ಪರಸ್ಪರ ಸಂಬಂಧವುಳ್ಳ ಜನತೆಯ ವ್ಯವಸ್ಥಿತ ಸಮೂಹವನ್ನು ಸಮಾಜವೆಂದು ಕರೆಯಬಹುದು. ಅವರಲ್ಲಿ ವರ್ಣವರ್ಗ, ಕುಟುಂಬ, ಸಂಘಸಂಸ್ಥೆ ಮತ್ತು ಅವುಗಳ ಆಲೋಚನಾ ಕ್ರಮ ಇತ್ಯಾದಿ ಅಂಶಗಳಿದ್ದು, ಅವು ಆಯಾ ಸಾಮಾಜಿಕ ಒಪ್ಪಿತ ಮೌಲ್ಯಕ್ಕೆ ಬದ್ಧವಾಗಿರುತ್ತವೆ. ಅಂದರೆ ಅನುಕೂಲ ಮತ್ತು ಭದ್ರತೆಗೆ ಒಂದು ಬಗೆಯ ಒಪ್ಪಂದವೇರ್ಪಟ್ಟಿರುತ್ತದೆ. ವ್ಯವಸ್ಥೆಯು ವೇದಪೂರ್ವ, ವೇದ ಮತ್ತು ವೇದೋತ್ತರ ಕಾಲದಿಂದ ಮುನ್ನಡೆದುಕೊಂಡು ಬಂದಿದ್ದು, ಅದರಲ್ಲಿ ಮಹತ್ತರವಾದ ಬದಲಾವಣೆಗಳೇನೂ ಕಾಣುವುದಿಲ್ಲವಾದರೂ, ಸಂದರ್ಭಕ್ಕೆ ತಕ್ಕಂತೆ ಕೆಲವು ಬದಲಾವಣೆಗಳು ಕಾಲಕಾಲದಲ್ಲಿ ಕಾಣಬಹುದಾಗಿದೆ. ಬದಲಾವಣೆಗಳನ್ನು ಗುರುತಿಸುವಲ್ಲಿ ಆಯಾ ಕಾಲದ ಶಾಸನ, ಸಾಹಿತ್ಯ, ಪ್ರಚ್ಯಾವಷೇಶ ಮುಂತಾದ ಆಕರಗಳು ಉಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತವೆ.

ವರ್ಗವರ್ಣಜಾತಿ

ಪ್ರಾಚೀನ ವರ್ಣಪದ್ಧತಿ ರೂಪಗೊಳ್ಳುವುದಕ್ಕಿಂತ ಮೊದಲು ಸಮಾಜವನ್ನು ವೃತ್ತಿಗನುಗುಣವಾದ ವರ್ಗೀಕರಣ ಮಾಡಲಾಗಿತ್ತು. ವೃತ್ತಿಗಳು ತೀರ ಪ್ರಾಚೀನ ಕಾಲದಲ್ಲಿಯೇ ಜಾತಿಗಳಾಗಿ ರೂಪುಗೊಂಡಿದ್ದವೇ ಎಂಬುದರ ಬಗ್ಗೆ ತೀವ್ರವಾದ ಭಿನ್ನಾಭಿಪ್ರಾಯವಿದೆ. ಅಲ್ಲದೆ ವೃತ್ತಿಗಳು ವಂಶಾನುಗತಗಳಾಗಿದ್ದವೆಂದು ತೋರಿಸಲು ಯಾವ ಆಧಾರಗಳೂ ಇಲ್ಲ. ಹಾಗೆ ನೋಡಿದರೆ ವರ್ಣ ಎಂಬ ಶಬ್ದ ಜಾತಿಸೂಚಕವಾಗಿರದೆ, ಅದು ಹೊರಗಿನಿಂದ ಬಂದ ಆರ್ಯಾರು ಮತ್ತು ಇಲ್ಲಿನ ಮೂಲನಿವಾಸಿಗಳ ನಡುವಣ ವ್ಯತ್ಯಾಸವನ್ನು (ಭಾಷೆ, ಮತ,ಧರ್ಮ,ಬಣ್ಣ,ಆಕಾರಗಳಲ್ಲಿ) ಸೂಚಿಸುವ ಪದವಾಗಿತ್ತೆಂದು ತಿಳಿಯಲಾಗಿದೆ. ನಂತರದಲ್ಲಿ ವಿವಿಧ ವೃತ್ತಿಗಳಲ್ಲಿನ ಭೇದವು ಸಾಮಾಜಿಕವಾಗಿ ಮೇಲುಕೀಳು ಭಾವನೆಗೆ ಎಡೆಮಾಡಿ, ಚಾತುರ್ವರ್ಣಗಳಿಗೆ ಹಾದಿ ಮಾಡಿಕೊಟ್ಟಿರುವಂತಿದೆ. ವ್ಯವಸ್ಥೆ ಬ್ರಾಹ್ಮಣಗಳ ಕಾಲಕ್ಕೆ ಇನ್ನಷ್ಟು ಬಿಗಿಗೊಳಿಸಲ್ಪಟ್ಟು ವೃತ್ತಿ ವ್ಯತ್ಯಾಸ ಹಿಮ್ಮೆಟ್ಟಿ ವ್ಯಕ್ತಿಯ ಹುಟ್ಟು, ವರ್ಣವನ್ನು ನಿರ್ಣಯಿಸುವಂತಾಯಿತು.

[1]

ಪ್ರಾಚೀನ ಕರ್ನಾಟಕದಲ್ಲಿ ವರ್ಣಪದ್ಧತಿಯ ಪರಿಪಾಲನೆಯು ಬಹುಮಟ್ಟಿಗೆ ಕಡಿಮೆಯಾಗಿದ್ದು ತಿಳಿದುಬರುತ್ತದೆ. ಹಾನಗಲ್ಲು ಶಾಸನಗಳಲ್ಲಿ ಅದು ಸಾಂಪ್ರದಾಯಿಕವಾಗಿ ಉಲ್ಲೇಖಗೊಂಡಿದ್ದರೂ, (ಕ್ರಿ.. ೧೧೧೯ರ ಶಾಸನದಲ್ಲಿ ಬ್ರಾಹ್ಮಣರಿಗೆ ಕೊಟ್ಟ , ಕ್ರಿ.. ೧೧೧೯ರ ಇನ್ನೊಂದು ಶಾಸನದಲ್ಲಿವೇದಪಾರಗರಪ್ಪ ಬ್ರಾಹ್ಮಣರಿಗೆ ಉಭಯಮುಖಿ ಕೊಟ್ಟ ಫಲಮಕ್ಕು…. ದೊಳು ಕವಿತಿಯ ಬ್ರಾಹ್ಮಣರುವಕೊಂದು ಪಂಚಮಹಾ ಪಾ….)[2] ಆಚರಣೆಯಲ್ಲಿರಲಿಲ್ಲ. ಬೇರೆ ಬೇರೆ ವೃತ್ತಿಜಾತಿಗಳ ಜನರು ಊರಿನ ಬೇರೆ ಬೇರೆ ಕೇರಿ, ಬೀದಿಗಳಲ್ಲಿ ವಾಸಿಸುತ್ತಿದ್ದ ಪ್ರಸ್ತಾಪ ಹಾನಗಲ್ಲು ಶಾಸನಗಳಿಂದ ವ್ಯಕ್ತವಾಗುತ್ತದೆ. ಕ್ರಿ.. ೧೨ನೆಯ ಶತಮಾನದ ಶಾಸನವೊಂದರಲ್ಲಿಶ್ರೀ ನನ್ದನ ಪಿಳ್ಳೆಯ ರಾಮೇಸ್ವರ ದೇವರ ತಿಗುಳಬೆವಹಾರಿಗಳ ಕೇರಿಯ ಸೀಮೆ[3] (ತಮಿಳು ವರ್ತಕರ ಓಣಿಯ ಸೀಮೆ) ಎಂದು ಉಲ್ಲೇಖಿಸಿರುವುದರನ್ನು ಗಮನಿಸಿದರೆ, ಎಲ್ಲ ಕಾಲದಲ್ಲಿಯೂ ಕುಲ ಮತ್ತು ವೃತ್ತಿ, ಸಮಾಜದಲ್ಲಿ ಮೇಲುಕೀಳುಗಳೆಂಬ ವರ್ಗಬೇಧವನ್ನುಂಟುಮಾಡಿದ್ದನ್ನು ಕಾಣಬಹುದು.

