ಇತ್ತೀಚಿನ ದಿನಗಳಲ್ಲಿ ಸ್ಥಳನಾಮ ಅಧ್ಯಯನ ವಿಶೇಷ ಮಹತ್ವ ಪಡೆದುಕೊಳ್ಳುತ್ತಿದೆ. ಒಂದಕ್ಕಿಂತ ಹೆಚ್ಚು ಜ್ಞಾನಶಾಖೆಗಳನ್ನು ಬಳಸಿಕೊಂಡು ಸಮಗ್ರ ದೃಷ್ಟಿಕೋನದಿಂದ (Holistic approach) ಸ್ಥಳನಾಮಗಳನ್ನು ಅಧ್ಯಯನ ಮಾಡುವ ಪದ್ಧತಿ ಇದೀಗ ಹೆಚ್ಚು ಜನಪ್ರಿಯವಾಗತೊಡಗಿದೆ. ಒಂದು ಪ್ರದೇಶದ ಸಾಂಸ್ಕೃತಿಕ ಇತಿಹಾಸದ ಅಧ್ಯಯನದಲ್ಲಿ ಅವಶ್ಯವಾಗಿ ಗಮನಿಸಬೇಕಾದ ಅಂಶಗಳಲ್ಲಿ ಸ್ಥಳನಾಮವೂ ಒಂದು. ಬದಲಾದ ಭೌಗೋಳಿಕ ಸ್ವರೂಪದ ಚರಿತ್ರೆಗೆ ಇದು ಸುಳುಹನ್ನು ಕೊಡಬಲ್ಲದು; ಅಲ್ಲದೇ ಐತಿಹಾಸಿಕ ಘಟನೆಗೆ ಪುಷ್ಟಿಯನ್ನು ನೀಡಬಲ್ಲದು. ಹೀಗೆ ಸ್ಥಳನಾಮಗಳು ಪೂರಕ ಮಾಹಿತಿಗಳಾಗಿ ಮಹತ್ವದ ಕಾರ್ಯ ನಿರ್ವಹಿಸಬಲ್ಲವು. ಜೊತೆಗೆ ಜನತೆಯ ಮನಸ್ಸನ್ನು ಅರ್ಥಮಾಡಿಕೊಳ್ಳಲು ಇವುಗಳ ಅಧ್ಯಯನ ಸಹಾಯಕ. ಸ್ಥಳನಾಮಗಳಲ್ಲಿ ಮುಖ್ಯವಾಗಿ ಎರಡು ಭಾಗಗಳಿದ್ದು, ಒಂದನ್ನುನಿರ್ದಿಷ್ಟವೆಂದು, ಮತ್ತೊಂದನ್ನುವಾರ್ಗಿಕವೆಂದೂ ಕರೆಯಲಾಗುತ್ತದೆ. ಮೊದಲ ನಿರ್ದಿಷ್ಟ ಭಾಗಗಳು ಸಾಮಾನ್ಯವಾಗಿ ನಿಸರ್ಗವಾಚಿ, ವ್ಯಕ್ತಿವಾಚಿ, ನಿರ್ಮಾಣವಾಚಿ ಅಥವಾ ಆದರ್ಶವಾಚಿಗಳಾಗಿರುತ್ತವೆ. ಉದಾ: ಬೆಟ್ಟದಳ್ಳಿ (ನಿಸರ್ಗವಾಚಿ), ಆದರ್ಶನಗರ (ಆದರ್ಶವಾಚಿ) ಇತ್ಯಾದಿ. ಎರಡನೆಯ ಭಾಗವಾದ ವಾರ್ಗಿಕಗಳು ನಿಸರ್ಗವಾಚಿ, ವಸತಿವಾಚಿ ಅಥವಾ ನಿರ್ಮಾಣವಾಚಿಗಳಾಗಿದ್ದು, ಪ್ರದೇಶದ ಭೌಗೋಳಿಕತೆ, ಮಾನವ ಸಂಸ್ಕೃತಿಯ ವಿಕಾಸದ ವಿವಿಧ ಘಟ್ಟಗಳು ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುವಂತಿರುತ್ತವೆ. ಉದಾ: ಹಳ್ಳಿಬಯಲು (ನಿಸರ್ಗವಾಚಿ), ಬೆಳ್ಳೂರು (ವಸತಿವಾಚಿ), ಹೊಸಕೋಟೆ (ನಿರ್ಮಾಣವಾಚಿ) ಇತ್ಯಾದಿ.

