ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆ ಹೊಂದಿರುವದು ಕರ್ನಾಟಕ. ಹಾನಗಲ್ಲು ಐತಿಹಾಸಿಕ ಮಹತ್ವದ ಸ್ಥಳ. ನಮ್ಮ ಪುರಾಣ ಪುರುಷರು ಹೋಗದ ಊರಿಲ್ಲ. ನಿಲ್ಲದ ನೆಲೆಯಿಲ್ಲ. ಪ್ರತಿಯೊಂದು ಊರಿನವರು ತಮಗೆ ಪ್ರಿಯರಾದ ಪೌರಾಣಿಕ ವ್ಯಕ್ತಿಗಳನ್ನು ತಮ್ಮಲ್ಲಿಗೆ ಕರೆತಂದು ನಿಲ್ಲಿಸಿಕೊಂಡಿದ್ದಾರೆ. ಭಾಷೆ, ಧರ್ಮ, ಆಚಾರವಿಚಾರಗಳು ಭಿನ್ನವಾಗಿದ್ದರೂ, ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸುವಲ್ಲಿ ಯಶಸ್ಸು ಸಂಪಾದಿಸಿದ್ದಾರೆ. ಭಾವೈಕ್ಯತೆಯ ಬಂಧ ಬೆಸೆದಿದ್ದಾರೆ. ಇದರಿಂದಲೇ ನಾವೆಲ್ಲರೂ ಒಂದೆಂಬ ಭಾವ ಇಲ್ಲಿ ಮಡುಗಟ್ಟಿ ನಿಂತಿರುವುದು.

ಮಹಾಭಾರತ ಕಾಲದಲ್ಲಿ ಹಾನಗಲ್ಲು ವಿರಾಟನ ಕೋಟೆ ಎನಿಸಿದುದು. ಬಕಾಸುರನೆಂಬ ಪುರಾಣ ಪ್ರಸಿದ್ಧ ರಾಕ್ಷಸನ ಏಕಚಕ್ರ ನಗರವೇ ಬಂಕಾಪುರವೆಂದು ಪ್ರತೀತಿ. ಹೀಗೆ ಜನರ ಬಾಯಲ್ಲಿ ಮಹಾಭಾರತ ಕಾಲದ ಇತಿಹಾಸದ ತೊಡಕಿದ್ದರೂ, ಅದರ ನಿಜವಾದ ಇತಿಹಾಸ ಪ್ರಾರಂಭವಾಗುವುದು ಬನವಾಸಿ ಕದಂಬರ ಕಾಲದಿಂದ. ಸಾವಿರ ವರ್ಷಗಳ ಸುದೀರ್ಘ ಅವಧಿಯಲ್ಲಿ ಹಾನಗಲ್ಲು ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಅನೇಕ ಆಯಾಮಗಳನ್ನು ಪಡೆಯುತ್ತ ಬಂದಿದೆ. ಕದಂಬರ ಕಾಲದ ಚರಿತ್ರಾತ್ಮಕ ದಾಖಲೆಗಳನ್ನು ಗಮನಿಸಿದರೆ, ಪಙ್ತೀಪುರ, ಪಂಕ್ತಿಪುರ, ಕಾಲದಿಂದ ಕಾಲಕ್ಕೆ ಪಾಂತಿಪುರ, ಪಾನುಗಂಲ್ಲ ಇಂದಿನ ಹಾನುಂಗಲ್ಲ ಹಾನುಗಲ್ಲು ರೂಪ ಪಡೆದುದು ವಿದಿತವಾಗುತ್ತದೆ.

