ಹಾನಗಲ್ಲು ಚಾರಿತ್ರಿಕವಾಗಿ ಪ್ರಸಿದ್ಧಿ ಹೊಂದಿರುವುದು ಕದಂಬ ಶಾಖೆಯ ಆಳ್ವಿಕೆಯಿಂದ ಎಂಬುದು ತಿಳಿದ ಸಂಗತಿ. ಕ್ರಿ.. ೧೧ನೆಯ ಶತಮಾನದ ಕೊನೆಯ ಭಾಗದಿಂದ ಕ್ರಿ.. ೧೩ನೆಯ ಶತಮಾನದ ಆದಿ ಭಾಗದವರೆಗೆ ಪ್ರದೇಶದಲ್ಲಿ ಕದಂಬರು ಆಳ್ವಿಕೆ ನಡೆಸಿದ್ದರು. ಆರಂಭದಲ್ಲಿ ಬನವಾಸಿಯನ್ನು, ಬಳಿಕ ಹಾನಗಲ್ಲನ್ನು ರಾಜಧಾನಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದುದು ಗಮನೀಯ.

ಹಾನಗಲ್ಲು ಪರಿಸರ ಮಲೆನಾಡ ಪರಿಸರವೇ ಆಗಿದೆ. ಇದು ಭೌಗೋಳಿಕವಾಗಿ ಬೆಟ್ಟ ಗುಡ್ಡ, ನದಿ ಕೊಳ್ಳಗಳಿಂದ ಕೂಡಿದೆ. ಇಲ್ಲಿ ಬೆಳೆಯುವ ಶ್ರೀಗಂಧ ಮೊದಲಾದ ಬೆಲೆಬಾಳುವ ಮರಗಿಡಗಳು, ತೋಟಗಾರಿಕೆ ಬೆಳೆಗಳು ಹಾಗೂ ಭತ್ತ ಮೊದಲಾದ ಕೃಷಿ ಬೆಳೆಗಳು ಪ್ರಾಚೀನ ಕಾಲದಿಂದ ಪ್ರಸಿದ್ಧಿ ಪಡೆದವು. ಪ್ರದೇಶದಲ್ಲಿ ಕರ್ನಾಟಕವನ್ನು ಆಳಿದ ವಿವಿಧ ಅರಸು ಮನೆತನಗಳಾದ ಮೌರ್ಯ, ಶಾತವಾಹನ, ಕದಂಬ, ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಹೊಯ್ಸಳ, ವಿಜಯನಗರ ಹಾಗೂ ನಂತರ ಬಂದ ಅರಸು ಮನೆತನಗಳ ಆಳ್ವಿಕೆಯನ್ನು ಹಾಸನ ಸಾಹಿತ್ಯಗಳಿಂದ ತಿಳಿದುಬರುತ್ತದೆ.

ಹಾನಗಲ್ಲು ಪ್ರದೇಶದ ವ್ಯಾಪಾರವಾಣಿಜ್ಯಗಳನ್ನು ಅರಿಯಬೇಕಾದರೆ ಕರ್ನಾಟಕದ ಪ್ರಾಚೀನ ವ್ಯಾಪಾರವಾಣಿಜ್ಯದ ಹಿನ್ನೆಲೆ ಅತ್ಯಗತ್ಯವಾಗಿದೆ. ಕಾರಣವೆಂದರೆ ಒಂದೇ ಪ್ರದೇಶದ ಆರ್ಥಿಕ ಸಂಗತಿಗಳನ್ನು ತಿಳಿಯಲು ವಿಫುಲವಾದ ಆಕರಗಳಿರುವುದಿಲ್ಲ. ವಿವಿಧ ಭಾಗಗಳಲ್ಲಿ ಲಭ್ಯವಿರುವ ಮಾಹಿತಿಗಳನ್ನು ಆಧರಿಸಿ ವ್ಯಾಪಾರವಾಣಿಜ್ಯದ ಸಮಗ್ರ ಚಿತ್ರಣವನ್ನು ನೀಡಲು ಸಾಧ್ಯವಾಗುತ್ತದೆ.

ಕರ್ನಾಟಕದಲ್ಲಿ ವ್ಯಾಪಾರವು ಕ್ರಿ.ಪೂ. ಶತಮಾನಗಳಷ್ಟು ಹಿಂದೆ ಹೋಗುತ್ತದೆ. ಪ್ರಾಚೀನ ಭಾರತದ ಅರಸು ಮನೆತನವಾದ ಮೌರ್ಯ ಸಾಮ್ರಾಜ್ಯ ಕಾಲದ ಹೊತ್ತಿಗೆ ಉತ್ತರ ಭಾರತವು ದಕ್ಷಿಣದ ರಾಜ್ಯಗಳೊಂದಿಗೆ ಧಾರ್ಮಿಕ ಹಾಗೂ ಆರ್ಥಿಕ ಸಂಪರ್ಕವನ್ನು ಸಾಧಿಸಿದ್ದಿತು.

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಕೃಷಿಯು ಜನರ ಮೂಲ ಕಸುಬಾಗಿದ್ದಿತು. ಆದುದರಿಂದ ಕೃಷಿಯಲ್ಲಾದ ಅಧಿಕ ಉತ್ಪಾದನೆ, ಅವುಗಳ ಮಾರಾಟ, ಮಾರಾಟಕ್ಕಾಗಿ ಬೇಕಾದ ಮಾರಾಟ ಕೇಂದ್ರಗಳು, ವ್ಯಾಪಾರಗಳು, ವ್ಯಾಪಾರ ಸಂಘಗಳು ಹಾಗೂ ವ್ಯಾಪಾರ ಮಾರ್ಗಗಳು ಒಂದೊಂದಾಗಿ ಕಾಣಿಸಿಕೊಂಡವು. ಬಗೆಯ ಪ್ರಕ್ರಿಯೆ ನಗರೀಕರಣಕ್ಕೂ ಎಡೆಮಾಡಿಕೊಟ್ಟಿತೆನ್ನಬಹುದು.

