ಪ್ರಾಚೀನ ಕಾಲದಿಂದಲೇ ಚತುಸ್ಸಮಯಗಳಾದ ಬೌದ್ಧ, ಜೈನ, ವೈಷ್ಣವ ಹಾಗೂ ಶೈವ ಧರ್ಮಗಳು ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದು, ಇವುಗಳಲ್ಲಿ ಯಾವುದು ಮೊದಲು ಯಾವುದು ಅನಂತರದ್ದೆಂದು ಖಚಿತವಾಗಿ ಹೇಳುವುದು ಕಷ್ಟವಾದರೂ, ತೀರ ಪ್ರಾಚೀನ ಕಾಲದಲ್ಲಿಯೇ ಕರ್ನಾಟಕವು ವೈದಿಕ ಸಂಸ್ಕೃತಿಯ ಗಾಢ ಪ್ರಭಾವಕ್ಕೆ ಒಳಗಾಗಿತ್ತೆನ್ನಬಹುದು. ಕರ್ನಾಟಕವನ್ನು ಆಳಿದ ಅರಸರು ಸಾಮಾನ್ಯವಾಗಿ ಬೌದ್ಧ, ಜೈನ, ವೈಷ್ಣವ ಹಾಗೂ ಶೈವ ಧರ್ಮಗಳ ಪೋಷಕರಾಗಿ, ಚತುಸ್ಸಮಯ ಸಮುದ್ಧರಣರೆಂದು ಕರೆಯಿಸಿಕೊಂಡಿದ್ದಾರೆ.

ಮಹಾಮಂಡಳೇಶ್ವರ ಎರಡನೆಯ ತೈಲಪದೇವ ಹಾಗೂ ಆತನ ರಾಣಿ ಬಾಚಲದೇವಿಯರಿಂದ ಕರೆಗುದರಿಯಲ್ಲಿ ದಂಡನಾಯಕತಿ ಮಲ್ಲಿಯಕ್ಕ ಪ್ರತಿಷ್ಠೆ ಮಾಡಿಸಿದ ಶಂಕರದೇವ, ಕೇಶವದೇವ ಮತ್ತು ಭಾಸ್ಕರದೇವರ ದೇವಾಲಯಗಳಿಗೆ ಭೂದಾನ ಮಾಡಿರುವುದನ್ನು ಕ್ರಿ.. ೧೧೦೯ರ ಶಾಸನವೊಂದು ಉಲ್ಲೇಖಿಸಿದೆ.[1]

ಪರಿಸರದ ಶಾಸನಗಳಲ್ಲಿ ಬೌದ್ಧ ಧರ್ಮದ ಉಲ್ಲೇಖಗಳು ಇಲ್ಲವೆಂದರೂ, ಕಲಕೇರಿ ಶಾಸನವು ಕೀರ್ತಿದೇವನ ಮಡದಿ ಮಾಳಲದೇವಿ ಬೌದ್ಧವಿಹಾರ, ಶಿವಾಲಯ ಮತ್ತು ಮಹಾಭವನಗಳ ನಿರ್ಮಾಣ ಮಾಡಿದಳೆಂದು ತಿಳಿಸುತ್ತದೆ.[2] ಹೀಗಾಗಿ ಪರಿಸರದಲ್ಲಿ ಬೌದ್ಧ ಧರ್ಮದ ಕುರುಹುಗಳನ್ನು ಅಧ್ಯಯನದ ಮೂಲಕ ಕಂಡುಕೊಳ್ಳಲು ಸಾಧ್ಯವಿದೆ.

ಜೈನ ಧರ್ಮಕ್ಕೆ ಸಂಬಂಧಿಸಿದ ಬಸದಿಯೊಂದು ಗ್ರಾಮದಲ್ಲಿದ್ದು, ಅದು ಕಲ್ಯಾಣ ಚಾಳಿಕ್ಯರ ಕಾಲದ ನಿರ್ಮಿತಿಯಾಗಿದೆ. ಬಾದಾಮಿ ಚಾಲುಕ್ಯ ದೊರೆ ಎರಡನೆಯ ಕೀರ್ತಿವರ್ಮನ ಕಾಲಕ್ಕೆ ಸೇರಿದ ಆಡೂರು ಶಾಸನದಲ್ಲಿ, ಸಿಂದರಸನು ಪಾಂಡಿವೂರ ಆಳುತ್ತಿದ್ದಾಗ, ದೋಣಗವುಂಡನಿಂದ ಜಿನಾಲಾಯಕ್ಕೆ ಭೂದಾನ ಮಾಡಿರುವುದನ್ನು ಹೇಳಿದೆ. ಕಲ್ಲಿಸೆಟ್ಟಿಯೆಂಬ ವಡ್ಡವ್ಯವಹಾರಿ ಕರಿಗುದರಿಯಲ್ಲಿ ವಿಜಯ ಪಾರ್ಶ್ವಜಿನೇಂದ್ರ,[3] ಬಮ್ಮಿಶೆಟ್ಟಿ ಬಾಳೇಹಳ್ಳಿಯಲ್ಲಿ ಪಾರ್ಶ್ವನಾಥ[4] ಹಾಗೂ ಸವಣೂರು ಬಮಿಸೆಟ್ಟಿಯಿಂದ ಬೆಳವತ್ತಿಯಲ್ಲಿ ಬ್ರಹ್ಮಜಿನಾಲಯ ಹೀಗೆ ಅನೇಕ ಜೈನಬಸದಿಗಳು ನಿರ್ಮಾಣಗೊಂಡಿದ್ದಲ್ಲದೇ, ಅವುಗಳಿಗೆ ನಿರಂತರ ದಾನ ದತ್ತಿಗಳನ್ನು ಬಿಡಲಾಗಿದೆ. ನಾಗಿಸೆಟ್ಟಿ ಎಂಬುವನ ನೇತೃತ್ವದಲ್ಲಿ ಕುಂಟನಹೊಸಳ್ಳಿ ಊರ ಜನರು ಬಸದಿಯೊಂದಕ್ಕೆ ಭೂದಾನವನ್ನು ನೀಡಿದ್ದಾರೆ.[5]