ಪ್ರಾಚೀನ ಇತಿಹಾಸ

ಬನವಾಸಿ ಕದಂಬರ ಕುಂಟಗಣಿ (ಕ್ರಿ.. ೪೯೭) ತಾಮ್ರಪಟ ಒಂದು ಪ್ರಶಸ್ತಿ ದಾಖಲೆ.[1] ಪ್ರಶಸ್ತಿ ಪಡೆದ ಬ್ರಾಹ್ಮಣ ಧೌಮ್ಯಗೋತ್ರದ ಭವಸ್ವಾಮಿ ಎಂಬ ವೇದಪಾರಗ. ಇದುಅನೇಕ ವಿಜಯ ಸಂತರ್ಪಣ ದಾನವಿಧಿಸೂಚಿಸುವ ಆಕರ. ಹಾನಗಲ್ಲು ಪರಿಸರದಲ್ಲಿ ಕದಂಬ ರವಿವರ್ಮ ತನ್ನ ರಾಜ್ಯಾಭಿಷೇಕದ ೧೨ನೆಯ ವರ್ಷದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯ ದಿವಸ ಹಾನಗಲ್ಲಿನ ವರಿಯಕಾ ಗ್ರಾಮದಲ್ಲಿ ಕೆರೆಯೊಂದನ್ನು ಕಟ್ಟಿಸಿ, ಅದರ ಉಭಯಪಾರ್ಶ್ವಗಳಲ್ಲಿ ಕರ್ಪಟೇಶ್ವರವೆಂಬಲ್ಲಿಯ ಇಪ್ಪತ್ನಾಲ್ಕು ನಿವರ್ತನ ಭೂಮಿಯನ್ನು ಬ್ರಾಹ್ಮಣನಿಗೆ ದತ್ತಿ ಕೊಟ್ಟಿರುವನು.

ಕದಂಬ ಎರಡನೆಯ ಕೃಷ್ಣವರ್ಮನ ಕಾಲ (ಕ್ರಿ.. ೬೦೦)ದಲ್ಲಿ ಹಾನಗಲ್ಲು ತಾಲೂಕಿನ ಆಲೂರು ಗ್ರಾಮದಲ್ಲಿ ಸ್ವಾಮಿಶರ್ಮನೆಂಬವನಿಗೆ ಪಾಂತಿಪುರ ವಿಷಯದಲ್ಲಿ ಕಿರುಕುಪ್ಪಟೂರು ಗ್ರಾಮದಾನ ಮಾಡಿದ ಉಲ್ಲೇಖ ತಾಮ್ರಪಟದಲ್ಲಿದೆ.[2]

ಆಡೂರಿನಲ್ಲಿ ಬಾದಾಮಿ ಚಾಲುಕ್ಯ ಕೀರ್ತಿವರ್ಮನ (ಕ್ರಿ.. ೭೫೦) ಶಾಸನವಿದ್ದು, ಸಿಂದರಸನೆಂಬವ ಪಾಂಡಿಯೂರನ್ನು ಆಳುತ್ತಿದ್ದಾಗ, ಧರ್ಮಗಾವುಂಡನು ನಿರ್ಮಿಸಿದ ಬಸದಿಗೆ ಅವನ ಮೊಮ್ಮಗ ಶ್ರೀಪಾಲ ಹಾಗೂ ದೋಣಗಾವುಂಡರು ದಾನವಿತ್ತ ದಾಖಲೆ ಸಧ್ಯ ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯ ಆವರಣದಲ್ಲಿದೆ. ಇದರಂತೆ ನರೇಗಲ್ಲಿನಲ್ಲಿ ರಾಷ್ಟ್ರಕೂಟ ಧ್ರುವ (ಕ್ರಿ.. ೭೯೦), ಗೋವಿಂದವಲ್ಲಭ (ಕ್ರಿ.. ೮೦೦), ಕನ್ನರನ ಶಾಸನಗಳಿವೆ. ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ಯಾದವ, ವಿಜಯನಗರ ಮತ್ತು ಕೆಳದಿ ದೊರೆಗಳ ಆಡಳಿತಕ್ಕೆ ಒಳಪಟ್ಟು ವಿಭಿನ್ನ ಚರಿತ್ರೆ ವಿಶಿಷ್ಟ ಸಂಸ್ಕೃತಿಗಳ ಆಡುಂಬೊಲವಾಗಿದೆ.

ಮಧ್ಯಕಾಲೀನ ಚರಿತ್ರೆ

ಕಲ್ಯಾಣದ ಚಾಲುಕ್ಯರ ಬನವಾಸಿ ಪನ್ನಿರ್ಚ್ಚಾಸಿರ, ಹಾನುಗಲ್ಲ ಐನೂರು ಭಾಗಗಳು ಪ್ರಾಚೀನ ಕಾಲದಿಂದ ಪ್ರಸಿದ್ಧಿ ಪಡೆದಿವೆ. ಕದಂಬ ವಂಶದ ಮೂಲದವರು ಬನವಾಸಿ ಮಂಡಲದ ಅಧಿಪತಿಗಳಾಗಿ ನೇಮಕಗೊಂಡು ಚಾಲುಕ್ಯರಿಗೆ ನೆರವಾಗಿದ್ದವರು. ಹಾನುಗಲ್ಲು ಕದಂಬರು ಬನವಾಸಿ ಅರಸರ ಮೂಲದವರೇ ಎಂದು ಹೇಳಿ ಮುಂದುವರಿದಿದ್ದರಿಂದ ಎರಡನೆಯ ಬಾರಿ ಪ್ರದೇಶದಲ್ಲಿ ಕದಂಬೋದಯವಾಯಿತೆನ್ನಬೇಕು.