ವ್ಯಾಪಾರದ ಬೆಳವಣಿಗೆಯೊಂದಿಗೆ ಮುಂದೆ ಮಹಾನಗರ, ನಗರ, ಪಟ್ಟಣ, ನಿಗಮ ಮುಂತಾದ ಕೇಂದ್ರಗಳು ನಿರ್ಮಾಣಗೊಂಡವು. ಅಂತೆಯೇ ನಾಣ್ಯಗಳ ಬಳಕೆ, ಕೃಷಿಯೇತರ ಕಸುಬುಗಳು ಜನರು ಒಂದು ಕಡೆಯಿಂದ ಮತ್ತೊಂದೆಡೆಗೆ ವೃತ್ತಿ ಹಾಗೂ ವ್ಯಾಪಾರಗಳನ್ನು ಆಶ್ರಯಿಸಿ ಹೋಗಲು ಆರಂಭಿಸಿದರು. ಇದು ಕೂಡ ವ್ಯಾಪಾರ ಮಾರ್ಗಗಳ ನಿರ್ಮಾಣಕ್ಕೆ ಮೂಲ ಕಾರಣವಾಗಿದೆ. ಹಿನ್ನೆಲೆಯಲ್ಲಿಯೇ ಮೌರ್ಯರ ಕಾಲದ ಹೊತ್ತಿಗೆ ಉತ್ತರಾಪಥ ಮತ್ತು ದಕ್ಷಿಣಾಪಥಗಳೆಂಬ ವ್ಯಾಪಾರ ಮಾರ್ಗಗಳು ಅಸ್ತಿತ್ವದಲ್ಲಿದ್ದುದನ್ನು ಬೌದ್ಧ ಸಾಹಿತ್ಯದಲ್ಲಿ ಕಾಣಬಹುದು. ಮಾರ್ಗಗಳು ವ್ಯಾಪಾರದ ಜೊತೆಗೆ ಮೌರ್ಯ ಕಾಲದ ರಾಜ ಧರ್ಮವಾಗಿದ್ದ ಬೌದ್ಧ ಧರ್ಮದ ಪ್ರಚಾರಕ್ಕೂ ಬಳಕೆಗೊಂಡವೆಂಬುದು ಗಮನಾರ್ಹ. ಇದರಿಂದ ಉತ್ತರ ಭಾರತ ಮತ್ತು ದಕ್ಷಿಣ ಭಾರತಗಳು ಪ್ರಾಚೀನ ಕಾಲದಲ್ಲಿ ಧಾರ್ಮಿಕ, ಆರ್ಥಿಕ ಹಾಗೂ ಆಡಳಿತಾತ್ಮಕವಾಗಿ ಸಂಪರ್ಕ ಸಾಧಿಸಿದ್ದುದು ದೃಢವಾಗುತ್ತದೆ.

ಕರ್ನಾಟಕದಲ್ಲಿ ಮೌರ್ಯಶಾತವಾಹನ ಕಾಲದ ಹೊತ್ತಿಗೆ ಅನೇಕ ಪೇಟೆಪಟ್ಟಣಗಳು ಅಸ್ತಿತ್ವದಲ್ಲಿದ್ದವು. ಅಶೋಕನ ಶಾಸನಗಳಿರುವ ಬ್ರಹ್ಮಗಿರಿ, ಮಸ್ಕಿ, ಕೊಪ್ಪಳ ಮತ್ತು ಸನ್ನತಿಗಳಲ್ಲದೆ ಬನವಾಸಿ, ಚಂದ್ರವಳ್ಳಿ, ವಡಗಾಂವ್ಮಾಧವಪುರ ಮೊದಲಾದವು ಪ್ರಾಚೀನ ಕರ್ನಾಟಕದ ವಾಣಿಜ್ಯ ಕೇಂದ್ರಗಳಾಗಿದ್ದವು. ಅಶೋಕನ ಆಳ್ವಿಕೆಯು ಅಂದಿನ ಮಹಾಮಾತ್ರ ಮೂಲಕ ವ್ಯಾಪಾರಿಗಳಿಗೆ ರಾಜಕೀಯ ಶಕ್ತಿಯನ್ನು ತಂದುಕೊಟ್ಟಿತ್ತು. ಅಂದಿನ ರಾಜಧರ್ಮ ಬೌದ್ಧಧರ್ಮದ ಸಂದೇಶಗಳನ್ನು ಹೊಸ ಭೂಭಾಗ ಹಾಗೂ ಹೊರನಾಡುಗಳಿಗೆ ಸಾರುವ ಅವಕಾಶವನ್ನು ಒದಗಿಸಿದ್ದಿತು. ಇದೇ ಮುಂದೆ ವ್ಯಾಪಾರಿ ಸಂಘಗಳ ಹುಟ್ಟಿಗೂ ಕಾರಣವಾಯಿತು. ಹಿನ್ನೆಲೆಯಲ್ಲಿ ಮೆಗಾಸ್ತನೀಸನು ತನ್ನ ಬರವಣಿಗೆಯಲ್ಲಿಮೌರ್ಯ ಸಾಮ್ರಾಜ್ಯದ ವ್ಯಾಪಾರಿಗಳ ಅದರಲ್ಲೂ ವಿದೇಶಿ ವ್ಯಾಪಾರಿಗಳ ಯೋಗಕ್ಷೇಮವನ್ನು ನೋಡಿಕೊಳ್ಳಲೆಂದು ಒಂದು ಪ್ರತ್ಯೇಕ ಇಲಾಖೆಇತ್ತೆಂದು ಹೇಳಿದ್ದಾನೆ.