ಶೈವ ಧರ್ಮ

ಕರ್ನಾಟಕದಲ್ಲಿ ಪ್ರಾಚೀನವೂ ಪ್ರಸಿದ್ಧವೂ ಆದ ಧರ್ಮಗಳಲ್ಲಿ ಶೈವಧರ್ಮವೂ ಒಂದು. ಶೈವಪರಂಪರೆಯ ಅನೇಕ ಪಂಗಡಗಳನ್ನು ಹೀಗೆ ಹೇಳಲಾಗಿದೆ.

            “ಕಾಪಾಲಂ ಲಾಕುಲಂ ವಾಮಂ ಭೈರವಂ ಪೂರ್ವಪಶ್ಚಿಮಂ
ಪಂಚರಾತ್ರಂ ಪಾಶುಪತಂ ತಥಾನ್ಯಾನಿಶ್ರೀಹಸ್ರಶಃ[6]

ಎಲ್ಲ ಮಾರ್ಗದವರೂ ಕರ್ನಾಟಕದಲ್ಲಿ ಇದ್ದರು. ಹಾನಗಲ್ಲು ಪ್ರದೇಶದಲ್ಲಿ ದೊರೆತಿರುವ ಬಹಳಷ್ಟು ಶಾಸನಗಳು ಶೈವಪರವಾಗಿರುವುದನ್ನೇ ಕಾಣುತ್ತೇವೆ. ಗ್ರಾಮದ ಶಾಸನಗಳಲ್ಲಿಸ್ವಸ್ತಿ ಸಮಧಿಗತ ಪಂಚಮಹಾಮಂಡಳೇಶ್ವರ ಬನವಾಸಿ ಪುರವರಾಧೀಶ್ವರ ಜಯನ್ತಿಮಧುಕೇಶ್ವರ ದೇವಲಬ್ದ ವರಪ್ರಸಾದವುಂಗನಂ ಮೃಗವುದಾಮೊದನುಂ…..”[7] ಎಂದು ಮುಂತಾಗಿ ಸ್ತುಸಿರುವುದರಿಂದ ಕದಂಬ ಅರಸರು ಶೈವಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರೆಂದು ಹೇಳಬೇಕಾಗುತ್ತದೆ. ಅದರಲ್ಲೂ ೧೧ನೆಯ ಶತಮಾನದ ಮಧ್ಯದವರೆಗೂ ಪರಿಸರದಲ್ಲಿ ಶೈವಧರ್ಮದ ಶಾಖೆಯಾದ ಕಾಳಾಮುಖವು ಪ್ರಬಲವಾಗಿತ್ತು. ಇಲ್ಲಿಯ ಅನೇಕ ಗ್ರಾಮಗಳಲ್ಲಿಯ ಶೈವದೇವಾಲಯಗಳಿಗೆ ಸ್ಥಾನಪತಿಗಳು ಕಾಳಾಮುಖರಾಗಿದ್ದರು.

