು ಹಾವೇರಿ ತಾಲೂಕುಗಳಲ್ಲಿ ಹರಿದು, ಗಳಗನಾಥ ಎಂಬ ಹಳ್ಳಿಯಲ್ಲಿ ತುಂಗಭದ್ರಾ ನದಿಯನ್ನು ಸೇರುತ್ತದೆ. ಶಿವಮೊಗ್ಗ ಜಿಲ್ಲೆಯ ಇಕ್ಕೇರಿ ಬಳಿ ಹುಟ್ಟಿ, ಸೊರಬ ತಾಲೂಕಿನ ಮೂಲಕ ಹಾದು, ಹಾನಗಲ್ಲು ತಾಲೂಕಿನ ಹೊಂಕಣ ಗ್ರಾಮದ ಬಳಿ ಹಾವೇರಿ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಹಾವೇರಿ ಜಿಲ್ಲೆಯಲ್ಲಿ ಸುಮಾರು ೧೦೦ ಕಿ.ಮೀ. ದವರೆಗೆ ಹರಿದಿರುವ ಇದು ಹಾವೇರಿ ಹಾಗೂ ಸವಣೂರು  ತಾಲೂಕುಗಳ ಗಡಿಯಾಗಿ ವಿಂಗಡಿಸಿದೆ.

ಧರ್ಮಾ ನದಿ

ಹಾನಗಲ್ಲು ತಾಲೂಕಿಗೆ ವರದಾನವಾಗಿರುವ ಧರ್ಮಾನದಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಡೊಲ್ಲರಟ್ಟಿ ಎಂಬಲ್ಲಿ ಹಾನಗಲ್ಲು ತಾಲೂಕನ್ನು ಪ್ರವೇಶಿಸುತ್ತದೆ. ಹೀಗೆ ಹರಿಯುವಾಗ ಕೆರೆಕಟ್ಟೆ ನಾಲೆಗಳಿಗೆ ನೀರು ಪೂರೈಸುತ್ತಾ ಸಾಗಿ, ಕೂಡಲ ಎಂಬಲ್ಲಿ ವರದಾ ನದಿಯನ್ನು ಸೇರುತ್ತದೆ.

ಕೆರೆಕಟ್ಟೆ

ಪರಿಸರದಲ್ಲಿರುವ ೭೬೮ ಕೆರೆಗಳಲ್ಲಿ ೪೪೫ ಸಣ್ಣ ಕೆರೆಗಳು, ೧೧೨ ಮಧ್ಯಮ ಕೆರೆಗಳು ಮತ್ತು ೨೧೧ ದೊಡ್ಡ ಕೆರೆಗಳೆಂದು ವಿಂಗಡಿಸಬಹುದು. ಸ್ಥಳೀಯವಾಗಿ ಆನೆಕೆರೆ, ಅಚ್ಚಕೆರೆ, ನಾಗವಳ್ಳಿಕೆರೆ, ಕಂಬಳಿಕೆರೆ ಹೀಗೆ ಕೆರೆಗಳು ಹಾಗೂ ಕೆಂಪುಕಟ್ಟೆ, ಅಕ್ಕತಂಗಿಯರಕಟ್ಟೆ, ಮುಕ್ಕಾರ್ತಿ, ಕುಂಬಾರಗುಂಡಿ, ಮುಲ್ಲಾನಗುಂಡಿ, ಕಂಚಿಗೇರಿ ಹೊಂಡ ಎಂಬ ಕಟ್ಟೆಗಳಿವೆ.

ಮಳೆ ಮತ್ತು ಹವಾಮಾನ

ಹಾವೇರಿ ಜಿಲ್ಲೆಯ ಪಶ್ಚಿಮ ಭಾಗ ಕಿರುಗುಡ್ಡ ಮತ್ತು ಕಾಡುಗಳಿಂದ ಆವೃತವಾದ ಹಾನಗಲ್ಲು ಮತ್ತು ಹಿರೇಕೆರೂರು ತಾಲೂಕುಗಳಲ್ಲಿ ಬೀಳುವ ಮಳೆಯ ಪ್ರಮಾಣ ಉಳಿದ ತಾಲೂಕುಗಳಿಗಿಂತಲೂ ಅಧಿಕವಾಗಿ ಕಂಡುಬರುತ್ತದೆ. ಆದ್ದರಿಂದ ಇದನ್ನು ಅರೆಮಲೆನಾಡು ಪ್ರದೇಶವೆಂದು ಕರೆಯಲಾಗಿದೆ. ಕಳೆದ ೫೦ ವರ್ಷಗಳಿಂದ ಜಿಲ್ಲೆಯ ಅತೀ ಹೆಚ್ಚು ಮಳೆ ಬೀಳುವ ತಾಲೂಕುಗಳಲ್ಲಿ ಹಾನಗಲ್ಲು ಪ್ರಥಮ ಹಾಗೂ ಹಿರೇಕೆರೂರು ದ್ವಿತೀಯ ಸ್ಥಾನದಲ್ಲಿವೆ. ವಾರ್ಷಿಕ ಸರಾಸರಿ ೯೩೩. ಮಿ.ಮೀ. ಮಳೆಯಾಗುತ್ತದೆ.

ಪ್ರದೇಶದಲ್ಲಿ ಮೇ ತಿಂಗಳಿಂದ ಅಕ್ಟೋಬರ್ ವರೆಗೆ ಮಳೆ ಬೀಳುವ ಸಮಯವಾದರೆ, ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ವಾತಾವರಣ ಚಳಿಯಿಂದ ಕೂಡಿರುತ್ತದೆ. ಹಾವೇರಿ ಜಿಲ್ಲೆಯ ಉಳಿದ ತಾಲೂಕುಗಳಿಗಿಂತಲೂ ಹಾನಗಲ್ಲು ತಂಪಾದ ಹೆಚ್ಚು ಸೆಖೆ ಎನಿಸದ ಹಿತಕರವಾದ ಹವಾಗುಣ ಹೊಂದಿರುವ ಪ್ರದೇಶವಾಗಿದೆ.