ಐತಿಹಾಸಿಕ ಗ್ರಾಮನಾಮಗಳ ಅಧ್ಯಯನದಲ್ಲಿ ಮೂರು ಮುಖ್ಯ ಘಟ್ಟಗಳನ್ನು ಗುರುತಿಸಬಹುದಾಗಿದೆ.

ಸಹಜಸೃಷ್ಟಿಯ ಘಟ್ಟ

ಇದು ಸ್ಥಳನಾಮಗಳ ಸೃಷ್ಟಿಯಲ್ಲಿ ಅತ್ಯಂತ ಪ್ರಾಚೀನವಾದ ಹಾಗೂ ಮೊದಲ ಹಂತವನ್ನು ನಿದರ್ಶಿಸುತ್ತದೆ. ಕಾರಣ, ಹಂತದಲ್ಲಿ ನಿರ್ದಿಷ್ಟದಲ್ಲಿ ಅಥವಾ ವಾರ್ಗಿಕದಲ್ಲಿ ಅಥವಾ ಅವೆರಡರಲ್ಲಿಯೂ ಸಾಮಾನ್ಯವಾಗಿ ನಿಸರ್ಗವಾಚಿಯನ್ನೇ ಬಳಸಲಾಗಿರುವುದನ್ನು ಗುರುತಿಸುತ್ತೇವೆ. ಪ್ರದೇಶದ ಭೌಗೋಳಿಕ ಗುಣಸ್ವಭಾವಗಳನ್ನು ಬಿಂಬಿಸುವ ಆಡು ಮಾತಿನ ಶಬ್ದಗಳೇ ಇಲ್ಲಿ ಸ್ಥಳನಾಮಗಳಾಗಿ ಪರಿಣಮಿಸಿರುತ್ತವೆ. ಉದಾ: ಬನಹಟ್ಟಿ, ಹುಣಸೆಬಾವಿ, ನವಲಗುಂದ, ಹಾವೇರಿ, ಹೆದ್ದುರ್ಗ, ಕೋಡುಗುಡ್ಡ ಇತ್ಯಾದಿ.

ಸಂಸ್ಕೃತೀಕರಣದ ಘಟ್ಟ

ಇಲ್ಲಿ ಸ್ಥಳೀಯ ಆಡುಭಾಷೆಯ ಮೂಲದ ಸ್ಥಳನಾಮವನ್ನು ಸಂಸ್ಕೃತ ಭಾಷೆಗೆ ಪರಿವರ್ತಿಸುವ ಸಂಸ್ಕೃತೀಕರಣದ ಪ್ರಕ್ರಿಯೆ ನಡೆಯುತ್ತದೆ. ಪ್ರಕ್ರಿಯೆಯ ಹಿಂದೆ ಮುಖ್ಯವಾಗಿ ಪ್ರತಿಷ್ಠೆ ಕೆಲಸ ಮಾಡುತ್ತದೆ. ಸಂಸ್ಕೃತ ಭಾಷೆ ಪ್ರತಿಷ್ಠಿತರ ಭಾಷೆ ಎಂಬ ಭಾವನೆ ಪ್ರಬಲವಾಗಿ ಇದ್ದಾಗ, ಘಟ್ಟದಲ್ಲಿ ಕನ್ನಡದ ಅನೇಕ ಊರುಗಳನ್ನು ಸಂಸ್ಕೃತ ಭಾಷೆಗೆ ಪರಿವರ್ತಿಸಿ ಬಳಸುವ ಪ್ರಯತ್ನ ನಡೆಯಿತು. ಪ್ರಕ್ರಿಯೆ ಕನ್ನಡ ನಾಡಿನಲ್ಲಿ ಸಂಸ್ಕೃತ ಭಾಷೆಯಲ್ಲಿ ಶಾಸನಗಳನ್ನು ಬರೆಸುವ ಹಂತದಲ್ಲಿಯೇ ಪ್ರಾರಂಭವಾಗಿರಬೇಕೆಂದು ತೋರುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಜನಸಾಮಾನ್ಯರು ಮಾತ್ರ ಇದಕ್ಕೆ ಹೆಚ್ಚು ಮಹತ್ವ ನೀಡದೇ ಮೊದಲಿನಿಂದಲೂ ಬಳಕೆಯಲ್ಲಿದ್ದ ದೇಶೀ ಸ್ಥಳನಾಮಗಳನ್ನೇ ಬಳಸುತ್ತ ಬಂದುದು. ಸಂಸ್ಕೃತೀಕರಣಕ್ಕೆ ಉದಾ: ಧಾರವಾಡತಂತುಪುರಿ, ಮುಳಬಾಗಿಲುಕಂಕಟದ್ವಾರ, ಮೈಸೂರುಮಾಹಿಷ್ಮತೀಪುರ ಇತ್ಯಾದಿ.