ಪ್ರಭುವರ್ಗ

ಹಾನಗಲ್ಲಿನ ಶಾಸನಗಳ ಹಿನ್ನೆಲೆಯಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಪ್ರಭುವರ್ಗ ಹಾಗೂ ಶ್ರಮಿಕವರ್ಗವೆಂದು ಸ್ಥೂಲವಾಗಿ ಎರಡು ವಿಭಾಗಗಳಲ್ಲಿ ವಿಂಗಡಿಸಬಹುದು. ಪ್ರಭುವರ್ಗದಲ್ಲಿ ರಾಜ, ಪುರೋಹಿತ, ಸಾಮಂತ, ಮಹಾಮಂಡಳೇಶ್ವರ ಹಾಗೂ ಅವರ ವಿವಿಧ ಅಧಿಕಾರಿಗಳನ್ನೊಳಗೊಂಡು, ಇವೆರಡೂ ವರ್ಗಗಳ ಮಧ್ಯದ ವ್ಯಾಪಾರಿಗಳು ತಮ್ಮ ಆರ್ಥಿಕ ಸುಸ್ಥಿತಿಯಿಂದ ಪ್ರಭುವರ್ಗವನ್ನೇ ಪ್ರತಿನಿಧಿಸುತ್ತಾರೆ. ಅಲ್ಲದೇ ಸಮಾಜ ವ್ಯವಸ್ಥೆಯಲ್ಲಿ ಉನ್ನತ ಸ್ತರದಲ್ಲಿರುವ ವಿವಿಧ ಮತಗಳ ಪುರೋಹಿತರು, ಧರ್ಮ ಮತ್ತು ರಾಜಧರ್ಮವನ್ನು ನಿಯಂತ್ರಿಸುತ್ತಿದ್ದರು. ಅವರಲ್ಲಿ ಮಹಾಜನರು, ಸ್ಥಾನಾಚಾರ್ಯರು ಪ್ರಮುಖರಾಗಿದ್ದಾರೆ. ಶ್ರಮಿಕವರ್ಗದಲ್ಲಿ ಸಮಾಜದ ವಿವಿಧ ವೃತ್ತಿಗಳನ್ನು ಕೈಕೊಂಡ ಜನಸಾಮಾನ್ಯರಿದ್ದರು.

ಹಾನಗಲ್ಲಿನ ಶಾಸನಗಳಲ್ಲಿಕಾದಂಬ ಚಕ್ರವರ್ತಿ ಕಾಮದೇವರಸ[4] ಶ್ರೀಮನ್ಮಹಾಮಣ್ಡಳೇಶ್ವರಂ ತೈಲಪದೇವರಸರು ಬನವಾಸಿ ಪನ್ನಿರ್ಚ್ಛಾಸಿರಮುಮಂ ಪಾನುಂಗಲ್ಲಯ್ನೂಋಮಂ ಸರ್ಬಾಭ್ಯನ್ತರ ಸಿದ್ಧಿಯಿಂ () ಭಯಸಾಮ್ಯವನಾಳುತ್ತವಿರೆ[5] ಇತಹ ಹಲವಾರು ಪ್ರಭುವರ್ಗದವರನ್ನು ಶಾಸನಗಳು ಉಲ್ಲೇಖಿಸುತ್ತವೆ.

ಮಹಾಜನರು

ಅಂದಿನ ಸಮಾಜದಲ್ಲಿ ಅಗ್ರಸ್ಥಾನದಲ್ಲಿದ್ದು, ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹಣಗಳೆಂಬ ಷಟ್ಕರ್ಮಗಳು ಅವರ ಬಹುಮುಖ್ಯ ಕರ್ತವ್ಯಗಳಾಗಿದ್ದವು. ಅವುಗಳ ಪ್ರಸ್ತಾಪ ಹಾನಗಲ್ಲು ಪರಿಸರದ ಶಾಸನಗಳಲ್ಲಿ ಬಂದಿದೆ.[6] ಬ್ರಾಹ್ಮಣ ವರ್ಗದವರು ಶ್ರೇಷ್ಠರೆಂದು ತೋರಿಸಲು ಶಾಸನಗಳುಇನ್ತೀಧರ್ಮ್ಮ ಮನಾರೊರ್ಬ್ಬರು ತಪ್ಪದೆ ಪ್ರತಿಪಾಳಿಸಿದರು ಕುರುಕ್ಷೇತ್ರದೊಳಂ ವಾರಾಣಾಸಿಯಲುಂ ಪ್ರಯಾಗದಲುಂ ಅಗ್ಗ್ಯ ತೀರ್ಥದಲುಂ ಗಂಗೆಯ ತಡಿಯಲ್ವೇದಪಾರಗಬ್ರಾಹ್ಮರ್ಗ್ಗೆ ತಪೋಧನರಾಸಾಸಿರ ಕವಿಲೆಯಕೊಂದಂ ಕೊಳಗುವಂ ಪೊನ್ನಲುಂ ಬೆಳ್ಳಿಯಲುಂ ಕಟ್ಟಿಸಿಕೊಟ್ಟ ಫಳವಕು ಧರ್ಮ್ಮಮ (ನಾ)ರೊರ್ಬ್ಬರಳಿದವರು ಕುರುಕ್ಷೇತ್ರದೊಳಂ ವಾರಾಣಾಸಿಯಲುಂ  ಅಗ್ಗ್ಯ ತೀರ್ಥ್ಥದಲುಂ ಪ್ರಯಾಗೆಯಲುಂ ()ಗೆಯ ತಡಿಯಲುಂ ಬ್ರಾಹ್ಮಣರಂ ತಪೋಧನರಂ ಕವಿಲೆಯಮಂನಳಿದ ದೋಷಾಸಾರ್ಗ್ಗು[7] ಎಂದು ವರ್ಣಿಸಲಾಗಿದೆ.

ಸಮಾಜದಲ್ಲಿ ಉನ್ನತಸ್ಥಾನ ಹೊಂದಿದ ಮಹಾಜನರು ಕೇವಲ ಧಾರ್ಮಿಕ ಕಾರ್ಯಗಳಲ್ಲಿ ಮಾತ್ರವಲ್ಲದೇ ಸಾಮಾಜಿಕ ಮತ್ತು ಆಡಳಿತ ಕಾರ್ಯಗಳಲ್ಲೂ ಸಹ ಭಾಗವಹಿಸಿ ಪ್ರಮುಖ ಸ್ಥಾನವನ್ನು ಹೊಂದಿದ್ದರು. ಇದನ್ನು ಸಮರ್ಥಿಸುವಂತೆ ಹಾನಗಲ್ಲಿನ ಶಾಸನವೊಂದು ಬೊಮ್ಮಗೌಡನು ಶ್ರೀ ಅಮರೇಶ್ವರ ದೇವರ ಕೃಪೆಯಿಂದ ಸೆಂಬೊಳದ ಗೌಡಿಕೆಯನ್ನು ಪಡೆಯುವಾಗ ನರೆಯಂಗಲ್ಲ ಮಹಾಜನರು ಆಲೂರ ಮಾಹಾಜನರು ಹೀಗೆ ಹಲವಾರು ಸ್ಥಳಗಳ ಮಹಾಜನರ ಸಮ್ಮುಖದಲ್ಲಿ ಅಧಿಕಾರ ಪಡೆದನೆಂದು ವಿವರಿಸಿದೆ.[8] ಇದರಿಂದ ಸಮಾಜದಲ್ಲಿ ಮಹಾಜನರಿಗೂ ಗೌರವದ ಸ್ಥಾನವಿರುವುದು ವಿಧಿತವಾಗುತ್ತದೆ.

ಸ್ಥಾನಾಚಾರ್ಯರು

ಶೈವ ಸಂಪ್ರದಾಯದ ಪಾಶುಪತ, ಕಾಳಮುಖ ಪಂಗಡಕ್ಕೆ ಸೇರಿದ ದೇವಸ್ಥಾನ ಹಾಗೂ ಮಠಗಳ ಆಚಾರ್ಯರೇ ಸ್ಥಾನಾಚಾರ್ಯರು. ಇವರು ಸ್ಥಾನಪತಿಗಳೆಂದು ಕರೆಯಿಸಿಕೊಂಡಿದ್ದಾರೆ. ಇವರು ರಾಜಪ್ರಭುತ್ವ ಮತ್ತು ಸಮಾಜ ಗೌರವದಿಂದ ತಮ್ಮ ಪ್ರಾಬಲ್ಯವನ್ನು ಸಾಧಿಸಿದರು. ಸ್ಥಾನಾಚಾರ್ಯರಲ್ಲಿ ಕೆಲವರು ಬ್ರಹ್ಮಚಾರಿಗಳಾಗಿ ತಪಸ್ಸಾಧಕರಾಗಿದ್ದು, ದೇವಾಲಯ ಹಾಗೂ ಮಠಗಳ ಆಡಳಿತ ನೋಡಿಕೊಳ್ಳುತ್ತಿದ್ದರು. ಇವರನ್ನು ಶಾಸನಗಳುಸ್ವಸ್ತಿಯಮನಿಯಮ ಸ್ವಾಧ್ಯಾಯ ಧ್ಯಾನಧಾರಣ ಮೋನಾನುಷ್ಠಾನ ಸಮಾಧಿಶೀಳಗುಣಸಂಪಂನರೆಂದು ಕರೆದಿವೆ.[9] ಹಾನುಗಲ್ಲಿನ ಬಿಲ್ಲೇಶ್ವರ ದೇವಾಲಯದ ಸ್ಥಾನಪತಿಗಳಾಗಿದ್ದ ಚಂದ್ರಭೂಷಣದೇವರನ್ನು ಧ್ಯಾನಧಾರಣ ಮೋನಾನುಷ್ಠಾನ ಜಪಸಮಾಧಿಶೀಲ ಗುಣಸಂಪನ್ನರು ಸಕಳಬುಧಜನ ಪ್ರಸನ್ನರು ಧರ್ಮಲತಾಧಾರ ದಂಡರುಮಪ್ಪ ಚಂದ್ರಬೂಷಣಂಎಂದು ಹೇಳಿದೆ.[10]