ಹಾನುಗಲ್ಲು ಐನೂರರ ಮೇಲೆ ಪ್ರಭುತ್ವವಿರಿಸಿದ ಕದಂಬ ಎಂಬ ಅರಸು ಮನೆತನ ಇಲ್ಲಿದ್ದು, ಉಭಯಸ್ವಾಮ್ಯದ ಆಡಳಿತ ಇವರದಾಗಿತ್ತು. ಅಂದರೆ ಇವರು ಕಲ್ಯಾಣದ ಚಾಲುಕ್ಯರಿಗೆ ಮಂಡಲೇಶ್ವರರಾಗಿದ್ದಂತೆ, ಗೋವೆಯ ಕದಂಬರಿಗೂ ಮಂಡಲೇಶ್ವರರಾಗಿದ್ದವರು. ತಮ್ಮ ಅವಿರತ ಪ್ರಯತ್ನ ಯಶಸ್ಸಿನಿಂದ ಮಂಡಲೇಶ್ವರರಾಗಿ ಕ್ರಿ.. ೧೦ನೆಯ ಶತಮಾನದಿಂದ ೧೩ನೆಯ ಶತಮಾನದವರೆಗೆ ಆಳ್ವಿಕೆ ನಡೆಸಿರುವರು.[3] ಉತ್ತರ ಕನ್ನಡ ಜಿಲ್ಲೆಯ ಪೂರ್ವ, ಧಾರವಾಡ ಜಿಲ್ಲೆಯ ಪಶ್ಚಿಮ ಭಾಗಗಳ ಒಡೆತನ ಪಡೆದಿದ್ದ ಇವರಿಗೆ ಬನವಾಸಿ ಆಳ್ವಿಕೆಗೆ ಮೊದಲು ಪಾನುಂಗಲ್ಲ ದ್ವಿತೀಯ ರಾಜಧಾನಿಯಾಗಿ ಮೆರೆದಿದೆ.

ಹಾನುಗಲ್ಲು ಕದಂಬರ ವಂಶದವರು ನಾಡಿನ ಹೊರಗೂ ತಮ್ಮ ರಾಜ್ಯಭಾರ ಮಾಡಿರುವರು. ಕೊಡಗಿನ ಕ್ರಿ.. ೧೦೯೫ ಯಡೂರ ಶಾಸನ ಅಲ್ಲಿಯ ಮಹಾಮಂಡಲೇಶ್ವರ ದುದ್ದರಸನನ್ನು ಹಾನುಗಲ್ಲು ಕದಂಬರ ವಂಶಜನೆಂದು ಸಾರಿದೆ. ಹಾಗೆಯೆ ಬಯಲು ನಾಡಿನ ಕದಂಬರು ಎಂದು ಕರೆಯಿಸಿಕೊಂಡು ಹೆಗ್ಗಡದೇವನಕೋಟೆಯ ಕ್ರಿ.. ೧೦೧೧ನೆಯ ಶತಮಾನದ ಚಾಗಿಯರಸ, ರವಿಯಮ್ಮರಸ, ಕಂದವರ್ಮರು ತಮ್ಮನ್ನು ಕದಂಬ ವಂಶಜರೆಂದು ಕರೆದುಕೊಂಡಿದ್ದು, ಹಾನುಗಲ್ಲು ಕದಂಬರ ಕೀರ್ತಿ ದೂರದ ಕೊಡಗು ಮತ್ತು ಹೆಗ್ಗಡದೇವನಕೋಟೆಯವರೆಗೂ ಹಬ್ಬಿನಿಂತಿದೆ.[4]