ಮೌರ್ಯ ಆಳ್ವಿಕೆಯ ಸಂದರ್ಭದಲ್ಲಿ ದಕ್ಷಿಣ ಪಥದ ವಾಣಿಜ್ಯ ಮಾರ್ಗದಲ್ಲಿ ಮುತ್ತು ರತ್ನಗಳು, ಸಮುದ್ರದ ಚಿಪ್ಪಿನಿಂದ ತಯಾರಿಸಿದ ವಸ್ತುಗಳು, ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಮೊದಲಾದ ಲೋಹಗಳು, ಸಾಂಬಾರು ಪದಾರ್ಥಗಳನ್ನು ಸಾಗಿಸುತ್ತಿದ್ದರು. ಮೌರ್ಯರ ಕಾಲದಲ್ಲಿ ಕರ್ನಾಟಕದ ಕೋಲಾರ ಮತ್ತು ಹಟ್ಟಿ ಚಿನ್ನದ ಗಣಿಗಳಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಇದು ಪಾಟಲೀಪುತ್ರಕ್ಕೂ ರವಾನೆಯಾಗುತ್ತಿತ್ತೆಂದು ತಿಳಿದುಬರುತ್ತದೆ. ಅಂದಿನ ವ್ಯಾಪಾರ ವ್ಯವಹಾರಗಳನ್ನು ಮುದ್ರಾಂಕಿತ ನಾಣ್ಯಗಳಿಂದಲೂ ತಿಳಿಯಬಹುದಾಗಿದೆ. ಧಾರವಾಡದಲ್ಲಿ ದೊರೆತಿರುವ ೧೧ ಬೆಳ್ಳಿಯ ಮುದ್ರಾಂಕಿತ ನಾಣ್ಯಗಳನ್ನು ಕಾರ್ಷಾಪಣಗಳೆಂದು ಗುರುತಿಸಿದ್ದು, ಇವು ಮೌರ್ಯ ಮತ್ತು ಅನಂತರ ಕಾಲದ ನಾಣ್ಯಗಳೆಂದು ಹೇಳಲಾಗಿದೆ.

ಮೌರ್ಯರ ನಂತರ ಬಂದ ಶಾತವಾಹನ ಹಾಗೂ ಮಹಾರಥಿಗಳ ಕಾಲದಲ್ಲಿ ವ್ಯಾಪಾರ ಅತ್ಯಂತ ಬಿರುಸಿನಿಂದ ನಡೆಯುತ್ತಿದ್ದಿತು. ಇದಕ್ಕೆ ಕರ್ನಾಟಕದಾದ್ಯಂತ ದೊರೆಯುವ ಶಾತವಾಹನ ಹಾಗೂ ಮಹಾರಥಿಗಳ ನಾಣ್ಯಗಳು ಮುಖ್ಯ ಆಕರಗಳಾಗಿವೆ. ಹಾನಗಲ್ಲು ಪರಿಸರದಲ್ಲಿ ಆನಂತರ ಚುಟುಗಳ ಆಳ್ವಿಕೆಯಿದ್ದು (ಬನವಾಸಿಯಲ್ಲಿ), ಕಾಲದ ಅನೇಕ ನಾಣ್ಯಗಳು, ಶಾಸನ ಮತ್ತಿತರ ಕುರುಹುಗಳು ಕಂಡುಬಂದಿವೆ. ಅವಧಿಯಲ್ಲಿ ದೇಶೀಯ ವ್ಯಾಪಾರದ ಜೊತೆಗೆ ವಿದೇಶಿ ವ್ಯಾಪಾರವೂ ಕೂಡ ಪ್ರಚಲಿತದಲ್ಲಿತ್ತು. ಕ್ರಿ.. ೧ನೆಯ ಶತಮಾನದ ಹೊತ್ತಿಗೆ ಹಿಪ್ಪಲಸ್ ಎಂಬುವನು ಮುಂಗಾರು ಮಾರುತಗಳ ಉಪಯುಕ್ತತೆಯನ್ನು ಪತ್ತೆಹಚ್ಚಿದ್ದನು. ಇದರಿಂದ ಹಡಗುಗಳಲ್ಲಿ ಯಾನ ಕೈಗೊಳ್ಳುವುದು ಸುಲಭವಾಯಿತು. ಅಲ್ಲದೆ ಸಮುದ್ರಯಾನದಿಂದ ಇದುವರೆಗೆ ಭೂಮಾರ್ಗದಲ್ಲಿದ್ದ ಕಳ್ಳಕಾಕರ ಭಯ ತಪ್ಪಿತು. ವಿದೇಶಿ ವ್ಯಾಪಾರಕ್ಕೆ ಜಲಮಾರ್ಗವು ವರದಾನವಾಗಿ ಗ್ರೀಸ್ ಅಥವಾ ರೋಮ್ ನಿಂದ ಹೊರಟ ಹಡಗುಗಳು ಕೇವಲ ಆರು ವಾರಗಳಲ್ಲೆ ದಕ್ಷಿಣ ಭಾರತದ ತೀರಪ್ರದೇಶಗಳನ್ನು ತಲುಪುತ್ತಿದ್ದವು. ಮೂಲಕ ವಿದೇಶಿ ವ್ಯಾಪಾರಿಗಳು ಕರ್ನಾಟಕಕ್ಕೆ ವ್ಯಾಪಾರ ಸಲುವಾಗಿ ಹೆಚ್ಚು ಹಚ್ಚಾಗಿ ಬರಲು ಸಾಧ್ಯವಾಯಿತು. ಅಲ್ಲದೆ ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಶಾತವಾಹನರು, ಚೋಳರು, ಚೇರ ಮೊದಲಾದವರು ವ್ಯಾಪಾರ ವಿಶೇಷ ಪ್ರೋತ್ಸಾಹ ನೀಡಿದ್ದುದೂ ವಿದೇಶಿ ವ್ಯಾಪಾರ ವೃದ್ಧಿಗೊಳ್ಳಲು ಕಾರಣವಾಗಿದೆ.