ದೇವಾಲಯಗಳ ಪೂಜೆಗಳ ಜೊತೆಯಲ್ಲಿ, ಅಲ್ಲಿ ಓದುತ್ತಿದ್ದ ತಪೋಧನರ ಊಟೋಪಚಾರಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಇವರಿಗೆ ಹೇರಳವಾಗಿ ದಾನ ಬಿಟ್ಟಿರುವುದನ್ನು ಶಾಸನಗಳು ಉಲ್ಲೇಖಿಸುತ್ತವೆ. ಮಹಾಮಂಡಳೇಶ್ವರ ತೈಲಪದೇವನ ಆಳ್ವಿಕೆಯಲ್ಲಿ ಹಾನುಗಲ್ಲಿನ ಪರಿಸರದ ಎಡೆವೊಳಲು ಎಪ್ಪತ್ತರ ಭಾಗ ಪಿರಿಯೂರ ನಾಲ್ವರು ಗಾವುಂಡರು ಗಡಿಯಂಕಮಲ್ಲನ ಬೀಡಿನಲ್ಲಿ ಸೋಮೇಶ್ವರ ದೇವಸ್ಥಾನ ನಿರ್ಮಾಣ ಮಾಡಿಸಿ, ಅದನ್ನು ಚಂದ್ರಭೂಷಣ ಪಂಡಿತರ ಪಾದತೊಳೆದು ಅರ್ಪಿಸಿರುವರು.[11] ಮಹಾಮಂಡಳೇಶ್ವರ ತೈಲಪದೇವನು ಬನವಾಸಿ೧೨೦೦೦ ಹಾನುಂಗಲ್೫೦೦ ಆಳುತ್ತಿದ್ದಾಗ, ಬಿಲ್ಲೇಶ್ವರ ದೇವರಿಗಾಗಿ ದೇವರಾಶಿ ಪಂಡಿತರಿಗೆ ದಾನ ನೀಡಿರುವುದನ್ನು ಕ್ರಿ.. ೧೧೧೯ರ ಶಾಸನದಲ್ಲಿದೆ.[12]

ಶ್ರಮಿಕವರ್ಗ

ವಿವಿಧ ವೃತ್ತಿಗಳನ್ನು ಆಶ್ರಯಿಸಿದ ಕುಶಲಕರ್ಮಿಗಳ ವರ್ಗವೇ ಶ್ರಮಿಕವರ್ಗ. ಇವರು ಸಮಾಜದ ಅನಿವಾರ್ಯ ಮತ್ತು ಅವಿಭಾಜ್ಯ ಅಂಗವಾಗಿದ್ದರು. ಸಮಾಜದ ಅವಶ್ಯಕತೆಗಳನ್ನು ಪೂರೈಸುವಲ್ಲಿ ವರ್ಗದವರು ಮಹತ್ವದ ಪಾತ್ರವನ್ನು ವಹಿಸಿದ್ದರು. ಕುಶಲಕರ್ಮಿಗಳಲ್ಲಿ ಶಿಲ್ಪಿ, ಬಡಿಗ, ಕಮ್ಮಾರ, ಅಕ್ಕಸಾಲಿಗ, ನಾಪಿತ, ಅಗಸ, ಕುಂಬಾರ, ಚಮ್ಮಾರ ಮುಂತಾದವರಿದ್ದರು. ಅವರು ತಮ್ಮದೇ ಆದ ಸಂಘಗಳನ್ನು ಕಟ್ಟಿಕೊಂಡಿದ್ದರು. ಶಿಲ್ಪಿಗಳು ದೇವಾಲಯ ಹಾಗೂ ಶಿಲ್ಪಗಳನ್ನು ನಿರ್ಮಾಣ ಮಾಡಿರುವುದನ್ನು ಶಾಸನಗಳು ಉಲ್ಲೇಖಿಸುತ್ತವೆ. ಹಾನಗಲ್ಲಿನ ಈಶ್ವರ ದೇವಾಲಯದ ಹತ್ತಿರವಿರುವ ಶಾಸನದಲ್ಲಿಶ್ರೀಮತು ಕವ ೧೩೧೦ನೆಯ ವಿಭವ ಸಂವಛರದ ವಯಿಸಾಖ ೧೦ ಮಾಧವದೇವರ ಶ್ರೀಮೂರ್ತಿಯ ಹಾವಣಿಗೆಯ ಚಂದೋಜಎಂದಿದೆ.[13] ಅಲ್ಲದೇ ಪರಿಸರದ ಕಲಕೇರಿಯ ಶಾಸನವು ಶಿಲ್ಪಿಗಳ ವಂಶಾವಳಿಯನ್ನು ಮಾದೋಜ ಅವನ ಮಗ ಚವಡೋಜ ಅವನ ಮಗ ನೆದೋಜ ಅವನ ಮಗ ಸೋಮೋಜನ ಮಗ ಕಲ್ಲಪ್ಪ ಬರೆದ ಶಾಸನ ಎಂದು ಉಲ್ಲೇಖಿಸುತ್ತದೆ.[14]

ಬಿಲ್ಲು ವಿದ್ಯೆಯಲ್ಲಿ ನೈಪುಣ್ಯತೆ ಹೊಂದಿ ಬಿಲ್ಲು ಬಾಣಗಳಿಂದ ಯುದ್ಧ ಪ್ರಕ್ರಿಯೆಯಲ್ಲಿ ಪ್ರಭಾವ ಬೀರಿದ್ದ ಬಿಲ್ಲವರು, ಬಿಲ್ಲ ಮೂನ್ನೂರ್ವರೆಂಬ ಸಂಘ ಕಟ್ಟಿಕೊಂಡಿದ್ದರು. ಬಿಲ್ಲೇಶ್ವರದೇವ ಪಾದಾರಾಧಕರಾಗಿದ್ದ ಇವರು ತಮ್ಮ ಸಮಾಜದ ವತಿಯಿಂದ ಕಟ್ಟಿಸಿದ ದೇವಾಲಯಕ್ಕೆ ಬಿಲ್ಲೇಶ್ವರವೆಂದು ಕರೆಯಲಾಗಿದೆ. ಹಾನಗಲ್ಲಿನ ಆನೆಕೆರೆದಂಡೆಯ ಮೇಲಿರುವ ಇದು ತುಂಬ ಕಲಾವೈಭವಪೂರ್ಣವಾದ ದೇವಸ್ಥಾನ. ಇಂದು ಗರ್ಭಗುಡಿ ಮಾತ್ರ ಉಳಿದಿದ್ದು, ಇನ್ನುಳಿದ ಭಾಗ ಹಾಳಾಗಿದೆ. ಪಾನುಂಗಲ್ಲ ನಾಡನ್ನಾಳುತ್ತಿದ್ದ ಮಹಾಮಂಡಳೇಶ್ವರ ತೈಲಪದೇವರಸ ಬಿಲ್ಲೇಶ್ವರ ಪೂಜಾವಿಧಿ, ಧಾರ್ಮಿಕ ಕಾರ್ಯಗಳಿಗೆ ಹೂವಿನ ತೋಟ, ಗದ್ದೆ ಮುಂತಾದವುಗಳನ್ನು ದೇವರಾಸಿ ಪಂಡಿತರಿಗೆ ದಾನ ಮಾಡಿದ ದಾಖಲೆ ಅಲ್ಲಿಯೇ ಸಮೀಪದ ಶಾಸನದಲ್ಲಿದೆ.[15]

ಮೇಲಿನ ಉಲ್ಲೇಖಗಳಲ್ಲದೇ ಹಲವಾರು ವೃತ್ತಿಸಂಘಗಳಾದ ಅರವತ್ತೊಕ್ಕಲು[16], ತಂಬುಲಿಗ ಸಾಸಿರ್ವ್ವರು[17] ಮತ್ತು ತೆಲ್ಲಿಗಸೆಟ್ಟಿ ಐವತ್ತೊಕ್ಕಲು[18] ಮುಂತಾದ ವೃತ್ತಿ ಸಂಘಗಳನ್ನು ನೋಡಿದಾಗ, ಇವುಗಳು ವೃತ್ತಿ ಆಧಾರದ ಮೇಲೆ ನಿರೂಪಿತವಾಗಿದ್ದವೇ ವಿನಃ ಜಾತೀಯ ಆಧಾರದ ಮೇಲಲ್ಲ ಎಂಬುದು ಸುಸ್ಪಷ್ಟವಾಗುತ್ತದೆ.

ಕುಟುಂಬ

ಸಮಾಜದಲ್ಲಿ ಕುಟುಂಬವು ಒಂದು ಅವಿಭಾಜ್ಯ ಅಂಗವಾಗಿತ್ತು. ಅದನ್ನು ಪ್ರಥಮ ಸಮಾಜವೆಂದು ಕರೆಯಬಹುದು. ಇದರ ಮೂಲಕವೇ ಗಂಡುಹೆಣ್ಣುಗಳ ಸಂಬಂಧವಾಗಿದೆ. ಇದನ್ನೇ ಹಿಂದೂ ಸಂಸ್ಕಾರದಲ್ಲಿ ವಿವಾಹವೆಂದು ಕರೆದಿದೆ. ಅಲ್ಲದೇ ಆಗ ಪಿತೃಪ್ರಧಾನ ಕುಟುಂಬ ವ್ಯವಸ್ಥೆ ಜಾರಿಯಲ್ಲಿದ್ದು, ತಂದೆಯ ನಂತರ ಹಿರಿಯ ಮಗ ಮುಖ್ಯಸ್ಥನಾಗುತ್ತಿದ್ದನು.