ಕೃಷಿ

ಇಲ್ಲಿಯ ಮುಖ್ಯ ಉದ್ಯೋಗ ವ್ಯವಸಾಯ. ಜಿಲ್ಲೆಯ ಪಶ್ಚಿಮ ಭಾಗವು ಅರೆಮಲೆನಾಡಾಗಿರುವುದರಿಂದ, ಹೆಚ್ಚಾಗಿ ಮಳೆಯನ್ನಾಧರಿಸಿ ಮತ್ತು ಕೆರೆಕಟ್ಟೆ ನದಿಗಳಿಂದ ನೀರಾವರಿ ಸೌಲಭ್ಯ ಪಡೆದು, ಭತ್ತ, ರಾಗಿ, ಕಬ್ಬು, ಅಡಿಕೆ, ಹತ್ತಿ, ಬಾಳೆ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಜಿಲ್ಲೆಯ ಪೂರ್ವ, ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿ ಎಣ್ಣೆಕಾಳು, ಜೋಳ, ಮೆಕ್ಕೆಜೋಳಗಳನ್ನು ಬೆಳೆದರೆ, ರಾಣಿಬೆನ್ನೂರು ಮತ್ತು ಬ್ಯಾಡಗಿ ತಾಲೂಕುಗಳಲ್ಲಿ ವಿವಿಧ ತರಕಾರಿ ಹಾಗೂ ಧಾನ್ಯಗಳ ಬೀಜೋತ್ಪಾದನೆ ಮಾಡುವುದು ಮುಖ್ಯ ಉದ್ಯೋಗವಾಗಿದೆ.

ಹಳ್ಳೂರು (ಹಿರೇಕೆರೂರು ತಾಲೂಕು) ಉತ್ಖನನದಲ್ಲಿ ದೊರೆತ ಅವಶೇಷಗಳಲ್ಲಿ ಕಪ್ಪು ರಾಗಿಯ ಕಾಳುಗಳನ್ನು ಇಂಗಾಲ೧೪ರ ಕಾಲಮಾನಕ್ಕೆ ಒಳಪಡಿಸಿದಾಗ, ಅವು ಕ್ರಿ.ಪೂ. ೧೬ನೆಯ ಶತಮಾನಕ್ಕೆ ಸೇರಿದವೆಂದು ತಿಳಿದುಬಂದಿದೆ. ಆದ್ದರಿಂದ ಪ್ರದೇಶದಲ್ಲಿ ರಾಗಿ ಅತೀ ಪ್ರಾಚೀನ ಬೆಳೆಯಾಗಿದೆ. ಒಟ್ಟಾರೆ ಹಾನಗಲ್ಲು ಪ್ರದೇಶ ೩೮೦೫ ಹೆಕ್ಟೇರು ತೋಟಗಾರಿಕೆ ಬೆಳೆಯ ವಿಸ್ತಾರ ಪಡೆದುಕೊಂಡಿದೆ.

ಪ್ರಾಗಿತಿಹಾಸ ಅವಶೇಷಗಳು

ಕರ್ನಾಟಕದಲ್ಲಿ ಚಾರಿತ್ರಿಕವಾಗಿ ಮಹತ್ವ ಪಡೆದ ಸ್ಥಳಗಳಲ್ಲಿ ಹಾನಗಲ್ಲೂ ಒಂದು. ನೀರಿನ ಸರಬರಾಜು, ದಟ್ಟವಾದ ಕಾಡು, ಬೆಟ್ಟ ಮೊದಲಾದ ಭೌಗೋಳಿಕ ಲಕ್ಷಣಗಳನ್ನು ಹೊಂದಿದ್ದರಿಂದ, ಪರಿಸರದಲ್ಲಿ ಪ್ರಾಗಿತಿಹಾಸ ಕಾಲದಿಂದಲೂ ಮಾನವನ ಚಟುವಟಿಕೆಗಳು ನಡೆದುಬಂದಿವೆ. ಹೀಗಾಗಿ ಆಯಾ ಕಾಲದಲ್ಲಿನ ಘಟನಾವಳಿಗಳ ಕುರುಹುಗಳೇ ಇಂದು ಕಾಣುವ ಪ್ರಾಚ್ಯಾವಶೇಷಗಳು.

ಹಾನಗಲ್ಲು ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾನವನು ಬಳಸಿದ ಅವಶೇಷಗಳಿಂದ ಹಳೆ ಶಿಲಾಯುಗ, ಸೂಕ್ಷ್ಮ ಶಿಲಾಯುಗ, ನೂತನ ಶಿಲಾಯುಗ, ಶಿಲಾತಾಮ್ರಯುಗ, ಕಬ್ಬಿಣಬೃಹತ್ ಶಿಲಾಯುಗ ಮತ್ತು ಇತಿಹಾಸ ಕಾಲದ ನೆಲೆಗಳನ್ನು ಗುರುತಿಸಬಹುದು.

ಆದಿ ಹಳೆ ಶಿಲಾಯುಗ

ದಕ್ಷಿಣ ಭಾರತದಲ್ಲಿ ಹಳೆ ಶಿಲಾಯುಗದ ನಿವೇಶನಗಳು ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರಗಳ ವಿವಿಧ ಭಾಗಗಳಲ್ಲಿ ಕಂಡುಬಂದಿವೆ. ಕಾಲದ ನೆಲೆಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖನಾಗಿದ್ದ ರಾಬರ್ಟ ಬ್ರೂಸ್ ಫೂಟ್, ಹಾವೇರಿ ಜಿಲ್ಲೆಯ ರಾಣಿಬೆನ್ನೂರು, ಬ್ಯಾಡಗಿ, ಹಿರೇಕೆರೂರು ತಾಲೂಕುಗಳ ಹಳ್ಳಿಗಳಲ್ಲಿ ಸರ್ವೇಕ್ಷಣ ಮಾಡಿ ಅನೇಕ ಪ್ರಾಚೀನ ನೆಲೆಗಳನ್ನು ಗುರುತಿಸಿದ್ದಾನೆ.