ಹಾನುಗಲ್ಲು ಕದಂಬ ಶಾಖೆಯ ಆದ್ಯಪುರುಷ ಚಟ್ಟಯ್ಯ. ಕ್ರಿ.. ೯೬೯ರಲ್ಲಿ ರಾಷ್ಟ್ರಕೂಟರ ಪೆರ್ಗಡೆಯಾಗಿ ತನ್ನ ಧೈರ್ಯ, ಸಾಹಸಗಳಿಂದ ಸಾಮಂತನಾಗಿ ಮೆರೆದ ಉಲ್ಲೇಖ ಸೋಮನಹಳ್ಳಿಯಲ್ಲಿದೆ. ಈತ ೯೭೨ ರಿಂದ ಕ್ರಿ.. ೧೦೧೫ರ ವರೆಗೆ ಬನವಾಸಿ ಪನ್ನಿರ್ಚ್ಚಾಸಿರ, ಸಾಂತಳಿಗೆ ಸಾವಿರ ಆಳುತ್ತಿದ್ದರೆ, ಚಾಲುಕ್ಯ ಸತ್ಯಾಶ್ರಯನು ತನ್ನ ಮಗಳು ಪಂಪಾದೇವಿಯ ಪತಿ ಕುಂದಮರಸನನ್ನು ಬನವಾಸಿ ಪ್ರಾಂತದ ಮಾಂಡಲಿಕನನ್ನಾಗಿ ಅಧಿಕಾರಕ್ಕೆ ನಿಯಮಿಸಲು, ಕದಂಬ ಚಟ್ಟಯ್ಯ ಅವನ ಅಧೀನನಾಗಿ ಹಾನುಗಲ್ಲಿನ ಆಳ್ವಿಕೆಯನ್ನು ಮುಂದುವರೆಸಿದ್ದನು.[5] ಇಲ್ಲಿ ಇನ್ನು ಕೆಲವರ ಆಡಳಿತದಿಂದಾಗಿ ಬನವಾಸಿಯಲ್ಲಿ ಕದಂಬ ಚಟ್ಟಯ್ಯನ ಆಳ್ವಿಕೆ ಅವಿಚ್ಛಿನ್ನವಾಗಿರಲಾರದು.

ಚಾಲುಕ್ಯ ಎರಡನೆ ಜಯಸಿಂಹನ ಕಾಲದಲ್ಲಿ ರಾಜಧಾನಿ ಮಳಖೇಡದ ಮೇಲೆ ದಕ್ಷಿಣ ರಾಜೇಂದ್ರಚೋಳ ಮತ್ತು ಕಲಚುರಿ ಗಾಂಗೇಯನೊಂದಿಗೆ ೧೦೧೯ರಲ್ಲಿ ಜಯಸಿಂಹನ ಮೇಲೆರಗಿ, ಮಾನ್ಯಖೇಟವನ್ನು ಲೂಟಿ ಮಾಡಲು, ದಾಳಿಯನ್ನು ನಿಗ್ರಹಿಸುವಲ್ಲಿ ಹೋರಾಡಿ ಜಯ ಸಂಪಾದನೆ ಮಾಡಿದ ಚಟ್ಟಯ್ಯ ದೇವನಿಗೆಕಟಕದ ಗೋವಎಂಬ ಬಿರುದಿತ್ತು ಗೌರವಿಸಿದ್ದರು.[6] ಕ್ರಿ.. ೯೬೯ರಲ್ಲಿ ಅಮೋಘವರ್ಷ ಖೊಟ್ಟಗದೇವನ ಆಳ್ವಿಕೆಯಲ್ಲಿ ಪೆರ್ಗಡೆಯಾಗಿದ್ದ ಚಟ್ಟಯ್ಯ, ಅವನ ಮಗ ಕನ್ನರನ ಕಾಲದಲ್ಲೂ ಕ್ರಿ.. ೯೭೨ರಲ್ಲಿ ರಾಷ್ಟ್ರಕೂಟರ ಸಾಮಂತನಾಗಿದ್ದನು. ಇವನ ಮಡದಿಯರು ಥಾನೆಯ ವಾಚಯ್ಯನ ಮಗಳು ಕುಂಡಲಾದೇವಿ ಮತ್ತು ಚತ್ತಬ್ಬರಸಿ ಎಂಬುವರು. ಚಟ್ಟಿಗನ ಒಟ್ಟು ಆಳ್ವಿಕೆ ೯೬೯ ರಿಂದ ೧೦೧೫ರ ವರೆಗೆ ಜರುಗಿದುದು.