ವಿವಾಹ

ಸಂಸ್ಕಾರಗಳ ಕುರಿತು ಹೇಳುವಾಗ, ವಿವಾಹವು ಎಲ್ಲ ಸಂಸ್ಕಾರಗಳಿಗೂ ಮೂಲ ಎಂದು ಗೃಹ್ಯಸೂತ್ರ ಹೇಳಿದೆ. ಕಾರಣ ಎಲ್ಲ ಬಗೆಯ ಆಚಾರನಿಯಮಗಳು, ಯಜ್ಞಯಾಗಗಳು ಗೃಹಸ್ಥನ ಸುತ್ತ ಹರಡಿಕೊಂಡಿರುವುದಾಗಿದೆ.[19] ಪ್ರಾಚೀನ ಕಾಲದಲ್ಲಿ ಬ್ರಹ್ಮ, ದೈವ, ಅರ್ಷಾ, ಪ್ರಜಾಪತ್ಯ, ಅಸುರ, ಗಂಧರ್ವ, ರಾಕ್ಷಸ ಮತ್ತು ಪೈಶಾಚ ಎಂಬ ಎಂಟು ಪದ್ಧತಿಯ ವಿವಾಹಗಳಿದ್ದವು. ಅವುಗಳಲ್ಲಿ ಕೆಲವು ಪದ್ಧತಿಗಳು ಕರ್ನಾಟಕದಲ್ಲೂ ಬಳಕೆಯಲ್ಲಿದ್ದವು. ಹಾನಗಲ್ಲಿನ ಶಾಸನಗಳಲ್ಲಿ ಅವುಗಳ ಉಲ್ಲೇಖವಿಲ್ಲದಿದ್ದರೂ, ಕ್ರಿ.. ೧೧೨೧ರ ಶಾಸನವೊಂದುಕೊಟ್ಟಲ್ಲಿ ಕಾಣಿ ಕೂಣ್ಡಲ್ಲಿ ಕಾಣಿಎಂಬ ಮಾತನ್ನು ಉಲ್ಲೇಖಿಸಿರುವುದರಿಂದ[20] ಬಹುಷ ಹೆಣ್ಣು ಕೊಟ್ಟಲ್ಲಿ ಒಂದು ಕಾಣಿ, ಹೆಣ್ಣನ್ನು ತೆಗೆದುಕೊಂಡಲ್ಲಿ ಒಂದು ಕಾಣಿ ತೆರಿಗೆಗಳನ್ನು ನೀಡಿರುವಂತೆ ಕಾಣುತ್ತದೆ.

ಬಹುಪತ್ನಿತ್ವ

ಪ್ರಾಚೀನ ಕಾಲದಲ್ಲಿ ಬಹುಪತ್ನಿತ್ವಕ್ಕೆ ಸಾಮಾಜಿಕ ಮನ್ನಣೆಯಿತ್ತು. ಬ್ರಾಹ್ಮಣರು ನಾಲ್ಕು ಜನರನ್ನೂ, ಕ್ಷತ್ರಿಯರು ಮೂರು ಜನರನ್ನೂ, ವೈಶ್ಯರು ಇಬ್ಬರನ್ನೂ ಮತ್ತು ಶೂದ್ರರು ಒಬ್ಬಳನ್ನು ಮದುವೆಯಾಗುತ್ತಿದ್ದರೆಂದು ಅಲ್ಬೆರೊನಿ ಹೇಳಿದ್ದಾನೆ.[21] ಹಾನಗಲ್ಲ ಕದಂಬ ವಂಶದ ಮಹಾಮಂಡಳೇಶ್ವರ ಚಿತಯ್ಯದೇವನಿಗೆ ಉತ್ತರ ಕೊಂಕಣ ಶೀಲಹಾರ ಇಮ್ಮಡಿ ವಜ್ಜಡನ ಮಗಳಾದ ಕುಂಡಳಾದೇವಿ ಹಾಗೂ ಚಿತ್ತಬ್ಬರಸಿ ಎಂಬ ಇಬ್ಬರು ರಾಣಿಯರಿದ್ದರು.[22] ಹಾನಗಲ್ಲಿನ ಮೈಲಾರದೇವ ದೇವಾಲಯದಲ್ಲಿರುವ ತೃಟಿತ ಶಾಸನದಲ್ಲಿ ಕದಂಬ ಮಲ್ಲಿದೇವನ ರಾಣಿ ಪದ್ಮಲ ಮಹಾದೇಯನ್ನುಪಿರಿಯದರಸಿ ಪಟ್ಟಮಹಾದೇವಿ[23] ಎಂದು ಕರೆದಿರುವುದರಿಂದ ಇವನಿಗೆ ಮತ್ತೊಬ್ಬ ರಾಣಿಯು ಇದ್ದಿರಬಹುದು.

ಸತಿಪದ್ಧತಿ

ಪ್ರಾಚೀನ ಕರ್ನಾಟಕದಲ್ಲಿ ಪತಿಯ ಮರಣದ ನಂತರ ಸತಿಯಾದವಳು ಅಗ್ನಿಪ್ರವೇಶ ಮಾಡುತ್ತಿದ್ದಳು. ಆದರೆ ಕೆಲವರು ಧರ್ಮಾಸಕ್ತರಾಗಿ ಜೀವನವನ್ನು ಕಳೆಯುತ್ತಿದ್ದಂತೆ ತಿಳಿದುಬರುತ್ತದೆ. ಗಂಡನ ಮರಣದ ನಂತರ ಮಹಿಳೆ ವಿಧವೆಯಾದರೆ, ಅವಳು ಪುನಃ ವಿವಾಹವಾಗುವಂತಿರಲಿಲ್ಲ. ಹಾನುಗಲ್ಲು ಪರಿಸರದ ಕೆಳವರ ಕೊಪ್ಪದಲ್ಲಿರುವ ೧೩ನೆಯ ಶತಮಾನದ ಶಾಸನವೊಂದು ಕೆಳವೂರಿನ ಬೊಮ್ಮದೇವನ ಹೆಂಡತಿ ಬೊಮ್ಮಕ್ಕನ ಸಹಗಮನ[24] ಹಾಗೂ ಇನ್ನೊಂದು ಶಾಸನದಲ್ಲಿ ಬಾಳೂರು ಮುದ್ದಗೌಡನ ಹೆಂಡತಿಯ ಸಹಗಮನವನ್ನು ಹೇಳಿದೆ.[25]

ಮಹಿಳೆಯರ ಸ್ಥಾನಮಾನ

ವೇದಗಳ ಕಾಲದಿಂದಲೂ ಮಹಿಳೆ, ತನಗೆ ಒದಗಿಬಂದ ಅವಕಾಶಗಳನ್ನು ಉಪಯೋಗಿಸಿಕೊಂಡು ಸಾಮಾಜಿಕ ಜೀವನದಲ್ಲಿ ತನ್ನದೇ ಆದ ಸ್ಥಾನಮಾನವನ್ನು ಗಳಿಸಿಕೊಂಡಿರುವುದನ್ನು ಕಾಣುತ್ತೇವೆ. ಹಾನಗಲ್ಲು ಪರಿಸರದ ಶಾಸನಗಳು ಇದಕ್ಕೆ ಹೊರತಾಗಿಲ್ಲ. ಕದಂಬ ಅರಿಕೇಸರಿಯು ಬನವಾಸಿ೧೨೦೦೦ ಮತ್ತು ಹಾನಗಲ್೫೦೦ಗಳನ್ನು ಆಳುತ್ತಿದ್ದಾಗ, ಅವನ ರಾಣಿ ಅಚಲದೇವಿ ಬೆಳವತ್ತಿಯನ್ನಾಳುತ್ತಿದ್ದಳೆಂಬ ಉಲ್ಲೇಖವು ಕ್ರಿ.. ೧೧೦೦ರ ಶಾಸನದಲ್ಲಿದೆ.[26]

ಮಹಿಳೆಯರು ಹಲವಾರು ದೇವಾಲಯಗಳನ್ನು ನಿರ್ಮಿಸಿರುವುದಲ್ಲದೇ, ಅವುಗಳಿಗೆ ದಾನ ದತ್ತಿಗಳನ್ನು ಬಿಟ್ಟಿದ್ದಾರೆ. ಪರಿಸರದ ಯಳವತ್ತಿ ಗ್ರಾಮದಲ್ಲಿ  ಮಾಳಲದೇವಿ ತನ್ನ ಹೆಸರಿನ ಮಾಳಲೇಶ್ವರ ದೇವಾಲಯವನ್ನು[27] ಮತ್ತು ಕಲಕೇರಿಯಲ್ಲಿ ಬೌದ್ಧ ವಿಹಾರ, ಶಿವಾಲಯ ಮತ್ತು ಮಹಾಭವನಗಳನ್ನು ನಿರ್ಮಿಸಿದ್ದಾಳೆ.[28] ಕರಿಗುದರಿ ಗ್ರಾಮದ ಶಾಸನ, ಮಾದಿರಾಜದಂಡನಾಯಕನ ಮಡದಿ ಮಲ್ಲಿಯಕ್ಕ ಎಂಬುವಳು ಭಾಸ್ಕದೇವರ ಭಕ್ತೆಯಾಗಿದ್ದು, ಕರಿಗುದರೆಯ ಉತ್ತರ ಭಾಗದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದನ್ನು ಉಲ್ಲೇಖಿಸುತ್ತದೆ.[29]