ಕಾಳಾಮುಖ ಗುರುಗಳನ್ನು ಸಾಮಾನ್ಯವಾಗಿ ಸ್ವಸ್ತಿಯಮನಿಯಮ ಸ್ವಾಧ್ಯಾಯಧ್ಯಾನ ಧಾರಣಮೋನಾನುಷ್ಟಾನ ಸಮಾಧಿಶೀಳ ಗುಣಸಂಪನರಪ್ಪ[8] ಎಂದು ಹೇಳಿದೆ. ಶ್ರೀಮದನಾದಿ ಪಟ್ಟಣ ಹಾನುಂಗಲ್ ಚಿಕ್ಕೇಶ್ವರ ದೇವರಾಚಾರ್ಯ ವಾಗೀಶ್ವರದೇವರಂ, ಬಿಲ್ಲೇಶ್ವರ ದೇವರಾಚಾರ್ಯ ಚಂದ್ರಭೂಷಣ ದೇವರಂಶ್ರೀಮದನಾದಿಪಟ್ಣ ಬಂಕಾಪುರದ ಶ್ರೀಮನ್ನಗರೇಶ್ವರ ದೇವರ ಆಚಾರ್ಯ ರಾಜಗುರು ವಿಮಳಶಕ್ತಿ ದೇವರು, ಶ್ರೀಮತ್ತಂಬುಲಿಗೇಶ್ವರ ದೇವರ ಸ್ಥಾನದಾಚಾರ್ಯ ವಾಮಶಕ್ತಿ ಪಂಡಿತದೇವರು[9] ಎಂದು ಶಾಸನಗಳಲ್ಲಿ ವರ್ಣಿತರಾಗಿದ್ದಾರೆ. ಹಾನಗಲ್ಲಿನ ಶಾಸನಗಳಲ್ಲಿ ಉಲ್ಲೇಖವಾದ ಕಾಳಮುಖ ಗುರುಗಳೆಂದರೆ,

. ಶ್ರೀಮತು ಸಕಳೇಶ್ವರದ ಪಂಡಿತ ದೇವರು[10]

. ತ್ರಿಭುವನಸಕ್ತಿ ಪಂಡಿತರು[11]

. ದೇವರಾಸಿ ಪಂಡಿತರು[12]

. ಬಿಲ್ಲೇಶ್ವರ ದೇವರಾಚಾರ್ಯ ಚಂದ್ರಭೂಷಣ ದೇವರು[13]

. ಭೂಮೀಶ್ವರ ದೇವರ ಸ್ಥಾನದಾಚಾರ್ಯರಪ್ಪ ವಾಮೇಶ್ವರ ದೇವರು[14]

. ತಂಬುಲಿಗೇಶ್ವರದ ಸ್ಥಾನಾಚಾರ್ಯ ವಾಮಶಕ್ತಿ ಪಂಡಿತದೇವರು[15]

. ಶ್ರೀಮನ್ನೆಲೇಶ್ವರ ದೇವರಾಚಾರ್ಯ ರಾಜಗುರು ಅಮರೇಶ್ವರ ದೇವರು[16]

. ಶ್ರೀಮದನಾದಿ ಪಟ್ಟಣ ಹಾನುಂಗಲ್ ಚಿಕ್ಕೇಶ್ವರ ದೇವರಾಚಾರ್ಯ ವಾಗೀಶ್ವರ ದೇವರು[17]

. ಶ್ರೀಮದನಾದಿಪಟ್ಟಣಂ ಬಂಕಾಪುರದ ಶ್ರೀಮನ್ನಗರೇಶ್ವರ ದೇವರ ಆಚಾರ್ಯ ರಾಜಗುರು ವಿಮಳಶಕ್ತಿ ದೇವರು[18]

ಪರಿಸರದಲ್ಲಿ ಕಾಳಾಮುಖ ಪಂಥವು ಪ್ರಭುವರ್ಗ ಮತ್ತು ಅಧಿಕಾರಿಗಳನ್ನು ಆಶ್ರಯಿಸಿ ಬೆಳೆಯದೇ ದೇವಾಲಯಗಳನ್ನು ಆಶ್ರಯಿಸಿ ಬೆಳೆಯಿತು. ಮೇಲಿನ ಉಲ್ಲೇಖಗಳಲ್ಲಿ ಕೆಲವು ಕಾಳಾಮುಖ ಪಂಡಿತರನ್ನು ರಾಜಗುರುಗಳು ಎಂದು ಕರೆದಿರುವುದು ಕಂಡುಬಂದರು ಅವರು ಯಾರಿಗೆ ರಾಜಗುರುಗಳಾಗಿದ್ದರೆಂಬುವುದು ಸ್ಪಷ್ಟವಾಗುವುದಿಲ್ಲ.

ಸಕಳೇಶ್ವರದ ಪಂಡಿತ ದೇವರು

ಕ್ರಿ.. ೧೧೧೯ರ ಹಳೆಕೋಟೆಯ ಅಡ್ಡೆರ ಹಿತ್ತಲದಲ್ಲಿರುವ ಶಾಸನದಲ್ಲಿ[19]ಶ್ರೀಮತು ಸಕಳೇಶ್ವರದ ಪಂಡಿತ ದೇವರ ತಂಮದಿರಪ್ಪ ತ್ರಿಭುವನಸಕ್ತಿ ಪಂಡಿತರ ಕಾಲಂ ಕರ್ಚ್ಚಿ ಧಾರಾಪೂರ್ವಕಂ ಮಾಡಿ ಸ್ರುಮಲಿ ದೇವರ್ಗ್ಗೆ ಬಿಟ್ಟಿ ಧರ್ಮಮೆನ್ತೆಂದಡೆ…” ಎಂದು ಸಕಳೇಶ್ವರನ ಉಲ್ಲೇಖ ಬರುತ್ತದೆ. ಬಹುಷಃ ಇವನು ಅಲ್ಲಿರುವ ತೆಲ್ಲಿಗೇಶ್ವರ ದೇವರ ಸ್ಥಾನಾಚಾರ್ಯನಾಗಿರಬೇಕು. ಶಾಸನವು ತೃಟಿತವಾಗಿರುವುದರಿಂದ ಸ್ಪಷ್ಟವಾಗುವುದಿಲ್ಲ.