ಇವನ ಮಗ ಜಯಸಿಂಹ ಬಹುಬೇಗ ಮರಣ ಹೊಂದಿದ್ದು, ಈತನಿಗೆ ಮಾವುಲಿ, ಮೊದಲನೆಯ ತೈಲ, ಎರಡನೆಯ ಶಾಂತಿವರ್ಮ, ಬೋಕಿ, ವಿಕ್ರಮರು ಎಂಬ ಐವರು ಮಕ್ಕಳು. ಮುಂದೆ ಹಾನುಗಲ್ಲು ಕದಂಬರ ಮಹಾಮಂಡಲೇಶ್ವರನಾದವ ಮೊದಲನೆಯ ಕೀರ್ತಿವರ್ಮ. ಚಾಲುಕ್ಯ ಆರನೆಯ ವಿಕ್ರಮಾದಿತ್ಯ ಮತ್ತು ಅಣ್ಣ ಸೋಮೇಶ್ವರನಿಗೂ ಪಟ್ಟದ ಬಗ್ಗೆ ಹೋರಾಟ ಜರುಗಿದಾಗವಿಕ್ರಮಾದಿತ್ಯನಿಗೆ ಬನವಾಸಿಯಲ್ಲಿ ಆಶ್ರಯವಿತ್ತಿದ್ದರಿಂದ ೧೨ ಸಾಮಾಂತರ ದಂಡನ್ನು ಉದಯಾದಿತ್ಯನ ನೇತ್ರತ್ವದಲ್ಲಿ ಮುತ್ತಲು ಕೀರ್ತಿದೇವ  ವಿಕ್ರಮಾದಿತ್ಯನ ಪರ ಯದ್ಧದಲ್ಲಿ ಜಯ ಗಳಿಸಿಕೊಟ್ಟಿರುವನು. ಇಷ್ಟಾದರೂ ಕೀರ್ತಿವರ್ಮನಿಗೆ ಹಾನಗಲ್ಲ ಕದಂಬರ ಪಟ್ಟ ಲಭಿಸದೇ ಹೋಗಿದೆ. ಕೀರ್ತಿವರ್ಮನಿಗೆ ಚತ್ತಯ್ಯ ಮತ್ತು ತೈಲಪದೇವರೆಂಬ ಇಬ್ಬರು ಗಂಡುಮಕ್ಕಳು. ಕೀರ್ತಿವರ್ಮನಿಗೆ ದೊರಕದ ಪಟ್ಟ, ಜಯಸಿಂಹನ ಮಗ ಎರಡನೆಯ ಶಾಂತಿವರ್ಮನಿಗೆ ಮಹಾಮಂಡಲೇಶ್ವರತ್ವ ದೊರಕಿದೆ. ಈತ ಗೋವೆಯ ಕದಂಬ ಗೂವದೇವನಿಗೆ ಅಧೀನನಾಗಿ ಪಾನುಂಗಲ್ಲ ಐನೂರಿನೊಂದಿಗೆ ಕೊಂತಕುಳಿ ಮೂವತ್ತನ್ನು ಆಳಿರುವನು. ಈತನ ಆಳ್ವಿಕೆಯ ತರುವಾಯಬಂಕಾಪುರದ ಕದಂಬರುಹಾನಗಲ್ಲನ್ನು ಸುಮಾರು ೫೦ ವರ್ಷಗಳವರೆಗೆ ರಾಜ್ಯಭಾರವನ್ನು ಮಾಡಿದರು.[7]

