ವಿಸ್ತಾರವಾದ ರಾಜ್ಯದ ಆಡಳಿತವನ್ನು ಸುಗಮಗೊಳಿಸಿಕೊಳ್ಳಲು ಅಧಿನಾಯಕನು ತನ್ನ ಅನುಕೂಲಕ್ಕಾಗಿ ಭೂಪ್ರದೇಶಗಳನ್ನು ವಿಭಾಗಿಸಿ ನಿರ್ವಹಿಸುತ್ತಿದ್ದನು. ಬೇರೆ ಬೇರೆ ಆಡಳಿತ ವಿಭಾಗಗಳನ್ನು ಮಾಡುವುದರಿಂದ ಸುಭದ್ರ ಆಡಳಿತ ಹಾಗೂ ರಾಜ್ಯದ ರಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯ ದೊರಕಿದಂತಾಗುತ್ತಿತ್ತು. ಸಾಮ್ರಾಜ್ಯದ ಚಕ್ರವರ್ತಿಯು ಅನುಕೂಲಕ್ಕೆ ತಕ್ಕಂತೆ ಆಡಳಿತ ವಿಭಾಗಗಳನ್ನು ಮಾಡಿ ಸಮರ್ಥರು ಹಾಗೂ ನಿಷ್ಠರಾಗಿದ್ದ ಅಧಿಕಾರಿವರ್ಗವನ್ನು ಜವಾಬ್ದಾರಿಯ ಕಾರ್ಯ ನಿರ್ವಹಿಸುವಂತೆ ಮಾಡಲಾಗುತ್ತಿತ್ತು. ಸಾಮಾನ್ಯವಾಗಿ ಪ್ರಾಚೀನ ಆಡಳಿತ ವ್ಯವಸ್ಥೆಯನ್ನು ಎರಡು ನಿರ್ಧಿಷ್ಟ ಭಾಗಗಳಲ್ಲಿ ಹಂಚಿಕೆ ಮಾಡಲಾಗುತ್ತಿತ್ತು ಎಂದು ವಿದ್ವಾಂಸರು ಅಭಿಪ್ರಾಯಿಸಿದ್ದಾರೆ. ನೇರವಾಗಿ ಚಕ್ರವರ್ತಿಯ ಅಧೀನದಲ್ಲಿ ನಡೆಯುವ ಕೇಂದ್ರಾಡಳಿತ ಹಾಗೂ ವಿಸ್ತಾರ ಪ್ರದೇಶವನ್ನು ವಿಭಾಗಿಸಿ ಪ್ರಾಂತ ರಚಿಸುವುದು ಹಾಗೂ ಅವುಗಳಿಗೆ ತನ್ನ ವಿಶ್ವಾಸಿಗರನ್ನು ಪ್ರಾಂತಾಡಳಿತಾಧಿಕಾರಿಗಳಾಗಿ ನೇಮಕ ಮಾಡಲಾಗುತ್ತಿತ್ತು. ಕೇಂದ್ರಾಡಳಿತದಲ್ಲಿ ಚಕ್ರವರ್ತಿ, ಯುವರಾಜ, ದಂಡನಾಯಕ (ಸೇನಾಪತಿ), ಸಂಧಿವಿಗ್ರಹಿ (ವಿದೇಶ ಸಚಿವ), ಸುಂಕಾಧಿಕಾರಿಗಳು ಹಾಗೂ ಬೇಹುಗಾರ ಪಡೆಯ ಮುಖಂಡರನ್ನೊಳಗೊಂಡ ವ್ಯವಸ್ಥೆ ರೂಪಿತವಾಗಿತ್ತು. ಇವರೆಲ್ಲರೂ ನೇರವಾಗಿ ಚಕ್ರವರ್ತಿಯ ಅಧೀನಕ್ಕೊಳಪಟ್ಟು ಕಾರ್ಯ ನಿರ್ವಹಿಸುತ್ತಿದ್ದರು. ಪ್ರಾಂತಾಡಳಿತ ವ್ಯವಸ್ಥೆಯಲ್ಲಿ ವಿಶಾಲವಾದ ಪ್ರಾಂತಗಳಿಗೆ ನಂಬಿಕಸ್ಥ ಅರಸರು ಅಥವಾ ಸಾಮಂತರನ್ನು ನೇಮಕ ಮಾಡಲಾಗುತ್ತಿತ್ತು. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮ ಪ್ರಾಂತಗಳನ್ನು ಮಂಡಲ, ನಾಡು, ವಿಷಯ, ಭುಕ್ತಿ, ಕಂಪಣ ಹಾಗೂ ಹಳ್ಳಿಗಳನ್ನು ವಿಭಾಗಿಸಿ ತಮ್ಮ ಅಧೀನ ನಾಯಕರಿಗೆ ಹಂಚುತ್ತಿದ್ದರು. ಅವುಗಳನ್ನು ಪಾಲಿಸಲು ಮಂಡಲಾಧಿಪತಿ, ನಾಡುಪ್ರಭು, ಪ್ರಭುಗಾವುಂಡ ಹಾಗೂ ಗಾವುಂಡ ಎಂಬ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುತ್ತಿತ್ತು. ಸ್ಥಳಿಯ ಮುಖಂಡರನ್ನು ನೇಮಿಸುವ ಹಾಗೂ ಕಿತ್ತೊಗೆಯುವ ಅಧಿಕಾರವನ್ನು ಪ್ರಾಂತಾಡಳಿತ ನಾಯಕ (ಅರಸ)ನೇ ಹೊಂದಿದ್ದ. ಪ್ರಾಂತಾಡಳಿತಾಧಿಕಾರಿಗಳಿಗೆ ಸ್ವತಂತ್ರಸೈನ್ಯ, ಕರ ಸಂಗ್ರಹಿಸುವ ಅಧಿಕಾರ, ದಾನ ದತ್ತಿ ನೀಡುವ, ದೇವಾಲಯಗಳನ್ನು ನಿರ್ಮಿಸುವ, ಕೆರೆಕಟ್ಟೆಗಳನ್ನು ಕಟ್ಟಿಸುವ ಸಮಾಜೋಧಾರ್ಮಿಕ ಕಾರ್ಯಗಳನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿದ್ದರು. ಸ್ವತಂತ್ರ ಸೈನ್ಯ ಪಡೆಯನ್ನು ಹೊಂದಿದ್ದ ಪ್ರಾಂತಾಡಳಿತಾಧಿಕಾರಿಗಳು ತಮ್ಮ ಸೈನ್ಯಾಧಿಕಾರಿಗಳನ್ನು ಸ್ಥಾನಪಲ್ಲಟಗೊಳಿಸುವ ಹಕ್ಕನ್ನು ಪಡೆದಿದ್ದರು. ತಮ್ಮ ಸೀಮಿತ ಆಡಳಿತದಲ್ಲಿ ಏನೆಲ್ಲಾ ಒಡೆತನಗಳನ್ನು ಸಾಮಂತಾಧಿಕಾರಿಗಳು ಹೊಂದಿದ್ದರೂ, ಚಕ್ರವರ್ತಿಗೆ ವರ್ಷಂಪ್ರತಿ ಕಪ್ಪ ನೀಡುವ ಹಾಗೂ ಅವರಿಗೆ ಗಂಡಾಂತರ ಒದಗಿದಾಗ ತನ್ನ ಸೈನ್ಯದ ಸೇವೆಯನ್ನು ಒದಗಿಸುವುದು ಖಡ್ಡಾಯವಾಗಿತ್ತು. ಪ್ರಾಂತಾಡಳಿತಾಧಿಕಾರಿಗಳು ತಮ್ಮ ಪ್ರಾಂತದ ಗಡಿಯನ್ನು ಹಿಗ್ಗಿಸಿಕೊಳ್ಳುವ ಸ್ವಾತಂತ್ರ್ಯ ಅವರಿಗಿತ್ತು. ಆದರೆ ಅದು ಚಕ್ರವರ್ತಿಯ ಸಾರ್ವಭೌಮತೆಯನ್ನು ಪ್ರಶ್ನಿಸುವ ಹಂತ ತಲುಪಬಾರದಾಗಿತ್ತು. ನ್ಯಾಯ ತೀರ್ಮಾನಗಳನ್ನು ಸಹ ಪ್ರಾಂತಾಡಳಿತಗಳು ನಿರ್ವಹಿಸುತ್ತಿದ್ದವು. ಪ್ರಾಂತಾಡಳಿತಾಧಿಕಾರಿಗಳು ಪ್ರಜೆಗಳಿಗೆ ನೀಡುವ ನ್ಯಾಯ ತೀರ್ಮಾನಗಳ ಬಗೆಗೆ ಅಸಮಾಧಾನವಿದ್ದರೆ ಸಂಬಂಧಿಸಿದವರು ಚಕ್ರವರ್ತಿಯವರೆಗೂ ತಮ್ಮ ಸಮಸ್ಯೆಗಳನ್ನು ಒಯ್ಯಬಹುದಾಗಿತ್ತು. ಆದರೆ ಅಂತಿಮವಾಗಿ ಚಕ್ರವರ್ತಿಯು ಕೊಟ್ಟ ತೀರ್ಪನ್ನು ಎಲ್ಲರೂ ಒಪ್ಪಲೇಬೇಕಾದುದು ಖಡ್ಡಾಯವಾಗಿತ್ತು.