ಸಾಮಾನ್ಯವಾಗಿ ಹಳೆ ಶಿಲಾಯುಗವನ್ನು ಬೆಳವಣಿಗೆಯ ಆಧಾರದ ಮೇಲೆ ಮೂರು ಹಂತಗಳಲ್ಲಿ ವಿಂಗಡಿಸಿ ಆದಿ, ಮಧ್ಯ, ಅಂತ್ಯ ಹಳೆ ಶಿಲಾಯುಗಗಳೆಂದು ಕರೆಯಲಾಗಿದೆ.

ಹಾನಗಲ್ಲು ಪ್ರದೇಶದಲ್ಲಿ ಆದಿ ಹಳೆ ಶಿಲಾಯುಗದ ನೆಲೆಗಳು ವರ್ದಿ (ಹಾನಗಲ್ಲು ತಾ.), ಬೆಣ್ಣಿಹಳ್ಳ (ಬ್ಯಾಡಗಿ ತಾ.), ಚೆನ್ನಾಪುರ (ಸವಣೂರು ತಾ.), ನದಿಹರಳಹಳ್ಳಿ, ನಲವಾಗಲ (ರಾಣಿಬೆನ್ನೂರು ತಾ.) ಮತ್ತು ಮಧ್ಯ ಶಿಲಾಯುಗದ ನೆಲೆಗಳನ್ನು ತೋಟಗಂಟೆ, ರಟ್ಟೆಹಳ್ಳಿ (ಹಿರೇಕೆರೂರು ತಾ.)ಗಳಲ್ಲಿ ಗುರುತಿಸಲಾಗಿದೆ.

ಕರ್ನಾಟಕದ ವಿವಿಧೆಡೆಗಳಲ್ಲಿ ಪತ್ತೆಯಾದ (ಹಲಸಗಿ ಗುಲಬರ್ಗಾ ಜಿ. ಕಿಬ್ಬನಹಳ್ಳಿ ತುಮಕೂರು ಜಿ. ನ್ಯಾಮತಿ ಶಿವಮೊಗ್ಗ ಜಿ.) ರೋಸ್ಟ್ರೋಕ್ಯಾರಿನೇಟ ಎಂಬ ಹಳೆಯದಾದ ಆಯುಧಗಳು, ಅಬ್ಬವಿಲಿಯನ್ ಮತ್ತು ಮುಂದುವರೆದ ಅಶೂಲಿಯನ್ ಮಾದರಿಯ ಆಯುಧಗಳು, ಕ್ಲಾಕಟನ್ ರೀತಿಯ ಚೆಕ್ಕೆಗಳಲ್ಲಿ ತಯಾರಿಸಿದ ಉಪಕರಣಗಳು ಹಾನಗಲ್ಲು ಪ್ರದೇಶದ ವರ್ದಿಯಲ್ಲಿವೆ.

ತೋಟಗಂಟೆ, ರಟ್ಟೆಹಳ್ಳಿಗಳಲ್ಲಿ ದೊರೆತ ಶಿಲಾಯುಧಗಳು ಚೆರ್ಟ ಮತ್ತು ಕ್ವಾರ್ಟ್ಸ ಶಿಲೆಯಲ್ಲಿ ರೂಪಿತವಾಗಿವೆ. ನದಿಹರಳಹಳ್ಳಿ, ನಲವಾಗಲು, ಚಲ್ಲಾಪುರ ಮತ್ತು ಚೆನ್ನಿನದಿ ನೆಲೆಗಳಲ್ಲಿ ದೊರೆತ ಉಪಕರಣಗಳು ಯಾವುದೇ ನಿರ್ದಿಷ್ಟ ಸ್ವರೂಪಗಳನ್ನು ಹೊಂದಿಲ್ಲ. ಆದರೆ ಚೆನ್ನಾಪುರದ ಉಪಕರಣಗಳು ಅಶೂಲಿಯನ್ ಮಾದರಿಯನ್ನು ಹೋಲುತ್ತವೆ. ಕಾಲದಲ್ಲಿ ಆಯುಧಗಳ ಲಕ್ಷಣಗಳಿಂದ ಮತ್ತು ಕಾಲಮಾನದಿಂದ ಪ್ರತ್ಯೇಕಿಸಿ ಅಧ್ಯಯನಿಸಬಹುದಾದ ಮಾನವನ ಜೀವನದ ಕ್ರಮವು ಕಠಿಣವಾಗಿತ್ತು. ಕಿರು ಗುಡ್ಡಬೆಟ್ಟಗಳಿಂದ ಮತ್ತು ಧರ್ಮಾ, ವರದಾ, ಕುಮದ್ವತಿ, ತುಂಗಭದ್ರಾ ನದಿಗಳಿಂದ ಆವೃತವಾದ ಪ್ರದೇಶದಲ್ಲಿ ಮಾನವ ತನ್ನ ಆಹಾರಕ್ಕಾಗಿ ಬೇಟೆಯಾಡುತ್ತ, ಸ್ಥಳದಿಂದ ಸ್ಥಳಕ್ಕೆ ಸಂಚಾರ ಮಾಡುವ ಜೀವನ ಕ್ರಮವಾಗಿತ್ತೆಂದು ಹೇಳಬಹುದು.