ಇಮ್ಮಡಿ ತೈಲಪನಿಗೆ ಮಗ ಮಯೂರವರ್ಮ. ಈತ ೧೦೩೪೩೫ರ ಮಾಲಿಕೆಯಲ್ಲಿ ಬನವಾಸಿ ಪನ್ನಿರ್ಚ್ಚಾಸಿರ, ಪಾನುಂಗಲ್ಲ ಐನೂರು, ಏಕಾಯತ ಪದಿನಾಲ್ಕು ಆಳಿದನು.[8] ಈತನ ಮಡದಿ ಐದನೆ ವಿಕ್ರಮಾದಿತ್ಯನ ಸೋದರಿ ಶೂರರಾಣಿ ಅಕ್ಕಾದೇವಿ. ಇವರಿಗೆ ಹರಿಕೇಸರಿ,[9] ತೋಯಿಮದೇವ,[10] ಹರಿಕಾಂತದೇವ[11]ರೆಂಬ ಮೂವರು ಮಕ್ಕಳು. ಹರಿಕೇಸರಿ ಬನವಾಸಿ, ಹಾನಗಲ್ಲ ಪ್ರಾಂತದ ಆಡಳಿತ ನೋಡಿದರೆ, ತೋಯಿಮದೇವ ೧೦೬೬ರಿಂದ ಬನವಾಸಿ ಪನ್ನಿರ್ಚ್ಚಾಸಿರ, ಪಾನುಂಗಲ್ಲ ಐನೂರರ ಆಳ್ವಿಕೆ ಕೈಗೊಂಡಿದ್ದನು. ೧೦೭೨ರ ತರುವಾಯ ಹರಿಕಾಂತದೇವ ಬನವಾಸಿ ಮತ್ತು ಪಾನುಂಗಲ್ಲ ಐನೂರರ ಆಳ್ವಿಕೆ ಮಾಡಿದನು. ಕ್ರಿ.. ೧೦೮೨ರ ಶಾಸನ ಶಾಂತಿವರ್ಮನ ಮಗ ತೈಲಪನನ್ನು ಹೆಸರಿಸಿದ್ದು, ಬನವಾಸಿ ಮತ್ತು ಪಾನುಂಗಲ್ಲ ಪ್ರಾಂತಗಳನ್ನು ಆಳುತ್ತಿದ್ದನೆಂದಿದೆ. ಕಾಲಾಂತರದಲ್ಲಿ ಕೊಂತಕುಳಿ ಮೂವತ್ತು, ಸಾಂತಳಿಗೆ ಸಾವಿರ ಈತನ ಆಳ್ವಿಕೆಗೆ ಒಳಪಟ್ಟಿದ್ದವು. ಈತನಿಗೆ ಮೂವರು ಮಕ್ಕಳು. ಮಯೂರವರ್ಮ, ಮಲ್ಲಿಕಾರ್ಜುನ ಮತ್ತು ಮೂರನೆಯ ತೈಲಪರು ಉಲ್ಲೇಖಿತರು. ವೇಳೆಯಲ್ಲಿ ಹೊಯ್ಸಳ ವಿಷ್ಣುವರ್ಧನ ಹಾನುಗಲ್ಲನ್ನು ವಶಪಡಿಸಿಕೊಂಡಿದ್ದರೂ ಚಾಲುಕ್ಯ ಜಗದೇಕಮಲ್ಲ ಮತ್ತು ಕದಂಬ ಮಲ್ಲಿಕಾರ್ಜುನ ಹಾನುಗಲ್ಲನ್ನು ಹೆಚ್ಚುಕಾಲ ವಿಷ್ಣುವರ್ಧನನ ಕೈಯಲ್ಲಿ ಬಿಟ್ಟಿಲ್ಲ. ೧೧೪೧ರಲ್ಲಿ ಪುನಃ ವಿಷ್ಣುವರ್ಧನ ಹಾನುಗಲ್ಲಿನಿಂದ ಆಳುತ್ತಿದ್ದನು.

ವಿಷ್ಣುವರ್ಧನ ೧೧೪೨ರಲ್ಲಿ ಬಂಕಾಪುರದಲ್ಲಿ ಮರಣ ಹೊಂದಿದರೆ, ಅತ್ತ ಕದಂಬರು ಎಚ್ಚತ್ತು ಹಾನಗಲ್ಲು ಪರಿಸರವನ್ನು ಕೈವಶಪಡಿಸಿಕೊಂಡರು. ೧೧೭೦ರ ವೇಳೆಗೆ ಹೊಯ್ಸಳ ವಿಷ್ಣುವರ್ಧನನ ಮಗ ನಾರಸಿಂಹ ಮತ್ತು ೧೧೭೮ರಲ್ಲಿ ಬಲ್ಲಾಳರು ಹಾನಗಲ್ಲನ್ನು  ಕೈವಶಪಡಿಸಿಕೊಂಡಿದ್ದರೂ, ಕ್ರಿ.. ೧೧೭೮ರಲ್ಲಿ ಹಾನುಗಲ್ಲು ಹೊಯ್ಸಳ ಇಮ್ಮಡಿ ಬಲ್ಲಾಳನ ವಶಕ್ಕೆ ಹೋಯಿತು. ಆದರೆ ಕಳಚುರಿ ಸಂಕಮನು ಅವನನ್ನು ಹಿಮ್ಮೆಟ್ಟಿಸಿದನು.