ಆಡಳಿತ ವ್ಯವಸ್ಥೆಗೆ ದೀರ್ಘವಾದ ಪರಂಪರೆ ಇದೆ. ಬಲಿಷ್ಠವು ಹಾಗೂ ಅತೀ ಬಾಹುಳ್ಯವನ್ನು ಪಡೆದಿದ್ದ ಮೌರ್ಯರ ಆಡಳಿತ ವ್ಯವಸ್ಥೆಯಲ್ಲಿ ಪ್ರಜಾಪಾಲನೆಯ ನಿರ್ವಹಣೆಗೋಸ್ಕರ ಆಡಳಿತವನ್ನು ಪ್ರಾಂತಗಳಲ್ಲಿ ವಿಭಾಗಿಸಿ ಪ್ರಾಂತಾಡಳಿತಾಧಿಕಾರಿಗೆ ವಹಿಸಿಕೊಡುತ್ತಿರುವ ಬಗೆಗೆ ಸಾಕ್ಷಾಧಾರಗಳಿವೆ. ಕರ್ನಾಟಕದಲ್ಲಿ ಸಿಕ್ಕಿರುವ ಅಶೋಕನ ಶಾಸನ (ಮಸ್ಕಿ, ಬ್ರಹ್ಮಗಿರಿ, ಉದಯಗೊಳಲು ಹಾಗೂ ಸನ್ನತ್ತಿ)ಗಳಲ್ಲಿ ಇದು ದಾಖಲಾಗಿದೆ. ಸ್ವರ್ಣಗಿರಿ ದಕ್ಷಿಣದಲ್ಲಿ ಮೌರ್ಯರ ಆಡಳಿತ ಪ್ರಾಂತವಾಗಿತ್ತು. ಇದಕ್ಕೆ ಇಸಿಲಾ ಪಟ್ಟಣ ರಾಜಧಾನಿ ಆಗಿತ್ತು. ಕೇಂದ್ರ ಮೂಲಕ ದಕ್ಷಿಣ ಪ್ರಾಂತದ ಆಡಳಿತವನ್ನು ಮೌರ್ಯ ಅಧಿಕಾರಿಗಳು ನಿರ್ವಹಿಸುತ್ತಿದ್ದರು. ಭಾರತದ ಆಡಳಿತ ವ್ಯವಸ್ಥೆಯ ಇತಿಹಾಸ ಸಂದರ್ಭದಲ್ಲಿ ಗುಪ್ತರ ಕಾಲದಲ್ಲಿ ಒಂದು ಸ್ಪಷ್ಟ ರೂಪವನ್ನು ಪಡೆಯಲಾರಂಭಿಸಿತು ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ವಿಶಾಲವಾದ ಸಾಮ್ರಾಜ್ಯವನ್ನು ಚಕ್ರವರ್ತಿಯು ವಿಷಯ ಹಾಗೂ ಭುಕ್ತಿಗಳಲ್ಲಿ ವಿಭಾಗಿಸಿ, ಅವುಗಳಿಗೆ ಸ್ವತಂತ್ರ ಅಧಿಕಾರಿಗಳನ್ನು ನೇಮಿಸುತ್ತಿದ್ದರು. ಪ್ರಾಂತಾಡಳಿತಾಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಮಂಡಲ ಹಾಗೂ ವಿಷಯಗಳನ್ನು ವಿಭಾಗಿಸಿ ಚಿಕ್ಕ ಪುಟ್ಟ ಘಟಕಗಳನ್ನು ರಚಿಸಿದರು. ವ್ಯವಸ್ಥೆಯು ಭಾರತೀಯ ಊಳಿಗಮಾನ್ಯ ಇತಿಹಾಸಕ್ಕೆ ನಾಂದಿಯಾಗಿದೆ ಎಂದು ವಿದ್ವಾಂಸರುಗಳ ಅಭಿಮತವಾಗಿದೆ. ಕನ್ನಡ ನಾಡಿನ ಆಡಳಿತ ಇತಿಹಾಸ ಸಂದರ್ಭದಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ವಿಸ್ತಾರವಾದ ಸಾಮ್ರಾಜ್ಯವನ್ನು ಆಡಳಿತ ವಿಭಾಗಗಳಾಗಿ ವಿಭಾಗಿಸಿ ಆಡಳಿತ ವ್ಯವಸ್ಥೆ ರೂಪಿಸುವ ಸಂಪ್ರದಾಯಗಳು ಪ್ರಾರಂಭವಾದವು. ರಾಷ್ಟ್ರಕೂಟ ಪೂರ್ವದಲ್ಲಿ ಕದಂಬರು ಹಾಗೂ ಬಾದಾಮಿ ಚಾಲುಕ್ಯರ ಕಾಲದಲ್ಲಿ ಆಡಳಿತ ವಿಭಾಗಗಳ ಉಲ್ಲೇಖಗಳಿದ್ದರೂ ಅವು ನೇರವಾಗಿ ಚಕ್ರವರ್ತಿಯಿಂದಲೇ ನಿರ್ವಹಿಸುತ್ತಿದ್ದವು ಎಂಬುದು ಮುಖ್ಯ ಸಂಗತಿ. ಕಾಲದಲ್ಲಿ ಕೇಂದ್ರಾಡಳಿತ ಅಂದರೆ ಚಕ್ರವರ್ತಿಯ ಒಪ್ಪಿಗೆಯ ಮೇರೆಗೆ ಅಧಿಕಾರಿಗಳನ್ನು ನೇಮಿಸುವ ಹಾಗೂ ಸ್ಥಾನಪಲ್ಲಟಗೊಳಿಸುವ ನಿಯಂತ್ರಣವನ್ನು ರಾಜನೇ ಹೊಂದಿದ್ದನು. ರಾಷ್ಟ್ರಕೂಟರ ಆಡಳಿತಾವಧಿಯಲ್ಲಿ ಸಾಮ್ರಾಜ್ಯವನ್ನು ರಾಷ್ಟ್ರ, ಪ್ರಾಂತ, ದೇಶ, ನಾಡು, ವಿಷಯ, ಭುಕ್ತಿ, ಠಾಣೆ ಹಾಗೂ ಹಳ್ಳಿಗಳೆಂದು ಸ್ಪಷ್ಟವಾಗಿ ವಿಭಾಗಿಸಿರುವ ಗುರುತುಗಳು ಲಭ್ಯವಾಗಿವೆ. ಇವುಗಳ ಆಡಳಿತ ನಿರ್ವಹಣೆಯ ಹೆಚ್ಚಿನ ಜವಾಬ್ದಾರಿಗಳು ಪ್ರಾಂತಾಡಳಿತಾಧಿಕಾರಿಗಳಾದ ಮಹಾಮಂಡಲೇಶ್ವರ ಕಡೆಗೆ ವಾಲಿದವು. ಪ್ರಾಂತವನ್ನು ವಿಭಾಗಿಸಿ ಅವುಗಳಿಗೆ ಅಧಿಕಾರಿಗಳನ್ನು ಗೊತ್ತುಪಡಿಸುವ, ಬಡ್ತಿ ನೀಡುವ ಹಾಗೂ ಕಿತ್ತೊಗೆಯುವ ಸಂಪೂರ್ಣ ಅಧಿಕಾರ ಪ್ರಾಂತಾಡಳಿತಾಧಿಕಾರಿಗಳು ಹೊಂದಿದ್ದರು. ಅಲ್ಲದೇ ಮುಖ್ಯವಾಗಿ ಸ್ವಂತ ಸೈನ್ಯ ವ್ಯವಸ್ಥೆಯನ್ನು ರೂಪಿಸುವ ಪಾರಮ್ಯ ಪ್ರಾಂತಾಡಳಿತಾಧಿಕಾರಿಗಳ ಪಾಲಾಯಿತು. ಇಂಥ ವ್ಯವಸ್ಥೆ ವಿಜಯನಗರ ಆಡಳಿತಾವಧಿಯವರೆಗೆ ಕರ್ನಾಟಕ ಇತಿಹಾಸದಲ್ಲಿ ಮುಂದುವರೆದಿರುವ ದಾಖಲೆಗಳಿವೆ. ಆದರೆ ಪ್ರಾಂತಾಡಳಿತಗಳು ಉಚ್ಛ್ರಾಯ ಸ್ಥಿತಿ ತಲುಪಿದ್ದು ಮಾತ್ರ ಕಲ್ಯಾಣದ ಚಾಲುಕ್ಯರ ಆಡಳಿತಾವಧಿಯಲ್ಲಿ ಎಂಬುದು ಬಹಳ ಮುಖ್ಯವಾದ ವಿಚಾರ. ಗೋದಾವರಿಯಿಂದ ಕಾವೇರಿ ತೀರ ಪ್ರದೇಶಗಳವರೆಗೆ ವಿಶಾಲವಾಗಿ ಹರಡಿದ್ದ ಕಲ್ಯಾಣದ ಚಾಲುಕ್ಯರ ಸಾಮ್ರಾಜ್ಯವು ನೂರಾರು ಪ್ರಾಂತಗಳಲ್ಲಿ ಆಡಳಿತದ ಅನುಕೂಲಕ್ಕಾಗಿ ವಿಭಾಗವಾಗಿತ್ತು. ಪ್ರಾಂತಗಳನ್ನು ದೇಶ, ಮಂಡಲ, ರಾಜ್ಯ, ವಿಷಯ, ಜನಪದ, ಕಂಪಣಗಳೆಂದು ಕರೆಯಲಾಗುತ್ತಿತ್ತು. ಗ್ರಾಮ ಅಥವಾ ಹಳ್ಳಿ ಎಂಬುದು ಆಡಳಿತದ ಕೊನೆಯ ಘಟಕವಾಗಿತ್ತು.