ಸೂಕ್ಷ್ಮ ಶಿಲಾಯುಗ

ಯುಗಕ್ಕೆ ಸೇರಿದ ನೆಲೆಗಳು ಜಿಲ್ಲೆಯಾದ್ಯಂತ ಕಂಡುಬಂದರೆ, ಮುಖ್ಯವಾಗಿ ನೆಲೆಗಳು (ಅರೇಕೊಪ್ಪ, ಗಿರಿಸನಕೊಪ್ಪ, ಹಾನಗಲ್ಲು) ಹಾನಗಲ್ಲು ತಾಲೂಕಿನಲ್ಲಿವೆ. ಆಯುಧಗಳ ನಿರ್ಮಾಣದಲ್ಲಿ ಸೂಕ್ಷ್ಮ ತಂತ್ರಗಾರಿಕೆ ಮತ್ತು ಸಂಕೀರ್ಣತೆಗೆ ಹೆಸರಾದ ಯುಗಕ್ಕೆ ಸೂಕ್ಷ್ಮ ಶಿಲಾಯುಗವೆಂದು ಕರೆಯಲಾಗಿದೆ. ಆಯುಧಗಳ ತಯಾರಿಕೆಗಾಗಿ ಕ್ವಾರ್ಟ್ಸ, ಕ್ಯಾಲಿಡೋನಿ, ಹರಳುಗಲ್ಲು, ಹಾಲುಗಲ್ಲುಗಳನ್ನು ಬಳಸಿಕೊಳ್ಳಲಾಗಿದೆ. ಹಾನಗಲ್ಲು ಕೋಟೆಯ ಒಳ ಭಾಗದ ಗದ್ದೆಗಳಲ್ಲಿ ಯುಗಕ್ಕೆ ಸೇರಿದ ಶಿಲಾ ಉಪಕರಣಗಳಾದ ನೀಳಚಕ್ಕೆ, ಮೊನೆ, ಕೊರೆಯುಳಿ, ಮೊನೆ ಮಾದರಿ ಡಬ್ಬಣ, ಅರ್ಧಚಂದ್ರಾಕೃತಿಯ ಉಪಕರಣಗಳು ಹರಡಿವೆ.

ನೂತನ ಶಿಲಾಯುಗ

ದಖನ್ ಪ್ರಸ್ಥಭೂಮಿ ನವಶಿಲಾಯುಗದ ನಿವೇಶನಗಳಿಗೆ ಹೆಸರಾಗಿದೆ. ಅದರಲ್ಲೂ ಕರ್ನಾಟಕದ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ಪ್ರದೇಶವು ನವಶಿಲಾಯುಗದ ತವರುಮನೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಒಟ್ಟು ನೂತನ ಶಿಲಾಯುಗದ ನೆಲೆಗಳಿವೆ. (ಮುದೇನೂರ, ಹಾದರಗೇರಿ, ರಾಣಿಬೆನ್ನೂರು ತಾ. ಪುರದಕೇರಿ, ಶಿರಗಂಟೆ, ಹಳ್ಳೂರು ಹೆರೇಕೆರೂರು ತಾ.) ಹಾನಗಲ್ಲು ನಗರಕ್ಕೆ ಹೊಂದಿಕೊಂಡಿರುವ ಕೋಟೆಯ ಅವಶೇಷದ ಒಳ ಪ್ರದೇಶದಲ್ಲಿ ನವ ಶಿಲಾಯುಗದ ಬೂದು ಬಣ್ಣದ ಮಡಿಕೆಯ ಅವಶೇಷಗಳು ದೊರೆತಿವೆ.

ನವಶಿಲಾಯುಗದ ಆಕರ್ಷಕವಾದ ಹಂತ ಕಂಡುಬರಲು ಇಲ್ಲಿ ದೊರೆಯುವ ಬೆಸಾಲ್ಟ್, ಡೊಲರೈಟ್, ಡೆಕ್ಕನ್ ಟ್ರ್ಯಾಪ್ ಶಿಲೆಗಳು ನಯವಾದ ಕಣಗಳಿಂದ ಕೂಡಿದ್ದರಿಂದ ಉಜ್ಜಿ ನಯಗೊಳಿಸಿ ಮೆರಗು ಕೊಟ್ಟು ಶಿಲಾಯುಧಗಳನ್ನು ತಯಾರಿಸಲು ಅನುಕೂಲವಾಗಿತ್ತು. ಯುಗದ ಉಪಕರಣಗಳಲ್ಲಿ ಕೊಡಲಿ, ಬಾಚಿ, ಉಳಿ, ಅರೆಯುವ ಕಲ್ಲು, ಕವಣೆ ಕಲ್ಲು ಹಾಗೂ ಮೂಳೆಗಳಲ್ಲೂ ಮಾಡಿದ ಕೊರೆಯುವ, ಸೀಳುವ ಮತ್ತು ಡಬ್ಬಣದಂತಹ ಆಯುಧಗಳನ್ನು ಉಪಯೋಗಿಸಲಾಗುತ್ತಿತ್ತು.

ಯುಗದಲ್ಲಿ ಕುಂಬಾರಿಕೆ, ಪಶುಸಂಗೋಪನೆ, ಬೇಟೆ, ಮೀನುಗಾರಿಕೆ, ಕೃಷಿ ಉದ್ಯೋಗಗಳು ಪ್ರಮುಖವಾಗಿದ್ದವು. ಅಲ್ಲದೆ ಮಾನವನು ಒಂದೇ ಸ್ಥಳದಲ್ಲಿ ನೆಲೆನಿಂತು ಸಾಂಘಿಕ ಜೀವನವನ್ನು ಆರಂಭಿಸಿದನು.

