ಶಾಂತೇಶ್ವರ ದೇವಸ್ಥಾನ, ತಿಳವಳ್ಳಿ ಗ್ರಾಮ

ಜಿಲ್ಲಾ ಕೇಂದ್ರದಿಂದ ದೂರ : ೩೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೨೦ ಕಿ.ಮಿ

ಶ್ರೀ ಶಾಂತೇಶ್ವರ ಸ್ವಾಮಿ ದೇವಸ್ಥಾನ

ಹಾನಗಲ್ ತಾಲೂಕಿನ ತಿಳವಳ್ಳಿಯ ಶ್ರೀ ಶಾಂತೇಶ್ವರ ದೇವಸ್ಥಾನವು ೧೩ನೇ ಶತಮಾನದ್ದಾಗಿದ್ದು, ಹೊಯ್ಸಳರ ಮಾಂಡಲೀಕ ಅರಸರು ಕಟ್ಟಿದ್ದಾರೆಂಬ ಪ್ರತೀತಿ ಇದೆ. ಯುದ್ಧದಲ್ಲಿ ಸೋತ ಸಾಮಂತರು ಮನಸ್ಸಿನ ಶಾಂತಿಗಾಗಿ ಶಾಂತೇಶ್ವರ ದೇವಸ್ಥಾನ ನಿರ್ಮಿಸಿದ್ದಕ್ಕಾಗಿ ಈ ದೇವಸ್ಥಾನಕ್ಕೆ ಶಾಂತೇಶ್ವರ ಎಂದು ಹೆಸರು ಬರಲು ಕಾರಣವಾಯಿತು.

ದೇವಾಲಯವು ೪೬ ಕಂಬಳಿರುವ ಒಳಾಂಗಣ ಹೊಂದಿದ್ದು, ಮಧ್ಯ ಪ್ರಾಂಗಣವನ್ನು ಹೊಂದಿದೆ. ದೇವಾಲಯದ ಮೇಲ್ಚಾವಣಿಯಲ್ಲಿ ಸುಂದರ ಕೆತ್ತನೆ ಇದೆ. ಕಂಬಗಳ ಕೆತ್ತನೆಯು ಅತ್ಯಂತ ಸುಂದರವಾಗಿದ್ದು, ದೇವಾಲಯವು ಸೊಗಸಾದ ಗೋಪುರದಿಂದ ಕಂಗೊಳಿಸುತ್ತದೆ.

 

ಗುರು ನಂಜೇಶ್ವರಮಠ, ಸುಕ್ಷೇತ್ರ ಕೂಡಲ

ಜಿಲ್ಲಾ ಕೇಂದ್ರದಿಂದ ದೂರ : ೫೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ : ೧೫ ಕಿ.ಮೀ.

ಶ್ರೀ ಗುರು ನಂಜುಂಡೇಶ್ವರ, ಕೂಡಲ

ಕೂಡಲ ಸುಕ್ಷೇತ್ರದಲ್ಲಿ ಶ್ರೀಗುರು ನಂಜೇಶ್ವರ ಮಠವು ಆಧ್ಯಾತ್ಮಿಕ ಬೆಳಕನ್ನು ಉಂಟುಮಾಡುತ್ತಾ ಬಂದಿದೆ.

ಶ್ರೀಮಠದ ಕರ್ತೃ ಶ್ರೀಗುರು ನಂಜೇಶ್ವರರು ಪವಿತ್ರ ಪರಂಪರೆಯನ್ನು ಜನಮನಕ್ಕೆ ಮುಟ್ಟಿಸಿದರು. ಶ್ರೀ ಸಂಗಮೇಶ್ವರ ದೇವಸ್ಥಾನವು ಶ್ರೀಗುರು ನಂಜುಂಡೇಶ್ವರ ಮಠದ ಮುಂಭಾಗದಲ್ಲಿದೆ. ಸುಂದರವಾದ ಕಟ್ಟಡವು ಭಕ್ತರ ಮನಸೆಳೆಯುತ್ತದೆ. ಮಠದ ಬಲಭಾಗದಲ್ಲಿ ವರದಾ ನದಿ ಹಾಗೂ ಧರ್ಮಾನದಿಗಳ ಸಂಗಮವಿದೆ. ಮಠದ ಮುಂಭಾಗ ನದಿಗಳ ಸಂಗಮ ಭಕ್ತರ ಕಣ್ಮನಗಳನ್ನು ಸೆಳೆಯುತ್ತದೆ. ಪಕ್ಕದಲ್ಲಿಯ ತೋಟಗಳ ದೃಶ್ಯ ಸುಂದರವಾಗಿ ಗೋಚರಿಸುತ್ತದೆ.

ಪೂಜ್ಯ ಶ್ರೀಗುರು ನಂಜೇಶ್ವರ ಮಹಾಸ್ವಾಮಿಗಳು ಅನೇಕ ಭವ್ಯ ಕಾರ್ಯಕ್ರಮಗಳ ನೇತೃತ್ವ ವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.

 

ಕಲ್ಲೇಶ್ವರ ದೇವಸ್ಥಾನ, ಕಲಕೇರಿ

ಜಿಲ್ಲಾ ಕೇಂದ್ರದಿಂದ ದೂರ : ೧೮ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೨೦ ಕಿ.ಮೀ.

ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನ

ಹಾನಗಲ್ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನವಿದೆ. ಇದು ನಾಲ್ಕು ಶಿಖರಗಳನ್ನೊಳಗೊಂಡ, ಕಲ್ಲಿನಿಂದ ಕೆತ್ತಿದ ದೇವಸ್ಥಾನವಾಗಿದೆ. ಕ್ರಿ.ಶ. ೧೦೫೬ರಲ್ಲಿ ಉದಯಾದಿತ್ಯನೆಂಬ ಪಲ್ಲವ ವಂಶದ ರಾಜ ಸೋತು ಈ ದೇವಸ್ಥಾನವನ್ನು ಕಟ್ಟುವುದನ್ನು ಕೈಬಿಟ್ಟಾಗ ಅವನ ಹೆಂಡತಿ ಮಳಲಾದೇವಿಯು ಇದನ್ನು ಮುಂದುವರೆಸಿದರೂ ಸಹಿತ ದೇವಾಲಯ ಪೂರ್ಣಗೊಳ್ಳಲಿಲ್ಲ.

ಈಗ ಧರ್ಮಸ್ಥಳದ ಡಾ|| ವೀರೇಂದ್ರ ಹೆಗಡೆ ಇವರ ನೇತೃತ್ವದಲ್ಲಿ ಪುನರುತ್ಥಾನಗೊಂಡಿದೆ. ೧೫ ಲಕ್ಷ ರೂಪಾಯಿಯ ವೆಚ್ಚದಲ್ಲಿ ಈ ಜೀರ್ಣೋದ್ಧಾರವು ನಡೆಯುತ್ತಿದೆ. ಇದಕ್ಕೆ ಸರ್ಕಾರ ಹಾಗೂ ಭಕ್ತಸಮೂಹ ಸಹಾಯ ಮಾಡಿದೆ. ಇಲ್ಲಿ ಸೋಮೇಶ್ವರ ದೇವಸ್ಥಾನವಿದ್ದು, ಮುಂದೆಯೇ ತಾವರೆಯ ಕೆರೆಯೊಂದು ಇದೆ.

ಇದಲ್ಲದೇ ಕಲ್ಲಿನ ಗ್ರಾಮದೇವತೆ, ಬುದ್ಧವಿಹಾರ, ಬನಶಂಕರಿ ಹಾಗೂ ಕಟ್ಟಿಗೆಯ ವೀರಭದ್ರ ದೇವಸ್ಥಾನಗಳಿವೆ.

 

ಕಲ್ಮೇಶ್ವರ ದೇವಸ್ಥಾನ, ಬಾಳಂಬೀಡ

ಜಿಲ್ಲಾ ಕೇಂದ್ರದಿಂದ ದೂರ : ೨೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೧೮ ಕಿ.ಮೀ.

ಶ್ರೀ ಕಲ್ಮೇಶ್ವರ ದೇವಸ್ಥಾನ

ಜಿಲ್ಲಾ ಕೇಂದ್ರ ಹಾವೇರಿಯಿಂದ ಪಶ್ಚಿಮ ದಿಕ್ಕಿನತ್ತ ಇರುವ ಬಾಳಂಬಿಡದಲ್ಲಿ ವೀರಗಲ್ಲು, ಮಾಸ್ತಿಕಲ್ಲು ಹಾಗೂ ಶಿಲಾ ಶಾಸಗಳು ದೊರೆಯುತ್ತವೆ. ಬಾಳಂಬಿಡದಲ್ಲಿರುವ ಕಲ್ಮೇಶ್ವರ ದೇವಸ್ಥಾನವು ಕದಂಬರಿಂದ ನಿರ್ಮಿತವಾಗಿದೆ ಎಂಬ ಪ್ರತೀತಿ ಇದೆ.

ಪಾಳೇಗಾರ ಮನೆತನದ ಮಲ್ಲರಸ ಎಂಬುವವನು ಬಳ್ಳಾರಿಯಿಂದ ಬಂದು ಸೈನ್ಯದೊಂದಿಗೆ ಇಲ್ಲಿ ಬೀಡು ಬಿಟ್ಟಿದ್ದರಿಂದ “ಬಳ್ಳಾರಿ ಬೀಡು” ಎಂಬ ಹೆಸರು ಪಡೆದು ಮುಂದೆ ಬಾಳಂಬೀಡ ಎಂಬ ಹೆಸರು ಪಡೆಯಿತು.

ಮಲ್ಲರಸನು ಹಿಂದೆ ಈ ಗ್ರಾಮಕ್ಕೆ ೨೧ ಎಕರೆ ತೋಟವನ್ನು ದಾನಮಾಡಿದ್ದನಂತೆ. ಆದರೆ ಇಂದು ಅದರ ಕುರುಹು ಇಲ್ಲ. ಇಲ್ಲಿಯ ವರದಾನದಿಯ ತಟದಲ್ಲಿ ರಾಮೇಶ್ವರ ದೇವಸ್ಥಾನವಿದ್ದು, ಇದೊಂದು ಐತಿಹಾಸಿಕ ಪ್ರೇಕ್ಷಣೀಯ ಸ್ಥಳವಾಗಿದೆ.