ಉಪ್ಪಹುಣಿಸಿ ಗ್ರಾಮದ ಶಾಸನವು ಕುಂದರಾಜನ ಮಡದಿ ಕುಂಬರಸಿ ಎಂಬುವಳು ಕಲ್ಮೇಶ್ವರ ದೇವಾಲಯಕ್ಕೆ ದಾನ ನೀಡಿದ್ದನ್ನು ತಿಳಿಸಿದರೆ,[30] ತಿಳ್ಳುವಳ್ಳಿಯ ಶಾಸನವು (ಕ್ರಿ.. ೧೧೧೮) ರುದ್ರಭಟ್ಟೋಪಾದ್ಯಾಯ ಮತ್ತು ಮಾಚಿಯಬ್ಬೆ ದಂಪತಿಗಳು ಸೋಮಯಾಜಿಗಳ ದೇವಾಲಯಕ್ಕೆ ೨೫೦ ಗದ್ಯಾಣಗಳನ್ನು ದಾನ ನೀಡಿದರೆಂದು ಹೇಳಿದೆ.[31] ವೀರನೊಳಂಬ ಮತ್ತು ಆತನ ಮಡದಿ ಮಾಳಲ ದೇವಿಯರು ತಪೋನಿಧಿ ದೇವಸಿಂಗಜೀಯರ ಕಾಲು ತೊಳೆದು ಕಲಕೇರಿಯ ಸೋಮೇಶ್ವರ ದೇವರ ಧೂಪ, ದೀಪ ಮೊದಲಾದ ಕಾರ್ಯಗಳಿಗೆ ಪುಲ್ಲವಳ ಎಂಬ ಗ್ರಾಮವನ್ನು ದಾನ ಬಿಟ್ಟಿದ್ದಾರೆ.[32]

ಮಹಿಳೆಯರು ಯುದ್ಧಗಳಲ್ಲಿ ಭಾಗವಹಿಸಿರುವುದನ್ನು ಉಲ್ಲೇಖಿಸುವ ಶಾಸನವೊಂದು ಹಾನಗಲ್ಲು ಗ್ರಾಮದಲ್ಲಿದ್ದು, ಅದು ಬಹಳ ತೃಟಿತವಾಗಿರುವುದರಿಂದ ವಿಷಯ ಸ್ಪಷ್ಟವಾಗುವುದಿಲ್ಲ. “ವೀರಮಲ್ಲಿದೇವರಸನ ಪಿರಿಯರಸಿ ಪಟ್ಟಮಹಾದೇವಿ ಪದ್ಮಲದೇವಿ ಕೈಕೊಂಡ ಹೋರಾಟ ಪ್ರಸಂಗ ತೃಟಿತವಾಗಿದ್ದು, ಶಾಸನದ ಮೂರನೆಯ ಭಾಗದಲ್ಲಿ ಮಿಯೊಳು ಖಣಖ್ಖಣಲೆನೆ ಬಂದು ತಾಗಿ….. ಗೆತಳುತಿಹುದು ರಣದೊಳು ವೀರ….. ಭೂಮಿಯೊಳು….. ಸಿರ…. ನವರವನಿತೆಯರೆಯ್ದು….. ಎಂಬ ವಿಷಯ ಮಾತ್ರ ಉಳಿದಿದೆ.[33] ಇವಳು ಪ್ರತ್ಯಕ್ಷ ರಣಾಂಗಣ ದರ್ಶನ ಮಾಡಿದ ದಾಖಲೆ ಹಿರೇಮಾಗಡಿಯಲ್ಲಿದೆ. “ಮಲ್ಲಿದೇವರಸಿ ಪದುಮಲದೇವಿ ಸೋಯಿದೇವನ ಕೂಡೆ ವಿರೋಧಿಸಿ ಕುಪ್ಪಟೂರ ತೆಸಲಗೆ ಧಾಳಿಯನಿಕ್ಕಿ ಗೂಡೆಯ ಹಾಯ್ದು ತುರವಂಕೊಂಡು ಹೋಗುವಲ್ಲಿ ಹಿರೇ ಮಾಗಡಿಯ ಹೆಗ್ಗಡೆ ಕುಪ್ಪಯ್ಯನ ಸೋದರ ಸಂಕಯ್ಯ ಗೋಗ್ರಹಣ ಸಂದರ್ಭದಲ್ಲಿ ಎದುರು ನಿಂತು ಬಂದೆಚ್ಚು ಹಲಬರಂ ಕೊಂದು ತುಹುವಂಮಗುಳ್ಳಿ ಸುರಲೋಕ ಪ್ರಾಪ್ತನಾಗಿರುವನು.[34] ಇಲ್ಲಿ ಕದಂಬ ಅಕ್ಕಾದೇವಿಯನ್ನೂ ಸ್ಮರಿಸಿಕೊಳ್ಳಬಹುದು.

ಸಂಪ್ರದಾಯ, ನಂಬಿಕೆ ಮತ್ತು ಆಚರಣೆ

ನಿತ್ಯ ವ್ಯವಹಾರ ಪದ್ಧತಿಗಳೂ, ಅವುಗಳ ಹಿನ್ನೆಲೆಯಲ್ಲಿರುವ ಕಲ್ಪನೆ, ಉದ್ದೇಶಗಳೂ ಸೇರಿ ಸಂಪ್ರದಾಯವಾಗಿ ರೂಪತಳೆಯುತ್ತದೆ. ನಂಬಿಕೆಗಳು ಮಾನವನ ಮನಸ್ಸಿನ ಪ್ರಕ್ರಿಯೆಗಳಾಗಿವೆ. ಹೀಗಾಗಿ ಮಾನವ ಜೀವನವು ಬಹುತೇಕ ಸಂಪ್ರದಾಯ ಮತ್ತು ನಂಬಿಕೆಗಳ ಮೇಲೆಯೇ ನಿಂತಿದೆ ಎನ್ನಬಹುದು. ಇವುಗಳ ಹುಟ್ಟು ಬೆಳವಣಿಗೆಗೆ ಧಾರ್ಮಿಕ ಪದ್ಧತಿಯೇ ಬಹುಮಟ್ಟಿಗೆ ಕಾರಣವೆಂದು ತಿಳಿಯಲಾಗಿದೆ. ಹಿನ್ನೆಲೆಯಲ್ಲಿ ದಾನದತ್ತಿ, ಪಾಪಪುಣ್ಯ, ಹಬ್ಬ, ಶಕುನ, ನದಿಸ್ನಾನ, ಶ್ರಾದ್ಧ ಮುಂತಾದ ಕಲ್ಪನೆಗಳು ಬೆಳೆದುಬಂದವು. ಹಾನಗಲ್ಲಿನ ಪರಿಸರದ ಶಾಸನಗಳಲ್ಲಿ ಇವು ಅಷ್ಟಾಗಿ ಕಂಡುಬರದಿದ್ದರೂ, ಕೆಲವು ಉಲ್ಲೇಖಗಳನ್ನು ಕಾಣಬಹುದು.