ಕದಂಬ ಕೀರ್ತಿದೇವ ಮುಂದೆ ಕಲಚುರ್ಯರ ಅಧಿಕಾರ ಒಪ್ಪಿ ಅವರಲ್ಲಿ ಮಂಡಲೇಶ್ವರನಾಗಿ ಪಾನುಂಗಲ್ಲ ಐನೂರ, ಬನವಾಸಿ ಪನ್ನಿರ್ಚ್ಚಾಸಿರವನ್ನು ಆಳುತ್ತಿದ್ದನು. ಮಾವುಲಿತೈಲ ಕದಂಬ ಮೂರನೆಯ ತೈಲಪನ ಮೊಮ್ಮಗ. ಈತ ಹೆಚ್ಚುಕಾಲ ಅಧಿಕಾರದಲ್ಲಿ ಉಳಿಯದೆ, ಕಾಮದೇವನಿಗೆ ಅಧಿಕಾರ ಬಿಟ್ಟುಕೊಟ್ಟಿರುವನು. ಕದಂಬರ ಕೊನೆಯ ಸುತ್ತಿನಲ್ಲಿ ಬರುವ ಕಾಮದೇವ ಧೀಮಂತ ಸಾಹಸಿ, ಚತುರ ಆಡಳಿತಗಾರ, ಅಷ್ಟೇ ಮಹತ್ವಾಕಾಂಕ್ಷಿ, ನಾಲ್ವಡಿ ಸೋಮೇಶ್ವರನ ಮಹಾಮಂಡಲೇಶ್ವರನಾಗಿ ಮಲೆನಾಡು, ತುಳುವನಾಡು, ಕೊಂಕಣಪ್ರಾಂತ, ಪಶ್ಚಿಮಘಟ್ಟ, ಬನವಾಸಿ ಪನ್ನಿರ್ಚ್ಚಾಸಿರ, ಪಾನುಂಗಲ್ಲ ಐನೂರು, ಪುಲಿಗೆರೆ ಮುನ್ನೂರು ನಾಡುಗಳ ಆಳ್ವಿಕೆ ಕೈಗೊಂಡಿದ್ದನು. ಕಾಮರಸನ ಕಾಲವೂ ತುಂಬ ಹೋರಾಟವೇ. ಗೋವೆಯ ಕದಂಬ ವಂಶದ ಶಿವಚ್ಚಿತ್ತ ಪೆರ್ಮಾಡಿಗೆ ತನ್ನ ಮಗಳು ಕಮಲಾದೇವಿಯನ್ನಿತ್ತು ವಿವಾಹ ಸಂಬಂಧ ಗಟ್ಟಿಗೊಳಿಸಿಕೊಂಡಿದ್ದ. ಇತ್ತ ಕಲ್ಯಾಣ ಸೋಮೇಶ್ವರನ ಆಳ್ವಿಕೆ ಬಹುಕಾಲ ನಡೆಯಲಿಲ್ಲ. ಒಂದೆಡೆ ಹೊಯ್ಸಳರ ಉಪಟಳ, ಕಳಚುರ್ಯರ ತೀವ್ರ ದಬ್ಬಾಳಿಕೆ, ಉತ್ತರದಲ್ಲಿ ಯಾದವರು ಕಲ್ಯಾಣದ ಚಾಲುಕ್ಯರಿಗೆ ಹಾಕಿದ ದಿಗ್ಭಂಧನ ಇಂಥ ಸಂದರ್ಭದ ಲಾಭ ಪಡೆದ ಕದಂಬ ಕಾಮದೇವಕದಂಬ ಚಕ್ರವರ್ತಿಎಂದು ಸಾರಿದ. ಅಲ್ಲದೇ ಹಾನುಗಲ್ಲು ಕೋಟೆಯನ್ನು ಭದ್ರಪಡಿಸಿಕೊಂಡ. ವೇಳೆಗೆ ಹೊಯ್ಸಳ ವೀರಬಲ್ಲಾಳ ಹಾನುಗಲ್ಲನ್ನು ಗೆದ್ದು, ‘ಹಾನುಗಂಲ್ ಗೊಂಡಬಿರುದನ್ನು ಧರಿಸಿದ. ಇದ್ದ ಸಾಮ್ರಾಜ್ಯವನ್ನು ಕಳೆದುಕೊಂಡ ಕಾಮದೇವ ಹೊಯ್ಸಳರ ಅಧಿಪತ್ಯ ಒಪ್ಪಿಕೊಂಡಿದ್ದರೂ, ಕಾಲಾಂತರದಲ್ಲಿ ದೇವಗಿರಿ ಯಾದವರ ಮಂಡಲೇಶ್ವರನೆನಿಸಿದನು. ಕ್ರಿ.. ೧೧೮೦ ರಿಂದ ೧೨೧೭ರ ವರೆಗೆ ೪೦ ವರ್ಷ ಹಾನುಗಲ್ಲಿನ ರಾಜ್ಯಭಾರವಹಿಸಿದ ಕಾಮದೇವ.