ಹಾನಗಲ್ಲು ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಕಾಲದ ನಿಚ್ಚಳ ಲಕ್ಷಣಗಳು ಕಾಣುತ್ತವೆ. ಮುದೇನೂರಿನಲ್ಲಿ ಉಜ್ಜಿ ನಯಗೊಳಿಸಿದ ಕೊಡಲಿ, ಕಂದು ಬಣ್ಣದ ಮಡಿಕೆ, ಹಾದರಗೇರಿ, ಗಳಗನಾಥ, ಪುರದಕೇರಿ, ಶಿರಗಂಟೆ, ಹಳ್ಳೂರುಗಳಲ್ಲಿ ಬ್ರಹ್ಮಗಿರಿ ಮಾದರಿಯ ಕಂದು ಬಣ್ಣ ಮತ್ತು ಕೆಂಪು ಬಣ್ಣದ ಚಿತ್ರಿತ ಮಡಿಕೆಗಳು ಕಂಡುಬಂದಿವೆ. ಯುಗದ ಕೃಷಿಯಲ್ಲಿ ರಾಗಿ ಪ್ರಮುಖ ಬೆಳೆಯಾಗಿತ್ತೆಂದು, ಹತ್ತಿರದ ಹಳ್ಳೂರು ಉತ್ಖನನದಲ್ಲಿ ದೊರೆತ ರಾಗಿ ಕಾಳುಗಳ ಅವಶೇಷದಿಂದ ಸ್ಪಷ್ಟವಾಗುತ್ತದೆ. ಅಲ್ಲದೆ ಇಂದಿಗೂ ರಾಗಿ, ಭಾಗದ ಪ್ರಮುಖ ಬೆಳೆಯಾಗಿರುವುದನ್ನು ಕಾಣಬಹುದು.

ಶಿಲಾತಾಮ್ರಯುಗ

ನೂತನ ಶಿಲಾಯುಗದ ಮುಂದಿನ ಹಂತ ಶಿಲಾತಾಮ್ರಯುಗ. ಯುಗಕ್ಕೆ ಸೇರಿದ ನೆಲೆಗಳಲ್ಲಿ ಪ್ರಮುಖವೆಂದು ಗುರುತಿಸಿಕೊಂಡಿರುವ ಬ್ರಹ್ಮಗಿರಿ ಮತ್ತು ಸಂಗನಕಲ್ಲುಗಳನ್ನು ಉದಾಹರಿಸಬಹುದು. ಹಾವೇರಿ ಜಿಲ್ಲೆಯಲ್ಲಿ ಒಟ್ಟು ೧೬ ನೆಲೆಗಳಿವೆ. ಅವುಗಳಲ್ಲಿ ಹಾನಗಲ್ಲು ಪರಿಸರದ ಹಾದರಗೇರಿ, ನದಿಹರಳಹಳ್ಳಿ, ಆಸುಂಡಿ, ಕೂನಬೇವು, ನಲವಾಗಲ (ರಾಣಿಬೆನ್ನೂರು ತಾ.), ತಳ್ಳಿಹಳ್ಳಿ ನಲ್ಲಾಪುರ (ಸವಣೂರು ತಾ.), ಕದರಮಂಡಲಗಿ (ಬ್ಯಾಡಗಿ ತಾ.)ಗಳಲ್ಲಿ ಯುಗದ ನೆಲೆಗಳನ್ನು ಹೆಸರಿಸಬಹುದು.

ಮಡಿಕೆಗಳ ತಯಾರಿಕೆಯ ತಾಂತ್ರಿಕತೆಯಲ್ಲಿ ಬಳಸಿದ ಬಣ್ಣಗಾರಿಕೆ ಹಾಗೂ ಆಯುಧಗಳನ್ನು ಉಜ್ಜಿ ನಯಗೊಳಿಸುವ ನಯಗಾರಿಕೆಗಳು ಕಾಲದ ವಿಶೇಷಗಳು. ಜೋರ್ವೆ ಮತ್ತು ಬ್ರಹ್ಮಗಿರಿಯ ಮಾದರಿಯ ದಪ್ಪ, ಒರಟಾದ ಕಂದು ಬಣ್ಣದ ಪಾತ್ರಾವಶೇಷಗಳು ಕವಲೆತ್ತು, ನದಿಹರಳಹಳ್ಳಿ, ನಲವಾಗಲಗಳಲ್ಲಿ ದೊರೆತಿವೆ. ಕಪ್ಪು ವರ್ಣದಲ್ಲಿ ಚಿತ್ರಿಸಿದ ಕೆಂಪು ಬಣ್ಣದ ಮಡಿಕೆ, ಇಬ್ಬದಿ ನೀಳ ಚಕ್ಕೆ ಹಾಗೂ ನಯಗೊಳಿಸಿರುವ ಕೈಗೊಡಲಿಗಳು ಕಾಲಕ್ಕೆ ಸೇರಿದವು.

ಕಬ್ಬಿಣಬೃಹತ್ ಶಿಲಾಯುಗ

ಕರ್ನಾಟಕದಲ್ಲಿ ಕಬ್ಬಿಣಬೃಹತ್ ಶಿಲಾಯುಗದ ಅವಶೇಷಗಳು ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಹೇರಳವಾಗಿ ಹರಡಿವೆ. ಹಾವೇರಿ ಜಿಲ್ಲೆಯಾದ್ಯಂತ ಯುಗದ ನೆಲೆಗಳು ಅಲ್ಲಲ್ಲಿ ಕಾಣುತ್ತವೆ. ಕಬ್ಬಿಣ ತಯಾರಿಸುವ ತಂತ್ರಗಾರಿಕೆ, ಅದರಿಂದ ಉಪಕರಣಗಳ ತಯಾರಿಕೆ, ದೊಡ್ಡ ದೊಡ್ಡ ಶಿಲಾಬಂಡೆಗಳನ್ನು ಬಳಸಿ ಶಿಲಾವೃತ್ತ, ಕಲ್ಮನೆ, ನಿಲಿಸುಗಲ್ಲುಗಳ ಸಮಾಧಿಗಳ ನಿರ್ಮಾಣ ಹಾಗೂ ಕಪ್ಪುಕೆಂಪು, ಚಿತ್ರಿತ ಮಡಿಕೆ, ಮೃತ್ ಪಾತ್ರೆ, ವರ್ಣಚಿತ್ರ ಮೊದಲಾದವು ಕಾಲದ ಪ್ರಮುಖ ಲಕ್ಷಣಗಳು.