ಆಡಳಿತ ವಿಭಾಗಗಳ ಸಂದರ್ಭಗಳಲ್ಲಿ ಇನ್ನೊಂದು ಮುಖ್ಯವಾದ ಚರ್ಚೆಯ ಸಂಗತಿ ಎಂದರೆ ಆಡಳಿತ ವಿಭಾಗಗಳ ಹೆಸರಿನೊಂದಿಗೆ ಸಂಖ್ಯೆಯನ್ನು ಗೊತ್ತುಪಡಿಸಿರುವುದು. ಪ್ರಂತಗಳ ಹೆಸರಿನೊಂದಿಗೆ ಉಲ್ಲೇಖವಾಗಿರುವ ಸಂಖ್ಯೆಗಳು ಪ್ರಾಂತದಲ್ಲಿದ್ದ ಗ್ರಾಮ ಅಥವಾ ಹಳ್ಳಿಗಳ ಸಂಖ್ಯೆಯೆಂತಲೂ ಕಂದಾಯ ಗ್ರಾಮಗಳೆಂತಲೂ ಹಾಗೂ ೧೨ನೇ ಶತಮಾನದವರೆಗೆ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದ ಮಹಾಜನರ ಸಂಖ್ಯೆ ಗುರುತಿಸುವ ಅಂಶಗಳೆಂದು ವಿದ್ವಾಂಸರು ತಮ್ಮ ಜಿಜ್ಞಾಸೆಗಳನ್ನು ವ್ಯಕ್ತಪಡಿಸಿದ್ದಾರೆ. ನಾನಾ ದೃಷ್ಟಿಕೋನಗಳಲ್ಲಿ ಸಂಶೋಧಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಒಮ್ಮತದ ಅಭಿಪ್ರಾಯದಂತೆ ಆಡಳಿತ ವಿಭಾಗಗಳ ಹೆಸರಿನೊಂದಿಗೆ ಇರುವ ಸಂಖ್ಯೆಯು ಅಲ್ಲಿರುವ (ವಿಭಾಗದ) ಗ್ರಾಮಗಳ ಅಥವಾ ಹಳ್ಳಿಗಳ ಒಟ್ಟು ಮೊತ್ತವಾಗಿರುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ವಿಚಾರ ಎಲ್ಲರಿಗೂ ಮಾನ್ಯವಾದುದು. ಕಲ್ಯಾಣದ ಚಾಲುಕ್ಯರ ಅಧಿಕಾರಾವಧಿಯಲ್ಲಿ ಇಂಥ ನೂರಾರು ಆಡಳಿತ ವಿಭಾಗಗಳು ಉಲ್ಲೇಖಗೊಂಡಿವೆ. ಉದಾಹರಣೆಗೆ ಸಹಸ್ರಮಂಡ (ಒಂದು ಸಾವಿರ ಗ್ರಾಮಗಳ ಒಂದು ಆಡಳಿತ ವಿಭಾಗ), ಸಾಯಿರ ನಾಡು, ಸಾವಿರ ಬಾಡ, ಸಾಸಿರನಾಡು, ಸಾಂತಳಿಗೆ ಸಾವಿರ, ಕೊಲ್ಲಿಪಾಕ ಸಾವಿರ, ಬೆಳ್ವೊಲ ಮುನ್ನೂರು, ಬನವಾಸಿ ಪನ್ನಿರ್ಚ್ಛಾಸಿರ, ಹಾನಗಲ್ಲು ಐನೂರು, ಬಾಸವೂರ ನೂರ ನಲವತ್ತು, ಮಾಫವಾಡಿ ನೂರ ನಲವತ್ತು ಮತ್ತು ಕಿಸುಕಾಡು ಎಪ್ಪತ್ತು ಮುಂತಾದ ಉದಾಹರಣೆಗಳನ್ನು ಶಾಸನಗಳಲ್ಲಿ ಕಾಣುತ್ತೇವೆ. ಕಲ್ಯಾಣದ ಚಾಲುಕ್ಯರ ಆಡಳಿತಾವಧಿಯಲ್ಲಿ ಉಲ್ಲೇಖಗೊಂಡ ಹಾನಗಲ್ಲು ಐನೂರು ಆಡಳಿತ ವಿಭಾಗವು ಮುಖ್ಯವಾದ ವಿಭಾಗವಾಗಿತ್ತು. ಇದು ಪ್ರತ್ಯೇಕ ಸರಿಸುಮಾರು ಮಹಾಮಂಡಲೇಶ್ವರನನ್ನು ಹಾಗೂ ರಾಜಕೀಯ ಅಧಿಕಾರವನ್ನು ಹೊಂದಿ ಸರಿಸುಮಾರು ಮೂರು ಶತಮಾನಗಳ ಕಾಲ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಸ್ತಿತ್ವದಲ್ಲಿತ್ತು ಎಂಬುದನ್ನು ನೋಡುತ್ತೇವೆ. ವಿಭಾಗವು ೫೦೦ ಗ್ರಾಮಗಳನ್ನೊಳಗೊಂಡಿತ್ತು. ಗ್ರಾಮಗಳು ಒಂಬತ್ತು ಕಂಪಣಗಳಲ್ಲಿ ಹಂಚಿಕೆಯಾಗಿದ್ದವು.