ಮಲ್ಲಿದೇವ ಕದಂಬ ಮನೆತನದ ಕೊನೆಯ ಸದಸ್ಯ. ೧೩ನೆಯ ಶತಮಾನದ ತರುವಾಯ ಹಾನುಗಲ್ಲು ಕದಂಬ ವಂಶ ಅವನತಿ ಹಿಡಿಯಲು ಮುಖ್ಯ ಕಾರಣ, ಒಂದೆಡೆ ಹೊಯ್ಸಳರ ಹೋರಾಟ, ಇನ್ನೊಂದೆಡೆ ಮುಸ್ಲಿಮರ ಅಭಿಯೋಗ.

ವಿಜಯನಗರದ ಕೃಷ್ಣದೇವರಾಯ ಹಾನುಗಲ್ಲನ್ನು ಜಯಿಸಿದ ವಿಷಯ ೧೫೨೧ರ ಶಾಸನದಲ್ಲಿದೆ. ಕೆಳದಿ ವೆಂಕಟಪ್ಪನಾಯಕನು ರಣದುಲ್ಲಾಖಾನನನ್ನು ಸೋಲಿಸಿ ಹಿಂದಕ್ಕಟ್ಟಿ, ತಾನು ಮುಂದೆ ಸಾಗಿ, ಗೆರೆಸೊಪ್ಪೆಯ ರಾಣಿ ಚೆನ್ನಭೈರಾದೇವಿಯನ್ನು ಸೋಲಿಸಿ, ವಿಜಯದ ಸ್ಮರಣಾರ್ಥವಾಗಿ ಹಾನುಗಲ್ಲಿನಲ್ಲಿ ವಿಜಯಗೋಪುರ ನಿರ್ಮಿಸಿದಂತೆ ಉಲ್ಲೇಖವಿದೆ. ಹೀಗೆ ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಸ್ಥಾನ ಪಡೆದ ಹಾನುಗಲ್ಲು ಕದಂಬರು ಜಾಗತಿಕ ಮಟ್ಟದಲ್ಲಿ ಕೀರ್ತಿ ತಂದಿರುವರು.

 


[1] ಗೋಪಾಲ ಬಾ.ರಾ., ಕದಂಬರ ಶಾಸನಗಳು, ಮುನ್ನುಡಿ.

[2] K.I., II, 2, Kirukuppatur, (600 A.D)

[3] ಚೆನ್ನಕ್ಕ ಪಾವಟೆ, ಹಾನುಗಲ್ಲು ಕದಂಬರು, ೧೯೯೮, ಪು.೩೩.

[4] ನಾಗರಾಜ ಎಂ.ಜಿ., ಕೊಡಗಿನ ಕೊಲೆಗಲ್ಲು, ೧೯೮೭.

[5] E.C., 413, Hiremagadi, (980 A.D.) and E.C., VIII, 234, Sorab, (968 A.D.)

[6] ಚೆನ್ನಕ್ಕ ಪಾವಟೆ, ಹಾನುಗಲ್ಲು ಕದಂಬರು, ೧೯೯೮, ಪು.೩೦.

[7] Gopal B.R., Minar Dynasties of South India, P.36-37.

[8] E.I., XVI – ii, 3, Hottur (1037 A.D)

[9] A.R.I.E., 3, 1946 – 47, 210, Belavatti, (1049 A.D)

[10] S.I.I., XVIII, 66, Bankapur, (1067 A.D.)

[11] A.R.I.E., 3, 1947 – 48, Gudagudi, (1072 A.D.)