ಪ್ರಾಚೀನ ಕರ್ನಾಟಕ (ಹಾನಗಲ್ಲು ಸೇರಿದಂತೆ)ವು ರೋಮ್ ದೇಶದೊಂದಿಗೆ ಉತ್ತಮ ವ್ಯಾಪಾರ ಸಂಬಂಧವನ್ನು ಹೊಂದಿದ್ದಿತು. ಇದಕ್ಕೆ ಇಲ್ಲಿ ದೊರೆತ ರೋಮನ್ ನಾಣ್ಯಗಳು ಮುಖ್ಯವಾಗಿವೆ. ಹಾಗೆಯೆ ಇಲ್ಲಿ ಬೆಳೆಯುತ್ತಿದ್ದ ಮೆಣಸು, ಏಲಕ್ಕಿ ಮೊದಲಾದ ಸಾಂಬಾರ ಪದಾರ್ಥಗಳು, ತೋಟಗಾರಿಕಾ ಬೆಳೆ ಮೊದಲಾದವುಗಳನ್ನು ರೋಮನ್ ವ್ಯಾಪಾರಿಗಳು ಕೊಂಡು ಯುರೋಪ್ ದೇಶಗಳಲ್ಲಿ ಹೆಚ್ಚಿನ ಬೆಲೆಗೆ ಮಾರಿ ಲಾಭವನ್ನು ಗಳಿಸುತ್ತಿದ್ದರು. ಇಲ್ಲಿನ ಸಮುದ್ರದ ಚಿಪ್ಪಿನ ವಸ್ತುಗಳು, ಬೆಲೆಬಾಳುವ ಹರಳುಗಳು, ತಿಳಿಹಸಿರು ಬಣ್ಣದ ಪಾರದರ್ಶಕ ಪಚ್ಚೆ, ಹತ್ತಿ, ರೇಷ್ಮೆಯ ಬಟ್ಟೆಗಳು ರೋಮನ್ನರಿಗೆ ತುಂಬಾ ಪ್ರಿಯವಾದ ವಸ್ತಗಳಾಗಿದ್ದವು. ಪ್ಲೀನಿನ ಪ್ರಕಾರ ರೋಮ್ ದೇಶದ ವ್ಯಾಪಾರ ಅಗಾಧತೆ ಎಷ್ಟಿತ್ತೆಂದರೆ, ‘ಒಂದು ವರ್ಷದಲ್ಲಿ ಅರ್ಧ ಮಿಲಿಯನ್ ಸ್ಟರ್ಲಿಂಗ್ ನಷ್ಟು.’ ರೋಮನ್ ರಂತೆ ಭಾರತೀಯರಿಗೆ ರೋಮನ್ ಚಿನ್ನದ ನಾಣ್ಯಗಳು ಬಹಳ ಪ್ರಿಯವಾಗಿದ್ದು, ಅವುಗಲನ್ನು ಆಭರಣಗಳನ್ನಾಗಿ ಧರಿಸುತ್ತಿದ್ದರೆಂಬುದು ತಿಳಿದುಬರುತ್ತದೆ.