ಜಿಲ್ಲೆಯಲ್ಲಿ ಬೃಹತ್ ಶಿಲಾಯುಗಕ್ಕೆ ಸೇರಿದ ೧೧ ನೆಲೆಗಳಿವೆ. ಹಾನಗಲ್ಲು ತಾಲೂಕಿನ ಕೆರನಾಡಿಯಲ್ಲಿ ಶಿಲಾಸಮಾಧಿ ಮತ್ತು ಅವಶೇಷಗಳು ಕಂಡುಬಂದಿವೆ. ಅಲ್ಲದೇ ಹತ್ತಿರದಲ್ಲಿರುವ ತಡಕನಹಳ್ಳಿ (ಹಿರೇಕೆರೂರು ತಾ.) ಹಾಗೂ ಸ್ವಲ್ಪ ದೂರದ ಕೋಮರನಹಳ್ಳಿ (ಮಲೆಣ್ಣೂರು ತಾ.)ಗಳ ಉತ್ಖನನದಲ್ಲಿ ದೊರೆತ ಅವಶೇಷಗಳಿಂದ ಬೃಹತ್ ಶಿಲಾಯುಗದ ಜನರು ಉತ್ತಮ ಕಬ್ಬಿಣ ತಯಾರಿಸುವ ತಂತ್ರಗಾರಿಕೆಯನ್ನು ಬಲ್ಲವರಾಗಿದ್ದರೆಂದು ತಿಳಿದುಬಂದಿದೆ. ಇವುಗಳೆಲ್ಲವುಗಳ ಆಧಾರದ ಮೇಲೆ ಬೃಹತ್ ಶಿಲಾಯುಗದ ಸಂಸ್ಕೃತಿಯು ವಿಸ್ತ್ರತವಾಗಿ ಹರಡಿತ್ತೆಂದು ಸ್ಪಷ್ಟವಾಗುತ್ತದೆ.

ಇತಿಹಾಸ ಕಾಲದ ಅವಶೇಷಗಳು

ಪ್ರಾಗಿತಿಹಾಸದ ನಂತರ ಇತಿಹಾಸ ಆರಂಭ ಕಾಲದ ನೆಲೆಗಳು ಪ್ರದೇಶದಲ್ಲಿ ವಿಸ್ತ್ರತವಾಗಿ ಹರಡಿವೆ. ಇದುವರೆಗೂ ಕಂಡುಬಂದಿರುವಂತೆ, ಹಾವೇರಿ ಜಿಲ್ಲೆಯ ೪೫ ನೆಲೆಗಳಲ್ಲಿ, ಹಾನಗಲ್ಲು, ಹಿರೇಕೆರೂರು, ರಾಣಿಬೆನ್ನೂರು೨೪, ಹಾವೇರಿ ಮತ್ತು ಸವಣೂರು ಹೀಗೆ ತಾಲೂಕುವಾರು ವಿಂಗಡಿಸಬಹುದು. ಇವುಗಳಲ್ಲಿ ಕೆಲವು ನೆಲೆಗಳು ಆದಿ, ಮಧ್ಯ, ಆಧುನಿಕ ಕಾಲದವರೆಗಿನ ಅವಶೇಷಗಳನ್ನು ಹೊಂದಿ, ಸಾಂಸ್ಕೃತಿಕ ಸುದೀರ್ಘತೆಯನ್ನು ಸಾರುತ್ತವೆ.

ಆದಿ ಇತಿಹಾಸ ಕಾಲದ ಅವಶೇಷಗಳಲ್ಲಿ ಕಪ್ಪುಕೆಂಪು ವರ್ಣದ ಮತ್ತು ಕೆಂಪು ಲೇಪನದಡಿ ಬಿಳಿವರ್ಣದ ಚಿತ್ರಿತ ಮಡಿಕೆ, ಕಂದುಕೆಂಪು ಬಣ್ಣದ ಮಡಿಕೆ, ಸುಟ್ಟ ಮಣ್ಣಿನ ಗೊಂಬೆ ಹಾಗೂ ಕೆಂಪು ಆಯಾಕಾರದ ಇಟ್ಟಿಗೆಗಳು ಸಾಮಾನ್ಯವಾಗಿ ಕಾಣುತ್ತವೆ.

ಹಾನಗಲ್ಲಿನಲ್ಲಿ ಕಂಡುಬಂದಿರುವ ಅವಶೇಷಗಳಲ್ಲಿ ಕೋಟೆ, ಅದರ ಒಳಭಾಗ ಜನವಸತಿ ನೆಲೆಗಳು, ಹಾಳುಮಣ್ಣಿನ ದಿಬ್ಬ, ಕಪ್ಪುಕೆಂಪು, ಬೂದುಬಣ್ಣ ವಿವಿಧ ಆಕಾರದ ಮಡಿಕೆ ಭಾಗಗಳು ಹಾಗೂ ಬಸಪ್ಪ ಎಣ್ಣೆಯವರ ಹೊಲದಲ್ಲಿರುವ ಇಟ್ಟಿಗೆ ಬಾವಿ ಮೊದಲಾದವುಗಳಿಂದ ಹಾನಗಲ್ಲು ಆದಿ, ಮಧ್ಯ ಮತ್ತು ಆಧುನಿಕ ಕಾಲದವರೆಗೂ ಸುದೀರ್ಘ ಸಾಂಸ್ಕೃತಿಕ ಕೇಂದ್ರವಾಗಿರುವುದನ್ನು ನಿರೂಪಸುತ್ತವೆ.