ಪ್ರಚೀನ ಮೂಲದ ಆಶಯ

ಮಧ್ಯಕಾಲೀನ ಯುಗದಲ್ಲಿ ರಾಜವಂಶಗಳನ್ನು ಪ್ರಸಿದ್ಧ ಋಷಿ ಮೂಲಕ್ಕೆ ಒಯ್ಯುವ ಒಂದು ಶಿಷ್ಟ ಪ್ರಕ್ರಿಯೆ ಶಾಸನಗಳಲ್ಲಿ ಕಂಡುಬರುತ್ತದೆ. ಅದೇ ರೀತಿ ಜನಸಾಮಾನ್ಯರಲ್ಲಿ ತಮ್ಮ ಊರುಗಳನ್ನು ಅತಿ ಹೆಚ್ಚು ಪ್ರಾಚೀನ ಎಂದು ಬಿಂಬಿಸುವ ಪ್ರವೃತ್ತಿ ಬೆಳೆದು ಬಂದುದನ್ನು ಗುರುತಿಸಬಹುದು. ಹಾಗೆ ಸೇರಿಕೊಳ್ಳುವಾಗ ಕೆಲವೊಮ್ಮೆ ಊರುಗಳ ಹೆಸರುಗಳನ್ನು ಅದಕ್ಕೆ ಅನುಗುಣವಾಗಿ ಪರಿವರ್ತಿಸಲು ಪ್ರಯತ್ನಿಸಲಾಗಿದೆ. ಅದಕ್ಕೆ ತಕ್ಕಂತೆ ಐತಿಹ್ಯಗಳನ್ನು ಸೃಷ್ಟಿಸಲಾಗುತ್ತದೆ. ಇದರಲ್ಲಿ ಕಲ್ಪಕತೆಯ ಅಂಶವೇ ಮುಖ್ಯವಾಗಿದ್ದರೂ ಸತ್ಯವೆಂದು ಬಿಂಬಿಸಲು ಭೌಗೋಳಿಕ ಸಾಕ್ಷಾಧಾರಗಳನ್ನು ಒದಗಿಸಲಾಗುತ್ತದೆ. ಶರಾವತಿ ನದಿ ಹುಟ್ಟುವ ಸ್ಥಳಅಂಬುತೀರ್ಥ’. ವನವಾಸ ಸಂದರ್ಭದಲ್ಲಿ ರಾಮ ನೀರಿಗಾಗಿ ನೆಲದ ಮೇಲೆ ಬಾಣವನ್ನು ಬಿಟ್ಟಾಗ, ನೀರು ಚಿಮ್ಮಿತೆಂದು ಐತಿಹ್ಯ. ಹೀಗೆ ಶರಾವತಿ ರಾಮಾವತಾರದಷ್ಟು ಪ್ರಾಚೀನವಾಗುತ್ತದೆ.