ಕರ್ನಾಟಕದಲ್ಲಿ ಯಥೇಚ್ಛವಾಗಿ ರೋಮನ್ನರ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳು ಕಂಡುಬಂದಿವೆ. ಬೆಂಗಳೂರಿನ ಯಶವಂತಪುರದಲ್ಲಿ ನೂರು ವರ್ಷಗಳ ಹಿಂದೆ ೧೬೩ ಬೆಳ್ಳಿಯ ನಾಣ್ಯಗಳು ದೊರೆತಿವೆ. ಇವು ರೋಮನ್ ಅಗಸ್ಟಸ್, ಟೆಬೀರಿಯಸ್, ಆಂಟೋನಿಯ, ಕ್ಲಾಡಿಯೆಸ್ ಮತ್ತು ಕ್ಯಾಲಿಗುಲ ದೊರೆಗಳಿಗೆ ಸೇರಿದ ನಾಣ್ಯಗಳಾಗಿವೆ. ಚಂದ್ರವಳ್ಳಿಯ ಉತ್ಖನನದಲ್ಲಿ ಟೈಬೀರಿಯಸ್ ನಾಣ್ಯವು ಪತ್ತೆಯಾಗಿದೆ. ೧೯೬೫ರಲ್ಲಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ೨೫೬ ಬೆಳ್ಳಿಯ ನಾಣ್ಯಗಳು ಕಂಡುಬಂದಿವೆ. ಇವುಗಳಲ್ಲಿ ೨೯ ನಾಣ್ಯಗಳು ಅಗಸ್ಟಸ್ ದೊರೆಗೆ ಸೇರಿದ್ದು, ಉಳಿದ ೨೨೭ ನಾಣ್ಯಗಳು ಟೈಬೀರಿಯಸ್ ಚಕ್ರವರ್ತಿಗೆ ಸೇರಿದವುಗಳಾಗಿವೆ. ಮೇಲಿನ ಸ್ಥಳಗಳಲ್ಲದೆ ಬಿಜಾಪುರದ ಕಟ್ರಾಲ್ ಎಂಬಲ್ಲಿ ೨೨, ಬೆಳಗಾಂನಲ್ಲಿ ೩೦, ವಡಗಾಂವ್ಮಾಧವಪುರದಲ್ಲಿ , ಮಾಲೂರು ತಾಲೂಕಿನ ಸೊಸೆಗೆರೆ ಎಂಬಲ್ಲಿ , ಲಿಂಗಸಗೂರಿನಲ್ಲಿ ಒಂದು ರೋಮನ್ ನಾಣ್ಯ ದೊರೆತಿರುವುದು ಗಮನಾರ್ಹ. ಅಲ್ಲದೆ ತಲಕಾಡು ಮತ್ತು ಬನವಾಸಿಗಳಲ್ಲಿ ದೊರೆತ ನಾಣ್ಯಗಳ ಅಚ್ಚುಗಳು ವಿದ್ವಾಂಸರ ಚಿಂತನೆಗೆ ಹೊಸ ಆಯಾಮವನ್ನು ನೀಡಿದ್ದು, ಒರೆಹಚ್ಚಬೇಕಾದ ಅಗತ್ಯವಿದೆ. ಆದರೆ ಹಾನಗಲ್ಲು ತಾಲೂಕಿನ ಅಕ್ಕಿಆಲೂರಿನಲ್ಲಿ ದೊರೆತ ೪೬ ರೋಮನ್ನರ ಬೆಳ್ಳಿ ನಾಣ್ಯಗಳಲ್ಲಿ, ಕೆಲವು ನಾಣ್ಯಗಳು ಕರ್ನಾಟಕದ ಬೇರಾವ ಸ್ಥಳದಲ್ಲೂ ದೊರೆತಿರುವುದಿಲ್ಲ. ಅವುಗಳೆಂದರೆ ರೋಮನ್ ಚಕ್ರವರ್ತಿಗಳಾದ ಸೆಪ್ಟಿಯಸ್ ಸೆವೆರಸ್ (ಕ್ರಿ.. ೧೯೩೨೦೧) ಮತ್ತು ಕ್ಯಾರಕಲ್ಲ (ಕ್ರಿ.. ೨೦೧೨೧೭) ಅರಸರ ನಾಣ್ಯಗಳು. ಇವುಗಳಲ್ಲದೆ ಅಕ್ಕಿಆಲೂರಿನ ನಾಣ್ಯರಾಶಿಯಲ್ಲಿ ಬೆಜಾಂಟಿಯನ್ ಚಕ್ರವರ್ತಿಗಳಾದ ಥಿಯೋಡೋಸಿಯಸ್ (ಕ್ರಿ.. ೪೦೨೪೫೦), ಮರ್ಸಿಯನ್ (ಕ್ರಿ.. ೪೫೦೪೫೭), ಒಂದನೆಯ ಲಿಯೊ (ಕ್ರಿ.. ೪೫೭೪೭೪), ಜೆನೊ (ಕ್ರಿ.. ೪೭೪೪೯೧), ಅನಸ್ತಸಿಯಸ್ (ಕ್ರಿ.. ೪೯೧೫೧೮) ಮತ್ತು ಒಂದನೆಯ ಜಿಸ್ಟಿನಸ್ (ಕ್ರಿ.. ೫೧೮೫೨೭)ರಿಗೆ ಸೇರಿದ ನಾಣ್ಯಗಳು ಪ್ರಮುಖವಾದವು. ಮೇಲಿನ ನಾಣ್ಯಗಳ ಮುಮ್ಮುಖದಲ್ಲಿ ಆಯಾ ಚಕ್ರವರ್ತಿಯ ಚಿತ್ರ ಹಾಗೂ ಅರಸನ ಹೆಸರಿದ್ದರೆ, ಹಿಮ್ಮುಖದಲ್ಲಿ ಶಿಲುಬೆ, ರಾಜದಂಡಗಳನ್ನು ಹಿಡಿದ ದೇವತೆ (ಕಾನ್ ಸ್ಟಾಂಟಿನೊಪಲ್ ದೇವತೆ, ವಿಕ್ಟೋರಿಯಾ ದೇವತೆ)ಗಳ ಚಿತ್ರ ಹಾಗೂ ಬರಹಗಳನ್ನು ಕಾಣಬಹುದು.