ತ್ರಿಭುವನಸಕ್ತಿ ಪಂಡಿತರು

ಸಕಳೇಶ್ವರ ಪಂಡಿತನ ಸಹೋದರನಾದ ತ್ರಿಭುವನಸಕ್ತಿ ಪಂಡಿತನ ಉಲ್ಲೇಖ ಅದೇ ಶಾಸನದಲ್ಲಿದೆ.[20]

ಬಿಲ್ಲೇಶ್ವರಾಚಾರ್ಯ ದೇವರಾಸಿಪಂಡಿತರು

ಕ್ರಿ.. ೧೧೧೯ರ ಹಾನಗಲ್ಲಿನ ಶಾಸನದಲ್ಲಿ ಉಕ್ತವಾಗಿರುವ ಬಿಲ್ಲೇಶ್ವರ ದೇವರ ಆಚಾರ್ಯರಾಗಿದ್ದ ದೇವರಾಸಿ ಪಂಡಿತರನ್ನು[21]ಸ್ವಸ್ತಿಯಮನಿಯಮ ಸ್ವಾಧ್ಯಾಯಧ್ಯಾನ ಧಾರಣಮೋನಾನುಷ್ಟಾನ ಸಮಾಧಿಶೀಳ ಗುಣಸಂಪನರಪ್ಪ ಶ್ರೀ ದೇವರಾಸಿ ಪಂಡಿತರ ಕಾಲಂ ಕರ್ಚ್ಚಿ ಧಾರಾಪೂರ್ವಕಂ ಮಾ….೨೧ ಎಂದು ಮಹಾಮಂಡಳೇಶ್ವರ ತೈಲಪದೇವನು ದಾನ ಕೊಟ್ಟಿರುವುದನ್ನು ಹೇಳಿದೆ. ಇವನು ಹಾನಗಲ್ಲಿನ ಬಿಲ್ಲೇಶ್ವರ ದೇವಾಲಯದ ಸ್ಥಾನಚಾರ್ಯನಲ್ಲದೆ, ಬೆಳವತ್ತಿಯ ಕೋಗಲೇಶ್ವರ, ಪುಲಿಗೆರೆಯ ರಾಮೇಶ್ವರ, ಹೊಟ್ಟೂರಿನ ಕೇಸವೇಶ್ವರ, ಆಡೂರಿನ ಸ್ವಯಂಭೂದೇವ ಮತ್ತು ತಿಳಿವಳ್ಳಿಯ ಮೂಲಸ್ಥಾನ ದೇವರ ಆಚಾರ್ಯವಂತಿಯನ್ನು ಕೈಗೊಂಡಿರುವುದು ಪರಿಸರದ ಶಾಸನಗಳು ಉಲ್ಲೇಖಿಸಿವೆ.[22] ಇವನು ಸುಪ್ರಸಿದ್ಧ ಆಚಾರ್ಯ ಅಮೃತರಾಸಿಪಂಡಿತರ ಶಿಷ್ಯನಾಗಿದ್ದನು.

ಬಿಲ್ಲೇಶ್ವರ ದೇವರಾಚಾರ್ಯ ಚಂದ್ರಭೂಷಣ ದೇವರು

ಕ್ರಿ.. ೧೧೧೭ರ ತೋಯಿಮದೇವ (ತೈಲಪದೇವ) ಶಾಸನವೊಂದರಲ್ಲಿಬಿಲ್ಲೇಶ್ವರ ದೇವರಾಚಾರ್ಯ ಚಂದ್ರಭೂಷಣ ದೇವರಂಎಂಬ ಉಲ್ಲೇಖ ಬರುತ್ತದೆ.[23] ಅಲ್ಲದೆ ಪರಿಸರದ ಹಲವಾರು ದೇವಾಲಯಗಳ ಅಧಿಕಾರವನ್ನು ವಹಿಸಿಕೊಂಡಿದ್ದನು. ಬಂಕಾಪುರ ಶಾಸನವೊಂದು ಅವನ ವ್ಯಕ್ತಿತ್ವವನ್ನು ಹೀಗೆ ಪರಿಚಯಿಸಿದೆ,