ಇಷ್ಟಲ್ಲದೆ, ಸ್ಥಳನಾಮಗಳು ಭಿನ್ನಭಾಷಿಕ ಹಾಗೂ ಭೀನ್ನಧರ್ಮೀಯರ ಆಡಳಿತ ಕಾರಣದಿಂದಲೂ ತಮ್ಮ ಸ್ವರೂಪವನ್ನು ಬದಲಾಯಿಸಿಕೊಳ್ಳುವ ಸಾಧ್ಯತೆ ಇದೆ. ವಸಾಹತುಶಾಹಿ ಆಡಳಿತ ಸಂದರ್ಭದಲ್ಲಿ ಭಾರತದ ಅನೇಕ ಪಟ್ಟಣಗಳ ಹೆಸರುಗಳು ಆಂಗ್ಲ ಉಚ್ಛಾರಣೆಯನ್ನು ಪಡೆದುಕೊಂಡವು. ಉದಾ: ಧಾರವಾಡಧಾರವಾರ್, ಬೆಳಗಾಂವಿಬೆಲಗಮ್, ಮುಂಬಯಿಬಾಂಬೆ, ಬೆಂಗಳೂರುಬ್ಯಾಂಗ್ಲೂರ್ ಇತ್ಯಾದಿ.

ಅದರಂತೆ ಟಿಪ್ಪುವಿನ ಆಡಳಿತ ಕಾಲದಲ್ಲಿ ಕೆಲವು ಊರುಗಳ ಹೆಸರುಗಳು ಫಾರಸಿ ಭಾಷೆಯದಾಗಿ ಮಾರ್ಪಟ್ಟಿದ್ದವು. ಕಲ್ಲೀಕೋಟೆಫರೂಕಾಬಾದ್, ದಿಂಡಿಗಲ್ಖಲೀಲಬಾದ್, ಗುತ್ತಿಫೈಜ ಹಿಸ್ಸಾರ್, ಕೃಷ್ಣಗಿರಿಫಲ್ಕ್ ಇಲ್ ಅಜಂ, ಮೈಸೂರುನಜರಾಬಾದ್, ಸಿರಾರುಸ್ತುಮಬಾದ್, ಸಕಲೇಶಪುರಮುಜಿದಾಬಾದ್, ಆದರೆ ಇವೆಲ್ಲ ಮತ್ತೆ ದೇಶೀಯತೆಯ ಪ್ರಕ್ರಿಯತೆಗೆ ಒಳಗಾಗುತ್ತವೆ. ಉದಾ: ಮದ್ರಾಸ್ಚೆನ್ನೈ, ಬಾಂಬೆಮುಂಬಯಿ ಇತ್ಯಾದಿ.