ಹಾನಗಲ್ಲ ಇವುಗಳಿಗೆಲ್ಲ ಕೇಂದ್ರ (ರಾಜಧಾನಿ)ವಾಗಿತ್ತು. ಸ್ಥಳದಿಂದಲೇ ಕಲ್ಯಾಣದ ಚಾಲುಕ್ಯರ ಸಾಮಾಂತಾಧಿಕಾರಿಗಳಾದ (ಮಹಾಮಂಡಲೇಶ್ವರರು) ಹಾನಗಲ್ಲ ಕದಂಬರು ಸುಮಾರು ೩೦೦ ವರ್ಷಗಳ ರಾಜ್ಯಭಾರ ಮಾಡಿದರು. ಶಾಸನಾಧಾರಗಳಿಂದ ಕಂಪಣಗಳಲ್ಲಿರುವ ನಿರ್ದಿಷ್ಟ ಸಂಖ್ಯೆಯ ಹಳ್ಳಿಗಳಲ್ಲಿ ಕೆಲವನ್ನು ಗುರುತಿಸುವ ಪ್ರಯತ್ನವನ್ನು ವಿದ್ವಾಂಸರು ಮಾಡಿದ್ದಾರೆ.

ಹಾನಗಲ್ಲ ಕದಂಬರ ಐತಿಹಾಸಿಕ ಭೂಗೋಲ

ಹಾನಗಲ್ಲ ಕದಂಬರ ಕುರಿತಂತೆ ಸುಮಾರು ಐವತ್ತು ಶಾಸನಗಳು ಪ್ರಕಟಗೊಂಡಿವೆ. ಅಲ್ಲದೇ ಮನೆತನಕ್ಕೆ ಸಂಬಂಧಿಸಿದ ಮೌಲ್ಯಯುತ ಬಿಡಿ ಲೇಖನಗಳನ್ನು ಹಾಗೂ ಟಿಪ್ಪಣಿಗಳನ್ನು ಹಲವು ಸಂಶೋಧಕರು ಪ್ರಕಟಿಸಿದ್ದಾರೆ. ಇವೆಲ್ಲವುಗಳನ್ನಿಟ್ಟುಕೊಂಡು ಸ್ಥೂಲವಾದ ರಾಜಕೀಯ ಚರಿತ್ರೆಯನ್ನು ವಿವರಿಸುವ ಪ್ರಯತ್ನ ಮಾಡಲಾಗಿದೆ. ಹಾನಗಲ್ಲ ಆಡಳಿತ ವಿಭಾಗವು ರಾಷ್ಟ್ರಕೂಟರ ಕಾಲದಲ್ಲಿ ಹಾಗೂ ಕಲ್ಯಾಣದ ಚಾಲುಕ್ಯರ ಸಾಮ್ರಾಜ್ಯಗಳ ಪಶ್ಚಿಮ ಗಡಿಯಲ್ಲಿರುವ ಪ್ರಮುಖ ವಿಭಾಗವಾಗಿತ್ತು. ಅರಮಲೆ ನಾಡಿನ ಹವಾಗುಣದಿಂದ ಕೂಡಿದ ಪ್ರದೇಶವು ಅತ್ಯಂತ ಸಂಪದ್ಭರಿತವಾಗಿತ್ತು. ಸದಾಕಾಲ ಮಳೆನಿರು ಹಾಗೂ ಕೆರೆ ನೀರಾವರಿಯ ಅನುಕೂಲ ಹೊಂದಿತ್ತು. ಪ್ರದೇಶವು ಕಪ್ಪು ಮಣ್ಣಿನ ಫಲವತ್ತಾದ ಭೂಮಿಯನ್ನು ಹೊಂದಿದೆ. ಅಪಾರವಾದ ಪ್ರಾಣಿ ಹಾಗೂ ಅರಣ್ಯ ಸಂಪತ್ತು ರಾಜ್ಯದ ಬೊಕ್ಕಸಕ್ಕೆ ಸದಾ ಸಂಪತ್ತನ್ನು ಹರಿಸುವ ಬತ್ತದ ಝರಿಯಂತೆ ಕಾರ್ಯ ನಿರ್ವಹಿಸುತ್ತಿದ್ದವು. ಅಲ್ಲದೇ ವಿಸ್ತಾರವಾದ ಸಾಮ್ರಾಜ್ಯಗಳ ಗಡಿರೇಖೆಯನ್ನು ರಕ್ಷಿಸುವ ಆಯಕಟ್ಟಿನ ಪ್ರದೇಶವಾಗಿತ್ತು. ಹೀಗಾಗಿ ಇದರ ಮೇಲಿನ ಪಾರಮ್ಯಕ್ಕಾಗಿ ಎಲ್ಲ ರಾಜಮನೆತನಗಳು ಬಡಿದಾಡಿಕೊಂಡಿರುತ್ತಿದ್ದವು. ಸಾಗರೋತ್ಪನ್ನ ವ್ಯಾಪಾರಕ್ಕೆ ಪ್ರವೇಶದ ಹೆಬ್ಬಾಗಿಲಿನಂತಿದ್ದ ಹಾನಗಲ್ಲ ಪ್ರದೇಶವು ಇತಿಹಾಸಪೂರ್ವ ಕಾಲದಿಂದಲೂ ಬನವಾಸಿ ಕದಂಬರ ಆಳ್ವಿಕೆಗೆ ಒಳಪಟ್ಟಿತ್ತು. ಕರ್ನಾಟಕ ರಾಜಕೀಯ ರಂಗಪರದೆಯಿಂದ ಕದಂಬರು ಮರೆಯಾದ ನಂತರ ಬಾದಾಮಿ ಚಾಲಿಕ್ಯರು ಬಹುದೂರ ಬಾದಾಮಿಯಿಂದ ತಮ್ಮ ಆಡಳಿತಾಧಿಕಾರಿಗಳನ್ನು ನೇಮಿಸಿ ವಿಭಾಗದ ಆಡಳಿತ ನಿರ್ವಹಿಸಿದರು. ಆದರೆ ಪ್ರದೇಶದ ಮೇಲೆ ಸಂಪೂರ್ಣ ಸ್ವಾಮ್ಯವನ್ನು ಪಡೆದ ಮೊದಲಿಗರೆಂದರೆ ರಾಷ್ಟ್ರಕೂಟರು. ಚಕ್ರವರ್ತಿ ಕಕ್ಕನ ಆಡಳಿತಾಧಿಕಾರಿಯಾಗಿ ಚಟ್ಟಯ್ಯದೇವನೆಂಬವನು ಆಳ್ವಿಕೆ ಮಾಡಿರುವ ಮೂಲ ಪುರುಷ ಎಂದು ಇತಿಹಾಸಕಾರರು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇವರು ತಮ್ಮ ಬಿರುದುಗಳ ಬಗೆಗೆ ಉಲ್ಲೇಖಗಳಿವೆ. ಈತನೇ ಹಾನಗಲ್ಲ ಕದಂಬ ಶಾಖೆಯ ಬನವಾಸಿ ಪುರುವರಾಧೀಶ್ವರರು ಎಂದು ಸಂಬೋಧಿಸಿಕೊಂಡಿರುವ ಹಿನ್ನೆಲೆಯಲ್ಲಿ ಆದಿಕದಂಬ ವಂಶಸ್ಥರ ಮುಂದುವರೆದ ಶಾಖೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ. ಕ್ರಿ.. ೯೬೯ರಲ್ಲಿ ರಾಷ್ಟ್ರಕೂಟ ಸಾಮಂತನಾಗಿ ಆಳ್ವಿಕೆ ಮಾಡಿದ ಚಟ್ಟಯ್ಯ ರಾಜಕೀಯ ಚದುರಂಗದಾಟದಲ್ಲಿ  ಸ್ಥಾನಪಲ್ಲಟಗೊಂಡು ರಾಷ್ಟ್ರಕೂಟ ನಂತರ ಅಧಿಕಾರಕ್ಕೆ ಬಂದ. ಕಲ್ಯಾಣದ ಚಾಲುಕ್ಯ ಇಮ್ಮಡಿ ತೈಲಪನ ಆಡಳಿತಾವಧಿಯಲ್ಲಿ ಇದೇ ಪ್ರದೇಶದ ಮಂಡಲಾಧಿಪತಿಯಾಗಿ ನೇಮಕಗೊಳ್ಳುತ್ತಾನೆ. ಈತನ ಸಾಮರ್ಥ್ಯವನ್ನು ಕಂಡ ಚಾಲುಕ್ಯ ಅರಸ ಸಾಂತಳಿಗೆ ಸಾವಿರ ನಾಡಿನ ಹಕ್ಕನ್ನು ಸಹ ನೀಡುತ್ತಾನೆ. ಪ್ರಾರಂಭದಲ್ಲಿ ಬನವಾಸಿಯನ್ನು ಆಡಳಿತ ಕೇಂದ್ರವನ್ನಾಗಿ (ರಾಜಧಾನಿ) ಮಾಡಿಕೊಂಡು ಅಧಿಕಾರ ನಿರ್ವಹಿಸಿದ. ಚಟ್ಟಯ್ಯನು ಚಾಲುಕ್ಯ ಅರಸರ ಆಪದ್ಬಾಂಧವನಾಗಿ ರೂಪುಗೊಳ್ಳುತ್ತಾನೆ. ಚೋಳರು ಮಾನ್ಯಖೇಟದ ಮೇಲೆ ದಾಳಿ ಮಾಡಿದಾಗ ಚಕ್ರವರ್ತಿ ಎರಡನೆ ಜಯಸಿಂಹನ ಪಕ್ಷವಹಿಸಿ ಚಾಲುಕ್ಯರ ಗೆಲುವಿಗೆ ಕಾರಣನಾಗುತ್ತಾನೆ. ಅನೇಕ ಯುದ್ಧಗಳು ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡಿದ ಚಟ್ಟಯ್ಯನ ಬಗೆಗೆ ಕ್ರಿ.. ೧೦೧೫ರ ನಂತರ ಯಾವ ಉಲ್ಲೇಖಗಳೂ ಲಭ್ಯವಾಗುವುದಿಲ್ಲ.