            “ಒದವಿದ ಮೋಹಪಾಶಮನದಂ ಪಛೆದಿಕ್ಕಿ ಕಳತ್ರಮೆಂಬ ಕಂ
ಬದ ತೊಡರಂ ಬಿಡಿರ್ಚಿ ವಿಶಯಂಗಳನೆಯ್ದೆಂ ಕಿವಿರ್ಚ್ಚಿರಾಗಮೆಂ
ಬುದಧಿಯನಿಂಟ ಬನ್ದು ಶಿವಯೋಗಸುಧಾಂಬುನದೀ ಪ್ರವಾಹದೊಳು
ಮುದದವಗಾಂಹಮಿರ್ದುದಹ ಚಂದ್ರಭೂಷಣ ಗನ್ದಸಿಂಧುರ [24]

ಮಹಾಮಂಡಳೇಶ್ವರ ತೈಲಪದೇವನ ಆಳ್ವಿಕೆಯಲ್ಲಿ ಹಾನಗಲ್ಲು ಪರಿಸರದ ಎಡೆವೊಳಲು ಎಪ್ಪತ್ತರ ಭಾಗ ಪಿರಿಯೂರ ನಾಲ್ವರು ಗಾವುಂಡರು ಗಡಿಯಂಕಮಲ್ಲನ ಬೀಡಿನಲ್ಲಿ ಸೋಮೇಶ್ವರದೇವಸ್ಥಾನ ನಿರ್ಮಾಣ ಮಾಡಿಸಿ, ಅದನ್ನು ಚಂದ್ರಭೂಷಣ ಪಂಡಿತರ ಪಾದತೊಳೆದು ಅರ್ಪಿಸಿರುವರು. ದೇವಾಲಯದಲ್ಲಿ ತಪಸ್ಸು ಕೈಕೊಳ್ಳುವ ತಪೋಧನರಿಗೆ ಊಟ ವಸತಿಯ ಅವಕಾಶ ಕಲ್ಪಿಸಿ ಕೊಡಲಾಗಿದ್ದು, ಅವರ ಆಹಾರ ಮತ್ತು ದೇವರ ನೈವೇದ್ಯಕ್ಕೆ ೨೫ ಕಮ್ಮ, ಬೀಡಿನ ದಕ್ಷಿಣ ಕೊಳದೊಳಗೆ ಬೆದ್ದಲು ೫೦ ಕಮ್ಮ, ಬಮ್ಮಸೆಟ್ಟಿಯ ಕೆರೆಯ ಕೆಳಗೆ ೧೫ ಕಮ್ಮ ಹೂದೋಟ ಬಿಟ್ಟಿರುವರು.[25]

ಚಂದ್ರಭೂಷಣ ಪಂಡಿತ ಬಂಕಾಪುರ ನಗರೇಶ್ವರ ದೇವಾಲಯದ ಸ್ಥಾನಾಚಾರ್ಯನಾಗಿಯೂ ಕಾರ್ಯನಿರ್ವಹಿಸುತ್ತಿದ್ದನು. ಅವನ ಕಾಲದಲ್ಲಿ ದೇವಾಲಯವು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯಿತು.[26]

ತಂಬುಲಿಗೇಶ್ವರದ ಸ್ಥಾನಾಚಾರ್ಯ ವಾಮಶಕ್ತಿ ಪಂಡಿತದೇವರು

ಹಾನಗಲ್ಲು ಪರಿಸರದ ಹತ್ತಾರು ಶಸನಗಳಲ್ಲಿ ಕಾಣಿಸಿಕೊಂಡಿರುವ ವಾಮಶಕ್ತಿ ಪಂಡಿತರುಬೆಳ್ಳಿಟ್ಟಿಗೆಯಪುರದ ಸೋಮೇಶ್ವರದೇವರ ಸ್ಥಾನಾಚಾರ್ಯ ದೇವರಾಸಿ ಪಂಡಿತರ ಶಿಷ್ಯರಪ್ಪ ಶ್ರೀಮತ್ತಂಬುಲಿಂಗೇಶ್ವರ ದೇವರ  ಸ್ಥಾನಾಚಾರ್ಯ ವಾಮಶಕ್ತಿ ಪಂಡಿತ ದೇವರುಎಂಬ ಉಲ್ಲೇಖದಿಂದ, ಇವನು ದೇವರಾಸಿ ಪಂಡಿತನ ಶಿಷ್ಯನಾಗಿದ್ದನೆಂದು ವ್ಯಕ್ತವಾಗುತ್ತದೆ.