ಪ್ರಸ್ತುತ ಹಾನಗಲ್ಲು ಸ್ಥಳನಾಮದ ವಿಷಯಕ್ಕೆ ಬಂದರೆ ಹಿಂದೆ ಪ್ರಸ್ತಾಪಿಸಿದ ಮೊದಲ ಮೂರು ಹಂತಗಳ ಪ್ರಕ್ರಿಯೆಗೂ ಹಾನಗಲ್ಲುಪಕ್ಕಾಗಿರುವುದು ಕಂಡುಬರುತ್ತದೆ. ಹಾನಗಲ್ಲಿಗೆ ಸಹಜಸೃಷ್ಟಿಯ ಹಂತದಲ್ಲಿಪಾನುಂಗಲ್ರೂಪವಿದ್ದು, ಸಂಸ್ಕೃತೀಕರಣ ಪ್ರಕ್ರಿಯೆಯಲ್ಲಿ ಅದುಪಂಕ್ತೀಪುರಅಥವಾವಿಜಯ ಪಂಕ್ತೀಪುರವಾಗಿ ಮಾರ್ಪಟ್ಟಂತೆ ಭಾವಿಸಬಹುದಾಗಿದೆ. ಕುಂಟಗಣಿ ತಾಮ್ರ ಶಾಸನದಲ್ಲಿ (ಕ್ರಿ.. ೪೯೭), ‘ವಿಜಯ ಪಂಕ್ತೀಪುರ ಉಲ್ಲೇಖ ಬಂದಿದ್ದು,[1] ವಿದ್ವಾಂಸರು ಅದು ಹಾನುಗಲ್ಲಿಗಿದ್ದ ಸಂಸ್ಕೃತ ಹೆಸರು ಎಂದು ಅಭಿಪ್ರಾಯಪಟ್ಟಿರುತ್ತಾರೆ. ಪಂಕ್ತೀಪುರದಲ್ಲಿಪಂಕ್ತಿಮತ್ತುಪುರಎಂಬ ಎರಡು ಭಾಗಗಳಿದ್ದು, ವಾರ್ಗಿಕವಾದಪುರವು ನಿರ್ಮಾಣವಾಚಿಯಾಗಿದೆ. ‘ಪಂಕ್ತಿಎಂಬ ನಿರ್ದಿಷ್ಟಕ್ಕೆ ನಿಘಂಟುವಿನಲ್ಲಿ a row, or set of five, the number five, ten, a fame, Celebrity ಮುಂತಾದ ಅರ್ಥಗಳಿವೆ. ಹಿನ್ನೆಲೆಯಲ್ಲಿ ಪಂಕ್ತಿಪುರವು ಕೆಲವು ಸಾಲು ಹಳ್ಳಿಗಳ ಗುಂಪೆಂದು ಅರ್ಥೈಸಬಹುದು. ಅಥವಾ ಕದಂಬ ರವಿವರ್ಮನು ಗೆದ್ದು ವಿಜಯ ಆಚರಿಸಿದ ಪುರವೆಂದು ಕೂಡ ಅರ್ಥ ಮಾಡಬಹುದು. ಅಲ್ಲಿ ಬೀಡು ಬಿಟ್ಟಾಗ, ಅವನು ವರಿಯಕ ಗ್ರಾಮದಲ್ಲಿ ಕೆರೆಗೆ ಕಟ್ಟೆಯನ್ನು ನಿರ್ಮಿಸಿಕೊಟ್ಟಿರುತ್ತಾನೆ. (ತಟಾಕ ಬಂಧಮ್ ಕಾರಯಿತ್ವಾ) ಆದರೆ ಪಂಕ್ತಿಪುರವು ಒಂದು ಶತಮಾನದ ಹೊತ್ತಿಗೆ (ಕ್ರಿ.. ೬೦೦) ಪಾನ್ತೀಪುರವಾಗಿ ಮಾರ್ಪಡುತ್ತದೆ. (ಸ್ವಾಮಿ ಶರ್ಮಣೇ ಪಾನ್ತಿಪುರ ವಿಷಯೇ ಕಿರುಕುಪ್ಪಟೂರಗ್ರಾಮ(ಮ್) ಸೋದಕಂ ಸದಕ್ಷಿಣಂ ದತ್ತವಾನ್)[2] ಹೆಸರು ಮುಂದೆ ೧೧ನೆಯ ಶತಮಾನದಲ್ಲಿಯೂ ಒಂದು ಶಾಸನದಲ್ಲಿ ಕಾಣಿಸಿಕೊಂಡಿದೆ. (ಬನವಾಸಿಪುರವರೇಸ್ವರಂ ಪಾಂತಿಪುರಾಧಿಪಂ ಶ್ರೀ ಮನ್ಮಯೂರವರ್ಮ್ಮದೇವಂ.)[3]ಪಾಂತಎಂಬ ಶಬ್ದಕ್ಕೆ ಅಪ್ಪು, ಆಲಿಂಗನೇ, ಉದಕೇಚ (ಶಮದ) ಎಂಬ ಅರ್ಥಗಳಿರುವುದರಿಂದ ನೀರಿಗೆ ಸಂಬಂಧಿಸಿದಂತೆ ಪಾನ್ > ಪಾಂತ ಬಳಸಿಕೊಂಡಿರುವ ಸಾಧ್ಯತೆಗಳಿವೆ. ಪಾಂತೀಪುರ ಶಬ್ದ ಕಂಡುಬರುವ ಎರಡೂ ಶಾಸನಗಳು ಸಂಸ್ಕೃತ ಶಾಸನಗಳಾಗಿರುವುದು ಪಾನುಂಗಲ್ಸಂಸ್ಕೃತೀಕರಣ ಪ್ರಕ್ರಿಯೆಯಲ್ಲಿ ಪಂಕ್ತಿಪುರ > ಪಾಂತೀಪುರವಾಗಿರಬಹುದಾದ ಸಾಧ್ಯತೆ ಊಹಿಸಲು ಪ್ರೆರೇಪಿಸಿವೆ.