ಚಟ್ಟಯ್ಯನ ನಂತರ ಆತನ ಮಗ ಜಯಸಿಂಹ ಆಳ್ವಿಕೆ ಮಾಡಿದ್ದಾನೆ. ಆದರೆ ಆತನ ಬಗೆಗೂ ಹೆಚ್ಚಿನ ಮಾಹಿತಿಗಳು ತಿಳಿದುಬಂದಿಲ್ಲ. ಇದೇ ವೇಳೆಗೆ ಕಲ್ಯಾಣದ ಚಾಲುಕ್ಯರ ಸಾಮ್ರಾಜ್ಯದ ಅಧಿಪತಿಯಾಗಬೇಕೆಂದು ದಾಯಾದಿ ಮತ್ಸರ ಪ್ರಾರಂಭವಾಗುತ್ತದೆ. ಇಮ್ಮಡಿ ಸೋಮೇಶ್ವರನಿಂದಾಗಿ ಆರನೆಯ ವಿಕ್ರಮಾದಿತ್ಯ ಕೆಲವು ವರ್ಷ ಅತಂತ್ರನಾಗಿ ಅಲೆದಾಡುತ್ತಿರುತ್ತಾನೆ. ಸಂದರ್ಭದಲ್ಲಿ ತನ್ನ ಮರುಸ್ಥಾಪನೆಗಾಗಿ ಸಾಮಂತಾಧಿಕಾರಿಗಳ ಬೆಂಬಲ ಪಡೆಯುವ ಪ್ರಯತ್ನದಲ್ಲಿ ಅಲೆದಾಟದಲ್ಲಿ ನಿರತನಾಗಿರುತ್ತಾನೆ. ಇಮ್ಮಡಿ ಸೋಮೇಶ್ವರನ ವಿರುದ್ಧವಾಗಿ ಹಾಗೂ ಆರನೆಯ ವಿಕ್ರಮಾದಿತ್ಯನ ಪಕ್ಷವಹಿಸಿ ಹಾನಗಲ್ಲ ಕದಂಬ ಅರಸ ಕೀರ್ತಿವರ್ಮ ಬೆಂಬಲ ನೀಡುತ್ತಾನೆ. ಇದರಿಂದ ಕುಪಿತನಾದ ಇಮ್ಮಡಿ ಸೋಮೇಶ್ವರ ಹಾನಗಲ್ಲ ಕದಂಬರಿಗಿದ್ದ ಅಧಿಕಾರವನ್ನು ಹಿಂತಿರುಗಿ ಪಡೆದು ಅವನನ್ನು ಪದಚ್ಯುತಗೊಳಿಸುತ್ತಾನೆ. ಹೀಗಾಗಿ ಆತನ ಅಧಿಕಾರ ಈಗ ಕೇವಲ ಬನವಾಸಿ ಕೇಂದ್ರಕ್ಕೆ ಮಾತ್ರ ಸೀಮಿತವಾಗಿದೆ. ಮತ್ತೆ ಕ್ರಿ.. ೧೦೮೭ರಲ್ಲಿ ಆರನೆಯ ವಿಕ್ರಮಾದಿತ್ಯ ಹಾನಗಲ್ಲ ಕದಂಬರ ವಂಶದ ಶಾಂತಿವರ್ಮನಿಗೆ ಎಲ್ಲ ಅಧಿಕಾರವನ್ನು ಮರಳಿ ನೀಡುತ್ತಾನೆ. ಈತನ ನಂತರ ಅಧಿಕಾರಕ್ಕೆ ಬಂದ ತೈಲಪದೇವ ಹಾಗೂ ಆತನ ಮಗ ಮಯೂರವರ್ಮನು ಹೊಯ್ಸಳ ದಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ತಮ್ಮ ಗಡಿರೇಖೆಗಳನ್ನು ಉಳಿಸಿಕೊಳ್ಳುತ್ತಾರೆ. ಮಲ್ಲಕಾರ್ಜುನ ಕಾಲದಲ್ಲಂತೂ ಹೊಯ್ಸಳರ ರಾಜ್ಯಕ್ಕೆ ನುಗ್ಗಿ ಲಕ್ಕುಂಡಿಯವರೆಗೆ ತನ್ನ ದಂಡಯಾತ್ರೆಯನ್ನು ಮುಂದುವರೆಸಿರುವ ಉಲ್ಲೇಖಗಳಿವೆ. ಕ್ರಿ.. ೧೧೬೧೭೫ರವರೆಗೆ ಆಳಿದ ಕೀರ್ತಿವರ್ಮನು ಕಲ್ಯಾಣದ ಚುಕ್ಕಾಣಿ ಹಿಡಿದ ಕಲಚೂರಿಗಳ ಪರವಹಿಸಿ ಬಿಜ್ಜಳನನ್ನು ತನ್ನ ಚಕ್ರವರ್ತಿಯಾಗಿ ಸ್ವೀಕರಿಸುತ್ತಾನೆ. ಕೆಲವೇ ವರ್ಷಗಳಲ್ಲಿ ಅಸ್ತಂಗತವಾದ ಕಲಚೂರಿಗಳ ನಂತರ ರಾಜಕೀಯ ಅಸ್ಥಿರತೆಯನ್ನು ಉಪಯೋಗಿಸಿಕೊಂಡು ಹಾನಗಲ್ಲ ಕದಂಬ ಅರಸ ಕಾಮದೇವ (೧೧೮೦೧೨೧೭) ಸ್ವತಂತ್ರ ಚಕ್ರವರ್ತಿಯೆಂದು ಘೋಷಿಸಿಕೊಂಡು  ಅವರ ಬಿರುದಾವಳಿಗಳನ್ನು ಪಡೆದುಕೊಳ್ಳುತ್ತಾನೆ. ಮತ್ತೆ ರಾಜಕೀಯ ವಿಪ್ಲವಗಳಿಂದ ಆದ ಪರಿಣಾಮದಿಂದ ಸೇವುಣರ ಪಕ್ಷ ವಹಿಸಿ ಹಾನಗಲ್ಲ ಕದಂಬರು ಆಡಳಿತ ನಿರ್ವಹಿಸುತ್ತಾರೆ. ಕೊನೆಯ ಅರಸ ಮಲ್ಲಿದೇವನ ಬಗೆಗೆ ಕ್ರಿ.. ೧೨೫೨ರವರೆಗಿನ ದಾಖಲೆಗಳು ಲಭ್ಯವಾಗುತ್ತವೆ. ಇವನ ನಂತರವೂ ಹಲವರು ಆಡಳಿತ ವಿಭಾಗವನ್ನು ಆಳಿದ್ದರೂ ಅವರ ಬಗೆಗೆ ಸ್ಪಷ್ಟವಾದ ಮಾಹಿತಿಗಳ ಕೊರತೆಯಿದೆ.

ಹಾನಗಲ್ಲಐನೂರು ಆಡಳಿತ ವಿಭಾಗ

ಪ್ರಾಚೀನ ಪಾಂಕ್ತಿಪುರ (ಹಾನಗಲ್ಲ)ವನ್ನು ಕೇಂದ್ರವನ್ನಾಗಿಟ್ಟುಕೊಂಡು ಹಾನಗಲ್ಲ ಕದಂಬರು ಸುಮಾರು ಎರಡೂವರೆ ಶತಮಾನಗಳ ಕಾಲ ಆಡಳಿತ ನಿರ್ವಹಿಸಿದರು. ಮಂಡಳೇಶ್ವರರಾಗಿ ನಂತರ ಮಹಾಮಂಡಳೇಶ್ವರ ಸ್ಥಾನಮಾನಗಳವರೆಗೂ ಎತ್ತರಕ್ಕೆ ಏರಿದರು. ಹಾನಗಲ್ಲ ಕದಂಬ ಅರಸ ತೈಲಪದೇವನ ಕಾಲದ ಒಂದು ಶಾಸನವು ತ್ರಿಭೋಗವಾಗಿ ಆಳುತ್ತಿದ್ದರೆಂದು ಉಲ್ಲೇಖಿಸುತ್ತಿದೆ. ವಿದ್ವಾಂಸರಾದ ಎಂ. ಚಿದಾನಂದಮೂರ್ತಿಯವರು ತ್ರಿಭೋಗ ಎಂಬ ಶಬ್ದವನ್ನು ಅರ್ಥೈಸುತ್ತಾ ಮೂರು ತಲೆಮಾರುಗಳಿಂದ ರಾಜ್ಯವನ್ನು ಆಳುತ್ತಿದ್ದವರು ಎಂಬ ವಿವರಣೆ ನೀಡಿದ್ದಾರೆ. ಹತ್ತಾರು ದಶಕಗಳ ಕಾಲ ಹಾನಗಲ್ಲ ಕದಂಬರು ತಮ್ಮ ಅಧಿಕಾರವನ್ನು ಅವಿಚ್ಛಿನ್ನವಾಗಿ ಮುಂದುವರೆಸಿಕೊಂಡು ಹೋಗಿದ್ದಾರೆ. ಅಲ್ಲದೇ ಬಹಳ ಮುಖ್ಯವಾದ ಇನ್ನೊಂದು ಸಂಗತಿಯೆಂದರೆ ಸಾಮಂತ ಅಧಿಕಾರಿಗಳ ಹಕ್ಕುಸ್ವಾಮ್ಯ ಯಾವಾಗಲೂ ರಾಜನ ಕಾಲಚೆಂಡಿನಂತೆ. ಅಂದರೆ ಅದು ಸದಾ ಬದಲಾಗುವ ಕ್ರಿಯೆಗೆ ಒಳಗಾಗುತ್ತಿರುವಂಥದ್ದು. ಇಂಥ ಸ್ಥಿತಿಯಲ್ಲಿ ಹಾನಗಲ್ಲ ಕದಂಬರು ತಮ್ಮ ಚಾಣಾಕ್ಷತನದಿಂದ ಹಾಗೂ ಸಾಮರ್ಥ್ಯದಿಂದ ಕಲ್ಯಾಣದ ಚಾಲುಕ್ಯರಿಗೂ ಹಾಗೂ ಗೋವೆಯ ಕದಂಬರಿಗೆ ಅಧೀನರಾಗಿ ಯಾವುದೇ ಸಮಸ್ಯೆಗಳಿಲ್ಲದೆ ರಾಜ್ಯಭಾರ ಮಾಡಿದರು. ಆದ್ದರಿಂದ ಶಾಸನಗಳಲ್ಲಿ ಅವರನ್ನು ಉಭಯ ಸ್ವಾಮ್ಯದಿಂದ ಆಳುತ್ತಿರುವವರೆಂದು ಉಲ್ಲೇಖಿಸಲಾಗಿದೆ.