ಅಕ್ಕಿಆಲೂರಿನ ನಾಣ್ಯ ವಿವರಗಳಿಂದ ಕರ್ನಾಟಕದೊಂದಿಗೆ ರೋಮನ್ ಚಕ್ರವರ್ತಿಗಳು ಮತ್ತು ಆನಂತರ ಬಂದ ಬೈಜಾಂಟಿಯನ್ ಚಕ್ರವರ್ತಿಗಳ ಕಾಲದಲ್ಲಿ ಉತ್ತಮ ವ್ಯಾಪಾರ ಸಂಬಂಧವಿದ್ದುದು ದೃಢವಾಗುತ್ತದೆ. ಅಕ್ಕಿಆಲೂರಿನ ನಾಣ್ಯಗಳ ಕಾಲಮಾನವನ್ನು ಕ್ರಿ.. ೧೯೩ ರಂದ ಕ್ರಿ.. ೫೨೭ರ ವರೆಗೆ ಗುರುತಿಸಬಹುದಾಗಿದ್ದು, ಕರ್ನಾಟಕದಲ್ಲಿ ಶಾತವಾಹನ ಕಾಲದಿಂದ ಕದಂಬರ ಕಾಲದವರೆಗೆ ವಿದೇಶಿ ವ್ಯಾಪಾರ ಅದರಲ್ಲೂ ರೋಮನ್ ದೇಶದೊಂದಿಗೆ ಇದ್ದ ವ್ಯಾಪಾರ ಸಂಬಂಧವನ್ನು ತಿಳಿದುಕೊಳ್ಳಬಹುದಾಗಿದೆ. ಕರ್ನಾಟಕದಲ್ಲಿ ದೊರೆತ ಮೇಲಿನ ನಾಣ್ಯಗಳಿಗೆ ಪುಷ್ಟಿಯಾಗಿ ಚಂದ್ರವಳ್ಳಿ, ಬನವಾಸಿ, ಸನ್ನತಿಗಳಲ್ಲಿ ರೋಮನ್ ರು ಬಳಸುತ್ತಿದ್ದ ರೌಲೆಟೆಡ್ ಮಡಿಕೆಗಳು ಕಂಡುಬಂದಿರುವುದು ಗಮನಾರ್ಹ. ಅಂತೆಯೆ ಕ್ರಿ.. ೧ನೆಯ ಶತಮಾನದ ಕೃತಿಪೆರಿಪ್ಲಸ್ ಆಪ್ ಎರಿತ್ರಿಯನ್ ಸಿನಲ್ಲಿ, ದಕ್ಷಿಣ ಭಾರತದ ಬಂದರು ಮತ್ತು ಪಟ್ಟಣಗಳಾದ ಪಗರ, ಕಲ್ಯಾಣ (ಕಲ್ಲೀಣ), ವೈಜಯಂತಿ (ಬೈಜಾಂಟಿಯ), ಸೋಪಾರ (ಸುಪ್ಪಾರ), ಮುಂಡಗೋದ (ಮಂಗಳೂರು)ಗಳು ಅಂದಿನ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿದ್ದುದನ್ನು ತಿಳಿಸುತ್ತದೆ. ಟಾಲಮಿಯು ಕೂಡ ಕರ್ನಾಟಕದ ಹಲವು ಸ್ಥಳಗಳನ್ನು ತನ್ನ ವರದಿಯಲ್ಲಿ ದಾಕಲಿಸಿದ್ದಾನೆ. ಅಂತಹ ನಗರಗಳೆಂದರೆ ನಗರೂರು (ನಾಗೂರು), ತಾವಸಿ (ತಬಸೊ), ಇಂಡಿ (ಇಂಡೆ), ಗಡಹಿಂಗ್ಲಜ (ತಿರಿಪಂಗಲಿದ), ಹೂವಿನ ಹಿಪ್ಪರಗಿ (ಹಿಪ್ಪೊಕರ), ಸವಡಿ (ಸಬಡೆ), ಚಿಮ್ಮಲಗಿ (ಸಿರಿಮಲಿಗಿ), ಮುದಗಲ್ಲು (ಮುದೊಗಲ್ಲು)ಗಳಾಗಿವೆ.

ಒಟ್ಟಿನಲ್ಲಿ ಮೇಲಿನ ನಾಣ್ಯ, ಸಾಹಿತ್ಯ, ಪಾತ್ರಾವಶೇಷ ಮೊದಲಾದ ಪುರಾತತ್ವ ಆಕರಗಳಿಂದ ರೋಮ್ ನೊಂದಿಗೆ ಭಾರತ ಅಥವಾ ಕರ್ನಾಟಕವು ಹೊಂದಿದ್ದ ವ್ಯಾಪಾರ ಸಂಬಂಧ, ಅದರ ಗಾಢತೆ, ಅಂದಿನ ಸಮುದ್ರ ವ್ಯಾಪಾರ, ವ್ಯಾಪಾರ ಮಾರ್ಗ, ವ್ಯಾಪಾರ ವಸ್ತು ಮೊದಲಾದವುಗಳನ್ನು ತಿಳಿಯಲು ಸಾಧ್ಯತೆಗಳನ್ನು ಒದಗಿಸಿದಂತಾಗಿದೆ. ಅಂತೆಯೇ ಉತ್ತರ ಭಾರತದ ಮೌರ್ಯ ಮೊದಲಾದವರ ಸಂಪರ್ಕ ಹಾಗೂ ಕಡಲಾಚೆಯ ರೋಮನ್, ಗ್ರೀಕ್, ಚೀನ ಮೊದಲಾದ ಬಾಹ್ಯ ವ್ಯಾಪಾರ ಚಟುವಟಿಕೆಗಳು ಕರ್ನಾಟಕದ ವ್ಯಾಪಾರ ಚಟುವಟಿಕೆಯು ಚುರುಕುಗೊಳ್ಳಲು ಕಾರಣವಾಯಿತೆನ್ನಬಹುದು. ಹಾನಗಲ್ಲ ಕದಂಬರ ನಾಣ್ಯಗಳು ಮಧ್ಯಯುಗದ ಹಾಗೂ ಭಾಗದ ವ್ಯಾಪಾರ ಚಟುವಟಿಕೆಗಳನ್ನು  ಅರಿಯಲು ಸಹಾಯಕವಾಗಿವೆ. ಇಲ್ಲಿ ದೊರೆತಿರುವ ಗದ್ಯಾಣಗಳಲ್ಲಿ ಹನುಮ ಲಾಂಛನ ಸಾಮಾನ್ಯವಾಗಿದೆ. ಇದಲ್ಲದೆ ಗರುಡಲಾಂಛನ ನಾಣ್ಯವೂ ಕೂಡ ದೊರೆತಿರುವುದು ಗಮನಾರ್ಹ.

ಹಾನಗಲ್ಲ ಪರಿಸರದ ವ್ಯಾಪಾರ ಮತ್ತು ವ್ಯಾಪಾರಿ ಸಂಘಗಳು

ಹಾನಗಲ್ಲ ಪರಿಸರದ ವ್ಯಾಪಾರವು ಕದಂಬರ ಕಾಲದಲ್ಲಿ ವ್ಯಾಪಾರಿ ಸಂಘಗಳ ನಿಯಂತ್ರಣದಲ್ಲಿ ಇತ್ತೆಂದು ಹೇಳಬೇಕಾಗುತ್ತದೆ. ಇದನ್ನು ಮಧ್ಯಯುಗೀನ ಕರ್ನಾಟಕಕ್ಕೂ ಅನ್ವಯಿಸಿ ಹೇಳಬಹುದು. ಅಂದಿನ ವ್ಯಾಪಾರವಾಣಿಜ್ಯಗಳನ್ನು ನಿಯಂತ್ರಿಸುತ್ತಿದ್ದ ಅನೇಕ ಸಂಘ ಸಂಸ್ಥೆಗಳು ಕರ್ನಾಟಕದಲ್ಲಿದ್ದವು. ಅವುಗಳಲ್ಲಿ ಅಯ್ಯಾವೊಳೆ ಐನೂರ್ವರ ಸಂಘ ಪ್ರಸಿದ್ಧವಾಗಿದ್ದು, ಇದರ ಕೇಂದ್ರವು ಬಾಗಲಕೋಟೆ ಜಿಲ್ಲೆಯ ಐಹೊಳೆಯಾಗಿದ್ದಿತು. ಶಾಸನ ಸಾಹಿತ್ಯಗಳಲ್ಲಿ ಕಂಡುಬರುವಂತೆ ಪ್ರಾಚೀನ ಕರ್ನಾಟಕದಲ್ಲಿ ಅನೇಕ ವರ್ತಕ ಸಮುದಾಯಗಳು ಇದ್ದವು. ಅವುಗಳೆಂದರೆ ಸೆಟ್ಟಿ, ಬಣಂಜಿಗ, ಸೆಟ್ಟಿಗುತ್ತ, ನಕರ, ಮುಮ್ಮುರಿದಂಡ, ವಡ್ಡವ್ಯವಹಾರಿ, ಗವರಿಗ, ಗಾತ್ರಿಗ, ಸೆಟ್ಟಿಕಾರ, ಹಲರು, ಎಳಮೆ, ಸಾಲಿಕೆ, ಬಲ್ಲಾಳು, ಕೊಟಿಗ ಇನ್ನು ಮುಂತಾದ ಪ್ರಕಾರಗಳಿವೆ. ಸಮುದಾಯಗಳು ವಿವಿಧ ಸಂಘಟನೆಗಳನ್ನು ಸ್ಥಾಪಿಸುವ ಮೂಲಕ ವ್ಯಾಪಾರವಾಣಿಜ್ಯಗಳಲ್ಲಿ ನಿಯಂತ್ರಣ ಸಾಧಿಸಿದರು. ಶಾಸನಗಳಲ್ಲಿ ಕಂಡುಬರುವ ವ್ಯಾಪಾರ ಸಂಘಟನೆಗಳೆಂದರೆ ಅಯ್ಯಾವೊಳೆ ಐನೂರ್ವರು, ವೀರಬಣಂಜು, ಮುಮ್ಮುರಿದಂಡ, ಬಂಟಸಾಸೀರ್ವರು, ಬಣಜಿಗರಯ್ನಾರ್ವರು, ಉಗುರ ಮುನ್ನೂರ್ವರು, ಎಲೆಯ ಬೋಜಂಗರು ಮೊದಲಾದವು ಪ್ರಮುಖವಾಗಿವೆ. ಸಂಘಗಳಲ್ಲಿ ಹಲವು ಅಯ್ಯಾವೊಳೆ ಐನೂರ್ವರ ಸಂಘದ ಉಪಶಾಖೆಗಳೇ ಆಗಿದ್ದವು.

ಸಂಘಗಳು ಕೃಷಿಯಾಧಾರಿತ ಹಾಗೂ ಕೃಷಿಯೇತರ ವಸ್ತುಗಳನ್ನು ಆಂತರಿಕ ವ್ಯಾಪಾರದ ಮೂಲಕ ವಿವಿಧ ನಗರಗಳಲ್ಲಿ ಹಾಗೂ ವಿದೇಶಗಳ ವ್ಯಾಪಾರ ಮಾಡುತ್ತಿದ್ದರು. ವಿದೇಶಿ ವ್ಯಾಪಾರಕ್ಕಾಗಿಯೇ ನಾನಾದೇಶಿ ಹಾಗೂ ಉಭಯ ನಾನಾದೇಶಿ ಸಂಘಗಳಿದ್ದು, ಇವು ಅಂದಿನ ಜಾಗತಿಕ (ಮಟ್ಟದ) ವ್ಯಾಪಾರಿ ಸಂಘಗಳೆನ್ನಬಹುದು.

ವ್ಯಾಪಾರಿ ಸಂಘಗಳು ತಮ್ಮ ವ್ಯಾಪಾರದಿಂದ ಬಂದ ಆದಾಯದ ಭಾಗವನ್ನು ದಾನಧರ್ಮ ನೀಡುವ ಮೂಲಕ ಸಮಾಜ ಸೇವಾ ಕಾರ್ಯಗಳಲ್ಲೂ ಪಾಲ್ಗೊಂಡಿದ್ದವು. ದೇವಾಲಯಗಳನ್ನು ಕಟ್ಟಿಸುವ ಹಾಗೂ ಜೀರ್ಣೋದ್ಧಾರಗೊಳಿಸುವ, ಕೆರೆಕಟ್ಟೆ ನಿರ್ಮಾಣ ಮೊದಲಾದ ಕಾರ್ಯಗಳಿಗೆ ಆದಾಯದ ಪಾಲನ್ನು ವಿನಿಯೋಗಿಸುತ್ತಿದ್ದುದು ಅನೇಕ ಶಾಸನಗಳು ವ್ಯಕ್ತಪಡಿಸುತ್ತವೆ.