ಹುಲಗೂರು ತಾಮ್ರಶಾಸನದಲ್ಲಿ (ಕ್ರಿ.. ೧೨೪೫) ಹಾನಗಲ್ಲು ೫೦೦ರ ಬದಲುವಿರಾಟನಗರಿ ಪಂಚಶತಎಂದು ಉಲ್ಲೇಖಗೊಂಡಿದೆ.[4] ಹಾನಗಲ್ಲನ್ನುವಿರಾಟನಗರಿಎಂದು ಭಾವಿಸಬಹುದು. ಹಾನಗಲ್ಲು ಪ್ರದೇಶವನ್ನು ಮಹಾಭಾರತ ಕಾಲದಷ್ಟು ಪ್ರಾಚೀನಗೊಳಿಸುವ ಪ್ರವೃತ್ತಿಯ ನಿದರ್ಶನವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸ್ಥಳೀಯರು ಅಲ್ಲಿ ಕೀಚನ ಗರಡಿಮನೆ, ಕುಂತಿದಿಬ್ಬಗಳನ್ನು ತೋರಿಸುತ್ತಾರೆ.

ಹಾನಗಲ್ಲುಸ್ಥಳನಾಮದ ಮೂಲ ಭಾಷಾ ಸ್ವರೂಪಪಾನುಂಗಲ್ಇದು ಸಾಕಷ್ಟು ಪ್ರಾಚೀನವಾಗಿರುವ ಹೆಸರಾದರೂ ಶಾಸನದಲ್ಲಿ ಹೆಸರು ೮ನೆಯ ಶತಮಾನದಲ್ಲಿ ಮೊದಲು ಗೋಚರವಾಗಿದೆ. ಮಾಧವಶರ್ಮಣೇ ಪಾನುಂಗಲ್ವಿಷಯೇ,[5] ಹಾನುಂಗಲ್,[6] ಹಾನುಂಗಲು[7] ಹೀಗೆ, ಪಾನುಂಗಲ್ > ಹಾನುಂಗಲ್ > ಹಾನುಂಗಲು ಹಾನಗಲ್ಲು ಎಂದು ಬದಲಾವಣೆಯನ್ನು ಭಾಷಾವೈಜ್ಞಾನಿಕವಾಗಿ ಗುರುತಿಸಬಹುದು.

ಕನ್ನಡದಲ್ಲಿ > ಕಾರ ಬದಲಾವಣೆ ಸುಮಾರು ೮ನೆಯ ಶತಮಾನದಿಂದಲೇ ಪ್ರಾರಂಭವಾಗಿದ್ದು, ೧೧ನೆಯ ಶತಮಾನದ ಹೊತ್ತಿಗೆ ನಿಯತಗೊಂಡಂತೆ ತೋರುತ್ತದೆ. ಪಾನುಂಗಲ್ > ಹಾನುಂಗಲ್ ಆಗಿ ಗೋಚರಿಸಿದುದು ೧೧೮೦ರ ಶಾಸನದಲ್ಲಿ.