ಕ್ರಿ.. ೧೧೧೩ನೇ ಶತಮಾನದ ಕರ್ನಾಟಕದಲ್ಲಿದ್ದಂತಹ ಆಡಳಿತ ವ್ಯವಸ್ಥೆ ಹಾನಗಲ್ಲ ಕದಂಬರ ಪ್ರಾಂತದಲ್ಲಿತ್ತು. ಪ್ರಾಂತಾಡಳಿತವನ್ನು ಆಡಳಿತದ ಅನುಕೂಲಕ್ಕಾಗಿ ಕಂಪಣಗಳಲ್ಲಿ ವಿಭಾಗಿಸಿದ್ದರು. ಕಂಪಣಗಳು ಇಂದಿನ ಹಾನಗಲ್ಲ, ಶಿಗ್ಗಾವಿ, ಹಾವೇರಿ, ರಾಣೆಬೆನ್ನೂರು (ಹಾವೇರಿ ಜಿಲ್ಲೆ), ಮುಂಡಗೋಡ, ಸಿದ್ಧಾಪುರ (ಉತ್ತರ ಕನ್ನಡ ಜಿಲ್ಲೆ), ಸೊರಬ (ಶಿವಮೊಗ್ಗ ಜಿಲ್ಲೆ) ಹಾಗೂ ಕುಂದಗೋಳ (ಧಾರವಾಡ) ತಾಲೂಕಾ ಪ್ರದೇಶಗಳಲ್ಲಿ ಹಂಚಿರುವ ಬಗೆಗೆ ಶಾಸನಾಧಾರಗಳಿಂದ ತಿಳಿಯುತ್ತೇವೆ. ಆದರೆ ಮುಖ್ಯವಾಗಿ ಅವರ ಆಡಳಿತ ವಿಭಾಗವು ಕೇಂದ್ರೀಕರಣಗೊಂಡಿರುವುದು ಹಾನಗಲ್ಲ ತಾಲೂಕಿನಲ್ಲಿ ಎಂಬುದು ಗಮನಾರ್ಹವಾದುದು. ಏಳಂಬಿ೨೦, ಹೊಸನಾಡು೧೨, ಕುಂದುವರ೩೧ (ಶಿಗ್ಗಾವ ತಾಲೂಕು), ಎಡೆವೊಳಲ್೭೦, ಏಳಂಬಿ೭೦ (ಹಾನಗಲ್ಲ ತಾಲೂಕ), ಕೊಂಡರಟ್ಟಿ೭೦, ಹೊಸನಾಡು೭೦, ಬಾಗಲೆ೭೦, ಮುಂಡಗೋಡ, ಹಂಚಿಕೆಯಾಗಿರುವ ಶಿರಸಿ ಸೀಮೆಯಲ್ಲಿಯೂ ಹಾಗೂ ಎರಡು ಜೂಹಳಿಗೆ೭೦, ಸಿದ್ಧಾಪುರ ತಾಲೂಕಿನಲ್ಲಿ ಹರಡಿಕಂಪಣಗಳಾಗಿವೆ. ಇಲ್ಲಿ ಉಲ್ಲೇಖವಾಗಿರುವ ಕಂಪಣಗಳ ಹೆಸರಿನೊಂದಿಗಿರುವ ಸಂಖ್ಯೆಗಳನ್ನೆಲ್ಲ ಕೂಡಿಸಿದರೆ ಒಟ್ಟು ೪೮೨ ಗ್ರಾಮಗಳ ಸಂಖ್ಯೆ ಪಟ್ಟಿ ಸಿದ್ಧವಾಗುತ್ತದೆ ಎಂದು ವಿದ್ವಾಂಸರಾದ ಚೆನ್ನಕ್ಕ ಪಾವಟೆ ಅವರು ಅಭಿಪ್ರಾಯಿಸುತ್ತಾರೆ. ಬಹುಶಃ ೧೨ ಹಳ್ಳಿಗಳಿರುವ ಇನ್ನೊಂದು ಕಂಪಣದ ಬಗೆಗೆ ಸಂಶೋಧನೆ ಅಗತ್ಯವಾಗಿದೆ. ಕಂಪಣಗಳ ಹೆಸರಿನೊಂದಿಗಿರುವ ಸಂಖ್ಯೆಯ ಬೆನ್ನತ್ತಿ ಗ್ರಾಮಗಳನ್ನು ಸಂಶೋಧಿಸುವ ಪ್ರಯತ್ನ ಮಾಡಿದರೆ ಅದರ ಸಂಪೂರ್ಣ ವಿವರ ಸಿಗುವುದು ಕಷ್ಟಸಾಧ್ಯವಾಗಿದೆ.