ಕದಂಬ ಮಯೂರವರ್ಮನ ಕಾಲದಲ್ಲಿ ವಾಮಶಕ್ತಿ ಪಂಡಿತ ಕಾಳಾಮುಖ ಪರಂಪರೆಯಲ್ಲಿ ಅಗ್ರಗಣ್ಯನಾಗಿದ್ದ. ಕ್ರಿ.. ೧೦೩೫ರ ಆಡೂರಿನ ಶಾಸನದಲ್ಲಿ ಅವನ ಜೀವನದಲ್ಲಿ ನಡೆದ ಘಟನೆಯೊಂದನ್ನು ಇಂತು ಹೇಳಿದೆ, ಭಂಗಿಯಿನ್ದೊಳಗುಳ್ಳರ(೦ಗೆ) ನೆಯರ ಪುತ್ರಂ ಗಂಗೆಯೆಂಗೆರಡಲ್ತಾಳ್ದಿರ ಜಿನದಾಸಿ ತುಂಗಪರಾಕ್ರಮಂ ಪಿಂಗದು ಮನದಿಂ ತ್ರಿಪುರಂಗಳ ನಿಚ್ಚಾತನ ಭಯವಕ್ಕೆ ಪಾಂಗಿ ಮಾರ್ಮಲೆವರ್ಗ್ಗೆಯಂಗಜವೈರಿ ತಾಂ ಭಂಗಿಯ(ಲ್ತ) ಪದಂಕಕಾಛ ವಾಮದೇವ ಎಂದು ವಿವರಿಸಿದೆ.[27] ಬಾಗೀಶ್ವರದೇವರ ತದಪೋಧನರ ಅಗ್ರಾಸನಕ್ಕೆ ತಂಬುಲಿಗೇಶ್ವರ ದೇವರ ಸ್ಥಾನಾಚಾರ್ಯ ವಾಮಶಕ್ತಿಗಳ ಪಾದತೊಳೆದು ಒಂದು ಮತ್ತರು ಗದ್ದೆ, ಮಾದೇವಸಿದ್ದೇಶ್ವರ ನೈವೇದ್ಯಕ್ಕೆ, ತಪೋಧನರ ಊಟಕ್ಕೆ ನಾಲ್ವತ್ತು ಕಮ್ಮ ಗದ್ದೆ, ತಂಬಿಗೇಶ್ವರಕ್ಕೆ ಕಮ್ಮ ೨೦, ಪುನ್ನೇಶ್ವರದೇವರಿಗೆ ಕಮ್ಮ ೧೨ನ್ನು ದತ್ತಿ ಕೊಟ್ಟಿರುವರು.[28] ಕೊಂಡರಟ್ಟೆ ಎಪ್ಪತ್ತಾರರೊಳಗನ ಕಲಿದೇವೇಶ್ವರ ನೈವೇದ್ಯ ತಪೋಧನರ ಅಗ್ರಸ್ಥಾನಕ್ಕೆ ಕೊಳಗಾವುಂಡನೆಂಬುವನು ತಂಬುಲಿಂಗೇಶ್ವವರ ಸ್ಥಾನಾಚಾರ್ಯ ವಾಮಶಕ್ತಿಗಳ ಪಾದ ತೊಳೆದು ಐವತ್ತು ಕಮ್ಮ ಗದ್ದೆ ದತ್ತಿ ಬಿಟ್ಟಿರುವನು.[29]

ವಾಮಶಕ್ತಿಗಳ ಬಹುಮುಖ ಪಾಂಡಿತ್ಯವನ್ನು ಹೇಳುವ ಪದ್ಯ ಒಂದು ಇಂತಿದೆ,

            “ವ್ರತದೀಕ್ಷಾವಿಧಿ ಕುಂಡಮಂಡಳವಿಧಾನಂ ಲಿಂಗಪೀಠಕ್ರಮಂ
ಪ್ರತಿಮಾದೂಷಣ ಶೋಷಣ ಭುವನಕೋಶಂ ವಾಸ್ತುಭೂದೇವಸಂ
ಸ್ಮೃತಿ ಭೋಭೇದ ಪರೀಕ್ಷೆ ದೇವನಿವಹ ಪ್ರಾಸಾದ ಮೆಂಬಾಗಮ
ಸ್ಥಿತಿ ವಿದ್ಯಾವಳಿ ವಾಮಶಕ್ತಿಮುನಿಯಿಂ ವಿಖ್ಯಾತಮಾಯ್ತುರ್ವಿಯೋಳ್ [30]

ವಿಮಳಶಕ್ತಿ ದೇವರು

ಹಾನಗಲ್ಲಿನ ಕ್ರಿ.. ೧೧೭೯ರ ಶಾಸನವೊಂದರಲ್ಲಿಶ್ರೀಮದನಾದಿಪಟ್ಟಣಂ ಬಂಕಾಪುರದ ಶ್ರೀಮನ್ನಗರೇಶ್ವರ ದೇವರ ಆಚಾರ್ಯ ರಾಜಗುರು ವಿಮಳಶಕ್ತಿ ದೇವರು[31] ಎಂದು ಉಲ್ಲೇಖಿಸಿದೆ. ಬೊಮ್ಮನಗೌಡನು ಸೆಂಬೊಳದ ಗೌಡಕಿಯನ್ನು ಪಡೆಯುವ ಸಂದರ್ಭದಲ್ಲಿ ಹಲವಾರು ಗಣ್ಯರು, ಸ್ಥಾನಾಚಾರ್ಯರು ಮತ್ತು ಮಹಾಜನರ ಉಪಸ್ಥಿತಿಯನ್ನು ಉಲ್ಲೇಖಿಸುತ್ತದೆ. ಇವನು ಬಂಕಾಪುರದ ನಗರೇಶ್ವರ ದೇವಾಲಯದ ಸ್ಥಾನಾಚಾರ್ಯರಲ್ಲಿ ಪ್ರಮುಖನಾಗಿ ಕಂಡುಬರುತ್ತಾನೆ.