ಪಾನುಂಗಲ್ ನಲ್ಲಿ ಪಾನುಂ + ಗಲ್ ಎಂದು ಎರಡು ಭಾಗಗಳನ್ನು ಗುರುತಿಸಬಹುದು. ‘ಪಾನ್ಶಬ್ದಕ್ಕೆ ಎಲೆ, ಪತ್ರ, ಪುಸ್ತಕದ ಹಾಳೆ, ವೀಳೆದೆಲೆ, ಬೀಡ, ಇಸ್ಪೀಟು ಎಲೆ ಎಂಬ ಅರ್ಥಗಳ ಜೊತೆಗೆ ನೀರಿನ ಕಾಲುವೆ, ನಾಲೆ ಎಂಬ ಅರ್ಥವೂ ಇದೆ. ಕಿಟಲ್ ಕೂಡಾಪಾನ್ಶಬ್ದಕ್ಕೆ a water conduit, a canal ಎಂಬ ಅರ್ಥವನ್ನು ಕೊಟ್ಟಿದ್ದಾನೆ.[8] ಆದ್ದರಿಂದ ಇಲ್ಲಿಪಾನಶಬ್ದವನ್ನು ನೀರಿಗೆ ಸಂಬಂಧಿಸಿದ ಕಾಲುವೆ ಎಂಬ ಅರ್ಥದಲ್ಲಿ ಸ್ವೀಕರಿಸಬೇಕಾಗುತ್ತದೆ. ‘ಗಲ್ಗೆ ಎರಡು ರೂಪ ಸಾಧ್ಯತೆಗಳಿವೆ.

. ಕಲ್ > ಗಲ್ > ಗಲು > ಗಲ್ಲು ಆಗುವುದು. ಕಲ್ಶಬ್ದಕ್ಕೆ ಕಲ್ಲು, ಗುಡ್ಡ, ಬೆಟ್ಟಗಳೆಂಬ ಅರ್ಥಗಳಿವೆ.

. ಗಲ > ಗಾಲ > ಗಲ್ಲು ಇದು ನೀರು ಹರಿಯುವಿಕೆಯ ಕ್ರಿಯೆಯನ್ನು ಸೂಚಿಸುತ್ತದೆ. ಕಾಲುವೆ ನೀರಿನ ಇಳಿಮುಖ ಸಣ್ಣ ತೋಡು.[9]

ಪಾನ್ + ಗಲ್ ಎರಡೂ ಸೇರಿ ಕಲ್ಲಿನ ಕಾಲುವೆಯಲ್ಲಿ ನೀರು ಹರಿಯುವಿಕೆಯನ್ನು ಸೂಚಿಸುತ್ತದೆ. ಆದ್ದರಿಂದ ಪಾನುಂಗಲ್ ನೀರಿನ ಕಾಲುವೆಗಳಿಂದ ಕೂಡಿದ (ಸುತ್ತುವರೆದ) ಪ್ರದೇಶವೆನ್ನಬಹುದು.

ಭೌಗೋಳಿಕವಾಗಿ ನೋಡಿದರೂ ಹಾನುಗಲ್ಲು ಪ್ರದೇಶದಲ್ಲಿ ಧರ್ಮಾನದಿ ಹರಿದಿದೆ. ಆನೆಕೆರೆಯಂತಹ ದೊಡ್ಡ ಕೆರೆಗಳು ಪ್ರದೇಶದಲ್ಲಿವೆ. ಪ್ರಾಚೀನ ಕಾಲದಲ್ಲಿಯೇ ನದಿ ಹಾಗೂ ಕೆರೆಗಳಿಂದ ಕಾಲುವೆ ಹರಿಸಿ, ಸುತ್ತಮುತ್ತಲ ಪ್ರದೇಶಕ್ಕೆ ನೀರು ಉಣಿಸುತ್ತಿದ್ದಿರಬೇಕು. ಕಾರಣದಿಂದಲೇ ಅವಿಭಜಿತ ಧಾರವಾಡ ಪ್ರದೇಶದಲ್ಲಿ ಹಾನಗಲ್ಲು ತಾಲೂಕು ಹೆಚ್ಚು ಭತ್ತ ಬೆಳೆಯುವ ಪ್ರದೇಶವಾಗಿತ್ತು. ಭತ್ತದ ಬೆಳೆಗೆ ಜಲಸಮೃದ್ಧಿ ಬೇಕೆನ್ನುವುದು ವಿಧಿತವಾದದ್ದು. ಆದ್ದರಿಂದಪಾನುಂಗಲ್ನೀರಿನ ಕಾಲುವೆಗಳ ಮೂಲಕ ಜಲಸಮೃದ್ಧಿಯನ್ನು ಹೊಂದಿರುವ ಪ್ರದೇಶವನ್ನು ಸೂಚಿಸುತ್ತದೆಂದು ಭಾವಿಸಬಹುದು. ಕಲ್/ಗಲ್ ಅಂತ್ಯವಿರುವ ಊರುಗಳು ಪ್ರದೇಶದಲ್ಲಿ ಕೆಲವು ಉದಾಹರಣೆಗೆ ನರೇಗಲ್ಲ, ಹುಲೇಕಲ್ಲು, ತೇಕಲ್ಲು ಇತ್ಯಾದಿ.