ದಾನ

ಹಾನಗಲ್ಲು ಪರಿಸರದಲ್ಲಿ ದಾನ ಶಾಸನಗಳೇ ಹೆಚ್ಚಾಗಿವೆ. ಅವುಗಳಲ್ಲಿ ಬ್ರಾಹ್ಮಣರಿಗೆ ನೀಡಿರುವ ದಾನಉಭಯಮುಖಿ ಕೊಟ್ಟ ಫಲಮಕ್ಕುಎಂದು ಹೇಳಿದೆ.[35] ಉಭಯಮುಖಿ ಎಂದರೆ ಎರಡು ಮುಖಗಳುಳ್ಳದ್ದು, ಗರ್ಭಿಣಿ ಎಂದರ್ಥ. ಇಕ್ಕತ್ತಿಗೆಯ ಕವಿಲೆ ಎಂಬುದು ಅದರ ಕನ್ನಡಾನುವಾದ. ತಾಯಿಯ ಗರ್ಭದಿಂದ ಕರುವಿನ ಮುಖ ಹೊರಟಿರಬೇಕು. ಸಮಯದಲ್ಲಿ ಪೂಜಾವಿಧಿಗಳ ನಂತರ ಚಿನ್ನ, ಬೆಳ್ಳಿ, ಭೂಮಿ ಇತ್ಯಾದಿಗಳೊಡನೆ ಅಂತಹ ಹಸುವನ್ನು ದಾನ ಮಾಡಿದರೆ, ಹಸು ಮತ್ತು ಕರುಗಳ ಮೈಮೇಲಿನ ಕೂದಲುಗಳ ಸಂಖ್ಯೆಯಷ್ಟು ವರ್ಷಗಳ ಕಾಲ ಸ್ವರ್ಗದಲ್ಲಿರುತ್ತಾರೆಂದು ಧರ್ಮಗ್ರಂಥಗಳು ಹೇಳುತ್ತವೆ.[36] ದಾನಗಳನ್ನು ಸಾಮಾನ್ಯವಾಗಿ ಹಬ್ಬ, ಸಂಕ್ರಮಣ, ಸೂರ್ಯ ಅಥವಾ ಚಂದ್ರಗ್ರಹಣಗಳಂದು ಬಿಡುವದು ಹೆಚ್ಚು ಪ್ರಶಸ್ತವೆನ್ನುವ ನಂಬಿಕೆಯಿತ್ತು. ಅನೇಕ ದಾನಗಳನ್ನು ಇಂತಹ ಪ್ರಮುಖ ದಿನಗಳಲ್ಲಿಯೇ ಬಿಟ್ಟಿರುವುದನ್ನು ಪರಿಸರದ ಶಾಸನಗಳು ಸಮರ್ಥಿಸುತ್ತವೆ. ಕ್ರಿ.. ೧೧೧೯ರ ಶಾಸನವೊಂದುಶ್ರೀ ಮಚ್ಚಾಳುಕ್ಯವಿಕ್ರಮ ಕಾಲದ ೪೩ನೆಯ ವಿಕಾರಿ ಸಂವತ್ಸರದುತು(ರಾ)ಯಣ ಸಂಕ್ರಾನ್ತಿ ದಿನ ಬರೆಯಿಸಿಕೊಟ್ಟಿರುವುದನ್ನು ಉಲ್ಲೇಖಿಸಿದರೆ,[37] ಕ್ರಿ.. ೧೧೨೧ರ ಶಾಸನವುಸ್ವಸ್ತಿ ಶ್ರೀ ಮಚ್ಚಾಳುಕ್ಯ ವಿಕ್ರಮವರಿಷದ ೪೫ನೆಯ ಫಲವ ಸಂವತ್ಸರದ ಚೈತ್ರಶುದ್ಧ ಪಾಡಿವ ಮಹಾ ಯತಿಪಾತದನ್ದುದಾನ ಮಾಡಿರುವುದನ್ನು ತಿಳಿಸುತ್ತದೆ.[38]

ಪಾಪಪುಣ್ಯ

ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಪಾಪಪುಣ್ಯ ಸ್ವರ್ಗನರಕಗಳ ಕಲ್ಪನೆ ಹುಟ್ಟಿಕೊಂಡು ಮುಂದೆ ಅದು ನಂಬಿಕೆಯಾಗಿ ಬೆಳೆಯಿತು. ಶಾಸನಗಳು ಫಲ ಶ್ರುತಿ ಪದ್ಯಗಳಲ್ಲಿ ಸಾಮಾನ್ಯವಾಗಿ ಪಂಚಮಹಾಪಾತಕದ ಹೆಸರನ್ನು ಉಲ್ಲೇಖಿಸುತ್ತವೆ. ಪರಿಸರದ ಕ್ರಿ.. ೧೧೧೯ರ ಶಾಸನವೊಂದರಲ್ಲಿಕವಿಲೆಯಂ ಬ್ರಾಹ್ಮಣರುವಂ ಕೊಂದ ಪಂಚಮಹಾಪಾತಕ ಉಲ್ಲೇಖವಿದೆ.[39] ಇನ್ನೊಂದು ಶಾಸನದಲ್ಲಿಇನ್ತೀ ಧರ್ಮ್ಮವನಾರೊರ್ಬ್ಬರು ತಪ್ಪದೆ ಪ್ರತಿಪಾಳಿಸಿದರು ಕುರುಕ್ಷೇತ್ರದೊಳಂ ವಾರಾಣಾಸಿಯಲುಂ ಪ್ರಯಾಗ(ಲಾ)ಲುಂ ಅಗ್ಗ್ಯೆ(ತೀ)ರ್ಥದಲುಂ ಗಂಗೆಯ ತಡಿಯಲ್ವೇದ ಪಾರಗಬ್ರಾಹ್ಮರ್ಗ್ಗೆ ತಪೋಧನರಾ ನಾಸಿರ ಕವಿಲೆಯ ಕೋಡುಂ ಕೊಳಗುಮಂ ಪೊನ್ನಲುಂ ಬೆಳ್ಳಿಯಲುಂ ಕಟ್ಟಿಸಿಕೊಟ್ಟ ಫಳವಕು ಧರ್ಮ್ಮಮ (ನಾ)ರೊರ್ಬ್ಬರಳಿದವರು ಕುರುಕ್ಷೇತ್ರದೊಳಂ ವಾರಾಣಾಸಿಯಲುಂ  ಅಗ್ಗ್ಯ ತೀರ್ಥ್ಥದಲುಂ ಪ್ರಯಾಗೆಯಲುಂ ()ಗೆಯ ತಡಿಯಲುಂ ಬ್ರಾಹ್ಮಣರಂ ತಪೋಧನರಂ ಕವಿಲೆಯಮಂನಳಿದ ದೋಷ ಸಾರ್ಗ್ಗುಎಂದಿದೆ.[40] ಬಿಟ್ಟಿರುವ ದಾನಗಳನ್ನು ಕಾಪಾಡುವವರಿಗೆ ಶ್ರೇಯಸ್ಸು ಹಾಗೂ ಅವುಗಳನ್ನು ಅಪಹರಿಸಿದವರಿಗೆ ಪಾಪಗಳು ಅಂಟುತ್ತವೆಂದು ಶಾಸನಗಳ ಫಲಶೃತಿಗಳಿಂದ ತಿಳಿಯುತ್ತದೆ. ಇವುಗಳ ಉದ್ದೇಶ ಮುಖ್ಯವಾಗಿ ಕೊಟ್ಟ ದಾನ ದುರುಪಯೋಗವಾಗದಂತೆ ನೋಡಿಕೊಳ್ಳುವುದಾಗಿತ್ತು. ಪಾಪಗಳಿಂದುಂಟಾದ ದೋಷ ನಿವಾರಣೆಗಾಗಿಯೇ ದಾನ, ಧರ್ಮ, ವ್ರತ ಮುಂತಾದ ಆಚರಣೆಗಳು ಹುಟ್ಟಿಕೊಂಡಿರಬೇಕು.

ಹಬ್ಬ

ಸಂಸ್ಕೃತ ಪದವು ಕನ್ನಡದಲ್ಲಿ ಅಪಭ್ರಂಶವಾಗಿ ಪಬ್ಬ, ಹಬ್ಬ ಎಂದಾಗಿದೆ.[41] ಹಾನಗಲ್ಲಿನ ಶಾಸನಗಳಲ್ಲಿ ಸಂಕ್ರಾನ್ತಿ, ಚೈತ್ರಶುದ್ಧ ಪಾಡಿವ, ಮಹಾಯತೀಪಾತ ಎಂಬ ಹಬ್ಬಗಳ ಉಲ್ಲೇಖಗಳಿವೆ.[42]

ವೀರಗಲ್ಲು

ಪರಿಸರದಲ್ಲಿ ವೀರಗಲ್ಲುಗಳ ಸಂಖ್ಯೆ (ಸುಮಾರು ೧೧) ಹೆಚ್ಚಿನ ಪ್ರಮಾಣದಲ್ಲಿದೆ. ಕ್ರಿ.. ೧೧೯೬ರ ವೀರಗಲ್ಲು, ಹಾನಗಲ್ಲು ಕದಂಬ ಕಾಮದೇವನಿಗಾಗಿ ಒಬ್ಬ ವೀರಮರಣ ಹೊಂದಿರುವುದನ್ನು ಹೇಳಿದೆ.[43] ಕಮತರ ತಿಪ್ಪಣ್ಣನ ಹೊಲದಲ್ಲಿರುವ ವೀರಗಲ್ಲು ಸಾಂತಯ್ಯದೇವನ ಮರಣವನ್ನು,[44] ಆನೆಕೆರೆಯ ದಂಡೆಯ ಮೇಲಿರುವ ವೀರಗಲ್ಲು ಹೊಯ್ಸಳ ಬಲ್ಲಾಳದೇವನು ಹಾನಗಲ್ಲನ್ನು ಮುತ್ತಿದಾಗ, ಸಾಹಣಿಯೊಬ್ಬನ ವೀರಮರಣವನ್ನು[45] ಹಾಗೂ ತಾರಕೇಶ್ವರ ದೇವರ ಗುಡಿಯ ಹೊರಮಗ್ಗುಲಲ್ಲಿರುವ ವೀರಗಲ್ಲು, ಬಸವ ನಾಯಕನ ವೀರಮರಣವನ್ನು ಉಲ್ಲೇಖಿಸುತ್ತವೆ. ಇನ್ನೊಂದು ತೃಟಿತವಾಗಿದ್ದು, ಅಸ್ಪಷ್ಟವಾಗಿದೆ.[46] ತುರುಗಾಳಗಕ್ಕೆ ಸಂಬಂಧಿಸಿದ ವೀರಗಲ್ಲೊಂದು, ತುರುಗಳನ್ನು (ಆಕಳು) ಕದ್ದು ತೆಗೆದುಕೊಂಡು ಹೋಗುವಾಗ, ಹೋರಾಡಿ ವೀರಮರಣ ಹೊಂದಿದ ವಿಷಯವನ್ನು ಹೇಳುತ್ತದೆ. ಅದರಲ್ಲಿಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮನ್ಮಹಮಂಡಳೇಶ್ವರ ತೈಲಪದೇವರ ಪಾ[ಹಾ]ಡವಳ ತೈಲಣಾಗ ಮೈದುನಂ ಬೆಟ್ಟತೆಪ್ಪದನಿರಿದುರಳ್ಳ ಸೇಳ್ಗೆಯುಮಂ ಕೊಂಡೊಯ್ವರ ತುರುಮಮಂ ಸೇಳ್ಗೆಯುಮಂ ಮುಗುಳ್ದು ಸ್ವರ್ಗಸ್ಥನಾದನು“.[47] ಎಂದಿದೆ.