ರೈತರು ಬೇಸಾಯ ಮಾಡುವಾಗ, ಪ್ರಾಚೀನ ಕಾಲದ ಮಡಿಕೆ ಭಾಗಗಳು, ಎಲುಬು ಮತ್ತು ನಾಣ್ಯಗಳು ಇಂದಿಗೂ ಸಿಗುತ್ತವೆ. ಕ್ಷೇತ್ರಕಾರ್ಯದಲ್ಲಿ ನನಗೆ ದೊರೆತ ೧೨ ನಾಣ್ಯಗಳನ್ನು ತಾಮ್ರದಿಂದ ತಯಾರಿಸಿದ್ದು, ಅವುಗಳ ಮೇಲೆ ದೇವನಾಗರಿ, ಅರಬ್ಬಿ ಮತ್ತು ಪರ್ಶಿಯನ್ ಬರಹಗಳಿವೆ. ನಾಣ್ಯಗಳು , , ೧೦, ೧೨ ಮತ್ತು ೧೬ ಗ್ರಾಂ ತೂಕಗಳಿಂದ ಕೂಡಿವೆ.ಅವುಗಳಲ್ಲಿ ೧೬ ಗ್ರಾಂ ತೂಕದ ನಾಣ್ಯದ ಮೇಲೆ ಅಂಜಲಿ ಮುದ್ರೆಯಲ್ಲಿ, ರೆಕ್ಕೆಗಳನ್ನು ಹೊಂದಿ ತ್ರಿಭಂಗಿಯಲ್ಲಿ ನಿಂತ ಗರುಡನ ಚಿತ್ರವಿದೆ. ಮುಂಚಾಚಿದ ನಾಸಿಕವನ್ನು ಗರುಡ ಪಕ್ಷಿಯ ಕೊಕ್ಕರೆಯಂತೆ ಹೊರಚಾಚಿ ಬಾಗಿಸಲಾಗಿದೆ. ಇದರ ಮೇಲ್ಭಾಗದಲ್ಲಿ ಅಸ್ಪಷ್ಟವಾದ ದೇವನಾಗರಿ ಲಿಪಿ ಇರುವುದರಿಂದ ಇದು ಹಾನಗಲ್ಲು ಕದಂಬರ ಕಾಲಕ್ಕೆ ಸೇರಿರಬಹುದಾದ ಸಾಧ್ಯತೆಗಳಿವೆ.

೧೦ ಗ್ರಾಂ ತೂಕದ ನಾಣ್ಯದಲ್ಲಿ ಎಡಬದಿಗೆ ಮುಖಮಾಡಿನಿಂತ ಆನೆ ಚಿತ್ರ, ಅದರ ಮೇಲ್ಭಾಗ ಹಿಜರಿ ಶಕೆ ೧೨೧೬ ಎಂದಿದೆ. ಇದು ಕ್ರಿ.. ೧೮೮೩ರ ಕಾಲಕ್ಕೆ ಸರಿಹೊಂದುತ್ತದೆ. ಇದೇ ಅಳತೆಯ ಇನ್ನೊಂದು ನಾಣ್ಯದಲ್ಲಿ ಮುಂಗಾಲು ಮುಂದೆ ಚಾಚಿ, ಬಾಲ ಮೇಲಕ್ಕೆತ್ತಿರುವ ಸಿಂಹದ ಚಿತ್ರವಿದೆ. ಕೆಳಭಾಗ ಕ್ರಿ.. ೧೮೩೮ ಎಸ್.ಬಿ. ಎಂಬ ಇಂಗ್ಲಿಷ್ ಬರಹವಿದೆ. ಆನೆ ಚಿತ್ರವಿರುವ ನಾಣ್ಯಕ್ಕೂ ಮತ್ತು ಹುಲಿಯ ಚಿತ್ರದ ನಾಣ್ಯಕ್ಕೂ ಕಾಲಗಣನೆ ಹೊಂದುತ್ತಿರುವುದು ವೈಶಿಷ್ಟ್ಯವಾಗಿದೆ. ಇದರಿಂದ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಪ್ರದೇಶದ ಅಧಿಕಾರಿಯಾಗಿದ್ದ ಸವಣೂರು ನವಾಬನು ಪರ್ಶಿಯನ್ ಭಾಷೆಯೊಂದಿಗೆ ಇಂಗ್ಲಿಷ್ ಭಾಷೆ ಮತ್ತು ಅಂಕಿ ಸಂಖ್ಯೆಗಳನ್ನು ಬಳಕೆಗೆ ತಂದನೆಂದು ಗ್ರಹಿಸಬಹುದು.

೧೬ ಗ್ರಾಂ ತೂಕವುಳ್ಳ ನಾಣ್ಯದ ಮೇಲೆ ಯಮನೌ ಅಲ್ ಸುಲ್ತಾನ್ ಅಲ್ಲಾಹಿ ಮಾಮಸ್ರ ಸಲ್ತನತ್ಎಂಬ ಅರಬ್ಬಿ ಭಾಷೆಯ ಅಲೇಖ್ಯವಿದೆ. ಗ್ರಾಂ ತೂಕವುಳ್ಳ ನಾಣ್ಯದ ಮೇಲೆಲಿಲ್ಲಾ ಅಲ್ ಅಲಿಎಂಬ ಅರಬ್ಬಿ ಭಾಷೆಯ ಅಲೇಖ್ಯ ಮತ್ತು ಅದೇ ತೂಕವಿರುವ ಇನ್ನೊಂದು ನಾಣ್ಯದ ಮೇಲೆಇನ್ ಲ್ಲಾ ಬಿಸ್ಮಿತ್ ಲಫಿ ಅನುಎಂಬ ಬರಹವಿದೆ.

ಪ್ರದೇಶದ ಅಕ್ಕಿಆಲೂರಿನಲ್ಲಿ ದೊರೆತ ರೋಮನ್ ನಾಣ್ಯಗಳು ಸಾತವಾಹನರ ಕಾಲದಿಂದಲೇ ರೋಮ್ ಸಾಮ್ರಾಜ್ಯದೊಂದಿಗಿನ ವ್ಯಾಪಾರ ಸಂಬಂಧವನ್ನು ಹೇಳುವ ಪುರಾವೆಗಳಾಗಿವೆ. ಅನಂತರ ಆಳ್ವಿಕೆ ಮಾಡಿದ ಅನೇಕ ಅರಸುಮನೆತನಗಳಿಗೆ ಸೇರಿದ ನಾಣ್ಯಗಳು ಇಲ್ಲಿ ದೊರೆತಿರುವುದರಿಂದ, ಹಾನಗಲ್ಲು ನಗರ ಪ್ರಮುಖ ವ್ಯಾಪಾರ ಕೇಂದ್ರವಾಗಿ ಮುಂದುವರೆಯಿತೆಂದು ಹೇಳಬಹುದು.