ಇವನ ವ್ಯಕ್ತಿತ್ವವನ್ನು ಶಾಸನವೊಂದು ಹೀಗೆ ವರ್ಣಿಸಿದೆ,

ಪರಹಿತಚಿತ್ತ’ ‘ಷಡಕ್ಷರ ಮಂತ್ರಸಿದ್ಧ’ ‘ಜಂಗಮ ಪಾರಿಜಾತಬಿರುದುಗಳೊಂದಿಗೆ ಗೌರವಿಸಿದೆ. ಕದಂಬ ಎರಡನೆಯ ಕೀರ್ತಿದೇವರಸನ ಕಾಲದಲ್ಲಿ ವಿಮಳಶಕ್ತಿಯ ಮಹಿಮೋನ್ನತ ತಪಪ್ರಭಾವವನ್ನು ಬಂಕಾಪುರ ಶಾಸನವು ಇಂತು ವರ್ಣಿಸಿದೆ,

            ‘ಆತತಕೀರ್ತ್ತಿಯಂ ವಿಮಳಶಕ್ತಿಯನಿ…….ಕ್ರಿಯಂ
ಸಾಸ್ವಿಕದಾನವಂ ಮನುಚರಿತ್ರನನಿಜಿನತ ಪುಛ್ವಿಚಾಪನಂ
ನೀತಿವಿಚಾರನಂ ಮುನಿಕಳಾಪನ ನಿರ್ಮಿತಿ ದೇವರ್ಗ್ಗೆ….
ತಳವಂದ್ಯನಂ ಮರುಳೆ ಬೇಡವೊ ಜಂಗಮ ಪಾರಿಜಾತನಂ[32]

ಇವನು ತನ್ನ ಬದುಕಿನಲ್ಲಿ ಕೈಕೊಂಡ ಜನಪ್ರಿಯ ಕಾರ್ಯಗಳು ಹೀಗಿವೆ,

            ವಿರಚಿಪನರ್ತ್ಥಿಯಿಂ ಸುರಗ್ರಿಹಾವಳಿಯಂ ವಿವಿಧ ಪ್ರಕಾರದಿಂ
…….
ಪತ್ರಕ ವಿರಾಜಿತಮಾಗಿರಲೆಂತು ನೋರ್ಪಡಂ
ಪರಹಿತಚಿತ್ತಂ ವಿಮಳಶಕ್ತಿಯಲೇಶ್ವರನೆಂದು ಲೀಲೆಯಿಂ
ಪರಸು ಮನೋರಥಸಿದ್ಧಿಯನಾವ ಕಾಲ ಮುಂ||[33]

ವೈಷ್ಣವ ಧರ್ಮ

ಶೈವ ಧರ್ಮದಂತೆ ಹಿಂದೂ ಧರ್ಮದ ಇನ್ನೊಂದು ಶಾಖೆಯಾದ ವೈಷ್ಣವ ಧರ್ಮವು ಹಾನಗಲ್ಲು ಪರಿಸರದಲ್ಲಿ ಪ್ರಚಲಿತವಿತ್ತು. ವಿಷ್ಣುವಿನಲ್ಲಿರಿಸಿದ ಅಚಲವಾದ ಭಕ್ತಿಯೆ ಭವಸಾಗರದಿಂದ, ಸಾಧಕರನ್ನು ಮುಕ್ತಮಾಡುತ್ತದೆಯೆಂದು ವೈಷ್ಣವ ಧರ್ಮ ಹೇಳುತ್ತದೆ. ಧರ್ಮವು ಅಭಿವೃದ್ಧಿ ಹೊಂದುತ್ತ ಹೋದಂತೆ ನಾರಾಯಣ ಕಲ್ಪನೆಯನ್ನು ಮೈಗೂಡಿಸಿಕೊಂಡಿತು. ಧರ್ಮದವರಿಗೆ ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆ, ಭಾಗವತ ಇವು ಪ್ರಮಾಣ ಗ್ರಂಥಗಳು.[34] ಪರಿಸರದಲ್ಲಿ ಶೈವ ಧರ್ಮದಷ್ಟು ಇದು ಪ್ರಭಲವಾಗಿರಲಿಲ್ಲವಾದರೂ ಅಲ್ಲಿರುವ ಶಾಸನವೊಂದರಲ್ಲಿ