ಒಂಬತ್ತು ಕಂಪಣಗಳ ಭೌಗೋಳಿಕ ಕ್ಷೇತ್ರದಲ್ಲಿ ಸಿಕ್ಕಿರುವ ಶಾಸನಗಳಲ್ಲಿ ಅವುಗಳಲ್ಲಿರುವ  ಕೆಲವು ಗ್ರಾಮಗಳ ಬಗೆಗೆ ಉಲ್ಲೇಖಗಳಿವೆ. ಗ್ರಾಮಗಳಲ್ಲಿರುವ ದೇವಾಲಯ, ಕೆರೆಕಟ್ಟೆ, ಭೂಮಿದಾನ ಹಾಗೂ ಹಕ್ಕುಬಾಧ್ಯತೆಗಳನ್ನು ನೀಡಿರುವ ಉಲ್ಲೇಖಗಳಿವೆ. ಇಂಥ ದಾನ ಶಾಸನಗಳು ಹಾನಗಲ್ಲ ಕದಂಬರ ಸಮಾಜೋಧಾರ್ಮಿಕ ಕಾರ್ಯಗಳನ್ನು ತಿಳಿಸುತ್ತವೆ. ಹಾನಗಲ್ಲ೫೦೦ ಆಡಳಿತ ವಿಭಾಗದಲ್ಲಿ ಶಿಕ್ಷಣ ಕುರಿತಂತೆ ಅಗ್ರಹಾರದ ಉಲ್ಲೇಖವು ಇದೆ. ಏಳಂಬಿ೨೦ರ ಕಂಪಣದಲ್ಲಿ ಬರುವ ನೀರಲಗಿಯಲ್ಲಿ ಅಗ್ರಹಾರ ಇತ್ತೆಂಬುದು ಗಮನಾರ್ಹವಾದುದು. ಕಾಲದ ಶಾಸನಗಳು ಶೈವಾಚಾರ್ಯರ ಬಗೆಗೆ ಉಲ್ಲೇಖಿಸಿವೆ. ಮುಖ್ಯವಾಗಿ ಆಡಳಿತ ವಿಭಾಗದಲ್ಲಿರುವ ಶಾಸನ ಮಾಹಿತಿಗಳಲ್ಲಿ ಚಿಕ್ಕಪುಟ್ಟ ಮನೆತನಗಳ ಬಗೆಗೂ ವಿವರವಿದೆ. ಉದಾಹರಣೆಗೆ ಚಲ್ಲಕೇತನ, ಸಿಂದಮನೆತನ, ಗೋದವರ ಮನೆತನಗಳ ಬಗೆಗೆ ಉಲ್ಲೇಖಿಸಲಾಗಿದೆ. ಆಡಳಿತ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಭುಗಾವುಂಡರ, ದಂಡನಾಯಕರ, ಮಹಾಪ್ರಧಾನರ ಅನೇಕ ಹೆಸರಿನ ಉಲ್ಲೇಖಗಳು ಶಾಸನದಲ್ಲಿವೆ.

ಸುಮಾರು ೨೫೦ ವರ್ಷಗಳ ಕಾಲ ಸಾಮಂತ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ ಹಾನಗಲ್ಲ ಕದಂಬರು, ಹಾನಗಲ್ಲ ೫೦೦ರ ಆಡಳಿತ ವಿಭಾಗದ ಅರಸರಾಗಿ ಆಳಿದರು. ತಮ್ಮ ಚಕ್ರವರ್ತಿಗಳಿಗೆ ವಿಶ್ವಾಸಿಗರಾಗಿ ರಾಜ್ಯದ ಗಡಿರೇಖೆಗಳಿಗೆ ಧಕ್ಕೆ ಒದಗದಂತೆ ಕಾಪಾಡಿಕೊಂಡು ಹೋದರು. ಆಡಳಿತಾತ್ಮಕ ವಿಷಯಗಳಿಗಿಂತ ಸಾಂಸ್ಕೃತಿಕ ಕೊಡುಗೆಗಳನ್ನು ಹಾನಗಲ್ಲ ಕದಂಬರು ನಾಡಿಗೆ ಹೆಚ್ಚಾಗಿ ನೀಡಿದ್ದಾರೆ. ಕನ್ನಡ ನಾಡಿನ ಕಲಾ ಸಂಸ್ಕೃತಿಗೆ, ಹಾನಗಲ್ಲ, ಅರಳೇಶ್ವರ, ಬಾಳಂಬೀಡು, ಬೇಲೂರು ಹಾಗೂ ತಿಳುವಳ್ಳಿ ಮುಂತಾದ ಸ್ಥಾನಗಳಲ್ಲಿ ಅದ್ಭುತವಾದ ಕಲಾಪರಂಪರೆಯನ್ನು ಬೆಳೆಸಿದ್ದಾರೆ. ಆದ್ದರಿಂದ ಮಹತ್ವದ ಕೊಡುಗೆ ನೀಡಿದ ಹಾನಗಲ್ಲ ಕದಂಬರು ಕರ್ನಾಟಕ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.

ಲೇಖನ ಸಿದ್ಧಪಡಿಸುವಲ್ಲಿ ಕೆಳಗೆ ಉಲ್ಲೇಖಿಸಿದ ಗ್ರಂಥಗಳ ಸಹಾಯ ಪಡೆದಿದ್ದೇನೆ. ಆದ್ದರಿಂದ ಇವುಗಳನ್ನು ರಚಿಸಿದ ವಿದ್ವಾಂಸರುಗಳಿಗೆ ನಾನು ಋಣಿ ಹಾಗೂ ಕೃತಜ್ಞತೆಯಿಂದ ನೆನೆಯುತ್ತೇನೆ.

ಅಡಿಟಿಪ್ಪಣಿಗಳು

. ಪ್ರಾಚೀನ ಕರ್ನಾಟಕದ ಆಡಳಿತ ಪಾರಿಭಾಷಾ ಕೋಶ, ಸಂ. ಶ್ರೀನಿವಾಸ ರಿತ್ತಿ, ಪ್ರಾಚ್ಯಶಾಸ್ತ್ರ ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ೨೦೦೦.

. ಗೋದಾವರಿವರಂ ಇರ್ದ ಕನ್ನಡ ನಾಡು, ಜಿ.ಎನ್. ಉಪಾಧ್ಯ, ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, ಮುಂಬಯಿ, ೨೦೦೨.

. ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ, ಸಂಪುಟ ಮತ್ತು , ಪ್ರ. ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು.

. ಸಂಸ್ಕೃತಿ ಸಂಶೋಧನೆ, ಚೆನ್ನಕ್ಕ ಪಾವಟೆ, ಧಾರವಾಡ, ೧೯೯೫.

. ಧಾರವಾಡ ಜಿಲ್ಲೆಯ ಶಾಸನ ಸೂಚಿ, ಸಂ. ಎಂ.ಎಂ. ಕಲಬುರ್ಗಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೫.

. ಸೌತ್ ಇಂಡಿಯನ್ ಇನ್ ಸ್ಕ್ರಿಪ್ಷನ್ಸ್, ಸಂಪುಟ ೧೮.

. ಹರತಿಸಿರಿ, ಸಂ. ಲಕ್ಷ್ಮಣ್ ತೆಲಗಾವಿ, ವಾಲ್ಮೀಕಿ ಸಾಹಿತ್ಯ ಸಂಪದ, ಹರ್ತಿಕೋಟೆ, ೧೯೮೭.

. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಎಂ. ಚಿದಾನಂದಮೂರ್ತಿ, ಸಪ್ನ ಬುಕ್ ಹೌಸ್, ಬೆಂಗಳೂರು, ೨೦೦೨.

. ಕನ್ನಡ ವಿಷಯ ವಿಶ್ವಕೋಶ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೨೦೦೫.

೧೦. ಪ್ರಾಚೀನ ಕರ್ನಾಟಕದ ಆಡಳಿತ ವಿಭಾಗಗಳು, ಸಂಪುಟ , ಎಂ.ಎಂ. ಕಲಬುರ್ಗಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.

೧೧. ಮಲೆಕರ್ನಾಟಕದ ಅರಸು ಮನೆತನಗಳು, ಸಂ. ರಾಜಾರಾಮ ಹೆಗಡೆ, ಅಶೋಕ ಶೆಟ್ಟರ್, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೧.

೧೨. The Kadamba Kula, George M. Muress, New Delhi, 1990.

೧೩. The Minor Dynasties of Karnataka, B.R. Gopal, Mysore.

೧೪. ಆರನೆಯ ವಿಕ್ರಮಾದಿತ್ಯನ ಶಾಸನಗಳು : ಒಂದು ಅಧ್ಯಯನ, ಜೆ.ಎಂ. ನಾಗಯ್ಯ, ಬೆಳಗಾವಿ, ೧೯೯೨.