ಹಾನಗಲ್ಲು ತಾಲೂಕಿನ ಬಾಳಂಬೀಡಿನ ಶಾಸನದಲ್ಲಿ ಅಲ್ಲಿನ ಬ್ರಹ್ಮೇಶ್ವರ, ಗ್ರಾಮೇಶ್ವರ ದೇವರ ನಂದಾದೀವಿಗೆಗೆ ತಂಬುಲಿಗ ಸಾಸಿರ್ವರು ಹೀರೆತ್ತಿನ ಗಾಡಿಗೆ ಒಂದು ವೀಸದಂತೆ ಬಿಟ್ಟುಕೊಟ್ಟ ವಿವರವಿದೆ. ಶಿಗ್ಗಾಂವಿಯ ಶಾಸನದಲ್ಲಿ ಹೇಳುವಂತೆ, ಉಗುರ ಮುನ್ನೂರ್ವರು ಮೂಲಸ್ಥಾನ ದೇವರಿಗೆ ಒಂದು ಪಣವನ್ನು ದಾನ ನೀಡಿದ್ದರು. ಬಿಲ್ಲ ಮುನ್ನೂರ್ವರು ತಮ್ಮ ವರ್ಗದ ವತಿಯಿಂದ ಹಾನಗಲ್ಲಿನಲ್ಲಿ ಬಿಲ್ಲೇಶ್ವರ ದೇವಾಲಯವನ್ನು ಕಟ್ಟಿಸಿದ್ದರು (ಕ್ರಿ.. ೧೧೧೯). ಅದು ಇಂದು ಭಗ್ನಗೊಂಡಿರುವುದನ್ನು ಕಾಣಬಹುದು. ಹೀಗೆ ತಮ್ಮ ಆದಾಯದ ಪಾಲೊಂದನ್ನು ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸುವ ಪದ್ಧತಿ ಹಿಂದಿನಿಂದಲೂ ಮುಂದುವರಿದುಕೊಂಡು ಬಂದಿದೆ.

ತೆರಿಗೆ

ವ್ಯಾಪಾರಿಗಳು ತಾವು ಕೈಗೊಂಡ ವೃತ್ತಿಯಲ್ಲಿ ತೆರಿಗೆಗಳನ್ನು ರಾಜ್ಯದ ಬೊಕ್ಕಸಕ್ಕೆ ನೀಡಬೇಕಾಗಿದ್ದಿತು. ಅಂತಹ ತೆರಿಗೆಗಳಲ್ಲಿ ಮುಖ್ಯವಾದವುಗಳು ಹೆಜ್ಜುಂಕ (ಹೇರಿನ ಮೇಲೆ ವಿಧಿಸುವ ಸುಂಕ), ವಡ್ಡರಾವುಳ, ಮೂಲೆವೀಸ, ಬೊಲ್ಕೊಡೆ (ಕೊಳ್ಳುವಲ್ಲಿ, ಮಾರುವಲ್ಲಿ ಕೊಡುವ ಸುಂಕ)ಗಳಾಗಿವೆ. ಇವು ಅಂದಿನ ರಾಜ್ಯಾದಾಯಗಳಾಗಿದ್ದವು.

ವ್ಯಾಪಾರ ಮಾರ್ಗ

ಭಟ್ಕಳಹೊನ್ನಾವರಕುಮಟಾಗೋವಾ ಬಂದರುಗಳು ಅಂದಿನ ಜಲಮಾರ್ಗದ ಹೆದ್ದಾರಿಗಳಾಗಿದ್ದವು. ಬಂದರುಗಳಿಂದ ಬನವಾಸಿಹಾನಗಲ್ಲುಸೋಮಲಾಪುರ ಕಡೆಗೆ ವ್ಯಾಪಾರ ಮಾರ್ಗವಿದ್ದಿತು. ಹಾನಗಲ್ಲು ಪರಿಸರದ ಅಧ್ಯಯನವು ಕರ್ನಾಟಕದ ನಗರೀಕರಣ ಪ್ರಕ್ರಿಯೆಯನ್ನು ವ್ಯಾಪಾರವಾಣಿಜ್ಯದ ಪಾತ್ರ, ದೇಶೀಯ ಮತ್ತು ವಿದೇಶಿ ವ್ಯಾಪಾರ, ಸಮುದ್ರ ವ್ಯಾಪಾರ, ವ್ಯಾಪಾರ ಮಾರ್ಗ ಹಾಗೂ ವ್ಯಾಪಾರ ವಸ್ತುಗಳ ಸೂಕ್ಷ್ಮ ಅಧ್ಯಯನಕ್ಕೆ ಅನೇಕ ಸಾಧ್ಯತೆಗಳನ್ನು ಒದಗಿಸುವುದರಲ್ಲಿ ಸಂಶಯವಿಲ್ಲ.

ಗ್ರಂಥಋಣ

೦೧. ಚೆನ್ನಕ್ಕ ಪಾವಟೆ, ಹಾನಗಲ್ಲ ಕದಂಬರು, ಚೆನ್ನಗಂಗ ಪ್ರಕಾಶನ, ಧಾರವಾಡ ೧೯೯೮

೦೨. ಮೋಹನಕೃಷ್ಣ ರೈ ಕೆ., ೨೦೦೪, ಪ್ರಭುತ್ವ ಮತ್ತು ಜನತೆ, .ವಿ.ವಿ.ಹಂಪಿ ೨೦೦೪

೦೩. ಮೋತಿಚಂದ್ರ, ಸಾರ್ಥವಾಹ, ಸಾಹಿತ್ಯ ಅಕಾಡೆಮಿ, ನವದೆಹಲಿ

೦೪. ಕರ್ನಾಟಕ ವಿಷಯ ವಿಶ್ವಕೋಶ, ೧೯೭೯, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ೧೯೭೯

೦೫. ನರಸಿಂಹಮೂರ್ತಿ, .., ಕರ್ನಾಟಕ ನಾಣ್ಯ ಪರಂಪರೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ೨೦೦೩

೦೬. Some aspects of economic and Social life in Karnataka, Mysore University, Mysore – 1974

೦೭. ಕಲಬುರ್ಗಿ, ಎಂ.ಎಂ.(ಸಂ), ಧಾರವಾಡ ಜಿಲ್ಲಾ ಶಾಸನಸೂಚಿ

೦೮. Karnataka Inscriptions volumes Dharwar

೦೯. South India inscriptions volumes