ವೇಷ ಭೂಷಣ

ಯೋಗ್ಯತೆ ಮತ್ತು ಸ್ಥಿತಿಗನುಗುಣವಾಗಿ ಜನರು ವೇಷ ಭೂಷಣಗಳನ್ನು ಧರಿಸುತ್ತಿದ್ದರು. ಗ್ರಾಮದಲ್ಲಿರುವ ವೀರಗಲ್ಲುಗಳನ್ನು ಅವಲೋಕಿಸಿದರೆ, ಕಾಲದ ಪುರುಷರು ಧೋತಿ ಉಟ್ಟುಕೊಂಡು, ಮೈ ಮೇಲಿನ ಭಾಗಕ್ಕೆ ಅಂಗಿಯನ್ನು ಹಾಕುತ್ತಿರಲಿಲ್ಲ. ತಲೆಯ ಸುತ್ತಲೂ ರುಮಾಲಿನ ಆಕಾರದ ಬಟ್ಟೆಯನ್ನು ಸುತ್ತಿಕೊಳ್ಳುತ್ತಿದ್ದುದು ಕಂಡುಬರುತ್ತದೆ. ಅದು ಇಂದಿನ ಪಗಡಿಯಂತೆ ಇರುತ್ತಿತ್ತು.

ವೀರಗಲ್ಲುಗಳಿಂದ ಪುರುಷರು ತಮ್ಮ ತಲೆಯ ಕೂದಲನ್ನು ಗಂಟುಹಾಕಿ ಕಟ್ಟುತ್ತಿದ್ದರು. ಕಪ್ಪಲಿಭಾವಿ ಮತ್ತು ಹಾನಗಲ್ಲು ಗ್ರಾಮಗಳ ವೀರಗಲ್ಲುಗಳಲ್ಲಿ, ಯೋಧರು ಕಿವಿಯೋಲೆ (ಮರುವು) ಧರಿಸಿದ್ದಾರೆ.[48] ಮಾಸ್ತಿಕಲ್ಲುಗಳಿಂದ ಮಹಿಳೆಯರು ಸೀರೆ ಮತ್ತು ಕುಪ್ಪಸ ಉಪಯೋಗಿಸುತ್ತಿದ್ದರೆಂದು ಹೇಳಬಹುದು. ದೇವಾಲಯಗಳ ಅಲಂಕಾರ ಶಿಲ್ಪಗಳನ್ನು ಅವಲೋಕಿಸಿದರೆ, ಮಹಿಳೆಯರು ನಡಪಟ್ಟಿ, ಕರ್ಣಾಭರಣ, ಕಂಠಾಭರಣ ಹಾಗೂ ತೋಳಾಭರಣಗಳನ್ನು ಉಪಯೋಗಿಸುತ್ತಿದ್ದರೆಂದು ಸ್ಪಷ್ಟವಾಗುತ್ತದೆ. ತಾರಕೇಶ್ವರ ದೇವಾಲಯದ ಹೊರಾವರಣ ಮತ್ತು ಗ್ರಾಮದ ಅಲಲ್ಲಿ ಹರಡಿರುವ ಶಿಲ್ಪಗಳನ್ನು ಇಲ್ಲಿ ಉದಾಹರಿಸಬಹುದು. ದಿಗಾಂಬೆಯ ಮಂದಿರದ ಮುಂದೆ ಇರುವ ನೃತ್ಯ ಬಾಲಕೆಯರ ಕೈಗಳಲ್ಲಿರುವ ಕನ್ನಡಿಯಿಂದ, ಕಾಲದ ಸ್ತ್ರೀಯರು ಕೈಗನ್ನಡಿಗಳನ್ನು ಉಪಯೋಗಿಸುತ್ತಿದ್ದರೆಂದು ತಿಳಿಯುತ್ತದೆ.

ಆಹಾರ ಪಾನೀಯಗಳು

ಕಲ್ಯಾಣದ ಚಾಲುಕ್ಯ ಮೂರನೆಯ ಸೋಮೇಶ್ವರನಿಂದ ರಚಿತವಾದ ಮಾನಸೋಲ್ಲಾಸವು, ಅಂದು ಪ್ರಚಲಿತವಿದ್ದ ಮಂಡಕ (ಮಂಡಿಗೆ), ದೋಸಕ (ದೋಸೆ), ಇಡ್ಡಲಕ (ಇಡ್ಡಲಿಗೆ), ಸೇವಿಕಾ (ಸೇವಿಗೆ), ಮಜ್ಜಿಕಾ (ಮಜ್ಜಿಗೆ)ಗಳನ್ನೂ, ಹುಳಿಗಾಗಿ ಬಳಸುವ ಹುಣಸೆ, ಕವಳಿ, ಅಂಬಟೆಕಾಯಿ, ಲಿಂಬೆ, ಮಂಗರವಳ್ಳಿಗಳನ್ನೂ, ಖಾರಕ್ಕಾಗಿ ಬಳಸುವ ಶುಂಠಿ, ಮೆಣಸು, ಕಾರಗೆಣಸುಗಳನ್ನು ಉಲ್ಲೇಖಿಸಿದೆ.[49] ಆದರೆ ಪರಿಸರದ ಶಾಸನಗಳಲ್ಲಿ ಎಲ್ಲಿಯೂ ನೇರವಾಗಿ ಆಹಾರಾದಿ ವಿಷಯಗಳನ್ನು ಹೇಳಿಲ್ಲ. ದಾನಬಿಡುವ ಸಂದರ್ಭದಲ್ಲಿ ದವಸಧಾನ್ಯಗಳ ಮೇಲಿಂದ, ಅಂದು ಉಪಯೋಗಿಸುತ್ತಿದ್ದ ಆಹಾರ ಧಾನ್ಯಗಳನ್ನು ತಿಳಿಯಬಹುದು.

ವಿದ್ಯಾಭ್ಯಾಸ

            ಸರ್ವದ್ರವೈಷು ವಿದ್ಯೆವ ಧನಮಾಹುರನುತ್ತಮಂ
ಆಹಾರ್ಯ ದೇನರ್ಘ್ಯರ್ಯತ್ಪಾದಕ್ಷಯತ್ವಾಚ್ಚ ಸರ್ವದಾ
ವಿದ್ಯಾದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ
ಪಾತ್ರತ್ಪಾದ್ಧನ ಮಾಪ್ನೋತಿ ಧನಾದ್ಧರ್ಮ ತತಃ ಸುಖಃ