            “ಶ್ರೀಜಯತುಷಕ……..ಪ್ಪತ್ತೊಂದನೆಯ
ವಿಭವ ಸಂವಛರದ ವಯಿಶಾಕ
ಶು ೧೦ ಮಾದವ ದೇವರ ಶ್ರೀಮೂ
ರ್ತಿಯಂ ಹಾವಣಿಗೆಯ ಚಂದಾಜ
(
ಮಾಡಿ) ಮಂಗಳ ಮಾಹಾ ಶ್ರೀ ಶ್ರೀ

ಅಲ್ಲಿರುವ ಮಾಧವ ದೇವಾಲಯದಲ್ಲಿರುವ ಮಾದವ ಮೂರ್ತಿಯ ಪಾದಪೀಠದ ಮೇಲಿರುವ ಶಾಸನವು ಗ್ರಾಮದಲ್ಲಿಯ ವೈಷ್ಣವ ಧರ್ಮದ ಉಲ್ಲೇಖವನ್ನು ತಿಳಿಸುತ್ತದೆ.[35]

ಹೀಗೆ ಹಾನಗಲ್ಲು ಪರಿಸರದ ಪುರಾತತ್ವ ಮತ್ತು ಸಾಹಿತ್ಯದ ಆಧಾರಗಳು ಪ್ರಾಚೀನ ಕಾಲದಲ್ಲಿ ಪ್ರಚಲಿತವಿದ್ದ ಧರ್ಮಗಳು, ಅವುಗಳ ಆಚಾರಸಂಪ್ರದಾಯಗಳನ್ನು ತಕ್ಕಮಟ್ಟಿಗೆ ಒದಗಿಸುತ್ತವೆ.

 


[1] ಕಲಬುರ್ಗಿ ಎಂ.ಎಂ., ಧಾರವಾಡ ಜಿಲ್ಲೆಯ ಶಾಸನಸೂಚಿ, ಪು.೫೯

[2] ಅಡಿಟಿಪ್ಪಣಿ ೨೭ರಲ್ಲಿ ಇದ್ದಂತೆ

[3] ಕಲಬುರ್ಗಿ ಎಂ.ಎಂ., ಧಾರವಾಡ ಜಿಲ್ಲೆಯ ಶಾಸನಸೂಚಿ, ಪು-೫೯

[4] ಅದೆ

[5] ಅದೆ

[6] ಪಾಟೀಲ ಭೋಜರಾಜ, ನಾಗರಖಂಡ-೭೦ : ಒಂದು ಅಧ್ಯಯನ, ಪು.೪೭೧

[7] Moraes, The Kadamba Kula, P.45

[8] K.I., V, 18, (1119 A.D.)

[9] K.K., P.454, (1179 A.D.)

[10] K.I., V, 95, (1119 A.D.)

[11] ಅದೆ

[12] ಅದೆ, 19, (1119 A.D.)

[13] ಅದೆ

[14] ಅಡಿಟಿಪ್ಪಣಿ ೭ರಲ್ಲಿ ಪು.೪೪೧

[15] ಅದೆ

[16] Moraes, The Kadamba Kula, P.454

[17] ಅದೆ

[18] ಅದೆ

[19] K.I., V, 95, (1119 A.D.)

[20] ಅದೆ

[21] ಅದೆ

[22] ವಿವರಗಳಿಗಾಗಿ ನೋಡಿ ಪಾವಟೆ ಚೆನ್ನಕ್ಕ, ಹಾನಗಲ್ಲ ಕದಂಬರು, ಪುಟ.೧೪೬

[23] Moraes, The Kadamba Kula, P.454

[24] S.I.I., XVIII, 139, (1137 A.D.)

[25] ಪಾವಟೆ ಚೆನ್ನಕ್ಕ, ಹಾನಗಲ್ಲ ಕದಂಬರು, ಪುಟ.೧೪೮

[26] ಅದೆ, ಪು.೧೪೯

[27] S.I.I., XX, 34, (1034-35 A.D.)

[28] ಪಾವಟೆ ಚೆನ್ನಕ್ಕ, ಹಾನಗಲ್ಲ ಕದಂಬರು, ಪುಟ.೧೫೪

[29] ಅದೆ

[30] ಅದೆ

[31] Moraes, The Kadamba Kula, P.454

[32] ಪಾವಟೆ ಚೆನ್ನಕ್ಕ, ಹಾನಗಲ್ಲ ಕದಂಬರು, ಪುಟ.೧೫೧

[33] ಅದೆ

[34] ಪಾಟೀಲ ಭೋಜರಾಜ, ನಾಗರಖಂಡ-೭೦ : ಒಂದು ಅಧ್ಯಯನ, ಪು.೪೮೮

[35] K.I., V, 112, (1338 A.D.)