(ಕ್ರಿ.ಶ. ೧೯೦೬) (ನಕ್ಷತ್ರಗಳಲ್ಲಿನ ತಾಪಮಾನ)

ಹ್ಯಾನ್ಸ್ ಬೆಥೆ ಜುಲೈ ೨, ೧೯೦೬ರಂದು ಜರ್ಮನಿಯ ಸ್ಟ್ರಾಸ್‌ಬರ್ಗ್‌ನಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಮಗನಾಗಿ ಜನಿಸಿದರು. ಅವರದು ಸುಶಿಕ್ಷಿತ ಕುಟುಂಬ. ಈ ಹಿನ್ನೆಲೆ ಬೆಥೆ ಅವರ ವಿದ್ಯಾಭ್ಯಾಸಕ್ಕೆ ತುಂಬ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿತು.

೧೯೨೮ರಲ್ಲಿ ಫ್ರಾಕ್‌ಫರ್ಟ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಹ್ಯಾನ್ಸ್ ಬೆಥೆ ಏಳು ವರ್ಷ ಜರ್ಮನಿಯ ಬೇರೆ ಬೇರೆ ವಿಶ್ವವಿದ್ಯಾಯಗಳಲ್ಲಿ ಭೌತವಿಜ್ಞಾನದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ೧೯೩೫ರಲ್ಲಿ ಅಮೆರಿಕೆಗೆ ಹೋಗಿ ಅಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ನ್ಯೂಕ್ಲಿಯರ್ ವಿಜ್ಞಾನ ಕುರಿತು ಗ್ರಂಥ ಬರೆದರು.

ಸೂರ್ಯನಲ್ಲಿ ಉತ್ಪನ್ನವಾಗುತ್ತಿರುವ ಶಕ್ತಿ ನ್ಯೂಕ್ಲಿಯರ್ ಶಕ್ತಿಯೇ ಆಗಿರಬಹುದೆಂದು ವಿಜ್ಞಾನಿಗಳು ತರ್ಕಿಸಿದ್ದರು. ಆದರೆ ಅದಕ್ಕೆ ಒಂದು ಖಚಿತವಾದ ರೂಪು ಕೊಟ್ಟಿರಲಿಲ್ಲ. ಆ ಕಾರ್ಯವನ್ನು ಹ್ಯಾನ್ಸ್ ಬೆಥೆ ಪೂರೈಸಿದರು. ನಕ್ಷತ್ರಗಳಲ್ಲಿ ಹೈಡ್ರೊಜನ್ ಹೇರಳವಾಗಿರುತ್ತದೆ. ನಕ್ಷತ್ರದ ಗರ್ಭದಲ್ಲಿ ಆಗಾಧ ಉಷ್ಣತೆಯಿಂದಾಗಿ ಹೈಡ್ರೊಜನ್ ಪರಮಾಣುಗಳು ಇಲೆಕ್ಟ್ರಾನ್‌ಗಳನ್ನು ಕಳೆದುಕೊಂಡು ಅತಿವೇಗದಿಂದ ಹಾರಾಡುತ್ತಿರುತ್ತವೆ. ಇಗವುಗಳನ್ನು ಸೈಡ್ರೊಜನ್ ಆಯಾನುಗಳು ಎನ್ನುತ್ತಾರೆ. ಬೇರೆ ಮಾತಿನಲ್ಲಿ ಹೇಳುವುದಾದರೆ ಇವು ಪ್ರೊಟಾನುಗಳೇ. ಇವು ಪರಸ್ಪರ ಡಿಕ್ಕಿ ಹೊಡೆಯುತ್ತವೆ. ಅತಿ ಉಷ್ಣದ ಪರಿಣಾಮವಾಗಿ ಬೆಸೆದುಕೊಳ್ಳುತ್ತವೆ. ನಾಲ್ಕು ಪ್ರೊಟಾನುಗಳು ಬೆಸೆದುಕೊಳ್ಳುವ ಕ್ರಿಯೆಯ ಕಾಲಕ್ಕೆ ನಷ್ಟವಾಗುವ ದ್ರವ್ಯರಾಶಿಯು ಮೆಳಕು ಮತ್ತು ಶಾಖದ ರೂಪದಲ್ಲಿ ಹೊರಬರುತ್ತದೆ. ಈ ಸಂಮಿಳನ ಕ್ರಿಯೆ ನೇರವಾಗಿ ನಡೆಯದೆ ಕಾರ್ಬನ್ ನ್ಯೂಕ್ಲಿಯಸ್ಸುಗಳ ಸಹಾಯದಿಂದ ಹಲವು ಹಂತಗಳಲ್ಲಿ ನಡೆಯುತ್ತದೆ ಎಂದು ಅಂದಾಜು ಮಾಡಲಾಗಿದೆ. ಈ ಕಾರ್ಬನ್ ಅಂಶದ ಆಧಾರದ ಮೇಲೆ ಸೂರ್ಯನಲ್ಲಿ ಎಷ್ಟು ಶಕ್ತಿ ಉತ್ಪತ್ತಿಯಾಗುತ್ತದೆ ಎಂಬುದನ್ನು ಬೆಥೆ ಲೆಕ್ಕಮಾಡಿ ತೋರಿಸಿದರು.

ದ್ವಿತೀಯ ಜಾಗತಿಕ ಯುದ್ಧದಲ್ಲಿ ಪ್ರಯೋಗಿಸಲಾದ ಪರಮಾಣು ಬಾಂಬಿನ ಯೋಜನೆಯಲ್ಲಿ ಇವರೂ ಭಾಗಿಯಾಗಿದ್ದರೂ. ಆದರೆ ಹಿರೋಷಿಮ ದುರಂತವನ್ನು ಕಂಡು ಮರುಗಿದ ಅವರು ಮುಂದೆ ವಿಶ್ವಶಾಂತಿಗಾಗಿ ಹೋರಾಡತೊಗಿದರು.

ಪಲ್ಸಾರ್ ಮತ್ತು ನ್ಯೂಟ್ರಾನ್ ನಕ್ಷತ್ರಗಳ ಬಗ್ಗೆ ಸಂಶೊಧನೆ ನಡೆಸಿರುವುದು ಹ್ಯಾನ್ಸ್ ಬೆಥೆ ಅವರ ಇನ್ನೊಂದು ಸಾಧನೆ.