ಅಂದರೆ ವಿದ್ಯೆಗಿಂತ ಶ್ರೇಷ್ಠವಾದದ್ದು ಇನ್ನೊಂದಿಲ್ಲ. ಸರ್ವದ್ರವ್ಯಗಳಲ್ಲಿ ವಿದ್ಯೆಯೇ ನಿಜವಾದ ಧನ, ಏಕೆಂದರೆ ಅದನ್ನು ಯಾರೂ ಅಪಹರಿಸಲಾರರು ಅದು ಅನರ್ಘ್ಯ ಮತ್ತು ಅಕ್ಷಯವಾದದು. ಅಲ್ಲದೆ ಶಿಕ್ಷಣದ ಪರಮ ಪ್ರಯೋಜನ ಆತ್ಮಸಿದ್ಧಿ ಎನ್ನುವಲ್ಲಿ ಸಾಕಾರಗೊಂಡಿದೆ.[50] ಇಂತಹ ವಿದ್ಯೆಯು ವ್ಯಕ್ತಿಕೇಂದ್ರವಾಗಿ ರೂಪಿತಗೊಂಡಿರುವದಾಗಿತ್ತು. ಪ್ರಾರಂಭದಲ್ಲಿ ಗುರುವಿನ ಮನೆಯೇ ಪಾಠಶಾಲೆಯಾಗಿತ್ತು. ಹಾನಗಲ್ಲು ಪರಿಸರದಲ್ಲಿ ಮಠ, ದೇವಾಲಯ ಮತ್ತು ಅವುಗಳಿಗೆ ಸೇರಿದ ಕಾಳಾಮುಖ ಗುರುಪರಂಪರೆ ಅಧಿಕವಾಗಿದ್ದುದರಿಂದ ಅಧ್ಯಯನ ಅಧ್ಯಾಪನಕ್ಕೆ ಹೆಚ್ಚಿನ ಮಹತ್ವಕೊಟ್ಟಿರುವುದು ತಿಳಿದುಬರುತ್ತದೆ. ಶಾಸನವೊಂದರಲ್ಲಿತಪೋಧನರಾಹಾರದಾನಕ್ಕಂ ದೇವರ ನೈವೇದ್ಯಕ್ಕಂ…..ತಪೋಧನರ್ಗ್ಗೆ ವಸ್ತ್ರಕ್ಕಂ ಕೌಪೀನಕ್ಕಂ ಬಿಟ್ಟ ಧರ್ಮಎಂಬ ಉಲ್ಲೇಖಗಳು[51] ದೇವಾಲಯಗಳಲ್ಲಿ ವಿದ್ಯಾಭ್ಯಾಸವು ಜರುಗುತ್ತಿರುವುದು ಸ್ಪಷ್ಟವಾಗುತ್ತದೆ. ಗ್ರಾಮದ ಶಾಸನಗಳಲ್ಲಿ ಅಗ್ರಹಾರದ ಪ್ರಸ್ತಾಪವಿಲ್ಲ. ಆದರೆ ಪರಿಸರದ ನೀರಲಿ, ತಿಳಿವಳ್ಳಿಗಳು ಅಗ್ರಹಾರಗಳಾಗಿದ್ದವು. ಗ್ರಾಮದ ಶಾಸನದಲ್ಲಿ ಉಲ್ಲೇಖವಾಗಿರುವ ಕದಂಬ ಮಲ್ಲಿದೇವನ ಮಡದಿ ಪದ್ಮಲದೇವಿ ಹುಲುಗೂರನ್ನು ಬ್ರಹ್ಮಪುರಿಯಾಗಿ ಮಾರ್ಪಡಿಸಿ, ೬೪ ಜನ ವೇದೋಪನಿಷತ್ತು ಬಲ್ಲ ಮಹಾಜನರ ಪಾದತೊಳೆದು ಎಲ್ಲ ತೆರಿಗೆಯನ್ನು ಮುಕ್ತಗೊಳಿಸಿ, ಬ್ರಾಹ್ಮಣರಿಗೆ ಕೊಂಡರಟೆ೭೦ರ ಬಿಚನೂರು ಗ್ರಾಮವನ್ನು ದತ್ತಿ ಕೊಡುವಲ್ಲಿ ಅದರ ಪುಣ್ಯ ತನ್ನ ಹಿರಿಯರಿಗೆ ತಲುಪಲಿ ಎಂದು ಆಶಿಸಿರುವಳು.[52] ಶಾಸನವು ೬೪ ಜನ ಬ್ರಾಹ್ಮಣರ ಗೋತ್ರ ಮತ್ತು ಅವರಿಗೆ ನೀಡಿದ ವಿಶಿಷ್ಟ ದತ್ತಿಗಳನ್ನು ಉಲ್ಲೇಖಿಸುತ್ತದೆ.

ಹಾನಗಲ್ಲು ಪರಿಸರದ ಹೊಟ್ಟೂರ ಒಂದು ಮಹಾಘಟಿಕಾಸ್ಥಾನವಾಗಿತ್ತು. ಕದಂಬ ತೋಯಿಮದೇವನ ಅಧಿಕಾರದ ಅವಧಿಯಲ್ಲಿ ನಾಡೊಳ್ ಅಖಿಲ ಘಟಿಕಾಸ್ಥಾನವಿದೆನಿಸಿ ಮೆರೆದುದು. ಅಲ್ಲಿಯ ಗಾವುಂಡ ಗೋದುವರ ಮಾರನಾಗಿದ್ದಂತೆಉಲ್ಲೇಖವಿದೆ.[53] ಅಂದು ಅಧ್ಯಯನ ಅಧ್ಯಾಪನದಲ್ಲಿ ತೊಡಗಿದ್ದ ತಾರಕೇಶ್ವರ ಮತ್ತು ಬಿಲ್ಲೇಶ್ವರ ದೇವಾಲಯಗಳ ತಪೋದನರ ಆಹಾರ ಮತ್ತು ಬಟ್ಟೆಗೆ ದಾನ ಬಿಟ್ಟಿರುವ ವಿಷಯ ಹಾನಗಲ್ಲು ಶಾಸನದಲ್ಲಿದೆ. ಉಲ್ಲೇಖಗಳು ಹಾನಗಲ್ಲು ಪರಿಸರದಲ್ಲಿ ನಡೆಯುತ್ತಿದ್ದ ವಿದ್ಯಾಭ್ಯಾಸವನ್ನು ಸ್ಪಷ್ಟವಾಗುತ್ತದೆ.

ಸಂಪ್ರದಾಯಬದ್ಧ ವ್ಯವಸ್ಥೆಯಲ್ಲಿ ರಚನೆಗೊಂಡ ಪ್ರಾಚೀನ ಸಮಾಜ, ನಂಬಿಕೆ ಸಂಪ್ರದಾಯಗಳೊಂದಿಗೆ ಸಾಂಸ್ಕೃತಿಕ ಅಭಿವೃದ್ಧಿಯತ್ತ ಮುಂದುವರೆಯಿತು.

 


[1] ಕೊಪ್ಪ ಎಸ್.ಕೆ., ತರ್ದವಾಡಿ ನಾಡು : ಒಂದು ಅಧ್ಯಯನ, ಪು.೧೫೧೫೨.

[2] K.I., V, 18, (1119 A.D.) ಮತ್ತು ಅದೆ, 95, (1119 A.D.)

[3] K.I., V, 105, (12th C.)

[4] ಅದೆ, 95, (12th C.)

[5] ಅದೆ, 19, (1121 A.D.)

[6] ಅದೆ, 17, (1118 A.D.)

[7] ಅದೆ, 19, (1121 A.D.)

[8] Moraes, The Kadamba Kula, P.454-5

[9] K.I., V, 18, (1119 A.D.)

[10] S.I.I., XVIII, 135, (1137 A.D.)

[11] K.I., V, 19, (1119)

[12] ಅದೆ, 18, (1119 A.D.)

[13] ಅದೆ, 112, (1338 A.D.)

[14] S.I.I., XX, 365, (13-14th C.)

[15] K.I., I, 18, (1119 A.D.)

[16] ಅದೆ, 142, (1165 A.D.)

[17] ಅದೆ, 76, (1118 A.D.)

[18] K.I., V, 18, (1117 A.D.)

[19] ಪಾಂಡೆ ಬಿ.ಆರ್., ಹಿಂದೂ ಸಂಸ್ಕಾರಗಳು, ಯುಗಯಾತ್ರಿ ಭಾರತೀಯ ಸಂಸ್ಕೃತಿ ಸಂ ಪು.೩೦೧

[20] K.I., V, (1121 A.D.)

[21] Sachu E.C., Alberuni’s India, Vol-II, P.155

[22] A.R.I.E., 1947-48, 304

[23] K.I., V, 60, (1131 A.D.)

[24] ಕಲಬುರ್ಗಿ ಎಂ.ಎಂ., ಧಾರವಾಡ ಜಿಲ್ಲೆಯ ಶಾಸನಸೂಚಿ, ಪು.೬೦

[25] ಅದೆ, ಪು.೬೪

[26] ಅದೆ, 203, (1000 A.D.)

[27] ಅದೆ, 225 (1114 A.D.)

[28] S.I.I., XX, 49, (1076 A.D.)

[29] ಕಲಬುರ್ಗಿ ಎಂ.ಎಂ., ಧಾರವಾಡ ಜಿಲ್ಲೆಯ ಶಾಸನಸೂಚಿ, ಪು.೫೯

[30] I.A., X, P.249, ( 1109 A.D.)

[31] K.I., V, 17, (1118 A.D.)

[32] S.I.I., XX, 49, (1076 A.D.)

[33] K.I., V, 60, (1131 A.D.)

[34] ಪಾವಟೆ ಚೆನ್ನಕ್ಕ, ಹಾನಗಲ್ಲ ಕದಂಬರು, ಪುಟ೯೨

[35] K.I., V, 18. (1119 A.D.)

[36] Kane P.V., History of Dharmasashtra, Vol-II P-871-2

[37] K.I., V, 18. (1119 A.D.)

[38] ಅದೆ, 19, (1121 A.D.)

[39] K.I., V, 18. (1119 A.D.)

[40] ಅದೆ, 19, (1119 A.D.)

[41] ಕೊಪ್ಪ ಎಸ್.ಕೆ., ತರ್ದವಾಡಿ ನಾಡು : ಒಂದು ಅಧ್ಯಯನ, ಪು.೧೭೦

[42] ಉಲ್ಲೇಖ ೩೬ ಮತ್ತು ೩೭ರಲ್ಲಿ ಇವೆ

[43] K.I., V, 59. (1196 A.D.)

[44] ಕಲಬುರ್ಗಿ ಎಂ.ಎಂ., ಧಾರವಾಡ ಜಿಲ್ಲೆಯ ಶಾಸನಸೂಚಿ, ಪು೬೮

[45] Moraes, The Kadamba Kula, P.452-554

[46] ಅದೆ, P.445-6

[47] ಅದೆ

[48] ಅದೆ

[49] ಕಲಬುರ್ಗಿ ಎಂ.ಎಂ., ಮಾನಸೋಲ್ಲಾಸ

[50] ಚಿದಾನಂದಮೂರ್ತಿ ಎಂ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ.

[51] K.I., V, 18. (1119 A.D.)

[52] ಪಾವಟೆ ಚೆನ್ನಕ್ಕ, ಹಾನಗಲ್ಲ ಕದಂಬರು, ಪುಟ೧೧೫

[53] ಅದೆ