ಹಾವೇರಿಹಾಗೂಹಾನಗಲ್ಲುಸ್ಥಳನಾಮಗಳಲ್ಲಿ ಅರ್ಥಸಾಮ್ಯವಿರುವಂತಿದೆ. ಡಾ. ಭೋಜರಾ ಪಾಟೀಲರು ಇತಿಹಾಸದರ್ಶನ ಸಂಪುಟವೊಂದರಲ್ಲಿ ಹಾವೇರಿ ಗ್ರಾಮನಾಮವನ್ನು ವಿಶ್ಲೇಷಿಸುತ್ತ, ಪಾ + ಏರಿ > ಪಾವೇರಿ ಎಂದು ಅರ್ಥಪೂರ್ಣವಾಗಿ ವಿಭಜಿಸಿರುತ್ತಾರೆ.[10]ಪಾಶಬ್ದಕ್ಕೆಪಿಬಅರ್ಥದಲ್ಲಿ ಕುಡಿಯುವ ಹಾಗೂ ಏರಿ ಅಂದರೆ ನೀರಿನ ಸಂಗ್ರಹ. ಹಾವೇರಿ ಎಂದರೆ ಕುಡಿಯುವ ನೀರಿನ ಜಲಾಶಯ ಎಂಬ ಅರ್ಥ ಹೊರಡಿಸಿದ್ದಾರೆ. ನಳ ಚಕ್ರವರ್ತಿ ಕಟ್ಟಿಸಿದ ನಿರ್ಭರವಾದ ಕೆರೆಪಾವೇರಿ, ‘ಸುರಕ್ಷಿತ ಜಲಾಶಯಎಂದಿದ್ದಾರೆ. ಹಾವೇರಿಯಂತೆ ಹಾನಗಲ್ಲು ಕೂಡ ಕಾಲುವೆಗಳ ಮೂಲಕ ನೀರಿನ ಬಳಕೆ ಮಾಡಿಕೊಂಡಿರುವ ಜಲಸಮೃದ್ಧ ಪ್ರದೇಶವಾಗಿಪರಮಾರ್ಥ ನಾಮವಾಗಿದೆಎಂದು ಹೇಳಬಯಸುತ್ತೇನೆ.

 


[1] ಗೋಪಾಲ ಬಾ. ರಾ., ಕದಂಬರ ಶಾಸನಗಳು.

[2] K.I., II, 1 – 10, Kirukuppatur, (600 A.D.)

[3] S.I.I., XX, 24 – 9, (1034 A.D.)

[4] K.I., IV, 104 ೧೧೨, Hulagur, (1245 A.D.)

[5] E.C., X, 62 – 66, Kolar, (868 A.D.)

[6] K.I., V, 19, Hanagal, (1121 A.D.)

[7] E.C., VII, 89 – 90, Shimoga, (1527 A.D.)

[8] ಕಿಟಲ್ ನಿಘಂಟು, ಪು. ೧೦೨೮.

[9] ವಿಶ್ವನಾಥ, ಗ್ರಾಮನಾಮಗಳ ಸಾಂಸ್ಕೃತಿಕ ಅಧ್ಯಯನ ಪರವೇಶ, ಪು. ೧೫೬೧೫೭.

[10] ಇತಿಹಾಸ ದರ್ಶನ, ಸಂ. ೧೭, ೨೦೦೨.