ಕದಂಬರ ಕಾಲದಲ್ಲಿ ಕೋಟೆಯ ಹೊರ ಮತ್ತು ಒಳ ಭಾಗಗಳಲ್ಲಿ ನಿರ್ಮಾಣಗೊಂಡಿರುವ ಉತ್ತರಿ ಮಂಟಪ, ಕೀಚಕನ ಗರಡಿ, ಈಶ್ವರ, ರಾಮಲಿಂಗೇಶ್ವರ, ಬಿಲ್ಲೇಶ್ವರ, ತಾರಕೇಶ್ವರ, ಗಣಪತಿ, ಕಾಳಿಕಾ ದೇಗುಲಗಳು ಹಾಗೂ ಚೌಕೀದಾರರ ಕೊಠಡಿಗಳಲ್ಲಿರುವ ವಿಷ್ಣುವಿನ ಶಿಲ್ಪಗಳು ಅಂದಿನ ಶಿಲ್ಪಕಲೆಯ ವೈಶಿಷ್ಟ್ಯಗಳಾಗಿವೆ.

ಕೋಟೆ ದಿಬ್ಬವನ್ನು ಮತ್ತು ಆನೆಕೆರೆ ಒಡ್ಡಿನ ಗೋಡೆ ಕಟ್ಟಲು ಬಳಸಿದ ಶಿಲೆಗಳಲ್ಲಿ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದ ದೇಗುಲಗಳ ಬಿಡಿ ಭಾಗಗಳು ಅಸಂಖ್ಯಾತವಾಗಿವೆ. ನಗರದ ಅಲ್ಲಲ್ಲಿ ಶಿಲ್ಪ, ಶಾಸನ, ವೀರಗಲ್ಲು, ದೇಗುಲದ ಭಾಗ ಮೊದಲಾದ ಪ್ರಾಚೀನ ನಿರ್ಮಿತಿಗಳು ಹೇರಳವಾಗಿ ಹರಡಿವೆ. ಅವೆಲ್ಲವುಗಳನ್ನು ಸಂರಕ್ಷಿಸಲು ನಗರದಲ್ಲಿ ಒಂದು ವಸ್ತು ಸಂಗ್ರಹಾಲಯದ ಅವಶ್ಯಕತೆ ಎದ್ದು ಕಾಣುತ್ತದೆ. ಕೋಟೆ ಪ್ರದೇಶದಲ್ಲಿಯ ಹಾಳು ಮಣ್ಣಿನ ದಿಬ್ಬಗಳಲ್ಲಿ ಉತ್ಖನನ ಕೈಗೊಂಡರೆ, ಪ್ರಾಚೀನ ಸಂಸ್ಕೃತಿಯ ಮೇಲೆ ಹೆಚ್ಚಿನ ಬೆಳಕು ಚೆಲ್ಲಬಹುದಾದ ಅಂಶಗಳು ಸಿಗಬಹುದು.

ಕ್ಷೇತ್ರಕಾರ್ಯದಲ್ಲಿ ಮತ್ತು ನಾಣ್ಯಗಳನ್ನು ಒದಗಿಸುವಲ್ಲಿ ಸಹಾಯ ಮಾಡಿದ ಪ್ರೊ. ವಿ.ಜಿ. ಶಾಂತಪುರಮಠ ಮತ್ತು ಸ್ಥಳೀಕರಿಗೂ, ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರು, ಗ್ರಂಥಾಲಯ ಸಿಬ್ಬಂದಿಯವರಿಗೂ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಿಬ್ಬಂದಿಯವರಿಗೂ ನನ್ನ ಕೃತಜ್ಞತೆಗಳು.

ಅಡಿಟಿಪ್ಪಣಿ

. Sundara A., Early Chanber Tombs of South India, Delhi – 1975.

. Nagaraj Rao M.S., Prehistoric Culture of the Tungabhadra Valley, Dharwar – 1975.

. Robert Broos Foot, Indian Prehistoric and Protohistoric Antiquities, Madras – 1916.

. ಇತಿಹಾಸ ದರ್ಶನ, ಸಂ. ೧೧ ಪು. ೧೪ ಮತ್ತು ೨೩೨೫.

. ಕಲಬುರ್ಗಿ ಎಂ.ಎಂ., ಧಾರವಾಡ ಜಿಲ್ಲೆಯ ಶಾಸನ ಸೂಚಿ.

. ಚನ್ನಕ್ಕ ಪಾವಟೆ, ಹಾನಗಲ್ಲ ಕದಂಬರು.

. ಶಿವತಾರಕ ಕೆ.ಬಿ., ಕರ್ನಾಟಕದ ಪುರಾತತ್ವ ನೆಲೆಗಳು.

. ಶಾಂತಪುರಮಠ ವಿ.ಜಿ., ವಿರಾಟನಗರ ಇತಿಹಾಸ (ಅಪ್ರಕಟಿತ) ಮಾಹಿತಿ ಸಂಗ್ರಹಣೆ.

. ಸಣ್ಣ ನೀರಾವರಿ ಇಲಾಖೆ, ಹಾನಗಲ್ಲು.

೧೦. ಅರಣ್ಯ ಇಲಾಖೆ, ಹಾನಗಲ್ಲು.

೧೧. ಹಾನಗಲ್ಲು ಪರಿಸರದಲ್ಲಿ ಕೈಗೊಂಡ ಕ್ಷೇತ್ರಕಾರ್ಯ.